ಭಾರತದ ಪ್ರಾಚೀನತೆಯನ್ನು ಸಾರುವ ಪದ್ಯ ಹೀಗಿದೆ:
ಯದಾ ಸರ್ವಂ ಮಾತರ್ಭುವನಮಿದಮಾಸೀಚ್ಛಿಶುನಿಭಂ
ವಚೋಹೀನಂ ದೀನಂ ಪಿಹಿತದೃಗಿವಾಜ್ಞಾನತಮಸಾ |
ತದಾ ಗಂಗಾತೀರೇ ಸ್ಫುರಿತವಿಮಲಪ್ರಾತಿಭದೃಶ-
ಶ್ಚತುರ್ವೇದೋದ್ಗಾನಂ ಜನನಿ ನಿಗಿರಂತಿ ಸ್ಮ ಮುನಯಃ || (೨೨)ತಾಯೇ! ಯಾವಾಗ ಇಡಿಯ ವಿಶ್ವವೇ ಮುಗ್ಧವಾದ ಮಗುವಿನಂತೆ ಮಾತಿಲ್ಲದೆ ಅಜ್ಞಾನದಿಂದ ಕಣ್ಣು ಮುಚ್ಚಿಕೊಂಡಿದ್ದಿತೋ, ಆಗ ದಿವ್ಯದರ್ಶಿಗಳಾದ ಋಷಿ-ಮುನಿಗಳು ಗಂಗೆಯ ತೀರದಲ್ಲಿ ವೇದಗಳನ್ನು ಕಂಡುಕೊಂಡು ಹಾಡುತ್ತಿದ್ದರು!
ಇಂದು ಇಡಿಯ ಜಗತ್ತಿನಲ್ಲಿ ಲಭ್ಯವಿರುವ ಪ್ರಾಚೀನತಮ ವಾಙ್ಮಯ ವೇದಗಳೇ ಎಂಬುದು ಭಾರತೀಯರ ಹೆಮ್ಮೆ. ಈ ಅಂಶವನ್ನು ಇತರ ದೇಶಗಳ ಐತಿಹಾಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಒಕ್ಕಣಿಸಿರುವುದರಿಂದ ಪದ್ಯಕ್ಕೆ ಪರಿಣಾಮಪುಷ್ಟಿ ಒದಗಿದೆ.
ಮುಂದೆ ನಮ್ಮ ಪವಿತ್ರಚರಿತರ ಸ್ಮರಣೆಯನ್ನು ಪರ್ಯಾಯವಾಗಿ ಮಾಡಿರುವ ಪರಿ ಸೊಗಸಾಗಿದೆ. ಈ ಕಲ್ಪನೆ ಎರಡು ಪದ್ಯಗಳಲ್ಲಿ ವಿಸ್ತರಿಸಿದೆ:
ತವೌದಾರ್ಯಂ ಧುರ್ಯಂ ಶಿಬಿದಧಿಚಿಕರ್ಣಾದಿಚರಿತೇ
ಹರಿಶ್ಚಂದ್ರೇ ಧರ್ಮೇ ದಶರಥಸುತೇ ಸತ್ಯವಚನಮ್ |
ಧ್ರುವೇ ಪ್ರಹ್ಲಾದೇ ವಾ ಭಗವತಿ ಮನಸ್ವಿತ್ವಮತುಲಮ್
ಅಖಂಡಂ ಭ್ರಾಜಂತೇ ಹ್ಯಗಣಿತಗುಣಾ ಏವಮಿವ ತೇ || (೨೮)ಶಿಬಿ, ದಧೀಚಿ, ಕರ್ಣ ಮುಂತಾದವರ ಚರಿತೆಗಳಲ್ಲಿ ಔದಾರ್ಯ; ಹರಿಶ್ಚಂದ್ರ, ಧರ್ಮರಾಜ, ಶ್ರೀರಾಮನೇ ಮೊದಲಾದವರಲ್ಲಿ ಸತ್ಯವ್ರತ; ಧ್ರುವ-ಪ್ರಹ್ಲಾದಾದಿಗಳಲ್ಲಿ ಮನಃಸ್ಥೈರ್ಯ - ಹೀಗೆ ನಿನ್ನ ಅಖಂಡ ಗುಣಸಂಪತ್ತು ಶೋಭಿಸುತ್ತಿದೆ.
ಅಗಾಧಪ್ರಜ್ಞಾ ತೇಽಸ್ಫುರದಯಿ ಮುನಿವ್ಯಾಸವಚನೇ
ನಿಗೂಢಾಂತಸ್ತತ್ತ್ವಗ್ರಹಣಪಟುತಾ ಶಂಕರಮತೌ |
ಚತುರ್ಯೋಗಪ್ರಾಪ್ಯಾ ಭುವನಗುರುತಾ ಕೃಷ್ಣಚರಿತೇ
ನೃಪಾಲೋಚ್ಚೈರ್ನೀತಿರ್ಗುಣವತಿ ರಘೂತ್ತಂಸಚರಿತೇ || (೨೯)ಭಗವಾನ್ ವ್ಯಾಸಮುನಿಗಳ ಮಾತುಗಳಲ್ಲಿ ನಿನ್ನ ಪ್ರಜ್ಞೆಯ ಪ್ರಕರ್ಷವೂ ಭಗವತ್ಪಾದ ಶಂಕರರ ಮನಸ್ಸಿನಲ್ಲಿ ಆತ್ಯಂತಿಕತತ್ತ್ವವನ್ನು ಗ್ರಹಿಸಬಲ್ಲ ನಿನ್ನ ಬುದ್ಧಿಪಾಟವವೂ ಯೋಗೇಶ್ವರ ಶ್ರೀಕೃಷ್ಣನ ಜೀವಿತದಲ್ಲಿ ಕರ್ಮ-ಜ್ಞಾನ-ಭಕ್ತಿ-ರಾಜ ಎಂಬ ನಾಲ್ಕು ಬಗೆಯ ಯೋಗಗಳಿಂದ ಪಡೆಯಬೇಕಾದ ವಿಶ್ವಗುರುತ್ವವೂ ಶ್ರೀರಾಮನ ಚರಿತೆಯಲ್ಲಿ ಉದಾತ್ತವಾದ ನಿನ್ನ ರಾಜನೀತಿಯೂ ಕಾಣಸಿಗುತ್ತದೆ.
ಗುಣಗಳಿಗೆ ಅರ್ಥವಂತಿಕೆ ಬರುವುದು ಗುಣಿಗಳಿಂದಲೇ ಎಂಬ ಅರಿವಿರುವವರಿಗೆ ಈ ಎರಡು ಪದ್ಯಗಳ ಕಥನಕ್ರಮ ಹೆಚ್ಚಾಗಿ ಹಿಡಿಸುತ್ತದೆ.
ಭಗವಂತನೇ ಅವತರಿಸಿದ ಭಾರತದ ನೆಲದಲ್ಲಿ ಇರುವುದೆಲ್ಲವೂ ಪವಿತ್ರ ಎಂಬ ಭಾವದ ಅಭಿವ್ಯಕ್ತಿ ಹೀಗಿದೆ:
ನ ಮೂಲಂ ಯತ್ಕಿಂಚಿನ್ನವಮಪಿ ಹಿ ತೇಽನೌಷಧಮಯಿ
ನ ಚಾಮಂತ್ರಂ ಕಿಂಚಿತ್ತವ ಸುರಗಿರೋ ಹ್ಯಕ್ಷರಮಪಿ |
ಅಗಂಗಾ ನೋ ಕಾಚಿಲ್ಲಘುತರಸರಿಚ್ಚಾಪಿ ಗಣಿತಾ
ನ ಜೀವಸ್ತ್ವಯ್ಯಂಬ ಹ್ಯಶಿವ ಇತಿ ಕಶ್ಚಿನ್ನಿಗದಿತಃ || (೩೦)ಹೇ ಮಾತೇ! ನಿನ್ನ ನೆಲದ ಯಾವೊಂದು ಬೇರು-ಕಾಂಡವೂ ಔಷಧೀಯ ಗುಣದಿಂದ ಕೂಡಿಲ್ಲದಿಲ್ಲ; ನಿನ್ನ ಸಂಸ್ಕೃತವಾಣಿಯ ಯಾವೊಂದು ಅಕ್ಷರವೂ ಮಂತ್ರವಾಗುವ ಶಕ್ತಿಯನ್ನು ಹೊಂದಿಲ್ಲದಿಲ್ಲ; ನಿನ್ನ ಯಾವೊಂದು ಸಣ್ಣ ತೊರೆಯೂ ಗಂಗೆಯಾಗುವ ಸತ್ತ್ವವನ್ನು ಪಡೆದಿಲ್ಲದಿಲ್ಲ; ಹೆಚ್ಚೇನು, ನಿನ್ನಲ್ಲಿಯ ಯಾವೊಂದು ಜೀವವೂ ಅಮಂಗಳವಲ್ಲ!
“ಅಮಂತ್ರಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಮ್ ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ” ಎಂಬ ಪ್ರಸಿದ್ಧ ಸೂಕ್ತಿಯನ್ನು ವರ್ಣೇಕರ್ ಅವರು ಪುನಾರಚಿಸಿಕೊಂಡ ಬಗೆಯೇ ವಿಶಿಷ್ಟ. ಸುಭಾಷಿತವು ಹೇಳುವ ‘ಯೋಜಕಗುಣ’ ನಮ್ಮ ನೆಲದಲ್ಲಿ ವಿಪುಲವಾಗಿರುವುದು ಪ್ರತ್ಯಕ್ಷ.
ಭಾರತದ ಪಾವಿತ್ರ್ಯವನ್ನು ವರ್ಣಿಸಲು ಬೇರೆಯ ವಸ್ತು-ವಿಷಯಗಳು ಸಾಲದೆ ಕವಿ ಆಕಾಶಗಂಗೆಯನ್ನೇ ಆಶ್ರಯಿಸುತ್ತಾರೆ:
ಅಪೂತಂಮನ್ಯಾ ಸಾ ಹರಿಚರಣಯೋಗಾದಥ ಯದಾ
ವಿಯದ್ಗಂಗಾ ಖಿನ್ನಾ ಪುರಹರಶಿರೋವಾಸಮಗಮತ್ |
ತತೋ ಯಸ್ಯಾಃ ಸಂಗಂ ಕಥಮಪಿ ಸಮಾಸಾದ್ಯ ಸಮಗಾ-
ದಲಭ್ಯಂ ಪಾವಿತ್ರ್ಯಂ ಜಯತು ಸತತಂ ಸಾ ಭರತಭೂಃ || (೪೬)ಕಮಲನಾಭನ ಪಾದಕಮಲದಿಂದ ಪರಶಿವನ ಶಿರಸ್ಸನ್ನು ಸೇರಿಯೂ ತನ್ನನ್ನು ಅಪವಿತ್ರಳೆಂದೇ ಭಾವಿಸುತ್ತಿದ್ದ ಸುರಗಂಗೆ ಯಾರ ಸಂಯೋಗದಿಂದ ಅನನ್ಯಲಭ್ಯವಾದ ಪಾವಿತ್ರ್ಯವನ್ನು ಪಡೆದಳೋ, ಆ ಭಾರತಭೂಮಿಗೆ ಸದಾ ಏಳ್ಗೆಯಿರಲಿ.
ಪಾವಿತ್ರ್ಯವನ್ನು ಗಳಿಸಲೆಳಸಿದ ಗಂಗೆಯ ಸತತ ಅವತಾರ ಸಾರ್ಥಕತೆಯ ನೆಲೆಯನ್ನು ಕಂಡದ್ದು ಭಾರತದಲ್ಲಿ ಎಂದಮೇಲೆ ಈ ನೆಲದ ಉನ್ನತಿ ಇನ್ನೆಷ್ಟರ ಮಟ್ಟಿನದು! ಇಲ್ಲಿ ಕವಿ ಪೌರಾಣಿಕ ಕಲ್ಪನೆಯನ್ನು ವಿಸ್ತರಿಸಿರುವ ವಿಧಾನ ಬಲು ಚೆಲುವಾಗಿದೆ.
ಭಾರತಮಾತೆಯಲ್ಲಿ ಪಾವಿತ್ರ್ಯ ಇದ್ದ ಮಾತ್ರಕ್ಕೆ ಪೌರುಷ ಇಲ್ಲವೆಂದಲ್ಲ. ಆಕೆ ಶಿವೆಯೂ ಹೌದು, ರುದ್ರಾಣಿಯೂ ಹೌದು:
ಪ್ರಚಂಡಃ ಸಹ್ಯಾದ್ರಿಃ ಕಟಿನಿಹಿತಕೋಶಃ ಖಲು ತವ
ಹಿಮಾದ್ರಿಸ್ತೂಣಾರೋ ವಿಧೃತ ಇವ ವಿಂಧ್ಯಃ ಪರಿಕರಃ |
ಸರಿತ್ಸಿಂಧುಃ ಕ್ರುದ್ಧಭ್ರುಕುಟಿರಟವೀ ರೋಮನಿಚಯೋ
ಮಹಾಚಂಡೀ ನೂನಂ ತ್ವಮಸುರಗಣಾನಾಂ ಭಯಕರೀ || (೫೬)ಉನ್ನತವಾದ ಸಹ್ಯಪರ್ವತವನ್ನು ಕಟಿಯಲ್ಲಿಯ ಕರವಾಲದ ಒರೆಯಾಗಿ, ಹಿಮಾಲಯವನ್ನು ಬತ್ತಳಿಕೆಯಾಗಿ, ವಿಂಧ್ಯಾಚಲವನ್ನು ಸೊಂಟಕ್ಕೆ ಕಟ್ಟಿದ ಟೊಂಕವಾಗಿ, ನದಿಗಳನ್ನೇ ಕೋಪದಿಂದ ಗಂಟಿಕ್ಕಿದ ಹುಬ್ಬುಗಳಾಗಿ, ಅಡವಿಗಳನ್ನೇ ಮೈಯ ನವಿರಾಗಿ ಹೊಂದಿದ ನೀನು ಮಹಾಚಂಡಿಯಂತೆ ಕಂಡು ಅಸುರರಿಗೆ ದುಃಸ್ವಪ್ನವಾಗಿರುವೆ!
ವರ್ಣೇಕರ್ ಅವರು ಅಭ್ಯುನ್ನತ ಪರ್ವತಶ್ರೇಣಿಗಳನ್ನು ಪ್ರಸ್ತಾವಿಸಿ ನಮ್ಮ ನಾಡಿನ ಅಚಂಚಲ ಸಾಮರ್ಥ್ಯವನ್ನು ಧ್ವನಿಸಿದ್ದಾರೆ. ಆ ಸಾಮರ್ಥ್ಯ ತೋರಿಕೊಳ್ಳುವ ಬಗೆ ಭಾಯನಕವಾಗಿದ್ದು ಶತ್ರುಗಳ ದಮನಕ್ಕೇ ಮೀಸಲಾಗಿದೆ ಎಂಬುದು ಚಂಡಿಯ ಕಲ್ಪನೆಯ ಮೂಲಕ ತಿಳಿಯುತ್ತದೆ. ಈ ಬಗೆಯ ವೀರೋಚಿತ ವರ್ಣನೆಗಳು ಜಾಗರಣಗೊಳಿಸುವ ಭಾವೋನ್ನತಿ ಮಾತಿಗೆ ಮೀರಿದ್ದು.
ನೆಲಕ್ಕೆರಗುವಾಗ ಅಲ್ಲಿಯ ಪುಣ್ಯಾತ್ಮರ ಸ್ಮರಣೆಯಾದರೆ ಹಣೆಯಲ್ಲಿ ಮೂಡುವ ಗಾಯದ ಕಲೆಯೂ ಸ್ವಾಗತಾರ್ಹ ಎನ್ನುತ್ತಾರೆ ಕವಿ:
ಸ್ವಧರ್ಮೈಕಪ್ರಾಣೈರ್ನಿಜರುಧಿರಸಿಕ್ತಾನಿ ನೃವರೈಃ
ಸತೀಭಿರ್ವಾ ದೇಹೋದ್ದಹನಪರಿಶುದ್ಧಾನಿ ಸುಚಿರಮ್ |
ಧೃತೋಚ್ಚೈರ್ವಲ್ಮೀಕಾನ್ಯಯಿ ತವ ಸುತೀರ್ಥಾನಿ ಮುನಿಭಿಃ
ಕಿಣಾಂಕಂ ಮೇ ಭೂಯಾದ್ಭಗವತಿ ಲಲಾಟಂ ಪ್ರಣಮತಾ || (೬೮)ಹೇ ಭಗವತಿ! ಸ್ವಧರ್ಮಪಾಲನೆಗಾಗಿ ತಮ್ಮ ಬಿಸಿನೆತ್ತರನ್ನೇ ಧಾರೆಯೆರೆದ ವೀರರ, ಪಾತಿವ್ರತ್ಯವನ್ನು ಕಾಪಿಟ್ಟುಕೊಳ್ಳಲು ‘ಸತಿ’ಯಲ್ಲಿ ತಮ್ಮ ದೇಹವನ್ನೇ ಆಹುತಿಯಾಗಿಸಿಕೊಂಡ ಸುಶೀಲೆಯರ, ಸುತ್ತಲೂ ಹುತ್ತ ಬೆಳೆದರೂ ತಪಸ್ಸಿನಲ್ಲಿ ತೊಡಗಿರುವ ಋಷಿ-ಮುನಿಗಳ ಪವಿತ್ರ ತೀರ್ಥಕ್ಷೇತ್ರಗಳನ್ನು ತಲೆಬಾಗಿ ನಮಿಸುವಾಗ ನನ್ನ ಹಣೆಯ ಮೇಲೆ ಗಾಯದ ಕಲೆ ಮೂಡಲಿ!
ರಕ್ಷಣೆಯ ಕುರುಹಾಗಿ ಯೋಧನ ಮೈಯಲ್ಲಿ ಮೂಡುವ ವೀರಲಕ್ಷ್ಮದಂತೆಯೇ ಸಮರ್ಪಣೆಯ ಕುರುಹಾಗಿ ಭಕ್ತನ ಹಣೆಯಲ್ಲಿ ಮೂಡುವ ಕಲೆಯೂ ಪವಿತ್ರ!
ಹೀಗೆ ನಮಿಸುವಾಗ ನಿನ್ನ ಮೂಲಕ ಪಡೆದ ಅಂತರಿಂದ್ರಿಯ-ಬಹಿರಿಂದ್ರಿಯಗಳೆಲ್ಲವೂ ನಿನ್ನಲ್ಲಿಯೇ ಮಗ್ನತೆ ಹೊಂದಿ ಸಾರ್ಥಕವಾಗಲಿ - ಎಂದು ಕವಿ ಭಾರತಿಯಲ್ಲಿ ಪ್ರಾರ್ಥಿಸುತ್ತಾರೆ:
ತ್ವದಾಯತ್ತಾ ವಾಣೀ ತವ ಮಹಿಮಗೀತೇ ವಿರಮತು
ತ್ವದಾಯತ್ತಾ ದೃಷ್ಟಿಃ ಪರಿರಮತು ರೂಪೇಕ್ಷಣರತೌ |
ತ್ವದಾಯತ್ತಂ ಚಿತ್ತಂ ಹ್ಯುಪರಮತು ಸಂಚಿಂತನವಿಧೌ
ತ್ವದರ್ಥೇ ಸಂಶೀರ್ಣಃ ಸುಚಿರಮಯಿ ಕಾಯಃ ಪತತು ಮೇ || (೭೬)ನಿನ್ನ ದಯೆಯಿಂದ ದೊರೆತ ಮಾತಿನ ಶಕ್ತಿ ನಿನ್ನ ಮಹಿಮೆಯನ್ನು ಹಾಡಿ ಹೊಗಳುವುದರಲ್ಲಿಯೇ ವಿರಮಿಸಲಿ; ನಿನ್ನ ಪ್ರಸಾದದಿಂದ ಪಡೆದ ದೃಷ್ಟಿಶಕ್ತಿ ನಿನ್ನ ರಮ್ಯ ರೂಪವನ್ನು ನೋಡುವುದರಲ್ಲಿಯೇ ವಿರಮಿಸಲಿ; ನಿನ್ನ ಕರುಣೆಯ ಫಲವಾದ ಮನಸ್ಸು ನಿನ್ನ ಧ್ಯಾನದಲ್ಲಿಯೇ ವಿರಮಿಸಲಿ. ನಿನಗಾಗಿ ಚಿರಕಾಲ ಶ್ರಮಿಸುತ್ತ ನನ್ನೀ ದೇಹವೇ ಸಮರ್ಪಿತವಾಗಲಿ!
ಈ ಪದ್ಯ ಭಗವತ್ಪಾದ ಶಂಕರರ ‘ಸೌಂದರ್ಯಲಹರಿ’ಯ ಚರಮಪದ್ಯದ ಆಶಯವನ್ನು ನೆನಪಿಸುತ್ತದೆ.
ಮುಂದಿನ ಜನ್ಮದಲ್ಲಿಯೂ ಭಾರತದಲ್ಲಿಯೇ ಹುಟ್ಟುವ ಬಯಕೆ ವರ್ಣೇಕರ್ ಅವರದು:
ಪುನರ್ಜನ್ಮನ್ಯಂಬ ತ್ವದಮಲಜಲಾನಾಂ ಜಲಚರ-
ಸ್ತ್ವದೀಯಾನಾಂ ವೃಕ್ಷವ್ರತತಿಕುಸುಮಾನಾಂ ಮಧುಕರಃ |
ಭವೇಯಂ ತ್ವತ್ಸ್ಪರ್ಶಾತಿಶುಚಿಪವನಾನಾಂ ಚ ಭುಜಗಃ
ಸಮೀಹೇ ನ ಸ್ವರ್ಗೇ ಸುರಗುರುಪದಂ ಚಾಪಿ ಸುಖದಮ್ || (೭೭)ಹೇ ಮಾತೇ! ಮುಂದಿನ ಜನ್ಮದಲ್ಲಿ ನಾನು ನಿನ್ನ ಪುಣ್ಯೋದಕದಲ್ಲಿ ಓಡಾಡುವ ಜಲಚರನಾಗಿಯೋ, ನಿನ್ನ ಮರ-ಗಿಡ-ಬಳ್ಳಿಗಳ ಸುಮಗಳಲ್ಲಿ ರಮಿಸುವ ದುಂಬಿಯಾಗಿಯೋ, ಪವಿತ್ರವಾದ ಸ್ಪರ್ಶವುಳ್ಳ ನಿನ್ನ ಗಾಳಿಯನ್ನು ಹೀರಿ ಬದುಕುವ ಹಾವಾಗಿಯೋ ಹುಟ್ಟಲು ಬಯಸುತ್ತೇನೆ. ನನಗೆ ಸ್ವರ್ಗದಲ್ಲಿ ಸುರಗುರುವಾಗಿರುವ ಸೌಖ್ಯವೂ ಬೇಡ!
ಪದ್ಯದ ಪ್ರಾರಂಭವೇ ಪುನರ್ಜನ್ಮದ ಒಕ್ಕಣೆಯಿಂದ! ಅಂದರೆ ಕವಿ ಮುಕ್ತಿಗಾಗಿ ಬೇಡದೆ ಮರುವುಟ್ಟನ್ನೇ ಎದುರುನೋಡುತ್ತಿದ್ದಾರೆ. ಭಾರತದಲ್ಲಿ ಹುಟ್ಟಲು ಮೋಕ್ಷದ ಆಶೆಯನ್ನೂ ಮೀರಿರುವ ಕವಿ ನಿಜಕ್ಕೂ ವಂದನೀಯರು.
ಹೀಗೆ ಭಾರತದ ವಿಶಾಲ ಯಶೋರಾಶಿಯನ್ನು ವರ್ಣಿಸಲು ಸಂಸ್ಕೃತಭಾರತಿಗೂ ಸಾಧ್ಯವಿಲ್ಲ ಎನ್ನುತ್ತಾರೆ ವರ್ಣೇಕರ್:
ರಣದ್ವಾಣೀವೀಣಾಮಧುರತರಝಂಕಾರಸುರಸಾ
ಶತಾರ್ಥಾಲಂಕಾರಧ್ವನಿಜನಿತಸದ್ಭಾವಸುಭಗಾ |
ಕವೀನಾಂ ದಿಕ್ಕಾಲಾದ್ಯನವಧಿಸಮಾಕೀರ್ಣಯಶಸಾಂ
ನ ವಾಣೀ ಗೈರ್ವಾಣೀ ತವ ಭಣಿತುಮೀಷ್ಟೇಽಖಿಲಗುಣಾನ್ || (೮೦)ಸರಸ್ವತಿಯ ವೀಣಾನಾದದ ಮಾಧುರ್ಯವನ್ನು ಪ್ರತಿಧ್ವನಿಸುವ, ಧ್ವನ್ಯಲಂಕಾರಗಳ ಬಲದಿಂದ ವ್ಯಕ್ತವಾಗುವ ಭಾವಸೌಭಾಗ್ಯವನ್ನು ಹೊಂದಿದ, ದೇಶ-ಕಾಲಗಳನ್ನೆಲ್ಲ ವ್ಯಾಪಿಸಿದ ಕೀರ್ತಿಯಿರುವ ಅಗಣಿತ ಕವಿಗಳ ಅಭಿವ್ಯಕ್ತಿಯಾದ ಗೀರ್ವಾಣವಾಣಿಯೂ ಕೂಡ ನಿನ್ನ ಎಲ್ಲ ಗುಣಗಳನ್ನೂ ಕೀರ್ತಿಸಲು ಸಮರ್ಥಳಲ್ಲ!
ಕವಿ ತಾವು ಜೀವನವಿಡೀ ಉಪಾಸಿಸಿದ ಸಂಸ್ಕೃತಸರಸ್ವತಿಯ ಮಿತಿಯನ್ನು ಹೇಳುವ ಮೂಲಕ ಭಾರತದ ಗುಣೋತ್ಕರ್ಷವನ್ನೇ ಪರ್ಯಾಯವಾಗಿ ಕಥಿಸಿರುವ ಕ್ರಮ ಸೊಗಸಾಗಿದೆ.
* * *
ಸ್ವಾಮಿ ವಿವೇಕಾನಂದರಂಥ ಭಾವಧನರು ತಮ್ಮ ತಾಯ್ನೆಲದ ತುತ್ತತುದಿಯಲ್ಲಿ ನಿಂತು ಅದನ್ನು ಅಂತರಂಗದಲ್ಲಿ ತುಂಬಿಕೊಂಡ ಸಂದರ್ಭವನ್ನು ಅದರ ಪುಣ್ಯಪರಿವೇಷಕ್ಕೆ ಗಾಸಿಯಾಗದ ಹಾಗೆ ಚಿತ್ರಿಸುವುದು ಸಾಮಾನ್ಯರಿಗೆ ಎಟುಕದ ಸಂಗತಿ. ಅದಕ್ಕೆ ಮಿಗಿಲಾದ ಔಚಿತ್ಯ, ಸಂಯಮ ಮತ್ತು ಪ್ರಬುದ್ಧತೆಗಳು ಬೇಕು. ಈ ಎಲ್ಲ ಸದ್ಗುಣಗಳೂ ಇದ್ದ ವರ್ಣೇಕರ್ ಅವರು ರೂಪಿಸಿರುವ ಪ್ರಸ್ತುತ ಸ್ತುತಿ ಸ್ವಾಮಿಗಳ ವಾಣಿಯಂತೆಯೇ ಗಂಭೀರವಾಗಿದೆ, ಕಾಂತಿಯಿಂದ ಕೂಡಿದೆ.