“ಪ್ರಜ್ಞಾಭಾರತಿ” ಶ್ರೀಧರ ಭಾಸ್ಕರ ವರ್ಣೇಕರ್ (೩೧.೦೭.೧೯೧೮—೧೦.೪.೨೦೦೦) ಅವರು ಆಧುನಿಕ ಸಂಸ್ಕೃತಸಾಹಿತ್ಯದ ಧ್ರುವತಾರೆ ಎಂದೇ ಕೀರ್ತಿತರು. ಅವರ ಕೃತಿಗಳು ರಾಷ್ಟ್ರಭಕ್ತಿ ಮತ್ತು ಉದಾತ್ತ ಕಲ್ಪಕತೆಗಳ ಬಿರುಕಿಲ್ಲದ ಬೆಸುಗೆಯ ಅಪೂರ್ವ ನಿದರ್ಶನಗಳು. ಅವರು ತಮ್ಮ ಸೃಷ್ಟಿಶೀಲ ರಚನೆಗಳಿಂದ ಸಂಸ್ಕೃತ ಮತ್ತು ಮರಾಠಿ ಭಾಷೆಗಳನ್ನು ಶ್ರೀಮಂತಗೊಳಿಸಿದ್ದಷ್ಟೇ ಅಲ್ಲದೆ ಆ ನುಡಿಗಳ ಪ್ರಕರ್ಷ-ಪ್ರಸಾರಗಳಿಗೆ ಕೂಡ ಅವಿಶ್ರಾಂತವಾಗಿ ದುಡಿದರು. ಕಾವ್ಯರಚನೆ, ಪತ್ರಿಕೋದ್ಯಮ, ವಿಶ್ವಕೋಶನಿರ್ಮಾಣ, ಸಂಸ್ಕೃತಿಪ್ರಚಾರ, ಸಾಂಸ್ಥಿಕ ಕಾರ್ಯನಿರ್ವಾಹ, ಸಮಾಜೋನ್ಮುಖ ಕಲಾಪಗಳೇ ಮೊದಲಾದ ಮಜಲುಗಳಲ್ಲಿ ಅವರ ಕರ್ಮಯೋಗ ವ್ಯಾಪಿಸಿದೆ.
ಸಾಂಪ್ರದಾಯಿಕ ಮರಾಠಿ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದ ವರ್ಣೇಕರ್ ಅವರಿಗೆ ರಾಷ್ಟ್ರಭಕ್ತಿ, ಪ್ರಕೃತಿಪ್ರೀತಿ, ಅಕಾರ್ಪಣ್ಯ ಮತ್ತು ಸಂಸ್ಕೃತಭಾಷೆಯ ಬಗೆಗಿನ ಒಲವು ಕುಲಧನವಾಗಿತ್ತು. ಕಿರಿಯ ವಯಸ್ಸಿನಿಂದಲೇ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರು ಅದೊಮ್ಮೆ ಬಯಲೊಂದರಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘದ ಚಟುವಟಿಕೆಗಳು ಜರಗುತ್ತಿದ್ದುದನ್ನು ಕಂಡು ಆಕರ್ಷಿತರಾಗಿ ಸ್ವಯಂ ಡಾ|| ಕೇಶವ ಬಲಿರಾಮ್ ಹೆಡಗೆವಾರ್ ಅವರ ಬಳಿ ಹೋಗಿ ಸಂಘಕ್ಕೆ ಸೇರುವ ತಮ್ಮ ಆಶೆಯನ್ನು ವ್ಯಕ್ತಪಡಿಸಿದರು. ಹೀಗೆ ಆರ್ಜಿತವಾದುದು ವರ್ಣೇಕರ್ ಅವರ ‘ಶಿಶು ಸ್ವಯಂಸೇವಕ’ ಎಂಬ ಅನನ್ಯ ಉಪಾಧಿ!
ಪುಸ್ತಕಗಳನ್ನು ಕೊಳ್ಳುವುದಿರಲಿ, ಅವುಗಳ ಉಪಲಬ್ಧಿಯೇ ಕಷ್ಟವಾಗಿದ್ದ ಆ ಕಾಲದಲ್ಲಿ ಅವರು ಎಲ್ಲ ಪಾಠಗಳನ್ನೂ ಕಂಠಗತ ಮಾಡಿಕೊಳ್ಳುವ ಅನಿವಾರ್ಯತೆ ಇದ್ದಿತು. ಹೀಗೆ ಮುಖಸ್ಥವಾದ ವಿದ್ಯೆಯ ಸತ್ಫಲಗಳನ್ನು ಮುಂದೆ ವರ್ಣೇಕರ್ ಅವರೂ ಗಳಿಸಿ ಇತರರೂ ಅನುಭವಿಸುವಂತಾದುದು ಸಂಸ್ಕೃತದ ಸುಕೃತ.
ತಂದೆ-ತಾಯಿಯರ ಅಕಾಲಿಕ ಮರಣ ಹಾಗೂ ಕುಟುಂಬದಲ್ಲಿಯ ಆರ್ಥಿಕ ಅವ್ಯವಸ್ಥೆಯ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಸೇರುವ ಅವಕಾಶವನ್ನು ವರ್ಣೇಕರ್ ಅವರು ಪಡೆಯಲಾಗಲಿಲ್ಲ. ಆದರೂ ಅದಮ್ಯ ವಿದ್ಯೋತ್ಸಾಹದಿಂದ ಪ್ರಚೋದಿತರಾಗಿ ಅಂಧ ಮಕ್ಕಳ ಶಾಲೆಯಲ್ಲಿ ಬೋಧಿಸಿ, ಖಾಸಗಿಯಾಗಿ ಪಾಠ-ಪ್ರವಚನಗಳನ್ನು ನಡಸಿ ಕುಟುಂಬವನ್ನೂ ಭರಿಸಿದರು, ತಮ್ಮ ವಿದ್ಯಾಭಿಲಾಷೆಯನ್ನೂ ಉದ್ಧರಿಸಿದರು. ಈ ರೀತಿಯಲ್ಲಿ ಸಂಸ್ಕೃತದ ಎಂ.ಎ. ಪದವಿಯನ್ನು ಪಡೆದ ಅವರಿಗೆ ನಾಗಪುರದ ವಿಶ್ವವಿದ್ಯಾಲಯ ೧೯೭೪ ರಲ್ಲಿ ‘ಡಿ.ಲಿಟ್.’ ಪದವಿಯನ್ನು ಕೊಟ್ಟು ಕೃತಕೃತ್ಯವಾಯಿತು.
ಪ್ರತಿದಿನವೂ ಬಿಡುವಿಲ್ಲದ ಬಗೆಬಗೆಯ ಕೆಲಸಗಳಲ್ಲಿ ತೊಡಗಿರುತ್ತಿದ್ದ ವರ್ಣೇಕರ್ ಅವರಿಗೆ ಕರ್ಮದೀಕ್ಷೆಯನ್ನು ಗೌರವಿಸುವ ವ್ಯಕ್ತಿಯೇ ಪತ್ನಿಯಾದರು. ಶ್ರೀಮತಿ ಕಮಲಾ ಅವರು ತಮ್ಮ ಪತಿಯ ಚಟುವಟಿಕೆಗಳಿಗೆಲ್ಲ ಒಳ್ಳೆಯ ಒತ್ತಾಸೆಯಾಗಿದ್ದರು. ಸಮಾಜಕ್ಕೇ ಮಾದರಿಯಾಗುವಂತೆ ಮನೆಯನ್ನು ಮುನ್ನಡಸಿದ್ದಲ್ಲದೆ ವರ್ಣೇಕರ್ ಅವರ ಎಲ್ಲ ರಚನೆಗಳನ್ನು ಸ್ವಹಸ್ತದಲ್ಲಿ ಬರೆದುಕೊಂಡು ಸಾರಸ್ವತಸೇವೆಯನ್ನೂ ಮಾಡಿದರು. ಅವರು ಹೀಗೆ ಲಿಪಿಬದ್ಧಗೊಳಿಸಿದ ಸಾಹಿತ್ಯ ಸುಮಾರು ಐದು ಸಾವಿರ ಪುಟಗಳಷ್ಟು! ಶ್ರೀಮತಿ ಕಮಲಾ ಅವರ ಈ ಕಾಯಕವನ್ನು ಪ್ರತಿಯೊಬ್ಬ ಭಾಷಾಭಿಮಾನಿಯೂ ಗೌರವದಿಂದ ಸ್ಮರಿಸಬೇಕು.
ಮಹಾಕಾವ್ಯ, ಖಂಡಕಾವ್ಯ, ಕಥೆ, ಗೀತ, ಪ್ರಬಂಧ, ನಾಟಕ, ಗದ್ಯಲೇಖನಗಳು, ವಿವಿಧ ವಿಷಯಗಳನ್ನು ಕುರಿತ ಕಾರಿಕೆ-ಪ್ರಕರಣಗಳು - ಹೀಗೆ ವರ್ಣೇಕರ್ ಅವರ ಸಾಹಿತ್ಯಕೃಷಿ ಅನೇಕ ಧಾರೆಗಳಲ್ಲಿ ವಿಸ್ತರಿಸಿಕೊಂಡಿದೆ. ಅವರು ಪ್ರಾರಂಭಿಸಿದ ‘ಸಂಸ್ಕೃತಭವಿತವ್ಯಮ್’ ಎಂಬ ಸಂಸ್ಕೃತಪತ್ರಿಕೆ ಇಂದೂ ಪ್ರಚಲಿತವಾಗಿದ್ದು ಅಪಾರ ಜನಾದರಣೆಯನ್ನು ಗಳಿಸಿದೆ. ವರ್ಣೇಕರ್ ಅವರು ‘ರಾಷ್ಟ್ರಶಕ್ತಿ’ ಎಂಬ ಮರಾಠಿ ವಾರಪತ್ರಿಕೆಯನ್ನೂ ‘ಯೋಗಪ್ರಕಾಶ’ ಎಂಬ ಮಾಸಿಕ ಪತ್ರಿಕೆಯನ್ನೂ ಸಂಪಾದಿಸುತ್ತಿದ್ದರು. ‘ಸಂಸ್ಕೃತವಾಙ್ಮಯಕೋಶ’ ಎಂಬುದು ಅವರ ಹಿರಿದಾದ ರಚನೆಗಳಲ್ಲಿ ಒಂದು. ಇದು ಸಂಸ್ಕೃತಸಾಹಿತ್ಯದ ಎಲ್ಲ ಆಯಾಮಗಳನ್ನೂ ಅಧಿಕೃತವಾಗಿ ಪರಿಚಯಿಸುತ್ತದೆ. ಅಂತೆಯೇ ‘ಅರ್ವಾಚೀನ ಸಂಸ್ಕೃತಸಾಹಿತ್ಯ’ ಎಂಬ ಅವರ ಮರಾಠಿ ಪುಸ್ತಕ ಆಧುನಿಕ ಸಾಹಿತ್ಯವನ್ನು ಚೆನ್ನಾಗಿ ಪರಿಚಯಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಹೆಚ್ಚಿನ ಶ್ರಮವಿಲ್ಲದೆ ಆಪ್ತವಾಗಿಸಿಕೊಳ್ಳಲು ಬಯಸುವವರಿಗೆ ಅವರ ‘ಭಾರತೀಯ ವಿದ್ಯೆ’ ಎಂಬ ಸಣ್ಣ ಗ್ರಂಥ ಒಳ್ಳೆಯ ಮಾರ್ಗದರ್ಶಿಯಾಗಬಲ್ಲುದು.
ರಾಷ್ಟ್ರಿಯ ಸ್ವಯಂಸೇವಕ ಸಂಘದ ವಿಚಾರಗಳನ್ನು ಗಂಭೀರಮನೋಹರವಾಗಿ ನಿರೂಪಿಸುವ ‘ಸಂಘಗೀತ’, ಪ್ರತಿದಿನವೂ ದೇಶದೆಲ್ಲೆಡೆ ಲಕ್ಷಾಂತರ ಜನ ಪಠಿಸುವ ‘ಯಂ ವೈದಿಕಾ ಮಂತ್ರದೃಶಃ ಪುರಾಣಾಃ’ ಎಂಬ ಶ್ಲೋಕಸರಣಿಯೇ ಮುಂತಾದ ರಚನೆಗಳನ್ನು ಮಾಡಿದವರು ವರ್ಣೇಕರ್. ಅವರಲ್ಲಿ ಅವಿಚಲವಾಗಿ ನೆಲೆಗೊಂಡಿದ್ದ ರಾಷ್ಟ್ರಪ್ರೇಮ ಇಷ್ಟು ಸಮೃದ್ಧವೂ ಸ್ಫೂರ್ತಿಪ್ರದವೂ ಆದ ಅಭಿವ್ಯಕ್ತಿಯನ್ನು ಗಳಿಸಿದೊಂದು ವಿಶೇಷ.
ವರ್ಣೇಕರ್ ರಚಿಸಿದ ‘ಮಂದೋರ್ಮಿಮಾಲಾ’, ‘ಕಾಲಿದಾಸರಹಸ್ಯ’, ‘ತೀರ್ಥಭಾರತ’, ‘ವಾತ್ಸಲ್ಯರಸಾಯನ’, ‘ಜವಹರತರಂಗಿಣಿ’ ಮುಂತಾದ ಪ್ರತಿಯೊಂದು ಕೃತಿಯೂ ಆ ಪ್ರಕಾರದ ಕಾವ್ಯಗಳಲ್ಲಿ ವಿಶಿಷ್ಟವೆನಿಸಿದೆ. ಅವರ ‘ಶಿವರಾಜ್ಯೋದಯ’ ಮಹಾಕಾವ್ಯ ಆ ನಿಟ್ಟಿನ ಆಧುನಿಕ ರಚನೆಗಳಲ್ಲಿಯೇ ಅಗ್ರಮಾನ್ಯವೆಂದು ವಿಖ್ಯಾತವಾಗಿದೆ. ಐತಿಹಾಸಿಕ ಕಥಾತಂತುಗಳನ್ನು ಆಧರಿಸಿದ ಕಾವ್ಯಗಳಿಗೆ ಸಂಸ್ಕೃತದಲ್ಲಿ ಕೊರತೆಯೇನಿಲ್ಲ. ಪ್ರಾತಿನಿಧಿಕ ಉದಾಹರಣೆಗಳಾಗಿ ಕಲ್ಹಣನ ‘ರಾಜತರಂಗಿಣಿ’, ಬಿಲ್ಹಣನ ‘ವಿಕ್ರಮಾಂಕದೇವಚರಿತ’, ಗಂಗಾದೇವಿಯ ‘ಮಧುರಾವಿಜಯ’ ಮುಂತಾದುವನ್ನು ಹೆಸರಿಸಬಹುದು. ಕಳೆದ ಎರಡು ಶತಮಾನಗಳಲ್ಲಿ ಮಹಾರಾಣಾ ಪ್ರತಾಪ, ಪೃಥ್ವೀರಾಜ ಚೌಹಾಣ, ಗಾಂಧಿ, ತಿಲಕ್ ಮೊದಲಾದವರ ಬಗೆಗಿನ ಹಲವು ಕಾವ್ಯಗಳು ಹೊರಬಂದಿವೆ. ಈ ದಿಶೆಯ ಪ್ರಕಲ್ಪಗಳಿಗೆಲ್ಲ ಮುಕುಟದಂತಿರುವುದು ಛತ್ರಪತಿ ಶಿವಾಜಿಯ ಜೀವಿತ-ಸಾಧನೆಗಳನ್ನು ವರ್ಣಿಸುವ ವರ್ಣೇಕರ್ ಅವರ ಉದಾತ್ತಪ್ರಸನ್ನ ರಚನೆ. ‘ಮಾಹಾಕಾವ್ಯ’ ಎಂದು ಕರೆಸಿಕೊಳ್ಳಬಲ್ಲ ಬೆರಳೆಣಿಕೆಯ ಆಧುನಿಕ ಕೃತಿಗಳ ಪೈಕಿ ಅರವತ್ತೆಂಟು ಸರ್ಗಗಳ ಈ ಹೆಬ್ಬೊತ್ತಿಗೆಯೇ ಪ್ರಥಮಗಣ್ಯ ಎಂದರೆ ತಪ್ಪಲ್ಲ. ಭಕ್ತಿಯು ರಸವೋ ಅಲ್ಲವೋ ಎಂಬ ಚರ್ಚೆ ಆಲಂಕಾರಿಕರ ವಲಯದಲ್ಲಿ ಶತಮಾನಗಳಿಂದ ಸಾಗಿಬಂದಿದೆ. ಅದು ಹಾಗಿರಲಿ. ಭಕ್ತಿಯ ರಸತ್ವ ಪ್ರಶ್ನಾರ್ಥಕವೇ ಆದರೂ ರಾಷ್ಟ್ರಭಕ್ತಿಯನ್ನು ಮೂಲಧಾತುವಾಗಿ ಉಳ್ಳ ಕೃತಿಯೊಂದು ರಸ್ಯವಾಗಿರಲು ಸರ್ವಥಾ ಸಾಧ್ಯವೆಂದು ‘ಶಿವರಾಜ್ಯೋದಯ’ದಿಂದ ಸಿದ್ಧವಾಗುತ್ತದೆ.
* * *
ವರ್ಣೇಕರ್ ಅವರು ಕನ್ಯಾಕುಮಾರಿಯಲ್ಲಿಯ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕದ ಸ್ಥಾಪನೆಯನ್ನು ಅನುಲಕ್ಷಿಸಿ ಬರೆದ ಕೃತಿ ‘ವಿವೇಕಾನಂದವಿಜಯ’ ಎಂಬ ಹತ್ತು ಅಂಕಗಳ ಮಹಾನಾಟಕ. ಇಲ್ಲಿ ವಿವೇಕಾನಂದರ ಬಾಲ್ಯದಿಂದ ಮೊದಲ್ಗೊಂಡು ಅವರು ದೇಶ-ವಿದೇಶಗಳಲ್ಲೆಲ್ಲ ಸಂಚರಿಸಿ, ಭಾರತದ ಆಧ್ಯಾತ್ಮಿಕ ಸೌರಭವನ್ನು ಪಸರಿಸಿ ಹಿಂತಿರುಗಿ ಸಿದ್ಧಿ ಗಳಿಸಿದವರೆಗಿನ ಘಟನೆಗಳ ವರ್ಣನೆ ಅಡಕಗೊಂಡಿದೆ. ಲೇಖಕರು ಮೊದಲ ನಾಲ್ಕು ಅಂಕಗಳಲ್ಲಿ ಐತಿಹಾಸಿಕ ತಥ್ಯಗಳಿಗೆ ತಮ್ಮ ಕಲ್ಪನೆಯನ್ನೂ ಸೇರಿಸಿ ಸ್ವಾಮಿಗಳ ಬಾಲ್ಯವನ್ನೂ ಅವರು ಶ್ರೀ ರಾಮಕೃಷ್ಣ ಪರಮಹಂಸರನ್ನು ದರ್ಶಿಸಿದ ಸುಮುಹೂರ್ತವನ್ನೂ ಚಿತ್ರಿಸಿದ್ದಾರೆ. ಆ ಬಳಿಕ ಎರಡು ಅಂಕಗಳಲ್ಲಿ ವಿವೇಕಾನಂದರು ವಿವಿಧ ತೀರ್ಥಗಳನ್ನು, ರಾಜ-ಮಹಾರಾಜರನ್ನು ಕಂಡ ಘಟನೆಗಳ ವರ್ಣನೆಯಿದೆ. ಎಂಟು ಮತ್ತು ಒಂಬತ್ತನೆಯ ಅಂಕಗಳಲ್ಲಿ ಸ್ವಾಮಿಗಳ ವಿದೇಶಪ್ರವಾಸ ಮತ್ತು ಅಲ್ಲಿ ಅವರು ಸಾಧಿಸಿದ ‘ಧರ್ಮವಿಜಯ’ದ ಪ್ರಸ್ತಾವವಿದ್ದು ಕಡೆಯ ಅಂಕದಲ್ಲಿ ಭಾರತಕ್ಕೆ ಅವರು ಮರಳಿದ ವರ್ಣನೆಯಿದೆ.
ಇಡಿಯ ನಾಟಕದಲ್ಲಿ ಅತ್ಯಂತ ಉಜ್ಜ್ವವಲವಾದ ಭಾಗ ಶ್ರೀಪಾದಶಿಲೆಯ ಮೇಲೆ ನಿಂತು ವಿವೇಕಾನಂದರು ಮಾಡಿದ ಭಾರತಿಯ ಸ್ತುತಿ. ಏಳನೆಯ ಅಂಕದ ಬಹುಭಾಗ ಈ ವರ್ಣನೆಗೇ ಮೀಸಲಾಗಿದೆ. ಕವಿ ಶಿಖರಿಣೀಛಂದಸ್ಸಿನ ಎಂಬತ್ತಮೂರು ಪದ್ಯಗಳಲ್ಲಿ ನಮ್ಮ ನಾಡನ್ನು ಅದಕ್ಕೆ ತಕ್ಕುದೇ ಆದ ಎತ್ತರದ ನೆಲೆಯಲ್ಲಿ ಕಾಣಿಸಿದ್ದಾರೆ. ಆದಿಕವಿ ವಾಲ್ಮೀಕಿಮುನಿಗಳೇ ಆಧುನಿಕ ಕಾಲದಲ್ಲಿ ರಚಿಸಿದರೋ ಎಂಬಷ್ಟು ತಿಳಿಯಾದ ಭಾಷೆ ಮತ್ತು ಉದಾರವಾದ ಭಾವ ಈ ಪದ್ಯಗಳಲ್ಲಿ ತುಂಬಿದೆ. ಶಿಖರಿಣಿಯಂಥ ವಿಕಟಗತಿಯ ಬಂಧದಲ್ಲಿಯೂ ವರ್ಣೇಕರ್ ಅವರ ವಾಣಿ ಅವ್ಯಗ್ರಬಂಧುರವಾಗಿ ಸಾಗುವ ಪರಿಯನ್ನು ಆಸ್ವಾದಿಸಿಯೇ ಅರಿಯಬೇಕು.
ಅದರ ಕೆಲವು ಪದ್ಯಗಳನ್ನೀಗ ಕಾಣೋಣ. ಮೊದಲಿಗೆ ಭಾರತದರ್ಶನ ಮಾಡಿಕೊಂಡ ವಿವೇಕಾನಂದರು ಪುಳಕಿತರಾಗಿ ಮನೋ-ವಾಕ್-ಕಾಯಗಳಿಂದ ಸಲ್ಲಿಸಿದ ನಮನ ಹೀಗಿದೆ:
ನಮೋವಾಕಂ ಸಾಕಂ ಪ್ರಣತಿತತಿಭಿರ್ಭಾವುಕತಯಾ
ಪ್ರಿಯಂ ಗಾಯಂ ಗಾಯಂ ತವ ಗುಣಚಯಂ ಪುಣ್ಯನಿಲಯಮ್ |
ಸ್ಮರನ್ ಸ್ವಾಂತೇ ಶಾಂತೇ ತನುಮತನುಮೂರ್ಜಸ್ವಲರುಚಂ
ಜಗದ್ವಂದ್ಯಾಂ ವಂದೇ ಪ್ರಥಿತಯಶಸಂ ತ್ವಾಂ ಭರತಭೂಃ || (೫)ಹೇ ಭಾರತಮಾತೇ! ನಿನಗೆ ಭಕ್ತಿಯಿಂದ ನಮಿಸಿ ನಿನ್ನ ಪ್ರಿಯಕರವಾದ ಪುಣ್ಯಗುಣಗಳನ್ನು ಹಾಡಿ ಹೊಗಳುತ್ತ, ಪ್ರಶಾಂತವಾದ ಮನಸ್ಸಿನಲ್ಲಿ ನಿನ್ನ ವಿತತೋಜ್ಜ್ವವಲ ರೂಪವನ್ನು ನೆನೆಯುತ್ತ, ಇಡಿಯ ಜಗತ್ತಿನ ಆದರಕ್ಕೆ ಪಾತ್ರಳಾಗಿ ಅಪಾರಕೀರ್ತಿ ಪಡೆದಿರುವ ನಿನಗೆರಗುತ್ತೇನೆ.
ಮುಂದೆ ಭಾರತದ ಭೌಗೋಳಿಕ ವಿವರಗಳನ್ನು ಒಳಗೊಂಡ ಪದ್ಯ ಇಂತಿದೆ:
ಅವಾಚ್ಯಾಂ ಭೂರೇಷಾ ಮಲಯಜರಜಃಸೌರಭಮಯೀ
ಪ್ರತೀಚ್ಯಾಂ ಮಾಧುರ್ಯಪ್ರಚುರಫಲಸಂಭಾರಸುರಸಾ |
ಉದೀಚ್ಯಾಂ ಕಾಶ್ಮೀರಪ್ರಭವಕಮನೀಯದ್ಯುತಿಮತೀ
ತಥಾ ಪ್ರಾಚ್ಯಾಮುಚ್ಚೈರ್ವಿಪುಲಕಲಮಕ್ಷೇತ್ರಸುಭಗಾ || (೭)ನಮ್ಮೀ ನಾಡು ದಕ್ಷಿಣದಲ್ಲಿ ಮಲಯದ ಮಣ್ಣಿನ ಕಂಪಿನಿಂದ, ಪಶ್ಚಿಮದಲ್ಲಿ ಸಿಹಿಯಾದ ಹಣ್ಣು-ಹಂಪಲುಗಳ ರಸವಂತಿಕೆಯಿಂದ, ಉತ್ತರದಲ್ಲಿ ಕಾಶ್ಮೀರದ ಕಮ್ರ ಕಾಂತಿಯಿಂದ, ಪೂರ್ವದಲ್ಲಿ ಹುಲುಸಾದ ಬತ್ತದ ಗದ್ದೆಗಳ ಸಮೃದ್ಧಿಯಿಂದ ಕೂಡಿ ಕಂಗೊಳಿಸಿದೆ.
ಇಲ್ಲಿ ಕವಿ ಮಲಯಪರ್ವತದ ಚಂದನವೃಕ್ಷಗಳನ್ನು, ಕಾಶ್ಮೀರದ ಕುಂಕುಮಕೇಸರವನ್ನು ಸೊಗಸಾಗಿ ಧ್ವನಿಸಿದ್ದಾರೆ. ಪೂರ್ವದಿಕ್ಕಿನ ಅನ್ನಸಮೃದ್ಧಿ ಮತ್ತು ಪಶ್ಚಿಮದಿಕ್ಕಿನ ಫಲಸಮೃದ್ಧಿ ಕೂಡ ಇಲ್ಲಿ ಸೂಕ್ತವಾಗಿ ಒಕ್ಕಣೆಗೊಂಡಿದೆ. ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯ ನಮ್ಮ ನೆಲದಲ್ಲಿ ಕಾಣುವಂತೆ ಬೇರೆಡೆ ಕಾಣಸಿಗುವುದು ಕಷ್ಟ. ಇವುಗಳ ಶ್ರೀಮಂತಿಕೆಯಿಂದಲೇ ಜೀವನೋತ್ಕರ್ಷಕ್ಕೆ ಪೂರಕವಾದ ಧರ್ಮಾವಿರುದ್ಧ ಭೋಗವನ್ನು ಉಪಾರ್ಜಿಸುವ ಆರ್ಥಿಕ ಸಂಪನ್ಮೂಲ ಒದಗಿದೆ.
ಹೀಗೆ ಕವಿ ಮೊದಲು ತ್ರಿವರ್ಗವನ್ನು ಕುರಿತು ಹೇಳಿ ಆ ಬಳಿಕ ಅಪವರ್ಗವನ್ನು ಪ್ರಸ್ತಾವಿಸುತ್ತಾರೆ:
ವಿಧಾತಾ ನಿರ್ಮಾಯ ಪ್ರಥಿತರಚನಂ ವಿಶ್ವಮಖಿಲಮ್
ಅದೃಷ್ಟ್ವಾ ಚಿಂತಾರ್ತೋ ಭಗವದವತಾರೋಚಿತಭುವಮ್ |
ಸರಿತ್ಪೂತಾಂ ಸಸ್ಯಪ್ರಚಯವಿಭವಾಂ ರಮ್ಯವಿಪಿನಾಂ
ತಪೋಭೂಮಿಂ ಪುಣ್ಯಾಂ ತದನು ಭವತೀಂ ಸಂಘಟಿತವಾನ್ || (೯)ಬ್ರಹ್ಮ ಇಡಿಯ ಜಗತ್ತನ್ನು ಸೃಷ್ಟಿಸಿದ ಬಳಿಕ ಭಗವಂತನ ಅವತಾರಕ್ಕೆ ಸಮುಚಿತವಾದ ಎಡೆಯನ್ನು ಎಲ್ಲಿಯೂ ಕಾಣಲಾಗದೆ ಚಿಂತೆಗೆ ತುತ್ತಾಗಿ, ಅದನ್ನು ಬಗೆಹರಿಸಲು ಅನೇಕ ನದಿಗಳ ಹರಿವಿನಿಂದ ಪವಿತ್ರವಾದ, ಅಪಾರ ಸಸ್ಯಸಂಪತ್ತನ್ನು ಹೊಂದಿದ, ರಮಣೀಯ ವನರಾಜಿಯನ್ನು ತಳೆದ ಭಾರತವೆಂಬ ಈ ಪುಣ್ಯ ತಪೋಭೂಮಿಯನ್ನು ರಚಿಸಿದನು.
ಭಗವಂತ ಸ್ವರ್ಗವಾಸವನ್ನೂ ಬಿಟ್ಟು ಭೂಮಿಯಲ್ಲಿ ಅವತರಿಸಲು ಬಯಸಿದಾಗ ಸಮುಚಿತವಾಗಿ ತೋರಿದ ಸ್ಥಳವೇ ನಮ್ಮೀ ನಾಡು. ದೇವತೆಗಳಿಗೂ ಆಶ್ರಯ ಕೊಡಬಲ್ಲ ಬಲ್ಮೆ ಭಾರತಮಾತೆಯದು!
ಹೀಗೆ ಬುವಿಗಿಳಿದ ದೇವತೆಗಳು ನಿಸರ್ಗದ ಬೇರೆ ಬೇರೆ ಮುಖಗಳಲ್ಲಿ ತಮ್ಮ ಸಾನ್ನಿಧ್ಯವನ್ನು ಕಲ್ಪಿಸಿ ಇಡಿಯ ನಾಡನ್ನೇ ಪವಿತ್ರಗೊಳಿಸಿದ್ದಾರೆ ಎಂಬ ಕವಿಯ ಕಲ್ಪನೆ ಭವ್ಯವಾಗಿದೆ:
ವಸಂತೇ ತ್ವಂ ವಾಣೀ ರಸಿತರಸಿಕೇ ಕೋಕಿಲಕುಲೇ
ಶರತ್ಕಾಲೇ ಲಕ್ಷ್ಮೀರ್ದಿಶಿ ದಿಶಿ ಲಸತ್ಪದ್ಮನಿವಹೇ |
ಅಪರ್ಣಾ ಹೇಮಂತೇ ಖಲು ಗಲಿತಪರ್ಣೇಷು ತರುಷು
ವಿಲೋಕೇ ತ್ವಾಂ ಮಾತಃ ಸತತಮಭಿತೋ ದೈವತಮಯೀಮ್ || (೧೩)ಹೇ ಮಾತೇ! ವಸಂತದಲ್ಲಿ ಕಲಕೂಜನ ಮಾಡುವ ಕೋಗಿಲೆಗಳ ಇಂಚರದಲ್ಲಿ ಸರಸ್ವತಿಯಾಗಿ, ಶರತ್ಸಮಯದಲ್ಲಿ ಎಲ್ಲೆಡೆ ಕಂಗೊಳಿಸುವ ಪ್ರಫುಲ್ಲ ಕಮಲಗಳಲ್ಲಿ ಲಕ್ಷ್ಮಿಯಾಗಿ, ಹೇಮಂತದಲ್ಲಿ ಎಲೆಗಳನ್ನು ಉದುರಿಸಿಕೊಂಡ ಮರಗಳಲ್ಲಿ ಅಪರ್ಣೆಯಾದ ಪಾರ್ವತಿಯಾಗಿ ತೋರುವ ನೀನು ಸದಾ ದೇವಸ್ವರೂಪಿಣಿಯಾಗಿ ಕಾಣುವೆ!
ದೇಶವನ್ನು ದೇವರಾಗಿ ಕಾಣುವುದಾಗಲಿ, ಋತುಗಳ ಸೌಂದರ್ಯಕ್ಕೆ ಮನಸೋಲುವುದಾಗಲಿ ಸಂಸ್ಕೃತಸಾಹಿತ್ಯಕ್ಕೆ ಹೊಸತೇನಲ್ಲ. ಆದರೆ ಅವರೆಡನ್ನೂ ಒಟ್ಟಿಗೆ ಕಾಣಿಸುವ ಶಕ್ತಿ ವರ್ಣೇಕರ್ ಅವರಿಗೇ ಮೀಸಲು!
ತ್ರಿವರ್ಗದ ಸಾರ್ಥಕ್ಯವನ್ನು ಕಾಣುವುದಕ್ಕೆ ಭಾರತ ಹೇಳಿಮಾಡಿಸಿದ ಬೀಡೆಂದು ಸಾವಯವರೂಪಕದ ಮೂಲಕ ಸಾರುವ ಪದ್ಯ ಮನೋಜ್ಞವಾಗಿದೆ:
ವಿಧಾತ್ರೀ ಧರ್ಮಾಣಾಂ ನಿಗಮದೃಢಮೂಲಾತಿವಿಮಲಾ
ಸವಿತ್ರೀ ಚಾರ್ಥಾನಾಂ ಮಣಿಕನಕಬೀಜಾ ಸುರುಚಿರಾ |
ಪ್ರದಾತ್ರೀ ಕಾಮಾನಾಂ ಬಹುವಿಧಕಲಾಪುಷ್ಪಸುಫಲಾ
ಸುಖಚ್ಛಾಯಾ ಮಾತಸ್ತ್ವಮಸಿ ಭುವನೇ ಕಲ್ಪಲತಿಕಾ || (೧೭)ಹೇ ಮಾತೇ, ಧರ್ಮ-ಅರ್ಥ-ಕಾಮಗಳ ನೆಲೆಯಾದ ನೀನು ನೆಮ್ಮದಿಯ ನೆಳಲನ್ನು ದಯಪಾಲಿಸುವ ಕಲ್ಪಲತೆಯೇ ಹೌದು! ವಿಮಲ ವೇದವಾಙ್ಮಯವೇ ನಿನ್ನ ದೃಢವಾದ ಬೇರು, ಹೊಳೆಹೊಳೆಯುವ ಮುತ್ತು-ರತ್ನಗಳೇ ಬೀಜಗಳು, ಬಗೆಬಗೆಯ ಕಲೆಗಳೇ ಫಲ-ಪುಷ್ಪಗಳು.
ಇಲ್ಲಿ ಧರ್ಮ-ಅರ್ಥ-ಕಾಮಗಳ ಪ್ರಸ್ತಾವ ಮಾತ್ರ ಇದ್ದು ಮೋಕ್ಷ ಸೂಚಿತವಾಗಿರುವುದು ಬಹಳ ಧ್ವನಿಪೂರ್ಣ. ಸಾಧನೆಯ ಪೂರ್ಣಫಲವೇ ಸಿದ್ಧಿ. ತ್ರಿವರ್ಗದ ಸಮ್ಯಗನುಷ್ಠಾನದಿಂದ ದೊರೆಯುವ ಫಲವೇ ಅಪವರ್ಗ. ಈ ಪದ್ಯ “ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ ಮೋಕ್ಷ ಸ್ವತಃಸಿದ್ಧ” ಎಂಬ ಕಗ್ಗದ ಮಾತನ್ನು ನೆನಪಿಗೆ ತರುವಂತಿದೆ.
ಮುಂದಿನ ಪದ್ಯ ನಮ್ಮ ನಾಡಿನ ಪುಣ್ಯಕ್ಷೇತ್ರಗಳನ್ನು ಪ್ರಸ್ತಾವಿಸುವ ವ್ಯಾಜ್ಯದಲ್ಲಿ ಅಪೂರ್ವ ಚಮತ್ಕಾರವನ್ನು ಸಾಧಿಸಿದೆ:
ಅಯೋಧ್ಯಾ ಶತ್ರೂಣಾಂ ತ್ವಮಸಿ ಮಧುರಾ ಪಾವನಹೃದಾಂ
ಖಲಾನಾಂ ವಾ ಮಾಯಾ ಜನನಿ ಖಲು ಕಾಶೀ ಸುತಪಸಾಮ್ |
ಅವಂತೀ ಚಾರ್ತಾನಾಮಯಿ ವಿಧೃತಕಾಂಚೀ ವಿಮನಸಾಂ
ವಿಮುಕ್ತೇರ್ದ್ವಾರಾವತ್ಯಯಿ ದಿವಿಷದಾಂ ತ್ವಂ ನನು ಪುರೀ || (೧೮)ಹೇ ಭಾರತಮಾತೇ! ಶತ್ರುಗಳಿಗೆ ಅಯೋಧ್ಯೆಯಾಗಿ, ಪವಿತ್ರಚರಿತರ ಪಾಲಿಗೆ ಮಧುರೆಯಾಗಿ, ದುಷ್ಟರಿಗೆ ಮಾಯೆಯಾಗಿ, ತಪಸ್ವಿಗಳಿಗೆಲ್ಲ ಕಾಶಿಯಾಗಿ, ದುಃಖಿತರನ್ನು ರಕ್ಷಿಸುವ ಅವಂತಿಯಾಗಿ, ವೈಮನಸ್ಯ ಉಂಟುಮಾಡುವವರನ್ನು ಹತ್ತಿಕ್ಕಲು ಕಟಿಬದ್ಧೆಯಾದ ಕಾಂಚಿಯಾಗಿ, ಮುಕ್ತಿಯ ಹೆಬ್ಬಾಗಿಲಂತಿರುವ ದ್ವಾರಕೆಯಾಗಿ ಬೆಳಗುವ ನೀನು ದೇವತೆಗಳ ಬೀಡೇ ಸರಿ!
ಇಲ್ಲಿ ಕಲಾತ್ಮಕತೆ ಮುಗಿಲುಮುಟ್ಟಿದೆ. ಒಂದೇ ಶಬ್ದವನ್ನು ವಿಭಿನ್ನ ಅರ್ಥಗಳಲ್ಲಿ ಅನ್ವಯಿಸಿ ಚಮತ್ಕಾರ ಮಾಡುವ ಕವಿಗಳು ಸಾವಿರ ಮಂದಿ ಇದ್ದಾರೆ. ಆದರೆ ಅದನ್ನು ದೇಶಹಿತ ಸಾಧಿಸುವ ಸದ್ಗುಣಗಳಿಗೆ ಒಪ್ಪವಿಡುವ ಕಾಣ್ಕೆ ಹೆಚ್ಚಿನವರಿಗೆ ಇರಲಾರದು. ಹೆಚ್ಚು ಜಗ್ಗಾಡದೆ ಪ್ರತಿಯೊಂದು ಪುಣ್ಯಕ್ಷೇತ್ರದ ಹೆಸರನ್ನೂ ಇಲ್ಲಿ ವಿನೂತನವಾಗಿ ಪ್ರಸ್ತಾವಿಸಲಾಗಿದೆ. ಭಾರತವು ಮುಕ್ತಿಗೆ ಹೆಬ್ಬಾಗಿಲಿನ ಹಾಗಿದೆ ಎಂದು ಹೇಳಲು ದ್ವಾರಾವತಿಯನ್ನು ಹೆಸರಿಸಿರುವುದಂತೂ ಅತ್ಯಂತ ಸುಂದರ. ಇಲ್ಲಿ ಹೆಸರಿಸಲಾಗಿರುವ ಕ್ಷೇತ್ರಗಳು ‘ಸಪ್ತ ಮೋಕ್ಷದಾಯಕ ಪುರ’ಗಳೆಂದೇ ಪ್ರಸಿದ್ಧವಾಗಿರುವ ಹಿನ್ನೆಲೆಯಲ್ಲಿ ಇದು ಮತ್ತೂ ಉಚಿತವೆನಿಸುತ್ತದೆ.