ಇಂಥ ಕಲ್ಪನೆಯಿಂದ ಹುಟ್ಟಿದ ಸಾಹಿತ್ಯದ ಸ್ವರೂಪವನ್ನು ಹೀಗೆ ಬಣ್ಣಿಸುತ್ತಾನೆ:
ಅಸ್ತಿ ಸಾರಸ್ವತಂ ಚಕ್ಷುರಜ್ಞಾತಸ್ವಾಪಜಾಗರಮ್ |
ಗೋಚರೋ ಯಸ್ಯ ಸರ್ವೋऽಪಿ ಯಃ ಸ್ವಯಂ ಕರ್ಣಗೋಚರಃ || (೧.೯)
ಎಚ್ಚರ-ನಿದ್ರೆಗಳಿಲ್ಲದ ನೇತ್ರವೇ ಸಾಹಿತ್ಯ. ಇದರ ದೃಷ್ಟಿಗೆ ಎಲ್ಲವೂ ತೋರಿಕೊಳ್ಳುತ್ತದೆ; ಇದು ಮಾತ್ರ ಕಿವಿಗೆ ಎಟುಕುತ್ತದೆ.
ಇದು ನಿಜಕ್ಕೂ ಅತ್ಯದ್ಭುತವಾದ ಶ್ಲೋಕ. ಇಲ್ಲಿ ಕವಿಯು ಸಾಹಿತ್ಯದ ಪರಿಧಿಗೆಟುಕದ ಪದಾರ್ಥವೇ ಇಲ್ಲವೆಂದು ಹೇಳಿರುವುದಲ್ಲದೆ ಅದು ಜೀವಸಾಮಾನ್ಯದ ಅವಸ್ಥೆಗಳಾದ ಎಚ್ಚರ-ನಿದ್ರೆಗಳನ್ನೂ ಮೀರಿದೆಯೆಂದು ಗುರುತಿಸಿದ್ದಾನೆ. ನಿದ್ರೆಯಲ್ಲಿ ಕನಸೂ ಸೇರಿಕೊಳ್ಳುವುದೆಂದು ಹೇಳಬಹುದು. ಹೀಗಾಗಿ ಅವಸ್ಥಾತ್ರಯವನ್ನೂ ಮೀರಿದ ಅದೊಂದು ತುರೀಯಸ್ಥಿತಿ ಸಾಹಿತ್ಯದ್ದೆಂಬ ಧ್ವನಿಯಿಲ್ಲಿದೆ. ಇದು ಸಾಹಿತ್ಯದ ಜೀವಾಳವೆನಿಸಿದ ರಸದ ಬ್ರಹ್ಮಾಸ್ವಾದಸಹೋದರತ್ವವನ್ನೇ ನಿರ್ದೇಶಿಸಿದೆ. ಇಂಥ ಸಾಹಿತ್ಯನೇತ್ರವು ಪ್ರತಿಭೆಯೆಂದೂ ಮತ್ತಿದು ಪರಮಾತ್ಮನ ಮೂರನೆಯ ಕಣ್ಣೆಂದೂ ಮಹಿಮಭಟ್ಟನು ಹೇಳಿದ ಮಾತನ್ನು ಈಗಾಗಲೇ ಗಮನಿಸಿದ್ದೇವೆ. ಸಾಹಿತ್ಯವು ಇಷ್ಟು ಅಲೌಕಿಕವಾಗಿ ತೋರಿದರೂ ಅದು ಮೂಲತಃ ಕಿವಿಗೆಟುಕುವ ತಥ್ಯ. ಅಂದರೆ, ಇಲ್ಲಿಯೇ ಕೈವಲ್ಯವನ್ನು ಕ್ಷಣಮಾತ್ರವಾದರೂ ನಮಗೆ ಕಾಣಿಸಬಲ್ಲ ಶಕ್ತಿ ಅದಕ್ಕುಂಟು. ಇದನ್ನು ಅದೊಂದು ಬಗೆಯ ತಾತ್ಕಾಲಿಕ ಜೀವನ್ಮುಕ್ತಿಯೆಂದು ಕರೆಯಬಹುದು. ಇದೇ ಮಮ್ಮಟನು ಹೇಳುವ ಸದ್ಯಃಪರನಿರ್ವೃತಿ.
ಕವಿಯು ಸೌಂದರ್ಯಪಾರಮ್ಯವನ್ನು ನೇತಿಕ್ರಮದಿಂದ ಹೀಗೆ ಹೇಳುತ್ತಾನೆ:
ಸತ್ಯರ್ಥೇ ಸತ್ಸು ಶಬ್ದೇಷು ಸತಿ ಚಾಕ್ಷರಡಂಬರೇ |
ಶೋಭತೇ ಯಂ ವಿನಾ ನೋಕ್ತಿಃ ಸ ಪಂಥಾ ಇತಿ ಘುಷ್ಯತೇ || (೧.೧೦)
ಅರ್ಥವಿದ್ದರೂ ಶಬ್ದಗಳಿದ್ದರೂ ವರ್ಣಚತ್ಕಾರವಿದ್ದರೂ ಯಾವುದಿಲ್ಲದೆ ಮಾತಿಗೆ ಸೊಗಸು ಸಲ್ಲದೋ ಅದೇ ದಿಟವಾದ ಹಾದಿಯೆಂದು ನಾವು ಸಾರುತ್ತೇವೆ.
ನೀಲಕಂಠದೀಕ್ಷಿತನು ಅಮೂರ್ತವಾದ ಅರ್ಥವನ್ನು ಮೊದಲು ಹೆಸರಿಸಿ ಬಳಿಕ ಲೋಕದಲ್ಲಿ ಇಡಿಯಾಗಿ ಗ್ರಹಣೆಗೆ ಬರುವ ಶಬ್ದವನ್ನು ಉಲ್ಲೇಖಿಸುತ್ತಾನೆ. ಅನಂತರ ಶಬ್ದದ ಅಂತರ್ಘಟಕಗಳಾದ ಅಕ್ಷರಗಳತ್ತ ಹಾಗೂ ಅವುಗಳ ವೈಶಿಷ್ಟ್ಯದತ್ತ ಗಮನ ಹರಿಸುತ್ತಾನೆ. ಅಂದರೆ, ಲೋಕಸಾಮಾನ್ಯವಾದ ಶಬ್ದಾರ್ಥಗಳ ವಲಯದಿಂದ ಕವಿಲೋಕಕ್ಕೆ ಮುಖ್ಯವೆನಿಸುವ ಅಕ್ಷರಸಂಘಟನೆಯತ್ತ ನಮ್ಮನ್ನು ಕರೆದೊಯ್ಯುತ್ತಾನೆ. ಆ ಬಳಿಕ ಉಕ್ತಿಯನ್ನು ಕಟಾಕ್ಷಿಸುತ್ತಾನೆ. ಉಕ್ತಿಯೆಂಬುದು ಶಬ್ದಾರ್ಥಗಳ ಸಾಮರಸ್ಯ; ಮಾತ್ರವಲ್ಲ, ಶಬ್ದದ ಅಂತರ್ದ್ರವ್ಯವಾದ ಅಕ್ಷರರಮ್ಯತೆಯೂ ಇದರಲ್ಲಿ ಇರುತ್ತದೆ. ಆದರೆ ಸೌಂದರ್ಯವಿಲ್ಲದ ಉಕ್ತಿಗೆ ಚಿತ್ರತ್ವವಲ್ಲದೆ ಸತ್ಕಾವ್ಯತ್ವ ದಕ್ಕುವುದಿಲ್ಲ. ಕವಿ ಇದನ್ನು ಬಲ್ಲವನಾದ ಕಾರಣದಿಂದಲೇ ಅನಿರ್ವಚನೀಯವಾದ ಸೌಂದರ್ಯವನ್ನು ಬಾಯಿಬಿಟ್ಟು ಹೆಸರಿಸದೆ ಅನುಕ್ತಿಯಿಂದಲೇ ಅದನ್ನು ಧ್ವನಿಸಿದ್ದಾನೆ. ಆನಂದವರ್ಧನನು ಹೇಳುವ ಲಾವ್ಯಣ್ಯವು ಇದೇ.[1] ಸೌಂದರ್ಯದ ಹಾದಿ ವ್ಯಂಜನಾವ್ಯಾಪಾರ, ಇದರ ಗಮ್ಯ ರಸ.
ಕವಿಗೆ ಅನಿವಾರ್ಯವಾದ ಭಾವಯಿತ್ರೀ ಪ್ರತಿಭೆಯನ್ನು ಕುರಿತು ಹೀಗೆನ್ನುತ್ತಾನೆ:
ಶೃಣ್ವಂತೋऽಪಿ ನ ಶೃಣ್ವಂತಿ ಜಾನಂತೋऽಪಿ ನ ಜಾನತೇ |
ಸಾಹಿತೀಮಿತರೇ ತಸ್ಯಾ ಜ್ಞಾತಾ ಶ್ರೋತಾ ಚ ಯಃ ಕವಿಃ || (೧.೧೧)
ಮಿಕ್ಕವರು ಸಾಹಿತ್ಯವನ್ನು ಆಲಿಸಿದರೂ ಆಲಿಸಿರುವುದಿಲ್ಲ; ತಿಳಿದರೂ ತಿಳಿದಿರುವುದಿಲ್ಲ. ಯಾರು ಅದನ್ನು ನಿಜವಾಗಿ ಆಲಿಸಬಲ್ಲನೋ ತಿಳಿಯಬಲ್ಲನೋ ಅವನೇ ಕವಿ.
ಲೋಕದ ಸಂವೇದನೆ ಬಲುಮಟ್ಟಿಗೆ ಸ್ಥೂಲವಾದುದು. ಆದರೆ ಕವಿಯದು ಹಾಗಲ್ಲ. ಈ ಸಂವೇದನಸೂಕ್ಷ್ಮತೆಯನ್ನು ಲೋಕಾನುಭವ ಮತ್ತು ಕಲಾನುಭವಗಳೆರಡರಲ್ಲಿಯೂ ಚೆನ್ನಾಗಿ ದುಡಿಸಿಕೊಳ್ಳಬಲ್ಲವನು ಶ್ರೇಷ್ಠಕವಿ. ಸದ್ಯದ ಪದ್ಯವು ಕೇವಲ ಕಲಾನುಭವವನ್ನು ಕುರಿತಿದ್ದರೂ ಅದು ಲೋಕಕ್ಕೂ ವಿಸ್ತರಿಸಿಕೊಳ್ಳಬೇಕು. ಏಕೆಂದರೆ ಕಲಾನುಭೂತಿಯು ರಸಾಸ್ವಾದವನ್ನೂ ಲೋಕಾನುಭೂತಿಯು ಭಾವಪರಿಜ್ಞಾನವನ್ನೂ ಉಂಟುಮಾಡುತ್ತವೆ. ಕಾವ್ಯದ ನಿರ್ಮಾಣಕ್ಕೆ ಬೇಕಿರುವ ಉಪಾದಾನಸಾಮಗ್ರಿ ಲೋಕದಿಂದಲೇ ಸಿಕ್ಕಬೇಕಿರುವ ಕಾರಣ ಅದರ ಅನುಭವ ಅನಿವಾರ್ಯ. ಅಂತೆಯೇ ಕವಿಕರ್ಮದ ಕೌಶಲವನ್ನರಿಯಲು ಕಲಾನುಭವ ಮಿಗಿಲಾಗಿ ಮುಖ್ಯ. ಜೊತೆಗೆ ಮತ್ತೊಬ್ಬ ಕವಿಯ ಕಲೆಯನ್ನು ಅಮತ್ಸರದಿಂದ ಆಸ್ವಾದಿಸಬಲ್ಲವನೇ ಲೋಕದ ಭಾವಗಳನ್ನು ನಿರಾಗ್ರಹವಾಗಿ ಗ್ರಹಿಸುವ ಅಂತಃಪರಿಪಾಕವನ್ನು ಗಳಿಸುತ್ತಾನೆ.
ಉತ್ತಮಕವಿತೆಯ ಒಂದು ವೈಲಕ್ಷಣ್ಯ ಹೀಗಿದೆ:
ಭಾರತೀಷು ಕವೀಂದ್ರಾಣಾಂ ಯಾವತೀ ಸುಕುಮಾರತಾ |
ತಾವತೀ ಕಾವ್ಯಮರ್ಮಜ್ಞಸಮ್ಮರ್ದೈಕಸಹಿಷ್ಣುತಾ || (೧.೧೩)
ಮಹಾಕವಿಗಳ ಮಾತಿನಲ್ಲಿ ಅದೆಷ್ಟರ ಮಟ್ಟಿಗೆ ಸೌಕುಮಾರ್ಯವಿರುವುದೋ ಅಷ್ಟರ ಮಟ್ಟಿಗೆ ಕಾವ್ಯವಿಮರ್ಶಕರ ಕರ್ಕಶಪರೀಕ್ಷೆಯನ್ನು ತಾಳಿಕೊಳ್ಳುವ ಗಟ್ಟಿತನವೂ ಇರುತ್ತದೆ.
ಡಿ.ವಿ.ಜಿ. ಅವರು ಹೇಳುವಂತೆ ಒಳ್ಳೆಯ ಸಾಹಿತ್ಯ ಕೇವಲ ಬೆಣ್ಣೆ-ಸಕ್ಕರೆಯಂತಲ್ಲ; ಅದು ಜೀವಸ್ವಾಸ್ಥ್ಯಕಾರಿಯಾದ ಶುಂಠಿ-ಮೆಣಸುಗಳ ಕಷಾಯದಂತೆಯೂ ಹೌದು. ಮೇಲ್ನೋಟಕ್ಕೆ ಸುಕುಮಾರಸುಂದರ ಶೈಲಿಯಲ್ಲಿದ್ದರೂ ಅದು ಆಳದಲ್ಲಿ ಅರ್ಥಪೂರ್ಣವಾಗಿ ದೃಢಕಠಿನ. ಈ ಅರ್ಥದಲ್ಲಿ ಕವಿಕೃತಿಗಳನ್ನು ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎನ್ನಬೇಕು. ಮುಖ್ಯವಾಗಿ ಪ್ರಾಮಾಣಿಕವಾದ ಯಾವುದೇ ಪರಂಪರೆಯ ವಿಮರ್ಶಕನ ಒರೆಗಲ್ಲಿಗೂ ಜಗ್ಗದೆ ನಿಲ್ಲಬೇಕು. ಸೋದಾಹರಣವಾಗಿ ಹೇಳುವುದಾದರೆ, ಕಾಳಿದಾಸನನ್ನು ವಿಮರ್ಶಿಸಿದ ವಿವಿಧ ಕಾವ್ಯತತ್ತ್ವಜ್ಞರು ತಮ್ಮವೇ ಅಳತೆಗೋಲುಗಳಿಂದ ಅವನನ್ನು ಅಳೆದು ಮೆಚ್ಚಿಕೊಂಡರು: ಅಲಂಕಾರವಾದಿಗಳು ಉಪಮೆಯೇ ಅಲಂಕಾರದ ಜೀವಾಳವೆಂದು ಗುರುತಿಸಿಕೊಂಡು ಉಪಮಾ ಕಾಲಿದಾಸಸ್ಯ ಎಂದು ಕೈಮುಗಿದರು. ಗುಣ-ರೀತಿವಾದಿಗಳು ವೈದರ್ಭೀ ರೀತಿಯೇ ಸರ್ವೋತ್ಕೃಷ್ಟವೆಂದು ಮನವರಿಕೆ ಮಾಡಿಕೊಂಡು ವೈದರ್ಭಗಿರಾಂ ವಾಸಃ ಕಾಲಿದಾಸಃ ಎಂದರು. ರಸಪಾರಮ್ಯವಾದಿಗಳು ಕಾಳಿದಾಸನನ್ನು ರಸೇಶ್ವರಃ ಎಂದರು. ಧ್ವನಿವಾದಿಗಳು ಅಸ್ಮಿನ್ ಅತಿವಿಚಿತ್ರಕವಿಪರಂಪರಾವಾಹಿನಿ ಸಂಸಾರೇ ಕಾಲಿದಾಸಪ್ರಭೃತಯೋ ದ್ವಿತ್ರಾಃ ಪಂಚಷಾ ವಾ ಮಹಾಕವಯ ಇತಿ ಗಣ್ಯಂತೇ (ಅತಿವಿಚಿತ್ರವಾದ ಕವಿಪರಂಪರೆಯುಳ್ಳ ಈ ಜಗತ್ತಿನಲ್ಲಿ ಕಾಳಿದಾಸನಂಥ ಇಬ್ಬರು-ಮೂವರು ಮಾತ್ರ ಮಹಾಕವಿಗಳೆಂದು ಗಣಿಸಲ್ಪಟ್ಟಿದ್ದಾರೆ) ಎಂದು ಗೌರವಿಸಿದರು. ವಕ್ರೋಕ್ತಿವಾದಿಗಳು ಸುಕುಮಾರಮಾರ್ಗದ ಪರಮಾಚಾರ್ಯ ಕಾಳಿದಾಸನೆಂದಿದ್ದಾರೆ: ಸತ್ಕವಯಃ ಕಾಲಿದಾಸಪ್ರಭೃತಯಃ. ಇದೇ ರೀತಿ ಪಾಶ್ಚಾತ್ತ್ಯರ ಪ್ರಭಾವದಿಂದ ಬೆಳೆದ ಆಧುನಿಕವಿಮರ್ಶೆಯೂ ಕಾಳಿದಾಸನನ್ನು ಗೌರವಿಸಿರುವುದು ಸುವೇದ್ಯ. ಒಟ್ಟಿನಲ್ಲಿ ಕಾಳಿದಾಸನು ಎಲ್ಲ ಬಗೆಯ ವಿಮರ್ಶನಮಾನದಂಡಗಳಲ್ಲಿಯೂ ತೇರ್ಗಡೆಯಾಗಿದ್ದಾನೆ. ಇದು ಅವನ ಮೃದುವಾದರೂ ದೃಢವಾದ ಕಾವ್ಯಕೌಶಲಕ್ಕೆ ಸಾಕ್ಷಿ. ನೀಲಕಂಠದೀಕ್ಷಿತನ ಪ್ರಸ್ತುತೋಕ್ತಿಯನ್ನು ಹೀಗೆ ಅರ್ಥೈಸಿಕೊಳ್ಳಬೇಕು.
ಕಾವ್ಯಮಾರ್ಗದ ಸ್ವೋಪಜ್ಞತೆಯನ್ನು ಕುರಿತು ಹೀಗೆ ಹೇಳುತ್ತಾನೆ:
ಅಂಧಾಸ್ತೇ ಕವಯೋ ಯೇಷಾಂ ಪಂಥಾಃ ಕ್ಷುಣ್ಣಃ ಪರೈರ್ಭವೇತ್ |
ಪರೇಷಾಂ ತು ಯದಾಕ್ರಾಂತಃ ಪಂಥಾಸ್ತೇ ಕವಿಕುಂಜರಾಃ || (೧.೧೭)
ಯಾವ ಕವಿಗಳು ಮತ್ತೆಷ್ಟೋ ಮಂದಿ ಈಗಾಗಲೇ ನಡೆದು ಸವೆದ ಹಾದಿಯಲ್ಲಿ ಸಾಗುವರೋ ಅವರೆಲ್ಲ ಕುರುಡರು. ಯಾರ ಹಾದಿಯನ್ನು ಉಳಿದವರು ಅನುಸರಿಸುವರೋ ಅಂಥವರೇ ಕವಿದಿಗ್ಗಜರು.
“ಆನೆ ನಡೆದದ್ದೇ ಹಾದಿ” ಎಂಬ ನಾಣ್ನುಡಿಯಂತೆ ಮಹಾಕವಿಗಳು ತಮ್ಮದಾದ ಹಾದಿಯಲ್ಲಿ ಸಾಗಿ ಮಿಕ್ಕವರನ್ನೂ ಅದರ ಮೂಲಕ ಸಾಗುವಂತೆ ಮಾಡುತ್ತಾರೆ. ಇದೇ ಸ್ವೋಪಜ್ಞತೆಯ ರಹಸ್ಯ. ಇದನ್ನು ಆನಂದವರ್ಧನನು ಧ್ವನ್ಯಾಲೋಕದ ಕಟ್ಟಕಡೆಯಲ್ಲಿ ಹೃದಯಂಗಮವಾಗಿ ತಿಳಿಸಿರುವುದಲ್ಲದೆ ಇಂಥ ಸ್ವೋಪಜ್ಞಕವಿಗಳಿಗೆ ಸರಸ್ವತಿಯೇ ನೆರವೀಯುವಳೆಂಬ ಆಶ್ವಾಸನೆಯನ್ನೂ ನೀಡಿದ್ದಾನೆ.[2] ದುರ್ದೈವವೆಂದರೆ ಬಹಳಷ್ಟು ಮಂದಿ ಕವಿಗಳು ಇಂಥ ಸ್ವಂತಿಕೆಯನ್ನು ಹೆಚ್ಚಾಗಿ ದುಡಿಸಿಕೊಂಡಿಲ್ಲ.
ಸದಾ ಸಹೃದಯರ ಕರುಣೆಯಿಂದಲೇ ಬದುಕಬೇಕಾದ ಕವಿಯ ಜೀವನವನ್ನು ಹೀಗೆ ಬಣ್ಣಿಸುತ್ತಾನೆ:
ಆ ಜನ್ಮನಃ ಪ್ರಬಂಧೄಣಾಂ ಪದ್ಯಬಂಧೇಷು ಯಃ ಶ್ರಮಃ |
ಸೋऽಪಿ ಸಾಮಾಜಿಕಾಯತ್ತಃ ಕಷ್ಟಂ ಧಿಕ್ಕವಿಜೀವಿತಮ್ || (೧.೧೯)
ಹುಟ್ಟಿದಂದಿನಿಂದ ಪದ್ಯಗಳನ್ನು ಹೆಣೆಯುವಲ್ಲಿ ಲೇಖಕರು ಹೆಣಗುತ್ತಾರೆ. ಇಷ್ಟು ಒದ್ದಾಡಿದ ಬಳಿಕವೂ ಅವರ ಪರಿಶ್ರಮ ಓದುಗರ ಮರ್ಜಿಯನ್ನು ಅವಲಂಬಿಸಿರುತ್ತದೆ. ಅಯ್ಯೋ, ಇಂಥ ಕಷ್ಟದ ಕವಿಜೀವನಕ್ಕೆ ಧಿಕ್ಕಾರ!
ನಮ್ಮ ಆಲಂಕಾರಿಕರು ಕಾವ್ಯರಚನೆ ಮತ್ತು ವಿಮರ್ಶನಗಳನ್ನು ಕುರಿತು ವಿಸ್ತರಿಸಿ ವಿವೇಚಿಸಿದಂತೆ ಕಾವ್ಯಪ್ರಸಾರ ಮತ್ತು ಕವಿಸಮ್ಮಾನಗಳನ್ನು ಕುರಿತು ಹೇಳಿಲ್ಲ. ಇದು ಅವರ ಉದ್ದೇಶವೂ ಆಗಿರಲಿಲ್ಲ. ಆದರೆ ನಿರಪವಾದವೆಂಬಂತೆ ಎಲ್ಲ ಕವಿಗಳಿಗೂ ತಮ್ಮ ಸಾಹಿತ್ಯಕ್ಕೆ ಹೆಚ್ಚಿನ ಜನಾದರಣೆ ಲಭಿಸಬೇಕೆಂಬ ಹಂಬಲವಿರುತ್ತದೆ. ಲೋಕದ ಎಷ್ಟೋ ವಸ್ತುಗಳಿಗೆ ಇರುವ ಬೇಡಿಕೆ ಮತ್ತು ಅನಿವಾರ್ಯತೆ ಕಾವ್ಯಕ್ಕಿರುವುದಿಲ್ಲ. ಇದಕ್ಕೆ ಕಾರಣ ಸಾಹಿತ್ಯವೊಂದು ಜೀವನಾವಶ್ಯಕವಾದ ದ್ರವ್ಯವೆಂದು ಜನತೆ ಭಾವಿಸದಿರುವುದು. ಈ ಬರ್ಬರವಾಸ್ತವ ಅದೆಷ್ಟೋ ಮಂದಿ ಕವಿಗಳ ಅರಿವಿಗೇ ಬಂದಿರುವುದಿಲ್ಲ. ಹೀಗಾಗಿ ಹತಾಶೆ ತಪ್ಪದು. ಕೆಲವು ಮಂದಿ ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಂಡು ಕಾವ್ಯದ ಮೂಲಕ ಹಣ-ಹೆಸರುಗಳನ್ನು ಗಳಿಸುತ್ತಾರೆ.[3] ಆದರೆ ಮಿಕ್ಕೆಷ್ಟೋ ಮಂದಿಗೆ ಅಂತಃಸಾಕ್ಷಿಯನ್ನು ಕೊಂದುಕೊಳ್ಳಲೂ ಆಗುವುದಿಲ್ಲ, ಅಂತಸ್ತೃಪ್ತಿಯನ್ನು ಕಂಡುಕೊಳ್ಳುವುದೂ ಆಗುವುದಿಲ್ಲ. ಇಂಥ ದುರಂತಕ್ಕೆ ಮುಖ್ಯಕಾರಣ ಕವಿಗಳು ತಮ್ಮನ್ನು ಮಿಕ್ಕ ಜನತೆಗಿಂತ ಅತ್ಯಂತ ವಿಭಿನ್ನರೆಂದೂ ವಿಶಿಷ್ಟರೆಂದೂ ಭಾವಿಸಿಕೊಂಡಿರುವುದೇ ಆಗಿದೆ. ಈ ಬಗೆಯ ಮೇಲರಿಮೆ ಎಲ್ಲ ಮನುಜರಿಗೂ ಅಂಟಿಬಂದ ಗೀಳೇ ಆದರೂ ಮಾತಿನ ಚಾತುರ್ಯವುಳ್ಳ ಕವಿಗಳು ತಮ್ಮ ಸುಮ್ಮಾನ-ದುಮ್ಮಾನಗಳನ್ನು ಬಗೆಬಗೆಯಾಗಿ ಬಣ್ಣಿಸಿಕೊಳ್ಳುತ್ತಾರೆ. ಇದು ಪರಿಣಾಮದಲ್ಲಿ ಹಾಸ್ಯಾಸ್ಪದವಲ್ಲದೆ ವಿಧಿಯಿಲ್ಲ.[4]
[1] ಪ್ರತೀಯಮಾನಂ ಪುನರನ್ಯದೇವ ವಸ್ತ್ವಸ್ತಿ ವಾಣೀಷು ಮಹಾಕವೀನಾಮ್ |
ಯತ್ತತ್ ಪ್ರಸಿದ್ಧಾವಯವಾತಿರಿಕ್ತಂ ವಿಭಾತಿ ಲಾವಣ್ಯಮಿವಾಂಗನಾಸು || (ಧ್ವನ್ಯಾಲೋಕ. ೧.೪)
[2] ಪರಸ್ವಾದಾನೇಚ್ಛಾವಿರತಮನಸೋ ವಸ್ತು ಸುಕವೇಃ ಸರಸ್ವತ್ಯೈವೇಷಾ ಘಟಯತಿ ಯಥೇಷ್ಟಂ ಭಗವತೀ || (ಧ್ವನ್ಯಾಲೋಕ, ೪.೧೭)
[3] ಈ ಭಾವವನ್ನು ನೀಲಕಂಠದೀಕ್ಷಿತನ “ಕಲಿವಿಡಂಬನ”ದಲ್ಲಿ ಕಾಣಬಹುದು: ವರ್ಣಯಂತಿ ನರಾಭಾಸಾನ್ ವಾಣೀಂ ಲಬ್ಧ್ವಾಪಿ ಯೇ ಜನಾಃ | ಲಬ್ಧ್ವಾಪಿ ಕಾಮಧೇನುಂ ತೇ ಲಾಂಗಲೇ ವಿನಿಯುಂಜತೇ || (೩೮). ಇದನ್ನು ಮತ್ತೂ ಮಾರ್ಮಿಕವಾಗಿ ಒಕ್ಕಣಿಸುತ್ತಾನೆ: ಕಾತರ್ಯಂ ದುರ್ವಿನೀತತ್ವಂ ಕಾರ್ಪಣ್ಯಮವಿವೇಕಿತಾಮ್ | ಸರ್ವಂ ಮಾರ್ಜಂತಿ ಕವಯಃ ಶಾಲೀನಾಂ ಮುಷ್ಟಿಕಿಂಕರಾಃ || (೩೩).
[4] ಇದಕ್ಕೆ ನೇರ ಸಂವಾದಿಯನ್ನು “ಕಲಿವಿಡಂಬನ”ದಲ್ಲಿ ಕಾಣಬಹುದು: ನ ಕಾರಣಮಪೇಕ್ಷಂತೇ ಕವಯಃ ಸ್ತೋತುಮುದ್ಯತಾಃ | ಕಿಂಚಿದಸ್ತುವತಾಂ ತೇಷಂ ಜಿಹ್ವಾ ಫುರಫುರಾಯತೇ || (೩೪)
To be continued.