ಶತಾವಧಾನಿ ಡಾ|| ಆರ್. ಗಣೇಶರು ರಚಿಸಿರುವ ಹತ್ತು ಸಣ್ಣಕತೆಗಳ ಸಂಕಲನ ‘ಪುಟಗಳ ನಡುವಣ ನವಿಲುಗರಿ’. ಇದರ ಬಣ್ಣಗಳ ಬೆಡಗನ್ನು ಇಲ್ಲಿಯದೇ ನೂರಾರು ಕಣ್ಣುಗಳ ಮೂಲಕ ಓದುಗರಿಗೆ ಕಾಣಿಸಿಕೊಡುವ ಯತ್ನ ಸದ್ಯದ ಲೇಖನದ್ದು. ಸಾಮಾನ್ಯವಾಗಿ ಪುಸ್ತಕ ಓದುವಾಗ ಪುಟಗಳ ಗುರುತಿಗಾಗಿ ಚೀಟಿಯೊಂದನ್ನು ಬಳಸುತ್ತೇವಷ್ಟೆ. ಹಿಂದಿನ ಕಾಲದಲ್ಲಿ (ಈಗಲೂ ಈ ಪರಿಪಾಟಿ ಇದ್ದಲ್ಲಿ ಸಂತೋಷ!) ಇದಕ್ಕಾಗಿ ನವಿಲುಗರಿಯನ್ನು ಉಪಯೋಗಿಸುತ್ತಿದ್ದರು. ಹೀಗೆ ಪುಟಗಳ ನಡುವೆ ಇರಿಸಿದ ನವಿಲುಗರಿ ಮರಿ ಹಾಕುವುದೆಂದು ಮಕ್ಕಳ ಮುಗ್ಧ ವಿಶ್ವಾಸ. ಮಕ್ಕಳದ್ದಷ್ಟೇ ಅಲ್ಲ, ಮುಗ್ಧತೆಯನ್ನು ಕಳೆದುಕೊಂಡಿರದ ಹದಿಹರೆಯದ ಹುಡುಗ-ಹುಡುಗಿಯರಿಂದ ಜೀವನಸಂಧ್ಯೆಯಲ್ಲಿರುವ ವೃದ್ಧರವರೆಗೆ ಎಲ್ಲರ ನಂಬುಗೆಯೂ ಇದೇ. ಈ ಬಗೆಯ ವಿಶ್ವಾಸವೇ ಜೀವನದ ಶ್ವಾಸ. ಹೀಗೆ ಗುರುತಿಗಾಗಿ ಮೀಸಲಾದ ಒಂದು ವಸ್ತು ಸೊಬಗಿನ ಸೆಲೆಯಾಗಿ, ಧ್ವನಿಪರಂಪರೆಯ ನೆಲೆಯಾಗಿ ರೂಪಾಂತರಗಳನ್ನು ತಳೆಯುತ್ತದೆ; ಲೌಕಿಕ ಪ್ರಯೋಜನದ ಸೀಮಿತ ಸ್ತರದಿಂದ ಮೇಲೆ ಹಾರಿ ಅಲೌಕಿಕ ಆಸ್ವಾದದ ಅನಂತತೆಯನ್ನು ಅಪ್ಪುತ್ತದೆ. ಮರಿ ಹಾಕುವ ನವಿಲುಗರಿ ಅದನ್ನಿರಿಸಿದ ಕೃತಿಯ ಧ್ವನಿಸಾಧ್ಯತೆಗಳ ಸುಂದರ ಸಂಕೇತ. ಅದು ಪುಟದ ಗುರುತನ್ನು ಮೀಟುಗೋಲಾಗಿ ಬಳಸಿಕೊಂಡು, ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವ ಗರಿಗೆದರಿದ ನವಿಲನ್ನೂ ನೆನಪಿಸುತ್ತದೆ; ಸಮ್ಮೋಹಕವೂ ಜೀವನತಾರಕವೂ ಆದ ‘ಕೃಷ್ಣನ ಕೊಳಲಿನ ಕರೆ’ಯನ್ನೂ ನೆನಪಿಸುತ್ತದೆ. ಇನ್ನು ನವಿಲುಗರಿಗೆ ‘ಕಣ್ಣು’ ಇರುತ್ತದೆ ಎಂಬ ಕಲ್ಪನೆಯೂ ರೋಚಕವಾಗಿದೆ. ನವಿಲುಗರಿಯನ್ನು ಮುಚ್ಚಿಟ್ಟ ಪುಸ್ತಕದ ಪುಟಗಳ ನಡುವೆ ಕತ್ತಲೆಯಲ್ಲಿ ಇರಿಸಿದ್ದಾಗಲೂ ಅದರ ‘ಕಣ್ಣು’ ಅಲ್ಲಿಯ ಎಲ್ಲ ರಸ-ಧ್ವನಿಗಳನ್ನೂ ಕಾಣುತ್ತಿರುತ್ತದೆ! ಈ ಹಿನ್ನೆಲೆಯಲ್ಲಿ ಪ್ರಕೃತ ಕಥಾಸಂಕಲನದ ಹೆಸರು ಸಮುಚಿತ ಎನಿಸದಿರದು. ನಾಲ್ಕು-ನಾಲ್ಕು ಮಾತ್ರೆಗಳಂತೆ ‘ಲಘು’ಲೀಲೆಯಿಂದ ಸಾಗುವ ಹೆಸರು ತನ್ನ ಗತಿಯಿಂದಲೇ ನವಿಲಿನ ಲಾಸ್ಯವನ್ನು ಸಾರುತ್ತಿದೆ.
ಸಣ್ಣಕತೆ ಎಂಬ ಸಾಹಿತ್ಯಪ್ರಕಾರಕ್ಕೆ ಕನ್ನಡದಲ್ಲಿ ಸಾಕಷ್ಟು ನಿಡಿದಾದ ಇತಿಹಾಸವಿದೆ. ಈ ಬಗೆಗೆ ಬಂದ ಒಳ್ಳೆಯ ಬರೆಹಗಳನ್ನು ಶ್ರೀಯುತ ಎಸ್. ದಿವಾಕರ್ ಅವರು ಈಚೆಗೆ ಗ್ರಂಥರೂಪದಲ್ಲಿ ಸಂಗ್ರಹಿಸಿದ್ದಾರೆ.[1] ಹೀಗಾಗಿ ಸಣ್ಣಕತೆ ಎಂಬ ಮಾಧ್ಯಮವನ್ನು ಕುರಿತು ಇಲ್ಲಿ ಹೊಸತಾಗಿ ಹೇಳಲು ಏನೂ ಇಲ್ಲ. ಏನಿದ್ದರೂ ಅಭಿಜಾತ ಭಾರತೀಯ ಇತಿವೃತ್ತಗಳ ನಿರೂಪಣೆಗೆ ಇದು ಹೇಗೆ ಅಳವಡುತ್ತದೆ ಎಂದು ಸ್ವಲ್ಪ ಚರ್ಚಿಸಬಹುದು. ಈ ನಿಟ್ಟಿನಲ್ಲಿ ಗಮನಿಸಿದಾಗ ಸಣ್ಣಕತೆಯ ಒಡಲಿನಲ್ಲಿ ಕಾವ್ಯ-ನಾಟಕಗಳ ಗುಣಗಳು ಭಾವಗೀತದ ಹದದಲ್ಲಿ ಎರಕಗೊಂಡಿರುವುದು ತಿಳಿಯುತ್ತದೆ. ಕಲ್ಪಕತೆ, ಪಾತ್ರಗಳ ಪುಷ್ಟಿ, ಇತಿವೃತ್ತದ ಬಿಗಿ-ಓಟ, ವರ್ಣನೆಗಳ ಸೊಬಗು, ಸಂಭಾಷಣೆಗಳ ಸೊಗಸು, ಭಾವನಿರ್ಭರತೆ - ಎಲ್ಲಕ್ಕೂ ಇಲ್ಲಿ ಸ್ಥಾನವಿದೆ. ಇವನ್ನು ಚೆನ್ನಾಗಿ ದುಡಿಸಿಕೊಳ್ಳುವ ಬಲ್ಮೆ ಕವಿಗಿರಬೇಕು. ಇದಕ್ಕೆ ಬೇಕಾದದ್ದು ಪ್ರತಿಭೆ. ಕವಿಪ್ರತಿಭೆಯನ್ನು ಕುರಿತು ತೀ.ನಂ.ಶ್ರೀ. ಒಂದೆಡೆ ಒಳನೋಟದ ಮಾತುಗಳನ್ನಾಡಿದ್ದಾರೆ:
“ಕವಿಯ ಪ್ರತಿಭೆ ಒಂದು ಸಾದಾ ಕನ್ನಡಿಯಲ್ಲ. ಅದೊಂದು ಸೂಕ್ಷ್ಮದರ್ಶಿನಿ: ಜೀವನದಲ್ಲಿ ಅಣುರೂಪದಲ್ಲಿ ಅಡಗಿರುವ ಅಂಶಗಳನ್ನು ಬೃಹದಾಕಾರವಾಗಿ ಪ್ರಕಾಶಪಡಿಸುತ್ತದೆ. ಅದೊಂದು ದೂರದರ್ಶಿನಿ: ಕಾಲಾಂತರದ, ದೇಶಾಂತರದ, ಲೋಕಾಂತರದ ಸಂಗತಿಗಳನ್ನು ಹತ್ತಿರಕ್ಕೆ ತಂದು ಕಣ್ಣಿಗೆ ಕಟ್ಟಿ ನಿಲ್ಲಿಸುತ್ತದೆ. ಅದೊಂದು ವರ್ಣವಿಶ್ಲೇಷಿಣಿ: ಲೋಕದಲ್ಲಿ ಸಾಮಾನ್ಯವೆಂದೋ ರಸವೆಂದೋ ತೋರುವ ವಿಷಯಗಳನ್ನು ಬಿಡಿಸಿ ತೋರಿಸಿ ಬಣ್ಣಬಣ್ಣದ ಸೊಗಸನ್ನು ಅಲ್ಲಿ ಕಾಣಿಸುತ್ತದೆ. ಇಷ್ಟೇ ಅಲ್ಲ; ಅದೊಂದು ದೀಪಶಿಖೆ: ತಾನು ಕಂಡ ಸಂಗತಿಗಳ ಮೇಲೆ, ನೆಲದಲ್ಲಿ ಜಲದಲ್ಲಿ ಮುಗಿಲಲ್ಲಿ ಎಲ್ಲಿಯೂ ಗೋಚರಿಸದ ನವೀನ ಕಾಂತಿಯನ್ನು ಬೀರುತ್ತದೆ.”[2]
ಗಣೇಶರ ಪ್ರತಿಭೆಗೆ ಈ ಎಲ್ಲ ಗುಣಗಳೂ ಸರಿಮಿಗಿಲಾಗಿ ಸಂದಿವೆ ಎಂಬುದು ಇಲ್ಲಿಯ ಕಥೆಗಳ ಓದಿನಿಂದ ನಿಚ್ಚಳವಾಗುತ್ತದೆ.
* * *
ಸಕಲ ಕಲೆಗಳಂತೆ ಇಲ್ಲಿಯ ಕಥೆಗಳ ಉದ್ದೇಶ-ಪರಿಣಾಮಗಳು ರಸವೇ. ಇದರ ಜೊತೆಗೂಡಿದ ಮತ್ತೊಂದು ಉದ್ದೇಶ ಅಭಿಜಾತ ಭಾರತೀಯ ಸಾಹಿತ್ಯದ ಬಗೆಗೆ ಓದುಗರಲ್ಲಿ ಒಲವನ್ನು ಮೂಡಿಸುವುದು. ಗಣೇಶರು ಸಿದ್ಧಿ-ಪ್ರಸಿದ್ಧಿಗಳನ್ನು ಗಳಿಸಿರುವ ಅವಧಾನದ ಪ್ರಮುಖ ಪ್ರಯೋಜನವೂ ಇದೇ. ಈ ಕಥೆಗಳ ಮೂಲಕ ಪ್ರಾಚೀನ ಕವಿಗಳನ್ನು ಕುರಿತು, ಅವರ ರಚನೆಗಳಾದ ರಸಮಯ ಕಾವ್ಯ-ನಾಟಕಗಳನ್ನು ಕುರಿತು ಜನರಿಗೆ ಆಸಕ್ತಿ ಹೆಚ್ಚಾಗಲಿ ಎಂಬುದು ಲೇಖಕರ ಇರಾದೆ. ಹೀಗೆ ಸ್ಪಷ್ಟವಾದ ಒಂದು ಸಂಕಲ್ಪದ ಸಾಧನೆಗೆ ತೊಡಗಿದ ರಚನೆ ಕೃತಕೃತ್ಯವಾಗಿರುವುದು ಓದುಗರ ಅನುಭವ. ಸ್ವಭಾವತಃ ಪ್ರತಿಭಾವಂತರೂ ಕಲ್ಪನಶೀಲರೂ ಆದ ಗಣೇಶರಿಗೆ ಹೊಸತಾದ ಕಥೆಗಳನ್ನು ಸೃಜಿಸುವುದು ಕಷ್ಟವೇನಲ್ಲ. ಆದರೆ ಮೇಲೆ ಕಾಣಿಸಿದ ಉದ್ದೇಶವನ್ನು ಸಾಧಿಸಲು ಅವರು ಹಳೆಯ ಪುಸ್ತಕಗಳ ಹಾಳೆಗಳನ್ನು ತಿರುವಿಹಾಕಿ ತಡಕಾಡಿದ್ದಾರೆ; ಈ ಪ್ರಕ್ರಿಯೆಯಲ್ಲಿ ಸ್ವ-ಇಚ್ಛೆಯಿಂದಲೇ ತಮ್ಮ ಕೈಗಳನ್ನು ಕಟ್ಟಿಕೊಂಡಿದ್ದಾರೆ. ಪ್ರಾಚೀನ ಕವಿಕೃತಿಗಳ ರಚನೆಗಳನ್ನು ಆಧರಿಸಿ ಹೊಸತಾಗಿ ಸಾಹಿತ್ಯವನ್ನು ಸೃಜಿಸುವುದು ಕಷ್ಟದ ಕೆಲಸ. ಮೂಲದಿಂದ ದೂರ ಸರಿದರೆ ಜನರ ಮೂದಲಿಕೆಗೆ ಪಾತ್ರರಾಗಬೇಕಾಗುತ್ತದೆ. ಹಾಗೆ ಮಾಡುವುದು ಸರಿಯೂ ಆಗದು.[3] ತಾವು ಪ್ರೇರಣೆಯನ್ನು ಪಡೆದ ಕೃತಿಯ ಆಶಯಕ್ಕೆ ಧಕ್ಕೆ ಉಂಟುಮಾಡುವುದು ಆತ್ಮಾಪಚಾರವಾಗಿಯೇ ಪರಿಣಮಿಸುವುದಷ್ಟೆ. ಹೀಗಾಗಿ ಮೂಲಕ್ಕೆ ನಿಷ್ಠವಾಗಿರುತ್ತಲೇ ಕಿರಿದಾದರೂ ಹೊಸತಾದ ಹಾದಿಯನ್ನು ಕಂಡುಕೊಳ್ಳಬೇಕು. ಇಂತೆಸಗಲು ಆಯಾ ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಲ್ಲಿ ಹೇಳದೆ ಬಿಟ್ಟ - ಹೊಸತಾಗಿ ಆವಿಷ್ಕರಿಸಲು ಸಾಧ್ಯವಾದ - ಎಡೆಗಳನ್ನು ಕಂಡುಕೊಳ್ಳಬೇಕು. ಒಟ್ಟಿನಲ್ಲಿ ಹೀಗೆ ರೂಪುಗೊಂಡ ರಚನೆ ಹೆಚ್ಚಿನ ಲೇಖಕರಿಗೆ ಅರಕೆ-ಅತೃಪ್ತಿಗಳನ್ನು ತರುವ ಸಂಭವವೇ ಹೆಚ್ಚು. ಆದರೂ ಇದನ್ನು ಗಣೇಶರು ಕೈಗೊಂಡಿರುವುದಕ್ಕೆ ಕಾರಣ ಅವರಲ್ಲಿ ದೃಢವಾಗಿ ನೆಲಸಿರುವ ಋಣಪ್ರಜ್ಞೆ. ಋಣದಿಂದ ರಸಸೃಷ್ಟಿ ಆಗಿರುವುದು ಓದುಗರ ಭಾಗ್ಯ. ಇಲ್ಲಿಯ ಕಥೆಗಳು ಈ ದಿಕ್ಕಿನಲ್ಲಿ ಪರಿಶ್ರಮಿಸಲು ಬಯಸುವ ಎಲ್ಲರಿಗೂ ಒಳ್ಳೆಯ ಮಾದರಿಗಳು.
ಹೀಗೆ ಮಾದರಿಗಳಾಗಿ ಸಲ್ಲುವಲ್ಲಿ ಕೆಲವು ಗುಣಗಳು ಮಿಗಿಲಾಗಿ ದುಡಿದಿವೆ. ಮೊದಲನೆಯದು ಅಧಿಕೃತತೆ. ಗಣೇಶರ ವ್ಯಾಸಂಗದ ಆಳ-ಅಗಲಗಳು ಹಿರಿದಾಗಿರುವುದರಿಂದ ಅವರು ಆಶ್ರಯಿಸಿದ ಕಥಾಭಾಗ ವೇದ, ಆಗಮ, ಪುರಾಣ, ಜಾನಪದ, ಕಾವ್ಯ, ಇತಿಹಾಸ - ಹೀಗೆ ಯಾವ ಮೂಲದ್ದೇ ಆದರೂ ಓದುಗರಾದ ನಮಗೆ ಆ ಕಾಲಕ್ಕೇ ಹೋದಂಥ ಅನುಭವವಾಗುತ್ತದೆ.[4] ಇದಕ್ಕೆ ಕಾರಣ ಆವರಣನಿರ್ಮಾಣಕ್ಕಾಗಿ ಗಣೇಶರು ಕೊಡುವ ಸಮೃದ್ಧ ವಿವರಗಳು. ಇವು ಹೊರಚ್ಚಾಗಿ ಕಾಣದೆ, ಭಾರವೆನಿಸದೆ ಕಥೆಯ ಹರಿವಿಗೆ ಹೊಂದಿಕೊಂಡು ಓದಿನ ಅನುಭವವನ್ನು ಸಾಂದ್ರಗೊಳಿಸುತ್ತವೆ. ಎರಡನೆಯದು ಜೀವನ ಮತ್ತು ಸಾಹಿತ್ಯಗಳ ಬಗೆಗೆ ಲೇಖಕರು ಒದಗಿಸುವ ಒಳನೋಟಗಳು. ನಾವು ಹಿಂದೆಯೇ ಗಮನಿಸಿದಂತೆ ಈ ಬಗೆಯ ಕಥೆಗಳ ಹೆಣಿಗೆಗೆ ಮೂಲದ ಧ್ವನಿಯನ್ನು ಗ್ರಹಿಸಿ ಸಾಗುವುದು ಅನಿವಾರ್ಯ. ಈ ನಿರ್ಬಂಧದಿಂದಲೇ ಪ್ರಾಚೀನ ಸಾಹಿತ್ಯವನ್ನು ಕುರಿತ ಒಳನೋಟ ಓದುಗರಿಗೆ ದಕ್ಕುತ್ತದೆ. ಇನ್ನು ಆಯಾ ಇತಿವೃತ್ತಕ್ಕೆ ತಕ್ಕಂತೆ ಲೇಖಕರೇ ಆಡುವ ಮಾತುಗಳು, ಪಾತ್ರಗಳ ಮೂಲಕ ಆಡಿಸುವ ಮಾತುಗಳು ಸಾರೋಕ್ತಿಗಳಾಗಿ ಹರಳುಗಟ್ಟುತ್ತವೆ. ಇಂಥ ಕೆಲವನ್ನು ಮುಂದೆ ಪರಾಮರ್ಶಿಸಬಹುದು.
* * *
ಇಲ್ಲಿರುವ ಹತ್ತು ಕಥೆಗಳಲ್ಲಿ ಆರು ಸ್ತ್ರೀಪ್ರಧಾನವಾಗಿವೆ. ಮಿಕ್ಕವುಗಳಲ್ಲಿಯೂ ಸ್ತ್ರೀಪಾತ್ರಗಳಿಗೆ ಸಮುಚಿತ ಸ್ಥಾನ ದಕ್ಕಿದೆ. ಹೆಣ್ಣುಮಕ್ಕಳ ಬಗೆಗೆ ಅಪಾರ ಗೌರವಾದರಗಳನ್ನು ತಳೆದಿದ್ದ ಮಾಸ್ತಿ, ವಿ.ಸೀ. ಅವರಂಥ ಶ್ರೇಷ್ಠ ಕನ್ನಡ ಸಾಹಿತಿಗಳ ಸಾಲಿಗೆ ಗಣೇಶರೂ ಸೇರುತ್ತಾರೆಂಬುದು ಇವುಗಳಿಂದ ಸ್ಪಷ್ಟವಾಗುತ್ತದೆ. ಇನ್ನು ತಮ್ಮೀ ರಚನೆಗಳಲ್ಲಿ ವೈವಿಧ್ಯ ಕಡಮೆ ಎಂದು ಲೇಖಕರೇ ‘ಅರಿಕೆ’ಯಲ್ಲಿ ಹೇಳಿದ್ದರೂ ಇರುವ ಚೌಕಟ್ಟಿನ ಒಳಗೆ ಸಾಕಷ್ಟು ವೈವಿಧ್ಯ ಒಡಮೂಡಿದೆ. ಕಿರಿದಾದ ಕಥೆಗಳಿಂದ ಮಹಾಕಾವ್ಯಖಂಡ ಎನಿಸುವ ನೀಳ್ಗತೆಯವರೆಗೆ ಎಲ್ಲ ಬಗೆಯ ರಚನೆಗಳೂ ಇಲ್ಲಿವೆ. ಪಾತ್ರಗಳ ದೃಷ್ಟಿಯಿಂದ ನೋಡುವುದಾದರೆ ದೇವತೆಗಳು, ಋಷಿಗಳು, ರಾಜ-ರಾಣಿಯರು, ಕವಿ-ಪಂಡಿತರು, ವಾರಾಂಗನೆಯರು ಇಲ್ಲಿ ಕಾಣಸಿಗುತ್ತಾರೆ. ಅಸಾಮಾನ್ಯರೆಂಬಂತೆ ತೋರುವ ವ್ಯಕ್ತಿಗಳ ಬದುಕುಗಳಲ್ಲಿಯೂ ಬರಸಿಡಿಲು-ಬಿರುಗಾಳಿಗಳಿಗೆ ಅವಕಾಶವಿರುತ್ತದೆ ಎಂಬುದನ್ನು ಇಲ್ಲಿಯ ಕಥೆಗಳು ಸಾರುತ್ತವೆ. ಈ ಪಾತ್ರಗಳು ಜೀವನಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತವೆ; ನಿರ್ಣಯಗಳನ್ನು ತೆಗೆದುಕೊಳ್ಳದೆಯೋ ಅವುಗಳ ಬಾಧ್ಯತೆಯನ್ನು ಬೇರೊಬ್ಬರ ಹೆಗಲಿನ ಮೇಲೆ ಹೊರೆಸಿಯೋ ಓಡಿಹೋಗುವುದಿಲ್ಲ. ಇಲ್ಲಿ ಕಾಣಸಿಗುವ ಮಾನುಷ ಪ್ರಯತ್ನ ಆತ್ಮರತಿಯ ಪ್ರಪಾತಕ್ಕೆ ಬೀಳದೆ ‘ಉದ್ಧರೇದ್ ಆತ್ಮನಾತ್ಮಾನಮ್’ ಎಂಬ ಶಿಖರಕ್ಕೆ ಏರುತ್ತದೆ.
ಉತ್ತಮ ಸಾಹಿತ್ಯಕೃತಿ ಜೀವನವನ್ನು ಅದರ ಎಲ್ಲ ವೈಕಟ್ಯ-ಸೌಭಾಗ್ಯಗಳೊಡನೆ ಸ್ವೀಕರಿಸುವ ಭಾವಸಂಸ್ಕಾರವನ್ನು ತನ್ನ ಓದುಗರಿಗೆ ನೀಡುತ್ತದೆ. ಇದಕ್ಕಾಗಿ ವಿಶಾಲಬುದ್ಧಿಗಳಾದ ಕವಿಗಳು ವಿವಿಧ ಮೌಲ್ಯಗಳ ತಿಕ್ಕಾಟವನ್ನು ಪರಿಭಾವಿಸಿ, ಅಲ್ಲೊಂದು ಸಮನ್ವಯವನ್ನು ಕಂಡುಕೊಂಡು, ಆ ಪ್ರಕ್ರಿಯೆಯನ್ನು ಪಾತ್ರ-ಘಟನೆಗಳ ಮೂಲಕ ಚಿತ್ರಿಸುತ್ತಾರೆ. ‘ಹೀಗೆ ಮಾಡಲು ವಿಸ್ತೃತವಾದ ನೇಪಥ್ಯ ಆವಶ್ಯಕ; ಸಣ್ಣಕತೆಯ ಮಾಧ್ಯಮವಾದರೋ ಒಂದು ನಿರ್ದಿಷ್ಟ ಪರಿಣಾಮವನ್ನು ಓದುಗರ ಮೇಲೆ ಉಂಟುಮಾಡಲು ಏಕಾಗ್ರವಾಗಿ ಸಾಗುತ್ತದೆ; ಇದರಲ್ಲಿ ಮೌಲ್ಯಸಂಘರ್ಷವನ್ನು ಚಿತ್ರಿಸಲೆಳಸುವುದು ದುಸ್ಸಾಹಸ’ ಎಂದು ಕೆಲವರು ಖಂಡಿತವಾದಿ ವಿಮರ್ಶಕರು ಹೇಳುತ್ತಾರೆ. ಆದರೆ ಸಮರ್ಥನಾದ ಲೇಖಕ ಯಾವ ಮಾಧ್ಯಮವನ್ನೂ ತನ್ನ ಉದ್ದಿಷ್ಟ ಪ್ರಯೋಜನಕ್ಕಾಗಿ ದುಡಿಸಿಕೊಳ್ಳಬಲ್ಲನೆಂಬ ಸತ್ಯ ಸದ್ಯದ ಸಂಕಲನದಿಂದಲೇ ಸಾಬೀತಾಗಿದೆ. ಇಲ್ಲಿ ಹಲವು ಬಗೆಯ ಮೌಲ್ಯಸಂಘರ್ಷವನ್ನು ಕಾಣಬಹುದು. ಕಥೆಯ ವಿವರಗಳಿಗೆ ಹೆಚ್ಚಾಗಿ ಹೋಗದೆ ಅಲ್ಲಿರುವ ದ್ವಂದ್ವಗಳನ್ನು ಮಾತ್ರ ಇಲ್ಲಿ ವಿವೇಚಿಸಬಹುದು:
ರಾಮಾಯಣಕ್ಕೆ ಸಂಬಂಧಿಸಿದ ಮೊದಲ ಎರಡು ಕಥೆಗಳು ನಂಬಿಕೆ ಮತ್ತು ಸಂದೇಹಗಳ ಘರ್ಷಣೆಯನ್ನು ಕುರಿತಿವೆ. ಯಾವ ಸಂದೇಹವು ಜ್ಞಾನಸಂಪಾದನೆಯಲ್ಲಿ ಧನಾತ್ಮಕವಾಗಿ ದುಡಿದು ವಿದ್ಯಾರ್ಥಿಯ ಶ್ರೇಯಸ್ಸಿಗೆ ಕಾರಣವಾಗುವುದೋ ಅದೇ ಗಂಡ-ಹೆಂಡತಿಯರ, ರಾಜ-ಪ್ರಜೆಗಳ, ಅಣ್ಣ-ತಮ್ಮಂದಿರ ನಡುವೆ ತಲೆದೋರಿದಾಗ ಮಾನವಸಂಬಂಧಗಳ ಅಡಿಗಲ್ಲಾದ ನಂಬಿಕೆಯನ್ನು ಹಾಳ್ಗೆಡವಿ ಋಣಾತ್ಮಕವೆನಿಸುತ್ತದೆ. ಇಲ್ಲಿಯ ಕಥೆಗಳಲ್ಲಿ ಸಂದೇಹವು ಪರ್ಯಂತದಲ್ಲಿ ರಾಮ-ಭರತರಲ್ಲಿ ಸಹಾನುಭೂತಿಯನ್ನು ಮೂಡಿಸುತ್ತದೆ. ಶಕುಂತಲೆಯ ವೃತ್ತಾಂತದಲ್ಲಿ ಇದೇ ಸಂಘರ್ಷದ ಮತ್ತೊಂದು ಮಜಲಿದೆ. ಯಾರ ‘ತಪ್ಪೂ’ ಇಲ್ಲದೆ ಒಮ್ಮೆ ಮುರುಟಿದ ವಿಶ್ವಾಸ ಮತ್ತೆ ಅಕೃತ್ರಿಮವಾಗಿ ಕೊನರುವುದು ಕಷ್ಟ ಅಥವಾ ಅಸಾಧ್ಯವೆಂಬುದು ಇಲ್ಲಿಯ ಧ್ವನಿ. ಕಾಮ ಎಂಬುದು ಪುರುಷಾರ್ಥಗಳ ಪೈಕಿ ಸ್ಥಾನ ಪಡೆದಂತೆ ಅರಿಷಡ್ವರ್ಗದ ಪಟ್ಟಿಯಲ್ಲಿಯೂ ಗಣನೆಗೆ ಬರುತ್ತದೆ. ಇದರ ಮೇಲಾಟ-ಬೀಳಾಟಗಳನ್ನು ಇಲ್ಲಿಯ ಹಲವು ಕಥೆಗಳಲ್ಲಿ ಗಮನಿಸಬಹುದು. ವಾರಸ್ತ್ರೀಯರ ಬದುಕಿನ ಅತಂತ್ರತೆಯು ದೇವಲೋಕದ ಗಣಿಕೆ ಮೇನಕೆಯಿಂದ ಮೊದಲುಗೊಂಡು ಭೂಲೋಕದ ವಾರಾಂಗನೆ ವಿಕಟನಿತಂಬೆಯವರೆಗೆ ಹಲವು ಆಯಾಮಗಳಲ್ಲಿ ಚಿತ್ರಿತವಾಗಿದೆ. ಸ್ಥಾಯಿಯಿಲ್ಲದ ಬದುಕು ವ್ಯಭಿಚಾರಿಗಳಲ್ಲಿಯೇ ಕಳೆದುಹೋಗುತ್ತದೆ ಎಂಬುದು ತಾತ್ಪರ್ಯ. ಕಾಮವನ್ನು ಕೇಂದ್ರವಾಗಿ ಉಳ್ಳ ಶೃಂಗಾರರಸಕ್ಕೆ ಸಂಭೋಗ ಮತ್ತು ವಿಪ್ರಲಂಭ ಎಂಬ ಎರಡು ಮುಖಗಳಿವೆ ಎಂದು ಭಾರತೀಯ ಆಲಂಕಾರಿಕರ ಅಭಿಮತ. ಸದ್ಯದ ಕಥೆಗಳಲ್ಲಿ ಅನಾಮಧೇಯ ಗೋಪಿಕೆಯೊಬ್ಬಳು ಕೃಷ್ಣನ ವಿರಹವೆಂಬ ವಿಪ್ರಲಂಭದಲ್ಲಿಯೇ ಪಾಕವನ್ನು ಕಂಡರೆ, ಬಲವದ್ ವಿಪ್ರಲಂಭವನ್ನು ಸಹಿಸಲಾಗದ ಪಾಂಡು ಅದನ್ನು ಸಂಭೋಗದತ್ತ ತಿರುಗಿಸಿ ಸಾವನ್ನೇ ತಂದುಕೊಳ್ಳುತ್ತಾನೆ. ಒಬ್ಬಳಿಗೆ ಮದುವೆಯಾಗದಿದ್ದರೂ ವಿಯೋಗದಲ್ಲಿ ಶಾಂತಿ; ಮತ್ತೊಬ್ಬನಿಗೆ ಮದುವೆಯಾಗಿದ್ದರೂ ಸಂಭೋಗದಿಂದ ಸಾವು! ಎಂಥ ಹಠದ ಮನುಷ್ಯರೂ ಕೆಲವು ಪ್ರಸಂಗಗಳನ್ನು ಎದುರಿಸಿದ ಬಳಿಕ ತಮ್ಮ ವ್ಯಕ್ತಿತ್ವದಲ್ಲಿ ಮಾರ್ಪಾಟನ್ನು ತಳೆಯುತ್ತಾರೆ; ಇದಕ್ಕೆ ಇಲ್ಲಿಯ ಸತ್ಯಭಾಮೆಯ ಬದುಕೇ ನಿದರ್ಶನ. ತಾಯಿ ತಿಳಿಯದೆ ತನ್ನ ಮಗನನ್ನೇ ಕೊಂದ ವಿಕಟ ಸನ್ನಿವೇಶ ಇಲ್ಲಿದೆ. ಬದುಕಿನ ಆಟದಲ್ಲಿ ಗೆಲವೇ ಸೋಲಾಗಬಹುದು ಎಂಬುದು ‘ಬೆಳಕಿನ ಕತ್ತಲೆ’ಯ ದರ್ಶನ. ಕಾಳಿದಾಸನನ್ನು ಕುರಿತ ಕಥೆಯಲ್ಲಿ ರಾಜ್ಯತಂತ್ರ, ಕೌಟುಂಬಿಕ ಜೀವನ ಮತ್ತು ಕಲಾಮೀಮಾಂಸೆಗಳ ಸಮಾವೇಶವಿದೆ. ಕಾವ್ಯವನ್ನು ರಚಿಸಿದ ಬಳಿಕ ಅದರ ಧ್ವನಿಗಳ ಮೇಲೆ ಕವಿಗೆ ಯಾವ ಮಟ್ಟದ ಅಧಿಕಾರ ಇರುತ್ತದೆ? ಕವಿ ಜೀವನವನ್ನು ತಿದ್ದಬಲ್ಲನೇ? ಎಂಬ ಪ್ರಶ್ನೆಗಳನ್ನು ಈ ಕಥೆ ಕಲಾತ್ಮಕವಾಗಿ ಶೋಧಿಸುತ್ತದೆ. ಕಾವ್ಯ ಬದುಕನ್ನು ಧ್ವನಿಸಬಹುದು; ಅದರಿಂದ ಬದುಕು ನೇರ್ಪುಗೊಳ್ಳಬೇಕೇ ಹೊರತು ವಿಕೃತವಾಗಬಾರದು. ವಿಕಟನಿತಂಬೆ ಮತ್ತು ಭವಭೂತಿಗಳ ಕಥೆಗಳಲ್ಲಿ ತೀವ್ರ ವ್ಯಕ್ತಿತ್ವದ ತಾಕಲಾಟಗಳೂ ಸಂಪ್ರದಾಯ-ಸ್ವಂತಿಕೆಗಳ ನಡುವಣ ಘರ್ಷಣೆಯೂ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಾಗ ಆಗುವ ಆಘಾತವೂ ಸೊಗಸಾಗಿ ಬಣ್ಣನೆಗೊಂಡಿವೆ.
* * *
ಸಣ್ಣಕತೆಯ ವ್ಯಾಪ್ತಿ ಕಿರಿದಾದುದರಿಂದ ಅದರಲ್ಲಿ ಕಥನತಂತ್ರ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಬಲ್ಲವರ ಅಭಿಪ್ರಾಯ. ಈ ದೃಷ್ಟಿಯಿಂದ ಪರಿಶೀಲಿಸಿದರೆ ಸದ್ಯದ ಸಂಕಲನದಲ್ಲಿ ಹಲವು ಬಗೆಯ ತಂತ್ರಗಳು ಬಳಕೆಯಾಗಿದ್ದು ಉದ್ದಿಷ್ಟ ಪರಿಣಾಮವನ್ನು ಉಂಟುಮಾಡಿರುವುದು ವಿಶದವಾಗುತ್ತದೆ. ಸನ್ನಿವೇಶವೊಂದರ ಪೂರ್ವಾಪರಗಳನ್ನು ತಿಳಿಸದೆ ‘ಇನ್ ಮೀಡಿಯಸ್ ರೆಸ್’ ಎಂಬಂತೆ ಹಠಾತ್ತನೆ ಕಥೆ ಪ್ರಾರಂಭವಾಗುವುದನ್ನು ‘ಆತ್ಮಾನಂ ಮಾನುಷಂ ಮನ್ಯೇ’ ಎಂಬ ಕಥೆಯಲ್ಲಿ ಕಾಣುತ್ತೇವೆ. ಇಲ್ಲಿ ಸೀತೆಯ ಭೂಪ್ರವೇಶ ಎಂಬ ಗಂಭೀರ-ನಿರ್ಣಾಯಕ ಕ್ರಿಯೆಯ ಒಕ್ಕಣೆಯಿಂದ ಕಥನ ಮೊದಲಾಗುತ್ತದೆ. ಈ ಬಗೆಯ ತಂತ್ರ ಮೊದಲಿಗೇ ಓದುಗರ ಕುತೂಹಲವನ್ನು ಕೆರಳಿಸಿ ಅವರ ಆಸಕ್ತಿಯನ್ನು ಕಥೆಯಲ್ಲಿ ಕೀಲಿಸುತ್ತದೆ. ಒಂದು ಪಾತ್ರದ ಅಂತರಂಗವನ್ನು ತೆರೆದಿಡಲು ಸ್ವಗತದ ತಂತ್ರ ಚೆನ್ನಾಗಿ ಒದಗಿಬರುತ್ತದೆ. ಇದನ್ನು ‘ಬಾನು-ಬುವಿಗಳ ಸ್ವಗತ’ ಎಂಬ ರಚನೆ ಯಕ್ಷಗಾನ-ತಾಳಮದ್ದಳೆಯ ಪೀಠಿಕೆಯ ವಿಧಾನದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ. ಚಿತ್ತಲಹರಿಯ ಅನಿಯಂತ್ರಿತ ಸರಣ ಆಯಾ ಪಾತ್ರಗಳ ಒಳತೋಟಿಗಳನ್ನೂ ಸದ್ಯದ ಪ್ರಸಂಗದ ವಿಕಟ ಸ್ವಾರಸ್ಯಗಳನ್ನೂ ಅನಾವರಣಗೊಳಿಸುತ್ತದೆ. ಇದೇ ಬಗೆಯ ತಂತ್ರ ಪತ್ರರಚನೆಯದು. ಒಂದು ಪಾತ್ರ ಇನ್ನೊಂದು ಪಾತ್ರಕ್ಕೆ ಬರೆದ ಪತ್ರದಲ್ಲಿ ತನ್ನ ಮನಸ್ಸನ್ನು ತೆರೆದಿಡುವ ಕ್ರಮ ‘ಗೋಪಿಕೆಯ ಪತ್ರ’ದಲ್ಲಿ ಕಾಣಸಿಗುತ್ತದೆ. ಇನ್ನು ಹಿಂದೆ ಆಗಿಹೋದ ಅಥವಾ ಮುಂದೆ ಆಗಲಿರುವ ಘಟನೆಗಳನ್ನು ಪಾತ್ರವೊಂದು ತಿಳಿದುಕೊಂಡು ಓದುಗರಿಗೂ ತಿಳಿಸಿಕೊಡಲು ಅಪ್ಪಟ ಭಾರತೀಯ ಕಲ್ಪನೆಗಳಾದ ದಿವ್ಯದೃಷ್ಟಿ ಮತ್ತು ಸೂಕ್ಷ್ಮ-ಕಾರಣಶರೀರಗಳ ತಂತ್ರ ಸಾಹ್ಯವೀಯುತ್ತದೆ. ಇದರ ವಿನಿಯೋಗವನ್ನು ‘ಸೀತಾಸಂದೇಹ’ ಮತ್ತು ‘ಶತಶೃಂಗಪರ್ವತ’ಗಳಲ್ಲಿ ಕಾಣಬಹುದು. ‘ಪ್ರಣಯಪತ್ರದ ಪದರಗಳಲ್ಲಿ’ ಎಂಬ ರಚನೆ ಕಥೆಯೊಳಗೆ ಕಥೆ ಎಂಬ ತಂತ್ರವನ್ನು ಬಳಸಿಕೊಂಡಿದೆ. ಇದಕ್ಕಾಗಿ ಲೇಖಕರು ಆಧುನಿಕ ಕಾಲದ ಸಂಶೋಧಕ-ಕತೆಗಾರರನ್ನು ಕಾಳಿದಾಸನ ಕಾಲದ ವ್ಯಕ್ತಿಗಳೊಡನೆ ಮುಖಾಮುಖಿಯಾಗಿಸಿದ್ದಾರೆ. ಚಿಕ್ಕ ವಯಸ್ಸಿನ ಪಾತ್ರವೊಂದು ಹಿರಿಯ ಪಾತ್ರದೊಡನೆ ಸಂಭಾಷಿಸುತ್ತ ಕಥೆಯನ್ನು ಮುನ್ನಡಸುವ ಬಗೆಯನ್ನು ‘ಭವದ ಬಸುರಿನ ಭಾವ’ ಎಂಬ ಕಥೆಯಲ್ಲಿ ನೋಡಬಹುದು. ಇದರ ಮೂಲಕ ವಾಚಕರಾದ ನಮಗೆ ಎರಡು ವಿಭಿನ್ನವಾದರೂ ಪೂರಕವಾದ ಮನೋಧರ್ಮಗಳ ಪರಿಚಯವಾಗುತ್ತದೆ. ಈ ಕಥೆಯ ಜೊತೆಗೆ ‘ಶ್ಯಾಮಲ ಶಾರದೆ’ಯಲ್ಲಿ ಒಂದೇ ಕಾಲದವರಾದರೂ ಬೇರೆ ಬೇರೆ ತಲೆಮಾರುಗಳ ವ್ಯಕ್ತಿಗಳನ್ನು ಒಂದೆಡೆ ತಂದಿಡುವ ತಂತ್ರ ಬಳಕೆಯಾಗಿದೆ. ಇದು ತನ್ನ ಸ್ವರೂಪದಿಂದಲೇ ರೋಚಕತೆಯನ್ನು ಉಂಟುಮಾಡುತ್ತದೆ. ಸದ್ಯದ ಸಂಕಲನದಲ್ಲಿ ಪ್ರಸಿದ್ಧ ಸಂಸ್ಕೃತಪದ್ಯಗಳ ತಾತ್ಪರ್ಯವನ್ನು ಬಳಸಿಕೊಂಡು ಕಥೆಗೆ ಮೆರಗು ನೀಡುವ ಕ್ರಮವನ್ನೂ ಹಲವೆಡೆ ಕಾಣಬಹುದು. ಈ ಪದ್ಯಗಳ ಪರಿಚಯವಿರುವ ಓದುಗರಿಗೆ - ದೊಡ್ಡ ಉತ್ಸವದಲ್ಲಿ ಹುರುಪಿನಿಂದ ಓಡಾಡುತ್ತ ಸುತ್ತಲೂ ಕಣ್ಣು ಹಾಯಿಸುತ್ತಿರುವಾಗ ನಮಗೆ ಪರಿಚಿತರಾದ ವ್ಯಕ್ತಿಯನ್ನು ಆಕಸ್ಮಿಕವಾಗಿ ಸಂಧಿಸುವಂಥ ಉದ್ದೀಪಕ ಅನುಭವವಾಗುತ್ತದೆ. ಇವುಗಳ ಪರಿಚಯವಿರದ ಓದುಗರಿಗೆ ಅವನ್ನು ಮೊದಲ ಬಾರಿಗೆ ಆಸ್ವಾದಿಸುವ ಅವಕಾಶವೊದಗುತ್ತದೆ. ಎರಡು ಕಡೆಯೂ ಪ್ರಯೋಜನವಿದೆ. ಒಟ್ಟಿನಲ್ಲಿ ‘ಪುಟಗಳ ನಡುವಣ ನವಿಲುಗರಿ’ ಕೃತಿಯಲ್ಲಿ ಪ್ರಾಯಶಃ ಪ್ರತಿಯೊಂದು ಕಥೆಯೂ ಒಂದಲ್ಲ ಒಂದು ಬಗೆಯ ತಂತ್ರವನ್ನು ಚೆನ್ನಾಗಿ ಬಳಸಿಕೊಂಡು ಕಥನಕ್ಕೊಂದು ಕಾಂತಿಯನ್ನೂ ವೈವಿಧ್ಯ-ವೈಚಿತ್ರ್ಯಯಗಳನ್ನೂ ತಂದಿತ್ತಿದೆ.
* * *
ಕಲಾದೃಷ್ಟಿಗೆ ಶ್ರುತಿಗೊಂಡ ಒಳ್ಳೆಯ ಲೇಖಕ ತನ್ನ ಕೃತಿಯ ಹಿರಿದಾದ ಆಯಾಮಗಳಂತೆ ಚಿಕ್ಕ ಚಿಕ್ಕ ವಿವರಗಳನ್ನೂ ಚೆಲುವಾಗಿ ಶಿಲ್ಪಿಸುತ್ತಾನೆ. ಇದಕ್ಕೆ ನಿದರ್ಶನವಾಗಿ ಇಲ್ಲಿಯ ಕೆಲವು ಹೆಸರುಗಳನ್ನು ಗಮನಿಸೋಣ. ಪುಸ್ತಕದ ಹೆಸರಿನ ಸ್ವಾರಸ್ಯಗಳನ್ನು ಈಗಾಗಲೇ ಮನಗಂಡಿದ್ದೇವೆ. ‘ಶ್ಯಾಮಲ ಶಾರದೆ’ ಮತ್ತು ‘ಭವದ ಬಸುರಿನ ಭಾವ’ ಎಂಬ ಹೆಸರುಗಳು ಪ್ರಧಾನ ಪಾತ್ರಗಳ ವ್ಯಕ್ತಿತ್ವವನ್ನು ದ್ಯೋತಿಸುತ್ತವೆ. ವಿಜ್ಜಿಕೆಯೆಂಬ ಕನ್ನಡದ ಕಬ್ಬಿಗಿತಿ ಕೆಚ್ಚಿನ ಸ್ವಭಾವದವಳು; ಕಪ್ಪು ಮೈಬಣ್ಣದ ವಿದ್ಯಾವತಿ ತಾನಿರುವಾಗ ಸರಸ್ವತಿಯನ್ನು ಸರ್ವಶುಕ್ಲೆಯೆಂದು ಬಣ್ಣಿಸಿದ ದಂಡಿಯನ್ನು ಛೇಡಿಸಿ ಪದ್ಯವನ್ನು ಬರೆದವಳು. ತನ್ನ ಬಗೆಗೆ, ತನ್ನ ಕವಿತಾಶಕ್ತಿಯ ಬಗೆಗೆ ಆಕೆಗೆ ಅಪಾರವಾದ ಹೆಮ್ಮೆ. ಇಂಥ ಹೆಣ್ಣನ್ನು ‘ಶ್ಯಾಮಲ ಶಾರದೆ’ ಎಂದು ಕರೆದಿರುವುದು ಅದೆಷ್ಟು ಸಮುಚಿತ! ಜೊತೆಗೆ ಈ ಹೆಸರನ್ನು ಕೇಳಿದೊಡನೆ ಅದೊಂದು ಬಗೆಯ ವೈರುದ್ಧ್ಯದ ಭಾವನೆ ಮನಸ್ಸನ್ನು ಆವರಿಸಿ ನಮ್ಮನ್ನು ಓದಲು ಪ್ರೇರಿಸುತ್ತದೆ. ಇಲ್ಲಿಯ ಶಬ್ದಗಳು ಸಮಾನ ವರ್ಣದಿಂದ ಪ್ರಾರಂಭವಾಗಿದ್ದು ಮಾತ್ರಾಸಮತೆಯನ್ನೂ ಹೊಂದಿರುವುದು ಹೆಚ್ಚಿನ ವಿಶೇಷ. ವಿಜ್ಜಿಕೆಯಂತೆಯೇ ಕೆಚ್ಚಿನ - ಆದರೆ ಇನ್ನಷ್ಟು ಸಂಕೀರ್ಣವಾದ - ವ್ಯಕ್ತಿತ್ವವನ್ನುಳ್ಳವನು ಭವಭೂತಿ. ಯಾವುದೋ ಹಿರಿದಾದ ಲಕ್ಷ್ಯವನ್ನು ಸಾಧಿಸಲು ಬಯಸಿ ಆ ಪ್ರಯತ್ನದಲ್ಲಿ ತನ್ನತನವನ್ನೇ ಬಸಿದುಕೊಂಡ ಎಳೆಗಳು ಈತನ ಕಾವ್ಯಗಳಲ್ಲಿ ಕಾಣಿಸುತ್ತವೆ. ಕಾವು, ಓಘ, ಬಲ, ವಿಲಕ್ಷಣತೆ - ಇವು ಅವನ ಕಾವ್ಯದ ಗುಣಗಳು. ಇಂಥ ಕವಿಯ ಬದುಕನ್ನು ಚಿತ್ರಿಸುವ ಕಥೆ ‘ಭವದ ಬಸುರಿನ ಭಾವ’. ಎರಡು ಸಂಸ್ಕೃತಶಬ್ದಗಳ ನಡುವಿರುವ ಅಚ್ಚಗನ್ನಡದ ಪದ ಭವಭೂತಿಯಲ್ಲಿ ಕಂಡುಬರುವ ಮಾರ್ಗ-ದೇಶಿಗಳ ಅವಿಕಲ ಸಮ್ಮಿಶ್ರಣವನ್ನು ಸೂಚಿಸುತ್ತದೆ.
ಮೇನಕೆ-ಶಕುಂತಲೆಯರ ಮನೋಭಾವಗಳನ್ನು ಚಿತ್ರಿಸುವ ಕಥೆ ‘ಬಾನು-ಬುವಿಗಳ ಸ್ವಗತ’. ಬಾನು ಮೇನಕೆಯನ್ನೂ ಬುವಿ ಶಕುಂತಲೆಯನ್ನೂ ನಿರ್ದೇಶಿಸುತ್ತದೆ. ಆಕಾಶ-ಭೂಮಿಗಳು ಪರಸ್ಪರ ಸಂಬಂಧವುಳ್ಳವಾದರೂ ಹೇಗೆ ಸ್ವತಂತ್ರವಾದ ಅಸ್ತಿತ್ವವನ್ನು ಉಳಿಸಿಕೊಂಡಿವೆಯೋ ಹಾಗೆ ಮೇನಕೆ ಮತ್ತು ಶಕುಂತಲೆಯರು ತಾಯಿ-ಮಕ್ಕಳಾಗಿದ್ದರೂ ತಮ್ಮದೇ ಸ್ವತಂತ್ರ ಮಾರ್ಗಗಳಲ್ಲಿ ಸಾಗಿ ಬದುಕನ್ನು ಕಂಡವರು. ಇವರಿಬ್ಬರು ಒಟ್ಟಿಗೆ ಕಲೆತು ಮಾತನಾಡುವ ಸಾಧ್ಯತೆ ಇಲ್ಲದಿರುವುದರಿಂದ ತಮ್ಮ ತಮ್ಮ ಸ್ವಗತಗಳಲ್ಲಡಗಿರುವ ಮೂಲಭಾವನೆಗಳ ಸಾಮ್ಯದಿಂದಲೇ ಸಂವದಿಸಬೇಕು. ಇದನ್ನೇ ಕಥೆಯ ಹೆಸರು ಧ್ವನಿಸುತ್ತಿದೆ. ‘ಬೆಳಕಿನ ಕತ್ತಲೆ’ ಎಂಬ ಹೆಸರು ಸತ್ಯಭಾಮೆಯ ಸ್ವಭಾವದಲ್ಲಿಯೂ ಸದ್ಯದ ಕಥಾನಕದ ಇತಿವೃತ್ತದಲ್ಲಿಯೂ ಇರುವ ದ್ವೈಧವನ್ನು ಸೊಗಸಾಗಿ ಸೂಚಿಸುತ್ತದೆ. ಇದರ ಔಚಿತ್ಯವನ್ನು ಹಿಂದೆಯೇ ಮೌಲ್ಯಸಂಘರ್ಷಗಳನ್ನು ಗಮನಿಸುವಾಗ ತಿಳಿದುಕೊಂಡಿದ್ದೇವೆ. ‘ಪ್ರಣಯಪತ್ರದ ಪದರಗಳಲ್ಲಿ’ ಶಕುಂತಲೆ ಬರೆದ ಒಂದು ಪತ್ರದ ಗತಿ ಏನಾಯಿತು ಎಂಬ ಸಣ್ಣ ಪ್ರಶ್ನೆಯು ಹೇಗೆ ಕೌಟುಂಬಿಕ ಕ್ಲೇಶಗಳ, ರಾಜ್ಯತಂತ್ರದ ಅತಂತ್ರಗಳ ಕೇಂದ್ರವಾಗಿ ನಿಲ್ಲುತ್ತದೆ ಎಂದು ಬಣ್ಣಿಸುತ್ತದೆ. ಇಷ್ಟೂ ಇತಿವೃತ್ತ ಒಂದು ಪತ್ರದ ಸುತ್ತಲೂ ತೆರೆದುಕೊಳ್ಳುವುದರಿಂದ ಸದ್ಯದ ಹೆಸರು ಸೂಕ್ತವಾಗಿದೆ. ಸಾಹಿತ್ಯದ ಸಾಲುಗಳ ನಡುವೆ ಅಡಗಿರುವ ಗೂಢವಾದ ಧ್ವನಿಯೇ ಅದರ ಜೀವಾಳವೆಂದು ಪುಸ್ತಕದ ಹೆಸರಿನ ಹಾಗೆ ಈ ಕಥೆಯ ಸಂಜ್ಞೆಯೂ ಸಾರುತ್ತಿದೆ.
ಇನ್ನು ಪಾತ್ರಗಳ ಹೆಸರುಗಳತ್ತ ತಿರುಗುವುದಾದರೆ, ಇಲ್ಲಿಯ ಹೆಚ್ಚಿನ ವ್ಯಕ್ತಿಗಳೆಲ್ಲ ಇತಿಹಾಸ-ಸಾಹಿತ್ಯಗಳಲ್ಲಿ ಪ್ರಸಿದ್ಧರಾದವರೇ ಆದುದರಿಂದ ಅವರ ಹೆಸರುಗಳಲ್ಲಿ ಮಾರ್ಪಾಟು ಸಾಧ್ಯವಿಲ್ಲ. ಲೇಖಕರಿಗೆ ಸ್ವಾತಂತ್ರ್ಯವಿರುವುದು ಸಹಾಯಕಗಳಾದ ಸಣ್ಣ ಪಾತ್ರಗಳ ಹೆಸರುಗಳಲ್ಲಿಯೇ. ಇದನ್ನು ಅವರು ಹೇಗೆ ಬಳಸಿಕೊಂಡಿದ್ದಾರೆಂದು ಸ್ವಲ್ಪ ನೋಡೋಣ. ವಿಕಟನಿತಂಬೆಯ ಬದುಕಿನ ವಿಷಮ ಘಟ್ಟವೊಂದರಲ್ಲಿ ಕಹಿಯಾದ ಸುದ್ದಿಯನ್ನು ಎತ್ತಾಡಿಕೊಂಡು ಅದನ್ನು ಅವಳಿಗೆ ತಲಪಿಸುವಲ್ಲಿಯೇ ಸಂತಸ ಕಾಣುವ ಪಾತ್ರದ ಹೆಸರು ‘ಕಲಕಂಠಿ’! ಇದು ಪ್ರತಿಯೊಬ್ಬ ಪ್ರಜೆಗೂ ಕಾವ್ಯಸಂಸ್ಕಾರವಿರುತ್ತಿದ್ದ ಆ ಕಾಲದ ಕಾಶ್ಮೀರಕ್ಕೆ ಸಹಜವಾದ ಹೆಸರು. ಇದೇ ಬಗೆಯ ದೇಶ-ಕಾಲಗಳ ಔಚಿತ್ಯವನ್ನು ವಿಜ್ಜೆಕೆಯ ಕಥೆಯಲ್ಲಿಯೂ ಕಾಣುತ್ತೇವೆ. ಆಕೆಯ ಆಪ್ತಸಖಿ ಮತ್ತು ಪಡೆವಳತಿಯರ ಹೆಸರುಗಳು ಕ್ರಮವಾಗಿ ಚಂದಲೆ ಮತ್ತು ಸೋವಲೆ. ಚಾಲುಕ್ಯಸಾಮ್ರಾಜ್ಯದ ಅರಸರು ಆಳುತ್ತಿದ್ದಾಗ ಕನ್ನಡನಾಡಿನಲ್ಲಿ ಇಂಥ ಹೆಸರುಗಳೇ ಬಳಕೆಯಲ್ಲಿದ್ದವೆಂದು ಶಾಸನ, ಜನಶ್ರುತಿ ಮುಂತಾದ ಆಧಾರಗಳಿಂದ ತಿಳಿದುಬರುತ್ತದೆ. ಐತಿಹಾಸಿಕ ಕಥಾನಕಗಳ ರಚನೆಯಲ್ಲಿ ಈ ತೆರನಾದ ಅಧಿಕೃತತೆ ಆವಶ್ಯಕ.
ಒಟ್ಟಿನಲ್ಲಿ ಪ್ರಸ್ತುತ ಸಂಕಲನದಲ್ಲಿಯ ಹೆಸರುಗಳು ಚಪ್ಪಟೆಯಾಗಿರದೆ ಪ್ರತ್ಯಂಶದಲ್ಲಿಯೂ ವ್ಯಂಜಕಗಳಾಗಿ ದುಡಿದು ಓದುಗರಿಗೆ ರಸಾನುಭೂತಿಯನ್ನು ಉಂಟುಮಾಡುವಲ್ಲಿ ಸಹಕರಿಸುತ್ತವೆ.
[1] ‘ಸಣ್ಣಕತೆ: ಆಕೃತಿ ಮತ್ತು ಆಶಯ’. ಸಂ.: ಎಸ್. ದಿವಾಕರ್. ಬೆಂಗಳೂರು: ಪ್ರಿಸಮ್, ೨೦೨೩.
[2] ‘ತೀ.ನಂ.ಶ್ರೀ. ಸಮಗ್ರ ಗದ್ಯ’. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೯. ಪು. ೩೪೦.
[3] ಈ ನಿಟ್ಟಿನಲ್ಲಿ ಆನಂದವರ್ಧನ ಸಾವಿರ ವರ್ಷಗಳಿಗೂ ಮುನ್ನವೇ ಎಚ್ಚರಿಕೆಯ ಘಂಟೆಯನ್ನು ಬಾರಿಸಿದ್ದ: “ರಾಮಾಯಣವೇ ಮೊದಲಾದ ಕಾವ್ಯಗಳಲ್ಲಿ ರಸವು ಸ್ವಯಂಸಿದ್ಧವಾಗಿರುತ್ತದೆ. ಅವುಗಳಲ್ಲಿ ಕವಿಗಳು ತಮ್ಮ ಇಚ್ಛೆ ತೋರಿದಂತೆ ಮೂಲರಸಕ್ಕೆ ವಿರುದ್ಧವಾಗಿ ಕಲ್ಪನೆಗಳನ್ನು ಬೆರಸಬಾರದು”:
ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ |
ಕಥಾಶ್ರಯಾ ನ ತೈರ್ಯೋಜ್ಯಾಃ ಸ್ವೇಚ್ಛಾ ರಸವಿರೋಧಿನೀ || (ಧ್ವನ್ಯಾಲೋಕ, ೩.೧೪ ವೃತ್ತಿಯ ಪರಿಕರಶ್ಲೋಕ)
[4] ಈ ಸಂದರ್ಭದಲ್ಲಿ ಪಾಶ್ಚಾತ್ತ್ಯ ಕಾವ್ಯವಿಮರ್ಶಕರ ಅಗ್ರಪಂಕ್ತಿಗೆ ಸೇರುವ ಲಾಂಜೈನಸ್ ಹೇಳುವ ಮಾತೊಂದು ಸ್ಮರಣಾರ್ಹ: ಕಾವ್ಯದಲ್ಲಿ ಔನ್ನತ್ಯದ ಅಥವಾ ಭವ್ಯತೆಯ ಅನುಭವಕ್ಕೆ ಪೂರಕವಾಗಿ ‘ಟ್ರಾನ್ಸ್ಪೋರ್ಟ್’ ಎಂಬ ಗುಣ ದುಡಿಯುತ್ತದೆ; ಇದರ ಮೂಲಕ ಸಹೃದಯರಾದ ಓದುಗರು ಕವಿಯ ಅಂತರಂಗದ ಅನುಭೂತಿಯನ್ನು ತಾವೂ ಪಡೆಯುವಂತಾಗುತ್ತಾರೆ:
“The effect of elevated language upon an audience is not persuasion but transport.” (Literary Criticism: A Short History. Wimsatt, William K, Jr. and Brooks, Cleanth. Calcutta: Oxford and IBH Publishing Co., 1964. pp. 98–99.)
ಪ್ರಕೃತಕ್ಕೆ ಸಂಬಂಧಿಸಿದಂತೆ - ಐತಿಹಾಸಿಕ ಇತಿವೃತ್ತಗಳನ್ನು ಅಧಿಕೃತವಾದ ವಿವರಗಳೊಡನೆ ಕಟ್ಟಿಕೊಡುವ ಕವಿ ತಾನು ಪ್ರತಿಭಾಕ್ಷಿಯಿಂದ ಸಾಕ್ಷಾತ್ಕರಿಸಿಕೊಂಡ ಆ ಕಾಲವನ್ನು ಸಹೃದಯರೂ ಕಂಡುಕೊಳ್ಳುವಂತೆ ಮಾಡುತ್ತಾನೆ; ಮತ್ತು ಇಲ್ಲಿ ವಾಹಕವಾಗಿ ಸಲ್ಲುವುದು ‘ಟ್ರಾನ್ಸ್ಪೋರ್ಟ್’ ಎಂಬ ಗುಣವೆಂದು ಅರ್ಥ ಮಾಡಿಕೊಳ್ಳಬಹುದು.
ಪ್ರಕೃತ ಲೇಖನ ಬೆಂಗಳೂರಿನ ವಸಂತ ಪ್ರಕಾಶನವು ಪ್ರಕಟಿಸಿರುವ ಈ ಕೃತಿಯ ಕಡೆಯಲ್ಲಿ ಸೇರಿದೆ.
To be continued.