ಹಣಹಿಡುಕರ ವಿಡಂಬನೆ
‘ಹಣವಿಲ್ಲದೆ ಹೆಣ ಸುಡುವುದೂ ಕಷ್ಟ’ ಎಂದು ನಮಗೆ ಹರಿಶ್ಚಂದ್ರನ ಕಾಲದಿಂದ ತಿಳಿದಿದೆ. ಈಗಂತೂ ನಮ್ಮ ಸಮಾಜ ನಿಂತಿರುವುದೇ ಹಣದ ಮೇಲೆ. ಹೀಗಿರಲು ಜೀವನದ ಎಲ್ಲ ಆಯಾಮಗಳಲ್ಲಿಯೂ ಹಣದ ಪ್ರಭಾವ ಕಂಡುಬರುವುದು ಅಚ್ಚರಿಯಲ್ಲ. ಮುಂದಿನ ಪದ್ಯದಲ್ಲಿ ಇಂಥ ಒಂದು ಸಂಗತಿಯತ್ತ ಕವಿ ನಮ್ಮ ಗಮನವನ್ನು ಸೆಳೆಯುತ್ತಾರೆ:
ಅಕ್ಷ್ಣೈಕೇನ ವಿಲೋಕನೇ ದಶ ತಥಾ ದ್ವಾಭ್ಯಾಂ ಕೃತೇ ವಿಂಶತಿಃ
ಷಷ್ಟಿರ್ಗಂಧವಿಮರ್ದನೇ ಸ್ರಜ ಉರಸ್ಯಾಧಾಪನೇ ದ್ವೇ ಶತೇ |
ಶುಲ್ಕಂ ರೂಪ್ಯಸಹಸ್ರಮರ್ಧಘಟಿಕಾಭೋಗಾರ್ಥಮಿತ್ಯಾದಿಭಿ-
ರ್ಧೂರ್ತೈಃ ಸಂಪ್ರತಿ ಕುಟ್ಟನೀವ್ಯವಸಿತೈರ್ದೇವೋऽಪಿ ವೇಶ್ಯೀಕೃತಃ ||
(ಒಂದು ಕಣ್ಣಿನಿಂದ ನೋಡುವುದಕ್ಕೆ ಹತ್ತು ರೂಪಾಯಿ; ಎರಡು ಕಣ್ಣುಗಳಿಂದ ನೋಡುವುದಕ್ಕೆ ಇಪ್ಪತ್ತು. ಅನುಲೇಪನದ ಸೇವೆಗೆ ಅರವತ್ತು ರೂಪಾಯಿ; ಹೂವಿನ ಹಾರ ಸಮರ್ಪಿಸುವುದಕ್ಕೆ ಇನ್ನೂರು. ಅರ್ಧ ಘಂಟೆಯ ಸೇವೆಗೆ ಸಾವಿರ ರೂಪಾಯಿ – ಇವೇ ಮುಂತಾದ ವ್ಯವಹಾರದ ಮಾತುಗಳಿಂದ ನೀಚರು ಭಗವಂತನನ್ನು ವೇಶ್ಯೆಯಾಗಿ ಮಾಡಿಬಿಟ್ಟಿದ್ದಾರೆ!)
ಇಲ್ಲಿಯ ಮೊನಚು ಯಾವ ನಾರಾಚಕ್ಕೂ ಇಲ್ಲ! ಸಮಾಜಜೀವನದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಪಾತತಃ ಆಪ್ಯಾಯನವೆನಿಸದ ಇಂಥ ಕಟೂಕ್ತಿಗಳು ನೆರವಾಗುತ್ತವೆ.
ಹಣವು ಹೀಗೆ ಎಲ್ಲೆಲ್ಲೂ ತಾಂಡವಿಸುತ್ತಿರುವಾಗ ಅದಕ್ಕೆ ಹೋಲಿಕೆಯಾಗಿ ಕೊಡಲು ಬ್ರಹ್ಮವಸ್ತುವನ್ನು ಬಿಟ್ಟರೆ ಬೇರೆ ಯಾವುದೂ ಸಮಂಜಸವಾಗುವುದಿಲ್ಲ. ಈ ಕಲ್ಪನೆಯನ್ನೇ ಬಳಸಿಕೊಂಡು ಅರ್ಜುನವಾಡ್ಕರ್ ಅವರು ಭರ್ತೃಹರಿಯ ಅತ್ಯುಜ್ಜ್ವಲಪದ್ಯಗಳಲ್ಲಿ ಒಂದಾದ “ಮಾತರ್ಮೇದಿನಿ ತಾತ ಮಾರುತ...” ಎಂಬುದನ್ನು ಅದ್ಭುತವಾಗಿ ಅಣಕಿಸಿದ್ದಾರೆ:
ಮಾತರ್ಮಾನವತೇ ಪಿತಃ ಪಶುಪತೇ ಭ್ರಾತಃ ಸ್ವಧರ್ಮ ಪ್ರಿಯೇ
ಲಜ್ಜೇ ಗೇಹಿನಿ ಪುತ್ರ ಧೈರ್ಯ ದುಹಿತರ್ಭೂತಾನುಕಂಪೇ ಕ್ಷಮೇ |
ಶಾಸ್ತ್ರಾದೇಶ ಸಖೇ ನಮೋऽಸ್ತು ಸಕಲಾನಾಮಂತ್ರಯೇ ಸ್ವಸ್ತಿ ವೋ
ವ್ಯುಚ್ಛಿನ್ನಾಖಿಲಬಂಧನಃ ಪರಮಿತೋ ಲೀಯೇ ಧನಬ್ರಹ್ಮಣಿ ||
(ಅಮ್ಮಾ ಮಾನವತೆಯೇ! ಅಪ್ಪಾ ಪಶುಪತಿಯೇ! ಅಣ್ಣಾ ಸ್ವಧರ್ಮವೇ! ಮಡದಿ ನಾಚಿಕೆಯೇ! ಪುತ್ರ ಧೈರ್ಯವೇ! ಪುತ್ರಿ ಅನುಕಂಪೆಯೇ! ಕ್ಷಮೆಯೇ! ಗೆಳೆಯಾ ಶಾಸ್ತ್ರೋಪದೇಶವೇ! – ನಿಮಗೆಲ್ಲರಿಗೂ ಒಳ್ಳೆಯದಾಗಲಿ. ನಾನು ನಿಮಗೆಲ್ಲ ಕೊನೆಯ ಬಾರಿ ನಮಿಸಿ ತೆರಳುತ್ತಿದ್ದೇನೆ. ಎಲ್ಲ ಬಂಧನಗಳನ್ನೂ ಕಡಿದುಕೊಂಡು ಇದೀಗ ಧನಬ್ರಹ್ಮದಲ್ಲಿ ಲೀನವಾಗಲಿರುವೆ!)
ಇಲ್ಲಿರುವ ಸೂಚನೆ ಸ್ಪಷ್ಟ: ಹುಚ್ಚುಹಿಡಿದಂತೆ ಹಣದ ಹಿಂದೆ ಓಡಲು ಮೊದಲು ಮಾನವತೆ, ಸ್ವಧರ್ಮ, ನಾಚಿಕೆ, ಅನುಕಂಪ, ದಯೆ, ಶಾಸ್ತ್ರಪಾಲನೆ ಮುಂತಾದ ಎಲ್ಲ ಸುಗುಣಗಳನ್ನೂ ಬಿಟ್ಟುಬಿಡಬೇಕು.
ವಿದ್ಯೆಯ ವಿಡಂಬನೆ
ಸ್ಕೂಲು-ಕಾಲೇಜುಗಳಲ್ಲಿ ಅನುದಿನವೂ ಕಂಡುಬರುವ ದೃಶ್ಯವನ್ನು ಮುಂದಿನ ಪದ್ಯ ರಮ್ಯವಾಗಿ ಚಿತ್ರಿಸಿದೆ:
ವರ್ಗೇ ಕರ್ಗಜಸಾಯಕೈಃ ಪ್ರಹರಣಂ ಕನ್ಯಾಜನತ್ರಾಸನಂ
ತನ್ನಿರ್ವಾಚನಯುದ್ಧಕೌಶಲಮಪಿ ಕ್ರೀಡಾಂಗಣೇ ಹಿಂಡನಮ್ |
ಕ್ಯಾಂಟೀನೇ ವಸತಿಃ ಸಿನೇಗೃಹರತಿಸ್ತದ್ದೀಪಿಕಾಚರ್ವಣಂ
ಕ್ಲಾಸೋಪಾಸನಮಂತತೋ ವಿಫಲತಾ ವಿದ್ಯಾರ್ಥಿರಾಮಾಯಣಮ್ ||
(ಕ್ಲಾಸಿನಲ್ಲಿ ಕಾಗದದ ಬಾಣಗಳಿಂದ ಹೊಡೆದಾಡುವುದು, ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಚುನಾವಣೆಯ ಚಕಮಕಿಯಲ್ಲಿ ಸೆಣಸುವುದು, ಮೈದಾನದಲ್ಲಿ ಅಲೆದಾಡುವುದು, ಕ್ಯಾಂಟೀನಿನಲ್ಲಿ ಠಿಕಾಣಿ ಊರುವುದು, ಸಿನಿಮಾ ಟಾಕೀಸುಗಳತ್ತ ಠಳಾಯಿಸುವುದು, ಗೈಡುಗಳನ್ನು ಓದುವುದು, ಕೊನೆಗೊಮ್ಮೆ ಪಾಠಕ್ಕೆ ಹಾಜರಾಗಿ ಪರೀಕ್ಷೆಯಲ್ಲಿ ವಿಫಲವಾಗುವುದು – ಇದಿಷ್ಟೇ ವಿದ್ಯಾರ್ಥಿರಾಮಾಯಣ.)
ಇದು ಪೋಲಿಹುಡುಗರ ಪಾಡಾಯಿತು. ಎಲ್ಲರೂ ಹೀಗಿರುವುದಿಲ್ಲವಲ್ಲ? ಉತ್ತಮವಿದ್ಯಾರ್ಥಿಗಳ ಜಾಡೇನು? ಎಂದು ಕೇಳುವಿರಾ? ಅಂಥವರನ್ನು ಅಧ್ಯಾಪಕರು ಹೇಗೆ ನಡೆಸಿಕೊಳ್ಳುವರೆಂದು ನೀವೇ ನೋಡಿ:
ಶುದ್ಧಂ ವತ್ಸ ತವೋತ್ತರಂ ನಯನಯೋಃ ಪ್ರೀತಿಂ ಕರೋತ್ಯಕ್ಷರಂ
ಪೂರ್ಣಂ ಚಾಪಿ ವಿವೇಚನಂ ನವಮಪಿ ಕ್ವಾಪ್ಯಸ್ತಿ ಸಂಯೋಜನಮ್ |
ಏತಾವದ್ಧಿ ಪುರಾ ಮಯಾಪಿ ಲಿಖಿತಂ ನಾಸೀತ್ಪರೀಕ್ಷಾರ್ಥಿನಾ
ಸಿದ್ಧಿರ್ಯಾ ಹಿ ಮಯಾರ್ಜಿತಾ ತದಧಿಕಾಂ ಮತ್ತಃ ಕಥಂ ಲಪ್ಸ್ಯಸೇ? ||
(“ಮಗೂ, ನೀನು ಬರೆದಿರುವ ಉತ್ತರ ಉತ್ತಮವಾಗಿದೆ. ನಿನ್ನ ಕೈಬರೆಹವನ್ನು ಓದುವುದೇ ಕಣ್ಣಿಗೆ ಹಬ್ಬ. ವಿಷಯವನ್ನು ಎಲ್ಲ ಆಯಾಮಗಳಿಂದಲೂ ವಿವೇಚಿಸಿದ್ದೀಯ; ಅಲ್ಲಲ್ಲಿ ಹೊಸ ಹೊಳಹುಗಳೂ ಇವೆ. ವಿದ್ಯಾರ್ಥಿಯಾಗಿದ್ದಾಗ ನಾನೂ ಇಷ್ಟು ಸೊಗಸಾದ ಉತ್ತರ ಬರೆದಿರಲಿಲ್ಲ. ಆದರೆ ಆಗ ನಾನು ಪಡೆದ ಅಂಕಗಳಿಗಿಂತ ಹೆಚ್ಚನ್ನು ನಿನಗೆ ಹೇಗೆ ಕೊಡಲಿ?”)
ಇಂಥ ಅಧ್ಯಾಪಕರಿದ್ದರೆ ಉತ್ಕೃಷ್ಟತೆಗೆ ಎಲ್ಲಿಂದ ಬೆಲೆ ಬರುವುದು? ನಮ್ಮ ಸಮಾಜದಲ್ಲಿ ಅಧಮತೆಗೇ ಆದ್ಯತೆ ಸಂದಿರುವುದಕ್ಕೆ ಇಂಥವರೂ ಒಂದು ಕಾರಣ.
ಸಾಂಪ್ರದಾಯಿಕರ ಸ್ಥಿತಿ
ಸಂಪ್ರದಾಯವನ್ನು ಅನುಸರಿಸುವವರು ಆಧುನಿಕಜಗತ್ತಿನಲ್ಲಿ ಹಲವು ಬಗೆಯ ಕ್ಲೇಶಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ವಿವರಿಸಲು ಶಿಖಾಧಾರಿಯಾದ ಹುಡುಗನೊಬ್ಬ ಅನುಭವಿಸುವ ಅವಮಾನವನ್ನು ಕವಿ ವರ್ಣಿಸಿದ್ದಾರೆ:
‘ವತ್ಸ ಕ್ರಂದಸಿ?’ ‘ತಾಡಿತೋऽಸ್ಮಿ ವಿಶಿಖೈರ್ಮಿತ್ರೈಃ ಶಿಖಾವಾನಹಂ’
‘ಜ್ಞಾಪ್ಯಂತಾಂ ಗುರವೋ’ ‘ನ ತೇऽಪಿ ಶಿಖಿನಾಮಾಕರ್ಣಯಂತಿ ಧ್ವನಿಮ್’ |
‘ತತ್ತಾತಂ ವ್ರಜ’ ‘ಹಾ ಹತೋऽಸ್ಮಿ ಕುರುತೇ ನಾತ್ಮೀಯತಾಂ ಮಯ್ಯಸೌ’
‘ಮಾತಾ ತೇऽಸ್ತಿ’ ‘ಪತಿವ್ರತಾ ಕಿಮಬಲಾ ಸಾ ತಾತಮುಲ್ಲಂಘಯೇತ್?’ ||
(“ಮಗೂ, ಏಕೆ ಅಳುತ್ತಿರುವೆ?” “ನಾನು ಶಿಖೆ ಬಿಟ್ಟಿರುವುದರಿಂದ ಸ್ನೇಹಿತರು ನನ್ನನ್ನು ಹಿಡಿದು ಬಡಿದರು.” “ಇದನ್ನು ಈ ಕೂಡಲೆ ಗುರುಗಳಿಗೆ ತಿಳಿಸು!” “ಶಿಖೆ ಬಿಟ್ಟ ನಮ್ಮಂಥವರ ಮಾತನ್ನು ಅವರೂ ಕೇಳುವುದಿಲ್ಲ.” “ಹಾಗಿದ್ದರೆ ಅಪ್ಪನಿಗೆ ಹೇಳು.” “ಅಯ್ಯೋ, ಅಪ್ಪ ನನ್ನನ್ನು ಪ್ರೀತಿಯಿಂದ ಕಾಣುವುದೇ ಇಲ್ಲ!” “ನಿಮ್ಮ ತಾಯಿ ಇರುವರೋ?” “ಅಶಕ್ತಳೂ ಪತಿವ್ರತೆಯೂ ಆದ ಆಕೆ ತಂದೆಯ ಮಾತನ್ನು ಹೇಗೆ ತಾನೆ ಮೀರುತ್ತಾಳೆ?”)
ಧಾರ್ಮಿಕ ಆಚಾರಗಳನ್ನು ಗೇಲಿ ಮಾಡುವುದರಲ್ಲಿಯೇ ತಾತ್ಪರ್ಯವುಳ್ಳ ಜನರು ಎಷ್ಟು ಹೀನರೋ ಸಂಪ್ರದಾಯಪಾಲನೆಯ ಹೆಸರಿನಲ್ಲಿ ಭಾವನೆಗಳನ್ನು ಬತ್ತಿಸಿಕೊಂಡು ಅಮಾನುಷವೆನಿಸುವಷ್ಟು ಶುಷ್ಕರಾದ ‘ಧಾರ್ಮಿಕ’ರೂ ಹೀನರಲ್ಲವೇ?
ತುಂಟರ ಬಯಕೆ
ಸಾಂಪ್ರದಾಯಿಕರ ಪರಿಯನ್ನು ಪರಿಶೀಲಿಸಿದ್ದಾಯಿತು. ಇನ್ನು ತುಂಟಹುಡುಗರು ದೊಡ್ಡವರಾದ ಮೇಲೆ ತಮ್ಮ ತಾರುಣ್ಯವನ್ನು ಹೇಗೆ ನೆನೆಯುತ್ತಾರೆಂದು ನೋಡೋಣ:
ಚೌಪಾಟೀಪುಲಿನೇऽಭಿನೀಯ ಸುಚಿರಂ ಶಂಬೂಕಕಂಬುಗ್ರಹಂ
ಸೇತುಂ ಸೈಕತಮಾರಚಯ್ಯ ಸುಭಗಾ ಜಂಘಾಶ್ಚ ನೇತ್ರೈಃ ಪಿಬನ್ |
ಸಾನಂದಂ ನಗರೀಮಹೋದರರಿಚಃ ಪಾರ್ಶ್ವೇ ಪ್ರಣಾಲ್ಯಾಃ ಸ್ಥಿತಃ
ಖಾದನ್ ಭೇಲಪುರೀಂ ಪುರೋ ಬಲಿಭುಜಾಂ ನೇಷ್ಯೇऽಪರಾಹ್ಣಾನ್ ಕದಾ ||
(ಮುಂಬಯಿಯ ‘ಚೌಪಾಟಿ’ ಸಮುದ್ರತಟದಲ್ಲಿ ಮರಳ ಸೇತುವೆಯನ್ನು ನಿರ್ಮಿಸುತ್ತ, ಕವಡೆಗಳನ್ನೂ ಕಪ್ಪೆಚಿಪ್ಪುಗಳನ್ನೂ ಹೆಕ್ಕುವಂತೆ ನಟಿಸಿ ಹುಡುಗಿಯರ ಹಿಂಗಾಲುಗಳನ್ನು ಕಣ್ಣಿಂದ ಹೀರುತ್ತ, ಮಧ್ಯಾಹ್ನದ ವೇಳೆ ಆನಂದವಾಗಿ ದೊಡ್ಡಮೋರಿಯ ಪಕ್ಕದಲ್ಲಿ ನಿಂತು ಸುತ್ತುವರಿದ ಕಾಗೆಗಳೆದುರು ಮತ್ತೆಂದು ಭೇಲಪುರಿಯನ್ನು ತಿನ್ನುವೆನೋ!)
ಇದು ಭರ್ತೃಹರಿ ವೈರಾಗ್ಯದ ಶಿಖರಾಗ್ರದಲ್ಲಿ ನಿಂತು ನುಡಿದ “ಕದಾ ವಾರಾಣಸ್ಯಾಮ್ ಅಮರತಟಿನೀರೋಧಸಿ ವಸನ್...” ಎಂಬ ಪದ್ಯದ ಅಣಕು. ಮೂಲದಲ್ಲಿಯ ಉದಾತ್ತತೆಯು ಕಂಟಕಾರ್ಜುನರ ಕೈಗೆ ಸಿಲುಕಿ ಹೇಳಹೆಸರಿಲ್ಲದಂತೆ ಆಗಿದೆ.
ಸಂಸ್ಕೃತಪಂಡಿತರ ಪಾಡು
ತನ್ನ ವೃತ್ತಿಯನ್ನು, ತನ್ನ ಜನರನ್ನು, ಕೊನೆಗೆ ತನ್ನನ್ನು ಗೇಲಿ ಮಾಡಿ ಮಾಡಿಸಿಕೊಳ್ಳಬಲ್ಲವನೇ ನಿಜವಾದ ಹಾಸ್ಯರಸಿಕ. ನಮ್ಮ ಕಂಟಕಾರ್ಜುನರು ಇಂಥವರು. ಸ್ವಯಂ ಸಂಸ್ಕೃತವಿದ್ವಾಂಸರಾದ ಅವರಿಗೆ ಸಾಂಪ್ರದಾಯಿಕಪಂಡಿತರ ಕೂಪಮಂಡೂಕತನ ಚೆನ್ನಾಗಿ ತಿಳಿದಿತ್ತು. ಅವರು ಹೇಳುತ್ತಾರೆ:
ಜಾಪಾನೇಷ್ವಭವತ್ಪುರಾ ಬತ ಬತ ಸ್ಫೋಟಃ ಕ್ಷಿಪನ್ ರೋದಸೀಂ
ಕಶ್ಮೀರೇಷ್ವಭವದ್ (ಭವಿಷ್ಯತಿ ಪುನಃ) ಮುಂಬಾನಗರ್ಯಾಮಪಿ |
ಗೋವಾಯಾಮಚಿರಾದಿತಃ ಪುನರಭೂದೌರಂಗಬಾದೋದರೇ
ಲೋಕಃ ಸೀದತಿ ಶಾಬ್ದಿಕಃ ಪುನರಸೌ ಹರ್ಷಾನ್ನರೀನೃತ್ಯತೇ ||
(ಹಿಂದೆ ಜಪಾನಿನಲ್ಲಿ ಆದ ‘ಸ್ಫೋಟ’ ಲೋಕವನ್ನೆಲ್ಲ ಕಂಪಿಸಿತು. ಅದೇ ತೆರನಾದ ಸ್ಫೋಟಗಳು ಕಾಶ್ಮೀರದಲ್ಲೂ ಆದವು [ಆಗುತ್ತವೆ ಕೂಡ]. ಇವಕ್ಕೆ ಮುಂಬಯಿ ನಗರವೂ ಹೊರತಲ್ಲ. ಗೋವಾ, ಔರಂಗಾಬಾದ್ ಮುಂತಾದ ಸ್ಥಳಗಳಿಗೂ ಅದರ ಬಿಸಿ ತಟ್ಟಿದೆ. ಇದರಿಂದ ಲೋಕವೆಲ್ಲ ಪರಿತಪಿಸುತ್ತಿರುವಾಗ ವ್ಯಾಕರಣವಿದ್ವಾಂಸನು ಮಾತ್ರ ಸಂತೋಷದಿಂದ ನರ್ತಿಸುತ್ತಾನೆ!)
ನಮ್ಮ ಹೆಚ್ಚಿನ ಮಂದಿ ವ್ಯಾಕರಣವಿದ್ವಾಂಸರಿಗೆ ‘ಸ್ಫೋಟ’ ಎಂದರೆ ಭೂಮಿಯನ್ನು ಬೆಚ್ಚಿಬೀಳಿಸುವ ಆಸ್ಫೋಟವಲ್ಲ; ಭರ್ತೃಹರಿಯೇ ಮೊದಲಾದವರು ಪ್ರತಿಪಾದಿಸಿದ ‘ಸ್ಫೋಟ’ವಾದ! (ವ್ಯಾಕರಣದ ಪ್ರಕಾರ ಸ್ಫೋಟವೆಂದರೆ ಒಂದು ಶಬ್ದತತ್ತ್ವ. ಅದರ ಮೂಲಕವೇ ಅರ್ಥವು ಸ್ಫುಟವಾಗಿ ತಿಳಿಯುವುದು.) ಹೀಗೆ ಹೊರಗಿನ ಪ್ರಪಂಚದ ಆಗು-ಹೋಗುಗಳಿಗೆ ಕುರುಡಾಗಿರುವುದೇ ಪಾಂಡಿತ್ಯದ ಕುರುಹಾದರೆ ಗತಿಯೇನು!
ಮುಂದಿನ ಪದ್ಯ ಸಂಸ್ಕೃತಪಂಡಿತರ ಹುರುಳಿಲ್ಲದಿದ್ದರೂ ಆಡಂಬರದ ಆಟಾಟೋಪವನ್ನು ವರ್ಣಿಸುತ್ತದೆ:
‘ಕಸ್ತ್ವಂ?’ ‘ಸಂಸ್ಕೃತಪಂಡಿತಃ’ ‘ಕಿಮಧುನಾ ಗ್ರಥ್ನಾಸಿ?’ ‘ಟೀಕಾಂ ನವಾಂ’
‘ಗ್ರಂಥೇ ಕಸ್ಯ?’ ‘ಮಮೈವ’ ‘ಕುತ್ರ ಸ’ ‘ಸಖೇ ಪಶ್ಚಾತ್ಸ ಲೇಖಿಷ್ಯತೇ’ |
‘ಧಿಙ್ನೇಪಥ್ಯಮನಂಗಮ್’ ‘ಅಂಗ ವಿದಿತಃ ಪಂಥಾ ಬುಧಾನಾಂ ನ ತೇ
ಯೇಷಾಂ ಶುಷ್ಕತೃಣಾಯಿತಾತ್ಮವಪುಷಾಂ ನೇಪಥ್ಯಮೇವಾಖಿಲಮ್’ ||
(“ಯಾರು ನೀವು?” “ನಾನೊಬ್ಬ ಸಂಸ್ಕೃತಪಂಡಿತ.” “ಈಗ ಏನು ಬರೆಯುತ್ತಿರುವಿರಿ?” “ಒಂದು ಹೊಸ ವ್ಯಾಖ್ಯಾನ ಬರೆಯುತ್ತಿದ್ದೇನೆ.” “ಯಾರ ಗ್ರಂಥದ ಮೇಲೆ ವ್ಯಾಖ್ಯಾನ?” “ನನ್ನದೇ.” “ಯಾವುದು ಆ ಗ್ರಂಥ?” “ಅದನ್ನಿನ್ನೂ ಬರೆದಿಲ್ಲ.” “ಅರೇ, ಇದೇನಿದು! ದೇಹವೇ ಇಲ್ಲದಿದ್ದಾಗ ಬಟ್ಟೆ ತೊಡಿಸಿದಂತಾಯಿತಲ್ಲಾ, ಛೇ!” “ನಿನಗೆ ವಿದ್ವಾಂಸರ ಜಾಡು ತಿಳಿದಿಲ್ಲ. ಯಾರಿಗೆ ದೇಹವೂ ಆತ್ಮವೂ ಒಣಹುಲ್ಲಿಗೆ ಸಮವೋ ಅಂಥವರಿಗೆ ಎಲ್ಲವೂ ಬರಿಯ ಬಟ್ಟೆಯೇ!)
ಹೀಗೆ ವಿದ್ವಾಂಸರನ್ನು ಹೀಯಾಳಿಸುವುದೇ ಅರ್ಜುನವಾಡ್ಕರ್ ಅವರ ಉದ್ದೇಶವಲ್ಲ. ಸಂಸ್ಕೃತಜ್ಞರು ಅನುಭವಿಸುವ ಕಷ್ಟಪರಂಪರೆಗಳ ಅರಿವು ಅವರಿಗೆ ಚೆನ್ನಾಗಿದೆ. ಲೇಖಕರನ್ನು ಕುರಿತು ಅವರು ಹೇಳುತ್ತಾರೆ:
ಕಲ್ಯಾಣೇ ಯದಿ ತೇ ಸ್ಪೃಹಾಸ್ತಿ ಸುಮತೇ ಮಾ ಪುಸ್ತಕಂ ಲಿಖ್ಯತಾಂ
ಲೇಖ್ಯಂ ಚೇಚ್ಛಿಶುವಾಙ್ಮಯಂ ಲಿಖ ಸಖೇ ಶಾಸ್ತ್ರೇ ರುಚಿಸ್ತ್ಯಜ್ಯತಾಮ್ |
ಶಾಸ್ತ್ರೇ ಸಾಹಸಿಕೋऽಪಿ ಮಾ ಜಡಮತೇ ಗ್ರಂಥಂ ಬೃಹಂತಂ ಕುರು
ತತ್ರಾಪಿ ಸ್ಖಲಿತೋऽಸಿ ಚೇದ್ಧತಮತೇ ಭಿಕ್ಷಾಟನಂ ಸ್ವೀಕುರು ||
(ಓ ಜಾಣ, ಇಲ್ಲಿ ಕೇಳು. ಉದ್ಧಾರವಾಗುವುದರಲ್ಲಿ ನಿನಗೆ ಆಸಕ್ತಿಯಿದ್ದರೆ ಪುಸ್ತಕ ಮಾತ್ರ ಬರೆಯಬೇಡ. ಬರೆಯುವುದೇ ಆದರೆ ಮಕ್ಕಳ ಪುಸ್ತಕಗಳನ್ನು ಬರೆ. ಶಾಸ್ತ್ರದಲ್ಲಿ ಕುತೂಹಲವನ್ನು ಕೈಬಿಟ್ಟುಬಿಡು. ಒಂದು ಪಕ್ಷ ಶಾಸ್ತ್ರವನ್ನು ಕುರಿತೇ ಬರೆಯುವೆಯಾದರೆ—ನಿನ್ನ ಪೆದ್ದುತನಕ್ಕೆ ಏನು ಹೇಳುವುದು!—ಪುಸ್ತಕವನ್ನು ದೊಡ್ಡದಾಗಿಸಬೇಡ. ಅದರಲ್ಲಿಯೂ ಎಡುವಿದೆಯೆಂದರೆ ನಿನಗಿನ್ನು ಭವಿಷ್ಯವಿಲ್ಲ; ಭಿಕ್ಷೆ ಬೇಡುವುದಕ್ಕೆ ಮೊದಲುಮಾಡು!)
ಹೀಗೆ ಎಲ್ಲವನ್ನೂ ವಿಶ್ಲೇಷಕದೃಷ್ಟಿಯಿಂದ ನೋಡುವವರು ಭಾವಾರ್ದ್ರವಾದ ಸಾಹಿತ್ಯ ರಚಿಸಬಲ್ಲರೇ? ಬಲು ಚೆಲುವಾಗಿ ರಚಿಸಬಲ್ಲರು. ಇದಕ್ಕೆ ಮುಂದಿನ ಕೆಲವು ಪದ್ಯಗಳೇ ನಿದರ್ಶನ.
ಮಕ್ಕಳ ಮುಗ್ಧತೆ
‘ಕಂಟಕಾಂಜಲಿ’ಯ ಮುಳ್ಳುಗಳಿಂದ ಚುಚ್ಚಿಸಿಕೊಂಡು ನೊಂದವರನ್ನು ಸಾಂತ್ವಯಿಸಲೋ ಎಂಬಂತೆ ಅರ್ಜುನವಾಡ್ಕರ್ ಅವರು ಹಲಕೆಲವು ಸುಂದರವಾದ ಅಕುಟಿಲಕವಿತೆಗಳನ್ನು ಈ ಕಾವ್ಯದಲ್ಲಿ ಸೇರಿಸಿದ್ದಾರೆ. ಇಲ್ಲಿರುವುದೆಲ್ಲ ಪ್ರೇಯೋರಸದ ಪ್ರವಾಹ:
ಜಾತಾ ಜಾತು ವಿಲಾಪ್ಯ ವಕ್ಷಸಿ ದೃಢಂ ಪಿತ್ರಾ ಭೃಶಂ ಚುಂಬಿತಾ
ದಷ್ಟಾ ಕೋಮಲಯೋಃ ಕಪೋಲಫಲಯೋಃ ಶಲ್ಯೋಪಮೈಃ ಶ್ಮಶ್ರುಭಿಃ |
ಮಾತುಃ ಸಂಸ್ಪೃಶತೀ ಮುಖಂ ಮೃದು ಸುಖಂ ಸಭ್ರೂವಿಭಂಗಾಬ್ರವೀತ್
‘ತಾತಂ ತಾಲಯ’ ನ ತ್ವಬುದ್ಧ ಜನನೀಹಾಸಸ್ಯ ಮುಗ್ಧಾಶಯಮ್ ||
(ಅಳುತ್ತಿದ್ದ ಮಗುವನ್ನು ತಂದೆ ಎದೆಗಪ್ಪಿಕೊಂಡು ಮುದ್ದಿಸಿದ. ಅವನ ಹರಿತವಾದ ಮೀಸೆ ಮಗುವಿನ ಕೋಮಲವಾದ ಕೆನ್ನೆಗಳನ್ನು ತಿವಿಯಿತು. ಆಗ ತಾಯಿಯ ಮೃದುಮುಖವನ್ನು ಸುಖವಾಗಿ ಸವರುತ್ತಿದ್ದ ಮಗು ತನ್ನ ಹುಬ್ಬನ್ನು ಗಂಟುಮಾಡಿ, “ಅಮ್ಮಾ, ಅಪ್ಪನಿಗೆ ಒಂದು ಕೊಡು” ಎಂದಳು. ಅಮ್ಮನ ಮಂದಹಾಸದ ಕಾರಣ ಮಾತ್ರ ಆಕೆಗೆ ತಿಳಿಯಲಿಲ್ಲ.)
‘ಯಕ್ತಾಂ ತಾತ ಫುಗಾಂ ಗಿಹಾನ ಬಯಪೀಮಾಂಬ್ಯತ್ಯ ಮಾಮಾನಯ
ತ್ಯೋಕಂ ಪಾಥಯ ನೂತನಂ ಕಥಯ ವಾ ಕ್ಯುತ್ನತ್ಯ ಮಯ್ಯಂ ಕಥಾಮ್ |
ತುಯ್ಯಂ ದೇವ ನಮಚ್ಕಯೋಮಿ ತುಮತೀ ತಾತಸ್ಯ ಮೇ ದೀಯತಾಂ’
ಮಾ ಭೂತ್ಸಾಧುಪದಪ್ರಯೊಗಸುಕೃತಂ ಜಾತೇ ಪ್ರಿಯಂ ತೇ ವಚಃ ||
(“ಅಪ್ಪಾ, ನಂಗೆ ಕೆಂಪು ಬಲೂನ್ ತೆಕ್ಕೊಲು. ನಂಗೇ ಮಾವಿನ ಬಪ್ಫಿ ಬೇಕು. ಹೊತ ತ್ಯೋಕ ಹೇಕೊಳು! ನಂಗೆ ಕಿಷ್ಷನ ಕತೆ ಹೇಳು. ಮಾಮಿ, ನಾನು ನಿಂಗೆ ಜೋತ ಮಾತ್ತೀನಿ; ಅಪ್ಪಂಗೆ ಒಳ್ಳೇ ಬುದ್ದಿ ಕೊಳೂ.” ಮಗಳೇ ನಿನ್ನ ಮಾತೇ ಚಂದ; ಸಾಧುಪದಗಳ ಪ್ರಯೋಗದಿಂದ ಲಭಿಸುವ ಯಾವ ಸುಕೃತವೂ ನನಗೆ ಬೇಡ.)
ಕಾಳಿದಾಸನೆನ್ನುವಂತೆ ಮಕ್ಕಳದು “ಅವ್ಯಕ್ತ-ವರ್ಣ-ರಮಣೀಯ-ವಚಃಪ್ರವೃತ್ತಿ”. ಅದನ್ನು ಅವಲಂಬಿಸಿ ಪದ್ಯ ರಚಿಸಿರುವುದು ಏಕಕಾಲದಲ್ಲಿ ಕವಿಯ ಅಕೃತ್ರಿಮವಾದ ಭಾವಶ್ರೀಮಂತಿಕೆಗೂ ಭಾಷೆಯ ಮೇಲಣ ಹಿರಿದಾದ ಹಿಡಿತಕ್ಕೂ ಸಾಕ್ಷಿಯಾಗಿದೆ.
ಸಾಯಂ ದ್ಯೋತಿತದೀಪವಂದನವಿಧೇರೂರ್ಧ್ವಂ ಜನನ್ಯೋದಿತಂ
‘ತಾತಾದೀನಧುನಾ ನಮಸ್ಕುರು ಸುತೇ’ ವತ್ಸಾ ಚ ಭಕ್ತ್ಯಾನಮತ್ |
ಅಂಬಾಂ ತಾತಮಥಾನಯೋಃ ಪಿತೃಗಣಂ ಭ್ರಾತೄನ್ ಸ್ವಸೄಃ ಕಿಂಕರಾನ್
ಮಾರ್ಜಾರಂ ಶುಕಮಪ್ಯಹೋ ಸಮದೃಶೇ ಬಾಲ್ಯಾಯ ತಸ್ಮೈ ನಮಃ ||
(ಸಂಜೆ ದೀಪ ಬೆಳಗಿ ಅದಕ್ಕೆ ವಂದಿಸಿದ ಬಳಿಕ ತಾಯಿ ಹೇಳಿದಳು, “ಪುಟ್ಟಿ, ಅಪ್ಪ ತಾತ ಎಲ್ಲರಿಗೂ ನಮಸ್ಕಾರ ಮಾಡು.” ಅದನ್ನು ಅನುಸರಿಸುತ್ತ ತಾಯಿಗೆ, ತಂದೆಗೆ, ಅಜ್ಜ-ಅಜ್ಜಿಯರಿಗೆ, ಅಣ್ಣ-ತಂಗಿಯರಿಗೆ, ಸೇವಕರಿಗೆ, ಕೊನೆಗೆ ಸಾಕಿದ ಬೆಕ್ಕು-ಗಿಳಿಗಳಿಗೂ ಮಗು ಭಕ್ತಿಯಿಂದ ನಮಸ್ಕರಿಸಿತು. ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಐಕ್ಯವನ್ನು ಕಾಣುವ ಬಾಲ್ಯಕ್ಕೆ ನಮಸ್ಕಾರ!)
ಭಗವದ್ಗೀತೆಯು ಹೇಳುವ “ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ” ಎಂಬುದಕ್ಕೆ ಇದಕ್ಕಿಂತ ಸೊಗಸಾದ ನಿದರ್ಶನ ಬೇಕೇ? ಹೌದು, ಮಕ್ಕಳೂ ಪಂಡಿತರಾಗಬಲ್ಲರು!
ಸಂಸ್ಕೃತಭಾರತೀ
ನಮ್ಮ ಕಾಲಕ್ಕೂ ಎಲ್ಲ ಕಾಲಕ್ಕೂ ಸಂಸ್ಕೃತಭಾಷೆಯನ್ನು ಹೇಗೆ ಪರಿಭಾವಿಸಬೇಕೆಂದು ಅರ್ಜುನವಾಡ್ಕರ್ ಅವರು ತಿಳಿಸಿರುವ ಪದ್ಯಗಳನ್ನು ಉಲ್ಲೇಖಿಸಿ ಈ ಲೇಖನವನ್ನು ಸಂಪನ್ನಗೊಳಿಸಬಹುದು:
ಸರ್ವಾಸಾಂ ಜನನೀ ಗಿರಾಂ ವಿಬುಧಗೀರ್ನೋ ವಾ ನ ಜಾನೀಮಹೇ
ತಸ್ಯಾಮೇವ ಹಿ ಸಂಸ್ಕೃತಿಃ ಶ್ವಸಿತಿ ವಾ ನೋ ವಾ ನ ಜಾನೀಮಹೇ |
ರಾಷ್ಟ್ರಸ್ಯಾಭ್ಯುದಯಸ್ತಯೈವ ಭವಿತಾ ನೋ ವಾ ನ ಜಾನೀಮಹೇ
ವಾಲ್ಮೀಕೌ ತು ದೃಢಂ ರತಾ ಮತಿರಿತಿ ಪ್ರೀಣಾತಿ ನಃ ಸಂಸ್ಕೃತಮ್ ||
(ಸಂಸ್ಕೃತಭಾಷೆಯು ಬೇರೆಲ್ಲ ಭಾಷೆಗಳ ಜನನಿಯೇ? ನಮಗದು ತಿಳಿಯದು. ಅದರಲ್ಲಿಯೇ ಏನು ನಮ್ಮ ಸಂಸ್ಕೃತಿ ಉಸಿರಾಡುತ್ತಿರುವುದು? ನಮಗದು ತಿಳಿಯದು. ಅದರಿಂದ ನಮ್ಮ ದೇಶದ ಅಭ್ಯುದಯ ಸಾಧ್ಯವೇ? ನಮಗದು ತಿಳಿಯದು. ವಾಲ್ಮೀಕಿಯಲ್ಲಿ ಮಿಗಿಲಾದ ಪ್ರೀತಿಯುಂಟೆಂಬ ಒಂದೇ ಕಾರಣಕ್ಕೆ ನಮಗೆ ಸಂಸ್ಕೃತ ಸೊಗಸೆನಿಸುತ್ತದೆ, ಇಷ್ಟವಾಗುತ್ತದೆ.)
ಸ್ಪೃಷ್ಟಂ ಸ್ತ್ರೀವಿಟಚೇಟಶೂದ್ರಯವನೈರ್ಗೀರ್ವಾಣವಾಙ್ಮಂದಿರಂ
ಭ್ರಷ್ಟ್ರಂ ಸ್ಯಾದಿತಿ ತಾಲಯಂತ್ರಿತಮಿದಂ ಕುರ್ವಂತಿ ತೇಭ್ಯೋ ನಮಃ |
ಕಿಂ ಗಾಲೀಷು ಕಿಮರ್ಚನೇಷು ಕಿಮು ವಾ ಶಾಸ್ತ್ರೇಷು ಕಿಂ ಪ್ರೇಮಸು
ಸರ್ವೇ ಸಂಸ್ಕೃತಭಾಷಿಣೋ ಯದಿ ತದಾ ದೇವಾಯ ಕುರ್ಯಾಂ ಬಲಿಮ್ ||
(ಹೆಂಗಸರು, ಜಾರರು, ಪುಂಡರು, ಶೂದ್ರರು, ಮ್ಲೇಚ್ಛರೇ ಮೊದಲಾದವರು ಪವಿತ್ರವಾದ ಸಂಸ್ಕೃತಮಂದಿರವನ್ನು ಪ್ರವೇಶಿಸಿ ಮೈಲಿಗೆ ಮಾಡಿಬಿಡುತ್ತಾರೆಂದು ಕೆಲವರು ಅದಕ್ಕೆ ಬೀಗ ಬಡಿದಿದ್ದಾರೆ. ಅಂಥವರಿಗೆಲ್ಲ ನಮ್ಮ ದೊಡ್ಡ ನಮಸ್ಕಾರ. ಸಂಸ್ಕೃತಭಾಷೆಯನ್ನು ಬೈಗುಳಕ್ಕೆ, ಪೂಜೆಗೆ, ಶಾಸ್ತ್ರರಚನೆಗೆ, ಸರಸಸಲ್ಲಾಪಕ್ಕೆ – ಹೀಗೆ ಎಲ್ಲಕ್ಕೂ ಎಂದು ಎಲ್ಲ ಜನರೂ ಬಳಸುವಂತಾಗುವುದೋ ಆಗ ನಾನು ದೇವರಿಗೆ ನಮಿಸುತ್ತೇನೆ.)