ಸಂಸ್ಕೃತದಲ್ಲಿ ಬೆಟ್ಟವನ್ನು ಸೂಚಿಸುವ ಹಲವು ಪದಗಳಿವೆ. ಮಹೀಧ್ರ, ಶಿಖರಿ, ಅಹಾರ್ಯ, ಪರ್ವತ, ಗೋತ್ರ, ಅಚಲ, ಶಿಲೋಚ್ಚಯ ಎಂಬುವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದರೆ ಭೂಮಿಯನ್ನು ತಳೆದಿರುವುದು, ಉನ್ನತವಾದ ತುದಿಯನ್ನು ಹೊಂದಿರುವುದು, ಒಯ್ಯಲಾಗದ್ದು / ಅಪಹರಿಸಲಾಗದ್ದು, ಪೂರ್ಣವಾದುದು, ಭೂಮಿಯನ್ನು ಕಾಪಾಡುವುದು, ಸ್ಥಿರವಾದುದು, ಬಂಡೆಗಳ ಒಟ್ಟುಗೂಡು ಎಂಬ ಅರ್ಥಗಳು ಹೊರಡುತ್ತವೆ. ಬೆಟ್ಟವೆಂದೊಡನೆ ನಮ್ಮ ಮನಸ್ಸಿಗೆ ಬರುವುವಾದರೂ ಗಟ್ಟಿತನ ಮತ್ತು ಔನ್ನತ್ಯಗಳೇ ತಾನೆ? ಈ ಎಲ್ಲ ಅರ್ಥಗಳೂ ಎಸ್. ಎಲ್. ಭೈರಪ್ಪನವರಲ್ಲಿ ಸಂಗತವಾಗುತ್ತವೆ. ಅವರ ವ್ಯಕ್ತಿತ್ವವೇ ಹಾಗೆ.
ಭೈರಪ್ಪನವರು ಭೂಮೋಪಾಸಕರು; ದೊಡ್ಡದಕ್ಕೆ ಮನಸೋತವರು. ಟೊಳ್ಳು-ಪೊಳ್ಳುಗಳ ಬಗೆಗೆ ಅವರಿಗೆ ತೀರದ ಉಪೇಕ್ಷೆ. ಇಂಥವರಿಗೆ ಪರ್ವತಗಳಲ್ಲಿ ಪ್ರೀತಿಯಿರುವುದು ಸಹಜವೇ. ಅವರು ಪ್ರಾಯಶಃ ಜಗತ್ತಿನ ಪ್ರಮುಖ ಪರ್ವತಗಳನ್ನೆಲ್ಲ ಸ್ವಯಂ ಏರಿ ಅವುಗಳಲ್ಲಿ ಓಡಾಡಿ ಆನಂದಿಸಿದ್ದಾರೆ. ಅವರೇ ‘ಭಿತ್ತಿ’ಯಲ್ಲಿ ಹೇಳಿಕೊಳ್ಳುವಂತೆ ಚಿಕ್ಕ ವಯಸ್ಸಿನಲ್ಲಿ ತಮ್ಮ ಊರಿನ ಬಳಿಯಿದ್ದ ರಂಗನ ಗುಡ್ಡದ ಬಗೆಗಿನ ಆಕರ್ಷಣೆ ಮುಂದೆ ನಮ್ಮ ರಾಜ್ಯದ, ರಾಷ್ಟ್ರದ, ವಿದೇಶಗಳ ಪರ್ವತಗಳತ್ತ ಅವರನ್ನು ಸೆಳೆಯಿತು. ತಮ್ಮ ಕಲ್ಪನೆಯ ಬೆಟ್ಟ ಯಾವ ತೆರನಾದುದು, ಬೆಟ್ಟಗಳು ಹೇಗೆ ತಮ್ಮ ಪ್ರವಾಸಗಳ ಅನಿವಾರ್ಯ ಅಂಗಗಳು ಎಂಬುದನ್ನು ಹೀಗೆ ವಿವರಿಸಿದ್ದಾರೆ:
“ನನ್ನ ಕಲ್ಪನೆಯ ಗುಡ್ಡ ಬೆಟ್ಟಗಳೆಂದರೆ ಮೈಮೇಲೆ ಅರಣ್ಯವಿರಬೇಕು, ನಿರ್ಜನವಾಗಿರಬೇಕು, ಶಿಖರಗಳು ದೇವತೆಗಳು ಬಂದು ಹೋಗುವಂಥ ನಿಗೂಢವಲಯವಾಗಿರಬೇಕು. ಅಲ್ಲಿ ಒಂದು ಗುಡಿಯೋ ದೇವಸ್ಥಾನವೋ ಇದ್ದರೆ ಅಡ್ಡಿ ಇಲ್ಲ. ಆದರೆ ಊರು, ಜನವಸತಿಗಳು ಇರಬಾರದು ... ಒಂದು ಪ್ರದೇಶಕ್ಕೆ ಹೋದರೆ ಅದಕ್ಕೆ ಸೇರಿದ ಅತ್ಯಂತ ಎತ್ತರವಾದ ಗುಡ್ಡವನ್ನೋ ಬೆಟ್ಟವನ್ನೋ ಪರ್ವತವನ್ನೋ ಹತ್ತಿ ಶಿಖರ ಮುಟ್ಟಿ ಆಕಾಶದ ಹಿನ್ನೆಲೆಯಲ್ಲಿ ಸುತ್ತಲೂ ನೋಡದಿದ್ದರೆ ಆ ಪ್ರದೇಶವನ್ನು ನೋಡಿದ ಭಾವನೆಯು ನನ್ನ ಮನಸ್ಸಿನಲ್ಲಿ ಪೂರ್ಣವಾಗುವುದಿಲ್ಲ. ಯಾವ ಬೆಟ್ಟವನ್ನು ನೋಡಿದರೂ ಅದನ್ನು ಹತ್ತುವ ಆಶೆಯನ್ನು ಹತ್ತಿಕ್ಕುವುದು ನನಗೆ ಸಾಧ್ಯವಿಲ್ಲ.”[1] (ಭಿತ್ತಿ, ಪು. ೫೬೪)
ಅವರು ಬೆಟ್ಟಗಳನ್ನು ಹತ್ತುವುದು ಯಾವುದೇ ದಾಖಲೆಯನ್ನು ಮಾಡುವುದಕ್ಕಾಗಲಿ, ಮುರಿಯುವುದಕ್ಕಾಗಲಿ ಅಲ್ಲ; ಎತ್ತರವನ್ನು ಕಾಣಲು. ತಮ್ಮ ಸಮಕಾಲೀನ ಸಾಹಿತ್ಯಕ್ಷೇತ್ರದಲ್ಲಿ ಕ್ಷುದ್ರತೆಯೇ ಕುಣಿದು ಕುಪ್ಪಳಿಸುತ್ತಿದ್ದಾಗ ದೊಡ್ಡದನ್ನು ಕಾಣಲು ಭೈರಪ್ಪನವರು ಪ್ರಕೃತಿಯನ್ನೇ ಆಶ್ರಯಿಸಬೇಕಾಯಿತು ಎಂದು ತೋರುತ್ತದೆ. ಅವರ ಈ ನಿಟ್ಟಿನ ಅನುಭವವೇ ಅವರ ಕಾದಂಬರಿಗಳ ಎತ್ತರ-ಬಿತ್ತರಗಳಿಗೆ ಮೂಲ.
ಬೆಟ್ಟವು ಶಾಶ್ವತತೆಯ ಪ್ರತೀಕವೂ ಹೌದು. ಶ್ರೀರಾಮನಿಗೆ ತಾನು ಮೊದಲು ಕಂಡ ಜನಸ್ಥಾನದಲ್ಲಿ ಎಲ್ಲವೂ ಬದಲಾಗಿಹೋಗಿ ಅದರ ಗುರುತೇ ಸಿಗದಂತಾಯಿತು; ಆಗ ಹಿಂದಿನಂತೆಯೇ ಇದ್ದ ಬೆಟ್ಟಗಳನ್ನು ನೋಡಿ ಆತ ಗುರುತುಹಿಡಿದ ಎಂಬ ಮಾತು ಭವಭೂತಿಯ ‘ಉತ್ತರರಾಮಚರಿತ’ದಲ್ಲಿ ಬರುತ್ತದೆ (೨.೨೭). ಇಡಿಯ ಪರ್ವತಗಳನ್ನೇ ಒಡೆದು, ಅಗೆದು ಮಾಯಮಾಡುವ ನಮ್ಮ ಕಾಲದಲ್ಲಿ ಈ ಮಾತು ಅಲಂಕಾರಮಾತ್ರವಾಗಿ ತೋರಲು ಅವಕಾಶವಿದ್ದರೂ ಅದು ಇನ್ನೂ ಸತ್ಯದೂರವಾಗಿಲ್ಲ. ನಿಲುಗಡೆಯೇ ಇಲ್ಲದ ಬದಲಾವಣೆಗಳ ನಡುವೆ ಅಚಂಚಲತೆಯ ಕುರುಹಾಗಿ ಬೆಟ್ಟಗಳು ಸಲ್ಲುವುದಂತೂ ಸತ್ಯ. ಇದನ್ನು ಭೈರಪ್ಪನವರಿಗೆ ಹೊಂದಿಸಿ ನೋಡುವುದಾದರೆ, ಅವರು ರಸ, ಧ್ವನಿ, ಔಚಿತ್ಯ, ವಕ್ರೋಕ್ತಿಗಳಂಥ ವಿಶುದ್ಧ ಸಾಹಿತ್ಯಮೌಲ್ಯಗಳಲ್ಲಿ ನೆಲೆನಿಂತರೇ ಹೊರತು ಕಾಲಕಾಲಕ್ಕೆ ಮಾರ್ಪಡುವ ಅಸಂಖ್ಯ ‘ಥಿಯೊರಿ’ಗಳನ್ನು ಎಂದೂ ಆಶ್ರಯಿಸಲಿಲ್ಲ. ಹಾಗೆಂದು ಅವರು ಹೊಸತಿಗೆ ವಿಮುಖರೂ ಆಗಲಿಲ್ಲ. ಬೆಟ್ಟದಲ್ಲಿ ಹಳೆಯ ಹೆಮ್ಮರಗಳು ಇರುವಂತೆಯೇ ಹೊಸ ಹೂಗಳೂ ಅರಳುವುವಷ್ಟೆ.
ಬೆಟ್ಟವನ್ನು ಸಾಕ್ಷಿಭಾವದ ಸಂಕೇತವಾಗಿಯೂ ಪರಿಭಾವಿಸಬಹುದು. ಸಾಕ್ಷಿಭಾವ ಎಂದರೆ ಬಾಧ್ಯತೆಯನ್ನು ಕೊಡವಿಕೊಳ್ಳುವ ಶುಷ್ಕೋದ್ಯಮವಲ್ಲ. ಪರಿಶ್ರಮದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಫಲದ ವಿಷಯದಲ್ಲಿ ನಿರ್ಲಿಪ್ತವಾಗಿರುವುದೇ ನಿಜವಾದ ಸಾಕ್ಷಿಸ್ಥಿತಿ. ಈ ನಿಟ್ಟಿನಲ್ಲಿ ಮೇಲ್ಕಾಣಿಸಿದ ‘ಮಹೀಧ್ರ’ ಎಂಬ ಪದವನ್ನು ಗಮನಿಸಬಹುದು. ಬೆಟ್ಟವು ಭೂಮಿಯನ್ನು ಹೊತ್ತಿದ್ದರೂ ಅಲ್ಲಿಯ ಆಗುಹೋಗುಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೆಲವು ವರ್ಷಗಳ ಹಿಂದೆ ಭೈರಪ್ಪನವರು ಸಾಹಿತ್ಯ ಅಕಾಡೆಮಿಯಲ್ಲಿ ಮಾಡಿದ ಒಂದು ಭಾಷಣದಲ್ಲಿ ಸಾಕ್ಷಿಭಾವದ ಈ ಆಯಾಮವನ್ನು ಪ್ರಸ್ತಾವಿಸಿದ್ದರು. ಅದೆಂದರೆ - ವ್ಯಾಸರು ತಾವು ಜೀವನದಲ್ಲಿ ಕಂಡು, ಕೇಳಿ, ಅನುಭವಿಸಿದ ಘಟನೆಗಳನ್ನೇ ಕಾವ್ಯವಾಗಿ ಬರೆಯಲು ಸಂಕಲ್ಪಿಸಿ, ಕಲೆಗೆ ಆವಶ್ಯಕವಾದ ತಟಸ್ಥದೃಷ್ಟಿಯನ್ನು ಸಂಪಾದಿಸಲು ಒಂದು ಬೆಟ್ಟವನ್ನೇರಿ, ಆ ಎತ್ತರದಿಂದ ಮತ್ತೊಮ್ಮೆ ಎಲ್ಲ ಸಂದರ್ಭಗಳನ್ನೂ ಸಮೀಕ್ಷಿಸಿ ಬಳಿಕ ಮಹಾಭಾರತವನ್ನು ರಚಿಸಿದರು. ಇದೇ ತೆರನಾದುದು ಭೈರಪ್ಪನವರ ದೃಷ್ಟಿ.
ಕನ್ನಡದಲ್ಲಿ ಶ್ರೇಷ್ಠವಾದ ಒಂದು ಸಾಹಿತ್ಯರಚನೆಯನ್ನು ಸೂಚಿಸಲು ‘ಮೇರುಕೃತಿ’ ಎಂಬ ಶಬ್ದವನ್ನು ಬಳಸುತ್ತೇವಷ್ಟೆ. ಹಲವು ದಶಕಗಳಿಂದ ಸಾವಿರಾರು ಲೇಖಕ-ವಿಮರ್ಶಕರು ಬಳಸಿ ಈ ಪದ ತನ್ನ ಮೊನಚನ್ನು ಕಳೆದುಕೊಂಡು ‘ಕ್ಲೀಷೆ’ ಆಗಿದೆಯೆಂದರೆ ತಪ್ಪಲ್ಲ. ಅದು ಹಾಗಿರಲಿ; ಸದ್ಯಕ್ಕೆ ಅದರ ಔಚಿತ್ಯವನ್ನು ಗಮನಿಸೋಣ. ಮೇರುವೊಂದು ಪರ್ವತ; ಪುರಾಣಗಳಲ್ಲಿ ಬರುವ ಬಂಗಾರದ ಬೆಟ್ಟ. ಅದರ ಸುತ್ತಲು ಸೂರ್ಯ-ಚಂದ್ರರೇ ಸುತ್ತುತ್ತಿರುತ್ತಾರೆ. ಅದರ ಮೇಲಿರುವುದೇ ಸ್ವರ್ಗ. ಹೀಗೆ ಕಂಡಾಗ ಅದರಷ್ಟು ಪೂಜ್ಯವೂ ಪವಿತ್ರವೂ ಆದ, ಕಾಂತಿ-ಔನ್ನತ್ಯಗಳನ್ನು ಹೊಂದಿದ, ಸ್ಥಿರ-ಸುಂದರ ಮೌಲ್ಯಗಳನ್ನು ಕಲೆಯಾಗಿ ಹೊಮ್ಮಿಸುವ ಕೃತಿಗೆ ಈ ಪದವು ಮೀಸಲಾಗಿರುವುದು ತಿಳಿಯುತ್ತದೆ. ಭೈರಪ್ಪನವರ ಕಾದಂಬರಿಗಳ ಪೈಕಿ ಒಂದಲ್ಲ, ಹತ್ತಾರು ಮೇರುಕೃತಿಗಳಿವೆ! ಇನ್ನು ಅವುಗಳ ಬಗೆಗೆ ಹೇಳುವುದೇನಿದೆ?
ಭೈರಪ್ಪನವರ ಕಾದಂಬರಿಗಳಲ್ಲಿ ಚಿಕ್ಕ-ಪುಟ್ಟ ಗುಡ್ಡಗಳಿಂದ ಮೊದಲ್ಗೊಂಡು ಅತ್ಯುನ್ನತವೂ ಅತಿವಿಶಾಲವೂ ಆದ ಪರ್ವತಶ್ರೇಣಿಯ ತನಕ ಹಲವು ರೀತಿಯ ಗಿರಿಗಳ ಚಿತ್ರಣವಿದೆ. ಮುಳ್ಳಯನಗಿರಿಯಿಂದ ಖಂಡಾಲಘಾಟ್‌ನವರೆಗೆ, ಅರುಣಾದ್ರಿಯಿಂದ ಗರ್ವಿನ್ ಬಂಡೆಯವರೆಗೆ, ಜೋಗಿಬೆಟ್ಟ-ಚಾಮುಂಡಿಬೆಟ್ಟಗಳಿಂದ ಹಿಮಾಲಯದವರೆಗೆ ಎಲ್ಲವನ್ನೂ ಇಲ್ಲಿ ಕಾಣಬಹುದು. ಇವನ್ನು ಹಲವು ಮನೋಧರ್ಮಗಳ ಪ್ರತೀಕವಾಗಿ, ವಿವಿಧ ವ್ಯಕ್ತಿಗಳ ಸಂಕೇತವಾಗಿ, ಸಂದರ್ಭಗಳಿಗೆ ಪೂರಕವಾಗಿ, ಘಟನೆಗಳು ತೆರೆದುಕೊಳ್ಳುವ ರಂಗವಾಗಿ, ಎಲ್ಲೆಡೆ ಒಳ್ಳೆಯ ಉದ್ದೀಪನವಿಭಾವವಾಗಿ (ಭಾವಪ್ರಚೋದನೆಗೆ ಒದಗಿಬರುವ ಪ್ರಾಕೃತಿಕ, ಸಾಂಸ್ಕೃತಿಕ ಅಂಶಗಳು) ಭೈರಪ್ಪನವರು ರೂಪಿಸಿದ್ದಾರೆ.
ಅವರ ಆರಂಭಿಕ ರಚನೆಗಳಿಂದ ಮೊದಲ್ಗೊಂಡು ಇತ್ತೀಚಿನ ಕಾದಂಬರಿಗಳವರೆಗೂ ಬೆಟ್ಟಗಳ ದಟ್ಟವಾದ ಪರಿವೇಷ ಕಂಡುಬರುತ್ತದೆ. ಮುಖ್ಯವಾಗಿ ‘ದೂರ ಸರಿದರು’, ‘ವಂಶವೃಕ್ಷ’, ‘ಜಲಪಾತ’, ‘ನಾಯಿ-ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ನಿರಾಕರಣ’, ‘ಪರ್ವ’, ‘ನೆಲೆ’, ‘ಅಂಚು’, ‘ತಂತು’, ‘ಮಂದ್ರ’ ಮತ್ತು ‘ಯಾನ’ ಕೃತಿಗಳಲ್ಲಿ ಬೆಟ್ಟ-ಗುಡ್ಡಗಳ ಪ್ರಸ್ತಾವವಿದೆ. ಇನ್ನೂ ಒಂದೆರಡು ಕಾದಂಬರಿಗಳಲ್ಲಿ ಆನುಷಂಗಿಕವಾಗಿ ಗಿರಿಗಳು ಗಮನ ಸೆಳೆಯುತ್ತವೆ.
ಸದ್ಯದ ಲೇಖನದ ಚಿಕ್ಕ ಚೌಕಟ್ಟಿನಲ್ಲಿ ಈ ಎಲ್ಲ ಮಾದರಿಗಳನ್ನೂ ಕೂಲಂಕಷವಾಗಿ ವಿವೇಚಿಸುವುದು ಸಾಧ್ಯವಿಲ್ಲ. ಆದುದರಿಂದ ಕೆಲವು ವಿಶಿಷ್ಟ ಸಂದರ್ಭಗಳನ್ನು ಗಮನಿಸಿ ಅವುಗಳ ಸ್ವಾರಸ್ಯದ ಹಿನ್ನೆಲೆಯಲ್ಲಿ ಉಳಿದ ವಿವರಗಳನ್ನು ಮನಗಾಣಬಹುದು.
* * *
ಭೈರಪ್ಪನವರು ಹದಿಹರೆಯದ ವಯಸ್ಸಿನಲ್ಲಿ ರಚಿಸಿದ ಕೃತಿಗಳ ಪೈಕಿ ‘ಬೆಳಕು ಮೂಡಿತು’ ಒಂದು. ೧೯೫೯ರಲ್ಲಿ ಪ್ರಕಟವಾದ ಈ ಕಥೆಯ ಘಟನೆಗಳು ಕಾಲಾನುಕ್ರಮದಲ್ಲಿ ತೆರೆದುಕೊಳ್ಳುತ್ತವೆ. ತೆಂಗಿನ ಸೀಮೆಯ ಸೋಮನಶಿವರ ಎಂಬ ಹಳ್ಳಿಯಲ್ಲಿ ನೆಲೆಗೊಂಡ ಕಥೆ ಅಲ್ಲಿಯ ಒಂದು ಬೆಟ್ಟವನ್ನು ಪ್ರಸ್ತಾವಿಸುತ್ತದೆ. ಭೈರಪ್ಪನವರು ತಮ್ಮ ಲೇಖಕಜೀವನದ ಆರಂಭದಲ್ಲಿಯೇ ವರ್ಣನೆಗಳಲ್ಲಿ ಔಚಿತ್ಯವನ್ನು ಕಾಯ್ದುಕೊಳ್ಳುವ ಹದವನ್ನು ಸಾಧಿಸಿದ್ದರೆಂಬುದು ಇಲ್ಲಿ ನಿಚ್ಚಳವಾಗುತ್ತದೆ. ಲೇಖಕರೇ ಮಾಡಿಕೊಡುವ ವರ್ಣನೆಯಲ್ಲಿ ಬೆಟ್ಟದ ಸುಂದರೋದಾತ್ತ ಆಕೃತಿಯು ತೋರಿದರೆ, ವತ್ಸಲಾ ಎಂಬ ಪಾತ್ರವು ಅದನ್ನು ಕಾಣುವ ಪರಿಯಲ್ಲಿ ಜುಗುಪ್ಸೆ-ಘೋರತೆಗಳು ಕಂಡುಬರುತ್ತವೆ. ಅಲ್ಲಿಯ ಒಂದೆರಡು ವಾಕ್ಯಗಳನ್ನು ಗಮನಿಸಬಹುದು:
“ಮಧ್ಯಾಹ್ನದ ಸೂರ್ಯನ ಬಿಸಿಲಿನಲ್ಲಿ ಬೆಳ್ಳಿಯ ತಗಡಿನಂತೆ ಹೊಳೆಯುವ ಸುತ್ತಲಿನ ಸಣ್ಣಸಣ್ಣ ಕೆರೆಗಳ ಬಿಳಿಯ ನೀರಿನ ತೆರೆಗಳು ... ಬೆಟ್ಟದ ಮೇಲ್ಭಾಗದಲ್ಲಿ ಸೊಂಪಾಗಿ ಬೆಳೆದಿದ್ದ ನಾಲ್ಕಾರು ಆಲದ ಮರಗಳು ಒಂದನ್ನೊಂದು ಅಪ್ಪಿಕೊಂಡು ತಣ್ಣನೆಯ ನೆಳಲಿನ ವರವನ್ನಿತ್ತಿದ್ದವು ... ಅವುಗಳ ಕೆಳಗೆ ಹೂಬಿಟ್ಟು ನಿಂತಿದ್ದ ಒಂದು ಪುಟ್ಟ ಬೇವಿನ ಮರ, ತನ್ನನ್ನು ಅಪ್ಪಿಕೊಂಡು ಪಕ್ಕದಲ್ಲಿಯೇ ನಿಂತಿದ್ದ ಅಶ್ವತ್ಥವೃಕ್ಷದ ನಡುವೆ ನಲಿಯುತ್ತಿತ್ತು.”
ಈ ದೃಶ್ಯ ವತ್ಸಲೆಯ ವರ್ಣನೆಯಲ್ಲಿ ಸ್ಪಷ್ಟವಾಗಿ ಮಾರ್ಪಡುವುದನ್ನು ಗಮನಿಸಬಹುದು: “ದೂರದವರೆಗೂ ಹರಡಿದ್ದ ಕಪ್ಪು ಬಂಡೆಗಳು, ಮಧ್ಯಾಹ್ನದ ಸೂರ್ಯನ ಉರಿಬಿಸಿಲಿಗೆ ಕಾಯ್ದು ಕಣ್ಣ ದೃಷ್ಟಿ ಮಬ್ಬಾಗುವಂತೆ ಬಿಸಿಲ ಝಳವನ್ನು ಬೀರುತ್ತಿದ್ದವು. ಅವುಗಳ ನಡುವೆ ವಿಕಾರವಾಗಿ ಬೆಳೆದುನಿಂತಿದ್ದ ಪಾಪಾಸುಕಳ್ಳಿಯ ಗಿಡಗಳು ಆ ನೋಟಕ್ಕೆ ವಿಚಿತ್ರವಾದ ಭಯಂಕರತೆಯನ್ನಿತ್ತಿದ್ದವು.” (‘ಯುಗಸಾಕ್ಷಿ’ಯಿಂದ ಉದ್ಧೃತ, ಪು. ೬೨-೬೩)
ಮೊದಲನೆಯ ವರ್ಣನೆಯಲ್ಲಿ ನಮ್ಮ ಜಾನಪದರು ಅಶ್ವತ್ಥವೃಕ್ಷಕ್ಕೂ ಬೇವಿನ ಮರಕ್ಕೂ ಮದುವೆ ಮಾಡುವ ಸುಂದರ ಕಲ್ಪನೆಯ ಸೂಚನೆಯಿದ್ದರೆ ಎರಡನೆಯದರಲ್ಲಿ ಪಾಪಾಸುಕಳ್ಳಿಯ ವಾಚ್ಯವಾದ ಒಕ್ಕಣೆಯಿದೆ. ಹೀಗೆ ಒಂದೇ ಸಂಗತಿಯ ಪರಸ್ಪರ ಭಿನ್ನವಾದ ಮುಖಗಳನ್ನು ಪಾತ್ರ-ಸನ್ನಿವೇಶಗಳಿಗೆ ಸರಿಹೊಂದುವಂತೆ ಅನಾವರಣಗೊಳಿಸುವುದು ಒಳ್ಳೆಯ ಕಲೆಯ ಲಕ್ಷಣ.
* * *
‘ದೂರ ಸರಿದರು’ ಕಾದಂಬರಿಯಲ್ಲಿ ಬಾಬಾಬುಡನ್ ಗಿರಿ ಮತ್ತು ಮುಳ್ಳಯನಗಿರಿ ಬೆಟ್ಟಗಳ ಉಲ್ಲೇಖವಿದೆ. ವಿನತೆಯ ಪ್ರೀತಿಯನ್ನು ಪಡೆಯಲು ಉತ್ಸುಕನಾಗಿದ್ದ ಆನಂದ ಆಕೆಯ ಹಿಂಜರಿಕೆಯಿಂದ ದುಃಖಿಸುತ್ತಾನೆ. ತಮ್ಮ ಮುಂದಿನ ಜೀವನದ ಬಗೆಗೆ ವಿನತೆಯಲ್ಲಿ ಪ್ರಸ್ತಾವಿಸಿದಾಗ ಅವಳು ಯಥಾಪ್ರಕಾರ ಅಸಹಾಯಕತೆಯಿಂದ ಕೈಚೆಲ್ಲಿ ನಿಂತಾಗ ಬೇಸರಗೊಂಡ ಅವನು ಮನಸ್ಸನ್ನು ಅಂಕೆಗೆ ತರಲು ವಿವಿಕ್ತವಾದ ಬಾಬಾಬುಡನ್ ಗಿರಿಗೆ ಹೋಗುತ್ತಾನೆ. ಅಲ್ಲಿ ಆತನ ಅಂತರಂಗದ ಏರಿಳಿತಗಳು ಬೆಟ್ಟದ ಏರುತಗ್ಗುಗಳೊಡನೆ ಸಂವಾದ ನಡಸುವಂತೆ ಭಾಸವಾಗುತ್ತದೆ. ಪ್ರಕೃತಿಯನ್ನು ಪ್ರೀತಿಸುವುದೇ ಲೇಸು, ಅದರಲ್ಲಿ ಹತಾಶೆಗೆ ಅವಕಾಶವಿಲ್ಲ; ಹೆಣ್ಣಿನ ಹಿಂದೆ ಹೋಗುವವರೆಲ್ಲ ಹೆಡ್ಡರು; ಆದರೂ ನಿರಾಶೆಗೊಳ್ಳಬಾರದು - ಹೀಗೆ ಹರಿಯುತ್ತದೆ ಅವನ ಮನೋಲಹರಿ: “ಸ್ತ್ರೀ ಮತ್ತು ಪುರುಷರ ಪ್ರೇಮವೆಂಬುದು ಮಿಥ್ಯ, ಅಜ್ಞಾನದಿಂದ ಹುಟ್ಟಿರುವ ಭ್ರಾಂತಿ ಮಾತ್ರ ... ವಿಚಾರದಿಂದ ತಿಳಿಯುವುದು ಸುಲಭ. ಮನಸ್ಸನ್ನು ಗೆಲ್ಲುವುದು ಕಷ್ಟ.” (ಪು. ೯೭)
ಆ ಬಳಿಕ ಗಿರಿಸ್ವಾಮಿ ಎಂಬ ಪರಿವ್ರಾಜಕರ ಮೂಲಕ ಮನೋದಾರ್ಢ್ಯವನ್ನು ಸಾಧಿಸುವ ಉಪಾಯ ಆನಂದನಿಗೆ ಸಿಕ್ಕು ಅದರಿಂದ ಕ್ರಮಕ್ರಮವಾಗಿ ಸಮಾಹಿತನಾಗುತ್ತಾನೆ. ಈ ಹಂತದಲ್ಲಿ ಮುಳ್ಳಯನಗಿರಿಯನ್ನು ಹತ್ತುವಾಗ ಅವನಿಗೆ ಉನ್ನತಿಯ ಅನುಭವ ಲಭಿಸುತ್ತದೆ: “ಈ ಗಿರಿಯಮೇಲೆ ಬಂದಾಗಿನಿಂದ ನನ್ನ ಮನಸ್ಸಿನಲ್ಲಿ ಉಚ್ಚಭಾವನೆಗಳೇ ಬರುತ್ತಿವೆ ... ವ್ಯಕ್ತಿಗತ ನಿರಾಶೆಯನ್ನೂ ಅಳಲು ನೋವುಗಳನ್ನೂ ಮೀರಿದ ಯಾವುದೋ ಒಂದು ಬಗೆಯ ಅವರ್ಣನೀಯ ಆನಂದವು ವ್ಯಾಪಿಸಿದೆ. ಈ ಆನಂದವು ನನ್ನೊಬ್ಬನದೇ ಅಲ್ಲ. ಎಲ್ಲರಿಗೂ, ಪ್ರಪಂಚದ ಎಲ್ಲರಿಗೂ ನಾನು ಕೊಡಬೇಕಾದ ಆನಂದ. ಅದಾವುದೋ ಶಕ್ತಿಯು ನನ್ನನ್ನು ಶಕ್ತಿಶಾಲಿ ಎಂದು ಒಳಗಿನಿಂದ ಹೇಳುತ್ತಿದೆ.” (ಪು. ೧೦೫)
ಈ ಅನುಭವವು ವಿನತೆಯಿಂದ ದೂರವಾದರೂ ಮಾನಸಿಕವಾಗಿ ಕುಸಿದುಹೋಗದಂತೆ ಆನಂದನನ್ನು ಕಾಪಾಡುತ್ತದೆ. ಔನ್ನತ್ಯದ ಸಾಹಚರ್ಯವು ನಮ್ಮಲ್ಲಿ ಅಡಗಿರುವ ಸಣ್ಣತನವನ್ನು ಆ ಹೊತ್ತಿನ ಮಟ್ಟಿಗಾದರೂ ತೊಡೆದುಹಾಕುತ್ತದೆ. ಈ ಸಂಸ್ಕಾರವು ನಮ್ಮ ವ್ಯಕ್ತಿತ್ವಕ್ಕೆ ಒಂದು ಬಲವನ್ನೂ ಒಂದು ನಿರ್ವಿಕಾರತೆಯನ್ನೂ ನೀಡುತ್ತದೆ.
* * *
ಚಾಮುಂಡಿಬೆಟ್ಟವು ‘ವಂಶವೃಕ್ಷ’ದಲ್ಲಿ ಶ್ರೀನಿವಾಸಶ್ರೋತ್ರಿಯರ ವ್ಯಕ್ತಿತ್ವದ ಪ್ರತಿಮೆಯಾಗಿ ಬರುತ್ತದೆ. ಕಾತ್ಯಾಯಿನಿ ತನ್ನ ನಿರ್ಧಾರವನ್ನು ರಾಜಾರಾಯರಿಗೆ ತಿಳಿಸಲು ತೆರಳುತ್ತಿದ್ದಾಗ ಚಾಮುಂಡಿಬೆಟ್ಟವು ಕಾಣಿಸಿಕೊಂಡು ಒಮ್ಮೆಲೇ ಮಾವನವರ ನೆನಪಾಗುತ್ತದೆ:
“ಅವರ ದೇಹಾಕೃತಿಯೂ ಬೆಟ್ಟದಷ್ಟೇ ಭವ್ಯವಾಗಿತ್ತು. ಅರವತ್ತನ್ನು ಮೀರಿದ ಈ ವಯಸ್ಸಿನಲ್ಲೂ ಅವರ ಎತ್ತರ, ಮೈಕಟ್ಟು, ನಡೆಯುವಾಗ ಇಡುತ್ತಿದ್ದ ಸ್ಥಿರವಾದ ಪಾದಗಳು, ದೇವರ ಪೂಜೆ ಮಾಡುವಾಗ ಕಣ್ಮುಚ್ಚಿ ಕುಳಿತಿರುವ ಭಂಗಿ, ಇವುಗಳಿಗೆ ಬೆಟ್ಟವೇ ತಕ್ಕ ಹೋಲಿಕೆ ಎಂದು ಅವಳು ಯೋಚಿಸಿದಳು. ಅವರ ಮನೋನಿಗ್ರಹ ಶಕ್ತಿ, ಸಂಯಮ ಮತ್ತು ಜೀವನದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸ್ಥೈರ್ಯಗಳೂ ಬೆಟ್ಟದ ಸ್ಥಿರತೆಯನ್ನು ಹೋಲುತ್ತಿದ್ದವು ... ತಲೆ ಎತ್ತಿ ನೋಡಬೇಕಾದ ವ್ಯಕ್ತಿತ್ವ, ಮನಸ್ಸು ಮುಗಿಲೆತ್ತರದಲ್ಲಿ ಕಲ್ಪಿಸಿಕೊಳ್ಳಬೇಕಾದ ಇಚ್ಛಾಶಕ್ತಿ ಅವರದು.” (ಪು. ೧೬೬)
ಗಾಳಿ-ಮಳೆ, ಬಿಸಿಲು-ನೆರಳು, ಎತ್ತರ-ತಗ್ಗು ಎಂಬ ಎಲ್ಲ ‘ವಿಕಾರ’ಗಳಿಗೆ ಪಾತ್ರವಾದರೂ ಅವನ್ನೆಲ್ಲ ಸಹಿಸಿಕೊಂಡು ತನ್ನದೇ ಆದ ಅಭಿನ್ನಾಕೃತಿಯನ್ನು ತಳೆಯುವ ಬೆಟ್ಟದಂತೆ ಶ್ರೋತ್ರಿಯರು ತಮ್ಮ ಶ್ರದ್ಧೆ-ವಿಶ್ವಾಸಗಳಿಗೆ ಪೆಟ್ಟು ಬೀಳುವ ಪ್ರಸಂಗಗಳನ್ನೂ ಜೀವನದ ಇನ್ನಿತರ ದುರ್ಭರ ಸನ್ನಿವೇಶಗಳನ್ನೂ ದಾಟಿಕೊಂಡು ಸಮುನ್ನತರಾಗಿ ನಿಲ್ಲುತ್ತಾರೆ. ಲಕ್ಷ್ಮಿಯ ಸಂಯೋಗದ ಸಂಘರ್ಷವನ್ನು ಮೀರುವುದು, ಹೆಸರಿಗೆ ನಂಜುಂಡನಾದರೂ ಅಕಾಲಿಕ ಮರಣಕ್ಕೆ ತುತ್ತಾದ ಮಗನ ಅಗಲಿಕೆಯನ್ನು ಹೆಸರಿಗೆ ಶ್ರೀನಿವಾಸರಾದರೂ ಶಿವಸ್ಥೈರ್ಯದಿಂದ ಸಹಿಸಿಕೊಳ್ಳುವುದು ಶ್ರೋತ್ರಿಯರ ಗಟ್ಟಿತನದ ಹೆಗ್ಗುರುತುಗಳು. ಎಲ್ಲಕ್ಕಿಂತ ಹೆಚ್ಚಾಗಿ ತಾವು ಜೀವನವಿಡೀ ನಚ್ಚಿಕೊಂಡು ಬಂದ ಕುಲಾಭಿಮಾನ ಮತ್ತು ವಂಶವನ್ನು ವಿಚ್ಛೇದವಿಲ್ಲದೆ ಮುಂದುವರಿಸುವ ಪ್ರಕ್ರಿಯೆ ಒಮ್ಮೆ ಇದ್ದಕ್ಕಿದ್ದಂತೆ ಹುಸಿಯಾಗಿ ತೋರಿ ತಮ್ಮ ವಂಶಮೂಲವೇ ಕತ್ತರಿಸಿಹೋದಾಗ ವಿಚಲಿತರಾದರೂ ಆ ವಿವಶತೆಯನ್ನು ಮೀರಿ ಗೆಲ್ಲುತ್ತಾರೆ. ಇದೇ ಸ್ಥಿರತೆ, ಔನ್ನತ್ಯ. ಆದುದರಿಂದಲೇ ಅವರಿಗೆ ಸಂದ ಬೆಟ್ಟದ ಹೋಲಿಕೆ ಸಾರ್ಥಕವಾಗುವುದು.
ಇದೇ ಚಾಮುಂಡಿಬೆಟ್ಟವು ‘ಅಂಚು’ ಕಾದಂಬರಿಯಲ್ಲಿ ಅಮೃತೆಯ ಜೀವನದ ಕಡಿದಾದ ಹಾದಿಯನ್ನು ಧ್ವನಿಸುತ್ತದೆ. ಈ ಕೃತಿಯ ಆದ್ಯಂತ ಹರಡಿರುವುದು ಹಲವು ಬಗೆಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿ ಪ್ರಯತ್ನಿಸುವ ಅಮೃತೆಯ ಚಿತ್ರಣವೇ. ಜೀವನದ ಅಂತ್ಯ ಬೆಟ್ಟದ ಮೇಲಿನಿಂದ ಹಾರಿ ಆದರೆ ಸಾವಿಗೊಂದು ಉನ್ನತಿ ದಕ್ಕುತ್ತದೆಂದು ಅವಳೊಮ್ಮೆ ಚಿಂತಿಸುತ್ತಾಳೆ. ಹೀಗೆ ಜೀವನಮೌಲ್ಯಗಳ ಉಚ್ಛ್ರಾಯವಾಗಿ ಸಲ್ಲುವ ಬೆಟ್ಟದ ತುದಿ ಅಮೃತೆಯ ಪಾಲಿಗೆ ಆತ್ಮಹತ್ಯೆಯೆಂಬ ವಿಮೌಲ್ಯದ ಕಾರ್ಯಸ್ಥಾನವಾಗಿ ಕಾಣುವುದು ದೊಡ್ಡ ವಿಪರ್ಯಾಸ. ಚಾಮುಂಡಿಬೆಟ್ಟ ಶ್ರೋತ್ರಿಯರಲ್ಲಿ ಘನತೆಯನ್ನು ಬಿಂಬಿಸುವಂತೆಯೇ ಅಮೃತೆಯಲ್ಲಿ ಆತ್ಯಂತಿಕ ಅನಿಶ್ಚಯದ ದ್ರವತೆಯನ್ನು ಸೂಚಿಸುತ್ತದೆ. ಹೀಗೆ ಒಂದೇ ಸಂಕೇತವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನವಾಗಿ, ಸಮುಚಿತವಾಗಿ ಬಳಸಿಕೊಳ್ಳುವುದು ಭೈರಪ್ಪನವರ ಬಲ್ಮೆ.
[1] ಇಲ್ಲಿಯ ಉದ್ಧರಣೆಗಳನ್ನು ಬೆಂಗಳೂರಿನ ಸಾಹಿತ್ಯಭಂಡಾರವು ಪ್ರಕಟಿಸಿರುವ ಪುಸ್ತಕಗಳಿಂದ ಮಾಡಲಾಗಿದೆ. ಪುಸ್ತಕಗಳು ಪ್ರಕಟವಾದ ವರ್ಷಗಳು ಹೀಗಿವೆ: ದೂರ ಸರಿದರು (೨೦೦೩), ವಂಶವೃಕ್ಷ (೨೦೧೨), ಜಲಪಾತ (೨೦೧೫), ತಬ್ಬಲಿಯು ನೀನಾದೆ ಮಗನೆ (೨೦೦೬), ನಿರಾಕರಣ (೨೦೧೫), ಪರ್ವ (೨೦೧೬), ನೆಲೆ (೨೦೧೬), ತಂತು (೨೦೧೬), ಭಿತ್ತಿ (೨೦೧೪), ಯುಗಸಾಕ್ಷಿ (೨೦೦೯), ನಿರ್ಲಿಪ್ತಿ (೨೦೧೯).
To be continued.