ಕಾವ್ಯಾನುಶಾಸನದ ಕೆಲವು ವೈಶಿಷ್ಟ್ಯಗಳು
ಗ್ರಂಥಗತ ವಿಷಯಗಳನ್ನು ಪರಿಚಯಿಸಿಕೊಂಡ ಬಳಿಕ ಇಲ್ಲಿಯ ಕೆಲವು ವೈಶಿಷ್ಟ್ಯಗಳನ್ನೂ ಅಲಂಕಾರಶಾಸ್ತ್ರದಲ್ಲಿ ಇದರ ಸ್ಥಾನವನ್ನೂ ಅರಿಯಲು ತೊಡಗಬಹುದು.
ಹೇಮಚಂದ್ರನು ‘ಕಾವ್ಯಮಾನಂದಾಯ ಯಶಸೇ ಕಾಂತಾತುಲ್ಯತಯೋಪದೇಶಾಯ ಚ’ (೧.೩) ಎಂದು ಸೂತ್ರಿಸುವ ಮೂಲಕ ಕಾವ್ಯಪ್ರಯೋಜನಗಳ ಪೈಕಿ ಆನಂದ, ಕೀರ್ತಿ ಮತ್ತು ಕಾಂತಾಸಮ್ಮಿತ ಉಪದೇಶಗಳನ್ನು ಮಾತ್ರ ಎಣಿಸಿದ್ದಾನೆ; ಮಮ್ಮಟನು ಹೇಳುವ ಅರ್ಥ, ವ್ಯವಹಾರಜ್ಞಾನ ಮತ್ತು ಶಿವೇತರಕ್ಷತಿಗಳನ್ನು ಕೈಬಿಟ್ಟಿದ್ದಾನೆ. ವೃತ್ತಿಯಲ್ಲಿ ತನ್ನ ನಿಲವನ್ನು ವಿವರಿಸುತ್ತ, ‘ಪ್ರೀತಿ’ ಎಂಬ ರಸಾನಂದವು ಕವಿ-ಸಹೃದಯರಿಬ್ಬರಿಗೂ ದೊರೆಯುತ್ತದೆ, ಯಶಸ್ಸು ಕವಿಗೆ ಮಾತ್ರ ದಕ್ಕುತ್ತದೆ, ವೇದ-ಪುರಾಣಗಳಿಗಿಂತ ಬೇರೆಯ ವಿಧಾನದಲ್ಲಿ ಕಾಂತೆಯಂತೆ ಉಪದೇಶಿಸುವ ಕಾವ್ಯದ ಪ್ರಯೋಜನವು ಸಹೃದಯರಿಗೆ ಸಿಗುತ್ತದೆ ಎಂದಿದ್ದಾನೆ. ಇಲ್ಲಿಯ ವೃತ್ತಿಭಾಗವು ‘ಕಾವ್ಯಕೌತುಕ’ ಹಾಗೂ ‘ಹೃದಯದರ್ಪಣ’ಗಳಿಂದ ಮೌಲಿಕವಾದ ಕೆಲವು ಶ್ಲೋಕಗಳನ್ನು ಉಲ್ಲೇಖಿಸಿದೆ.
ಕಾವ್ಯದಿಂದ ಎಲ್ಲರೂ ಪಡೆಯಬಹುದಾದ ಪ್ರಯೋಜನ ಆನಂದವೊಂದೇ. ಹೀಗಾಗಿ ಇದನ್ನು ‘ಸಕಲಪ್ರಯೋಜನಮೌಲಿಭೂತ’ ಎಂದು ಕೊಂಡಾಡಿದ್ದಾರೆ. ಇನ್ನು ಅಭಿನವಗುಪ್ತನು ವಿವರಿಸಿರುವಂತೆ ಆನಂದಕ್ಕೂ ಉಪದೇಶದಿಂದ ಸಿಗಬಹುದಾದ ವ್ಯುತ್ಪತ್ತಿಗೂ ಆತ್ಯಂತಿಕವಾಗಿ ಭೇದವೇ ಇಲ್ಲ.[1] ಕಾವ್ಯವನ್ನು ಓದಿ ಆಸ್ವಾದಿಸುವ ಪ್ರಾಮಾಣಿಕ ಸಹೃದಯನು ಅದನ್ನು ರಚಿಸಿದ ಕವಿಯ ಬಗೆಗೆ ಆದರವನ್ನು ತಳೆಯುತ್ತಾನೆ. ಹೀಗೆ ಲಭಿಸಿದ ಸಹೃದಯಸಮ್ಮಾನವೇ ಕೀರ್ತಿಯ ಮೂಲ. ಈ ದೃಷ್ಟಿಯಿಂದ ನೋಡಿದಾಗ ಹೇಮಚಂದ್ರನು ಹೇಳಿರುವ ಪ್ರಯೋಜನಗಳ ಪ್ರಾಮುಖ್ಯ ಅರಿವಿಗೆಟುಕುತ್ತದೆ. ಇನ್ನು ಅವನು ಕೈಬಿಟ್ಟಿರುವ ಸಂಗತಿಗಳನ್ನು ಸ್ವಲ್ಪ ಗಮನಿಸುವುದಾದರೆ, ಅರ್ಥ(ಧನ)ಪ್ರಾಪ್ತಿ ಆಗಿಯೇ ತೀರುವುದೆಂಬ ನಿಶ್ಚಯವಿಲ್ಲ. ವ್ಯವಹಾರವು ಹೆಚ್ಚು ಲೋಕನಿಷ್ಠವಾದುದರಿಂದ ಒಂದು ಕಾಲದಿಂದ ಮತ್ತೊಂದಕ್ಕೆ, ಒಂದು ಸಮಾಜದಿಂದ ಇನ್ನೊಂದಕ್ಕೆ ಮಾರ್ಪಡುತ್ತಲೇ ಇರುತ್ತದೆ. ಆದುದರಿಂದ ಕಾವ್ಯದಿಂದ ದಕ್ಕುವ ವ್ಯವಹಾರಜ್ಞಾನ ಬೇಗದಲ್ಲಿ ದೇಶಕಾಲಬಾಹ್ಯ ಎನಿಸಬಹುದು. ಇದನ್ನು ವ್ಯುತ್ಪತ್ತಿಯಲ್ಲಿಯೇ ಸೇರಿಸಬಹುದಾದ ಕಾರಣ ಪ್ರತ್ಯೇಕವಾಗಿ ಎಣಿಸಲೂ ಬೇಕಿಲ್ಲ. ಅಮಂಗಳದ ನಾಶವಂತೂ ನಂಬಿಕೆಯ ವಲಯಕ್ಕೆ ಮಾತ್ರ ಸಲ್ಲುತ್ತದೆ.
* * *
ಕಾವ್ಯದ ಕಾರಣಗಳ ಪೈಕಿ ಪ್ರತಿಭೆಯೊಂದನ್ನೇ ಲೆಕ್ಕಿಸುವ ಹೇಮಚಂದ್ರ ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಪ್ರತಿಭೆಯನ್ನು ಸಂಸ್ಕರಿಸಲು ಸಹಕರಿಸುತ್ತವೆ ಎನ್ನುತ್ತಾನೆ: ‘ಪ್ರತಿಭಾಸ್ಯ ಹೇತುಃ’ (೧.೪), ‘ವ್ಯುತ್ಪತ್ತ್ಯಭ್ಯಾಸೌ ತು ಪ್ರತಿಭಾಯಾ ಏವ ಸಂಸ್ಕಾರಕೌ’ (೧.೪ ವೃತ್ತಿ).
ಪ್ರತಿಭೆ ಇಲ್ಲದೆ ರಸಮಯ ಕವಿತೆಯನ್ನು ರಚಿಸಲು ಸಾಧ್ಯವಿಲ್ಲ. ಎಲ್ಲರಲ್ಲಿಯೂ ಪ್ರತಿಭೆ ಒಂದಿಷ್ಟು ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಇದನ್ನು ಗುರುತಿಸಿ ಕಾವ್ಯಸಂಬಂಧಿ ವಿದ್ಯೆಗಳ ಕಲಿಕೆ ಮತ್ತು ರಚನಾಭ್ಯಾಸಗಳ ಮೂಲಕ ಪ್ರತಿಭೆಯನ್ನು ಪರಿಷ್ಕರಿಸಿಕೊಳ್ಳಬೇಕು. ಆಗ ಅದು ಸರ್ವತೋಮುಖವಾಗಿ ಬೆಳಗಿ ಸರ್ವಕ್ಷಮವಾಗಿ ಪ್ರವರ್ತಿಸುತ್ತದೆ. ಹೀಗಾಗಿ ಕಾವ್ಯಕಾರಣಗಳ ಪೈಕಿ ಪ್ರತಿಭೆ ಪ್ರಮುಖ, ಬೇರೆ ಎರಡು ಸಹಕಾರಿಗಳು ಎಂದು ಸಿದ್ಧವಾಗುತ್ತದೆ. ತಿಳಿವು ಮತ್ತು ಅಭ್ಯಾಸಗಳ ಬಲದಿಂದ ಕಾವ್ಯರಚನೆಯ ಹಾದಿಯಲ್ಲಿ ಒಂದಿಷ್ಟು ಮುಂದುವರಿಯಲು ಸಾಧ್ಯವಾದರೂ ಅಂಥ ರಚನೆಗಳಲ್ಲಿ ನಿಯತವಾಗಿ ರಸಸ್ಫೂರ್ತಿ ಇದ್ದೇ ಇರುವುದೆಂಬ ನಿಶ್ಚಯವಿಲ್ಲ.
ಇಲ್ಲಿಯ ವ್ಯಾಖ್ಯಾನವು ವ್ಯುತ್ಪತ್ತಿಯನ್ನು ವಿವರಿಸುತ್ತ ಹತ್ತಾರು ವಿದ್ಯೆಗಳನ್ನು ಹೆಸರಿಸಿ ಕವಿಗೆ ಅವುಗಳಿಂದ ಆಗುವ ಪ್ರಯೋಜನವನ್ನು ಉದಾಹರಣಪದ್ಯಗಳ ಮೂಲಕ ವಿಶದಪಡಿಸುತ್ತದೆ. ವ್ಯಾಕರಣ, ಛಂದಸ್ಸು, ಕೋಶ, ಸ್ಮೃತಿ, ಪುರಾಣ, ಇತಿಹಾಸ, ಆಗಮ, ತರ್ಕ - ಜೈನ, ಬೌದ್ಧ, ಲೌಕಾಯತಿಕ, ಸಾಂಖ್ಯ, ನ್ಯಾಯ, ವೈಶೇಷಿಕ - ನಾಟ್ಯಶಾಸ್ತ್ರ, ಅರ್ಥಶಾಸ್ತ್ರ, ಕಾಮಶಾಸ್ತ್ರ, ಯೋಗಶಾಸ್ತ್ರ, ಜ್ಯೌತಿಷ, ಆಯುರ್ವೇದ, ಗಜಲಕ್ಷಣ, ಅಶ್ವಲಕ್ಷಣ, ಧಾತುವಾದ, ದ್ಯೂತ, ಇಂದ್ರಜಾಲ, ಇತ್ಯಾದಿ ವಿದ್ಯೆಗಳು ಇಲ್ಲಿ ಒಕ್ಕಣಿಸಲ್ಪಟ್ಟಿವೆ. ಇವನ್ನು ಗಮನಿಸಿದಾಗ ಹೇಮಚಂದ್ರನು ಪ್ರತಿಭೆಗೆ ಮಿಗಿಲಾದ ಪ್ರಾಶಸ್ತ್ಯವಿತ್ತಿದ್ದರೂ ವ್ಯುತ್ಪತ್ತಿಯನ್ನು ಕೀಳ್ಗಾಣಿಸಿಲ್ಲವೆಂದು ಸ್ಪಷ್ಟವಾಗುತ್ತದೆ. ಅವನು ಭಾಮಹ-ಕ್ಷೇಮೇಂದ್ರರಂಥ ಪೂರ್ವಸೂರಿಗಳ ಅಡಿಜಾಡಿನಲ್ಲಿ ಸಾಗಿ ವ್ಯುತ್ಪತ್ತಿಗೆ ವಿಶಾಲವಾದ ನೆಲೆಯನ್ನು ಕಲ್ಪಿಸಿದ್ದಾನೆ.
ಈ ನಡುವೆ ರಾಜಶೇಖರನ ‘ಕಾವ್ಯಮೀಮಾಂಸೆ’ಯನ್ನು (ಹದಿನಾಲ್ಕನೆಯ ಅಧ್ಯಾಯ) ಅನುಸರಿಸುತ್ತ ಹೇಮಚಂದ್ರನು ವಿವಿಧ ಕವಿಸಮಯಗಳನ್ನು ನಿರೂಪಿಸಿದ್ದಾನೆ.
ಇಲ್ಲಿಯೇ ವ್ಯಾಖ್ಯಾನವು ‘ಶಿಕ್ಷಾ’ ಎಂಬ ವ್ಯುತ್ಪತ್ತಿವಿವರವನ್ನು ವಿಸ್ತರಿಸುತ್ತ ಸಮಸ್ಯಾಪೂರಣದ ಹಲವು ಮಾದರಿಗಳನ್ನು ಒಕ್ಕಣಿಸಿದೆ (ಪು. ೧೮-೨೦). ಏಕಪಾದಸಮಸ್ಯಾ, ಪಾದದ್ವಯಸಮಸ್ಯಾ ಮತ್ತು ಪಾದತ್ರಯಸಮಸ್ಯಾ ಎಂಬ ಭೇದಗಳು ಇಲ್ಲಿ ಕಂಡುಬರುತ್ತವೆ. ಉದಾಹರಣೆಗೆ ‘ಸಮುದ್ರಾದ್ಧೂಲಿರುತ್ಥಿತಾ’ (ಸಮುದ್ರದಿಂದ ಧೂಳು ಮೇಲೆದ್ದಿತು) ಎಂಬ ಸಮಸ್ಯೆಯನ್ನು ಪರಿಶೀಲಿಸಬಹುದು. ಇದರ ಪರಿಹಾರ ಹೀಗಿದೆ:
ಸೀತಾಸಮಾಗಮೋತ್ಕಂಠಾಕರ್ಣಾಂತಾಕೃಷ್ಟಧನ್ವನಃ |
ರಾಘವಸ್ಯ ಶರಾಂಗಾರೈಃ [ಸಮುದ್ರಾದ್ಧೂಲಿರುತ್ಥಿತಾ] || (ಪು. ೧೯)
ಸೀತೆಯ ಸಮಾಗಮಕ್ಕಾಗಿ ಹಾತೊರೆಯುತ್ತಿದ್ದ ಶ್ರೀರಾಮನು (ಅದಕ್ಕೆ ಸಹಕರಿಸದ ಕಡಲಿನ ಮೇಲೆ ಕ್ರುದ್ಧನಾಗಿ) ಬಿಲ್ಲಿನ ಹೆದೆಯನ್ನು ಕಿವಿಯ ತನಕ ಎಳೆದು ಬೆಂಕಿಯನ್ನುಗುಳುವ ಬಾಣಗಳನ್ನು ಬಿಟ್ಟಾಗ ಸಮುದ್ರದ (ನೀರು ಬತ್ತಿಹೋಗಿ) ಧೂಳು ಮೇಲೆದ್ದಿತು.
* * *
ರಸ-ಭಾವಗಳನ್ನು ಕುರಿತ ಎರಡನೆಯ ಅಧ್ಯಾಯದ ಮೇಲಣ ವ್ಯಾಖ್ಯಾನವು ನಾಟ್ಯಶಾಸ್ತ್ರ ಮತ್ತು ಅಭಿನವಭಾರತಿಗಳನ್ನು ವಿಪುಲವಾಗಿ ಉದ್ಧರಿಸಿದೆ. ರಸಸೂತ್ರದ ವಿವರಣೆಯಲ್ಲಿ ಅಭಿನವಗುಪ್ತನ ಮಾತುಗಳನ್ನೇ ಸಂಪೂರ್ಣವಾಗಿ ಆಶ್ರಯಿಸಲಾಗಿದೆ.
ಮೂರನೆಯ ಅಧ್ಯಾಯದಲ್ಲಿ ಬರುವ ದೇಶ-ಕಾಲಗಳ ಚರ್ಚೆ ಕ್ರಮವಾಗಿ ಭಾರತವರ್ಷದ ಭೌಗೋಳಿಕ ವಿವರಗಳನ್ನು ಹಾಗೂ ಆರು ಋತುಗಳ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಡಿಯ ಈ ಭಾಗವನ್ನು ರಾಜಶೇಖರನ ಕಾವ್ಯಮೀಮಾಂಸೆಯಿಂದ ತದ್ವತ್ತಾಗಿ ಸ್ವೀಕರಿಸಲಾಗಿದೆ.
ಯಾವ ಕಾವ್ಯದ ಯಾವ ಸಂದರ್ಭದಲ್ಲಿ ಏನೆಲ್ಲ ದೋಷಗಳು ತಲೆದೋರಿವೆ ಎಂದು ಪಟ್ಟಿ ಮಾಡಿ ವಿವರಿಸುವ ಮೂರನೆಯ ಅಧ್ಯಾಯದ ಭಾಗವು ಒಳ್ಳೆಯ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿ ಹೇಳಲಾದ ಕೆಲವು ರಸದೋಷಗಳು ಹಾಗೂ ಅವು ನಮಗೆ ಕಂಡುಬರುವ ಕಾವ್ಯಸಂದರ್ಭಗಳು ಹೀಗಿವೆ: ಪುಷ್ಟವಾದ ರಸವನ್ನು ಮತ್ತೆ ಮತ್ತೆ ಬಲಗೊಳಿಸಲೆಳಸುವುದು ಪುನರ್ದೀಪ್ತಿ ಎಂಬ ದೋಷ. ಇದು ‘ಕುಮಾರಸಂಭವ’ದ ನಾಲ್ಕನೆಯ ಸರ್ಗದ ರತಿವಿಲಾಪದಲ್ಲಿ ಕಂಡುಬರುತ್ತದೆ. ಅಯುಕ್ತ ಸಂದರ್ಭದಲ್ಲಿ ರಸವನ್ನು ಸೃಜಿಸಲು ಯತ್ನಿಸುವುದು ಅಕಾಂಡೇ ಪ್ರಥನಮ್ ಎಂಬ ದೋಷ. ಇದು ‘ವೇಣೀಸಂಹಾರ’ದ ಎರಡನೆಯ ಅಂಕದಲ್ಲಿ ಕಾಣುತ್ತದೆ. ಅಲ್ಲಿ ಭೀಷ್ಮನೇ ಮೊದಲಾದವರ ಮೃತಿಯಿಂದ ದುಃಖಿತನಾದ ದುರ್ಯೋಧನ ತನ್ನ ಮಡದಿ ಭಾನುಮತಿಯೊಡನೆ ಶೃಂಗಾರದ ಸಲ್ಲಾಪದಲ್ಲಿ ತೊಡಗುತ್ತಾನೆ. ಚೆನ್ನಾಗಿ ವಿಕಾಸ ಹೊಂದಿ ಸಾಗುತ್ತಿರುವ ರಸವನ್ನು ಕಾರಣವಿಲ್ಲದೆ ಚಿವುಟುವುದು ಅಕಾಂಡೇ ಛೇದಃ ಎಂಬ ದೋಷ. ಇದು ‘ರತ್ನಾವಳಿ’ಯ ನಾಲ್ಕನೆಯ ಅಂಕದಲ್ಲಿಯೂ ‘ಮಹಾವೀರಚರಿತ’ದ ಎರಡನೆಯ ಅಂಕದಲ್ಲಿಯೂ ಚೆನ್ನಾಗಿ ಗೋಚರಿಸುತ್ತದೆ. ಮೊದಲನೆಯದರಲ್ಲಿ ವತ್ಸರಾಜನು ರತ್ನಾವಳಿಯನ್ನು ಮರೆತು ವಿಜಯವರ್ಮನ ವೃತ್ತಾಂತವನ್ನು ಕೇಳುವಲ್ಲಿ ಮಗ್ನನಾದರೆ, ಎರಡನೆಯದರಲ್ಲಿ ಪರಶುರಾಮನೊಡನೆ ವಾಗ್ವಾದ ಬೆಳೆದು ಇನ್ನೇನು ಯುದ್ಧ ಪ್ರಾರಂಭವಾಗುವ ಹಂತದಲ್ಲಿ ರಾಮ ತನ್ನ ವಿವಾಹಕಂಕಣವನ್ನು ವಿಸರ್ಜಿಸಲು ಹೊರಟುಬಿಡುತ್ತಾನೆ. ಅಮುಖ್ಯ ಪಾತ್ರ-ಸಂದರ್ಭಗಳನ್ನು ಅಳವು ಮೀರಿ ವರ್ಣಿಸುವುದು ಮತ್ತೊಂದು ದೋಷ. ಇದನ್ನು ‘ಹಯಗ್ರೀವವಧ’ ಕಾವ್ಯದಲ್ಲಿ ಬರುವ ಹಯಗ್ರೀವನ ವರ್ಣನೆಯಲ್ಲಿ ಗಮನಿಸಬಹುದು. ಇನ್ನು ವಿಪ್ರಲಂಭಶೃಂಗಾರವನ್ನು ವರ್ಣಿಸುವ ನಡುವೆ ಕಾನು-ಕಡಲುಗಳನ್ನು ಬಗೆಬಗೆಯ ಅಲಂಕಾರಗಳಿಂದ ವಿಚಿತ್ರವಾಗಿ ವರ್ಣಿಸಲು ತೊಡಗುವುದು ಮಗದೊಂದು ದೋಷ. ಇದರ ಉದಾಹರಣೆ ‘ಹರಿವಿಜಯ’ ಕಾವ್ಯದಲ್ಲಿ ದೊರೆಯುತ್ತದೆ. ಕೃಷ್ಣ-ಸತ್ಯಭಾಮೆಯರ ವಿರಹದ ಸಂದರ್ಭದಲ್ಲಿ ಯಮಕಾಲಂಕಾರದಿಂದ ಸಮುದ್ರವನ್ನು ವರ್ಣಿಸಿರುವ ಕವಿ ದೋಷವನ್ನೆಸಗಿದ್ದಾನೆ. ಇದೇ ಬಗೆಯ ದೋಷ ‘ಹರ್ಷಚರಿತ’, ‘ಕಾದಂಬರೀ’, ‘ಶಿಶುಪಾಲವಧ’ ಮುಂತಾದ ಕೃತಿಗಳಲ್ಲಿಯೂ ಕಂಡುಬರುತ್ತದೆ. ಮುಂದಿನ ದೋಷ ಅಂಗಿರಸವನ್ನು ಸರಿಯಾಗಿ ಬೆಳೆಸದೆ ಬಳಲಿಸುವುದು. ‘ತಾಪಸವತ್ಸರಾಜ’ದ ಕವಿ ಈ ದೋಷಕ್ಕೆ ಅವಕಾಶವನ್ನು ನೀಡಿಲ್ಲ; ಆದರೆ ‘ಕರ್ಪೂರಮಂಜರಿ’ಯ ಕರ್ತೃ ಅಮುಖ್ಯ ಸಂಗತಿಗಳನ್ನು ಮುನ್ನೆಲೆಗೆ ತಂದು ಮುಖ್ಯವಾದುದನ್ನೇ ಸೊರಗಿಸಿದ್ದಾನೆ.
* * *
ಹೇಮಚಂದ್ರನು ಪ್ರತಿಪಾದಿಸುವ ಕಾವ್ಯಲಕ್ಷಣ ಹೀಗಿದೆ: ‘ಅದೋಷೌ ಸಗುಣೌ ಸಾಲಂಕಾರೌ ಚ ಶಬ್ದಾರ್ಥೌ ಕಾವ್ಯಮ್’ (೧.೧೧). ಇಲ್ಲಿಯ ಚ-ಕಾರವನ್ನು ವಿವರಿಸುವ ವೃತ್ತಿಯು ‘ನಿರಲಂಕಾರಯೋರಪಿ ಶಬ್ದಾರ್ಥಯೋಃ ಕ್ವಚಿತ್ ಕಾವ್ಯತ್ವಖ್ಯಾಪನಾರ್ಥಃ’ ಎಂದಿದೆ. ಈ ಪ್ರಕಾರ ದೋಷಗಳಿಲ್ಲದ, ಗುಣಗಳಿಂದ ಕೂಡಿದ, ಸಾಲಂಕೃತವಾದ ಶಬ್ದಾರ್ಥಗಳೇ ಕಾವ್ಯ ಎನಿಸುತ್ತವೆ. ಕೆಲವೊಮ್ಮೆ ಶಬ್ದ ಮತ್ತು ಅರ್ಥಗಳಲ್ಲಿ ಅಲಂಕಾರವಿಲ್ಲದಿದ್ದರೂ ಕಾವ್ಯತ್ವ ಸಿದ್ಧಿಸುತ್ತದೆ.
ದಂಡಿಯಂತೆ ಶಬ್ದವನ್ನು ಮಾತ್ರ ಕಾವ್ಯವೆನ್ನದೆ ಭಾಮಹ, ಆನಂದವರ್ಧನ ಮೊದಲಾದವರಂತೆ ಶಬ್ದಾರ್ಥಗಳೆರಡನ್ನೂ ಸೇರಿಸಿ ಹೇಮಚಂದ್ರನು ಕಾವ್ಯದ ಲಕ್ಷಣ ಹೇಳಿರುವುದು ಸಮಂಜಸವಾಗಿದೆ. ಇಲ್ಲಿ ಅವನು ಮಮ್ಮಟನನ್ನು ಅನುಸರಿಸಿರುವುದು ಸ್ಪಷ್ಟ (ಕಾವ್ಯಪ್ರಕಾಶ, ೧.೪). ಯಾವ ಅಲಂಕಾರವಿಲ್ಲದಿದ್ದರೂ ತನ್ನ ಸತ್ತ್ವದಿಂದಲೇ ಸೊಗಯಿಸಬಲ್ಲ ಕವಿತೆಯ ಉದಾಹರಣೆಯಾಗಿ ಅಮರುಕನ ‘ಶೂನ್ಯಂ ವಾಸಗೃಹಂ’ ಎಂಬ ರಸಪೇಶಲ ಪದ್ಯ ಉದಾಹೃತವಾಗಿರುವುದು ಹೇಮಚಂದ್ರನ ರುಚಿಶುದ್ಧಿಯನ್ನು ಸಾರಿ ಹೇಳುತ್ತಿದೆ.
* * *
ಕಾವ್ಯಗುಣಗಳ ಪೈಕಿ ಓಜಸ್ಸು, ಪ್ರಸಾದ ಮತ್ತು ಮಾಧುರ್ಯಗಳನ್ನು ಮಾತ್ರ ಗಣಿಸುವ ಹೇಮಚಂದ್ರನು ಆನಂದವರ್ಧನ ಮತ್ತು ಮಮ್ಮಟರ ಹಾದಿಯಲ್ಲಿ ನಡೆದು ವಿವೇಕವನ್ನು ಮೆರೆದಿದ್ದಾನೆ. ಈ ನಿಟ್ಟಿನ ಪೂರ್ವಾಚಾರ್ಯರ ವಿಚಾರಗಳನ್ನು ಸಂಗ್ರಹಿಸುವ ವ್ಯಾಖ್ಯಾನವು ಭರತ, ದಂಡಿ ಮತ್ತು ವಾಮನರ ಅಭಿಪ್ರಾಯಗಳೊಂದಿಗೆ ಮಂಗಳನೆಂಬ ಆಲಂಕಾರಿಕನ ಮಾತುಗಳನ್ನೂ ನಮೂದಿಸಿರುವುದು ವಿಶೇಷವಾಗಿದೆ (ಪು. ೨೭೪-೮೭). ಮಂಗಳನ ಗ್ರಂಥ ನಮಗಿಂದು ದೊರೆಯುವುದಿಲ್ಲ.[2] ಈ ಹಿನ್ನೆಲೆಯಲ್ಲಿ ಹೇಮಚಂದ್ರನು ಎತ್ತಿಕೊಟ್ಟಿರುವ ಅವನ ಉಕ್ತಿಗಳು ಬಹಳ ಬೆಲೆಯುಳ್ಳವಾಗಿವೆ.
ಹೇಮಚಂದ್ರನು ಒಪ್ಪುವ ಗುಣಗಳೊಟ್ಟಿಗೆ ಸಾಮ್ಯ ಮತ್ತು ಔದಾರ್ಯಗಳೆಂಬ ಇನ್ನೆರಡನ್ನು ಸೇರಿಸಿ ಇವೆಲ್ಲವನ್ನೂ ಪಠನರೀತಿಗಳಿಗೆ ಹಾಗೂ ವಿವಿಧ ಛಂದಸ್ಸುಗಳಿಗೆ ಸಂಬಂಧಿಸಿದಂತೆ ಕೆಲವರು ಆಲಂಕಾರಿಕರು ವಿಶ್ಲೇಷಿಸಿದ್ದಂತೆ ತೋರುತ್ತದೆ. ಅವರ ಪ್ರಕಾರ ಒಂದು ಪದ್ಯವನ್ನು ಪಠಿಸುವಾಗ ಪದಗಳ ನಡುವೆ ಬಿಡುವು ಕೊಡದೆ ಓದಿದರೆ ಓಜಸ್ಸು, ಪದಪದಕ್ಕೂ ಬಿಡುವು ಕೊಟ್ಟು ಓದಿದರೆ ಪ್ರಸಾದ, ಪದಗಳಲ್ಲಿ ಏರಿಳಿತಗಳಿದ್ದಂತೆ ಓದಿದರೆ ಮಾಧುರ್ಯ, ವಿವಿಧ ವರ್ಣಗಳ ಉತ್ಪತ್ತಿಸ್ಥಾನಗಳನ್ನು ಗಮನಿಸಿಕೊಂಡು ಅವಕ್ಕೆ ತಕ್ಕಂತೆ ಪಠಿಸಿದರೆ ಔದಾರ್ಯ ಹಾಗೂ ಯಾವುದೇ ಏರಿಳಿತವಿಲ್ಲದೆ ಓದಿದರೆ ಸಮತ್ವ ಸಿದ್ಧಿಸುತ್ತವೆ. ಅಂತೆಯೇ ಛಂದಸ್ಸುಗಳ ಪೈಕಿ ಸ್ರಗ್ಧರೆಯಲ್ಲಿ ಓಜಸ್ಸು, ಮಂದಾಕ್ರಾಂತೆಯಲ್ಲಿ ಮಾಧುರ್ಯ, ಶಾರ್ದೂಲವಿಕ್ರೀಡಿತದಲ್ಲಿ ಸಮತೆ, ವಿಷಮವೃತ್ತಗಳಲ್ಲಿ ಔದಾರ್ಯ ತೋರುತ್ತದೆ. ಹೇಮಚಂದ್ರ ಈ ಎರಡೂ ನಿಲವುಗಳನ್ನು ನಿರಾಕರಿಸುತ್ತಾನೆ (ಪು. ೨೮೭-೮೮).
ಹೇಮಚಂದ್ರನು ಹೀಗೆ ನಿರಾಕರಿಸಿದ್ದರೂ ಗುಣಗಳು ಪಠನಕ್ರಮದ ಹಾಗೂ ಛಂದಸ್ಸುಗಳ ಜೊತೆ ಹೆಣೆದುಕೊಂಡಿರುವುದನ್ನು ಅಲ್ಲಗೆಳೆಯಲಾಗುವುದಿಲ್ಲ. ಗುಣಗಳ ಮೂಲವಿರುವುದು ರಸಧರ್ಮಗಳಾದ ಚಿತ್ತದ್ರುತಿ, ಚಿತ್ತದೀಪ್ತಿ ಮತ್ತು ಚಿತ್ತವಿಕಾಸಗಳಲ್ಲಿ ಎಂಬ ತಥ್ಯವನ್ನು ನೆನೆದಾಗ ಈ ಸಮಸ್ಯೆಗೆ ಪರಿಹಾರ ಹೊಳೆಯುತ್ತದೆ. ಕಾವ್ಯದ ಸಂದರ್ಭಕ್ಕೂ ಅದನ್ನು ಮುನ್ನಡಸುವ ಪಾತ್ರಕ್ಕೂ ತಕ್ಕುದಾಗಿ ಮೂರು ಗುಣಗಳ ಪೈಕಿ ಯಾವುದೋ ಒಂದು ಸ್ಫುಟವಾಗುವಂತೆ ಕವಿ ಪದಗಳನ್ನು ಹವಣಿಸಿ ಜೋಡಿಸುತ್ತಾನೆ. ಹೀಗೆ ಅವನು ಆಯ್ಕೆ ಮಾಡುವ ಶಬ್ದಗಳ ಗುರುಲಘುಗಳಿಂದಾದ ‘ಗತಿ’ಯೂ ಅವನ ರಚನೆ ಛಂದೋಬದ್ಧವಾಗಿದ್ದರೆ ಆಯಾ ಬಂಧದಲ್ಲಿ ಅಕ್ಷರನಿರಪೇಕ್ಷವಾಗಿ ಹುದುಗಿರುವ ‘ಗತಿ’ಗೂ ಮೇಳನವಾಗಿ ವಿಶಿಷ್ಟವಾದೊಂದು ಧಾಟಿ ಮೈದಾಳುತ್ತದೆ. ಈ ಧಾಟಿ ಸರಿಯಾಗಿ ಶ್ರುತಿವೇದ್ಯವಾಗಬೇಕಾದರೆ ವರ್ಣಗಳನ್ನು ತಮ್ಮ ತಮ್ಮ ಉತ್ಪತ್ತಿಸ್ಥಾನಗಳಿಗೆ ತಕ್ಕಂತೆ ಉಚ್ಚರಿಸುತ್ತ, ಪ್ರತಿಪದದ ಆದಿಮ ಅಕ್ಷರವನ್ನು ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಸ್ಫುಟವಾಗಿ ಅರುಹುತ್ತ, ಛಂದಸ್ಸಿನ ಯತಿಸ್ಥಾನವನ್ನು ಗಮನಿಸಿಕೊಳ್ಳುತ್ತ ಪಠಿಸಬೇಕು. ಹೀಗೆ ಮಾಡಿದರೆ ನಮ್ಮ ಮನಸ್ಸಿನ ಮೇಲೆ ಯಾವುದೋ ಒಂದು ತೆರನಾದ ಪ್ರಭಾವ ಉಂಟಾಗುವುದು ನಿಶ್ಚಿತ. ಹೀಗಿದ್ದರೂ ಒಂದು ರಸವನ್ನೋ ಭಾವವನ್ನೋ ಅಭಿವ್ಯಂಜಿಸಲು ಇದೇ ಪಠನಕ್ರಮ ಅಥವಾ ಛಂದಸ್ಸು ಅನಿವಾರ್ಯ ಎಂದು ಹೇಳಲಾಗುವುದಿಲ್ಲ. ಹೇಮಚಂದ್ರನು ಪ್ರಾಯಶಃ ಈ ಇಂಗಿತದಿಂದ ಮೇಲಣ ಅಭಿಪ್ರಾಯವನ್ನು ತಳೆದಿರಬೇಕು.
* * *
ಕಾವ್ಯಾನುಶಾಸನವು ಅನುಪ್ರಾಸ, ಯಮಕ, ಚಿತ್ರ, ಶ್ಲೇಷ, ವಕ್ರೋಕ್ತಿ ಮತ್ತು ಪುನರುಕ್ತವದಾಭಾಸ ಎಂಬ ಆರು ಶಬ್ದಾಲಂಕಾರಗಳನ್ನು ವಿವರಿಸುತ್ತದೆ. ಈ ಭಾಗದಲ್ಲಿ ರುದ್ರಟನ ‘ಕಾವ್ಯಾಲಂಕಾರ’ದ ಪ್ರಭಾವವನ್ನು ಗುರುತಿಸಬಹುದು.
ಚಿತ್ರಕಾವ್ಯದ ಹಲವು ಪ್ರಭೇದಗಳನ್ನು ವರ್ಣಿಸುತ್ತ ಹೇಮಚಂದ್ರ ‘ಗರ್ಭಕವಿತೆ’ಯನ್ನು ಪ್ರಸ್ತಾವಿಸುತ್ತಾನೆ. ಇದರ ಉದಾಹರಣೆಯಾಗಿ ಚಂಪಕಮಾಲೆಯಲ್ಲಿ (ಇಲ್ಲಿಯ ಹೆಸರು ‘ಸಿದ್ಧಿ’) ಪ್ರಮಿತಾಕ್ಷರಾ ಮತ್ತು ದ್ರುತವಿಲಂಬಿತ ವೃತ್ತಗಳನ್ನು ಗರ್ಭೀಕರಿಸುವ ವಿಧಾನವನ್ನು ವಿವರಿಸುತ್ತಾನೆ. ವಿಶೇಷವೆಂದರೆ ಇಲ್ಲಿಯ ಚಂಪಕಮಾಲೆಯು ಗೌರೀಶಿವರನ್ನು ಒಟ್ಟಾಗಿ ಬಣ್ಣಿಸಿದರೆ, ಪ್ರಮಿತಾಕ್ಷರೆಯು ಶಿವನನ್ನೂ ದ್ರುತವಿಲಂಬಿತವು ಗೌರಿಯನ್ನೂ ಸ್ವತಂತ್ರವಾಗಿ ಬಣ್ಣಿಸುತ್ತವೆ:
ಚಂಪಕಮಾಲೆ, ಅರ್ಧನಾರೀಶ್ವರ:
ಸಿತ[ನೃಶಿರಃಸ್ರಜಾ ರಚಿತಮೌಲಿ ಶಿರೋ] ಮಣಿಮೌಕ್ತಿಕೈಸ್ತಥಾ
ಶಿಖಿ[ರುಚಿರೋರ್ಧ್ವದೃಕ್ಪೃಥುಲಲಾಟತಟೇ] ತಿಲಕಕ್ರಿಯಾ ಚ ಸಾ |
ಸ್ಫುಟ[ವಿಕಟಾಟ್ಟಹಾಸಲಲಿತಂ ವದನಂ] ಸ್ಮಿತಪೇಶಲಂ ಚ ತ-
ದಭಿ[ನವಮೀಶ್ವರೋ ವಹತಿ ವೇಷಮಹೋ] ತುಹಿನಾದ್ರಿಜಾರ್ಧಯುಕ್ || (ಪು. ೩೨೨)
ಅರ್ಧನಾರೀಶ್ವರನ ಮುಡಿಯಲ್ಲಿ ಒಂದೆಡೆ ನರಶಿರಸ್ಸುಗಳ ಮಾಲೆಯಿದ್ದರೆ ಇನ್ನೊಂದೆಡೆ ಮುತ್ತಿನ ಅಲಂಕಾರವಿದೆ. ಆತನ ವಿಶಾಲವಾದ ಹಣೆಯಲ್ಲಿ ಹೊಳೆಯುತ್ತಿರುವ ಬೆಂಕಿಗಣ್ಣೇ ತಿಲಕದಂತೆ ಕಂಗೊಳಿಸುತ್ತಿದೆ. ಅವನ ಮೊಗವು ಒಂದೆಡೆ ಮಂದಹಾಸದಿಂದಲೂ ಮತ್ತೊಂದೆಡೆ ವಿಕಟವಾದ ಅಟ್ಟಹಾಸದಿಂದಲೂ ಕೂಡಿದೆ. ಹೀಗೆ ಆತ ಅನನ್ಯವಾದ ಬೆರಗಿನ ರೂಪವನ್ನು ತಳೆದಿದ್ದಾನೆ.
ಪ್ರಮಿತಾಕ್ಷರಾ, ಶಿವ:
ನೃಶಿರಃಸ್ರಜಾ ರಚಿತಮೌಲಿ ಶಿರೋ
ರುಚಿರೋರ್ಧ್ವದೃಕ್ಪೃಥುಲಲಾಟತಟೇ |
ವಿಕಟಾಟ್ಟಹಾಸಲಲಿತಂ ವದನಂ
ನವಮೀಶ್ವರೋ ವಹತಿ ವೇಷಮಹೋ ||
ಶಿವನು ನರಶಿರಸ್ಸುಗಳ ಮಾಲೆಯಿಂದ ಮುಡಿ ಕಟ್ಟಿಕೊಂಡಿದ್ದಾನೆ. ಆತನ ವಿಶಾಲವಾದ ಹಣೆಯಲ್ಲಿ ಬೆಂಕಿಗಣ್ಣು ಕಂಗೊಳಿಸುತ್ತಿದೆ. ವಿಕಟವಾದ ಅಟ್ಟಹಾಸದಿಂದ ಕೂಡಿದ ಮೊಗದ ಈಶ್ವರನು ಅನನ್ಯವಾದ ವಿಸ್ಮಯಕರ ರೂಪವನ್ನು ತಳೆದಿದ್ದಾನೆ.
ಸಿತನೃಶಿರಃಸ್ರಜಾ {ರಚಿತಮೌಲಿ ಶಿರೋ ಮಣಿಮೌಕ್ತಿಕೈ}ಸ್ತಥಾ
ಶಿಖಿರುಚಿರೋರ್ಧ್ವದೃಕ್{ಪೃಥುಲಲಾಟತಟೇ ತಿಲಕಕ್ರಿಯಾ} ಚ ಸಾ |
ಸ್ಫುಟವಿಕಟಾಟ್ಟಹಾ{ಸಲಲಿತಂ ವದನಂ ಸ್ಮಿತಪೇಶಲಂ} ಚ ತ-
ದಭಿನವಮೀಶ್ವರೋ {ವಹತಿ ವೇಷಮಹೋ ತುಹಿನಾದ್ರಿಜಾ}ರ್ಧಯುಕ್ ||
ದ್ರುತವಿಲಂಬಿತ, ಪಾರ್ವತಿ:
ರಚಿತಮೌಲಿ ಶಿರೋ ಮಣಿಮೌಕ್ತಿಕೈಃ
ಪೃಥುಲಲಾಟತಟೇ ತಿಲಕಕ್ರಿಯಾ |
ಸಲಲಿತಂ ವದನಂ ಸ್ಮಿತಪೇಶಲಂ
ವಹತಿ ವೇಷಮಹೋ ತುಹಿನಾದ್ರಿಜಾ ||
ಗಿರಿಜೆಯ ಶಿರದಲ್ಲಿ ಮುತ್ತು-ರತ್ನಗಳು ತೊಳಗುತ್ತಿವೆ. ಅವಳ ವಿಶಾಲವಾದ ಹಣೆಯಲ್ಲಿ ಕಲ್ಯಾಣತಿಲಕ ಶೋಭಿಸುತ್ತಿದೆ. ಆಕೆಯ ಮೊಗ ಮಂದಹಾಸದಿಂದ ಸುಂದರವಾಗಿದೆ. ಹೀಗೆ ಆಕೆ ಬೆರಗಿನ ರೂಪವನ್ನು ತಳೆದಿದ್ದಾಳೆ.
ಇದೊಂದು ವಿಶಿಷ್ಟವಿನೂತನ ಗರ್ಭಕವಿತೆ. ಹೆಚ್ಚಿನ ಚಿತ್ರಪದ್ಯಗಳು ಶುಷ್ಕವೂ ದುರ್ಬೋಧವೂ ಎನಿಸುವ ಹಿನ್ನೆಲೆಯಲ್ಲಿ ವಿಶದವೂ ಚಮತ್ಕಾರಮಯವೂ ಆದ ಪ್ರಕೃತ ಪದ್ಯ ಅನನ್ಯವಾಗಿದೆ. ಅರ್ಧನಾರೀಶ್ವರನನ್ನು ವರ್ಣ್ಯ ವಿಷಯವಾಗಿ ಸ್ವೀಕರಿಸಿರುವುದು ಇಲ್ಲಿಯ ಒಂದು ಮುಖ್ಯ ಗುಣ. ಇದರಿಂದ ದೊಡ್ಡ ವೃತ್ತದಲ್ಲಿ ಶಿವ-ಶಿವೆಯರ ಸಮಾಹಾರವನ್ನು ವರ್ಣಿಸಿ, ಅದರಿಂದ ಒಡಮೂಡುವ ಎರಡು ಚಿಕ್ಕ ವೃತ್ತಗಳಲ್ಲಿ ಶಿವ-ಶಿವೆಯರನ್ನು ಪ್ರತ್ಯೇಕವಾಗಿ ಬಣ್ಣಿಸುವ ಅವಕಾಶವೊದಗುತ್ತದೆ. ಇಷ್ಟು ಸೊಗಸಾದ, ಅಚ್ಚುಕಟ್ಟಾದ ಗರ್ಭಕವಿತೆಯ ಉದಾಹರಣೆಯನ್ನು ಯಾವ ಪ್ರಾಚೀನ ಆಲಂಕಾರಿಕರೂ ನೀಡಲ್ಲವೆಂಬ ತಥ್ಯ ಹೇಮಚಂದ್ರನ ಸಾಮರ್ಥ್ಯವನ್ನು ಪರ್ಯಾಯವಾಗಿ ಸಾರುತ್ತಿದೆ.
* * *
ಅರ್ಥಾಲಂಕಾರಗಳ ಪೈಕಿ ಇಪ್ಪತ್ತೊಂಬತ್ತು ನುಡಿಬೆಡಗುಗಳಿಗೆ ಮಾತ್ರ ಅವಕಾಶವನ್ನಿತ್ತಿರುವ ಹೇಮಚಂದ್ರನು ಮಮ್ಮಟನು ಎತ್ತಿಹಿಡಿದಿದ್ದ ಅರುವತ್ತೊಂದು ಅಲಂಕೃತಿಗಳ ಪಟ್ಟಿಯನ್ನು ಗಣನೀಯವಾಗಿ ತಗ್ಗಿಸಿದ್ದಾನೆ. ಕಾವ್ಯಶೋಭಾಕರ ಧರ್ಮಗಳಾದ ಇವುಗಳಲ್ಲಿ ಗೌಣವಾದುವನ್ನು ಕೈಬಿಟ್ಟೋ ಪ್ರಮುಖವಾದವುಗಳಲ್ಲಿ ಅಡಗಿಸಿಯೋ ಔಚಿತ್ಯವನ್ನು ಮೆರೆದಿದ್ದಾನೆ. ಈ ಪ್ರಕಾರ ಸಂಸೃಷ್ಟಿ ಸಂಕರದಲ್ಲಿಯೇ ಸೇರುತ್ತದೆ; ತುಲ್ಯಯೋಗಿತೆಗೆ ದೀಪಕದಲ್ಲಿಯೇ ಎಡೆ ದಕ್ಕುತ್ತದೆ; ಪರ್ಯಾಯ-ಪರಿವೃತ್ತಿಗಳು ಪರಾವೃತ್ತಿ ಎಂಬ ಒಂದೇ ಅಲಂಕಾರದಲ್ಲಿ ಅಡಗುತ್ತವೆ; ಅನನ್ವಯ ಮತ್ತು ಉಪಮೇಯೋಪಮೆ ಉಪಮೆಯ ಪ್ರಭೇದಗಳೇ ಹೊರತು ಸ್ವತಂತ್ರ ಅಲಂಕೃತಿಗಳಲ್ಲ; ದೃಷ್ಟಾಂತ ಮತ್ತು ಪ್ರತಿವಸ್ತೂಪಮೆಗಳು ನಿದರ್ಶನೆಯಲ್ಲಿಯೇ ಕರಗುತ್ತವೆ. ಹಿಂದಿನವರು ಬಹುವಾಗಿ ಚರ್ಚಿಸಿ ಗೊಂದಲವಾಗಿಸಿದ್ದ ರಸವತ್, ಪ್ರೇಯಸ್, ಊರ್ಜಸ್ವೀ ಮತ್ತು ಸಮಾಹಿತಗಳನ್ನು ಹೇಮಚಂದ್ರನು ಕೈಬಿಟ್ಟು ಅಪ್ಪಟ ರಸಧ್ವನಿವಾದಿ ಎನಿಸಿದ್ದಾನೆ.
ಈ ಪ್ರಕ್ರಿಯೆಯ ಫಲವಾಗಿ ಹೇಮಚಂದ್ರನು ಗಣಿಸುವ ಅಲಂಕಾರಗಳು ಇವು: ಉಪಮೆ, ಉತ್ಪ್ರೇಕ್ಷೆ, ರೂಪಕ, ನಿದರ್ಶನಾ, ದೀಪಕ, ಅನ್ಯೋಕ್ತಿ, ಪರ್ಯಾಯೋಕ್ತ, ಅತೊಶಯೋಕ್ತಿ, ಆಕ್ಷೇಪ, ವಿರೋಧ, ಸಹೋಕ್ತಿ, ಸಮಾಸೋಕ್ತಿ, ಜಾತಿ, ವ್ಯಾಜಸ್ತುತಿ, ಶ್ಲೇಷ, ವ್ಯತಿರೇಕ, ಅರ್ಥಾಂತರನ್ಯಾಸ, ಸಸಂದೇಹ, ಅಪಹ್ನುತಿ, ಪರಾವೃತ್ತಿ, ಅನುಮಾನ, ಸ್ಮೃತಿ, ಭ್ರಾಂತಿ, ವಿಷಮ, ಸಮ, ಸಮುಚ್ಚಯ, ಪರಿಸಂಖ್ಯಾ, ಕಾರಣಮಾಲೆ ಮತ್ತು ಸಂಕರ.
ಇಲ್ಲಿಯೂ ಅನಪೇಕ್ಷಿತ ಅಲಂಕಾರಗಳು ಇಲ್ಲದಿಲ್ಲ. ಆದರೆ ಕುಂತಕನಿಂದ ಸ್ಫೂರ್ತಿ ಪಡೆದ ಹೇಮಚಂದ್ರ ಎಷ್ಟೋ ಕೃತ್ರಿಮ ವಾಗ್ವಿಕಲ್ಪಗಳನ್ನು ದೂರವಿಟ್ಟಿರುವುದು ಮೆಚ್ಚತಕ್ಕ ವಿಷಯ. ಈ ಅಧ್ಯಾಯದ ವ್ಯಾಖ್ಯಾನವು ‘ಸರಸ್ವತೀಕಂಠಾಭರಣ’ದಲ್ಲಿ ಭೋಜನು ಹೇಳುವ ಹೆಚ್ಚಿನ ಅಲಂಕಾರಗಳನ್ನು ಉಲ್ಲೇಖಿಸಿ ಅವುಗಳ ಸಾಧಕ-ಬಾಧಕಗಳನ್ನು ಚರ್ಚಿಸುತ್ತದೆ. ಅಲಂಕಾರಕ್ಕಿರುವ ಶಬ್ದ ಮತ್ತು ಅರ್ಥಗಳೆಂಬ ಎರಡು ಆಯಾಮಗಳ ಪೈಕಿ ಯಾವಾಗ ಯಾವುದಕ್ಕೆ ಪ್ರಾಮುಖ್ಯ ಬರುವುದೆಂಬ ಪ್ರಶ್ನೆಯನ್ನು ಎತ್ತಿಕೊಂಡು, ಯಾವ ಆಯಾಮದಲ್ಲಿ ವೈಚಿತ್ರ್ಯ ಮಿಗಿಲಾಗಿರುವುದೋ ಅದೇ ಅಲಂಕಾರವೆನಿಸುವುದೆಂದು ಹೇಮಚಂದ್ರನು ಹೇಳಿರುವ ಉತ್ತರ ಎಲ್ಲರೂ ಒಪ್ಪುವಂತಿದೆ (ಪು. ೪೦೧).
* * *
ವಿವಿಧ ಪಾತ್ರಗಳನ್ನೂ ಅವರ ಸ್ವಭಾವಗಳನ್ನೂ ಕಟಾಕ್ಷಿಸುವ ಏಳನೆಯ ಅಧ್ಯಾಯವು ‘ದಶರೂಪಕ’ವನ್ನು ಮೇಲ್ಪಂಕ್ತಿಯಾಗಿ ಸ್ವೀಕರಿಸಿದೆ. ಜೊತೆಗೆ ನಾಟ್ಯಶಾಸ್ತ್ರ ಹಾಗೂ ಅಭಿನವಭಾರತಿಗಳನ್ನು ನಚ್ಚಿ ಸಾಗಿದೆ. ಇಲ್ಲಿಯ ವ್ಯಾಖ್ಯಾನಭಾಗವು ಗ್ರಂಥದ ಬೇರೆಯ ಭಾಗಗಳಿಗೆ ಹೋಲಿಸಿದರೆ ಸಂಕ್ಷಿಪ್ತವಾಗಿದೆ.
ಎಂಟನೆಯ ಅಧ್ಯಾಯದಲ್ಲಿ ನಾಟಕ, ಪ್ರಕರಣ, ಸಮವಕಾರ, ಈಹಾಮೃಗ, ಡಿಮ, ವ್ಯಾಯೋಗ, ಉತ್ಸೃಷ್ಟಿಕಾಂಕ, ಪ್ರಹಸನ, ಭಾಣ ಮತ್ತು ವೀಥೀ ಎಂಬ ಹತ್ತು ಪ್ರಸಿದ್ಧ ರೂಪಕಪ್ರಭೇದಗಳ ಜೊತೆಗೆ ನಾಟಿಕೆ ಮತ್ತು ಸಟ್ಟಕಗಳನ್ನೂ ಪರಾಮರ್ಶಿಸಲಾಗಿದೆ. ಇಲ್ಲಿಯ ಎರಡನೆಯ ಸೂತ್ರದ ವೃತ್ತಿ ಹಾಗೂ ವ್ಯಾಖ್ಯಾನಗಳಲ್ಲಿ ತೋಟಕವೆಂಬ ಪ್ರಭೇದವನ್ನು ವಿವೇಚಿಸಲಾಗಿದೆ. ಮುಂದೆ ಗೇಯಪ್ರೇಕ್ಷ್ಯಗಳ ವಲಯಕ್ಕೆ ಬರುವ ಡೊಂಬಿಕಾ, ಭಾಣ, ಪ್ರಸ್ಥಾನ, ಸಿಂಗಕ, ಭಾಣಿಕಾ, ಪ್ರೇರಣ, ರಾಮಾಕ್ರೀಡ, ಹಲ್ಲೀಸಕ, ರಾಸಕ, ಶ್ರೀಗದಿತ ಮತ್ತು ರಾಗಕಾವ್ಯಗಳೆಂಬ ಹನ್ನೊಂದು ಪ್ರಭೇದಗಳನ್ನು ವಿವರಿಸಲಾಗಿದೆ. ಇವುಗಳೊಟ್ಟಿಗೆ ಶಂಪಾ, ಛಲಿತ ಮತ್ತು ದ್ವಿಪದಿಗಳೆಂಬ ಹೆಚ್ಚಿನ ಬಗೆಗಳ ಮೇಲೂ ಬೆಳಕು ಚೆಲ್ಲಲಾಗಿದೆ.
ಹೇಮಚಂದ್ರನ ಶಿಷ್ಯನಾದ ರಾಮಚಂದ್ರನು ರಚಿಸಿದ ‘ನಾಟ್ಯದರ್ಪಣ’ವು ಈ ವಿಷಯಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಕಾವ್ಯಾನುಶಾಸನದ ಪ್ರಕೃತ ಸಂದರ್ಭವನ್ನು ಈ ಗ್ರಂಥದ ಜೊತೆ ತೌಲನಿಕವಾಗಿ ಅಧ್ಯಯನ ಮಾಡಬಹುದು.
* * *
ಶ್ರವ್ಯಕಾವ್ಯಗಳ ಪೈಕಿ ಮಹಾಕಾವ್ಯ, ಆಖ್ಯಾಯಿಕಾ, ಕಥೆ, ಚಂಪೂ ಮತ್ತು ಅನಿಬದ್ಧಗಳೆಂಬ ಐದು ಪ್ರಭೇದಗಳನ್ನು ಹೇಮಚಂದ್ರನು ಹೆಸರಿಸುತ್ತಾನೆ. ಮಹಾಕಾವ್ಯವನ್ನು ಲಕ್ಷಿಸುವಾಗ ಅದು ಸಂಸ್ಕೃತ, ಪ್ರಾಕೃತ, ಅಪಭ್ರಂಶ ಅಥವಾ ಗ್ರಾಮ್ಯ ಭಾಷೆಗಳಲ್ಲಿ ರಚಿತವಾಗಲು ಸಾಧ್ಯವೆಂದು ಸಾರುವ ಗ್ರಂಥಕಾರ ಭಾಷೆಗಳಲ್ಲಿ ಭೇದವನ್ನೆಣಿಸದೆ ಔದಾರ್ಯವನ್ನು ಮೆರೆದಿದ್ದಾನೆ. ಹೆಚ್ಚಿನ ಆಲಂಕಾರಿಕರು ರೂಪಕಕ್ಕೆ ಮಾತ್ರ ಸೀಮಿತವಾಗಿಸುವ ‘ಸಂಧಿ’ಗಳನ್ನು ಭಾಮಹನಂತೆ ಹೇಮಚಂದ್ರನೂ ಮಹಾಕಾವ್ಯದಲ್ಲಿ ಅಂಗೀಕರಿಸಿರುವುದು (೮.೬) ಅವನ ಋಜುದೃಷ್ಟಿಗೆ ಒಳ್ಳೆಯ ನಿದರ್ಶನ.
ಇಲ್ಲಿ ಹೆಸರಿಸಲಾದ ಕೆಲವು ಕಾವ್ಯಗಳು ಇಂದು ಲಭ್ಯವಿಲ್ಲ. ಉದಾ: ‘ಅಬ್ಧಿಮಂಥನ’ ಎಂಬ ಅಪಭ್ರಂಶಕಾವ್ಯ, ‘ಭೀಮಕಾವ್ಯ’ ಎಂಬ ಗ್ರಾಮ್ಯರಚನೆ, ‘ಹರಿಪ್ರಬೋಧ’ ಎಂಬ ಆಶ್ವಾಸಕಗಳಾಗಿ ವಿಭಕ್ತವಾದ ಸಂಸ್ಕೃತಕಾವ್ಯ.
ಕಥೆ-ಆಖ್ಯಾಯಿಕೆಗಳ ಪ್ರಸ್ತಾವದಲ್ಲಿಯೂ ಕೆಲವು ಅಪೂರ್ವ ಕೃತಿಗಳ ಉಲ್ಲೇಖವಿದೆ: ‘ಗೋವಿಂದ’, ‘ಚೇಟಕ’, ‘ಗೋರೋಚನಾ’, ‘ಅನಂಗವತೀ’, ‘ಮತ್ಸ್ಯಹಸಿತ’, ‘ಇಂದುಮತೀ’, ‘ಸಮರಾದಿತ್ಯ’, ಇತ್ಯಾದಿ (ಪು. ೪೬೩-೬೫). ಕಥಾಪ್ರಭೇದಗಳಾಗಿ ಹೇಮಚಂದ್ರನು ಆಖ್ಯಾನ, ನಿದರ್ಶನಾ, ಪ್ರವಹ್ಲಿಕಾ, ಮಂಥಲ್ಲಿಕಾ, ಮಣಿಕುಲ್ಯಾ, ಪರಿಕಥಾ, ಖಂಡಕಥಾ, ಸಕಲಕಥಾ ಮತ್ತು ಬೃಹತ್ಕಥೆಗಳನ್ನು ಅಂಗೀಕರಿಸಿದ್ದಾನೆ. ಕಾವ್ಯಪ್ರಭೇದಗಳನ್ನು ಕುರಿತ ಇಲ್ಲಿಯ ವಿವರಗಳು ಭೋಜನ ‘ಶೃಂಗಾರಪ್ರಕಾಶ’ದ ಉಪಜೀವಿಗಳಾಗಿವೆ.
* * *
ಉಪಸಂಹಾರ
ಇದುವರೆಗೆ ನಡಸಿದ ವಿವೇಚನೆಯಿಂದ ಕಾವ್ಯಾನುಶಾಸನದ ಸ್ವರೂಪ ಮತ್ತು ಮಹತ್ತ್ವಗಳು ಮನದಟ್ಟಾಗಿವೆ. ಹೇಮಚಂದ್ರನ ಇತರ ಕೃತಿಗಳಂತೆ ಇದೂ ವಿದ್ಯಾರ್ಥಿಗಳಿಗೆ ಹೇಗೋ ವಿದ್ವಾಂಸರಿಗೂ ಹಾಗೆ ಉಪಾದೇಯವಾಗಿದೆ. ಭರತ, ರಾಜಶೇಖರ, ಅಭಿನವಗುಪ್ತ, ಭೋಜ ಮುಂತಾದ ಪೂರ್ವಸೂರಿಗಳ ಗ್ರಂಥಗಳಿಂದ ಸಾಕಷ್ಟು ನಿಡಿದಾದ ಭಾಗಗಳನ್ನು ಉದ್ಧರಿಸುವ ಹೇಮಚಂದ್ರನ ಮೇಲೆ ಕೃತಿಚೌರ್ಯದ ಆರೋಪವನ್ನು ಕೆಲವರು ವಿದ್ವಾಂಸರು ಹೊರಿಸಿದ್ದಾರೆ. ಇದು ಸರಿಯಲ್ಲ. ಹೇಮಚಂದ್ರನ ಉದ್ದೇಶ ಶಾಸ್ತ್ರದ ಸಂಗ್ರಹವೇ ಹೊರತು ಕೃತಿಚೌರ್ಯವಲ್ಲ. ಸ್ವಯಂ ಮಹಾಪಂಡಿತನೂ ಅಪಾರ ವಿದ್ವತ್ಸಂಪರ್ಕ ಉಳ್ಳವನೂ ಪ್ರತಿಭಾಶಾಲಿಯೂ ಆದ ಈತನಿಗೆ ಬೇರೆಯವರ ಬರೆಹಗಳನ್ನು ಅನಾಮತ್ತಾಗಿ ಕಸಿದುಕೊಳ್ಳಬೇಕಾದ ಯಾವ ಪ್ರಮೇಯವೂ ಇಲ್ಲ. ಜೊತೆಗೆ ಹೆಚ್ಚಿನ ಸ್ಥಳಗಳಲ್ಲಿ ಉದ್ಧರಣಗಳ ಮುನ್ನವೋ ಬಳಿಕವೋ ಆಯಾ ಆಕರಗಳನ್ನು ಸ್ಪಷ್ಟವಾಗಿ ನಿರ್ದೇಶಿಸಿದ್ದಾನೆ.
ಒಟ್ಟಿನಲ್ಲಿ ಭಾರತೀಯ ಅಲಂಕಾರಶಾಸ್ತ್ರದ ಪ್ರಮುಖ ಪ್ರಮೇಯಗಳನ್ನು ಒಂದೆಡೆ ಸರಳವಾಗಿ, ಸಂಗ್ರಹವಾಗಿ, ಸ್ಪಷ್ಟವಾಗಿ ತಿಳಿಯಲು ಬಯಸುವವರೆಲ್ಲ ಓದಿ ಬೋಧ-ಮೋದಗಳನ್ನು ಪಡೆಯಬಲ್ಲ ಕೃತಿ ಕಾವ್ಯಾನುಶಾಸನ. ತನ್ನ ಮುನ್ನ ಮತ್ತು ಬಳಿಕ ರಚಿತವಾದ ಕಾವ್ಯಪ್ರಕಾಶ ಮತ್ತು ಸಾಹಿತ್ಯದರ್ಪಣಗಳಿಗೆ ಸಿಕ್ಕ ಪ್ರಾಶಸ್ತ್ಯದಿಂದ ಹೇಮಚಂದ್ರನ ಈ ಕೃತಿ ಸ್ವಲ್ಪ ಅವಜ್ಞೆಗೆ ಈಡಾದಾಂತಿದೆ. ಇನ್ನು ಮುಂದಾದರೂ ಇದರ ಅಧ್ಯಾಯನ-ಅಧ್ಯಾಪನಗಳು ಭರದಿಂದ ಸಾಗಲೆಂದು ಆಶಿಸೋಣ.
* * *
ಗ್ರಂಥಋಣ
- ಪ್ರಭಾಚಂದ್ರನ ಪ್ರಭಾವಕಚರಿತ (ಸಂ. ಜಿನವಿಜಯ ಮುನಿ). ಸಿಂಧೀ ಜೈನ ಗ್ರಂಥಮಾಲಾ, ಅಹಮದಾಬಾದ್, ೧೯೪೦
- ಹೇಮಚಂದ್ರನ ಕಾವ್ಯಾನುಶಾಸನ (ಎರಡು ಸಂಪುಟಗಳು; ಸಂ. ರಸಿಕಲಾಲ್ ಪರೀಖ್ ಮತ್ತು ರಾಮಚಂದ್ರ ಆಠವಳೆ). ಶ್ರೀ ಮಹಾವೀರ ಜೈನ ವಿದ್ಯಾಲಯ, ಬಾಂಬೆ, ೧೯೩೮. [ಈ ಉದ್ಗ್ರಂಥದ ಮೊದಲ ಸಂಪುಟದಲ್ಲಿ ಗುಜರಾತಿನ ಪ್ರಾಚೀನ ಇತಿಹಾಸ, ಅಲ್ಲಿಯ ರಾಜವಂಶಗಳು, ಆ ನೆಲದಲ್ಲಿ ಸಾಹಿತ್ಯವಿದ್ಯೆ ಬೆಳೆದ ಬಗೆ, ಹೇಮಚಂದ್ರನ ದೇಶ-ಕಾಲ, ಆತನ ವಾಙ್ಮಯಪ್ರಪಂಚವೇ ಮೊದಲಾದ ಅನೇಕ ವಿಷಯಗಳ ಬಗೆಗೆ ಮೌಲಿಕವಾದ ಮಾಹಿತಿಯಿದೆ. ಜೊತೆಗೆ ಕಾವ್ಯಾನುಶಾಸನದ ಅಧ್ಯಯನಕ್ಕೆ ಅನುಕೂಲಿಸುವ ಟಿಪ್ಪಣಿಗಳೂ ಇವೆ. ಎರಡನೆಯ ಭಾಗದಲ್ಲಿ ಮೂಲಪಾಠ್ಯದೊಡನೆ ನಾಲ್ಕಾರು ಅನುಬಂಧಗಳು ಸೇರಿವೆ. ಹೀಗೆ ಬಹುವಿಧದಿಂದ ಉಪಕಾರಕವಾದ ಈ ಗ್ರಂಥದಿಂದ ನಾನು ಬಹಳಷ್ಟು ಪ್ರಯೋಜನವನ್ನು ಪಡೆದಿದ್ದೇನೆ. ಇದಕ್ಕಾಗಿ ಶ್ರೇಷ್ಠ ವಿದ್ವಾಂಸರಾದ ರಸಿಕಲಾಲ್ ಪರೀಖ್ ಮತ್ತು ರಾಮಚಂದ್ರ ಆಠವಳೆ ಅವರಿಗೆ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ.]
- Studies in Indian Aesthetics and Criticism. Krishnamoorthy, K. DVK Murthy Publishers, Mysore, 1979
[1] “ನ ಚೈತೇ ಪ್ರೀತಿವ್ಯುತ್ಪತ್ತೀ ಭಿನ್ನರೂಪೇ ಏವ, ದ್ವಯೋರಪ್ಯೇಕವಿಷಯತ್ವಾತ್” (ಲೋಚನ, ೩.೧೪)
[2] ಈತನನ್ನು ಕುರಿತು ಕೆ. ಕೃಷ್ಣಮೂರ್ತಿ ಅವರು ಒಳ್ಳೆಯ ಲೇಖನವೊಂದನ್ನು ರಚಿಸಿದ್ದಾರೆ. ನೋಡಿ: ‘Maṅgala, a Neglected Name in Sanskrit Poetics’ (‘Studies in Indian Aesthetics and Criticism’. pp. 109–20)
Concluded.