ಕನ್ನಡರಾಜ್ಯೋತ್ಸವ ಬಂದೊಡನೆಯೇ ಕನ್ನಡವನ್ನು ಕುರಿತ ಚಿಂತನೆ ನಮ್ಮೆಲ್ಲರ ಮನಸ್ಸಿನ ಮೇಲ್ಪದರಕ್ಕೆ ಬರುವುದು ಅಚ್ಚರಿಯೇನಲ್ಲ. ಈ ಮೂಲಕ ಮೈದೋರುವ ವಿಚಾರ ಸಾರ್ವಕಾಲಿಕವಾದರೆ ಅದಕ್ಕಿಂತ ಒಳ್ಳೆಯ ಸಂಗತಿ ಮತ್ತಾವುದು? ಸದ್ಯದ ಈ ಬರೆಹ ಇಂಥ ಒಂದು ಮೂಲಭೂತಚಿಂತನೆಯನ್ನು ಆಸಕ್ತರೊಡನೆ ಹಂಚಿಕೊಳ್ಳುವ ಹವಣು.
ಜಗತೀಕರಣದ ಅಬ್ಬರದಲ್ಲಿ ತತ್ತರಿಸಿಹೋಗುವ ಮೌಲ್ಯಗಳ ಪೈಕಿ ಭಾಷೆಯೂ ಒಂದು. ಇದರ ಎದುರು ನಿಲ್ಲುವ ಭಾಷೆಗೆ ಉಂಟಾಗುವ ನಷ್ಟ ಎಲ್ಲೆ ಮೀರಿದ್ದು. ಚೋದ್ಯವೇನೆಂದರೆ ಜಗತೀಕರಣದ ಆಯುಧವಾಗಿ ಬಳಕೆಗೊಳ್ಳುವ ಭಾಷೆ ಕೂಡ ತನ್ನ ನಯ-ನವುರುಗಳನ್ನೂ ವೈವಿಧ್ಯ-ವೈಚಿತ್ರ್ಯಗಳನ್ನೂ ಸಾಕಷ್ಟು ಕಳೆದುಕೊಳ್ಳುತ್ತದೆ. ಒಟ್ಟಿನಲ್ಲಿ ನಮ್ಮ ಗಾದೆಯೊಂದು ಹೇಳುವಂತೆ “ಯುದ್ಧದಲಿ ಗೆದ್ದವನು ಸೋತ, ಸೋತವನು ಸತ್ತ.” ಇಂಥ ವಿಷಮಸಂದರ್ಭದಲ್ಲಿ ಜಗತೀಕರಣದ ಆಯುಧವಾಗದ ನಮ್ಮ ಕನ್ನಡದಂಥ ನುಡಿಯ ಪರಿಸ್ಥಿತಿಯನ್ನು ವಿವೇಚಿಸುವುದು ಎಂದಿಗಿಂತ ಮಿಗಿಲಾದ ತುರ್ತಾಗುತ್ತದೆ. ಈ ಬಗೆಯ ಚಿಂತನೆಗೆ ಅನೇಕ ಮುಖಗಳಿವೆ. ಇವುಗಳ ಹತ್ತಾರು ಆಯಾಮಗಳನ್ನು ಸಾಕಷ್ಟು ಮಂದಿ ವಿವೇಕಿಗಳು ಚರ್ಚಿಸಿದ್ದಾರೆ. ಅವನ್ನೆಲ್ಲ ಇಲ್ಲಿ ಪರಿಶೀಲಿಸುವ ಸಾಹಸ ಬೇಕಿಲ್ಲ. ಆ ಚಿಂತನೆಗಳು ಒಳಗೊಳ್ಳದ ಒಂದು ಮುಖವನ್ನು ಮಾತ್ರ ನಾವಿಲ್ಲಿ ಗಮನಿಸಬಹುದು.
ಈ ಬೆಳಕಿನಲ್ಲಿ ಕಂಡಾಗ ನಮಗೆ ಪಾಶ್ಚಾತ್ಯಪ್ರಪಂಚ ಮತ್ತು ಜಗತೀಕರಣದ ಝಳ ಭಾಷಿಕವಾಗಿ ಇಂಗ್ಲಿಷಿನ ಮೂಲಕ ಆಯಿತೆಂಬುದು ಸುವೇದ್ಯ. ವಿಶೇಷತಃ ಈ ಪ್ರಭಾವದಿಂದ ಈಚೆಗೆ ನಮ್ಮ ನುಡಿಗಳಲ್ಲಿ ಅವಿಭಾಜ್ಯವಾಗಿದ್ದ ಗದ್ಯ, ಪದ್ಯ ಮತ್ತು ಗೀತಗಳೆಂಬ ಮೂರು ನುಡಿಜಾಡುಗಳ ಅರ್ಥಪೂರ್ಣವಾದ ವ್ಯತ್ಯಾಸ ಕ್ರಮೇಣ ಕರಗಿಹೋಯಿತು. ಆಂಗ್ಲಪ್ರಭಾವಕ್ಕೆ ತುತ್ತಾಗಿಯೂ ಅದರಿಂದ ಧನಾತ್ಮಕವಾದ ಪ್ರೇರಣೆಯನ್ನು ಹೆಚ್ಚಾಗಿ ಪಡೆದ ನವೋದಯಸಾಹಿತ್ಯ ಕನ್ನಡದ ಗದ್ಯ, ಪದ್ಯ ಮತ್ತು ಗೀತಭಾಷೆಗಳ ಔಚಿತ್ಯ-ವೈವಿಧ್ಯಗಳನ್ನು ಅದೊಂದುಮಟ್ಟಿಗೆ ಉಳಿಸಿ ಬೆಳೆಸಿತಾದರೂ ನವ್ಯ ಮತ್ತು ನವ್ಯೋತ್ತರಸಾಹಿತ್ಯದ ಹಲವು ಚಳವಳಿಗಳು ಈ ಸಂವೇದನೆಗೆ ಕುರುಡಾದವು; ಮಾತ್ರವಲ್ಲ, ಅದರ ಅಳಿವಿಗೂ ಕೈಜೋಡಿಸಿದವು. ಜಗತೀಕರಣವು ಯಾವುದನ್ನೂ ಹಸಿಹಸಿಯಾದ ವಾಣಿಜ್ಯವಸ್ತುವಾಗಿ ನೋಡುವ ಕಾರಣ ಅದಕ್ಕೆ ಭಾಷೆಯ ಸೂಕ್ಷ್ಮಸಂವೇದನೆಗಳು ತಿಳಿಯುವುದಿಲ್ಲ; ತಿಳಿದರೂ ಅವನ್ನು ಆದರಿಸಿ ಅನುಸಂಧಾನಿಸುವುದಿಲ್ಲ. ಪದ್ಯ ಮತ್ತು ಗೀತಗಳ ಭಾಷೆಗಳು ಅದರ ಧೂರ್ತವರ್ತಕಪ್ರಜ್ಞೆಗೆ ನಿರುಪಯೋಗಿಯಾಗಿ, ಪ್ರಗತಿವಿಮುಖವಾಗಿ, ಕೆಲವೊಮ್ಮೆ ಅಪಾಯಕಾರಿಯೂ ಆಗಿ ತೋರುವ ಕಾರಣ ಇವನ್ನು ಉಪೇಕ್ಷಿಸಿದಷ್ಟೂ ಹತ್ತಿಕ್ಕಿದಷ್ಟೂ ತನಗೆ ಅನುಕೂಲ ಮತ್ತು ಲಾಭಕರವೆಂದು ಬಗೆದು ಹಾಗೆ ಮಾಡುವಲ್ಲಿ ಸಫಲವೂ ಅಗುತ್ತಿದೆ; ಅಥವಾ ಆಗಿಯೇಬಿಟ್ಟಿದೆ. ಇದು ನಿಜಕ್ಕೂ ತುಂಬ ಕಳವಳ ಹುಟ್ಟಿಸುವಂಥದ್ದು. ದುರ್ದೈವವೆಂದರೆ ನಮ್ಮ ಅನೇಕ ಸಾಹಿತಿಗಳು ಜಗತೀಕರಣದ ಬಂಡವಾಳಶಾಹಿ ವ್ಯವಸ್ಥೆಗೆ ವಿರುದ್ಧವಿದೆಯೆಂದು ತಾವು ನಂಬಿದ ಮಾರ್ಕ್ಸ್ ವಾದ, ಮಾವೋವಾದ ಸಮಾಜವಾದ ಮುಂತಾದುವು ನಮ್ಮ ನುಡಿಯ ಸೂಕ್ಷ್ಮತೆಗಳನ್ನು ಬಾಳಿಸುವುದೆಂದು ಹೇಳುತ್ತ ಜನಸಾಮಾನ್ಯರನ್ನು ಮರುಳುಗೊಳಿಸಿದರಾದರೂ ಈ ಬಗೆಯ ತಥಾಕಥಿತ “ಸಮತಾವಾದ”ಗಳು ಭಾಷೆ ಮತ್ತು ಸಂಸ್ಕೃತಿಗಳ ಜೀವಾಳವನ್ನು ಕೊಲ್ಲುವುದರಲ್ಲಿ ಬಂಡವಾಳಶಾಹಿಗಳಿಗಿಂತ ಮಿಗಿಲೆಂಬುದು ಮತ್ತೂ ಭಯಂಕರವಾಸ್ತವ.
ಇಂಗ್ಲಿಷ್ ಭಾಷೆಯಲ್ಲಿ ವಿಲಿಯಮ್ ವರ್ಡ್ಸ್ವರ್ತನಿಗಿಂತ ಈಚೆಗೆ ಸಾಹಿತ್ಯದ ಪದ್ಯಭಾಷೆ ಮತ್ತು ಗದ್ಯಭಾಷೆಗಳ ನಡುವೆ ವ್ಯತ್ಯಾಸ ಇರಬಾರದೆಂಬ ಆಲೋಚನೆ ಪ್ರಬಲಿಸಿದಂತೆ ತೋರುತ್ತದೆ. ಮೂಲತಃ ಗದ್ಯಗಂಧವೇ ಹೆಚ್ಚಾದ ಇಂಗ್ಲಿಷಿಗೆ ಈ ಮಾರ್ಪಾಡು ಸ್ವಲ್ಪವಾದರೂ ಅನುಕೂಲಿಸಬಹುದು. ಆದರೆ ಹಾಗಲ್ಲದ ಮಿಕ್ಕೆಷ್ಟೋ ನುಡಿಗಳಿಗೆ ಈ ದಾರಿ ಒಗ್ಗುವುದಿಲ್ಲ. ಅಷ್ಟೇಕೆ, ಚಾಸರ್, ಸ್ಪೆನ್ಸರ್, ಷೇಕ್ಸ್ಪಿಯರ್, ಮಿಲ್ಟನ್ ಮತ್ತು ಡ್ರೈಡನ್ನರಂಥ ಕವಿಗಳ ಮೂಲಕ ಹಾಯ್ದುಬಂದ ಇಂಗ್ಲಿಷನ್ನು ಗಮನಿಸಿದಾಗ ಅಲ್ಲಿ ಕೂಡ ಗದ್ಯ-ಪದ್ಯಗಳ ನಡುವೆ ಅರ್ಥಪೂರ್ಣವೂ ಉಪಯೋಗಿಯೂ ಆದ ವತ್ಯಾಸವಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ವರ್ಡ್ಸ್ವರ್ತ್ತನ ನಿಲವನ್ನು ಪ್ರಶ್ನಾತೀತ ಸತ್ಯವೆಂದು ಇಂಗ್ಲಿಷಿನ ಮಟ್ಟಿಗೂ ಭಾವಿಸಬೇಕಿಲ್ಲ. ಅಲ್ಲದೆ ಇಂಗ್ಲಿಷ್ ಸೇರಿದಂತೆ ಪಾಶ್ಚಾತ್ಯಜಗತ್ತಿನ ಎಷ್ಟೋ ಭಾಷೆಗಳು ಭಾರತೀಯಭಾಷೆಗಳಷ್ಟು ಸೂಕ್ಷ್ಮವಾಗಿ ಇಂಥ ವೈವಿಧ್ಯ-ವೈಚಿತ್ರ್ಯಗಳನ್ನು ತಮ್ಮೊಳಗೆ ತಳೆದಿಲ್ಲವೆಂಬುದು ಕೂಡ ಆಯಾ ಭಾಷೆಗಳ ರಾಚನಿಕರಹಸ್ಯಗಳನ್ನು ಬಲ್ಲವರಿಗೆ ತಿಳಿದಿರುವ ಸತ್ಯ.
ಭಾರತೀಯಪರಂಪರೆಯನ್ನು ಗಮನಿಸುವುದಾದರೆ, ಅತ್ಯಂತ ಪ್ರಾಚೀನ ಸಾಹಿತ್ಯೇತಿಹಾಸವನ್ನು ಹೊಂದಿರುವ ಸಂಸ್ಕೃತವನ್ನೇ ಪರಿಶೀಲಿಸಬಹುದು. ಮೇಲ್ನೋಟಕ್ಕೆ ಕಾಳಿದಾಸನ ಪದ್ಯಭಾಷೆಯಾಗಲಿ, ಶಂಕರರ ಗದ್ಯಭಾಷೆಯಾಗಲಿ, ಜಯದೇವನ ಗೀತಭಾಷೆಯಾಗಲಿ ಒಂದೇ ಎಂಬಂತೆ ತೋರಿದರೂ ಅವು ಏಕಘನವಲ್ಲ. ದಿಟವೇ, ಇವೆಲ್ಲ ಮಹರ್ಷಿ ಪಾಣಿನಿಯ ವ್ಯಾಕರಣದ ಕಟ್ಟುನಿಟ್ಟುಗಳಿಗೆ ಸಹಜಸುಂದರವಾಗಿ ಒಳಪಟ್ಟಿವೆ. ಆದರೆ ನುಡಿಗಾರಿಕೆಯ ಅಂತಾರಚನೆಯಲ್ಲಿ, ವಾಗ್ರೂಢಿಯ ಕುಸುರಿಗೆಲಸದಲ್ಲಿ, ಸ್ವರ-ವ್ಯಂಜನಗಳ ಜೋಡಣೆಯಲ್ಲಿ, ಪದಗುಂಫನದ ಕ್ರಮದಲ್ಲಿ ಬೇರೆಯೇ ಆದ ಜಾಡುಗಳನ್ನು ತುಳಿದಿವೆ. ಕಾಳಿದಾಸನ ಪದ್ಯದ ಸಂಕೀರ್ಣಕರ್ಕಶತೆಯನ್ನು ಜಯದೇವನ ಗೀತದ ಸರಳಮಾಧುರ್ಯದ ಜೊತೆ ಹೋಲಿಸಿದಾಗ ಈ ತಥ್ಯ ಸ್ಪಷ್ಟವಾಗುತ್ತದೆ. ಇವೆರಡನ್ನೂ ಶಂಕರರ ಬಿಗಿಯಾದರೂ ತಿಳಿಯಾದ ಗದ್ಯದೊಡನೆ ತೌಲನಿಕವಾಗಿ ನೋಡಿದಾಗ ಈ ಮೂರು ನುಡಿಗಳ ವ್ಯತ್ಯಾಸಗಳು ಇನ್ನಷ್ಟು ಪ್ರಸ್ಫುಟವಾಗುತ್ತವೆ. ಈ ನಿಗಮನವನ್ನು ಉದಾಹರಣೆಗಳ ಮೂಲಕ ಮನಗಾಣುವಷ್ಟು ವಿಸ್ತರ ಸದ್ಯಕ್ಕೆ ಬೇಕಿಲ್ಲ. ಇಷ್ಟಂತೂ ಸತ್ಯ: ಸಂಸ್ಕೃತದಂಥ “ಸಿದ್ಧಭಾಷೆ”ಯಲ್ಲಿ ಕೂಡ ಗದ್ಯ-ಪದ್ಯ-ಗೀತಗಳ ನಡಿಗೆ ಬೇರೆಯೇ ಆದದ್ದು. ಈ ಮಾತನ್ನು ಮಿಕ್ಕೆಲ್ಲ ಭಾರತೀಯಭಾಷೆಗಳಿಗೂ ತೊಡಕಿಲ್ಲದೆ ಅನ್ವಯಿಸಬಹುದು.
ಕಾಲದ ಗತಿಯಂತೆ ಭಾಷೆ ಮಾರ್ಪಡುತ್ತದೆ, ಅದು ಗದ್ಯ-ಪದ್ಯ-ಗೀತಗಳೆಂಬ ಮಾಧ್ಯಮಗಳಿಗೆ ನಿರಪೇಕ್ಷವಾಗಿ ಆಯಾ ಕಾಲಕ್ಕೆ ತಕ್ಕಂಥ ರೂಪುಗೊಳ್ಳುತ್ತದೆ ಎಂಬುದು ವಿದ್ವಲ್ಲೋಕದಲ್ಲಿ ಅಂಗೀಕೃತವಾದ ಸತ್ಯ. ಆದರೆ ಇದು ಆಂಶಿಕಸತ್ಯ ಮಾತ್ರ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಪ್ರತಿಯೊಂದು ಕಾಲದಲ್ಲಿಯೂ ಪ್ರತಿಯೊಂದು ದೇಶದಲ್ಲಿಯೂ ಭಾಷೆಯೊಂದು ಗದ್ಯ, ಪದ್ಯ ಮತ್ತು ಗೀತಗಳ ಮಾಧ್ಯಮಗಳಿಗೆ ಸಾಪೇಕ್ಷವಾಗಿ ಬೇರೆಬೇರೆಯ ಜಾಡುಗಳನ್ನು ಕಂಡುಕೊಳ್ಳುವುದು ತಿಳಿಯುತ್ತದೆ. ಭಾಷೆಯ ಇಂಥ ವರ್ತನೆ ದೇಶ-ಕಾಲಗಳಿಗೆ ಅತೀತವಾದ ತಥ್ಯ. ಇದು ಉದ್ದಿಷ್ಟವಾದ ಸಾಹಿತ್ಯದ ರೂಪದ ಮೂಲಕ ಸ್ವರೂಪಕ್ಕೆ ಮತ್ತಷ್ಟು ಗಾಢವಾಗಿ ನಿಷ್ಠವಾಗುವ ಬಗೆ. ಉದಾಹರಣೆಗೆ: ಋಗ್ವೇದದ ಋಕ್ಕುಗಳೆಂಬ ಪದ್ಯಭಾಷೆಯಾಗಲಿ, ಯಜುರ್ವೇದದ ಯಜುಸ್ಸುಗಳೆಂಬ ಗದ್ಯಭಾಷೆಯಾಗಲಿ, ಸಾಮವೇದದ ಸಾಮಗಳೆಂಬ ಗೀತಭಾಷೆಯಾಗಲಿ ಸ್ಪಷ್ಟವಾಗಿ ವಿಭಿನ್ನ. ಇವೆಲ್ಲ ಬೇರೆಬೇರೆ ಕಾಲಘಟ್ಟಗಳ ನುಡಿಗಳೆಂದು ವಾದಿಸಿ ಪ್ರಸ್ತುತವಿಚಾರವನ್ನು ತಳ್ಳಿಹಾಕುವುದು ಸರಿಯಲ್ಲ. ಏಕೆಂದರೆ ಕಾಳಿದಾಸನ ಖಂಡಕಾವ್ಯ ಮೇಘದೂತದ ಪದ್ಯಭಾಷೆಯನ್ನು ಅವನದೇ ನಾಟಕ ಶಾಕುಂತಲದ ಗದ್ಯಭಾಷೆಯೊಡನೆ ಹೋಲಿಸಿದಾಗ, ಅಥವಾ ಜಯದೇವನ ಗೀತಗೋವಿಂದದ ವೃತ್ತಗಳ ಪದ್ಯಭಾಷೆಯೊಡನೆ ಅಷ್ಟಪದಿಗಳ ಗೀತಭಾಷೆಯನ್ನು ಹೋಲಿಸಿದಾಗ ಆಕ್ಷೇಪಗಳಿಗೆ ಅವಕಾಶವಾಗದಂತೆ ಸದ್ಯದ ವಿಚಾರ ಎದ್ದುಕಾಣುತ್ತದೆ.
ಕನ್ನಡಸಾಹಿತ್ಯವನ್ನು ಅನುಲಕ್ಷಿಸಿ ಹೇಳುವುದಾದರೆ, ಹನ್ನೆರಡನೆಯ ಶತಾಬ್ದದಲ್ಲಿ ಬಂದ ನಾಗಚಂದ್ರ, ರುದ್ರಭಟ್ಟ ಮೊದಲಾದ ಕವಿಗಳ ಪದ್ಯಭಾಷೆ ಮತ್ತು ಅದೇ ಕಾಲದಲ್ಲಿದ್ದ ಶಿವಶರಣರ ವಚನಗಳ ಗದ್ಯಭಾಷೆ ಎದ್ದುಕಾಣುವಂತೆ ಭಿನ್ನವಾಗಿವೆ. ವಿಜಯನಗರದ ಕಾಲಕ್ಕೆ ಬರುವುದಾದರೆ, ಚಾಮರಸ-ಕುಮಾರವ್ಯಾಸರ ಪದ್ಯಭಾಷೆ ಶ್ರೀಪಾದರಾಜ-ವ್ಯಾಸರಾಜರ ಹಾಗೂ ಪುರಂದರ-ಕನಕರ ಗೀತಭಾಷೆಗಿಂತ ಸ್ಪಷ್ಟವಾಗಿ ವಿಭಿನ್ನವೆನಿಸಿದೆ. ಈ ವ್ಯತ್ಯಾಸಗಳನ್ನು ಎಲ್ಲ ಕಾಲದಲ್ಲಿಯೂ ಕಾಣಬಹುದು. ನವೋದಯದ ಗೋವಿಂದ ಪೈ, ಡಿ.ವಿ.ಜಿ., ಕುವೆಂಪು, ಪು.ತಿ.ನ. ಮುಂತಾದ ಲೇಖಕರ ಗದ್ಯ-ಪದ್ಯ-ಗೀತಭಾಷೆಗಳ ವ್ಯತ್ಯಾಸವನ್ನು ಅವರ ಸಾಹಿತ್ಯರಸಿಕರೆಲ್ಲ ಚೆನ್ನಾಗಿ ಬಲ್ಲರು.
ಚಂಪೂಕಾವ್ಯಗಳ ಗದ್ಯ-ಪದ್ಯಗಳ ಭಾಷೆ ಬಲುಮಟ್ಟಿಗೆ ಒಂದೇ. ಆದರೆ ಆ ಕಾವ್ಯಗಳ ಗದ್ಯ ಎಂದೂ ಸಹಜಗದ್ಯವಲ್ಲ; ಅದು ಪದ್ಯಭಾಷೆಯನ್ನೂ ಮೀರಿಸಬೇಕೆಂಬ ಹುರುಡಿನಿಂದ ಹೊರಟಿದ್ದೆಂಬ ತಥ್ಯವನ್ನು ಮರೆಯುವಂತಿಲ್ಲ. ಎಲ್ಲಿಯೋ ವಡ್ಡಾರಾಧನೆ ಅಥವಾ ಧರ್ಮಾಮೃತಗಳಂಥ ಕೆಲವು ಕೃತಿಗಳ ಗದ್ಯಕ್ಕೆ ಇಂಥ ಸಹಜತೆ ಉಂಟು. ಈ ಕಾರಣದಿಂದಲೇ ಸುಬಂಧು, ಬಾಣಭಟ್ಟ ಮೊದಲಾದವರ ಗದ್ಯವನ್ನು ಸಂಸ್ಕೃತದ ಪ್ರಾತಿನಿಧಿಕ ಗದ್ಯವೆಂದು ಸ್ವೀಕರಿಸುವಂತಿಲ್ಲ. ಕಾಳಿದಾಸ, ಶೂದ್ರಕ, ಶ್ರೀಹರ್ಷ, ಪಲ್ಲವ ಮಹೇಂದ್ರವರ್ಮ ಮುಂತಾದವರ ರೂಪಕಗಳ ಗದ್ಯವಾಗಲಿ, ಪಂಚತಂತ್ರ, ಹಿತೋಪದೇಶ, ಶುಕಸಪ್ತತಿಗಳಂಥ ಕಥಾಸಾಹಿತ್ಯದ ಗದ್ಯವಾಗಲಿ, ಕೌಟಿಲ್ಯ, ಪತಂಜಲಿ, ಶಾಬರ, ಶಂಕರ, ರಾಜಶೇಖರ ಮುಂತಾದವರ ಶಾಸ್ತ್ರಗ್ರಂಥಗಳ ಗದ್ಯವಾಗಲಿ ಪ್ರಾತಿನಿಧಿಕ ರೂಪವಾಗಿ ನಿಲ್ಲುತ್ತದೆ.
ಕನ್ನಡದ ರಗಳೆ, ಷಟ್ಪದಿ, ತ್ರಿಪದಿ ಮತ್ತು ಸಾಂಗತ್ಯಗಳ ಪದ್ಯಭಾಷೆ ಆಯಾ ಯುಗದ ಗೀತಸಾಹಿತ್ಯದ ಭಾಷೆಗಿಂತ ಹೆಚ್ಚಿನ ವ್ಯತ್ಯಾಸವನ್ನು ಹೊಂದಿಲ್ಲವೆಂದು ಕೆಲವರು ತರ್ಕಿಸಬಹುದು. ಈ ಪದ್ಯಬಂಧಗಳು ಮೂಲತಃ ಗೀತನಿರ್ಮಾಣದ ಮೂಲವಾದ ಲಯಸಮತೆಯನ್ನು ಹೊಂದಿವೆ; ಲಯಾನ್ವಿತಚ್ಛಂದಸ್ಸುಗಳೆಂದೇ ಪ್ರಸಿದ್ಧವಾಗಿವೆ. ಹೀಗಾಗಿ ಇಂಥ ಪದ್ಯಕಾವ್ಯಗಳ ಭಾಷೆ ಗೀತಕಾವ್ಯಗಳ ಭಾಷೆಗೆ ಹತ್ತಿರವಾದಲ್ಲಿ ಅಚ್ಚರಿಯೇನಿಲ್ಲ. ಲಯರಹಿತವಾದ ಛಂದಸ್ಸುಗಳೇ ಹೆಚ್ಚಾಗಿರುವ ಚಂಪೂಕಾವ್ಯಗಳನ್ನು ಓದುಗಬ್ಬಗಳೆಂದೂ ಲಯಾನ್ವಿತವಾದ ಬಂಧಗಳೇ ಇರುವ ರಗಳೆ-ಷಟ್ಪದಿ-ತ್ರಿಪದಿ-ಸಾಂಗತ್ಯಗಳ ಕಾವ್ಯಗಳನ್ನು ಹಾಡುಗಬ್ಬಗಳೆಂದೂ ಸಾಹಿತ್ಯವನ್ನು ನಮ್ಮ ವಿದ್ಯಾಪರಂಪರೆ ವಿಂಗಡಿಸಿರುವುದು ಸ್ಮರಣೀಯ. ಇಂತಿದ್ದರೂ ಮಾತ್ರಾಜಾತಿಗಳ ಪದ್ಯಬಂಧದ ಬಿಕ್ಕಟ್ಟಿಗೆ ಹೋಲಿಸಿದರೆ ಗೀತಪ್ರಬಂಧಗಳು ಹೆಚ್ಚು ಸುಕುಮಾರ. ಅಲ್ಲದೆ ಕರ್ಷಣಜಾತಿಯ ಬಂಧಗಳು ಇಂಥವಕ್ಕೆ ಮಾತ್ರಾಜಾತಿಯವಕ್ಕಿಂತ ಮತ್ತೂ ನಿಕಟವೆಂಬುದನ್ನು ಅರಿತಾಗ ಇಲ್ಲಿಯ ವಿಚಾರಸರಣಿಯ ತರ್ಕಶುದ್ಧಿ ಸ್ಪಷ್ಟವಾದೀತು. ಒಟ್ಟಿನಲ್ಲಿ ತಾತ್ಪರ್ಯವಿಷ್ಟು: ವೃತ್ತ-ಕಂದಗಳ ಪದ್ಯತ್ವ ಒಂದು ತುದಿಯಲ್ಲಿ ನಿಂತರೆ ತ್ರಿಪದಿ-ಸಾಂಗತ್ಯಗಳ ಪದ್ಯತ್ವ ಮತ್ತೊಂದು ತುದಿಯಲ್ಲಿ ನಿಲ್ಲುತ್ತದೆ. ಇವೆರಡರ ನಡುವೆ ರಗಳೆ-ಷಟ್ಪದಿಗಳ ಪದ್ಯತ್ವ ಸಲ್ಲುತ್ತದೆ. ಹೀಗಾಗಿಯೇ ವೃತ್ತ-ಕಂದಗಳ ಪದ್ಯತ್ವವು ತ್ರಿಪದಿ-ಸಾಂಗತ್ಯಗಳ “ಪದತ್ವ”ದ ಕಡೆಗೆ ಕ್ರಮವಾಗಿ ಸಾಗುವುದನ್ನು ಗಮನಿಸಬಹುದು. “ಪದ” ಎಂದರೆ ಗೇಯವೆಂಬ ಅರ್ಥ ನಮ್ಮ ಶಾಸ್ತ್ರಪರಂಪರೆಯಲ್ಲಿ ಸುಪ್ರಸಿದ್ಧ. ಗೇಯದ ಕರ್ಷಣಪಾರಮ್ಯ ಸ್ವತಃಸಿದ್ಧ.
ಇಂತಿದ್ದರೂ ತ್ರಿಪದಿ-ಸಾಂಗತ್ಯಗಳಂಥ ಕರ್ಷಣಜಾತಿಗಳನ್ನು ಕೂಡ ಮೀರಿ ಸ್ವಯಂಪೂರ್ಣವಾದ ಹಾಡುಗಳು ಮೈದಾಳಿ ತಮ್ಮದಾದ ಗೀತಭಾಷೆಯನ್ನು ರೂಪಿಸಿಕೊಂಡಿರುವುದಕ್ಕೆ ಯಕ್ಷಗಾನಸಾಹಿತ್ಯವೇ ಸಾಕ್ಷಿ. ಇಂದಿಗೂ ಯಕ್ಷಗಾನದಲ್ಲಿ ಸಾಂಗತ್ಯ-ಷಟ್ಪದಿಗಳಂಥ ಅಪ್ಪಟ ಲಯಾನ್ವಿತಬಂಧಗಳನ್ನು ವಿತಾಲವಾಗಿ ಹಾಡಿ, ಇವುಗಳ ಮೂಲಘಟಕಗಳಾದ ಕರ್ಷಣಜಾತಿ ಮತ್ತು ಮಾತ್ರಾಜಾತಿಗಳ ಹೂರಣವನ್ನೇ ಹೊಂದಿರುವ ಪದಗಳನ್ನು ಸತಾಲವಾಗಿ ನಿರೂಪಿಸುವ ಸಂಪ್ರದಾಯ ಈ ನಿಗಮನಕ್ಕೆ ಪೂರಕವಾಗಿದೆ.
ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿಗಳೆಲ್ಲ ಒಟ್ಟುಗೂಡಿರುವ ಕಾವ್ಯಪ್ರಕಾರವಾಗಿ “ಬೆದಂಡೆ” ಎಂಬುದನ್ನು ಕವಿರಾಜಮಾರ್ಗ ತಿಳಿಸುವುದಷ್ಟೆ (1.34). ಇದರ ವಿಸ್ತೃತವಿವರಣೆಯನ್ನು ಕಾವ್ಯಾವಲೋಕನದಲ್ಲಿ ಕಾಣುತ್ತೇವೆ (2.43-45). ಈ ಸಾಹಿತ್ಯಪ್ರಕಾರದ ಆ ಕಾಲದ ಮಾದರಿಗಳು ಸಿಕ್ಕಿದ್ದಲ್ಲಿ ಪದ್ಯಭಾಷೆ ಮತ್ತು ಗೀತಭಾಷೆಗಳ ಭಿನ್ನತೆ ನಮಗೆ ಮತ್ತೂ ಸ್ಪಷ್ಟವಾಗುತ್ತಿತ್ತೇನೋ. ಆದರೆ ಇಂದು ಉಪಲಬ್ಧವಿರುವ ಮಧ್ಯಕಾಲದ ಯಕ್ಷಗಾನಗಳಲ್ಲಿ ಇದೇ ತಥ್ಯವನ್ನು ಚೆನ್ನಾಗಿ ಮನಗಾಣಬಹುದೆಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ ಈ ಹೊತ್ತಿನ ಯಕ್ಷಗಾನದ ರಂಗಪ್ರಯೋಗವನ್ನು ಕಂಡು, ಅಲ್ಲಿ ಪದ್ಯ ಮತ್ತು ಪದಗಳ ಭಾಷೆಗಳಲ್ಲದೆ ಅರ್ಥಗಾರಿಕೆಯ ರೂಪದ ಗದ್ಯಭಾಷೆಯೂ ಇರುವುದರಿಂದ ಈ ಮೂರು ನುಡಿಜಾಡುಗಳ ಅನ್ವಯ, ವ್ಯತ್ಯಾಸ ಮತ್ತು ಅರ್ಥವಂತಿಕೆಗಳನ್ನು ಚೆನ್ನಾಗಿ ಗ್ರಹಿಸಬಹುದು. ಇಂಥದ್ದೇ ಗ್ರಹಿಕೆಯನ್ನು ನವೋದಯಯುಗದ ಸದ್ಯಃಪೂರ್ವದಲ್ಲಿದ್ದ ಕಂಪೆನಿ ನಾಟಕಗಳಿಂದಲೂ ಪಡೆಯಬಹುದು. ಅಲ್ಲಿ ಕಂದ-ವೃತ್ತಗಳ ಪದ್ಯಭಾಷೆ, ಸಂಭಾಷಣೆಗಳ ಗದ್ಯಭಾಷೆ ಮತ್ತು ಹಾಡುಗಳ ಗೀತಭಾಷೆ ಸಮರಸವಾಗಿ ಹೆಣೆದುಕೊಂಡಿರುವುದು ಸರ್ವವೇದ್ಯ.
ಈ ಎಲ್ಲ ಸಂಗತಿಗಳನ್ನೂ ಪರಾಮರ್ಶಿಸಿದ ಬಳಿಕ ಸಾಹಿತ್ಯಕ್ಕಿರುವ ಮೂರು ಬಗೆಯ ಭಾಷೆಗಳ ಅಸ್ತಿತ್ವ ಮನದಟ್ಟಾಗದಿರದು. ಇವುಗಳ ಅಸ್ತಿತ್ವದಲ್ಲಿಯೇ ಔಚಿತ್ಯ-ಮಹತ್ತ್ವಗಳೂ ಅಡಗಿವೆ. ಭಾಷೆಯೊಂದು ತನ್ನ ರಾಚನಿಕಸೌಂದರ್ಯದೊಡನೆ ಭಾವದ ತುಂಬುತನವನ್ನು ವ್ಯಕ್ತೀಕರಿಸುವಾಗ ಸಹಜವಾಗಿಯೇ ಲೋಕಸತ್ತೆಯನ್ನು ಮೀರಿ ರಸಸತ್ತೆಯತ್ತ ಸಾಗಬೇಕಾಗುತ್ತದೆ. ಈ ಹಾದಿಯಲ್ಲಿ ನಾದಸೌಂದರ್ಯಕ್ಕೂ ಒಂದು ಪಾತ್ರವಿದೆ. ಇಂಥ ಸನ್ನಿವೇಶದಲ್ಲಿ ಭಾಷೆಯು ಪದ್ಯರೂಪವನ್ನು ಪಡೆಯುತ್ತದೆ. ಅಭಿಧಾವೃತ್ತಿಯ ಸೊಗಸುಗಳೆಲ್ಲ ವ್ಯಂಜನಾವೃತ್ತಿಗೆ ಅಧೀನವಾಗಿ ದುಡಿದಾಗ ಪದ್ಯಶಿಲ್ಪ ಸುಂದರವಾಗುತ್ತದೆ.
ಹೀಗೆಯೇ ಭಾಷೆಯೊಂದು ತನ್ನ ವ್ಯಾವಹಾರಿಕ ಪ್ರಯೋಜನವನ್ನು ಉಪೇಕ್ಷಿಸದಂಥ ಸೌಂದರ್ಯದೊಡನೆ ಕೂಡಿಕೊಂಡು ಭಾವವನ್ನು ವ್ಯಕ್ತೀಕರಿಸುವಾಗ ಸಹಜವಾಗಿಯೇ ಲೋಕಸತ್ತೆಯನ್ನು ಒಪ್ಪಿ ರಸಸತ್ತೆಯತ್ತ ಸಾಗಬೇಕಾಗುತ್ತದೆ. ಈ ಹಾದಿಯಲ್ಲಿ ನಾದಸೌಂದರ್ಯಕ್ಕಿಂತ ನುಡಿಗಟ್ಟಿನ ಸೌಂದರ್ಯಕ್ಕೆ ಹೆಚ್ಚಿನ ನೆಲೆ-ಬೆಲೆಗಳುಂಟು. ಇಂಥ ಸನ್ನಿವೇಶದಲ್ಲಿ ಭಾಷೆಯು ಗದ್ಯರೂಪವನ್ನು ತಾಳುತ್ತದೆ. ಇಲ್ಲಿ ಅಭಿಧಾವೃತ್ತಿಯ ವ್ಯವಸ್ಥೆಯೆಲ್ಲ ಲಕ್ಷಣಾವೃತ್ತಿಗೆ ಅಧೀನವಾಗಿ ದುಡಿಯುತ್ತದೆ. ಲಕ್ಷಣೆಯ ಸಿದ್ಧಿಗೆ ವ್ಯಂಜನೆಯ ಸ್ಪರ್ಶ ಹೇಗೂ ಬೇಕಿರುವ ಕಾರಣ ಆ ಮಟ್ಟದ ಧ್ವನಿಗೆ ಅವಕಾಶವಿರುತ್ತದೆ. ಈ ಮೂಲಕ ಗದ್ಯಭಾಷೆಗೆ ಚೆಲುವು ಮೈಗೂಡುತ್ತದೆ. ಪದ್ಯದ ಚೆಲುವು ಶಬ್ದಾರ್ಥಗಳೆರಡರಲ್ಲಿಯೂ ಇರಬೇಕಾದ ಕಾರಣ ಅದರಲ್ಲಿ ನಾದದ ಪಾತ್ರ ಗದ್ಯಕ್ಕಿಂತ ಹೆಚ್ಚು. ಗದ್ಯದ ಚೆಲುವು ಪ್ರಧಾನವಾಗಿ ಅರ್ಥಗತವಾದ ಕಾರಣ ಅಲ್ಲಿ ನಾದದ ಪಾತ್ರಕ್ಕಿಂತ ನುಡಿಗಟ್ಟಿನ ಪಾತ್ರ ಮಿಗಿಲು.
ಇನ್ನು ಭಾಷೆಯೊಂದು ತನ್ನ ಭಾವಾಭಿವ್ಯಕ್ತಿಯನ್ನು ಶಬ್ದಾರ್ಥಗಳಿಗೆ ಸರಿದೊರೆಯಾದ ಶ್ರುತಿ-ಲಯಗಳ ನೆರವಿನಿಂದ ಸಾಧಿಸಬೇಕಿರುವಾಗ ಅದು ಗೀತದ ರೂಪವನ್ನು ಹೊಂದುತ್ತದೆ. ಇಲ್ಲಿ ಗದ್ಯದ ಲಕ್ಷಣಾವೃತ್ತಿಪಾರಮ್ಯ ಮತ್ತು ಪದ್ಯದ ವ್ಯಂಜನಾವೃತ್ತಿಪಾರಮ್ಯಗಳು ಮುನ್ನೆಲೆಗೆ ಬರುವುದು ಸಹಜವಾಗಿಯೇ ಕಷ್ಟ. ಏಕೆಂದರೆ ಸಾಹಿತ್ಯದ ಶಬ್ದಾರ್ಥಗಳು ಶುದ್ಧಸಂಗೀತದ ಘಟಕಗಳಾದ ರಾಗ-ತಾಳಗಳಿಗೆ ಅನುಕೂಲಿಸುವಂತೆ ದುಡಿಯಬೇಕಾದ ಅನಿವಾರ್ಯತೆ ಉಂಟು. ಈ ಕಾರಣದಿಂದ ಅಲ್ಲಿಯ ಕೇವಲಸಾಹಿತ್ಯದಲ್ಲಿ ತೋರಿಕೊಳ್ಳಬಹುದಾದ ಧ್ವನಿಹ್ರಾಸವನ್ನು ಸಂಗೀತದ ಅಪ್ಪಟ ವ್ಯಂಜನಾವೃತ್ತಿ ತುಂಬಿಕೊಡುತ್ತದೆ. ಹೀಗೆ ಗೀತಭಾಷೆಯ ಅಭಿಧಾವೃತ್ತಿ ಸಂಗೀತಮಾಧ್ಯಮದ ವ್ಯಂಜನಾವೃತ್ತಿಯಿಂದ ಸಮೃದ್ಧವಾಗುತ್ತದೆ. ಸಂಗೀತದ ನೆರವಿನಿಂದ ರಸಿಕರನ್ನು ಗೆಲ್ಲುವ ಭಾವಗೀತದಂಥ ಕವಿತೆಯನ್ನು ಶುದ್ಧಕಾವ್ಯದ ವೀರವ್ರತಿಗಳೆಂದು ತಮ್ಮನ್ನು ಬಿಂಬಿಸಿಕೊಂಡ ಹಲವರು ನವ್ಯರು ಉಪೇಕ್ಷಿಸಿದ್ದು, ವಿರೋಧಿಸಿದ್ದು ಬಹುಶಃ ಈ ಕಾರಣದಿಂದ.
ಪ್ರತಿಭಾಶಾಲಿಯೂ ಗದ್ಯ-ಪದ್ಯ-ಗೀತಗಳೆಂಬ ಮುಬ್ಬಗೆಯ ಮಾಧ್ಯಮಗಳಲ್ಲಿ ಸಿದ್ಧಹಸ್ತನೂ ಆದ ಲೇಖಕನಿಗೆ ಈ ವಿಚಾರಗಳೆಲ್ಲ ಹೃದ್ಗತವಾಗಿರುತ್ತವೆ. ಆದುದರಿಂದಲೇ ತಾನು ನಿರ್ಮಿಸುವ ಸಾಹಿತ್ಯದಲ್ಲಿ ಮೂರೂ ಬಗೆಯ ಭಾಷೆಗಳನ್ನು ರಸೋಚಿತವಾಗಿ ಬಳಸಿಕೊಳ್ಳುತ್ತಾನೆ; ತನ್ಮೂಲಕ ಪರಿಣಾಮಕಾರಿಯಾದ ವಾಙ್ಮಯವನ್ನು ನಿರ್ಮಿಸುತ್ತಾನೆ. ಕಥನಕ್ಕೆ ಅನುಕೂಲಿಸುವ ಗದ್ಯಕ್ಕೆ ಬದಲಾಗಿ ಪದ್ಯವನ್ನೇ ಬಳಸಿ ಕಥನಕಾವ್ಯಗಳನ್ನು ರಚಿಸಿದವರುಂಟು. ಇದೇ ರೀತಿ ಗೀತಗಳ ಮೂಲಕವೇ ಇತಿವೃತ್ತವನ್ನು ನಿರೂಪಿಸಿದವರುಂಟು. ಆದರೆ ಹೀಗೆ ಮಾಡುವಾಗ ಅವರ ಆಯಾ ಮಾಧ್ಯಮಗಳು ಆ ಮಟ್ಟಿಗೆ ಗದ್ಯತ್ವವನ್ನು ತಳೆಯುವುದು ಅನಿವಾರ್ಯ. ಹೀಗೆಯೇ ಗದ್ಯದಲ್ಲಿ ಪದ್ಯದ ರಚನಾಸೌಂದರ್ಯ ಮತ್ತು ಭಾವನಿರ್ಭರತೆಗಳನ್ನು ತಂದಿರುವ ಸಾಹಿತ್ಯ ಕೂಡ ಉಂಟು. ಇಂಥ ಸಂದರ್ಭಗಳಲ್ಲಿ ಗದ್ಯವು ಪದ್ಯಗಂಧಿಯೋ ಗೇಯಗಂಧಿಯೋ ಆಗದೆ ತೀರದು.
ಒಟ್ಟಿನಲ್ಲಿ ತಾತ್ಪರ್ಯವಿಷ್ಟು: ಯಾವುದೇ ಕಾಲದಲ್ಲಿ ಯಾವುದೇ ಭಾಷೆಗೆ ಗದ್ಯ, ಪದ್ಯ ಮತ್ತು ಗೀತಗಳೆಂಬ ಮುಬ್ಬಗೆಯ ಜಾಡುಗಳು ಅನಿವಾರ್ಯ ಮತ್ತು ಅಪೇಕ್ಷಣೀಯ. ಇದು ಕನ್ನಡಕ್ಕೂ ಸಲ್ಲುವ ಮಾತು. ಈ ಹಿನ್ನೆಲೆಯಲ್ಲಿ ಇಂದಿನ ನಮ್ಮ ಸಾಹಿತ್ಯಪರಿಸ್ಥಿತಿಯನ್ನು ನೋಡಿದಾಗ ಗದ್ಯಭಾಷೆಯಲ್ಲಿಯೇ ಪದ್ಯ ಮತ್ತು ಗೀತಗಳ ಕೆಲಸ ಸಾಗುತ್ತಿರುವುದು ತಿಳಿಯುತ್ತದೆ. ಇದು ನಿಜಕ್ಕೂ ಮುದಾವಹವಲ್ಲ. ಸಾವಿರಕ್ಕೂ ಹೆಚ್ಚು ವರ್ಷಗಳ ಕನ್ನಡಸಾಹಿತ್ಯದ ಪರಂಪರೆಯಲ್ಲಿ ಮೂರು ಬಗೆಯ ನುಡಿಜಾಡುಗಳ ಹರಿವು ಕಾಣುತ್ತಿರುವಾಗ, ಅದರ ಪ್ರಯೋಜನ-ಪರಿಣಾಮಗಳೂ ಅನುಭವಕ್ಕೆ ಬರುತ್ತಿರುವಾಗ ನಮ್ಮ ಲೇಖಕರು ಈ ತಥ್ಯಕ್ಕೆ ವಿಮುಖರಾಗಿ ವರ್ತಿಸುವುದು ಯುಕ್ತವಾಗದು. ಇದು ಸುರವಂದ್ಯನಾದ ಮುಕ್ಕಣ್ಣನ ದರ್ಶನಶಕ್ತಿಯನ್ನು ಉಪೇಕ್ಷಿಸಿ ಅಸುರಗುರು ಶುಕ್ರಾಚಾರ್ಯನ ಒಕ್ಕಣ್ಣಿನ ಅರೆಗುರುಡುತನವನ್ನೇ ನಚ್ಚಿಕೊಂಡಂತಿದೆ!
ಕನ್ನಡ ಅಭಿಜಾತಭಾಷೆಯಾಗಿ ಪ್ರತಿಷ್ಠೆಗೊಂಡು ಹಲವು ವರ್ಷಗಳಾಗಿವೆ. ಈ ಪರಂಪರೆ ಪಂಪನಿಂದ ಕುವೆಂಪುವಿನವರೆಗೆ ವಿಸ್ತರಿಸಿದೆಯೆಂದು ಹೇಳಿಕೊಂಡು ಹೆಮ್ಮೆ ಪಡುವುದಕ್ಕಷ್ಟೇ ನಾವು ಸೀಮಿತವಾಗದೆ, ಇದರ ಅನುಸ್ಯೂತತೆಯನ್ನು ಚೆನ್ನಾಗಿ ಮುಂದುವರಿಸಲು ಹಳಗನ್ನಡದ ಪದ್ಯಭಾಷೆ, ನಡುಗನ್ನಡದ ಗೀತಭಾಷೆ ಮತ್ತು ಹೊಸಗನ್ನಡದ ಗದ್ಯಭಾಷೆಗಳನ್ನು ಅವುಗಳ ಕಸುವಿಗೆ ಅನುಸಾರವಾಗಿ ಬಳಸಿ ಬೆಳೆಸಿಕೊಂಡಲ್ಲಿ ಒಳಿತುಂಟು. ಲಯರಹಿತವಾದ ಛಂದಸ್ಸುಗಳಿಗೆ ಹಳಗನ್ನಡದಂತೆ ನಡುಗನ್ನಡ-ಹೊಸಗನ್ನಡಗಳು ಅಷ್ಟಾಗಿ ಒದಗಿಬರವು. ಏಕೆಂದರೆ ಹಲಂತ ಅಥವಾ ವ್ಯಂಜನಾಂತವಾದ ಹಳಗನ್ನಡ ಗುರುಪ್ರಚುರವಾದ ಭಾಷೆ. ಹೀಗಾಗಿ ಇಲ್ಲಿ ಆಲೋಚನಾಮೃತವಾಗಬಲ್ಲ ವೃತ್ತ-ಕಂದಗಳನ್ನು ರಚಿಸಲು ಸುಲಭಾವಕಾಶವಿದೆ. ಇಂಥ ಛಂದೋಬಂಧಗಳು ಭಾವ-ಭಾಷೆಗಳ ಸೂಕ್ಷ್ಮತೆಗಳನ್ನು ಆಳವಾಗಿ ಬಿಂಬಿಸಬಲ್ಲ ಕಲೆಗಾರಿಕೆಗೆ ಹೇಳಿಮಾಡಿಸಿದಂತಿವೆ. ಅಲ್ಲದೆ ಹಳಗನ್ನಡದ ಕೆಚ್ಚು-ಕಸುವು, ಇನಿ-ಬನಿ, ಅಂದ-ಅಡಕ ಮತ್ತು ಸ್ವಂತಿಕೆಗಳು ಯಾವುದೇ ಅಳತೆಯಿಂದ ಮಿಗಿಲು.
ಲಯಾನ್ವಿತವಾದ ಬಂಧಗಳಿಗೆ ಹಳಗನ್ನಡ-ನಡುಗನ್ನಡಗಳೆರಡೂ ಸಮರ್ಥವಾದ ವಾಹಕಗಳು. ಇವುಗಳ ಮೂಲಕ ಭಾವ-ಭಾಷೆಗಳ ನಯ-ನವುರುಗಳು ಬಿಗಿ-ಬಲ್ಮೆಗಳೊಡನೆ ಸೊಗಸಾಗಿ ಮೇಳವಿಸಿ ಅಪ್ಪಟ ದೇಸಿಯ ನಾಡಿಯನ್ನು ದಿವ್ಯವಾಗಿ ಮಿಡಿಯಬಲ್ಲವು. ಗೀತಕ್ಕಾದರೋ ನಡುಗನ್ನಡದಂತೆ ಹಳಗನ್ನಡ-ಹೊಸಗನ್ನಡಗಳು ಸರ್ವಥಾ ಅನುಕೂಲಿಸುವುದಿಲ್ಲ. ನಡುಗನ್ನಡ ಆದ್ಯಂತವಾಗಿ ಅಜಂತ ಅಥವಾ ಸ್ವರಾಂತಭಾಷೆಯಾದ ಕಾರಣ ಇಲ್ಲಿ ಶ್ರುತಿಕಟುತೆಗೆ ಅವಕಾಶವೇ ಇಲ್ಲ. ಗೇಯತೆಗೆ ಅದ್ಭುತವಾಗಿ ಒದಗಿಬರಬಲ್ಲ ಮಾರ್ದವ-ಮೋಹಕತೆಗಳು ಈ ನುಡಿಗೇ ಸಲ್ಲುವ ಸಂಪತ್ತಿ. ಒತ್ತಕ್ಷರಗಳಾಗಲಿ, ಗುರ್ವಕ್ಷರಗಳಾಗಲಿ ನಡುಗನ್ನಡದಲ್ಲಿ ತುಂಬ ಕಡಮೆ. ಹೀಗಾಗಿಯೇ ರಾಗ-ತಾಳಗಳ ಗಂಗೆ-ಯಮುನೆಗಳು ಈ ನುಡಿಯ ನಾಲೆಗಳಲ್ಲಿ ಹಾಯಾಗಿ ಹರಿದು ಸಾಹಿತ್ಯಸರಸ್ವತಿಯನ್ನು ಸೇರುವ ಮೂಲಕ ಸಹೃದಯಪ್ರಯಾಗಕ್ಕೆ ನೆಲೆಯಾಗುತ್ತವೆ.
ಎಲ್ಲರಿಗೂ ಅರ್ಥವಾಗಬಲ್ಲ, ವರ್ತಮಾನಜಗತ್ತಿನ ನುಡಿಗಟ್ಟಿನ ಸೊಗಡಿಗೂ ಆಸ್ಪದವೀಯಬಲ್ಲ ಗದ್ಯಭಾಷೆ ಹೊಸಗನ್ನಡಕ್ಕೇ ಸಾಧ್ಯ. ನವೋದಯದ ಕಾಲದಿಂದ ಈಚೆಗೆ ರೂಪುಗೊಂಡಿರುವ ಹೊಸಗನ್ನಡದ ಗದ್ಯಭಾಷೆ ಜಗತ್ತಿನ ಯಾವುದೇ ಸಂಸ್ಕೃತಿಯ ಪ್ರಾಚೀನಶಾಸ್ತ್ರವನ್ನಾಗಲಿ, ನವೀನವಿಜ್ಞಾನವನ್ನಾಗಲಿ ಸಮರ್ಥವಾಗಿ ಪುನಾರಚಿಸಬಲ್ಲ ವಿದ್ಯಾವಾಣಿ ಮಾತ್ರವಲ್ಲ, ಎಂಥ ಕಥನಗಳನ್ನೂ ಇನ್ನೆಂಥ ಅನುಭವಗಳನ್ನೂ ಸಹಜತೆಯ ಸೊಗಸಿನೊಡನೆ ಆಪ್ತವಾಗಿ ನಿರೂಪಿಸಬಲ್ಲ ಜೀವಧ್ವನಿ. ಹೂಸಗನ್ನಡವು ಗ್ರಾಂಥಕಭಾಷೆಯ ರೂಪದಿಂದ ಹೇಗೆ ದುಡಿಯಬಲ್ಲುದೋ ಆಡುನುಡಿಯ ಅಸಂಖ್ಯರೂಪಗಳೊಡನೆ ನಮ್ಮ ನಾಡಿನ ಉದ್ದಗಲದ ವಾಗ್ವಿಲಾಸವನ್ನು ಕೂಡ ಹಾಗೆಯೇ ಮಿಡಿಯಬಲ್ಲುದು. ಜೊತೆಗೆ ನಮ್ಮ ಜನತೆಯ ಎಲ್ಲ ಸ್ತರಗಳ ಸಂಸ್ಕೃತಿವೈವಿಧ್ಯಗಳನ್ನೂ ಬಿತ್ತರಿಸಬಲ್ಲುದು.
ಈ ಮೂರು ನುಡಿಗಳೂ ನಮಗೆ ಇಂದು ಮಾತ್ರವಲ್ಲ, ಎಂದೂ ಅನಿವಾರ್ಯ. ಆದರೆ ಇವುಗಳಲ್ಲಿ ಯಾವುದೊಂದಕ್ಕೂ ಮತ್ತೊಂದು ಪ್ರತ್ಯಾಮ್ನಾಯವಲ್ಲ ಎಂಬ ಸತ್ಯ ಕೂಡ ಅವಿಸ್ಮರಣೀಯ. ಇವುಗಳ ಬಳಕೆಯಿಂದ ಕನ್ನಡದ ಭಾಷಾಪರಂಪರೆಯ ಯಾವೊಂದು ಮುಖವೂ ಮರೆಯಾಗದೆ ನಮ್ಮೊಡನೆ ಬಾಳುವಂತಾಗುತ್ತದೆ. ಇಂಥ ಭಾಷಿಕವ್ಯವಸ್ಥೆ ಕೇವಲ ಕಲ್ಪನೆಯ ಜಲ್ಪನವಲ್ಲ. ಇದು ನಮ್ಮ ನುಡಿಯರಿಮೆಯ ವಾಸ್ತವ; ನಮ್ಮ ಭಾಷಾಭಿವ್ಯಕ್ತಿಯ ಮೌಲ್ಯ. ಇಂಥ ವಾಗ್ಜೀವನವನ್ನು ಬರಿಯ ಕನ್ನಡದಲ್ಲಿ ಮಾತ್ರವಲ್ಲದೆ ಮಿಕ್ಕ ಹತ್ತಾರು ಭಾಷೆಗಳಲ್ಲಿಯೂ ಕಂಡುಕೊಳ್ಳಬಹುದು. ಉದಾಹರಣೆಗೆ: ನಮ್ಮ ನೆರೆಯ ನುಡಿ ತೆಲುಗಿನಲ್ಲಿ ಇಂಥ ಮುಬ್ಬಗೆಯ ವಾಗ್ವಿಲಾಸವನ್ನು ಇಂದಿಗೂ ಕಾಣಬಹುದು. ಅಲ್ಲಿಯ ಪದ್ಯ-ಗದ್ಯ-ಗೀತಗಳ ಕೃಷಿಯಲ್ಲಿ ಈ ಸಂವೇದನೆ ಹಚ್ಚಹಸುರಾಗಿದೆ. ಮಲಯಾಳ, ಮರಾಠಿ, ಒರಿಯಾ ಮುಂತಾದ ಮತ್ತೂ ಹಲವು ಭಾಷೆಗಳಲ್ಲಿಯೂ ಈ ಸಂಸ್ಕೃತಿ ಕಾಣಸಿಗುತ್ತದೆ.
ಅಭಿಜಾತಭಾಷೆಗಳ ಪೈಕಿ ಅಗ್ರಗಣ್ಯವಾದ ಸಂಸ್ಕೃತಕ್ಕೆ ಪದ್ಯ-ಗದ್ಯ-ಗೀತಗಳಿಗೆ ಬೇಕಾದ ನೈಸರ್ಗಿಕವಾದ ಸಾಮರ್ಥ್ಯವಿದ್ದರೂ ನಮ್ಮ ರಾಷ್ಟ್ರದ ಸಂಸ್ಕೃತಿಸಾರವನ್ನೆಲ್ಲ ಹಿಡಿದಿಡಬಲ್ಲ ಬಲ್ಮೆಯಿದ್ದರೂ ಇಂದಿನ ನಮ್ಮ ಪ್ರಾಂತೀಯಭಾಷೆಗಳಿಗೆಲ್ಲ ಇರುವಂಥ ಸಮಸಾಮಯಿಕವಾದ ನುಡಿಗಟ್ಟಿನ ಸೌಲಭ್ಯವಿಲ್ಲ; ಆಡುನುಡಿಯ ಅನುಕೂಲತೆಯಿಲ್ಲ. ಇನ್ನು ಜಾಗತಿಕಭಾಷೆಯೆಂದೂ ಎಲ್ಲ ಬಗೆಯ ಜ್ಞಾನ-ವಿಜ್ಞಾನಗಳ ಹೆಬ್ಬಾಗಿಲೆಂದೂ ಹೆಸರಾದ ಇಂಗ್ಲಿಷನ್ನು ಗಮನಿಸುವುದಾದರೆ ಅದು ನಮ್ಮ ನೆಲದ ಅನುದಿನದ ಜೀವನವನ್ನೂ ಅಂತರಾತ್ಮದ ಸಂಜೀವನವನ್ನೂ ಬಿಂಬಿಸುವಲ್ಲಿ ಶೋಚನೀಯವಾಗಿ ಸೋಲುತ್ತದೆ. ಇತ್ತ ಸಂಸ್ಕೃತದ ವಾಗರ್ಥಸಂಪತ್ತಿಯನ್ನೂ ಇಂಗ್ಲಿಷಿನ ವಿಚಾರ-ವ್ಯವಹಾರಸಮೃದ್ಧಿಯನ್ನೂ ಅವಲೀಲೆಯಾಗಿ ತಮ್ಮಲ್ಲಿ ಮೈಗೂಡಿಸಿಕೊಳ್ಳಬಲ್ಲ ನಮ್ಮ ದೇಶಭಾಷೆಗಳಿಗೆ ಇವೆರಡು ನುಡಿಗಳಿಂದಲೂ ಸಾಧ್ಯವಾಗದ, ನಮ್ಮ ಜನತೆಗೆ ಬೇಕಾಗಬಲ್ಲ ಭಾವ-ಬುದ್ಧಿಗಳ ಅಭಿವ್ಯಕ್ತಿಯನ್ನು ಹವಣಿಸಿಕೊಡಬಲ್ಲ ಶಕ್ತಿ-ಯುಕ್ತಿಗಳುಂಟು. ಇದಕ್ಕೆ ತುಂಬ ಪೂರಕವಾದದ್ದು, ಕಾರಕವಾದದ್ದು, ತಾರಕವೂ ಆದದ್ದು ಈ ಮುನ್ನ ನಾವು ಗಮನಿಸಿದ ಮುಬ್ಬಗೆಯ ನುಡಿಜಾಡಿನ ನೈಪುಣ್ಯ. ಇದರ ಪ್ರತ್ಯಭಿಜ್ಞಾನದ ಮೂಲಕ ಒಂದೇ ಕಾಲದಲ್ಲಿ ಅನೇಕ ಕಾಲಗಳು ಅರ್ಥಪೂರ್ಣವಾಗಿ ಜೀವಿಸುವ ಸ್ವಾರಸ್ಯ ನಮ್ಮದಾಗುತ್ತದೆ. ಮಾತ್ರವಲ್ಲ, ಏಕತಾನತೆಯಿಂದ ಜಡ್ಡುಗಟ್ಟಿದ ನಮ್ಮ ಸಾಹಿತ್ಯರೂಪಗಳಿಗೆ ವೈವಿಧ್ಯ-ವೈಶಿಷ್ಟ್ಯಗಳೂ ಒದಗಿಬಂದು ಸ್ವರೂಪದ ಸೊಗಸು ಸಮೃದ್ಧವಾಗುತ್ತದೆ.