ಕಾರ್ಯಕ್ರಮಗಳ ನಿರ್ವಾಹ
ರಂಗನಾಥ್ ಅವರು ಭವನಕ್ಕೆ ಬಂದ ಬಳಿಕ ಸುಮಾರು ಹತ್ತು ವರ್ಷಗಳ ಕಾಲ ನಡಸಿದ ಕಾರ್ಯಕ್ರಮಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಸಾಮಾನ್ಯವಾಗಿ ತಿಂಗಳಿಗೆ ಹದಿನೈದಿಪ್ಪತ್ತು ಕಾರ್ಯಕ್ರಮಗಳು. ಕೆಲವೊಮ್ಮೆ ಇಪ್ಪತ್ತೈದನ್ನೂ ಮೀರುತ್ತಿದ್ದವು. Down the Memory Lane, Milestones in English Literature, Milestones in Sanskrit Literature, Humour: The Oil for the Wheel of Life, ಕನ್ನಡಸಾಹಿತ್ಯದ ಸಾಲು ದೀಪಗಳು, ಮಹಾಭಾರತದ ಪಾತ್ರಗಳು, ದರ್ಶನಪ್ರಪಂಚ, ಸಂಸ್ಕೃತಸಾಹಿತ್ಯಪ್ರಪಂಚ, ಪಂಚಮಹಾಕಾವ್ಯಗಳು ಮುಂತಾದ ಎಷ್ಟೋ ಭಾಷಣಸರಣಿಗಳು; ಅ. ರಾ. ಮಿತ್ರ, ಭದ್ರಗಿರಿ ಅಚ್ಯುತದಾಸರು, ಪಂಢರಿನಾಥಾಚಾರ್ಯ ಗಲಗಲಿ, ಎಸ್. ರಾಮಸ್ವಾಮಿ, ಈಶ್ವರಾನಂದಗಿರಿ ಮುಂತಾದವರಿಂದ ಸಾಹಿತ್ಯ, ಹರಿಕಥೆ, ವೇದಾಂತಸಪ್ತಾಹಗಳು; ಎನ್. ಟಿ. ಶ್ರೀನಿವಾಸ ಅಯ್ಯಂಗಾರ್, ವಿ. ಪ್ರಭಂಜನಾಚಾರ್ಯ ಮೊದಲಾದವರಿಂದ ವರ್ಷಗಟ್ಟಲೆ ಪ್ರವಚನಗಳು; ವೈದ್ಯಭಾರತಿ ಎಂಬ ಸಂಸ್ಥೆಯ ಸಹಯೋಗದಲ್ಲಿ ಪ್ರತಿತಿಂಗಳ ಆರೋಗ್ಯಕಾರ್ಯಕ್ರಮಗಳು; ಬಾಲಮುರಳೀಕೃಷ್ಣ, ಆರ್. ಕೆ. ಶ್ರೀಕಂಠನ್, ಟಿ. ಆರ್. ಸುಬ್ರಹ್ಮಣ್ಯಂ, ದೊರೆಸ್ವಾಮಿ ಅಯ್ಯಂಗಾರ್ ಮುಂತಾದ ಕಲಾವಿದರಿಂದ ಸಂಗೀತಶಿಬಿರಗಳು; ನಿಯತವಾಗಿ ಗಾನ-ವಾದನ ಕಛೇರಿಗಳು; ರಾಮಾರಾಧ್ಯರ ಶಿಷ್ಯವೃಂದದಿಂದ ಗಮಕರೂಪಕಗಳು; ಉದಯೋನ್ಮುಖ ಕಲಾವಿದರ ವಿವಿಧ ಕಾರ್ಯಕ್ರಮಗಳು; ನೃತ್ಯ ಮತ್ತು ನಾಟಕಗಳು; ವಿಜ್ಞಾನ, ಸಮಾಜ, ಕಾನೂನು, ರಾಜಕೀಯ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಬೋಧಪ್ರದ ಭಾಷಣಗಳು; ಬೆಂಗಳೂರಿಗೆ ಆಗಮಿಸಿದ ರಾಷ್ಟ್ರ-ಅಂತಾರಾಷ್ಟ್ರಖ್ಯಾತಿಯ ವಿದ್ವಾಂಸರ, ಕಲಾವಿದರ ಹಾಗೂ ಸಾರ್ವಜನಿಕ ವ್ಯಕ್ತಿಗಳ ಜೊತೆ ಸಂವಾದ, ಚರ್ಚೆ ... ಹೀಗೆ ಭವನದಲ್ಲಿ ಬಹುಮುಖಿಯಾದ ಕಾರ್ಯಕ್ರಮಗಳು ಸಾಗಲು ರಂಗನಾಥ್ ಅವರೇ ಕಾರಣ.
ಇವುಗಳೆಲ್ಲ ರಾಜಂ ಸಭಾಂಗಣದ ಕಾರ್ಯಕ್ರಮಗಳಾದರೆ ಪ್ರತ್ಯೇಕವಾದ ಕೊಠಡಿಗಳಲ್ಲಿ ಎಸ್. ರಂಗನಾಥ್ ಮತ್ತು ಎಂ. ಎನ್. ಚಂದ್ರಶೇಖರ್ ಅವರಿಂದ ಋಗ್ವೇದ-ಯಜುರ್ವೇದಗಳ ಪಾಠ, ಎನ್. ಎಸ್. ಅನಂತರಂಗಾಚಾರ್ಯರಿಂದ ಸಭಾಷ್ಯವಾಗಿ ಪ್ರಸ್ಥಾನತ್ರಯದ ಪಾಠ, ನನ್ನಿಂದ ಸಂಸ್ಕೃತಪಾಠ, ವೀಣೆ ಮತ್ತು ಸಿತಾರ್ ತರಗತಿಗಳು, ಸದಿರ್ ಮತ್ತು ಕಥಕ್ ತರಗತಿಗಳು ಕೂಡ ನಿಯತವಾಗಿ ಸಾಗುತ್ತಿದ್ದವು.
ಇಷ್ಟೆಲ್ಲವನ್ನೂ ರಂಗನಾಥ್ ಅವಲೀಲೆಯಿಂದ ಆಯೋಜಿಸುತ್ತಿದ್ದರು. ಬರಿಯ ದೂರವಾಣಿಯ ಕರೆಯೊಂದರ ಮೂಲಕ ದೇಶ-ವಿದೇಶಗಳಲ್ಲಿ ಚದುರಿಹೋಗಿದ್ದ ಕವಿ-ಪಂಡಿತರ, ಗಾಯಕ-ನರ್ತಕರ, ಕಲಾವಿದ-ವಿಮರ್ಶಕರ ಸಂಪರ್ಕವನ್ನು ಮಾಡಿ ಅವರಿಂದ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಅವರ ಕಾಲದ ಸಮಾಜ-ಸಂಸ್ಕೃತಿಗಳ ದೀಪಧಾರಿಗಳೆಲ್ಲ ಅವರಿಗೆ ಒಂದಲ್ಲ ಒಂದು ರೀತಿ ಪರಿಚಿತರು. ಕೆಲವರು ಎಳವೆಯಿಂದಲೂ ಅವರನ್ನು ಬಲ್ಲ ಹಿರಿಯರು. ಈ ವರ್ಗದಲ್ಲಿ ಟಿ. ಎಸ್. ವೆಂಕಣ್ಣಯ್ಯ, ಡಿ.ವಿ.ಜಿ., ರಾಳ್ಲಪಲ್ಲಿ, ಬೇಂದ್ರೆ, ಮಾಸ್ತಿ, ವಿ. ಸೀ., ಮೂರ್ತಿರಾವ್ ಮುಂತಾದವರೆಲ್ಲ ಸೇರಿದ್ದರು. ಮತ್ತೆ ಹಲವರು ತಮ್ಮ ಪ್ರಸಾರಮಾಧ್ಯಮಜೀವನದ ನಡುವೆ ಪರಿಚಿತರಾದ ಗೆಳೆಯರು. ಇವರೆಲ್ಲ ಸಮವಯಸ್ಕರೆನ್ನಬಹುದು. ಇನ್ನು ಕೆಲವರು ತಮಗಿಂತ ಕಿರಿಯ ವಯಸ್ಸಿನವರಾಗಿ ಕಲೆ-ಸಮಾಜಗಳ ಮೂಲಕ ಬಳಕೆಗೆ ಬಂದವರು. ರಂಗನಾಥ್ ಅವರ ಬಂಧು-ಬಳಗದಲ್ಲಿಯೇ ಅನೇಕ ಲೇಖಕರಿದ್ದರು, ಕಲಾವಿದರೂ ಇದ್ದರು. ಜೊತೆಗೆ ತಾವು ನಿರಂತರವಾಗಿ ದೇಶ-ವಿದೇಶಗಳನ್ನು ಸುತ್ತುವ ಕಾಯಕದಲ್ಲಿದ್ದಾಗ ಪರಿಚಿತರಾದ ಎಷ್ಟೋ ಮಂದಿ ಸೇರಿದ್ದರು. ಇವರೆಲ್ಲರ ಸದ್ಭಾವ ರಂಗನಾಥ್ ಅವರಿಗೆ ಚೆನ್ನಾಗಿ ಒದಗಿಬರುತ್ತಿತ್ತು. ಹೀಗಾಗಿ ಯಾವ ಕಾರ್ಯಕ್ರಮದ ಯೋಜನೆಯೂ ಅವರಿಗೆ ಶ್ರಮಾವಹ ಎನಿಸುತ್ತಿರಲಿಲ್ಲ. ಮಾತ್ರವಲ್ಲ, ಇಡಿಯ ತಿಂಗಳ ಕಾರ್ಯಕ್ರಮವನ್ನು ಅಂದಿನ ದಿನಗಳಲ್ಲಿ ಎಂಟು-ಹತ್ತು ಸಾವಿರ ರೂಪಾಯಿಗಳ ಒಳಗೆ ಸರಿತೂಗಿಸುತ್ತಿದ್ದರು. ಆಗ ಭವನಕ್ಕೆ ಆರ್ಥಿಕ ಸಂಪತ್ತಿ ಅಷ್ಟಾಗಿರಲಿಲ್ಲ. ಆದರೆ ಅದರ ಮಿತಿಯಲ್ಲಿಯೇ ಮಾಡುತ್ತಿದ್ದ ಈ ರಸಸಾಹಸ ಇಂದಿನ ಸಮೃದ್ಧಿಯುಗದಲ್ಲಿ ಮೃಗ್ಯ. ಅಂತೆಯೇ ಆಗ ಕಾರ್ಯಕ್ರಮ ನೀಡಲು ಬರುತ್ತಿದ್ದ ಕವಿ-ಕಲಾವಿದರು ಕೂಡ ಭವನ ಮತ್ತು ರಂಗನಾಥ್ ಅವರಲ್ಲಿ ತಮಗಿದ್ದ ಗೌರವ-ಆದರಗಳಿಂದ ನಿಃಸ್ವಾರ್ಥವಾಗಿ ನಡೆದುಕೊಳ್ಳುತ್ತಿದ್ದರು.
ಅಭ್ಯಾಗತರಿಗೆ ಸತ್ಕಾರ
ವಿದ್ಯಾಭವನದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಂಗನಾಥ್ ಸಂಸ್ಥೆಯ ಆರ್ಥಿಕ ಪರಿಮಿತಿಯೊಳಗೇ ವಿದ್ವಾಂಸರಿಗೆ, ಕಲಾವಿದರಿಗೆ ತೀರ ಕೊರತೆಯೆನಿಸದ ಮಟ್ಟಿನ ಸಂಭಾವನೆ ಕೊಡಿಸುತ್ತಿದ್ದರು. ನಾನು ಬಲ್ಲಂತೆ ಆ ಕಾಲದಲ್ಲಿ ಬೆಂಗಳೂರಿನ ಮಿಕ್ಕ ಯಾವುದೇ ಸಾಂಸ್ಕೃತಿಕ ವೇದಿಕೆಗಿಂತ ಹೆಚ್ಚಿನ ಸಂಭಾವನೆಯೇ ಭವನದಲ್ಲಿ ದಕ್ಕುತ್ತಿತ್ತು. ಈ ಆರ್ಥಿಕ ಆಯಾಮ ಹಾಗಿರಲಿ. ಬಂದವರನ್ನು ತಾವೇ ಬಾಗಿಲಿನಲ್ಲಿ ನಿಂತು ಬರಮಾಡಿಕೊಳ್ಳುತ್ತಿದ್ದರು, ಸ್ನೇಹದಿಂದ ಬೀಳ್ಗೊಡುತ್ತಿದ್ದರು. ತೀರ ನಿಯತವಾಗಿ ಬರುವವರನ್ನೂ ಸ್ನೇಹ-ಸಲುಗೆ ಇದ್ದವರನ್ನೂ ಬರಮಾಡಿಕೊಳ್ಳಲು ಬಾಗಿಲಿಗೆ ಬರುತ್ತಿರಲಿಲ್ಲವಾದರೂ ಬೀಳ್ಕೊಡುಗೆ ಮಾತ್ರ ವಿಧಿವತ್ತಾಗಿಯೇ ಸಾಗುತ್ತಿತ್ತು. ಹಣ್ಣು-ಹಾರಗಳ ಪ್ರಸ್ತಾವವಿದ್ದಲ್ಲಿ ಆಯ್ದ ಒಳ್ಳೆಯ ದರ್ಜೆಯ ಹಣ್ಣುಗಳು ಹಾಗೂ ಸೊಗಸಾದ ಮಲ್ಲಿಗೆಯೆ ಮಾಲೆಯನ್ನೇ ಏರ್ಪಡಿಸುತ್ತಿದ್ದರು. ಮಲ್ಲಿಗೆಯ ಮಾಲೆಗೆ ಮರುಗ ಮತ್ತು ಗುಲಾಬಿಗಳ, ಕನಕಾಂಬರ-ಪಚ್ಚೆತೆನೆಗಳ ಕುಚ್ಚುಗಳನ್ನೂ ಕಟ್ಟಿರಬೇಕಿತ್ತು. ಎಲ್ಲಿಯೂ ಉದಾಸೀನತೆಯಿಲ್ಲ, ಸಲುಗೆಯಿಂದ ಒಡಮೂಡಬಹುದಾದ ತಾತ್ಸಾರವಿಲ್ಲ. ಎಲ್ಲವೂ ಅಚ್ಚುಕಟ್ಟು; ಆತ್ಮೀಯತೆಯನ್ನು ಉಕ್ಕಿಸುವಂಥ ಒಪ್ಪ-ಓರಣ.
ಬಂದವರಿಗೆ ಹತ್ತಿರದ ಸಮ್ರಾಟ್ ಹೋಟೆಲಿನಿಂದ ಘಮಘಮಿಸುವ ಬಿಸಿಬಿಸಿ ಕಾಫಿಯ ಉಪಚಾರವಾಗಬೇಕು. ಎಷ್ಟೋ ಬಾರಿ ರವೆ ಇಡ್ಲಿ, ಮಸಾಲೆ ದೋಸೆ, ಬಾದಾಮಿ ಹಲ್ವಗಳ ಉಪಚಾರವೂ ಸಲ್ಲುತ್ತಿತ್ತು. ಆ ಕಾಲಕ್ಕೆ ಸಮ್ರಾಟ್ ಹೋಟೆಲ್ ಬೆಂಗಳೂರಿನ ಹೆಗ್ಗಳಿಕೆಗಳಲ್ಲಿ ಒಂದೆನಿಸಿತ್ತು. ಬಂದವರನ್ನು ತಮ್ಮ ಕೊಠಡಿಗೆ ಬರಮಾಡಿಕೊಳ್ಳುವಾಗ ನಿಂತು ಸ್ವಾಗತಿಸುತ್ತಿದ್ದ ಪರಿಯಾಗಲಿ, ಆಸನೋಪಚಾರವಾಗಲಿ ಸೌಜನ್ಯ-ವಿಶ್ವಾಸಗಳಿಗೆ ಮಾದರಿಯಂತಿದ್ದವು. ಆ ವೇಳೆಗಾಗಲೇ ಸಾಂಸ್ಕೃತಿಕ ಜಗತ್ತಿನಲ್ಲಿ ರಂಗನಾಥ್ ಹೆಸರಾಗಿದ್ದರು. ವಯಸ್ಸು, ವಿದ್ಯೆ, ಅನುಭವಗಳ ಹೆಚ್ಚಳವೂ ಇದ್ದಿತು. ಆದರೆ ಬಂದವರ ಎದುರು ಇವುಗಳ ಮೆರೆತ ಕಾಣುತ್ತಿರಲಿಲ್ಲ. ಸಹಜತೆಯಿದ್ದರೂ ಶುಷ್ಕತೆಯಿಲ್ಲ, ನಯವಿದ್ದರೂ ಅತಿವಿನಯವಿಲ್ಲ, ಪ್ರೀತಿಯಿದ್ದರೂ ಆಡಂಬರವಿಲ್ಲ. ಇವೆಲ್ಲ ಅವರ ಪಾಲಿಗೆ ಅನುದಿನದ ಘಟನೆಗಳಾಗಿದ್ದರೂ ಅವುಗಳಲ್ಲಿ ನೀರಸತೆ, ಯಾಂತ್ರಿಕತೆ ಮತ್ತು ಉದಾಸೀನತೆಗಳಿರಲಿಲ್ಲ. ಅದೊಂದು ಬಗೆಯ ಕಲಾಸ್ಪರ್ಶ ಇತ್ತು. ಕಲೆಯೆಂದ ಮಾತ್ರಕ್ಕೆ ಕೃತಕತೆ ಅಲ್ಲಿರಲಿಲ್ಲ. ಯಾವುದನ್ನು ಉಪನಿಷತ್ತು “ಶ್ರದ್ಧಯಾ ದೇಯಮ್”, “ಅಶ್ರದ್ಧಯಾ-ಅದೇಯಮ್”, “ಹ್ರಿಯಾ ದೇಯಮ್”, “ಶ್ರಿಯಾ ದೇಯಮ್”, “ಸಂವಿದಾ ದೇಯಮ್” ಎಂದು ಹೊಗಳಿದೆಯೋ, ರಂಗನಾಥ್ ಅವರು ಕವಿ-ಕಲಾವಿದರೊಡನೆ ವರ್ತಿಸುತ್ತಿದ್ದ ರೀತಿ ಅದಕ್ಕೆ ಉಪಲಕ್ಷಣವಾಗಿತ್ತು.
ಭವನದಲ್ಲಿ ಅವಧಾನ
ನಾನು ಭವನಕ್ಕೆ ವಾರದಲ್ಲಿ ಮೂರು ದಿನವಾದರೂ ಹೋಗುತ್ತಿದ್ದ ಕಾರಣ ರಂಗನಾಥ್ ಅವರಿಗೆ ನನ್ನ ಮುಖಪರಿಚಯ ಸಾಕಷ್ಟಿತ್ತು. ಜೊತೆಗೆ ಭಾಷಣಗಳ ಬಳಿಕ ನಡೆಯುತ್ತಿದ್ದ ಪ್ರಶ್ನೋತ್ತರಗಳಲ್ಲಿ ನಾನು ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದ ಕಾರಣ ಅವರ ಗಮನಕ್ಕೆ ಬಂದಿರಲೂ ಸಾಕು. ಬಹುಶಃ ೧೯೮೫ರ ಏಪ್ರಿಲ್‌ನಲ್ಲಿ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಆಸ್ಥೆಯಿಂದ ನನ್ನ ಹಿನ್ನೆಲೆಯನ್ನು ವಿಚಾರಿಸಿಕೊಂಡರು. ಆಗ ನನ್ನ ಅವಧಾನಕಲೆಯ ವಿಷಯ ಅವರಿಗೆ ತಿಳಿಯಿತು. ಇನ್ನೂ ಸಣ್ಣ-ಪುಟ್ಟ ಗೋಷ್ಠಿಗಳಲ್ಲಿ ಐದಾರು ಅವಧಾನ ಮಾಡಿದ್ದ ನಾನು ಅಳುಕುತ್ತಲೇ ಆ ವಿಷಯವನ್ನು ವಿಸ್ತರಿಸಿದೆ. ಹೀಗಿದ್ದರೂ ಅವರು ಇಪ್ಪತ್ತೆರಡು ವರ್ಷಗಳ ಹುಡುಗನೊಬ್ಬನ ಹುಂಬತನ ಎಂದು ಭಾವಿಸದೆ ಅವಧಾನಕಲೆಯ ರೂಪ-ಸ್ವರೂಪಗಳನ್ನು ಅರ್ಧಘಂಟೆಗೂ ಹೆಚ್ಚು ಕಾಲ ಕೇಳಿ ತಿಳಿದುಕೊಂಡು, “ಗಣೇಶ್, ಮುಂದಿನ ತಿಂಗಳೇ ಈ ಕಾರ್ಯಕ್ರಮವನ್ನು ನಮ್ಮಲ್ಲಿ ಇಟ್ಟುಕೊಳ್ಳೋಣ. ಇದಕ್ಕೆ ಬೇಕಾದ ವಿದ್ವಾಂಸರ ವಿವರಗಳನ್ನು ಕೊಡಿ. ಭವನಕ್ಕೆ ಇಂಥ ಕಾರ್ಯಕ್ರಮಗಳು ಬೇಕು” ಎಂದು ತಮ್ಮ ನಿರ್ಣಯ ನುಡಿದರು. ನನಗೋ ಇದು ನಂಬಲಾಗದ ಬೆರಗಿನ ಸಂಗತಿಯಾಗಿತ್ತು. ತಬ್ಬಿಬ್ಬಾಗುತ್ತಲೇ ಒಪ್ಪಿದೆ. ಕಾರ್ಯಕ್ರಮದ ಆಹ್ವಾನಪತ್ರಿಕೆಯೂ ಅಚ್ಚಾಯಿತು. ಆದರೆ ದುರ್ದೈವದಿಂದ ಮೇ-ಜೂನ್ ತಿಂಗಳಿಡೀ ನಾನು ವಿಷಮಶೀತಜ್ವರಕ್ಕೆ ತುತ್ತಾಗಿ ಹಾಸಿಗೆ ಹಿಡಿದ ಕಾರಣ ಕಾರ್ಯಕ್ರಮವನ್ನು ರದ್ದುಮಾಡಬೇಕಾಯಿತು. ಈ ಬಗೆಗೆ ನನಗೆ ಬಹಳ ಬೇಸರವಿತ್ತು. ರಂಗನಾಥ್ ಅವರಿಗೆ ಯಾವುದೇ ಕಾರ್ಯಕ್ರಮ ರದ್ದಾಗುವುದು ಇಷ್ಟವಿರಲಿಲ್ಲ; ಅಪರಾಧಪ್ರಜ್ಞೆ ನನ್ನನ್ನು ಕಾಡಿತ್ತು.
ಭವನದ ಕಾರ್ಯಕ್ರಮನಿರ್ದೇಶಕರಾಗಿ ರಂಗನಾಥ್ ಅವರು ದುಡಿದ ಹನ್ನೆರಡು ವರ್ಷಗಳ ಅವಧಿಯಲ್ಲಿ ಈ ನನ್ನ ಅವಧಾನವೂ ಸೇರಿದಂತೆ ಕೇವಲ ಮೂರು-ನಾಲ್ಕು ಕಾರ್ಯಕ್ರಮಗಳು ಮಾತ್ರ ರದ್ದಾಗಿದ್ದವೆಂದರೆ ಅವರ ಶಿಸ್ತು-ವ್ಯವಸ್ಥೆ ಎಂಥದ್ದೆಂಬುದು ಸ್ಪಷ್ಟವಾದೀತು. ಸ್ವಸ್ಥನಾದ ಬಳಿಕ ಅವರಲ್ಲಿಗೆ ಹೋಗಿ ವಿಷಾದ ವ್ಯಕ್ತಪಡಿಸಿದೆ. ಇದಾದ ಬಳಿಕ ೧೯೮೭ರಲ್ಲಿಯೇ ನನಗೆ ಭವನದ ವೇದಿಕೆ ಅವಧಾನಕ್ಕೆ ದಕ್ಕಿದ್ದು. ಆದರೆ ಆ ವರ್ಷದಿಂದ ಮೊದಲ್ಗೊಂಡು ರಂಗನಾಥ್ ಅವರು ಭವನದಲ್ಲಿ ಉಳಿದ ಅಷ್ಟೂ ಕಾಲ ಪ್ರತಿಯೊಂದು ವಸಂತದಲ್ಲಿಯೂ ನನ್ನ ಅವಧಾನವನ್ನು ಏರ್ಪಡಿಸುತ್ತಿದ್ದರು. ಈ ಎಲ್ಲ ಕಾರ್ಯಕ್ರಮಗಳ ಅಚ್ಚುಕಟ್ಟು ಮೆಚ್ಚುವಂಥದ್ದು. ವಿದ್ಯಾಭವನದ ಅವಧಾನಗಳೆಲ್ಲ ನನ್ನ ಪಾಲಿಗೆ ತೃಪ್ತಿ ತಂದಿದ್ದವು. ರಸಿಕರಿಗೂ ಇವು ಮುದವಿತ್ತದ್ದು ನೆನೆಯುವಂಥ ಸಂಗತಿ.
ರಂಗನಾಥ್ ಅವರು ಕೇವಲ ನನ್ನ ಅಷ್ಟಾವಧಾನಗಳಿಗಷ್ಟೇ ಭವನದ ನೆರವನ್ನು ಸೀಮಿತಗೊಳಿಸದೆ ೧೯೯೧-೯೨ರಲ್ಲಿ ಸನಾತನಧರ್ಮರಕ್ಷಣಸಂಸ್ಥೆಯ ಸಹಯೋಗದ ಜೊತೆ ನಾಲ್ಕು ಶತಾವಧಾನಗಳಿಗೂ ವಿಸ್ತರಿಸಿದರು. ಇದು ನಿಜಕ್ಕೂ ಹಿರಿದಾದ ನೆರವು. ಲಂಕಾ ಕೃಷ್ಣಮೂರ್ತಿಗಳು ಇದನ್ನು ಸದಾ ನೆನೆಯುತ್ತಿದ್ದರು. ಇಬ್ಬರಿಗೂ ಇದ್ದ ಪ್ರೀತಿ-ಗೌರವಗಳಿಗೆ ಅವಧಾನವೇ ಮೂಲವಾದದ್ದೊಂದು ಹಿಗ್ಗಿನ ಸಂಗತಿ. ಇದೇ ರೀತಿ ವಯಸ್ಸು, ಅನುಭವ ಮತ್ತು ಸ್ಥಾನ-ಮಾನಗಳ ನೆಲೆಯಿಂದ ನಾನೆಷ್ಟು ಚಿಕ್ಕವನೇ ಆಗಿದ್ದರೂ ಅದನ್ನೆಲ್ಲ ಬದಿಗಿರಿಸಿ ಭವನದದಲ್ಲಿ ನನ್ನ ನೂರಾರು ಭಾಷಣಗಳನ್ನು ರಂಗನಾಥ್ ಏರ್ಪಡಿಸಿದರು. ಇದರಲ್ಲಿ ನನಗೆ ಹೆಚ್ಚಿನ ತೃಪ್ತಿ ಕೊಟ್ಟದ್ದು ಸಂಸ್ಕೃತದ ಪಂಚಮಹಾಕಾವ್ಯಗಳನ್ನು ಆದ್ಯಂತ ಪರಿಚಯಿಸಿದ ಸುದೀರ್ಘ ಭಾಷಣಸರಣಿ.
To be continued.