ಪ್ರವೇಶ
ಉಕ್ತಿ ಎಂದರೆ ನುಡಿ, ಹೇಳಿಕೆ ಎಂಬೆಲ್ಲ ಅರ್ಥಗಳುಂಟು. ಬರಿಯ ಮಾತಿಗೆ ಸೊಗಸು ಬಂದಾಗ ಅದೊಂದು ವಿಶೇಷವೆನಿಸುತ್ತದೆ. ಇದು ಕವಿತೆಯಲ್ಲಿ ಎದ್ದುಕಾಣುತ್ತದೆ; ಇದಿಲ್ಲದ ಪಕ್ಷದಲ್ಲಿ ಕಾವ್ಯತ್ವಕ್ಕೆ ಕುಂದು ಬರುತ್ತದೆ. ಆದುದರಿಂದಲೇ ಕಾವ್ಯವನ್ನು ‘ಉಕ್ತಿವಿಶೇಷ’ ಎನ್ನುತ್ತಾರೆ. ರಾಜಶೇಖರನ ‘ಕರ್ಪೂರಮಂಜರೀ’ (೧.೮) ಎಂಬ ಪ್ರಾಕೃತರೂಪಕ ಈ ಮಾತನ್ನು ಸಮರ್ಥವಾಗಿ ನಿರೂಪಿಸುತ್ತದೆ: “ಉತ್ತಿವಿಸೇಸೋ ಕವ್ವಮ್” (ಉಕ್ತಿವಿಶೇಷಃ ಕಾವ್ಯಮ್). ಈ ಅಂಶವನ್ನೇ ‘ವಕ್ರತೆ’ ಎಂಬ ಹೆಸರಿನಿಂದ ಕುಂತಕ ವಿಸ್ತೃತವಾಗಿ ವಿವೇಚಿಸಿದ್ದಾನೆ. ಅವನ ಪ್ರಕಾರ ವಕ್ರತೆಯೆಂಬುದು ಲೋಕಸಿದ್ಧವಾದ ಮಾತುಗಳಿಗಿಂತ ವಿಭಿನ್ನವಾದ, ವಿಶಿಷ್ಟವಾದ ನುಡಿಗಾರಿಕೆ. ಇಂಥ ವಾಗ್ವಿಲಾಸದಲ್ಲೊಂದು ಕೌಶಲವಿರುತ್ತದೆ. ಈ ಕುಶಲತೆಯ ಮೂಲಕ ಸೌಂದರ್ಯ ಉನ್ಮೀಲಿಸುತ್ತದೆ. ಹೀಗೆ ನಾವು ಬಳಸುವ ನಿತ್ಯದ ನುಡಿಗಳಲ್ಲಿಯೇ ಮಿಂಚಿ ಮೆರೆಯುವ ವೈಚಿತ್ರ್ಯ ಅಥವಾ ಬೆರಗುಗೊಳಿಸುವ ಹೊಸತನದ ಹೊಗರು ವಕ್ರೋಕ್ತಿ ಇಲ್ಲವೇ ವಕ್ರತೆ ಎನಿಸುತ್ತದೆ.[1]
ವಕ್ರತೆ ಅಥವಾ ಉಕ್ತಿವಿಶೇಷದಲ್ಲಿ ಅಡಕವಾಗದ ಕಾವ್ಯರಚನಾತತ್ತ್ವ ಯಾವುದೂ ಇಲ್ಲವೆನ್ನಬಹುದು. ರಸವನ್ನು ಕಾವ್ಯದ ಅನುಭವ ಎಂದು ಪ್ರತ್ಯೇಕವಾಗಿ ಗಣಿಸುವುದಾದರೆ, ಇದೇ ಕಾವ್ಯದ ಮತ್ತೊಂದು ಅಂಶವಾದ ಅಭಿವ್ಯಕ್ತಿಯೆಲ್ಲವೂ ವಕ್ರತೆಯೇ. ಯಾವುದೇ ಭಾಷೆಯ ವರ್ಣಗಳ ಹಂತದಲ್ಲಿ ತೋರಿಕೊಳ್ಳುವ ಗುಣ ಮತ್ತು ವೃತ್ತಿಗಳಾಗಲಿ; ವರ್ಣ, ಪದ ಮತ್ತು ವಾಕ್ಯಗಳ ಹಂತಗಳಲ್ಲಿ ಕಾಣಿಸಿಕೊಳ್ಳುವ ರೀತಿ ಅಥವಾ ಮಾರ್ಗಗಳಾಗಲಿ; ಪದ ಮತ್ತು ವಾಕ್ಯಗಳ ಸ್ತರಗಳ ಚಮತ್ಕಾರವೆನಿಸಿದ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಾಗಲಿ; ಇವಕ್ಕಿಂತ ವ್ಯಾಪಕವಾದ ಗುಣೀಭೂತವ್ಯಂಗ್ಯವಾಗಲಿ; ಇವೆಲ್ಲವನ್ನೂ ಬೇರೆ ಬೇರೆ ನೆಲೆಗಳಲ್ಲಿ ಒಳಗೊಂಡು ಪ್ರಕರಣ ಮತ್ತು ಪ್ರಬಂಧಗಳವರೆಗೆ ವಿಸ್ತರಿಸಿಕೊಳ್ಳುವ ಧ್ವನಿಯಾಗಲಿ ವಕ್ರತೆ ಅಥವಾ ಉಕ್ತಿವಿಶೇಷವೆಂದು ತಾತ್ಪರ್ಯವಾಗುತ್ತದೆ.
ಆನಂದವರ್ಧನನ ಧ್ವನಿಸಿದ್ಧಾಂತವು ಉಕ್ತಿವಿಶೇಷದ ಎಲ್ಲ ಆಯಾಮಗಳನ್ನೂ ಪ್ರತಿನಿಧಿಸಬಲ್ಲುದು. ಆದರೂ ವಿಷಯಸ್ಪಷ್ಟತೆ ಮತ್ತು ಪಾರಿಭಾಷಿಕ ಸಂಕ್ಷಿಪ್ತತೆಗಳ ದೃಷ್ಟಿಯಿಂದ ವಕ್ರತೆ ಅಥವಾ ಉಕ್ತಿವಿಶೇಷ ಎಂಬ ಮಾತು ನಮ್ಮ ವಿವೇಚನೆಗೆ ಹೆಚ್ಚು ಅನುಕೂಲಿಸುತ್ತದೆ. ಅಲ್ಲದೆ ಕುಂತಕನ ವಕ್ರೋಕ್ತಿತತ್ತ್ವವು ಕವಿಯ ದೃಷ್ಟಿಯಿಂದ ಹೊರಟ ಕಾರಣ ಕೃತಿಯೊಂದರ ರಾಚನಿಕ ಸ್ವಾರಸ್ಯವನ್ನು ಮನಗಾಣಲು ಸಹೃದಯನ ದೃಷ್ಟಿಯಿಂದ ಕಾವ್ಯವನ್ನು ವಿವೇಚಿಸುವ ಆನಂದವರ್ಧನನ ಧ್ವನಿತತ್ತ್ವಕ್ಕಿಂತ ಸುಲಭವಾಗಿ ಒದಗಿಬರುತ್ತದೆ. ಜೊತೆಗೆ “ವಿಚಿತ್ರೈವಾಭಿಧಾ” ಎಂಬ ಮಾತಿನ ಮೂಲಕ ಕುಂತಕನು ವಕ್ರತೆಯನ್ನು ಹೆಚ್ಚು ಮೂರ್ತವಾದ ಅಭಿಧಾವೃತ್ತಿಯ ಒಳಗೇ ಸೇರಿಸಿರುವ ಕಾರಣ ವಿಮರ್ಶೆಗೆ ವಸ್ತುನಿಷ್ಠತೆ ಮತ್ತಷ್ಟು ದಕ್ಕುವ ಅವಕಾಶವುಂಟು. ಒಟ್ಟಿನಲ್ಲಿ ಧ್ವನಿ-ವಕ್ರೋಕ್ತಿಗಳ ನಡುವೆ ಪರಸ್ಪರ ವಿರೋಧವಿಲ್ಲ; ಇವೆರಡನ್ನೂ ಪೂರಕವಾಗಿ ಬಳಸಿಕೊಳ್ಳುವಲ್ಲಿ ಮಿಗಿಲಾದ ಪ್ರಯೋಜನ ಉಂಟೆಂಬ ಅಂಶವನ್ನು ಒಪ್ಪಿಯೇ ಭಾರತೀಯ ಕಾವ್ಯಮೀಮಾಂಸೆ ಸಾಗಿದೆ.
ಈಚಿನ ಐವತ್ತು-ಅರುವತ್ತು ವರ್ಷಗಳಿಂದ ಸಾಹಿತ್ಯವಿವೇಚನೆ ಎಂಬುದು ಪ್ರಮುಖವಾಗಿ ಸಾಮಾಜಿಕ ಮತ್ತು ರಾಜಕೀಯ ವಿವೇಚನೆಯಾಗಿ ಪರಿಣಮಿಸಿರುವುದು ನಿಜಕ್ಕೂ ಅವಾಂಛಿತ. ಏಕೆಂದರೆ ಇದು ಸಾಹಿತ್ಯದ ಸ್ವಂತಿಕೆಗೆ ಧಕ್ಕೆ ತರುತ್ತದೆ. ಹೇಗೆ ಹಿಂದಿನ ಕಾಲದಲ್ಲಿ ಮತ ಮತ್ತು ಅರಸೊತ್ತಿಗೆಗಳು ಸಾಹಿತ್ಯದ ಸಾರ್ವಭೌಮತೆಗೆ ಎರವಾದುವೆಂದು ಈಗಿನವರು ಆಕ್ಷೇಪಿಸುವರೋ ಹಾಗೆಯೇ ಇದು ಕೂಡ. ಅಲ್ಲದೆ ರಾಗ-ದ್ವೇಷಗಳ ಮೇಲಾಟ ಹೆಚ್ಚಾಗಿರುವ ಕಾರಣ ಸದ್ಯದ ವಿಕೃತಿ ಮತ್ತೂ ಭಯಾನಕವೆನಿಸಿದೆ. ಈ ಎಲ್ಲ ಅಪಾಯಗಳನ್ನು ಪರಿಶೀಲಿಸಿದಾಗ ರಸ, ಧ್ವನಿ, ವಕ್ರತೆ ಮತ್ತು ಔಚಿತ್ಯಗಳಂಥ ಅಪ್ಪಟ ಭಾರತೀಯ ಕಾವ್ಯಮೀಮಾಂಸೆಯ ಮೂಲ ಮಾನಗಳಾಗಲಿ, ಇವಕ್ಕೆ ಕೆಲಮಟ್ಟಿಗೆ ಸಂವಾದಿ ಎನಿಸಬಲ್ಲ ಪಾಶ್ಚಾತ್ತ್ಯ ಪ್ರಪಂಚದ ಕೆಥಾರ್ಸಿಸ್, ಸಬ್ಲಿಮಿಟಿ, ಇಮೇಜ್, ಮೆಟಫರ್ ಮುಂತಾದ ಅಂಶಗಳಾಗಲಿ ಸಾಹಿತ್ಯದ ಅನನ್ಯತೆಯನ್ನು ಉಳಿಸಿಕೊಡುವಲ್ಲಿ ತುಂಬ ಮುಖ್ಯವೆಂದು ತೋರುತ್ತದೆ. ಈ ಬಗೆಯ ಅನನ್ಯತೆ ಬೇಕಿರುವುದಾದರೂ ಸಾಹಿತ್ಯದ ಅಸ್ಮಿತೆಯ ಅಹಂಕಾರವನ್ನು ಹೆಚ್ಚಿಸಿಕೊಳ್ಳಲಲ್ಲ. ಇದು ವಸ್ತುಸ್ಥಿತಿ ಮತ್ತು ಲೋಕಹಿತ ಎರಡನ್ನೂ ಒಳಗೊಂಡ ಕಾರಣ ಎಲ್ಲರಿಗೂ ಉಪಾದೇಯವಾಗಿದೆ.
ಪ್ರಸ್ತುತ ಕನ್ನಡಸಾಹಿತ್ಯವನ್ನಾಗಲಿ, ಇದರ ಒಂದು ಹೆಜ್ಜೆಗುರುತಾದ ಗೋವಿಂದ ಪೈಗಳ ಕವಿತೆಯನ್ನಾಗಲಿ ವಿವೇಚಿಸಲು ಉಕ್ತಿವಿಶೇಷ ಎಂಬ ಅರ್ಥಪೂರ್ಣವಾದ ಅಳತೆಗೋಲು ಬೇಕಿರುವುದು ಈ ಎಲ್ಲ ಕಾರಣಗಳಿಂದಲೇ. ಪೈಗಳನ್ನು ಕುರಿತು ಈಗಾಗಲೇ ಸಾಕಷ್ಟು ಕೆಲಸವಾಗಿದೆ; ಎರಡು-ಮೂರು ತಲೆಮಾರುಗಳ ವಿದ್ವಾಂಸರೂ ಕವಿಗಳೂ ಈ ಬಗೆಗೆ ಹಲವಾರು ಒಳ್ಳೆಯ ಒಳನೋಟಗಳನ್ನು ಒದಗಿಸಿಕೊಟ್ಟಿದ್ದಾರೆ. ಇಂಥ ವಿಮರ್ಶೆಗಳಲ್ಲಿ ಅವರ ಕಾವ್ಯದ ವಸ್ತು, ಭಾಷೆ, ಛಂದಸ್ಸು ಹಾಗೂ ಶೈಲಿಗಳ ವೈಶಿಷ್ಟ್ಯ-ವೈಚಿತ್ರ್ಯಗಳು ದಾಖಲೆಗೊಂಡಿವೆ; ರಸ-ಭಾವಗಳ ಭೂಮತೆ ಮತ್ತು ಮೌಲ್ಯಗಳ ಮಹತ್ತ್ವ ಕೂಡ ಕೆಲಮಟ್ಟಿಗೆ ವಿವೇಚಿತವಾಗಿವೆ. ಆದರೂ ಈ ನಿಟ್ಟಿನಲ್ಲಿ ಮತ್ತಷ್ಟು ಅಧ್ಯಯನಕ್ಕೆ ಆಸ್ಪದವಿದೆ ಮತ್ತು ಅಪ್ಪಟ ಭಾರತೀಯ ಕಾವ್ಯಮೀಮಾಂಸೆಯ ನೆಲೆ-ಹಿನ್ನೆಲೆಗಳಲ್ಲಿ ಇನ್ನೂ ಹೆಚ್ಚಿನ ಸ್ವಾರಸ್ಯಗಳನ್ನು ಗುರಿತಿಸಲು ಸಾಧ್ಯವಿದೆ ಎಂಬ ನಿಲವಿನಿಂದಲೇ ಸದ್ಯದ ಪರಾಮರ್ಶೆ ಹೊರಟಿದೆ. ಹೀಗಾಗಿಯೇ ಇಲ್ಲಿ ‘ಇಡಿ’ಯನ್ನು ಮೇಲ್ನೋಟದಲ್ಲಿ ಗ್ರಹಿಸಿ ಮಾಡುವ ‘ತಾತ್ಪರ್ಯ ವಿಮರ್ಶೆ’ಗಿಂತ ಮಿಗಿಲಾಗಿ ‘ಬಿಡಿ’ಗಳನ್ನು ಒಳನೋಟದಿಂದ ಗಮನಿಸಿ ನಡಸಿದ ರಾಚನಿಕ ಮೀಮಾಂಸೆ ಮುನ್ನೆಲೆಗೆ ಬಂದಿದೆ. ಈ ಮೂಲಕವೇ ‘ಇಡಿ’ಯ ಅನುಸಂಧಾನ ಕೂಡ ಸೂಚ್ಯವಾಗಿ ಸಾಗಿರುವುದು ಅಭಿಜ್ಞರಿಗೆ ಸುವೇದ್ಯ. ಇಂಥ ಪ್ರಯತ್ನದ ಸಾಫಲ್ಯಪ್ರಮಾಣಕ್ಕೆ ವಿದ್ವದ್ರಸಿಕರ ಅನಿಸಿಕೆಯೇ ಒರೆಗಲ್ಲು.
ಗೋವಿಂದ ಪೈಗಳ ಕಾವ್ಯದಲ್ಲಿ ಮೊದಲು ಎದ್ದುಕಾಣುವುದು ಅಲ್ಲಿ ಬಳಕೆಗೊಂಡ ಭಾಷೆ. ಆ ಬಳಿಕ ಛಂದಸ್ಸು. ಅನಂತರ ಶಬ್ದಾರ್ಥಾಲಂಕಾರಗಳು. ಕಡೆಗೆ ವಸ್ತು-ಇತಿವೃತ್ತಗಳ ಮೂಸೆಯಲ್ಲಿ ಕರಗಿ ಮಿರುಗುವ ರಸ-ಭಾವಗಳ ಸಮುನ್ನತಿ. ಈ ಎಲ್ಲ ಸ್ತರಗಳಲ್ಲಿಯೂ ಉಕ್ತಿವಿಶೇಷದ ಪಾತ್ರವುಂಟು. ಆದರೆ ಸದ್ಯದ ಅಧ್ಯಯನದಲ್ಲಿ ಭಾಷೆ, ವ್ಯಾಕರಣ, ವಸ್ತು ಮತ್ತು ಇತಿವೃತ್ತಗಳ ಬಗೆಗೆ ಹೆಚ್ಚಾಗಿ ಚರ್ಚಿಸದೆ ಉಳಿದ ಅಂಶಗಳನ್ನು ವಿಶದವಾಗಿ ವಿವೇಚಿಸಲಾಗುತ್ತದೆ.
ಭಾಷೆ
ಪ್ರೊ|| ಎ. ವಿ. ನಾವಡ ಅವರು ಗೋವಿಂದ ಪೈಗಳ ಪದಪ್ರಯೋಗವನ್ನೂ ನುಡಿಗಟ್ಟುಗಳ ನೈಪುಣ್ಯವನ್ನೂ ಕುರಿತು ಒಳ್ಳೆಯ ನಿಘಂಟುವನ್ನೇ ನಿರ್ಮಿಸಿರುವಾಗ ಪೈಗಳ ಭಾಷೆ-ವ್ಯಾಕರಣಗಳನ್ನು ಕುರಿತು ಇಲ್ಲಿ ಪ್ರತ್ಯೇಕವಾಗಿ ಚರ್ಚಿಸಬೇಕಿಲ್ಲ. ಆದರೆ ಇವುಗಳು ಕಾವ್ಯಕ್ಕೆ ಪೂರಕವಾಗಿ ಬರುವ ಕ್ರಮವನ್ನು ಅಷ್ಟಿಷ್ಟಾದರೂ ಗಮನಿಸಲೇಬೇಕು. ಹಿಂದೆಯೇ ಅನೇಕ ವಿದ್ವಾಂಸರು ಗೋವಿಂದ ಪೈಗಳ ಭಾಷಾವೈಶಿಷ್ಟ್ಯ ಮತ್ತದು ಕಾವ್ಯದಲ್ಲಿ ವಹಿಸುವ ಪಾತ್ರವನ್ನು ಕುರಿತು ಚರ್ಚಿಸಿದ್ದಾರೆ. ಇವರೆಲ್ಲರ ಮಥಿತ ಅಭಿಪ್ರಾಯವನ್ನು ಗಮನಿಸುವುದಾದರೆ ಅದು ಹೀಗೆ: ಪೈಗಳ ಭಾಷೆ ಪ್ರೌಢ. ಅವರ ಪದಸಂಪದ ಅಪಾರ, ಅಗಾಧ. ಸಂಸ್ಕೃತ, ಹಳಗನ್ನಡ, ನಡುಗನ್ನಡಗಳಿಂದಲ್ಲದೆ ವಿವಿಧ ಪ್ರಾಕೃತಗಳಿಂದಲೂ ಅನ್ಯದೇಶ್ಯಗಳಿಂದಲೂ ಸಹ ಅವರು ಯಥೋಚಿತವಾಗಿ ಪದಗಳನ್ನು ಸೆಳೆದುಕೊಳ್ಳುತ್ತಾರೆ. ತಮ್ಮದಾದ ಅಭಿವ್ಯಕ್ತಿಗೊಂದು ಅಧಿಕೃತತೆಯನ್ನೂ ಬಿಗಿಯನ್ನೂ ತಂದುಕೊಡುವುದಕ್ಕೆ ಮಾತ್ರವಲ್ಲದೆ ಛಂದೋಬಂಧಕ್ಕೆ ಒದಗುವಂತೆ, ಪ್ರಾಸಾನುಪ್ರಾಸಗಳಿಗೆ ಅನುಕೂಲಿಸುವಂತೆ ಅವರು ಶಬ್ದಗಳನ್ನು ಹವಣಿಸುತ್ತಾರೆ. ಜೊತೆಗೆ ಇಂದು ಬಳಕೆಯಲ್ಲಿಲ್ಲದ, ಹಲವು ಶತಮಾನಗಳಿಂದ ಸಾಹಿತ್ಯದಲ್ಲಿ ಕಾಣಿಸಿಕೊಳ್ಳದ ಎಷ್ಟೋ ಶಬ್ದಗಳನ್ನು ಬಳಸುವ ಮೂಲಕ ಭಾಷೆಯೊಂದರ ಅನುಸ್ಯೂತತೆಯನ್ನು ಕಾಪಾಡಿಕೊಳ್ಳುವ ಕಾಳಜಿಯನ್ನೂ ತೋರುತ್ತಾರೆ. ಅಲ್ಲದೆ ಪೈಗಳ ಗಮನ ನಮ್ಮ ಆಲಂಕಾರಿಕರು ಹೇಳುವ ಕಾವ್ಯದ ವ್ಯುತ್ಪಾದಕತೆಯ ಕಡೆಗೂ ಇರುವುದರಿಂದ ಓದುಗರ ಭಾಷಾಪರಿಣತಿಗಾಗಿಯೂ ಇಂಥ ಪ್ರಕಲ್ಪಗಳನ್ನು ಕೈಗೊಳ್ಳುತ್ತಾರೆ. ಇವೆಲ್ಲ ತುಂಬ ಶ್ಲಾಘನೀಯ.
ಇದಿಷ್ಟೂ ಭಾಷೆಯ ಪದಸ್ತರದ ಸಂಗತಿಯಾಯಿತು. ಪೈಗಳ ನುಡಿಯೊಡಲನ್ನು ಕುರಿತು ಪ್ರಸ್ತಾವಿಸುವವರೆಲ್ಲ ಹೆಚ್ಚಾಗಿ ಈ ಸ್ತರಕ್ಕೇ ಸೀಮಿತವಾಗಿದ್ದಾರೆ. ಆದರೆ ಇದನ್ನೂ ಮೀರಿದ ಮತ್ತೂ ಒಂದು ಹಂತವಿದೆ. ಅದು ವಾಕ್ಯಸ್ತರವನ್ನು ಕುರಿತದ್ದು. ವಸ್ತುತಃ ಭಾಷೆಯೊಂದರ ಜೀವಾಳವಿರುವುದು ಪದಗಳಿಗಿಂತ ಮಿಗಿಲಾಗಿ ವಾಕ್ಯದಲ್ಲಿಯೇ. ಗದ್ಯ, ಪದ್ಯ ಮತ್ತು ಗೀತ ಎಂದು ಮುಬ್ಬಗೆಯಾದ ಯಾವುದೇ ಭಾಷಾರಚನೆಯಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಹದವಿರುತ್ತದೆ, ಕ್ರಮವಿರುತ್ತದೆ. ಪೈಗಳು ಇದನ್ನು ಚೆನ್ನಾಗಿ ಬಲ್ಲವರು. ದುರ್ದೈವವೆಂದರೆ ಇದನ್ನು ನವೋದಯದ ಪರವರ್ತಿ ಲೇಖಕರು ಸರಿಗಾಗಿ ಗಮನಿಸಿದ ಹಾಗೆ ತೋರದು. ನವೋದಯಸಾಹಿತಿಗಳ ಪೈಕಿ ಕೂಡ ಕೆಲವರು ಮಾತ್ರ ಈ ಮೂರೂ ಮಾರ್ಗಗಳಲ್ಲಿ ದುಡಿದು ಆಯಾ ಪ್ರಕಾರದ ವೈಶಿಷ್ಟ್ಯ-ಸಾರ್ಥಕ್ಯಗಳನ್ನು ಮೆರೆದಿದ್ದಾರೆ. ಇಂಥವರಲ್ಲಿ ಪೈಗಳೂ ಒಬ್ಬರು. ಮಾತ್ರವಲ್ಲ, ಇವರು ಹಳಗನ್ನಡದ ಚಂಪೂಕವಿಗಳ ಹಾಗೆ ತಮ್ಮ ಕವಿತೆಗಳಲ್ಲಿ ಗದ್ಯಾನ್ವಯಕ್ಕಿಂತ ವಿಭಿನ್ನವೂ ವಿಶಿಷ್ಟವೂ ಆದ ಪದ್ಧತಿಯನ್ನು ಮಿಕ್ಕವರಿಗಿಂತ ಮಿಗಿಲಾಗಿ ಮೆರೆದಿದ್ದಾರೆ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಅವರ ಪ್ರಸಿದ್ಧ ರಚನೆಗಳಿಂದಲೇ ಕೊಡಬಹುದು: ‘ತನು ಕನ್ನಡ ಧನ ಕನ್ನಡ ಮನ ಕನ್ನಡವೆಮ್ಮವು’ (ಪು. ೭೩).[2] ಇದರ ಗದ್ಯಾನ್ವಯ ಹೀಗೆ: ನಮ್ಮ ತನು ಕನ್ನಡ, ನಮ್ಮ ಧನ ಕನ್ನಡ, ನಮ್ಮ ಮನ ಕನ್ನಡ. ಆದರೆ ಕವಿತೆಯಲ್ಲಿದು ಹಿಂದು-ಮುಂದಾಗಿದೆ; ಆಗಬೇಕು ಕೂಡ. ಇದೇ ರೀತಿ ಮತ್ತೊಂದು ಉದಾಹರಣೆ: ‘ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ?’ (ಪು. ೯೨). ಇಲ್ಲಿಯೂ ಕೂಡ ಗದ್ಯದ ಅನ್ವಯದಂತೆ ‘ಲತೆಯು ತನ್ನ ಫಲವು ಸಿಹಿಯೋ ಕಹಿಯೋ ಎಂಬುದನ್ನು ಬಲ್ಲುದೇ?’ ಎಂದಾಗಬೇಕು. ಈ ವಿಕಟತೆಯು ಕಂದ-ವೃತ್ತಗಳಲ್ಲಿ ಮತ್ತೂ ಹೆಚ್ಚಾಗಿ ತೋರುತ್ತದೆ. ಉದಾ: ‘‘ನೀಳ್ದೆಂ ಮೂವತ್ತು ಕಾಲಂ ಪವಣಿಸಿದುಲಿಯೀ ಗೆಜ್ಜೆಯಂ ಕಾಲ್ಗೆ ನಿನ್ನಾ’ (ಪು. ೪೨೭). ಇದನ್ನು ‘ಮೂವತ್ತು (ವರ್ಷಗಳ) ಕಾಲದಿಂದಲೂ ಹವಣಿಸಿದ ಉಲಿಯ ಗೆಜ್ಜೆಯನ್ನು ನಿನ್ನ ಕಾಲಿಗೆ ನೀಡಿದೆನು’ ಎಂದು ಗದ್ಯಾನ್ವಯಕ್ಕೆ ತಂದು ಹೋಲಿಸಿಕೊಳ್ಳಬಹುದು. ‘ನೀಡೈ ದುಃಖಸುಖಂ ಸಮಂಬಗೆದು ನಾನೀ ಬಾಳ್ವೆಯಂ ತಾಳ್ವಿನಂ’ (ಪು. ೨೨೭). ‘ಸುಖ-ದುಃಖಗಳನ್ನು ಸಮವಾಗಿ ಭಾವಿಸಿ ನಾನು ಈ ಬಾಳನ್ನು ತಾಳುವಂತೆ (ಅನುಗ್ರಹವನ್ನು) ನೀಡು’ ಎಂದು ಇದನ್ನು ಗದ್ಯಕ್ಕೆ ತಂದುಕೊಳ್ಳಬಹುದು. ಇಂಥ ಪ್ರಕ್ರಮಗಳೆಲ್ಲ ಪೈಗಳ ವಿಕ್ರಮಗಳೇ. ಇವು ಪದ್ಯಭಾಷೆಗೇ ಸಲ್ಲುವ ಸೊಗಸಾದ ಭೂಷಣಗಳು. ಇಂಥ ಅನ್ವಯವೈಚಿತ್ರ್ಯದ ಮೂಲಕ ಅಭಿವ್ಯಕ್ತಿಗೆ ನಾವೀನ್ಯವನ್ನೂ ಆಸ್ವಾದದಲ್ಲಿ ಕೌತೂಹಲವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಪೈಗಳ ಭಾಷಾಪ್ರಯೋಗದ ಆಭಿಜಾತ್ಯಕ್ಕೆ ಸಾಕ್ಷಿ.
ಒಟ್ಟಿನಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹಿಂದೆಯೇ ಗುರುತಿಸಿರುವಂತೆ ಪೈಗಳ ಭಾಷೆ ಒಂದು ಮಿಶ್ರಲೋಹದಂತೆ - ಮೂಲವಸ್ತುಗಳಿಗಿಲ್ಲದ ಹಲವು ಗುಣವಿಶೇಷಗಳಿಂದ ಗಮನಾರ್ಹವಾಗಿದೆ, ತನ್ನೊಳಗೆ ಹೆಚ್ಚಿನ ತಾಳಿಕೆ-ಬಾಳಿಕೆಗಳನ್ನೂ ಉಳಿಸಿಕೊಂಡಿದೆ.
ಇಂಥ ಅರ್ಹವಾದ ಮೆಚ್ಚುಮಾತುಗಳ ಜೊತೆಗೆ ಕೆಲವರು ಪೈಗಳ ಪದಪ್ರಯೋಗಗಳ ಔಚಿತ್ಯ ಮತ್ತು ಶಾಸ್ತ್ರೀಯತೆಗಳನ್ನು ಕುರಿತು ಪ್ರಶ್ನಿಸಿದ್ದೂ ಉಂಟು. ಇವುಗಳ ದಾಖಲೆಗಳನ್ನು ನಾನು ಕಂಡಿಲ್ಲವಾದರೂ ಹಿಂದಿನ ತಲೆಮಾರಿನವರ ಪ್ರಸ್ತಾವಾಂತರಗಳಲ್ಲಿ ಇಂಥ ಸೂಚನೆಗಳನ್ನು ಗಮನಿಸಿದ್ದೇನೆ. ಈ ಬಗೆಯ ಆಕ್ಷೇಪಗಳಿಗೆಲ್ಲ ಪೈಗಳು ಸಾಧಾರವಾಗಿ, ಸಾಗ್ರಹವಾಗಿ ಉತ್ತರವನ್ನೂ ನೀಡುತ್ತಿದ್ದರೆಂದು ಕೇಳಿದ್ದೇನೆ. ಇಷ್ಟಾಗಿಯೂ ಕೆಲವೊಂದು ಆಕ್ಷೇಪಗಳು ಉಳಿದಾವು. ಅವು ಕೆಲಮಟ್ಟಿಗೆ ಅಪ್ರತೀತಿ, ದುರೂಹ, ಚ್ಯುತಸಂಸ್ಕೃತಿ ಮುಂತಾಗಿ ಆಲಂಕಾರಿಕರು ಹೇಳುವ ಕೆಲವೊಂದು ಶಬ್ದದೋಷಗಳ ಕಕ್ಷೆಗೆ ಬರುತ್ತವೆ. ಇವಕ್ಕಿಂತ ಹೆಚ್ಚಾಗಿ ಇಂಗ್ಲಿಷಿನಂಥ ಹೊರನಾಡಿನ ನುಡಿಗಳ ಪ್ರಭಾವದಿಂದ - ಅವುಗಳ ಅನುಕರಣ ಮತ್ತು ಅನುಸರಣಗಳೆಂಬಂತೆ - ಪೈಗಳೇ ಸ್ವತಂತ್ರಿಸಿ ವಿಪುಲವಾಗಿ ಟಂಕಿಸಿಕೊಂಡ ಪದಗಳಲ್ಲಿ, ವಾಕ್ಯಗಳಲ್ಲಿ, ನುಡಿಗಟ್ಟುಗಳಲ್ಲಿ ಶ್ರುತಿಹಿತವೆನಿಸದ, ಕನ್ನಡದ ನುಡಿಜಾಡಿಗೆ ಸಹಜವೆನಿಸದ ರೂಪಗಳು ಸಾಕಷ್ಟಿವೆ. ಇಲ್ಲೆಲ್ಲ ಅವರು ಕನ್ನಡಕ್ಕೆ ಹೊಸತಾದ ಯಾವುದನ್ನೋ ತರಲೇಬೇಕೆಂಬ ಹುರುಡಿನಿಂದ ಹೊರಟು ದುಡಿದಂತೆ ಕಾಣುತ್ತದೆ. ಅಷ್ಟೇಕೆ, ಹಳಗನ್ನಡದ ಮೂಲದಿಂದ ಅವರು ಹವಣಿಸಿಕೊಂಡ ಅನೇಕ ಶಬ್ದಗಳಲ್ಲಿ ಕೂಡ ಹಲವು ಅಹೃದ್ಯ ರೂಪಗಳಿವೆ. ಇಂತಿದ್ದರೂ ಪೈಗಳ ಕಾವ್ಯಭಾಷೆಯ ಗುಣಾಧಿಕ್ಯ ಸ್ವಯಂಸಿದ್ಧ. ಇವನ್ನು ಕುರಿತು ಈ ಅವಲೋಕನದ ನಡುವೆ ಸಾಂದರ್ಭಿಕವಾಗಿ ಮತ್ತೂ ಕೆಲವು ಅಂಶಗಳನ್ನು ನೋಡಬಹುದು.
ಪೈಗಳ ಕಾವ್ಯದ ಅಭ್ಯಾಸಿಗಳಿಗೆ ಅವರ ಬಹುಭಾಷಾಭಿಜ್ಞತೆ ಎದ್ದುಕಾಣದಿರದು. ಇಂಗ್ಲಿಷಿನಿಂದ ಗೀತಾಂಜಲಿ (ಪು. ೩೨೯), ಉಮರ್ ಖಯ್ಯಾಮನ ರುಬಾಯಿಯಾತ್ (ಪು. ೧೦೦) ಮೊದಲಾದ ಆಯ್ದ ಕವಿತೆಗಳನ್ನಲ್ಲದೆ ಶೆಲ್ಲಿ ಮತ್ತು ಲಾಂಗ್‌ಫೆಲೋ ಎಂಬ ಕವಿಗಳ ಕವನಗಳನ್ನೂ ಕನ್ನಡಿಸಿದ್ದಾರೆ (ಪು. ೬, ೨೯೨). ಜರ್ಮನ್ ಭಾಷೆಯಿಂದಲೂ ಒಂದು ಕವಿತೆಯನ್ನು ಮೂಲದ ಛಂದಸ್ಸಿಗೆ ಅನುಗುಣವಾಗಿ ಅನುವಾದಿಸಿದ್ದಾರೆ.[3] ಇನ್ನು ನಮ್ಮ ದೇಶದ ಭಾಷೆಗಳಿಂದಲಂತೂ ಸಾಕಷ್ಟು ಪ್ರೇರಣೆ ಪಡೆದಿದ್ದಾರೆ. ಉರ್ದು,[4] ಬಂಗಾಳಿ,[5] ಮರಾಠಿ,[6] ಗುಜರಾತಿ,[7] ಬ್ರಜ[8] ಮುಂತಾದ ಭಾಷೆಗಳು ಪೈಗಳ ಕೈಹಿಡಿದಿವೆ. ಹೀಗೆ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿರುವುದಲ್ಲದೆ ತಮ್ಮ ‘ಕೊಳುಗುಳದ ಮನವಿ’ಗೆ ಮೂಲವಾದ ಜರ್ಮನ್ ಕವಿತೆಯನ್ನೂ ಹೆನ್ರಿಕ್ ಹೇಯ್ನ್ ಎಂಬಾತನ ಕವನವೊಂದನ್ನೂ ಇಂಗ್ಲಿಷಿಗೆ ಅನುವಾದಿಸಿದ್ದಾರೆ (ಪು. ೧೧೦, ೪೧೧). ಮಹಮ್ಮದ್ ಇಕ್ಬಾಲರ ಪ್ರಸಿದ್ಧ ಗಝಲನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ (ಪು. ೪೦೯). ವಿಕ್ಟರ್ ಹ್ಯೋಗೋವಿನ ಫ್ರೆಂಚ್ ಕವಿತೆಯೊಂದನ್ನು ಇಂಗ್ಲಿಷಿಗೆ ತಂದಿದ್ದಾರೆ (ಪು. ೪೧೨). ‘ಗೀತಾಂಜಲಿ’ಯ ಕೆಲವು ಭಾಗಗಳನ್ನು ತಮ್ಮ ಮಾತೃಭಾಷೆ ಕೊಂಕಣಿಗೆ ತಂದಿರುವುದಲ್ಲದೆ ಆ ನುಡಿಯಲ್ಲಿ ಮತ್ತೂ ಹಲವಾರು ರಚನೆಗಳನ್ನು ಮಾಡಿದ್ದಾರೆ (ಪು. ೪೨೧). ಹೀಗೆ ಪೈಗಳ ಬಹುಭಾಷಿತೆ ಯಾರಿಗೂ ಬೆರಗು ತರುವಂಥದ್ದು.
To be continued.
[1] “ವಕ್ರೋಕ್ತಿಃ ಪ್ರಸಿದ್ಧಾಭಿಧಾನವ್ಯತಿರೇಕಿಣೀ ವಿಚಿತ್ರೈವಾಭಿಧಾ ... ವೈದಗ್ಧ್ಯಭಂಗೀಭಣಿತಿಃ | ವೈದಗ್ಧ್ಯಂ ವಿದಗ್ಧಭಾವಃ ಕವಿಕರ್ಮಕೌಶಲಮ್ | ತಸ್ಯ ಭಂಗೀ ವಿಚ್ಛಿತ್ತಿಃ | ತಯಾ ಭಣಿತಿಃ ವಿಚಿತ್ರೈವಾಭಿಧಾ ವಕ್ರೋಕ್ತಿರಿತ್ಯುಚ್ಯತೇ ||” (ವಕ್ರೋಕ್ತಿಜೀವಿತ, ೧.೧೦ ವೃತ್ತಿ)
[2] ಪ್ರತ್ಯೇಕವಾಗಿ ಹೇಳದ ಹೊರತು ಇಲ್ಲಿಯ ಉಲ್ಲೇಖಗಳು ‘ಗೋವಿಂದ ಪೈ ಸಮಗ್ರ ಕವಿತೆಗಳು’ ಕೃತಿಯನ್ನು ಆಧರಿಸಿವೆ ಎಂದು ತಿಳಿಯಬೇಕು.
[3] ‘ಕೊಳುಗುಳದ ಮನವಿ’, ಪು. ೬೪
[4] ‘ಹಿಂದೂಸ್ತಾನ್ ಹಮಾರಾ’, ಪು. ೧೧
[5] ‘ಜಗುಳಿದ ನಕ್ಷತ್ರ’, ಪು. ೨೧೪
[6] ‘ತುತೂರಿ’, ಪು. ೨೦೫
[7] ‘ಬರಿದೆ’, ಪು. ೨೮೪
[8] ‘ಯಶೋದೆಯ ಜೋಗುಳ’, ಪು. ೨೪೩