ಟೀಕೆ, ಚಿಕಿತ್ಸೆ
ಈ ಒಂದು ಅಂಶವೇ ಮತ್ತೊಂದು ಪ್ರತ್ಯೇಕ ಅಧ್ಯಾಯವನ್ನು ಬಿಚ್ಚಿಡುತ್ತದೆ, ಅದೇ ಒಂದು ವಿಶಿಷ್ಟ ಅಧ್ಯಯನದ ವಸ್ತುವೂ ಹೌದು. ಅದೆಂದರೆ ಡಿ.ವಿ.ಜಿ. ಅವರು ದೇಶೀಯ ಸಂಸ್ಥಾನಗಳನ್ನು ಕುರಿತು ಐತಿಹಾಸಿಕ ಹಿನ್ನೆಲೆಯಿಟ್ಟುಕೊಂಡು ಮಾಡಿದ ಹೇರಳವಾದ ಟೀಕೆಗಳು. ಗುಂಡಪ್ಪನವರು ದೇಶೀಯ ಸಂಸ್ಥಾನಗಳ ಕುರುಡು ವಕ್ತಾರರಾಗಿರಲಿಲ್ಲ. ಆ ವಿಷಯವನ್ನು ಸಮಗ್ರ ದೃಷ್ಟಿಯಿಂದ ವೀಕ್ಷಿಸಿದ್ದರು, ಚಿಕಿತ್ಸಕವಾಗಿ ಮಂಡಿಸಿದ್ದರು.
ಈ ಟೀಕೆಗಳ ಒಂದು ಕೇಂದ್ರಬಿಂದು ಎಂದರೆ ನಮ್ಮ ರಾಜಮಹಾರಾಜರ ನಡವಳಿಕೆ, ದುರ್ವರ್ತನೆ, ಢಾಳಾಗಿ ಕಾಣುವ ಹುಳುಕುಗಳು, ಅನೇಕ ಸಂಸ್ಥಾನಗಳಲ್ಲಿ ರಾಜರು, ನಿಜಾಮರು, ನವಾಬರು ನಡೆಸುತ್ತಿದ್ದ ಅಕ್ರಮ, ದುರಾಡಳಿತ, ದಬ್ಬಾಳಿಕೆ, ಇತ್ಯಾದಿ. ಡಿ.ವಿ.ಜಿ. ಅವರ ಕರ್ನಾಟಕ ಪತ್ರಿಕೆಯ ಹಳೆಯ ಸಂಚಿಕೆಗಳನ್ನು, ಇಂತಹ ಅನೇಕ ಲೇಖನಗಳನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಉದಾಹರಣಗೆ ಹೈದೆರಾಬಾದ್ ನಿಜಾಮ, ಪುದುಕೊಟ್ಟೈ ರಾಜ, ಭೋಪಾಲಿನ ನವಾಬ, ಜುನಾಘಡದ ನವಾಬ, ಕಾಶ್ಮೀರದ ಮಹಾರಾಜ… ಇವರ ಉಪಟಳಗಳನ್ನು ಅಗ್ನಿಯ ತೀಕ್ಷ್ಣತೆಯಿಂದ ವಿಮರ್ಶಿಸಿದ್ದರು. ಕಾಶ್ಮೀರದ ಮಹಾರಾಜನು “ಮಧ್ಯಕಾಲೀನ ಮಾನಸಿಕತೆಯಿಂದ ನರಳುತ್ತಿದ್ದನು.” ಪುದುಕೊಟ್ಟೈ ಸಂಸ್ಥಾನವು ಅದರ ರಾಜನ ದುರಾಡಳಿತದಡಿ “ಶೋಚನೀಯವಾಗಿ ಸಂಕಟಪಡುತ್ತಿತ್ತು.” ಬಂಗಾಳದ “ನೀತಿಹೀನ ದೇಶದ್ರೋಹಿ ರಾಜಕುಮಾರನ ನಿರ್ಲಜ್ಜತೆ ಯಾವ ಮಟ್ಟದ್ದೆಂದರೆ ಭಾರತೀಯನಾಗಿದ್ದರೂ ಭಾರತವನ್ನೇ ತ್ಯಜಿಸಲು ಮುಂದಾದನು” ಎಂದೆಲ್ಲ ವಿಮರ್ಶಿಸಿದ್ದರು, ಡಿ.ವಿ.ಜಿ.
ಹೀಗೆ ಏಕಕಾಲದಲ್ಲಿ ಒಂದು ಕಡೆ ಬ್ರಿಟಿಷರನ್ನು, ಇನ್ನೊಂದು ಕಡೆ ಸಂಸ್ಥಾನಗಳ ಹೊಣೆಗೇಡಿ ದೊರೆಗಳನ್ನು ಒಟ್ಟೊಟ್ಟಿಗೆ ಎದುರುಹಾಕಿಕೊಂಡ ಕೀರ್ತಿ ಗುಂಡಪ್ಪನವರಿಗೆ ಸಲ್ಲುತ್ತದೆ. ಇದನ್ನು ಅವರು ಮಾಡಿದ್ದು ಸಾರ್ವಜನಿಕ ಲೇಖನಗಳಲ್ಲಿ. ಇದು ಎಂಥ ಸಾಹಸದ, ಅಪಾಯದ ಕೆಲಸವೆಂಬ ಸತ್ಯ ನಮ್ಮ ಕಾಲದವರಿಗೆ ಕಲ್ಪಿಸಿಕೊಳ್ಳಲು ಅಸಾಧ್ಯವೆಂದೇ ಹೇಳಬೇಕು.
ಇದಕ್ಕೆ ಡಿ.ವಿ.ಜಿ. ಅವರ ಬದುಕಿನಿಂದಲೇ ಒಂದು ಸ್ವಾರಸ್ಯಕರವಾದ ಉದಾಹರಣೆ ಕೊಡಬಹುದು. ಅವರು ಸಣ್ಣ ವಯಸ್ಸಿಗೆ ಕರ್ನಾಟಕ ಪತ್ರಿಕೆಯನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿದಾಗ ಆಗಿನ ಡೆಪ್ಯುಟಿ ಕಮಿಷನರ್ ಕುಮಾರಸ್ವಾಮಿ ಅದನ್ನು ತಿರಸ್ಕರಿಸಲು ಈ ಕಾರಣ ಕೊಟ್ಟರು: “ಇವನು ಇನ್ನೂ ಹುಡುಗ. ಮೇಲಾಗಿ ತಲೆ ಮೇಲೆ ಕರಿ ಟೋಪಿ ಹಾಕಿಕೊಂಡಿದ್ದಾನೆ. ಹೀಗಾಗಿ ಪತ್ರಿಕೆ ನಡೆಸುವಂತಹ ಗುರುತರ ಬಾಧ್ಯತೆಗೆ ಇವನು ಅರ್ಹನಲ್ಲ.” ಕುಮಾರಸ್ವಾಮಿಯವರ ಕೆಂಗಣ್ಣಿಗೆ ಡಿ.ವಿ.ಜಿ. ಗುರಿಯಾಗಿದ್ದ ಇನ್ನೊಂದು ಪ್ರಮುಖ ಕಾರಣ: ಡಿ.ವಿ.ಜಿ. ಅವರು Indian Review, Hindustan Review, ಇಂತಹ ಉಗ್ರ ರಾಷ್ಟ್ರೀಯತಾವಾದಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಹೀಗಾಗಿ ಬ್ರಿಟಿಷರ ಕೋಪಕ್ಕೆ ಮುಂಚಿತವಾಗಿಯೇ ಹೆದರಿ ಕುಮಾರಸ್ವಾಮಿ ಡಿ.ವಿ.ಜಿ.ಯವರನ್ನು ತಡೆಯುವ ಪ್ರಯತ್ನ ಮಾಡಿದ್ದರು.
ಟಾರ್ಕೀನಿಯಸ್ ಸೂಪರ್ಬಸ್ ನೀತಿ
ಗುಂಡಪ್ಪನವರು ನಮ್ಮ ಹಲವಾರು ದೇಶೀಯ ಸಂಸ್ಥಾನಗಳನ್ನು ಇಷ್ಟು ತೀವ್ರವಾಗಿ ಖಂಡಿಸುತ್ತಿದ್ದರ ಇನ್ನೊಂದು ಕಾರಣವನ್ನೂ ಗಮನಿಸಬಹುದು. ಅದಕ್ಕೆ ಅವರು ಕೊಡುವ ಅನೇಕ ಕಾರಣಗಳಲ್ಲಿ ಬಹುಮುಖ್ಯವಾದ ಒಂದನ್ನು ಹೇಳುವುದಾದರೆ, ಅದು ಬ್ರಿಟಿಷ್ ರೆಸಿಡೆಂಟರ, ಅಧಿಕಾರಶಾಹಿವರ್ಗದ ಆಡಳಿತ ನೀತಿಗೆ ನೇರವಾಗಿ ಸಂಬಂಧಪಟ್ಟಿದೆ. ಈ ನೀತಿಯನ್ನು ನಮ್ಮ ದೇಶದ ಪ್ರಖರ ಇತಿಹಾಸವಿದ್ವಾಂಸರಾದ ಆರ್. ಸಿ. ಮಜುಮ್ದಾರ್ ಅವರು doctrine of Tarquinius Superbus (ಟಾರ್ಕೀನಿಯಸ್ ಸೂಪರ್ಬಸ್ ನ ನೀತಿ) ಎಂದು ಕರೆಯುತ್ತಾರೆ. ಈ ಟಾರ್ಕೀನಿಯಸ್ ಸೂಪರ್ಬಸ್ ರೋಮನ್ ದೊರೆ. ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿದ್ದ ಅತ್ಯಂತ ಕ್ರೂರ, ನಿರಂಕುಶ ಪ್ರಭು. ಅವನು ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಪ್ರತಿಭಾವಂತ ಮಂತ್ರಿಗಳನ್ನು, ಅಧಿಕಾರಿಗಳನ್ನು ಬೇಕಂತಲೇ ಕಾಡಿ, ಪೀಡಿಸಿ, ಮೂಲೆಗುಂಪು ಮಾಡಿ, ರಾಜ್ಯದಿಂದ ಓಡಿಸಿದ; ಅನೇಕರನ್ನು ಹತ್ಯೆ ಮಾಡಿಸಿದ. ಏಕೆಂದರೆ ಅಂಥ ಅಧಿಕಾರಿಗಳ ಪ್ರತಿಭೆಯು ಇವನನ್ನು ಭಯಗೊಳಿಸುತ್ತಿತ್ತು. ತನ್ನ ಸುತ್ತಲೂ ಹೊಗಳುಭಟ್ಟರನ್ನು, ಅಧಮರನ್ನು, ಅದಕ್ಷರನ್ನು ಗುಡ್ಡೆ ಹಾಕಿಕೊಂಡ. ಇದೇ ಕೆಲಸವನ್ನು ಬ್ರಿಟಿಷ್ ಸರ್ಕಾರ ನಮ್ಮ ದೇಶೀಯ ಸಂಸ್ಥಾನಗಳಿಗೆ ಮಾಡಿತು. ಹಿಂದೆ ಹೇಳಿದ ಹಾಗೆ ನಮ್ಮ ಮುಮ್ಮಡಿ ಕೃಷ್ಣರಾಜ ಒಡೆಯರ ಪಾಡು ಇದನ್ನೇ ಸೂಚಿಸುತ್ತದೆ. ಈ ದುರ್ನೀತಿಯನ್ನು ನಿರಂತರ ಜಾರಿಗೊಳಿಸಲು ಬ್ರಿಟಿಷ್ ಸರಕಾರ Resident ಹಾಗೂ ಆಡಳಿತವರ್ಗವನ್ನು ಸಮರ್ಥವಾಗಿ ಉಪಯೋಗಿಸಿತು. ನಮ್ಮ ರಾಜರು, ರಾಜಕುಮಾರರು, ಇತರ ರಾಜಪರಿವಾರದವರನ್ನು ಸುಖಭೋಗಲಾಲಸೆಯಲ್ಲಿ ಮುಳುಗಿಸಲು ಅನೇಕ ತಂತ್ರಗಳನ್ನು ಹೆಣೆದರು. ಇದರ ಒಟ್ಟು ಪರಿಣಾಮ ನಮ್ಮ ಸಂಸ್ಥಾನಗಳಲ್ಲಿ ಬೆಳೆಯ ಬದಲು ಕಳೆ ಬೆಳೆಯಿತು. ಮುಕ್ಕಾಲು ಪಾಲು ಸಂಸ್ಥಾನಗಳು ಸಂಚಿನ, ಕ್ಷುದ್ರ ರಾಜಕೀಯ ಕುತಂತ್ರಗಳ ಕೊಂಪೆಗಳಾದವು. ಇದಕ್ಕೆ ನಮ್ಮ ಮೈಸೂರಿನ ಒಡೆಯರ್ ರಾಜಮನೆತನವೂ ಹೊರತಾಗಿರಲಿಲ್ಲ.
ಅಪ್ಪಟ ಭಾರತೀಯಪರಂಪರೆಯ ಮೌಲ್ಯಗಳಿಗೆ ಬದ್ಧರಾಗಿದ್ದ ಡಿ.ವಿ.ಜಿ. ಅವರಿಗೆ ಈ ಪರಿಸ್ಥಿತಿ ಸಹಜವಾಗಿಯೇ ನೋವು, ಸಿಟ್ಟು ತರಿಸಿತ್ತು. ಅವರ ಮಾತನ್ನೇ ನೋಡೋಣ.
ಬ್ರಿಟಿಷ್ ಅಧಿಕಾರಶಾಹಿ ವರ್ಗವನ್ನು ಡಿ.ವಿ.ಜಿ. ವರ್ಣರಂಜಿತವಾಗಿ ಖಂಡಿಸಿದರು. ಈ ವರ್ಗವು “ಬಿಸಿಲಲ್ಲಿ ಒಣಗಿದವರು, ನಿರಂಕುಶರು, ಮಾಯೀ-ಬಾಪ್ ಅಧಿಕಾರಿಗಳು, ವೈಭವೀಕೃತ ಗುಮಾಸ್ತರು, ಕ್ಯಾತೆ ತೆಗೆಯುವ ಎಳಸರು, ಹೀನ ಕೂಲಿಕಾರರು, ಲಾಭಕ್ಕೆ ಬಾಯಿಬಿಡುವ ಭಿಕ್ಷುಕರು, ದರಿದ್ರ ICSಕಾರರು, ಕಾನೂನಿಗೆ ಅತೀತರು…” ಹೀಗೆ ಸಾಗುತ್ತದೆ ಅವರ ಖಂಡನೆಯ ಸರಣಿ. ಮೇಲೆ ಹೇಳಿದ ರೋಮನ್ ಸಾಮ್ರಾಜ್ಯದ ಉದಾಹರಣೆಯನ್ನೇ ಹಿಡಿದು ಡಿ.ವಿ.ಜಿ. ಬರೆದ ಶರಾ ಇದು: “ಯಾವ ದೇಶವು ಅಧಿಕಾರಿವರ್ಗದ ಮರ್ಜಿಯಡಿ ತನ್ನ ಬಾಯಿ ಮುಚ್ಚಿಕೊಳ್ಳುತ್ತದೋ ಅಂಥ ದೇಶ ತನ್ನ ಜನ್ಮಸಿದ್ಧ ಹಕ್ಕನ್ನು ಒಂದು ಮಡಕೆಯಷ್ಟು ಗಂಜಿ, ಅಂಬಳಿಗೆ ಮಾರಿಕೊಳ್ಳುತ್ತದೆ.”
ಇಂಥ ಉಜ್ಜ್ವಲ ವಾಕ್ಯಗಳು ಡಿ.ವಿ.ಜಿ. ಅವರ ಈ ವಾಙ್ಮಯದಲ್ಲಿ ಹೇರಳವಾಗಿ ದೊರಕುತ್ತವೆ. ಇವನ್ನು ಬರೆದವರೇ ಮಂಕುತಿಮ್ಮನ ಕಗ್ಗವನ್ನೂ ಬರೆದರು, ಜೀವನಧರ್ಮಯೋಗವನ್ನೂ ಬರೆದರು, ವನಸುಮವನ್ನೂ ಬರೆದರು, ಸೀತಾ-ರಾಮ-ಕೃಷ್ಣರನ್ನೂ ಪರೀಕ್ಷೆಗೆ ಒಳಪಡಿಸಿದರು. ಇದಕ್ಕೆ ಕಾರಣ: ನಿಷ್ಕಲ್ಮಶ ಸತ್ಯಪ್ರೀತಿಯಿಂದ ಲೋಕವನ್ನು ವೀಕ್ಷಿಸಿ, ಜನಜೀವನವನ್ನು ಪ್ರೀತಿಸಿ, ವೈದ್ಯನ ರೀತಿ ರೋಗವನ್ನು ಮಾತ್ರ ಗುಣಪಡಿಸಿ ರೋಗಿಯನ್ನು ಅರೋಗಿಯಾಗಿ ಮಾಡುವ ಸಮಗ್ರತೆಯನ್ನು ಅವರು ಸಾಧಿಸಿಕೊಂಡಿದ್ದರು.
* * *
ಬ್ರಿಟಿಷರು ನಮ್ಮ ರಾಜಕುಮಾರರಿಗೆ ಕೊಟ್ಟ ಶಿಕ್ಷಣದ ಸ್ವರೂಪ
ಗುಂಡಪ್ಪನವರು ೧೯೨೦ರ ದಶಕದಲ್ಲಿ ಬರೆದ ಒಂದು ಲೇಖನದ ಮೂಲಕ ಬ್ರಿಟಿಷ್ ಅಧಿಕಾರಿವರ್ಗವು ನಮ್ಮ ರಾಜ-ರಾಜಕುಮಾರರ ಮೇಲೆ ಎಸಗಿದ ದುಷ್ಟ ಪರಂಪರೆಯ ಪೂರ್ಣಸ್ವರೂಪದ ಅರಿವಾಗುತ್ತದೆ. ಆ ಲೇಖನದ ಶೀರ್ಷಿಕೆ, Education of the Princes (ರಾಜಕುಮಾರರ ಶಿಕ್ಷಣ). ಅದರ ಒಂದು ಭಾಗ ಹೀಗಿದೆ:
“ಈ ಕಾಲದ ಒಬ್ಬ ಯಃಕಶ್ಚಿತ್ ಬ್ರಿಟಿಷನು ಕೇವಲ ಒಬ್ಬ ಸಂಬಳಗಾರ ಅಥವ ಲಾಭದ ಬೇಟೆಗಾರ, ಅಷ್ಟೇ. ಅವನ ಜನಾಂಗೀಯ ದುರಭಿಮಾನವು ಅತ್ಯಂತ ಅಸಭ್ಯವಾದದ್ದು. ಅವನ ಸ್ವಾರ್ಥದ ನೀಚತನವು ಹೃದಯವಂತಿಕೆಯನ್ನು ಅಡ್ಡಪಡಿಸುತ್ತದೆ. ಇಂಥ ವ್ಯಕ್ತಿಗಳು ನಮ್ಮ ಇಡೀ ದೇಶದ ಸಾರ್ವಜನಿಕ ಸೇವೆಗೆ ಮೀಸಲಿರುವ ಅಧಿಕಾರಸ್ಥಾನದಲ್ಲಿ ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ. ಅವರ ವಿಕೃತಿಗಳ ಪರಿಚಯ ಎಲ್ಲರಿಗೂ ಇದೆ. ಸಹಜವಾಗಿಯೇ ತಮ್ಮ ಕಾರ್ಯನಿರ್ವಹಣೆಯಲ್ಲಿ ಸಾಮಾನ್ಯ ಜನರಿಗೆ ಅವರು ಖೇದ ಉಂಟುಮಾಡುತ್ತಾರೆ. ಬೌದ್ಧಿಕವಾಗಿ ಕೆಳ ಸ್ತರದಲ್ಲಿರುವ ಇವರಿಗೆ ಯಾವ ದೊಡ್ಡ ಆದರ್ಶದ ಗಂಧವೂ ಇಲ್ಲ, ಯಾವ ಸದ್ಗುಣಗಳೂ ಇಲ್ಲ. ಅವರೆಲ್ಲ ಅಧಿಕಾರಪದವಿಯ ಶಿಕಾರಿಗಳು, ಬಿಸಿಲಲ್ಲಿ ಒಣಗಿ, ಬಾಡಿಹೋದ ಕಾರಕೂನರು.”
ಇಂತಹ ಆಂಗ್ಲ ಅಧಿಕಾರಿಗಳು ನಮ್ಮ ರಾಜಕುಮಾರರಿಗೆ ಗುರುಗಳಾದರು, ಮಾರ್ಗದರ್ಶಕರಾದರು. ಆ ಮಾರ್ಗದರ್ಶನದ ಒಂದು ತುಣುಕನ್ನು ಡಿ.ವಿ.ಜಿ. ಅವರ ಮಾತಿನಲ್ಲೇ ನೋಡೋಣ.
“ಇಂತಹ ಬ್ರಿಟಿಷ್ ಅಧಿಕಾರಿಗಳು ನಮ್ಮ ರಾಜಕುಮಾರರನ್ನು ಎಲ್ಲ ವಿಧದಲ್ಲಿಯೂ ತಯಾರು ಮಾಡುತ್ತಿದ್ದರು. ಈ ತಯಾರಿಯ ಆತ್ಯಂತಿಕ ಫಲ, ಆ ರಾಜಕುಮಾರನು ಬೇರೇನೇ ಆದರೂ ಧರ್ಮಬದ್ಧ ರಾಜ ಮಾತ್ರ ಆಗುತ್ತಿರಲಿಲ್ಲ. ಇಂಥ ರಾಜಕುಮಾರನು ಅಪ್ರತಿಮ ಶಿಖಾರಿಯಾಗಿರುತ್ತಿದ್ದ. ಇಂಗ್ಲಿಷ್ high society (ಉನ್ನತ ವರ್ಗ) ಮನುಷ್ಯನಾಗುತ್ತಿದ್ದ. ಆ ಉನ್ನತ ಇಂಗ್ಲಿಷ್ ವರ್ಗದ ಎಲ್ಲ ನಯ-ನಾಜೂಕುಗಳೂ ಅವನಿಗೆ ಕರಗತವಾಗಿರುತ್ತಿದ್ದವು. ರಾತ್ರಿ ಭರ್ಜರಿ ಭೋಜನವಾದ ಮೇಲೆ ಅವನ ವಾಗ್ಮಿತೆಗೆ ಸಾಟಿಯೇ ಇರುತ್ತಿರಲಿಲ್ಲ. ಸಾರ್ವಜನಿಕ ದಂಭಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ. ಮಂತ್ರಿಗಳ ಜೊತೆಗಿನ ಅವನ ವ್ಯವಹಾರಕ್ಕೆ ದ್ಯೋತಕ, ಪಟ್ಟುಬಿಡದ ಹಠಮಾರಿತನ. ಇತಿಹಾಸ, ಸಾಹಿತ್ಯ, ದರ್ಶನಶಾಸ್ತ್ರ, ಶಿಷ್ಟಪರಂಪರೆ, ಇವೆಲ್ಲ ತಂದುಕೊಡುವ ಸೌಮ್ಯತೆ, ಘನತೆ, ಹೃದ್ಯವೈಶಾಲ್ಯಗಳ ಗಂಧವೇ ಇವನಿಗಿಲ್ಲ. ಸಣ್ಣ ಬುದ್ಧಿ, ಕುತರ್ಕ, ಹಠ, ಇವೆಲ್ಲ ತಂದುಕೊಡುವ ಒಣ ಸ್ವಪ್ರತಿಷ್ಠೆ… ಇಂಥ ರಾಜಕುಮಾರರ ಸುತ್ತಲೂ ಸ್ವಾಭಾವಿಕವಾಗಿಯೇ ಸುತ್ತಿಕೊಳ್ಳುವುದು ಸ್ವಾರ್ಥಿಗಳ, ಭಟ್ಟಂಗಿಗಳ ವರ್ಗ. ಇಂಥವು ಇಂಥ ರಾಜಕುಮಾರರ ಮುಖ್ಯಲಕ್ಷಣ. ಇದೇ ಅವರಿಗೆ ಒಟ್ಟಂದದಲ್ಲಿ ಬ್ರಿಟಿಷ್ “ಗುರು”ಗಳಿಂದ ಸಂದಿದ್ದಂತಹ ಶಿಕ್ಷಣ. ಇದರ ದುಷ್ಪರಿಣಾಮವನ್ನು ಮಾತ್ರ ಅನುಭವಿಸುವುದು ಅವನ ಪ್ರಜೆಗಳು.”
ಇಂಥ ಅಧಮ ರಾಜಕುಮಾರರ ಕಾಲಕ್ಕೂ ಮುನ್ನವಿದ್ದ ಯುಗವನ್ನೂ ಸಹ ಡಿ.ವಿ.ಜಿ. ವರ್ಣಿಸುತ್ತಾರೆ: “ಬ್ರಿಟಿಷ್ ಮಾರ್ಗದರ್ಶಿಯು “ಸ್ವರ್ಗಜನ್ಯ ಸೇವೆ” – ಅಂದರೆ, ICSನಿಂದ ಉದುರಿರಬಾರದು. ಈ ಸೇವೆಯಿಂದ ಬಂದವರು ಕೈಯಲ್ಲಿ ಸದಾ ಕೊಡಲಿಯನ್ನಿಟ್ಟುಕೊಂಡೇ ಮಾರ್ಗದರ್ಶನ ಮಾಡುತ್ತಾರೆ. ಈ ಮಾರ್ಗದರ್ಶಿಗೆ ಅಧ್ಯಯನಮಗ್ನತೆಯಿರಬೇಕು. ಆತ ಉದಾರವಾದ ಚಿಂತನೆ, ವರ್ತನೆ, ಸಂಸ್ಕಾರ ಹಾಗೂ ಅನುಭವಗಳನ್ನು ಮೈಗೂಡಿಸಿಕೊಂಡಿರಬೇಕು. ಈ ಸಾಲಿಗೆ ಸೇರುವ ಧೀಮಂತರೆಂದರೆ ರಂಗಾಚಾರ್ಲು ಮತ್ತು ಮಾಧವರಾಯರು. ಅವರುಗಳು ತಿರುವಾಂಕೂರು ಸಂಸ್ಥಾನದ ರಾಜಕುಮಾರರಿಗೆ ನೀಡಿದ ಜಾಜ್ವಲ್ಯಮಾನವಾದ ಉಪನ್ಯಾಸಗಳು ಸರಕಾರವನ್ನು ಪಾಲಿಸುವ ವಿಜ್ಞಾನ-ಕಲೆಗಳ ಮಾದರಿಗಳು. ಇಂಥ ಶಿಕ್ಷಣವನ್ನು ನಮ್ಮ ರಾಜಮಹಾರಾಜರ ಅಂತರಂಗದಲ್ಲಿ ಬಲವಾಗಿ ತುಂಬಬೇಕು.”
ದಿವಾನ್ ರಂಗಾಚಾರ್ಲು ಅವರ ಮಾತನ್ನು ಡಿ.ವಿ.ಜಿ. ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ: “ನಮ್ಮ ದೇಶೀಯ ಸಂಸ್ಥಾನಗಳ ದೊಡ್ಡ ದುರ್ಬಲತೆಯೆಂದರೆ ಪ್ರಜೆಗಳ ಜೀವನ-ಸಮಸ್ಯೆಗಳಿಗಿಂತ ಅರಮನೆಯ ಜೀವನ-ಸಮಸ್ಯೆಗಳೇ ಅವುಗಳ ಕೇಂದ್ರಬಿಂದು, ಗುರಿ ಆಗಿಬಿಟ್ಟಿವೆ. ಸರ್ಕಾರದ ಮುಕ್ಕಾಲು ಪಾಲು ನೀತಿನಿಯಮಗಳು ಹೊರಡುವುದು ಈ ಕೇಂದ್ರಬಿಂದುವಿನಿಂದಲೇ.”
ಈ ಬಲಹೀನತೆಯನ್ನು ಗುರುತಿಸಿಯೇ ಬ್ರಿಟಿಷ್ ಅಧಿಕಾರಿಗಳು ಅಂತಹ ನೂರಾರು ಅರಮನೆಗಳನ್ನು ಒಳಗಿನಿಂದಲೇ ಕಲುಷಿತಗೊಳಿಸಿದರು. ಅದರ ಪರಿಣಾಮವನ್ನು ಡಿ.ವಿ.ಜಿ. ಈ ರೀತಿ ವಿವರಿಸುತ್ತಾರೆ: “ಕೇವಲ ಮೂರು ದಶಕಗಳ ಹಿಂದೆ ನಮ್ಮ ಸಂಸ್ಥಾನಗಳು ವಿದ್ಯೆ, ವಿದ್ವತ್ತು, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೆ ಆಶ್ರಯಸ್ಥಾನಗಳಾಗಿ ಜಗನ್ಮಾನ್ಯಗಳಾಗಿದ್ದವು. ಈಗ ಅವೆಲ್ಲ ವಿಖ್ಯಾತವಾಗಿರುವುದು ಇವುಗಳ ಅಭಾವದಿಂದ. ಅಲ್ಲೆಲ್ಲ ಸ್ಪಷ್ಟಗೋಚರವಾಗಿರುವ ಸಂಗತಿಯೆಂದರೆ: ಬೌದ್ಧಿಕ ನಿತ್ರಾಣ - ಆತ್ಮಶೂನ್ಯತೆ. ಈ ಕಾಲದ ಭಾರತದ ದೊಡ್ಡ ದೊಡ್ಡ ಹೆಸರುಗಳಲ್ಲಿ ದೇಶೀಯ ಸಂಸ್ಥಾನಗಳಿಂದ ಬಂದಂತಹ ಒಂದೇ ಒಂದು ಹೆಸರು ಕಾಣುವುದಿಲ್ಲ. ನಮ್ಮ ದೊಡ್ಡ ರಾಜನೀತಿತಜ್ಞರು, ಸಮಾಜಸೇವಾಕರ್ತರು, ಇತಿಹಾಸದ ವಿದ್ವಾಂಸರು, ವಿಜ್ಞಾನಿಗಳು, ವಕೀಲರು, ವಾಗ್ಮಿಗಳು, ಕವಿಗಳು, ಕಾದಂಬರಿಕಾರರು – ಇವರೆಲ್ಲ ಬ್ರಿಟಿಷ್ ಇಂಡಿಯಾದ ಯಾವುದೋ ಒಂದು ಭಾಗಕ್ಕೆ ಸೇರಿದವರು.”
To be continued.