ಕಾಮದ ಅತಿಯಾದ ವಿವರಣೆ: ಒಂದು ಸಾಮಾನ್ಯ ಆಕ್ಷೇಪ?
ಸಾಕ್ಷಿಯ ಬಗೆಗೆ ಹಲವರು ಆಕ್ಷೇಪಿಸುವುದೇನೆಂದರೆ, ಅದರಲ್ಲಿ ಅತಿಯಾದ ಕಾಮದ ಚಿತ್ರಣವಿದೆ ಅಥವಾ ಅನೌಚಿತ್ಯವಾಗಿ ಲೇಖಕರು ಕಾಮವನ್ನು ವಿಜೃಂಭಿಸಿದ್ದಾರೆ ಎಂದು. ಈ ರೀತಿಯ ಆಕ್ಷೇಪಗಳಿಗೆ ಉತ್ತರವನ್ನು ಹುಡುಕುವಾಗ ಎರಡು ವಿಷಯಗಳನ್ನು ಗಮನದಲ್ಲಿಡಬೇಕು:
೧. ಈ ಕಾದಂಬರಿಯ ಜೀವಾಳವೇ ಪುರುಷಾರ್ಥಗಳ ಹಾಗೂ ಅಹಂಕಾರದ ಉಚ್ಚವಚನಿರೂಪಣೆ. ಇದನ್ನೇ ಅರ್ಥಮಾಡಿಕೊಳ್ಳದ ಓದುಗರ ನಿಲವಿಗೆ ಭದ್ರವಾದ ತರ್ಕದ ಬುನಾದಿಯಿಲ್ಲವಷ್ಟೆ.
೨. ಮತ್ತೊಂದು ದ್ವಂದ್ವ ಅಥವಾ ಸೋಜಿಗದ ವಿಷಯವೆಂದರೆ, ಮಂಜಯ್ಯನ ಕಾಮಾತಿಶಯದ ಚಿತ್ರಣಕ್ಕೆ ಅಂಜುವ ಅಥವಾ ಅಸಹ್ಯಪಡುವ ಓದುಗರು, ನಾಗಪ್ಪನ ಅರ್ಥಕಾಮಾತಿರೇಕಕ್ಕೋ, ಪರಮೇಶ್ವರಯ್ಯನ ಸತ್ಯಕಾಮಾತಿಶಯಕ್ಕೋ ಆಕ್ಷೇಪಿಸುವುದಿಲ್ಲ.
ಕಾಮದ ಬಗೆಗೆ ನಮ್ಮ ಸಮಾಜ ನಮ್ಮ ಮೇಲೆ ಹೊದಿಸಿರುವ ಪೊರೆಯನ್ನು ಕಳಚಿಕೊಳ್ಳದೆ ಅನ್ಯಮಾರ್ಗವಿಲ್ಲ.
ಪ್ರತಿಭೆಯ ಮಹಾದರ್ಶನ :
ಸಾಕ್ಷಿ ಕೃತಿಯ ಸೃಷ್ಟಿಯ ಹಿಂದಿನ ಮಹತ್ ಪ್ರತಿಭೆ ಗೋಚರವಾಗಬೇಕಾದರೆ, ಅದರ ಸೃಷ್ಟಿಯ ಉದ್ದೇಶವನ್ನು ಅರಿತು, ಅದರ ಪುನರ್ಸೃಷ್ಟಿಗೆ ಪ್ರಯತ್ನಿಸಿದರೆ ಸಾಕ್ಷಿಯಷ್ಟು ಪ್ರಭಾವಶಾಲಿ ಕಥೆ, ನಿರೂಪಣೆ ಮತ್ತು ಪ್ರಕರಣಗಳ ಔಚಿತ್ಯವನ್ನು ಅದು ಸಾಧಿಸಲಾಗುವುದೇ? ಎಂದು ಒಮ್ಮೆ ಪರೀಕ್ಷಿಸಬೇಕಾಗುತ್ತದೆ.
ವ್ಯಕ್ತಿಯ ವ್ಯಕ್ತಿತ್ವದ ಮೂಲಧಾತುಗಳಾದ ಅಹಂಕಾರ, ಪ್ರವೃತ್ತಿ, ಮೌಲ್ಯಪ್ರಜ್ಞೆ , ಸಮಾಜ, ವ್ಯಕ್ತಿಯ ಬಲಾಬಲಗಳ ಅನನ್ಯತೆ ಮತ್ತು ಇವೆಲ್ಲ ಮೊತ್ತವಾಗಿ ದೊರೆಯುವ ವ್ಯಕ್ತಿತ್ವ ಮತ್ತು ಅದನ್ನು ಸದಾ ಗಮನಿಸುತ್ತಿರುವ ಸಾಕ್ಷಿಪ್ರಜ್ಞೆಯ ಇರುವಿಕೆಯನ್ನು ಆಧಾರವಾಗಿಸಿಕೊಂಡು ನಿರ್ಮಿಸಲೆಳಸಿದ ಲೇಖಕರ ಪ್ರತಿಭೆಗೆ ಇಂತಹ ಸಂಕೀರ್ಣವಾದ ಕಥೆ, ಸನ್ನಿವೇಶ, ಪಾತ್ರಗಳು ಅತ್ಯಂತ ಔಚಿತ್ಯಮಯವಾಗಿ ಒದಗಿಬಂದಿರುವುದನ್ನು ನೋಡಿದರೆ, ಪ್ರತಿಭೆಯ ಆಳ, ವಿಸ್ತಾರ ಮತ್ತು ಎತ್ತರಗಳು ಗೋಚರಿಸಿ ಅದಕ್ಕೆ ಮಣಿಯದೆ ವಿಧಿಯಿಲ್ಲವೆಂದೆನಿಸಿಬಿಡುತ್ತದೆ.
ಗ್ರಾಮೀಣ ಜನಜೀವನ, ಮನ:ಶಾಸ್ತ್ರ, ಮೌಲ್ಯಮೀಮಾಂಸೆ ಮತ್ತು ತತ್ತ್ವಶಾಸ್ತ್ರದ ತೀಕ್ಷ್ಣವಾದ ವ್ಯುತ್ಪತ್ತಿ , ನಿರೂಪಣೆಯ ಬಿಗಿ, ಪಾತ್ರಗಳ ವೈವಿಧ್ಯ ಮತ್ತು ಔಚಿತ್ಯ ಇವೆಲ್ಲವೂ ಲೇಖಕರ ಪ್ರತಿಭೆಯ ರಥವನ್ನು ಹಲವು ದಿಕ್ಕುಗಳಿಗೆ ಮುಟ್ಟಿಸುವ ಕುದುರೆಗಳಾಗಿವೆ. ಮತ್ತು ತತ್ತ್ವದ ಸರಕನ್ನು ಕಲೆಯಾಗಿಸಿ ರಸಿಕರಿಗೆ ಕಾದಂಬರಿಯ ಓದನ್ನು ರಸದೌತಣವನ್ನಾಗಿಸುತ್ತದೆ.
ಕೇವಲ ಸಾಕ್ಷಿಗಳಾಗಿ ಉಳಿಯಲು ಸಾಧ್ಯವಾಗಬೇಕಾದರೆ ನಾವು ನಮ್ಮ ಅಹಂಕಾರದಿಂದ ಬೇರ್ಪಟ್ಟು ನೋಡಬೇಕಾಗುತ್ತದೆ. ಇದು ಒಮ್ಮೊಮ್ಮೆ ಸಾಧ್ಯವಾಗಬಹುದಾದರೂ ಸದಾ ಅದೇ ಸ್ಥಿತಿಯಲ್ಲಿರಲು ಸಾಧ್ಯವೇ? ಸ್ವಾರ್ಥದ ಲವಲೇಶವೂ ಇಲ್ಲದಂತೆ ನಾವು ನಿತ್ಯಜಾಗೃತರಾಗಿ ಜೀವನ ನಡೆಸಲು ಸಾಧ್ಯವಿದೆಯೇ? ಹಾಗೆ ಬದುಕಿ ಬಿಡಬಹುದೆನೋ ಎಂಬ ಆಭಾಸದಲ್ಲಿ ಅಥವಾ ಪ್ರಯತ್ನದಲ್ಲಿ ಇದ್ದ - ಪರಮೇಶ್ವರಯ್ಯ, ಸತ್ಯಪ್ಪ ಮತ್ತು ರಾಮಕೃಷ್ಣರು; ಜೀವನ ಮೌಲ್ಯದ ಬಗೆಗೆ ಹೆಚ್ಚು ಗಮನವಿರದ ಸಾವಿತ್ರಿ, ಸರೋಜಾಕ್ಷಿ, ನಾಗಲಕ್ಷ್ಮಿ , ಲಕ್ಕು ಮತ್ತು ಲತಾ; ಹಾಗೂ ಅಹಂಕಾರವನ್ನು ಮೌಲ್ಯ ಪ್ರಜ್ಞೆಯ ಪರಿಧಿಯಿಂದಲೇ ಹೊರಕ್ಕಿಟ್ಟ ಮಂಜಯ್ಯ ಮತ್ತು ನಾಗಪ್ಪನವರು ಹೇಗೆ ಈ ಅಹಂಕಾರ - ಪ್ರವೃತ್ತಿ - ಸಾಕ್ಷಿಪ್ರಜ್ಞೆ ಗಳ ಹೊಯ್ದಾಟದಲ್ಲಿ ಸೋಲುತ್ತಾರೆ ಎಂಬುದನ್ನು ಗಮನಿಸಿದರೆ, ಕಾದಂಬರಿಯ ಉದ್ದೇಶ ಸ್ಪಷ್ಟವಾಗುತ್ತದೆ. ಈ ಗೊಂದಲ, ಪ್ರತಿಯೊಂದು ಮನಸ್ಸಿನಲ್ಲಿಯೂ ಅನುದಿನ, ಅನುಕ್ಷಣ ನಡೆಯುತ್ತಿರುವಂತಹ ಪ್ರಕ್ರಿಯೆ. ಇದು ಒಂದು ಕ್ರಿಯಾತ್ಮಕ ಸಮತೋಲನ (Dynamic equilibrium) ವನ್ನು ಮನಸ್ಸಿಗೆ ತಂದುಕೊಡದೆ ಹೋದಾಗ, ಕ್ರಿಯೆಯಾಗಿ, ಭಾವನೆಯಾಗಿ ಏನೆಲ್ಲ ಅವಘಡಗಳು ಸಂಬವಿಸಬಹುದು ಎಂಬುದನ್ನು ವಿಸ್ತೃತವಾಗಿ ನೋಡಲು ಬೇಕಾದ ಕಥಾವ್ಯಾಪ್ತಿಗೆ ಭೈರಪ್ಪನವರು ಚಿತ್ರಿಸಿರುವ ವಿಭಿನ್ನ, ವಿಚಿತ್ರ ಅಥವಾ ವಿಲಕ್ಷಣ ಪಾತ್ರಗಳು ಔಚಿತ್ಯವನ್ನು ಒದಗಿಸಿವೆ.