ಸಾಮಾನ್ಯವಾಗಿ ಸಂಸ್ಕೃತದ ಹೆಸರೆತ್ತಿದೊಡನೆಯೇ ಕಂದಾಚಾರ-ಪ್ರತಿಗಾಮಿ ಇತ್ಯಾದಿ ಅಪಪ್ರಥೆಗಳು ಅದಕ್ಕಂಟಿ ಬರುವಾಗ ಸ್ತ್ರೀವಿರೋಧಿಯೆಂಬ ಮತ್ತೊಂದು ದುರುಪಾಧಿಯೂ ಎದ್ದು ಕಾಣುತ್ತದೆ. ಇದಕ್ಕೆ ಪೋಷಕವೋ ಎಂಬಂತೆ ಸ್ತ್ರೀಯರಿಗೆ ವೇದಾಧಿಕಾರವಿಲ್ಲವೆಂದೂ ಆಕೆಗೆ ಪ್ರಲಯಾಂತಕಬುದ್ಧಿಯೆಂದೂ ಹೆಡ್ಡತನವೆಂದೂ ನಾನಾವಿಧದ ಉಕ್ತಿಗಳು ಸಾಲುಗಟ್ಟಿ ಬಂದು ಮನುಮಹರ್ಷಿಯ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂಬ ಮಹಾವಾಕ್ಯದಲ್ಲಿ ಪರ್ಯವಸಿಸುತ್ತವೆ. ಆದರೆ ಈ ಉಕ್ತಿಗಳ ಪೂರ್ವಾಪರವನ್ನು ನಿಂದಕರಾರೂ ತಡಕಿದಂತಿಲ್ಲ.
ಇರಲಿ, ಪ್ರಸ್ತುತಕ್ಕೆ ಸಂಸ್ಕೃತಸಾಹಿತ್ಯದ ಈರ್ವರು ಮಹಾವ್ಯಕ್ತಿಗಳ ದೃಷ್ಟಿಯಲ್ಲಿ ಸ್ತ್ರೀಯರ ಬದುಕನ್ನು ನೋಡೋಣ.
ವರಾಹಮಿಹಿರನು (೫-೬ನೇ ಶತಮಾನ, ಕ್ರಿ.ಶ.) ವಿಶ್ವಖಗೋಲಶಾಸ್ತ್ರಿಗಳಲ್ಲಿ ಅತ್ಯುನ್ನತ. ಆತನ ’ಬೃಹತ್ಸಂಹಿತೆ’ಯು ಸಂಸ್ಕೃತದ ಉತ್ಕೃಷ್ಟವಿಶ್ವಕೋಶ. ಪ್ರಾಯಶಃ ಆ ಬಗೆಯ ಕೃತಿಗಳಲ್ಲಿ ಅದೇ ಮೊದಲನೆಯದು. ನೂರ ಏಳು ಅಧ್ಯಾಯಗಳ ಈ ಕೃತಿಯಲ್ಲಿ ’ಸ್ತ್ರೀಪ್ರಶಂಸೆ’ಯೂ ಒಂದು ಅಧ್ಯಾಯ (೭೪). ವಿಜ್ಞಾನಿ ವರಾಹಮಿಹಿರನ ವಸ್ತುನಿಷ್ಠನಯನಗಳಲ್ಲಿ ಇತರ ಭೌತಿಕವಿಚಾರರಹಸ್ಯಗಳೊಡನೆಯೇ ವನಿತೆಗಾಗಿರುವ ಅನ್ಯಾಯ, ಅಪಖ್ಯಾತಿಗಳೂ ಬಿಂಬಿತವಾಗಿವೆ. ಅವನೆನ್ನುತ್ತಾನೆ:
ಯೇऽಪ್ಯಂಗನಾನಾಂ ಪ್ರವದಂತಿ ದೋಷಾನ್ ವೈರಾಗ್ಯಮಾರ್ಗೇಣ ಗುಣಾನ್ ವಿಹಾಯ |
ತೇ ದುರ್ಜನಾ ಮೇ ಮನಸೋ ವಿತರ್ಕಃ ಸದ್ಭಾವವಾಕ್ಯಾನಿ ನ ತಾನಿ ತೇಷಾಮ್ || (೭೪.೫)
“ಯಾರು ಸ್ತ್ರೀಯರು ವೈರಾಗ್ಯಮಾರಕರೆಂದು ಅವರ ಗುಣಗಳನ್ನೂ ಬಿಟ್ಟು ನಿಂದಿಸುವರೋ ಅಂಥವರು ದುರ್ಜನರು ಮತ್ತವರದು ಪೂರ್ವಗ್ರಹದೃಷ್ಟಿಯೆಂದೇ ನನ್ನ ನಿಲುವು.”
ಪ್ರಬ್ರೂತ ಸತ್ಯಂ ಕತರೋಂऽಗನಾನಾಂ ದೋಷೋऽಸ್ತಿ ಯೇ ನಾಚರಿತೋ ಮನುಷ್ಯೈಃ |
ಧಾರ್ಷ್ಟ್ಯೇನ ಪುಂಭಿಃ ಪ್ರಮದಾ ನಿರಸ್ತಾ ಗುಣಾಧಿಕಾಸ್ತಾ ಮನುನಾತ್ರ ಚೋಕ್ತಮ್ || (೭೪.೬)
“ನಿಜ ಹೇಳಿ! ಗಂಡು ಮಾಡದ ಯಾವ ತಪ್ಪನ್ನು ತಾನೇ ಹೆಣ್ಣು ಮಾಡಿದ್ದಾಳೆ? ಭಂಡತನದಲ್ಲಿ ಹೆಣ್ಣಿಗಿಂತ ಗಂಡೇ ಮಿಗಿಲು! ಅಲ್ಲದೆ ಗುಣಗಳಿಂದ ಹೆಣ್ಣೇ ಮೇಲೆಂದು ಮನುವೇ ಹೇಳಿದ್ದಾನೆ.”
ಸ್ತ್ರೀಯರ ಶುಚಿತ್ವ, ಮೃದುವಾಣಿ, ಆಹಾರಸ್ಥೈರ್ಯಗಳನ್ನು ಮೆಚ್ಚುತ್ತಾ ಅವಳನ್ನು ’ನಿಷ್ಕಸಮಾ’ – ಪುಟವಿಟ್ಟ ಬಂಗಾರವೆಂದು ವರಾಹಮಿಹಿರ ಸ್ತುತಿಸಿದ್ದಾನೆ. ಅಲ್ಲದೆ ಯಾವ ಕಾರಣಕ್ಕಾಗಿ ಅವಳನ್ನು ಅಪವಿತ್ರವೆನ್ನುತ್ತಾರೋ ಆ ’ರಜೋದರ್ಶನ’ವನ್ನೇ ಅವಳ ಪಾವಿತ್ರ್ಯಹೇತುವೆಂದೂ ಹೇಳುತ್ತಾನೆ.
ಮಾಸಿ ಮಾಸಿ ರಜೋ ಹ್ಯಾಸಾಂ ದುಷ್ಕೃತಾನ್ಯಪಕರ್ಷತಿ | (೭೪.೯)
ಮತ್ತೂ ಮುಕ್ತವಾಗಿ ಅವನು ಎಚ್ಚರಿಸುತ್ತಾನೆ:
ಜಾಯಾ ವಾ ಸ್ಯಾಜ್ಜನಿತ್ರೀ ವಾ ಸಂಭವಃ ಸ್ತ್ರೀಕೃತೋ ನೃಣಾಮ್ |
ಹೇ ಕೃತಘ್ನಾಸ್ತಯೋರ್ನಿಂದಾಂ ಕುರ್ವತಾಂ ವಃ ಕುತಃ ಸುಖಮ್ || (೭೪.೧೧)
“ಎಲೈ ಕೃತಘ್ನಪುರುಷರೇ! ಪತ್ನಿಯಾಗಿ, ತಾಯಿಯಾಗಿ ಸಂತಾನವನ್ನು ಕೊಡುವ ಸ್ತ್ರೀಯರನ್ನೇ ಹಳಿಯುವಿರಲ್ಲಾ, ನಿಮಗೆ ಸುಖ-ಶುಭಗಳೆಲ್ಲಿ?”
ಧರ್ಮಶಾಸ್ತ್ರವನ್ನು ತಿರುಚಿದನ್ನೂ ಮಿಹಿರನು ಹೇಳುತ್ತಾನೆ:
ದಂಪತ್ಯೋರ್ವ್ಯುತ್ಕ್ರಮೇ ದೋಷಃ ಸಮಃ ಶಾಸ್ತ್ರೇ ಪ್ರತಿಷ್ಠಿತಃ |
ನರಾ ನ ತಮವೇಕ್ಷಂತೇ ಯೇನಾತ್ರ ವರಮಂಗನಾಃ || (೭೪.೧೨)
“ಧರ್ಮಶಾಸ್ತ್ರಾನುಸಾರವಾಗಿ ಗಂಡ-ಹೆಂಡಿರಲ್ಲಿ ತಪ್ಪುಗಳಿಗೆ ಸಮಾನಶಿಕ್ಷೆ. ಆದರೆ ಅದನ್ನು ಗಂಡು ಮರೆತಿದ್ದಾನೆ. ಹೆಣ್ಣು ಮರೆತಿಲ್ಲ. ಗಂಡಿಗೆ ತನ್ನ ತಪ್ಪಿನ ಅರಿವೇ ಇಲ್ಲ. ಹೆಣ್ಣಾದರೋ ತನ್ನ ತಪ್ಪಿಗೆ ತಾನು ಎಣೆ ಮೀರಿ ತಪಿಸುತ್ತಾಳೆ.”
ವರಾಹಮಿಹಿರನು ಮತ್ತೂ ಮಾರ್ಮಿಕವಾಗಿ ಹೇಳುವನು:
ನ ಶತೇನಾಪಿ ವರ್ಷಾಣಾಮಪೈತಿ ಮದನಾಶಯಃ |
ತತ್ರಾಶಕ್ಯಾ ನಿವರ್ತಂತೇ ನರಾ ಧೈರ್ಯೇಣ ಯೋಷಿತಃ || (೭೪.೧೪)
“ನೂರು ವರ್ಷ ವಯಸ್ಸಾದರೂ ಕಾಮಲಾಲಸೆ ತೀರದೆ ಮದುವೆಯ ಮೇಲೆ ಮದುವೆ (’ನಷ್ಟಾ ಭಾರ್ಯಾ ಪುನರ್ಭಾರ್ಯಾ’ ಎಂಬಂತೆ) ಮಾಡಿಕೊಳ್ಳುವ ಗಂಡಿಗೆ ಸಂಯಮವಿಲ್ಲ. ಆದರೆ ಹೆಣ್ಣು ಧೈರ್ಯದಿಂದ ವೈಧವ್ಯದಲ್ಲಿ ಕಾಮವನ್ನೂ ಗೆಲ್ಲುವಳು ಅಥವಾ ಅಗ್ನಿಗೇ ಬೀಳುವಳು!”
ನಿರ್ಣಾಯಕವಾಗಿ ಕೊನೆಗೆ ಗಂಡಿನ ಲೇವಡಿಯನ್ನೂ ಮಾಡುತ್ತಾನೆ:
ಅಹೋ ಧಾರ್ಷ್ಟ್ಯಮಸಾಧೂನಾಂ ನಿಂದತಾಮನಘಾಃ ಸ್ರಿಯಃ |
ಮುಷ್ಣತಾಮಿವ ಚೋರಾಣಾಂ ತಿಷ್ಠ ತಿಷ್ಠೇತಿ ಜಲ್ಪತಾಮ್ || (೭೪.೧೫)
“ಆಹಾ! ಕಳ್ಳನು ತಾನು ಕದ್ದು ಮತ್ತೊಬ್ಬನನ್ನು ಏ! ಕಳ್ಳ! ನಿಲ್ಲು ನಿಲ್ಲೆನ್ನುವಂತೆ ನೀಚಪುರುಷನು ಉತ್ತಮಳಾದ ನಾರಿಯನ್ನು ಹಳಿಯುವನಲ್ಲಾ.”
ಇಂಥ ನವೋನವೀನ ವಿಚಾರವನ್ನು ಸಾವಿರದೈನೂರು ವರ್ಷಗಳ ಹಿಂದೆಯೇ ಸಾರಿದ ವರಾಹಮಿಹಿರನ ಸುಸಂಸ್ಕೃತ’ಸಂಸ್ಕೃತ’ವಾಣಿಯು ಇಂದು ಎಷ್ಟು ವೇದಿಕೆಗಳಲ್ಲಿ ಕೇಳಿದೆ? ಇಂಥ ವೈಜ್ಞಾನಿಕಸತ್ಯವಾಕ್ಯಗಳ ಅರಿವಿಲ್ಲದೆ ಸಂಸ್ಕೃತಶಾರದೆಯನ್ನು ಹಳದಲ್ಲಿ ಅದು ವರಾಹಮಿಹಿರನೇ ಹೇಳುವ ಸ್ತ್ರೀನಿಂದಕರ ಪಾಡಿನಂತಾಗದೇ?