ಜ್ಞಾನಕ್ಕೆ ಯಾವುದೇ ಎಲ್ಲೆ ಇಲ್ಲ. ಅದರಲ್ಲಿ ಪ್ರತ್ಯೇಕ ವಿಭಾಗಗಳನ್ನು ಕಲ್ಪಿಸುವುದು ನಮ್ಮ ಅನುಕೂಲತೆಗಾಗಿ, ನಮ್ಮ ಇತಿ-ಮಿತಿಗಳಿಗೆ ಅನುಸಾರವಾಗಿ. ಲೋಕಸಾಮಾನ್ಯದ ಸ್ಥಿತಿ ಹೀಗಿದ್ದರೂ ಕೆಲವರು ಮಹನೀಯರು ಜ್ಞಾನವನ್ನು ಅಖಂಡವಾಗಿ ಗ್ರಹಿಸಿ ಅದರ ಅನೇಕ ಶಾಖೆಗಳಲ್ಲಿ ಪರಿಶ್ರಮಿಸಿ ಪರಿಣತಿಯನ್ನು ಪಡೆಯುತ್ತಾರೆ. ಭುವನದ ಭಾಗ್ಯ ಎನಿಸುವ ಈ ಬಗೆಯ ಹಲವರು ಪ್ರಾಜ್ಞರು ಪ್ರಾಚೀನ ಭಾರತದಲ್ಲಿ ಜನ್ಮ ತಳೆದಿದ್ದುದು ನಮ್ಮ ಹೆಮ್ಮೆ. ಆಚಾರ್ಯ ಹೇಮಚಂದ್ರ ಸೂರಿ ಈ ಸಾಲಿನಲ್ಲಿ ಮೊದಲಿಗೇ ಸಲ್ಲುವನು. ವಿದ್ಯಾಜಗತ್ತು ಈತನನ್ನು ‘ಕಲಿಕಾಲಸರ್ವಜ್ಞ’ ಎಂದು ಗೌರವಿಸಿದೆ.
ಹೇಮಚಂದ್ರಸೂರಿ
ಹೇಮಚಂದ್ರ ಗುಜರಾತಿನ ಧಂಧುಕಾ ಪ್ರಾಂತದಲ್ಲಿ ಚಚ್ಛ ಮತ್ತು ಪಾಹಿಣೀ ಎಂಬ ದಂಪತಿಗಳ ಸುಪುತ್ರನಾಗಿ ೧೦೮೯ರಲ್ಲಿ ಜನಿಸಿದ. ಇವನ ಜನ್ಮನಾಮ ಚಂಗದೇವ. ತಾಯಿ ಪಾಹಿಣೀ ಜೈನಮತದ ಶ್ವೇತಾಂಬರಧಾರೆಗೆ ಸೇರಿದವಳು. ತಂದೆ ಚಚ್ಛದೇವ ಜೈನನಲ್ಲ; ಅವನು ಶೈವನೋ ವೈಷ್ಣವನೋ ಎಂಬ ವಿಷಯದಲ್ಲಿ ಮತಭೇದವಿದೆ. ಎಳವೆಯಿಂದಲೇ ಐಹಿಕ ಹಿತಾಸಕ್ತಿಯಿರದೆ ನೈತಿಕ ಪ್ರಜ್ಞೆ ಮತ್ತು ತತ್ತ್ವದೃಷ್ಟಿಗಳನ್ನು ಮೈಗೂಡಿಸಿಕೊಂಡಿದ್ದ ಹುಡುಗನಿಗೆ ತಾಯಿ ಮತ್ತು ಸೋದರಮಾವಂದಿರಿಂದ ದೋಹದ ದೊರೆಯಿತು. ಆ ಪ್ರಾಂತದಲ್ಲಿ ನೆಲಸಿದ್ದ ಜೈನಾಚಾರ್ಯರ ಪ್ರೋತ್ಸಾಹವೂ ಲಭಿಸಿ ಎಂಟನೆಯ ವಯಸ್ಸಿನಲ್ಲಿಯೇ ಸಂಘವನ್ನು ಸೇರಿ ಸೋಮಚಂದ್ರ ಎಂಬ ದೀಕ್ಷಾನಾಮವನ್ನು ತಳೆಯುವಂತಾಯಿತು. ಹೀಗೆ ದೀಕ್ಷೆಯನ್ನು ಪಡೆದ ಬಾಲಕ ದೇವಚಂದ್ರ ಎಂಬ ಗುರುಗಳಲ್ಲಿ ಶಿಷ್ಯವೃತ್ತಿ ನಡಸಿ ಕೆಲವೇ ಕಾಲದಲ್ಲಿ ಅನೇಕ ವಿದ್ಯೆಗಳನ್ನು ವಶಪಡಿಸಿಕೊಂಡ. (ಆ ಬಳಿಕ ಕಾಶ್ಮೀರದ ವಿದ್ವಾಂಸರಲ್ಲಿಯೂ ಶಾಸ್ತ್ರಾಧ್ಯಯನ ಮಾಡಿದನೆಂದು ಕೆಲವು ಆಧಾರಗಳಿಂದ ತಿಳಿಯುತ್ತದೆ.) ಈ ಅವಧಿಯಲ್ಲಿ ದೊರೆತ ಶಿಕ್ಷಣ ಆತನ ಸಹಜವಾದ ಪ್ರತಿಭೆಯನ್ನು ಪರಿಷ್ಕರಿಸಿ ಮುಂದೆ ವ್ಯಾಕರಣ, ಛಂದಸ್ಸು, ಅಲಂಕಾರ, ಕೋಶ-ನಿಘಂಟು, ಕಾವ್ಯ, ನ್ಯಾಯಶಾಸ್ತ್ರ, ಯೋಗಶಾಸ್ತ್ರ, ಜೈನದರ್ಶನ ಮೊದಲಾದ ಕ್ಷೇತ್ರಗಳಲ್ಲಿ ಸರ್ವೋಪಾದೇಯ ಗ್ರಂಥಗಳನ್ನು ಅವನು ರಚಿಸುವಂತೆ ಮಾಡಿತು. ಹೀಗೆ ಹತ್ತಾರು ವಿದ್ಯೆಗಳಲ್ಲಿ ಪರಿಣತನಾಗಿ ಸಂಸ್ಕೃತ-ಪ್ರಾಕೃತಗಳಲ್ಲಿ ಸಮನಾದ ಪಾಂಡಿತ್ಯವನ್ನು ಪಡೆದ ಮೇಧಾವಿ ತರುಣ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ‘ಆಚಾರ್ಯ’ನೆನಿಸಿದ; ‘ಗಣಧರ’ನಾಗಿ ಇತರ ಸಾಧುಗಳ ನಾಯಕನಾದ; ‘ಸೂರಿ’ ಎಂಬ ಉಚ್ಚ ಉಪಾಧಿಯೊಡನೆ ಹೇಮಚಂದ್ರ ಎಂಬ ಹೊಸ ಹೆಸರನ್ನೂ ತಳೆದ. ಹೇಮಚಂದ್ರಸೂರಿ ಎಂಬತ್ತನಾಲ್ಕು ವರ್ಷಗಳ ಸಾರ್ಥಕ ಜೀವನವನ್ನು ನಡಿಸಿ ಕೃತಕೃತ್ಯನಾದ. ತನ್ನ ಕೊನೆಯ ಕಾಲದಲ್ಲಿ ಜೈನಸಂಪ್ರದಾಯದಂತೆ ‘ಸಲ್ಲೇಖನ’ವನ್ನು ಕೈಗೊಂಡು ೧೧೭೩ರಲ್ಲಿ ಗತಿಸಿದ.
ಹನ್ನೆರಡನೆಯ ಶತಮಾನದಲ್ಲಿ ಗುರ್ಜರದೇಶವನ್ನು ಆಳುತ್ತಿದ್ದ ಜಯಸಿಂಹ ಸಿದ್ಧರಾಜ ಮತ್ತು ಕುಮಾರಪಾಲರ ಉದಾರ ಆಶ್ರಯ ಹೇಮಚಂದ್ರಸೂರಿಗೆ ಸಿಕ್ಕಿತು. ಈ ನಿಟ್ಟಿನ ಅನೇಕ ಸಂಗತಿಗಳು ಹೆಚ್ಚು-ಕಡಮೆ ಅದೇ ಕಾಲದಲ್ಲಿ ಜೀವಿಸಿದ್ದ ಪ್ರಭಾಚಂದ್ರಸೂರಿಯ ‘ಪ್ರಭಾವಕಚರಿತ’, ಮೇರುತುಂಗನ ‘ಪ್ರಬಂಧಚಿಂತಾಮಣಿ’, ಸೋಮಪ್ರಭಸೂರಿಯ ‘ಕುಮಾರಪಾಲಪ್ರತಿಬೋಧ’ ಮುಂತಾದ ಕೃತಿಗಳಿಂದ ತಿಳಿದುಬರುತ್ತವೆ. ಒಂದು ರಾಜಚಾಟುಶ್ಲೋಕ ಸ್ವಾರಸ್ಯಕರವಾಗಿದೆ. ಒಮ್ಮೆ ಜಯಸಿಂಹನು ಗಜಾರೂಢನಾಗಿ ನಗರದಲ್ಲಿ ಪರ್ಯಟಿಸುತ್ತಿದ್ದಾಗ ಬಂಗಾರದ ಮೈಬಣ್ಣದಿಂದ ಕಂಗೊಳಿಸುತ್ತಿದ್ದ ಹೇಮಚಂದ್ರನ ಮೇಲೆ ಅವನ ದೃಷ್ಟಿ ಬಿದ್ದಿತು. ಆತನನ್ನು ಮಾತನಾಡಿಸಲು ತನ್ನ ಆನೆಯನ್ನು ರಾಜ ನಿಲ್ಲಿಸತೊಡಗಿದಾಗ ಹೇಮಚಂದ್ರ ಹೇಳಿದ:
ಕಾರಯ ಪ್ರಸರಂ ಸಿದ್ಧ ಹಸ್ತಿರಾಜಮಶಂಕಿತಮ್ |
ತ್ರಸ್ಯಂತು ದಿಗ್ಗಜಾಃ ಕಿಂ ತೈರ್ಭೂಸ್ತ್ವಯೈವೋದ್ಧೃತಾ ಯತಃ || (ಪ್ರಭಾವಕಚರಿತ, ೨೨.೬೭)
ಸಿದ್ಧರಾಜನೇ! ನಿನ್ನ ಆನೆ ಯಾವುದೇ ಭಯವಿಲ್ಲದೆ ಸಂಚರಿಸಲಿ. (ಅದರಿಂದ) ದಿಗ್ಗಜಗಳು ಬೆಚ್ಚಿದರೂ ಚಿಂತೆಯಿಲ್ಲ. ಭೂಮಿಯನ್ನು ನೀನು ಹೊತ್ತಿರುವಾಗ ದಿಗ್ಗಜಗಳಿಂದೇನು!
ಜಯಸಿಂಹ ಮತ್ತು ಕುಮಾರಪಾಲರ ಆಶ್ರಯ ಹೇಮಚಂದ್ರನ ಸಾರಸ್ವತ ವ್ಯವಸಾಯಕ್ಕೆ ಮಿಗಿಲಾಗಿ ಇಂಬು ನೀಡಿತು. ಸುಸಜ್ಜಿತವಾದ ಗ್ರಂಥಾಲಯ, ಅದರ ಮೂಲಕ ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿ ರಚಿತವಾದ ಗ್ರಂಥಗಳನ್ನು ತರಿಸಿಕೊಳ್ಳುವ ವ್ಯವಸ್ಥೆ, ತಮ್ಮ ಪ್ರಾಂತದಲ್ಲಿ ಹೇಮಚಂದ್ರನಿಂದ ರಚಿತವಾದ ಗ್ರಂಥಗಳ ಪ್ರತಿಗಳನ್ನು ಮಾಡಿಸಿ ಅವನ್ನು ಬೇರೆಡೆಯ ವಿದ್ವಾಂಸರ ಪರಿಶೀಲನೆಗಾಗಿ ಕಳುಹಿಸಿಕೊಡುವ ಏರ್ಪಾಟು, ಅನುಚರ-ಸಹಾಯಕರು, ಪಂಡಿತರನ್ನು ಬರಮಾಡಿಕೊಂಡು ಶಾಸ್ತ್ರಚರ್ಚೆ ನಡಸಲು ಆನುಕೂಲ್ಯ - ಇವೇ ಮೊದಲಾದ ವಿದ್ಯಾಪರ ಪ್ರಕಲ್ಪಗಳು ದಶಕಗಳುದ್ದಕ್ಕೂ ರೂಪುಗೊಂಡವು. ಹೇಮಚಂದ್ರನ ಶಿಷ್ಯವರ್ಗವೂ ವಿಸ್ತೃತವಾಗಿತ್ತು. ಕಾವ್ಯ-ಶಾಸ್ತ್ರಗಳಲ್ಲಿ ಕೋವಿದರಾದ ರಾಮಚಂದ್ರ, ಗುಣಚಂದ್ರ, ಮಹೇಂದ್ರಸೂರಿ ಮುಂತಾದವರು ಆಕರಗಳನ್ನು ಒದಗಿಸುವಲ್ಲಿ, ವಿವಿಧ ಪ್ರತಿಗಳನ್ನು ಶೋಧಿಸುವಲ್ಲಿ, ಅಧ್ಯಾಪನದಲ್ಲಿ ತಮ್ಮ ಗುರುವಿಗೆ ಸಹಕರಿಸಿದ್ದಲ್ಲದೆ ತಾವೂ ಸ್ವಯಂ ಗ್ರಂಥರಚನೆ ಮಾಡಿದರು. ಒಟ್ಟಿನಲ್ಲಿ ಜ್ಞಾನದ ನಿರ್ಮಿತಿ-ಪ್ರಸಾರಗಳಿಗೆ ಹೇಳಿ ಮಾಡಿಸಿದ ವಾತಾವರಣ ಅಲ್ಲಿದ್ದಿತು.
ಗ್ರಂಥಗಳು
ಹೇಮಚಂದ್ರನ ಹೆಸರಿನಲ್ಲಿ ಹತ್ತಾರು ಗ್ರಂಥಗಳೂ ಸಾವಿರಾರು ಪದ್ಯಗಳೂ ಲಭ್ಯವಿವೆ. ಇವೆಲ್ಲವನ್ನೂ ಆತನೇ ರಚಿಸಿದನೆಂದು ಹೇಳುವಂತಿಲ್ಲ. ಹೀಗೆ ಅನ್ಯಕರ್ತೃಕವಾದ ಕೃತಿಗಳನ್ನು ಪ್ರಸಿದ್ಧ ವಿದ್ವಾಂಸನೊಬ್ಬನ ಹೆಸರಿಗೆ ಅಂಟಿಸುವ ಪರಿಪಾಟಿ ನಮ್ಮ ಪರಂಪರೆಯಲ್ಲಿ ಕಂಡುಬರುತ್ತದೆ. ಆಯಾ ವಿದ್ವಾಂಸರ ಪ್ರಜ್ಞಾಪಾಟವವನ್ನೂ ಕೃತಿರಚನಾಸಾಮರ್ಥ್ಯವನ್ನೂ ಮನಗಾಣಿಸುವ ಉತ್ಸಾಹ ಇದಕ್ಕೆ ಮೂಲವಿರಬಹುದು. ಏನೇ ಆಗಲಿ, ಪ್ರಾಮಾಣಿಕ ಆಧಾರಗಳಿಂದ ಹೇಮಚಂದ್ರನವೇ ಎಂದು ಒಪ್ಪಬಹುದಾದ ಗ್ರಂಥಗಳು ಗುಣ-ಗಾತ್ರಗಳಲ್ಲಿ ಹಿರಿದಾಗಿವೆ, ವೈವಿಧ್ಯದಿಂದ ಕೂಡಿವೆ. ಅವುಗಳ ವಿವರ ಹೀಗಿದೆ:
೧. ಶಬ್ದಾನುಶಾಸನ
೨. ನಾಮಸಂಗ್ರಹ
೩. ದ್ವ್ಯಾಶ್ರಯಕಾವ್ಯ
೪. ಕಾವ್ಯಾನುಶಾಸನ
೫. ಛಂದೋನುಶಾಸನ
೬. ಪ್ರಮಾಣಮೀಮಾಂಸಾ
೭. ಯೋಗಶಾಸ್ತ್ರ
೮. ತ್ರಿಷಷ್ಟಿಶಲಾಕಾಪುರುಷಚರಿತ
೯. ವೀತರಾಗಸ್ತೋತ್ರಗಳು
ಸಂಖ್ಯೆಯ ದೃಷ್ಟಿಯಿಂದ ಹೆಚ್ಚಿನವೆಂದು ತೋರದಿದ್ದರೂ ಹೇಮಚಂದ್ರನ ಗ್ರಂಥಗಳು ಒಂದೊಂದೂ ಹಿರಿದಾದ ವ್ಯಾಪ್ತಿಯನ್ನು ಹೊಂದಿವೆ. ಜ್ಞಾನದ ನಿರ್ಮಾಣಕ್ಕಿಂತ ಅದರ ಸಂಗ್ರಹ-ವ್ಯವಸ್ಥಾಪನೆಗಳಿಗೆ ಬೆಲೆ ಕೊಟ್ಟ ಹೇಮಚಂದ್ರ ಎಲ್ಲ ಬಗೆಯ ಅಧಿಕಾರಿಗಳೂ ಓದಿ ಪ್ರಯೋಜನ ಪಡೆಯಬಹುದಾದ ಕೃತಿಗಳನ್ನು ರಚಿಸಿದ್ದಾನೆ. ಸಾರಸ್ವತೋದ್ಯಮದಲ್ಲಿ ಅವನು ಸಾಮಾನ್ಯವಾಗಿ ಅನುಸರಿಸುವ ಕ್ರಮ ಮೂರು ಮಜಲುಗಳನ್ನು ಹೊಂದಿದೆ: ಮೊದಲಿಗೆ ಆಯಾ ವಿದ್ಯೆಯ ಸಾರವನ್ನು ಸಂಕ್ಷೇಪವಾಗಿ ತಿಳಿಸುವ ಸೂತ್ರಗಳು. ಈ ಸೂತ್ರಗಳ ಮೇಲೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂಥ ಪ್ರಾಥಮಿಕ ವಿವರಣೆ. ಆ ಬಳಿಕ ವಿದ್ವಾಂಸರು ಮೆಚ್ಚಬಹುದಾದ ವಿಸ್ತೃತ ವ್ಯಾಖ್ಯಾನ. ಹೀಗೆ ಜಿಜ್ಞಾಸುಗಳನ್ನು ತಣಿಸುವಲ್ಲಿ ಹೇಮಚಂದ್ರನು ತೋರಿಸಿದ ಅಪಾರವಾದ ತಾಳ್ಮೆಯನ್ನೂ ಕ್ಷಮತೆಯನ್ನೂ ಮೆಚ್ಚದಿರಲು ಸಾಧ್ಯವೇ ಇಲ್ಲ. ತನ್ನ ಕಾಲದವರೆಗೆ ಬೆಳೆದುಬಂದ ಶಾಸ್ತ್ರವಿಚಾರಗಳನ್ನು ವಿಪುಲವಾಗಿ ಉದ್ಧರಿಸುವ ಹೇಮಚಂದ್ರ ಯಾರನ್ನೂ ಬೆಚ್ಚಿಬೀಳಿಸುವಷ್ಟು ಹರಹುಳ್ಳ ಜ್ಞಾನಶಾಖೆಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿದ್ದಾನೆ. ಈ ಕಾರಣದಿಂದಾಗಿ ಹಾಗೂ ವೈದುಷ್ಯದ ಅನುಸಂಧಾನದಲ್ಲಿ ಹೇಮಚಂದ್ರನಿಗಿದ್ದ ಋಜುದೃಷ್ಟಿಯಿಂದಾಗಿ ಆತನ ಗ್ರಂಥಗಳು ಎಲ್ಲರೂ ನಚ್ಚಬಲ್ಲ ಪ್ರಾಮಾಣಿಕ ಆಕರಗಳಾಗಿವೆ. ಭಾಷಾಭೇದವಿಲ್ಲದೆ ಸಂಸ್ಕೃತ ಮತ್ತು ಬಗೆಬಗೆಯ ಪ್ರಾಕೃತಗಳನ್ನು ಒಟ್ಟಾಗಿ ಬೆಳೆಸಿ ಬೆಳಗಿರುವುದು ಆತನ ಕೃತಿಗಳ ಮತ್ತೊಂದು ಹೆಗ್ಗಳಿಕೆ. ಎಲ್ಲಕ್ಕಿಂತ ಹೆಚ್ಚಾಗಿ ತಾನು ಜೈನಮತಾವಲಂಬಿಯಾಗಿದ್ದರೂ ವಿವಿಧ ವಿದ್ಯೆಗಳನ್ನು ಜೈನದರ್ಶನಕ್ಕೆ ಒಂಟಿಸಿ ವಿವರಿಸುವ ವಿಕೃತಿಯನ್ನು ಎಸಗದಿರುವುದು ಹೇಮಚಂದ್ರನ ಮೇಲ್ಮೆ. ಹಾಗೆಂದು ಅವನು ತನ್ನ ಪರಂಪರೆಗೆ ಯಾವ ಅಪಚಾರವನ್ನೂ ಮಾಡಿಲ್ಲ. ಜೈನಮತಕ್ಕೆ ಸಂಬಂಧಿಸಿದ ಸ್ವತಂತ್ರ ಗ್ರಂಥಗಳನ್ನು ಬರೆದು, ಸ್ವಯಂ ಗಣಧರನಾಗಿ ಬಾಳಿ, ಬೋಧಿಸಿ, ಕೊನೆಗೆ ಸಲ್ಲೇಖನವನ್ನೂ ಕೈಗೊಂಡು ಚರಿತಾರ್ಥನಾದ.
ಈ ಹಿನ್ನೆಲೆಯಲ್ಲಿ ಹೇಮಚಂದ್ರನ ಕೃತಿಗಳ ಪರಿಚಯವನ್ನು ಮಾಡಿಕೊಳ್ಳೋಣ.
ಶಬ್ದಾನುಶಾಸನವು ಸಂಸ್ಕೃತ-ಪ್ರಾಕೃತ ಎರಡು ಧಾರೆಗಳಿಗೂ ಅನ್ವಯಿಸುವ ವ್ಯಾಕರಣಗ್ರಂಥ. ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಲ್ಲಿ ವಿಭಕ್ತವಾದ ಈ ಕೃತಿ ಸೂತ್ರ, ಗಣಪಾಠ, ಧಾತುಪಾಠ, ಉಣಾದಿಸಂಗ್ರಹ ಮತ್ತು ಲಿಂಗಾನುಶಾಸನಗಳೆಂಬ ಐದು ವಿಭಾಗಗಳನ್ನು ಹೊಂದಿದೆ. ಇಲ್ಲಿ ಒಟ್ಟು ೪೬೮೫ ಸೂತ್ರಗಳಿದ್ದು ಅವುಗಳಲ್ಲಿ ೩೫೬೬ ಸಂಸ್ಕೃತಕ್ಕೂ ೧೧೧೯ ಪ್ರಾಕೃತಗಳಿಗೂ ಸಂಬಂಧಿಸಿವೆ. ಈ ಗ್ರಂಥದ ಮೇಲೆ ಹೇಮಚಂದ್ರನು ಲಘುವೃತ್ತಿ ಮತ್ತು ಬೃಹದ್ವೃತ್ತಿಗಳೆಂಬ ಎರಡು ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಪಾತಂಜಲ ಮಹಾಭಾಷ್ಯದ ಶೈಲಿಯಲ್ಲಿ ‘ಬೃಹನ್ನ್ಯಾಸ’ ಎಂಬ ಗ್ರಂಥವನ್ನೂ ಆತ ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ನಮಗಿಂದು ದೊರೆಯುವುದಿಲ್ಲ. ದೊರೆ ಜಯಸಿಂಹನ ಕೋರಿಕೆಯ ಮೇರೆಗೆ ಹೇಮಚಂದ್ರನು ರಚಿಸಿದ ಶಬ್ದಾನುಶಾಸನವು ಅವರಿರ್ವರ ಹೆಸರುಗಳನ್ನೂ ತಳೆದು ‘ಸಿದ್ಧಹೇಮಶಬ್ದಾನುಶಾಸನ’ ಎಂದು ಖ್ಯಾತವಾಗಿದೆ. ಜಟಿಲವೂ ವಿಸ್ತೃತವೂ ಆದ ಅನ್ಯಾನ್ಯ ವ್ಯಾಕರಣಗ್ರಂಥಗಳಿಂದ ಕ್ಲೇಶಗೊಂಡ ಸಿದ್ಧರಾಜನು ಸರ್ವಸುಗ್ರಹವಾದ ಹೊಸತೊಂದು ಕೃತಿಯನ್ನು ರಚಿಸಲು ಕೋರಿದಾಗ ಹೇಮಚಂದ್ರನು ಆ ಕಾಲದಲ್ಲಿ ಪ್ರಚುರವಾಗಿದ್ದ ಭೋಜದೇವನ ‘ಸರಸ್ವತೀಕಂಠಾಭರಣ’ವನ್ನು ಪರಾಮರ್ಶಿಸಿ, ಪಾಣಿನಿಯೂ ಸೇರಿದಂತೆ ಹಲವರು ಪೂರ್ವಾಚಾರ್ಯರು ರಚಿಸಿದ ಎಂಟು ಬಗೆಯ ವ್ಯಾಕರಣಗ್ರಂಥಗಳನ್ನು ಕಾಶ್ಮೀರದಿಂದ ತರಿಸಿಕೊಂಡು ಪರಿಶೀಲಿಸಿ ತನ್ನ ಕೃತಿಯನ್ನು ನಿರ್ಮಿಸಿದನೆಂದು ತಿಳಿಯುತ್ತದೆ. ಹೀಗೆ ರಚಿತವಾದ ಗ್ರಂಥದ ಪ್ರತಿಗಳನ್ನು ವಿವಿಧ ಪ್ರದೇಶಗಳಿಗೆ ಕಳುಹಿಸಲಾಯಿತೆಂದೂ ಇವುಗಳಲ್ಲಿ ಕೆಲವು ಕಾಶ್ಮೀರದ ಗ್ರಂಥಭಂಡಾರದಲ್ಲಿ ಸಂರಕ್ಷಿತವಾದುವೆಂದೂ ಪ್ರಭಾವಕಚರಿತ ಒಕ್ಕಣಿಸುತ್ತದೆ.
ನಾಮಸಂಗ್ರಹ ಎಂಬ ಹೆಸರಿನ ಕೋಶಸಮುಚ್ಚಯದಲ್ಲಿ ‘ಅಭಿಧಾನಚಿಂತಾಮಣಿ’ ಎಂಬ ಸಂಸ್ಕೃತಕೋಶ, ‘ಅನೇಕಾರ್ಥಸಂಗ್ರಹ’ ಎಂಬ ಅದರ ಅನುಬಂಧ, ‘ತತ್ತ್ವಬೋಧವಿಧಾಯಿನೀ’ ಎಂಬ ವ್ಯಾಖ್ಯಾನ, ‘ದೇಶೀನಾಮಮಾಲಾ’ ಅಥವಾ ‘ರಯಣಾವಲೀ’ ಎಂಬ ಹೆಸರಿನ ದೇಶ್ಯಶಬ್ದಗಳ ಕೋಶ, ಅದರ ಮೇಲಣ ವ್ಯಾಖ್ಯಾನ, ವನೌಷಧಿವರ್ಗವನ್ನು ಒಳಗೊಂಡ ‘ನಿಘಂಟುಶೇಷ’ ಎಂಬ ವಿಭಾಗಗಳಿವೆ. ಇದು ನಾಮಪ್ರಪಂಚಸರ್ವಸ್ವವೆಂದರೆ ಅತ್ಯುಕ್ತಿಯಾಗದು. ಅಭಿಧಾನಚಿಂತಾಮಣಿಯಲ್ಲಿ ಪ್ರಾಮಾಣ್ಯಕ್ಕಾಗಿ ವಾಸುಕಿ ಮತ್ತು ವ್ಯಾಡಿಯರನ್ನು, ವ್ಯುತ್ಪತ್ತಿಗಾಗಿ ಧನಪಾಲನನ್ನು, ಪ್ರಪಂಚಕ್ಕಾಗಿ (ವಿಸ್ತೃತಿ) ವಾಚಸ್ಪತಿಯನ್ನು ಅವಲಂಬಿಸಿರುವುದಾಗಿ ಕೃತಿಕಾರ ಹೇಳಿಕೊಂಡಿದ್ದಾನೆ. ದೇಶೀನಾಮಮಾಲೆಯಲ್ಲಿ ಸುಮಾರು ಹನ್ನೆರಡು ಮಂದಿ ಪೂರ್ವಾಚಾರ್ಯರನ್ನು ಆತ ಸ್ಮರಿಸಿದ್ದಾನೆ. (ಇವರ ಪೈಕಿ ಅವಂತಿಸುಂದರಿಯೂ ಒಬ್ಬಳು. ಈಕೆ ಪ್ರಾಯಶಃ ರಾಜಶೇಖರನ ಪತ್ನಿ, ಸಂಸ್ಕೃತ-ಪ್ರಾಕೃತಗಳ ವಿದುಷಿ. ಇವಳು ರಚಿಸಿದ ಯಾವ ಕೋಶವೂ ನಮಗಿಂದು ತಿಳಿದಿಲ್ಲ. ಹೀಗೆ ಭಾರತೀಯ ಸಾಹಿತ್ಯದ ಅನೇಕ ಅಜ್ಞಾತ ಆಯಾಮಗಳನ್ನು ಅರಿಯಲೂ ಹೇಮಚಂದ್ರನ ಗ್ರಂಥಗಳು ಉಪಕರಿಸುತ್ತವೆ.)
ದ್ವ್ಯಾಶ್ರಯಕಾವ್ಯವು ಸಂಸ್ಕೃತ ಮತ್ತು ಪ್ರಾಕೃತಪದ್ಯಗಳನ್ನು ಒಳಗೊಂಡ ಇಪ್ಪತ್ತು ಸರ್ಗಗಳ ರಚನೆ. ಇದರ ಸಂಸ್ಕೃತಭಾಗಕ್ಕೆ ‘ಚಾಲುಕ್ಯವಂಶೋತ್ಕೀರ್ತನ’ ಎಂದೂ ಪ್ರಾಕೃತಭಾಗಕ್ಕೆ ‘ಕುಮಾರಪಾಲಚರಿತ’ ಎಂದೂ ಹೆಸರು. ಶಬ್ದಾನುಶಾಸನದಲ್ಲಿ ಹೇಳಲಾದ ವ್ಯಾಕರಣಲಕ್ಷಣಗಳಿಗೆ ಲಕ್ಷ್ಯಭೂತವಾದ ಉದಾಹರಣೆಗಳನ್ನು ಈ ಕೃತಿ ಒದಗಿಸುತ್ತದೆ. ಗುರ್ಜರಪ್ರದೇಶದಲ್ಲಿ ಆಳುತ್ತಿದ್ದ ಚಾಲುಕ್ಯರ ಪೈಕಿ ಪ್ರಮುಖನಾದ ಮೂಲರಾಜನಿಂದ ಮೊದಲುಮಾಡಿ ತನ್ನ ಆಶ್ರಯದಾತರಾದ ಸಿದ್ಧರಾಜ ಹಾಗೂ ಕುಮಾರಪಾಲರ ವೃತ್ತಾಂತಗಳನ್ನು ಹೇಮಚಂದ್ರನಿಲ್ಲಿ ಬಣ್ಣಿಸಿದ್ದಾನೆ. ವ್ಯಾಕರಣ, ಇತಿಹಾಸ ಮತ್ತು ಸಾಹಿತ್ಯಗಳನ್ನು ಸಮನಾಗಿ ಲಕ್ಷಿಸುವ ಈ ಕಾವ್ಯ ಹೇಮಚಂದ್ರನ ವಿನೂತನ ಕೃತಿಗಳಲ್ಲೊಂದು.
ಕಾವ್ಯಾನುಶಾಸನದ ವಿಸ್ತೃತ ಪರಿಚಯವನ್ನು ಮುಂದೆ ಮಾಡಿಕೊಳ್ಳೋಣ.
ಛಂದೋನುಶಾಸನವು ಸಂಸ್ಕೃತ, ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿ ಬಳಕೆಯಾಗುವ ಛಂದಸ್ಸುಗಳ ಲಕ್ಷ್ಯ-ಲಕ್ಷಣಗಳನ್ನು ಒದಗಿಸುವ ಶಾಸ್ತ್ರಗ್ರಂಥ. ಎಂಟು ಅಧ್ಯಾಯಗಳಲ್ಲಿ ವಿಂಗಡಗೊಂಡ ಈ ಕೃತಿಯಲ್ಲಿ ೭೬೩ ಸೂತ್ರಗಳಿವೆ. ವರ್ಣವೃತ್ತಗಳು, ಮಾತ್ರಾಜಾತಿಗಳು, ಗಾಥಾ, ಅದರ ಪ್ರಭೇದಗಳು, ಗಲಿತಕಾದಿಗಳು, ಅಪಭ್ರಂಶ ಛಂದಸ್ಸುಗಳೇ ಮೊದಲಾದ ವಿಷಯಗಳು ಇಲ್ಲಿ ನಿರೂಪಿತವಾಗಿವೆ. ಇಲ್ಲಿಯ ಹೆಚ್ಚಿನ ಲಕ್ಷ್ಯಪದ್ಯಗಳನ್ನು ಹೇಮಚಂದ್ರನೇ ರಚಿಸಿದ್ದಾನೆ. ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿಯ ಬಗೆಬಗೆಯ ಛಂದೋಬಂಧಗಳನ್ನು ಅರಿಯಲು ಛಂದೋನುಶಾಸನವು ಅನಿವಾರ್ಯ ಆಲಂಬನವೆನಿಸಿದೆ. ಇಲ್ಲಿ ನಿರೂಪಿತವಾದ ಲಕ್ಷಣವೊಂದು ‘ಫಿಬೊನಾಚಿ’ ಸರಣಿಗೆ ಸಂವಾದಿಯಾಗಿದೆ. ಹೇಮಚಂದ್ರನು ಫಿಬೊನಾಚಿಗಿಂತ ಸುಮಾರು ಐವತ್ತು ವರ್ಷಗಳಿಗೆ ಮುನ್ನ ಇದನ್ನು ಪ್ರತಿಪಾದಿಸಿರುವುದು ಅವನಿಂದ ಗಣಿತಕ್ಷೇತ್ರಕ್ಕೆ ಸಂದ ಕೊಡುಗೆ.
ಪ್ರಮಾಣಮೀಮಾಂಸಾ ಎಂಬುದು ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ಇದು ನಮಗಿಂದು ಪೂರ್ಣವಾಗಿ ದೊರೆತಿಲ್ಲ. ಗೌತಮ ನ್ಯಾಯಸೂತ್ರಗಳಂತೆ ಐದು ಅಧ್ಯಾಯಗಳಲ್ಲಿ ರಚಿತವಾಗಿದ್ದಂತೆ ತೋರುವ ಈ ಗ್ರಂಥದ ಎರಡನೆಯ ಅಧ್ಯಾಯದ ಪ್ರಥಮ ಆಹ್ನಿಕದವರೆಗಿನ ಭಾಗ ಮಾತ್ರ ಈಗ ಲಭ್ಯವಿದೆ.
ಯೋಗಶಾಸ್ತ್ರವು ಶ್ವೇತಾಂಬರಧಾರೆಯ ಜೈನಾಗಮವನ್ನು ಕುರಿತ ಕೃತಿ. ‘ಪ್ರಕಾಶ’ ಎಂಬ ಹೆಸರಿನ ಇಲ್ಲಿಯ ಹನ್ನೆರಡು ಅಧ್ಯಾಯಗಳು ಮುಖ್ಯವಾಗಿ ‘ರತ್ನತ್ರಯ’ ಎಂದು ಜೈನದರ್ಶನದಲ್ಲಿ ಖ್ಯಾತವಾದ ಸಮ್ಯಕ್‌ಜ್ಞಾನ, ಸಮ್ಯಕ್‌ಶ್ರದ್ಧೆ ಮತ್ತು ಸಮ್ಯಕ್‌ಚಾರಿತ್ರಗಳನ್ನು ವಿವರಿಸುತ್ತವೆ. ಜೊತೆಗೆ ಪ್ರಾಣಾಯಾಮ, ಆಸನಗಳು, ನಾಡಿಗಳೇ ಮೊದಲಾದ ವಿಷಯಗಳನ್ನೂ ಚರ್ಚಿಸುತ್ತದೆ. ಉಮಾಸ್ವಾತಿ, ಹರಿಭದ್ರ ಮುಂತಾದ ಪೂರ್ವಾಚಾರ್ಯರ ಬೋಧನೆಗಳನ್ನು ಇಲ್ಲಿ ಯಥೋಚಿತವಾಗಿ ಬಳಸಿಕೊಳ್ಳಲಾಗಿದೆ. ಹೇಮಚಂದ್ರನೇ ರಚಿಸಿರುವ ವೃತ್ತಿಯಿರುವ ಈ ಕೃತಿ ಗುಜರಾತಿನಲ್ಲಿ, ಪಶ್ಚಿಮಭಾರತದ ಇತರ ಪ್ರಾಂತಗಳಲ್ಲಿ ಜೈನಮತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ತ್ರಿಷಷ್ಟಿಶಲಾಕಾಪುರುಷಚರಿತವು ಹತ್ತು ಪರ್ವಗಳುಳ್ಳ ನಿಡಿದಾದ ರಚನೆ. ಇಪ್ಪತ್ತನಾಲ್ಕು ತೀರ್ಥಂಕರರು, ಹನ್ನೆರಡು ಚಕ್ರವರ್ತಿಗಳು, ಒಂಬತ್ತು ವಾಸುದೇವರು, ಒಂಬತ್ತು ಬಲದೇವರು ಹಾಗೂ ಒಂಬತ್ತು ಪ್ರತಿವಾಸುದೇವರು ಸೇರಿ ಘಟಿಸುವ ಅರುವತ್ತಮೂರು ಮಂದಿ ಶಲಾಕಾಪುರುಷರ ವೃತ್ತಾಂತಗಳನ್ನು ಈ ಕೃತಿ ಬಣ್ಣಿಸುತ್ತದೆ. ಆದೀಶ್ವರಚರಿತ, ಅಜಿತನಾಥಚರಿತ, ಶಾಂತಿನಾಥಚರಿತ, ಜೈನರಾಮಾಯಣ, ನೇಮಿನಾಥಚರಿತ, ಬ್ರಹ್ಮದತ್ತಚರಿತ, ಪಾರ್ಶ್ವನಾಥಚರಿತ ಮತ್ತು ಮಹಾವೀರಚರಿತ ಇಲ್ಲಿಯ ಕೆಲವು ಪ್ರಮುಖ ಅಧ್ಯಾಯಗಳು.
ವೀತರಾಗಸ್ತೋತ್ರವು ೧೮೬ ಪದ್ಯಗಳನ್ನು ಒಳಗೊಂಡ ರಚನೆ. ಇಪ್ಪತ್ತು ಸ್ತವಗಳಾಗಿ ವಿಭಕ್ತವಾದ ಈ ಸ್ತೋತ್ರವು ಮಹಾವೀರನನ್ನು ಕೀರ್ತಿಸುವುದರ ಜೊತೆಗೆ ಜೈನದರ್ಶನದ ಅನೇಕ ಪ್ರಮೇಯಗಳ ಮೇಲೂ ಬೆಳಕು ಚೆಲ್ಲುತ್ತದೆ.
ಕಾವ್ಯಾನುಶಾಸನ
ಇದು ಅಲಂಕಾರಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಭರತಮುನಿಯು ‘ನಾಟ್ಯಶಾಸ್ತ್ರ’ದಲ್ಲಿ ಸಕಲ ಕಲೆಗಳಿಗೂ ಪ್ರಯೋಜಕವಾದ ಹೊಳಹುಗಳನ್ನು ಒದಗಿಸಿಕೊಟ್ಟಿದ್ದರೂ ಅವನ ಬಳಿಕ ಬಂದ ಭಾಮಹ, ದಂಡಿ, ವಾಮನ, ಉದ್ಭಟ, ರುದ್ರಟ ಮೊದಲಾದ ಆಲಂಕಾರಿಕರು ಕಾವ್ಯಕ್ಕೆ ಮಾತ್ರ ಸೀಮಿತವಾದ ವಿಚಾರಗಳನ್ನು ಬಿತ್ತರಿಸಿದರು. ಹೇಮಚಂದ್ರನು ‘ಕಾವ್ಯಾನುಶಾಸನ’ದಲ್ಲಿ ಮೊದಲ ಬಾರಿಗೆ ಕಾವ್ಯದೊಡನೆ ರೂಪಕವನ್ನೂ ಸೇರಿಸಿಕೊಂಡು ವಿಚಾರಗಳನ್ನು ಬೆಳೆಸಿದ. ಅನಂತರ ಸುಮಾರು ಇನ್ನೂರು ವರ್ಷಗಳಾದ ಬಳಿಕ ವಿಶ್ವನಾಥನು ಈ ಬಗೆಯ ಕೆಲಸವನ್ನು ಮುಂದುವರಿಸಿದ. ಸೂತ್ರ, ವೃತ್ತಿ ಮತ್ತು ಉದಾಹರಣೆಗಳ ರೂಪದಲ್ಲಿ ರಚಿತವಾದ ಕಾವ್ಯಾನುಶಾಸನದಲ್ಲಿ ಎಂಟು ಅಧ್ಯಾಯಗಳೂ ೨೦೮ ಸೂತ್ರಗಳೂ ಇವೆ. ನಾವು ಮೊದಲೇ ಗಮನಿಸಿದಂತೆ ಹೇಮಚಂದ್ರನು ಎಲ್ಲರಿಗೂ ಅನುಕೂಲಿಸುವ ಸೂತ್ರಗಳನ್ನು ಮೊದಲಿಗೆ ರಚಿಸಿ ಆ ಬಳಿಕ ಅವನ್ನು ವಿವರಿಸುವ ವೃತ್ತಿಯನ್ನೂ ಹೆಚ್ಚಿನ ತಿಳಿವನ್ನು ಒದಗಿಸುವ ವ್ಯಾಖ್ಯಾನವನ್ನೂ ರಚಿಸಿದ್ದಾನೆ. ಇಲ್ಲಿಯ ವೃತ್ತಿಯ ಹೆಸರು ‘ಅಲಂಕಾರಚೂಡಾಮಣಿ’; ವ್ಯಾಖ್ಯಾನದ ಹೆಸರು ‘ವಿವೇಕ’. ಇವುಗಳಲ್ಲಿ ಸುಮಾರು ಐವತ್ತು ಶಾಸ್ತ್ರಕಾರರನ್ನೂ ಎಂಬತ್ತು ಗ್ರಂಥಗಳನ್ನೂ ಹೆಸರಿಸಿ ಉಲ್ಲೇಖಿಸುವ ಹೇಮಚಂದ್ರ ಇಡಿಯ ತನ್ನ ಕೃತಿಯಲ್ಲಿ ಕಾವ್ಯ-ಶಾಸ್ತ್ರಗಳಿಗೆ ಸಂಬಂಧಿಸಿದ ವಿವಿಧ ಗ್ರಂಥಗಳಿಂದ ಸಾವಿರದ ಆರುನೂರಕ್ಕಿಂತ ಹೆಚ್ಚು ಉದ್ಧರಣಗಳನ್ನು ಮಾಡಿ ಅಧ್ಯಯನಾಸಕ್ತರ ಪಾಲಿಗೆ ನಿಧಿಯೆನಿಸಿದ್ದಾನೆ. ಅತ್ಯಂತ ಮೌಲಿಕವಾಗಿದ್ದರೂ ಇಂದು ಅನುಪಲಬ್ಧವಾದ ಭಟ್ಟತೌತನ ‘ಕಾವ್ಯಕೌತುಕ’ ಎಂಬ ಗ್ರಂಥದ ಕೆಲವು ತುಣುಕುಗಳು, ಕ್ಷೇಮೇಂದ್ರನ ಅನುಪಲಬ್ಧ ಕೃತಿ ‘ಕನಕಜಾನಕಿ’ಯ ಕೆಲವು ಪದ್ಯಗಳು ಇಲ್ಲಿ ಕಾಣಸಿಗುತ್ತವೆ ಎಂದ ಮೇಲೆ ಈ ಉದ್ಧರಣಗಳ ಮೌಲಿಕತೆಯನ್ನು ಬೇರೆಯಾಗಿ ವಿವರಿಸಬೇಕಿಲ್ಲ. ಮೂಲಗ್ರಂಥ ಹಾಗೂ ಅದರ ವ್ಯಾಖ್ಯಾನ ಎಲ್ಲರಿಗೂ ಸುಬೋಧವಾದ ಶೈಲಿಯಲ್ಲಿ ರೂಪುಗೊಂಡಿದ್ದು ಅಲಂಕಾರಶಾಸ್ತ್ರದ ವಿಷಯಗಳನ್ನು ಸಾಕಲ್ಯದಿಂದ ನಿರೂಪಿಸುತ್ತವೆ. ರಸಸೂತ್ರವನ್ನು ವಿವರಿಸುವಾಗ ಹೇಮಚಂದ್ರನು ಜೈನಾಗಮಗಳ ಜಾಡನ್ನು ಹಿಡಿಯದೆ ಅಭಿನವಗುಪ್ತನು ಎತ್ತಿಹಿಡಿದ ವೇದಾಂತದ ಕ್ರಮವನ್ನೇ ಅನುಸರಿಸಿರುವುದು ಅವನ ಮನೋವೈಶಾಲ್ಯಕ್ಕೂ ಶಾಸ್ತ್ರಬದ್ಧತೆಗೂ ಒಳ್ಳೆಯ ಸಾಕ್ಷಿ. ಈ ಎಲ್ಲ ಕಾರಣಗಳಿಂದಾಗಿ ಕಾವ್ಯಾನುಶಾಸನವು ಎಲ್ಲರೂ ಓದಿ ಮೆಚ್ಚಬಲ್ಲ, ನಾಲ್ಕು ಕಾಲ ನಚ್ಚಿಕೊಳ್ಳಬಲ್ಲ ಒಳ್ಳೆಯ ಕೃತಿಯೆನಿಸಿದೆ. ಹೆಚ್ಚು-ಕಡಮೆ ಈ ಗ್ರಂಥದ ಉದ್ದೇಶಗಳನ್ನೇ ಸಾಧಿಸಹೊರಟ (ರೂಪಕಲಕ್ಷಣವನ್ನು ಹೊರತುಪಡಿಸಿ) ಮಮ್ಮಟನ ‘ಕಾವ್ಯಪ್ರಕಾಶ’ವು ಗಡುಚಾದ ಶೈಲಿಯಲ್ಲಿ ರಚನೆಗೊಂಡು ಸಂಕ್ಷಿಪ್ತತೆಯ ಹೆಸರಿನಲ್ಲಿ ಅರ್ಥವ್ಯಕ್ತಿಗೇ ಕೆಲವೊಮ್ಮೆ ಎರವಾಗಿರುವುದನ್ನು ನೆನೆದಾಗ ಹೇಮಚಂದ್ರನು ಅನುಸರಿಸಿದ ಕ್ರಮ ಎಷ್ಟು ಉಪಾದೇಯವಾದುದೆಂದು ತಿಳಿಯುತ್ತದೆ.
ಇದೀಗ ಅಧ್ಯಾಯಾನುಸಾರವಾಗಿ ಕಾವ್ಯಾನುಶಾಸನದಲ್ಲಿ ಚರ್ಚಿತವಾದ ವಿಷಯಗಳನ್ನು ಪರಿಶೀಲಿಸೋಣ.
ಮೊದಲ ಅಧ್ಯಾಯದಲ್ಲಿ ಮಂಗಳಾಚರಣೆಯ ಬಳಿಕ ಅಲಂಕಾರಶಾಸ್ತ್ರದ ಉದ್ದೇಶವನ್ನು ಚುಟುಕಾಗಿ ನಿರೂಪಿಸಲಾಗಿದೆ. ಅನಂತರ ಕಾವ್ಯಪ್ರಯೋಜನ; ಕಾವ್ಯಹೇತು; ಶಬ್ದ, ಅರ್ಥ, ಗುಣ, ದೋಷ ಮತ್ತು ಅಲಂಕಾರಗಳ ಲಕ್ಷಣಗಳು ನಿರೂಪಿತವಾಗಿವೆ. ಕಡೆಯಲ್ಲಿ ಮೂರು ಶಬ್ದವೃತ್ತಿಗಳಾದ ಅಭಿಧೆ, ಲಕ್ಷಣೆ ಹಾಗೂ ವ್ಯಂಜನೆಗಳು ಒಕ್ಕಣೆಗೊಂಡಿವೆ. ಎರಡನೆಯ ಅಧ್ಯಾಯವು ಮುಖ್ಯವಾಗಿ ರಸ, ಭಾವ, ರಸಾಭಾಸ ಮತ್ತು ಭಾವಾಭಾಸಗಳನ್ನು ಚರ್ಚಿಸುತ್ತದೆ. ಇದರೊಟ್ಟಿಗೆ ಕಾವ್ಯವನ್ನು ಉತ್ತಮ, ಮಧ್ಯಮ ಮತ್ತು ಅಧಮ ಎಂದು ವಿಂಗಡಿಸಿ ಅವುಗಳನ್ನು ವಿವೇಚಿಸುತ್ತದೆ. ಮೂರನೆಯ ಅಧ್ಯಾಯವು ದೋಷಪ್ರಕರಣಕ್ಕೆ ಮೀಸಲಾಗಿದ್ದರೆ ನಾಲ್ಕನೆಯದು ಗುಣವಿಚೇಚನೆಯನ್ನು ಕೇಂದ್ರೀಕರಿಸಿದೆ. ಐದು ಮತ್ತು ಆರನೆಯ ಅಧ್ಯಾಯಗಳಲ್ಲಿ ಕ್ರಮವಾಗಿ ಶಬ್ದ ಮತ್ತು ಅರ್ಥ ಅಲಂಕಾರಗಳು ನಿರೂಪಿತವಾಗಿವೆ. ಏಳನೆಯ ಅಧ್ಯಾಯದಲ್ಲಿ ನಾಯಕ, ಪ್ರತಿನಾಯಕ, ನಾಯಿಕೆ ಮೊದಲಾದ ಸಾಹಿತ್ಯಕೃತಿಯ ಪಾತ್ರಗಳ ವಿವೇಚನೆ ಸಾಗಿದೆ. ಕಡೆಯ ಅಧ್ಯಾಯದಲ್ಲಿ ಕಾವ್ಯಭೇದಗಳು, ರೂಪಕಗಳು ಹಾಗೂ ಗೇಯಪ್ರೇಕ್ಷ್ಯಗಳ ವಿವರಗಳು ಬಂದಿವೆ.
ಗ್ರಂಥಋಣ
- ಪ್ರಭಾಚಂದ್ರನ ಪ್ರಭಾವಕಚರಿತ (ಸಂ. ಜಿನವಿಜಯ ಮುನಿ). ಸಿಂಧೀ ಜೈನ ಗ್ರಂಥಮಾಲಾ, ಅಹಮದಾಬಾದ್, ೧೯೪೦
- ಹೇಮಚಂದ್ರನ ಕಾವ್ಯಾನುಶಾಸನ (ಎರಡು ಸಂಪುಟಗಳು; ಸಂ. ರಸಿಕಲಾಲ್ ಪರೀಖ್ ಮತ್ತು ರಾಮಚಂದ್ರ ಆಠವಳೆ). ಶ್ರೀ ಮಹಾವೀರ ಜೈನ ವಿದ್ಯಾಲಯ, ಬಾಂಬೆ, ೧೯೩೮. [ಈ ಉದ್ಗ್ರಂಥದ ಮೊದಲ ಸಂಪುಟದಲ್ಲಿ ಗುಜರಾತಿನ ಪ್ರಾಚೀನ ಇತಿಹಾಸ, ಅಲ್ಲಿಯ ರಾಜವಂಶಗಳು, ಆ ನೆಲದಲ್ಲಿ ಸಾಹಿತ್ಯವಿದ್ಯೆ ಬೆಳೆದ ಬಗೆ, ಹೇಮಚಂದ್ರನ ದೇಶ-ಕಾಲ, ಆತನ ವಾಙ್ಮಯಪ್ರಪಂಚವೇ ಮೊದಲಾದ ಅನೇಕ ವಿಷಯಗಳ ಬಗೆಗೆ ಮೌಲಿಕವಾದ ಮಾಹಿತಿಯಿದೆ. ಜೊತೆಗೆ ಕಾವ್ಯಾನುಶಾಸನದ ಅಧ್ಯಯನಕ್ಕೆ ಅನುಕೂಲಿಸುವ ಟಿಪ್ಪಣಿಗಳೂ ಇವೆ. ಎರಡನೆಯ ಭಾಗದಲ್ಲಿ ಮೂಲಪಾಠ್ಯದೊಡನೆ ನಾಲ್ಕಾರು ಅನುಬಂಧಗಳು ಸೇರಿವೆ. ಹೀಗೆ ಬಹುವಿಧದಿಂದ ಉಪಕಾರಕವಾದ ಈ ಗ್ರಂಥದಿಂದ ನಾನು ಬಹಳಷ್ಟು ಪ್ರಯೋಜನವನ್ನು ಪಡೆದಿದ್ದೇನೆ. ಇದಕ್ಕಾಗಿ ಶ್ರೇಷ್ಠ ವಿದ್ವಾಂಸರಾದ ರಸಿಕಲಾಲ್ ಪರೀಖ್ ಮತ್ತು ರಾಮಚಂದ್ರ ಆಠವಳೆ ಅವರಿಗೆ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ.]
- Studies in Indian Aesthetics and Criticism. Krishnamoorthy, K. DVK Murthy Publishers, Mysore, 1979
To be continued.