ನ ತತ್ರ ರಾಜಾ ರಾಜೇಂದ್ರ ನ ದಂಡೋ ನ ಚ ದಂಡಿಕಾಃ ।
ಸ್ವಧರ್ಮೇಣೈವ ಧರ್ಮ೦ ಚ ತೇ ರಕ್ಷನ್ತಿ ಪರಸ್ಪರಮ್ ।। (ಮಹಾಭಾರತ, ಭೀಷ್ಮಪರ್ವ, ೧೨.೩೬)
ರಾಜೇಂದ್ರ! (ಕೃತಯುಗದಲ್ಲಿ) ರಾಜನೂ ಇಲ್ಲ, ದಂಡಿಸುವನೂ ಇಲ್ಲ, ದಂಡನೆಗೆ ಒಳಪಡುವವನೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ.
ಪೂಜ್ಯ ಡಿ. ವಿ. ಗುಂಡಪ್ಪನವರು ಮಹಾಭಾರತದ ಈ ಶ್ಲೋಕವನ್ನು ತಮ್ಮ ಅಗಾಧ ವಾಙ್ಮಯರಾಶಿಯಲ್ಲಿ ಹಲವು ಕಡೆ ಎರಡು ಮುಖ್ಯ ಅರ್ಥಗಳಲ್ಲಿ ಉದ್ಧರಿಸಿದ್ದಾರೆ. ಮೊದಲನೆಯದು ಆದರ್ಶಪ್ರಾಯವಾಗಿ. ಎರಡನೆಯದು ಎಚ್ಚರಿಕೆಯ ರೂಪದಲ್ಲಿ. ನಿರಂತರ ಜಾಗ್ರತೆಯೆಂಬ ಕಣ್ಗಾವಲೇ ಆದರ್ಶವನ್ನು ಕಾಪಾಡುವ ಮಹತ್ತರ ಶಕ್ತಿ. ರಾಜಸೂಯದ ದಿಗ್ವಿಜಯದಿಂದ ಗ್ರಸ್ತನಾಗಿ ಯುಧಿಷ್ಠಿರನು ಅರ್ಧನಿದ್ರೆಗೆ ಜಾರಿದ ದುಷ್ಫಲವೇ ದ್ರೌಪದಿಯ ವಸ್ತ್ರಾಪಹರಣ, ಪಾಂಡವರ ರಾಜ್ಯಹರಣ, ವನವಾಸ, ಅಜ್ಞಾತವಾಸ.
ಈ ಅಂಶವನ್ನು ಪೂರ್ವಭಿತ್ತಿಯಾಗಿಟ್ಟುಕೊಂಡು ವಿಷಯಪ್ರವೇಶ ಮಾಡಬಹುದು. ಅದಕ್ಕೂ ಮುನ್ನ ಎರಡು ಪ್ರಮುಖ ಸಂಗತಿಗಳನ್ನು ಪೀಠಿಕಾರೂಪದಲ್ಲಿ ನೋಡಬಹುದು.
ಪೀಠಿಕೆ
ಡಿ.ವಿ.ಜಿ. ಅವರ ಅಪಾರ ರಚನಾಕೋಶದಲ್ಲಿ ಇಂದು ಕೇವಲ ಮಂಕುತಿಮ್ಮನ ಕಗ್ಗದಿಂದ ಮಾತ್ರ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ಸಮರ್ಥ ಉತ್ತರಾಧಿಕಾರಿಗಳಾದ ಆದರಣೀಯ ಶ್ರೀ ಎಸ್. ಆರ್. ರಾಮಸ್ವಾಮಿಗಳ ಮಾತಿನಲ್ಲಿ ಹೇಳುವುದಾದರೆ, ಮಂಕುತಿಮ್ಮನ ಕಗ್ಗವೇ ಒಂದು ಪ್ರತ್ಯೇಕ ಕೈಗಾರಿಕೆಯಾಗಿಬಿಟ್ಟಿದೆ. ಕಗ್ಗದ ವ್ಯಾಖ್ಯಾನ-ಅಪವ್ಯಾಖ್ಯಾನ-ದುರ್ವ್ಯಾಖ್ಯಾನಗಳು ಸುಮಾರು ಎರಡು ಪೀಳಿಗೆಗೆ ಉಪಾಧಿ ಕಲ್ಪಿಸಿಬಿಟ್ಟಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಯಾವುದೇ ಅಳತೆಯಲ್ಲಿ ನೋಡಿದರೂ ಮಂಕುತಿಮ್ಮನ ಕಗ್ಗ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ ಇರುವ ತನಕ ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಸಂದೇಹ ಕಾಣುವುದಿಲ್ಲ.
ಆದರೆ ಕಗ್ಗಾತೀತವಾದ ಗುಂಡಪ್ಪನವರನ್ನು ಕನ್ನಡದ ಸುಮಾರು ಎರಡು ತಲೆಮಾರುಗಳು ಉಪೇಕ್ಷಿಸಿರುವುದು ದುರ್ದೈವವೆನ್ನುವುದೂ ಅದೇ ಮಟ್ಟದ ಸತ್ಯ. ಒಂದರ್ಥದಲ್ಲಿ ಅಲ್ಲಿ ನಮಗೆ ನಿಜವಾದ ಗುಂಡಪ್ಪನವರು ಗೋಚರಿಸುತ್ತಾರೆ – ತಮ್ಮ ಬರೆಹಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ, ಆಧ್ಯಾತ್ಮಿಕತೆಯಲ್ಲಿ, ಸತ್ಯನಿಷ್ಠ-ನಿಷ್ಕಳಂಕ ವೈಚಾರಿಕತೆಯಲ್ಲಿ, ಅವರ ಬಸವನಗುಡಿ-ಬೆಂಗಳೂರಿನ ಕಾಲ್ನಡಿಗೆಯ ಸಂಚಾರಗಳಲ್ಲಿ, ಹಾಸ್ಯ-ಹರಟೆಗಳಲ್ಲಿ, ಅಪ್ರಸಿದ್ಧ ಆಶುಕವಿತ್ವಗಳಲ್ಲಿ, ಅಪ್ಪಣ್ಣನ ಹೋಟೆಲ್ನಲ್ಲಿ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಪ್ರಖರ ವಾಗ್ವಾದಗಳಲ್ಲಿ, ದಿವಾನರುಗಳ ಸಂಗಡದಲ್ಲಿ, ಸಂಗೀತಸಭೆಗಳಲ್ಲಿ, ವಿದ್ವಾಂಸರ ಗೋಷ್ಠಿಗಳಲ್ಲಿ, ಕನ್ನಡ ಸಾಹಿತ್ಯಪರಿಷತ್ತಿನ ಇಟ್ಟಿಗೆಗಳಲ್ಲಿ… ಈ ಡಿ.ವಿ.ಜಿ. ನಮಗೆ ಆಪ್ತರಷ್ಟೇ ಅಲ್ಲ, ಅತ್ಯಂತ ಆಸ್ವಾದನೀಯ. ಈ ಡಿ.ವಿ.ಜಿ.ಯವರನ್ನು ಆಸ್ವಾದಿಸಿದವರಿಗೆ ಮಂಕುತಿಮ್ಮ ತನ್ನ ಅಂತರಂಗವನ್ನು ಬಿಟ್ಟುಕೊಡುತ್ತಾನೆ, ನಮಗೆ ಆತ್ಮೀಯನಾಗುತ್ತಾನೆ. ಇದನ್ನು ಕಗ್ಗದ ಮಾತಿನಲ್ಲೇ ಹೇಳಬಹುದು:
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ
ಮಾನವಂ ಪ್ರಣಯದೊಳೊ ವೀರವಿಜಯದೊಳೋ ।
ಏನೊ ಎಂತೋ ಸಮಾಧಾನಗಳನರಸುತಿಹ-
ನಾನಂದವಾತ್ಮಗುಣ - ಮಂಕುತಿಮ್ಮ ॥ ೧೨೪
ಗುಂಡಪ್ಪನವರ ಹಾಸ್ಯಪ್ರಿಯತೆ, ವಿನೋದಶೀಲತೆ, ಸಾಹಿತ್ಯಪ್ರೀತಿ, ಸಂಗೀತ-ಕಲಾಸ್ವಾದ, ಭೋಜನರಾಸಿಕ್ಯ, ಧಾರ್ಮಿಕಶ್ರದ್ಧೆ, ತೀಕ್ಷ್ಣ ಮತಿ, ಅವರ ಅನ್ಯಾದೃಶವಾದ ಭಾವಪ್ರಕಟಣೆ … ಇವೆಲ್ಲ ಒಂದು ಕಡೆಯಾದರೆ ಅವರ ವ್ಯಕ್ತಿತ್ವಕ್ಕೆ ಒಂದು ಮೇರುಸದೃಶವಾದ ಘನತೆಯಿತ್ತು. ಇಂಗ್ಲಿಷ್ ಭಾಷೆಯಲ್ಲಿ ಇದಕ್ಕೆ gravity, dignity, stature ಎಂಬ ಪದಗಳು ಅನ್ವಯವಾಗುತ್ತವೆ. ಈ ಗುಣಗಳನ್ನು ಗುಂಡಪ್ಪನವರೇ ಅಂತರಂಗದಿಂದ, ಸತ್ಸಂಗದಿಂದ, ವ್ಯಾಸಂಗದಿಂದ, ಲೋಕಸಂಗ್ರಹದಿಂದ ರೂಢಿಸಿಕೊಂಡದ್ದು ಎನ್ನುವುದು ನಿರ್ವಿವಾದ. ಸಹಜವಾಗಿಯೇ ಈ ಎಲ್ಲ ಉನ್ನತ ಗುಣಗಳನ್ನು ಅವರ ಇಡೀ ವಾಙ್ಮಯವು ಸಹ ಪ್ರತಿಫಲಿಸುತ್ತದೆ.
ಇದಕ್ಕೆ ಮತ್ತೊಂದು ಸ್ಪಷ್ಟವಾದ ನಿದರ್ಶನವೇ ಪ್ರಸ್ತುತ ಪ್ರಬಂಧದ ವಿಷಯ: ಡಿ.ವಿ. ಗುಂಡಪ್ಪನವರು ದೇಶಿಯ ಸಂಸ್ಥಾನಗಳ ಕುರಿತು ಮಾಡಿದ ತಪಸ್ಸದೃಶವಾದ ಕೃಷಿ, ಆ ಜ್ಞಾನಶಾಖೆಗೆ ಅವರು ನೀಡಿರುವ ಯೋಗದಾನದ ನಿಧಿ.
ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ-ಶಿಕ್ಷಣಪದ್ಧತಿಯು ಔನ್ನತ್ಯದ ಮಾರ್ಗದಲ್ಲಿ ಕ್ರಮಿಸಿದ್ದಿದ್ದರೆ ಡಿ.ವಿ.ಜಿ. ಅವರ ಈ ಇಡೀ ವಾಙ್ಮಯಕ್ಕೆ ಶ್ರೇಣ್ಯನುಸಾರವಾಗಿ ಪ್ರೌಢಶಾಲೆಯಿಂದ ಮೊದಲುಗೊಂಡು Phd ಮಟ್ಟದವರೆಗೂ ಪಾಠ್ಯವಾಗುವ ಸಂಭವವಿತ್ತು. ವ್ಯಾಪಕತೆಯಲ್ಲಿ, ಗುಣದಲ್ಲಿ, ಗಾತ್ರದಲ್ಲಿ, ಸಾತತ್ಯದಲ್ಲಿ ಅರ್ಧಶತಾಬ್ದಕ್ಕೂ ಹೆಚ್ಚು ಕಾಲ ಡಿ.ವಿ.ಜಿ. ತಮ್ಮನ್ನು ತಾವು ಈ ಮಹತ್ಕೃಷಿಗೆ ಸಮರ್ಪಿಸಿಕೊಂಡಿದ್ದರು. ಪರಿಣಾಮ: ಸುಮಾರು ಒಂದು ಸಾವಿರ ಪುಟಗಳಷ್ಟು ಅಮೂಲ್ಯವಾದ ಸಾರಸ್ವತ ಸಾಮಗ್ರಿ ಇಂದು ನಮಗೆ ದೊರಕಿದೆ. ನಮ್ಮ ಕಾಲಕ್ಕೆ ಈ ವಾಙ್ಮಯರಾಶಿ ೨೦ನೇ ಶತಮಾನದ ಭಾರತದ ಇತಿಹಾಸದ ಮೂಲ ಆಕರವೂ ಆಗಿರುವ ಘನತೆ ಅದಕ್ಕೆ ದಕ್ಕಿದೆ.
ಆಧಿಕಾರಿಕ ವಿಷಯತಜ್ಞ
ಡಿ.ವಿ.ಜಿ. ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾಲದಲ್ಲಿಯೂ ಇಡೀ ಭಾರತದಲ್ಲಿ ಅವರನ್ನು ದೇಶಿಯ ಸಂಸ್ಥಾನಗಳ ವಿಷಯತಜ್ಞರೆಂದು – expert – ಗುರುತಿಸಿಕೊಂಡಿದ್ದರು. ಇದಕ್ಕೆ ಒಂದೇ ಒಂದು ಉದಾಹರಣೆ ಕೊಡಬಹುದು.
೧೯೩೦ರಲ್ಲಿ ದೇಶಿಯ ಸಂಸ್ಥಾನಗಳ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಸಂದರ್ಭದಲ್ಲಿ ಎಂ. ಆರ್. ಜಯಕರ್ ಎಂಬ ಪ್ರಭಾವಿ ಕಾಂಗ್ರೆಸ್ ನಾಯಕ ಇಡೀ ದೇಶದಲ್ಲಿರುವ ಅನೇಕ ಗಣ್ಯರಿಗೆ ಪತ್ರ ಬರೆದರು: ದೇಶೀಯ ಸಂಸ್ಥಾನಗಳ ಕುರಿತು ಆಳವಾಗಿ ಅಧ್ಯಯನ ಮಾಡಿರುವವರ ಪಟ್ಟಿ ಕಳುಹಿಸಿ. ಅವರನ್ನು ಭಾಷಣಕಾರರಾಗಿ ಆಹ್ವಾನ ಮಾಡುವ ಯೋಜನೆಯಿದೆ. ಆಗ ಜಯಕರ್ ಅಷ್ಟೇ ಪ್ರಭಾವಿ ನಾಯಕರು - ಪ್ರಖರ ವಾಗ್ಮಿಗಳೂ - ರಾಜಕೀಯ ದುರಂಧರರೂ, ಗುಂಡಪ್ಪನವರ ಶುಭಚಿಂತಕರೂ ಆಗಿದ್ದ ವಿ. ಎಸ್. ಶ್ರೀನಿವಾಸಶಾಸ್ತ್ರಿಗಳು ಈ ರೀತಿ ಉತ್ತರ ಬರೆದರು:
ಆತ್ಮೀಯ ಜಯಕರ್ ಅವರೇ,
ನಾನು ಶ್ರೀ ಡಿ. ವಿ. ಗುಂಡಪ್ಪನವರ ಹೆಸರನ್ನು ಅನುಮೋದಿಸುತ್ತೇನೆ. ಅವರು ಒಳ್ಳೆಯವರು, ಸಾರ್ವಜನಿಕ ವಿಚಾರಗಳ ಗಂಭೀರ ವಿದ್ಯಾರ್ಥಿ. ದೇಶಿಯ ಸಂಸ್ಥಾನಗಳನ್ನು ಕುರಿತು ಅವರಿಗೆ ತಿಳಿದಿಲ್ಲದ ವಿಚಾರ ತಿಳಿಯಲು ಯೋಗ್ಯವಲ್ಲ.
ಡಿ.ವಿ.ಜಿ. ಅವರ ದೇಶಿಯ ಸಂಸ್ಥಾನಗಳ ಕುರಿತಾದ ಪಾಂಡಿತ್ಯ, ಅಧಿಕೃತತೆ ಯಾವ ಮಟ್ಟದ್ದೆಂದರೆ ಸ್ವಾತಂತ್ರ್ಯ ಬಂದ ಬಳಿಕ ಅವರು ಸರ್ದಾರ್ ಪಟೇಲ್ ಹಾಗೂ ವಿ. ಪಿ. ಮೆನನ್ ಅವರನ್ನೇ ನೇರವಾಗಿ ಎದುರುಹಾಕಿಕೊಂಡರು. ತಮ್ಮ Public Affairs ಪತ್ರಿಕೆಯಲ್ಲಿ ಎಡಬಿಡದೆ ಇವರಿಬ್ಬರನ್ನು ಕಟುವಾಗಿ – ಆದರೆ ಸತ್ಯನಿಷ್ಠವಾಗಿ – ಟೀಕೆ ಮಾಡಿ, ಕೊನೆಗೆ ಮೆನನ್ ಅವರು ೧೯೫೪ ನೇ ಇಸವಿಯ ಅದೇ Public Affairsನ ಒಂದು ಸಂಚಿಕೆಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಬೇಕಾಯಿತು.
ವಿಷಯವ್ಯಾಪ್ತಿ
ನಿಜ ಹೇಳಬೇಕೆಂದರೆ ದೇಶಿಯ ಸಂಸ್ಥಾನಗಳ ಕುರಿತಾದ ಗುಂಡಪ್ಪನವರ ವಾಙ್ಮಯ ದೀರ್ಘ, ಆಳ, ವ್ಯಾಪಕವಾದ ಅಧ್ಯಯನಕ್ಕೆ ಯೋಗ್ಯವಾದ ವಿಷಯ. ಈ ಪ್ರಬಂಧದ ಅವಕಾಶದಲ್ಲಿ ಅದರ ಮುಖ್ಯ ಮುಖ್ಯ ಅಂಶಗಳನ್ನ ಸೂಚಿಸಲು ಮಾತ್ರ ಸಾಧ್ಯ. ಒಟ್ಟಾರೆ ಒಂದು ಸ್ಥೂಲವಾದ ಚಿತ್ರ ಕೊಡಬಹುದು: ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸುಮಾರು ೫೫೦-೫೬೨ ದೇಶಿಯ ಸಂಸ್ಥಾನಗಳಿದ್ದವು. ಇವುಗಳನ್ನು ದೊಡ್ಡ, ಮಧ್ಯಮ ಹಾಗೂ ಸಣ್ಣ ಸಂಸ್ಥಾನಗಳೆಂದು ಬ್ರಿಟಿಷರು ವಿಂಗಡಿಸಿದ್ದರು. ಅವುಗಳ ಒಟ್ಟು ವ್ಯಾಪ್ತಿ ಆರು ಲಕ್ಷ ಚದರ ಮೈಲಿ, ಅಂದರೆ ಶೇಖಡ ೩೦ರಷ್ಟು ಭಾರತದ ಭೂಭಾಗ. ಅಲ್ಲಿ ವಾಸಿಸುತ್ತಿದ್ದ ಜನಸಂಖ್ಯೆ ಏಳು ಕೋಟಿ. ಸಹಜವಾಗಿ, ಒಂದೊಂದು ದೇಶಿಯ ಸಂಸ್ಥಾನಕ್ಕೂ ಅದರದೇ ಆದ ಇತಿಹಾಸ, ರಾಜಕೀಯ-ಆಡಳಿತ-ಸಾಮಾಜಿಕ ವ್ಯವಸ್ಥೆ, ಆಚಾರ, ಪದ್ಧತಿ, ಹಬ್ಬ, ಕಾನೂನು-ಕಟ್ಟಲೆಗಳು, ಪರಂಪರೆಗಳು … ಇತ್ಯಾದಿ ಅನೂಚಾನವಾಗಿ ಬಂದಿದ್ದವು.
ಈ ಕಾಲಕ್ಕೆ ಬೆರಗು ಮೂಡಿಸುವ ಸಂಗತಿಯೆಂದರೆ – ಗುಂಡಪ್ಪನವರಿಗೆ ಈ ಅಷ್ಟೂ ದೇಶಿಯ ಸಂಸ್ಥಾನಗಳ ಇತಿಹಾಸ-ಆಡಳಿತ ವ್ಯವಸ್ಥೆಗಳ, ಅವುಗಳ ಅನೇಕ ಸಮಸ್ಯೆಗಳ ಕುರಿತಾದ ತಲಸ್ಪರ್ಶಿ ಜ್ಞಾನವಿತ್ತು, ಅಧ್ಯಯನವಿತ್ತು, ಜೊತೆಗೆ, ಅದನ್ನು ಹೇಗೆ ಸಂದರ್ಭೋಚಿತವಾಗಿ ಪ್ರತಿಪಾದಿಸಿಬೇಕು ಎನ್ನುವ ವಿವೇಕ-ಧೈರ್ಯಗಳೂ ಇದ್ದವು. ಮಣಿಪುರದ ರಾಜಮನೆತನದ ಅಂತಃಕಲಹದಿಂದ ಆರಂಭಗೊಂಡು ಮೈಸೂರಿನ ಅರಸರ ಅಂತರಂಗಚೇಷ್ಟೆಗಳ ಸೂಕ್ಷ್ಮ ಪರಿಚಯವಿತ್ತು. ಈ ವ್ಯಾಪಕತೆಯ ಜ್ಞಾನ ಆ ಕಾಲದ ಯಾವ ಪತ್ರಿಕಾಕರ್ತನಿಗಾಗಲಿ, ನುರಿತ ರಾಜಕೀಯ ಪಟುಗಾಗಲಿ, ಅಷ್ಟೇಕೆ, ಉನ್ನತ ಬ್ರಿಟಿಷ್ ಆಡಳಿತಾಧಿಕಾರಿಗಾಗಲಿ ಇರಲಿಲ್ಲವೆಂದು ನನ್ನ ಅಧ್ಯಯನದ ಮಿತಿಯೊಳಗೆ ಹೇಳಬಲ್ಲೆ. ಹೊಸ ಆಧಾರದ ಬೆಳಕಿನಲ್ಲಿ ಈ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ.
ಆಕರಗಳು
ದೇಶಿಯ ಸಂಸ್ಥಾನಗಳ ವಿಷಯದಲ್ಲಿ ಡಿ.ವಿ.ಜಿ. ಯವರ ವಾಙ್ಮಯವು ನಮಗೆ ಮುಖ್ಯವಾಗಿ ಸಿಗುವುದು ಇಂಗ್ಲಿಷ್ ಭಾಷೆಯಲ್ಲಿ. ಅದು ಹರಡಿಕೊಂಡಿರುವುದು ತಮ್ಮ ಪತ್ರಿಕೋದ್ಯಮಜೀವನದ ಆರಂಭಕಾಲದಲ್ಲಿ ಡಿ.ವಿ.ಜಿ. ಪ್ರಕಟಿಸುತ್ತಿದ್ದ ಕರ್ನಾಟಕ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ. ಇದನ್ನು ಹೊರತುಪಡಿಸಿದರೆ ಕಾಲಕಾಲಕ್ಕೆ ಅವರು ಪ್ರಕಟಿಸಿದ Memorialಗಳಲ್ಲಿ, ಇತರ ಪತ್ರಿಕೆಗಳಿಗೆ ಬರೆದ ಲೇಖನಗಳಲ್ಲಿ, ಸ್ವತಂತ್ರ monographಗಳು, ಭಾಷಣಗಳ ಪ್ರತಿಗಳು, ಜ್ಞಾಪಕಚಿತ್ರಶಾಲೆಯ ಹಲವು ಸಂಪುಟಗಳು (ಇಲ್ಲಿ ದೇಶೀಯ ಸಂಸ್ಥಾನಗಳ ವಿಷಯ ಆನುಷಂಗಿಕವಾಗಿ ಬರುತ್ತದೆ), ಹಾಗೂ ಅವರ ಉದ್ಗ್ರಂಥಗಳಾದ ರಾಜ್ಯಶಾಸ್ತ್ರ ಮತ್ತು ರಾಜ್ಯಾಂಗತತ್ತ್ವಗಳು. ಆದರೆ ಈ ಎಲ್ಲದಕ್ಕೂ ಕಿರೀಟವಿಟ್ಟಂತೆ ಗುಂಡಪ್ಪನವರು ದೇಶಿಯ ಸಂಸ್ಥಾನಗಳು ಹಾಗೂ ಸ್ವತಂತ್ರ ಭಾರತದ ಸರ್ಕಾರದ – Indian Union – ನಡುವೆ ಯಾವ ರೀತಿಯಾದ ಸಂಬಂಧ-ಸಾಮರಸ್ಯ-ಸೌಹಾರ್ದಗಳಿರಬೇಕು ಎನ್ನುವುದಕ್ಕೆ ಪ್ರತ್ಯೇಕವಾದ ಸಂವಿಧಾನದ ಕರಡನ್ನೇ ಸಿದ್ಧಪಡಿಸಿದ್ದಾರೆ.
ನಮ್ಮ ಕಾಲದಲ್ಲಿ ಆಸಕ್ತರಿಗೆ ಈ ವಿಷಯದಲ್ಲಿ ಡಿ.ವಿ.ಜಿ. ಅವರ ಕೃಷಿಯ ಪರಿಚಯ ಮಾಡಿಕೊಡಲು ಪೂಜ್ಯ ರಾಮಸ್ವಾಮಿಗಳು ಹಾಗೂ ಶ್ರೀ ಶಶಿಕಿರಣ್ ಅವರು ನಾಲ್ಕೈದು ವರ್ಷಗಳಿಂದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ನಿರಂತರವಾಗಿ ಹೊರತರುತ್ತಿರುವ English Writings of D. V. Gundappa ಎಂಬ ಒಂಬತ್ತು ಸಂಪುಟಗಳನ್ನ ಪರಿಶೀಲಿಸಬಹುದು.
ಪ್ರವೇಶ-ಪೂರ್ವೇತಿಹಾಸ
ಈ ಅಗಾಧವಾದ ವಾಙ್ಮಯದ ಒಟ್ಟಿಲನ್ನು ಯಾವ ರೀತಿ ಪ್ರವೇಶ ಮಾಡಬೇಕೆನ್ನುವ (ಇಂಗ್ಲಿಷ್ ಭಾಷೆಯ “approach” ಎನ್ನಬಹುದು) ಪ್ರಶ್ನೆ ಸಹಜವಾಗಿ ಏಳುತ್ತದೆ. ಅದಕ್ಕೆ ಸುಲಭವಾದ ಉತ್ತರ: ದೇಶಿಯ ಸಂಸ್ಥಾನಗಳನ್ನು ಕುರಿತ ಡಿ.ವಿ.ಜಿ.ಯವರ ಬರವಣಿಗೆಯನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ೧೮-೧೯ನೇ ಶತಮಾನದ ಭಾರತವನ್ನು ಅರ್ಥಮಾಡಿಕೊಳ್ಳಬೇಕು. ಮುಖ್ಯವಾಗಿ ಅದರ ರಾಜಕೀಯ ಸ್ಥಿತಿಗತಿಗಳ ಸ್ಥೂಲವಾದ ಅರಿವು ಇದ್ದರೆ ಹೆಚ್ಚಿನ ಅನುಕೂಲವಾಗುತ್ತದೆ. ಇನ್ನೂ ಬೊಟ್ಟು ಮಾಡಿ ಹೇಳಬೇಕೆಂದರೆ, ಆ ಕಾಲದಲ್ಲಿ ನಮ್ಮ ರಾಜಮಹಾರಾಜರು, ನವಾಬರು, ನಿಜಾಮರು ಮಾಡಿಕೊಂಡ ಅವಘಡಗಳ ಪರಂಪರೆಯೇ ಡಿ.ವಿ.ಜಿ. ಅವರ ಚಿಂತನೆ-ವಿಮರ್ಶನಗಳ ಬುನಾದಿ ಎಂದು ಒಂದರ್ಥದಲ್ಲಿ ಹೇಳಬಹುದು. ೧೮-೧೯ನೇ ಶತಮಾನದ ಭಾರತದ ಸ್ಪಷ್ಟ ಅರಿವು ಇಲ್ಲದಿರುವುದೇ ನಮ್ಮ ಕಾಲದ ಭಾರತದ ಅನೇಕ ಸಮಸ್ಯೆಗಳ ಮೂಲವೆಂದೂ ಹೇಳಬಹುದು.
* * *
ನಮಗೆಲ್ಲ ಗೊತ್ತಿರುವಂತೆ ೧೭೫೭ ಪಲಾಶಿ ಸಂಗ್ರಾಮದ (Battle of Plassey) ಅನಂತರ ಭಾರತದಲ್ಲಿ ಕ್ರಮಕ್ರಮವಾಗಿ ಬ್ರಿಟಿಷರ ಮೇಲ್ಗೈ ಆಯಿತು. ಅಲ್ಲಿಂದ ಸರಿಯಾಗಿ ಒಂದು ಶತಮಾನದಲ್ಲಿ ೧೮೫೭ರ ಸ್ವಾತಂತ್ರ್ಯದ ಪ್ರಥಮ ಸಂಗ್ರಾಮವಾಯಿತು. ಅಂದರೆ ಒಂದೇ ಶತಮಾನದ ಒಳಗೆ ಅಪ್ರತಿಮ ಸಮ್ರಾಟರು, ಸಾಮ್ರಾಜ್ಯಗಳು; ಮುಖ್ಯವವಾಗಿ ಮರಾಠರು, ಸಿಖ್ಖರು, ಅಷ್ಟು ಶೀಘ್ರವೇಗದಲ್ಲಿ ಪತನಗೊಂಡು, ಅವರ ಸಾಮ್ರಾಜ್ಯಗಳು ನಿರ್ನಾಮಗೊಂಡು ಬ್ರಿಟಿಷರ ಅಡಿಯಾಳಾದವು. ಈ ಅಧೋಗತಿಯನ್ನು ಆಡುಮಾತಿನಲ್ಲಿ ಹೇಳುವುದಾದರೆ, ರಾಜ್ಯವಿದೆ, ರಾಜ ಇದ್ದಾನೆ, ಸೈನ್ಯವಿದೆ, ಆಡಳಿತದ ಯಂತ್ರವಿದೆ, ಬೊಕ್ಕಸ ಇದೆ – ಆದರೆ ಇವೆಲ್ಲ ಪರಾಧೀನ. ಅರ್ಥಾತ್, ಈ ಕಾಲವೇ ಭಾರತದ ಇತಿಹಾಸದ ನಿರ್ಣಾಯಕ ಘಟ್ಟ. ಇದನ್ನು ಯುಗಾಂತ್ಯವೆಂದು ಕರೆದರೆ ಹೆಚ್ಚು ಸೂಕ್ತ. ಏಕೆಂದರೆ ಆ ಯುಗದ ಪೂರ್ವದಲ್ಲಿದ್ದ ಭಾರತ ಸಂಪೂರ್ಣವಾಗಿ ನಾಶವಾಯಿತು, ಅಲ್ಲಿಂದ ಮುಂದೆ ಭಾರತೀಯರಿಗೆ ಆ ಭಾರತವು ಅಜ್ಞಾತವಾಯಿತು. ಇದನ್ನೇ ಡಿ.ವಿ.ಜಿ. ಕಟುವಾಗಿ ಹೀಗೆ ಹೇಳಿದ್ದಾರೆ:
“ನಮ್ಮ ಸಂಸ್ಥಾನಗಳು ತಮ್ಮ ತಮ್ಮ ಮರಣಶಾಸನಕ್ಕೆ ಮೊಟ್ಟಮೊದಲು ಸಹಿ ಹಾಕಿದ್ದು ಬ್ರಿಟಿಷರಿಗೆ ಶರಣಾದ ಸಂದರ್ಭದಲ್ಲಿ. ಯಾವ ರಾಜ್ಯಕ್ಕೆ ತನ್ನದೇ ಆದ ಸೈನ್ಯವಿಲ್ಲವೋ, ಯಾವ ರಾಜ್ಯಕ್ಕೆ ತನ್ನನ್ನು ರಕ್ಷಿಸುವ ರಾಜನಿಲ್ಲವೋ ಅಂಥ ರಾಜ್ಯವು ಯಾರ ಬಳಿ ಸೈನ್ಯವಿದೆಯೋ ಅವನ ಅಡಿಯಾಳಾಗುತ್ತದೆ.”
ಈ ಇತಿಹಾಸದ ಕಹಿ ಪಾಠ ಸ್ಪಷ್ಟವಾಗಿದೆ: ನಮ್ಮ ರಾಜಮಹಾರಾಜರು ಪಾಳೇಗಾರರು, ನವಾಬ-ನಿಜಾಮರು ರೊಟ್ಟಿಯನ್ನು ತುಂಡುತುಂಡಾಗಿ ಬ್ರಿಟಿಷರಿಗೆ ಕೊಟ್ಟು ಕೊನೆಗೆ ತಮ್ಮ ರಾಜ್ಯದಲ್ಲಿ ತಾವೇ ಗುಲಾಮರಾದರು. ಸಿಂಹಾಸನದ ಮೇಲೆ ಕುಳಿತ ದಾಸಚಕ್ರವರ್ತಿಗಳಾದರು.
To be continued.