ಅಪೌರುಷೇಯವೆನಿಸಿದ ವೇದವಾಙ್ಮಯದಲ್ಲಿ ಪ್ರಾಸಬದ್ಧವಾದ ಅನೇಕ ಪಂಕ್ತಿಗಳಿವೆ. ಆದಿಕವಿ ವಾಲ್ಮೀಕಿಯಲ್ಲಿ ಪ್ರಾಸಾನುಪ್ರಾಸಗಳ ಸಮೃದ್ಧಿಯನ್ನು ಕಾಣಬಹುದು. ಅಷ್ಟೇಕೆ, ಭಾರತೀಯ ಭಾಷೆಗಳೆಲ್ಲ ಸಹಜವಾಗಿ ಪ್ರಾಸಾನುಪ್ರಾಸಗಳಿಗೆ ಒಗ್ಗಿಬಂದಿವೆ. ನಮ್ಮ ಅನುದಿನದ ಸಂಭಾಷಣೆಗಳಲ್ಲಿ, ಗಾದೆಮಾತುಗಳಲ್ಲಿ, ಜಾನಪದರ ಗೇಯಗಳಲ್ಲಿ, ನಾಟಕ-ಸಿನೆಮಾಗಳ ಹಾಡುಗಳಲ್ಲಿ ಪ್ರಾಸಾನುಪ್ರಾಸಗಳದೇ ಸಾಮ್ರಾಜ್ಯ. ಪ್ರಾಸದ ಮೂಲಕ ಎಂಥ ಗಹನ ವಿಚಾರವನ್ನೂ ಮನಸ್ಸಿಗೆ ಹತ್ತಿರ ಮಾಡಬಹುದು.
ರವೀಂದ್ರನಾಥ ಠಾಕೂರರು ಹೇಳುವಂತೆ ಉಪಮೆಯು ಕಣ್ಣಿಗೊಂದು ಚಿತ್ರವನ್ನು ಕಟ್ಟಿಕೊಟ್ಟರೆ ಪ್ರಾಸವು ಕಿವಿಗೊಂದು ಇಂಪನ್ನು ತುಂಬಿಕೊಡುತ್ತದೆ. ಈ ಮಹತ್ತ್ವದ ಅಂಶವನ್ನು ಮತ್ತಷ್ಟು ವಿಸ್ತರಿಸಿ ಹೇಳುವುದಾದರೆ, ಅರ್ಥಾಲಂಕಾರಗಳ ಸಾರ್ಥಕ್ಯವು ತೋರುವುದು ಅವು ಕಟ್ಟಿಕೊಡುವ ದೃಶ್ಯಪ್ರಪಂಚದಿಂದಲೇ; ಇನ್ನು ಶಬ್ದಾಲಂಕಾರಗಳ ಸಾರ್ಥಕ್ಯವು ಸಿದ್ಧಿಸುವುದು ಅವುಗಳಿಂದ ಉನ್ಮೀಲಿತವಾಗುವ ಶ್ರವ್ಯಪ್ರಂಪಚದಿಂದಲೇ. ಹೀಗೆ ಶಬ್ದಾರ್ಥಮಯವಾದ ಕಾವ್ಯವು ಕಣ್ಣು-ಕಿವಿಗಳಿಗೆ ಹಬ್ಬವನ್ನೀಯುತ್ತದೆ.
ಐರೋಪ್ಯ ಭಾಷೆಗಳಿಗೆ ಹೋಲಿಸಿದರೆ ನಮ್ಮ ನುಡಿಗಳಲ್ಲಿ ಪ್ರಾಸಾನುಪ್ರಾಸಗಳ ಬಾಹುಳ್ಯ-ಸೌಲಭ್ಯಗಳು ಮಿಗಿಲಷ್ಟೆ. ಈ ಕಾರಣದಿಂದಲೇ ಶಬ್ದಾಲಂಕಾರಗಳ ವಿವೇಚನೆ ಭರತಮುನಿಯ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು ಸಾಗಿಬಂದಿದೆ. ದಂಡಿ, ರುದ್ರಟ, ಭೋಜ, ಮಮ್ಮಟ, ಹೇಮಚಂದ್ರ ಮುಂತಾದ ಆಲಂಕಾರಿಕರು ಈ ವಿವೇಚನೆಯನ್ನು ವ್ಯಾಪಕವಾಗಿ ಮುಂದುವರಿಸಿದ್ದಾರೆ. ಈ ಜಾಡನ್ನೇ ಹಿಡಿದು ಕನ್ನಡದ ಕವಿರಾಜಮಾರ್ಗ, ಕಾವ್ಯಾವಲೋಕನ, ಮಾಧವಾಲಂಕಾರ, ಉದಯಾದಿತ್ಯಾಲಂಕಾರ ಮೊದಲಾದ ಗ್ರಂಥಗಳು ಸಮರ್ಥವಾಗಿ ನಡೆದಿವೆ. ಇಂಥ ಪ್ರವೃತ್ತಿಯನ್ನು ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಮಿಕ್ಕೆಲ್ಲ ಭಾರತೀಯ ಭಾಷೆಗಳಲ್ಲಿಯೂ ಕಾಣಬಹುದು.
ಮಮ್ಮಟನು ಅನುಪ್ರಾಸವನ್ನು ಹೀಗೆ ನಿರ್ವಚಿಸುತ್ತಾನೆ:
ಸ್ವರವೈಸಾದೃಶ್ಯೇಽಪಿ ವ್ಯಂಜನಸಾಮ್ಯಂ ವರ್ಣಸಾಮ್ಯಮ್ | ರಸಾದ್ಯನುಗತಃ ಪ್ರಕೃಷ್ಟೋ ನ್ಯಾಸೋಽನುಪ್ರಾಸಃ || (ಕಾವ್ಯಪ್ರಕಾಶ, ೯.೨ರ ಮೇಲಣ ವೃತ್ತಿ)
ಇದನ್ನು ಕೇವಲ ಪ್ರಾಸಕ್ಕೆ ಅನ್ವಯಿಸಿಕೊಂಡರೆ “ಪ್ರಕೃಷ್ಟೋ ನ್ಯಾಸಃ” ಎಂಬ ತತ್ತ್ವ ಸಿದ್ಧಿಸುತ್ತದೆ. ಈ ಪ್ರಕಾರ ಅತಿಶಯವಾದ ರೀತಿಯಲ್ಲಿ ವರ್ಣಗಳನ್ನು ಗೊತ್ತಾದ ಎಡೆಯಲ್ಲಿ ಇರಿಸುವುದೇ ಪ್ರಾಸವೆಂದು ತಾತ್ಪರ್ಯವಾಗುತ್ತದೆ.
ಪ್ರಾಸವು ಶಬ್ದಾಲಂಕಾರವಾಗಿ ಪ್ರಸಿದ್ಧ. ಛಂದಸ್ಸು ಕೂಡ ಮೂಲತಃ ಶಬ್ದಾಲಂಕಾರವೇ. ಈ ಎರಡು ಅಂಶಗಳು ಅಲ್ಲಲ್ಲಿ ಪರಸ್ಪರ ಸಂಬದ್ಧವಾಗಿವೆ. ಇದನ್ನು ವರ್ಣವೃತ್ತಗಳಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಲಾಗುವುದಿಲ್ಲ. ಪ್ರಾಸದ ಮೂಲಕ ಮಾತ್ರಾಗಣಗಳೊಳಗಿನ ಗುರು-ಲಘುವಿನ್ಯಾಸವು ಕೆಲಮಟ್ಟಿಗೆ ನಿಯಂತ್ರಿತವಾಗುವುದನ್ನು ಮಾತ್ರಾಜಾತಿಗಳಲ್ಲಿ ಸ್ಫುಟವಾಗಿ ಕಾಣಬಹುದು. ಹೀಗೆ ಮಾತ್ರಾಜಾತಿ ಮತ್ತು ಕರ್ಷಣಪ್ರಧಾನವಾದ ಛಂದಸ್ಸುಗಳಲ್ಲಿ ಪ್ರಾಸಕ್ಕೆ ಛಂದೋವ್ಯಾವರ್ತಕವಾದ ಯೋಗ್ಯತೆ ಅಷ್ಟಿಷ್ಟು ಮೈಗೂಡುತ್ತದೆ. ಹೀಗಾಗಿಯೇ ಛಂದೋವಿವೇಚನೆಯಲ್ಲಿ ಪ್ರಾಸವನ್ನು ಪರಾಮರ್ಶಿಸುವುದು ಅನಿವಾರ್ಯವೆನಿಸುತ್ತದೆ. ಈ ಬಗೆಯ ಕೆಲಸವನ್ನು ಸೇಡಿಯಾಪು ಕೃಷ್ಣ ಭಟ್ಟರು ಮಾಡಿರುವುದು ಸ್ಮರಣೀಯ.[1] ಇವರಂತಲ್ಲದೆ ಸಾಕಷ್ಟು ಮಂದಿ ಕೇವಲ ಐತಿಹಾಸಿಕವಾದ ನೆಲೆ-ಹಿನ್ನೆಲೆಗಳಲ್ಲಿ ಪ್ರಾಸದ ವಿವೇಚನೆಯನ್ನು ನಡಸಿದ್ದಾರೆ.
ನಮ್ಮ ಲಾಕ್ಷಣಿಕರು ವಿಸ್ತರಿಸುವ ಪ್ರಾಸ-ಅನುಪ್ರಾಸಗಳ ಪ್ರಭೇದಗಳು ಬಹಳಷ್ಟು. ಅವುಗಳ ಪರಿಚಯ ಮತ್ತು ವಿಮರ್ಶೆ ಸದ್ಯದ ಬರೆಹದ ವ್ಯಾಪ್ತಿಗೆ ಮೀರಿದ್ದು.[2] ಆ ವಿಸ್ತರ-ವೈವಿಧ್ಯಗಳು ಸಹಜಕವಿಗಳಿಗೆ ಅನಪೇಕ್ಷಿತ ಕೂಡ. ಹೀಗಾಗಿ ಕಾವ್ಯಗಳಲ್ಲಿ ಹೆಚ್ಚಾಗಿ ತೋರಿಕೊಳ್ಳುವ ಆದಿಪ್ರಾಸ, ಅಂತ್ಯಪ್ರಾಸ ಮತ್ತು ಅನುಪ್ರಾಸಗಳೆಂಬ ಮೂರೇ ಪ್ರಕಾರಗಳನ್ನು ಸ್ವಲ್ಪ ಚರ್ಚಿಸಬಹುದು.
ಆದಿಪ್ರಾಸ
ಪದ್ಯಗಳ ಪ್ರತಿಯೊಂದು ಪಾದದ ಆದಿಯಲ್ಲಿಯೂ ಬರುವ ಅಕ್ಷರಸಾಮ್ಯವನ್ನು ಆದಿಪ್ರಾಸವೆಂದು ಸ್ಥೂಲವಾಗಿ ಹೇಳಬಹುದು. ಉದಾಹರಣೆಗೆ:
ಚಳದಳಕಂ ಹರ್ಷೋದ್ಗತ-
ಪುಳಕಂ ನಖಮುಖವಿದಾರಿತೋಗ್ರೇಭಶಿರಃ-
ಫಳಕಂ ಮೃಗತಿಳಕಂ ಪಿಂ-
ಗಳಕಂ ಪೋಗೆಂದು ಕಳುಪಿದಂ ದವನಕನಂ || (ಕರ್ಣಾಟಕಪಂಚತಂತ್ರ, ೨.೯೮)
ವಿರಹದೆ ರಾಮಬಾಣದುಟಜಾಂಗಣರಮ್ಯಶಿಲಾತಲಂಗಳೊಳ್
ಬರೆಯೆ ವಿಚಿತ್ರಮಾಗೆಸೆವ ಸೀತೆಯ ಚಿತ್ರಮನಿನ್ನುಮಲ್ಲಿ ತ-
ನ್ನರಸನ ನಿಂದ ತಾಣಮನೆ ನೋಡಲಿದಂ ಪೊಱಮಟ್ಟಳಾಗಳು-
ರ್ವರೆಯನಿಳಾತನೂಜೆಯೆನುತಂತದನೀಕ್ಷಿಸುವರ್ ವನೇಚರರ್ || (ಕರ್ಣಾಟಕಕಾದಂಬರಿ, ೧.೯೭)
ಸ್ವೇದಜಲದಲಿ ಮಿಂದು ಪುನರಪಿ
ಖೇದಪಂಕದೊಳದ್ದು ಬಹಳ ವಿ-
ಷಾದರಜದಲಿ ಹೊರಳಿ ಭಯರಸನದಿಯೊಳೀಸಾಡಿ |
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧಭಾವನ-
ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ || (ಕರ್ಣಾಟಭಾರತಕಥಾಮಂಜರಿ, ೩.೬.೫೨)
ಸುತ್ತಣ ದೇಶದರಸಿಯರ ಬೈತಲೆ-
ಗುತ್ತಮಭೂಷಣವೆನಿಪ |
ಮುತ್ತಿನ ಸರವೆನ್ನ ರನ್ನವಾವುಗೆಗಳ
ಸುತ್ತ ಲಂಬಣಮಾದುದಿಂದು || (ಹದಿಬದೆಯ ಧರ್ಮ, ೧.೪೨)
ಇಲ್ಲಿ ಕಂದ, ವೃತ್ತ, ಷಟ್ಪದಿ ಮತ್ತು ಸಾಂಗತ್ಯಗಳಿಗೆ ಪ್ರಾತಿನಿಧಿಕವಾದ ಒಂದೊಂದು ಮಾದರಿಗಳನ್ನು ಕಾಣಬಹುದು. ಇವನ್ನು ಕಂಡಾಗ ಆದಿಪ್ರಾಸದ ಸಾಮಾನ್ಯ ಸ್ವರೂಪ ಮನದಟ್ಟಾಗದಿರದು. ‘ಕನ್ನಡ ಕೈಪಿಡಿ’ಯಲ್ಲಿ “ಪದ್ಯದ ಪ್ರತಿಪಾದದಲ್ಲಿಯೂ ಆದಿಯಲ್ಲಿ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು ಪ್ರಾಸದ ಸಾಮಾನ್ಯಲಕ್ಷಣವು” ಎಂದಿದೆ (ಪು. ೭೩). ಇದು ತಾಂತ್ರಿಕವಾಗಿ ಸರಿಯಾದ ಲಕ್ಷಣ ಹೌದಾದರೂ ತಾತ್ತ್ವಿಕವಾದ ಅಂಶಗಳಿಲ್ಲಿ ಪ್ರಸ್ಫುಟವಾಗಿಲ್ಲ. ವಸ್ತುತಃ ಇಲ್ಲಿ ವ್ಯಂಜನದ ಸಾಮ್ಯವೊಂದೇ ಅಲ್ಲದೆ ಅದರ ಹಿಂದಿನ ಸ್ವರದ ಹ್ರಸ್ವತ್ವ-ದೀರ್ಘತ್ವಗಳ ಐಕರೂಪ್ಯವೂ ಇರಬೇಕು. ಮಾತ್ರಾಜಾತಿ ಮತ್ತು ಕರ್ಷಣಜಾತಿಗಳಲ್ಲಿ ಈ ಅಂಶ ವಿಶೇಷವಾಗಿ ಆವಧೇಯ. ವರ್ಣವೃತ್ತಗಳಲ್ಲಿ ಅವುಗಳ ಗುರು-ಲಘುವಿನ್ಯಾಸದ ನೈಯತ್ಯದ ಕಾರಣ ಈ ಎಚ್ಚರಿಕೆ ಬೇಕಿಲ್ಲ. ಮಾತ್ರಾ-ಕರ್ಷಣಜಾತಿಗಳಲ್ಲಿ ಕೂಡ ಪ್ರಾಸಸ್ಥಾನದ ವ್ಯಂಜನವು ಸಂಯುಕ್ತಾಕ್ಷರವಾಗಿದ್ದಲ್ಲಿ ಪೂರ್ವೋಕ್ತ ನಿಯಮ ಐಚ್ಛಿಕವೆನಿಸುತ್ತದೆ.
ಇನ್ನುಂ ನಿಜಮಿಥ್ಯಾಜ್ಞಾ-
ನೋನ್ನತಿಯಂ ಬಿಸುಟು ನಂಬು ಸಮ್ಯಕ್ತ್ವಮನಿಂ-
ತೆನ್ನನೆ ಕಂಡಿಂ ತಿಳಿಯೆನೆ
ಸನ್ನುತಸಮ್ಯಕ್ತ್ವರತ್ನಮಂ ಕೈಗೊಂಡಂ|| (ಆದಿಪುರಾಣ, ೫.೯೬)
ಮೇಲಣ ಉದಾಹರಣೆಯಲ್ಲಿ ಎರಡನೆಯ ಪಾದದ ಮೊದಲಿಗೆ ದೀರ್ಘಸ್ವರವು ಬಂದಿದೆಯಾದರೂ ಉಳಿದಂತೆ ಮೂರು ಪಾದಗಳಲ್ಲಿಯೂ ಹ್ರಸ್ವಸ್ವರವೇ ಇದೆ. ಆದರೆ ಪ್ರಾಸದ ಪರಿಶುದ್ಧಿಗೆ ತೊಂದರೆಯಾಗಿಲ್ಲ. ಅಂದರೆ, ಪ್ರಾಸಸ್ಥಾನದಲ್ಲಿ ಸಂಯುಕ್ತಾಕ್ಷರವು ಬಂದಾಗ ಅದರ ಹಿಂದಿನ ಅಕ್ಷರ ತನ್ನಂತೆ ತಾನೇ ಗುರುವಾಗುವ ಕಾರಣ ಆ ಅಕ್ಷರಕ್ಕೆ ಸೇರಿದ ಸ್ವರದ ಹ್ರಸ್ವತ್ವ-ದೀರ್ಘತ್ವಗಳ ಪ್ರಮೇಯವೇ ಇಲ್ಲವಾಗುತ್ತದೆ. ಪದ್ಯದ ಮೊದಲ ಎರಡು ವರ್ಣಗಳು ಲಘುಗಳಾದಾಗ ಈ ತರ್ಕವನ್ನು ಅನ್ವಯಿಸಲು ಸಾಧ್ಯವಿಲ್ಲ. ಅಂದರೆ, ಆದಿಪ್ರಾಸವೆಂಬುದು ಕೇವಲ ವರ್ಣಸಾಮ್ಯವಾಗದೆ ಪ್ರತಿಪಾದದ ಮೊದಲ ಎರಡರಿಂದ ಮೂರು ಮಾತ್ರೆಗಳವರೆಗಿನ ಗುರು-ಲಘುಗಳ ಸಮತ್ವವೂ ಆಗಿರಬೇಕು. ವಸ್ತುತಃ ಪ್ರಾಸವೆಂಬುದರಲ್ಲಿಯೇ ಇಂಥ ಗುರು-ಲಘುಸಾಮ್ಯ ವಿವಕ್ಷಿತವೆಂಬುದನ್ನು ನಾವು ಈ ಮುನ್ನವೇ ಕಂಡ ಕಾರಣ ಆ ನಿಯಮವನ್ನಿಲ್ಲಿ ನೆನಪಿಸಿಕೊಳ್ಳಬೇಕಿದೆ, ಅಷ್ಟೆ.
To be continued.
[1] ನೋಡಿ: ಸೇಡಿಯಾಪು ಛಂದಸ್ಸಂಪುಟ, ಪು. ೨೩೩-೨೩೬ (ಅಡಿಟಿಪ್ಪಣಿ)
[2] ಕವಿರಾಜಮಾರ್ಗವು ತಿಳಿಸುವ ವಿನುತ, ಶಾಂತೋಪನತ, ವರ್ಗೋದಿತ ಮೊದಲಾದ ಪ್ರಾಸಗಳಾಗಲಿ (೨.೩೧-೪೪), ಛಂದೋಗ್ರಂಥಕಾರರು ಒಕ್ಕಣಿಸುವ ಗಜ, ಹಯ, ಸಿಂಹ, ವೃಷಭ ಮೊದಲಾದ ಹಲವು ಆದಿಪ್ರಾಸಪ್ರಭೇದಗಳಾಗಲಿ ಸದ್ಯಕ್ಕೆ ವಿವೇಚಿಸಲ್ಪಡುವುದಿಲ್ಲ ಎಂಬುದು ಇಲ್ಲಿಯ ತಾತ್ಪರ್ಯ.