ಘನಪಾಠಿಗಳು ಶಾಲೆಯ ಮುಖವನ್ನು ಕಂಡವರಲ್ಲ. ಇಂಗ್ಲಿಷನ್ನು ಕಲಿತವರಲ್ಲ. ಅವರು ಅಪ್ಪಟ ಗುರುಕುಲದ ವಿದ್ಯಾರ್ಥಿ. ಅವರ ತಾತನವರು ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಅವರಿಗೊಬ್ಬ ತಮ್ಮ. ಆತ ಮಾತ್ರ ವೇದ-ಶಾಸ್ತ್ರಗಳನ್ನು ಬಲ್ಲವರಾಗಿದ್ದರು; ವೈದಿಕವೃತ್ತಿಯಲ್ಲಿಯೇ ಉಳಿದಿದ್ದರು. ಅವರ ಹೆಸರು ಕೂಡ ರಾಜಗೋಪಾಲಶರ್ಮಾ ಎಂದೇ. ನ್ಯಾಯಮೂರ್ತಿಗಳಾಗಿದ್ದ ಅಣ್ಣ ಚಿಕ್ಕ ವಯಸ್ಸಿಗೇ ತೀರಿಕೊಂಡರು. ತಬ್ಬಲಿಗಳಾದ ಅವರ ಮಕ್ಕಳನ್ನು ತಮ್ಮ ರಾಜಗೋಪಾಲಶರ್ಮರೇ ಸಾಕಿ ಸಲಹಿದರು. ಅವರಿಗೆಲ್ಲ ವೇದಾಭ್ಯಾಸ ಮಾಡಿಸಿದರೂ ಲೌಕಿಕವಿದ್ಯೆಗಳಲ್ಲಿಯೇ ಮುಂದುವರಿಸಿ ಕೆಲಸ-ಬೊಗಸೆ ಕಲ್ಪಿಸಿದರು. ತಮ್ಮ ಮಕ್ಕಳಿಗೆ ಮಾತ್ರ ತಮ್ಮ ಹಾಗೆ ಅಪ್ಪಟ ವೈದಿಕವಿದ್ಯೆಗಳನ್ನು ಕಲಿಸಿ ಅದರಲ್ಲಿಯೇ ತೊಡಗಿಸಿದರು.
ಅಣ್ಣನ ಮಕ್ಕಳೆಲ್ಲ ಮನೆಮಂದಿಗರಾಗಿ ಮಕ್ಕಳ ತಂದೆಯರೂ ಆದ ಬಳಿಕ ಇವರು ಅವರನ್ನೆಲ್ಲ ಸೇರಿಸಿ ಹೀಗೆ ಕೇಳಿದರಂತೆ: “ನಾನು ನಿಮ್ಮ ತಂದೆಯ ಅಪೇಕ್ಷೆಯಂತೆ ನಿಮ್ಮನ್ನೆಲ್ಲ ಲೌಕಿಕದಲ್ಲಿ ಬೆಳೆಸಿದೆ. ನಿಮ್ಮ ಬದುಕನ್ನು ನನ್ನಂತೆ ತಿದ್ದುವ ಸ್ವಾತಂತ್ರ್ಯವನ್ನು ವಹಿಸಲು ನನಗೆ ನಿಮ್ಮ ತಂದೆಯ ಅನುಮತಿ ಇರಲಿಲ್ಲ. ಈಗ ನಾನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ಅದೂ ನಿಮ್ಮ ಸಂತೋಷದ ಇಚ್ಛೆ ಇದ್ದರೆ ಮಾತ್ರ. ನಿಮ್ಮ ನಿಮ್ಮ ಕುಟುಂಬಗಳಿಂದ ಒಬ್ಬೊಬ್ಬ ಮಗನನ್ನು ನನಗೆ ಕೊಡಿ. ನಾನು ಅವರನ್ನು ನನ್ನ ದಾರಿಯಲ್ಲಿ ಬೆಳೆಸುತ್ತೇನೆ.” ಚಿಕ್ಕಪ್ಪನವರ ಈ ಮಾತಿಗೆ ಅವರೆಲ್ಲ ಸ್ಪಂದಿಸಿದರೆಂಬುದು ವಿಶೇಷವಲ್ಲ. ಅವರ ವ್ಯಕ್ತಿಪ್ರಭಾವ ಹಾಗಿತ್ತು. ಈ ರೀತಿ ರಾಜಗೋಪಾಲ್ ತಮ್ಮ ಚಿಕ್ಕ ತಾತಂದಿರ ವಶಕ್ಕೆ ಬಂದು ವೈದಿಕರಾಗಿದ್ದರು.
ಹಿರಿಯ ರಾಜಗೋಪಾಲಶರ್ಮರು ಒಂದು ಊರಿನಲ್ಲಿ ನೆಲೆ ನಿಂತವರಲ್ಲ. ಅವರದು ಸಂಚಾರಿ ಗುರುಕುಲ. ಹತ್ತಾರು ಮಕ್ಕಳೊಡನೆ ಊರೂರು ಸುತ್ತುತ್ತಲಿದ್ದರು. ಅಡುಗೆಯ ಕೆಲಸ ನೋಡಲು ಮನೆಯಾಕೆ ಇದ್ದೇ ಇದ್ದರು. ತಮಿಳುನಾಡಿನ ಎಲ್ಲ ಹಳ್ಳಿ-ಪಟ್ಟಣಗಳಿಗೆ ಹೋಗುವುದು, ಅಲ್ಲೊಂದು ಮನೆ ಬಾಡಿಗೆಗೆ ಹಿಡಿಯುವುದು. ಆ ಬಳಿಕ ಅಲ್ಲಿಯ ಜನರಿಗೆ ಅವರವರ ಅಪೇಕ್ಷೆ-ಸಾಮರ್ಥ್ಯಗಳಿಗೆ ತಕ್ಕಂತೆ ವೇದ, ಶಾಸ್ತ್ರ, ಪುರಾಣ, ಇತಿಹಾಸಗಳ ಪಾಠ ಹೇಳುವುದು. ಇಂಥ ಶಿಷ್ಯರಿಂದ ಬಂದಷ್ಟನ್ನು ಬಳಸಿ ಮನೆ ಖರ್ಚು ತೂಗಿಸುವುದು. ಮುಖ್ಯವಾಗಿ ಹಿರಿಯ ರಾಜಗೋಪಾಲಶರ್ಮರಿಗೆ ರಾಮಾಯಣಪಾರಾಯಣದಲ್ಲಿ ಉತ್ಸಾಹ. ಪ್ರತಿಯೊಂದು ಊರಿನಲ್ಲಿಯೂ ಇದು ನಡೆಯಬೇಕು. ಊರವರೆಲ್ಲ ಭಾಗವಹಿಸಬೇಕು. ಕಡೆಗೆ ಮಹಾಮಂಗಳದೊಡನೆ ಸಾಮ್ರಾಜ್ಯಪಟ್ಟಾಭಿಷೇಕ. ಇದಕ್ಕಾಗಿ ಪುಣ್ಯನದಿಗಳ ತೀರ್ಥ ಬರಬೇಕು. ಎಲ್ಲ ವೇದಗಳ ಪಾರಾಯಣವಾಗಬೇಕು, ಶಂಕರಭಾಷ್ಯಗಳ ಪ್ರವಚನವಾಗಬೇಕು. ಭಕ್ತರಿಗೆ ತಾವೇ ಪಟ್ಟಾಭಿಷೇಕ ಮಾಡುವ ಆಶೆ ಇದ್ದಲ್ಲಿ ಅವರು ಶಿಖಾಧಾರಿಗಳಾಗಬೇಕು. ಇದು ಅನುಲ್ಲಂಘ್ಯವಾದ ಕಟ್ಟಲೆ. ಈ ಧನ್ಯತೆಯನ್ನು ಅನುಭವಿಸಲೆಂದೇ ಎಷ್ಟೋ ಮಂದಿ ಆ ದಿನಕ್ಕೆ ಶಿಖೆ ಬಿಡೋಣವೆಂದು ಮೊದಲು ಒಪ್ಪಿದ್ದರೂ ಅನಂತರ ತಮ್ಮ ಜನ್ಮವಿಡೀ ಶಿಖಾಧಾರಿಗಳಾಗಿ ಉಳಿದ ಉದಾಹರಣೆಗಳೂ ಉಂಟಂತೆ. ಇಂಥ ವಾತಾವರಣದಲ್ಲಿ ನಮ್ಮ ರಾಜಗೋಪಾಲ್ ಬೆಳೆದರು.
ಹಿರಿಯ ರಾಜಗೋಪಾಲಶರ್ಮರ ಸಂಚಾರಿ ಗುರುಕುಲದಲ್ಲಿ ಅವರೊಡನೆಯೇ ವಾಸಿಸುವ ಮಕ್ಕಳಿಗೆ ಬ್ರಾಹ್ಮಮುಹೂರ್ತದಲ್ಲಿ ಒಂದಾವರ್ತಿ ಪಾಠಗಳಾಗುತ್ತಿದ್ದವು. ಆ ಬಳಿಕ, ಅಂದರೆ ಸುಮಾರು ಏಳು-ಏಳೂವರೆಯ ಹೊತ್ತಿಗೆ ಆಯಾ ಊರಿನ ಜನರಿಗೆ ಸಾಮಾನ್ಯರೂಪದ ವೇದಪಾಠ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಅಂತೇವಾಸಿಗಳಾದ ಹುಡುಗರ ಸ್ನಾನ-ಸಂಧ್ಯಾವಂದನೆ-ಉಪಾಹಾರಗಳಾಗುತ್ತಿದ್ದವು. ಬಳಿಕ ಒಂಬತ್ತರಿಂದ ಹನ್ನೆರಡರವರೆಗೆ ಕಟ್ಟುನಿಟ್ಟಾದ ವೇದಪಾಠ ಹಾಗೂ ಸಂಸ್ಕೃತ-ತಮಿಳು-ಗಣಿತಗಳ ಸಾಮಾನ್ಯಸ್ತರದ ಪಾಠ ನಡೆಯುತ್ತಿತ್ತು. ಅನಂತರ ಭೋಜನವಿರಾಮ. ಊಟದ ಬಳಿಕ ಗುರುಗಳ ವಿಶ್ರಾಂತಿ. ಆದರೆ ಹುಡುಗರು ಅವರ ಹಾಸಿಗೆಯ ಸುತ್ತ ಕುಳಿತು ಹಳೆಯ ಪಾಠಗಳನ್ನು ಆವರ್ತನ ಮಾಡಿಕೊಳ್ಳಬೇಕು. ತಪ್ಪಾದಲ್ಲಿ ಮಂಪರಿನಲ್ಲಿರುವ ಗುರುಗಳು ಆಗಿಂದಾಗಲೇ ತಿದ್ದುತ್ತಲೂ ಇದ್ದರಂತೆ! ಸಂಜೆಯ ಹೊತ್ತಿಗೆ ಮಾತ್ರ ಮಕ್ಕಳಿಗೆ ಆಡುವ ಅವಕಾಶ; ಮನೆಗೆ ಬೇಕಾದ ಸಾಮಗ್ರಿ ತರಲು ಅಂಗಡಿಗೆ ಯಾತ್ರೆ; ಇಲ್ಲವೇ ಹತ್ತಿರದ ಗುಡಿ-ಗೋಪುರಗಳ ದರ್ಶನ. ಈ ಸಮಯದಲ್ಲಿ ಆಯಾ ಊರುಗಳ ಜನರಿಗೆ ಮತ್ತೊಂದು ಆವರ್ತಿ ವೇದಪಾಠ ಅಥವಾ ಪುರಾಣೇತಿಹಾಸಗಳನ್ನು ಕುರಿತ ಪ್ರವಚನ. ಎಂಟರ ಹೊತ್ತಿಗೆ ಊಟ. ಅನಂತರ ಮತ್ತೊಮ್ಮೆ ಮಕ್ಕಳಿಗೆ ವೇದಪಾಠ.
ಹೀಗೆ ಹನ್ನೆರಡು ವರ್ಷ ಕಲಿತವರು ರಾಜಗೋಪಾಲ್. ಅನಂತರ ತಮ್ಮ ಚಿಕ್ಕಪ್ಪ ಕೃಷ್ಣಮೂರ್ತಿಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವೋತ್ತರಮೀಮಾಂಸೆಗಳ ಅಧ್ಯಯನ ಮೈಲಾಪುರದ ಸಂಸ್ಕೃತ ಕಾಲೇಜಿನಲ್ಲಾಯಿತು. ಈ ಹೊತ್ತಿಗೆ ತಮ್ಮ ಶಿಸ್ತು ಸ್ವಲ್ಪ ಸಡಿಲವಾಗಿತ್ತೆಂದು ಅವರು ಪರಿತಪಿಸುತ್ತಿದ್ದುದುಂಟು. ತಿರುಪತಿಯಲ್ಲಿ ಶಿಕ್ಷಾಶಾಸ್ತ್ರಿ ಪದವಿಯನ್ನೂ ಪಡೆದಿದ್ದರು. ಅವರಿಗೆ ಗಟ್ಟಿಯಾಗಿ ನಿಂತದ್ದು ಅಜ್ಜನಿಂದ ಬಂದ ವೇದವಿದ್ಯೆಯೇ.
ಎಲ್ಲ ವಿದ್ಯಾಭ್ಯಾಸ ಮುಗಿದ ಬಳಿಕ ಅಮೇರಿಕೆಯಲ್ಲಿದ್ದ ಹಲವರು ಹಿತೈಷಿಗಳು ಅವರನ್ನು ಅಲ್ಲಿಗೆ ಬರಮಾಡಿಕೊಳ್ಳಲು ಬಯಸಿದರು. ಆ ಕರೆಗೆ ಸಹಜವಾಗಿಯೇ ಆಕರ್ಷಿತರಾದ ರಾಜಗೋಪಾಲ್ ತಮ್ಮ ಆಶೆಯನ್ನು ಅಜ್ಜನ ಬಳಿ ನಿವೇದಿಸಿದರಂತೆ. ಹಿರಿಯ ರಾಜಗೋಪಾಲಶರ್ಮರು ಕಟ್ಟಾ ಸಾಂಪ್ರದಾಯಿಕರು, ಸಮುದ್ರಯಾನಕ್ಕೆ ವಿರೋಧಿಗಳು. ಅವರಿಬ್ಬರ ನಡುವೆ ಸಾಗಿದ ಸಂವಾದ ಸ್ವಾರಸ್ಯಕರವಾಗಿದೆ.
ಅಜ್ಜ: “ನೀನು ವಿದೇಶಕ್ಕೆ ಹೋಗುವುದಾದರೂ ಏಕೆ?”
ರಾಜಗೋಪಾಲ್: “ಅಲ್ಲಿರುವ ನಮ್ಮ ಜನ ಬಯಸಿದ್ದಾರೆ. ಅಲ್ಲದೆ ಅವರಿಗೆ ವೈದಿಕಜೀವನದ ಮಾರ್ಗದರ್ಶನ ಬೇಕಿದೆ.”
ಅಜ್ಜ: “ಹಾಗಾದರೆ ಇಲ್ಲಿರುವ ಎಲ್ಲರಿಗೂ ಮಾರ್ಗದರ್ಶನ ಕೊಟ್ಟಾಗಿದೆಯೋ? ಇಲ್ಲಿ ಧರ್ಮಸಂಸ್ಥಾಪನೆ ಪೂರ್ಣವಾಗಿದೆಯೋ?”
ರಾಜಗೋಪಾಲ್: “ಹಾಗಲ್ಲ. ಅಲ್ಲಿರುವ ನಮ್ಮವರು ಹಾದಿ ತಪ್ಪಬಾರದಷ್ಟೆ.”
ಅಜ್ಜ: “ಹಾದಿ ತಪ್ಪುವುದು ಅವರಲ್ಲ, ನೀನು. ಆ ದೇಶಗಳಿಗೆ ಹೋಗಬೇಕೆಂಬ ನಿನ್ನ ಆಶೆ ಇಲ್ಲದ ಸಲ್ಲದ ದೊಡ್ಡ ದೊಡ್ಡ ಮಾತುಗಳನ್ನು ನಿನ್ನಿಂದ ಆಡಿಸುತ್ತಿದೆ. ಇಲ್ಲಿಯೇ ಇದ್ದು ವೈದಿಕವೃತ್ತಿಯಲ್ಲಿ ಬದುಕಲು ಸಾಧ್ಯವಿರುವಾಗ ಇಂಥ ಉಸಾಬರಿ ಏಕೆ?”
ಇಷ್ಟು ಸ್ಪಷ್ಟವಾದ ಪ್ರತಿರೋಧಕ್ಕೆ ರಾಜಗೋಪಾಲ್ ತಲೆಬಾಗಿ ಮೇಲುಕೋಟೆಯ ಸಂಸ್ಕೃತಸಂಶೋಧನಸಂಸತ್ತಿನ ಉದ್ಯೋಗಿಯಾಗಿ ಸೇರಿದರು. ಅನಂತರ ಕೂಡ ಅವರಿಗೆ ವಿದೇಶದಿಂದ ಕರೆ ಬಂದಿತು. ಆ ಹೊತ್ತಿಗೆ ಅಜ್ಜ ತೀರಿಕೊಂಡಿದ್ದರು. ಆಗ ಇವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಆದರೆ ಇವರು ಮಾತ್ರ ಹೋಗಲಿಲ್ಲ. ಇದನ್ನು ತಿಳಿದ ನಾನು ಕೇಳಿದ್ದೆ: “ನಿಮ್ಮ ಸ್ವಾತಂತ್ರ್ಯವನ್ನು ನೀವೇಕೆ ಬಳಸಿಕೊಳ್ಳಲಿಲ್ಲ?” ಅದಕ್ಕವರು ನಕ್ಕು ನುಡಿದಿದ್ದರು: “ತಾತನವರು ಇಲ್ಲ ನಿಜ. ಆದರೆ ಅವರ ಮಾತು ಇದೆಯಲ್ಲ! ಅದನ್ನು ಹೇಗೆ ಮೀರಲಿ?” ಹೀಗಾಗಿ ಇಂದಿಗೂ ರಾಜಗೋಪಾಲ್ ನಮ್ಮೊಡನಿದ್ದಾರೆ. ತಮ್ಮ ಗುರುಗಳಂತೆಯೇ ಮನೆಯಲ್ಲಿ ಹಲವರು ವಿದ್ಯಾರ್ಥಿಗಳನ್ನು ಉಳಿಸಿಕೊಂಡು ಅವರಿಗೆ ಮನೆಯಾಕೆಯ ಕೈಯಡುಗೆ ಉಣಿಸುತ್ತ ವೇದಪಾಠವನ್ನು ಹೇಳುತ್ತಿದ್ದಾರೆ.
ಹಿರಿಯ ರಾಜಗೋಪಾಲಶರ್ಮರು ತಮ್ಮ ಮುಪ್ಪಿನಲ್ಲಿ ಕಾವೇರಿಯ ತೀರದ ನೈವೇಲಿಯ ಬಳಿ ನೆಲೆ ನಿಂತರು. ಪ್ರತಿವರ್ಷ ವೈದಿಕವೈಭವದಿಂದ ಶಂಕರಜಯಂತಿ ಆಚರಿಸುತ್ತಿದ್ದರು. ಆ ಹೊತ್ತಿಗೆ ಶಿಷ್ಯರೆಲ್ಲ ಬಂದು ಸೇರುತ್ತಿದ್ದರು. ವೇದ-ಶಾಸ್ತ್ರಗಳ ಪಾರಾಯಣ ಸಾಗುತ್ತಿತ್ತು. ಅದು ಹಲವು ದಿನಗಳ ಕಾರ್ಯಕ್ರಮ. ಅದೊಮ್ಮೆ ನಮ್ಮ ರಾಜಗೋಪಾಲ್ ಮೇಲುಕೋಟೆಯಲ್ಲಿದ್ದಾಗ ಈ ಉತ್ಸವಕ್ಕೆ ಹೋಗಬೇಕಿತ್ತು. ರಜೆಗಾಗಿ ಅರ್ಜಿ ಹಾಕಿದರು. ಮೇಲಧಿಕಾರಿಗಳು ಸಮ್ಮತಿಸಲಿಲ್ಲ. ಇವರು ಹೋಗಲೇಬೇಕೆಂದು ಹಠ ಹಿಡಿದರು; ರಜೆ ಸಿಕ್ಕದಿದ್ದರೂ ಹೋಗುವುದಾಗಿ ಹೇಳಿದರು. ಮೇಲಧಿಕಾರಿಗಳು ಮುನಿದು ಉದ್ಯೋಗದಿಂದ ತೆಗೆದುಹಾಕುವೆವೆಂದು ಬೆದರಿಸಿದರು. ಇವರು ಅದಕ್ಕೆ ಸ್ವಲ್ಪವೂ ಸೊಪ್ಪು ಹಾಕಲಿಲ್ಲ. ಮಾತ್ರವಲ್ಲ, ರಾಜೀನಾಮೆ ನೀಡಲು ಮುಂದಾದರು. ಆಗ ಅಧಿಕಾರಿಗಳು ತಗ್ಗಿದರು.
ಈ ಪ್ರಕರಣವನ್ನು ಕೇಳಿದ ನಾನು ಇಂಥ ತೀವ್ರವಾದ ತೀರ್ಮಾನಗಳನ್ನು ನೀವೇಕೆ ತೆಗೆದುಕೊಂಡಿರೆಂದು ಪ್ರಶ್ನಿಸಿದೆ. ಆಗ ಅವರು ಹೀಗೆ ಉತ್ತರಿಸಿದ್ದರು: “ನಿಮಗೆ ನಾನು ಆಗ ಯಾವ ಉತ್ತರ ಕೊಟ್ಟೆನೋ ಅದನ್ನೇ ಹೇಳುತ್ತೇನೆ: ‘ನನ್ನನ್ನು ಎಂಟು ವರ್ಷದ ಹುಡುಗನಿಂದ ಇಪ್ಪತ್ತೆಂಟರವರೆಗೆ ಬೆಳೆಸಿ ಅಶನ-ವಸನ ಕೊಟ್ಟು ವಿದ್ಯಾದಾನ ಮಾಡಿದ ಗುರುಗಳು ಮುಖ್ಯವೋ ಆ ಕಲಿಕೆಯ ಆಧಾರದ ಮೇಲೆಯೇ ನನಗಿಂದು ಕೆಲಸ ಕೊಡುತ್ತಿರುವ ನೀವು ಮುಖ್ಯವೋ? ನನಗೆ ನಿಮ್ಮ ಆಗ್ರಹ-ಅನುಗ್ರಹಗಳು ಮುಖ್ಯವಲ್ಲ, ತಾತನವರ ಆಜ್ಞೆಯೇ ಮುಖ್ಯ.’ ಇದಕ್ಕೆ ಯಾರು ತಾನೆ ಪ್ರತಿವಾದಿಸಿಯಾರು?” ಇಂಥದ್ದು ರಾಜಗೋಪಾಲ್ ಅವರ ನಿಶ್ಚಯಬುದ್ಧಿ. ಅವರ ಈ ಪರಿಯಾದ ನಂಬಿಕೆ-ನಿಲವುಗಳನ್ನು ಕೆಲವರು ಒಪ್ಪದಿರಬಹುದು; ಇದರಿಂದ ಅವರಿಗೆ ಒದಗಬಹುದಾದ ಅನುಕೂಲ-ಅನನುಕೂಲಗಳನ್ನು ಕುರಿತೂ ಚರ್ಚೆಗಳೇಳಬಹುದು. ಆದರೆ ಅವರಿಗಿದ್ದ ಶ್ರದ್ಧೆ-ಸಂಕಲ್ಪಶಕ್ತಿಗಳನ್ನು ಎಲ್ಲರೂ ಗೌರವಿಸಬೇಕಷ್ಟೆ.
ಭವನದಲ್ಲಿ ವೇದಪಾಠದ ತರಗತಿಗಳು ಆರಂಭವಾದಾಗ ಜಾತಿ-ಮತ-ಲಿಂಗಗಳ ಭೇದವಿಲ್ಲದೆ ಆಸಕ್ತಿಯುಳ್ಳ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು. ಆಗ ಯಜುರ್ವೇದದ ಪಾಠಕ್ಕೆ ರಂಗನಾಥ್ ಅವರು ಸಹಜವಾಗಿಯೇ ರಾಜಗೋಪಾಲರನ್ನು ಕೇಳಿದರು. ಆದರೆ ಅವರು ತಮ್ಮ ನಂಬಿಕೆಗೆ ಇದು ವಿರೋಧವೆಂದು ಒಪ್ಪಿಕೊಳ್ಳಲಿಲ್ಲ. ಈ ನಿಲವು ನನಗೆ ನಿರೀಕ್ಷಿತವೇ ಆಗಿತ್ತು. ಇಂತಿದ್ದರೂ ಪಾಠ ಹೇಳಲು ಒಪ್ಪಿ ಬಂದ ಮತ್ತೂರು ಚಂದ್ರಶೇಖರ್ ಮತ್ತು ಎಸ್. ರಂಗನಾಥ್ ಅವರ ವಿಷಯದಲ್ಲಿ ರಾಜಗೋಪಾಲ್ ತುಂಬ ಗೌರವವನ್ನು ತಳೆದಿದ್ದರು.
ಭವನದ ನಿರ್ವಾಹಕಸಮಿತಿಯ ಸಭೆ ನಿಯತವಾಗಿ ಸೇರುತ್ತಿತ್ತು. ಅದರ ಸದಸ್ಯತ್ವ ನನಗಾಗಲಿ, ರಾಜಗೋಪಾಲ್ ಅವರಿಗಾಗಲಿ ಇರಲಿಲ್ಲ. ಆದರೆ ರಂಗನಾಥ್ ಅವರು ಚಿಕ್ಕ್ ವಯಸ್ಸಿನವರಾದ ನಾವಿಬ್ಬರೂ ಅಲ್ಲಿದ್ದರೆ ಉಭಯಥಾ ಒಳಿತೆಂದು ಭಾವಿಸಿ ನಮ್ಮನ್ನು ಸೇರಿಸಿಕೊಂಡರು. ಇದು ನನಗಂತೂ ಬೋಧಪ್ರದವಾಯಿತು. ಭವನದ ಅಧ್ಯಕ್ಷರಾಗಿದ್ದ ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ಜಿ. ವಿ. ಕೆ. ರಾಯರು ಸ್ವತಃ ಸಾಹಿತ್ಯ-ಸಂಗೀತಗಳಲ್ಲಿ ಗಂಭೀರವಾದ ಆಸಕ್ತಿಯುಳ್ಳವರು, ಸುಸಂಸ್ಕೃತರು, ದೇಶದ ಹಲವಾರು ಮುಖ್ಯಸಂಸ್ಥೆಗಳೊಡನೆ ಸಕ್ರಿಯಸಂಬಂಧ ಉಳ್ಳವರು. ಇನ್ನು ಸಮಿತಿಯ ಉಪಾಧ್ಯಕ್ಷರಾದ ರಾಜಾರಾಮಣ್ಣ ಅವರಂತೂ ಅಂತಾರಾಷ್ಟ್ರಿಯ ಪ್ರಸಿದ್ಧಿಯುಳ್ಳ ವ್ಯಕ್ತಿ. ಉಳಿದ ಸದಸ್ಯರ ಪೈಕಿ ಎಸ್. ಕೃಷ್ಣಮೂರ್ತಿ, ಲಲಿತಾ ಶಿವರಾಂ ಉಭಯಕರ್, ಎಂ. ಪಾಂಡುರಂಗ ಶೆಟ್ಟಿ, ವಿಮಲಾ ರಂಗಾಚಾರ್ ಮೊದಲಾದವರಿದ್ದರು. ಇವರೆಲ್ಲರ ಲೋಕಪರಿಜ್ಞಾನ ಮತ್ತು ಸ್ನೇಹ-ವಿಶ್ವಾಸಗಳನ್ನು ಹತ್ತಿರದಿಂದ ಕಾಣುವ ಅವಕಾಶ ನಮಗೆ ಒದಗಿತ್ತು.
ಈ ಸಭೆಗಳಲ್ಲಿ ಆಗೀಗ ವಿಷಯಾಂತರವಾಗಿ ವಾದ-ವಿವಾದಗಳೂ ಹುಟ್ಟುತ್ತಿದ್ದವು. ಒಮ್ಮೆ ಜಿ. ವಿ. ಕೆ. ರಾಯರು ‘ಭಾರತ ಬೌದ್ಧಮತವನ್ನು ಹೊರದೂಡಿದ ಕಾರಣದಿಂದ ಇಲ್ಲಿ ಅಭಿವೃದ್ಧಿ ಆಗಲಿಲ್ಲ; ಬೌದ್ಧವನ್ನು ಒಪ್ಪಿದ ದೇಶಗಳೆಲ್ಲ ಬೆಳೆಯುತ್ತಿವೆ; ಉದಾ: ಚೀನಾ, ಜಪಾನ್’ ಎಂದು ಬೀಸುಹೇಳಿಕೆ ನೀಡಿದರು. ಕೂಡಲೇ ನಾನು “ಬೌದ್ಧವನ್ನು ಭಾರತ ಹೊರದೂಡಲಿಲ್ಲ; ಅದೇ ಇಲ್ಲಿಂದ ನಿರ್ಗಮಿಸಿತು. ಅದರ ಜೊತೆಗೇ ಹುಟ್ಟಿದ ಜೈನಮತ ಅವೈದಿಕವಾದರೂ ಇಲ್ಲಿಯೇ ಉಳಿಯಿತು. ಇಷ್ಟಕ್ಕೂ ಬೌದ್ಧವನ್ನು ಈ ನೆಲದಲ್ಲಿ ನಿರ್ಮೂಲಿಸಿದ್ದು ಇಸ್ಲಾಂ ಅಲ್ಲದೆ ಸನಾತನಧರ್ಮವಲ್ಲ. ಜೊತೆಗೆ ಚೀನಾ ಬೌದ್ಧಮತವನ್ನು ಎಂದೋ ಬಿಟ್ಟು ಸಾಮ್ಯವಾದಕ್ಕೆ ಶರಣಾಗಿದೆ. ಇನ್ನು ಬೌದ್ಧಕ್ಕೆ ಅಂಟಿಕೊಂಡ ಬರ್ಮಾ, ಟಿಬೆಟ್, ಇಂಡೊನೇಷಿಯಾ ಮುಂತಾದ ದೇಶಗಳಿಗಿಂತ ಭಾರತ ಹದಗೆಟ್ಟಿಲ್ಲ” ಎಂದು ತೀವ್ರವಾಗಿ ಪ್ರತಿಭಟಿಸಿದೆ.
ಆಗ ರಾಯರಿಗಿಂತ ಮುಜುಗರಗೊಂಡವರು ರಂಗನಾಥ್. ಅಂಥ ಹಿರಿಯರ ಮುಂದೆ ನಾನು ತಗ್ಗಿ ನಡೆಯಬೇಕೆಂದು ಅವರ ಅಪೇಕ್ಷೆ. ಆದರೆ ಸತ್ಯ ನನ್ನ ಕಡೆಗಿದೆ ಎಂದು ಅವರಿಗೆ ಸಂತೋಷ. ಏನೂ ಹೇಳಲಾಗದೆ ಇಬ್ಬಂದಿಯ ನಗೆ ಬೀರುತ್ತಿದ್ದರು. ರಾಯರು ಸೋಲೊಪ್ಪದೆ ವಾದವನ್ನು ಬೇರೆಯ ಕಡೆಗೆ ತಿರುಗಿಸಿದರು: “ಇಲ್ಲಿ ನಾನು ಮುಖ್ಯವಾಗಿ ಹೇಳಬೇಕಿರುವ ಅಂಶವೆಂದರೆ ನಮ್ಮ ದೇಶವನ್ನು ಪುರೋಹಿತಶಾಹಿ ಆಳುತ್ತಿದೆ. ವೈದಿಕರು ಜನಸಾಮಾನ್ಯರಿಗೆ ಇಲ್ಲದ ಸಲ್ಲದ ಸುಳ್ಳು ಹೇಳಿ ಮರುಳು ಮಾಡಿ ದಕ್ಷಿಣೆ ಗಿಟ್ಟಿಸಿ ಗಂಟು ಮಾಡಿಕೊಳ್ಳುತ್ತಿದ್ದಾರೆ...”
ಅವರ ಮಾತು ಮುಗಿಯುವ ಮುನ್ನವೇ ರಾಜಗೋಪಾಲ್ ನಿರೀಕ್ಷಿತ ರೀತಿಯಲ್ಲಿ ಅನಿರೀಕ್ಷಿತವಾದ ದಾಳಿ ಮಾಡಿದರು: “ಸರ್, ಐ ಡೋನ್ಟ್ ಅಗ್ರೀ ವಿತ್ ಯುವರ್ ಪಾಯಿಂಟ್. ಯೂ ಆರ್ ಪಾರ್ಷಿಯಲ್. ದ ಪ್ರಾಬ್ಲಂ ವಿತ್ ಯುವರ್ ಸ್ಟೇಟ್ಮೆಂಟ್ ಈಸ್ ಇಟ್ ಲ್ಯಾಕ್ಸ್ ಲಾಜಿಕ್. ಬ್ರಾಹ್ಮಣರು ಗಂಟು ಕಟ್ಟುತ್ತಾರೆ ಅಂತ ನೀವು ಹೇಳಿದಿರಿ. ಬಡಪಾಯಿ ವೈದಿಕರು ಪೂಜೆ-ಪುನಸ್ಕಾರ ಮಾಡಿಸಿದ ಮೇಲೆ ಅವರಿಗೆ ಅಕ್ಕಿ, ತೆಂಗಿನಕಾಯಿ, ಬಾಳೆಯಹಣ್ಣು ಕೊಡುತ್ತಾರೆ. ಇದನ್ನು ಗಂಟು ಕಟ್ಟದೆ ಏನು ಮಾಡಬೇಕು? ನೀವು ಪ್ಲಾನಿಂಗ್ ಕಮಿಷನ್ನಿನ ಮೆಂಬರ್ ತಾನೇ? ಅಲ್ಲಿ ನಿಮಗೆ ಪ್ರತಿಯೊಂದು ಸಿಟ್ಟಿಂಗಿಗೂ ಸಿಟ್ಟಿಂಗ್ ಫೀ ಕೊಡುತ್ತಾರೆ. ಟಿ. ಎ., ಡಿ. ಎ. ಕೊಡುತ್ತಾರೆ - ಇದನ್ನೆಲ್ಲ ಚೆಕ್ ಆಗಿ ಕೊಡುತ್ತಾರೆ ತಾನೆ? ಇದನ್ನು ನೀವು ಪುಸಕ್ ಅಂತ ಜೇಬಿನಲ್ಲಿ ಜಾರಿಸಿಕೊಳ್ಳುತ್ತೀರಿ. ಬಟ್ ವೀ ಪೀಪಳ್ ಆರ್ ಗಿವನ್ ಇನ್ ಕೈಂಡ್, ನಾಟ್ ಇನ್ ಕ್ಯಾಷ್! ನಾವು ಗಂಟು ಕಟ್ಟದೆ ಏನು ಮಾಡಬೇಕು?”
ಮುಂದಿನ ಪರಿಣಾಮವನ್ನು ಹೇಳಬೇಕಿಲ್ಲ. ಸಭೆಯಲ್ಲಿ ಸಭ್ಯರೇ ಇದ್ದ ಕಾರಣ ಮರ್ಯಾದೆಯ ನಗೆಯೊಡನೆ ಅಂದಿನ ಸಮಾವೇಶ ಹೇಗೋ ಮುಗಿಯಿತು.
ಇಂಥ ಘಟನೆಗಳನ್ನೆಲ್ಲ ಗಮನಿಸಿಯೇ ರಂಗನಾಥ್ ಇವರನ್ನು ‘ವೇದಿಕ್ ರೌಡಿ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮಾತ್ರವಲ್ಲ, ಒಪ್ಪಿಕೊಂಡ ಕೆಲಸವನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಪ್ಪವಾಗಿ ನಿರ್ವಹಿಸುತ್ತಿದ್ದ ಅವರ ಸ್ವಭಾವ ರಂಗನಾಥ್ ಅವರ ಆದರಕ್ಕೆ ಪಾತ್ರವಾಗಿತ್ತು.
To be continued.