ಕೋಲಾರಮಂಡಲದಲ್ಲಿ ಹೆಚ್ಚು ಪ್ರಚಲಿತವಿರುವ ವಾಗ್ರೂಢಿಗಳ ಬಳಕೆ:
ವೆಗಟು / ಎಗಟು (ಹೆಚ್ಚು ಸೇವನೆಯಿಂದ ರುಚಿಗೆಡುವುದು), ಅಂದಿಸು (ಎಟಕುವಂತಾಗಿಸು), ನಸನಸೆ (ರಂಪ; ಸಣ್ಣ ವಿಷಯಗಳನ್ನು ದೊಡ್ಡದು ಮಾಡುವುದು), ಸೊಟ್ಟಾಪಟ್ಟೆ (ಓರೆಯಾದ, ಡೊಂಕಾದ), ಪೋದಿ (ಆರೈಕೆ), ಮೊಡಕು (ಮೂಲೆ), ಐಲುಪೈಲು (ಹುಚ್ಚು), ಯರ್ರಿಬಿರ್ರಿ (ಶಿಸ್ತು ಇಲ್ಲದಿರುವುದು), ಪೀಕಲಾಟ (ತೊಂದರೆ; ಜಗಳ), ತಕರಾರು (ಆಕ್ಷೇಪಣೆ; ವಿರೋಧ; ಜಗಳ), ಏಮಾರು / ಯಾಮಾರು (ಮೊಸಹೋಗು; ಉಪೇಕ್ಷಿಸು), ಚಿತಾವಣೆಗಾರಿಕೆ (ಪ್ರಚೋದನೆ), ಪೊಗದಸ್ತು (ಸಮೃದ್ಧ), ಅಳ್ಳಕ (ಸಡಿಲ; ದ್ರವೀಯ).
ನಾಮಪದಗಳಂತೆ “ಓಣ”-ಅಂತಶಬ್ದಗಳ ಬಳಕೆ ಮತ್ತು ವಿಧಾಯಕಾರ್ಥವುಳ್ಳ -“ತಕ್ಕದ್ದು” ಬಳಕೆ:
ಇರೋಣ, ಆಗೋಣ, ತಿಂಬೋಣ, ಕೇಳೋಣ, ಕೀಳೋಣ, ಅಂಬೋಣ; ಮಾಡತಕ್ಕದ್ದು, ಇರತಕ್ಕದ್ದು, ಹೋಗತಕ್ಕದ್ದು.
ನೂತನಪದಗಳ / ವಾಕ್ಯಖಂಡಗಳ ಟಂಕನ:
ಋತನಿಷ್ಠೆ, ಅಧಿಧರ್ಮ, ಲೈಂಗಕಿಣ್ವ, ಭಗವತ್ಸಮಕ್ಷತಾಭ್ಯಾಸ, ಬ್ರಹ್ಮಪತ್ತನಭಿಕ್ಷುಕ, ತರಂಗವಲಯವಿಸ್ತಾರ, ಅನುಭವರಸಿಕತೆ, ಮಾತ ಮೂದಲಿಸಿಪ ಮಹಾರಣ್ಯಸರಣಿ, ಪ್ರಣಯಪ್ರರೋಹ, ಸಂದೇಹಸೂಕ್ತ, ಉದ್ಯತ್ಖದ್ಯೋತಲೀಲಾಕ್ರಮ, ಸದ್ಯಃಪ್ರಪಂಚಪ್ರಯುಕ್ತತೆ, ಜೀವೋತ್ಕರ್ಷ, ಅನುದ್ವೇಗಪ್ರಗತಿಕುಶಲ, ಅಂತರಂಗದ ಸ್ವತಃಪ್ರವರ್ತಿತಸದ್ಭಾವಪ್ರವಾಹ, ಅಪ್ರತ್ಯಕ್ಷಹೃದಯಪರಿವರ್ತನೆ, ವಿಶ್ವಪತಿಹಸಿತವೀಕ್ಷೆ, ಜೀವಮುಕುಲೋನ್ಮೀಲಾರ್ಕಸಂವೀಕ್ಷೆ, ಮದನಿಕೆಯರ್ ವಿಧುವದನಿಕೆಯರ್ ... ಮಧುಕರಣಿಕೆಯರ್ ... ಹಿತಕಥನಿಕೆಯರ್ ... ಗುಣಭಣನಿಕೆಯರ್, ಅಳುವೇನು ನಗುವೇನು ಹೃತ್ಕಪಾಟೋದ್ಘಾಟ, ಬದುಕು ರಸತರ್ಕೈಕ್ಯ, ಸ್ವಜ್ಞಪ್ತಿಶೋಧಿ ಮುನಿ, ಅನುಪಮಾಸಹ್ಯ, ಧನ್ಯತೆಯ ಬೆದಕಾಟ, ರಸಿಕತೆಯೆ ಯೋಗ, ಗಾವಿಲನ ಗಳಹು, ತಣಿವು ಜೀವಸ್ವರದೆ, ಅನಿತರಜ್ಞತೆ ಮುಕ್ತಿ, ಒರಟುಯಾನವೊ ಭಾಷೆ, ಅಮಿತ ಪ್ರಪಂಚನಾಕುಂಚನಾವರ್ತನಕ್ರಮವೆ ವಿಶ್ವಚರಿತ್ರೆ, ನೊರೆ ಸೃಷ್ಟಿ ಪಾಲ್ ಬ್ರಹ್ಮ, ಕಲಬೆರಕೆ ಜಗದುಸಿರು, ಮತ-ನೀತಿ-ಶಾಸ್ತ್ರಗಳು ರಾಜ್ಯಸಂಧಾನಗಳು ಮತಿಯ ಕಿಂಚಿದ್ವಿಜಯ, ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು ಯೋಜಿಪುದೆ ನರಮಹಿಮೆ, ಸಾಜ ಸೊಗವಾತ್ಮಂಗೆ, ನೀತಿ ನಿಂದೆಯೊಳಿರದು.
ಆರ್ಷಪರಂಪರೆಗೆ ಸಂದ ಸೇರ್ಪಡೆ; ಸಂಸ್ಕೃತದ ಮೇಲಿನ ಹಿಡಿತ:
ಮಹರ್ಷಿಗಳಿಗೆ ವಿಧೇಯರಾದ ನಾವು ಅವರು ತೋರಿರುವ ದಾರಿಯಲ್ಲಿ ಕಾವ್ಯವನ್ನು ಕುರಿತು ಒಂದು ಲಘುಸಂಹಿತೆಯನ್ನು ರೂಪಿಸಿಕೊಂಡರೆ ಅಪಚಾರವಾಗಲಾರದು.
ಅಥಾಧಿಕಾವ್ಯಮ್ | ಕವಿಪ್ರತಿಭಾ ಪೂರ್ವರೂಪಮ್ |
ಶ್ರೋತೃಹೃದಯಮುತ್ತರರೂಪಮ್ | ರಸಾನುಭೂತಿಃ ಸಂಧಿಃ |
ವಾಶ್ಕೌಶಲಮ್ ಸಂಧಾನಮ್ | ಇತ್ಯಧಿಕಾವ್ಯಮ್ ||
(ಈಗ ಕಾವ್ಯದ ಮಾತು. ಕವಿಯ ಪ್ರತಿಭೆ ಮೊದಲ ಪದಾರ್ಥ. ಓದುಗನ (ಕೇಳುವವನ) ಹೃದಯ ಅನಂತರದ ಪದಾರ್ಥ. ರಸಾನುಭವ ಎರಡಕ್ಕೂ ಸಂಬಂಧ. ವಾಕ್ಯದ ಸೊಗಸು-ಚಮತ್ಕಾರಗಳು ಅದಕ್ಕೆ ಸಾಧನ. ಇಷ್ಟೆ ಕಾವ್ಯದ ಮಾತು.)
(ಕಾವ್ಯಸ್ವಾರಸ್ಯ, ಸಾಹಿತ್ಯಸಂಹಿತೆ)
ಹಾಸ್ಯ / ವ್ಯಂಗ್ಯ:
ಕವಿತ್ವಾವೇಶ ಹರಳೆಣ್ಣೆಯ ಹಾಗೆ. ಅದು ಒಳಗೆ ಒಂದು ತೊಟ್ಟಿನಷ್ಟು ಇದ್ದರೂ ಸುಮ್ಮನಿರುವುದಿಲ್ಲ. ಅದು ನಿಶ್ಶೇಷವಾಗಿ ಹೊರಕ್ಕೆ ಬಂದಮೇಲೆಯೇ ನೆಮ್ಮದಿ. ಒಳಗೆ ಉಳಿದುಕೊಂಡರೆ ಬಾಧೆ, ಅಪಾಯ. ಒಂದು ಸಾರಿ ನಾನು ಈ ಉಪಮಾನವನ್ನು ಹೇಳಿದಾಗ ನನ್ನ ಸ್ನೇಹಿತರು ಎಸ್. ಜಿ. ಶಾಸ್ತ್ರಿಗಳು ತುಂಬ ಆಗ್ರಹಗೊಂಡು ನನಗೆ ಶಾಪವಿಟ್ಟದ್ದು ಜ್ಞಾಪಕವಿದೆ. ಅಂದಿದಿಂದ ಬೇರೊಂದು ಉಪಮಾನ ಹುಡುಕುತ್ತಿದ್ದೇನೆ, ಸಿಕ್ಕಿಲ್ಲ. ಕ್ಷಮಿಸಬೇಕು.
(ಜ್ಞಾಪಕಚಿತ್ರಶಾಲೆ, ಹೃದಯಸಂಪನ್ನರು)
ಕಸ್ತೂರಿ ಮಾರುವವನ ಪಕ್ಕದಲ್ಲಿ ಗೊಬ್ಬರದ ಅಂಗಡಿಯವನು ಇರಲಿ, ಅದೇ ಸಮಾನತ್ವ ... ನಿತ್ಯಸ್ನಾನಿಯ ಮೈಯನ್ನು ನೀರು ಸೋಕದವನು ತಿಕ್ಕಲಿ. ಅದೇ ಅಲ್ಲವೆ ಸೋದರತ್ವ?
(ಜೀವನಧರ್ಮಯೋಗ)
(ಮುವ್ವ ಗೋಪಾಲನ) ಆ ಗುಡಿ ವಿನಾಯಕನದೋ ವೀರಭದ್ರನದೋ ಮಾರುತಿಯದೋ ಮಾರಮ್ಮನದೋ ಆಗದೆ ಶೃಂಗಾರಮೂರ್ತಿಯಾದ ಗೋಪಾಲನದಾಗಿದ್ದದ್ದು ರಸಿಕಪ್ರಪಂಚದ ಸೌಭಾಗ್ಯ.
(ಕ್ಷೇತ್ರಜ್ಞ)
ನೀನು ನನಗೆ ವ್ಯಾಪಾರದಲ್ಲಿ ಲಾಭ ಮಾಡಿಸಿದರೆ ನಾನು ನಿನಗೆ ದೀಪಾರಾಧನೆ ಮಾಡಿಸುತ್ತೇನೆ. ನನ್ನ ಈ ಗುಟ್ಟು ಹೊರಕ್ಕೆ ಬೀಳದಂತೆ ನೀನು ಮುಚ್ಚಿಟ್ಟರೆ ನಿನಗೆ ನಾನು ಊರಲ್ಲೆಲ್ಲ ಮೆರವಣಿಗೆ ಮಾಡಿಸುತ್ತೇನೆ. ನನ್ನ ನೆರೆಮನೆಯವನ ಮೀಸೆಯನ್ನು ನೀನು ಉದುರಿಸಿದರೆ ನನ್ನ ತಲೆಗೂದಲನ್ನೆಲ್ಲ ಮುಡಿಪು ಕೊಡುತ್ತೇನೆ.
(ಬಾಳಿಗೊಂದು ನಂಬಿಕೆ)
ಶಕುಂತಲೆ ಋಷ್ಯಾಶ್ರಮದಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಕಣ್ವರು ಆಶ್ರಮದ ಗಿಡಬಳ್ಳಿಗಳನ್ನು ಆಕೆಗೆ ಅನುಜ್ಞೆ ಕೊಡಬೇಕೆಂದು ಬೇಡಿದರಂತೆ. ಗಿಡಬಳ್ಳಿಗಳು ದುಃಖಿಸುವುದೆಂದರೇನು? ಅನುಜ್ಞೆ ಕೊಡುವುದೆಂದರೇನು? ... ಇಂಥ ಪ್ರಶ್ನೆಗಳನ್ನು ಚರ್ಚಿಸುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ.
(ಶ್ರೀಮದ್ವಾಲ್ಮೀಕಿರಾಮಾಯಣಂ, ಬಾಲಕಾಂಡ: ಮುನ್ನುಡಿ)
ಡಿ.ವಿ.ಜಿ. ಹೆಸರಿಸಿರುವ ಅಡುಗೆ-ತಿಂಡಿ-ತಿನಿಸು-ಪಾನೀಯಗಳು:
ಘೀವರ್, ಬಾದಾಮಿ ಹಲ್ವಾ, ಕಜ್ಜಾಯ, ಸಜ್ಜಪ್ಪ, ತೇಂಗೊಳಲು, ಲಾಡು, ಪುರಿಯುಂಡೆ, ಅವಲಕ್ಕಿ, ಮುಚ್ಚೋರೆ, ಚೆಕ್ಕುಲಿ, ಕೋಡುಬಳೆ, ಹುರಿಗಾಳು, ನುಚ್ಚಿನುಂಡೆ, ಕಾಳುಪ್ಪಿಟ್ಟು, ಹೀರೇಕಾಯಿ ಬೋಂಡ, ದೋಸೆ, ಇಡ್ಲಿ, ಚಿರೋಟಿ, ಪಳದ್ಯ, ಖಾರದವಲಕ್ಕಿ, ಬದನೇಕಾಯಿಹುಳಿ, ಗೊಜ್ಜು, ಆಂಬೊಡೆ, ವಡೆ, ಕೋಸುಂಬರಿ, ಒಬ್ಬಟ್ಟು / ಹೋಳಿಗೆ, ಕಡಲೇಬೇಳೆ ಚಟ್ನಿ, ಹಯಗ್ರೀವ, ಶ್ರೀಮದ್ಬೇಳೆಹುಳಿ, ಹೆಸರುಬೇಳೆ ಪಾಯಸ, ಚಿತ್ರಾನ್ನ, ದಮ್ರೋಟು, ಗುಗ್ಗರಿ / ಉಸಲಿ, ಜಿಲೇಬಿ, ಬೀಡಾ, ಚುಟ್ಟಾ, ಕಾಫೀ, ಟೀ, ಸೋಡ, ಲೆಮನೇಡ್, ಎಳನೀರು, ಪಾನಕ.
ಉದ್ಬೋಧಕವ್ಯಾಖ್ಯೆಗಳು
ಅಧ್ಯಾತ್ಮ-ಸಂಸ್ಕೃತಿ
ಜೀವನಸಮೃದ್ಧಿ, ಜೀವನಸಂಸ್ಕಾರ, ಜೀವನಸೌಂದರ್ಯ—ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗನಿಷ್ಠೆಯಲ್ಲ; ಅದು ವೇದ-ವೇದಾಂತಗಳ ಸಾರಾಂಶ.
(ಬಾಳಿಗೊಂದು ನಂಬಿಕೆ)
ಅಂತಸ್ಸಮತೆ-ಬಹಿಸ್ತಾರತಮ್ಯ—ಇವು ಲೋಕಹಿತಸೂತ್ರದ ಎರಡು ಭಾಗಗಳು.
(ಜೀವನಧರ್ಮಯೋಗ)
ಲೋಕಸ್ನೇಹಪ್ರಧಾನವಾದ ಸ್ವಧರ್ಮಪ್ರಕಾಶವೇ ಸಂಸ್ಕೃತಿ.
(ಸಂಸ್ಕೃತಿ)
ಮನಸ್ಸಿನೊಳಗಡೆ ದ್ವೇಷ-ಉದ್ವೇಗಗಳಿಲ್ಲದಿರುವುದೇ ಸಹನೆ; ಬುದ್ಧಿಯ ಒಳಗಡೆ ಉದಾಸೀನತೆ-ಜಡತೆಗಳು ಸೇರದೆ ವಿವೇಚನೆ-ಪ್ರೇರಣೆಗಳು ನಡೆಯುತ್ತ, ಹೊರಗಡೆ ಕಾರ್ಯಪರಂಪರೆಯಾಗುವುದೇ ಪ್ರಯತ್ನ.
(ಬಾಳಿಗೊಂದು ನಂಬಿಕೆ)
ನಿಜವಾದ ವಿರಕ್ತಿಯಲ್ಲಿ ಬೇಡವೆಂಬುದಕ್ಕೆ ಒಂದು ಸ್ಥಾನವಿರುವಂತೆ ಬೇಕೆಂಬುದಕ್ಕೂ ಇರುತ್ತದೆ; ಅಥವಾ ಬೇಕೆಂಬುದು ತಪ್ಪಾದರೆ ಬೇಡವೆಂಬುದೂ ತಪ್ಪಾದೀತು. ರಾಗವು ಅದಕ್ಕೆ ಹೇಗೆ ವರ್ಜ್ಯವೋ ದ್ವೇಷವೂ ಹಾಗೆ ವರ್ಜ್ಯವೇ.
(ಉಮರನ ಒಸಗೆ)
ಸುಖವೂ ದುಃಖದಂತೆಯೇ ಮನುಷ್ಯಜೀವನಕ್ಕೆ ಅವಶ್ಯವಾದ ಒಂದು ಸಂಸ್ಕಾರ.
(ಶ್ರೀಕೃಷ್ಣಪರೀಕ್ಷಣಂ)
ಅಂಗೀಕಾರವೂ ವರ್ಜನೆಯಂತೆ ಒಂದು ಮನಃಪರಿಪಾಕಕ್ರಮ. ಎಷ್ಟೋ ಸಂದರ್ಭಗಳಲ್ಲಿ ತ್ಯಾಗಕ್ಕೆ ದಾರಿ ಭೋಗದ ಬಾಗಿಲಿನಿಂದಲೇ ಇದ್ದೀತು. ಭೋಗವೂ ಅದರಿಂದ ಬರುವ ಮನೋವಿಕಾಸವೂ ಜೀವಕ್ಕೆ ಒಂದು ತೆರದ ವಿದ್ಯಾಭ್ಯಾಸ.
(ಉಮರನ ಒಸಗೆ)
ಪುರಾತನದಲ್ಲಿ ಸತ್ತ್ವವಿದ್ದರೆ ಅದು ನಮಗೆ ಕಾಲಾನುಕಾಲಕ್ಕೆ ಹಿಂತಿರುಗಿಬರುತ್ತದೆ. ಅದರಲ್ಲಿ ಸತ್ತ್ವವಿಲ್ಲದಿದ್ದಲ್ಲಿ ಅದರ ಅಳಿವಿಗಾಗಿ ಯಾರೂ ಅಳಬೇಕಾದದ್ದಿಲ್ಲ.
(ಬಾಳಿಗೊಂದು ನಂಬಿಕೆ)
ವೇದವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿವಚನಪರಂಪರೆಯಾದರೆ ಸಂಪ್ರದಾಯವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿಕರ್ಮಪರಂಪರೆ.
(ವಿದ್ಯಾರಣ್ಯರ ಸಮಕಾಲೀನರು, ಸಾಯಣಾಚಾರ್ಯರು)
ಚಿದಂಶದ ಸ್ವತಃಸ್ಫುರಣೆಯೇ ಋತ ... ಋತದ ವಾಗ್ರೂಪ ಸತ್ಯ; ಸತ್ಯದ ಕ್ರಿಯಾರೂಪವೇ ಧರ್ಮ.
ಋತ ಅಂತರನುಭೂತಯಥಾರ್ಥ, ಸತ್ಯ ಬಹಿಃಸಾಧಿತಯಥಾರ್ಥ.
ಅದದು ಅದರದರ ಲೋಕೋಪಯೋಗಯೋಗ್ಯತೆಯಲ್ಲಿ ಸಮೃದ್ಧವಾಗಿರಬೇಕು. ಈ ಬಗೆಯ ತತ್ತದಾತ್ಮಗುಣಪ್ರಾಚುರ್ಯವೇ ಧರ್ಮ.
(ಋತ, ಸತ್ಯ, ಧರ್ಮ)
ಜೀವಕ್ಕೂ ಜಗತ್ತಿಗೂ ನಡುವೆ ಇರಬೇಕಾದ ಅನ್ಯೋನ್ಯಹಿತಸಂಬಂಧವೇ ಧರ್ಮ.
(ಜೀವನಧರ್ಮಯೋಗ)
ಧರ್ಮಸಾಧನೆಯಲ್ಲಿ ದಯೆಗೊಂದು ಸ್ಥಾನವಿದ್ದರೆ ದಂಡಕ್ಕೂ ಒಂದು ಸ್ಥಾನವಿರುತ್ತದೆ. ಧರ್ಮವನ್ನು ಉಳಿಸಹೊರಟವನಿಗೆ ಮೊದಲು ಬೇಕಾದ ಗುಣ ಎದೆಗಾರಿಕೆ. ಅನ್ಯಾಯವನ್ನೂ ಅಧರ್ಮವನ್ನೂ ಕಂಡಾಗ ಎದುರಿಸಿ ಹೋರದೆ ಓಡಿಹೋಗುವೆನೆಂಬುವನು ತೋರುವುದು ದಯೆಯನ್ನಲ್ಲ, ಅಧರ್ಮಪ್ರೋತ್ಸಾಹವನ್ನು.
(ಜೀವನಧರ್ಮಯೋಗ)
ಸಮನ್ವಯಕ್ಕೆ ಪೀಠಿಕೆಯಾದದ್ದು ವಿಷಯಾಂಶತಾರತಮ್ಯನಿರ್ಣಯ ... ಅದರಲ್ಲಿ ಯಾವುದಕ್ಕೂ ಅನ್ಯಾಯವಿಲ್ಲ; ಯಾವುದಕ್ಕೂ ಅದರ ಯೋಗ್ಯತೆಯನ್ನು ಮೀರಿದ ಪ್ರಾಶಸ್ತ್ಯವಿಲ್ಲ.
(ಸಂಸ್ಕೃತಿ)
ವಿಶ್ವಸೃಷ್ಟಿಗೆ ಆದಿಕಾಲವೆಂಬುದೊಂದು ಇತ್ತೆಂದು ಇಟ್ಟುಕೊಳ್ಳುವುದಾದರೆ—ಆ ಆದಿದಿವಸದಿಂದಲೇ, ಆ ಪ್ರಾರಂಭದ ಘಳಿಗೆಯಿಂದಲೇ ಪ್ರಕೃತಿಯು ಮನುಷ್ಯಹೃದಯದಲ್ಲಿ ಹಕಾರಬೀಜವನ್ನು ಹುದುಗಿಸಿ ಬೆಳಸಿಕೊಂಡು ಬಂದಿರುವಂತೆ ತೋರುತ್ತದೆ. ಆಶ್ಚರ್ಯವಾದರೆ ಅವನು “ಆಹಾ!” “ಓಹೋ!” ಎಂದು ಅರಚುತ್ತಾನೆ; ಭಯವಾದರೆ “ಹಾಹಾ”ಕಾರ ಮಾಡುತ್ತಾನೆ; ಕೋಪ ಬಂದರೆ “ಹುಂ”ಕರಿಸುತ್ತಾನೆ; ಆಶೆಯಾದರೆ “ಹಾ!” ಎಂದು ಬಾಯಿ ಬಿಡುತ್ತಾನೆ; ನೋವಾದರೆ “ಹೋ!” ಎಂದು ಅಳುತ್ತಾನೆ. ಪ್ರೀತಿಯಾದರೆ “ಹಹ್ಹಹಾ!” ಎಂದು ಲಲ್ಲೆ ಹಾಕುತ್ತಾನೆ; ಸಂತೋಷವಾದರೆ “ಹೀ! ಹೀ!” ಎಂದು ನಗುತ್ತಾನೆ; ಹೀನಾಯ ಮಾಡಬೇಕೆಂದರೆ “ಹೇ ಹೇ!” ಎನ್ನುತ್ತಾನೆ. ಹೀಗೆ ಅವನ ಮನಸ್ಸಿನಲ್ಲಿ ಯಾವ ಹೆಚ್ಚುಕಡಮೆಗಳು ನಡೆದರೂ ಅವನ ಬಾಯಿಂದ ಹೊರಡುತ್ತವೆ ಹಕಾರವಿಕಾರಗಳು. ಇದು ಕನ್ನಡದಲ್ಲಿ ಮಾತ್ರವೇ ಅಲ್ಲ; ಸಂಸ್ಕೃತದಲ್ಲಿಯೂ ಹಾಗೆಯೇ; ಇಂಗ್ಲಿಷಿನಲ್ಲಿ ಕೂಡ ಹಾಗೆಯೇ. ಈ “ಹ”ಆವಳಿಗಳೇ (ಹಾವಳಿ) ನಮ್ಮ ಶೃಂಗಾರ-ವೀರಾದಿ ಅಷ್ಟರಸಗಳು, ಆದಿರಸವಾದ ಶಾಂತ ಕೂಡ ಅದೇಯಂತೆ:
“ಏತತ್ಸಾಮಗಾಯನ್ನಾಸ್ತೇ—
“ಹಾ (೩) ವು ಹಾ (೩) ವು ಹಾ (೩) ವು”
To be continued.
(ಉಮರನ ಒಸಗೆ)