ಒರೆಗಲ್ಲು
ಇಷ್ಟೆಲ್ಲ ಹಿನ್ನೆಲೆ ನಮಗೆ ಲಭ್ಯವಿದ್ದರೂ, ಒಂದು ವಿಶಿಷ್ಟ ಸನ್ನಿವೇಶದಲ್ಲಿ ಯಾವುದು ಧರ್ಮ ಯಾವುದು ಅಧರ್ಮ ಎಂಬ ನಿರ್ಣಯ ಸರಳವಲ್ಲ. ದ್ರೌಪದೀ ಶೀಲಹರಣದ ಸಂದರ್ಭದಲ್ಲಿ ದ್ರೌಪದಿಯು ಆಚಾರ್ಯ ಭೀಷ್ಮರನ್ನು ಮೊನಚಾಗಿ ಪ್ರಶ್ನಿಸಿದಾಗ ಭೀಷ್ಮರೇ ಅದನ್ನು ತಾವು ತೀರ್ಮಾನಿಸಲು ಅಶಕ್ತರಾಗಿದ್ದೇವೆ (‘ನ ಶಕ್ನೋಮಿ ತೇ ಪ್ರಶ್ನಂ ಇಮಾಂ ಯಥಾವತ್’ – 2.60.40) ಎಂದು ಬಹಿರಂಗವಾಗಿ ಹೇಳಬೇಕಾಯಿತು.
ಪುರುಷಾರ್ಥಗಳ ಶ್ರೇಣೀಕರಣ ಮೊದಲಾದ ವಿಸ್ತೃತ ಹಿನ್ನೆಲೆಯಲ್ಲಿ, ಎಂದರೆ ಆ ವಿಶಿಷ್ಟ ಸಂದರ್ಭದಿಂದ ಅತೀತವಾದ ನೆಲೆಯಲ್ಲಿ ಮಾತ್ರ ಶಂಕೆಯು ಪರಿಹಾರವಾಗಬಲ್ಲದು.
ಇದು ಸ್ವಲ್ಪ ವಿವರಣೆಯನ್ನು ಅಪೇಕ್ಷಿಸುತ್ತದೆ.
ಧರ್ಮಕ್ಲೇಶ ಪ್ರಸಂಗಳನ್ನು ಬಾಹ್ಯಸಂದರ್ಭಗಳಿಂದಾಚೆಯ ವಿಶಾಲ ಪ್ರಾಕಾರದಲ್ಲಿ ಅವಲೋಕಿಸಬೇಕಾಗುತ್ತದೆ.
ಉದಾಹರಣೆಗೆ ದ್ರೌಪದೀವಸ್ತ್ರಹರಣದ ಪ್ರಸಂಗದ ಪರಿಶೀಲನೆಯನ್ನೇ ಮುಂದುವರಿಸಬಹುದು. ಆ ಪ್ರಕರಣವನ್ನು ಮೇಲ್ನೋಟದ ಮಟ್ಟದಲ್ಲಷ್ಟೆ ಅರ್ಥವಿಸ ಹೊರಟಲ್ಲಿ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಲು ಅವಳಿಗೆ ತುಂಬಿದ ಸಭೆಯಲ್ಲಿ ಅಷ್ಟು ಅವಮಾನವಾಗುವವರೆಗೆ ಕಾಯಿಸಿದುದು ಭಗವದ್ವಾತ್ಸಲ್ಯವನ್ನು ಬಿಂಬಿಸುತ್ತದೆಯೆ? ದ್ರೌಪದಿಯ ಭಕ್ತಿಯಲ್ಲಿ ನ್ಯೂನತೆ ಇದ್ದಿತೆ? ಅಥವಾ ಶ್ರೀಕೃಷ್ಣನ ಸರ್ವಶಕ್ತಿಮತ್ತ್ವದಲ್ಲಿಯೆ ಕೊರತೆ ಇದ್ದಿತೆ? ದುರ್ಯೋಧನ ದುಃಶಾಸನರನ್ನು ಅಲ್ಲಿಯೆ ಸಂಹರಿಸುವುದು ಶ್ರೀಕೃಷ್ಣನಿಂದ ಏಕೆ ಆಗಲಿಲ್ಲ? – ಇಂತಹ ಪ್ರಶ್ನೆಗಳು ಸಾಮಾನ್ಯರ ಮನಸ್ಸಿನಲ್ಲೇಳಬಹುದು.
ಆದರೆ ವಿಷಯಕ್ಕೆ ಬೇರೆ ಆಯಾಮಗಳೂ ಇವೆ. ದುರ್ಯೋಧನನ ಪ್ರಾಣವು ಭೀಮನ ಗದೆಯಿಂದಲೇ ನೀಗಬೇಕಾಗಿತ್ತಲ್ಲದೆ ಶ್ರೀಕೃಷ್ಣನ ಚಕ್ರದಿಂದಲ್ಲ ಎಂದೇ ಬ್ರಹ್ಮನಿಯಮ ಇದ್ದಿತು – ರಾವಣನ ಸಂಹಾರ ಶ್ರೀರಾಮನಿಂದಲೇ ಆಗಬೇಕೆಂದು ನಿಶ್ಚಯವಾಗಿದ್ದಂತೆ.
ಅವತಾರಪುರುಷರ ಕಾರ್ಯವಿಧಾನಗಳು ಆಯಾ ಪರಿಸ್ಥಿತಿಗೆ ಅನುಗುಣವಾಗಿರುತ್ತವೆ - ಎಂದು ಗ್ರಹಿಸಬೇಕಾಗುತ್ತದೆಯೇ ಹೊರತು ಭಗವದವತಾರಗಳಾದ ಶ್ರೀರಾಮನ ಮತ್ತು ಶ್ರೀಕೃಷ್ಣನ ಸರ್ವಶಕ್ತಿಮತ್ತ್ವವನ್ನು ಯಾರೂ ಶಂಕಿಸರು. ಅವತಾರಕಾರ್ಯಗಳಿಗೂ ಹಲವು ಸೂಕ್ಷ್ಮ ನಿಯಮಗಳಿರುತ್ತವೆ. ಧರ್ಮತತ್ತ್ವಸ್ವರೂಪವು ಗುಹೆಯ ಅಂತರಾಳದಲ್ಲಿ ಅಡಗಿರುತ್ತದೆಂಬ ಮಾತಿನ ತಾತ್ಪರ್ಯ ಇದು.
ಧರ್ಮನಿರ್ಣಯದ ಪ್ರಯಾಸವು ವ್ಯಕ್ತಿಯ ಅಂತರಂಗದಾಢ್ರ್ಯದ ಒರೆಗಲ್ಲೂ ಆಗಿರುತ್ತದೆ. ಮಹಾಭಾರತಗ್ರಂಥವಷ್ಟೂ ವ್ಯಕ್ತಿಯ ಉತ್ಕರ್ಷಾಭಿಮುಖ ಪಯಣದ ಮಜಲುಗಳ ರೂಪಕರೀತಿಯ ವಿಸ್ತೃತ ಚಿತ್ರಣ - ಎಂದು ಭಾವಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡುವಾಗ ಮಹಾಭಾರತವು ಕೊನೆಯ ಪರ್ವದಲ್ಲಿ ಮುಕ್ತಾಯಗೊಂಡಿಲ್ಲ. ಅದು ಸದಾಕಾಲ ಮುಂದುವರಿಯುತ್ತದೆ.
ನಿತ್ಯಸಂಘರ್ಷದ ಪ್ರಕಟೀಕರಣ
ಸಾತ್ತ್ವಿಕ–ತಾಮಸಿಕ ಪ್ರವೃತ್ತಿಗಳ ನಡುವಣ ಸಂಘರ್ಷ ಸದಾಕಾಲ ನಡೆಯುತ್ತಿರುವಂತಹದು. ಅದರ ಪ್ರದರ್ಶನವೇ ಮಹಾಭಾರತದ ಆಶಯ. ಅದು ದೇಶಕಾಲಾತೀತವಾದದ್ದು. ಹೀಗಾಗಿ ಮಹಾಭಾರತದ ವಿವರಗಳು ಐಹಿಕಾತೀತ ತತ್ತ್ವಗಳ ಸಂಕೇತಗಳು. ವೇದಾಂತದರ್ಶನದಲ್ಲಿ ಪರಬ್ರಹ್ಮವೆಂದೂ ಪೌರಾಣಿಕ ವಾಙ್ಮಯದಲ್ಲಿ ಈಶ್ವರನೆಂದೂ ಹೆಸರಿಸಲಾಗಿರುವ ತತ್ತ್ವವೇ ಮಹಾಭಾರತದಲ್ಲಿ ಶ್ರೀಕೃಷ್ಣನಾಗಿ ಮೈದೋರಿದೆ.
‘ಅವತಾರ’, ‘ಅವತರಣ’ ಎಂಬ ಶಬ್ದಗಳೇ ಸಮುನ್ನತ ತತ್ತ್ವವೊಂದರ ಪ್ರತ್ಯಕ್ಷೀಕರಣವೆಂಬುದನ್ನು ಶಾಬ್ದಿಕವಾಗಿಯೆ ಸೂಚಿಸಿವೆ. ಪಾಂಡವರು ವಿವಿಧ ದೇವತೆಗಳ ಅವತರಣಗಳೆಂದು ಮಹಾಭಾರತ ಕಥನದಲ್ಲಿಯೇ ವಾಚ್ಯಗೊಳಿಸಲಾಗಿದೆ. ಅಂತೆಯೇ ದುರ್ಯೋಧನನು ಕಲಿಪುರುಷನ ಅವತರಣ. ಭಗವದ್ಗೀತೆಯು ನರ-ನಾರಾಯಣ ಸಂವಾದವೆಂದು ಪರಿಗಣಿತವಾಗಿರುವುದು ವಿದಿತವೇ ಆಗಿದೆ. ಪ್ರತ್ಯೇಕ ಪಾತ್ರಗಳ ಕಥಾವ್ಯಕ್ತಿತ್ವವನ್ನು ಮೀರಿರುವುದು ಮಹಾಭಾರತದ ಸಂವಿಧಾನ. ಹೀಗೆ ಭಗವದ್ಗೀತೆಯು ಪಾಂಡುಪುತ್ರ ಅರ್ಜುನನಿಗೂ ಯಾದವ ನೇತಾರ ಕೃಷ್ಣನಿಗೂ ನಡುವೆಯಷ್ಟೆ ನಡೆದ ಸಂವಾದವೆನ್ನಲಾಗದು. ಅಲ್ಲಿ ಇರುವುದು ಜೀವಾತ್ಮ-ಪರಮಾತ್ಮ ಸಂಪೃಕ್ತಿ. ಈ ವಿಶಾಲವಾದ ಭೂಮಿಕೆಯನ್ನು ಮನಸ್ಸಿನಲ್ಲಿ ಧರಿಸಿದ್ದರೆ ಮಾತ್ರ ಮಹಾಭಾರತಕಥೆಯ ಆಶಯವನ್ನೂ ಸಂದೇಶವನ್ನೂ ಗ್ರಹಿಸಲಾದೀತು. ಗೀತೆಯಲ್ಲಿ ಯಾವುದನ್ನು ಸಮತ್ವ, ಸಮದರ್ಶನ ಮೊದಲಾದ ಮಾತುಗಳಿಂದ ನಿರ್ದೇಶಿಸಲಾಗಿದೆಯೋ ಅದನ್ನೇ ಮಹಾಭಾರತಕಥೆಯ ಹಂದರದಲ್ಲಿ ಧರ್ಮದ ಸ್ವರೂಪದ ಅನ್ವೇಷಣೆ ಎಂದು ನಿರೂಪಿಸಲಾಗಿದೆ. ದಾರ್ಶನಿಕ ಪರಿಭಾಷೆಯಲ್ಲಿ ಈ ಪ್ರಕ್ರಿಯೆಯೇ ಯೋಗಸಾಧನೆ ಎನಿಸುತ್ತದೆ. ಇದು ಸುಲಭಗ್ರಾಹ್ಯವಲ್ಲವೆಂಬ ಅರಿವು ರಚಯಿತರಲ್ಲಿ ಇದ್ದುದರಿಂದಲೇ ಕಥಾಭಾಗದ ಸಂಕೀರ್ಣತೆಯೂ ಆಖ್ಯಾನ-ಉಪಾಖ್ಯಾನಗಳ ಸಮೃದ್ಧಿಯೂ ಏರ್ಪಟ್ಟಿದೆ.
ಸಾರ್ವಕಾಲಿಕ ಬೋಧೆ
ಮಾನವತೆಗೆ ಇಡೀ ಮಹಾಭಾರತಕೃತಿಯ ದೇಶಕಾಲಾತೀತ ಸಂದೇಶ, ಭಾರತೀಯ ಸಂಸ್ಕೃತಿಯ ಕೇಂದ್ರವಾದ ಧರ್ಮತತ್ತ್ವದ ಸ್ವರೂಪ ಹಾಗೂ ವ್ಯಾಪ್ತಿಯ ನಿರೂಪಣೆ, ಜಗಜ್ಜೀವನಸ್ವರೂಪದ ಹಾಗೂ ಅದರ ಪ್ರಾವಾಹಿಕತೆಯ ವರ್ಣನೆ – ಇವಿಷ್ಟನ್ನೂ ಬೆರೆಳೆಣಿಕೆಯಷ್ಟು ಸಾಲುಗಳಲ್ಲಿ ವ್ಯಾಸರು ಅಡಕವಾಗಿಯೂ ಅವಿಸ್ಮರಣೀಯವಾಗಿಯೂ ನಿವೇಶಗೊಳಿಸಿರುವುದರಿಂದಾಗಿ ಭಾರತಸಾವಿತ್ರೀ ಶ್ಲೋಕಗುಚ್ಛವು ಶಿರೋಮಣಿಪ್ರಾಯವೆನಿಸಿದೆ.
* * *
ಎಷ್ಟೋ ಸಾವಿರ ವರ್ಷಗಳ ಹಿಂದೆ ವಿವರಿಸಲಾದ ಧರ್ಮತತ್ತ್ವ ಈಗಲೂ ಅನ್ವೇಯವೆ? – ಎಂದು ಹಲವರು ಪ್ರಶ್ನಿಸಿಯಾರು. ಆದರೆ ಆಳವಾಗಿ ಯೋಚಿಸಿದಾಗ ಹೊರಪಡುವ ತಥ್ಯವೆಂದರೆ: ಜೀವನದ ಸಮಸ್ಯೆಗಳ ಆಕಾರವು ಕಾಲಕಾಲಕ್ಕೆ ಬದಲಾಗಬಹುದಾದರೂ, ಸಮಸ್ಯೆಗಳ ಮೂಲದಲ್ಲಿರುವ ಮಾನವಸ್ವಭಾವಪ್ರವೃತ್ತಿಗಳು ಬದಲಾಗಲಾರವು – ಎನಿಸುತ್ತದೆ. ಪರಿಭಾಷೆಯು ಬದಲಾದೀತು, ಆದರೆ ಮೂಲಪ್ರವೃತ್ತಿಯು ಬದಲಾಗದು. ಎಲ್ಲ ವ್ಯವಹಾರಗಳಿಗೂ ದೈಹಿಕ, ಮಾನಸಿಕ, ತಾತ್ತ್ವಿಕ – ಇತ್ಯಾದಿ ಆಯಾಮಗಳು ಇರುತ್ತವಷ್ಟೆ. ಕುರುಕ್ಷೇತ್ರಯುದ್ಧವು ಬಾಹ್ಯಸ್ತರೀಯವಾದರೆ ಅದರ ಹಿಂದಿನ ಪ್ರೇರಕ ಪ್ರವೃತ್ತಿಗಳು ಮಾನಸಿಕವಾದವು. ಕಥೆಯನ್ನು ಮುನ್ನಡೆಸುವ ಪಾತ್ರಗಳು ವಿವಿಧ ಮಾನವಪ್ರವೃತ್ತಿಗಳ ಪ್ರತೀಕಗಳಾಗಿ ಯೋಜಿತವಾಗಿವೆಯೆಂಬುದು ಹೊರನೋಟಕ್ಕೇ ಕಾಣುತ್ತದೆ.
ಮೇಲೆ ಹೇಳಿದಂತೆ ತಾತ್ತ್ವಿಕವಾಗಿ ಪರಾಮರ್ಶಿಸುವಾಗ ದೇಶಕಾಲಾಂತರಗಳಲ್ಲಿನ ಹೆಚ್ಚಿನ ಸ್ವರೂಪವ್ಯತ್ಯಾಸಗಳು ಪ್ರಮುಖವೆನಿಸುವುದಿಲ್ಲ. ಹೊರಗಿನ ಸಂರಚನೆಗಳು ಬದಲಾದಾವು. ಹಿಂದೆ ರಾಜನಿದ್ದಲ್ಲಿ ಇಂದು ಸರ್ಕಾರಗಳು. ಹಿಂದೆ ಸಾಮಾಜಿಕ ವರ್ಣಗಳಿದ್ದಲ್ಲಿ ಇಂದು ಆರ್ಥಿಕ ವರ್ಗಗಳು. ಹಿಂದೆ ಅನುಭವಜನಿತವಾಗಿರುತ್ತಿದ್ದ ಸೂತ್ರಗಳು ಈಗ ನಿಯಮನಿರ್ದಿಷ್ಟಗಳು, ಕಾನೂನನ್ನು ಅವಲಂಬಿಸಿರುವಂತಹವು.
ತಾತ್ತ್ವಿಕ ನೆಲೆ
ಅನೇಕ ಸಮಸ್ಯೆಗಳಿಗೆ ಕೇವಲ ಬಾಹ್ಯಸ್ತರೀಯ ಅಥವಾ ಏಕದೇಶೀಯ ಪರಿಹಾರಗಳು ಸಲ್ಲವು. ಸರ್ವಗ್ರಾಹ್ಯ ಪರಿಹಾರವು ಲಭ್ಯವಾಗುವುದು ತಾತ್ತ್ವಿಕ ಸ್ತರದಲ್ಲಿಯೆ – ಎಂಬುದಕ್ಕೆ ಹೆಚ್ಚಿನ ವ್ಯಾಖ್ಯಾನದ ಆವಶ್ಯಕತೆಯಿಲ್ಲ. ನಿದರ್ಶನಕ್ಕೆ: ಅಹಿಂಸೆ, ನೈಷ್ಕಮ್ರ್ಯ ಮೊದಲಾದವು ನಿಷ್ಕ್ರಿಯ ಸುಪ್ತ ತಾಮಸಿಕ ಸ್ಥಿತಿಯಲ್ಲ. ಸಂದರ್ಭವಿದ್ದಾಗ ಸಂಘರ್ಷ ನಡೆಸಬೇಕಾದುದೂ ವಿಹಿತವೇ ಎಂಬುದು ಬೋಧೆ. ಈ ಸೆಣಸಾಟವು ಸ್ವಾರ್ಥಾಕಾಂಕ್ಷಿಯಲ್ಲವೆಂಬುದು ವಿಶೇಷತೆ. ಈ ಸೂಕ್ಷ್ಮತೆಗಳ ಪರಿಜ್ಞಾನವು ಮಹಾಭಾರತದ ಯಥಾರ್ಥ ಗ್ರಹಿಕೆಗೆ ಅನಿವಾರ್ಯ.
ವ್ಯಾಮೋಹಜನಿತವಾದ ರೂಢಿಗತ ಕರ್ತವ್ಯ-ಅಕರ್ತವ್ಯ ಕಲ್ಪನೆಗಳ ಪರಿಮಿತಿಯನ್ನೂ ತಾತ್ತ್ವಿಕ ದೃಷ್ಟಿಯ ಅನಿವಾರ್ಯತೆಯನ್ನೂ ಅರ್ಜುನನಿಗೆ ಮನದಟ್ಟು ಮಾಡಿಸುವುದಕ್ಕಾಗಿಯೆ ಶ್ರೀಕೃಷ್ಣನು ಗೀತೋಪದೇಶ ಮಾಡಿದುದು. ಯುದ್ಧವು ವಿಧಿನಿರ್ದಿಷ್ಟವಾಗಿದ್ದಲ್ಲಿ ಅದನ್ನು ನಿವಾರಿಸುವುದು ಮಾನವಮಾತ್ರರಿಗೆ ಅಶಕ್ಯ – ಎಂದೂ ಬೋಧನೆ ಇದೆ. ಇಂದಿನ ಎಂದರೆ ಆಧುನಿಕಜಗತ್ತಿನ ಸಂದರ್ಭದಲ್ಲಿ ಹಿಂದೊಮ್ಮೆ ಇದ್ದಿರಬಹುದಾದ ಎಷ್ಟೋ ರೀತಿರಿವಾಜುಗಳು ಅವ್ಯವಹಾರ್ಯವೆನಿಸಿದಲ್ಲಿ ಅದಕ್ಕೆ ಶೋಕಿಸಬೇಕಾದುದೇನಿಲ್ಲ ಎಂದೂ ಮೇಲಣ ಬೋಧೆಯಲ್ಲಿ ಅಂತರ್ಗತವಿದೆ. ಇದು ಸೂಕ್ಷ್ಮಚಿಂತನೆಯನ್ನು ಅಪೇಕ್ಷಿಸುತ್ತದೆ. ಈಚಿನ ಕಾಲದಲ್ಲಿ ಬಾಹ್ಯಜೀವನ ಸಮಾನತೆ ಮೊದಲಾದ ಗುರಿಗಳ ಬಗೆಗೆ ಆಗ್ರಹಿಸಲಾಗುತ್ತದೆ. ಇದು ಸಾಧ್ಯವಾದಲ್ಲಿ ಯಾರೂ ಆಕ್ಷೇಪಿಸರು. ಆದರೆ ಆಂತರಿಕ ಸ್ತರದ ಸಮಾನತಾದೃಷ್ಟಿಯೇ ಮಹತ್ತ್ವದ್ದು ಎಂಬುದನ್ನೂ ಮರೆಯಬಾರದು. ಈ ತಾತ್ತ್ವಿಕ ನೆಲೆಗಟ್ಟನ್ನು ಭದ್ರಗೊಳಿಸಿದರೆ ಇದೀಗ ಮುಖ್ಯವೆನಿಸಿರುವ ಎಷ್ಟೋ ಸಂಗತಿಗಳು ಗೌಣವೆನಿಸಿಯಾವು.
ಜಗನ್ನಿಯಮಾನುಗುಣ ದೃಷ್ಟಿ
ಈ ದೃಷ್ಟಿಯು ಕಾಲ್ಪನಿಕಲೋಕದ್ದಲ್ಲವೆಂದೂ ಜಗನ್ನಿಯಮಕ್ಕೆ ಅನುಸ್ಯೂತವಾದುದೆಂದೂ ಈಗಿನ ಎಷ್ಟೋ ವ್ಯಾವಹಾರಿಕ ಸನ್ನಿವೇಶಗಳಿಂದಲೂ ಸ್ಪಷ್ಟಗೊಳ್ಳುತ್ತದೆ. ನಿದರ್ಶನಕ್ಕೆ: ವೈದ್ಯನ ಶಸ್ತ್ರಯುಕ್ತ ಚಿಕಿತ್ಸೆಯು ಹಿಂಸಾಚರಣೆಯೆನಿಸದು; ಯುದ್ಧದಲ್ಲಿನ ಶತ್ರುಹನನವು ಕೊಲೆಯೆನಿಸದು. ನಿಷ್ಕಾರಣವಾಗಿ ಎರಗುವ ಆತತಾಯಿಗಳನ್ನು ಹಿಂದೆಮುಂದೆ ನೋಡದೆ ಮುಗಿಸಬೇಕು – ಎಂದೇ ಸ್ಮೃತಿನಿರ್ದೇಶವಿದೆ.
ಅಹಿಂಸೆ ಮೊದಲಾದ ಪ್ರತಿಪಾದನೆಗಳು ಸಾಪೇಕ್ಷವೆಂದು ಗ್ರಹಿಸಬೇಕು. ಸಂಕೀರ್ಣ ಸನ್ನಿವೇಶಗಳಲ್ಲಿ ದಂಡಪ್ರಯೋಗದಿಂದಲಾದರೂ ಧರ್ಮಸ್ಥಾಪನೆಯಾಗಬೇಕಾಗುತ್ತದೆ – ಎಂಬುದನ್ನು ಸ್ಮೃತಿಗಳೂ ಒಪ್ಪಿವೆ. ಪ್ರಜಾಕಂಟಕರನ್ನು ದಂಡಿಸುವುದು ಹಿಂಸೆಯೆನಿಸದೆ ಧರ್ಮಾನುಗುಣವೆಂದೇ ಪರಿಗಣಿತವಾಗುತ್ತದೆ.
ಹೀಗೆ ಪ್ರತಿ ಸಂದರ್ಭದಲ್ಲಿಯೂ ಧಾರ್ಮಿಕ-ಅಧಾರ್ಮಿಕ ನಿರ್ಣಯವನ್ನು ಶಾಸ್ತ್ರವೇತ್ತರು ವಿಹಿತ ಪರಿಶೀಲನೆಯಿಂದ ಮಾಡಬೇಕಾಗುತ್ತದೆ.
ಈ ಸೂಕ್ಷ್ಮತೆಗಳನ್ನು ಅವಗಣನೆ ಮಾಡಿದಲ್ಲಿ ಪಾಂಡವರು ರಾಜ್ಯಲೋಭದಿಂದ ಯುದ್ಧದಲ್ಲಿ ತೊಡಗಿದರು ಎಂಬಂತಹ ವಿಕೃತ ವಿಶ್ಲೇಷಣೆಗಳಿಗೆ ಅವಕಾಶವಾಗುತ್ತದೆ. ದುರ್ಯೋಧನನಲ್ಲಿಯೂ ರಾವಣನಲ್ಲಿಯೂ ಸ್ವಾಭಿಮಾನಾದಿ ಗುಣಾತಿಶಯಗಳನ್ನು ಗುರುತಿಸುವ ವಿಮರ್ಶನವಿಚಕ್ಷಣರು ಇಲ್ಲದಿಲ್ಲ!
ಕೌರವರು ಬಯಸಿದುದು ತಮ್ಮ ಪ್ರಭುತ್ವವನ್ನು ಮಾತ್ರವಲ್ಲದೆ ಪಾಂಡವರ ವಿನಾಶವನ್ನು ಕೂಡಾ. ಇಂತಹ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ ಚಿಂತನೆಯಲ್ಲಿ ಹೆಚ್ಚಿನ ಸ್ಪಷ್ಟತೆ ಮೂಡೀತು.
ಪ್ರಾವಾಹಿಕತೆ
ಜಗತ್ತಿನ ನಡವಳಿ ಸದಾ ಸರಳರೇಖೆಯಂತೆ ನೇರವಾಗಿ ಇರುವುದಲ್ಲ; ಸದಾ ತಿಳಿಹರಿವಿನಂತೆ ಇರುವುದಲ್ಲ. ಪ್ರವಾಹದಲ್ಲಿ ಒಮ್ಮೊಮ್ಮೆ ಅಡಚಣೆಗಳು ಬರುವುದೂ ಸಹಜವೇ. ಅವನ್ನು ಹೇಗೋ ನಿವಾರಿಸಿಕೊಂಡು ಪ್ರವಾಹವು ಮುಂದುವರಿಯುವುದೂ ಅಷ್ಟೇ ಸಹಜ. ಈ ವಿದ್ಯಮಾನವನ್ನು ಮನಸ್ಸಿನಲ್ಲಿ ಧರಿಸಿ ಪರಾಮಾರ್ಶನೆ ಮಾಡಿದಲ್ಲಿ ಆಗೀಗ ಉಂಟಾಗುವ ವಿಕೃತಿಗಳಿಂದ ಧರ್ಮವು ಭಗ್ನವಾಯಿತು ಎಂಬಂತಹ ಆವಸರದ ನಿರ್ಣಯಗಳಿಗೆ ಆಸ್ಪದವಿರುವುದಿಲ್ಲ. ಮಹತ್ತ್ವದ್ದಾಗಿರುವುದು ಪ್ರಾವಾಹಿಕತೆಯೇ ಹೊರತು ಅಪವಾದಸದೃಶ ಘಟನೆಗಳಲ್ಲ. ಈ ಧಾರಣೆಯನ್ನು ಸ್ವೀಕರಿಸುವುದರಿಂದ ಜೀವನದ ಎಷ್ಟೋ ಸನ್ನಿವೇಶಗಳು ಹೆಚ್ಚು ಸಹನೀಯವಾದಾವು – ಎಂಬುದನ್ನೂ ಒಪ್ಪಬೇಕಾಗುತ್ತದೆ.
ಸ್ವಾತಂತ್ರ್ಯ, ಸಮಾನತೆ, ಭ್ರಾತೃಭಾವ – ಇವು ಆಧುನಿಕ ನಾಗರಿಕತೆಯ ಅಡಿಗಲ್ಲುಗಳೆಂದೂ ಉಪಾದೇಯಗಳೆಂದೂ ಸೂತ್ರೀಕರಣವು ಪ್ರಸಿದ್ಧವಿದೆ. ಈ ನಿರ್ವಚನವನ್ನು ಸಗಟಾಗಿ ಅಥವಾ ದಿಙ್ನಿರ್ದೇಶಕಗಳಾಗಿ ಒಪ್ಪಬಹುದು. ಆದರೆ ಇವುಗಳ ಅನುಸಂಧಾನಕ್ಕೆ ಪ್ರಕೃತ್ಯನುಗುಣ ಪರಿಮಿತಿಗಳು ಇವೆಯೆಂಬುದೂ ಅಲ್ಲಗಳೆಯಲಾಗದ ವಾಸ್ತವ. ಈ ವಿವಿಧ ಪ್ರವೃತ್ತಿಗಳ ನಡುವೆ ಸಮತೋಲನವನ್ನು ಸಾಧಿಸುವುದಕ್ಕಾಗಿಯೇ ರಾಜ್ಯಶಾಸ್ತ್ರವೂ ಕಾನೂನು ಕಟ್ಟಲೆಗಳೂ ಅವಶ್ಯವೆನಿಸಿರುವುದು.
ಸರ್ವಸಮಾಧಾನವೂ ನಿರಂತರ ನಿಸ್ತರಂಗ ಸ್ವಾಸ್ಥ್ಯವೂ ಮಾನವತೆಯು ಸಮೀಪಿಸಬಹುದಾದ ಒಂದು ಆದರ್ಶಸ್ಥಿತಿಯಷ್ಟೆ. ಆದರ್ಶಸ್ಥಿತಿಗೂ ವ್ಯವಹಾರ್ಯತೆಗೂ ನಡುವಣ ಅಂತರವನ್ನು ಹ್ರಸ್ವಗೊಳಿಸುವ ಪ್ರಯಾಸವೇ ಮಾನವೇತಿಹಾಸ. ಈ ಪರಾಮರ್ಶನೆಯನ್ನು ನೈಷೇಧಿಕವೆಂದು ಭಾವಿಸಬೇಕಾದದ್ದಿಲ್ಲ. ಏಕೆಂದರೆ ಸಮಾಜದ ದೃಷ್ಟಿಪಥದಲ್ಲಿ ಉದಾತ್ತ ಆದರ್ಶಗಳ ಕಲ್ಪನೆ ಇರದಿದ್ದಲ್ಲಿ ಉತ್ಕರ್ಷಪ್ರಯತ್ನಗಳಿಗೆ ಪ್ರೋತ್ಸಾಹನ ಲಭಿಸಲಾರದು.
‘ಧರ್ಮದ ಗತಿಯು ನಿಗೂಢವಾದದ್ದು’, ‘ಕರ್ಮದ ಗತಿಯು ಗಹನವಾದದ್ದು’ ಮೊದಲಾದ ಸೂಚ್ಯುಕ್ತಿಗಳ ಹಿಂದೆ ಅಡಗಿರುವುದು ಮೇಲಣ ಜಗದ್‍ವಾಸ್ತವದ ಪರಿಜ್ಞಾನ.
ಮುಕ್ತಾಯ.