ಪುರುಷಾರ್ಥಜಿಜ್ಞಾಸೆ
ಇಲ್ಲಿಯ ಸಂದೇಶದ ಅಂಶಗಳು ಗ್ರಂಥದುದ್ದಕ್ಕೂ ಅಲ್ಲಲ್ಲಿ ಬಂದಿರುವಂತಹವೇ ಆಗಿವೆ. ಮುಖ್ಯವಾದ ಸಂದೇಶ – ಜಗತ್ತಿನಲ್ಲಿ ಪ್ರಾಥಮ್ಯಕ್ಕೆ ಅರ್ಹವಾದ ತತ್ತ್ವವೆಂದರೆ ಧರ್ಮವು ಮಾತ್ರವೆಂಬುದು; ಧರ್ಮವು ಮಾತ್ರ ಅಂತಿಮವಾಗಿ ಜಗತ್ತಿನ ಸಂಸ್ಥಿತಿಗೂ ಸಂಕ್ಷೇಮಕ್ಕೂ ಕಾರಣವಾಗಬಲ್ಲದು – ಎಂಬುದು. ಸಾಮಾನ್ಯವಾಗಿ ವ್ಯಾವಹಾರಿಕ ಜೀವನದ ಸ್ತರದಲ್ಲಿ ಜನರ ಹೆಚ್ಚಿನ ಲಕ್ಷ್ಯವನ್ನು ಸೆಳೆಯುವವು ಅರ್ಥ ಮತ್ತು ಕಾಮಗಳೇ ಆದರೂ, ಭೌತಸಮೃದ್ಧಿ ಮತ್ತು ಕಾಮಪೂರಣಗಳೆಂಬ ಪುರುಷಾರ್ಥಗಳನ್ನೂ ಧರ್ಮವೇ ಸಾಧಿಸಿಕೊಡಬಲ್ಲದು – ಎಂದು ವ್ಯಾಸರು ಹೇಳಿರುವುದನ್ನು ಗಮನಿಸಬೇಕು.
ಭಾರತಸಾವಿತ್ರಿಯ ಮಾತುಗಳ ಆಶಯವು ಮಹಾಭಾರತಸಂದೇಶದ ಸಂಗ್ರಹವೆನಿಸಿರುವುದು ಹೇಗೆಂದು ಅರಿಯಲು ಈ ಶ್ಲೋಕಗಳ ಪೌರ್ವಾಪರ್ಯಸಂಬಂಧ ಪರಾಮರ್ಶನೆಯು ಸಹಕಾರಿ. ಇಲ್ಲಿಯ ಪ್ರತಿಪಾದನೆಯಲ್ಲಿ ಪ್ರಮುಖವಾಗಿ ಎರಡು ಸೂಕ್ಷ್ಮತೆಗಳು ಅಡಗಿವೆ:
1. ವ್ಯಾಸರ ದೃಷ್ಟಿಯಲ್ಲಿ ಜಗತ್ತಿನ ಸಂಸ್ಥಿತಿಗೆ ಧರ್ಮವು ಅನಿವಾರ್ಯವೆಂಬುದನ್ನು ಅವರ ಆವೇಶಪೂರ್ಣ ಮಾತುಗಳು ಸೂಚಿಸಿವೆ. ಧರ್ಮದ ಮಹತ್ತ್ವಕ್ಕೆ ಕಾರಣವನ್ನೂ ವ್ಯಾಸರು ಅಲ್ಲಿಯೆ ಸ್ಫುಟೀಕರಿಸಿದ್ದಾರೆ: ಲೌಕಿಕ ಕಕ್ಷೆಯಲ್ಲಿ ಮುಖ್ಯವೆನಿಸುವ ಅರ್ಥ ಮತ್ತು ಕಾಮ ಎಂಬ ಪುರುಷಾರ್ಥಗಳನ್ನೂ ಧರ್ಮದಿಂದಲೇ ಪಡೆದುಕೊಳ್ಳಲು ಸಾಧ್ಯವಿದೆ. ಆರ್ಥ-ಕಾಮಗಳ ಪ್ರಾಪ್ತಿಯೂ ಧರ್ಮದ ಆಧಾರದಿಂದ ಶಕ್ಯವೆಂದು ಹೇಳಿದ ವ್ಯಾಸರು ಧರ್ಮದ ಪಾರಮ್ಯವನ್ನು ಸ್ಥಾಪಿಸಲು ಇನ್ನೊಂದು ಹೆಜ್ಜೆ ಮುಂದುವರಿದು ಹೇಳುತ್ತಾರೆ – ಧರ್ಮವು ಶಾಶ್ವತವಾದದ್ದು; ಸುಖ-ದುಃಖಗಳು ಬದಲಾಗುತ್ತಿರುವಂತಹವು ಮತ್ತು ಕ್ಷಣಿಕವಾದವು – ಎಂದು. ಈ ಸ್ಥಿರವಾದ ಸತ್ಯದಿಂದ ಹೊಮ್ಮುವ ಬೋಧೆಯೆಂದರೆ – ಆಸೆ, ಭಯ, ಲೋಭಾದಿಗಳ ಸೆಳೆತ ಎಷ್ಟೇ ಪ್ರಬಲವಾಗಿದ್ದರೂ ಆ ಸೆಳೆತಕ್ಕೆ ಒಳಪಟ್ಟು ಧರ್ಮವನ್ನು ಕೈಬಿಡತಕ್ಕದ್ದಲ್ಲ – ಎಂಬುದು. ನಶ್ವರವಾದುದಕ್ಕಿಂತ ಹೆಚ್ಚು ಉಪಾದೇಯವಾದದ್ದು ಶಾಶ್ವತ ತತ್ತ್ವ.
2. ಇಲ್ಲಿ ಅವಧಾನವನ್ನು ಅಪೇಕ್ಷಿಸುವ ಇನ್ನೊಂದು ಸೂಕ್ಷ್ಮತೆಯೆಂದರೆ – ವ್ಯಾಸರ ದೃಷ್ಟಿಯಲ್ಲಿ ಅರ್ಥ ಮತ್ತು ಕಾಮ ಎಂಬ ಪುರುಷಾರ್ಥಗಳೂ ಧರ್ಮಮಾರ್ಗದ ಮೂಲಕ ಸಾಧನೀಯವೆಂಬುದು. ಈ ದರ್ಶನವನ್ನು ವಿಶೇಷವಾಗಿ ಗಮನಿಸಬೇಕಾಗಿದೆ. ಏಕೆಂದರೆ ಮೋಕ್ಷಾಭಿಮುಖತೆಯ ಹೆಸರಿನಲ್ಲಿ ಅರ್ಥ-ಕಾಮಗಳನ್ನು ತುಚ್ಛೀಕರಿಸುವ ದೀರ್ಘ ಪರಂಪರೆಯೇ ನಮ್ಮಲ್ಲಿ ಬೆಳೆದುಬಂದಿರುವುದಲ್ಲದೆ ಇದರಿಂದಾಗಿ ವೇದಾಂತದರ್ಶನವೇ ಅಪವ್ಯಾಖ್ಯಾನಕ್ಕೆ ಒಳಗಾದ ದುರಂತ ಘಟಿಸಿದೆ. ವಾಸ್ತವವಾಗಿ ಮೋಕ್ಷವನ್ನು ಅಂತಿಮಲಕ್ಷ್ಯವನ್ನಾಗಿ ಸ್ವೀಕರಿಸಲಾಗಿದ್ದರೂ ಜಗತ್ತಿನ ಮತ್ತು ಜಗದ್ವ್ಯವಹಾರಗಳ ಪ್ರಾತಿಭಾಸಿಕ ಸತ್ಯತೆಯನ್ನು ಶುದ್ಧವೇದಾಂತದರ್ಶನವು ಅಲ್ಲಗಳೆದಿಲ್ಲ. ಪರುಷಾರ್ಥಗಳ ಶ್ರೇಣೀಕರಣದ ಬಗೆಗೆ ಪರಿಸ್ಫುಟತೆಯನ್ನು ಬೆಳೆಸಿಕೊಳ್ಳದಿರುವುದು ಈ ಆಭಾಸಮಂಡನೆಗಳಿಗೆ ಕಾರಣವಾಗಿದೆ.
ಈ ಮುಖ್ಯವಾದ ಶ್ರೇಣೀಕರಣವನ್ನೂ ವ್ಯಾಸರು ಭಾರತಸಾವಿತ್ರೀ ಶ್ಲೋಕಸಮೂಹದಲ್ಲಿ ಸೂಚಿಸಿದ್ದಾರೆ – ಎಂಬುದು ಪ್ರಬೋಧಕವಾಗಿದೆ. ವ್ಯಾಸರು ಕಂಠೋಕ್ತವಾಗಿ ಹೇಳಿದ್ದಾರೆ – ಧರ್ಮ ಮಾತ್ರವೇ ಶಾಶ್ವತವೂ ಸ್ಥಿರವೂ ಆದದ್ದು; ಸುಖ-ದುಃಖಾದಿಗಳು ಕ್ಷಣಭಂಗುರವಾದವು ಮತ್ತು ಪರಿವರ್ತನಶೀಲವಾದವು; ಹೀಗಿರುವಾಗ ಧರ್ಮವನ್ನು ಅಲಕ್ಷಿಸಬೇಡಿರೆಂದು ನಿಮ್ಮನ್ನು ಬೇಡುತ್ತಿದ್ದೇನೆ – ಎಂದು.
ಲಕ್ಷ್ಯದ ಸ್ಫುಟತೆ
ಇದರ ಅನುಸಂಧಾನ ಸುಲಭವಲ್ಲವೆಂಬುದನ್ನೂ ವ್ಯಾಸರೇ ಧ್ವನಿಸಿದ್ದಾರೆ: ಕಾಮನೆಗಳ ಕ್ಷಣಿಕ ಆಕರ್ಷಣೆ, ಸುಖಾನುಭವದ ಅವಕಾಶ ಮುಗಿದುಹೋದೀತೆಂಬ ಭಯ, ಒಂದಾದಮೇಲೆ ಮತ್ತೊಂದು ಲಭಿಸಲಿ ಎಂಬ ‘ಬೇಕು’ಗಳ ಮುಗಿಯದ ಸರಣಿ – ಇವುಗಳಲ್ಲಿ ಅತಿಯಾಗಿ ವ್ಯಸ್ತರಾದಲ್ಲಿ ಧರ್ಮವು ದೂರಕ್ಕೆ ಸರಿಯುವ ಅಪಾಯಸಂಭವವಿದೆ – ಎಂದು. ಅಂತಿಮಲಕ್ಷ್ಯ ಇರಬೇಕಾದದ್ದು ಶಾಶ್ವತತತ್ತ್ವದ ಕಡೆಗೇ ಹೊರತು ಅಸ್ಥಿರವಾದ ಆಗಂತುಕಸನ್ನಿವೇಶಗಳ ಕಡೆಗೆ ಅಲ್ಲ – ಎಂದು ವ್ಯಾಸರು ಸ್ಪಷ್ಟೀಕರಿಸಿದ್ದಾರೆ.
‘ಹರ್ಷಸ್ಥಾನಸಹಸ್ರಾಣಿ...’ ಎಂಬ ಶ್ಲೋಕವು ಅತ್ಯಂತ ಧ್ವನಿಪೂರ್ಣವಾಗಿದೆ. ಜಗತ್ತಿನಲ್ಲಿ ಉಲ್ಲಾಸಕಾರಣಗಳೂ ದುಃಖಕಾರಣಗಳೂ ಹೇರಳವಾಗಿ ಇರುತ್ತವೆ. ಅವುಗಳಿಂದ ಅಪ್ರಬುದ್ಧರು ವಿಚಲಿತರಾಗುತ್ತಾರೆಯೇ ಹೊರತು ವಿವೇಕವಂತರಲ್ಲ – ಎಂಬುದು ಮೇಲ್ನೋಟಕ್ಕೇ ಕಾಣುವ ಅರ್ಥ. ಇದರ ತಥ್ಯತೆ ಸ್ಪಷ್ಟವೇ ಆಗಿದೆ; ಅದಕ್ಕೆ ತುಂಬಾ ಹೆಚ್ಚಿನ ವಿವರಣೆಯ ಆವಶ್ಯಕತೆ ಇಲ್ಲ. ಆದರೆ ಈ ಉಕ್ತಿಯಲ್ಲಿ ಒಂದು ಸೂಕ್ಷ್ಮತೆ ಅಡಗಿದೆ, ಹೀಗೆ – ನಮ್ಮ ಮನಸ್ಸಿಗೆ ಆತಂಕವನ್ನು ಉಂಟುಮಾಡಿ ನೆಮ್ಮದಿಯನ್ನು ಕೆಡಿಸುವಂತಹ ಸಂದರ್ಭಗಳು ದಿನಬೆಳಗಾದರೆ ಬಂದೊದಗುವುದು ಪ್ರಕೃತಿನಿಯಮವೇ ಆಗಿದೆ. ಅದರ ಸಂಭವನೀಯತೆಯನ್ನು ಎಷ್ಟೇ ಮೇಧಾವಿಗಳಾದವರೂ ನಿವಾರಿಸಲಾರರು. ಎಷ್ಟೇ ಕುಶಲಿಗಳಾದವರೂ ಪ್ರಕೃತಿಜನ್ಯ ಆಘಾತಗಳಿಂದ ಪಾರಾಗಲಾರರು. ಹೀಗಿರುವಾಗ ವಿವೇಕಶಾಲಿಗಳು ಮಾಡಬಹುದಾದದ್ದು ಏನು? ಅದಕ್ಕೆ ಲಭ್ಯವಿರುವುದು ಏಕೈಕ ಪರಿಹಾರ. ಸೃಷ್ಟ್ಯಂತರ್ಗತ ಏರುಪೇರುಗಳನ್ನು ತಪ್ಪಿಸಲೆಳಸುವುದು ಮುಗಿಲಿಗೆ ಕಂಬಳಿ ಹೊದೆಸುವ ಯತ್ನದಂತೆಯೇ. ಅದು ವ್ಯರ್ಥ ಪ್ರಯಾಸ. ಹೀಗಿದ್ದರೂ ಬಾಹ್ಯಸನ್ನಿವೇಶಗಳಿಂದ ನಮ್ಮ ಅಂತರಂಗದ ಮೇಲೆ ಆಗುವ ಪರಿಣಾಮದ ಆಘಾತವನ್ನು ನಮ್ಮಮಟ್ಟಿಗೆ ಕಡಮೆ ಮಾಡಿಕೊಳ್ಳುವುದು ಸಾಧ್ಯವೂ ಅವಶ್ಯವೂ ಆಗಿದೆ. ಇದಾದರೋ ಮನೋನಿಯಂತ್ರಣದ ಮೂಲಕ ಶಕ್ಯವಾಗುತ್ತದೆ. ನಮ್ಮ ಕಾರಣದಿಂದ ಯಾವುದೇ ಅಸಮತೋಲಗಳು ಏರ್ಪಡದಂತೆ ಎಚ್ಚರ ವಹಿಸುವುದು, ಆಗಂತುಕವಾಗಿ ಎರಗುವ ಕ್ಷೋಭೆಗಳಿಂದ ನೆಮ್ಮದಿಗೆ ತಗಲುವ ಭಂಗದ ಬಗೆಗೆ ತಿತಿಕ್ಷೆಯನ್ನು ಅಭ್ಯಾಸ ಮಾಡಿಕೊಳ್ಳುವುದು ಅಧ್ಯಾತ್ಮಾಸಕ್ತರಿಗೆ ಹಿತಕಾರಿ. ಈ ಪ್ರವೃತ್ತಿಯೇ ಉತ್ತರೋತ್ತರ ಹಂತಗಳಲ್ಲಿ ಯೋಗವೆನಿಸುವುದು. ಈ ಉತ್ಕರ್ಷಪ್ರಕ್ರಿಯೆಯನ್ನೇ ಶಬ್ದಾಂತರದಲ್ಲಿ ವ್ಯಾಸರು ಧರ್ಮಾನುಸಂಧಾನ ಎಂದು ನಿರ್ದೇಶಿಸಿದ್ದಾರೆ: ಬಾಹ್ಯಸನ್ನಿವೇಶಗಳಿಂದ ಹೆಚ್ಚು ವಿಚಲಿತರಾಗದ ಮನಃಸ್ಥಿತಿಯನ್ನು ಅಡರುವುದರಲ್ಲಿ ಧರ್ಮಪ್ರಜ್ಞೆಯ ಪಾತ್ರವಿದೆ.
ಉತ್ಕರ್ಷಪಥ
ಹೀಗೆ ಕಾಮನೆಗಳು, ಭಯ-ಲೋಭಗಳು ಮೊದಲಾದವುಗಳ ಪ್ರಭಾವಕ್ಕೆ ಒಳಗಾಗದಿರುವುದು, ಪ್ರಕೃತಿಜನ್ಯವಾಗಿ ಒದಗುವ ಆಘಾತಗಳ ಬಗೆಗೆ ಸಹನೆಯನ್ನು ರೂಢಿಸಿಕೊಳ್ಳುವುದು – ಈ ಎರಡೂ ಅಂಶಗಳಲ್ಲಿ ಧರ್ಮವು ನಮಗೆ ನೆರವಿಗೆ ಬರುತ್ತದೆ. ಈ ಪ್ರಭಾವವ್ಯಾಪ್ತಿಯ ಕಾರಣದಿಂದಲೇ ಧರ್ಮಕ್ಕೆ ಜಗದ್ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಾಗಿರುವುದು. ಶಾಶ್ವತತೆಯ ಮತ್ತು ಸ್ಥಿರತೆಯ ಅಡಿಪಾಯ ಇರುವ ಕಾರಣದಿಂದ ಏರ್ಪಟ್ಟಿರುವುದು ಧರ್ಮದ ಪಾರಮ್ಯ. ಶಾಶ್ವತತೆಯ ಹಾಗೂ ಸ್ಥಿರತೆಯ ಸ್ವರೂಪದಿಂದಾಗಿಯೇ ಧರ್ಮವು ಜಗತ್ತನ್ನು ಧಾರಣೆ ಮಾಡಲು ಶಕ್ತವಾಗಿರುವುದು. ಈ ಬಹು-ಆಯಾಮಿ ಸತ್ತ್ವವಂತಿಕೆ ಧರ್ಮದಲ್ಲಿ ನಿವಿಷ್ಟವಾಗಿದೆ – ಎಂಬುದೂ ‘ಧಾರಣಾತ್ ಧರ್ಮ ಇತ್ಯಾಹುಃ’ ಎಂಬ ಪ್ರಸಿದ್ಧೋಕ್ತಿಯ ಒಂದು ಪ್ರಮುಖ ವಿವಕ್ಷಿತಾರ್ಥ.
ಹೀಗೆ ಜನ್ಮಜನ್ಮಾಂತರಗಳ ಮೂಲಕ ಜೀವದ ಪಯಣದ ವಿವಿಧ ಭಂಗ್ಯಂತರಗಳು, ದೃಶ್ಯಜಗತ್ತಿನ ಕ್ಷಣಭಂಗುರತೆ ಮತ್ತು ಅದರ ನಿರ್ವಹಣವಿಧಾನ; ಈ ಎರಡು ಆಧಾರತತ್ತ್ವಗಳನ್ನು ವ್ಯಾಸರು ‘ಮಾತಾಪಿತೃಸಹಸ್ರಾಣಿ...’ ಮತ್ತು ‘ಹರ್ಷಸ್ಥಾನಸಹಸ್ರಾಣಿ...’ – ಈ ಭಾರತಸಾವಿತ್ರಿಯ ಮೊದಲೆರಡು ಶ್ಲೋಕಗಳಲ್ಲಿ ಸಂಕ್ಷಿಪ್ತವಾಗಿ ಆದರೆ ಅಸಂದಿಗ್ಧವಾಗಿ ನಿರೂಪಿಸಿದಂತಾಯಿತು.
ಜಗತ್ಸಂದರ್ಭಗಳನ್ನು ವಿಭಜಿಸುವುದರ ವೈಯಥ್ರ್ಯವೂ ಭಾರತಸಾವಿತ್ರಿಯ ಮಾತುಗಳಲ್ಲಿಯೆ ಸ್ಫುಟಗೊಂಡಿದೆ. ನಿದರ್ಶನಕ್ಕೆ, ಬಾಹ್ಯಮೂಲ ಆಘಾತಗಳ ಮೇಲೆ ನಮ್ಮ ನಿಯಂತ್ರಣ ನಡೆಯಲಾರದಾದರೂ ಅವುಗಳಿಂದ ನಮ್ಮ ಅಂತರಂಗದ ಮೇಲೆ ಆಗುವ ಪ್ರಭಾವವನ್ನು ಸ್ವಪ್ರಯತ್ನದಿಂದ ಕಡಮೆ ಮಾಡಿಕೊಳ್ಳುವುದು ಸಾಧ್ಯವೆಂಬ ‘ಹರ್ಷಸ್ಥಾನಸಹಸ್ರಾಣಿ...’ ಎಂಬ ಉಕ್ತಿಯ ಬೋಧೆಯು ಪಾರಮಾರ್ಥಿಕ, ವ್ಯಾವಹಾರಿಕ – ಈ ಎರಡೂ ನೆಲೆಗಳಿಗೆ ಅನ್ವಯಿಸುವಂತಹದೇ ಆಗಿದೆ.
ಜನ್ಮಾಂತರ್ಯ
ಧರ್ಮದ ಪಾರಮ್ಯವನ್ನು ತಾತ್ತ್ವಿಕ ನೆಲೆಯಲ್ಲಿ ಮಂಡಿಸುವುದರ ಜೊತೆಗೆ ವ್ಯಾಸರು ಈ ತಥ್ಯಕ್ಕೆ ಪೂರಕವಾದ ಹಲವು ಉಪಪತ್ತಿಗಳನ್ನೂ ಜೊತೆಜೊತೆಗೇ ಸೂಚಿಸಿದ್ದಾರೆ. ಧರ್ಮತತ್ತ್ವಾಂಗೀಕಾರಕ್ಕೆ ಪೂರಕವಾದ ಮಹತ್ತ್ವದ ಸಿದ್ಧಾಂತವೆಂದರೆ ಜನ್ಮಾಂತರ್ಯವನ್ನೊಳಗೊಂಡ ಕರ್ಮಸಿದ್ಧಾಂತ. ವ್ಯಾವಹಾರಿಕ ಸ್ತರದ ಹಲವಾರು ನಿಲವುಗಳು ಪ್ರಸಕ್ತ ಜನ್ಮವೇ ಸ್ವಸಂಪೂರ್ಣವೆಂಬ ದೃಷ್ಟಿಯದಾಗಿರುತ್ತವೆ. ತಾತ್ತ್ವಿಕವಾಗಿ ಜನ್ಮಾಂತರ್ಯವನ್ನು ಒಪ್ಪುವವರೂ ಈ ಮನಃಸ್ಥಿತಿಯಿಂದ ಮುಕ್ತರಾಗುವುದು ಸುಲಭವಲ್ಲ; ಮಾಯೆಯ ಶೃಂಖಲೆ ಅಷ್ಟು ಬಿಗಿಯಾದದ್ದು. ಪ್ರಕೃತ ಜನ್ಮವು ದೀರ್ಘಪ್ರವಾಹದ ಒಂದು ಮಜಲು ಮಾತ್ರವೆಂಬ ಸ್ಥಿರವಾದ ಸ್ಮರಣೆ ಇದ್ದಲ್ಲಿ ನಮ್ಮ ಅನೇಕ ಪ್ರತಿಕ್ರಿಯೆಗಳೂ ಪರಾಮರ್ಶನೆಗಳೂ ಬದಲಾದಾವು. ಜಗತ್ತಿನ ಕ್ಷಣಭಂಗುರತೆಯ ಪರಿಜ್ಞಾನವನ್ನು ದೃಢಗೊಳಿಸಬಲ್ಲ ಒಂದು ಪ್ರಮುಖ ಸಾಧನವೆಂದರೆ ಜನ್ಮಾಂತರ್ಯ ಸಿದ್ಧಾಂತದ ಅಂಗೀಕಾರ. ಈ ಹಿನ್ನೆಲೆಯಲ್ಲಿಯೇ ವ್ಯಾಸರು ತಮ್ಮ ಅಂತಿಮ ಸಂದೇಶದಲ್ಲಿ ಜನ್ಮಾಂತರ್ಯವನ್ನು ಪ್ರಸ್ತಾವಿಸಿದ್ದಾರೆಂದು ಭಾವಿಸಬಹುದು.
ಧಾರಣಸಾಮರ್ಥ್ಯ
‘ಧರ್ಮ’ ಎಂಬ ಶಬ್ದವು ನಾಲ್ಕಾರು ಭಿನ್ನವಾದ ಆದರೆ ಪರಸ್ಪರ ವಿರುದ್ಧಗಳಲ್ಲದ ಅರ್ಥಚ್ಛಾಯೆಗಳ ಮೂಲಕ ಪ್ರಚಲಿತವಿರುವುದು ವಿದಿತವೇ ಆಗಿದೆ. ಆದರೆ ಭಾರತಸಾವಿತ್ರಿಯ ಸಂದರ್ಭದಲ್ಲಿ ವ್ಯಾಸರು ಧರ್ಮ ಶಬ್ದವನ್ನು ಅದರ ಸಮಗ್ರ ವಿವಕ್ಷೆಯಲ್ಲಿ ಬಳಸಿದ್ದಾರೆ. ಆ ನೆಲೆಯ ಧರ್ಮಶಬ್ದಪ್ರತಿಪಾದನೆಗಳು ವಿಪುಲವಾಗಿವೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವೂ ಸಮಗ್ರವೂ ಆದದ್ದೆಂದರೆ ಕರ್ಣಪರ್ವದಲ್ಲಿನ (69.58) ನಿರ್ವಚನ :
ಧಾರಣಾತ್ ಧರ್ಮ ಇತ್ಯಾಹುಃ
ಧರ್ಮೋ ಧಾರಯತೇ ಪ್ರಜಾಃ |
ಯತ್ ಸ್ಯಾತ್ ಧಾರಣಸಂಯುಕ್ತಂ
ಸ ಧರ್ಮ ಇತಿ ನಿಶ್ಚಯಃ ||
“ಧಾರಣೆ ಮಾಡುವುದರಿಂದ ‘ಧರ್ಮ’ ಎನ್ನುತ್ತಾರೆ. ಧರ್ಮವೇ ಪ್ರಜೆಗಳನ್ನು ಧರಿಸಿರುವುದು. ಯಾವುದರಲ್ಲಿ ಧಾರಣಸಾಮಥ್ರ್ಯವಿದೆಯೋ ಅದು ಧರ್ಮ ಎಂದು ನಿಶ್ಚಿತ.”
‘ಧೃಞ್ ಧಾರಣೇ’ ಎಂಬ ಧಾತುವಿನಿಂದ ಜನಿಸಿರುವ ಧರ್ಮ ಶಬ್ದದ ನಿರ್ವಚನ ಜಗತ್ತಿನ ಎಲ್ಲವನ್ನೂ ಮತ್ತು ಎಲ್ಲರನ್ನೂ ನೆಲೆಯಾಗಿ ಇರಿಸುವುದು ಎಂದು. ವ್ಯಾಸರು ಒತ್ತಿಹೇಳುತ್ತಿರುವುದೂ ಧರ್ಮವು ಜಗತ್‍ಸಂಸ್ಥಿತಿಗೂ ಶ್ರೇಯಸ್ಸಿಗೂ ಕಾರಣವಾದದ್ದು ಮತ್ತು ಈ ಕಾರಣದಿಂದಲೇ ಅದು ಅತ್ಯುಚ್ಚ ಸ್ಥಾನಕ್ಕೆ ಅರ್ಹವಾದದ್ದು – ಎಂದು. ಧರ್ಮವನ್ನು ಕುರಿತ ಇದೇ ಜಾಡಿನ ವಿವರಣೆ ಶಾಂತಿಪರ್ವದಲ್ಲಿಯೂ ಬಂದಿದೆ (ಅಧ್ಯಾಯ 109, ಶ್ಲೋಕ 14).
ಧರ್ಮ ತತ್ತ್ವಕ್ಕೆ ಈ ಧಾರಣಸಾಮಥ್ರ್ಯ ಬಂದಿರುವುದು ಹೇಗೆ? – ಎಂದರೆ, ಅದು ಸತ್ಯದ ಮೇಲೆ ಆಧಾರಗೊಂಡಿರುವುದರಿಂದ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ: ಧರ್ಮವೆಂದರೆ ಸತ್ಯವನ್ನು ಆಚರಣೆಯಲ್ಲಿ ರೂಢಿಸುವುದು. ಇದೇ ‘ಅನುಷ್ಠಾನ’, ‘ಅನುಸಂಧಾನ’ ಮೊದಲಾದ ಶಬ್ದಗಳ ಮೂಲಕವೂ ವ್ಯವಹೃತವಾಗಿದೆ. ಈ ತತ್ತ್ವವಾದರೋ ಪ್ರಪ್ರಾಚೀನ ಕಾಲದಿಂದ ಪರಿಚಿತವಾದದ್ದು.
ಮುಂದುವರಿಯುತ್ತದೆ...