ಡಿ.ವಿ.ಜಿ. ಅವರು ಹೇಗೆ ಪತ್ರಕರ್ತರಿಗೊಂದು ಮುಗಿಲೆತ್ತರದ ಮಾದರಿಯಾಗಿ ಬೆಳೆದಿದ್ದರೋ ವ್ಯಕ್ತಿಚಿತ್ರಲೇಖನಕ್ಕೆ ಆದರ್ಶವಾಗಿ ಬೆಳಗಿದ್ದರೋ ವೈದುಷ್ಯದ ಸಮಗ್ರತೆಗೆ ಸಂಕೇತವಾಗಿ ನಿಂತಿದ್ದರೋ ಹಾಗೆಯೇ ಅವರ ಪ್ರಿಯಶಿಷ್ಯ ಎಸ್. ಆರ್. ರಾಮಸ್ವಾಮಿ ಅವರು ನಮ್ಮ ನಡುವೆ ನೆಲಸಿದ್ದಾರೆ. ಕವಿತೆ, ರೂಪಕ, ವೇದಾಂತ ಮೊದಲಾದ ಕೆಲವು ಸಾಹಿತ್ಯಪ್ರಕಾರಗಳಲ್ಲಿ ಡಿ.ವಿ.ಜಿ. ಅವರಂತೆ ರಾಮಸ್ವಾಮಿಯವರು ಕೃತಿರಚನೆ ಮಾಡಿಲ್ಲದಿದ್ದರೂ ಅಂಥ ವಾಙ್ಮಯನಿರ್ಮಿತಿಗೆ ಬೇಕಾದ ಒಳ-ಹೊರಗಿನ ಸಿದ್ಧತೆಗಳನ್ನೆಲ್ಲ ಮಾಡಿಕೊಂಡೇ ಇದ್ದವರು; ಅವುಗಳನ್ನು ನಿರಂತರವಾಗಿ ಆಸ್ವಾದಿಸಿ ಅನುಸಂಧಾನಿಸುತ್ತ ಬಂದವರು. ಇದೇ ರೀತಿ ಡಿ.ವಿ.ಜಿ. ಅವರು ರಾಮಸ್ವಾಮಿಯವರ ಹಾಗೆ ಪರಿಸರಪ್ರಜ್ಞೆ, ಗ್ರಾಮಾಭ್ಯುದಯ, ಸ್ವದೇಶೀಜಾಗರಣ ಮುಂತಾದ ಪ್ರಕಲ್ಪಗಳಲ್ಲಿ ಕ್ಷೇತ್ರಕಾರ್ಯ ಮಾಡಿಲ್ಲದಿದ್ದರೂ ಅವುಗಳ ಮೂಲ-ಚೂಲಗಳನ್ನು ಬಲ್ಲವರಾಗಿದ್ದರು. ಹೀಗೆ ಈ ಗುರು-ಶಿಷ್ಯರಲ್ಲಿ ಗಾಢವಾದ ಸಾಮ್ಯ ಮತ್ತು ಪರಸ್ಪರ ಪೂರಕಭಾವಗಳು ಸಂದಿವೆ.
ಇಂಥ ಒಂದು ಅನ್ಯಾದೃಶವಾದ ಸಾಮ್ಯಕ್ಕಿರುವ ಉಜ್ಜ್ವಲ ಉದಾಹರಣೆ ವ್ಯಕ್ತಿಚಿತ್ರಗಳ ನಿರ್ಮಾಣ. ಡಿ.ವಿ.ಜಿ. ಅವರು ಎಂಟು ಸಂಪುಟಗಳ ‘ಜ್ಞಾಪಕಚಿತ್ರಶಾಲೆ’ಯ ಮೂಲಕ ವ್ಯಕ್ತಿಚಿತ್ರಸಾಹಿತ್ಯಕ್ಕೊಂದು ಮಹಾಕಾವ್ಯದ ಆಯಾಮವನ್ನು ಕಾಣಿಸಿದರು. ರಾಮಸ್ವಾಮಿಯವರು ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ ಎಂಬ ಮೂರು ಹೊತ್ತಗೆಗಳ ಮೂಲಕ ಈ ಪರಂಪರೆಯನ್ನು ಮುಂದುವರಿಸಿದ್ದಾರೆ. ಇಬ್ಬರೂ ಈ ದಾರಿಯಲ್ಲಿ ಮತ್ತೂ ಹತ್ತಾರು ಪುಸ್ತಕಗಳಿಗೆ ಸಾಕಾಗುವಷ್ಟು ವ್ಯಕ್ತಿವಿಷಯಗಳನ್ನು ಇರಿಸಿಕೊಂಡಿದ್ದರೂ ಅವೆಲ್ಲ ಅಕ್ಷರರೂಪದಲ್ಲಿ ನಮಗಾಗಿ ಸಾಕ್ಷಾತ್ಕರಿಸದೆ ಹೋಗಿವೆ; ಇದೊಂದು ತುಂಬಲಾಗದ ನಷ್ಟ. ಆದರೆ ಈಗ ನಮಗೆ ಸಿಕ್ಕಿರುವುದೇನೂ ಸ್ವಲ್ಪದ್ದಲ್ಲ. ಇರುವುದೆಲ್ಲ ಅಪರಂಜಿ.
ಕನ್ನಡಸಾಹಿತ್ಯಕ್ಕೆ ವ್ಯಕ್ತಿಚಿತ್ರಗಳು ಹೊಸತೇನಲ್ಲ. ಪ್ರಾಯಶಃ ಡಿ.ವಿ.ಜಿ. ಅವರ ಬರೆವಣಿಗೆಗೂ ಮುನ್ನ ಕೂಡ ಇಂಥ ವಾಙ್ಮಯ ಬೆಳೆದಿತ್ತಾದರೂ ಅದು ಹೆಚ್ಚಾಗಿ ಜೀವನಚರಿತ್ರೆಯನ್ನು ಕೇಂದ್ರದಲ್ಲಿರಿಸಿಕೊಂಡ ಕಥನವಾಗಿದ್ದಿತು. ಇಲ್ಲಿ ವ್ಯಕ್ತಿಗಳ ಶೀಲ-ಸ್ವಭಾವಗಳನ್ನು ವಿವಿಧ ಸಂದರ್ಭಗಳ ಮೂಲಕ ಧ್ವನಿಸುವುದಕ್ಕಿಂತ ಮಿಗಿಲಾಗಿ ಅವರ ಬದುಕಿನ ವಿವರಗಳನ್ನೂ ಸಾಧನೆ-ಸಿದ್ಧಿಗಳನ್ನೂ ನಮೂದಿಸುವುದೇ ವಾಡಿಕೆಯಾಗಿದ್ದಂತೆ ತೋರುತ್ತದೆ. ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಆದರೆ ವ್ಯಕ್ತಿಗಳ ಬದುಕು-ಬರೆಹಗಳಂಥ ಬಾಹ್ಯವಿವರಗಳಿಗಿಂತ ಭಿನ್ನವಾಗಿ ನಿಲ್ಲಬಲ್ಲ ವ್ಯಕ್ತಿತ್ವದ ಸ್ವಾರಸ್ಯವನ್ನೇ ಕೇಂದ್ರದಲ್ಲಿರಿಸಿ ಕಾಣುವ ಕೆಲಸ ವಿಪುಲವಾಗಿ ನಡೆದಿರುವುದು ಮೊದಲ ಬಾರಿಗೆ ಡಿ.ವಿ.ಜಿ. ಅವರಲ್ಲಿಯೇ ಎಂದರೆ ತಪ್ಪಾಗದು. ಇದನ್ನು ಸಮರ್ಥವಾಗಿ ಮುಂದುವರಿಸಿದ ಶ್ರೇಯಸ್ಸು ರಾಮಸ್ವಾಮಿಯವರಿಗೆ ಸಲ್ಲುತ್ತದೆ.
ವ್ಯಕ್ತಿಚಿತ್ರಗಳು ವ್ಯಕ್ತಿತ್ವದ ದರ್ಶನವೇ ಆಗುವಂಥ ಸಾಹಿತ್ಯದ ನಿರ್ಮಾಣ ಸುಲಭವಲ್ಲ. ವ್ಯಕ್ತಿಗಳ ಜೀವನ-ಸಾಧನೆಗಳನ್ನು ನಿರೂಪಿಸುವ ಲೇಖಕನಿಗೆ ಬೇಕಿರುವ ಎಲ್ಲ ಮಾಹಿತಿಯೂ ವ್ಯಕ್ತಿತ್ವಚಿತ್ರಕನಿಗೆ ತಿಳಿದಿರಬೇಕು. ಆದರೆ ಇದಕ್ಕಿಂತ ಮಿಗಿಲಾಗಿ ಮತ್ತೆಷ್ಟೋ ಅಂಶಗಳು ಆತನಿಗೆ ಹೃದ್ಗತವಾಗಿರಬೇಕು. ಇವುಗಳ ಪೈಕಿ ಅತಿಮುಖ್ಯವಾದುವು ಆಯಾ ವ್ಯಕ್ತಿಗಳ ನೇರವಾದ ಸಂಪರ್ಕ, ನಿಕಟವಾದ ಒಡನಾಟ ಮತ್ತು ಭಾವಾರ್ದ್ರವಾದ ಆತ್ಮೀಯತೆ. ಇದರೊಟ್ಟಿಗೆ ದೀರ್ಘಕಾಲದ ಇಂಥ ಸಂಪರ್ಕದಲ್ಲಿ ಒದಗಿರಬಹುದಾದ ಅನೇಕ ಸಂದರ್ಭಗಳ ವಿವರವಾದ ನೆನಪೂ ಅತ್ಯಾವಶ್ಯಕ. ಇದಿಲ್ಲದಿದ್ದರೆ ಸನ್ನಿವೇಶಗಳ ಚಿತ್ರಣಕ್ಕೆ ಬೇಕಾದ ಮೂಲಸಾಮಗ್ರಿಯೇ ಸೊರಗುತ್ತದೆ. ಹಾಗೆಂದು ಜಿಗುಟಾದ ನೆನಪಿನಲ್ಲಿರುವ ಎಲ್ಲ ಸಂದರ್ಭಗಳನ್ನೂ ಮನಸ್ಸಿಗೆ ಬಂದಂತೆ ಬರೆಯಲಾಗುವುದಿಲ್ಲ; ಬರೆಯಬೇಕಿಲ್ಲ ಕೂಡ. ಯಾವೆಲ್ಲ ಸಂದರ್ಭಗಳು ಆಯಾ ವ್ಯಕ್ತಿಗಳ ಶೀಲ-ಸ್ವಭಾವಗಳನ್ನು ಧ್ವನಿಸಬಲ್ಲುವೋ ಅಂಥವನ್ನೇ ಗಟ್ಟಿಯಾಗಿ ಆಧರಿಸಬೇಕು. ಹೀಗೆ ಮಾಡುವಾಗ ಮತ್ತೆಷ್ಟೋ ವ್ಯಕ್ತಿಗಳ ಬದುಕು-ಭಾವನೆಗಳೂ ಬಯಲಾಗಬಹುದು. ಅವನ್ನೆಲ್ಲ ಕೂಡಿದ ಮಟ್ಟಿಗೂ ವಿರಸವೆನಿಸದೆ ನಿರ್ವಹಿಸಬೇಕಾದ ಎಚ್ಚರ-ಔಚಿತ್ಯಗಳು ಲೇಖಕನಿಗೆ ಆವಶ್ಯಕ. ವಿವಿಧ ಸನ್ನಿವೇಶಗಳನ್ನು ನಿರೂಪಿಸುವಾಗ ಅತಿಸಂಕ್ಷೇಪ ಮತ್ತು ಅತಿವಿಸ್ತರಗಳ ಅಪಾಯಕ್ಕೆ ತುತ್ತಾಗದಂಥ ಚಿತ್ರಕವಾದರೂ ಅಚ್ಚುಕಟ್ಟಾದ ಕಥನಕ್ರಮವನ್ನು ಆತ ಮೈಗೂಡಿಸಿಕೊಳ್ಳಬೇಕು. ಇದು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅರಿಯದೆ, ಭಾಷೆಯ ಒಳ-ಹೊರಗನ್ನು ತಿಳಿಯದೆ, ಬರೆವಣಿಗೆ ಮಾಡಿ ಪಳಗದೆ ಕೈಗೆಟುಕದ ಕೌಶಲ. ಇಂಥ ಆಕರ್ಷಕ ನಿರೂಪಣೆಯ ನಡುವೆ ಸ್ಮರಣೀಯವಾದ ಸೂಕ್ತಿಗಳಿಗೋ ಸಾರವತ್ತಾದ ಅನುಭವೋಕ್ತಿಗಳಿಗೋ ಸಹಜವಾಗಿ ಎಡೆಯಾದರೆ ಅದು ಆಯಾ ಸಂದರ್ಭಗಳ ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ಮಾಡಿದಂತಾಗುತ್ತದೆ.
ಈ ಬಗೆಯ ನಿರೂಪಣೆ ತನ್ನಂತೆಯೇ ಒಂದು ಕಾವ್ಯವಾಗಿಯೋ ಕಾವ್ಯಕಲ್ಪವಾಗಿಯೋ ತೋರದಿರದು. ಯಾವುದೇ ಕಥನಕಾವ್ಯದ ಶರೀರವೆನಿಸಿದ ಇತಿವೃತ್ತ ಮತ್ತದಕ್ಕೆ ಅಂದ-ಚಂದಗಳನ್ನೂ ನುಡಿ-ನಡತೆಗಳನ್ನೂ ತುಂಬಿಕೊಡುವ ವರ್ಣನೆ ಇಂಥ ವ್ಯಕ್ತಿತ್ವಚಿತ್ರಗಳಲ್ಲಿ ತಾನೇತಾನಾಗಿ ಮೈದಳೆಯುತ್ತವೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಆಕರ್ಷಕವಾದ ಈ ಬಗೆಯ ಬರೆಹಗಳಲ್ಲಿ ಭರತನು ಹೇಳುವ ‘ವಿಭಾವ-ಅನುಭಾವ’ಗಳ ಸಾಮಗ್ರಿ ಸಮೃದ್ಧವಾಗಿಯೇ ಇರುತ್ತದೆ. ಹೀಗಾಗಿ ಇವುಗಳಲ್ಲಿ ರಸವುಕ್ಕದಿರಲು ಸಾಧ್ಯವಿಲ್ಲ. ಪ್ರಾಯಶಃ ದಂಡಿ, ರುದ್ರಟ, ಭೋಜ ಮುಂತಾದ ಆಲಂಕಾರಿಕರು ಹೇಳುವ ‘ಪ್ರೇಯೋರಸ’ ಇಂಥದ್ದೇ. ಇದಕ್ಕೆ ಪೂರಕವಾಗಿ ಬರುವ ಹಸನಾದ ಹಾಸ್ಯ ಕಥನವನ್ನು ಮತ್ತಷ್ಟು ಕಳೆಗಟ್ಟಿಸದಿರದು. ಯಾವುದೇ ವ್ಯಕ್ತಿಯ ಬಾಳಿನಲ್ಲಿ ನೋವು-ನಲಿವುಗಳ ಸುಳಿವು ಅನಿವಾರ್ಯ. ಇವು ವ್ಯಕ್ತಿತ್ವಚಿತ್ರಣದ ಕಾಲದಲ್ಲಿ ಕರುಣೆ, ಉತ್ಸಾಹ, ವಾತ್ಸಲ್ಯ, ಪ್ರೇಮ ಮುಂತಾದ ರಸ-ಭಾವಗಳಿಗೆ ಆಸ್ಪದವೀಯುತ್ತವೆ. ಹೀಗಾಗಿ ಈ ಬಗೆಯ ಸಾಹಿತ್ಯಪ್ರಕಾರ ತನ್ನಂತೆ ತಾನೇ ಒಂದು ಸೃಷ್ಟಿಶೀಲ ವಾಙ್ಮಯವಾಗಿ ಮೈದಳೆಯುತ್ತದೆ. ಕಲ್ಪನೆಯೊಂದನ್ನೇ ಆಶ್ರಯಿಸಿದ ಸಾಹಿತ್ಯಕ್ಕಿರುವ ಪ್ರಮಾಣದ ಸ್ವಾತಂತ್ರ್ಯ ಇಲ್ಲಿ ಕೈಗೂಡದಿದ್ದರೂ ವಾಸ್ತವದ ಹಿನ್ನೆಲೆಯೇ ನಿರೂಪಣೆಗೊಂದು ಅಧಿಕೃತತೆಯನ್ನೂ ಧ್ವನಿತವಾಗುವ ಮೌಲ್ಯಗಳಿಗೊಂದು ಸ್ವಯಂಪೂರ್ಣತೆಯನ್ನೂ ಕೊಡುತ್ತದೆ. ಈ ಮೂಲಕ ಔನ್ನತ್ಯ ಮತ್ತು ಉದಾತ್ತತೆಗಳು ಅಯಾಚಿತವಾಗಿ ಸಿದ್ಧಿಸುತ್ತವೆ. ಹೀಗೆ ವ್ಯಕ್ತಿತ್ವಚಿತ್ರಣದ ಸಾಹಿತ್ಯ ಕೇವಲ ಜೀವನಚರಿತ್ರೆಯ ಪ್ರಕಾರಕ್ಕಿಂತ ಮಿಗಿಲಾಗಿ ನಿಲ್ಲುತ್ತದೆ; ಪ್ರಬುದ್ಧರಾದ ಓದುಗರ ಮನವನ್ನು ಗೆಲ್ಲುತ್ತದೆ.
ರಾಮಸ್ವಾಮಿಯವರು ಸೃಜಿಸಿರುವುದು ಇಂಥ ಸಾಹಿತ್ಯವನ್ನು. ಇದನ್ನು ಅವರೇ ತಮ್ಮ ‘ಅರಿಕೆ’ಯಲ್ಲಿ ಸ್ಪಷ್ಟಪಡಿಸಿದ್ದಾರೆ: “ಇಲ್ಲಿರುವುವು ಜೀವನಚರಿತ್ರೆಗಳಲ್ಲ ... ಇವು ಗೆರೆಚಿತ್ರದ ರೀತಿಯ ಮನೋಮುದ್ರಿಕೆಗಳು ... ಹೆಚ್ಚಿನ ಸಂದರ್ಭಗಳಲ್ಲಿ ಬಾಹ್ಯಗೋಚರ ಸಾಧನೆಗಿಂತ ವ್ಯಕ್ತಿತ್ವವು ಬಹುಪಾಲು ಹೆಚ್ಚು ಶ್ರೀಮಂತವಿರುತ್ತದೆ ಎಂಬುದೂ ಅನುಭವಸಿದ್ಧ. ಈ ದೃಷ್ಟಿಯಿಂದಲೂ ಜೀವನಚರಿತ್ರಕಥನಕ್ಕಿಂತ ಸ್ವಲ್ಪ ಭಿನ್ನವಾದ ಇಲ್ಲಿರುವ ರೀತಿಯ ಬರಹವನ್ನು ವಾಚಕರು ಸ್ವಾಗತಿಸಿಯಾರು ಎನಿಸಿದೆ.”[1]
* * *
ಪ್ರಸ್ತುತ ‘ದೀವಟಿಗೆಗಳು’ ಕೃತಿಯ ಬರೆಹಗಳನ್ನು ಪರಿಶೀಲಿಸಬಹುದು. ಇಲ್ಲಿ ಎಂಟು ವ್ಯಕ್ತಿತ್ವಚಿತ್ರಗಳಿವೆ. ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ, ವೀರಕೇಸರಿ ಸೀತಾರಾಮಶಾಸ್ತ್ರೀ, ಎಸ್. ಶ್ರೀಕಂಠಶಾಸ್ತ್ರೀ, ಎನ್. ಚೆನ್ನಕೇಶವಯ್ಯ, ಯಾದವರಾವ್ ಜೋಶಿ ಮತ್ತು ಪಿ. ಕೋದಂಡರಾವ್ ಎಂಬ ಮಹನೀಯರ ಅನನ್ಯ ಚಿತ್ರಣವನ್ನು ಇಲ್ಲಿ ಕಾಣಬಹುದು. (ಶ್ರೀಕಂಠಶಾಸ್ತ್ರಿಗಳನ್ನು ಪರಿಚಯಿಸುವಾಗ ಅವರಿಗೆ ಹಿನ್ನೆಲೆಯಾಗಿ ಮೋಟಗಾನಹಳ್ಳಿಯ ಪಂಡಿತಸಂಕುಲವೆಂಬ ಹೆಸರಿನಿಂದ ಅವರ ಮನೆತನದ ಹಲವರು ವಿದ್ವಾಂಸರ ಪ್ರಸ್ತಾವ ಕೂಡ ಆಕರ್ಷಕವಾಗಿ ಬಂದಿದೆ.) ಇಲ್ಲಿ ಪ್ರಸ್ತುತರಾಗಿರುವ ವ್ಯಕ್ತಿಗಳೆಲ್ಲ ಒಂದಲ್ಲ ಒಂದು ರೀತಿಯಿಂದ ಕನ್ನಡಜನತೆಗೆ ಪರಿಚಿತರು, ಪೂಜನೀಯರು. ಇವರಲ್ಲಿ ಹಲವರನ್ನಾದರೂ ಕುರಿತು ಮತ್ತೆಷ್ಟೋ ಮಂದಿ ಬರೆದಿದ್ದಾರೆ. ಇಂತಿದ್ದರೂ ಈ ಪುಸ್ತಕದಲ್ಲಿ ರಾಮಸ್ವಾಮಿಯವರು ಹವಣಿಸಿರುವ ವಿಷಯ ಬರಿಯ ಮಾಹಿತಿಯ ನಿಟ್ಟಿನಿಂದ ಕಂಡರೂ ಅಪೂರ್ವವಾಗಿದೆ.
ಇದಕ್ಕೆ ಮುಖ್ಯಕಾರಣ ಇಲ್ಲಿಯವರೆಲ್ಲರ ಜೊತೆಗೆ ಅವರಿಗಿದ್ದ ನಿಡುಗಾಲದ ಒಡನಾಟ, ಸಲುಗೆ ಮತ್ತು ಸಹಕೃಷಿ. ಜೊತೆಗೆ ಲೇಖಕರ ಅಸಾಧಾರಣವಾದ ನೆನಪಿನ ಶಕ್ತಿಯೂ ಒದಗಿಬಂದಿದೆ. ದಿಟವೇ, ಇಂಥ ಚಿತ್ರಣಗಳಲ್ಲಿ ಸ್ಮೃತಿಶಕ್ತಿಗೆ ತನ್ನದೇ ಆದ ಸ್ಥಾನವಿದೆ. ಆದರೆ ಇಂಥ ಮಹನೀಯರ ಸಂಪರ್ಕಕ್ಕೆ ಬಂದ ಜಿಗುಟಾದ ನೆನಪಿರುವವರೆಲ್ಲ ಈ ಬಗೆಯ ಬರೆವಣಿಗೆಯನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಬೇಕಾದುದು ಗಟ್ಟಿಯಾದ ಜ್ಞಾಪಕಶಕ್ತಿಯನ್ನು ಮುನ್ನಡಸಬಲ್ಲ ಗುಣಗ್ರಾಹಿ ಮನೋಧರ್ಮ. ಇದು ಜೀವನದರ್ಶನವನ್ನೇ ಕುರಿತಿದೆ. ಯಾರಿಗೆ ನಿರ್ಲಿಪ್ತವಾದರೂ ಸಹಾನುಭೂತಿಭಾಸುರವಾದ ಜಗಜ್ಜೀವನಪ್ರೀತಿ ಉಂಟೋ ಅವರಿಗೆ ಮಾತ್ರ ನೆನಪು ಕೈದೀವಿಗೆಯಾಗಿ ವ್ಯಕ್ತಿಗಳ ಬಾಳಿನ ರಸಸಂದರ್ಭಗಳನ್ನು ಅಚ್ಚಳಿಯದಂತೆ ಉಳಿಸಿ ಬೆಳಸಲು ಸಾಧ್ಯವಾಗುತ್ತದೆ. ಇಂಥ ಚಿಚ್ಛಕ್ತಿ ರಾಮಸ್ವಾಮಿಯವರಿಗೆ ಹೇರಳವಾಗಿದೆ. ಇದನ್ನು ಡಿ.ವಿ.ಜಿ. ಅವರಲ್ಲಿಯೂ ಕಾಣಬಹುದು.
ಇಲ್ಲಿಯ ವ್ಯಕ್ತಿತ್ವಚಿತ್ರಣಗಳ ರಚನಾಕ್ರಮವನ್ನು ಇದಮಿತ್ಥಂ ಎಂದು ನಿರೂಪಿಸುವುದು ಕಷ್ಟ. ರಾಮಸ್ವಾಮಿಗಳು ಆಯಾ ವ್ಯಕ್ತಿಗಳ ಶೀಲ-ಸ್ವಭಾವಗಳಿಗೆ ಅನುಗುಣವಾಗಿ, ಅವರು ತಮ್ಮ ಬದುಕಿನಲ್ಲಿ ಬಂದ ಪರಿ ಮತ್ತು ಬೀರಿದ ಪ್ರಭಾವಗಳಿಗೆ ತಕ್ಕಂತೆ ಪ್ರತಿಯೊಂದು ಲೇಖನವನ್ನೂ ಅನನ್ಯವಾಗಿ ನಿರ್ಮಿಸಿದ್ದಾರೆ. ಆದರೂ ಒಂದು ಸ್ಥೂಲವಾದ ಏಕಸೂತ್ರತೆಯನ್ನು ಕಾಣುವುದಾದರೆ ಅದು ಹೀಗೆ: ಪಾಶ್ಚಾತ್ತ್ಯರ ಮಹಾಕಾವ್ಯಗಳು ‘ಇನ್ ಮೀಡಿಯಸ್ ರೆಸ್’ ಎಂಬ ತಂತ್ರದಂತೆ ರೂಪಿತವಾಗಿವೆಯಷ್ಟೆ. ಇಲ್ಲಿಯೂ ತತ್ಸದೃಶವಾದ ತಂತ್ರವಿದೆ. ಲೇಖಕರು ಯಾವುದೋ ಒಂದು ಸ್ವಾರಸ್ಯಕರ ಘಟನೆಯ ಮೂಲಕ ಆಯಾ ವ್ಯಕ್ತಿಗಳ ಜೀವನದರ್ಶಕವಾದ ಮೌಲ್ಯವನ್ನು ಮೊದಲಿಗೆ ಹರಳುಗಟ್ಟಿಸುತ್ತಾರೆ. ಅನಂತರ ಅವರ ಜೀವನ-ಸಾಧನೆಗಳ ಕೆಲವೊಂದು ವಿವರಗಳು ಯಾಂತ್ರಿಕವಾಗದ ಹಾಗೆ ಮೂಡುತ್ತವೆ. ಆ ಬಳಿಕ ಹತ್ತಾರು ಸಂದರ್ಭಗಳು ಪುಂಖಾನುಪುಂಖವಾಗಿ ಪ್ರಸ್ತುತವಾಗುತ್ತವೆ. ಇವುಗಳಲ್ಲಿ ಗಂಭೀರ, ವಿನೋದ, ವಿಷಾದ, ಉದಾತ್ತ ಮೊದಲಾದ ಹತ್ತಾರು ಭಾವಗಳಿಗೆ ಎಡೆಯಿರುತ್ತದೆ. ಇಂಥ ಘಟನೆಗಳ ನಿರೂಪಣೆಯ ನಡುನಡುವೆಯೇ ಅಯತ್ನವೆಂಬತೆ ಆಯಾ ವ್ಯಕ್ತಿಗಳ ಸಾಹಿತ್ಯಸೂಕ್ತಿಗಳೋ ಸಂದರ್ಭೋಚಿತವಾದ ಹೇಳಿಕೆಗಳೋ ಅಚ್ಚಮಲ್ಲಿಗೆಯ ಮಾಲಿಕೆಯ ನಡುವೆ ಮರುಗ-ಕನಕಾಂಬರಗಳಂತೆ ಅಂದವಾಗಿ ಹವಣುಗೊಳ್ಳುತ್ತವೆ. ಇಲ್ಲೊಂದು ಕ್ರಮವಿರುವಂತೆ ಕಂಡರೂ ಅದು ಕೃತಕವಲ್ಲವೇ ಅಲ್ಲ. ಇವುಗಳೊಟ್ಟಿಗೆ ರಾಮಸ್ವಾಮಿಯವರದೇ ಅಧ್ಯಯನದ ಫಲವಾದ ಸಾರೋಕ್ತಿಗಳು ಅಲ್ಲಲ್ಲಿ ಚೆಲ್ಲುವರಿಯುತ್ತವೆ. ಕಡೆಯಲ್ಲಿ ಕೆಲವೇ ಮಾತುಗಳ ಮೂಲಕ ಇಡಿಯ ವ್ಯಕ್ತಿತ್ವ ಓದುಗರ ಮನಸ್ಸಿನಲ್ಲಿ ನಿಲ್ಲುವಂತೆ ಉಪಸಂಹಾರದ ವಾಕ್ಯಗಳು ಬರುತ್ತವೆ. ಇಲ್ಲಿ ಸ್ವರ್ಣಯುಗವೊಂದು ಅಳಿಯಿತು ಎಂಬಂಥ ಅಳುವಿರುವುದಿಲ್ಲ, ಇಂಥವರು ನಮಗೆ ಆದರ್ಶವಾಗಬೇಕೆಂಬ ಅಬ್ಬರದ ಉಪದೇಶವಿರುವುದಿಲ್ಲ, ಈ ಬಗೆಯ ಮಹನೀಯರನ್ನು ನಾನು ಬಲ್ಲವನಾಗಿದ್ದೆನೆಂಬ ಹೆಮ್ಮೆಯಂತೂ ಸುಳಿಯುವುದೇ ಇಲ್ಲ. ಹೆಚ್ಚೇನು, ಓದುಗರ ಮತ್ತು ಚಿತ್ರಿತರಾದ ವ್ಯಕ್ತಿಗಳ ನಡುವೆ ನಿರೂಪಕರೇ ಉಳಿಯದಂಥ ಅದ್ವೈತ ಸಿದ್ಧವಾಗಿರುತ್ತದೆ. ಇದು ಗಾಢವಾದ ಸಂಗೀತದ ವಿನಿಕೆಯ ಬಳಿಕ ಗಾಯಕರ ದನಿ ಕರಗಿ ಶ್ರುತಿಯೊಂದೇ ಸ್ವಲ್ಪ ಕಾಲ ಮಿಡಿದು ಕಡೆಗೆ ಅದೂ ಕೇಳುಗರ ಆಧಾರಶ್ರುತಿಯಲ್ಲಿ ಅಂತರ್ಧಾನವಾಗುವಂತೆ ಎನ್ನಬೇಕು.
ರಾಮಸ್ವಾಮಿಯವರು ತಮ್ಮ ಈ ಪರಿಯ ಬರೆವಣಿಗೆಯಲ್ಲಿ ಓಜಸ್ವಿಯಾದರೂ ಪ್ರಸನ್ನವಾದ ಭಾಷೆಯನ್ನು ಬಳಸುತ್ತಾರೆ. ಆಯಾ ಸಂದರ್ಭಗಳು ಶಾಸ್ತ್ರೀಯವಾದ ನುಡಿಗಟ್ಟುಗಳನ್ನು ಅಪೇಕ್ಷಿಸಿದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಅವನ್ನು ಬಳಸುವುದಲ್ಲದೆ ಲೋಕರೂಢಿಯ ಆಡುಮಾತಿನ ಧೋರಣೆಯನ್ನೂ ವ್ಯಾಪಕವಾಗಿ ಉಳಿಸಿಕೊಳ್ಳುತ್ತಾರೆ. ಇಂಗ್ಲಿಷಿನ ಸೊಲ್ಲುಗಳಿಗಂತೂ ಬರವೇ ಇಲ್ಲ. ಲೇಖಕರ ನಿರೂಪಣೆಯಂತೆಯೇ ಸಂಭಾಷಣೆಗಳೂ ಹದವರಿತು ಬರುತ್ತವೆ. ಈ ಮೂಲಕ ಸನ್ನಿವೇಶಗಳ ನಾಟ್ಯಾಯಮಾನತೆ ಮತ್ತಷ್ಟು ಕಳೆಗಟ್ಟುತ್ತದೆ. ಒಳ್ಳೆಯ ಸಾಹಿತ್ಯವನ್ನು ಆಸ್ಥೆಯಿಂದ ಓದದವರಿಗೆ ಸ್ವಲ್ಪ ಕಷ್ಟವೇ ಎನಿಸಬಲ್ಲಂತೆ ಅಲ್ಲಲ್ಲಿ ಕನ್ನಡಪದ್ಯಗಳು, ಸಂಸ್ಕೃತಶ್ಲೋಕಗಳು, ಇಂಗ್ಲಿಷ್ ಉದ್ಧರಣಗಳು ಇರುವುವಾದರೂ ಅವೆಲ್ಲ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡ ಕಾರಣ, ಇಡಿಯ ರಚನೆಗೆ ಅನಿರ್ವಾಚ್ಯವಾದ ಸಾಹಿತ್ಯಪರಿಮಳವನ್ನು ಕಟ್ಟಿಕೊಡುವ ಕಾರಣ ಪುಸ್ತಕವನ್ನು ಮತ್ತೆ ಮತ್ತೆ ಓದಬೇಕೆಂಬಂತೆ ಮಾಡುತ್ತವೆ.
ವ್ಯಕ್ತಿತ್ವಚಿತ್ರಣಕ್ಕೆ ತೊಡಗುವ ಲೇಖಕರಿಗೆ ಎದುರಾಗುವ ಮುಖ್ಯ ಸಮಸ್ಯೆ ವಿಭಿನ್ನ ವ್ಯಕ್ತಿಗಳ ಪ್ರಸ್ತಾವದ ಜೊತೆಗೆ ತಮ್ಮವೇ ವೈಯಕ್ತಿಕ ವಿವರಗಳು ಎಡತಾಕುವುದೇ ಆಗಿದೆ. ಇದು ಎಷ್ಟೋ ಬಾರಿ ವಿಮರ್ಶಕರ ಕಟು ಟೀಕೆಗೂ ಕಾರಣವಾಗುತ್ತದೆ. ಹಾಗೆಂದು ಸ್ವಂತದ ಪ್ರಸ್ತಾವವಿಲ್ಲದೆ ಈ ಬಗೆಯ ಬರೆಹಗಳ ನಿರ್ಮಾಣ ಅಸಾಧ್ಯ. ಆಪ್ತತೆ ಮತ್ತು ಅಧಿಕೃತತೆಗಳು ಬರುವುದೇ ಇಂಥ ತೊಡಗಿಕೊಳ್ಳುವಿಕೆಯಿಂದ ತಾನೆ! ಒಟ್ಟಿನಲ್ಲಿ ಇದೊಂದು ಅಸಿಧಾರಾವ್ರತ. ರಾಮಸ್ವಾಮಿಯವರು ಈ ಅಗ್ನಿದಿವ್ಯದಲ್ಲಿ ಅಸಾಧಾರಣವಾಗಿ ತೇರ್ಗಡೆ ಹೊಂದಿದ್ದಾರೆ. ಇಂಥ ಯಶಸ್ಸು ಹೆಚ್ಚಿನವರಿಗೆ ಸಿಕ್ಕಿಲ್ಲ. ಅವರು ವಿಭಿನ್ನ ಸಂದರ್ಭಗಳಲ್ಲಿ ತಮ್ಮನ್ನು ವ್ಯಕ್ತಿಯಾಗಿ ಉಳಿಸಿಕೊಂಡಿದ್ದರೂ ತಮ್ಮ ವ್ಯಕ್ತಿತ್ವವನ್ನು ಎಲ್ಲಿಯೂ ಮುಂದುಮಾಡಿಕೊಳ್ಳದೆ ಇರುವುದೇ ಈ ಬಗೆಯ ಸಾಫಲ್ಯಕ್ಕೆ ಕಾರಣ.
ರಾಮಸ್ವಾಮಿಗಳ ಬರೆವಣಿಗೆಯನ್ನು ಕುರಿತು ಮಾತನಾಡುವ ಯಾರಿಗೂ ಅವರ ಇಡಿಯ ಬರೆಹವನ್ನು ಉದ್ಧರಿಸುವಂಥ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆ ಲೇಖನಗಳ ಪ್ರತಿಪದಪರಿಪೂರ್ಣತೆ. ಹೀಗಾಗಿಯೇ ಅವನ್ನು ಸಂಗ್ರಹಿಸಲಾಗಲಿ, ಬೇರೊಂದು ಮಾತಿನಲ್ಲಿ ನಿರೂಪಿಸುವುದಾಗಲಿ ಅಸಾಧ್ಯವೆಂಬಷ್ಟು ಕಷ್ಟ. ‘ದೀವಟಿಗೆಗಳು’ ಕೃತಿಗೆ ಈ ಮಾತು ಮತ್ತೂ ಹೆಚ್ಚಾಗಿ ಅನ್ವಯಿಸುತ್ತದೆ. ಇಂತಿದ್ದರೂ ದಿಗ್ದರ್ಶಕವಾದ ಕೆಲವೊಂದು ಹೆಗ್ಗುರುತುಗಳನ್ನು ಹಿಡಿದು ನಾವು ಮುಂದೆ ಸಾಗಬಹುದು.
ಸದ್ಯದ ಲೇಖನ ‘ದೀವಟಿಗೆಗಳು’ ಗ್ರಂಥವನ್ನು ಪ್ರಧಾನವಾಗಿ ಆಧರಿಸಿದ್ದರೂ ಪೂರಕ ಸಾಮಗ್ರಿಯಾಗಿ ರಾಮಸ್ವಾಮಿಯವರ ಇತರ ಬರೆಹಗಳನ್ನೂ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದೆ.
[1] ‘ದೀವಟಿಗೆಗಳು’. ಬೆಂಗಳೂರು: ಸಾಹಿತ್ಯಸಿಂಧು ಪ್ರಕಾಶನ, ೨೦೦೯. ಪು. iv
ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಗೌರವಗ್ರಂಥ "ದೀಪಸಾಕ್ಷಿ"ಯಲ್ಲಿ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು, ೨೦೨೨) ಪ್ರಕಟವಾದ ಲೇಖನ.
To be continued.