(ಕನ್ನಡಸಾಹಿತ್ಯನವೋದಯದ ಮುಂಗಿರಣದಂತೆ ಮೂಡಿದುದು ಬಿ. ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ಈ ಕೃತಿ ಪ್ರಕಟವಾದ ತರುಣದಲ್ಲಿಯೇ ನವೋದಯದ ನಿರ್ಮಾತೃಗಳ ಪೈಕಿ ಪ್ರಮುಖರಾದ ಡಿ.ವಿ.ಜಿ. ಇದನ್ನು ಕುರಿತು ತಾವು ನಡಸುತ್ತಿದ್ದ ‘Karnataka: Indian Review of Reviews’ ಮಾಸಪತ್ರಿಕೆಯ ೧೯೨೭ ಜನವರಿ ಸಂಚಿಕೆಯಲ್ಲಿ ಲೇಖನವೊಂದನ್ನು ಬರೆದರು. ಉತ್ತಮ ಕೃತಿಯ ಅತ್ಯುತ್ತಮ ವಿಮರ್ಶೆ ಎಂಬಂತಿರುವ ಪ್ರಕೃತ ಲೇಖನದ ಕನ್ನಡ ಅನುವಾದ ಇಲ್ಲಿದೆ. ಸದ್ಯದ ಅನುವಾದವು ಮೊದಲಿಗೆ ‘ಉತ್ಥಾನ’ ಮಾಸಪತ್ರಿಕೆಯ ೨೦೨೩ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. –ಸಂ.)
ಬಲುಚೆಲುವಾದ ತಳಿರು-ಮಲರುಗಳನ್ನು ತಳೆದ ಹಚ್ಚಹೊಸತಾದ ಗಿಡವೊಂದು ಕನ್ನಡದ ಕಾವ್ಯವಾಟಿಕೆಯಲ್ಲಿ ಕಂಡುಬಂದಿದೆ. ಅದನ್ನು ಅದೆಷ್ಟು ನಯ-ಕೌಶಲಗಳಿಂದ ಬೆಳೆಸಲಾಗಿದೆಯೆಂದರೆ, ಆ ಗಿಡದ ಕೆಳಗಿರುವ ಹೆಸರಿನ ಚೀಟಿಯನ್ನು ಗಮನಿಸದೆ ಮೇಲುಮೇಲಷ್ಟೇ ಅದರತ್ತ ಕಣ್ಣು ಹಾಯಿಸುವ ಯಾರೇ ಆಗಲಿ, ಅದು ನಮ್ಮ ನೆಲದ್ದಲ್ಲವೆಂದು ತಿಳಿಯಲು ಸಾಧ್ಯವೇ ಇಲ್ಲ. ಇಂತಾದರೂ ಅದು ಹೊರಗಿನದ್ದೆಂಬುದು ನಿಜ; ಅದು ನಮ್ಮ ನೆಲಕ್ಕೆ ಸಂಪೂರ್ಣವಾಗಿ ಒಗ್ಗಿಕೊಂಡಿದೆ ಎಂಬುದೂ ನಿಜ. ಆ ಗಿಡವು ಇಲ್ಲಿಯೇ ಶಾಶ್ವತವಾಗಿ ನೆಲಸಿ, ಹೊಸತಾದ ಒಂದು ಸಸ್ಯಜಾತಿಗೂ ನೂತನ ಉದ್ಯಾನವೊಂದರ ಬೀಜಾವಾಪಕ್ಕೂ ನಾಂದಿ ಹಾಡುವುದರಲ್ಲಿ ಸಂಶಯವಿಲ್ಲ. ಈ ಹೊಸ ಗಿಡವೇ ಪ್ರೊ|| ಬಿ. ಎಂ. ಶ್ರೀಕಂಠಯ್ಯನವರು ರಚಿಸಿರುವ ‘ಇಂಗ್ಲಿಷ್ ಗೀತಗಳು’.
ಇಂದಿಗೆ ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ಇಂಗ್ಲಿಷ್ ಸಾಹಿತ್ಯದ ಸಾರ-ಸತ್ತ್ವಗಳನ್ನು ಕನ್ನಡಕ್ಕೆ ತಂದುಕೊಳ್ಳಲು ಆಗೀಗ ಕೆಲವು ಪ್ರಯತ್ನಗಳಾಗಿರುವುದುಂಟು. ಪ್ರಾರಂಭದ ಹಂತದಲ್ಲಿ ಹೆಚ್ಚು-ಕಡಮೆ ಯಥಾವತ್ ಅನುವಾದಗಳ ರೂಪವನ್ನು ಪಡೆದ ಈ ಪ್ರಯತ್ನಗಳು ಇತ್ತೀಚೆಗೆ ಇಂಗ್ಲಿಷ್ ಭಾಷೆಯ ಚಿರಕೃತಿಗಳಿಂದ ಪ್ರೇರಣೆ ಪಡೆದು (ಆದರೆ ಅವುಗಳ ಮೂಲ ಭೌತಪರಿಸರವನ್ನು ಬದಿಗಿರಿಸಿ) ಅವುಗಳ ಹೆಗ್ಗುರುತುಗಳನ್ನು ಅಳವಡಿಸಿಕೊಳ್ಳುವ ಹವಣಾಗಿ ತಿರುಗಿದೆ. ಏನೇ ಆದರೂ ಪರಕೀಯ ಸಾಹಿತ್ಯದ ವಿಷಯ-ವಿವರಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದು ಒಪ್ಪಲೇಬೇಕು. ಅದರಲ್ಲಿಯೂ ಉದ್ದಿಷ್ಟ ಭಾಷೆಗಳು ಕನ್ನಡ ಮತ್ತು ಇಂಗ್ಲಿಷ್‌ಗಳಂತೆ ತಮ್ಮ ರೀತಿ, ಇತಿಹಾಸ, ಪರಿಸರವೇ ಮೊದಲಾದ ಎಲ್ಲ ಅಂಶಗಳಲ್ಲಿಯೂ ಒಂದರಿಂದೊಂದು ಅತ್ಯಂತ ಭಿನ್ನವಾಗಿರುವಾಗ ಈ ಪ್ರಕ್ರಿಯೆ ಇನ್ನಷ್ಟು ತೊಡಕಿನದಾಗುತ್ತದೆ. ಆದರೂ ನಿಜವಾದ ಸಾಹಿತ್ಯದ ನೆಲೆಗಟ್ಟಾದ ಅಳು-ನಗುಗಳೂ ಹಾಸ್ಯ-ಶೋಕಗಳೂ ಎಲ್ಲ ಮಾನವರಿಗೂ ಸಮನಾದವು. ಈ ಸಾಮ್ಯವೇ ಒಂದು ಭಾಷೆಯಲ್ಲಿ ಅಭಿವ್ಯಕ್ತವಾದ ಭಾವನೆ-ವಿಚಾರಗಳು ಮತ್ತೊಂದು ಭಾಷೆಯಲ್ಲಿ ಅವತರಿಸಲು ಅನುವಾಗುತ್ತವೆ.
ಭಾಷಾಂತರದ ಸೊಗಸೂ ಸಾಫಲ್ಯವೂ ಅದನ್ನು ಕೈಗೊಳ್ಳುವವರ ಶಕ್ತಿ-ಸಾಮರ್ಥ್ಯಗಳಿಗೆ ತಕ್ಕಂತೆ ಭಿನ್ನೈಸುತ್ತವೆಂಬುದು ಸ್ಪಷ್ಟವೇ ಆಗಿದೆ. ಪ್ರಸ್ತುತ ‘ಇಂಗ್ಲಿಷ್ ಗೀತಗಳು’ ರಚನೆಯ ಮೂಲಕ ಪ್ರೊ|| ಶ್ರೀಕಂಠಯ್ಯನವರು ಅನುವಾದಕಾರ್ಯದಲ್ಲಿ ತಮಗಿರುವ ಮಾಂತ್ರಿಕ ಶಕ್ತಿಯನ್ನು ತೋರ್ಪಡಿಸಿದ್ದಾರೆ. ಕನ್ನಡಸಾಹಿತ್ಯದ ನವೀಕರಣೋದ್ಯಮವನ್ನು ಯಶಸ್ವಿಯಾಗಿಸಿದ ಕೀರ್ತಿ ಶ್ರೀಕಂಠಯ್ಯನವರಿಗೆ ಸಲ್ಲುತ್ತದೆ.
ಇಲ್ಲಿರುವ ಅರುವತ್ತಮೂರು ಕವಿತೆಗಳ ಪೈಕಿ ಮೊದಲನೆಯದು ‘ಕಾಣಿಕೆ’ - ಪ್ರವೇಶಿಕೆಯ ರೂಪದ್ದು; ಕಡೆಯ ಎರಡು ‘ಭರತಮಾತೆಯ ನುಡಿ’ ಮತ್ತು ‘ಮೈಸೂರು ಮಕ್ಕಳು’ - ದೇಶಾಭಿಮಾನದಿಂದ ಮೈನವಿರೇಳಿಸುವಂಥವು, ನಮ್ಮ ದೇಶದ ಭವಿಷ್ಯದ ಬಗೆಗೆ ಧೈರ್ಯ-ವಿಶ್ವಾಸಗಳನ್ನು ಮೂಡಿಸುವಂಥವು.[1] ಈ ಮೂರು ಕವಿತೆಗಳು ಶ್ರೀಕಂಠಯ್ಯನವರ ಸ್ವರಚನೆಗಳಾಗಿದ್ದು ಅವರ ಕವಿಸಹಜವಾದ ದೃಷ್ಟಿ ಮತ್ತು ಮಾತಿನ ಮೋಡಿಗಳನ್ನು ತೋರಿಸಿಕೊಟ್ಟಿವೆ; ಗ್ರಂಥದಲ್ಲಿರುವ ಮಿಕ್ಕ ರಚನೆಗಳ ಶ್ರೇಷ್ಠತೆಯನ್ನು ಸಾರಿ ಹೇಳಿವೆ. ಇನ್ನು ಅರುವತ್ತು ಕವಿತೆಗಳು ಷೇಕ್‌ಸ್ಪಿಯರಿನಿಂದ ಟೆನಿಸನ್‌ನವರೆಗಿನ ಮೂವತ್ತು ಇಂಗ್ಲಿಷ್ ಕವಿಗಳ ರಚನೆಗಳನ್ನು ಆಧರಿಸಿವೆ. ಶ್ರೀಮಾನ್ ಶ್ರೀಕಂಠಯ್ಯನವರು ಸಾಹಿತ್ಯದ ಸೂಕ್ಷ್ಮ ಹಾಗೂ ಭೂಮ ಗುಣಗಳನ್ನು ಚೆನ್ನಾಗಿ ಗ್ರಹಿಸುವ ಸಾಮರ್ಥ್ಯವುಳ್ಳ ವಿದ್ವಾಂಸರು. ಇಲ್ಲಿಯ ಆಯ್ಕೆಗಳು ಅವರ ದೃಷ್ಟಿವೈಶಾಲ್ಯಕ್ಕೂ ರುಚಿಶುದ್ಧಿಗೂ ಪುರಾವೆಗಳಾಗಿವೆ. (ಈ ವಿಷಯದಲ್ಲಿ ಆಸಕ್ತರಾದ ಕನ್ನಡೇತರ ಓದುಗರ ಮಾಹತಿಗಾಗಿ: ಇಲ್ಲಿಯ ಹಲವು ಸೇರ್ಪಡೆಗಳು ಪಾಲ್‌ಗ್ರೇವ್‌ನ ‘ಗೋಲ್ಡನ್ ಟ್ರೆಷರಿ’ ಹಾಗೂ ಇನ್ನಿತರ ಪ್ರಮಾಣಭೂತ ಕಾವ್ಯಸಂಗ್ರಹಗಳಲ್ಲಿ ಲಭ್ಯವಿವೆ.)
ಕನ್ನಡ ಕಾವ್ಯದ ವಿದ್ಯಾರ್ಥಿಗಳು ಶ್ರೀಮಾನ್ ಶ್ರೀಕಂಠಯ್ಯನವರ ಅನುವಾದದಲ್ಲಿ ಮೂರು ಬಗೆಯ ವೈಶಿಷ್ಟ್ಯಗಳನ್ನು ಗುರುತಿಸಬಹುದು: (೧) ಕಾವ್ಯಭಾವದ ಹೊಸತನ, (೨) ಛಂದಸ್ಸಿನ ಹೊಸತನ ಮತ್ತು (೩) ಭಾಷೆಯ ಹೊಸತನ.
ಹಲವು ಬಗೆಯ ಭಾವಗಳು ಇಲ್ಲಿ ಕಂಡರಣೆಗೊಂಡಿವೆ - ಸ್ಕಾಟ್‌ನ ಸರಳವಾದ ಕಾಳಗದ ಕೂಗು, ಬರ್ನ್ಸ್‌ನ ಪರಿಣಾಮಕರ ಪ್ರಣಯನಿವೇದನೆ, ವರ್ಡ್ಸ್‌ವರ್ತ್‌ನ ಪ್ರಶಾಂತ ಪರ್ಯಾಲೋಚನೆ, ಶೆಲ್ಲಿಯ ವಿಷಣ್ಣ ಪ್ರಲಾಪ, ಹುಡ್‌ನ ಮೃದು ಮಾನವೀಯತೆ, ಇತ್ಯಾದಿ. ಪ್ರತಿಯೊಂದು ರಚನೆಯಲ್ಲಿಯೂ ಮೂಲಕವಿಯ ಉದ್ದೇಶ, ಅವನು ಸೃಜಿಸಿದ ಭಾವಪರಿವೇಷ, ಒಂದು ಹೊಳಹಿನಿಂದ ಮತ್ತೊಂದಕ್ಕೆ ಆತ ಸಾಗುವ ಪರಿ, ವಾಕ್ಯದ ಧ್ವನಿಶೀಲತೆ - ಎಲ್ಲವೂ ಪ್ರಾಮಾಣಿಕವಾಗಿ, ಸಹಜವಾಗಿ ಆಕೃತಿಗೊಂಡಿವೆ. ಈ ಅಪೂರ್ವ ಸಿದ್ಧಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಮೂಲವು ಎಷ್ಟರ ಮಟ್ಟಿಗೆ ಅನುವಾದಸಹವೋ ಅಷ್ಟರ ಮಟ್ಟಿಗೆ ಅದರ ರೂಪಾಂತರ ಸಫಲವಾಗುತ್ತದೆಂಬುದು ವಾಸ್ತವವೇ. ಹೆನ್ಲಿಯ ‘ಮೈ ಇಂಗ್ಲೆಂಡ್’ ಕವಿತೆಯಂತೆ ಭಾವವು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು ಕನ್ನಡವು ಕೇಳರಿಯದ ಬಂಧದಲ್ಲಿ ನಿಬದ್ಧವಾಗಿದ್ದಾಗ, ಅಥವಾ ಶೆಲ್ಲಿಯ ‘ಸ್ಕೈಲಾರ್ಕ್’ನಂತೆ ಕನ್ನಡಕ್ಕೆ ಸಹಜವಲ್ಲದ ರೀತಿಯಲ್ಲಿ ಸಂಕೀರ್ಣ ಭಾವಗಳು ಒತ್ತುಕಟ್ಟಾಗಿದ್ದಾಗ, ಪ್ರೊ|| ಶ್ರೀಕಂಠಯ್ಯನವರು ಬಂಧ-ಭಾಷೆಗಳಲ್ಲಿ ಆದರ್ಶಸ್ತರದ ಉನ್ನತಿಯನ್ನು ಸಾಧಿಸದಿರಬಹುದು. ಆದರೆ ಈ ಲೋಪವು ಅನುವಾದಕರ ಗ್ರಹಣೆಯ ಅಶಕ್ತಿಯನ್ನಾಗಲಿ, ಅವಧಾನದ ಸಡಿಲತೆಯನ್ನಾಗಲಿ ತೋರಿಸುವುದಿಲ್ಲ. ಅಪರ್ಯಾಪ್ತತೆಯ ಬೇರು ಶ್ರೀಕಂಠಯ್ಯನವರ ಅಸಡ್ಡೆಯಲ್ಲಿಲ್ಲ; ಗುಣ-ರೀತಿಗಳಲ್ಲಿ, ಭಾವ-ಬಂಧಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ನಡುವಣ ಅಂತರದಲ್ಲಿದೆ. (ಇಂಥ ಕೆಲಸ ಅನುವಾದಕರ ಕ್ಷಮತೆಯನ್ನು ಅದೆಷ್ಟು ಪರೀಕ್ಷಿಸುತ್ತದೆ ಎಂಬುದನ್ನು ಮರೆಯಬಾರದು.) ಈ ಅಂತರವನ್ನು ಕರಗಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲತೆಯನ್ನು ಕಾಣಬಹುದೆಂದು ಶ್ರೀಕಂಠಯ್ಯನವರಂಥ ಪರಿಣತರು ತೋರಿಸಿಕೊಟ್ಟಿದ್ದಾರೆ; ಈ ಉಪಕಾರಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕು.
ಯಾವ ಎಡೆಗಳಲ್ಲಿ ಮೂಲದ ಆಶಯ-ಆಕೃತಿಗಳೂ ನಮ್ಮ ಭಾಷೆಯ ಪದಪದ್ಧತಿ-ಛಂದೋನಯಗಳೂ ಕೂಡಿದ ಮಟ್ಟಿಗೆ ಮೇಳೈಸುವುವೋ ಅಲ್ಲಿ ಶ್ರೀಕಂಠಯ್ಯನವರು ಸೊಬಗಿನ ಶಿಖರವನ್ನು ಏರಿ ನಿಲ್ಲುತ್ತಾರೆ. ಮೂಲದ ನಾದ ಮತ್ತು ಹಾಸು-ಬೀಸುಗಳನ್ನು ಪ್ರತಿಧ್ವನಿಸುವ ಒಂದು ಸೊಗಸಾದ ರಚನೆ ಹೀಗಿದೆ:
ಕಾಳೆ, ಹರೆ, ಕೊಂಬುಗಳ
ಏಳಿ, ಮೊಳಗಿ ಏಳಿ,
ನಾಡುಗಳ ಕುಳಗಳನು
ಕೂಡಿಕೊಳ ಹೇಳಿ. (Walter Scott: Gathering Song of Donald the Black)
ಸ್ಪಷ್ಟತೆ ಮತ್ತು ಸೌಂದರ್ಯಗಳಿಗೆ ಮಾದರಿಯಾದ ಉದಾಹರಣೆ ಹೀಗಿದೆ:
ಎಳೆಮುದಿಯರೊಂದಾಗಿ
ಕಲೆತು ಹೊಲಗೆಯ್ಮೆಯೊಳು
ನಲಿದುಲಿವ ನಗೆಮಾತು ಕಿವಿಗೆಸೆವುದು,
ಮಲೆಯಲ್ಲಿ ಬಯಲಲ್ಲಿ
ನೆಲದಲ್ಲಿ ಚಲದಲ್ಲಿ
ತಲೆದೋರಿತಾನಂದವೆಲ್ಲೆಲ್ಲಿಯೂ! (William Wordsworth: Written in March)
ಮನಸ್ಸನ್ನು ಕರಗಿಸುವ ಮತ್ತೊಂದು ಚೊಕ್ಕ ಮಾದರಿ:
ತುಂಬಿದೀ ಊರಲ್ಲಿ
ಮನೆ ಇವಳಿಗಿಲ್ಲ,
ತುಂಬಿದೀ ಜನದಲ್ಲಿ
ನೆರೆ ಇವಳಿಗಿಲ್ಲ.
ಅನಾಥೆ ಹಾ, ದಿಕ್ಕಿಲ್ಲ,
ಮರಣವೇ ಶರಣು (Thomas Hood: The Bridge of Sighs)
ಇನ್ನೊಂದು ವಿಶದ, ತೀಕ್ಷ್ಣ ಚಿತ್ರ:
ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು,
ಆವಾಗುವಲೆಯುವುವು ಮನುಜನೆದೆಯ,
ಕಾಮರಾಯಂಗೆಲ್ಲ ಕುಲಪುರೋಹಿತರಾಗಿ
ಹೋಮಾಗ್ನಿಯನು ಬೀಸಿ ಕೆರಳಿಸುವುವು. (S T Coleridge: Love)
ಶಬ್ದಸರಣಿಯ ನವುರಿಗೂ ಭಾವಗಳ ಹರಿವಿಗೂ ಈ ಎಲ್ಲ ಪದ್ಯಗಳು ಉತ್ಕೃಷ್ಟ ಉದಾಹರಣೆಗಳಾಗಿವೆ.
ಇನ್ನು ಛಂದಸ್ಸಿನ ಮಾತು. ಈ ವಿಷಯದಲ್ಲಿ ಶ್ರೀಮಾನ್ ಶ್ರೀಕಂಠಯ್ಯನವರು ಪ್ರಾಯಶಃ ತಮಗೇ ತಿಳಿಯದಂತೆ ಪುನರುಜ್ಜೀವಕರಾಗಿ ದುಡಿದಿದ್ದಾರೆನ್ನಬಹುದು. ಕವಿಯ ಸೂಕ್ಷ್ಮ ಸಂವೇದನೆಯುಳ್ಳ ಅವರು ತಮ್ಮ ಉದ್ದೇಶಕ್ಕೆ ಸಂಸ್ಕೃತದ ವೃತ್ತಗಳಾಗಲಿ, ಕನ್ನಡದ ಷಟ್ಪದಿಗಳಾಗಲಿ, ಎರಡೂ ನುಡಿಗಳಲ್ಲಿ ಬಳಕೆಯಾದ ಕಂದವಾಗಲಿ ಸರಿಹೋಗದೆಂದು ಅರಿತುಕೊಂಡಿದ್ದಾರೆ. ಛಂದಸ್ಸಿನ ಆಯ್ಕೆಯಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯವೂ ಪ್ರಾಸ ಮತ್ತು ಗಣಗಳ ಕಟ್ಟುಗಳಿಂದ ಬಿಡುವೂ ಬೇಕೆನಿಸಿದುವು. ಇದಕ್ಕೆ ಕಾರಣಗಳು ಮುಖ್ಯವಾಗಿ ಎರಡು: (೧) ತಾವು ಹೇಳಹೊರಟಿರುವುದು ತಮ್ಮ ಸ್ವೋಪಜ್ಞ ವಿಚಾರಗಳನ್ನಲ್ಲ; ಹೀಗಾಗಿ ಛಂದಸ್ಸಿನ ನಿರ್ಬಂಧಕ್ಕೆ ತಕ್ಕಂತೆ ವಿಷಯವನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ; (೨) ತಾವು ಆರಿಸಿಕೊಂಡ ವಸ್ತುಗಳು ತಮ್ಮ ಸ್ವರೂಪದಿಂದಲೇ ಭಾವಗೀತದಂಥವು - ಒಂದು ಹೊತ್ತಿನ ಭಾವ, ಅರೆಚಣದ ಬಯಕೆ, ಇತ್ಯಾದಿ. ಇವುಗಳ ಅಭಿವ್ಯಕ್ತಿಗೆ ಹಗುರ ಹಾಗೂ ನಮ್ಯವಾದ ಗತಿಯುಳ್ಳ ಹಾಡುಗಬ್ಬದಂಥ ನುಡಿಜಾಡು ಒಗ್ಗುತ್ತದೆ. ನಮ್ಮ ಹಿಂದಿನ ಕವಿಗಳು ಈ ಬಗೆಯ ನುಡಿನಡೆಯನ್ನು ಸಾಂಗತ್ಯ, ಚೌಪದಿ, ರಗಳೆ ಮುಂತಾದ ಬಂಧಗಳಲ್ಲಿಯೂ ಗೋವಿನ ಹಾಡಿನ ಗತಿಯಂಥ ಜಾನಪದರ ಮಟ್ಟುಗಳಲ್ಲಿಯೂ ಕಂಡುಕೊಂಡಿದ್ದರು. ಶ್ರೀಮಾನ್ ಶ್ರೀಕಂಠಯ್ಯನವರು ಈ ಕೆಲವು ಹಳೆಯ ಬಂಧಗಳನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬಳಸಿಕೊಂಡಿದ್ದಾರೆ. ಪದ್ಯಗಳ ಪಾದಗಳನ್ನು ಬೇರೊಂದು ಬಗೆಯಲ್ಲಿ ಬಿಡಿಸಿ ಜೋಡಿಸಿರುವುದರಿಂದ, ಅಕ್ಷರವಿನ್ಯಾಸದಲ್ಲಿ ಕೆಲವು ಹೊಸ ತಾಂತ್ರಿಕ ಸಂಗತಿಗಳನ್ನು ಉಪಯೋಗಿಸಿರುವುದರಿಂದ, ಹಳೆಯ ಬಂಧಗಳ ಛಾಯೆ ಥಟ್ಟನೆ ಸ್ಪಷ್ಟವಾಗಿ ತೋರದಿರಬಹುದು. ಕೆಲವು ಸಾಲುಗಳನ್ನು ಹೊರತುಪಡಿಸಿದರೆ, ಇಲ್ಲಿಯ ಬಲುಮಟ್ಟಿನ ಸಾಲುಗಳು ರಗಳೆ, ದ್ವಿಪದಿ, ಸಾಂಗತ್ಯ, ಷಟ್ಪದಿ ಮುಂತಾದ - ಪ್ರಸಿದ್ಧ ಕನ್ನಡ ಕೃತಿಗಳನ್ನು ತಿಳಿದವರೆಲ್ಲ ಗುರುತಿಸಬಹುದಾದ - ಛಂದಸ್ಸುಗಳ ನಡೆಗಳನ್ನೇ ಹೊಂದಿವೆ. ಇದು ಪ್ರಾಯಶಃ ಉದ್ದೇಶಪೂರ್ವಕವಾಗಿ ಆದ ಪರಿಣಾಮವಲ್ಲ. ಶ್ರೀಕಂಠಯ್ಯನವರು ಉದ್ದೇಶಪೂರ್ವಕವಾಗಿ ಹಳೆಯ ಮಾದರಿಗಳಿಂದ ಪಕ್ಕಕ್ಕೆ ಸರಿದು ತಮ್ಮ ಆಯಾ ಹೊತ್ತಿನ ವಸ್ತುವಿಗೂ ಅದರ ಗತಿಗೂ ಹೊಂದುವ ಬಂಧಗಳನ್ನು ಹವಣಿಸಿಕೊಳ್ಳಹೊರಟಿರಬೇಕು. ಯೋಗಾಯೋಗದಿಂದ ಅವರು ಹೀಗೆ ಆರಿಸಿಕೊಂಡ ಬಂಧಗಳು ಕನ್ನಡಕ್ಕೆ ಈಗಾಗಲೇ ಪರಿಚಿತವಾಗಿವೆ. ಇದು ಕನ್ನಡಕ್ಕೆ ತನ್ನದೇ ಆದ ಒಂದು ವಾಗ್ಧಾಟಿಯಿದೆ, ಯಾರು ಹೇಗೆ ಬಳಸಿದರೂ ಅದು ಉಳಿದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ. ಸರಳವಾದ ಕೆಲವು ಹಳೆಯ ಬಂಧಗಳು - ಅದರಲ್ಲಿಯೂ ಹಾಡುಗಬ್ಬದವು - ಇಂದಿನ ಬಳಕೆಗೂ ಶಕ್ತವಾಗಿವೆ ಎಂದು ಶ್ರೀಕಂಠಯ್ಯನವರ ರಚನೆಗಳು ದೃಢಪಡಿಸಿವೆ. ನಮ್ಮಲ್ಲಿ ರೂಢವಾಗಿರುವ ಗೌಡೀ-ಪಾಂಚಾಲೀ ರೀತಿಯ ಗಡುಚಾದ ಪದ್ಯಶೈಲಿ ಇವುಗಳ ಬಳಕೆಯನ್ನು ತಗ್ಗಿಸಿರಬೇಕು. ಇದೀಗ ಶ್ರೀಮಾನ್ ಶ್ರೀಕಂಠಯ್ಯನವರು ಭಾವಗೀತಗಳನ್ನು ಹೊಸೆಯಲು ಅವುಗಳು ಹೇಗೆ ಹೊಂದುತ್ತವೆಂದು ಸೋದಾಹರಣವಾಗಿ ಸಿದ್ಧಪಡಿಸಿದ್ದಾರೆ. ಪದ್ಯದ ಸಾಲುಗಳನ್ನು ಅವರು ಬಿಡಿಸಿ ಬರೆದಿರುವ ಬಗೆ ಓದಿಗೆ ಹಿತವೆನಿಸಿದೆ; ಕವಿತೆಯ ಪ್ರತ್ಯೇಕ ಭಾಗಗಳಿಗೆ ಸಲ್ಲಬೇಕಾದ ಅವಧಾರಣೆಯನ್ನು ಅವು ತಾವಾಗಿ ತೋರಿಸಿಕೊಟ್ಟಿವೆ.
ಭಾಷೆಯ ವಿಷಯದಲ್ಲಿಯೂ ಶ್ರೀಕಂಠಯ್ಯನವರು ಪುನರುಜ್ಜೀವಕರೆಂದು ಹೇಳಿದರೆ ತಪ್ಪಾಗದು. ಭಾಷಾಮೋಹಿತರಾದ ಕೆಲವು ಕನ್ನಡ ಲೇಖಕರು ಭಾವಿಸುವಂತೆ ಸಂಸ್ಕೃತಕ್ಕೆ ವಿರೋಧವನ್ನು ವ್ಯಕ್ತಪಡಿಸಿ, ಅಸ್ಪಷ್ಟವಾದ ಹಳಗನ್ನಡದ ಪದಗಳನ್ನು ಹೆಚ್ಚಾಗಿ ಬಳಸುವುದು ಒಳ್ಳೆಯ ಶೈಲಿಯಲ್ಲ. ನಾನು ಹೇಳುತ್ತಿರುವ ಪುನರುಜ್ಜೀವನ ಈ ಬಗೆಯದಲ್ಲ. ಶ್ರೀಮಾನ್ ಶ್ರೀಕಂಠಯ್ಯನವರು ಸರಳ ಪದಗಳನ್ನು, ಎಲ್ಲರಿಗೂ ತಿಳಿದ ನುಡಿಗಟ್ಟುಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದಷ್ಟೇ ನಾನು ಹೇಳುತ್ತಿರುವುದು. ಎಷ್ಟೋ ಬಾರಿ ಭವ್ಯವಾಗಿ ಹೇಳಬೇಕು ಎಂಬ ಉದ್ದೇಶದಿಂದ ಹೊರಟ ಕವಿತೆ ಭಾರವಾಗಿ ಭಾಸವಾಗುತ್ತದೆ; ಶ್ರೀಕಂಠಯ್ಯನವರು ಈ ಹಾದಿಯನ್ನು ಹಿಡಿದವರಲ್ಲ. ಸರಳತೆ, ಸ್ಪಷ್ಟತೆ, ಏಕಾಗ್ರತೆ – ಇವು ಅವರು ಎತ್ತಿಹಿಡಿಯುವ ಗುಣಗಳು; ಈ ಗುಣಗಳು ಸಾಮಾನ್ಯ ಜನರ ದಿನನಿತ್ಯದ ಮಾತುಗಳಲ್ಲಿಯೇ ಕಂಡುಬರುತ್ತವೆಂದು ಅವರ ವಿಶ್ವಾಸ. ಹೀಗೆಂದ ಮಾತ್ರಕ್ಕೆ ಅವರು ಅಗ್ಗದ ಆಡುಮತನ್ನು ಬಳಸುತ್ತಾರೆಂದಲ್ಲ. ಅವರೆಂದೂ ಪ್ರತಿಷ್ಠಿತ ಪರಂಪರೆಯ ವಿರುದ್ಧ ಸ್ವಚ್ಛಂದವಾಗಿ ವರ್ತಿಸುವವರಲ್ಲ. ಪ್ರಾಚೀನ ಸಂಪ್ರದಾಯದ ಅರ್ಥವಂತಿಕೆಯನ್ನು ಅವರು ಚೆನ್ನಾಗಿ ಬಲ್ಲರೆಂದರೆ ಇನ್ನೂ ಸರಿಯಾದೀತು. ಎಷ್ಟೋ ಮಂದಿ ಆಧುನಿಕ ಕವಿಗಳು ಸಂತೋಷದಿಂದ ಕೈಬಿಡುತ್ತಿರುವ ಆದಿಪ್ರಾಸವನ್ನು ಅವರು ತಮ್ಮ ಅನೇಕ ಸಾಲುಗಳಲ್ಲಿ ಉಳಿಸಿಕೊಂಡಿದ್ದಾರೆ. ಉಚ್ಚಕೋಟಿಯ ಕವಿಯೂ ವಿದ್ವಾಂಸರೂ ಆದ ಅವರಿಗೆ ಕನ್ನಡದಂಥ ಪ್ರವರ್ಧಮಾನ ಭಾಷೆಗೆ ಬೇಕಿರುವ ವ್ಯಾಕರಣದ ಕಟ್ಟುಪಾಡನ್ನು ತ್ಯಜಿಸದೆಯೇ ಹೃದಯಕ್ಕೆ ನಾಟುವಂತೆ, ಬುದ್ಧಿಗೆ ಹಿಡಿಸುವಂತೆ ಬರೆಯುವ ಕಲೆ ಸಿದ್ಧಿಸಿದೆ. ಬಳಕೆಯಲ್ಲಿರುವ ಸಾಮಾನ್ಯ ಪದಗಳನ್ನೇ ಹೇಗೆ ಹೊಸ ಹೊಳಪಿನಿಂದ ಅರ್ಥವತ್ತಾಗಿ, ಶ್ರುತಿಸುಭಗವಾಗಿ ಬಳಸಬಹುದೆಂದು ಅವರು ತೋರಿಸಿಕೊಟ್ಟಿದ್ದಾರೆ. ಇಂಗ್ಲಿಷಿನ ಗತಿ-ಗೇಯತೆಗಳನ್ನು ಕನ್ನಡಕ್ಕೆ ತಂದುಕೊಳ್ಳುವ ಬಯಕೆ ಅವರನ್ನು ಕನ್ನಡಕ್ಕೆ ಈಗಾಗಲೇ ಪರಿಚಿತವಾಗಿರುವ ಬಂಧಗಳನ್ನು ಬಳಸುವಂತೆ ಮಾಡಿರುವ ಹಾಗೆಯೇ, ಇಂಗ್ಲಿಷಿನಂತೆ ಸಂಕ್ಷಿಪ್ತ-ಸಾಂದ್ರವಾಗಿ ಬರೆಯಬೇಕೆಂಬ ಬಯಕೆ ನಮ್ಮ ನುಡಿಗೆ ಸಹಜವಾದ – ಆದರೆ ಹೆಚ್ಚಿನ ಪರಿಚಯದಿಂದಲೇ ಅವಜ್ಞೆಗೆ ತುತ್ತಾಗಿ ಕಳೆಗುಂದಿರುವ – ಪದಪುಂಜಗಳನ್ನು ಪ್ರಯೋಗಿಸುವಂತೆ ಮಾಡಿದೆ. ಹೀಗೆ ಸಾಮಾನ್ಯ ಮನುಷ್ಯರನ್ನು ಕುರಿತ, ಸರಳ ಶಬ್ದಗಳಿಂದ ಕೂಡಿದ ಶ್ರೀಕಂಠಯ್ಯನವರ ಕೃತಿಯನ್ನು ಮೆಚ್ಚಲು ಸಾಂಪ್ರದಾಯಿಕ ಪಂಡಿತರು ಹೆಚ್ಚಿನ ಉತ್ಸಾಹವನ್ನು ತೋರದಿರಬಹುದು. ವರ್ತಮಾನ ಜಗತ್ತಿನ ಬೇರೆಯ ವಿಷಯಗಳಂತೆಯೇ ಕಾವ್ಯದ ವಿಷಯದಲ್ಲಿಯೂ ಅಂತಹ ಪಂಡಿತರ ದೃಷ್ಟಿ ಸಂಕುಚಿತವಾದದ್ದೆನ್ನಬೇಕಾಗಿದೆ. ಅದು ಹಾಗಿರಲಿ. ಮಾನವನ ಮೂಲಭೂತ ಭಾವನೆಗಳಿಗೆ ನೇರವಾಗಿ ಸಂಬಂಧಿಸಿದ ಸಂಗತಿಗಳಲ್ಲಿ ಪಂಡಿತರಿಗಿಂತ ಸಾಮಾನ್ಯ ಜನರಿಗೇ ಹೆಚ್ಚಿನ ಬೆಲೆ ಸಲ್ಲತಕ್ಕದ್ದು.
ಇನ್ನು ಪ್ರೊ|| ಶ್ರೀಕಂಠಯ್ಯನವರ ಕೃತಿಯನ್ನು ಅವಲೋಕಿಸಿ ಮೆಚ್ಚಿಕೊಂಡ ನಾನು ಒಂದೆರಡು ಸೂಚನೆಗಳನ್ನು ನೀಡಬೇಕಿದೆ. ಇವು ಒಂದು ಮತ್ತೊಂದಕ್ಕೆ ಸಂಬಂಧಿಸಿದುವಲ್ಲ; ಪ್ರಸ್ತುತ ಕೃತಿಯ ವಿಮರ್ಶೆಯೂ ಅಲ್ಲ. ಬದಲಾಗಿ, ಈ ತೆರನಾದ ಕೆಲಸವನ್ನು ಕೈಗೊಳ್ಳಲು ಬಯಸುವವರಿಗೆ ಕೊಡುತ್ತಿರುವ ಸಲಹೆಗಳು. ಇವು ಎರಡು ಮುಖ್ಯ ಸಂಗತಿಗಳಿಗೆ ಸಂಬಂಧಿಸಿವೆ: (೧) ಕನ್ನಡದಲ್ಲಿ ಲೇಖನಚಿಹ್ನೆಗಳ ಬಳಕೆ, (೨) ಅನುವಾದ ಅಥವಾ ರೂಪಾಂತರಕ್ಕೆ ಆಯ್ಕೆ ಮಾಡಬಹುದಾದ ಪದ್ಯಗಳು.
ಕನ್ನಡಕ್ಕೆ ಲೇಖನಚಿಹ್ನೆಗಳು (‘ಪಂಕ್ಚುಯೇಶನ್’) ಹೊಸತು. ಹೇಳಬೇಕಿರುವ ವಿಷಯ ಕ್ಲಿಷ್ಟವಾದಾಗ ಮತ್ತು ಹೇಳುವ ವಿಧಾನ ಸಂಕೀರ್ಣವಾದಾಗ ಇವುಗಳನ್ನು ಬಳಸುವುದು ಅವಶ್ಯವಾಗುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಈ ಬಗೆಯ ವಾಕ್ಯವಿನ್ಯಾಸ ಕಂಡುಬರುವುದಿಲ್ಲ. ಅಲ್ಲಿ ನಾವು ಕಾಣುವ ಪಾತ್ರಗಳು ಹೆಚ್ಚಾಗಿ ದೇವ-ಋಷಿಗಳು, ಅತಿಮಾನುಷ ಎಂದು ತೋರುವ ನಡೆಯುಳ್ಳವರು ಅಥವಾ ಸರಳ ಸಾಮಾನ್ಯರು. ಈ ಪಾತ್ರಗಳ ಆಲೋಚನೆಗಳು ಇಂದಿನ ಸಂದಿಗ್ಧ-ಅನ್ವೇಷಕ ಮನಸ್ಸುಗಳನ್ನು ಕಾಡುವ ಸಂಶಯ, ವಿತರ್ಕ ಮತ್ತು ಪರಿಪ್ರಶ್ನೆಗಳಿಂದ ಮುಕ್ತವಾಗಿದ್ದವು. ಹೀಗಾಗಿಯೇ ಪ್ರಾಚೀನ ಸಾಹಿತ್ಯದಲ್ಲಿ ಲೇಖನಚಿಹ್ನೆಗಳು ಕಂಡುಬರುವುದಿಲ್ಲ ಎಂದು ಊಹಿಸಬಹುದು. ಇಂದಾದರೋ ಅವು ಸ್ಪಷ್ಟ ಅಭಿವ್ಯಕ್ತಿಗೆ ಪದಗಳಷ್ಟೇ ಅನಿವಾರ್ಯವಾದ ಸಾಧನಗಳಾಗಿವೆ. ಹೀಗಿದ್ದರೂ ಇಂಥ ಚಿಹ್ನೆಗಳನ್ನು ಹೆಚ್ಚಾಗಿ ಬಳಸದಿರುವುದೇ ಉತ್ತಮ ಲೇಖನಶೈಲಿಯ ಒರೆಗಲ್ಲು. ಆದರೆ ಬಳಸಲೇಬೇಕಾದ ಸಂದರ್ಭಗಳಲ್ಲಿ ಕವಿಯಾದವನು ಮುಜುಗರ ಪಟ್ಟು ಹಿಂಜರಿಯಬೇಕಿಲ್ಲ. ಉದಾಹರಣೆಗೆ:
ತನ್ನ ಬುದ್ಧಿ ತನಗೆ ಸಿದ್ಧಿ
ಎನ್ನಬೇಡ? ಏನೆ ಇರಲಿ?
ಇಲ್ಲಿಯ ಪ್ರಶ್ನಾರ್ಥಕ ಚಿಹ್ನೆಯೇ ವಾಕ್ಯದ ಸಾರ. ಮತ್ತೊಂದು ಮಾದರಿ:
ಏನೆ ಇರಲಿ, ಏನೆ ಇರಲಿ,
ಬಂದೆ ಬರುವುದು, ಏನೆ ಇರಲಿ,
ಅಣ್ಣತಮ್ಮದಿರಾಗಿ ಎಲ್ಲಾ
ಇರುವ ಕಾಲ, ಏನೆ ಇರಲಿ.
ಎರಡನೆಯ ಸಾಲಿನ ಮೊದಲಿಗೆ ಬರುವ ಅಲ್ಪವಿರಾಮಚಿಹ್ನೆ ವಾಕ್ಯದ ಅಭಿಪ್ರಾಯವನ್ನು ಸರಿಯಾಗಿ ಗ್ರಹಿಸಲು ಆವಶ್ಯಕ.
ಲೇಖನಚಿಹ್ನೆಗಳ ವೈಶಿಷ್ಟ್ಯ ಮತ್ತು ಉಪಯುಕ್ತತೆಗಳನ್ನು ಮನಗಾಣುವಂತೆ ಕನ್ನಡ ಓದುಗರಿಗೆ ತರಬೇತಿ ನೀಡಬೇಕು. ಇವುಗಳನ್ನು ಸರಿಯಾಗಿ ಗ್ರಹಿಸುವುದು ಗಮನವಿರಿಸಿ ಓದುವುದರ ಒಂದು ಲಕ್ಷಣವೂ ಹೌದು.
ಇನ್ನು ಮೇಲೆ ಕಾಣಿಸಿದ ಎರಡನೆಯ ಸಲಹೆಗೆ ಬರೋಣ. ಇದರ ಸುಳಿವು ಶ್ರೀಕಂಠಯ್ಯನವರ ಕೃತಿಯಲ್ಲಿಯೇ ಸಿಗುತ್ತದೆ. ಅವರು ಇಂಗ್ಲಿಷ್ ಕಾವ್ಯದ ಯಾವುದೇ ಉದಾತ್ತ ಭಾವನೆಗಳನ್ನು ಮುಟ್ಟಲು ಪ್ರಯತ್ನಿಸಿಲ್ಲ. ಶೆಲ್ಲಿಯ ‘ಪ್ರೊಮಿಥಿಯಸ್ ಅನ್‌ಬೌಂಡ್’, ಆರ್ನಾಲ್ಡ್‌ನ ‘ಸ್ಕಾಲರ್ ಜಿಪ್ಸಿ’, ಟೆನಿಸನ್‌ನ ‘ಲಾಕ್‌ಸ್ಲಿ ಹಾಲ್’, ಬ್ರೌನಿಂಗ್‌ನ ‘ರಾಬೈ ಬೆನ್ ಎಜ಼್ರಾ’, ವರ್ಡ್ಸ್‌ವರ್ತ್‌ನ ‘ಟಿನ್‌ಟರ್ನ್ ಆಬೆ’ ಮುಂತಾದುವು ಈ ಬಗೆಯ ರಚನೆಗಳಿಗೆ ಮಾದರಿಗಳು. ಭಾವಗೀತದಲ್ಲಿ ಕಾಣಬರುವ ಸಾಹಿತ್ಯಕ ಗುಣ ಇವುಗಳ ಹಲವೆಡೆಗಳಲ್ಲಿ ಕಂಡುಬರುವುದು ನಿಜವಾದರೂ, ಇವು ಶುದ್ಧ ಭಾವಗೀತಗಳೆನ್ನಲಾಗದು. ಪ್ರಸ್ತುತ ಕೃತಿಯಲ್ಲಿ ಆ ಬಗೆಯ ಉದಾತ್ತ ವಸ್ತುವನ್ನುಳ್ಳ ಕವಿತೆಯೆಂದರೆ ಶೆಲ್ಲಿಯ ‘ಸ್ಕೈಲಾರ್ಕ್’. ಅದನ್ನು ಶ್ರೀಕಂಠಯ್ಯನವರು ಚೆನ್ನಾಗಿಯೇ ರೂಪಾಂತರಿಸಿದ್ದಾರೆ.
ನನ್ನ ಗಮನದಲ್ಲಿರುವ ಗುಣ ಸ್ವಲ್ಪ ಬೇರೆಯ ರೀತಿಯದು. ಸ್ಥೂಲವಾಗಿ ಹೇಳುವುದಾದರೆ, ಅದು ತಾತ್ತ್ವಿಕ ಸಂಶಯದ, ಸಾಮಾಜಿಕ ಕ್ರಾಂತಿಯ ಅಥವಾ ಸ್ಥಾಪಿತ ಸಂಗತಿಗಳನ್ನು ವಿಮರ್ಶೆಯಿಲ್ಲದೆ ಒಪ್ಪಲೊಲ್ಲದ ಗುಣ. ಈ ಗುಣ ಇಂಗ್ಲಿಷಿನ ಮಹಾಕವಿಗಳು ತಮ್ಮ ನಿಡಿದಾದ ರಚನೆಗಳಲ್ಲಿ ಎತ್ತಿರುವ ಗಂಭೀರ ಪ್ರಶ್ನೆಗಳಲ್ಲಿ, ಭಾವಾವೇಶದಿಂದ ವ್ಯಕ್ತಪಡಿಸಿರುವ ಅಸಮಾಧಾನಗಳಲ್ಲಿ ಕಂಡುಬರುತ್ತದೆ. ಈಗ ನಮ್ಮ ಮುಂದಿರುವ ಸಂಕಲನದಲ್ಲಿ ಇಂಥ ಭಾವದ ಛಾಯೆಯನ್ನು ಹುಡ್‌ನ ‘ಬ್ರಿಡ್ಜ್ ಆಫ್ ಸೈಸ್’ ಮತ್ತು ಲೇಡಿ ಲಿಂಡ್ಸೆಯ ‘ಔಲ್ಡ್ ರಾಬಿನ್ ಗ್ರೇ’ ಕವಿತೆಗಳಲ್ಲಿ ಕಾಣಬಹುದು. ಇವನ್ನು ಶ್ರೀಕಂಠಯ್ಯನವರು ಅನುವಾದಿಸಿರುವ ಪರಿ ಮೆಚ್ಚುವಂತಿದೆ. ಇಂಗ್ಲಿಷ್ ಮತ್ತು ಇತರ ಯೂರೋಪಿಯನ್ ಭಾಷೆಗಳಲ್ಲಿ ರಚಿತವಾದ, ಮನಸ್ಸನ್ನು ಕಾಡುವ ಇಂಥ ದೀರ್ಘ ಕಾವ್ಯಗಳು ಭಾರತೀಯ ಭಾಷೆಗಳಿಗೆ ಬಂದರೆ ಹೇಗೆ? ಅವು ಕನ್ನಡಕ್ಕೆ ಹೊಂದಿಕೊಳ್ಳುತ್ತವೆಯೇ? ಎಷ್ಟರ ಮಟ್ಟಿಗೆ ಸಹಜವಾಗಿ ಹೊಂದಿಕೊಳ್ಳುತ್ತವೆ? ಇದಕ್ಕೆ ನಾನು ಉತ್ತರ ಕೊಡುವಷ್ಟು ದೂರ ಹೋಗುವುದಿಲ್ಲ. ಆ ಬಗೆಯ ಕೆಲಸದಲ್ಲಿ ಎದುರಾಗಬಹುದಾದ ಒಂದೆರಡು ತೊಡಕುಗಳನ್ನು ಮಾತ್ರ ನಿವೇದಿಸಬಯಸುತ್ತೇನೆ.
ಸಾಮಾನ್ಯವಾಗಿ ಭಾರತೀಯ ಮನಸ್ಸು ಸಾಹಸಪ್ರವೃತ್ತಿಯದ್ದಲ್ಲ. ಮತದ ವಿಷಯದಂತೆ ಸಮಾಜವ್ಯವಸ್ಥೆಯ ವಿಷಯದಲ್ಲಿಯೂ ಯುಕ್ತವಾದ ನಿರ್ಧಾರವನ್ನು ಹಿಂದಿನ ಋಷಿ-ಮುನಿಗಳೇ ತೆಗೆದುಕೊಂಡಿದ್ದಾರೆ ಎಂದು ಅದು ಭಾವಿಸುತ್ತದೆ. ಹೀಗಾಗಿ ಸಂಶಯ ಪಡುವುದಾಗಲಿ, ಅದಕ್ಕಿಂತ ಹೆಚ್ಚಾಗಿ ಸ್ಥಾಪಿತ ಸಿದ್ಧಾಂತಗಳನ್ನು ವಿರೋಧಿಸುವುದಾಗಲಿ ಅದರ ದೃಷ್ಟಿಯಲ್ಲಿ ದೊಡ್ಡ ದೋಷ. ಇಂಥ ಮನೋಧರ್ಮದ ಜನರು ಪ್ರಾಶ್ನಿಕರಿಗೂ ಕ್ರಾಂತಿಕಾರಿಗಳಿಗೂ ಸಮಾಧಾನದಿಂದ ಕಿವಿಗೊಡುವರೇ? ಅಂಥವರನ್ನು ಆಲಿಸಲು ಕಲಿಯಬೇಕೆಂದೇ ನನ್ನ ಅಭಿಪ್ರಾಯ. ಮನೋಧರ್ಮದ ವ್ಯತ್ಯಾಸ ಒಂದು ಬದಿಯಲ್ಲಿದ್ದರೆ ಭಾರತೀಯ ಮತ್ತು ಪಾಶ್ಚಾತ್ತ್ಯ ಸಮಾಜಗಳ ವ್ಯತ್ಯಾಸ ಇನ್ನೊಂದು ಬದಿಯಲ್ಲಿದೆ. ಪಾಶ್ಚಾತ್ತ್ಯ ಸಾಮಾಜಿಕ ಸಂರಚನೆಯೇ ಅಲ್ಲಿಯ ಕವಿಗಳ ಕ್ರಾಂತಿಕಾರಕ ಪ್ರವೃತ್ತಿಗೆ ಹಿನ್ನೆಲೆಯಾಗಿತ್ತು. ನಮ್ಮ ಆಚಾರ-ವಿಚಾರಗಳು, ನಡೆ-ನುಡಿಗಳು ಪಾಶ್ಚಾತ್ತ್ಯರದಕ್ಕಿಂತ ತೀರಾ ಭಿನ್ನವಾದುವು. ಹೀಗಿರುವಾಗ ಅವರ ಬದುಕಿನ ಕಥೆಯನ್ನು ಕೇಳಲು ನಮ್ಮ ಜನ ಬಯಸುವರೇ? ಅದು ನಮ್ಮಿಂದ ಸಾಧ್ಯವೇ? ಯೂರೋಪಿಯನ್ ಸಾಹಿತ್ಯದ ಮಹಾಕೃತಿಗಳನ್ನು ನಮ್ಮ ಭಾಷೆಗಳಿಗೆ ತಂದುಕೊಳ್ಳಲು ಯತ್ನಿಸುವವರು ಎದುರಿಸಬೇಕಾದ ಪ್ರಶ್ನೆಗಳು ಈ ರೀತಿಯವು. ಇವನ್ನು ಸಮರ್ಥವಾಗಿ ಎದುರಿಸಿ ದಾಟಿಕೊಳ್ಳುವ ಜಾಣ್ಮೆ ಪ್ರತಿಭಾವಂತನಾದ ಕವಿಗೆ ಇದ್ದೇ ಇರುತ್ತದೆ.
ಇಂದು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಭಾವಗಳನ್ನು ತಂದುಕೊಳ್ಳಬೇಕು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸೂಕ್ಷ್ಮ ಆಧ್ಯಾತ್ಮಿಕ ಅನುಭವಗಳನ್ನು ತಂದುಕೊಡುವ ಹಾಗೂ ಸಾಮಾಜಿಕ ಅಂತರಗಳನ್ನು ಕರಗಿಸುವ ರಚನೆಗಳು ನಮಗೆ ಬೇಕು. ಇವು ಒಂದು ಹುಡುಕಾಟವನ್ನೂ ಒಂದು ಹಿರಿದಾದ ವ್ಯಗ್ರತೆಯನ್ನೂ ಮೂಡಿಸುತ್ತವೆ. ಶ್ರೀಕಂಠಯ್ಯನವರು ನಮಗೆ ಈ ದಾರಿಯನ್ನು ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪ್ರಯತ್ನವು ಆಶಯದಲ್ಲಿ ಪುನರ್ಜಾಗರಣದ ಹಾಗೂ ಆಕೃತಿಯಲ್ಲಿ ನವೀಕರಣದ ರೂಪದ್ದೆಂದು ಹಿಂದೆಯೇ ಗಮನಿಸಿದ್ದೇವೆ. ಅವರಿಂದ ಸ್ಫೂರ್ತಿಯನ್ನು ಪಡೆದು ಹತ್ತಾರು ಜನ ಕವನಿಸಲಿ; ಅವರ ರಚನೆಯ ಸೊಬಗನ್ನು ನೂರಾರು ಜನ ಆಸ್ವಾದಿಸಲಿ.
[1] ‘ಇಂಗ್ಲಿಷ್ ಗೀತಗಳು’ ಮೊದಲು ಪ್ರಕಟವಾದಾಗ ಇಲ್ಲಿ ಹೆಸರಿಸಲಾದ ಮೂರು ಕವಿತೆಗಳು ಅದರ ಮುಖ್ಯ ಭಾಗದಲ್ಲಿ ಸೇರಿದ್ದುವು. ಅನಂತರ ಬಂದ ಪರಿಷ್ಕೃತ ಆವೃತ್ತಿಯಲ್ಲಿ ‘ಭರತಮಾತೆಯ ನುಡಿ’ ಮತ್ತು ‘ಮೈಸೂರು ಮಕ್ಕಳು’ ಕಂಡುಬರುವುದಿಲ್ಲ; ಬಿ.ಎಂ.ಶ್ರೀ. ಅವರು ‘ಹೊಂಗನಸುಗಳು’ ಎಂಬ ತಮ್ಮ ಮತ್ತೊಂದು ಕವನಸಂಕಲನದಲ್ಲಿ ಅವನ್ನು ಸೇರಿಸಿಕೊಂಡರೆಂದು ತಿಳಿದುಬರುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ (೨೦೦೨) ಶ್ರೀಕಂಠಯ್ಯನವರ ಸಮಗ್ರಕೃತಿಸಂಪುಟ ‘ಶ್ರೀಸಾಹಿತ್ಯ’ದಲ್ಲಿ ಇದೇ ವಿಧವಾದ ವಿಭಾಗವಿದೆ.