ಒಪ್ಪಂದಗಳೆಂಬ ಠಕ್ಕು
ಈ ರೀತಿ ಗುಲಾಮಗಿರಿಗೆ ತಳ್ಳುವುದಕ್ಕೆ ಬ್ರಿಟಿಷರು ಬಳಸಿಕೊಂಡ ಏಕೈಕ ಹಾಗೂ ಅತ್ಯಂತ ಪ್ರಬಲವಾದ ಅಸ್ತ್ರ: ಒಪ್ಪಂದಗಳು. ಒಂದೊಂದು ಒಪ್ಪಂದದ ಸಂದರ್ಭ, ಹಿನ್ನೆಲೆ ಭಿನ್ನವಾಗಿದ್ದರೂ ಅವೆಲ್ಲದರ ಅಂತಿಮ ಪರಿಣಾಮ ದಾಸ್ಯದಲ್ಲಿ ಪರ್ಯಾವಸಾನವಾಯಿತು ಎನ್ನುವುದು ನಿರ್ವಿವಾದ. ಇದರಲ್ಲಿ ಶೇಖಡಾ ೯೦ರಷ್ಟು ಒಪ್ಪಂದಗಳು ಆದದ್ದು ಯುದ್ಧದ ಸಂದರ್ಭದಲ್ಲಿ – ಅವು ಯುದ್ಧಪೂರ್ವ ಅಥವಾ ಯುದ್ಧದ ಮಧ್ಯ ಅಥವಾ ಯುದ್ಧಾನಂತರದವು.
ಒಟ್ಟಂದದಲ್ಲಿ, ಪ್ರತಿಯೊಂದು ಒಪ್ಪಂದದ ಅನಿವಾರ್ಯ ಫಲಿತಾಂಶವೆಂದರೆ – ಬ್ರಿಟಿಷ್ ನೇಮಿಸಿದ ರೆಸಿಡೆಂಟ್ ನ (Resident) ದರ್ಪದ ಆಳ್ವಿಕೆ. ಅವನು ಭಾರತದ ಬ್ರಿಟಿಷ್ ಸಾರ್ವಭೌಮ ಸರ್ಕಾರದ Governor General / Viceroyಗೆ ಉತ್ತರಬಾಧ್ಯನಾಗಿದ್ದರೂ ಅವನ ಮುಷ್ಟಿಯಲ್ಲಿದ್ದ ಸಂಸ್ಥಾನದಲ್ಲಿ ಅವನೇ ಅತಿರಾಜ; ಅಂದರೆ, ಆತನದು power without responsibility – ಉತ್ತರದಾಯಿತ್ವರಹಿತ ನಿರಂಕುಶ ಆಡಳಿತ. ಈ ವ್ಯವಸ್ಥೆಯಯನ್ನು Wellesley ಮೊದಲಿಗೆ ಜಾರಿಗೆ ತಂದದ್ದು. ಅದಕ್ಕೆ ಠಕ್ಕಿನ ಗೌರವದ ಹೆಸರಿಡಲಾಯಿತು: Subsidiary Alliance – ಸಹಕಾರಿ ಒಪ್ಪಂದ. ಇದಕ್ಕೆ ಒಂದು ಉದಾಹರಣೆ ಕೊಡಬಹುದು. ನಮ್ಮ ಮೈಸೂರು ಸಂಸ್ಥಾನದ ಒಡೆಯರು ನೆಪಮಾತ್ರಕ್ಕೆ ರಾಜರು, ಅವರ ಮೇಲೆ ಈ ರೆಸಿಡೆಂಟಿನ ದರ್ಪ. ಕೆಮ್ಮಿದರೆ ಸೀನಿದರೆ ಕಿರುಕುಳ ಕೊಡುವುದು, ಗವರ್ನರ್ ಜನರಲ್ ಗೆ ಗ್ರಂಥಗಾತ್ರದ ದೂರಿನ ಪತ್ರ ಬರೆಯುವುದು ಮಾಡುತ್ತಿದ್ದರು. ಅವನು ಕೇಳಿದಷ್ಟು ಹಣವನ್ನು ನಮ್ಮ ರಾಜರು ಕಕ್ಕಬೇಕಾಗುತ್ತಿತ್ತು. ಹಲವಾರು ಸಂಸ್ಥಾನಗಳಲ್ಲಿ ಅಮಾಯಕ ಪ್ರಜೆಗಳ ಮೇಲೆ ಈ ರೆಸಿಡೆಂಟರ ವಿನಾಕಾರಣದ ದಬ್ಬಾಳಿಕೆ ಮಿತಿಮೀರಿ ಅಂಥ ಎಷ್ಟೋ ಪ್ರಕರಣಗಳು ಇಂಗ್ಲೆಂಡಿನ ಸಂಸತ್ತಿನಲ್ಲಿಯೂ ಚರ್ಚೆಯಾಗಿರುವ ದಾಖಲೆಗಳು ಇಂದಿಗೂ ಲಭ್ಯವಿವೆ. ಸಂಸ್ಥಾನದ ನೆಪಮಾತ್ರದ ರಾಜನಿಗೆ ಈ ರೆಸಿಡೆಂಟನನ್ನು ನಿರಂತರವಾಗಿ ಓಲೈಸುವ ಕೆಲಸ, ಅದರಿಂದ ಅವನ ಚಾರಿತ್ರ್ಯನಾಶ, ದೈನ್ಯ, ಅಪಮಾನ. ಒಂದು ಪಕ್ಷ ರೆಸಿಡೆಂಟನಿಗೆ ಎದುರಾಡಿದರೆ, ಅವನಿಗೆ ಅಸಂತೋಷವಾದರೆ ಇಡೀ ಸಂಸ್ಥಾನವೇ ಆ ರಾಜನ ಕೈಯಿಂದ ಜಾರಿದಂತೆ. ಈ ದುರ್ಗತಿ ನಮ್ಮ ಮುಮ್ಮಡಿ ಕೃಷ್ಣರಾಜ ಒಡೆಯರಿಗೂ ಆಯಿತು. ಸುಮಾರು ಮೂವತ್ತು ವರ್ಷಗಳ ಕಾಲ ಬ್ರಿಟಿಷರೇ ಮೈಸೂರಿನ ಅಧಿಕಾರವನ್ನು ನೇರವಾಗಿ ನಡೆಸಿದರು. ಹರಸಾಹಸ ಮಾಡಿ ಪುನಃ ಅವರಿಗೆ ಅಧಿಕಾರ ದಕ್ಕಿದ ಮೇಲೆ ಮುಮ್ಮಡಿಯವರು ರಾಜಕೀಯಕ್ಕೆ ಹೆಚ್ಚು ಸಮಯ ಕೊಡದೆ ಕಲಾಪೋಷಣೆ, ಶಿಕ್ಷಣ, ಇತರ ಸಾಂಸ್ಕೃತಿಕ ಕಾರ್ಯಗಳ ಕಡೆ ಹೆಚ್ಚು ಅವಧಾರಣೆ ಕೊಟ್ಟರು.
ಈ ಒಪ್ಪಂದಗಳಿಗೆ ಇನ್ನಷ್ಟು ಭೀಕರವಾದ ಮುಖಗಳು ಸಹ ಇದ್ದವು. ಅದರಲ್ಲಿ ಮುಖ್ಯವಾದ ಒಂದೆರಡನ್ನು ನೋಡಬಹುದು.
ಭಾರತದ ಕೆಲವು ಸಂಸ್ಥಾನಗಳು ಇಡಿಯಾಗಿ ಬ್ರಿಟಿಷರ ತೆಕ್ಕೆಗೆ ಬಂದ ಬಳಿಕ ಆದಂತಹ ಒಪ್ಪಂದಗಳು ಇವು. ಇಂಥವನ್ನು ನಿರಂಕುಶ ಆಜ್ಞೆಗಳೆಂದು ಕರೆಯುವುದೇ ಹೆಚ್ಚು ಸಮಂಜಸ. ಡಾಲಹೌಸಿ ಎಂಬ ಅತ್ಯಂತ ಹೃದಯಹೀನ ಗವರ್ನರ್ ಜನರಲ್ ಜಾರಿಗೆ ತಂದ Doctrine of Lapse – ಚ್ಯುತಿಸಂಹಿತೆ – ಈ ಪ್ರಭೇದಕ್ಕೆ ಸೇರುತ್ತದೆ. ಈ ಒಂದೇ ಒಂದು ತಂತ್ರವನ್ನು ಇಟ್ಟುಕೊಂಡು ಕೇವಲ ೩೦ ವರ್ಷಗಳ ಅವಧಿಯಲ್ಲಿ ಸುಮಾರು ೩೩ ದೇಶೀಯ ಸಂಸ್ಥಾನಗಳನ್ನು ಬ್ರಿಟಿಷರು ಕಬಳಿಸಿದರು. ಇದರ ಪ್ರಕಾರ ಒಂದು ಸಂಸ್ಥಾನದ ರಾಜ ಸತ್ತ ಬಳಿಕ ಅವನಿಗೆ ಉತ್ತರಾಧಿಕಾರಿಯಿಲ್ಲದ ಪಕ್ಷ ಅದು ನೇರವಾಗಿ ಇಂಗ್ಲೆಂಡಿನ ಆಡಳಿತಕ್ಕೆ ಒಳಗಾಗುತ್ತಿತ್ತು. ಉತ್ತರಾಧಿಕಾರಿಯಿದ್ದ ಪಕ್ಷದಲ್ಲಿ – ಅದು ದತ್ತಕವಿರಬಹುದು, ಅಪ್ರಾಪ್ತ ಬಾಲಕನಿರಬಹುದು – ಅಂಥವನು ಅಸಮರ್ಥ, ಅಸ್ವಸ್ಥ ಎಂದು “ತೀರ್ಮಾನ”ವಾದರೆ ಆ ಸಂಸ್ಥಾನವನ್ನು ನೇರವಾಗಿ ಬ್ರಿಟಿಷ್ ಆಡಳಿತದ ಅಡಿಗೆ ಎಳೆದುಕೊಳ್ಳುತ್ತಿದ್ದರು. ಇದರ ಹಿಂದಿದ್ದದ್ದು ವಸ್ತುತಃ ಒಂದು ಕ್ಷುದ್ರ ತಂತ್ರ: ಇಡೀ ಪ್ರಭುತ್ವವನ್ನು ಕೈಲಿ ಹಿಡಿದ ಬ್ರಿಟಿಷರಿಗೆ ಒಬ್ಬ ಪುಟ್ಟ ಹುಡುಗನನ್ನು ಅಸಮರ್ಥ, ಅಸ್ವಸ್ಥ ಎಂದು ಶರಾ ಬರೆಯಲು ಎಷ್ಟು ಹೊತ್ತು ಬೇಕು? ಈ Doctrine of Lapse ನ ಪರಿಣಾಮ - ಆ ೩೩ ರಾಜ್ಯಗಳ ಇಡೀ ರಾಜಮನೆತನಗಳು ಅಕ್ಷರಶಃ ಬೀದಿಗೆ ಬಿದ್ದವು. ಉತ್ತರಪ್ರದೇಶದಲ್ಲಿದ್ದ ಇಂಥ ಅನೇಕ ಮನೆತನಗಳು ತಮ್ಮ ಪುಟ್ಟ ಪುಟ್ಟ ಗಂಡುಮಕ್ಕಳನ್ನು ಜೀತಕ್ಕಾಗಿ ಮಾರಿಕೊಳ್ಳಬೇಕಾಯಿತು. ನಾಗಪುರದ ಪ್ರಸಿದ್ಧ ಭೋಸ್ಲೆ ರಾಜಮನೆತನದ ದುರ್ಗತಿಯಂತೂ ಅತ್ಯಂತ ಹೃದಯವಿದ್ರಾವಕವಾದ ದುರಂತ ಸತ್ಯಕಥೆ. ಅವರ ಪುರಾತನ ಅರಮನೆಯನ್ನು ಇಡಿಯಾಗಿ ಡಕಾಯಿತರು ಲೂಟಿ ಮಾಡುವ ಬಗೆಯಲ್ಲಿ ಬ್ರಿಟಿಷ್ ಅಧಿಕಾರಿಗಳು ಅಕ್ಷರಶಃ ಬರಿದು ಮಾಡಿ, ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅದನ್ನು ಅತ್ಯಂತ ಜತನದಿಂದ ವಿಕಾರ-ವಿರೂಪಗೊಳಿಸಿ, ಧ್ವಂಸಮಾಡುವುದರಲ್ಲಿ ವಿಕೃತವಾದ ಆನಂದವನ್ನು ಪಡೆದರು. ಬದುಕಿದ್ದ, ಸತ್ತ ಜಾನುವಾರು ಮತ್ತು ಹೈನುಗಳನ್ನು ಹರಾಜಿಗೆ ದಬ್ಬಿದರು. ನಾಗಪುರದ ಅಂಚಿನಲ್ಲಿರುವ ಸೀತಾಬಲ್ದಿ ಊರಿನಲ್ಲಿದ್ದ ದಲ್ಲಾಳಿಗಳಿಗೆ ಇದೊಂದು ದೊಡ್ಡ ಉತ್ಸವವಾಯಿತು – ಹತ್ತಾರು ರಾಜಗಜಗಳು, ಅಶ್ವಗಳು, ನೂರಾರು ಗೋವುಗಳು, ವೃಷಭಗಳು ಇವರಿಗೆ ಒಂದು ಕೋಳಿಯ ಕಿಮ್ಮತ್ತಿಗೆ ಸಿಕ್ಕವು. ಸತ್ತ ಭೋಸ್ಲೆ ರಾಜನ ವಿಧವೆ ಅಜ್ಜಿ – ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ನಾಗಪುರದ ರಾಜಮಾತೆಯ ಒಡವೆ, ಕುರ್ಚಿ, ಮೇಜು, ತಟ್ಟೆ, ಲೋಟಳನ್ನೂ ಬಿಡದೆ ದೋಚಿ ಅವನೆಲ್ಲ ದೂರದ ಕಲ್ಕತ್ತಾ ಬಜಾರಿನಲ್ಲಿ ಹರಾಜಿಗೆ ಹಾಕಿದರು. ಈ ಎಲ್ಲ ಕುಕೃತ್ಯಗಳನ್ನು ಬ್ರಿಟಿಷರೇ ವಿವರವಾಗಿ ದಾಖಲಿಸಿದ್ದಾರೆ.
ಮೂರು ಸ್ಪಷ್ಟ ಅಂಶಗಳು
ಅಂತೆಯೇ ಈ ಒಪ್ಪಂದಗಳ ಮತ್ತೊಂದು ಕರಾಳ ಮುಖವೆಂದರೆ ಬ್ರಿಟಿಷರು ತಮ್ಮಿಷ್ಟಕ್ಕನುಸಾರವಾಗಿ ಅವನ್ನು ಮುರಿದ ಒಂದು ದೊಡ್ಡ ಪರಂಪರೆಯೇ ಇದೆ. ಹಿಂದೊಮ್ಮೆ ಆದರಣೀಯ ಎಸ್. ಆರ್. ರಾಮಸ್ವಾಮಿಗಳು ಹೇಳಿದ ಮಾತು ಇನ್ನೂ ನೆನಪಿದೆ: “ಇಂಥ ಎಲ್ಲ ಒಪ್ಪಂದಗಳ ಸಮಗ್ರ ಇತಿಹಾಸವನ್ನು ಬರೆದರೆ ಅದೇ ಒಂದು ರಾಷ್ಟ್ರಸೇವೆಯಾಗುತ್ತದೆ”. ಈ ಕುರಿತು ಎಳ್ಳಷ್ಟಾದರೂ ನೋಡಿದಾಗ ಮೂರು ಅಂಶಗಳು ಸ್ಪಷ್ಟವಾಗುತ್ತವೆ.
ಒಂದು, ಇಂಥ ಒಪ್ಪಂದಗಳಿಂದ ಬ್ರಿಟಿಷರು ಸುಲಿದ ಹಣಕ್ಕೂ ಇಂಗ್ಲೆಂಡಿನ ವಾಣಿಜ್ಯ, ಯುದ್ಧತಂತ್ರಜ್ಞಾನದ ಬೆಳವಣಿಗೆಗೂ ನೇರವಾದ ತಳುಕಿದೆ.
ಎರಡು, ನಮ್ಮ ರಾಜರ ಧರ್ಮಪ್ರಜ್ಞೆ, ನೀತಿನಿಷ್ಠೆ ಎನ್ನಿಸಿಕೊಳ್ಳುವ ಧರ್ಮದ ಆಭಾಸ, ನೀತಿಯ ನಿರಾಕರಣೆ. ಅದನ್ನು ಹೆಡ್ಡತನದ ಪರಮಾವಧಿ ಎನ್ನುವುದು ಸತ್ಯಕ್ಕೆ ಹೆಚ್ಚು ಹತ್ತಿರ. ಬ್ರಿಟಿಷರ ಠಕ್ಕಿನ ಚಾರಿತ್ರ್ಯದ ಅರಿವಿದ್ದರೂ ಅವರ “ಒಪ್ಪಂದ”ಗಳನ್ನು ವೇದವಾಕ್ಯದಂತೆ, ಶಿಲಾಶಾಸನದಂತೆ ಪಾಲಿಸಿಕೊಂಡುಬಂದ ಮೂರ್ಖತನ.
ಮೂರು, ಬ್ರಿಟಿಷರ ಆತ್ಮಸಾಕ್ಷಿಶೂನ್ಯತೆ. ಹಸಿಹಸಿಯಾಗಿ ಹೇಳಬೇಕು ಎಂದರೆ, ನಗುನಗುತ್ತಾ ನಂಬಿದವರ ಬೆನ್ನಿಗೆ ಚೂರಿಹಾಕುವ ಚರಿತ್ರಹೀನತೆ.
ಚಿನ್ನದ ಗಣಿ
ಗುಂಡಪ್ಪನವರ ದೇಶೀಯ ಸಂಸ್ಥಾನಗಳ ಕುರಿತಾದ ಸಮಗ್ರ ಸಂಪುಟಗಳಲ್ಲಿ ಈ ಎಲ್ಲ ಒಪ್ಪಂದಗಳ, ಅವುಗಳ ಐತಿಹಾಸಿಕ ಸಂದರ್ಭಗಳ, ನೆಲೆ-ಹಿನ್ನೆಲೆಗಳ, ಒಳ ಮರ್ಮಗಳ, ಅಮೂಲ್ಯವಾದ ಒಳನೋಟಗಳ ಚಿನ್ನದ ಗಣಿ ನಮಗೆ ದಕ್ಕುತ್ತದೆ. ಅನೇಕ ಒಪ್ಪಂದಗಳ ಸುದೀರ್ಘವಾದ ವಿಶ್ಲೇಷಣೆ ದೊರಕುತ್ತದೆ.
ಡಿ.ವಿ.ಜಿ.ಯವರು ಸಾರ್ವಜನಿಕ ಜೀವನದಲ್ಲಿ ಪತ್ರಕರ್ತರಾಗಿ ಕಾರ್ಯಪ್ರವೃತ್ತಾದ ಹೊಸತರಲ್ಲಿ ಭಾರತದೇಶದಲ್ಲಿ ಎರಡು ದೇಶಗಳಿದ್ದವು: ಒಂದು, ಬ್ರಿಟಿಷ್ ಇಂಡಿಯಾ – ಅಂದರೆ ಇಂಗ್ಲೆಂಡಿನ ನೇರವಾದ ಆಡಳಿತಕ್ಕೆ ಒಳಗಾಗಿದ್ದ ಪ್ರದೇಶಗಳು. ಇವನ್ನು Presidency ಗಳು ಎಂದು ಕರೆಯಬಹುದು. ಎರಡು, ದೇಶೀಯ ಸಂಸ್ಥಾನಗಳು. ಇಲ್ಲಿ, ಸಂಸ್ಥಾನಗಳ ರಾಜರು ಮಾತ್ರ ನೇರವಾಗಿ ಬ್ರಿಟಿಷ್ ದೊರೆ-ರಾಣಿಯ ಕೈಕೆಳಗಿದ್ದರು. ಸಂಸ್ಥಾನಗಳ ಪ್ರಜೆಗಳು ಹಿಂದಿನ ಪರಂಪರೆಯಂತೆ ತಮ್ಮ ರಾಜರ ಪ್ರಜೆಗಳಾಗಿದ್ದರು – ಈ ಜನಸಾಮಾನ್ಯರಿಗೆ ಬ್ರಿಟಿಷರು ಎಂದರೆ “ಫಿರಂಗಿಯವರು,” “ಕೆಂಪು ಜನರು,” ಹಾಗೂ ತಮಗೂ ಅವರಿಗೂ ಸ್ಪಷ್ಟವಾದ, ಅಗಾಧವಾದ ಕಂದಕವಿದೆ ಎನ್ನುವ ನಿತ್ಯಸತ್ಯದ ಅರಿವಿತ್ತು. ಅವರ ಮೂಲ ನಿಷ್ಠೆಯಿದ್ದದ್ದು ಅವರವರ ರಾಜನಿಗೆ ಮಾತ್ರ.
ಇಂಥ ವಿಚಿತ್ರ ಪರಿಸ್ಥಿತಿಯು ಇಡೀ ಪ್ರಪಂಚದಲ್ಲಿ ಬ್ರಿಟಿಷರೇ ಆಳುತ್ತಿದ್ದ ಯಾವ ದೇಶದಲ್ಲೂ ಇರಲಿಲ್ಲ. ಇದನ್ನು ಕಂಡೇ ಡಿ.ವಿ.ಜಿ.ಯವರು ಈ ರೀತಿ ಬರೆದರು:
“ದೇಶೀಯ ಸಂಸ್ಥಾನಗಳ ಸ್ವರೂಪವು ಜಾಗತಿಕ ರಾಜನೀತಿತಜ್ಞರ ವಿಶ್ಲೇಷಣಸಾಮರ್ಥ್ಯವನ್ನು ದಿಗ್ಭ್ರಮೆಗೊಳಿಸಿದೆ. ಈ ವೈಪರೀತ್ಯದಿಂದ ನಮ್ಮ ಸಂಸ್ಥಾನಗಳನ್ನು ಕಾಪಾಡಬೇಕಿದೆ.”
ಕಾಳಜಿಗೆ ಕಾರಣ
ಇಲ್ಲೊಂದು ಸಹಜವಾದ, ತಾರ್ಕಿಕ ಪ್ರಶ್ನೆ ಏಳುತ್ತದೆ: ಯಾವ ಕಾರಣಕ್ಕಾಗಿ ಡಿ.ವಿ.ಜಿ. ಅವರು ಮಾತ್ರ ದೇಶೀಯ ಸಂಸ್ಥಾನಗಳ ವಿಷಯವನ್ನು ಅಷ್ಟು ತೀವ್ರವಾಗಿ ಹಚ್ಚಿಕೊಂಡರು? ಆ ಕಾಲಘಟ್ಟವನ್ನು ಪರಿಶೀಲಿಸಿದರೆ ಗೊತ್ತಾಗುವ ಸಂಗತಿ: ಗುಂಡಪ್ಪನವರು ದುಡಿಯುತ್ತಿದ್ದ ಕ್ಷೇತ್ರಗಳಲ್ಲೇ ದುಡಿಯುತ್ತಿದ್ದ ಅನೇಕ ಮಹಾಮತಿಗಳು, ದೇಶಭಕ್ತರು - ಇವರಾರಿಗೂ ಇದು ಅಷ್ಟು ಮುಖ್ಯವೆಂದು ಕಾಣಲಿಲ್ಲ.
ಇದಕ್ಕೆ ಒಂದೆರಡು ಊಹೆಗಳನ್ನ ಮಾಡಬಹುದು.
ಒಂದು, ಡಿ.ವಿ.ಜಿ.ಯವರ ವ್ಯಾಪಕ ಸಂಪರ್ಕವಲಯ ಹಾಗೂ ಆ ಕಾಲದ ರಾಜಕೀಯದಲ್ಲಿ ಅವರು ಆಳವಾಗಿ ತೊಡಗಿಸಿಕೊಂಡಿದ್ದರ ಫಲವಿದು ಎನ್ನಿಸುತ್ತದೆ.
ಇನ್ನೂ ಇಪ್ಪತ್ತು ವರ್ಷ ಕೂಡ ತುಂಬದ ವಯಸ್ಸಿನಲ್ಲಿ ಕೆಲ ವರ್ಷ ಡಿ.ವಿ.ಜಿ. ಮದ್ರಾಸಿನಲ್ಲಿದ್ದು ಅಲ್ಲಿದ್ದ ಸ್ವಾತಂತ್ರ್ಯಸಂಗ್ರಾಮದ, ಸಾಂಸ್ಕೃತಿಕ-ರಾಜಕೀಯ ಚಟುವಟಿಕೆಗಳ ಪ್ರತ್ಯಕ್ಷ ಅನುಭವ ಪಡೆದಿದ್ದರು. ಅನಂತರಕಾಲದಲ್ಲಿ ಹುಟ್ಟಿದ ಗಾಂಧಿ ಅಲೆ, ಕಾಂಗ್ರೆಸ್ ಚಳವಳಿಗಳ ಪ್ರಭಾವ ಇವರನ್ನೂ ತಟ್ಟಿತು. ಮಗದೊಂದು, ಮೈಸೂರು ಸಂಸ್ಥಾನದ ಪ್ರಜೆಯಾಗಿ, ಆ ಸಂಸ್ಥಾನದ ಅನೇಕ ಆಯಾಮಗಳ, ಉನ್ನತ ವರ್ಗಗಳ ಆಪ್ತವಾದ ಪರಿಚಯ. ಮಗದೊಂದು, ಕಾಲಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬ್ರಿಟಿಷ್ ಇಂಡಿಯಾದಲ್ಲಿ ವ್ಯಾಪಿಸಿದಂತಹ ದೇಶೀಯ ಸಂಸ್ಥಾನಗಳ ಕುರಿತಾದ ಅಸಡ್ಡೆ, ತಾತ್ಸಾರ… ಹೀಗೆ ಈ ಎಲ್ಲ ಪ್ರಭಾವಗಳು ಡಿ.ವಿ.ಜಿ. ಅಂತರಂಗದಲ್ಲಿ ಅಡುಗೆ ಮಾಡಿ ಅದರಿಂದ ಹುಟ್ಟಿದ ಫಲವೇ ದೇಶೀಯ ಸಂಸ್ಥಾನಗಳ ಕುರಿತಾದ ಅವರ ದೀರ್ಘಕಾಲದ ಕೃಷಿಗೆ ಕಾರಣವೆನ್ನಬಹುದು.
ಅವರ ಈ ವಾಙ್ಮಯರಾಶಿಯನ್ನು ಮುಖ್ಯವಾಗಿ ಐದು ಭಾಗಗಳಾಗಿ ವಿಂಗಡಿಸಬಹುದು:
೧. ಬ್ರಿಟಿಷ್ ಸಾರ್ವಭೌಮ ಸರಕಾರದ ನಿಜ ರೂಪ-ಸ್ವರೂಪ.
೨. ಬ್ರಿಟಿಷ್ ಸಾರ್ವಭೌಮ ಸರಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಭಾರತೀಯರು, ಅವರ ಸ್ಥಿತಿಗತಿಗಳು.
೩. ದೇಶೀಯ ಸಂಸ್ಥಾನಗಳ ರೂಪ-ಸ್ವರೂಪ. ಅವುಗಳ ಆಡಳಿತಕ್ಕೆ ಒಳಪಟ್ಟಿರುವ ಭಾರತೀಯರು, ಅವರ ಸ್ಥಿತಿಗತಿಗಳು.
೪. ಕಾಂಗ್ರೆಸ್ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟ. ದೇಶೀಯ ಸಂಸ್ಥಾನಗಳೆಡೆಗೆ ಕಾಂಗ್ರೆಸ್ಸಿನ ತುಚ್ಛ ಧೋರಣೆ.
೫. ಬ್ರಿಟಿಷರು ಭಾರತವನ್ನು ನಿಷ್ಕ್ರಮಿಸಿದ ಬಳಿಕ ದೇಶೀಯ ಸಂಸ್ಥಾನಗಳಿಗಿರುವ ಭವಿಷ್ಯತ್ತು.
ಚೊಚ್ಚಲ ಬರವಣಿಗೆ
ದೇಶೀಯ ಸಂಸ್ಥಾನಗಳ ವಿಷಯದಲ್ಲಿ ಡಿ.ವಿ.ಜಿ. ಅವರ ಮಹೋನ್ನತವಾದ ಚೊಚ್ಚಲ ಬರವಣಿಗೆ ಹೊರಬಂದದ್ದು ೧೯೧೭ ಅಕ್ಟೋಬರ್ ತಿಂಗಳಲ್ಲಿ – ಸರಿಯಾಗಿ ಅವರಿಗೆ ಮೂವತ್ತು ವರ್ಷ ತುಂಬಿತ್ತು.
ಆಗಿನ ಬಿಕನೇರಿನ ಮಹಾರಾಜರಿಗೆ ಐದು ದೀರ್ಘವಾದ ಲೇಖನಗಳನ್ನು ಡಿ.ವಿ.ಜಿ. ಬರೆದರು – ಇವಕ್ಕೆ memorials ಎಂಬ ಶೀರ್ಷಿಕೆ ಕೊಟ್ಟರು. ಶೀರ್ಷಿಕೆಯೇ ಬಾಯಿತುಂಬ ಓದಿಸಿಕೊಳ್ಳುತ್ತದೆ:
“THE PROBLEMS OF INDIAN NATIVE STATES OR
THEIR CLAIM FOR THE FULL RIGHTS OF MEMBERSHIP IN THE BRITISH COMMONWEALTH FOR JUSTICE, FREEDOM AND OPPORTUNITY FOR INDIVIDUAL AND NATIONAL SELF-DEVELOPMENT.”
ಇದನ್ನು ದೇಶೀಯ ಸಂಸ್ಥಾನಗಳ ಸಮಸ್ಯೆಗಳು - ಎಂದು ಅನುವಾದ ಮಾಡಿ ಅಷ್ಟಕ್ಕೇ ಬಿಡುವುದು ಉತ್ತಮ.
ಗುರುತರವಾದ ಒಂದು ಸರ್ವಾಂಗೀಣ ರಾಷ್ಟ್ರೀಯ ಸಮಸ್ಯೆಯನ್ನು ಯಾವ ರೀತಿ ವಿಶ್ಲೇಷಿಸಬೇಕು, ಎಂಥ ಶಿಷ್ಟ ಭಾಷೆಯಲ್ಲಿ ಅದನ್ನು ಮಂಡಿಸಬೇಕು ಎನ್ನುವ ಶಿಕ್ಷಣ ಪಡೆಯುವುದಕ್ಕೆ ಇದೊಂದು ಸಾಟಿಯಿಲ್ಲದ ಮಾದರಿ.
ಇದು ಹಾಗೂ ಈ ಧಾಟಿಯಲ್ಲಿ ಹೊರಬಂದ ಲೆಕ್ಕವಿಲ್ಲದಷ್ಟು ಬರಹಗಳ ಒಟ್ಟು ಸಾರಾಂಶದ ಕೆಲ ಮುಖ್ಯ ಅಂಶಗಳನ್ನು ಪರಿಶೀಲಿಸಬಹುದು.
ಇಲ್ಲೆಲ್ಲ ನಮಗೆ ಎದ್ದುಕಾಣುವುದು, ಡಿ.ವಿ.ಜಿ. ಅವರು ದೇಶೀಯ ಸಂಸ್ಥಾನಗಳಿಗೆ ನೀಡುವ ಎಚ್ಚರಿಕೆ. ಆ ಕಾಲದ ರಾಜಮಹಾರಾಜರಿಗೆ ತಮ್ಮ ಸ್ವಸ್ವರೂಪದ ಅರಿವನ್ನು ಮೂಡಿಸುವುದು ಡಿ.ವಿ.ಜಿ. ಅವರ ತವಕವಾಗಿತ್ತು. ಬ್ರಿಟಿಷರು ಎಲ್ಲ ದೇಶೀಯ ಸಂಸ್ಥಾನಗಳನ್ನು ಕಬಳಿಸಿದ ಬಳಿಕ, ೧೮೫೭ರ ಸ್ವಾತಂತ್ರ್ಯಸಂಗ್ರಾಮದ ತೀವ್ರತೆಯನ್ನು ತಡೆಹಿಡಿಯಲು ಇಂತಹ ನೂರಾರು ಸಂಸ್ಥಾನಗಳು ನೆರವಾದವು. ಇದನ್ನ ಗುಂಡಪ್ಪನವರೇ ಈ ರೀತಿ ಬರೆದಿದ್ದಾರೆ:
“೧೮೫೭ರಲ್ಲಿ ನುಗ್ಗಿದ ಮಹಾಪ್ರವಾಹವು ಬ್ರಿಟಿಷ್ ಸಾಮ್ರಾಜ್ಯವನ್ನು ಆಪೋಶನ ತೆಗೆದುಕೊಳ್ಳುವ ಅಪಾಯದ ಸೂಚನೆ ಕೊಟ್ಟಾಗ ನಮ್ಮ ದೇಶೀಯ ಸಂಸ್ಥಾನಗಳೇ ಅದಕ್ಕೆ ಒಡ್ಡಾಗಿ ನಿಂತು ಭಾರತವನ್ನು ಇಂಗ್ಲೆಂಡಿಗೆ ಮರುಕಳಿಸಿಕೊಟ್ಟವು.”
ಅಲ್ಲಿಂದ ಆರಂಭಗೊಂಡು ಪ್ರತಿ ಹಂತದಲ್ಲೂ ನಮ್ಮ ಸಂಸ್ಥಾನಗಳು ಬ್ರಿಟಿಷ್ ಸಾಮ್ರಾಜ್ಯಕ್ಕೆ ಕೊಟ್ಟ ನೆರವು, ಹಣ, ಸೈನ್ಯಬಲ… ಹೀಗೆ ಲೆಕ್ಕವಿಲ್ಲದಷ್ಟು ಸಹಾಯ ಮಾಡಿದರೂ ಪ್ರತಿಯಾಗಿ ಬ್ರಿಟಿಷರು ಮಾಡಿದ್ದು… ಏನೇನೂ ಇಲ್ಲ. ಅಂದರೆ ೧೯೧೭ರ ಹೊತ್ತಿಗೆ, ಅಂದರೆ ಅರವತ್ತು ವರ್ಷಗಳ ದೀರ್ಘಕಾಲ ಈ ಸಹಾಯ ಸಂದಿತ್ತು.
ಈ ಎಲ್ಲ ಸಂಗತಿಯನ್ನು ಡಿ.ವಿ.ಜಿ. ಅವರು ವಿಸ್ತಾರವಾಗಿ, ಸೋದಾಹರಣವಾಗಿ, ಮನಮುಟ್ಟುವಂತೆ ಉದ್ದಕ್ಕೂ ನಿರೂಪಿಸಿದ್ದಾರೆ. ಹೀಗಾಗಿ ಇಂಥ ಏಕಪಕ್ಷೀಯವಾದ ಸಹಾಯವನ್ನು ಕೃತಘ್ನತೆ, ಸುಲಿಗೆ, ದಬ್ಬಾಳಿಕೆಯಲ್ಲದೆ ಮತ್ತೇನೆಂಬ ನೈತಿಕ ಪ್ರಶ್ನೆ ಎತ್ತುತ್ತಾರೆ. ಮುಂದೆ, ಹೀಗೆ ಹೇಳುತ್ತಾರೆ, “ನಮ್ಮ ಸಂಸ್ಥಾನಗಳು ಬ್ರಿಟಿಷ್ ಸರ್ಕಾರಕ್ಕೆ ತೋರುವ ನಿಷ್ಠೆ one-way street ಆಗಿರಕೂಡದು. ನಮ್ಮ ರಾಜರನ್ನು ಬ್ರಿಟಿಷರು ಸಮಾನರಂತೆ ಗೌರವಿಸಬೇಕು… ಈ ಸಮಾನತೆಯ ಅಡಿಪಾಯ ನೈತಿಕತೆ. ಕೇಳಿದಾಗಲೆಲ್ಲ ಇಲ್ಲವೆನ್ನದೆ ಸಾಹಾಯ ಮಾಡಿದ್ದಾರೆ.”
To be continued.