ಭಾರತೀಯ ಪರಂಪರೆಯಲ್ಲಿ ಬ್ರಾಹ್ಮ-ಕ್ಷಾತ್ತ್ರಗಳ ಸಮಾಯೋಗಕ್ಕೆ ಬಹುಕಾಲದಿಂದ ಪ್ರಾಶಸ್ತ್ಯವಿದೆ. ವೇದಗಳಲ್ಲಿಯೇ ಇದರ ಮಹತ್ತ್ವದ ಪ್ರಸ್ತಾವವುಂಟು. ಇಲ್ಲಿ ಸೂಚಿತವಾದ ಬ್ರಾಹ್ಮ ಮತ್ತು ಕ್ಷಾತ್ತ್ರಗಳನ್ನು ಕೇವಲ ಹುಟ್ಟಿನಿಂದ ಬರುವ ಜಾತಿ ಅಥವಾ ವರ್ಣಗಳ ಚೌಕಟ್ಟಿನೊಳಗೆ ಪರಿಮಿತಗೊಳಿಸಿ ನೋಡುವುದು ಯುಕ್ತವಲ್ಲ. ಇವೆರಡೂ ಮೂಲತಃ ಸಮಾಜವನ್ನು ಮುನ್ನಡಸುವ ತತ್ತ್ವಗಳು. ಬ್ರಾಹ್ಮ-ಕ್ಷಾತ್ತ್ರಗಳು ವಿಶಾಲವಾದ ಸಮಾಜದ ಎಲ್ಲ ಸ್ತರಗಳಿಂದ, ಎಲ್ಲ ಸಮುದಾಯಗಳಿಂದ ಹೊಮ್ಮಿಬರಬಹುದಾದ ಉತ್ಕೃಷ್ಟತೆಯ ಸಂಕೇತಗಳು. ಆದುದರಿಂದಲೇ ಅಪ್ಪಟ ಬ್ರಾಹ್ಮ-ಕ್ಷಾತ್ತ್ರಗಳ ಸಂಖ್ಯೆ ಎಂದಿಗೂ ಕಡಮೆ. ಗಡಿಗೆಯ ಪ್ರಮಾಣದ ಹಾಲಿನಲ್ಲಿ ಅಡಗಿರಬಹುದಾದ ಗಜ್ಜುಗದ ಗಾತ್ರದ ಬೆಣ್ಣೆ ಅಥವಾ ತುಪ್ಪಕ್ಕೆ ಇದು ಸಂವಾದಿ. ಈ ವಿಚಾರವನ್ನು ಮತ್ತಷ್ಟು ವಿಶದವಾಗಿ ಮನಗಾಣಬಹುದು.
ತ್ರಿಗುಣಪ್ರಭಾವ
ಸಾಮಾನ್ಯವಾಗಿ ಯಾವುದೇ ದೇಶ-ಕಾಲಗಳ ಸಾಧಾರಣ ಜನರಿಗೆ ಬೇಕಾದುದು ನೆಮ್ಮದಿಯ, ವಿಶ್ರಾಂತಿಯ ನೆಲೆ. ಇದು ಪ್ರಯತ್ನವಿಲ್ಲದೆಯೇ ಸಿಕ್ಕಿದರೆ ಮತ್ತೂ ಒಳ್ಳೆಯದೆಂಬ ಭಾವನೆ ಇಂಥ ಜನರಲ್ಲಿರುತ್ತದೆ. ಹೀಗಾಗಿ ವ್ಯಾಪಕವಾದ ಸಮಾಜದಲ್ಲಿ ತಮೋಗುಣದ ಆಧಿಕ್ಯವಿರುತ್ತದೆ ಎಂದು ಹೇಳಿದಲ್ಲಿ ತಪ್ಪಾಗದು. ತಮಸ್ಸಿನ ಮುಖ್ಯಲಕ್ಷಣ ಆಲಸ್ಯ ಮತ್ತು ವಿಚಾರಶೂನ್ಯತೆ; ಇಲ್ಲಿ ಅಹಂಕಾರಕ್ಕೆ ಹೆಚ್ಚಿನ ಆಸ್ಪದವಿರುವುದಿಲ್ಲ. ಆದುದರಿಂದಲೇ ತಮಸ್ಸಿನ ಜಾಡ್ಯದಲ್ಲಿ ಲೋಕೋಪದ್ರವದ ಅಪಾಯ ಕಡಮೆ. ಇಂತಿದ್ದರೂ ಇಲ್ಲಿಯ ಬದುಕು ಪ್ರಾಣಿಸಾಮಾನ್ಯಕ್ಕಿಂತ ತುಂಬ ಮೇಲಿನದಲ್ಲ. ಆದರೆ ಇಂಥ ತಮಸ್ಸಿನಿಂದಲೇ ರಚನಾತ್ಮಕವಾದ ದುಡಿಮೆ, ಬಗೆಬಗೆಯ ಸಂಪತ್ತಿಯ ಸಾಧನೆ ಹಾಗೂ ಇವೆಲ್ಲವುಗಳ ನಿರ್ವಾಹವೆಂಬ ಕಾರ್ಯಶೀಲತೆಯ ಗುಣ ಮೇಲೆದ್ದು ಬರಬೇಕು. ಇದನ್ನು ರಜಸ್ಸೆಂದು ಗುರುತಿಸಬಹುದು. ಈ ಗುಣದ ಕ್ರಿಯಾತ್ಮಕತೆಗೆ ಮಾರ್ಗದರ್ಶಿಯಾಗುವ ಜ್ಞಾನ, ವಿಜ್ಞಾನ, ಭಾವ, ಸಂವೇದನೆ ಮುಂತಾದ ಅನೇಕ ಧನಾತ್ಮಕ ಮೌಲ್ಯಗಳ ಮೊತ್ತವನ್ನು ಸತ್ತ್ವವೆನ್ನಬಹುದು.
ತನ್ನ ದುಡಿಮೆ, ಸಾಧನೆ, ಸಂಪತ್ತಿ, ಭೋಗ ಮತ್ತು ಅಧಿಕಾರಗಳ ಮೂಲಕ ರಜೋಗುಣಕ್ಕೆ ಅಹಂಕಾರ ಹೆಚ್ಚುವುದು ಸ್ವಾಭಾವಿಕ. ಇದು ಅದಕ್ಕಿರುವ ಸಾಮರ್ಥ್ಯದ ಕಾರಣ ತನಗೂ ತನ್ನ ಸುತ್ತಲಿನ ಜಗತ್ತಿಗೂ ಹಿಂಸಾತ್ಮಕವೆನಿಸುತ್ತದೆ. ತಮಃಪ್ರಾಬಲ್ಯದ ಪಶುಸದೃಶ ಜೀವನಕ್ಕಿಂತ ರಜಃಪ್ರಾಬಲ್ಯದ ಮೌಲ್ಯರಹಿತ ಮಾನವಜೀವನ ಕೆಲಮಟ್ಟಿಗೆ ಮೇಲೆನಿಸಿದರೂ ಅದು ತನ್ನೊಳಗಿನ ಅಹಂಕಾರದ ಆತ್ಮಘಾತುಕ ಪ್ರವೃತ್ತಿಯ ಮೂಲಕ ಮತ್ತಷ್ಟು ಕೀಳೆನಿಸುವ ಸಾಧ್ಯತೆ ಇಲ್ಲದಿಲ್ಲ. ಈ ಅಪಾಯದಿಂದ ತಪ್ಪಿಸಿಕೊಳ್ಳಲು ರಜಸ್ಸು ಸತ್ತ್ವಾಭಿಮುಖಿಯಾಗದೆ ಗತ್ಯಂತರವಿಲ್ಲ. ಹೇಗೆ ಸಮಾಜದ ತಮಸ್ಸೆಲ್ಲ ರಜಸ್ಸಾಗಿ ತೇರ್ಗಡೆ ಹೊಂದುವುದು ಸಾಧ್ಯವಿಲ್ಲವೋ ಹಾಗೆಯೇ ರಜಸ್ಸೆಲ್ಲ ಸತ್ತ್ವವಾಗಿ ಮೇಲೇರುವುದೂ ಅಸಾಧ್ಯ. ಆದರೆ ತಮಸ್ಸು ರಜಸ್ಸಿಗೂ ರಜಸ್ಸು ಸತ್ತ್ವಕ್ಕೂ ಅಧೀನವಾದಲ್ಲಿ ಹೆಚ್ಚಿನ ಕ್ಲೇಶಗಳು ತಪ್ಪುವುದರಲ್ಲಿ ಸಂದೇಹವಿಲ್ಲ. ಇದು ನಮ್ಮ ನೆನಪಿನ ಶಕ್ತಿ ಪಟುವಾಗಿ ಇಲ್ಲದಿದ್ದರೆ ನಾವು ಪುಸ್ತಕವನ್ನೋ ಆಪ್ತರ ಮಾತುಗಳನ್ನೋ ನಚ್ಚಿಕೊಳ್ಳುವಂತೆಯೇ ಸರಿ. ವ್ಯಾವಹಾರಿಕವಾಗಿ ಸುಲಭವಾದ ಇಂಥ ಹೊಂದಾಣಿಕೆಯೇ ಸಹಸ್ರಮಾನಗಳಿಂದ ಜಗತ್ತನ್ನು ನಡಸಿದೆ. ಈ ಲೋಕವರ್ತನೆಯನ್ನು ಮಹರ್ಷಿಗಳು ಗಮನಿಸಿ ತಮಃಪ್ರಧಾನವಾದ ಸಾಮಾನ್ಯಜನತೆಯನ್ನು ‘ವಿಶಃ’ ಎಂದೂ ಅಲ್ಲಿಂದ ಹೊಮ್ಮಿಬರುವ ರಜಃಪ್ರಧಾನವಾದ ಕೆಲವರನ್ನು ‘ಕ್ಷತ್ತ್ರ’ ಎಂದೂ ಇಲ್ಲಿ ಮತ್ತಷ್ಟು ಉತ್ಕರ್ಷಕ್ಕೆ ಬರುವ ವಿರಳಾತಿವಿರಳವಾದ ಕೆಲವರನ್ನು ‘ಬ್ರಹ್ಮ’ ಎಂದೂ ಗುರುತಿಸಿದರು.
ಮೂಲತಃ ಸಿದ್ಧವಿರುವ ವಾಸ್ತವ ವಿಶಃ ಎಂಬುದೊಂದೇ. ಇಲ್ಲಿಂದ ಹೊಮ್ಮಿಬರುವ ಸಾಧ್ಯ ಆದರ್ಶದ ಒಂದು ಹಂತ ಕ್ಷತ್ತ್ರ; ಇದನ್ನೂ ಮೀರಿದ ಹಂತ ಬ್ರಹ್ಮ. ವಿಶಃ ಎಂಬುದು ನಿಸರ್ಗದಲ್ಲಿ ಸಿಗುವ ಹಣ್ಣು-ಹಂಪಲುಗಳಂತಾದರೆ, ಕ್ಷತ್ತ್ರ ಎನ್ನುವುದು ಅವನ್ನು ಸಾಗುವಳಿಯ ಮೂಲಕ ವ್ಯವಸ್ಥಿತವಾಗಿಸುವ ಹಾಗೂ ಫಲಾಮೃತ-ರಸಾಯನಗಳನ್ನಾಗಿಸುವ ಪ್ರಕ್ರಿಯೆಯಂತೆ. ಬ್ರಹ್ಮವು ಇಂಥ ಹಣ್ಣಿನ ರಸವನ್ನು ಹುಳಿಯಿಸಿ ಹೆಂಡದಂತಾಗಿಸಬಾರದೆಂದೂ ಹಣ್ಣಿನ ಉತ್ಪನ್ನಗಳನ್ನು ಎಲ್ಲರೂ ವಿರೋಧವಿಲ್ಲದೆ ಹಂಚಿಕೊಂಡು ಹಿಗ್ಗಬೇಕೆಂದೂ ತನ್ನ ಮಾತು-ವರ್ತನೆಗಳಿಂದ ತಿಳಿಸಿಕೊಡುವ ಕಾಳಜಿ. ಕ್ಷತ್ತ್ರ-ಬ್ರಹ್ಮ ಎಂಬ ನಾಮಪದಗಳನ್ನು ಕ್ಷಾತ್ತ್ರ-ಬ್ರಾಹ್ಮ ಎಂಬ ಭಾವವಾಚಕಗಳನ್ನಾಗಿ ಮಾಡಿದರೆ ಈ ತಥ್ಯವು ಮತ್ತಷ್ಟು ಸ್ಫುಟವಾಗುತ್ತದೆ; ಸಮಾಜದಲ್ಲಿ ಹುಟ್ಟಿಗೆ ಅಂಟಿಬರುವ ಮೇಲು-ಕೀಳುಗಳ ಸಂಘರ್ಷ ಕಡಮೆಯಾಗುತ್ತದೆ. ಬ್ರಹ್ಮ, ಕ್ಷತ್ತ್ರ ಮತ್ತು ವಿಶಃ ಎಂಬ ವಿಭಾಗಗಳಿಗೆ ಆಧಾರವಾಗಿರುವ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳು ಸಂಪೂರ್ಣವಾಗಿ ಸ್ವತಂತ್ರವಾಗಿ ನಿಲ್ಲುವಂಥವೇನಲ್ಲ. ಇವುಗಳ ಪರಸ್ಪರ ಮಿಶ್ರಣದಿಂದಲೇ ಜಗತ್ತು ಮತ್ತು ಜೀವಗಳ ವ್ಯವಹಾರ ಸಾಗಿದೆ. ಏನಿದ್ದರೂ ಇವುಗಳ ಪ್ರಾಧಾನ್ಯಕ್ಕೆ ಅನುಸಾರವಾಗಿ ಆಯಾ ಅಂಶಗಳ ಸ್ವರೂಪದ ವಿವೇಚನೆ ಸಾಗಿದೆ.
ಮೇಲೆ ಕಾಣಿಸಿದ ವಿಚಾರಸರಣಿಯ ಅನುಸಾರವಾಗಿ, ಬ್ರಾಹ್ಮ-ಕ್ಷಾತ್ತ್ರಗಳ ವೈಮನಸ್ಯವಿಲ್ಲದ ನೇತೃತ್ವವು ವಿಶಃ ಎಂಬ ವ್ಯಾಪಕ ಸಮಾಜಕ್ಕೆ ಒಳಿತಾದ ವ್ಯವಸ್ಥೆ ಮತ್ತು ಮಾರ್ಗದರ್ಶನಗಳನ್ನು ಒದಗಿಸುತ್ತದೆ.
ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಪ್ರತಿಯೊಂದು ದೇಶ-ಕಾಲಗಳಲ್ಲಿಯೂ ಮೇಲೆ ಕಾಣಿಸಿದ ವಿಚಾರಕ್ಕೆ ಅನುಗುಣವಾದ ಚಟುವಟಿಕೆ ಸಾಗಿರುವುದು ಸ್ಪಷ್ಟವಾಗುತ್ತದೆ. ಸನಾತನಧರ್ಮದ ವೈಶಿಷ್ಟ್ಯ ಇವುಗಳನ್ನು ಸುವ್ಯವಸ್ಥಿತವಾಗಿ ನಿರೂಪಿಸಿ ಶಾಸ್ತ್ರದೃಷ್ಟಿಯನ್ನು ಕೊಡುವಲ್ಲಿ ಹಾಗೂ ಇದಕ್ಕೆ ಅನುಸಾರವಾಗಿ ಹಲವು ಸಹಸ್ರಮಾನಗಳಿಂದ ಈ ನೆಲದ ಬದುಕನ್ನು ಹಸನಾಗಿಸಿರುವುದರಲ್ಲಿದೆ. ಈ ಕಾರಣದಿಂದಲೇ ನಮ್ಮ ಪರಂಪರೆಯಲ್ಲಿ ವಿಶಃ ಎಂಬುದರ ಹಿತಕ್ಕಾಗಿ ದುಡಿಯುವ ಬ್ರಾಹ್ಮ-ಕ್ಷಾತ್ತ್ರಗಳ ಸಮಾಹಾರವೆನಿಸಿದ ಹಲವು ಮಂದಿ ಮಹನೀಯರ ಮಾದರಿಗಳು ಆರಾಧ್ಯವಾಗಿವೆ. ವೇದಗಳಲ್ಲಿ ಬರುವ ಇಂದ್ರ-ಅಗ್ನಿ, ಮಿತ್ರ-ವರುಣ, ಇಂದ್ರ-ಬೃಹಸ್ಪತಿ, ಅಗ್ನಿ-ಸೋಮ ಮುಂತಾದ ಯುಗಲದೇವತೆಗಳು ಮೂಲತಃ ಬ್ರಾಹ್ಮ-ಕ್ಷಾತ್ತ್ರಗಳ ಸಮಾಹಾರವೇ. ಈ ಸಾಲಿಗೆ ಪುರಾಣ-ಆಗಮಗಳಲ್ಲಿ ಪ್ರಸ್ಫುಟವಾಗಿರುವ ಶಿವ ಮತ್ತು ಸ್ಕಂದರ ಸಂಕೇತಗಳೂ ಸೇರುತ್ತವೆ. ಕೆಲಮಟ್ಟಿಗೆ ಅಮೂರ್ತವಾದ ಈ ತತ್ತ್ವಗಳು ಇತಿಹಾಸ-ಪುರಾಣಗಳಲ್ಲಿ ಮತ್ತಷ್ಟು ಮೂರ್ತವೂ ಸುದೃಢವೂ ಆಗಿವೆ. ವಸಿಷ್ಠ-ವಿಶ್ವಾಮಿತ್ರರ ಮಾರ್ಗದರ್ಶನದಲ್ಲಿ ಸುಖಸಮೃದ್ಧ ರಾಜ್ಯವನ್ನು ರೂಪಿಸಿದ ಶ್ರೀರಾಮ, ಶ್ರೀಕೃಷ್ಣ ಮತ್ತು ವ್ಯಾಸರ ಕೈಗಾವಲಿನಲ್ಲಿ ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಪಾಂಡವರು ಈ ಕಾರಣದಿಂದಲೇ ಚಿರಸ್ಮರಣೀಯರಾಗಿದ್ದಾರೆ.
ಶ್ರೀಕೃಷ್ಣ
ಈ ಸಾಲಿನಲ್ಲಿ ಶ್ರೀಕೃಷ್ಣನನ್ನು ಬ್ರಾಹ್ಮ-ಕ್ಷಾತ್ತ್ರಗಳ ಅನನ್ಯ ಸಮನ್ವಯವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು. ಆವರೆಗಿನ ಇತಿಹಾಸದಲ್ಲಿ ಈ ಎರಡು ಮೌಲ್ಯಗಳ ಪ್ರತಿನಿಧಿಗಳು ಪ್ರತ್ಯೇಕ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಿದ್ದರು. ಶ್ರೀಕೃಷ್ಣ ಮಾತ್ರ ತನ್ನೊಬ್ಬನಲ್ಲಿ ಇವುಗಳ ಸರ್ವೋಚ್ಚ ಸಾಧನೆಯನ್ನು ಕಾಣಿಸಿದ್ದಾನೆ. ಬಹುಶಃ ಈ ಕಾರಣದಿಂದಲೇ ಆತನನ್ನು ಜಗದ್ಗುರುವೆಂದೂ ಪೂರ್ಣಾವತಾರವೆಂದೂ ನಮ್ಮ ಸಂಸ್ಕೃತಿ ಕೊಂಡಾಡಿದೆ. ಕೃಷಿ-ಗೋರಕ್ಷೆಗಳನ್ನು ಜೀವಿಕೆಯಾಗಿ ಹೊಂದಿದ್ದ ನಂದಗೋಪ ಮತ್ತು ಯಶೋದೆಯರ ಮುದ್ದುಕಂದನಾಗಿ ಗೋಕುಲದಲ್ಲಿ ಬೆಳೆದು ಯಾದವಕುಲದ ಪ್ರಮುಖ ವಾಸುದೇವನೆನಿಸಿದ ಕೃಷ್ಣ, ವಿಶಃ ಎಂಬ ವರ್ಗದಿಂದ ಕ್ಷತ್ತ್ರ ಹೊಮ್ಮುವುದಕ್ಕೆ ಒಳ್ಳೆಯ ನಿದರ್ಶನ. ಬಳಿಕ ಸಾಂದೀಪನಿ ಮತ್ತು ಘೋರ ಆಂಗಿರಸರಂಥ ಮಹರ್ಷಿಗಳ ಮಾರ್ಗದರ್ಶನದಲ್ಲಿ ಅರಿವನ್ನು ಗಳಿಸಿ ಸ್ವಾನುಭವದಿಂದ ಅದನ್ನು ಆತ್ಮಸಾತ್ತಾಗಿಸಿಕೊಂಡು ಗೀತಾಚಾರ್ಯನ ಮಟ್ಟಕ್ಕೆ ಏರಿದ ಈತ ವಿಶಃ-ಕ್ಷತ್ತ್ರಗಳಿಂದ ಬ್ರಹ್ಮವು ಚಿಮ್ಮಿಬರುವುದಕ್ಕೆ ಸೊಗಸಾದ ದೃಷ್ಟಾಂತ. ವಿವಿಧ ಹಂತಗಳಲ್ಲಿ ಕೊಳಲು, ಶಂಖ, ಚಾವಟಿ, ಚಕ್ರಗಳನ್ನು ಹಿಡಿದ ಶ್ರೀಕೃಷ್ಣ ಮೂರೂ ಗುಣಗಳ ಮಹೋನ್ನತ ವಿಕಾಸಕ್ಕೆ ಸಾಕಾರನೆನಿಸಿದ್ದಾನೆ. ಈ ಕಾರಣದಿಂದಲೇ ವ್ಯಾಸರು ಹೇಳುವಂತೆ ಧರ್ಮದ್ರುಮದ ತಾಯಿಬೇರೇ ಆಗಿದ್ದಾನೆ.
ನಿಃಸ್ವಾರ್ಥಿಯೂ ಧೀಮಂತನೂ ಆದ ಸಮರ್ಥನು ಏನನ್ನು ಮಾಡಿದರೂ ಅದು ಲೋಕಹಿತವಾಗುತ್ತದೆಂಬ ಸತ್ಯಕ್ಕೆ ಕೃಷ್ಣನ ಬದುಕೇ ವ್ಯಾಖ್ಯಾನ. ಅರ್ಥ-ಕಾಮಗಳನ್ನು ಧರ್ಮದ ಚೌಕಟ್ಟಿನಲ್ಲಿ ಅಳವಡಿಸಿದರೆ ಅಂಥ ಸಮೃದ್ಧವಾದ ಬದುಕು ಮೋಕ್ಷದ ಕಡೆಗೂ ತಿರುಗುತ್ತದೆಂಬುದನ್ನು ಸಾರಿದ ದಾರ್ಶನಿಕ ಈತ. ಜಗತ್ತು, ಜೀವ ಮತ್ತು ಈಶ್ವರಗಳೆಂಬ ತತ್ತ್ವತ್ರಯವನ್ನು ಅವಿರೋಧವಾಗಿ ನಿರೂಪಿಸಿದ ಶ್ರೇಯಸ್ಸೂ ಈತನದು. ಅಧಿಭೂತ ಎಂಬ ವಾಸ್ತವ ಮತ್ತು ಅಧಿದೈವ ಎಂಬ ನಂಬಿಕೆಗಳನ್ನು ಅಧ್ಯಾತ್ಮ ಎಂಬ ಸಾರ್ವತ್ರಿಕ ಅನುಭವಕ್ಕೆ ಅಧೀನಗೊಳಿಸಿದ ಯಶಸ್ಸೂ ಇವನಿಗೆ ಸಲ್ಲುತ್ತದೆ. ಇವನ್ನೆಲ್ಲ ಅಧಿಯಜ್ಞ ಎಂಬ ಜೀವನಪದ್ಧತಿಗೆ ಅಳವಡಿಸಿದ ಮಹಾತ್ಮ ಇವನು. ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೈತಿಕವಾದ ಉಪಾಯಗಳನ್ನು ಔಚಿತ್ಯವರಿತು ಬಳಸಿ ಉದ್ದಿಷ್ಟವಾದ ಗುರಿಯನ್ನು ಮುಟ್ಟಲು ಕೃಷ್ಣನು ಕಾಣಿಸಿಕೊಟ್ಟ ಮಾರ್ಗ ಅತಿಶಯವಾದದ್ದು. ಇದು ಅವನ ಜೀವನದಲ್ಲಿಯೇ ವಿವೃತವಾಗಿದೆ. ದುಷ್ಟದಂಡನೆ ಮತ್ತು ಶಿಷ್ಟರಕ್ಷಣೆಗಳೆರಡೂ ಲೋಕಹಿತ ಎಂಬ ಒಂದೇ ಧರ್ಮದ ಎರಡು ಮುಖಗಳೆಂದು ಸಾರಿದ ಕೃಷ್ಣನ ನಡೆವಳಿಕೆಯಲ್ಲಿ ಸತ್ಯ, ಅಹಿಂಸೆ, ಕ್ಷಮೆ, ಔದಾರ್ಯ ಮುಂತಾದ ಎಲ್ಲ ಮೌಲ್ಯಗಳೂ ಯುಕ್ತಸ್ಥಾನವನ್ನು ಗಳಿಸಿವೆ. ಆದುದರಿಂದಲೇ ಈತನನ್ನು ಸಮನ್ವಯದ ಪರಮಾಚಾರ್ಯ ಎಂದು ನಮ್ಮ ಸಂಸ್ಕೃತಿ ಗೌರವಿಸಿದೆ. ಧರ್ಮಸ್ಥಾಪನೆಯಲ್ಲಿ ಸ್ವ-ಪರಭೇದವಿಲ್ಲದೆ ತನ್ನ ಬಂಧುವರ್ಗಕ್ಕೆ ಸೇರಿದ ಕಂಸ, ಶಿಶುಪಾಲ, ದಂತವಕ್ರ, ವಿಂದ, ಅನುವಿಂದ, ಜರಾಸಂಧ ಮುಂತಾದ ಲೋಕಕಂಟಕರನ್ನು ಮಾತ್ರವಲ್ಲದೆ, ತನ್ನ ಸೊಸೆಯ ತಂದೆಯಾದ ದುರ್ಯೋಧನ ಮತ್ತವನ ಪರಿವಾರವನ್ನೂ ನಿಟ್ಟೊರೆಸಿದ ನಿರ್ಮಮತೆ ಶ್ರೀಕೃಷ್ಣನದು. ಹಾಗೆಂದು ಆತ ರಣರಕ್ತಪಿಪಾಸಿಯಲ್ಲ. ಶಾಂತಿಸ್ಥಾಪನೆಗೆ ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡಿ ಅವು ಸಂಪೂರ್ಣವಾಗಿ ವಿಫಲವಾದ ಬಳಿಕವೇ ಯುದ್ಧಕ್ಕೆ ಮುಂದಾದನು. ಆದರೆ ಒಮ್ಮೆ ಯುದ್ಧ ಸಿದ್ಧವೆಂದ ಬಳಿಕ ಅದು ಪರಪಕ್ಷದ ಪರಾಜಯ ಮತ್ತು ಸ್ವಪಕ್ಷದ ವಿಜಯದಲ್ಲಿಯೇ ಪರ್ಯವಸಿಸಬೇಕೆಂಬ ನಿಚ್ಚಳವಾದ ನಿಲವು ಆತನದಾಗಿತ್ತು. ವೈರಿಗಳ ಸಂತಾನವಾಗಿದ್ದರೂ ಧರ್ಮಕ್ಕೆ ಮನ್ನಣೆ ನೀಡಿದ ಜರಾಸಂಧನ ಮಗ ಸಹದೇವ, ಶಿಶುಪಾಲನ ಮಗ ಧೃಷ್ಟಕೇತು ಮುಂತಾದ ಎಷ್ಟೋ ಮಂದಿಯನ್ನು ತನ್ನವರನ್ನಾಗಿಸಿಕೊಂಡ. ಅಷ್ಟೇಕೆ, ಧರ್ಮಚ್ಯುತರಾದ ಯಾದವರನ್ನೇ ದಂಡಿಸಿದ; ಮೌಲ್ಯಭ್ರಷ್ಟರಾದ ತನ್ನ ಮಕ್ಕಳು-ಮೊಮ್ಮಕ್ಕಳನ್ನೇ ಸಂಹರಿಸಿದ. ಎಲ್ಲಿಯವರೆಗೆ ಈತನ ಹಾದಿಯನ್ನು ನಮ್ಮ ನಾಯಕರು ಹಿಡಿದಿದ್ದರೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಮೌಲ್ಯಸಂದಿಗ್ಧತೆ ಇರಲಿಲ್ಲ; ಪರಕೀಯರ ದಾಸ್ಯದ ದೌರ್ಭಾಗ್ಯವೂ ಬರಲಿಲ್ಲ. ಈತನ ದರ್ಶನಕ್ಕೆ ದೂರವಾಗುತ್ತಿದ್ದಂತೆಯೇ ನಮಗೆ ಎಲ್ಲ ಬಗೆಯ ಅನರ್ಥಗಳೂ ಎದುರಾದವು. ಇವನ್ನೆಲ್ಲ ನಿವಾರಿಸಿಕೊಳ್ಳಲು ಮತ್ತೆ ಈತನ ಮೌಲ್ಯಗಳೇ ಶರಣ್ಯ.
ಚಾಣಕ್ಯ
ಆಧುನಿಕ ಪರಿಭಾಷೆಯ ಇತಿಹಾಸಯುಗಕ್ಕೆ ಬಂದರೆ, ಅಲ್ಲಿ ಶ್ರೀಕೃಷ್ಣನ ಮೌಲ್ಯಗಳನ್ನು ಉಜ್ಜ್ವಲವಾಗಿ ಮೈಗೂಡಿಸಿಕೊಂಡ ಬ್ರಾಹ್ಮ-ಕ್ಷಾತ್ತ್ರಸಮವಾಯದ ಉದಾಹರಣೆ ಭಗವಾನ್ ಚಾಣಕ್ಯ ಮತ್ತು ಸಮ್ರಾಟ್ ಚಂದ್ರಗುಪ್ತಮೌರ್ಯರಲ್ಲಿ ಕಾಣುತ್ತದೆ. ಶೂದ್ರವರ್ಗಕ್ಕೆ ಸೇರಿದ ಚಂದ್ರಗುಪ್ತನನ್ನು ಕ್ಷತ್ತ್ರಿಯೋತ್ತಮನನ್ನಾಗಿ ರೂಪಿಸಿದ ವಿಪ್ರವರ್ಯ ಚಾಣಕ್ಯನ ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಅಸಮಾನ. ಶ್ರೀಕೃಷ್ಣ ತನ್ನ ಬದುಕು ಮತ್ತು ಭಗವದ್ಗೀತೆಗಳಲ್ಲಿ ರೂಪಿಸಿದ ಸೂತ್ರಗಳಿಗೆ ಭಾಷ್ಯದಂತೆ ಚಾಣಕ್ಯ ರೂಪಿಸಿದ ಮೌರ್ಯಸಾಮ್ರಾಜ್ಯ ಮತ್ತು ರಚಿಸಿದ ಅರ್ಥಶಾಸ್ತ್ರಗಳು ಬೆಳಗಿವೆ. ಇಲ್ಲಿ ಕೌಟಿಲ್ಯನೊಬ್ಬ ಕೇವಲ ತಾತ್ತ್ವಿಕನಾಗಿ ಸೀಮಿತಗೊಳ್ಳದೆ ತನ್ನ ಆದರ್ಶಗಳ ಬೀಜಗಳನ್ನು ವಾಸ್ತವದಲ್ಲಿ ಬಿತ್ತಿ ಸಫಲ ಜೀವನವನ್ನು ಬೆಳೆದ ಬಗೆ ಹರಳುಗಟ್ಟಿದೆ. ಗ್ರೀಕರ ದಾಳಿಯನ್ನು ಸಮಷ್ಟಿಯಾಗಿ ಎದುರಿಸಲಾಗದೆ ಒಳಜಗಳಗಳಲ್ಲಿಯೇ ನೆಲೆ ಕಳೆದುಕೊಂಡ ಗಣತಂತ್ರಗಳಿಗೆ ಭವಿಷ್ಯವಿಲ್ಲವೆಂದು ಕಂಡುಕೊಂಡ ಚಾಣಕ್ಯ ಆಸೇತುಶೀತಾಚಲ ಅಖಂಡವಾಗಿ ವ್ಯಾಪಿಸಿದ ಸಾರ್ವಭೌಮವ್ಯವಸ್ಥೆಯೇ ಭಾರತಕ್ಕೆ ತಕ್ಕುದೆಂದು ಬಗೆದು ಆ ನಿಟ್ಟಿನಲ್ಲಿ ದುಡಿದು ಸಫಲನಾದ. ಇದು ಯಾದವರ ಇಂಥದ್ದೇ ಗಣತಂತ್ರವ್ಯವಸ್ಥೆಯ ಕುಂದು-ಕೊರತೆಗಳನ್ನು ಕಂಡು ಪಾಂಡವರ ಮೂಲಕ ಸಾರ್ವಭೌಮತೆಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೃಷ್ಣನ ನಡೆಯನ್ನು ನೆನಪಿಸುತ್ತದೆ. ಚಾಣಕ್ಯನ ಈ ನೀತಿಯೇ ಭಾರತವನ್ನು ಬಹುಕಾಲ ಶತ್ರುಗಳಿಗೆ ದುರ್ಭೇದ್ಯವಾಗಿ ಮತ್ತು ಪ್ರಜೆಗಳಿಗೆ ಕ್ಷೇಮಕಾರಿಯಾಗಿ ರೂಪಿಸಿತು. ಅವನ ಮೌಲ್ಯಗಳನ್ನು ಮರೆತ ಮೌರ್ಯಸಾಮ್ರಾಜ್ಯ ವಿಘಟಿತವಾದದ್ದು ಇತಿಹಾಸಪ್ರಸಿದ್ಧ.
ವಿದ್ಯಾರಣ್ಯ
ಶ್ರೀಕೃಷ್ಣ ಮತ್ತು ಚಾಣಕ್ಯರ ಪಂಕ್ತಿಗೆ ಸೇರುವ ಮತ್ತೊಂದು ಉಜ್ಜ್ವಲ ಉದಾಹರಣೆ ನಮ್ಮ ಕಾಲಕ್ಕೆ ಕೆಲಮಟ್ಟಿಗೆ ನಿಕಟವಾದ ವಿಜಯನಗರಸಾಮ್ರಾಜ್ಯದ ರೂವಾರಿ ವಿದ್ಯಾರಣ್ಯಸ್ವಾಮಿಗಳದು. ಇವರು ತಮ್ಮ ಪೂರ್ವಾಶ್ರಮದಲ್ಲಿ ಮಾಧವಾಚಾರ್ಯರೆಂದು ಪ್ರಸಿದ್ಧರಾಗಿದ್ದರು. ಇವರಿಗಿಂತ ಒಂದೇ ವರ್ಷ ಕಿರಿಯರಾದ ತಮ್ಮ ಸಾಯಣಾಚಾರ್ಯರನ್ನು ಇವರ ಪ್ರತಿರೂಪವೆಂದೇ ಹೇಳಬಹುದು. ಈ ಇಬ್ಬರು ಸಹೋದರರು ಹವ ಮತ್ತು ಆಹವಗಳೆರಡರಲ್ಲಿಯೂ (ಯಜ್ಞ ಮತ್ತು ಯುದ್ಧ) ಅಸಮಾನರೆಂದು ಆ ಕಾಲದ ಸಾಹಿತ್ಯ ಬಣ್ಣಿಸಿದೆ. ಬಹುಶಾಸ್ತ್ರಕೋವಿದರಾಗಿ, ಬಹುಗ್ರಂಥನಿರ್ಮಾಪಕರಾಗಿ ಬ್ರಾಹ್ಮದ ಮುಗಿಲು ಮುಟ್ಟಿದ ಮಾಧವ-ಸಾಯಣರು, ಸಂಗಮಸೋದರಪಂಚಕವೆಂದು ಹೆಸರಾದ ಹರಿಹರ, ಕಂಪಣ, ಬುಕ್ಕರಾಯ, ಮಾರಪ್ಪ ಮತ್ತು ಮುದ್ದಪ್ಪರಲ್ಲಿ ತಾವು ನಿರೀಕ್ಷಿಸಿದ ಕ್ಷಾತ್ತ್ರವನ್ನು ಕಂಡರು. ಕುರುಬರ ಕುಲದಲ್ಲಿ ಹುಟ್ಟಿದ ಈ ಐವರು ಮಾಧವ-ಸಾಯಣರ ಗುರುತ್ವ ಮತ್ತು ಮಂತ್ರಿತ್ವಗಳನ್ನು ಅವಲಂಬಿಸಿ ಸನಾತನಧರ್ಮದ ರಕ್ಷಣೆ-ಪೋಷಣೆಗಳನ್ನು ಅನುಪಮವಾಗಿ ಸಾಧಿಸಿದರು. ಶ್ರೀಕೃಷ್ಣನು ಭಾರತೀಯರೇ ಆಗಿದ್ದ ಕೌರವಾದಿಗಳ ವಿರುದ್ಧ ಸೆಣಸಿ ಗೆದ್ದಂತೆ, ಚಾಣಕ್ಯನು ಪರಕೀಯರಾದ ಗ್ರೀಕರ ಹಾಗೂ ಸ್ವಜನರೇ ಆದ ದುಷ್ಟ ನವನಂದರ ವಿರುದ್ಧ ವಿಜಯ ಸಾಧಿಸಿದಂತೆ, ವಿದ್ಯಾರಣ್ಯರು ಸಂಗಮಸೋದರರ ಮೂಲಕ ಮತಾಂಧರಾದ ಮುಸ್ಲಿಮರ ವಿರುದ್ಧ ವಿಕ್ರಮವನ್ನು ಸಾಧಿಸಿದರು. ಮಿಕ್ಕೆಲ್ಲ ಗೆಲವುಗಳಿಗಿಂತ ಇದನ್ನು ಮಿಗಿಲೆನ್ನಬೇಕು. ಏಕೆಂದರೆ ಮಿಕ್ಕವುಗಳಲ್ಲಿ ಧರ್ಮವಿಜಯ ಮತ್ತು ಅರ್ಥವಿಜಯಗಳ ಆಯಾಮವಷ್ಟೇ ಇದ್ದಿತು. ಆದರೆ ಇಲ್ಲಿ ಅಸುರವಿಜಯದ ವಿರುದ್ಧ ಹೋರಾಡಬೇಕಿತ್ತು. ಅಸುರವಿಜಯವೆಂದರೆ ಬೇರೊಬ್ಬರ ಹೆಣ್ಣು-ಹೊನ್ನು-ಮಣ್ಣುಗಳನ್ನು ಬರ್ಬರವಾಗಿ ಕಸಿಯುವುದಲ್ಲದೆ ಅವರ ಮಾನ-ಪ್ರಾಣಗಳನ್ನೂ ಇಲ್ಲವಾಗಿಸುವ ದೌರ್ಜನ್ಯ. ಇಸ್ಲಾಮಿನಲ್ಲಿ ಬಲವಂತ ಮತಾಂತರದ ಪೈಶಾಚಿಕ ವರ್ತನೆ ಬೇರೆ! ಇವೆಲ್ಲದರ ವಿರುದ್ಧ ಸನಾತನಧರ್ಮದ ಸಾಮ್ರಾಜ್ಯವನ್ನು ಹಲವು ಕಾಲ ದುರ್ಭೇದ್ಯವಾಗಿ ನಿಲ್ಲಿಸಿದ ಶ್ರೇಯಸ್ಸು ವಿದ್ಯಾರಣ್ಯರದು. ಇವರ ಸ್ಫೂರ್ತಿಯೇ ಮುಂದೆ ಸ್ವಾಮಿ ಸಮರ್ಥರಾಮದಾಸರ ಬ್ರಾಹ್ಮ ಹಾಗೂ ಛತ್ರಪತಿ ಶಿವಾಜಿಯ ಕ್ಷಾತ್ತ್ರದ ಸಮಾಹಾರಕ್ಕೆ ಕಾರಣವಾಯಿತು.
ಹೀಗೆ ಬ್ರಾಹ್ಮ-ಕ್ಷಾತ್ತ್ರಗಳ ಸಮಾಯೋಗ ಭಾರತೀಯ ಜೀವನವನ್ನು ತಾಳಿಸಿ ಬಾಳಿಸಿದೆ. ಇದನ್ನು ಮೈಗೂಡಿಸಿಕೊಂಡ ಹೊರತು ನಮಗೆ ಉಳಿವಿಲ್ಲ.