ಬ್ರಿಟಿಷರಿಗೆ ‘ದುಃಸ್ವಪ್ನ’ವಾಯಿತು ಭಾರತ
ಇಂಗ್ಲೆಂಡ್ ಲಗ್ಗೆಯಿಟ್ಟ ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದವೆಲ್ಲ ಬ್ರಿಟಿಷರ ಕಾಲೊನಿ (ವಸಾಹತುಗಳಾಗಿ) ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡವು. ಈ ಪ್ರಕ್ರಿಯೆಗೆ ಏಕೈಕ ಅಪವಾದವೆಂದರೆ ಭಾರತದೇಶ ಮಾತ್ರ. ಬ್ರಿಟಿಷರು ಇಲ್ಲಿ ಇನ್ನೂರು ವರ್ಷ ರಾಜ್ಯಭಾರ ಮಾಡಿದರು. ಆದರೂ ಅವರು ಶಾಶ್ವತವಾಗಿ ನೆಲಸಲಾಗದ ಒಂದೇ ಒಂದು ದೇಶವೆಂದರೆ ಹಿಂದೂಸ್ಥಾನ. ಅವರು ಹೋದ ಬೇರೆಲ್ಲ ದೇಶಗಳನ್ನು ಅವರು ಮನೆ ಮಾಡಿಕೊಂಡರು, ‘ಟರ್ಫ್’ ಮಾಡಿಕೊಂಡರು. ಅವರಿಗೆ ಇದಕ್ಕೆ ಅವಕಾಶ ಕೊಡದ ದೇಶ ಭಾರತ. ಬ್ರಿಟಿಷರು ಇಲ್ಲಿ ಬೇರು ಬಿಡಲು ಆಗಲೇ ಇಲ್ಲ. ‘ನಮಗಿದು ಬೇಡ’ ಎಂದೇ ಹೇಳುವಷ್ಟು ಹತಾಶರಾಗಿದ್ದರು ಬ್ರಿಟಿಷರು. ಇಂಥ ಸಮೃದ್ಧ ಸುಂದರ ನಂದನವನ ಅವರಿಗೇಕೆ ಬೇಡವಾಯಿತು?
ಇಂಗ್ಲೆಂಡಿನಲ್ಲಿ ನಿಷ್ಪ್ರಯೋಜಕರೆನಿಸಿದ್ದವರು ಭಾರತದಲ್ಲಿ ರೆಸೆಡೆಂಟರುಗಳಾಗಿಯೊ ಕಲೆಕ್ಟರುಗಳಾಗಿಯೊ ಮೆರೆಯುತ್ತಿದ್ದರು. ವಿಖ್ಯಾತನಾದ ರಾಬರ್ಟ್ ಕ್ಲೈವನೂ ಅಷ್ಟೆ: ಅಪ್ರಯೋಜಕನೆಂದು ಅವನನ್ನು ಅವರಪ್ಪ ಒದ್ದು ಮನೆಯಿಂದ ಹೊರಕ್ಕೆ ಹಾಕಿದ್ದ. ಅಂಥವನು ಇಲ್ಲಿ ಒಂದು ಸಾಮ್ರಾಜ್ಯ ನಿರ್ಮಾಣ ಮಾಡಿದ. ಹೀಗೆ ಭಾರತಕ್ಕೆ ಹೋಗಿ ಅಧಿಕಾರದಲ್ಲಿರುವುದು ಇಂಗ್ಲೆಂಡಿನ ತರುಣರೆಲ್ಲರ ಹೆಗ್ಗನಸಾಗಿತ್ತು.
ಆದರೆ 1857ರ ನಂತರ ಈ ಚಿತ್ರ ಪೂರ್ತಿ ತಲೆಕೆಳಗಾಯಿತು! ಭಾರತಕ್ಕೆ ಹೋಗಲಿಚ್ಛಿಸುವ ಅಭ್ಯರ್ಥಿಗಳೇ ಇಂಗ್ಲೆಂಡಿನಲ್ಲಿ ಸಿಗುವುದು ಕಷ್ಟವಾಯಿತು. ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವಿಸ್) ಪೂರ್ತಿ ನೆಲಕಚ್ಚಿತು. ಬ್ರಿಟಿಷ್ ತರುಣರು ‘ನಾವು ಭಾರತಕ್ಕೆ ಹೋಗಲಾರೆವು’ ಎನ್ನುತ್ತಿದ್ದರು. ಅನಿವಾರ್ಯವಾಗಿ ಹೋಗಲೇಬೇಕಾದಾಗ ಇಂಗ್ಲೆಂಡಿಗೆ ಮರಳಲು ರಜಾಕ್ಕಾಗಿ ಕಾಯುತ್ತಿರುತ್ತಿದ್ದರು. ಭಾರತದಲ್ಲಿ ನೆಲೆಸಿ ಅಧಿಕಾರ ಕೈಯಲ್ಲಿ ಹಿಡದು ವೈಭವೋಪೇತ ಜೀವನ ನಡೆಸಬೇಕೆಂಬ ಅಭಿಲಾಷೆ ಬ್ರಿಟಿಷ್ ತರುಣರ ಮನಸ್ಸಿನಿಂದ ಶಾಶ್ವತವಾಗಿ ನಿಷ್ಕ್ರಮಿಸಿತು. 1857ರ ಸಮರದ ದೂರಗಾಮಿ ಪರಿಣಾಮ ಇಂಥದು. ಅಳಿದುಳಿದವರೂ ಆಮೇಲೆ ಗಂಟುಮೂಟೆ ಕಟ್ಟಿದರು. ಇಲ್ಲಿ ಯಾರೂ ಉಳಿಯಲೇ ಇಲ್ಲ. ಔಷಧಕ್ಕೆಂಬಂತೆ ಹಲಕೆಲವರು ಇದ್ದಾರು. ಹೀಗೆ ಭಾರತ ಇಂಗ್ಲೆಂಡಿನ ಕಾಲೊನಿ ಆಗಲಿಲ್ಲ; ಇನ್ನು ಮುಂದೆಯೂ ಎಂದೂ ಆಗುವ ಸಂಭವ ಇಲ್ಲ.
ಅಸ್ತಗೊಂಡ ಧರ್ಮಾಂತರಣ
ಬ್ರಿಟಿಷರ ರಾಜ್ಯಾಧಿಕಾರಾಂಕ್ಷೆ ಮಣ್ಣುಗೂಡಿದಂತೆ ಅವರ ಕ್ರೈಸ್ತೀಕರಣ ಅಭಿಯಾನವೂ ಅಸ್ತವಾಯಿತು, ಇವ್ಯಾಂಜೆಲಿಕಲ್ ಪಾರ್ಟಿ ಮಾತ್ರವಲ್ಲ, ಇನ್ನೂ ಅನೇಕ ಸಂಘಟನೆಗಳು ಹೀಗೆ ಪ್ರಯತ್ನಶೀಲವಾಗಿದ್ದವು. ಅವೆಲ್ಲ ಈಗ ಹತಪ್ರಭವಾದವು. ಬ್ರಿಟಿಷರು ವಲಸೆ ಹೋದೆಡೆಯೆಲ್ಲ ಕ್ರೈಸ್ತಮತ State religion ಆಗಿಬಿಟ್ಟಿತ್ತು. ಈ ಪರಿವರ್ತನೆ ಸಾಧ್ಯವಾಗದಿದ್ದುದು ಭಾರತದಲ್ಲಿ ಮಾತ್ರ. ಒಂದು ಹಂತದಿಂದಾಚೆಗೆ ‘ಈ ರಗಳೆ ನಮಗೆ ಬೇಡ’ ಎಂದೇ ಈ ಪ್ರಯತ್ನವನ್ನು ಬ್ರಿಟಿಷ್ ಸರ್ಕಾರ ಕೈಬಿಟ್ಟಿತು.
1857ರ ಯುದ್ಧವೆಲ್ಲ ಮುಗಿದ ಮೇಲೆ ಇಂಗ್ಲೆಂಡಿನ ರಾಣಿಯೇ ತಪ್ಪೊಪ್ಪಿಗೆಯ ರೀತಿಯಲ್ಲಿ ಸರ್ಕಾರದ ಪತ್ರಿಕೆಯಲ್ಲಿ ಭಾರತದ ಜನರಿಗೆ ಹಲವಾರು ಆಶ್ವಾಸನೆಗಳನ್ನು ನೀಡಿದಳು – ಇನ್ನು ಮುಂದೆ ಹೀಗೆ ಮಾಡುವುದಿಲ್ಲ, ಇತ್ಯಾದಿಯಾಗಿ. ಆ ಆಶ್ವಾಸನೆಗಳಲ್ಲಿ ಮೊಟ್ಟಮೊದಲಿನದೇ ಹೀಗಿತ್ತು: “We shall not interfere in the religion of the native people.” ಇದಕ್ಕೆ ಹಿಂದೆ ವಿಲ್ಬರ್ಫೋರ್ಸ್ ಹೇಳುತ್ತಿದ್ದುದು – ಅಧಃಪಾತದಿಂದ ಭಾರತೀಯರನ್ನು ಉದ್ಧಾರ ಮಾಡುವುದಕ್ಕಾಗಿಯೇ ಭಗವಂತ ನಮ್ಮನ್ನು ಸೃಷ್ಟಿಸಿದ್ದಾನೆ – ಎಂದು: “We are here to enlighten and inform the minds of the subjects of our East Indian empire.” 1813ರ ಜೂನ್ 22ರಂದು ಇಂಗ್ಲೆಂಡಿನ ‘ಹೌಸ್ ಆಫ್ ಕಾಮನ್ಸ್’ನಲ್ಲಿ ಮಾಡಿದ ಭಾಷಣದಲ್ಲಿ ಆತ ಹೀಗೆಂದಿದ್ದ: “Upon the whole, we cannot help recognising in the people of Hindusthan a race of men lamentably degenerate and base, retaining but a feeble sense of moral obligation.” ಆ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ತರುಣರಿಗೆ ನೀಡಲಾಗುತ್ತಿದ್ದ ಬೋಧನೆಯೆಂದರೆ ಪೂರ್ವದೇಶಗಳಿಗೆ, ವಿಶೇಷವಾಗಿ ಭಾರತಕ್ಕೆ ಹೋಗಿ ಬಿಳಿಯರ ಜಗದುದ್ಧಾರ ಕರ್ತವ್ಯವನ್ನು ನಿರ್ವಹಿಸಬೇಕೆಂದು. ರುಡ್ಯಾರ್ಡ್ ಕಿಪ್ಲಿಂಗನ ಪ್ರಸಿದ್ಧ ಕವನ ಇದು:
Your new-caught sullen peoples
Half devil and half child
. . . . .
Take up the White Man’s
burden-
And reap his old reward:
The blame of those ye better,
The hate of those ye guard.
ಭಾರತೀಯರನ್ನು ನಾಗರಿಕಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ – ಎಂದು ಇಂಗ್ಲೆಂಡಿನ ತರುಣರಿಗೆ ಆವಾಹನೆ ನೀಡಲಾಗುತ್ತಿತ್ತು. ಹೀಗೆಲ್ಲ ಹೇಳುತ್ತಿದ್ದ ಬ್ರಿಟಿಷರ ಪಾಲಿಗೆ ಈಗ ಭಾರತವೆಂದರೆ ದುಃಸ್ವಪ್ನವಾಗಿಬಿಟ್ಟಿತ್ತು!
ಭಾರತ ಕ್ರೈಸ್ತವಾಗಲಿಲ್ಲ, ಬ್ರಿಟಿಷ್ ಆಗಲಿಲ್ಲ, ಪಾಶ್ಚಾತ್ಯ ಆಗಲಿಲ್ಲ; ತಾನು ತಾನಾಗಿಯೇ ಉಳಿಯಿತು. ಇದನ್ನು ಆಗಿಸಿದ್ದು 1857ರ ಮಹಾಸಮರ.
ಸ್ವಾತಂತ್ರ್ಯ ಹೋರಾಟದ ಅಂತಿಮ ಘಟ್ಟ
ಈಗ ಅಲ್ಲಿಂದ ಮುಂದಕ್ಕೆ ಬರೋಣ. ಸ್ವಾತಂತ್ರ್ಯ ಹೋರಾಟದ ಬೇರೆಬೇರೆ ಮಜಲುಗಳ ಬಗ್ಗೆ ಸ್ಥೂಲವಾಗಿ ಎಲ್ಲರಿಗೂ ತಿಳಿದಿದೆ. ಒಂದು ಅವಧಿಯಲ್ಲಿ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹಾದಿ ಪ್ರಯತ್ನಗಳೂ ನಡೆದವು. ಇಡೀ ದೇಶದ ಜನತೆಯನ್ನು ಸ್ವಾತಂತ್ರ್ಯಾಭಿಮುಖಗೊಳಿಸುವುದರಲ್ಲಿ ಗಾಂಧಿಯವರ ಪಾತ್ರವಿತ್ತೆಂಬುದು ನಿಸ್ಸಂದೇಹ. ನನ್ನ ದೃಷ್ಟಿಯಲ್ಲಿ ಗಾಂಧಿಯವರ ದೊಡ್ಡ ಕೊಡುಗೆಯೆಂದರೆ – ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಅವರು ಸ್ವಾತಂತ್ರ್ಯ ಸೈನಿಕನನ್ನಾಗಿ ಪರಿವರ್ತಿಸಿದರು. ಈ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಆ ಮಾರ್ಗದಿಂದಷ್ಟೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲವೆಂಬುದೂ ದಿಟವೇ. ಸಶಸ್ತ್ರ ಸಂಗ್ರಾಮದ ನಿರ್ವಾಹಕರಾದವರು ನೇತಾಜಿ ಸುಭಾಷಚಂದ್ರ ಬೋಸ್ – ತಮ್ಮ ‘ಆಜಾದ್ ಹಿಂದ್ ಫೌಜ್’ ಅಥವಾ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯ ಸಂಘಟನೆಯ ಮೂಲಕ. ಅದು ನಡೆದದ್ದು 1942–46ರ ವರ್ಷಗಳಲ್ಲಿ. ಮರಾಠಿಯಲ್ಲಿ ಪ್ರಸಿದ್ಧ ಹಾಡೊಂದಿದೆ: “ರುನಾವೀಣ ಸ್ವಾತಂತ್ರ್ಯ ಕೋಣ್ಹಾ ಮಿಳಾಲೇ?” – ಶಸ್ತ್ರಪ್ರಯೋಗವಿಲ್ಲದೆ ಸ್ವಾತಂತ್ರ್ಯ ಯಾರಿಗಾದರೂ ಬಂದದ್ದಿದೆಯೆ? ಯಾರಿಗೂ ಬಂದಿಲ್ಲ.
ನಾಡು ಶಸ್ತ್ರಸನ್ನದ್ಧವಾಗಿ ಎದ್ದು ನಿಂತ ಹೊರತು ಸ್ವಾತಂತ್ರ್ಯ ಬಾರದು – ಎಂಬ ತತ್ತ್ವಜ್ಞಾನವನ್ನ ಈ ದೇಶದ ಜನರ ಮನಸ್ಸಿನಲ್ಲಿ ದೃಢವಾಗಿ ಬೇರೂರುವಂತೆ ಮಾಡಿದ್ದು 1942ರಿಂದಾಚೆಗಿನ ಐದು ವರ್ಷಗಳು. ಬ್ರಿಟಿಷರು ಸ್ವದೇಶಕ್ಕೆ ನಿರ್ಗಮಿಸಬೇಕಾದ ಸಮಯ ಸನ್ನಿಹಿತವಾಗಿತ್ತು. ಬ್ರಿಟಿಷರು ಆ ಸ್ಥಿತಿ ತಲಪುವುದಕ್ಕೆ ಅನ್ಯ ಕಾರಣಗಳ ಜೊತೆಗೆ ನಮ್ಮ ಪ್ರಯತ್ನವೂ ಕೆಲಸ ಮಾಡಿತ್ತಷ್ಟೆ. ಆಚಾರ್ಯ ಕೃಪಲಾನಿ ಒಂದೆಡೆ ಹೇಳುತ್ತಾರೆ – ‘India had become a hot potato’ ಎಂದು. ಬ್ರಿಟಿಷರಿಗೆ ನುಂಗಲೂ ಆಗದ ಉಗುಳಲೂ ಆಗದ ತುತ್ತು ಆಗಿತ್ತು ಭಾರತ. ಎಷ್ಟೇ ಸಾಹಸ ಮಾಡಿದ್ದರೂ ಬ್ರಿಟಿಷರಿಗೆ ಭಾರತವನ್ನು ತಮ್ಮ ಕೈಯಲ್ಲಿ ಉಳಿಸಿಕೊಳ್ಳುವುದು ಶಕ್ಯವಿರಲಿಲ್ಲ.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)