ಆದರೆ ನಾವು ಇಂಥ ಆಂಶಿಕಸತ್ಯಗಳನ್ನೇ ಬೆಂಬತ್ತಿ ಬಸವಳಿಯುವುದು ಅನಪೇಕ್ಷಿತ. ಕೇವಲ ನಿರ್ವಿಶಿಷ್ಟಸಾರ್ವತ್ರಿಕಾನುಭವದ ತಿಳಿಬೆಳಕಿನಲ್ಲಿ ಎಲ್ಲ ಸತ್ತೆಗಳನ್ನೂ ಗಮನಿಸಿ ನಿರ್ಣಯಿಸೋಣ. ಭರತಮುನಿಯು ಹಾಸ್ಯರಸವನ್ನು ಆತ್ಮಸ್ಥ ಮತ್ತು ಪರಸ್ಥವೆಂದು ಇಬ್ಬಗೆಯಾಗಿ ವಿಂಗಡಿಸಿದ ಸಂಗತಿಯನ್ನು ಈಗಾಗಲೇ ನೋಡಿದೆವಷ್ಟೆ. ಆದರೆ ಈ ವಿಭಾಗದಲ್ಲಿ ನಗುವವನು ಮತ್ತು ನಗಿಸುವವನು ಎಂಬ ಎರಡು ಮುಖಗಳು ಮಾತ್ರ ತೋರುತ್ತಿವೆಯಲ್ಲದೆ ಮತ್ತೇನೂ ವಿಶಿಷ್ಟತೆಗಳಿಲ್ಲಿಲ್ಲ. ಮುಖ್ಯವಾಗಿ ಈ ವಿಭಾಗಕ್ರಮವು ದೃಶ್ಯಕಾವ್ಯವನ್ನು ಗಮನದಲ್ಲಿರಿಸಿಕೊಂಡಿದೆ. ನಗಿಸಲೆಂದೇ ನಿಶ್ಚಿತರಾದ ವಿದೂಷಕರಂಥವರಿರಲು ಇಂಥ ವಿಭಾಗಗಳು ಅನಿವಾರ್ಯ ಮತ್ತು ಯುಕ್ತಿಯುಕ್ತವೂ ಹೌದು. ಅಲ್ಲದೆ, ನಗಿಸಲೆಂದೇ ನಿಯುಕ್ತನಾದವನು ತನ್ನ ನಗೆಯುಕ್ಕಿಸುವ ಬಗೆಗಳಿಗೆ ತಾನೇ ನಗಲಾರನಷ್ಟೆ! ಆದರೆ ಇಲ್ಲೊಂದು ಸೂಕ್ಷ್ಮವಿದೆ: ನಗೆಗಾರನು ಅದೆಷ್ಟೋ ಬಾರಿ ತನ್ನನ್ನೇ ನಗೆಯ ವಸ್ತುವನ್ನಾಗಿಸಿಕೊಳ್ಳಬೇಕು. ಹಾಗಲ್ಲವಾದರೆ ಅವನಿಗೆ ನಗೆಯ ಮೂಲಾಕರಗಳಲ್ಲಿ ಒಂದು ಮುಖ್ಯಸ್ರೋತಸ್ಸಾದ ಸ್ವಾಶ್ರಿತವಿನೋದವೇ ಇಲ್ಲವಾಗಿ, ತನ್ಮೂಲಕ ಆತನ ನಗೆಗಾರಿಕೆಯೇ ಸೊರಗುತ್ತದೆ. ಚಿರಂತನವಾದ ಭಾರತೀಯರಂಗಭೂಮಿಯಲ್ಲಿ ವಿದೂಷಕ, ಹಾಸ್ಯಗಾರ(ಯಕ್ಷಗಾನ), ಸಾರಥಿ(ದೊಡ್ಡಾಟದಂಥ ಬಯಲಾಟಗಳು), ಕಟ್ಟೈಕ್ಕಾರನ್(ತಮಿಳುನಾಡಿನ ತೆರುಕ್ಕೂತ್ತು), ಮಾಧವಿ(ಕೂಚಿಪೂಡಿಯ ಭಾಮಾಕಲಾಪಂ) ಮುಂತಾದ ಅದೆಷ್ಟೋ ವೈನೋದಿಕಪಾತ್ರಗಳು ತಮ್ಮ ದೇಹ, ಗೇಹ, ವೇಷ, ಭಾಷೆ, ನಡಿಗೆ, ಬಡಿಗೆ, ಜಾತಿ, ನೀತಿ ಮುಂತಾದ ಅಸಂಖ್ಯಾಂಶಗಳ ಮೂಲಕ ತಮ್ಮನ್ನು ತಾವೇ ಗೇಲಿಗೆರೆದುಕೊಂಡು ರಂಗಸ್ಥಳದ ಪಾತ್ರಗಳನ್ನೂ (ಇದು ಕಥಾಸ್ವರೂಪದ ಮಟ್ಟಿಗೆ ಹೌದಾದರೂ ಪರಮಾರ್ಥದಲ್ಲಿ ನೋಡುಗರೇ ಉದ್ದೇಶಿತರು) ಸಾಮಾಜಿಕ(ಪ್ರೇಕ್ಷಕ)ವರ್ಗವನ್ನೂ ರಂಜಿಸುತ್ತಿದ್ದುದು ಸರ್ವವೇದ್ಯ. ಆದುದರಿಂದ ಭರತೋದಿತವಾದ ಆತ್ಮಸ್ಥ ಮತ್ತು ಪರಸ್ಥಗಳೆಂಬ ವಿಭಾಗದ್ವಯವನ್ನು ಬೇರೊಂದು ಬಗೆಯಲ್ಲಿ ಗ್ರಹಿಸಿದರೆ ಹೆಚ್ಚು ಸಮರ್ಪಕ.
ಈ ಪ್ರಕಾರ ಆತ್ಮಸ್ಥವೆಂದರೆ ತನ್ನನ್ನೇ ನಗೆಗೆ ವಸ್ತುವನ್ನಾಗಿಸಿಕೊಳ್ಳಬಲ್ಲ ಬಲ್ಮೆ. ಪರಸ್ಥವಾದರೋ ನಗೆಗೀಡಾಗಬಲ್ಲ ಮತ್ತೊಂದನ್ನು ಕಂಡು ನಗುವಂಥದ್ದು. ನಾಟ್ಯಶಾಸ್ತ್ರೀಯಭಾಷೆಯಲ್ಲಿ ಹೇಳುವುದಾದರೆ ಆತ್ಮಸ್ಥಹಾಸಕ್ಕೆ ತಾನೇ ಆಲಂಬನವಿಭಾವ; ಪರಸ್ಥಹಾಸಕ್ಕೆ ತನ್ನಿಂದ ಹೊರತಾದ ಮತ್ತಾವುದಾದರೂ ಮತ್ತಾರಾದರೂ ಆದೀತು. ಇದು ಭರತನ ಕ್ರಮಕ್ಕೆ ವಿರುದ್ಧವೂ ಅಲ್ಲ, ಆದರೆ ಅದಕ್ಕಿಂತ ಅಧಿಕವೂ ಹೌದು. ಎಲ್ಲಕ್ಕೂ ಮಿಗಿಲಾಗಿ, ಈ ಮುನ್ನ ನಾವು ಹಾಸ ಅಥವಾ ಹಾಸ್ಯದ ಆಸ್ವಾದಕ್ಕೆ ಬಂದೊದಗಿದ ಸಹೃದಯನ ಅಹಂಕಾರಾಧಿಕ್ಯದ ಅನಿವಾರ್ಯತೆಯೆಂಬ ಆಹಿತಕರವೂ ಆಕ್ಷೇಪಾರ್ಹವೂ ಆದ ತೊಡಕೂ ಸದ್ಯದ ಪರಿಷ್ಕಾರದ ಮೂಲಕ ಇಲ್ಲವಾಗುತ್ತದೆ. ಜೊತೆಗೆ, ತನ್ನನ್ನೇ ತಾನು ನಗೆಗೆ ಗುರಿಮಾಡಿಕೊಳ್ಳುವ ಸಾಧ್ಯತೆಯಂತೂ ಸರ್ವಾತ್ಮನಾ ಸಹೃದಯನ ಸ್ವಾಹಂಕಾರಖಂಡನೆಯಲ್ಲಿ ಪರ್ಯವಸಿಸುವ ಕಾರಣ ಲೋಕದ ಹಾಸಭಾವವು ನಿರ್ವಿವಾದವಾಗಿ ಹಾಸ್ಯವೆಂಬ ರಸತ್ವವನ್ನು ಹೊಂದುವುದು. ಏಕೆಂದರೆ ನಮ್ಮೊಳಗಿನ ಯಾವುದೇ ಭಾವಕ್ಕೆ ರಸತ್ವವುಂಟಾಗಬೇಕೆಂದರೆ ಆ ಭಾವವನ್ನು ಹೊಂದಿದ ನಾವು ಕೆಲಮಟ್ಟಿಗಾದರೂ ಕೆಲಹೊತ್ತಿಗಾದರೂ ನಮ್ಮ ನಮ್ಮ ಅಹಂಕಾರಗಳಿಂದ ಮುಕ್ತರಾಗಬೇಕು. ಇದನ್ನು ಸಾಧಿಸಿಕೊಡುವಲ್ಲಿ ಸಾಧಾರಣೀಕರಣವೆಂಬ ರಸನಿಷ್ಪತ್ತಿಪ್ರಕ್ರಿಯೆಯು ಹಿರಿದಾದ ಪಾತ್ರವನ್ನು ವಹಿಸುತ್ತದೆ. ಇದಕ್ಕೆ ತುಂಬ ಪೂರಕವಾದುದೇ ಈ ಮುನ್ನ ನಾವಿಲ್ಲಿ ಕಾಣಿಸಿದ—ನಮ್ಮದೇ ನವನಿರ್ವಚನದಂತೆ ವ್ಯಾಖ್ಯಾತವಾದ —ಆತ್ಮಸ್ಥಹಾಸದ ಸಾಧ್ಯತೆ. ಮಾತ್ರವಲ್ಲ, ಹೀಗೆ ಸ್ವಾಹಂಕಾರಖಂಡನರೂಪದ ಆತ್ಮಸ್ಥಹಾಸವು ಶಮಭಾವ ಅಥವಾ ಶಾಂತರಸಕ್ಕೆ ಕೂಡ ತುಂಬ ಸಹಕಾರಿ. ಹೆಚ್ಚೇನು, ಆತ್ಮಾರಾಮನಾದ ಜೀವನ್ಮುಕ್ತನು ಸ್ವ-ಪರಭೇದವಿಲ್ಲದೆ ತನ್ನಲ್ಲಿ ತಾನು ನಗುತ್ತಾ ತನ್ನನ್ನೇ ತಾನು ಗೇಲಿಗೆರೆಯುತ್ತಾ ಬ್ರಹ್ಮಾನಂದದಲ್ಲಿ ನೆಲೆನಿಲ್ಲುವನೆಂಬ ವೇದಾಂತಶಾಸ್ತ್ರಗಳ ಒಕ್ಕಣೆಯನ್ನು ಬಲ್ಲವರಿಗೆ ಆತ್ಮಸ್ಥಹಾಸವು ಮುಮುಕ್ಷುವಿನ ಲಕ್ಷ್ಯವೆನಿಸಿದ ಸಚ್ಚಿದಾನಂದಘನದ ಸಾಧನೋಪಾಯವೆಂದೇ ತೋರದಿರದು. ಈ ಎತ್ತರದ ಹಂತವಂತಿರಲಿ, ಲೋಕಸಾಮಾನ್ಯದಲ್ಲಿ ಕೂಡ ನಮ್ಮ ಅಭಿಮತದಂತೆ ಇದೀಗ ವಿವೃತವಾದ ಆತ್ಮಸ್ಥಹಾಸಪ್ರಕಾರವು ಶಿಷ್ಟತೆ, ಸಭ್ಯತೆ ಮತ್ತು ಸ್ನೇಹಾದರಗಳ ಸಾಕಾರವೇ ಆಗಿ ಮೆರೆಯದಿರದು. ಈ ನಿಟ್ಟಿನಿಂದ ಕಂಡರೆ ಸ್ಮಿತವು (ಕಿರುನಗೆ ಅಥವಾ ಮುಗುಳ್ನಗೆ) ಅತಿಹಸಿತ ಅಥವಾ ಅಪಹಸಿತಗಳಿಗಿಂತ ಉತ್ತಮವೆಂಬ ಮಾತೂ ಹೆಚ್ಚಿನ ಸುಸಾಂಗತ್ಯವನ್ನು ಗಳಿಸುವುದು. ದಿಟವೇ, ಯಾವುದೇ ಬಗೆಯ ಹಾಸಸಾಮಾನ್ಯವು ಸೊಗಸು-ಸೌಖ್ಯಗಳ, ಉಲ್ಲಾಸ-ಉತ್ಕಟತೆಗಳ ಸಂಕೇತವಾದರೂ ಸುಂದರದರಸ್ಮಿತವು ನಯ-ನವುರುಗಳ, ಸ್ನೇಹ-ಸೌಜನ್ಯಗಳ, ಪ್ರಜ್ಞೆ-ಪ್ರಬುದ್ಧತೆಗಳ ಹೃದ್ಯಮುದ್ರೆಯಾಗಿ ಧ್ವನಿಸುತ್ತದೆ.
ಹಾಸ್ಯವು ಶೃಂಗಾರದ ಉಪರಸವೆಂಬ ಮಾತು ಕೆಲವಂಶಗಳಿಂದ ಯುಕ್ತವೇ ಆದರೂ ಅದು ಶೃಂಗಾರದ ಅರಿವೂ ಇರದ, ಅದರಲ್ಲಿ ಆಸ್ಥೆಯೂ ಉಳಿದಿರದ ಮಕ್ಕಳು, ಮುದುಕರು, ವೀರರು, ವಿರಕ್ತರೇ ಮುಂತಾದ ಸಕಲರ ಪಾಲಿಗೂ ಆಸ್ವಾದ್ಯವಾಗಿರುವ ಯಥಾರ್ಥವನ್ನು ನೆನೆದಾಗ ಅನೌಚಿತ್ಯವೇ ಹಾಸ್ಯದ ಮೂಲವೆಂದೂ ಸಕಲರಸ-ಭಾವಗಳ ಸಮಸ್ತಬಿಂಬಗಳೂ ಅನೌಚಿತ್ಯವೆಂಬ ವಿಕಟದರ್ಪಣದ (ಡೊಂಕುಗನ್ನಡಿಯ) ಮೂಲಕ ಪ್ರತಿಬಿಂಬಿಸಲ್ಪಟ್ಟಾಗ ಹಾಸ್ಯದ ರೂಪವನ್ನೇ ತಾಳುತ್ತವೆಂಬುದೂ ಮನದಟ್ಟಾಗದಿರದು. ಇಂತಾದರೂ ಹಾಸ್ಯವು ಶೃಂಗಾರದೊಡನೆ—ತತ್ರಾಪಿ ಸಂಭೋಗಶೃಂಗಾರದೊಡನೆ—ಬೆರೆಯುವಷ್ಟು ಸೊಗಸಾಗಿ ಮಿಕ್ಕ ರಸಗಳ ಜೊತೆಗೆ ಸಲ್ಲಲಾರದು. ಏಕೆಂದರೆ ಹಾಸ್ಯವುಕ್ಕಲು ನಮ್ಮ ಮೈ-ಮನಸ್ಸುಗಳಿಗೆ ತುಸು ಬಿಡುವಿರಬೇಕು; ಅಸ್ತಿತ್ವಕ್ಕೊಂದು ಅನುಕೂಲವಿರಬೇಕು. ಅಲ್ಲದೆ ಹೇಗೆ ಸಾರ್ಥಕಶೃಂಗಾರಕ್ಕೆ ವೀರವೊಂದು ಅತ್ಯುತ್ತಮಸಾಧನವೋ ಹಾಸ್ಯವೂ ಒಂದು ಹಿತಕಾರಿಯಾದ ಸಹಕಾರಿ. ಇನ್ನುಳಿದಂತೆ ಅದ್ಭುತವೊಂದು ಮಾತ್ರ ಕೆಲಮಟ್ಟಿಗೆ ಒದಗಿಬರಬಲ್ಲುದಲ್ಲದೆ ಮತ್ತಾವ ರಸಗಳೂ ಸಫಲಶೃಂಗಾರಕ್ಕೆ ನೆರವಾಗವು. ಏನಿದ್ದರೂ ವಿಪ್ರಲಂಭದಲ್ಲಿ ಮಾತ್ರ ಬಲುಮಟ್ಟಿಗೆ ಕರುಣ-ಭಯಾನಕಗಳೂ ಕೆಲಮಟ್ಟಿಗೆ ರೌದ್ರ-ಬೀಭತ್ಸಗಳೂ ಪ್ರಸ್ತುತವಾಗಬಲ್ಲುವು. ಹೀಗಾಗಿ ಭರತಮುನಿಯ ಅಭಿಮತವು ಹಲವುಮಟ್ಟಿಗೆ ಸಲ್ಲುವುದೆಂದೇ ಹೇಳಬೇಕು. ಆದರೆ ಅನೌಚಿತ್ಯವೇ ಹಾಸ್ಯದ ಜೀವಾತುವೆಂದ ಅಭಿನವಗುಪ್ತನ ಅಭಿಪ್ರಾಯವು ಸರ್ವನಿರ್ಣಾಯಕ.
ಹಾಸ್ಯವು ಉಳಿದೆಲ್ಲ ರಸಗಳಿಗಿಂತಲೂ ಸರ್ವಜನಸಾಧಾರಣವೆಂದು, ಸಮಸ್ತಜನಸುಲಭವೆಂದು ಹೇಳಬಹುದು. ಮಿಕ್ಕ ಎಷ್ಟೋ ರಸಗಳನ್ನು ಆಸ್ವಾದಿಸುವಲ್ಲಿ ವಯಸ್ಸು, ಮನಸ್ಸು, ಸಂಸ್ಕಾರ, ರುಚಿಭೇದ ಮುಂತಾದ ವ್ಯಾವರ್ತಕಾಂಶಗಳು ಎದುರಾಗುವುವಾದರೂ ಬಲುಮಟ್ಟಿಗೆ ಹಾಸ್ಯಕ್ಕೆ ಇಂಥ ಅಡ್ಡಿ-ಆತಂಕಗಳು ಇಲ್ಲವೆಂದು ಹೇಳಬಹುದು. ಕವಿ-ಕಲಾವಿದರು ಬಗೆಬಗೆಯ ಕಲೆಗಳಲ್ಲಿ ವಿವಿಧರಸ-ಭಾವಗಳ ಅಸ್ಥಾನವಿನಿಯೋಗವೆಂಬ ಸೋದ್ದಿಷ್ಟವಾದ ಅನೌಚಿತ್ಯವನ್ನು ತರುವ ಮೂಲಕ ಸಾಧಿಸಿದ ಹಾಸ್ಯದ ಅಪಾರಪ್ರಭೇದಗಳು ನಿಜಕ್ಕೂ ಊಹಾತೀತ. ಹೀಗಾಗಿ ಇಲ್ಲಿರುವ ವೈವಿಧ್ಯ ಅಮೇಯ, ಅನೂಹ್ಯ. ಈ ನಿಟ್ಟಿನಿಂದ ಕಂಡಾಗ ಹಾಸ್ಯವು ಶೃಂಗಾರಕ್ಕಿಂತಲೂ ವ್ಯಾಪಕವಾದ ರಸವೆಂಬುದು ಅದೊಂದು ರೀತಿಯಲ್ಲಿ ಸತ್ಯವೇ ಹೌದು. ಆದರೆ ತ್ರಿವರ್ಗವೆಂದು ಹೆಸರಾದ ಧರ್ಮಾರ್ಥಕಾಮಗಳ ಪೈಕಿ ಮೂರನೆಯದೂ ಇಹಜೀವನದಲ್ಲಿ ಅತಿಮಹತ್ತ್ವದ್ದೂ ಆಗಿರುವ ಕಾಮವೆಂಬ ಪುರುಷಾರ್ಥವನ್ನು ಪ್ರತಿನಿಧಿಸುವ ಶೃಂಗಾರದ ಆಳ-ಅಗಲಗಳಾಗಲಿ, ತೀವ್ರತೆ-ಸುಕುಮಾರತೆಗಳಾಗಲಿ ಹಾಸ್ಯಕ್ಕೆ ಕನಸು-ಮನಸ್ಸುಗಳಲ್ಲಿಯೂ ಸಾಧ್ಯವಿಲ್ಲ. ಮಾತ್ರವಲ್ಲ, ಉಭಯರಸಗಳೂ ಒಡನೊಡನೆಯೇ ಪ್ರಸ್ಫುಟಗೊಂಡು ರಂಜಿಸಬಲ್ಲುವಾದರೂ ದೀರ್ಘಕಾಲದ ಸ್ಥೈರ್ಯವನ್ನು ಶೃಂಗಾರವು ಅವಲೀಲೆಯಿಂದ ನಿರ್ವಹಿಸುವಂತೆ ಹಾಸ್ಯವು ಸಾಧಿಸಲಾರದು. ಅದು ಹತ್ತಿಯುರಿದಂತೆ ಒಡನೊಡನೆಯೇ ಭಗ್ಗನೆ ಉರಿದು ಅಳಿಯಬಲ್ಲುದಲ್ಲದೆ ಗೊರವಿಯ ಕೊಳ್ಳಿಯಂತೆ, ಅಖಂಡಜ್ಯೋತಿಯಂತೆ ನಿಡುಗಾಲ ನಿಲ್ಲಲಾರದು. ಆದರೆ ಶೃಂಗಾರವು ಸವ್ಯಸಾಚಿ; ಅದು ಕ್ಷಣದಲ್ಲಿ ಕೂಡ ಉಜ್ಜ್ವಲಿಸಬಲ್ಲುದು, ಕ್ರಮವಾಗಿಯೂ ಬೆಳಗಿ ಬಾಳಬಲ್ಲದು. ಈ ಶಕ್ತಿಯು ಮತ್ತಾವ ರಸಕ್ಕೂ ಇಲ್ಲವೆಂಬ ಕಾರಣದಿಂದಲೇ ಶೃಂಗಾರವು ರಸರಾಜನೆಂಬ ಯಥಾರ್ಥಸಮ್ಮಾನವನ್ನು ಗಳಿಸಿದೆ. ಒಟ್ಟಿನಲ್ಲಿ ಶೃಂಗಾರದ ನೆರವಿಲ್ಲದೆ ಹಾಸ್ಯಕ್ಕೆ ಪುರುಷಾರ್ಥಪ್ರತಿಪಾದಕತೆಯ ಮಹತ್ತ್ವವು ಬರದ ಕಾರಣ; ಇಂಥ ನೆರವಿದ್ದಾಗಲೂ ಅದು ಸ್ವತಂತ್ರವಾಗಿ, ಸುದೀರ್ಘವಾಗಿ ನಿಲ್ಲಲಾಗದ ಕಾರಣ ಅಂಗಿರಸತ್ವದ (ಯಾವುದೇ ಮಹಾಕೃತಿಯ ಮುಖ್ಯರಸವೆಂಬ ಸ್ಥಾನ) ಅಗ್ಗಳಿಕೆ ದಕ್ಕದಾಗಿದೆ. ಮಾತ್ರವಲ್ಲ, ಯಾವುದೇ ಮಹಾಕೃತಿಯ ಮುಖ್ಯಪಾತ್ರದಲ್ಲಿ ಕೂಡ ಹಾಸ್ಯವು ಸ್ಥಾಯಿರಸವಾಗಲು ಸಾಧ್ಯವಿಲ್ಲ. ಏಕೆಂದರೆ ಅಂತಾದಲ್ಲಿ ಆ ಪಾತ್ರವು ಗೇಲಿಗೋ ಅನುಕಂಪಕ್ಕೋ ವಿಡಂಬನೆಗೋ ವಿಷಾದನಕ್ಕೋ ತುತ್ತಾಗುವುದಲ್ಲದೆ ಅಭ್ಯುದಯವು ಆದರ ಗುರಿಯಾಗುವುದಿಲ್ಲ. ಒಂದು ಪಕ್ಷ ಇಂಥ ಅಭ್ಯುದಯವು ಅದಕ್ಕೆ ದಕ್ಕಿದ್ದೇ ಆದಲ್ಲಿ ಅದು ಅನ್ಯರಸದ (ಮುಖ್ಯವಾಗಿ ಶೃಂಗಾರ-ವೀರಗಳ) ಮೂಲಕವೇ ಆಗಿರುತ್ತದೆ ಮತ್ತು ಇಂತಾದಲ್ಲಿ ಆ ರಸವೇ ಸ್ಥಾಯಿತ್ವವನ್ನು ಗಳಿಸುವುದಲ್ಲದೆ ಹಾಸ್ಯವಲ್ಲ; ಅದೇನಿದ್ದರೂ ಒಂದು ಪ್ರಬಲಸಂಚಾರಿಯ ಸ್ಥಿತಿಗಿಳಿಯುತ್ತದಷ್ಟೆ. ಈ ನೆಲೆಯಲ್ಲಿ ಪರಿಭಾವಿಸಿದಾಗ ವ್ಯಾಸ, ವಾಲ್ಮೀಕಿ, ಹೋಮರ್, ಷೇಕ್ಸ್ಪಿಯರ್, ಕಾಳಿದಾಸ, ಶೂದ್ರಕ, ಟಾಲ್ಸ್ಟಾಯ್, ಭೈರಪ್ಪ ಮುಂತಾದ ಮಹಾಲೇಖಕರ ಮಹಾಕೃತಿಗಳ ಅತಿಮುಖ್ಯವೂ ಮಹತ್ತಮವೂ ಆದ ಪಾತ್ರಗಳಲ್ಲಿ (ವಿಶೇಷತಃ ಮಹಾಮೌಲ್ಯಗಳನ್ನು ಎತ್ತಿಹಿಡಿದು ಆಯಾ ಕೃತಿಗಳನ್ನು ಫಲಪರ್ಯಂತವಾಗಿ ಮುನ್ನಡಸುವ ಪ್ರಕೃತಿ/ಭೂಮಿಕೆಗಳೆಂದು ತಾತ್ಪರ್ಯ) ಇಡಿಯ ಕೃತಿಯನ್ನು ಹಾಸ್ಯವು ಅದೇಕೆ ಸ್ಥಾಯಿಯಾಗಿಲ್ಲವೆಂಬ ಪ್ರಶ್ನೆಗೆ ಉತ್ತರ ದಕ್ಕದಿರದು. ಇಂಥ ದರ್ಶನವು ನಮಗೆ ದಕ್ಕಿದಾಗ ಹಾಸ್ಯವು ಜಗತ್ತಿನ ಯಾವುದೇ ಮಹಾಕಾವ್ಯದ, ಮಹಾರೂಪಕದ, ಮಹಾಕಾದಂಬರಿಯ ಅಂಗಿರಸವಾಗಲು ಸಾಧ್ಯವಿಲ್ಲವೆಂಬ ಕಲಾತಥ್ಯವೂ ಹೊಳೆದೀತು. ಅಷ್ಟೇಕೆ, ಯಾವುದೇ ಅಭಿಜಾತಕಲೆಗಳಲ್ಲಿ ಕೂಡ (ಗೀತ, ನೃತ್ಯ, ನಾಟ್ಯ, ಚಿತ್ರ, ಶಿಲ್ಪ ಮುಂತಾದ ಮೂಲಭೂತಮಹಾಕಲಾಪ್ರಕಾರಗಳು) ಈ ಮಾತು ಸಲ್ಲುವುದೆಂದು ತಿಳಿಯದಿರದು. ಹೀಗಾಗಿಯೇ ಸಾಹಿತ್ಯದಲ್ಲಿ ಹಾಸ್ಯವು ಸ್ವತಂತ್ರವಾದ ನೆಲೆಯನ್ನು ಕಾಣಬೇಕಾದರೆ ಅದು ಚುಟುಕ-ನಗೆಹನಿಗಳಂಥ ಮುಕ್ತಕಪ್ರಕಾರದಲ್ಲಿ, ಕಥೆ-ಕವನ-ಲೇಖನ-ಪ್ರಬಂಧಗಳಂಥ ಲಲಿತಪ್ರಕಾರದಲ್ಲಿ ಜೀವಿಸಬೇಕು; ಜನತೆಯ ಆನಂದವನ್ನು ಉಜ್ಜೀವಿಸಬೇಕು. ಇನ್ನಿತರ ಕಲೆಗಳ ಮಾಧ್ಯಮದಲ್ಲಿ ಕೂಡ ಇದೇ ನ್ಯಾಯ ಸಂದೀತು. ದಿಟವೇ, ಪೂರ್ಣಪ್ರಮಾಣದ ಹಾಸ್ಯರೂಪಕಗಳಿವೆ, ಚಲನಚಿತ್ರಗಳೂ ಇವೆ. ಅದರೆ ಇವುಗಳ ಸಂಖ್ಯೆಯಾಗಲಿ ಇವುಗಳಲ್ಲಿ ತೊಡಗಿಸಿದ ಸಂಪನ್ಮೂಲಗಳನ್ನಾಗಲಿ ಕಂಡಾಗ ಆ ಬಗೆಯ ಮಾಧ್ಯಮಗಳಲ್ಲಿ ಕೂಡ ಹಾಸ್ಯವು ಅಂಗರಸವಾಗಿ ಮಿಂಚಿರುವುದೇ ಹೆಚ್ಚೆಂದೂ ಅಂಗಿರಸವಾಗಿ ಅದರ ಸಾಧ್ಯತೆ ಕಡಮೆಯೆಂದೂ ಅರಿವಾಗದಿರದು. ಹೀಗೆಂದ ಮಾತ್ರಕ್ಕೆ ಹಾಸ್ಯವು ಹೀನವೆಂದಲ್ಲ.
ಈ ಸೃಷ್ಟಿಯಲ್ಲಿ ಮಾನವನಿಗಲ್ಲದೆ ಮತ್ತಾವ ಜೀವಿಗೂ ಈ ಪ್ರಮಾಣದ ಹಾಸ್ಯವು ದಕ್ಕಿಲ್ಲ. ನಗೆಯೆಂಬುದು ಆತನ ಆಜನ್ಮಸಿದ್ಧಿ, ಆನಂದಸಾಧನ ಕೂಡ. ಆದರೆ ಮಾನವಜೀವನದಲ್ಲಿ ಹಗುರವಾದ ಹೊತ್ತುಗಳಿಗಿಂತ ಭಾರವಾದ ಅವಧಿಗಳೇ ಹೆಚ್ಚು. ಹೀಗಾಗಿ ದುರ್ದೈವದಿಂದ ಆತನಿಗೆ ನಗೆಯ ನಂಟು ನಂಟೇ ಹೊರತು ಬಾಳಿನ ಗಂಟಾಗಿಲ್ಲ. ಇದೇ ಆತನು ನಿರ್ಮಿಸಿದ ಎಲ್ಲ ಕಲೆ-ಸಾಹಿತ್ಯಗಳಲ್ಲಿಯೂ ಪ್ರತಿಫಲಿಸಿರುವುದು ಅಕಸ್ಮಿಕವೇನಲ್ಲ. ಆದರೆ ಇಷ್ಟಂತೂ ದಿಟ, ನಮ್ಮೀ ಬಾಳ ಬಂಡಿಯ ಚಕ್ರಗಳಾಗಿ ಹಾಸ್ಯವು ನಮ್ಮನ್ನು ಮುಂದೆ ಸಾಗಿಸಲಾಗದಿದ್ದರೂ ಗುರಿಸೇರಿಸದಿದ್ದರೂ ಆ ಚಕ್ರಗಳ ಸುಸೂತ್ರವಾದ ಚಲನೆಗೆ ಅನಿವಾರ್ಯವಾದ ಕೀಲೆಣ್ಣೆ ಅದೇ ಆಗಿದೆ. ಇದು ಸಾಕು; ಇದೇ ಬೇಕು.