ವ್ಯಂಜನಾವ್ಯಾಪಾರವು ಪ್ರಮಾಣವಲ್ಲವೆಂಬ ಮತ್ತೊಂದು ಆಕ್ಷೇಪ ಹೀಗಿದೆ:
ಧೂಮೇನ ಧ್ವನ್ಯತಾಂ ವಹ್ನಿಶ್ಚಕ್ಷುಷಾ ಧ್ವನ್ಯತಾಂ ಘಟಃ |
ಅರ್ಥಶ್ಚೇದ್ಧ್ವನಯೇದರ್ಥಂ ಕಾ ಪ್ರಮಾಣವ್ಯವಸ್ಥಿತಿಃ || (೨೦.೧೬)
ಅರ್ಥಶಕ್ತಿಮೂಲಧ್ವನಿಯು ಹೇಗೆ ತಾನೆ ಪ್ರಮಾಣವೆನಿಸೀತು? ಹಾಗೊಮ್ಮೆ ಒಪ್ಪಿದಲ್ಲಿ ಹೊಗೆಯಿಂದ ಬೆಂಕಿಯೂ ಕಣ್ಣಿಂದ ಮಡಕೆಯೂ ಧ್ವನಿತವಾಗಬೇಕು!
ಶಬ್ದವು ಅರ್ಥಕ್ಕೆ ಲಿಂಗವಾಗುವುದು ಸಹಜ. ನೈಯಾಯಿಕರ ಪ್ರಕಾರ ವ್ಯಂಗ್ಯಾರ್ಥವೂ ಇಂಥ ಲಿಂಗದ ಮೂಲಕ ತಿಳಿದುಬರುವ ಆನುಮಾನಿಕಜ್ಞಾನ. ಆದರೆ ಅರ್ಥಕ್ಕೆ ಅರ್ಥವೇ ಲಿಂಗವಾಗುವುದು ಹೇಗೆಂಬ ಆಕ್ಷೇಪ ಇಲ್ಲಿದೆ. ಏಕೆಂದರೆ ಆನಂದವರ್ಧನನು ಧ್ವನಿಪ್ರಕಾರಗಳನ್ನು ಹೆಸರಿಸುವಾಗ ಅರ್ಥಶಕ್ತಿಮೂಲದ ಧ್ವನಿಗಳನ್ನೂ ಗುರುತಿಸಿದ್ದಾನೆ. ಇಂಥ ಆಕ್ಷೇಪ ಸಲ್ಲದು. ಏಕೆಂದರೆ ಧ್ವನಿಯು ಅನುಮಾನವಲ್ಲ. ಹೀಗಾಗಿಯೇ ಅದಕ್ಕೆ ಲಿಂಗ ಬೇಕಿಲ್ಲ.
ರಸವು ಸರ್ವಾತ್ಮನಾ ಸುಖಾನುಭವವಾಗುವುದು ಹೇಗೆಂದು ಮತ್ತೊಂದು ಆಕ್ಷೇಪ:
ದುಃಖತೋऽಪಿ ತು ಕಾವ್ಯೋಕ್ತಃ ಸುಖಾಯಾರ್ಥೋ ಭವೇದ್ಯದಿ |
ಸುಖಂ ಭವಂತಃ ಶೃಣ್ವಂತು ಸ್ವನಿಂದಾಂ ಕವಿಭಿಃ ಕೃತಾಮ್ || (೨೦.೧೭)
ಕರುಣವೇ ಮುಂತಾದ ದುಃಖಪಾರಮ್ಯವಿರುವ ರಸಗಳಿಂದಲೂ ಸುಖವೇ ಸಿಗುವುದಾದರೆ ನೀವು ನಿಮ್ಮನ್ನು ಕುರಿತು ಕವಿಗಳು ಮಾಡುವ ನಿಂದೆಗಳನ್ನು ಸುಖವಾಗಿ ಅನುಭವಿಸಿರಿ!
ರಸವು ಸುಖ-ದುಃಖಾತ್ಮಕವೆಂದು ರಾಮಚಂದ್ರ-ಗುಣಚಂದ್ರರ ಮತ.[1] ಇದು ವಾಸ್ತವವಾದಿಗಳಾದ ಜೈನಮತೀಯರಿಗೆ ಒದಗಿಬಂದ ವಿಚಾರ. ಹೀಗಾಗಿ ಕಾವ್ಯದಲ್ಲಿ ಕರುಣ, ಬೀಭತ್ಸ, ಭಯಾನಕಗಳಂಥ ರಸಗಳಿಂದ ಕೂಡ ಆನಂದ ದಕ್ಕುವುದಾದರೆ, ಲೋಕದಲ್ಲಿ ಇದೇ ನ್ಯಾಯವನ್ನು ಅನುಸರಿಸಿ ಬೈಗುಳಿಂದಲೂ ಸುಖವನ್ನು ಪಡೆಯಬಹುದೆಂಬುದು ನೀಲಕಂಠದೀಕ್ಷಿತನ ವಾದ! ಇಂಥ ಬೈಗುಳು ಕವಿಗಳಿಂದ ಬರಬೇಕೆಂಬುದು ಮತ್ತೂ ಮಾರ್ಮಿಕವಾದ ತಿವಿತ. ಆದರೆ ರಸವು ಮೂಲತಃ ಅಲೌಕಿಕವಾದ ಕಾರಣ ಕಾಮ-ಕರ್ಮಕಲ್ಪಿತವಾದ ಲೋಕದ ಅನುಭವಗಳಿಗಿಂತ ಅದರ ಅನುಭವ ಅತ್ಯಂತ ವಿಭಿನ್ನ. ಹೀಗಾಗಿಯೇ ರಸಗಳ ಸ್ವರೂಪ ಏನೇ ಇರಲಿ, ಅವುಗಳು ಹೊಮ್ಮುವ ಸ್ಥಾಯಿಭಾವದ ಸ್ವಭಾವ ಎಂಥದ್ದೇ ಆಗಲಿ, ಪರಿಣಾಮ ಮಾತ್ರ ಆನಂದವೇ ಆಗಿರುತ್ತದೆ; ಮತ್ತದು ಲೋಕದ ಸುಖ-ದುಃಖಗಳಿಗಿಂತ ಬೇರೆಯೇ ಆದದ್ದು. ಇದನ್ನು ಅಭಿನವಗುಪ್ತಾದಿಗಳು ಬಲವಾಗಿ ಪ್ರತಿಪಾದಿಸಿದ್ದಾರೆ. ಇದು ನಮ್ಮೆಲ್ಲರ ಅನುಭವಕ್ಕೂ ದಕ್ಕಿರುವ ಸತ್ಯ.
ಇಷ್ಟೆಲ್ಲ ದುರ್ವಾದಗಳನ್ನು ವಿನೋದಕ್ಕಾಗಿ ಹವಣಿಸಿದ ನೀಲಕಂಠದೀಕ್ಷಿತ ಕಟ್ಟಕಡೆಗೆ ಇವನ್ನೆಲ್ಲ ನಿರಾಕರಿಸುವ ಪರಿ ರಸಮಯವಾಗಿದೆ:
ದಂತೋಲ್ಲೇಖನಖಕ್ಷತಾದಿದಯಿತವ್ಯಾಪಾರಾಪಾರಂಪರೀ-
ನಿರ್ಗ್ಲಾನಾಪಿ ಹಿ ಕಾಮಿನೀ ದಿನಮುಖೇ ನಿಃಸೀಮಮಾನಂದತಿ |
ಮಾರ್ಜರೀನಖರಾಂಕುರಾಖುದಶನವ್ಯಾವಿಧ್ಯಮಾನಾ ಮನಾ-
ಗಾಯುರ್ವೇದವಿದೋऽಭಿಗಚ್ಛತಿ ರುದತ್ಯಾಸನ್ನಮೃತ್ಯುರ್ಯಥಾ || (೨೦.೨೨)
ಪ್ರಿಯತಮನಿಂದ ದಂತಕ್ಷತ-ನಖಕ್ಷತಗಳನ್ನು ಪಡೆದ ಸುಂದರಿಯು ಮುಂಜಾನೆಯ ವೇಳೆಗೆ ದೈಹಿಕವಾಗಿ ನೊಂದರೂ ಮಿಗಿಲಾದ ಮೋದವನ್ನು ಹೊಂದುತ್ತಾಳೆ. ಆದರೆ ಇಲಿ-ಬೆಕ್ಕುಗಳ ಉಗುರು-ಹಲ್ಲುಗಳಿಂದ ನೋಯಿಸಿಕೊಂಡಾಗ ಸಾವೇ ಎದುರಾದಂತೆ ಸಂಕಟ ಪಡುತ್ತ ವೈದ್ಯರತ್ತ ಧಾವಿಸುತ್ತಾಳೆ.
ಈ ಮಾರ್ಮಿಕದೃಷ್ಟಾಂತದ ಮೂಲಕವೇ ಕವಿಯು ಕಾವ್ಯಸ್ವರೂಪ ಮತ್ತು ಕಾವ್ಯಾಸ್ವಾದನಗಳ ಅಲೌಕಿಕತೆಯನ್ನು ಧ್ವನಿಸಿರುವುದು ಹೃದಯಂಗಮ. ಲೋಕದ ತರ್ಕ ಕಾವ್ಯದಲ್ಲಿ ಸಲ್ಲದು. ಲೋಕದ ಕಾರ್ಯ-ಕಾರಣಗಳು ಕಾವ್ಯದಲ್ಲಿ ವಿಭಾವ-ಅನುಭಾವಗಳಾಗಿ ಮಾರ್ಪಡುತ್ತವೆ.
ಹೀಗೆ ತನ್ನ ಕೃತಿಗಳಲ್ಲಿ ಕಾವ್ಯಮೀಮಾಂಸೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ ನೀಲಕಂಠದೀಕ್ಷಿತ ಪ್ರಾಯಶಃ ಈ ಜಾಡಿನಲ್ಲಿ ಕೊನೆಯವನೆಂದರೆ ತಪ್ಪಾಗದು. ಅನಂತರಕಾಲದಲ್ಲಿ ಆಧುನಿಕವಿದ್ಯಾಭ್ಯಾಸದ ಪ್ರಭಾವ ಹೆಚ್ಚಾದ ಕಾರಣ ಕಾವ್ಯ ಮತ್ತು ಕಾವ್ಯಮೀಮಾಂಸೆಗಳ ವಿಷಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳು ತಲೆದೋರಿದವು. ಅವು ಸದ್ಯದ ಅಧ್ಯಯನಕ್ಕೆ ಅಪ್ರಕೃತ.
ಸುಭಾಷಿತಸಂಕಲನಗಳು
ಸಾವಿರ ವರ್ಷಗಳಿಂದ ಬೆಳೆದು ಬಂದಿರುವ ಸೂಕ್ತಿಸಂಗ್ರಹಗಳಲ್ಲಿ ಹತ್ತಾರು ಕವಿ-ಕಾವ್ಯಗಳ ಸ್ತುತಿಗಳನ್ನು ಕಾಣಬಹುದು. ಇವುಗಳಲ್ಲಿ ಪ್ರಕೃತೋಚಿತವಾದ ಕೆಲವನ್ನು ಪರಿಶೀಲಿಸೋಣ. ಈಗಾಗಲೇ ನಾವು ಪರಾಮರ್ಶಿಸಿದ ಕವಿಸೂಕ್ತಿಗಳಿಗಿಂತ ವಿಭಿನ್ನವಾದ ಪದ್ಯಗಳನ್ನಷ್ಟೇ ಆಯ್ದುಕೊಂಡಿರುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೊದಲಿಗೆ ವಲ್ಲಭದೇವನ “ಸುಭಾಷಿತಾವಲಿ”ಯನ್ನು ಗಮನಿಸಬಹುದು.
ಕವಿಯ ಕಳವಳವನ್ನು ವಲ್ಲಭದೇವ ಹೀಗೆ ಹೇಳಿಕೊಳ್ಳುತ್ತಾನೆ:
ಯಾಸ್ಯತಿ ಸಜ್ಜನಹಸ್ತಂ ರಮಯಿಷ್ಯತಿ ತಂ ಭವೇಚ್ಚ ನಿರ್ದೋಷಾ |
ಉತ್ಪಾದಿತಯಾಪಿ ಕವಿಸ್ತಾಮ್ಯತಿ ಕಥಯಾ ದುಹಿತ್ರೇವ || (೧೪೯)
ತನ್ನ ಕಾವ್ಯಕನ್ಯೆಯನ್ನು ಸೃಷ್ಟಿಸಿದ ಬಳಿಕ ಕವಿಯು, “ಅವಳು ಸಜ್ಜನರ ಕೈ ಸೇರುವಳೋ ಇಲ್ಲವೋ, ಅಂಥ ಸಹೃದಯರೊಡನೆ ಯಾವುದೋ ಬಗೆಯ ದೋಷಗಳಿಗೆ ತುತ್ತಾಗದೆ ನಲಿಯುವಳೋ ಇಲ್ಲವೋ” ಎಂದು ಕನ್ಯಾಪಿತೃವಿನಂತೆ ಚಿಂತಿಸುತ್ತಾನೆ.
ಇಲ್ಲಿ ಕಾವ್ಯರಚನೆಯ ಬಳಿಕವೂ ಕಾವ್ಯಪ್ರಸಾರ ಮತ್ತು ಲೋಕಾನುಮೋದನಗಳನ್ನು ಕುರಿತು ಕವಿಗುಳಿಯುವ ಕಳವಳ ವಿವಕ್ಷಿತ. ಇದನ್ನು ಎಲ್ಲ ಕಾಲದ, ಎಲ್ಲ ದೇಶದ ಕವಿಗಳೂ ಅನುಭವಿಸಿದ್ದಾರೆ, ಅನುಭವಿಸುತ್ತಲೂ ಇದ್ದಾರೆ. ಇಂಥ ಚಿಂತೆಗಳು ಆಲಂಕಾರಿಕರನ್ನು ಕಾಡುವುದಿಲ್ಲ! ಅವರೇನಿದ್ದರೂ ಕಾವ್ಯರಚನೆ ಮತ್ತು ಕಾವ್ಯವಿಮರ್ಶನಗಳ ಕ್ರಮಗಳನ್ನು ವಿವೇಚಿಸುತ್ತಾರೆ. ಇದರಿಂದ ಕವಿಗೂ ಆಲಂಕಾರಿಕನಿಗೂ ಇರುವ ಸೂಕ್ಷ್ಮವ್ಯತ್ಯಾಸ ಧ್ವನಿತವಾಗುತ್ತದೆ.
ಎಲ್ಲ ಬಗೆಯ ಸಾಹಿತ್ಯಕ್ಕೂ ಅದರದೇ ಆದ ಸ್ಥಾನೌಚಿತ್ಯವಿರುತ್ತದೆ. ಇದನ್ನು ವಲ್ಲಭದೇವ ಹೀಗೆ ತಿಳಿಸುತ್ತಾನೆ:
ಅವಸರಪಠಿತಂ ಸರ್ವಂ ಸುಭಾಷಿತತ್ವಂ ಪ್ರಯಾತ್ಯಸೂಕ್ತಮಪಿ |
ಕ್ಷುಧಿ ಕದಶನಮಪಿ ನಿತರಾಂ ಭೋಕ್ತುಃ ಸಂಪದ್ಯತೇ ಸ್ವಾದು || (೧೫೦)
ಕಾಲೋಚಿತವಾದ ಅಗ್ಗದ ಮಾತೂ ಕಾವ್ಯತ್ವವನ್ನು ಪಡೆದುಕೊಳ್ಳುತ್ತದೆ. ಹಸಿದವರಿಗೆ ಹಳಸಿದ ಅನ್ನವೂ ಸವಿಯೆನಿಸುತ್ತದೆ.
ನಮ್ಮ ಆಲಂಕಾರಿಕರು ತಮ್ಮದಾದ ರೀತಿಯ ಉನ್ನತಾದರ್ಶಗಳನ್ನೇ ಗಮನದಲ್ಲಿರಿಸಿಕೊಳ್ಳುತ್ತಾರೆ. ಹೀಗಾಗಿಯೇ “ಸಾಮಾನ್ಯ”ಸ್ತರದ ಕಾವ್ಯವು ಹೇಗಿರಬೇಕೆಂಬ ಕಲ್ಪನೆಯನ್ನೂ ಅವರು ಕಾಣಿಸುವುದಿಲ್ಲ. ಎಂದಿಗೂ ಸೃಷ್ಟಿಕಾರ್ಯದ ಭಾರವಿರದ ಸಹೃದಯನಿಗೆ ಇಂಥ ಹೊಣೆಯುಳ್ಳ ಕವಿಯ ಕಷ್ಟ ಗೊತ್ತಿಲ್ಲ, ಗೊತ್ತಾಗಲೂ ಬೇಕಿಲ್ಲ! ಎಂಥ ವರಕವಿಯಾದರೂ ಒಂದೇ ಮಟ್ಟದ ಅತ್ಯುತ್ತಮಕೃತಿಗಳನ್ನು ನಿರಂತರವಾಗಿ ಸೃಜಿಸಲಾರ. ಅವನ ಸೃಷ್ಟಿಯಲ್ಲಿ ಶಾಶ್ವತಸಾಹಿತ್ಯವಿರುವಂತೆಯೇ ತಾತ್ಕಾಲಿಕಸಾಹಿತ್ಯವೂ ಇರುತ್ತದೆ; ಸಗ್ಗದ ಸಾಹಿತ್ಯದಂತೆ ಅಗ್ಗದ ಸಾಹಿತ್ಯಕ್ಕೂ ಅವಕಾಶವಿರುತ್ತದೆ. ತಾಯಿ ತನ್ನ ಸಂತತಿಯನ್ನೆಲ್ಲ ಅಭಿಮಾನಿಸುವಂತೆ ಕವಿಯು ತನ್ನೆಲ್ಲ ಕೃತಿಗಳನ್ನೂ ಕಾಪಾಡಿಕೊಳ್ಳುತ್ತಾನೆ. ನಿರ್ದಯವಿಮರ್ಶೆಗೆ ಅವನ ಬುದ್ಧಿ ಒಪ್ಪಿದರೂ ಭಾವ ಒಪ್ಪದು. ಆಗ ಆತ್ಮಸಮರ್ಥನೆಗಾಗಿ ಇಂಥ ಪದ್ಯಗಳು ಹುಟ್ಟುತ್ತವೆ. ಹಾಗೆಂದ ಮಾತ್ರಕ್ಕೆ ಆಯಾ ಕಾಲಕ್ಕೆ ಮಾತ್ರ ಬೇಕಿರುವ ಸಾಹಿತ್ಯ ನಿಂದ್ಯವೆಂದಲ್ಲ. ವಸ್ತುತಃ ಇಂಥ ಸಾಹಿತ್ಯದಿಂದಲೇ ಮಹಾಸಾಹಿತ್ಯಕ್ಕೆ ಬೇಕಾದ ನೇಪಥ್ಯ ಸಿದ್ಧವಾಗುತ್ತದೆ. ಈ ನೇಪಥ್ಯದಲ್ಲಿ ಭಾಷೆಯ ಹದ, ವಿಭಿನ್ನರೀತಿಯ ಇತಿವೃತ್ತ-ವರ್ಣನೆಗಳ ಪ್ರಯೋಗ, ಓದುಗರ ನಿರ್ಮಾಣ ಮುಂತಾದ ಎಷ್ಟೋ ಅಂಶಗಳು ಅಡಗುತ್ತವೆ. ಈ ಪದ್ಯದ “ಅವಸರಪಠಿತಂ” ಎಂಬ ಸೊಲ್ಲು ಆಶುಕವಿತೆಗೂ ಚಾಟುಕವಿತೆಗೂ ಅದೊಂದು ಬಗೆಯ ಉಪಲಕ್ಷಣವಾಗಿದೆ. ಇಲ್ಲವಾದಲ್ಲಿ ಸದ್ಯಃಸೃಷ್ಟಿಯ ಕಾವ್ಯಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ಈ ಪುಟ್ಟ ಪದ್ಯದಲ್ಲಿ ಅಲಂಕಾರಶಾಸ್ತ್ರದ ಇಷ್ಟೆಲ್ಲ ಅಚುಂಬಿತವಿಚಾರಗಳನ್ನು ಅಡಗಿಸಿದ ಕವಿಯ ಕೌಶಲ ಹಿರಿದು.
ಕಾವ್ಯಶೋಧನೆಗೆ ಕುಜನರೇ ಒಳ್ಳೆಯ ಒರೆಗಲ್ಲೆಂಬುದು ವರಾಹಮಿಹಿರನ ಅಭಿಪ್ರಾಯ:
ದುರ್ಜನಹುತಾಶತಪ್ತಂ ಕಾವ್ಯಸುವರ್ಣಂ ವಿಶುದ್ಧಿಮುಪಯಾತಿ |
ದರ್ಶಯಿತವ್ಯಂ ತಸ್ಮಾನ್ಮತ್ಸರಿಮನಸಃ ಪ್ರಯತ್ನೇನ || (೧೫೧)
ಕವಿತೆಯೆಂಬ ಹೊನ್ನು ಕೆಟ್ಟವರೆಂಬ ಬೆಂಕಿಯಲ್ಲಿ ತನ್ನ ಕಾಳಿಮೆಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿಯೇ ಪ್ರಯತ್ನಪೂರ್ವಕವಾಗಿ ಸತ್ಕಾವ್ಯವನ್ನು ಮತ್ಸರಿಗಳ ಮುಂದಿರಿಸಬೇಕು.
ಕವಿಗಳು ಸಾಮಾನ್ಯವಾಗಿ ಕುಜನನಿಂದೆಗೆ ತೊಡಗುವಾಗ ಅವರಿಂದ ಯಾವುದೇ ಪ್ರಯೋಜನವಿಲ್ಲವೆಂದು ಸಾರುತ್ತಾರೆ. ಆದರೆ ಇಲ್ಲಿ ಅಂಥವರಿಂದಲೂ ಪ್ರಯೋಜನವುಂಟೆಂದು ಗೊತ್ತಾಗುತ್ತದೆ. ಇದು ನಿಜಕ್ಕೂ ಸತ್ಕವಿಗಳ ಸೂಕ್ಷ್ಮಸಂವೇದನೆಗೆ ನಿದರ್ಶನ. ಮಾತ್ರವಲ್ಲ, ಲೌಕಿಕವಾದ ಜಾಣ್ಮೆಯೊಡವರಿದ ಗುಣಗ್ರಹಣವೂ ಇಲ್ಲಿದೆ. ಇಂಥ ವಿವೇಕವುಳ್ಳ ಕವಿಗಳ ಕಾವ್ಯವಾಗಲಿ, ಅಂತರಂಗವಾಗಲಿ ಅನಾವಿಲವಾಗದೆ ಉಳಿದೀತೇ?
ಇನ್ನು ಮುಂದೆ ಜಲ್ಹಣನು ಸಂಗ್ರಹಿಸಿದ “ಸೂಕ್ತಿಮುಕ್ತಾವಳಿ”ಯ ಕೆಲವೊಂದು ಸೊಲ್ಲುಗಳನ್ನು ಪರಿಶೀಲಿಸಬಹುದು.
ಕವಿಯು ಸರಿಯಾದ ಪದಗಳಿಗಾಗಿ ಪಡುವ ಪಾಡು ಕೂಡ ಸೊಗಸೆಂಬುದು ಮದನನೆಂಬ ಲೇಖಕನ ಅನುಭವ:
ಪದವಿಹ್ವಲತಾ ಕ್ವಾಪಿ ಸ್ಪೃಹಣೀಯಾ ಭವತಿ ಸತ್ಕವೀಂದ್ರಾಣಾಮ್ |
ಘನಜಘನಸ್ತನಮಂಡಲಭಾರಾಲಸಕಾಮಿನೀನಾಂ ಚ || (೪.೧೪)
ಸುಂದರಿಯರು ತಮ್ಮ ಸ್ತನ-ಜಘನಗಳ ಭಾರದಿಂದ ಬಳಲಿ ಸಾಗುವ ಗತಿಯೂ ಕಾವ್ಯರಚನೆಗೆ ಬೇಕಿರುವ ತಕ್ಕ ಪದಗಳಿಗಾಗಿ ಪರದಾಡುವ ಸತ್ಕವಿಗಳ ಬಗೆಯೂ ತಮ್ಮಂತೆ ಸೊಗಸಾಗಿರುತ್ತವೆ.
ಇಲ್ಲಿ ಕವಿಯು ಸಾರ್ಥಕಪದಗಳಿಂದ ಕಂಗೊಳಿಸುವ ಕಾವ್ಯವನ್ನಷ್ಟೇ ಮೆಚ್ಚುವ ಆಲಂಕಾರಿಕರಿಗಿಂತ ಸ್ವಲ್ಪ ವಿಭಿನ್ನವಾಗಿ ಅಂಥ ಹದಕ್ಕಾಗಿ ಹಪಹಪಿಸುವ ಕವಿಗಳ ಕಳವಳವೂ ಚೆನ್ನವೆಂದಿರುವುದು ಸ್ವಾರಸ್ಯಕರ. ಈ ಚಿಂತನೆ ಕವಿಗಷ್ಟೇ ಬರಬಹುದಾದುದು. ಏಕೆಂದರೆ ಪ್ರಾಮಾಣಿಕನಾದ ಸತ್ಕವಿ ಮತ್ತೊಬ್ಬ ಕವಿಯ ಪ್ರಯತ್ನವನ್ನು ಕೊಂಡಾಡದಿದ್ದರೂ ಪ್ರಾಂಜಲವಾಗಿ ಅರ್ಥಮಾಡಿಕೊಳ್ಳಬಲ್ಲ; ಎಂಥ ಅಗ್ಗದ ಕವಿಯ ಸೃಷ್ಟಿಯ ಹಿಂದೆಯೂ ಇರುವ ಶ್ರಮವನ್ನು ಗುರುತಿಸಬಲ್ಲ. ತಾನೂ ಇಂಥ ತೊಂದರೆಗಳನ್ನೆಲ್ಲ ಪಟ್ಟವನಾದ ಕಾರಣ—ಮತ್ತೂ ಪಡುತ್ತಿರಬಹುದಾದ ಕಾರಣ—ಅನ್ಯಕವಿಗಳ ಪ್ರಾಮಾಣಿಕಪರಿಶ್ರಮವನ್ನು ಕುರಿತು ಅದೊಂದು ಬಗೆಯ ಅಸಂತೃಪ್ತವಾದರೂ ಅಸಹನೆ ಇಲ್ಲದ ಸಹಾನುಭೂತಿ ಹೊಂದಿರುತ್ತಾನೆ. ಈ ಮಾತನ್ನು ಇಷ್ಟೇ ನಿಶ್ಚಯವಾಗಿ ಶುದ್ಧರಸಿಕನ ಬಗೆಗೆ ಹೇಳಲಾಗದು. ಏಕೆಂದರೆ ಕಾರಯಿತ್ರೀ ಪ್ರತಿಭೆಯಲ್ಲದೆ ಭಾವಯಿತ್ರೀ ಪ್ರತಿಭೆಯನ್ನಷ್ಟೇ ಉಳ್ಳ ಸಹೃದಯನಿಗೆ ಕಾವ್ಯರಚನೆಯ ಮರ್ಮಗಳೆಲ್ಲ ಅದೆಷ್ಟು ಚೆನ್ನಾಗಿ ತಿಳಿದಿದ್ದರೂ ಅದರ ನಿರ್ವಾಹದಲ್ಲಿ ಸಕ್ರಿಯವಾದ ಅನುಭವವಿರದ ಕಾರಣ ಕಾವ್ಯರಚನಾವಧಿಯ ಕಷ್ಟ-ನಷ್ಟಗಳು ಆತನ ಅಂತರಂಗವನ್ನು ಅಷ್ಟಾಗಿ ಮುಟ್ಟಲಾರವು. ಏನಿದ್ದರೂ ಅವನ ಪಾಲಿಗೆ ಕಾವ್ಯವೊಂದು ಸಿದ್ಧಸಾಮಗ್ರಿಯಾಗಿ ಮೈದೋರಿ, ತನ್ಮೂಲಕ ದೊರಕುವ ರಸಾನಂದದ ಪ್ರಮಾಣ ಮಾತ್ರ ಪ್ರಸ್ಫುಟವಾಗಿರುತ್ತದೆ. ಸಹೃದಯನ ಈ ಪರಿಯ ನಿಲವನ್ನು ಆಕ್ಷೇಪಿಸಲಾಗುವುದಿಲ್ಲ. ಅದನ್ನು ಪರಿಪೂರ್ಣವೆಂದು ಒಪ್ಪಿಕೊಳ್ಳಲೂ ಆಗುವುದಿಲ್ಲ. ಬಹುಶಃ ಈ ಕಾರಣದಿಂದಲೇ ಕುಂತಕನು ಕವಿ-ಪಂಡಿತರ ನಿರ್ಮಿತಿಯ ಹಿಂದಿನ ಶ್ರಮವನ್ನರಿತು ಆ ಸೃಷ್ಟಿಯ ಸ್ವಾರಸ್ಯವನ್ನೆಲ್ಲ ಚೆನ್ನಾಗಿ ಬಲ್ಲವನಾದ ಅಪೂರ್ವಸಹೃದಯನಿಗೆ ಮಿಗಿಲಾದ ಮನ್ನಣೆ ನೀಡಿದ್ದಾನೆ.[2] ವಾಮನನ ಪರಿಭಾಷೆಯಲ್ಲಿ ಹೇಳುವುದಾದರೆ, ಸಹೃದಯರು ನಿರಪವಾದವಾಗಿ “ಅರೋಚಕಿ”ಗಳು. ಆದರೆ ನಿಜವಾದ ಕವಿ ತತ್ತ್ವತಃ ಅರೋಚಿಯಾಗಿದ್ದರೂ ಕವಿಕುಲದ ಬೆಳೆವಣಿಗೆಯನ್ನು ಗಮನದಲ್ಲಿರಿಸಿಕೊಂಡು ಕೆಲವು ಸಂದರ್ಭಗಳಲ್ಲಿಯಾದರೂ “ಸತೃಣಾಭ್ಯವಹಾರಿ”ಯಾಗಿ ತೋರಿಕೊಳ್ಳಬೇಕಾಗುತ್ತದೆ.[3] ಇಂತಲ್ಲದಿದ್ದರೆ ಕವಿ-ಕಾವ್ಯಪರಂಪರೆ ಅವಿಚ್ಛಿನ್ನಪ್ರವಾಹರೂಪದಲ್ಲಿ ಹರಿಯಲಾರದು. ಚಂದ್ರೋದಯಕ್ಕೆ ಮುನ್ನ ತಾರೆಗಳು ಉನ್ಮೀಲಿಸುವಂತೆ ಮಹಾಕೃತಿಯ ಹುಟ್ಟಿಗೆ ಮುನ್ನ ಎಷ್ಟೋ ಸಣ್ಣ-ಪುಟ್ಟ ಕಾವ್ಯಗಳು ಕಣ್ಬಿಟ್ಟು ಕಣ್ಮುಚ್ಚಬೇಕಾಗುತ್ತದೆ. ಇವುಗಳ ಮೂಲಕ ಭಾಷೆ-ಭಾವಗಳು ಹದವಾಗಬೇಕಿರುತ್ತದೆ. ವೇದವಾಙ್ಮಯದ ಎಷ್ಟೋ ಗ್ರಂಥಗಳು ಉದಿಸಿ ಭಾಷೆ-ಬಂಧಗಳು ಒಂದು ಹದಕ್ಕೆ ಬಾರದಿದ್ದಲ್ಲಿ ಆದಿಕವಿ ವಾಲ್ಮೀಕಿಮಹರ್ಷಿಗಳ ನುಡಿಗಾರಿಕೆಗೆ, ಶ್ಲೋಕಸಂಗೀತಕ್ಕೆ ಅವಕಾಶವಾಗುತ್ತಿರಲಿಲ್ಲವೆಂಬುದು ಸಾಹಿತ್ಯೇತಿಹಾಸದ ಸತ್ಯ. ಇದನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಆದರೆ ಮಹಾಕವಿಯೊಬ್ಬನ ರಚನೆ ಮಿಕ್ಕೆಲ್ಲ ಕೃತಿಗಳ ಶಕ್ತಿ-ಸಾಧ್ಯತೆಗಳನ್ನೂ ಮೀರಿ ತ್ರಿವಿಕ್ರಮನಂತೆ ಬೆಳೆದಿರುತ್ತದೆ ಎಂಬುದೂ ಮರೆಯಲಾಗದ ಸತ್ಯ. ಈ ವಿವೇಕವನ್ನು ಚೆನ್ನಾಗಿ ಬಲ್ಲ ಆಲಂಕಾರಿಕ ಎಲ್ಲ ಬಗೆಯ ಕಾವ್ಯಗಳಿಗೂ ನೆಲೆ-ಬೆಲೆಗಳನ್ನು ಕಲ್ಪಿಸುತ್ತಾನೆ; ಮೌಲ್ಯಮೀಮಾಂಸೆಗೆ ಹಾದಿ ಹಾಕಿಕೊಡುತ್ತಾನೆ.
ಮಾಲತೀಮಾಧವನೆಂಬ ಕವಿ ಪಂಡಿತನಿಗೂ ಸಾಹಿತಿಗೂ ಇರುವ ವ್ಯತ್ಯಾಸವನ್ನು ಹೀಗೆ ಕಂಡರಿಸುತ್ತಾನೆ:
ವ್ಯಾಕರಣಾದಧಿಗತಮಪಿ ಕವಿವದನೇ ಶಬ್ದವೃಂದಮನ್ಯಾದೃಕ್ |
ನಟಶಿಕ್ಷಿತಮಪಿ ಕರಣಂ ತರುಣೀಕರಣೇ ತದನ್ಯದಿವ || (೪.೨೦)
ವ್ಯಾಕರಣದ ಮೂಲಕ ತಿಳಿದುಬಂದ ಶಬ್ದಗಳು ಕವಿಯ ಮೂಲಕ ಹೊಮ್ಮಿದಾಗ ಹೊಸತೆನಿಸುತ್ತವೆ. ನಾಟ್ಯಾಚಾರ್ಯ ಕಲಿಸಿದ ಕರಣಗಳು (ಸ್ಥಾನಕ-ನೃತ್ತಹಸ್ತ-ಚಾರಿಗಳ ಸಮಾಯೋಗದಿಂದ ಉಂಟಾಗುವ ಮೂಲಭೂತ ನೃತ್ತಬಂಧಗಳು) ನರ್ತಕಿಯೊಬ್ಬಳ ಮೂಲಕ ಅಭಿವ್ಯಕ್ತವಾದಾಗ ಹೆಚ್ಚಿನ ಸೊಗಸನ್ನು ಗಳಿಸುತ್ತವೆ.
ಇದು ತುಂಬ ಮಾರ್ಮಿಕವಾದ ಒಳನೋಟ. ವ್ಯಾಕರಣಶಾಸ್ತ್ರದಿಂದ ನಿಷ್ಪನ್ನವಾಗುವ ಪದಗಳಿಗೆ ವಿಶಿಷ್ಟತೆ ಬರುವುದು ಪ್ರಯೋಗಗಳಿಂದ. ವಸ್ತುತಃ ವೈಯಾಕರಣನು ಲೋಕದ ಪ್ರಯೋಗವನ್ನು ಪರಿಶೀಲಿಸಿಯೇ ಪದಗಳ ಲಕ್ಷಣವನ್ನು ರೂಪಿಸುತ್ತಾನೆ. ಹೀಗೆ ರೂಪಿತವಾದ ಲಕ್ಷಣಗಳನ್ನು ಬಳಸಿಕೊಂಡು ಲೋಕರೂಢವಲ್ಲದ ಮತ್ತೆಷ್ಟೋ ಶಬ್ದಗಳನ್ನು ಕವಿ-ಪಂಡಿತರು ನಿರ್ಮಿಸಿಕೊಳ್ಳುತ್ತಾರೆ. ಕವಿಯ ನಿರ್ಮಿತಿಯ ಸ್ವಾರಸ್ಯವೆಂದರೆ, ಪ್ರತಿಯೊಂದು ಪದಕ್ಕೂ ಸಮುಚಿತವಾಗಿ ಹೊಂದಿಕೊಳ್ಳುವ ಸಂದರ್ಭಗಳ ಸೃಷ್ಟಿ. ಎಷ್ಟೋ ವೇಳೆ ಲೋಕದಲ್ಲಿ ಸಮುಚಿತವಾದ ಸಂದರ್ಭಗಳು ಒದಗಿಬರದ ಕಾರಣದಿಂದಲೇ ಅನ್ಯಾನ್ಯಪದಗಳ ಪ್ರಯೋಗಕ್ಕೆ ಅವಕಾಶವಿರುವುದಿಲ್ಲ. ಏಕೆಂದರೆ ಲೋಕಪ್ರಯೋಗ ಸರ್ವದಾ ಪ್ರಯೋಜನಾಪೇಕ್ಷಿ. ಆದರೆ ಕಾವ್ಯಪ್ರಯೋಗವು ಸೌಂದರ್ಯಾಪೇಕ್ಷಿಯಾದ ಕಾರಣ ಅದು ಅನೇಕವಿಧದ ಪದಗಳ ರಸಮಯಸಂದರ್ಭಕ್ಕೆ ಎಡೆ ನೀಡುತ್ತದೆ. ಹೀಗಾಗಿಯೇ ಕಾವ್ಯದ ಪ್ರತಿಯೊಂದು ಪದಕ್ಕೂ ಅನನ್ಯತೆ ಸಿದ್ಧವಾಗುತ್ತದೆ. ಇದು ಶಾಸ್ತ್ರಕ್ಕಿಲ್ಲದ ಸೌಭಾಗ್ಯ. ಅನನ್ಯತೆಯೇ ಸೌಂದರ್ಯ. ಇವನ್ನೆಲ್ಲ ಆಲಂಕಾರಿಕರು “ಪದಪಾಕ”ವೆಂಬ ಅಧಿಕರಣದಲ್ಲಿ ವಿಸ್ತರಿಸುತ್ತಾರೆ. ರಾಜಶೇಖರನಂತೂ ಪದಪಾಕವನ್ನು ಅನೇಕ ಬಗೆಗಳಲ್ಲಿ ವಿವೇಚಿಸಿದ್ದಾನೆ.[4]
ಉಪಸಂಹಾರ
ವಾಲ್ಮೀಕಿಮುನಿಗಳಿಂದ ನೀಲಕಂಠದೀಕ್ಷಿತನವರೆಗೆ ಬೆಳೆದಿರುವ ಕಾವ್ಯಪರಂಪರೆಯಲ್ಲಿ ಭರತನಿಂದ ಮೊದಲ್ಗೊಂಡು ಜಗನ್ನಾಥನವರೆಗೆ ಹಬ್ಬಿರುವ ಕಾವ್ಯಮೀಮಾಂಸೆಯ ಮೌಲ್ಯಗಳು ಹೇಗೆ ಪ್ರತಿಫಲಿಸಿವೆಯೆಂದು ಈವರೆಗೆ ನೋಡಿದ್ದಾಯಿತು. ಇಲ್ಲಿಯ ಕವಿಗಳ ಕಾವ್ಯಮೀಮಾಂಸಾದೃಷ್ಟಿಯಲ್ಲಿ ನಮ್ಮ ಆಲಂಕಾರಿಕರು ಹೇಳುವ ಹಾಗೂ ಹೇಳದಿರುವ ಅಂಶಗಳು ಬಂದಿವೆ. ಅವರು ಹೇಳದ ಅಂಶಗಳು ಅಲಂಕಾರಶಾಸ್ತ್ರದ ಮೂಲತತ್ತ್ವಗಳಿಗೆ ಪೂರಕವಲ್ಲದೆ ಮಾರಕವಲ್ಲವೆಂಬುದು ಗಮನಾರ್ಹ. ಇದು ನಮ್ಮ ಸಾಹಿತ್ಯಮೀಮಾಂಸಾಶಾಸ್ತ್ರದ ಗಟ್ಟಿತನವನ್ನು ಸಾಬೀತು ಮಾಡುತ್ತದೆ. ಮಾತ್ರವಲ್ಲ, ಈ ಶಾಸ್ತ್ರವು ವರಕವಿಗಳನ್ನೇ ಪ್ರಧಾನವಾಗಿ ನೆಮ್ಮಿ ಬೆಳೆದಿದೆಯಲ್ಲದೆ ಶುಷ್ಕಪಂಡಿತರ ಜಟಿಲತರ್ಕಗಳನ್ನೂ ಅವಿಚಾರಿತರಮಣೀಯವಾದ ಊಹಾಪೋಹಗಳನ್ನೂ ನಚ್ಚಿ ನಡೆದಿಲ್ಲವೆಂದು ತಿಳಿಯುತ್ತದೆ. ಇನ್ನು ನಮ್ಮ ಕವಿಗಳಾದರೂ ಆಲಂಕಾರಿಕರ ಪ್ರಮುಖತತ್ತ್ವಗಳನ್ನು ಅನುಭವಕ್ಕೆ ತಂದುಕೊಂಡೇ ಕಾವ್ಯಾನುಸಂಧಾನ ಮಾಡಿರುವರಲ್ಲದೆ ಸ್ವಪ್ರತಿಷ್ಠೆಯನ್ನು ಮೆರೆಸಲು ಹುಚ್ಚುಹಾದಿಯನ್ನು ಹಿಡಿದಿಲ್ಲ. ಹೀಗೆ ಲಕ್ಷ್ಯ-ಲಕ್ಷಣಕಾರರ ನಡುವೆ ಆರೋಗ್ಯಕರವಾದ ಸಂಬಂಧ ಸಾವಿರಾರು ವರ್ಷಗಳಿಂದ ಸಾಗಿಬಂದಿರುವುದು ಸ್ವಲ್ಪದ ಮಾತಲ್ಲ. ಇದು ಏಕಕಾಲದಲ್ಲಿ ಸಂಸ್ಕೃತಕವಿಗಳ ವೈಶ್ವಿಕಭಾವವನ್ನೂ ಆಲಂಕಾರಿಕರ ವೈಜ್ಞಾನಿಕಪ್ರಜ್ಞೆಯನ್ನೂ ಸಮರ್ಥಿಸುತ್ತಿದೆ.
ಸಂಸ್ಕೃತದ ಕವಿಗಳಾಗಲಿ, ಆಲಂಕಾರಿಕರಾಗಲಿ ನಮ್ಮ ದೇಶದ ಯಾವುದೋ ಒಂದು ಪ್ರಾಂತಕ್ಕೆ ಸೀಮಿತರಾದವರಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಚ್ಛದಿಂದ ಕಾಮರೂಪದವರೆಗೆ ಇವರ ನೆಲೆಗಳು ಹಬ್ಬಿವೆ. ಇದೇ ರೀತಿ ಇಲ್ಲಿಯ ಕಾಲದಹರಿವಾದರೂ ಒಂದೆರಡು ಶತಾಬ್ದಗಳ ಮಿತಿಯದಲ್ಲ; ಹಲವು ಸಹಸ್ರಾಬ್ದಗಳ ಅವಧಿಯಲ್ಲಿ ಇದು ವಿಸ್ತರಿಸಿಕೊಂಡಿದೆ. ಮಾತ್ರವಲ್ಲ, ಇವರೆಲ್ಲ ಸಮಾಜದ ವಿವಿಧಸ್ತರಗಳಿಂದ ಬಂದವರು. ಇವರಲ್ಲಿ ಎಲ್ಲ ವರ್ಣಗಳವರಿದ್ದಾರೆ, ಎಲ್ಲ ವೃತ್ತಿಗಳವರೂ ಇದ್ದಾರೆ. ಜೊತೆಗೆ ಬೇರೆ ಬೇರೆ ಮತಶ್ರದ್ಧೆಗಳವರೂ ಇದ್ದಾರೆ. ಹೀಗೆ ಅಭಿಪ್ರಾಯಭೇದಗಳಿಗೆ ವಿಪುಲಾವಕಾಶವಿರಬಹುದಾದ ಸಂದರ್ಭದಲ್ಲಿಯೂ ಇವರೆಲ್ಲರ ನಡುವೆ ಎದ್ದುತೋರುವ ಐಕಮತ್ಯ ಕಂಡುಬರುವುದು ಯಾರಿಗಾದರೂ ಬೆರಗೆನಿಸದಿರದು. ಆಲಂಕಾರಿಕರಲ್ಲಿ ಗುಣ, ರೀತಿ, ಧ್ವನಿ, ವಕ್ರತೆ, ಅಲಂಕಾರಗಳನ್ನು ಕುರಿತಂತೆ ರಸಸ್ವರೂಪ ಮತ್ತು ರಸಭೇದಗಳನ್ನು ಅನುಲಕ್ಷಿಸಿದಂತೆ ಕೆಲವು ವೈರುದ್ಧ್ಯಗಳಿದ್ದರೂ ಅವೆಲ್ಲ ಮಮ್ಮಟಾದಿಗಳ ಕಾಲದ ಬಳಿಕ ಸಮನ್ವಿತವಾದುದು ಇತಿಹಾಸವೇದ್ಯ. ಆದರೆ ಕವಿಗಳಲ್ಲಿ ಈ ಮಟ್ಟದ ಅಭಿಪ್ರಾಯಭೇದವನ್ನೂ ಕಾಣಲಾಗುವುದಿಲ್ಲ. ಇದು ನಿಜಕ್ಕೂ ಮುದಾವಹವಾದ ವಿಸ್ಮಯ. ಬಹುಶಃ ಪ್ರತಿಭೆಯ ಮೂಲಸ್ವರೂಪವಾದ ಸರ್ವಸಮನ್ವಯಪ್ರಜ್ಞೆಯೇ[5] ಕವಿಗಳ ಮನದಾಳದಲ್ಲಿ ಕುಳಿತು ಇಂಥ ಏಕತೆಯನ್ನು ಸಾಧಿಸಿರಬೇಕು. ಇವರ ಮತ್ತೊಂದು ವೈಶಿಷ್ಟ್ಯವನ್ನು ಗಮನಿಸುವುದಾದರೆ, ಹೆಚ್ಚಿನ ಕವಿಗಳೆಲ್ಲ ಅಲಂಕಾರಶಾಸ್ತ್ರದ ಮೂಲ-ಚೂಲಗಳನ್ನು ಬಲ್ಲವರೇ; ತಮ್ಮ ಕಾವ್ಯ-ನಾಟಕಗಳಲ್ಲಿ ಅವುಗಳ ಅನ್ವಯ-ಪರಾಮರ್ಶೆಗಳನ್ನು ಮಾಡಿಕೊಂಡವರೇ; ಈ ವಿದ್ಯೆಗೆ ತಮ್ಮದಾದ ಒಳನೋಟಗಳನ್ನು ಸಲ್ಲಿಸಿದವರೇ. ಇಂಥ ವೈದುಷ್ಯವನ್ನು ಭಾರತೀಯೇತರ ಕವಿಗಳಲ್ಲಿ ಆಧುನಿಕಯುಗದವರೆಗೆ ನಾವು ಕಾಣುವುದು ಕಷ್ಟ. ಹೀಗೆ ತತ್ತ್ವ-ಪ್ರಯೋಗಗಳ ಪ್ರಜ್ಞಾಪೂರ್ವಕಸಂವಾದಗಳನ್ನು ಈ ಮಟ್ಟದ ಗುಣ-ಗಾತ್ರಗಳಲ್ಲಿ ನಮ್ಮ ಪರಂಪರೆ ಸಾಕ್ಷಾತ್ಕರಿಸಿಕೊಡುವಂತೆ ಮಿಕ್ಕ ಪರಂಪರೆಗಳಿಗೆ ಸಾಧ್ಯವಾಗದಿರುವುದು ಗಮನಾರ್ಹ. ಇದು ನಮಗೆಲ್ಲ ಹೆಮ್ಮೆಯ ಸಂಗತಿಯೂ ಹೌದು.
ಇದನ್ನು ಆಧುನಿಕ ಕವಿ-ವಿಮರ್ಶಕರು ಮನಗಂಡಲ್ಲಿ ಒಳಿತು. ಏಕೆಂದರೆ ಈಚೆಗೆ ಕಾವ್ಯಮೀಮಾಂಸೆಯ ವೈಶ್ವಿಕಮೌಲ್ಯಗಳನ್ನು ಅವಗಣಿಸಿ ಪ್ರತಿಯೊಂದು ಭಾಷೆಗೂ ಅಲ್ಲಿಯ ಪ್ರತಿಯೊಂದು ಸಾಹಿತ್ಯಪ್ರಕಾರಕ್ಕೂ ತನ್ನದೇ ಆದ ಸೌಂದರ್ಯಮೀಮಾಂಸೆ ಉಂಟೆಂದು ಅವಿಚಾರಿತವಾಗಿ ಆಗ್ರಹಿಸುವುದು ಅಭ್ಯಾಸವಾಗಿಬಿಟ್ಟಿದೆ. ಇಂಥ ಆಗ್ರಹಗಳಿಗೆ ಸಮಾಜಶಾಸ್ತ್ರ-ಮಾನವಶಾಸ್ತ್ರ-ಮನಃಶಾಸ್ತ್ರಾದಿಗಳ ಹಿನ್ನೆಲೆ ಉಂಟೆಂದು ತರ್ಕಾಭಾಸಗಳನ್ನು ಮುಂದಿಡಲಾಗುತ್ತಿದೆ. ಈ ಬಗೆಯ ಆರ್ಭಟಗಳೆಲ್ಲ ವಿವೇಕವಿಹೀನವೆನ್ನದೆ ವಿಧಿಯಿಲ್ಲ. ಇದನ್ನು ಮನಗಾಣುವುದಕ್ಕೆ ಕೂಡ ಸದ್ಯದ ಶೋಧನೆ ಸಹಕಾರಿಯಾದೀತೆಂದು ಭಾವಿಸಬಹುದು.
[1] ಸ್ಥಾಯೀ ಭಾವಃ ಸ್ಥಿತೋತ್ಕರ್ಷೋ ವಿಭಾವವ್ಯಭಿಚಾರಿಭಿಃ | ಸ್ಪಷ್ಟಾನುಭಾವನಿಶ್ಚೇಯಃ ಸುಖದುಃಖಾತ್ಮಕೋ ರಸಃ || (ನಾಟ್ಯದರ್ಪಣ, ೩.೭)
[2] ಲೀನಂ ವಸ್ತುನಿ ಯೇನ ಸೂಕ್ಷ್ಮಸುಭಗಂ ತತ್ತ್ವಂ ಗಿರಾ ಕೃಷ್ಯತೇ
ನಿರ್ಮಾತುಂ ಪ್ರಭವೇನ್ಮನೋಹರಮಿದಂ ವಾಚೈವ ಯೋ ವಾ ಕವಿಃ |
ವಂದೇ ದ್ವಾವಪಿ ತಾವಹಂ ಕವಿವರೌ ವಂದೇತರಾಂ ಯಂ ಪುನ-
ರ್ಯೋ ವಿಜ್ಞಾತಪರಿಶ್ರಮೋऽಯಮನಯೋರ್ಭಾರಾವತಾರಕ್ಷಮಃ || (ವಕ್ರೋಕ್ತಿಜೀವಿತ, ೨.೩೨ ರಲ್ಲಿಯ ಅಂತರಶ್ಲೋಕ)
[3] ಅರೋಚಕಿನಃ ಸತೃಣಾಭ್ಯವಹಾರಿಣಶ್ಚ ಕವಯಃ (ಕಾವ್ಯಾಲಂಕಾರಸೂತ್ರವೃತ್ತಿ, ೧.೨.೧)
[4] ಪಿಚುಮಂದಪಾಕ, ಬದರಪಾಕ, ಮೃದ್ವೀಕಾಪಾಕ, ವಾರ್ತಾಕಪಾಕ, ತಿಂತಿಡೀಕಪಾಕ, ಸಹಕಾರಪಾಕ, ಕ್ರಮುಕಪಾಕ, ತ್ರಪುಸಪಾಕ ಮತ್ತು ನಾರಿಕೇಳಪಾಕ (ಕಾವ್ಯಮೀಮಾಂಸೆ, ಪು.೨೦–೨೧)
[5] ಹೋಲಿಸಿ: ವಿಚಿತ್ರಭಾವಧರ್ಮಾಂಶತತ್ತ್ವಪ್ರಖ್ಯಾ ಚ ದರ್ಶನಮ್ | (ಭಟ್ಟತೌತ)
Concluded.