ರಸಪಾರಮ್ಯವನ್ನು ಕವಿಯು ಎತ್ತಿಹಿಡಿಯುವ ಬಗೆ ಹೀಗೆ:
ಅರ್ಥೋऽಸ್ತಿ ಚೇನ್ನ ಪದಶುದ್ಧಿರಥಾಸ್ತಿ ಸಾಪಿ
ನೋ ರೀತಿರಸ್ತಿ ಯದಿ ಸಾ ಘಟನಾ ಕುತಸ್ತ್ಯಾ |
ಸಾಪ್ಯಸ್ತಿ ಚೇನ್ನ ನವವಕ್ರಗತಿಸ್ತದೇತ-
ದ್ವ್ಯರ್ಥಂ ವಿನಾ ರಸಮಹೋ ಗಹನಂ ಕವಿತ್ವಮ್ || (೨.೩೦)
ಒಳ್ಳೆಯ ಆಶಯವಿದ್ದಲ್ಲಿ ಅದನ್ನು ವ್ಯಕ್ತಪಡಿಸುವ ಪದಗಳು ವ್ಯಾಕರಣದೃಷ್ಟಿಯಿಂದ ಶುದ್ಧವಾಗಿರುವುದಿಲ್ಲ. ಒಂದು ವೇಳೆ ಇಂಥ ಪದಶುದ್ಧಿಯಿದ್ದರೆ ರೀತಿಯಲ್ಲಿ ಸೊಗಸಿರುವುದಿಲ್ಲ. ಹಾಗೇನಾದರೂ ರೀತಿಯಲ್ಲಿ ಸೊಗಸಿದ್ದರೆ ಕಾವ್ಯದ ವಿವಿಧಾಂಗಗಳಲ್ಲಿ ಸಾಮರಸ್ಯವಿರುವುದಿಲ್ಲ. ಒಂದು ಪಕ್ಷ ಇದೂ ಸಂದಿದ್ದಲ್ಲಿ ಹೊಸತಾದ ವಕ್ರೋಕ್ತಿಗೆ ಅವಕಾಶವಿರುವುದಿಲ್ಲ. ಇವೆಲ್ಲ ಸೇರಿದ್ದರೂ ರಸವಿಲ್ಲದಿದ್ದರೆ ಸಾರ್ಥಕ್ಯವೆಲ್ಲಿ? ಅಬ್ಬಾ, ಕವಿತೆ ಅದೆಷ್ಟು ಕಠಿನ!
ಇದು ನಿಜಕ್ಕೂ ಪ್ರಾಮಾಣಿಕರಾದ ಎಲ್ಲ ಕವಿಗಳನ್ನೂ ಕಾಡುವ ಅಳಲು. ಸದ್ಯದ ಪದ್ಯದಲ್ಲಿ ಮಂಖನು ಅದೊಂದು ಬಗೆಯ ಆರೋಹಣಕ್ರಮದಿಂದ ಕಾವ್ಯಾಂಗಗಳನ್ನು ಅವುಗಳ ಮಹತ್ತ್ವಗಳಿಗನುಸಾರವಾಗಿ ಸಜ್ಜುಗೊಳಿಸಿದ್ದಾನೆ. ರಸಕ್ಕೆ ಎಲ್ಲಕ್ಕಿಂತ ಮಿಗಿಲಾದ ಪ್ರಾಶಸ್ತ್ಯ ಸಂದಿರುವುದು ಸಮುಚಿತವೇ ಆಗಿದೆ.
ಮಹಾಕವಿತ್ವವೆಂಬುದು ಅನೂಹ್ಯವಾದ ರಹಸ್ಯ. ಅದನ್ನು ಪಂಡಿತರಿರಲಿ, ವ್ಯುತ್ಪನ್ನರಾದ ಕವಿಗಳೂ ಕಂಡುಕೊಳ್ಳುವುದು ಕಷ್ಟ:
ತತ್ತತ್ಸಮಗ್ರಬಹುಶಾಸ್ತ್ರವಿಮರ್ಶಸಿದ್ಧ-
ವೈದಗ್ಧ್ಯದಿಗ್ಧಮತಯೋ ಬಹವಃ ಕವಂತಾಮ್ |
ಯತ್ಕಿಂಚಿದಸ್ತಿ ತು ಮಹಾಕವಿವಾಗ್ರಹಸ್ಯಂ
ಸ್ವಪ್ನೇऽಪಿ ತಸ್ಯ ಕಿಲ ತೇ ನ ದಿಶಂ ಸ್ಪೃಶಂತಿ || (೨.೩೫)
ಎಲ್ಲ ಶಾಸ್ತ್ರಗಳಲ್ಲಿಯೂ ಪಾರಂಗತರಾಗಿ ಪ್ರಬುದ್ಧರೆನಿಸಿದ ಬಹುಮಂದಿ ಪಂಡಿತಕವಿಗಳು ಕವನಿಸಲಿ. ಆದರೆ ಮಹಾಕವಿಯ ಮಾತಿನ ರಹಸ್ಯವೆಂಬುದು ಯಾವುದುಂಟು, ಅದರ ದಿಕ್ಕನ್ನೂ ಇವರು ಕನಸಿನಲ್ಲಿ ಕೂಡ ಕಾಣಲಾರರು.
ಮಹಾಕವಿತ್ವದ ರಹಸ್ಯ ಅದೊಂದು ಬಗೆಯಲ್ಲಿ ಸದಸ್ಯವೂ ಹೌದು. ಇದನ್ನು ಅಳಿಗವಿಗಳೂ ಬರಿಯೋದಿನ ಗಿಳಿಗವಿಗಳೂ ತಿಳಿಯರಾರರು. ಇಂಥ ಕಾವ್ಯೋಪನಿಷತ್ತನ್ನು ಚಿತ್ತವೃತ್ತಿಗಳ ಆಳ-ಅಗಲಗಳನ್ನೆಲ್ಲ ಬಲ್ಲವರಾಗಿ ಉಕ್ತಿಸೌಂದರ್ಯದ ಚರಮಸೀಮೆಯನ್ನು ಮುಟ್ಟಿದವರೇ ದಕ್ಕಿಸಿಕೊಳ್ಳಬಲ್ಲರು. ಇದನ್ನು ಮಂಖ ಪ್ರಾಂಜಲವಾಗಿ ಹೇಳಿದ ಪರಿ ಸ್ತವನೀಯ.
ತೀಕ್ಷ್ಣವಾದ ವಿಮರ್ಶನವಿಲ್ಲದೆ ಸಾಮಾನ್ಯಕವಿ-ಮಹಾಕವಿಗಳ ನಡುವಣ ವ್ಯತ್ಯಾಸವನ್ನರಿಯಲು ಸಾಧ್ಯವಿಲ್ಲ:
ನೋ ಶಕ್ಯ ಏವ ಪರಿಹೃತ್ಯ ದೃಢಾಂ ಪರೀಕ್ಷಾಂ
ಜ್ಞಾತುಂ ಮಿತಸ್ಯ ಮಹತಶ್ಚ ಕವೇರ್ವಿಶೇಷಃ |
ಕೋ ನಾಮ ತೀವ್ರಪವನಾಗಮಮಂತರೇಣ
ಭೇದೇನ ವೇತ್ತಿ ಶಿಖಿದೀಪಮಣಿಪ್ರದೀಪೌ || (೨.೩೭)
ನಿಶಿತವಾದ ಪರೀಕ್ಷೆಯಿಲ್ಲದೆ ಕವಿ ಮತ್ತು ಮಹಾಕವಿಗಳ ನಡುವಣ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಿಲ್ಲ. ಬಿರುಗಾಳಿ ಬೀಸಿದಾಗಲಲ್ಲವೇ ಎಣ್ಣೆಯ ದೀಪ ಮತ್ತು ಮಣಿದೀಪಗಳ ನಡುವಣ ವ್ಯತ್ಯಾಸ ತಿಳಿಯುವುದು?
ಮಂಖನು ತೀವ್ರಪರೀಕ್ಷೆಯಿಲ್ಲದೆ ಕವಿಗಳ ತರ-ತಮಗಳನ್ನು ಅರಿಯಲು ಸಾಧ್ಯವಿಲ್ಲವೆಂದು ಸಾರುವ ಮೂಲಕ ಎಂಥ ಕವಿಗೂ ನಿಶಿತವಿಮರ್ಶನದ ಅಗ್ನಿದಿವ್ಯ ಅನಿವಾರ್ಯವೆಂದು ನಿರೂಪಿಸುತ್ತಾನೆ. ಸಾಮಾನ್ಯವಾಗಿ ವಿಮರ್ಶಕರು ತಮ್ಮ ಮಹತ್ತ್ವವನ್ನು ಸಾರುವ ಭರದಲ್ಲಿ ಕಾವ್ಯಪರೀಕ್ಷೆಯನ್ನು ಎತ್ತಿಹಿಡಿಯುತ್ತಾರೆ. ಆದರೆ ನಿರಂಕುಶರಾದ ಕವಿಗಳಿಗೆ ವಿಮರ್ಶಕರನ್ನು ಕುರಿತು ಉಪೇಕ್ಷೆಯೇ ಇರುತ್ತದೆ. ಮಂಖನು ಇಂಥ ಆಗ್ರಹಗಳಿಗೆ ತುತ್ತಾಗದೆ ಎಲ್ಲ ಕವಿಗಳಿಗೂ ವಿಮರ್ಶೆ ಅನಿವಾರ್ಯವೆಂದು ಹೇಳಿರುವುದು ಮುದಾವಹ. “ಸಾಹಿತ್ಯಮೀಮಾಂಸೆ” ಎಂಬ ಅಲಂಕಾರಶಾಸ್ತ್ರಗ್ರಂಥವನ್ನು ಬರೆದವನು ಇವನೇ ಎಂಬ ಅಂಶವನ್ನು ಒಪ್ಪಿದಲ್ಲಿ ಈತನಲ್ಲಿ ಕವಿ-ವಿಮರ್ಶಕರ ಸಾಮರಸ್ಯವಿದೆಯೆಂದು ಹೇಳಬಹುದು.
ಮುಂದೆ ಕವಿಚಕ್ರವರ್ತಿಗೆ ವಾಗರ್ಥಗಳ ಜಗತ್ತು ವಶವರ್ತಿಯೆಂದು ಹೀಗೆ ಒಕ್ಕಣಿಸುತ್ತಾನೆ:
ಅಭ್ರಂಕಷೋನ್ಮಿಷಿತಕೀರ್ತಿಸಿತಾತಪತ್ತ್ರಃ
ಸ್ತುತ್ಯಃ ಸ ಏವ ಕವಿಮಂಡಲಚಕ್ರವರ್ತೀ |
ಯಸ್ಯೇಚ್ಛಯೈವ ಪುರತಃ ಸ್ವಯಮುಜ್ಜಿಹೀತೇ
ದ್ರಾಗ್ವಾಚ್ಯವಾಚಕಮಯಃ ಪೃತನಾನಿವೇಶಃ || (೨.೩೯)
ಆಗಸವನ್ನು ಮುಟ್ಟುವಂತಿರುವ ಧವಳಕೀರ್ತಿಯ ಬೆಳ್ಗೊಡೆಯನ್ನುಳ್ಳ ಕವಿಚಕ್ರವರ್ತಿಯೇ ಪ್ರಶಂಸಾರ್ಹ. ಏಕೆಂದರೆ ಅವನ ಇಚ್ಛಾನುಸಾರವಾಗಿ ವಾಚ್ಯ-ವಾಚಕಸಮೂಹವೆಂಬ ಸೇನೆಯು ಯಾವ ಕ್ಷಣದಲ್ಲಿಯೂ ತಾನಾಗಿ ಸನ್ನದ್ಧವಾಗುತ್ತದೆ.
ಇದೊಂದು ಸೊಗಸಾದ ದೃಷ್ಟಾಂತದೊಡನೆ ಮನಮುಟ್ಟುವಂತಿರುವ ಕಾವ್ಯತತ್ತ್ವ. ರಸಸಿದ್ಧರಾದ ಮಹಾಕವಿಗಳು ವಶ್ಯವಾಕ್ಕುಗಳೆಂದು ಪ್ರಸಿದ್ಧಿ. ಇದನ್ನು ಆನಂದವರ್ಧನ ಅವಿಸ್ಮರಣೀಯವಾಗಿ ಹೇಳಿಯೇ ಇದ್ದಾನೆ.[1]
ಮಂಖನಿಗೆ ರಸವತ್ಕವಿಗಳ ಯುಗ ಮುಗಿದುಹೋಯಿತೆಂಬ ಖೇದವಿದೆ. ಮಾತ್ರವಲ್ಲ, ಈಚಿನ ಕಾಲದಲ್ಲಿ ಅಗ್ಗದ ಶಬ್ದಾಲಂಕಾರಗಳ ಕೋಲಾಹಲ ಮಿತಿಮೀರಿದೆಯೆಂಬ ಕ್ರೋಧವೂ ಇದೆ:
ಯಾತಾಸ್ತೇ ರಸಸಾರಸಂಗ್ರಹವಿಧಿಂ ನಿಷ್ಪೀಡ್ಯ ನಿಷ್ಪೀಡ್ಯ ಯೇ
ವಾಕ್ತತ್ವೇಕ್ಷುಲತಾಂ ಪುರಾ ಕತಿಪಯೇ ತತ್ತ್ವಸ್ಪೃಶಶ್ಚಕ್ರಿರೇ |
ಜಾಯಂತೇऽದ್ಯ ಯಥಾಯಥಂ ತು ಕವಯಸ್ತೇ ತತ್ರ ಸಂತನ್ವತೇ
ಯೇऽನುಪ್ರಾಸಕಠೋರಚಿತ್ರಯಮಕಶ್ಲೇಷಾದಿಶಲ್ಕೋಚ್ಚಯಮ್ || (೨.೪೨)
ಕಾವ್ಯತತ್ತ್ವವನ್ನು ಬಲ್ಲ ವರಕವಿಗಳು ಮಾತೆಂಬ ಕಬ್ಬಿನ ಜಲ್ಲೆಯನ್ನು ಮತ್ತೆ ಮತ್ತೆ ಹಿಂಡಿ ರಸಸಾರವನ್ನು ಸಂಗ್ರಹಿಸಿದರು. ಅವರ ಕಾಲ ಆಗಿಹೋಯಿತು. ಈಗಿರುವ ಕವಿಗಳ ಯೋಗ್ಯತೆಯಾದರೋ ಅಷ್ಟಕ್ಕಷ್ಟೇ. ಇವರು ಒರಟೊರಟಾದ ಶ್ಲೇಷ-ಯಮಕ-ಚಿತ್ರಕವಿತೆಗಳೆಂಬ ಸಿಪ್ಪೆಯನ್ನು ಮಾತ್ರ ಸೃಜಿಸುತ್ತಿದ್ದಾರೆ.
ಈ ಪದ್ಯದ ಸೊಗಸು ನಿರತಿಶಯ. ಇದರ ಮೂಲಕ ಕವಿಯು ಪ್ರಯತ್ನಸಾಧ್ಯವಾದ ಅಗ್ಗದ ಶಬ್ದಚಮತ್ಕಾರಗಳ ಅನಾಹುತವನ್ನು ಮನಮುಟ್ಟುವಂತೆ ಹೇಳಿದ್ದಾನೆ. ಅಷ್ಟೇ ಅಲ್ಲ, ರಸಸಿದ್ಧರಾದ ಭಾಸ, ಕಾಳಿದಾಸ, ಶೂದ್ರಕರಂಥ ಸಹಜಕವಿಗಳ ಕಾಲ ಮುಗಿದುಹೋಗಿ ಪಾಂಡಿತ್ಯವನ್ನೇ ಬಂಡವಾಳವಾಗಿ ಉಳ್ಳ ಮಾಘ, ರತ್ನಾಕರ, ಶಿವಸ್ವಾಮಿಗಳಂಥ ಶುಷ್ಕಕವಿಗಳ ಆರ್ಭಟ ಹೆಚ್ಚಾಗಿದೆಯೆಂಬ ಆತಂಕವನ್ನೂ ಹೊರಗೆಡವಿದ್ದಾನೆ. ಇದನ್ನು ಕುರಿತು ಭಾಮಹ, ಆನಂದವರ್ಧನ ಮೊದಲಾದವರು ಎಚ್ಚರಿಸಿಯೇ ಇದ್ದುದನ್ನು ನಾವಿಲ್ಲಿ ನೆನೆಯಬಹುದು.[2]
ನೂತನಪಥಪ್ರದರ್ಶಕರಾದ ಮಹಾಕವಿಗಳ ಪರಿಯನ್ನು ಹೀಗೆ ಬಣ್ಣಿಸುತ್ತಾನೆ:
ಸರ್ವಃ ಸಂಚರತೇ ಪಥಾ ಪರಕವಿಗ್ರಾಮಸ್ಯ ಕಶ್ಚಿತ್ತು ಸ
ಶ್ಲಾಘ್ಯಃ ಸ್ವಪ್ರತಿಭಾಧನಸ್ಯ ಮಹತಃ ಪ್ರಕ್ರಾಂತದಿವ್ಯವ್ಯಯಃ |
ಯದ್ವಿಶ್ರಾಣಿತನವ್ಯವಾಙ್ಮಯಬೃಹತ್ಸೇತುಪ್ರತಿಷ್ಠಾಜುಷೋ
ವಿಸ್ರಂಭಾದ್ಬಹವಸ್ತರಂತಿ ಗಹನೇ ಸಾರಸ್ವತಸ್ರೋತಸಿ || (೨.೪೩)
ಬೇರೆ ಬೇರೆ ಕವಿಗಳು ರೂಪಿಸಿಕೊಟ್ಟ ಹಾದಿಯಲ್ಲಿ ಹೆಚ್ಚಿನವರು ಸಾಗಿಹೋಗುತ್ತಾರೆ. ಆದರೆ ಯಾರೋ ಒಬ್ಬ ಸತ್ಕವಿ ತನ್ನ ಪ್ರತಿಭಾಧನವನ್ನೇ ಬಂಡವಾಳವಾಗಿಸಿ ಸಾಹಿತ್ಯಸರಿತ್ತಿಗೆ ಸೇತುವೆಯನ್ನು ಕಟ್ಟುತ್ತಾನೆ. ಇದನ್ನು ಬಳಸಿಕೊಂಡು ಮಿಕ್ಕವರೆಷ್ಟೋ ಮಂದಿ ಆಳವಾದ ಆ ನದಿಯನ್ನು ಸುಲಭವಾಗಿ ದಾಟುತ್ತಾರೆ.
ಅಗ್ಗದ ಕವಿಗಳು ತಮ್ಮಂತೆಯೇ ಅಗ್ಗದ ಲೇಖಕರ ರಚನಾಕ್ರಮವನ್ನು ಅನುಸರಿಸುತ್ತಾರೆ. ಆದರೆ ಒಳ್ಳೆಯ ಕವಿಗಳು ಮಹಾಕವಿಗಳ ಮಾರ್ಗಕ್ಕೆ ಮನ್ನಣೆ ನೀಡುತ್ತಾರೆ. ಮಹಾಕವಿಗಳಾದರೋ ಮತ್ತಾರ ಮಾರ್ಗದರ್ಶನಕ್ಕೂ ಕಾಯದೆ ತಮ್ಮದಾದ ಹೊಸ ಹಾದಿಯನ್ನು ರೂಪಿಸಿಕೊಳ್ಳುತ್ತಾರೆ. ಮುಂದೆ ಇದೇ ಮಹತ್ತಾದ ಸಂಪ್ರದಾಯವಾಗುತ್ತದೆ.[3] ಇದನ್ನು ಸಾಹಿತ್ಯೇತಿಹಾಸದ ವಿದ್ಯಾರ್ಥಿಗಳೆಲ್ಲ ಬಲ್ಲರು. ಒಟ್ಟಿನಲ್ಲಿ ಮಹಾಕವಿಗಳು ಸಂಪ್ರದಾಯಪಾಲಕರೆಂಬುದು ಎಷ್ಟು ಸತ್ಯವೋ ಅವರು ಸಂಪ್ರದಾಯದ ಸಾರ್ಥಕೋಲ್ಲಂಘನವನ್ನು ಮಾಡುವರೆಂಬುದೂ ಅಷ್ಟೇ ಸತ್ಯ. ವಸ್ತುತಃ ಲಕ್ಷಣಗಳು ರೂಪುಗೊಳ್ಳುವುದೇ ಇಂಥವರ ಲಕ್ಷ್ಯಗಳಿಂದ. ಇದನ್ನು ಆನಂದವರ್ಧನನಂಥ ಪ್ರಾಜ್ಞರು ಗಮನಿಸಿಯೂ ಇದ್ದಾರೆ.[4]
ತಿಣುಕಿ ತಿಣುಕಿ ಪದ್ಯಗಳನ್ನು ಬರೆಯುವವರ ಬಗೆಗೆ ಮಂಖನ ತಿರಸ್ಕಾರ ಹೀಗಿದೆ:
ಪರಶ್ಲೋಕಾನ್ ಸ್ತೋಕಾನ್ ಪ್ರತಿದಿವಸಮಭ್ಯಸ್ಯ ನನು ಯೇ
ಶತುಷ್ಪಾದೀಂ ಕುರ್ಯುರ್ಬಹವ ಇವ ತೇ ಸಂತಿ ಕವಯಃ |
ಅವಿಚ್ಛಿನ್ನೋದ್ಗಚ್ಛಜ್ಜಲಧಿಲಹರೀರೀತಿಸುಹೃದಃ
ಸುಹೃದ್ಯಾ ವೈಶದ್ಯಂ ದಧತಿ ಕಿಲ ಕೇಷಾಂಚನ ಗಿರಃ || (೨.೫೧)
ಅನ್ಯಕವಿಗಳ ಹಲಕೆಲವು ಶ್ಲೋಕಗಳನ್ನು ಅನುದಿನವೂ ಅಭ್ಯಸಿಸಿ ಹೇಗೋ ನಾಲ್ಕು ಸಾಲು ಹೆಣೆಯುವ ಕವಿಗಳು ಬಹಳಷ್ಟು ಜನರಿದ್ದಾರೆ. ಎಲ್ಲಿಯೋ ಕೆಲವು ಮಂದಿಯ ಮಾತುಗಳು ಮಾತ್ರ ಸಾಗರದಿಂದ ಅವಿಚ್ಛಿನ್ನವಾಗಿ ಮೇಲೇಳುವ ತೆರೆಗಳ ಪರಂಪರೆಯಂಥ ಸೊಗಸನ್ನು ಹೊಂದಿರುತ್ತವೆ.
ಇಲ್ಲಿ ಕವಿಯು ಪ್ರಯತ್ನಕವಿತೆಯ ಮಿತಿಯನ್ನು ಹೇಳುತ್ತಿದ್ದಾನೆ. ಕವಿಶಿಕ್ಷಾದೃಷ್ಟಿಯಿಂದಲೂ ಇದಕ್ಕೆ ಮಹತ್ತ್ವವುಂಟು. ಪದಸಂಪದವನ್ನು ಕೂಡಿಸಿಕೊಂಡು, ಕಲ್ಪನೆಗಳನ್ನು ಬೆಳೆಸಿಕೊಂಡ ಬಳಿಕ ಅವನ್ನೆಲ್ಲ ಛಂದಸ್ಸಿನ ಅಚ್ಚಿನಲ್ಲಿ ಎರಕ ಹುಯ್ಯುವ ಕೌಶಲ ಪ್ರತಿಭೆ ಮತ್ತು ಪಾಂಡಿತ್ಯಗಳೆರಡೂ ಪರಿಶ್ರಮದಿಂದ ಪರಿಷ್ಕೃತವಾದಾಗ ಮಾತ್ರ ಫಲಿಸುತ್ತದೆ. ಆಗ ಆಲೋಚನೆಗಳು ಧಾರಾಕಾರವಾಗಿ ಪದ್ಯರೂಪದಲ್ಲಿ ಮೈದಾಳುತ್ತವೆ. ಇಂಥ ಸಾಧನೆಯಿಲ್ಲದ ಕವಿಗಳು ಸುಮ್ಮನೆ ಹೆಣಗಿದರೆ ಪ್ರಯೋಜನವಿಲ್ಲ.
ಮಂಖನು ಈ ಪ್ರಕರಣದಲ್ಲಿ ಮತ್ತೂ ಹತ್ತಾರು ಪದ್ಯಗಳನ್ನು ಕಿವಿ ಜಕ್ಕುಲಿಸುವ ಪದಗಳ ಮೂಲಕ, ಮನಸ್ಸನ್ನು ಮುಟ್ಟುವ ದೃಷ್ಟಾಂತಗಳ ಮೂಲಕ ಸಿಂಗರಿಸಿ ಮೇಲ್ಕಾಣಿಸಿದ ಅಭಿಪ್ರಾಯಗಳನ್ನೇ ಒತ್ತಿ ಒತ್ತಿ ಹೇಳುತ್ತಾನೆ. ಇವುಗಳಲ್ಲಿ ತತ್ತ್ವದೃಷ್ಟಿಯಿಂದ ಹೊಸತಿಲ್ಲದ ಕಾರಣ ಈ ಕೆಲವು ಉಲ್ಲೇಖಗಳಿಂದಲೇ ವಿರಮಿಸಬಹುದು.
[1] ರಸಸಮಾಹಿತಚೇತಸಃ ಪ್ರತಿಭಾನವತಃ ಕವೇರಹಂಪೂರ್ವಿಕಯಾ ಪರಾಪತಂತಿ || (ಧ್ವನ್ಯಾಲೋಕ, ೨.೧೬ ವೃತ್ತಿ)
[2] ಕಾವ್ಯಾಲಂಕಾರ, ೨.೧೮–೨೦; ಧ್ವನ್ಯಾಲೋಕ, ೨.೧೫, ೨.೧೬ ರಲ್ಲಿಯ ಸಂಗ್ರಹಶ್ಲೋಕ
[3] ಕಸ್ಯಚಿದೇವ ಕದಾಚಿದ್ದಯಯಾ ವಿಷಯಂ ಸರಸ್ವತೀ ವಿದುಷಃ | ಘಟಯತಿ ಕಮಪಿ ತಮನ್ಯೋ ವ್ರಜತಿ ಜನೋ ಯೇನ ವೈದಗ್ಧೀಮ್ || (ದಶರೂಪಕ, ೧.೩)
[4] ವಾಲ್ಮೀಕಿವ್ಯಾಸಮುಖ್ಯಾಶ್ಚ ಯೇ ಪ್ರಖ್ಯಾತಾಃ ಕವೀಶ್ವರಾಃ | ತದಭಿಪ್ರಾಯಬಾಹ್ಯೋऽಯಂ ನಾಸ್ಮಾಭಿರ್ದರ್ಶಿತೋ ನಯಃ || (ಧ್ವನ್ಯಾಲೋಕ, ೩.೧೯ ವೃತ್ತಿಯಲ್ಲಿಯ ಪರಿಕರಶ್ಲೋಕ)
To be continued.