ಹರಿಚಂದ್ರ
ಈತನ “ಧರ್ಮಶರ್ಮಾಭ್ಯುದಯ”ವೆಂಬ ಕಾವ್ಯದ ಮೊದಲಿಗೇ ಬರುವ ಕೆಲವೊಂದು ವಿಚಾರಗಳು ಮನನೀಯ. ಇಲ್ಲಿ ಕಲ್ಪನೆಯಿದ್ದೂ ಶಿಲ್ಪನವಿಲ್ಲದ ಮತ್ತು ಶಿಲ್ಪನವಿದ್ದೂ ಕಲ್ಪನೆಯಿಲ್ಲದ ಎರಡು ಬಗೆಯ ವಿಪರ್ಯಾಸಗಳನ್ನು ಕವಿ ಮನಗಾಣಿಸಿದ್ದಾನೆ:
ಅರ್ಥೇ ಹೃದಿಸ್ಥೇऽಪಿ ಕವಿರ್ನ ಕಶ್ಚಿ-
ನ್ನಿರ್ಗ್ರಂಥಿಗೀರ್ಗುಂಫವಿಚಕ್ಷಣಃ ಸ್ಯಾತ್ |
ಜಿಹ್ವಾಂಚಲಸ್ಪರ್ಶಮಪಾಸ್ಯ ಪಾತುಂ
ಶ್ವಾ ನಾನ್ಯಥಾಂಭೋ ಘನಮಪ್ಯವೈತಿ || (೧.೧೪)
ಕೆಲವು ಕವಿಗಳಿಗೆ ಕಾವ್ಯಾರ್ಥವು ಅಂತರಂಗದಲ್ಲಿ ಸ್ಫುಟವಾಗಿದ್ದರೂ ಅದನ್ನು ತೊಡಕಿಲ್ಲದೆ ಪದ್ಯರೂಪದಲ್ಲಿ ಹವಣಿಸುವ ಕಲೆ ತಿಳಿದಿರುವುದಿಲ್ಲ. ಎಷ್ಟೇ ನೀರಿದ್ದರೂ ನಾಯಿಗೆ ನಾಲಗೆಯ ತುದಿಯಿಂದ ನೆಕ್ಕುವುದಲ್ಲದೆ ಹೀರುವುದಕ್ಕೆ ಸಾಧ್ಯವಿಲ್ಲ.
ಇದೊಂದು ಮಾರ್ಮಿಕವಾದ ದೃಷ್ಟಾಂತದೊಡನೆ ಕೂಡಿಕೊಂಡ ಆನುಭವಿಕಸತ್ಯ. ಇದಕ್ಕೆ ಮುಖ್ಯಕಾರಣ ಕವಿಗಳಿಗೆ ಪ್ರತಿಭೆಯಿದ್ದೂ ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಸಿದ್ಧಿಸದಿರುವುದೇ. ರಾಜಶೇಖರನು ಹೇಳುವಂತೆ ಎಲ್ಲರೂ ಪ್ರಾಯಿಕವಾಗಿ ಹೃದಯಕವಿಗಳೇ; ಅಂದರೆ, ಅಂತರಂಗದಲ್ಲಿ ಕವಿಮನೋಧರ್ಮವನ್ನು ಹೊಂದಿದವರೇ.[1] ಆದರೆ ಅಂತರಂಗದ ಅಭಿಪ್ರಾಯಗಳು ಅನರ್ಗಳವಾಗಿ ಹೊರಹೊಮ್ಮಲು ಪ್ರತ್ಯೇಕವಾದ ಪ್ರಯತ್ನ ಅತ್ಯವಶ್ಯ.[2] ಇದನ್ನು ನಮ್ಮ ಪೂರ್ವಕವಿಗಳು ನಿರಪವಾದವೆಂಬಂತೆ ಚೆನ್ನಾಗಿ ಸಿದ್ಧಿಸಿಕೊಂಡಿದ್ದರು. ಆದರೆ ಈಚಿನ ಕವಿಗಳಲ್ಲಿ ಇದರ ಕೊರತೆ ಎದ್ದುಕಾಣುವಂತಿದೆ. ಕವಿಶಿಕ್ಷಾಕಾರರನ್ನು ಪರಿಶೀಲಿಸಿದಾಗ ನಮ್ಮ ಪೂರ್ವಿಕರು ಕವಿಗಳಾಗ ಬಯಸುವವರ ಇಂಥ ಕೊರತೆಗಳನ್ನು ಕಳೆಯಲು ಅದೆಷ್ಟು ರೀತಿಗಳಿಂದ ನೆರವಾಗುತ್ತಿದ್ದರೆಂದು ತಿಳಿಯುತ್ತದೆ.
ಇದೇ ಸಂಗತಿಯ ಮತ್ತೊಂದು ಮುಖವನ್ನು ಪರಿಕಿಸೋಣ:
ಹೃದ್ಯಾರ್ಥವಂಧ್ಯಾ ಪದಬಂಧುರಾಪಿ
ವಾಣೀ ಬುಧಾನಾಂ ನ ಮನೋ ಧಿನೋತಿ |
ನ ರೋಚತೇ ಲೋಚನವಲ್ಲಭಾಪಿ
ಸ್ನುಹೀಕ್ಷರತ್ಕ್ಷೀರಸರಿನ್ನರೇಭ್ಯಃ || (೧.೧೫)
ಒಳ್ಳೆಯ ಅರ್ಥಸ್ವಾರಸ್ಯವಿಲ್ಲದ ಮಾತು ಸೊಗಸಾದ ಪದಗಳಿಂದ ಕೂಡಿದ್ದರೂ ಅದು ಸಹೃದಯರ ಮನಸ್ಸನ್ನು ರಂಜಿಸುವುದಿಲ್ಲ. ಕಳ್ಳಿಯ ಹಾಲು ನೋಟಕ್ಕೆಷ್ಟು ಹಿತವೆನಿಸಿದರೂ ನಾಲಗೆಗೆ ಸವಿಯೆನಿಸೀತೇ?
ಇಲ್ಲಿ ಕವಿಯು ಅಂತರಂಗಪರಿಪಾಕದಿಂದ ಸಾರ್ಥಕವಾಗಿ ಹೊಮ್ಮದ ಕವಿತೆ ಅದೆಷ್ಟು ಉಕ್ತಿವೈಚಿತ್ರ್ಯವನ್ನು ಹೊಂದಿದ್ದರೂ ಸುಂದರವೆನಿಸದೆಂಬುದನ್ನು ಮತ್ತೊಂದು ಮಾರ್ಮಿಕದೃಷ್ಟಾಂತದಿಂದ ಮನದಟ್ಟಾಗಿಸಿದ್ದಾನೆ.
ಹೀಗೆ ಈ ಎರಡು ಪದ್ಯಗಳಲ್ಲಿ ಕ್ರಮವಾಗಿ ಸ್ವರೂಪವಿದ್ದೂ ರೂಪವಿಲ್ಲದ ಹಾಗೂ ರೂಪವಿದ್ದೂ ಸ್ವರೂಪವಿಲ್ಲದ ಕಾವ್ಯಗಳ ವೈಫಲ್ಯವನ್ನು ಚರ್ಚಿಸಿದ್ದಾನೆ. ಇದನ್ನು ನಮ್ಮ ಆಲಂಕಾರಿಕರು ಸ್ಪಷ್ಟಪಡಿಸಿದ್ದರೂ ಅದು ಇಲ್ಲಿಯ ಪರಿಣಾಮಕಾರಿಯಾದ ದೃಷ್ಟಾಂತಗಳ ಮೂಲಕ ಮತ್ತಷ್ಟು ಆಪ್ಯಾಯನವೆನಿಸಿದೆ.
ಜಯಾನಕ
ಜಯಾನಕನು ತನ್ನ “ಪೃಥ್ವೀರಾಜವಿಜಯ”ವೆಂಬ ಐತಿಹಾಸಿಕಕಾವ್ಯದಲ್ಲಿ ಕಾವ್ಯವಿಮರ್ಶನಪದ್ಧತಿಯನ್ನು ಕುರಿತು ಒಂದು ಒಳನೋಟವನ್ನು ಹೀಗೆ ನೀಡುತ್ತಾನೆ:
ವಿಶೋಧನೇ ಸತ್ಕವಿಭಾರತೀನಾಂ
ಶುದ್ಧೋऽಪಿ ಪಾಂಡಿತ್ಯಗುಣೋ ನ ಯೋಗ್ಯಃ |
ನ ಕ್ಷಿಪ್ಯತೇ ಭಸ್ಮ ವಿಶುದ್ಧಿಕಾಮೈ-
ರಪಾಂ ಹಿ ಪಾತವ್ಯತಯೋದ್ಧೃತಾನಾಮ್ || (೧.೧೪)
ಸತ್ಕವಿಗಳ ಕೃತಿಗಳನ್ನು ಶೋಧಿಸುವಾಗ ಪಾಂಡಿತ್ಯವು ಒಳ್ಳೆಯದೇ ಆಗಿದ್ದರೂ ಅದನ್ನೊಂದನ್ನೇ ಅಳತೆಗೋಲಾಗಿ ಬಳಸಬಾರದು. ಕುಡಿಯಬೇಕಿರುವ ನೀರನ್ನು ಶುದ್ಧಮಾಡಲು ಅದಕ್ಕೆ ಬೂದಿಯನ್ನು ನೇರವಾಗಿ ಸುರಿಯುವುದಿಲ್ಲವಷ್ಟೆ.
ಇಲ್ಲಿ ಕವಿಯು ಕೇವಲಪಾಂಡಿತ್ಯದಿಂದ ಕಾವ್ಯವಿಮರ್ಶನ ಸಿದ್ಧಿಸದೆಂದು ಹೇಳುತ್ತಿದ್ದಾನೆ. ಬೂದಿಯನ್ನು ಬಳಸಿ ಕೊಳಕಾದ ಪಾತ್ರೆಗಳನ್ನು ತೊಳೆಯುವ ಕ್ರಮ ಲೋಕಪ್ರಸಿದ್ಧ. ಆದರೆ ಅದನ್ನೇ ನೇರವಾಗಿ ಬಳಸಿ ನೀರನ್ನು ಶುದ್ಧೀಕರಿಸಲು ಸಾಧ್ಯವಿಲ್ಲವಷ್ಟೆ. ಈ ಅಂಶವನ್ನೇ ಆನಂದವರ್ಧನನು “ಧ್ವನ್ಯಾಲೋಕ”ದ ಮೊದಲಿಗೆ ಹೇಳಿದ್ದಾನೆ.[3] ಪಾಂಡಿತ್ಯವೇನಿದ್ದರೂ ಕಾವ್ಯನಿರ್ಮಾಣಕ್ಕೆ ಅನಿವಾರ್ಯವಾದ ವ್ಯುತ್ಪತ್ತಿಭಾಗದ ಘಟಕಗಳನ್ನು ಹವಣಿಸಲು, ಶೋಧಿಸಲು ಮತ್ತು ಪುಷ್ಟಿಗೊಳಿಸಲು ನೆರವಾಗುತ್ತದೆ. ಇದನ್ನು ಉಂಡುಂಡೆಯಾಗಿ ಕಾವ್ಯದ ಪರಿಷ್ಕಾರ ಮತ್ತು ವಿಮರ್ಶನಗಳಿಗೆ ಬಳಸಿಕೊಳ್ಳುವುದು ಯುಕ್ತವಾಗದು. ಉದಾಹರಣೆಗೆ: ಪ್ರಹಸನವೊಂದರಲ್ಲಿ ಕೆಲವು ಪಾತ್ರಗಳು ವ್ಯಾಕರಣಶುದ್ಧಿಯಿಲ್ಲದೆ ಮಾತನಾಡಿದಾಗ ಅದು ಪಾತ್ರೌಚಿತ್ಯದ ಕಾರಣ ಲೋಕವೆಂಬ ಪ್ರಮಾಣದ ಮೂಲಕ ರಸಾವಹವೇ ಆಗುತ್ತದೆ. ಇಲ್ಲಿ ವ್ಯಾಕರಣಶಾಸ್ತ್ರವು ಅಂಥ ಮಾತುಗಳ ತಿದ್ದುಗೆಗೆ ಮುಂದಾದರೆ ಅದು ಅನುಚಿತ ಮತ್ತು ರಸನಾಶಕ. ಇದೇ ಯುಕ್ತಿಯನ್ನು ಮಿಕ್ಕೆಲ್ಲ ಶಾಸ್ತ್ರಗಳಿಗೂ ಅನ್ವಯಿಸಿಕೊಳ್ಳಬೇಕು.
ಮಂಖ
ಮಂಖನು ಕಾಶ್ಮೀರದ ವಿದ್ವತ್ಕವಿಗಳಲ್ಲಿ ಪ್ರಮುಖ. ಈತನ “ಶ್ರೀಕಂಠಚರಿತ”ದ ಎರಡನೆಯ ಸರ್ಗವೆಲ್ಲ ಪ್ರಾಯಶಃ ಸುಜನಸ್ತುತಿ, ದುರ್ಜನನಿಂದೆ ಮತ್ತುಸತ್ಕಾವ್ಯಗಳ ಪ್ರಶಂಸೆಗಳಿಗಾಗಿ ಮೀಸಲು. ಇವನು ಉದ್ದಂಡಸಮಾಸಗಳನ್ನು ಪೋಣಿಸಿ ಆಡಂಬರವಾಗಿ ಬರೆಯುವುದಲ್ಲದೆ ಅಲ್ಲಲ್ಲಿ ಸೊಗಸಾದ ದೃಷ್ಟಾಂತಗಳನ್ನು ಹುದುಗಿಸಿ ತನ್ನ ವಿಚಾರವನ್ನು ತಿಳಿಸುತ್ತಾನೆ. ಇಂತಾದರೂ ಮೌಲಿಕವಾದ ವಿಷಯವಿಲ್ಲಿ ಮೃಗ್ಯ. ಹೊಸತನವೂ ಬಲುಮಟ್ಟಿಗೆ ತೋರದು. ಆದರೆ ವಿಸ್ತೃತವಾದ ವಿದ್ವತ್ಕಾವ್ಯವನ್ನು ಬರೆದವನಾದ ಕಾರಣ ಅವನ ಅನುಭವವಾಕ್ಯಗಳಿಗೆ ಬೆಲೆಯುಂಟು. ಅಂಥ ಕೆಲವೊಂದು ಮಾತುಗಳನ್ನು ಪರಿಶೀಲಿಸೋಣ.
ಎಂಥ ಒಳ್ಳೆಯ ಕಾವ್ಯಕ್ಕೂ ವಿಮರ್ಶನವನ್ನು ತಾಳಿಕೊಳ್ಳುವ ಅಂತಃಸತ್ತ್ವವಿರಬೇಕು. ಇದನ್ನು ಮಂಖ ಹೀಗೆ ಹೇಳುತ್ತಾನೆ:
ತತ್ತದ್ವಿಚಾರೋಪನಿಷದ್ವಿಮೃಷ್ಟಂ
ಕಾವ್ಯಂ ಕವೇಃ ಪುಷ್ಯತಿ ನಿಸ್ತುಷತ್ವಮ್ |
ನ ರತ್ನಮಾಯಾತಿ ಹಿ ನಿರ್ಮಲತ್ವಂ
ಶಾಣೋಪಲಾರೋಪಣಮಂತರೇಣ || (೨.೭)
ಬಗೆಬಗೆಯ ವಿಚಾರರಹಸ್ಯಗಳ ವಿಮರ್ಶೆಗೆ ಒಳಪಡಿಸಿದಾಗಲೇ ಕವಿಯ ಕೃತಿಯು ಸಿಪ್ಪೆ-ಸಿವುಡುಗಳನ್ನು ಕಳೆದುಕೊಂಡು ಗಟ್ಟಿಯಾಗುತ್ತದೆ. ಮಣಿಯನ್ನು ಒರೆಗಲ್ಲಿಗೊಡ್ಡದೆ ಅದಕ್ಕೆ ಹೊಳಪು ಮೂಡುವುದಿಲ್ಲ.
ಕಾವ್ಯವು ಹಲವಾರು ವಿಚಾರಕೋನಗಳಿಂದ ಪರಿಶೀಲಿತವಾದಾಗಲೂ ಅದರಲ್ಲಿ ಧ್ವನಿಸ್ವಾರಸ್ಯಗಳು ಒಡಮೂಡಬೇಕು. ಅಂದರೆ, ವಿಭಿನ್ನಮನೋಧರ್ಮಗಳ ವ್ಯಕ್ತಿಗಳು ಪರಿಕಿಸಿದಾಗಲೂ ಸತ್ಕೃತಿಯಲ್ಲಿ ಸ್ವಾರಸ್ಯ ತೋರಿಕೊಳ್ಳಬೇಕು. ಹೀಗೆ ವಿಚಾರಸಹವಲ್ಲದ ಕೃತಿ ಭಾವಬಲ್ಬಜವಾಗಿ ಅಸ್ತಂಗತಿಸುತ್ತದೆ. ಇಂತಾಗದಿರಲು ಕವಿಗೆ ವ್ಯಾಪಕವಾದ ವ್ಯುತ್ಪತ್ತಿಯಿರಬೇಕು; ವಿಭಿನ್ನಸಾಧ್ಯತೆಗಳನ್ನು ಗ್ರಹಿಸಿ ವಿಸ್ತರಿಸುವ ಪ್ರಜ್ಞೆ-ಔದಾರ್ಯಗಳೂ ಇರಬೇಕು. ಇಂಥ ವಿಷಯಗಳನ್ನು ನಮ್ಮ ಆಲಂಕಾರಿಕರು ನೇರವಾಗಿ ಪ್ರಸ್ತಾವಿಸಿಲ್ಲ. ಹೀಗಾಗಿ ಮಂಖನ ಈ ಮಾತಿಗೆ ಮಿಗಿಲಾದ ಮಹತ್ತ್ವವಿದೆ.
ಎಷ್ಟೋ ಬಾರಿ ಒಳ್ಳೆಯ ಕಾವ್ಯಗಳಿಗೇ ತೀವ್ರವಾದ ವಿಮರ್ಶೆ ಎದುರಾಗುತ್ತದೆ. ಅದಕ್ಕಾಗಿ ವ್ಯಥಿಸಬೇಕೆಂಬುದು ಮಂಖನ ಮತ:
ಸೂಕ್ತೌ ಶುಚಾವೇವ ಪರೇ ಕವೀನಾಂ
ಸದ್ಯಃ ಪ್ರಮಾದಸ್ಖಲಿತಂ ಲಭಂತೇ |
ಅಧೌತವಸ್ತ್ರೇ ಚತುರಂ ಕಥಂ ವಾ
ವಿಭಾವ್ಯತೇ ಕಜ್ಜಲಬಿಂದುಪಾತಃ || (೨.೯)
ಒಳ್ಳೆಯ ಕವಿಗಳ ನಿರ್ಮಲಕಾವ್ಯಗಳಲ್ಲಿಯೇ ಜನರು ಕಾವ್ಯದೋಷಗಳನ್ನು ಒಡನೆಯೇ ಗುರುತಿಸುತ್ತಾರೆ. ಕೊಳಕಾದ ಬಟ್ಟೆಗೆ ಅಂಟಿದ ಮಸಿಯನ್ನು ಯಾರು ತಾನೆ ಬೇಗ ಗುರುತಿಸಬಲ್ಲರು?
ಗುಣಾಧಿಕ್ಯವಿರುವ ಕೃತಿಯಲ್ಲಿಯೇ ದೋಷಗಳನ್ನು ನಿಚ್ಚಳವಾಗಿ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ಅಲಂಕಾರಶಾಸ್ತ್ರದ ದೋಷಪ್ರಕರಣದಲ್ಲಿ ಮಹಾಕವಿಗಳೆಲ್ಲ ಸೆರೆಯಾದರೆ ಅದಕ್ಕಾಗಿ ಕಾವ್ಯಮೀಮಾಂಸಕರನ್ನು ಹಳಿಯಬೇಕಿಲ್ಲ. ಅವರ ಉದ್ದೇಶವು ಕಾವ್ಯದೋಷಗಳ ರೂಪ-ಸ್ವರೂಪಗಳನ್ನು ನಿಷ್ಕೃಷ್ಟವಾಗಿ ನಿರೂಪಿಸುವುದಲ್ಲದೆ ಮಹಾಕವಿಗಳಲ್ಲಿ ರಂಧ್ರಾನ್ವೇಷಣ ಮಾಡುವುದಲ್ಲ. ಇದನ್ನು ಮನಗಂಡರೆ ಸತ್ಕವಿಗಳ ಮುನಿಸು ಇಳಿಯುವುದಲ್ಲದೆ ಸಹೃದಯರಿಗೂ ಸಂಕಟ ತಪ್ಪುವುದು.
ಮಂಖನ ಪ್ರಕಾರ ಕಾವ್ಯಸಂವೇದನೆ ಸಹೃದಯರಿಗೆ ಮಾತ್ರ ಸಾಧ್ಯ:
ವಿನಾ ನ ಸಾಹಿತ್ಯವಿದಾ ಪರತ್ರ
ಗುಣಃ ಕಥಂಚಿತ್ ಪ್ರಥತೇ ಕವೀನಾಮ್ |
ಆಲಂಬತೇ ತತ್ಕ್ಷಣಮಂಭಸೀವ
ವಿಸ್ತಾರಮನ್ಯತ್ರ ನ ತೈಲಬಿಂದುಃ || (೨.೧೨)
ಸುಕವಿಗಳ ಗುಣವಿಶೇಷಗಳನ್ನು ಸಹೃದಯರಲ್ಲದೆ ಮತ್ತಿತರರು ಚೆನ್ನಾಗಿ ಗ್ರಹಿಸಿ ವಿವರಿಸಲಾರರು. ಎಣ್ಣೆಯ ಹನಿ ನೀರಿನಲ್ಲಿ ಬಿದ್ದಾಗ ಮಾತ್ರ ವಿಸ್ತಾರವನ್ನು ಹೊಂದುವುದಲ್ಲದೆ ಬೇರೆಡೆಯಲ್ಲ.
ಆನಂದವರ್ಧನನಿಂದ ಮೊದಲ್ಗೊಂಡು ಅನೇಕರು ಕಾವ್ಯದ ಸಂವೇದನೆ ಮತ್ತು ಪ್ರಸಾರಗಳಲ್ಲಿ ಸಹೃದಯರ ಪಾತ್ರವನ್ನು ಎತ್ತಿಹಿಡಿದಿದ್ದಾರೆ. ಇದೇ ತತ್ತ್ವವನ್ನು ಮಂಖ ಮತ್ತಷ್ಟು ಆಕರ್ಷಕವಾಗಿ ತಿಳಿಸಿದ್ದಾನೆ.
ಮುಂದೆ ಚಿತ್ರಕಾವ್ಯದಲ್ಲಿಯೂ ಪ್ರಸಾದಗುಣವನ್ನು ಕಾಯ್ದುಕೊಳ್ಳಬೇಕೆಂದು ಹೀಗೆ ಪ್ರತಿಪಾದಿಸುತ್ತಾನೆ:
ಸದ್ವೃತ್ತವಿಶ್ರಾಂತಿಮತೀ ನ ಜಾತು
ಕೃಚ್ಛ್ರೇಷು ಪಾತ್ರಂ ಪರುಷಾಕ್ಷರಾಣಾಮ್ |
ಸತ್ಪುಣ್ಯಭಾಜಃ ಸತತಾನುವೃತ್ತಾ
ಕಸ್ಯಾಪ್ಯಹೋ ಸದ್ಗೃಹಿಣೀವ ವಾಣೀ || (೨.೧೩)
ಪುಣಾತ್ಮನಾದ ಯಾವನೋ ಒಬ್ಬನ ಸದಾಚಾರಿಣಿಯಾದ ಧರ್ಮಪತ್ನಿ ಎಂಥ ಕಷ್ಟಗಳಲ್ಲಿಯೂ ಒರಟು ಮಾತನ್ನಾಡುವುದಿಲ್ಲ. ಅಂತೆಯೇ ಯಾವನೋ ಒಬ್ಬ ಮಹಾಕವಿಯ ವಾಣಿ ಒಳ್ಳೆಯ ಛಂದಸ್ಸುಗಳಲ್ಲಿ ನೆಲೆಗೊಂಡು ದುಷ್ಕರಕವಿತೆಯನ್ನು ರೂಪಿಸುವ ಕಾಲದಲ್ಲಿಯೂ ಕರ್ಕಶತೆಯನ್ನು ಹೊಂದುವುದಿಲ್ಲ.
ಮೂಲದ “ಕೃಚ್ಛ್ರ” ಎಂಬ ಮಾತಿಗೆ ವ್ಯಾಖ್ಯಾನಕಾರನಾದ ಜೋನರಾಜನು ಚಿತ್ರಕಾವ್ಯವೆಂದು ಅರ್ಥ ಮಾಡಿದ್ದಾನೆ. ಈ ಬಗೆಯ ಪರಿಶ್ರಮಸಾಧ್ಯವಾದ ರಚನೆಗಳಲ್ಲಿ ಅರ್ಥಸ್ವಾರಸ್ಯಕ್ಕಿಂತ ಶಬ್ದಸಂಯೋಜನವೇ ಮಿಗಿಲು. ಆದುದರಿಂದ ಆನಂದವರ್ಧನನು ಇದನ್ನು ಉಪಚಾರಕ್ಕೆ ಮಾತ್ರ ಕಾವ್ಯವೆಂದು ಹೆಸರಿಸುತ್ತಾನೆ. ಆದರೆ ಪರವರ್ತಿಗಳಾದ ಭೋಜ, ಮಮ್ಮಟ, ಹೇಮಚಂದ್ರ ಮುಂತಾದವರೆಲ್ಲ ಚಿತ್ರಕವಿತೆ ಅಧಮವೇ ಆದರೂ ಅದಕ್ಕೆ ಕಾವ್ಯತ್ವ ಉಂಟೆಂದು ಸಾಧಿಸುತ್ತಾರೆ. ಜಗನ್ನಾಥನು ಇದಕ್ಕೆ ಮತ್ತೂ ಮಿಗಿಲಾದ ಸ್ಥಾನವನ್ನು ಕಲ್ಪಿಸುತ್ತಾನೆ. ಕವಿಕರ್ಣಪೂರನು ಚಿತ್ರಕಾವ್ಯದ ವಸ್ತು ದೈವಸಂಬಂಧಿಯಾದರೆ ಕಬ್ಬಿನ ಗಿಣ್ಣನ್ನಗಿದಂತೆ ಅಲ್ಪಸ್ವಲ್ಪವಾದರೂ ರಸವೊಸರುವುದೆಂದು ಅಭಿಪ್ರಾಯಿಸುತ್ತಾನೆ.[4] ಇದನ್ನೆಲ್ಲ ಪರಿಭಾವಿಸಿದಾಗ ಮಂಖನ ಮಾತೇ ನಿರ್ಣಾಯಕವೆನಿಸುತ್ತದೆ. ಶ್ರುತಿಪೇಶಲವಾದ ಪದಪದ್ಧತಿಯಿರುವಲ್ಲಿ, ಅರ್ಥಕ್ಲೇಶಕ್ಕೆ ಎಡೆಯಾಗದಿದ್ದಲ್ಲಿ ಚಿತ್ರಕವಿತೆಗೂ ಚೆಲುವು ಸಲ್ಲುತ್ತದೆ. ಚಿತ್ರಕವಿತೆಯನ್ನು ತನ್ನ ಕೃತಿಯಲ್ಲಿ ಸ್ವಯಂ ರಚಿಸದಿದ್ದರೂ ಅದನ್ನು ಈ ಮಟ್ಟಿಗೆ ನಿಷ್ಪಾಕ್ಷಿಕವಾಗಿ ನಿರ್ವಚಿಸಿರುವುದು ಮಂಖನ ಪ್ರಜ್ಞೆಗೆ ಒಳ್ಳೆಯ ನಿದರ್ಶನ.
[1] ಕಾವ್ಯಮೀಮಾಂಸಾ, ಐದನೆಯ ಅಧ್ಯಾಯ, ಪು. ೧೯
[2] ಭಟ್ಟತೌತನ ಪ್ರಸಿದ್ಧವಾದ ಸೂಕ್ತಿಯಿಲ್ಲಿ ಸ್ಮರಣೀಯ: ಸ ತತ್ತ್ವದರ್ಶನಾದೇವ ಶಾಸ್ತ್ರೇಷು ಪಠಿತಃ ಕವಿಃ | ದರ್ಶನಾದ್ವರ್ಣನಾಚ್ಚಾಥ ರೂಢಾ ಲೋಕೇ ಕವಿಶ್ರುತಿಃ || ತಥಾ ಹಿ ದರ್ಶನೇ ಸ್ವಚ್ಛೇ ನಿತ್ಯೇऽಪ್ಯಾದಿಕವೇರ್ಮುನೇಃ | ನೋದಿತಾ ಕವಿತಾ ಲೋಕೇ ಯಾವಜ್ಜಾತಾ ನ ವರ್ಣನಾ || (ಕಾವ್ಯಾನುಶಾಸನದಲ್ಲಿ ಉದ್ಧೃತ, ೮.೧)
[3] ಶಬ್ದಾರ್ಥಶಾಸನಜ್ಞಾನಮಾತ್ರೇಣೈವ ನ ವೇದ್ಯತೇ | ವೇದ್ಯತೇ ಸ ತು ಕಾವ್ಯಾರ್ಥತತ್ತ್ವಜ್ಞೈರೇವ ಕೇವಲಮ್ || (ಧ್ವನ್ಯಾಲೋಕ, ೧.೭)
[4] ಚಿತ್ರಂ ನೀರಸಮೇವಾಹುರ್ಭಗವದ್ವಿಷಯಂ ಯದಿ | ತದಾ ಕಿಂಚಿಚ್ಚ ರಸವದ್ಯಥೇಕ್ಷೋಃ ಪರ್ವಚರ್ವಣಮ್ || (ಅಲಂಕಾರಕೌಸ್ತುಭ, ೭.೨೧೪)
To be continued.