ಮಹಾಭಾರತದ ಮತ್ತೊಂದು ಸ್ವಾರಸ್ಯವೆಂದರೆ ಅದರ ಕಥೆಯ ಉದ್ದಕ್ಕೂ ನಿರ್ಣಾಯಕಘಟ್ಟಗಳಲ್ಲಿ ಕೃತಿಕಾರರಾದ ವ್ಯಾಸರು ಬಂದುಹೋಗುತ್ತಾರೆ; ಮುಖ್ಯಪಾತ್ರಗಳನ್ನೆಲ್ಲ ಉದ್ಬೋಧಿಸುತ್ತಾರೆ. ಹೀಗೆ ಕವಿಯೇ ತನ್ನ ಕೃತಿಯಲ್ಲಿ ಪಾತ್ರವಾಗಿ ಬರುವುದು ರಾಮಾಯಣದಲ್ಲಿ ಕೂಡ ಉಂಟು. ಆದರೆ ಅದು ತೀರ ವಿರಳ. ರಾಮಾಯಣದ ಮೊದಲಿಗೆ ಪೀಠಿಕಾಸರ್ಗದಲ್ಲಿ ವಾಲ್ಮೀಕಿಮುನಿಗಳು ಪ್ರವೇಶಿಸಿದ ಬಳಿಕ ಮತ್ತೆ ಕಾಣಿಸಿಕೊಳ್ಳುವುದು ಉತ್ತರಕಾಂಡದಲ್ಲಿಯೇ.[1] ಇಲ್ಲವರು ಸೀತಾರಾಮರ ಜೀವನದಲ್ಲಿ ಪ್ರಮುಖಪಾತ್ರವನ್ನೇ ವಹಿಸುವರಾದರೂ ಅಷ್ಟು ಹೊತ್ತಿಗೆ ಆ ಪಾತ್ರಗಳ ಸಕ್ರಿಯಜೀವನ ಮುಗಿಯುವ ಹಂತಕ್ಕೆ ಬಂದಿರುತ್ತದೆ. ಆದರೆ ವ್ಯಾಸರ ಪಾತ್ರ ಹೀಗಲ್ಲ. ಮಹಾಭಾರತದ ಕೇಂದ್ರಪಾತ್ರಗಳಾದ ಕೌರವ-ಪಾಂಡವರ ತಂದೆಯರೇ ವ್ಯಾಸರ ಸಂತಾನ. ಹೀಗಾಗಿ ಅವರು ಬರೆದ ಕಾವ್ಯ ತಮ್ಮ ಮೊಮ್ಮಕ್ಕಳ ಕಲಹಕೋಲಾಹಲ. ದಾಯಾದಕಲಹದ ದಾವಾನಲದಲ್ಲಿಯೇ ಅವರ ಹೊಕ್ಕುಬಳಕೆ. ಇಂತಿದ್ದರೂ ಅವರೆಲ್ಲಿಯೂ ವ್ಯಾಮೋಹದಿಂದ ವಿವಶರಾಗುವುದಿಲ್ಲ, ಅಧರ್ಮಕ್ಕೆ ಅಂದಳದ ಸೇವೆ ಮಾಡುವುದಿಲ್ಲ.
ಮಹಾಭಾರತದ ಇತಿವೃತ್ತದಲ್ಲಿ ವ್ಯಾಸರ ತೊಡಗಿಕೊಳ್ಳುವಿಕೆ ಎಲ್ಲ ನಿರ್ಣಾಯಕಸಂದರ್ಭಗಳಲ್ಲಿಯೂ ಕಂಡಿದೆ. ಸ್ಥೂಲವಾಗಿ ನೋಡುವುದಾದರೆ ಕೆಲವು ಸಂದರ್ಭಗಳು ಹೀಗಿವೆ:
ಮಕ್ಕಳಿಲ್ಲದೆ ಸತ್ತ ವಿಚಿತ್ರವೀರ್ಯನ ವಿಧವೆಯರಿಗೆ ನಿಯೋಗ ಅನಿವಾರ್ಯವಾದಾಗ, ತಮ್ಮ ತಾಯಿಯ ಅಪೇಕ್ಷೆಯ ಮೇರೆಗೆ ವ್ಯಾಸರೇ ಬಂದು ಅದನ್ನು ನಡಸಿಕೊಡುತ್ತಾರೆ. ಇದು ಅವರ ಮೊದಲ ಪ್ರವೇಶ. ಈ ಘಟನೆಯಿಲ್ಲದಿದ್ದಲ್ಲಿ ಕಥೆಯೂ ಮುಂದುವರಿಯುತ್ತಿರಲಿಲ್ಲ. ಅನಂತರ ಪಾಂಡು-ಮಾದ್ರಿಯರು ಗತಿಸಿ ಕುಂತಿ-ಪಾಂಡವರು ಹಸ್ತಿನಾವತಿಗೆ ಬಂದಿದ್ದಾಗ ಅವರು ಆಗಮಿಸಿ ತಮ್ಮ ತಾಯಿ ಮತ್ತಾಕೆಯ ಸೊಸೆಯಂದಿರನ್ನು ತಪೋವನಕ್ಕೆ ಕರೆದೊಯ್ಯುತ್ತಾರೆ. ಈ ಘಟನೆ ನಡೆಯದಿದ್ದಲ್ಲಿ ಬಹುಶಃ ಸತ್ಯವತಿಯಂಥ ದೂರದರ್ಶಿನಿಯಾದ ರಾಜಮಾತೆ ಕೌರವ-ಪಾಂಡವರ ವೈರವನ್ನು ಮೊಳಕೆಯಲ್ಲಿಯೇ ಚಿವುಟಿಹಾಕುತ್ತಿದ್ದಳೇನೋ! ಇಂತಾದಲ್ಲಿ ಮುಂದಿನ ಕಥೆಯ ಗತಿಯೇನು? ಅರಗಿನ ಮನೆಯ ಪ್ರಮಾದವನ್ನು ತಪ್ಪಿಸಿಕೊಂಡು ಬಂದ ಪಾಂಡವರನ್ನು ಹೆಜ್ಜೆಹೆಜ್ಜೆಗೂ ಮುನ್ನಡಸಲು ವ್ಯಾಸರು ಬರುತ್ತಾರೆ. ಇಂತಲ್ಲವಾದಲ್ಲಿ ಪಾಂಡವರು ದುರ್ಯೋಧನನ ಬೇಹುಗಾರರ ಕುಣಿಕೆಗೆ ಸಿಕ್ಕದೆ ದ್ರೌಪದಿಯನ್ನು ಸಮಷ್ಟಿಯಾಗಿ ಕೈಹಿಡಿಯುವುದೂ ತನ್ಮೂಲಕ ಇಂದ್ರಪ್ರಸ್ಥಕ್ಕೆ ಒಡೆಯರಾಗುವುದೂ ಅಸಂಭಾವ್ಯವೆನಿಸುತ್ತಿತ್ತು. ರಾಜಸೂಯದ ಅಧ್ವರ್ಯುವಾದ ವ್ಯಾಸರು ಅನಂತರ ಯುಧಿಷ್ಠಿರನಿಗೆ ಅವನಿಂದಲೇ ಮುಂದೊಮ್ಮೆ ಮಹಾಯುದ್ಧಕ್ಕೆ ಬೀಜಾಂಕುರ ಆಗುತ್ತದೆಂದು ಎಚ್ಚರಿಕೆ ಹೇಳಿದ್ದರು. ಇದರಿಂದಾಗಿಯೇ ಅವನು ಯಾರೊಡನೆಯೂ ವಿರೋಧದ ಮಾತನಾಡದೆ ಅನುನಯಿಸಿಕೊಂಡು ಹೋಗುವುದಾಗಿ ಶಪಥ ಮಾಡಿದ್ದ. ಈ ಕಾರಣದಿಂದಲೇ ದ್ಯೂತ, ಅನುದ್ಯೂತ, ದ್ರೌಪದಿಯ ಅಪಮಾನ ಮುಂತಾದ ಎಲ್ಲ ಸಂದರ್ಭಗಳಲ್ಲಿಯೂ ತುಟಿ ಪಿಟಕ್ಕೆನ್ನದೆ ಸುಮ್ಮನಿದ್ದ. ಹೀಗಾಗಿಯೇ ಕಥೆ ಮುಂದುವರಿಯಿತು. ಪಾಂಡವರ ವನವಾಸದಲ್ಲಿ ವ್ಯಾಸರು ಹಲವು ಬಾರಿ ಬರುತ್ತಾರೆ. ಅವರಿಂದಾಗಿಯೇ ಅರ್ಜುನ ಪಾಶುಪತವನ್ನು ಗಳಿಸಲು ಮುಂದಾಗುತ್ತಾನೆ. ಇತ್ತ ಕೌರವರ ಪಾಳೆಯಕ್ಕೂ ಹೋಗುತ್ತಿದ್ದ ವ್ಯಾಸರು ಧೃತರಾಷ್ಟ್ರ-ದುರ್ಯೋಧನರಿಗೆ ಸಾಕಷ್ಟು ಹಿತಬೋಧೆ ಮಾಡುತ್ತಿದ್ದರು. ಆದರೆ ಅವರಿಬ್ಬರೂ ಇದನ್ನೆಲ್ಲ ಕಿವುಡುಗೇಳಿದ್ದು ಬೇರೆಯ ಮಾತು. ಅಂತೂ ಇದು ಕಥೆಯ ಮುಂದುವರಿಕೆಗೆ ಕಾರಣವಾಯಿತು. ಉದ್ಯೋಗಪರ್ವದ ಹೊತ್ತಿನಲ್ಲಿಯೂ ವ್ಯಾಸರು ಧೃತರಾಷ್ಟ್ರನಿಗೆ ತಿಳಿಯಹೇಳುತ್ತಾರೆ; ಮುಂದೆ ಆಗಲಿರುವ ಘೋರಯುದ್ಧವನ್ನು ಒಮ್ಮೆ ಕಂಡಲ್ಲಿ ಅವನು ಮನಸ್ಸನ್ನು ತಿದ್ದಿಕೊಂಡಾನೆಂದು ದಿವ್ಯದೃಷ್ಟಿಯ ಅನುಕೂಲತೆಯನ್ನೂ ಒದಗಿಸುತ್ತಾರೆ. ಈ ಎಲ್ಲ ಹಿತಕಾಮನೆಯೂ ಫಲಿಸದೆ ಯುದ್ಧ ಮೊದಲಾಗುತ್ತದೆ; ಕಥೆ ಮುಂದೆ ಸಾಗುತ್ತದೆ. ಯುದ್ಧಾನಂತರದಲ್ಲಿ ಪಾಂಡವನಾಶಕ್ಕಾಗಿ ಅಶ್ವತ್ಥಾಮನು ಐಷೀಕಾಸ್ತ್ರವನ್ನು ಪ್ರಯೋಗಿಸಿದಾಗ ಅದನ್ನೆದುರಿಸಲು ಅರ್ಜುನ ಮತ್ತದೇ ಅಸ್ತ್ರವನ್ನು ಬಳಸುತ್ತಾನೆ. ಉಭಯಾಸ್ತ್ರಗಳ ಸಂಘರ್ಷ ಜಗತ್ತನ್ನೇ ಅಳಿಸಲಿದ್ದಾಗ ಮತ್ತೆ ವ್ಯಾಸರು ಬಂದು ಅವನ್ನು ತಣ್ಣಗಾಗಿಸುತ್ತಾರೆ. ಕಥೆ ಮಾತ್ರವಲ್ಲದೆ ಜಗತ್ತೂ ಉಳಿದು ಮುಂದೆ ಸಾಗುತ್ತದೆ. ಅನಂತರ ಎಲ್ಲರ ಅಂತ್ಯೇಷ್ಟಿಯನ್ನು ಮಾಡಿಸಿದ ವ್ಯಾಸರೇ ಯುಧಿಷ್ಠಿರನಿಗೆ ಪಟ್ಟವನ್ನೂ ಕಟ್ಟಿಸುತ್ತಾರೆ! ಮುಂದೆ ಅಶ್ವಮೇಧಯಾಗದಲ್ಲಿ ಅವರದೇ ಆಧ್ವರ್ಯವ. ಕುಂತಿ, ವಿದುರ, ಗಾಂಧಾರಿ, ಧೃತರಾಷ್ಟ್ರರೆಲ್ಲ ವಾನಪ್ರಸ್ಥಕ್ಕೆ ತೆರಳಿದಾಗ ಅವರನ್ನು ಕಾಣಲು ಬಂದ ಪಾಂಡವರೂ ಸೇರಿದಂತೆ ಸಕಲರಿಗೆ ಯುದ್ಧದಲ್ಲಿ ಅಳಿದ ವೀರರನ್ನು ಮತ್ತೆ ಕಾಣಿಸಿ ಸಾಂತ್ವನ ಹೇಳುತ್ತಾರೆ. ತಮ್ಮ ಅರ್ಹಪುತ್ರನಾದ ವಿದುರನ ಅಂತ್ಯಕ್ರಿಯೆಯನ್ನೂ ಅವರು ನಡಸುತ್ತಾರೆ. ಕಡೆಗೆ ಶ್ರೀಕೃಷ್ಣನ ನಿರ್ಯಾಣದ ಬಳಿಕ ಕುಗ್ಗಿ ಹೋದ ಅರ್ಜುನನಿಗೆ ಸಮಾಧಾನ ಹೇಳಿ ಪಾಂಡವರೆಲ್ಲ ಮಹಾಪ್ರಸ್ಥಾನಕ್ಕೆ ಅಣಿಯಾಗುವಂತೆ ಮಾಡುತ್ತಾರೆ.
ಹೀಗೆ ತಮ್ಮ ಸಂತಾನದ ಜಾತಕರ್ಮ-ನಾಮಕರಣಗಳಿಂದ ಮೊದಲ್ಗೊಂಡು ಮೊಮ್ಮಕ್ಕಳ ಮಹಾಪ್ರಸ್ಥಾನದವರೆಗೆ ಸಕಲವನ್ನೂ ಮುಂದೆ ನಿಂತು ಮಾಡಿಸುತ್ತಾರೆ; ಹಿಂದೆ ನಿಂತು ಪ್ರೇರಿಸುತ್ತಾರೆ. ಆದರೆ ಯಾವುದೊಂದನ್ನೂ ಮಾಡುವುದಿಲ್ಲ; ಮಾಡಬೇಕೆಂದು ಆಗ್ರಹಿಸುವುದೂ ಇಲ್ಲ.
ಸಾಮಾನ್ಯವಾಗಿ ಆಧುನಿಕಸಾಹಿತ್ಯಮೀಮಾಂಸೆಯು ಮತ್ತೆ ಮತ್ತೆ ಒತ್ತಿಹೇಳುವ ಒಂದು ಅಂಶವೆಂದರೆ ಕೃತಿಕಾರನು ತನ್ನ ಕೃತಿಯ ಘಟನೆ ಮತ್ತು ಪಾತ್ರಗಳ ಬೆಳೆವಣಿಗೆಯಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡಬಾರದೆಂದು. ವಿಶೇಷತಃ ಇವೆಲ್ಲದರೊಡನೆ ಆತ ಆರೋಗ್ಯಕರವಾದ ಅಂತರವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ರಸವೇ ಸಿದ್ಧಿಸದು; ಕೃತಿ ಕೃತಕೃತ್ಯವೆನಿಸದೆ ಕೃತಕವಾಗುವುದು; ಲೇಖಕನ ಆಗ್ರಹಗಳನ್ನು ಪ್ರತಿನಿಧಿಸುವ ಘೋಷಣಪತ್ರವಾಗುವುದು. ಈ ನಿಲವು ತುಂಬ ಯುಕ್ತವೂ ಹೌದು. ವೇದವ್ಯಾಸರು ಮೇಲ್ನೋಟಕ್ಕೆ ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದಂತೆ ಮಹಾಭಾರತಕಥೆಯ ಆದ್ಯಂತ ಸ್ವಚ್ಛಂದವಾಗಿ ಸಂಚರಿಸಿದರೂ ಒಮ್ಮೆ ಕೂಡ ಪಾತ್ರ-ಘಟನೆಗಳನ್ನು ತಿದ್ದುವುದಿಲ್ಲ, ತಿರಿಚುವುದಿಲ್ಲ. ಅಂತಃಸಾಕ್ಷಿಯಂತೆ ಕಾಣಿಸಿಕೊಳ್ಳುವರಲ್ಲದೆ ಸಾಗ್ರಹವಾಗಿ ತೊಡಗಿಕೊಳ್ಳುವುದಿಲ್ಲ. ಹೀಗೆ ಶುಷ್ಕೇತಿಹಾಸವಾಗಬಹುದಿದ್ದ ಘಟನಾವಳಿಯನ್ನು ರಸಮಯವಾದ ಮಹಾಕಾವ್ಯವಾಗಿಸುವಂತೆ ಅವರ ತೊಡಗಿಕೊಳ್ಳುವಿಕೆ ಸಾರ್ಥಕವಾಗಿದೆ.
ಇಂಥ ಒಳನೋಟವನ್ನು ರಸಸಿದ್ಧಾಂತ ತನ್ನೊಳಗೆ ಅಂತರ್ಗತವಾಗಿಸಿಕೊಂಡಿದ್ದರೂ ಅದನ್ನು ಅದ್ಭುತವಾಗಿ ಪ್ರತಿಪಾದಿಸಿದ ಯಾವ ಆಲಂಕಾರಿಕರೂ ಬಾಯಿಬಿಟ್ಟು ಹೇಳದಿರುವುದೊಂದು ಚೋದ್ಯ. ಈ ದೃಷ್ಟಿಯಿಂದ ಸದ್ಯದ ವ್ಯಾಸವರ್ತನೆ ನಮ್ಮ ಸಾಹಿತ್ಯಮೀಮಾಂಸೆಯ ಅಸಾಧಾರಣ ಅಧಿಕರಣಗಳಲ್ಲೊಂದು. ಲೇಖಕನು ರಚನಾತ್ಮಕವಾಗಿ ತೊಡಗಿಕೊಳ್ಳದೆ ಇತಿವೃತ್ತವು ಕಾವ್ಯವಾಗದು. ಆದರೆ ಇಂಥ ತೊಡಗಿಕೊಳ್ಳುವಿಕೆಗೆ ನಿರ್ಮಮತೆಯ ಕಡಿವಾಣವಿಲ್ಲದಿದ್ದರೆ ಎಂಥ ಇತಿವೃತ್ತವೂ ಅಕಾವ್ಯವಾಗಿ ಹದಗೆಡದಿರದು. ಈ ಬಗೆಯ ಕಾಣ್ಕೆಯನ್ನು ಆನಂದವರ್ಧನನು ಕಾವ್ಯದ ಬಿಡಿಯ ಚೆಲುವಾದ ವಾಕ್ಯಾಲಂಕಾರಕ್ಕೆ ಸೀಮಿತವಾಗುವಂತೆ ಸಂಗ್ರಹಿಸಿದ್ದಾನೆ.[2]
ಈ ತತ್ತ್ವವನ್ನು ಅಲಂಕಾರದಿಂದ ಮೊದಲ್ಗೊಂಡು ಅಲಂಕಾರ್ಯದವರೆಗೆ ಎಲ್ಲ ಹಂತಗಳಲ್ಲಿಯೂ ಅನುಸರಿಸಬಹುದು. ಆದರೆ ಇದಿಷ್ಟನ್ನೂ ಮಾಡುವ ಕವಿಯ ಮನಸ್ಸಿನ ಚಾಪಲ್ಯವನ್ನು ಹತ್ತಿಕ್ಕುವುದು ಹೇಗೆ? ಅದನ್ನೂ ಕಾಣಿಸಬಲ್ಲ ಅತ್ಯಾಲಂಕಾರಿಕರು ವೇದವ್ಯಾಸರು! ಇದು ಅವರದೇ ಮಾತಾದ ಯೇನ ತ್ಯಜಸಿ ತತ್ ತ್ಯಜ (ಮಹಾಭಾರತ, ೧೨.೩೧೬.೪೦) ಎಂಬುದಕ್ಕೆ ನೇರವಾದ ಸಂವಾದಿ.
ಅಶ್ವಘೋಷ
ಇವನ ಕೃತಿಗಳ ಪೈಕಿ ನಮಗೆ ಪೂರ್ಣವಾಗಿ ಸಿಕ್ಕಿರುವುದು “ಸೌಂದರನಂದ” ಒಂದೇ. “ಬುದ್ಧಚರಿತ”ದ ಹದಿನಾಲ್ಕು ಸರ್ಗಗಳಷ್ಟು ಮೂಲವೇ ದೊರೆತಿದ್ದರೂ ಮಿಕ್ಕ ಹದಿನಾಲ್ಕು ಸರ್ಗಗಳು ಟಿಬೆಟನ್ ಅನುವಾದದ ಮೂಲಕ ಮಾತ್ರ ಉಪಲಬ್ಧವಾಗಿವೆ. ಈಗ ದೊರೆತಿರುವ ಮೂಲದ ಹದಿನಾಲ್ಕು ಸರ್ಗಗಳ ಪೈಕಿ ಮೊದಲ ಮತ್ತು ಹದಿನಾಲ್ಕನೆಯ ಸರ್ಗಗಳ ಆದಿ-ಅಂತ್ಯಗಳು ತ್ರುಟಿತವಾಗಿವೆ. ಒಟ್ಟಿನಲ್ಲಿ ಈ ಕೃತಿಯ ಉಪಕ್ರಮ-ಉಪಸಂಹಾರಗಳು ಸಂಸ್ಕೃತಮೂಲದಲ್ಲಿ ಇಲ್ಲ. ಅನುವಾದಗಳಲ್ಲಿಯೂ ಇವುಗಳೊಳಗೆ ಯಾವುದೇ ಕಾವ್ಯಮೀಮಾಂಸಾತತ್ತ್ವವು ನಿರೂಪಿತವಾಗಿಲ್ಲ. ಸೌಂದರನಂದದ ಕಡೆಯ ಎರಡು ಪದ್ಯಗಳಲ್ಲಿ ಮಾತ್ರ ಕೆಲವೊಂದು ಹೊಳಹುಗಳು ಉಳಿದಿವೆ:
ಇತ್ಯೇಷಾ ವ್ಯುಪಶಾಂತಯೇ ನ ರತಯೇ ಮೋಕ್ಷಾರ್ಥಗರ್ಭಾ ಕೃತಿಃ
ಶ್ರೋತೄಣಾಂ ಗ್ರಹಣಾರ್ಥಮನ್ಯಮನಸಾಂ ಕಾವ್ಯೋಪಚಾರಾತ್ಕೃತಾ |
ಯನ್ಮೋಕ್ಷಾತ್ ಕೃತಮನ್ಯದತ್ರ ಹಿ ಮಯಾ ತತ್ಕಾವ್ಯಧರ್ಮಾತ್ಕೃತಂ
ಪಾತುಂ ತಿಕ್ತಮಿವೌಷಧಂ ಮಧುಯುತಂ ಹೃದ್ಯಂ ಕಥಂ ಸ್ಯಾದಿತಿ ||
ಇದು ರಂಜನೆಗೆಂದಲ್ಲದೆ ಉಪಶಾಂತಿಗಾಗಿಯೇ ರೂಪಿತವಾದ ಕೃತಿ. ಆದುದರಿಂದಲೇ ಇದು ಮೋಕ್ಷಾರ್ಥಗರ್ಭಿತ. ತತ್ತ್ವವಿಮುಖರಾದ ಶ್ರೋತೃಗಳ ಮನಸ್ಸನ್ನು ಮುಟ್ಟಲು ವಿಚಾರವನ್ನು ಕಾವ್ಯದ ಉಪಚಾರದಿಂದ ನಿರೂಪಿಸಲಾಗಿದೆ. ಇಲ್ಲಿ ಬೋಧೆಗಿಂತ ಭಿನ್ನವಾದ ಸಂಗತಿಗಳು ಬಂದಿದ್ದಲ್ಲಿ ಅದು ಕೇವಲ ಕಾವ್ಯಧರ್ಮವನ್ನು ಪಾಲಿಸಲು ಮಾತ್ರ. ಕಹಿಯಾದ ಔಷಧಕ್ಕೆ ಜೇನನ್ನು ಬೆರಸುವ ಮೂಲಕ ಅದು ನಾಲಗೆಗೆ ಹಿತವೆನಿಸುವಂತೆ ರೂಪಿಸುವಂತೆಯೇ ಈ ನನ್ನ ಯತ್ನ ಕೂಡ ಸಂದಿದೆ.[3]
ಪ್ರಾಯೇಣಾಲೋಕ್ಯ ಲೋಕಂ ವಿಷಯರತಿಪರಂ ಮೋಕ್ಷಾತ್ಪ್ರತಿಹತಂ
ಕಾವ್ಯವ್ಯಾಜೇನ ತತ್ತ್ವಂ ಕಥಿತಮಿಹ ಮಯಾ ಮೋಕ್ಷಃ ಪರಮಿತಿ |
ತದ್ಬುದ್ಧ್ವಾ ಶಾಮಿಕಂ ಯತ್ತದವಹಿತಮಿತೋ ಗ್ರಾಹ್ಯಂ ನ ಲಲಿತಂ
ಪಾಂಸುಭ್ಯೋ ಧಾತುಜೇಭ್ಯೋ ನಿಯತಮುಪಕರಂ ಚಾಮೀಕರಮಿತಿ ||
(ಸೌಂದರನಂದ, ೧೮.೬೩,೬೪)
ವಿಷಯಸುಖದಲ್ಲಿಯೇ ಮಗ್ನವಾಗಿ ಮೋಕ್ಷದತ್ತ ಗಮನವೀಯದ ಜಗತ್ತನ್ನು ಕಂಡು ಮುಕ್ತಿಯೇ ಮಿಗಿಲೆಂದು ನಿರೂಪಿಸಲು ನಾನು ಈ ಕೃತಿಯನ್ನು ಕಾವ್ಯಚ್ಛದ್ಮದಿಂದ ರಚಿಸಿದ್ದೇನೆ. ಗಣಿಗಾರಿಕೆ ಮಾಡಿದಾದ ಹೊನ್ನು-ಮಣ್ಣುಗಳೆರಡೂ ಸಿಗುತ್ತವೆ. ಆದರೆ ವಿವೇಕಿಯು ಹೊನ್ನನ್ನಷ್ಟೇ ಗ್ರಹಿಸುತ್ತಾನೆ. ಇದೇ ರೀತಿ ನಮ್ಮ ಶ್ರೋತೃಗಳು ಕೂಡ ಇಲ್ಲಿರುವ ರಂಜನಾಂಶವನ್ನು ಉಪೇಕ್ಷಿಸಿ ತತ್ತ್ವವನ್ನು ಮಾತ್ರ ಗ್ರಹಿಸಬೇಕು.
[1] ರಾಮನು ತನ್ನ ವನವಾಸದಲ್ಲೊಮ್ಮೆ ವಾಲ್ಮೀಕಿಮುನಿಗಳನ್ನು ಕಂಡ ಉಲ್ಲೇಖ ಅಯೋಧ್ಯಾಕಾಂಡದಲ್ಲಿದೆ (೨.೫೬.೧೬)
[2] ವಿವಕ್ಷಾತತ್ಪರತ್ವೇನ ನಾಂಗಿತ್ವೇನ ಕಥಂಚನ | ಕಾಲೇ ಚ ಗ್ರಹಣತ್ಯಾಗೌ ನಾತಿನಿರ್ವಹಣೈಷಿತಾ || (ಧ್ವನ್ಯಾಲೋಕ, ೨.೧೯)
[3] ಈ ಸಂದರ್ಭದಲ್ಲಿ ಕನ್ನಡಿಗರಾದ ನಮಗೆ ನಾಡೋಜ ಪಂಪನ ಮಾತುಗಳು ಅಶ್ವಘೋಷನ ಉಕ್ತಿಗಳಿಗೆ ಸಂವಾದಿಯಾಗಿಯೂ ಪ್ರತಿವಾದಿಯಾಗಿಯೂ ಇರುವುದು ಗಮನಾರ್ಹವೆನಿಸುತ್ತದೆ. ಪಂಪನು “ವಿಕ್ರಮಾರ್ಜುನವಿಜಯ”ದ ಕಡೆಗೆ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ (೧೪.೬೦) ಎಂದು ಹೇಳುವ ಮೂಲಕ “ವಿಕ್ರಮಾರ್ಜುನವಿಜಯ”ವಿರುವುದು ಲೌಕಿಕವೆನಿಸಿದ ರಸಾಸ್ವಾದಕ್ಕೆಂದೂ “ಆದಿಪುರಾಣ”ವಿರುವುದು ಜೈನಾಗಮದ ಪ್ರಸಾರಕ್ಕೆಂದೂ ಧ್ವನಿಸಿದ್ದಾನೆ. ಇದು ಬಲುಮಟ್ಟಿಗೆ ಅಶ್ವಘೋಷನ ನಿಲವೇ ಆಗಿದೆ. ಆದರೆ ಪಂಪನು “ವಿಕ್ರಮಾರ್ಜುನವಿಜಯ”ಕ್ಕಿಂತ ಮುನ್ನ ಬರೆದ “ಆದಿಪುರಾಣ”ದಲ್ಲಿ ಆದಿಪುರಾಣದೊಳರಿವುದು ಕಾವ್ಯಧರ್ಮಮುಂ ಧರ್ಮಮುಮಂ (೧.೩೮) ಎಂದು ಹೇಳುವ ಮೂಲಕ ಆಗಮಿಕವಾದ ಈ ಕಾವ್ಯವು ಓದುಗರಿಗೆ ರಸ ಮತ್ತು ಮೋಕ್ಷಗಳೆರಡನ್ನೂ ದಕ್ಕಿಸಬಲ್ಲುದೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾನೆ. ಒಟ್ಟಿನಲ್ಲಿ ಪಂಪನ ಮಾತುಗಳಲ್ಲಿ ಗೊಂದಲವಿರುವುದು ಸ್ಪಷ್ಟ. ಆದರೆ ಅಶ್ವಘೋಷನ ಆಲೋಚನೆಯ ಧೋರಣೆ ಸಹಸ್ರಮಾನಗಳುದ್ದಕ್ಕೂ ಸಾಗಿಬಂದಿದೆ ಮತ್ತು ಇಂದಿಗೂ ಅದು ಬೇರೆ ಬೇರೆಯ ರೂಪದಲ್ಲಿ ಕಾವ್ಯ-ಕಲಾಮೀಮಾಂಸಕರನ್ನು ಕಾಡತ್ತಲೇ ಇದೆ ಎಂಬುದಕ್ಕೆ ಜಗತ್ತಿನ ಎಲ್ಲೆಡೆ ಸಾಕ್ಷ್ಯವುಂಟು.