ಮಹರ್ಷಿ ವಾಲ್ಮೀಕಿ
ಶ್ರೀಮದ್ರಾಮಾಯಣದ ಮೊದಲಿಗೇ ಬರುವ ನಾಲ್ಕು ಸರ್ಗಗಳ ಕಥೆ ಕವಿ-ಕಾವ್ಯ-ಸಹೃದಯರ ದೃಷ್ಟಿಯಿಂದ ತುಂಬ ಮಹತ್ತ್ವದ್ದಾಗಿದೆ. ಪ್ರಥಮಸರ್ಗದಲ್ಲಿ ವಾಲ್ಮೀಕಿಮುನಿಗಳು ನಾರದರನ್ನು ಆದರ್ಶನಾಯಕನೊಬ್ಬನ ಸಾಧ್ಯತೆಯ ಬಗೆಗೆ ಪ್ರಶ್ನಿಸುವುದು ಬಹ್ವರ್ಥಗ್ರಾಸಿಯಾಗಿದೆ. ಮಹಾಕಾವ್ಯ-ನಾಟಕಗಳ ನಾಯಕರು ಧೀರೋದಾತ್ತರಾಗಿ ಇರಬೇಕೆಂದು ನಮ್ಮ ಆಲಂಕಾರಿಕರು ಒಕ್ಕಣಿಸುವುದು ಎಷ್ಟೋ ಬಾರಿ ಶುಷ್ಕವೂ ಅಜ್ಞೇಯವೂ ಆಗಿ ತೋರುತ್ತದೆ. ಆದರೆ ಸದ್ಯದ ಸಂದರ್ಭ ಅದನ್ನು ರಸಾರ್ದ್ರವಾಗಿ, ಸುಗ್ರಾಹ್ಯವಾಗಿ ಮಾಡಿದೆ. ಇಷ್ಟೇ ಅಲ್ಲದೆ ಸಂವೇದನಶೀಲನಾದ ಯಾವುದೇ ಕವಿಗೆ ತಾನು ಕಂಡುಕೊಂಡ ದರ್ಶನವೊಂದನ್ನು ಕೃತಿಯ ಮೂಲಕ ಪ್ರದರ್ಶಿಸುವಾಗ ಒಳ್ಳೆಯ ನಿದರ್ಶನ ಅದೆಷ್ಟು ಅನಿವಾರ್ಯವೆಂಬ ಅರಿವಿರುತ್ತದೆ; ಇದಕ್ಕಾಗಿ ಉತ್ಕಟವಾದ ತುಡಿತವೂ ಇರುತ್ತದೆ. ಶ್ರೀರಾಮನು ಇಂಥ ನಿದರ್ಶನವಾಗಿ ಮಹರ್ಷಿಗಳಿಗೆ ಒದಗಿಬಂದ. ಅಲ್ಲದೆ ಈ ಬಗೆಯ ನಾಯಕನ ಸಂಭಾವ್ಯತೆ ಊಹಾಮಾತ್ರವಾದರೆ ಶುದ್ಧಕಾವ್ಯರಸಿಕರಿಗೆ ಯಾವುದೇ ಕೊರತೆಯಾಗದಿದ್ದರೂ ವ್ಯುತ್ಪತ್ತಿಯನ್ನು ಬಯಸುವ ಶ್ರದ್ಧಾಳುಗಳಿಗೆ ಹೆಚ್ಚಿನ ಸಮಾಧಾನವಾಗದು. ಆದುದರಿಂದಲೇ ವರ್ತಮಾನದ ನಾಯಕನ ಆವಶ್ಯಕತೆ ಮುಖ್ಯವೆನಿಸುತ್ತದೆ. ಇಂಥ ನಾಯಕನು ಮಾನುಷಭಾವಗಳನ್ನು ಅದೆಷ್ಟು ಉತ್ಕೃಷ್ಟವಾಗಿ ಬಿಂಬಿಸುವನೋ ಅಷ್ಟರ ಮಟ್ಟಿಗೆ ಕಾವ್ಯದ ರಸಪುಷ್ಟಿ ಹೆಚ್ಚುತ್ತದೆ. ಈ ಕಾರಣದಿಂದಲೇ ಕೋ ನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ (೧.೧.೨), ಜ್ಞಾತುಮೇವಂವಿಧಂ ನರಮ್ (೧.೧.೫) ಎಂಬ ಕಾವ್ಯೋಕ್ತಿಗಳನ್ನು ಗಮನವಿಟ್ಟು ಪರಿಕಿಸಬೇಕು. ಆದಿಕವಿಗಳು ಈ ತತ್ತ್ವವನ್ನು ತಮ್ಮ ಕಾವ್ಯನಾಯಕನ ಮೂಲಕ ಕವಿನಿಬದ್ಧಪ್ರೌಢೋಕ್ತಿಯಾಗಿ ಹೇಳಿಸಿರುವುದು ಮತ್ತೂ ಹೃದಯಂಗಮ: ಆತ್ಮಾನಂ ಮಾನುಷಂ ಮನ್ಯೇ (೬.೧೨೦.೧೧). ಎಂಥ ದೇವತೆಗಳನ್ನಾಗಲಿ, ಯಾವುದೇ ತಿರ್ಯಗ್ಜೀವಸಮುದಾಯವನ್ನಾಗಲಿ ಮಾನುಷವಾಗಿಸದೆ ರಸಪ್ರತೀತಿಯಾಗದೆಂದು ನಮ್ಮ ಆಲಂಕಾರಿಕರೆಲ್ಲ ಬಲ್ಲರು. ಇದು ವಾಲ್ಮೀಕಿಗಳಿಗೆ ಸ್ವಯಂಸ್ಫುರಿಸಿದ ಕಾವ್ಯತತ್ತ್ವ.
ಸಂಸ್ಕೃತದ ಕವಿ-ವಿಮರ್ಶಕರ ಪರಂಪರೆ ಸಾಮಾಜಿಕಸಂವೇದನೆಯಿಂದ ಕೂಡಿಲ್ಲವೆಂಬುದು ಸಾಮಾನ್ಯವಾಗಿ ಆಧುನಿಕರು ಮಾಡುವ ಆಕ್ಷೇಪ. ಆದರೆ ಕಾವ್ಯವು ಪುರುಷಾರ್ಥಪ್ರತಿಪಾದಕವಾಗಬೇಕೆಂದೂ ಸಾಮಾನ್ಯಧರ್ಮಗಳ ಪ್ರತ್ಯಭಿಜ್ಞಾನಕ್ಕಾಗಿ ಉದಿಸಬೇಕೆಂದೂ ಎಲ್ಲ ಕವಿ-ಪಂಡಿತರೂ ಒಪ್ಪಿ ನಡೆದಿರುವುದು ಅಭಿಜ್ಞರಿಗೆ ಸ್ಪಷ್ಟವಾಗಿದೆ. ಇಂತಿದ್ದರೂ ಈ ಅಂಶಗಳು ವ್ಯಾಪಕಸ್ತರದಲ್ಲಿ ಸ್ಫುಟವಾಗದಿರುವುದು ಒಂದು ಲೋಪವೆನ್ನಬಹುದು. ಇಂಥ ಕೊರತೆಯನ್ನು ಮಹಾಕವಿಗಳ ಕೃತಿಗಳಲ್ಲಿ ತೋರುವ ಸಾಹಿತ್ಯತತ್ತ್ವಗಳ ಮೂಲಕ ತುಂಬಿಕೊಳ್ಳಬಹುದು. ಈ ಕಾರಣದಿಂದಲೇ ಆರಂಭದಲ್ಲಿ ವಾಲ್ಮೀಕಿಗಳು ಬಯಸುವ ನಾಯಕಗುಣಗಳೂ ಮತ್ತದಕ್ಕೆ ಪ್ರತಿಸ್ಪಂದಿಸುವ ನಾರದರು ಸೇರಿಸಿಕೊಳ್ಳುವ ಇನ್ನಷ್ಟು ಗುಣಗಳೂ ಅಯೋಧ್ಯಾಕಾಂಡದ ಮೊದಲಲ್ಲಿ ಎರಡು ಸರ್ಗಗಳಷ್ಟು ವಿಸ್ತರಿಸಿಕೊಳ್ಳುವುದು ಅರ್ಥಪೂರ್ಣವೆನಿಸಿದೆ.
ಇದಕ್ಕಿಂತ ಮುಖ್ಯವಾಗಿ ಸ್ವಯಂ ಕವಿಗೇ ಇರುವ ಮೌಲ್ಯಸಂವೇದನೆಯನ್ನು ಕ್ರೌಂಚವಧಪ್ರಸಂಗದಲ್ಲಿ ನಾವು ಸಾಕ್ಷಾತ್ಕರಿಸಿಕೊಳ್ಳಬಹುದು. ತನ್ನ ಒಳಗಿನ ಮತ್ತು ಹೊರಗಿನ ಜಗತ್ತಿಗೆ ಪ್ರೀತಿ ಮತ್ತು ಪ್ರಾಮಾಣಿಕತೆಗಳಿಂದ ಸ್ಪಂದಿಸಲಾಗದವನು ಕವಿಯೆನಿಸಲಾರ. ಕವಿಯಾಗಲು ಬೇಕಿರುವ ಮೂರು ಮುಖ್ಯಗುಣಗಳಾದ ಪ್ರತಿಭೆ, ಪಾಂಡಿತ್ಯ ಮತ್ತು ಅಭ್ಯಾಸಗಳ ಪೈಕಿ ಪ್ರತಿಭೆಯು ಮೇಲ್ಕಾಣಿಸಿದ ಸ್ಪಂದನಕ್ಕೊಂದು ಉಪಲಕ್ಷಣ. ಯಾವುದನ್ನೇ ಆಗಲಿ ಆಳವಾಗಿ, ಆರ್ದ್ರವಾಗಿ ಅನುಭವಿಸಲಾಗದಿರುವುದು ಪ್ರತಿಭೆಯ ಕೊರತೆಯೇ ಸರಿ. ದುರ್ದೈವದಿಂದ ನಮ್ಮ ಆಲಂಕಾರಿಕರು ಪ್ರತಿಭೆಯ ಈ ಆಯಾಮವನ್ನು ವಿಸ್ತರಿಸದೆ ಕೇವಲ ಅತಿಲೋಕವಿಶೇಷಣಗಳಿಂದ ವೈಭವಕರಿಸಿ ಕೈತೊಳೆದುಕೊಳ್ಳುತ್ತಾರೆ! ಇಂಥ ವಿವರಣೆ ನಮಗೆಂದೂ ಹೃದಯಂಗಮವೆನಿಸದು. ಅಲ್ಲದೆ ಇದು ಪ್ರತಿಭೆಯ ಪೂರ್ಣಲಕ್ಷಣವೂ ಆಗದು.
ವಾಲ್ಮೀಕಿಮುನಿಗಳು ಹಿಂದೆ ವ್ಯಾಧಜೀವನವನ್ನು ನಡಸಿದ್ದ ಕಾರಣ ಅವರಿಗೆ ಬೇಟೆಯಾಗಲಿ, ಪಶು-ಪಕ್ಷಿಗಳ ವಧೆಯಾಗಲಿ ಅಪರಿಚಿತವಾಗಿರಲಿಲ್ಲ; ಅಸಹ್ಯವೂ ಆಗಿರಲಿಲ್ಲ. ಆದರೆ ಎಂಥ ಬೇಟೆಗಾರನಿಗೂ ಅನಿವಾರ್ಯವಾದ ಮೃಗಯಾಧರ್ಮವೊಂದು ಇತ್ತೆಂಬ ಮೌಲ್ಯವನ್ನು ಆ ಬೇಡನು ಉಪೇಕ್ಷಿಸಿದನಲ್ಲಾ ಎಂಬ ಸಂಕಟವೇ ಮಹರ್ಷಿಗಳನ್ನು ಹೆಚ್ಚಾಗಿ ಪೀಡಿಸಿದಂತಿದೆ. ಮನುಷ್ಯರಿಗಂತೆ ಪಶು-ಪಕ್ಷಿಗಳಿಗೆ ಮೈಥುನವು ಕಾಲಾಬಾಧಿತವಲ್ಲ; ಅದಕ್ಕೊಂದು ಕಾಲವನ್ನು ಪ್ರಕೃತಿಯೇ ರೂಪಿಸಿದೆ. ಮೈಥುನವು ಸಂತಾನಕ್ಕೆಂದೇ ನಿಯತಿನಿಯುಕ್ತವಾಗಿರುವುದು ಸ್ಪಷ್ಟ. ಹೀಗಾಗಿಯೇ ಸಂತತಿಪೋಷಣೆಗೆ ಅನುಕೂಲವಾದ ಕಾಲ ಬರುತ್ತಿದ್ದಂತೆಯೇ ಅದಕ್ಕೆ ಪೂರ್ವರಂಗವಾಗಿ ಪಶು-ಪಕ್ಷಿಗಳ ಮೈಥುನ ಮೊದಲಾಗುತ್ತದೆ. ಇಂಥ ಮೈಥುನದಲ್ಲಿ ತೊಡಗಿರುವ ಜೀವಗಳನ್ನು ಕೊಲ್ಲುವುದು ಅಧರ್ಮ. ಜೀವೋ ಜೀವಸ್ಯ ಜೀವನಮ್ ಎಂಬಂತೆ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕಾಗಿ ಒಂದಷ್ಟು ಮಟ್ಟದ ಹಿಂಸೆ ಅನಿವಾರ್ಯವೇ ಆದರೂ ಅದನ್ನು ಮಿತಿಮೀರಿ ಬೆಳೆಯಗೊಡಬಾರದೆಂಬುದೇ ಧರ್ಮದ ಉದ್ದೇಶ. ಈ ಕಾರಣದಿಂದ ಕವಿಯಾಗಲಿದ್ದ ಮುನಿಯ ಕರುಣೆ ಕನಲಿತು. ಹೀಗೆ ಹೊಮ್ಮಿದ ಧರ್ಮ-ಕಾರುಣ್ಯಮೂಲದ ಕ್ರೋಧವಾದರೂ ಬೇಡನನ್ನು ಕೊಲ್ಲಲಿಲ್ಲ; ಸತ್ತುಬಿದ್ದ ಹಕ್ಕಿಯನ್ನು ಬದುಕಿಸಲೂ ಇಲ್ಲ. ಪ್ರಾಮಾಣಿಕನಾದ ಕವಿಗೆ ಮೌಲ್ಯಸಂವೇದನೆಯೊಂದೇ ಮೂಲಧಾತು. ಇದನ್ನು ಮೀರಿದ ರಕ್ಷಣಾಧಿಕಾರವಾಗಲಿ, ದಂಡಾಧಿಕಾರವಾಗಲಿ ಎಲ್ಲ ಕವಿಗಳಿಗೆ ಇರುವುದಿಲ್ಲ. ಅದೇನಿದ್ದರೂ ಧಾರ್ಮಿಕನಾದ ಪ್ರಭುವಿನ ಬಲ. ಹಾಗೆಂದು ಅನ್ಯಾಯ-ಅಕ್ರಮಗಳನ್ನು ಕವಿ ಪ್ರತಿಭಟಿಸಲಾರನೆಂದಲ್ಲ. ಆದರೆ ಈ ಪ್ರತಿಭಟನೆ ರಸದಿದ್ಧಿಯ ಮೂಲಕ ಸಾಗಬೇಕಲ್ಲದೆ ಭೌತಿಕವಾದ ಹೋರಾಟಗಳಿಂದಲ್ಲ. ಒಂದು ವೇಳೆ ಸತ್ಕವಿಯೊಬ್ಬ ಇಂಥ ಹೋರಾಟಗಳಿಗೆ ಕೈಹಾಕುವುದಿದ್ದಲ್ಲಿ ಅದು ತನ್ನ ಕಾವ್ಯನಿರ್ಮಿತಿಗೆ ನೇರವಾಗಿ ಸಂಬಂಧಿಸದ ಬಾಧ್ಯತೆಯುಳ್ಳ ಪ್ರಜೆಯೊಬ್ಬನ ಸಾಧುಪ್ರತಿಕ್ರಿಯೆಯ ರೂಪದಿಂದ ಮಾತ್ರ ಸಾಧ್ಯ. ಇದು ಕವಿಯನ್ನು ರಾಷ್ಟ್ರಕನನ್ನಾಗಿಸುವ ಆಯಾಮ. ವಾಲ್ಮೀಕಿಮುನಿಗಳು ರಾಮಾಯಣದ ಅಲೌಕಿಕಪರಿವೇಷದಲ್ಲಿ ಬೇಡನನ್ನು ಭಸ್ಮಸಾತ್ತಾಗಿಸಿಯೋ ಅಥವಾ ಅವನನ್ನು ಮತ್ತೊಬ್ಬ ಮುನಿಯಾಗಿ ರೂಪಿಸಿಯೋ ಇಲ್ಲವೇ ಕ್ರೌಂಚವನ್ನು ಬದುಕಿಸಿಯೋ ಪ್ರತ್ಯುತ ಅಳಿದ ಹಕ್ಕಿಗೆ ಊರ್ಧ್ವಲೋಕಗಳನ್ನು ಅನುಗ್ರಹಿಸಿಯೋ ಕಥೆಯನ್ನು ರೂಪಿಸಿದ್ದಲ್ಲಿ ಯಾವ ರಸಿಕನೂ ಮುಖ ಮುರಿದುಕೊಳ್ಳುತ್ತಿರಲಿಲ್ಲ! ಅದು ಕಾವ್ಯದೃಷ್ಟಿಯಿಂದ ಅನೌಚಿತ್ಯದ ಪರಿಧಿಗೂ ಬರುತ್ತಿರಲಿಲ್ಲ. ಆದರೆ ಇಂಥ ಎಲ್ಲ ಸುಲಭದ ಸಾಧ್ಯತೆಗಳನ್ನು ಮೀರಿ, ಋಷಿಯಾಗದ ಕವಿಗೂ ನಿಗ್ರಹಾನುಗ್ರಹಗಳ ಸಾಮರ್ಥ್ಯವಿರದ ಕವಿಗೂ ಅನುಷ್ಠೇಯವಾಗಬಲ್ಲ ಆದರ್ಶವನ್ನು ವಾಸ್ತವದೊಳಗೆ ಆದಿಕವಿಗಳು ರೂಪಿಸಿರುವುದು ಅಸಾಮಾನ್ಯ.[1] ಈ ಮೂಲಕ ವಾಲ್ಮೀಕಿಮುನಿಗಳು ಕವಿಯು ಕೇವಲ ರಮ್ಯತೆಯತ್ತ ಜಾರದೆ ಭೂಮತೆಯತ್ತ ಸಾರಬೇಕೆಂದು ಧ್ವನಿಸಿರುವುದು ಕಾವ್ಯಮೀಮಾಂಸೆಗೇ ಕೊಟ್ಟ ಕೊಡುಗೆ.
ವಾಲ್ಮೀಕಿಮುನಿಗಳ ಬಾಯಿಂದ ಹೊಮ್ಮಿದ ಮೊದಲ ಶ್ಲೋಕ ಅವರ ಕಾರುಣ್ಯದ ಫಲವಲ್ಲದೆ ಕರುಣರಸಾಸ್ವಾದದ ಫಲವಲ್ಲ.[2] ಇಂತಾದರೂ ಅಯತ್ನಿತವಾಗಿ ಹೊರಬಿದ್ದ ಈ ಶ್ಲೋಕದ ಪದಪದ್ಧತಿಯಿಂದ, ನಾದಮಾಧುರ್ಯದಿಂದ ಅವರಿಗೆ ವಿಸ್ಮಯವಾಯಿತು (ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ, ೧.೨.೧೬). ಇದನ್ನು ಶಿಷ್ಯನೊಡನೆ ಹೇಳಿಕೊಂಡು, ಇದರ ಪಾದಬದ್ಧತೆ, ಅಕ್ಷರಸಮತೆ ಮತ್ತು ತಂತ್ರೀಲಯಸಮನ್ವಯಗಳನ್ನೆಲ್ಲ ಗಮನಿಸಿಕೊಂಡು ತಮ್ಮೀ ಶೋಕೋದ್ಗಾರಕ್ಕೆ “ಶ್ಲೋಕ”ವೆಂಬ ನಾಮಕರಣವನ್ನು ಮಾಡಿದರು. ಈ ಘಟನೆ ಕವಿಯು ತನ್ನ ಅರಿವನ್ನೂ ಮೀರಿ ಸೃಷ್ಟಿಸಿದ ಕಾವ್ಯಕ್ಕೆ ತಾನೇ ಬೆರಗಾಗುವ ಅದ್ಭುತನಿದರ್ಶನವಾಗಿದೆ. ಇಂಥ ಸಂದರ್ಭಗಳು ಯಾವುದೇ ಕವಿಯ ಬಾಳಿನಲ್ಲಿ ವಿರಳವಾಗಿ ಸಂಭವಿಸುತ್ತವೆ. ಜೊತೆಗೆ ಇಂಥ ಮುಗ್ಧವಿಸ್ಮಯವು ಕವಿಯ ನಿಸರ್ಗನಮ್ರತೆಗೂ ತನ್ನ ಸೃಷ್ಟಿಗೆ ತಾನೊಂದು ಆಕಸ್ಮಿಕಕಾರಣವೆಂಬ ಸದ್ಭಾವನೆಗೂ ಸಾಕ್ಷಿ. ಈ ಭಾವವು ಹೆಚ್ಚಾದಷ್ಟೂ ಕವಿಗೆ ತನ್ನ ಕೃತಿಯೊಡನೆ ಆರೋಗ್ಯಕರವಾದ ಅಂತರ ಹೆಚ್ಚಾಗುತ್ತದೆ; ಆತ್ಮವಿಮರ್ಶನಕ್ಕೆ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ತಾನೊಬ್ಬ ಕವಿ, ಕವಿತ್ವವೆಂಬುದೇ ಒಂದು ಅತಿಲೋಕಸೃಷ್ಟಿ ಎಂಬ ಅನುಚಿತವಾದ ಹೆಮ್ಮೆಯಳಿದು ಈ ಮಹಾಸೃಷ್ಟಿಯಲ್ಲಿ ತಾನೂ ಒಬ್ಬ ಸಾಮಾನ್ಯಜೀವವೆಂಬ ವಿವೇಕ ಉದಿಸುತ್ತದೆ. ಇದು ಆತನನ್ನು ಮತ್ತಷ್ಟು ಒಳ್ಳೆಯ ಕವಿಯಾಗುವಂತೆ ಮಾಡುತ್ತದೆ.
[1] ಕುವೆಂಪು ಅವರ “ರಾಮಾಯಣದರ್ಶನ”ದ ಮೊದಲಿಗೇ ಕ್ರೌಂಚವಧೆಯ ಪ್ರಸಂಗ ಬರುತ್ತದೆ. ಅಲ್ಲಿ ವಾಲ್ಮೀಕಿಮುನಿಯು ಬೇಡನ ಕೃತ್ಯದಿಂದ ನೊಂದು ಅವನಿಗೆ ಬುದ್ಧಿ ಹೇಳಿದ್ದಲ್ಲದೆ ತನ್ನ ಪೂರ್ವಕಥೆಯನ್ನರುಹಿ, “ಅಹಿಂಸಾರುಚಿಯನಿತ್ತು”, ಕ್ರೌಂಚಪಕ್ಷಿಗೂ ಪ್ರಾಣದಾನ ಮಾಡುತ್ತಾನೆ. ಇದು ಮೇಲ್ನೋಟಕ್ಕೆ ಮಿಗಿಲಾದ ಕಾವ್ಯಕೌಶಲವಾಗಿ ಕಂಡರೂ ಆಳವಾಗಿ ನೋಡಿದಾಗ ರಮ್ಯತೆಯ ಲೋಲುಪತೆಯಿಂದ ಮೂಡಿರುವುದಾಗಿ ತಿಳಿಯುತ್ತದೆ. ಇಂಥ ಪ್ರವೃತ್ತಿಯು ಭಾವಾವೇಶದ ಮಹಾಪೂರವಲ್ಲದೆ ರಸವಿಶ್ರಾಂತಿಯ ಪರಿಪಾಕವಲ್ಲ. ಜೊತೆಗೆ ಕವಿಯನ್ನೊಬ್ಬ ಸಂವೇದನಶೀಲನಾದ ಮನುಷ್ಯನನ್ನಾಗಿ ಕಾಣುವುದಕ್ಕಿಂತ ಭಿನ್ನವಾಗಿ ಅವಾಸ್ತವದ ಜಗತ್ತಿಗೆ ಸಲ್ಲುವ ಪ್ರವಾದಿಯನ್ನಾಗಿ ಮಾಡುವ ಅತ್ಯುತ್ಸಾಹವೂ ಇಲ್ಲಿದೆ. ಗಾಂಧಿಯುಗದಲ್ಲಿ ಇಂಥ ಭ್ರಾಮಕಾದರ್ಶಗಳು ಸಾಕಷ್ಟು ಕಾಣುತ್ತವೆ. ಇವನ್ನು ಸಹಜವಾಗಿಯೇ ಆ ಕಾಲದ ಸಾಹಿತ್ಯ ಕೂಡ ಅಂಟಿಸಿಕೊಂಡಿದೆ. ಅದಕ್ಕೆ ಕುವೆಂಪು ಅವರೂ ಹೊರತಾಗಿಲ್ಲ. ಇಂತಿದ್ದರೂ ಅವರ ಕಾವ್ಯಪ್ರತಿಭೆ ಅತ್ಯುನ್ನತ; ರಸಸಿದ್ಧಿ ಅಪಾರ. ಹೀಗಾಗಿ ಅಂಥ ಮಹಾಕವಿಯನ್ನು ಇದೊಂದು ಪ್ರಸಂಗದಿಂದಲೇ ಅಳೆಯಹೊರಡುವುದು ಅನುಚಿತ.
[2] ಈ ವಿಷಯವನ್ನು ಧ್ವನ್ಯಾಲೋಕವು ಮೊತ್ತಮೊದಲಿಗೆ ಕಟಾಕ್ಷಿಸಿದೆ (೧.೫). ಆನಂದವರ್ಧನನು ಮುನಿಯ ಶೋಕದ ಫಲವಾಗಿ ಶ್ಲೋಕವು ಹೊಮ್ಮಿತೆಂದು ರಾಮಾಯಣಾನುಸಾರಿಯಾಗಿಯೇ ವಿವೇಚನೆಯನ್ನು ನಡಸಿದ್ದರೂ ಅಭಿನವಗುಪ್ತನು ಅತಿಬುದ್ಧಿವಂತಿಕೆಯಿಂದ ಇದಕ್ಕೆ ರಸಸೂತ್ರದ ತಾಂತ್ರಿಕವಿವರಗಳನ್ನು ಜೋಡಿಸಲು ಯತ್ನಿಸಿ ಪಕ್ಷಿಯ ಸಂಕಟ ಮುನಿಯಲ್ಲಿ ಕರುಣರಸಾಸ್ವಾದವನ್ನು ಉಂಟುಮಾಡಿತೆಂಬ ವಿಪರೀತವ್ಯಾಖ್ಯಾನ ಮಾಡಿರುವುದು ಆ ಮಹಾಮಾಹೇಶ್ವರನಿಗೆ ಶೋಭಿಸದು. ಏಕೆಂದರೆ, ಅಭಿನವಗುಪ್ತನೇ ಒಪ್ಪುವಂತೆ ರಸಾನುಭೂತಿಯು ಚಿತ್ತವಿಶ್ರಾಂತಿಯಲ್ಲದೆ ಚಿತ್ತಕ್ಷೋಭೆಯಲ್ಲ. ಇದು “ವಿಗಲಿತವೇದ್ಯಾಂತರ”ವೂ ಹೌದು. ಇಲ್ಲಿರುವುದು ವಾಲ್ಮೀಕಿಯಲ್ಲಿ ಧರ್ಮಾಧರ್ಮಗಳ ಮಥನದ ಮೂಲಕವಾಗಿ ಹುಟ್ಟಿದ ಸಹಾನುಭೂತಿ. ಇದು ಸರ್ವಥಾ ಪ್ರತಿಕ್ರಿಯಾತ್ಮಕವಾದುದು. ರಸನುಭವವಾದರೋ ಕಾಮ-ಕರ್ಮಗಳಿಂದ ಮುಕ್ತ. ಒಂದು ಪಕ್ಷ ವಾಲ್ಮೀಕಿಗೆ ರಸಾನುಭವವೇ ಆಗಿದ್ದಲ್ಲಿ ಆಸ್ವಾದೇತರವಾದ ಯಾವುದೇ ಪ್ರತಿಕ್ರಿಯೆ ಮೂಡುತ್ತಿರಲಿಲ್ಲ. ಇಂಥ ಪ್ರತಿಕ್ರಿಯೆಗಳನ್ನೆಲ್ಲ ಅಭಿನವಗುಪ್ತನೇ ರಸವಿಘ್ನಗಳಲ್ಲಿ ಒಂದಾದ “ದೇಶಕಾಲವಿಶೇಷಾವೇಶ” ಎಂದು ಹೆಸರಿಸಿದ್ದಾನೆ. ಇಂಥ ವಿಕ್ಷೇಪಗಳಿಂದ ರಸಾನುಭವವೇ ಆಗುವುದಿಲ್ಲವೆಂದು ಅವನ ಮತ. ವಸ್ತುಸ್ಥಿತಿ ಹೀಗಿದ್ದರೂ ಆತನು ಈ ಪ್ರಸಂಗದಲ್ಲಿ “ನ ತು ಮುನೇಃ ಶೋಕ ಇತಿ ಮಂತವ್ಯಮ್” ಎಂದೆಲ್ಲ ವ್ಯಾಖ್ಯಾನಿಸಿರುವುದು ಅವನ ಪ್ರಧಾನಸಿದ್ಧಾಂತಕ್ಕೇ ಧಕ್ಕೆಯುಂಟುಮಾಡಿದೆ! ಅವನ ಮಾತಿನಲ್ಲಿಯೇ ಹೇಳುವುದಾದರೆ ಇದು ದೇವರನ್ನು ಮಾರಿ ಜಾತ್ರೆ ಮಾಡಿದಂತೆ! (ದೇವಂ ವಿಕ್ರೀಯ ಯಾತ್ರೋತ್ಸವಮ್ ಅಕಾರ್ಷೀತ್.)