ಪರಂಪರೆಯ ಚಿರಂಜೀವಿಗಳ ಪಂಕ್ತಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಗವಾನ್ ವೇದವ್ಯಾಸರು ದ್ವಾಪರಯುಗದ ಪ್ರಮುಖ ಘಟನಾವಳಿಗಳನ್ನು ಜಗತ್ತಿನಲ್ಲಿಯೇ ಅತ್ಯಂತ ಮಹತ್ತ್ವದ್ದೂ ಅತ್ಯಂತ ವಿಸ್ತಾರವಾದದ್ದೂ ಆದ ಅನನ್ಯ ಇತಿಹಾಸಗ್ರಂಥವಾಗಿರುವ ಮಹಾಭಾರತದ ರಚಯಿತರು ಮಾತ್ರವಲ್ಲದೆ ಮಹಾಭಾರತದ ಪ್ರಮುಖ ಪಾತ್ರಧಾರಿಯೂ ಆದವರು. ಒಂದು ದೀರ್ಘಯುಗದ ಆಗುಹೋಗುಗಳ ಕಥನ, ನೇರ ಬೋಧನೆಯ ಮೂಲಕವೂ ಪ್ರೇರಣಾದಾಯಕ ಉಪಾಖ್ಯಾನಗಳ ಮೂಲಕವೂ ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದನೆ – ಇವು ಮಹಾಭಾರತವನ್ನು ಅತುಲ್ಯವಾಗಿಸಿವೆ. ಮೊದಲಿನಿಂದ ಕಡೆಯವರೆಗೆ ಹೆಜ್ಜೆಹೆಜ್ಜೆಗೂ ಮಾನವಸ್ವಭಾವಸ್ವರೂಪಚಿತ್ರಣವನ್ನೂ ವಿಶ್ಲೇಷಣೆಯನ್ನೂ ಒಳಗೊಂಡಿರುವ ಅಗಾಧ ಜ್ಞಾನರಾಶಿ ಮಹಾಭಾರತ. ಮಹಾಭಾರತವು ‘ಕಾರ್ಷ್ಣವೇದ.’ ಇದು ಐದನೆಯ ವೇದ ಎಂಬ ಭವಿಷ್ಯಪುರಾಣದ ಹೇಳಿಕೆಯೂ ಪ್ರಸಿದ್ಧವಾಗಿದೆ.
ಮಹಾಭಾರತ ಬಹುಸ್ತರೀಯ ಗ್ರಂಥವಾಗಿದೆ. ಇತಿವೃತ್ತ, ನೀತಿವ್ಯಂಜನೆ, ಆಧ್ಯಾತ್ಮಿಕ ಸಂದೇಶ – ಹೀಗೆ ಹಲವು ಆಯಾಮಗಳನ್ನು ಗ್ರಂಥದಲ್ಲಿ ಒಮ್ಮೆಗೇ ಕಾಣಬಹುದಾಗಿದೆ. ಈ ಗ್ರಥನವೈಶಾಲ್ಯವನ್ನು ಗ್ರಹಿಸಿದಲ್ಲಿ ಮಾತ್ರ ಗ್ರಂಥದಿಂದ ಗರಿಷ್ಠ ಪ್ರಯೋಜನವನ್ನು ಪಡೆಯಬಹುದಾಗಿದೆ. ವಾಚ್ಯಾರ್ಥವಷ್ಟಕ್ಕೇ ಗಮನ ಕೊಟ್ಟರೂ ಒಂದಷ್ಟು ಪ್ರಯೋಜನ ಇದ್ದೇ ಇದೆ. ಕಥಾಂಶದಿಂದಷ್ಟೆ ತೃಪ್ತರಾದಲ್ಲಿ ಹಿಂದೆ ಇಂತಿಂಥ ಇತಿಹಾಸಘಟನೆಗಳು ನಡೆದವು ಎಂದು ಮನವರಿಕೆಯಾಗುವಷ್ಟು ಪ್ರಯೋಜನವಾದೀತು. ಇದೂ ಕಡಮೆಯ ಲಾಭವೆನ್ನಬೇಕಾಗಿಲ್ಲ.
ಆದರೆ ಈ ವಿಷಯಕ್ಕೆ ಇನ್ನೊಂದು ಮುಖವೂ ಉಂಟು. ಜಗಜ್ಜೀವನಾಧಾರ ಸಂಗತಿಗಳನ್ನು ಲೌಕಿಕ, ಪಾರಮಾರ್ಥಿಕ ಎಂದೆಲ್ಲ ಗೆರೆಹಾಕಿ ವಿಂಗಡಿಸುವುದು ಅವಶ್ಯವಿಲ್ಲ; ಮತ್ತು ಅವು ಎಲ್ಲ ಸಂದರ್ಭಗಳಲ್ಲಿಯೂ ಪರಸ್ಪರ ವಿರುದ್ಧಗಳೇನೂ ಆಗಿರಬೇಕಾಗಿಲ್ಲ. ಪರಾಮರ್ಶನಭಂಗಿಯ ಕಾರಣದಿಂದಾಗಿ ಒಂದೊಂದೆಡೆ ಒಂದೊಂದು ಸಂಗತಿಗೆ ಸ್ವರಭಾರ ಇರಬಹುದು. ಗ್ರಂಥದ ಅನುಸಂಧಾನದಿಂದ ಗರಿಷ್ಠ ಪ್ರಯೋಜನವನ್ನು ಅಪೇಕ್ಷಿಸುವುದಾದಲ್ಲಿ ಸಮಗ್ರ ದೃಷ್ಟಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಹಿತ, ಅಹಿತ ಮೊದಲಾದ ಪರಿಗಣನೆಗಳೂ ಸಾಂದರ್ಭಿಕಗಳೇ ಆಗಿದ್ದಾವು; ಪಾರಮಾರ್ಥಿಕವಲ್ಲದೆಯೂ ಇರಬಹುದು.
ಮೇಲಣ ಸ್ಪಷ್ಟೀಕರಣಕ್ಕೆ ಒಂದು ಪ್ರಾಗ್‍ಭೂಮಿಕೆ ಇದೆ. ಕೇವಲ ವ್ಯಾವಹಾರಿಕ ಸ್ತರದಲ್ಲಿ ಯೋಚಿಸುವಾಗ ಗೋಚರಿಸುವ ಹಲವು ತಾತ್ತ್ವಿಕ ಪ್ರಶ್ನೆಗಳಿಗೆ ಸಮರ್ಪಕ ಪರಿಹಾರ ಲಭಿಸುವುದು ಆಧ್ಯಾತ್ಮಿಕ ನೆಲೆಯಲ್ಲಿ.
ಕೇಂದ್ರಬಿಂದು: ಧರ್ಮ
ಭಾರತೀಯ ಸಂಸ್ಕೃತಿಯ ಮತ್ತು ಜೀವನದರ್ಶನದ ಕೇಂದ್ರಬಿಂದು ಧರ್ಮ ಎಂಬುದು ಸರ್ವವಿದಿತ. ಆದರೆ ಜಟಿಲವೂ ಬಹುಮುಖಿಯೂ ಆದ ಧರ್ಮವನ್ನು ಪ್ರಮಾಣಬದ್ಧವಾಗಿಯೂ ಸ್ವವಿರೋಧಗಳಿಲ್ಲದೆಯೂ ಅರ್ಥವಿಸುವುದು ಸುಲಭವಲ್ಲ. ಏಕೆಂದರೆ ಧರ್ಮದ ವ್ಯಾಪ್ತಿಯು ವಿಶ್ವವಿಶಾಲವಾದದ್ದು ಮತ್ತು ಹಲವು ಆಯಾಮಗಳನ್ನುಳ್ಳದ್ದು. ಹೀಗಿರುವುದರಿಂದ ಧರ್ಮದ ಸ್ವರೂಪದ ಬಗೆಗೆ ಹಲವೊಮ್ಮೆ ಗೊಂದಲ ತಲೆದೋರುವ ಸಂಭವವುಂಟು. ಅಲ್ಲದೆ ಬೇರೆ ಹಲವಾರು ಪರಾಮರ್ಶನೆಗಳಿಗೆ ಆಧಾರದ ನೆಲೆಯಾಗಿರುವುದು ಧರ್ಮವೇ. ಅದರ ಗ್ರಹಿಕೆ ಒಂದೋ ಎರಡೋ ಸೂತ್ರೀಕರಣಗಳಿಂದ ಆಗುವಂತಹದಲ್ಲ.
ಈ ಭೂಮಿಕೆಯಲ್ಲಿ ಬೇರೆಬೇರೆ ಸಂದರ್ಭ-ಸನ್ನಿವೇಶಗಳ ವಿಶ್ಲೇಷಣೆಯಿಂದ ಧರ್ಮದ ಸ್ವರೂಪವನ್ನು ನಿಷ್ಪಾದಿಸಿಕೊಳ್ಳಲು ಅನುವಾಗುವಂತೆ ಕಥೆ-ಉಪಕಥೆಗಳನ್ನೂ ಮಥಿತ ರೀತಿಯ ಬೋಧೆಗಳನ್ನೂ ವ್ಯಾಸರು ಮಹಾಭಾರತದಲ್ಲಿ ಸಂಯೋಜಿಸಿದ್ದಾರೆ.
ವ್ಯಾವಹಾರಿಕ ಮನಃಸ್ಥಿತಿಯಿಂದಷ್ಟೆ ಯೋಚಿಸುವಾಗ ಹಲವೊಮ್ಮೆ ಧರ್ಮದ ಹಿನ್ನಡೆಯಾದಂತೆ ಕಂಡೀತು. ಇಂತಹ ಅಸಮತೋಲಗಳ ಸಮನ್ವಯವು ಶಕ್ಯವಾಗುವುದು ಆಧ್ಯಾತ್ಮಿಕ ನೆಲೆಯಲ್ಲಿ ಮಾತ್ರ. ಈ ಸೂಕ್ಷ್ಮತೆಗಳ ಪರಿಜ್ಞಾನ ಉಂಟಾಗುವುದು ಸುಲಭವಲ್ಲ. ಈ ಕಾರಣದಿಂದಲೇ ಮಹಾಭಾರತದ ಗಾತ್ರಬಾಹುಳ್ಯ ಅವಶ್ಯವಾಗಿದ್ದಿರಬಹುದು.
ಧರ್ಮದೊಡಗೂಡಿದ ತಾತ್ತ್ವಿಕತೆಯನ್ನು ವ್ಯಾಸರು ಅತ್ಯಂತ ಸಂಕ್ಷಿಪ್ತವಾಗಿ ಬೀಜರೂಪದಲ್ಲಿ ‘ಭಾರತ-ಸಾವಿತ್ರೀ’ ಶ್ಲೋಕಸಮುಚ್ಚಯದಲ್ಲಿ ನಿರೂಪಿಸಿದ್ದಾರೆ.
ಮನುಷ್ಯನ ವಿಕಾಸಸ್ತರದ ನಿರ್ಣಯವಾಗುವುದು ಅಂತಿಮವಾಗಿ ಅವನ ಆಂತರಂಗಿಕ ಪರಾಮರ್ಶನೆ–ತುಲನೆಗಳನ್ನು ಆಧರಿಸಿ. ಪರಮನಿರ್ಣಾಯಕವಾದದ್ದು ಆಂತರಂಗಿಕ ಸ್ಪಂದನವೇ. ಈ ಅಂತರಂಗಸ್ಪಂದನದಿಂದ ಋಜುವಾದದ್ದೆಂದು ನಿರ್ಣೀತವಾಯಿತೆಂದರೆ ಅದನ್ನು ಬೇರಾವ ಪರಿಗಣನೆಗಳೂ ಅಲುಗಿಸಲಾರವು. ಹಲವೊಮ್ಮೆ ವ್ಯಕ್ತಿಯು ತನ್ನ ಆಂತರಂಗಿಕತೆಯನ್ನು ತಪ್ಪಾಗಿ ಗ್ರಹಿಸಿ ವಿಕೃತಿಗೊಳಗಾಗಬಹುದು – ಧೃತರಾಷ್ಟ್ರ ದುರ್ಯೋಧನಾದಿಗಳಲ್ಲಿ ಆದಂತೆ. ಇವನ್ನು ವ್ಯಕ್ತಿಯ ವಿಕಾಸಪಥದ ಮಧ್ಯಂತರ ಸ್ಥಿತಿಗಳೆಂದು ಭಾವಿಸಬಹುದು. ಈ ಪ್ರಕ್ರಿಯೆಯ ಹಿನ್ನೆಲೆಯಲ್ಲಿಯೆ ಅರ್ಜುನನಿಗೆ ‘ನೀನು ಯೋಗಿಯಾಗು’ (‘ತಸ್ಮಾದ್ ಯೋಗೀ ಭವಾರ್ಜುನ’, ಗೀತೆ 6:46) ಎಂದು ಶ್ರೀಕೃಷ್ಣನು ಹೇಳುವುದು. ಯೋಗವೆಂದರೆ ಪರಮಾತ್ಮದೊಡನೆ ಪ್ರಜ್ಞಾಪೂರ್ವಕವಾಗಿ ಐಕ್ಯವನ್ನು ಸಾಧಿಸುವುದು. ಬೌದ್ಧಿಕ, ಪ್ರತಿಕ್ರಿಯಾತ್ಮಕ, ವಿಮರ್ಶಾತ್ಮಕ, ಭಾವನಾತ್ಮಕ – ಈ ಎಲ್ಲ ಆಯಾಮಗಳಲ್ಲಿ ಪರಮಾತ್ಮದೊಡನೆ ಐಕ್ಯವು ಸಾಧಿತವಾದಲ್ಲಿ ಅದು ಅಖಂಡವಾಗಿರುತ್ತದೆ.
ಸಂದೇಶಸಂಗ್ರಹ
ಮಹಾಭಾರತದಂತಹ ಉದ್ಗ್ರಂಥದ ತಾತ್ಪರ್ಯವನ್ನು ಅಂಗೈಯಲ್ಲಿ ಹಿಡಿದು ತೋರಿಸುವುದು ದುಃಶಕ್ಯವೆಂಬುದು ಸ್ಪಷ್ಟವೇ ಆಗಿದೆ. ಹೀಗಿದ್ದರೂ ಈ ವಿಸ್ತೃತ ಗ್ರಂಥದಿಂದ ಮಾನವತೆಯು ನಿಷ್ಪಾದಿಸಿಕೊಳ್ಳಬಹುದಾದ ಸಂದೇಶವನ್ನು ಒಂದೆರಡೇ ವಾಕ್ಯಗಳಲ್ಲಿ ಅಡಕವಾಗಿ ನಿರೂಪಿಸುವುದರ ಪ್ರಯೋಜನವೂ ಸ್ವತಃಸಿದ್ಧವಾಗಿದೆ. ಈ ಕಾರ್ಯವನ್ನೂ ಪರಮಕಾರುಣಿಕರೂ ಲೋಕಹಿತೇಚ್ಛುಗಳೂ ಆದ ವೇದವ್ಯಾಸರು ಮಾಡಿ ವಂದನಾರ್ಹರಾಗಿದ್ದಾರೆ.
ಮಹಾಭಾರತದ ಕೊನೆಕೊನೆಯ ಭಾಗವಾದ ಸ್ವರ್ಗಾರೋಹಣಪರ್ವದಲ್ಲಿ ಬರುವ ಈ ಶ್ಲೋಕಗುಚ್ಛವು ‘ಭಾರತ-ಸಾವಿತ್ರೀ’ ಎಂದು ಪರಂಪರೆಯಲ್ಲಿ ವಿಶ್ರುತವಾಗಿದೆ. ಅದು ಒಳಗೊಂಡ ಸಂದೇಶವನ್ನು ‘ಭಾರತ-ಸಾವಿತ್ರೀ’ ಎಂದು ಕರೆದಿರುವವರು ಸ್ವಯಂ ವೇದವ್ಯಾಸರೇ. ಸಂಕ್ಷಿಪ್ತತೆಯಿಂದಲೂ ಉಕ್ತಿಸೌಂದರ್ಯದಿಂದಲೂ ಈ ಶ್ಲೋಕಸಮೂಹವು ಗಮನ ಸೆಳೆಯುತ್ತದೆ. ಈ ಶ್ಲೋಕಗಳನ್ನು ನಿತ್ಯವೂ ಪಠಿಸಿ ಮನನ ಮಾಡಿ ಅನುಸಂಧಾನ ಮಾಡುವವರಿಗೆ ಭಾರತಪಾರಾಯಣಫಲವೂ ಉನ್ನತಗತಿಯೂ ಪ್ರಾಪ್ತವಾಗುತ್ತದೆಂಬ ಪೌರಾಣಿಕರೀತಿಯ ಫಲಶ್ರುತಿಯೂ ಇಲ್ಲಿ ಸೇರಿರುವುದರಿಂದ ಈ ಸಂದೇಶವಾಕ್ಯಗಳಿಗೆ ವ್ಯಾಸರು ಎಷ್ಟು ಮಹತ್ತ್ವ ಕೊಟ್ಟಿರುವರೆಂಬುದು ವಿದಿತವಾಗುತ್ತದೆ.
‘ಸಾವಿತ್ರೀ’ ಎಂಬ ಶಬ್ದವು ಗಾಯತ್ರಿಗೆ ಪರ್ಯಾಯವಾಚಿ ಎಂಬುದು ಪ್ರಸಿದ್ಧವೇ ಆಗಿದೆ. ಶಾಬ್ದಿಕವಾಗಿ ಸೂರ್ಯದೇವನನ್ನು ಲಕ್ಷ್ಯವಾಗಿ ಇರಿಸಿಕೊಂಡಿರುವವು ಸಾವಿತ್ರೀ ಮತ್ತು ಗಾಯತ್ರೀ ಎಂಬ ಹೆಸರುಗಳಿಂದ ಧ್ವನಿತವಾದ ಸಂಕೇತಗಳು.
ಒಂದು ಮಹತ್ಕೃತಿಗೆ ಮಂಗಳಪದ್ಯಗಳನ್ನು ರಚಿಸುವಾಗ ಯಾವುದೋ ಭವ್ಯತೆಯ ಸೂಚನೆಯನ್ನು ಅಳವಡಿಸುವುದು ಒಂದು ಸಾಮಾನ್ಯ ಪ್ರವೃತ್ತಿ. ಯಾವುದೇ ರಚನೆಯ ಸಮಾಪನವು ಶುಭಾಶಂಸನೆಯೊಂದಿಗೆ ಜೊತೆಗೂಡಿರಬೇಕೆಂಬ ಸಾಮಾನ್ಯ ಆಕಾಂಕ್ಷೆಯೂ ಆಕ್ಷೇಪಣೀಯವೇನಲ್ಲ. ಹೆಚ್ಚಿನ ಪಾರಂಪರಿಕ ರಚನೆಗಳು ಆ ಕೆಲಸವನ್ನು ಮಾಡಿರುವುದು ಸಹಜ. ಆದರೆ ವಿಶೇಷವೆಂದರೆ ವ್ಯಾಸರು ತಮ್ಮ ಸಮಾಪನವಾಕ್ಯಗಳಲ್ಲಿ ಬಿಂಬಿಸಿರುವುದು ಜಗತ್ತಿನ ವಾಸ್ತವವನ್ನೇ! ಜಗತ್ಸ್ಥಿತಿಯ ಓರೆಕೋರೆಗಳನ್ನು ಇಲ್ಲಿ ಪರಾಮರ್ಶಿಸಿರುವುದು ಔಚಿತ್ಯಪೂರ್ಣವೂ ಆಗಿದೆ. ಏಕೆಂದರೆ ಮಹಾಭಾರತದುದ್ದಕ್ಕೂ ಜಗತ್ತಿನಲ್ಲಿ ಸದಾ ಕಾಣಬರುವ ಅಗಟವಿಗಟಗಳ ಚಿತ್ರಣಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಸಾಮಾನ್ಯತಃ ಅಶಾಂತಿಮಯವಾಗಿರುವ ಲೋಕಜೀವನದಲ್ಲಿ ಕ್ವಾಚಿತ್ಕವಾಗಿಯಾದರೂ ಕಾಣಿಸಿಕೊಳ್ಳುವ ನೆಮ್ಮದಿಗೆ ಅಭಿಮುಖರಾಗಿರುವುದು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಪ್ರಯೋಜನಕರವೆಂಬುದನ್ನು ಅಲ್ಲಗಳೆಯಲಾಗದು.
ಉಪರ್ಯುಕ್ತ ಫಲಶ್ರುತಿಯು ಕೇವಲ ಆಲಂಕಾರಿಕವೆನ್ನಲಾಗದು. ಪ್ರತಿದಿನ ಪ್ರಾತಃಕಾಲ ಪ್ರಾರ್ಥನೆಯೊಡನೆ ಭಾರತ-ಸಾವಿತ್ರಿಯ ಶ್ಲೋಕಗಳನ್ನು ಪಾರಾಯಣ ಮಾಡುವ ರೂಢಿಯು ವಿಶೇಷವಾಗಿ ಪಶ್ಚಿಮಭಾರತದಲ್ಲಿ ಪ್ರಚಲಿತವಿದೆ.
ಶ್ಲೋಕಸಮುಚ್ಚಯ
ಈಗ ಭಾರತ-ಸಾವಿತ್ರಿಯ ಪಾಠವನ್ನು ಸ್ಮರಿಸಬಹುದು. (ಒಂದೆರಡು ಸಣ್ಣ ಪಾಠಭೇದಗಳೂ ಉಂಟು.)
ಮಾತಾಪಿತೃಸಹಸ್ರಾಣಿ
ಪುತ್ರದಾರಶತಾನಿ ಚ |
ಸಂಸಾರೇಷ್ವನುಭೂತಾನಿ
ಯಾನ್ತಿ ಯಾಸ್ಯನ್ತಿ ಚಾಪರೇ || 1
“ಸಾವಿರ ಸಾವಿರ ತಾಯಂದಿರೂ ತಂದೆಯರೂ ನೂರಾರು ಮಂದಿ ಮಕ್ಕಳೂ ಪತ್ನಿಯರೂ ಈ ಹಿಂದೆ ಆಗಿಹೋಗಿದ್ದಾರೆ. ಮುಂದೆಯೂ ಜಗತ್ತಿನಲ್ಲಿ ಆ ಸರಪಳಿ ಮುಂದುವರಿಯುತ್ತದೆ.”
ಹರ್ಷಸ್ಥಾನಸಹಸ್ರಾಣಿ
ಭಯಸ್ಥಾನಶತಾನಿ ಚ |
ದಿವಸೇ ದಿವಸೇ ಮೂಢಂ
ಆವಿಶನ್ತಿ ನ ಪಂಡಿತಮ್ || 2
“ಸುಖಕ್ಕೆ ನಿಮಿತ್ತಗಳಾದ ಸಾವಿರಾರು ಸಂದರ್ಭಗಳೂ ಭಯಕ್ಕೆ ಕಾರಣಗಳಾದ ನೂರಾರು ಸಂದರ್ಭಗಳೂ ಪ್ರತಿದಿನ ಘಟಿಸುತ್ತಿರುತ್ತವೆ. ಅವು ಮೂಢರನ್ನು ಆವರಿಸುತ್ತವೆಯೇ ಹೊರತು ಜ್ಞಾನಿಗಳನ್ನಲ್ಲ.”
ಊಧ್ರ್ವಬಾಹುರ್ವಿರೌಮ್ಯೇಷ
ನ ಚ ಕಶ್ಚಿತ್ ಶೃಣೋತಿ ಮಾಮ್ |
ಧರ್ಮಾದರ್ಥಶ್ಚ ಕಾಮಶ್ಚ
ಸ ಕಿಮರ್ಥಂ ನ ಸೇವ್ಯತೇ || 3
“ಎರಡೂ ತೋಳುಗಳನ್ನು ಮೇಲೆ ಚಾಚಿ ನಾನು ಗಟ್ಟಿಯಾದ ಧ್ವನಿಯಲ್ಲಿ ಸಾರುತ್ತಿರುವೆ. ಆದರೆ ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಅರ್ಥ–ಕಾಮಗಳು ಧರ್ಮದಿಂದಲೇ ಸಿದ್ಧಿಸುತ್ತವೆ. ಆದರೂ ಜನರು ಧರ್ಮವನ್ನು ಏಕೆ ಪಾಲಿಸುತ್ತಿಲ್ಲ?”
ನ ಜಾತು ಕಾಮಾನ್ನ ಭಯಾನ್ನ ಲೋಭಾತ್
ಧರ್ಮಂ ತ್ಯಜೇತ್ ಜೀವಿತಸ್ಯಾಪಿ ಹೇತೋಃ |
ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ
ಜೀವೋ ನಿತ್ಯಃ ಹೇತುರಸ್ಯ ತ್ವನಿತ್ಯಃ || 4
“ಆಸೆಯಿಂದ, ಭಯದಿಂದ, ಲೋಭದಿಂದ, ಜೀವಭಯದಿಂದ ಕೂಡಾ ಧರ್ಮವನ್ನು ತ್ಯಜಿಸತಕ್ಕದ್ದಲ್ಲ. ಏಕೆಂದರೆ ಧರ್ಮವು ನಿತ್ಯವಾದದ್ದು; ಸುಖ-ದುಃಖಗಳು ಶಾಶ್ವತವಲ್ಲ. ಆತ್ಮವು ಚ್ಯುತಿಯಿಲ್ಲದ್ದು; ಅದರ ಅಭಿವ್ಯಕ್ತ ಆಕೃತಿಗಳು ನಶ್ವರವಾದವು.”
ಮೇಲಣ ನಾಲ್ಕು ಶ್ಲೋಕಗಳಲ್ಲದೆ ಐದನೆಯ ಫಲಶ್ರುತಿರೂಪದ ಶ್ಲೋಕವೂ ಇದೆ, ಹೀಗೆ:
ಇಮಾಂ ಭಾರತಸಾವಿತ್ರೀಂ
ಪ್ರಾತರುತ್ಥಾಯ ಯಃ ಪಠೇತ್ |
ಸ ಭಾರತಫಲಂ ಪ್ರಾಪ್ಯ
ಪರಂ ಬ್ರಹ್ಮಾಧಿಗಚ್ಛತಿ || 5
“ಯಾರು ಈ ಭಾರತಸಾವಿತ್ರಿಯನ್ನು ಪ್ರತಿದಿನ ಬೆಳಗ್ಗೆ ಎದ್ದೊಡನೆ ಪಾರಾಯಣ ಮಾಡುತ್ತಾನೋ ಅವನು ಭಾರತಪಾರಾಯಣಫಲವನ್ನು ಗಳಿಸಿ ಪರಬ್ರಹ್ಮಸಾಕ್ಷಾತ್ಕಾರ ಹೊಂದುತ್ತಾನೆ.”
ಗಾಯತ್ರೀಮಂತ್ರಸದೃಶ
ಭಾರತ-ಸಾವಿತ್ರಿಯನ್ನು ವ್ಯಾಸರು ಉದ್ಘೋಷ ಮಾಡಿದುದು ಮಹಾಭಾರತದ ಸಮಾಪನಭಾಗದಲ್ಲಿ. ವೇದಗಳ ಸಾರಭೂತ ಭಾಗವು ಸಾವಿತ್ರೀ ಎಂಬ ಹೆಸರನ್ನು ತಳೆದು ಗಾಯತ್ರೀಮಂತ್ರದಲ್ಲಿ ನಿವೇಶಗೊಂಡಿರುವಂತೆ ಮಹಾಭಾರತದ ಮಥಿತ ಸಂದೇಶವನ್ನು ವ್ಯಾಸರು ‘ಭಾರತಸಾವಿತ್ರೀ’ ಎಂಬ ಹೆಸರಿನಲ್ಲಿ ನಿರೂಪಿಸಿದ್ದಾರೆ. ಅಧ್ಯಯನದ ಆಳಕ್ಕೆ ಇಳಿದಂತೆ ಸ್ಫುಟಗೊಳ್ಳುವುದು ಇತಿಹಾಸಕಥನವಷ್ಟೆ ವ್ಯಾಸರ ಆಶಯವಾಗಿರಲಾರದು ಎಂದು. ಮನೀಷಿಗಳ ದೃಷ್ಟಿಯಲ್ಲಿ ಯುದ್ಧಕಥನವು ಧರ್ಮಸಂಹಿತೆಯ ಪ್ರಕಟೀಕರಣದಲ್ಲಿ ಪರ್ಯವಸಾನಗೊಂಡಿತು. ಹೀಗೆ ಭಾರತಸಾವಿತ್ರಿಯು ಮಹಾಭಾರತದ ಗಾಯತ್ರೀಮಂತ್ರವಾಯಿತು. ಸಾವಿತ್ರೀ ಎಂಬ ಶಬ್ದವು ಸವಿತಾ ಅಥವಾ ಸವಿತೃ ಎಂಬುದರಿಂದ ನಿಷ್ಪನ್ನವಾದುದು. ಸವಿತಾ ಎಂಬುದು ಇಡೀ ವಿಶ್ವದ ಪ್ರೇರಕಶಕ್ತಿಯ ಹೆಸರು. ಧ್ಯಾನಾನುಕೂಲಕ್ಕಾಗಿ ಅದನ್ನು ಒಂದು ದೇವತಾರೂಪವಾಗಿಯೂ ಪರಿಭಾವಿಸಲಾಗಿದೆ.
‘ಭಾರತಸಾವಿತ್ರೀ’ ಶ್ಲೋಕಸಮೂಹದಲ್ಲಿ ಅಡಗಿರುವ ಸಂದೇಶವು ವೇದವ್ಯಾಸರ ದೃಷ್ಟಿಯಲ್ಲಿ ಹೇಗೆ ಇಡೀ ಮಹಾಭಾರತಗ್ರಂಥದ ಉದ್ದಿಷ್ಟ ಉಪದೇಶವನ್ನು ದಿಕ್‍ಪ್ರದರ್ಶಕವಾಗಿ ಸೂಚಿಸುತ್ತದೆ – ಎಂಬುದನ್ನು ಈಗ ಪರಿಶೀಲಿಸೋಣ.
ಗಮನಿಸಬೇಕಾದ ಅಂಶವೆಂದರೆ: ಈ ಶ್ಲೋಕಸಮೂಹವು ಮಹಾಭಾರತದ ಪ್ರಮುಖ ಸಂದೇಶವನ್ನು ಸೂತ್ರರೂಪದಲ್ಲಿ ನಿರೂಪಿಸಿರುವುದು ಮಾತ್ರವಲ್ಲದೆ ಆ ಸೂತ್ರೀಕರಣದ ಹಿಂದಿನ ಉಪಪತ್ತಿ ಅಥವಾ ತರ್ಕವನ್ನೂ ತಿಳಿಸಿಕೊಟ್ಟಿದೆ – ಎಂಬುದು.
ಮುಂದುವರೆಯುತ್ತದೆ...