ಸಂಸ್ಕೃತದಲ್ಲಿ ಯಾವುದನ್ನಾದರೂ ಅದರ ಸ್ವಭಾವ ಇಂಥದ್ದೆಂದು ವರ್ಣಿಸುವಾಗ “ಧರ್ಮ”ಪದವನ್ನು ಸಮಾಸದ ಕೊನೆಗೆ ಬಳಸಿ ನುಡಿಗಟ್ಟಾಗಿಸುವುದುಂಟು. ಉದಾಹರಣೆಗೆ: “ಭೈಕ್ಷ್ಯಧರ್ಮಾ ಯತಯಃ” (ಯತಿಗಳು ಭಿಕ್ಷೆ ಬೇಡಿ ಬದುಕುವಂಥವರು). ಹೀಗೆಯೇ ಆಶ್ರಯವಿಲ್ಲದೆ ಬದುಕಲಾರದವರು ಬಳ್ಳಿಯಂಥವರು: “ಲತಾಧರ್ಮಾಃ.”
ಲತಾಧರ್ಮಾಃ (೫.೨೯.೪೯)
ಬಡವರಿಗೆ ಹಸಿವೆ ಹೆಚ್ಚೆಂಬುದು ನಾಣ್ನುಡಿ. ಗಟ್ಟಿಮುಟ್ಟಾದವರು ಕಲ್ಲನ್ನೂ ತಿಂದು ಅರಗಿಸಿಕೊಳ್ಳುತ್ತಾರೆಂದು ಕೂಡ ಹೇಳುವುದುಂಟು. ಇವುಗಳಿಗೆ ಸಂವಾದಿ ಮಹಾಭಾರತದಲ್ಲಿದೆ. ಆ ಪ್ರಕಾರ “ಬಡವರ ಹೊಟ್ಟೆಯಲ್ಲಿ ಕಟ್ಟಿಗೆಯೂ ಕರಗಿಹೋಗುತ್ತದೆ!”
ದರಿದ್ರಾಣಾಂ ತು ರಾಜೇಂದ್ರ ಅಪಿ ಕಾಷ್ಠಂ ಹಿ ಜೀರ್ಯತೇ (೫.೩೪.೪೯)
“ಮೇಢ” ಎಂಬುದಕ್ಕೆ ತಿರುಗಣಿಯೆಂಬ ಅರ್ಥವುಂಟು. ಯಾವುದೇ ತಿರುಗುವ ವಸ್ತುವಿನ ಕೇಂದ್ರವೇ ತಿರುಗಣಿ ತಾನೇ? ಹೀಗೆಯೇ ಯಾವುದೇ ಕುಟುಂಬದ, ರಾಜ್ಯದ ಕೇಂದ್ರಭೂತನಾದ ವ್ಯಕ್ತಿಯನ್ನು “ಮೇಢೀಭೂತ”ನೆಂಬ ನುಡಿಗಟ್ಟಿನ ಮೂಲಕ ವಿವರಿಸುವುದುಂಟು.
ಮೇಢೀಭೂತಃ ಕೌರವಾಣಾಮ್ (೫.೩೬.೫೧)
ಮಾನವರ ಮೂಲಭೂತವಾದ ಅನಿವಾರ್ಯತೆಗಳಲ್ಲಿ ಮುಖ್ಯವೆನಿಸಿದ ಆಹಾರ-ಮೈಥುನಗಳ ವಿಷಯದಲ್ಲಿ ಎಚ್ಚರವಿರಬೇಕೆಂಬುದು ಎಲ್ಲ ವಿಜ್ಞರ ಅಭಿಮತ. ಇದನ್ನು ಹೇಳಲು ಬಗೆಬಗೆಯ ನುಡಿಗಟ್ಟುಗಳು ಬಳಕೆಯಲ್ಲಿವೆ. ಗಟ್ಟಿ ಮನಸ್ಸಿನಿಂದ ಜಠರ-ಜನನೇಂದ್ರಿಯಗಳ ಮೇಲೆ ಹತೋಟಿ ಇರಿಸಿಕೊಳ್ಳಬೇಕೆಂಬುದು ಇವುಗಳ ತಾತ್ಪರ್ಯ.
ಧೃತ್ಯಾ ಶಿಶ್ನೋದರಂ ರಕ್ಷೇತ್ (೫.೪೦.೨೨)
ನಮ್ಮಲ್ಲಿ ಸಾಮಾನ್ಯವಾಗಿ ಮರ್ಯಾದಸ್ತರು “ನಾವು ಯಾರ ಬಾಯಿಗೂ ಬೀಳಬಾರದು” ಎಂದು ಎಚ್ಚರವಹಿಸುತ್ತಾರೆ. ಇದೇ ಮಹಾಭಾರತದ ಕವಿವಾಣಿಯಲ್ಲಿಯೂ ನುಡಿಗಟ್ಟಾಗಿದೆ.
ಅವಾಚ್ಯಾಸ್ತು ಭವಿಷ್ಯಾಮಃ (೫.೭೦.೭೫)
ಮಂಡಿಗಳ ನಡುವೆ ಮಂಡೆಯನ್ನಿರಿಸುವುದೆಂದರೆ ಗೋಳಾಟಕ್ಕೇ ಸಜ್ಜಿಕೆಯೆಂದು ಲೋಕದಲ್ಲಿ ಪ್ರಸಿದ್ಧಿ. ಇದರ ತದ್ವತ್ತಾದ ಸಂವಾದವನ್ನು ಮಹಾಭಾರತದ ನುಡಿಗಟ್ಟಿನಲ್ಲಿ ನೋಡಬಹುದು:
ಜಾನ್ವೋರ್ಮೂರ್ಧಾನಮಾಧಾಯ (೫.೭೩.೧೦)
ಸಂಧಿಗೆ ಬಂದ ಕೃಷ್ಣನಿಗೆ ದುರ್ಯೋಧನನು ತಾನು ಪಾಂಡವರಿಗೆ ಸೂಜಿಯ ಮೊನೆಯಷ್ಟು ಪ್ರಮಾಣದ ರಾಜ್ಯವನ್ನೂ ಕೊಡುವುದಿಲ್ಲವೆಂದು ಹೇಳಿ ಹಿಂತಿರುಗಿಸುವ ಮಾತು ಲೋಕಪ್ರಸಿದ್ಧ. ಇದೇ ವಾಡಿಕೆಯಲ್ಲಿ ಕೂಡ ನುಡಿಗಟ್ಟಾಗಿ ಬೆಳೆದುಬಂದಿದೆ. “ಸೂಜಿಮೊನೆ ಊರುವಷ್ಟು ಜಾಗವನ್ನೂ ಅವರು ಬಿಡೋಲ್ಲ” ಇತ್ಯಾದಿ ಪ್ರಯೋಗಗಳು ಸ್ಮರಣೀಯ.
ಸೂಚ್ಯಾಸ್ತೀಕ್ಷ್ಣಾಯಾ ವಿದ್ಧ್ಯೇದಗ್ರೇಣ (೫.೧೨೫.೨೬)
ಮೃದೂಕರಣ ಅಥವಾ ಉಜ್ಜ್ವಲೀಕರಣಗಳು ಶಿಷ್ಟಭಾಷೆಯ ಲಕ್ಷಣಗಳಲ್ಲೊಂದು. ಇವೇ ನುಡಿಗಟ್ಟುಗಳಾಗಿಯೂ ರೂಪುಗೊಳ್ಳುತ್ತವೆ. ಅಂಥ ಒಂದು ಉದಾಹರಣೆ “ವೀರಶಯನ”ವೆಂಬ ಪದದಲ್ಲಿದೆ. ಯುದ್ಧರಂಗದಲ್ಲಿ ಸಾವೆಂದು ಇದರ ತಾತ್ಪರ್ಯ. ಮೇಲ್ನೋಟಕ್ಕೆ ಮೃದೂಕರಣದ ರೂಪ ಇದಾದರೂ ಇಲ್ಲಿ ಧ್ವನಿಸುವ ಉದಾತ್ತತೆ-ಭವ್ಯತೆಗಳು ಗಮನಾರ್ಹ.
ಲಪ್ಸ್ಯಸೇ ವೀರಶಯನಮ್ (೫.೧೨೬.೨)
ಲೋಕರೂಢಿಯಲ್ಲಿ ಗಂಡಸರನ್ನು ಅಪ್ರಬುದ್ಧರೆಂದೋ ಹೇಡಿಗಳೆಂದೋ ನಿಂದಿಸುವಾಗ “ಮೀಸೆ ಮೊಳೆಯದವರು” ಎಂಬ ಬೈಗುಳ ಬಳಕೆಗೆ ಬರುತ್ತದೆ. “ತೂಬರಕ”ಶಬ್ದದ ಅರ್ಥವಿದೇ. ಇದಕ್ಕೆ “ಕೊಂಬು ಮೊಳೆಯದ ಕರು,” “ತಿಂಡಿಪೋತ” ಮುಂತಾದ ಅರ್ಥಾಂತರಗಳೂ ಉಂಟು.
ತೂಬರಕಃ (೫.೧೫೭.೧೬)
ಪಾಂಡವರನ್ನು ಕೌರವರು ಗೇಲಿಮಾಡುವಾಗ ಬಳಸಿದ ಶಬ್ದಗಳಲ್ಲಿ “ಷಂಢತಿಲ”ವೂ ಒಂದು. “ಜಳ್ಳೆಳ್ಳು” ಎಂದು ಇದನ್ನು ಭಾಷಾಂತರಿಸಬಹುದು. ಇದರ ತಾತ್ಪರ್ಯ ನಿರ್ವೀರ್ಯ, ನಪುಂಸಕ ಎಂದು. ಕುಮಾರವ್ಯಾಸನು ವಿಪುಲವಾಗಿ ಬಳಸುವ “ಬಡಿಹೋರಿಗಳು” ಎಂಬ ಪದದ ಧ್ವನ್ಯರ್ಥವೂ ಇದೇ.
ಷಂಢತಿಲಾಃ (೫.೧೫೮.೩೧)
“ಬ್ರುವ” ಎಂಬ ಶಬ್ದವನ್ನು ಯಾವುದೇ ನಾಮಪದದ ಕೊನೆಯಲ್ಲಿ ಬೆಸೆದು ಬಳಸಿದಾಗ ಅದು ನಿಂದಾರ್ಥಕವಾಗುತ್ತದೆ. ಮಾತ್ರವಲ್ಲ, ಆ ಸಮಾಸದ ಪೂರ್ವಪದದ ಗುಣಗಳನ್ನು ಹೊಂದಿರದೆ ಕೇವಲ ಹೆಸರಿಗೆ ಮಾತ್ರ ಅವುಗಳನ್ನು ತಳೆದಂಥದ್ದೆಂಬ ಧ್ವನಿಯನ್ನೂ ಕೊಡುತ್ತದೆ. “ಮುನಿಬ್ರುವ,” “ಪಂಡಿತಬ್ರುವ,” “ಕ್ಷತ್ರಿಯಬ್ರುವ” ಇತ್ಯಾದಿಯಾಗಿ ಪ್ರಯೋಗಗಳಿವೆ. ಮಹಾಭಾರತದಲ್ಲಿ ಇದರ ಮೊದಮೊದಲ ವಿನಿಯೋಗವನ್ನು ಕಾಣಬಹುದು.
ಬ್ರಾಹ್ಮಣಬ್ರುವಃ (೫.೧೭೮.೩೫)
ಸಾಮಾನ್ಯವಾಗಿ ಶಿಷ್ಟಸಮಾಜವು ಬೈಗುಳುನ್ನಾಗಲಿ, ಅಶ್ಲೀಲಶಬ್ದಗಳನ್ನಾಗಲಿ ಪ್ರಸ್ತಾವಿಸುವಾಗ “ಹೇಳಬಾರದ ಮಾತುಗಳು” ಎಂದು ವ್ಯವಹರಿಸುವ ಮೂಲಕ ಅವು ಎಂಥವೆಂಬುದನ್ನು ಸೂಚಿಸುತ್ತದೆ. “ಅನ್ನಬಾರದ್ದನ್ನೆಲ್ಲ ಅಂದರು,” “ಆಡಬಾರದ್ದನ್ನೆಲ್ಲ ಆಡಿದರು” ಇತ್ಯಾದಿ ಪ್ರಯೋಗಗಳು ಸುವಿದಿತ. ಇವುಗಳ ಸಾಕ್ಷಾತ್ ಸಂವಾದಿಯೇ ಸಂಸ್ಕೃತದಲ್ಲಿ “ಅವಾಚ್ಯವಚನ”ವೆಂದು ಪ್ರಸಿದ್ಧ. ಇದರ ಮೂಲವನ್ನು ಮಹಾಭಾರತದಲ್ಲಿಯೇ ಕಾಣಬಹುದು:
ಅವಾಚ್ಯವಾದಃ (೬.೨೪.೩೬)
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತಾಮಸಾಹಾರವನ್ನು ವರ್ಣಿಸುವಾಗ, ಅದು “ಹಳಸಲು ಮತ್ತು ಒಣಕಲು / ರುಚಿಗೆಟ್ಟದ್ದು” ಎಂದು ವಿವರಿಸುತ್ತಾನೆ. ಆ ಮಾತುಗಳು ಸಂಸ್ಕೃತದಲ್ಲಿ ವಾಚೋಯುಕ್ತಿಗಳೇ ಆಗಿ ಪರಿಣಮಿಸಿವೆ. ಇಂದಿಗೂ ಆ ನುಡಿಗಟ್ಟುಗಳ ಸ್ವಾರಸ್ಯ ಮಂಕಾಗಿಲ್ಲ.
ಯಾತಯಾಮಂ ಗತರಸಮ್ (೬.೩೯.೧೦)
ತಾಮಸಗುಣದ ವ್ರತ-ತಪಸ್ಸುಗಳನ್ನು ಆಕ್ಷೇಪಿಸುತ್ತ ಕೃಷ್ಣನು, ಅವು “ಮೊಂಡುತನದ ಹಠ”ದಿಂದ ಕೂಡಿದವೆನ್ನುತ್ತಾನೆ. ಇದು ಕೂಡ ಸಂಸ್ಕೃತದಲ್ಲೊಂದು ನುಡಿಗಟ್ಟೇ ಆಗಿ ಪರಿಣಮಿಸಿದೆ.
ಮೂಢಗ್ರಾಹಃ (೬.೩೯.೧೯)
ಕುರುಕ್ಷೇತ್ರದ ಸಮರದಲ್ಲಿ ತಮ್ಮನ್ನು ತೊಡಗಿಸಿಕೊಂಡ ವೀರಯೋಧರು “ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ” ಸೆಣಸಿದರೆಂದು ವ್ಯಾಸರು ವರ್ಣಿಸುತ್ತಾರೆ. ಇದು ದೇಶಭಾಷೆಗಳಲ್ಲಿಯೂ ಬೆಳೆದುಬಂದಿರುವ ನುಡಿಗಟ್ಟಿನ ಸಂವಾದಿ. “ಏಟಿಗೆ ಇದಿರೇಟು,” “ಸೇರಿಗೆ ಸವಾಸೇರು” ಇತ್ಯಾದಿ ಪ್ರಯೋಗಗಳು ಸ್ಮರಣೀಯ.
ಕೃತಪ್ರತಿಕೃತೈಷಿಣೌ (೬.೪೩.೨೫)
ಬೇರೆಯವರ ಮಾತು-ಕೃತಿಗಳಿಗೆ ಸ್ವಲ್ಪವೂ ಬಿಡುವು ಕೊಡದೆ ಏಕಮುಖವಾಗಿ ವರ್ತಿಸುವುದನ್ನು ದೇಶಭಾಷೆಗಳಲ್ಲಿ ಬಗೆಬಗೆಯಾಗಿ ಹಳಿಯುವುದುಂಟು. ಇದು ಆಧುನಿಕಭಂಗಿಯಲ್ಲಿಯೂ ಬೆಳೆದಿದೆ. ಉದಾಹರಣೆಗೆ: “ಸೈಡು ಕೊಡ್ದೆ ಮಾತಾಡ್ತಾನೆ.” ಇದೇ ತೆರನಾದ ಅರ್ಥವನ್ನು ಮಹಾಭಾರತದ “ಅಪದಾಂತರಮ್” ನುಡಿಗಟ್ಟು ಒಳಗೊಂಡಿದೆ. ಶ್ಲೇಷಶಕ್ತಿಯ ಮೂಲಕ ಇದು ಏಕಕಾಲದಲ್ಲಿ “ಮತ್ತೊಂದು ಹೆಜ್ಜೆಯಿಡಲೂ ತೆರಪಿಲ್ಲದೆ,” “ಇನ್ನೊಂದು ಮಾತಿಗೂ ಬಿಡುವಿಲ್ಲದೆ” ಎಂಬ ಅರ್ಥಗಳನ್ನು ಹೊಳೆಯಿಸುವುದು ಹೆಚ್ಚಿನ ಸ್ವಾರಸ್ಯ.
ಅಪದಾಂತರಮ್ (೭.೧೬.೩೮)
ಅರ್ಜುನನು ಬಾಣಗಳನ್ನು ಪ್ರಯೋಗಿಸುವಾಗ ಅವು ಶತ್ರುಸೇನೆಯ ಜೀವವನ್ನೇ ತಿನ್ನುತ್ತಿದ್ದವೆಂಬ ಅರ್ಥದ ನುಡಿಗಟ್ಟು “ಪ್ರಾಣಭೋಜನ.” ಇಲ್ಲಿ ಪ್ರಾಣವೆಂಬುದಕ್ಕೆ ಗಾಳಿ ಎಂದಿರುವ ಮತ್ತೊಂದು ಅರ್ಥವೂ ಸಂಗತ. ಉಸಿರನ್ನು ತಿನ್ನುವುದೆಂಬ ಅರ್ಥವೂ ಪ್ರಾಣಹರಣದ ಮತ್ತೊಂದು ಆಯಾಮ ತಾನೆ?
ಪ್ರಾಣಭೋಜನಃ (೭.೨೬.೨೬)
ದ್ರೋಣಪರ್ವದಲ್ಲಿ ಭೀಮನು ಕೌರವಸಹೋದರರನ್ನು ಸದೆಬಡಿಯುವುದನ್ನು ಸಂಜಯನು ಧೃತರಾಷ್ಟ್ರನಿಗೆ ವರ್ಣಿಸುತ್ತಿರುತ್ತಾನೆ. ಆಗ ಜೂಜಾಟದ ಹೊತ್ತಿನಲ್ಲಿ ದುರ್ಯೋಧನಾದಿಗಳು ಪಾಂಡವರನ್ನೂ ದ್ರೌಪದಿಯನ್ನೂ ಗೇಲಿಮಾಡಿದ್ದನ್ನು ನೆನೆಯುತ್ತಾನೆ. “ನಿನ್ನ ಮಕ್ಕಳು ದಾಸಿಯನ್ನು ಭೋಗಕ್ಕಾಗಿ ಬಳಸಿಕೊಳ್ಳುವ ಹಾಗೆ ದ್ರೌಪದಿಯನ್ನು ಬಳಸಿಕೊಳ್ಳಲು ಬಯಸಿದರು” ಎಂದೂ ತಿವಿಯುವನು. ಈ ಮಾತಿನಲ್ಲಿ “ದಾಸೀಭೋಗೇನ ಕೃಷ್ಣಾಂ” ಎಂಬ ವಾಕ್ಯಭಾಗವು ತನ್ನಂತೆಯೇ ಒಂದು ವಿಶಿಷ್ಟಪ್ರಯೋಗ. “ದಾಸಿಯರೊಡನೆ ಹೇಗೆ ಭೋಗಿಸುವರೋ ಹಾಗೆ ಭೋಗಿಸುವರು” ಎಂಬ ತಾತ್ಪರ್ಯ ಇಲ್ಲುಂಟು.
ದಾಸೀಭೋಗೇನ ಕೃಷ್ಣಾಂ ಚ ಭೋಕ್ತುಕಾಮಾಃ (೭.೧೦೭.೧೪)
ಹೊಟ್ಟೆಬಾಕತನಕ್ಕೆ ಸಂಸ್ಕೃತದಲ್ಲಿ ವಿಶಿಷ್ಟಶಬ್ದಗಳಿವೆ: “ಆದ್ಯೂನ,” “ಘಸ್ಮರ,” “ಉದರಂಭರಿ,” “ಕುಕ್ಷಿಂಭರಿ” ಇತ್ಯಾದಿ. ಅದೇ ಸಾಲಿಗೆ ಸೇರುವಂಥದ್ದು “ಔದರಿಕ”ಶಬ್ದ. ಉದರವೆಂಬ ಪದಕ್ಕೆ ವೃದ್ಧಿಭಾವವನ್ನು ಕಲ್ಪಿಸಿದಾಗ ಔದರಿಕ ಎಂಬ ಶಬ್ದವು ಸಿದ್ಧಿಸುತ್ತದೆ. ಅಂದರೆ, “ಹೊಟ್ಟೆಗೆ ಸಂಬಂಧಿಸಿದವನು” ಎಂಬ ತಾತ್ಪರ್ಯವಿಲ್ಲಿದೆ. ಇದಕ್ಕಿಂತಲೂ ಮಾರ್ಮಿಕವಾಗಿ ಹೊಟ್ಟೆಬಾಕನನ್ನು ಹೆಸರಿಸಲು ಸಾಧ್ಯವಿಲ್ಲ.
ಔದರಿಕಃ (೭.೧೧೪.೬೯)
ಪರಿಪೂರ್ಣವಸ್ತುವು ಹದಿನಾರು ಭಾಗಗಳಿಂದ ಕೂಡಿಕೊಂಡದ್ದೆಂಬ ಕಲ್ಪನೆ ವೇದಸಾಹಿತ್ಯದಿಂದಲೂ ಪ್ರಚುರ. ಇದು ವಸ್ತುತಃ ಚಂದ್ರನ ಹದಿನಾರು ಕಲೆಗಳ ಸಮಾಹಾರವಾದ ಪೂರ್ಣಿಮೆಗೆ ಸಂಬಂಧಿಸಿ ಮೊದಲು ಬೆಳೆದುಬಂದಿತು. ಅವೆಷ್ಟೋ ವೈದಿಕಶಬ್ದಗಳು ಆಕಾಶಕಾಯಗಳನ್ನು ಅವಲಂಬಿಸಿ ಹುಟ್ಟಿವೆ, ಅಭಿಜಾತಸಂಸ್ಕೃತದಲ್ಲಿಯೂ ಬೆಳೆದುಬಂದಿವೆಯೆಂಬುದಕ್ಕೆ ಇದೂ ಒಂದು ಸಾಕ್ಷಿ. ಇದೇ ರೀತಿ “ಕಲಾ” ಎಂಬುದಕ್ಕೆ “ಹದಿನಾರನೆಯ ಒಂದು ಭಾಗ” ಎಂಬ ಅರ್ಥವೂ ಪ್ರಸಿದ್ಧ. ಯಾರನ್ನಾಗಲಿ, ಯಾವುದನ್ನಾಗಲಿ ಮತ್ತೊಂದರೊಡನೆ ಹೋಲಿಸಿ ಕೀಳ್ಗರೆಯುವಾಗ ಅದು “ಕಲಾಮಾತ್ರಕ್ಕೂ ಬಾಳುವಂಥದ್ದಲ್ಲ” ಅರ್ಥಾತ್, “ಹದಿನಾರನೆಯ ಒಂದು ಭಾಗದಷ್ಟೂ ಅಲ್ಲ” ಎನ್ನುವುದುಂಟು. ದೇಶಭಾಷೆಗಳಲ್ಲಿ ಕೂಡ ಇದಕ್ಕೆ ಸಂವಾದಿಯಾದ ಪ್ರಯೋಗಗಳಿವೆ. “ನಿನಗೊಂದು ಸ್ವಲ್ಪವೂ ಹೋಲಿಕೆಗೆ ನಿಲ್ಲೋಲ್ಲ,” “ಅದರ ಕಾಲುಭಾಗದಷ್ಟೂ ಇದು ಬಾಳೋಲ್ಲ” ಇತ್ಯಾದಿ.
ಯಃ ಕಲಾಂ ಷೋಡಶೀಂ ತ್ವತ್ತೋ ನಾರ್ಹತೇ ತಂ ಪ್ರಶಂಸಸಿ (೭.೧೬೮.೧೬)
ಮೊದಲಿನಿಂದಲೂ “ಉಪ್ಪಿನ ಋಣ,” “ಅನ್ನದ ಋಣ,” “ಜೋಳದ ಪಾಳಿ” ಇತ್ಯಾದಿಯಾಗಿ ಸೇವಕರು ತಮ್ಮ ಸ್ವಾಮಿಯಲ್ಲಿ ಆಧಮರ್ಣ್ಯವನ್ನು ತೋರುವ ನುಡಿಗಟ್ಟುಗಳು ಬೆಳೆದುಬಂದಿವೆ. ಇದನ್ನು ಸಂಸ್ಕೃತವು “ಭರ್ತೃಪಿಂಡ”ವೆಂದು ಹೆಸರಿಸಿದೆ. ಕೌಟಿಲ್ಯ, ಭಾಸ ಮೊದಲಾದ ಪ್ರಾಚೀನಲೇಖಕರು ಈ ವಾಚೋಯುಕ್ತಿಯನ್ನು ಬಳಸಿಕೊಂಡಿದ್ದಾರೆ.
ಭರ್ತೃಪಿಂಡಮ್ (೯.೧೧.೪೪)
ಧರ್ಮರಾಜನು ವೈಶಂಪಾಯನಸರೋವರದಿಂದ ಎದ್ದುಬಂದ ಕೌರವನಿಗೆ “ನೀನು ನಮ್ಮೊಡನೆ ಯಾರನ್ನಾದರೂ ಆರಿಸಿಕೊಂಡು ಯುದ್ಧಮಾಡು; ಗೆದ್ದರೆ ರಾಜ್ಯ ನಿನ್ನದೇ” ಎಂದಾಗ ಇವನ ಅವಿವೇಕಕ್ಕೆ ಕೆರಳಿದ ಕೃಷ್ಣ “ಇದೇನು, ಮತ್ತೆ ಜೂಜಾಟವನ್ನಿಲ್ಲಿ ಮೊದಲುಮಾಡಿಕೊಂಡೆಯಲ್ಲಾ!” ಎಂದು ಹಳಿಯುತ್ತಾನೆ. ಇಲ್ಲಿಯ “ತದಿದಂ” ಎಂಬ ಮಾತೇ ತನ್ನಂತೆ ಒಂದು ನುಡಿಗಟ್ಟು. ಅಲ್ಲದೆ, ಜೂಜಿಗಿಂತ ಮಿಗಿಲಾದ ಅನಿಶ್ಚಿತಕ್ರೀಡೆ ಮತ್ತೊಂದಿಲ್ಲ; ಇಂಥ ಅನಿಶ್ಚಯವನ್ನು ಮತ್ತೆ ನಮಗೆಲ್ಲ ತಂದೊಡ್ಡಿದೆಯಲ್ಲಾ ಎಂಬ ಇಂಗಿತದಿಂದ ಹೊರಟ “ದ್ಯೂತಮಾರಬ್ಧಂ” ಎಂಬ ಮಾತು ಏಕಕಾಲದಲ್ಲಿ ಧರ್ಮರಾಜನ ಹಳೆಯ ಚಟವನ್ನೂ ಅದರಿಂದಾದ ಅನರ್ಥವನ್ನೂ ಪ್ರಸ್ತುತ ಸಂದಿಗ್ಧದೊಡನೆ ಧ್ವನಿಸುತ್ತಿರುವುದು ಮಾರ್ಮಿಕ.
ತದಿದಂ ದ್ಯೂತಮಾರಬ್ಧಂ ಪುನರೇವ ಯಥಾ ಪುರಾ (೯.೩೨.೭)
ನಾಳೆಗೆಂದು ಏನನ್ನೂ ಉಳಿಸಿಕೊಳ್ಳದೆ ಬಾಳುವ ಅಸಂಗ್ರಹಿಗಳೂ ಅಪರಿಗ್ರಹಿಗಳೂ ಆದ ವ್ರತಿಷ್ಠರನ್ನು ನಿರ್ದೇಶಿಸಲು ಧರ್ಮಶಾಸ್ತ್ರದಲ್ಲಿ ಹಲವು ಪದಗಳುಂಟು. ಅವೆಲ್ಲ ಬಗೆಬಗೆಯ ನುಡಿಗಟ್ಟುಗಳೇ ಸರಿ. ಅಂಥದ್ದೊಂದು ಇಲ್ಲಿದೆ.
ಅಶ್ವಸ್ತನಮ್ (೧೨.೮.೧೨)
ವಿವೇಕವಿಲ್ಲದೆ ಕುರುಡಾಗಿ ವೇದಾಭ್ಯಾಸವನ್ನೇ ಮಾಡಿದರೂ ಅದು ನಿಷ್ಪ್ರಯೋಜಕವೆಂಬುದು ಆರ್ಷಸಂಸ್ಕೃತಿಯ ಅರಿವು. ಅದೆಷ್ಟೋ ಬಾರಿ “ವೇದಾಭ್ಯಾಸಜಡ,” “ಸಂಪ್ರದಾಯಜಡ,” “ಶುಷ್ಕಶ್ರೋತ್ರಿಯ” ಎಂದೆಲ್ಲ ಇಂಥವರನ್ನು ಹಳಿದಿರುವುದುಂಟು. ಯುಧಿಷ್ಠಿರ ಬಲುಮಟ್ಟಿಗೆ ಈ ವರ್ಗದವನೇ. ಅದನ್ನು ಭೀಮ “ನಿನ್ನದು ವೇದಾಭ್ಯಾಸದಿಂದ ಹದಗೆಟ್ಟ ಬುದ್ಧಿ” ಎಂದು ಎತ್ತಿ ತಿವಿಯುತ್ತಾನೆ.
ಅನುವಾಕಹತಾ ಬುದ್ಧಿಃ (೧೨.೧೦.೧)
ಹಾಲುಕರೆಯುವ ಹಸುಗಳನ್ನು ಕರೆಯುವ ಪಾತ್ರೆಯ ಪ್ರಮಾಣಕ್ಕನುಸಾರವಾಗಿ ಹೆಸರಿಸಿ ವರ್ಗೀಕರಿಸುವುದು ಹಿಂದೆ ವಾಡಿಕೆಯಾಗಿತ್ತು. ದ್ರೋಣವೆಂದರೆ ಈ ಕಾಲದ “ಬಕೆಟ್” ಎನ್ನಬಹುದು. ಅಷ್ಟು ಪ್ರಮಾಣದ ಹಾಲನ್ನು ಕರೆಯುವ ಹಸುವೇ “ದ್ರೋಣದುಘಾ.” ಇದೇ ರೀತಿ “ಕುಂಡದುಘಾ,” “ಕಲಶದುಘಾ” ಎಂದೆಲ್ಲ ಪದಗಳಿವೆ.
ದ್ರೋಣದುಘಾ (೧೨.೨೯.೫೨)
ಮೊದಲೇ ಹೇಳಿದಂತೆ, ಸಂಸ್ಕೃತದಲ್ಲಿ “ಣಮುಲ್”ಪ್ರತ್ಯಯ ಅವೆಷ್ಟೋ ನುಡಿಗಟ್ಟುಗಳನ್ನು ಸೃಜಿಸುತ್ತದೆ. “ಮಧುದೋಹಂ ದುಹೇತ್” (ಜೇನನ್ನು ಹೀರುವಂತೆ ಹೀರಬೇಕು) ಇಂಥ ಒಂದು ಪ್ರಯೋಗ. ಭೀಷ್ಮನು ಧರ್ಮರಾಜನಿಗೆ ರಾಜನೀತಿಯನ್ನು ತಿಳಿಸುವಾಗ, ದುಂಬಿ ಹೂಗಳಿಂದ ಮಕರಂದವನ್ನು ಹೀರುವಂತೆ ಪ್ರಜೆಗಳಿಂದ ಕರವನ್ನು ಸಂಗ್ರಹಿಸಬೇಕೆಂದು ಕಿವಿಮಾತು ಹೇಳುತ್ತಾನೆ.
ಮಧುದೋಹಮ್ ದುಹೇತ್ (೧೨.೮೯.೪)
ಪ್ರತಿಯೊಂದು ಭಾಷೆಯಲ್ಲಿಯೂ ಬೆಳಗ್ಗೆ ತಡವಾಗಿ ಏಳುವವರನ್ನು ಕುರಿತು ಗೇಲಿಯ ಮಾತುಗಳಿರುತ್ತವೆ. ನಮ್ಮಲ್ಲಿ ಇಂಥವರನ್ನು “ಸೂರ್ಯವಂಶಿ”ಗಳೆಂದು ತಿವಿಯುವುದುಂಟು. ಮಹಾಭಾರತ ಅಂಥವರನ್ನು “ಹಗಲೇ ರಾತ್ರಿಯಾದವರು” ಎಂದು ಹಳಿದಿದೆ.
ಪ್ರಗೇನಿಶಃ (೧೨.೨೨೧.೩೬)
ತಾವು ಧಾರ್ಮಿಕರೆಂಬ ಪ್ರದರ್ಶನರತಿಯುಳ್ಳ ಬೂಟಾಟಿಕೆಯ ಜನರನ್ನು ಎಲ್ಲ ಭಾಷೆಗಳೂ ನಿಂದಿಸಿವೆ. ಸಂಸ್ಕೃತದಲ್ಲಿ ಇಂಥವರನ್ನು “ಧರ್ಮಧ್ವಜ”ರೆನ್ನಲಾಗಿದೆ. ಮನ್ವಾದಿಸ್ಮೃತಿಗಳಲ್ಲಿದು ಪ್ರಸಿದ್ಧಪದ. ಹೇಗೆ ಬಾವುಟವು ಅಂಗೈಯಗಲದ ನೆಲದಲ್ಲಿ ತನ್ನ ಕಂಬವನ್ನು ಊರಿಕೊಂಡಿದ್ದರೂ ಬಾನಲ್ಲಿ ಹಾರಾಡಿ ಹತ್ತು ಗಾವುದಗಳಿಂದಲೂ ಕಾಣುವಂತೆ ಮೆರೆಯುವುದೋ ಹಾಗೆಯೇ ಬೂಟಾಟಿಕೆಯ ಜನರಿಗೆ ನೆಲೆ ಕಡಮೆ, ಬೆಲೆ ಹೆಚ್ಚಿಸಿಕೊಳ್ಳುವ ತೆವಲು ಮಾತ್ರ ಅಪಾರ! ಡಿ.ವಿ.ಜಿ.ಯವರು ಈ ಪದಪ್ರಯೋಗವನ್ನು ಗಮನಿಸಿಕೊಂಡು “ದೇಶಧ್ವಜಿ” ಎಂಬ ಹೊಸ ಶಬ್ದವನ್ನು ಸೃಜಿಸಿರುವುದಿಲ್ಲಿ ಸ್ಮರಣೀಯ.
ಧರ್ಮಧ್ವಜಃ (೧೨.೩೦೮.೪)