ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ |
ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ ||
(ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ)
(ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ್ಲಿ ಸಕಲಚರಾಚರಗಳೂ ರೂಪಿತವಾಗುವುವೋ ಅಂಥ ಭಾರತಬ್ರಹ್ಮನಿಗೆ ನಮಸ್ಕಾರ. ಆ ಕೃತಿಯೂ ಅದರ ಕರ್ತೃವೂ ನಮ್ಮ ಪಾಲಿಗೆ ತಿಳಿಯಲು ಮತ್ತಾವುದನ್ನೂ ಉಳಿಸಿಲ್ಲ.)
ಭಗವಾನ್ ವೇದವ್ಯಾಸರ ಮಹಾಭಾರತ ಸಕಲಾರ್ಥಗಳಲ್ಲಿ ವಿಶ್ವಕೋಶ; ಕುಮಾರವ್ಯಾಸನು ಹೇಳುವಂತೆ “ಕಾವ್ಯಕೆ ಗುರು.” ಇದು ಕಾಮಧೇನುವಿನಂತೆ ಎಲ್ಲರ ಬಯಕೆಗಳನ್ನು ತೀರಿಸಬಲ್ಲ ತವನಿಧಿ. ಇತಿಹಾಸ, ಕಾವ್ಯ, ಕಥೆ, ಶಾಸ್ತ್ರ, ಪುರಾಣ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ವೇದಾಂತವೇ ಮುಂತಾದ ಅಸಂಖ್ಯಮುಖಗಳ ಭಾರತೀಯವಿದ್ಯೆಯನ್ನು ಅರಿತು ಆಸ್ವಾದಿಸಲು ಬಯಸುವವರಿಗೆ ಇದೊಂದೇ ಶರಣ್ಯ. ಇಂಥ ಮಹಾಕೃತಿಯ ಒಂದು ಆಯಾಮವೇ ಅದರ ಭಾಷಾಪಾಕ, ಮತ್ತು ಇದರಲ್ಲಿ ನಾವು ಕಾಣಬಲ್ಲ ಒಂದು ಪುಟ್ಟ ಕೋಣವೇ ನುಡಿಬೆಡಗಿನ ಸ್ವಾರಸ್ಯ[1]. ಇಲ್ಲಿ ವಾಗ್ರೂಢಿಗಳು, ನುಡಿಗಟ್ಟುಗಳು, ವಿಶಿಷ್ಟಸಮಾಸಗಳು, ವಿನೂತನವಿಶೇಷಣಗಳು ಹಾಗೂ ರೋಚಕವಾದ ಉಪಚಾರವಕ್ರತೆಗಳು ತುಂಬಿವೆ.
ಸದ್ಯದ ಲೇಖನ ಈ ಕೆಲವನ್ನು ಕುರಿತು ಹಿತ-ಮಿತಸಂಕ್ಷೇಪದಲ್ಲಿ ಚರ್ಚಿಸುವುದಾಗಿದೆ. ಈ ಮೂಲಕ ಸಂಸ್ಕೃತಭಾಷೆಯ ಜೀವತ್ಕಾಂತಿಯೂ ವಾಚಕರಿಗೆ ಪರಿಚಿತವಾಗದಿರದು. ಏಕೆಂದರೆ ಕವಿಬ್ರಹ್ಮರಾದ ವ್ಯಾಸರು ಮಹಾಭಾರತವನ್ನು ಬರೆಯುವ ಕಾಲಕ್ಕೆ ಸಂಸ್ಕೃತದ ದೇವವಾಣೀತ್ವದಷ್ಟೇ ಮರ್ತ್ಯವಾಣೀತ್ವವೂ ಸಮೃದ್ಧವಾಗಿತ್ತು, ಸಾರ್ಥಕವಾಗಿತ್ತು. ಹೀಗಾಗಿ ಇದು ಭಾಷಾಭ್ಯಾಸಿಗಳಿಗೂ ಬೋಧಪ್ರದ. ಅಲ್ಲದೆ, ಸಂಸ್ಕೃತವಾಣಿಯನ್ನು ಕೃತಕವೆಂದು ಆಕ್ಷೇಪಿಸುವ ಅವಿಚಾರಿಗಳಿಗೆ ಇಲ್ಲಿಯ ಸಾಮಗ್ರಿ ತಮ್ಮ ಅಭಿಪ್ರಾಯವನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಒದಗಿಸಬಹುದು.
ಮೇಲೆ ಹೇಳಿದಂತೆ ಐದು ವಿಭಾಗಗಳಲ್ಲಿ ವ್ಯಾಸರ ನುಡಿಬೆಡಗುಗಳನ್ನು[2] ವಿಭಜಿಸಿ ನೋಡಬಹುದು. ಆದರೆ ಈ ಬಗೆಯ ಸ್ಥೂಲವಿಭಾಗಕ್ಕೆ ತುಂಬ ಆಳವಾದ ತರ್ಕವಿಲ್ಲ. ಏನಿದ್ದರೂ ವ್ಯಾವಹಾರಿಕವಾದ ಅಧ್ಯಯನಸೌಕರ್ಯಕ್ಕಾಗಿ ಇಂಥ ಒಂದು ವಿಭಾಗಕ್ರಮ ಪ್ರಯೋಜನವಾದೀತು. ಇಲ್ಲಿಯ ಅವೆಷ್ಟೋ ಉದಾಹರಣೆಗಳು ಮತ್ತೊಂದು ವರ್ಗಕ್ಕೂ ಸೇರಬಹುದಾಗಿವೆಯೆಂದು ವಿದ್ವಾಂಸರಿಗೆ ತೋರಬಹುದು. ಆದರೆ ಈ ವಿಭಾಗಕ್ರಮದ ಪರಮಾರ್ಥವನ್ನು ಅಷ್ಟಾಗಿ ಚಿಂತಿಸದೆ ಉದಾಹರಣೆಗಳನ್ನಷ್ಟೇ ಹೆಚ್ಚಾಗಿ ಪರಿಶೀಲಿಸಿದಲ್ಲಿ ಸಂಸ್ಕೃತಭಾಷೆಯ ಸಹಜವಾದ ಸೌಂದರ್ಯ-ಸೌಲಭ್ಯಗಳು ಚೆನ್ನಾಗಿ ಮನದಟ್ಟಾಗದಿರವು. ಅಲ್ಲದೆ, ಈ ಭಾಷೆಯನ್ನು ಮತ್ತೆ ವ್ಯಾಪಕರೀತಿಯಲ್ಲಿ ಚಾಲತಿಗೆ ತರುವ ಆಸಕ್ತಿಯುಳ್ಳವರಿಗೂ ಇವು ಒಳ್ಳೆಯ ನೆರವನ್ನು ನೀಡಬಲ್ಲುವು.
ಅಶ್ವಘೋಷ-ಕಾಳಿದಾಸರಿಗಿಂತ ಹಿಂದಿನ ಸಾಹಿತ್ಯಸಂಸ್ಕೃತವು ಹೇಗಿತ್ತೆಂಬ ಮಾದರಿ ನಮಗೆ ವಿಪುಲವಾಗಿ ಸಿಗುವುದು ವ್ಯಾಸ-ವಾಲ್ಮೀಕಿಗಳ ಆರ್ಷಕಾವ್ಯಗಳಲ್ಲಿಯೇ. ಇಲ್ಲಿಯ ಭಾಷೆ ವೇದವಾಙ್ಮಯಕ್ಕಿಂತ ಸಾಕಷ್ಟು ವಿಭಿನ್ನ, ಸರಳ. ಆದರೆ ಅಭಿಜಾತಕವಿಗಳ ನುಡಿಬಳಕೆಗಿಂತ ಗಣನೀಯವಾಗಿ ಪುರಾತನ, ಸಹಜ. ಹೀಗಾಗಿಯೇ ಇಲ್ಲಿಯ ನುಡಿಗಟ್ಟುಗಳು ಯಾವುದೇ ಭಾಷಾಭ್ಯಾಸಿಗೆ ತುಂಬ ಮುಖ್ಯವಾಗುತ್ತವೆ. ಜೊತೆಗೆ, ವಾಲ್ಮೀಕಿಮುನಿಗಳ ಭಾಷೆಗೂ ವೇದವ್ಯಾಸರ ವಾಣಿಗೂ ಸಾಕಷ್ಟು ಅಂತರವಿದೆ. ಇದನ್ನು ಪರಿಣತರು ಮಾತ್ರ ಅರಿಯಬಲ್ಲರು. ಈ ಬಗೆಯ ವಾಗ್ವೈವಿಧ್ಯವನ್ನು ಗಮನದಲ್ಲಿರಿಸಿಕೊಂಡು ಋಷಿಕವಿಗಳಿಬ್ಬರ ಬರೆಹಗಳನ್ನು ಅನುಸಂಧಾನಿಸಿದಲ್ಲಿ ಹೆಚ್ಚಿನ ಪ್ರಯೋಜನವುಂಟು.
೧. ವಾಗ್ರೂಢಿಗಳು
ವಾಗ್ರೂಢಿಗಳೆಂದರೆ ನಿತ್ಯದ ಮಾತು-ಕತೆಗಳಲ್ಲಿ ಮತ್ತೆ ಮತ್ತೆ ಮಿಂಚುವ ಸಹಜವಾದ ಚಮತ್ಕಾರಗಳು ಹಾಗೂ ಸುಲಭೀಕರಣದ ತಂತ್ರಗಳು. ಇವುಗಳ ಪರಿಧಿ ಬಹಳ ದೊಡ್ಡದು. ಆದರೆ ಈ ವಿಭಾಗದೊಳಗೆ ಸೇರಬಲ್ಲ ಕೆಲವೊಂದು ಅಂಶಗಳಿಗೆ ಅಧ್ಯಯನಸೌಕರ್ಯಕ್ಕಾಗಿ ಸ್ವತಂತ್ರವಾದ ಅಸ್ತಿತ್ವವನ್ನಿಲ್ಲಿ ಕಲ್ಪಿಸಲಾಗಿದೆ.
ಕೃತಿಯ ಮೊದಲಿಗೆ ಮಹಾಭಾರತದ ಮಹತ್ತ್ವವನ್ನು ಹೇಳುವಾಗ ಒಂದೆಡೆ ಇದನ್ನೂ ಮತ್ತೊಂದೆಡೆ ವೇದಗಳನ್ನೂ ಇಟ್ಟು ತೂಗಿದಾಗ ಮಹಾಭಾರತವೇ ಹೆಚ್ಚು ಭಾರವಾಯಿತೆಂಬ ಪ್ರಸ್ತಾವ ಬರುತ್ತದೆ. ನಮ್ಮ ಅನುದಿನದ ಆಡುನುಡಿಯಲ್ಲಿ ಇದೇ ರೀತಿ ಹೇಳುವುದುಂಟು: “ಇದೊಂದು ಕಡೆ ಅದೊಂದು ಕಡೆ ತೂಗಿ ನೋಡಿದರೆ ಅದೇ ಹೆಚ್ಚು ತೂಕ ಇದೆ.” ಇಂಥ ವಾಗ್ರೂಢಿ ಎಲ್ಲ ಭಾಷೆಗಳಲ್ಲಿಯೂ ಕಂಡುಬರುವಂಥದ್ದು. ಇದನ್ನು ಸಂಸ್ಕೃತದಲ್ಲಿ ಹೀಗೆ ಕಾಣಬಹುದು:
ಚತ್ವಾರ ಏಕತೋ ವೇದಾ ಭಾರತಂ ಚೈಕಮೇಕತಃ (೧.೧.೨೦೮)
ಆಸ್ಥೆಯಿಂದ ನಾವು ಒಳ್ಳೆಯ ಮಾತನ್ನು ಕೇಳುತ್ತೇವೆಂಬ ಇಂಗಿತವನ್ನು ವ್ಯಕ್ತಪಡಿಸುವ ವ್ಯಾಸವಾಕ್ಯವೊಂದು ಹೀಗಿದೆ. ಇಲ್ಲಿ “ಕಲ್ಯಾ ಸ್ಮ” ಎಂಬ ಅಪೂರ್ವಪದಪುಂಜ ವಿಶೇಷವಾಗಿ ತೋರುತ್ತದೆ:
ಕಥಯಸ್ವ ಕಥಾಮೇತಾಂ ಕಲ್ಯಾ ಸ್ಮ ಶ್ರವಣೇ ತವ (೧.೫.೩)
ಸಾಮಾನ್ಯವಾಗಿ ನಮ್ಮ ವ್ಯವಹಾರದಲ್ಲಿ “ಮದುವೇನ ಮುಂದಿಟ್ಟುಕೊಂಡು ಈ ಕೆಲಸ ಮಾಡೋದುಂಟಾ?,” “ತಿಥೀನ ಮುಂದಿಟ್ಟುಕೊಂಡು ದೇವಸ್ಥಾನಕ್ಕೆ ಹೋಗಬಹುದಾ?” ಇತ್ಯಾದಿ ಪ್ರಯೋಗಗಳು ನುಸುಳುವುದುಂಟು. ಇದರ ತದ್ವತ್ತಾದ ಸ್ವರೂಪವನ್ನು ಇಲ್ಲಿ ಕಾಣಬಹುದು:
ವಿವಾಹಂ ಸ್ಥಾಪಯಿತ್ವಾಗ್ರೇ (೧.೮.೧೩)
ಜನರೇ ಇಲ್ಲದ ಎಡೆಯನ್ನು ಸೂಚಿಸುವುದಕ್ಕಾಗಿ “ನಿರ್ಜನ,” “ನಿರ್ಮಾನುಷ”ವೆಂಬಂಥ ಪದಗಳು ಸಂಸ್ಕೃತದಲ್ಲಿ ವಿಪುಲವಾಗಿವೆ. ಆದರೆ ಗಂಡೆಂಬ ಅರ್ಥವನ್ನು ಸೂಚಿಸುವ ಪುರುಷಪದವನ್ನು ಹೀಗೆ ಬಳಸುವುದು ವಿರಳ. ಸಂಸ್ಕೃತದಲ್ಲಿ ಮೂಲತಃ ಪುರುಷಶಬ್ದವು ಸ್ತ್ರೀ-ಪುರುಷಭೇದವಿಲ್ಲದೆ ಬಳಕೆಯಾಗುತ್ತಿದ್ದ ಕಾಲದಲ್ಲಿ ಬಂದಿರಬಹುದಾದ ಪ್ರಯೋಗವೊಂದನ್ನಿಲ್ಲಿ ಗಮನಿಸಬಹುದು:
ತತೋ ನಿಷ್ಪುರುಷಂ ಶೈಲಂ ಹಿಮಸಂರುದ್ಧಕಂದರಮ್ (೧.೨೬.೧೭)
ನಾವು ಸಾಮಾನ್ಯವಾಗಿ “ಇದೊ, ಈ ವಿಷಯವನ್ನಿಲ್ಲಿಗೆ ಬಿಟ್ಟೆ,” “ಇದೊ, ಇದನ್ನಿಲ್ಲಿ ಬಿಸುಡುತ್ತಿದ್ದೇನೆ” ಇತ್ಯಾದಿಯಾಗಿ ಕೇಳುಗನ ಗಮನವನ್ನು ಕಾರ್ಯವೊಂದೆಡೆ, ತಾಣವೊಂದೆಡೆ ಸೆಳೆಯುವಂತೆ ಮಾತಾಡುವುದುಂಟು. ಅಂಥ ಒಂದು ಪ್ರಯೋಗವಿಲ್ಲಿದೆ. ಅಮೃತವನ್ನು ಅಪಹರಿಸುವ ಗರುಡನು ತನಗೆದುರಾದ ಇಂದ್ರನನ್ನು ಕುರಿತು ಹೇಳುವ ಮಾತಿದು. ಅವನ ವಜ್ರಾಯುಧಕ್ಕೆ ಪ್ರತಿಯಾಗಿ ತನ್ನದೊಂದು ಗರಿಯನ್ನು ಜಾರಿಸುವೆನೆಂದು ಹೇಳುತ್ತಾನೆ. ಇದು ಆ ಆಯುಧಕ್ಕೆ ಇವನು ಸಲ್ಲಿಸುವ ಗೌರವವೆಂಬುದು ಒಂದು ಇಂಗಿತ. ಜೊತೆಗೆ, ನಿನ್ನ ವಜ್ರಾಯುಧ ನನ್ನ ಒಂದು ಗರಿಯಷ್ಟು ಮಾತ್ರದ ಯೋಗ್ಯತೆಯದೆಂಬ ಗೇಲಿಯ ಧ್ವನಿಯೂ ಉಂಟು. ಇಂಥ ಮಾತುಗಳನ್ನು ಗ್ರಾಮ್ಯಕಲಹಗಳಲ್ಲಿ ಅನುದಿನವೂ ಕೇಳಬಹುದಾದ ಕಾರಣ ಹೆಚ್ಚಾಗಿ ವಿಸ್ತರಿಸಬೇಕಿಲ್ಲ.
ಏಷ ಪತ್ರಂ ತ್ಯಜಾಮ್ಯೇಕಮ್ (೧.೨೯.೨೦)
ಯಾವುದೇ ಕೆಲಸವು ಸಂಪನ್ನವಾದಾಗ ಅದು ಸಿದ್ಧವಾಯಿತೆಂಬಂತೆ ಹೇಳುವಲ್ಲಿ ಸಾಮಾನ್ಯವಾಗಿ “ಎಲ್ಲ ಸರಿಯಾಯಿತು,” “ಎಲ್ಲ ಅಚ್ಚುಕಟ್ಟಾಯಿತು” ಎನ್ನುವಂಥ ಮಾತುಗಳನ್ನು ಬಳಸುತ್ತೇವಷ್ಟೆ. ಇವುಗಳ ಧ್ವನಿಯನ್ನು ಇಲ್ಲಿ ಕಾಣಬಹುದು:
ಉಪಪನ್ನಮಿತಿ ಬ್ರುವನ್ (೧.೩೬.೫) [ಉಪಪನ್ನಮಿದಂ ಪಾರ್ಥ (೫.೭.೩೫)]
ಕೆಲವೊಮ್ಮೆ ಬಾಯಿಬಿಟ್ಟು ಹೇಳಲು ಮುಜುಗರವಾಗುವ ಸಂಗತಿಗಳನ್ನು “ಅದು,” “ಇದು” ಎಂಬ ಸರ್ವನಾಮಗಳ ಮೂಲಕ, ಇಲ್ಲವೆ “ಇದೆ,” “ಇಲ್ಲ” ಎಂಬಂಥ ಕ್ರಿಯಾಪದಗಳ ಮೂಲಕ ನಾವು ಸೂಚಿಸಿ ಬಿಡುತ್ತೇವೆ. ಅಂಥ ಒಂದು ಸಂದರ್ಭವೇ ಸದ್ಯದ ಉದಾಹರಣೆಯಲ್ಲಿದೆ. ಜರತ್ಕಾರುವಿಗೆ ತನ್ನ ಗಂಡನಿಂದ ಗರ್ಭವುಂಟಾಗಿದೆಯೇ ಇಲ್ಲವೇ ಎಂಬ ಸಂದೇಹವನ್ನು ನಿವಾರಿಸಲು “ಇದೆಯೆಂದು ಹೊಟ್ಟೆಯನ್ನು ತೋರಿಸಿ” ಎಂಬ ಈ ಮಾತು ಬಳಕೆಯಾಗಿದೆ. ಇಲ್ಲಿ “ಉದರಮುದ್ದಿಶ್ಯ” ಎಂಬ ಕ್ರಿಯಾಸೂಚಕವಾದ ವಾಕ್ಯಭಾಗವು ತುಂಬ ಅರ್ಥಪೂರ್ಣ.
ಅಸ್ತೀತ್ಯುದರಮುದ್ದಿಶ್ಯ (೧.೪೪.೧೦)
ಮತ್ತೆ ಮತ್ತೆ ನಮ್ಮ ವ್ಯವಹಾರದಲ್ಲಿ ಪಶ್ಚಾತ್ತಾಪದ ಧ್ವನಿಯಾಗಿ “ಕೈಕೈ ಹಿಸುಕಿಕೊಳ್ಳುವುದು” ಎಂಬ ಪದಪುಂಜದ ಬಳಕೆಯಿದೆ. ಅದರ ತದ್ವತ್ತಾದ ಅನುವಾದ ಇಲ್ಲಿದೆ:
ಪರ್ಯತಪ್ಯತ ದುಃಖಾರ್ತಃ ಪ್ರತ್ಯಪಿಂಷತ್ ಕರೇ ಕರಮ್ (೧.೪೬.೩೩)
[ಇದರ ಮತ್ತೊಂದು ರೂಪವನ್ನೂ ಕಾಣಬಹುದು: ಪಾಣೌ ಪಾಣಿಂ ವಿನಿಷ್ಪಿಷ್ಯ (೨.೬೧.೧೮)]
ವಿಪ್ರಶಾಪಕ್ಕೆ ಧ್ವನಿಪೂರ್ಣವಾದ ವಾಗ್ರೂಢಿ “ಬ್ರಹ್ಮದಂಡ”ವೆಂದೇ ಸಂಸ್ಕೃತದಲ್ಲಿ ಪ್ರಸಿದ್ಧವಾಗಿದೆ. ಇದು ಮಹಾಭಾರತದಿಂದ ಈಚೆಗೆ ಹೆಚ್ಚಾಗಿ ಬಳಕೆಯಲ್ಲಿದೆ:
ಬ್ರಹ್ಮದಂಡನಿಪೀಡಿತಾಃ (೧.೫೨.೨೨)
ಸಂಸ್ಕೃತದಲ್ಲಿ “ಲೋಪ್ತ್ರ”ಪದಕ್ಕೆ “ಅಪಹರಿಸಲ್ಪಟ್ಟ ಸೊತ್ತು” ಎಂಬ ಅರ್ಥವುಂಟು. ಆದರೆ ಮಹಾಭಾರತವು ಅಪಹೃತವಾದದ್ದೇ ಅಪಹರಿಸಲ್ಪಟ್ಟ ಸೊತ್ತೆನ್ನುವ ಮೂಲಕ ಮೂಲತಃ ಆ ಸಂಪತ್ತಿಯೇ ಅನ್ಯಾಯದ್ದೆಂಬ, ಅಥವಾ ಕಳ್ಳರು ಕದಿಯಲು ಅರ್ಹವಾದುದನ್ನೇ ಕದಿಯುವರೆಂಬ ಅರ್ಥಗಳನ್ನು ಸೂಚಿಸುವಂತೆ ಈ ಪದದ ಬಳಕೆಯಾಗಿರುವುದು ಗಮನಾರ್ಹ:
ದಸ್ಯವೋ ಲೋಪ್ತ್ರಹಾರಿಣಃ (೧.೧೦೧.೪)
ಸಾಮಾನ್ಯವಾಗಿ ಸ್ವಪಕ್ಷಸ್ಥಾಪನೆಯ ಭರದಲ್ಲಿ ಶಪಥಪೂರ್ವಕವಾಗಿ ಮಾತನಾಡುವಾಗ “ನಾನು ನಾನೇ ಆಗಿದ್ದಲ್ಲಿ,” “ನಾನು ನನ್ನ ಅಪ್ಪನಿಗೇ ಹುಟ್ಟಿದ್ದಲ್ಲಿ” ಎಂಬಿವೇ ಮೊದಲಾದ ಪದಪುಂಜಗಳನ್ನು ಬಳಸುತ್ತೇವೆ. ಇಂಥ ಒಂದು ರೋಚಕ ಉದಾಹರಣೆಯನ್ನು ದ್ರೌಪದಿಯ ಸ್ವಯಂವರಕ್ಕೆ ವೇಷ ಮರಿಸಿಕೊಂಡು ಬಂದ ಪಾಂಡವರನ್ನು ಶ್ರೀಕೃಷ್ಣ ಗುರುತಿಸುವಲ್ಲಿ ಕಾಣಬಹುದು. ಅವನು ಬಲರಾಮನಿಗೆ ಪಾಂಡವರನ್ನು ತೊರಿಸಿಕೊಡುವಾಗ, “ನಾನು ನಮ್ಮಪ್ಪನ ಮಗನೇ ಆಗಿದ್ದಲ್ಲಿ (ಯದ್ಯಸ್ಮಿ ವಾಸುದೇವಃ) ಇಲ್ಲಿರುವ ಬ್ರಾಹ್ಮಣವೇಷಧಾರಿಗಳು ಪಾಂಡವರೇ ಸರಿ” ಎನ್ನುತ್ತಾನೆ:
ಯದ್ಯಸ್ಮಿ ಸಂಕರ್ಷಣ ವಾಸುದೇವಃ (೧.೧೮೧.೧೮)
ನಾಚಿಕೆಯ ಪ್ರಕ್ರಿಯೆಯನ್ನು ಆಂಗಿಕವಾಗಿ ಸೂಚಿಸುವಲ್ಲಿ ನೆಲವನ್ನು ಕಾಲ್ಬೆರಳಿನಿಂದ ಕೆರೆಯುವ ಪ್ರಸ್ತಾವ ಅನಿವಾರ್ಯ. ಇದು ನೃತ್ಯ-ನಾಟಕಗಳಲ್ಲಿಯೂ ಅಭಿನಯಪ್ರಸಿದ್ಧವಾಗಿದೆ. ಇಂಥ ಎರಡು ಉದಾಹರಣೆಗಳನ್ನು ನಾವೀಗ ನೋಡಬಹುದು:
ಚರಣೇನಾಲಿಖನ್ಮಹೀಮ್ (೩.೧೧.೨೯)
ವಿಲಿಖಂತಂ ವಸುಂಧರಾಮ್ (೩.೧೧.೩೦)
ಲೋಕರೂಢಿಯಲ್ಲಿ ಅತಿಶಯವಾಗಿ ವರ್ಣಿಸುವಾಗ “ನೀನು ಜಾಣರ ಜಾಣನಾಗುತ್ತೀಯೆ,” “ದೊರೆಗಳ ದೊರೆಯಾಗುತ್ತೀಯೆ” ಎಂದು ಹೇಳುವುದುಂಟು. ಅಂಥ ಒಂದು ಉದಾಹರಣೆಯಿಲ್ಲಿದೆ:
ರಾಜ್ಞಾಂ ರಾಜ್ಞೀ ಭವಿಷ್ಯಸಿ (೩.೧೩.೧೧೬)
ಅನುಕರಣಶಬ್ದಗಳು ನಿತ್ಯವ್ಯವಹಾರದಲ್ಲಿ ಅಪಾರ. ಬೇರೆ ಬೇರೆ ಸಂದರ್ಭಗಳಲ್ಲಿ ಇವು ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತವೆ. ಕಿರಾತರೂಪಿ ಶಿವ ಮತ್ತು ಅರ್ಜುನರು ಮುಷ್ಟಾಮುಷ್ಟಿ ಯುದ್ಧ ಮಾಡುವಾಗ ಹೊರಟ ಶಬ್ದವನ್ನು ಮಹಾಭಾರತ ಹೀಗೆ ರೂಪಿಸಿದೆ:
ಚಟಚಟಾಶಬ್ದಃ (೩.೪೦.೪೫)
ನಮ್ಮ ದೇಶಭಾಷೆಗಳಲ್ಲಿ “ಹೋಗ್ತಾ ಹೋಗ್ತಾ ಅವನು ಹೀಗಾದ,” “ಬರ್ತಾ ಬರ್ತಾ ಅವರು ಹಾಳಾದರು” ಇತ್ಯಾದಿ ಪ್ರಯೋಗಗಳುಂಟು. ಅಂಥದ್ದೇ ಒಂದು ಪದಪುಂಜ ಮಹಾಭಾರತದ ನಲೋಪಾಖ್ಯಾನದಲ್ಲಿ ಹೀಗಿದೆ:
ಗತ್ವಾ ಗತ್ವಾ ನಲೋ ರಾಜಾ (೩.೫೯.೨೨)
ಪಯಣಕ್ಕೆ ಅಣಿಯಾಗಬೇಕೆಂಬ ಅರ್ಥದಲ್ಲಿ “ದಾರಿ ತೋರಿಸು” ಎಂಬ ಮಾತು ರೂಢಿಯಲ್ಲಿದೆ. ಇದು ಸಂಸ್ಕೃತದಲ್ಲಿ ಕೂಡ “ಮಾರ್ಗಮಾದಿಶ” ಎಂಬಂತೆ ಬಳಕೆಯಲ್ಲಿದೆ. ಆದರೆ ಮಹಾಭಾರತವು ಪಯಣಕ್ಕೆ ಅನುವಾದ ವಾಹನದತ್ತ ಕೊಂಡೊಯ್ಯಬೇಕೆಂಬ ಅರ್ಥದಲ್ಲಿ “ಯಾನಮಾದಿಶ” ಎಂಬ ಪ್ರಯೋಗ ಮಾಡಿದೆ. ಇದು ಗಮನಾರ್ಹವಾದ ವೈಚಿತ್ರ್ಯ. ಜೊತೆಗೆ, ಸಂಸ್ಕೃತದಲ್ಲಿ ಕೇವಲ ಪ್ರದೇಶವೊಂದನ್ನು ನಿರ್ದೇಶಿಸುವಾಗ ನಪುಂಸಕಲಿಂಗದ ಏಕವಚನ (ಉದಾ: “ಕರ್ಣಾಟಮ್”) ಬಳಕೆಯಲ್ಲಿದ್ದರೂ ಜನಭರಿತವಾದ ಜನಪದವೊಂದನ್ನು ಸೂಚಿಸಲು ಪುಲ್ಲಿಂಗ-ಬಹುವಚನವನ್ನು ಬಳಸುವುದುಂಟು (“ಕರ್ಣಾಟಾಃ”). ಇದೊಂದು ವ್ಯಾಕರಣವೈಶಿಷ್ಟ್ಯವೂ ಆಗಿದೆ. ಇಂಥ ಪ್ರಯೋಗವನ್ನಿಲ್ಲಿ ನೋಡಬಹುದು (“ವಿದರ್ಭಾನ್”):
ವಿದರ್ಭಾನ್ ಯಾತುಮಿಚ್ಛಾಮಿ ಶೀಘ್ರಂ ಮೇ ಯಾನಮಾದಿಶ (೩.೬೬.೧೯)
[1] ಸಂಸ್ಕೃತಭಾಷೆಯಲ್ಲಿ “ಇಡಿಯಮ್” ಅಥವಾ ನುಡಿಗಟ್ಟಿಗೆ ಸಂವಾದಿಯಾಗಿ “ವಾಚೋಯುಕ್ತಿ” ಮತ್ತು “ವಚೋವಿಚ್ಛಿತ್ತಿ”ಗಳೆಂಬ ಶಬ್ದಗಳನ್ನು ಆಧುನಿಕವಿದ್ವಾಂಸರು (ಎದ್ವಾನ್ ಎನ್. ರಂಗನಾಥಶರ್ಮಾ ಮತ್ತು ಡಾ|| ಪುಲ್ಲೆಲ ಶ್ರೀರಾಮಚಂದ್ರುಡು) ಬಳಸಿಕೊಂಡಿದ್ದಾರೆ. ಬಹುಶಃ ಆಲಂಕಾರಿಕತಲ್ಲಜನಾದ ಕುಂತಕನ “ಭಂಗೀಭಣಿತಿ” ಎಂಬ ಶಬ್ದವೇ ಇವುಗಳ ಪ್ರಾಚೀನರೂಪ.
[2] ಈ ಲೇಖನದಲ್ಲಿ ಬರುವ ಮಹಾಭಾರತದ ಉಕ್ತಿಗಳೆಲ್ಲ ಪುಣೆಯ ಭಂಡಾರ್ಕರ್ ಪ್ರಾಚ್ಯವಿದ್ಯಾಲಯದ ಪರಿಷ್ಕೃತಪಾಠ್ಯವನ್ನು ಅವಲಂಬಿಸಿವೆ.
To be continued.