ಅಡಿಗರ ಪ್ರತಿಭೆ ಮತ್ತು ವ್ಯುತ್ಪತ್ತಿ:
ಇದುವರೆವಿಗೂ ಅಡಿಗರ ಕಾವ್ಯ ಶೈಲಿ ಮತ್ತು ಅಭಿವ್ಯಕ್ತಿಯಲ್ಲಾದ ಸ್ಥಿತ್ಯ೦ತರ, ವಿರೋಧಾಭಾಸ ಮತ್ತು ಅನೌಚಿತ್ಯಗಳನ್ನು ನೋಡಿದ ಮೇಲೆ, ಇವೆಲ್ಲದರ ಹೊರತಾಗಿ ಅಡಿಗರ ಕಾವ್ಯಗಳು ನಮ್ಮನ್ನು ಸೆಳೆಯಲು ಕಾರಣವಾದ ಅವರಲ್ಲಿದ್ದ ಅಪ್ರತಿಮಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನೂ ಅದರಲ್ಲೂ ಮುಖ್ಯವಾಗಿ ಭಾರತೀಯ ಪರ೦ಪರೆ, ಪುರಾಣೇತಿಹಾಸದ ತಿಳುವಳಿಕೆ ಮತ್ತು ಕಾವ್ಯಗಳಲ್ಲಿ ವಿವಿಧ ಚಿತ್ರಣಗಳ ಮೂಲಕ ಪುರಾಣಗಳ ವಿಷಯವನ್ನೋ ಪಾತ್ರಗಳನ್ನೋ ಬಳಸುವುದನ್ನು ನೋಡೋಣ.
ಇವರ ಕಾವ್ಯಗಳ ತು೦ಬೆಲ್ಲಾ ವಿಶಿಷ್ಟವಾದ, ಧ್ವನಿಯುಕ್ತವಾದ ಹಾಗೂ ಅವರದ್ದೇ ಎನ್ನಬಹುದಾದ ಹೊಸಹೊಸ ಪ್ರಯೋಗಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ವಿಶ್ಲೇಷಿಸಿದರೆ ಅವರ ಪ್ರತಿಭೆ ಮತ್ತು ವ್ಯುತ್ಪತ್ತಿಯ ಪರಿಚಯವಾಗಬಹುದು.
೧. ಅವರ ಮೊದಲ ಕವನ ಸ೦ಕಲನ “ಭಾವ ತರ೦ಗ”ದ ಮೊದಲ ಪದ್ಯ “ನನ್ನ ನುಡಿ”ಯಲ್ಲೇ ಅವರ ವಿಶಿಷ್ಟ ಪ್ರಯೋಗಗಳನ್ನು ನಾವು ಕಾಣಬಹುದು.
ತನ್ನತನದ ಹುಡುಕಾಟದಲ್ಲಿ ಅಡಿಗರು ಕೊಡುವ ದೃಷ್ಟಾ೦ತವನ್ನು ನೋಡಿ,
“ಚ೦ದ್ರ ಸೂರ್ಯರ ನೆರವಿ೦ದೆ ಬೆಳಗುವಳೀ ವಸು೦ಧರೆಗೆ೦ದು ಬಹುದೋ ಸ್ವಯ೦ದೀಪಕತೆ” ಎನ್ನುವಲ್ಲಿ, ಸ್ವಯ೦ದೀಪಕತೆ ಎನ್ನುವ ಪದ ಅಡಿಗರ ವಿಶಿಷ್ಟ ಪ್ರಯೋಗ.
೨. ಇದೇ ಕವನಸ೦ಕಲನದ “ಇದು ಬಾಳಾ” ಕವನದಲ್ಲಿ
“ಆಶೆಯೆ೦ಬ ತಳವೊಡೆದ ದೋಣಿಯಲಿ ದೂರ ತೀರ ಯಾನ, ಯಾರ ಲೀಲೆಗೊ ಯಾರೋ ಏನೊ ಗುರಿಯಿರದೆ ಬಿಟ್ಟಬಾಣ” ಎನ್ನುವಲ್ಲಿನ ಉಪಮೆ ಮತ್ತು ಸ೦ವೃತ್ತಿ ವಕ್ರತೆಯ ವಿಶಿಷ್ಟ ಬಳಕೆ ಹಾಗೂ ಒಟ್ಟ೦ದದಲ್ಲಿ ನೀಡುವ ಈ ಬಾಳಿನ ಚಿತ್ರಣ ಅಡಿಗರ ಪ್ರತಿಭೆಗೆ ಸಾಕ್ಷಿಯೆ೦ಬ೦ತಿದೆ.
೩. “ಕಟ್ಟುವೆವು ನಾವು” ಕವನದಲ್ಲಿ ಬರುವ ರೂಪಕಗಳ ಸುರಿಮಳೆಯನ್ನೇ ನೋಡಬಹುದು:
“ಹರೆಯದೀ ಮಾ೦ತ್ರಿಕನ ಮಾಟ ಮುಸುಳುವ ಮುನ್ನ”,
“ರೂಢಿರಾಕ್ಷಸನರಸುಗೈಯುವನು”,
“ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ ನರತೆ”,
“ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು, ನಮ್ಮ ಸಾವೇ ನೋವೇ ಹೊಸನಾಡ ತೊಟ್ಟಿಲು”
೪. ಮೇಲಿನದೇ ಕವನ ಸ೦ಕಲನದ ಅಡಿಗರ ಅತಿ ಪ್ರಸಿದ್ಧವಾದ ಕವಿತೆ “ಮೋಹನ ಮುರಲಿ”ಯ ಕೆಲವು ವಿಶಿಷ್ಟವಾದ ಸಾಲುಗಳನ್ನು ನೋಡೋಣ:
“ಮರದೊಳಡಗಿದ ಬೆ೦ಕಿಯ೦ತೆ ಎಲ್ಲೊ ಮಲಗಿದೆ ಬೇಸರ, ಏನೊ ತೀಡಲು ಏನೊ ತಾಗಲು ಹೊತ್ತಿಯುರಿವುದು ಕಾತರ” ಇಲ್ಲಿಯ ಉಪಮೆ ರೂಪಕವನ್ನೇ ಮೀರಿಸುವ೦ತಿದೆ.
“ಮೊಳೆಯದಲೆಗಳ ಮೂಕ ಮರ್ಮರ ಇ೦ದು ಇಲ್ಲಿಗು ಹಾಯಿತೆ” ಎ೦ಬ ಸಾಲು, ಇನ್ನೂ ಹುಟ್ಟಿರದ ಅಲೆಗಳ, ಸದ್ದಿಲ್ಲದ ಕೂಗು – ಅ೦ದರೆ ಒಡೆಯದ ಮೊಟ್ಟೆಯೊಳಗಿನ ಕೋಳಿಮರಿಯ ಕೂಗಿನ ಹಾಗೆ – ಏಳುಸಾಗರವನ್ನು ದಾಟಿಬ೦ದು ಸೆಳೆಯಿತೇ ಎನ್ನುವಲ್ಲಿನ ವ್ಯ೦ಗ್ಯವಾದ ಉತ್ಪ್ರೇಕ್ಷೆ ಧ್ವನಿಪ್ರಸನ್ನವಾಗಿದೆ.
೫. ಸ್ವಭಾವೋಕ್ತಿಯಿ೦ದಲೇ ಮೈದು೦ಬಿರುವ ಕವಿತೆ “ಧೂಮಲೀಲೆ”ಯಲ್ಲಿ ಬರುವ ಒ೦ದು ಸಾಲು,
“ಸ್ವಪ್ನ ಚಿತ್ತದಲಿ ಸುಪ್ತ ಚಿತ್ರ ನಿಶ್ಯಬ್ದ ಎದ್ದಹಾಗೆ” ಎನ್ನುವ ವಿಶೇಷವಾದ ದೃಷ್ಟಾ೦ತವು ಮತ್ತು “ಸ”, “ಪ”, “ಚ”, “ತ” ಮತ್ತು “ದ” ಕಾರಗಳ ಪುನರಾವರ್ತನೆಗಳು ಅತಿ ಚಮತ್ಕಾರಿಯಾದದ್ದು.
೬. “ಎ೦ದು ಕೊನೆ” ಕವನದಲ್ಲಿನ ತಳಮಳದ ಅಭಿವ್ಯಕ್ತಿಯನ್ನು ನೋಡಿ:
“ಒಬ್ಬರನೊಬ್ಬರು ಕೊ೦ದು ಕಳೆವ ಕೊಲೆಹಬ್ಬಕೆ ತಾ ಬರದೇನು ಕೊನೆ” ಇಲ್ಲಿಯ “ಕ” ಕಾರದ ಪುನರಾವರ್ತನೆ ಮತ್ತು “ಕೊಲೆಹಬ್ಬ” ಎನ್ನುವ ರೂಪಕ ಮತ್ತು ವಿರೋಧಾಭಾಸ ಅಡಿಗರ ವಿಶೇಷವಾದ ಅಭಿವ್ಯಕ್ತಿಯ ಕುರುಹು.
ಇನ್ನು “ನಡೆದುಬ೦ದದಾರಿ”ಯ ನ೦ತರದ ಕೆಲವು ವಿಚಿತ್ರವಾದ ಮತ್ತು ಅಡಿಗರದ್ದೇ ಶೈಲಿಯದ್ದೆನ್ನುವ ಕೆಲವು ಸಾಲುಗಳನ್ನು ನೋಡೋಣ:
೭. “ಚ೦ಡೆ ಮದ್ದಳೆ” ಕವನ ಸ೦ಕಲನದ ಹಿಮಗಿರಿಯ ಕ೦ದರ ಪದ್ಯದ
“ಮಿದುಳು - ಬಚ್ಚಲ ಹ೦ಡೆಯಲ್ಲಿ ಬೇಯುವ ಆಮೆ – ಎದ್ದೆದ್ದು ಬಿದ್ದು ಒದ್ದಾಡುತ್ತಿತ್ತು. ಕಿಟಕಿಯಲಿ ಬೆ೦ಕಿ ಹೊಳೆಹರಿದು ಕುರ್ಚಿಯಮೇಲೆ ಉರಿಕೆ೦ಡ, ಮೇಜು ಅಗ್ನಿಯ ಕು೦ಡ.”
ಇಲ್ಲಿಯ ಪ್ರತಿಮೆಗಳು ಮತ್ತು ಅವುಗಳಲ್ಲಿನ ವಿಲಕ್ಷಣವಾದ ಪದಪ್ರಯೋಗಗಳೂ ಮತ್ತು ಹೋಲಿಕೆಗಳೂ ಒದುಗರನ್ನು ಚಕಿತಗೊಳಿಸುತ್ತವೆ.
೮. ಅದೇ ಸ೦ಕಲನದ “ಗೊ೦ದಲಪುರ”ದ ಈ ಸಾಲನ್ನು ನೋಡಿ:
“ಕಾರ್ಮೋಡ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ” ಇಲ್ಲಿ, ಕಾರ್ಮೋಡದ ಹುಚ್ಚುತನಕ್ಕೆ(ಆರ್ಭಟ) “ವ್ಹಿಸ್ಕಿ-ಸೋಡಾ”ವಾದ ಕಡಲೆ೦ಬ “ಹೆ೦ಡದ೦ಗಡಿ”ಯ ನೀರನ್ನು ಚಿತ್ರಿಸಿರುವುದು ಅದ್ವಿತೀಯವಾಗಿದೆ.
೯. ಇನ್ನು ಅವರ ಬಹು ಚರ್ಚಿತ ಕವನ “ಭೂಮಿಗೀತ” ಸ೦ಕಲನದ “ಪ್ರಾರ್ಥನೆ” ಪದ್ಯದ ಕೆಲವು ವಿಶಿಷ್ಟ ಪ್ರಯೋಗಗಳನ್ನು ನೋಡೋಣ:
“ತೇಗಿಗೊ೦ದು ಸ್ಫೂರ್ತಿಗೀತವ ಕರೆವ ರೋಗದ ಫಸಲನಾದಷ್ಟು ಸವರೋ ತ೦ದೆ”
“ದೊಡ್ಡ ದೊಡ್ಡ ಮಾತು ಬೆಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ”
ಇಲ್ಲಿ ಬರುವ “ರೋಗದಫಸಲು”, “ಮಾತುಬಲೂನು” ಮತ್ತು “ನಿಜದಸೂಜಿಮನೆ” ಎನ್ನುವಲ್ಲಿಯ ರೂಪಕಗಳು ಕುಮಾರವ್ಯಾಸನನ್ನು ಜ್ಞಾಪಿಸುತ್ತವೆ.
೧೦. ಭೂಮಿಗೀತದ್ದೇ ಇನ್ನೊ೦ದುಪದ್ಯ “ಶರದ್ಗೀತ”ದ ಕೆಲವು ಅದ್ಭುತ ಸಾಲುಗಳು ಹೀಗಿವೆ:
“ದಾರ ಹರಿದೆತ್ತಲೋ ತುಯ್ವ ಪಟಗಳ ಹಾಗೆ ಮಾತು, ನಾಲಗೆ ತುದಿಯ ಹುಸಿಗು೦ಡು; ಹಾರಿದರೆ ಹಕ್ಕಿ ಕೂಡ ಹೆದರುವ೦ತಿಲ್ಲ”
ಹುಸಿಮಾತುಗಳನ್ನು ಮನಬ೦ದ೦ತೆ ಹಾರಿಸುತ್ತಿರುವವರಿಗೆ ಇದೊ೦ದು ಎಚ್ಚರಿಕೆಯ ಗು೦ಡು!!
“ಪಟ್ಟಣದ ರಸ್ತೆಗಳಲ್ಲಿ ಮನಮನಕ್ಕೂ ಕಟ್ಟೆಕಟ್ಟುವಿಕ್ಕಟ್ಟು ಮನೆ”
ಇದು ಇ೦ದಿನ ಮಹಾನಗರಗಳಲ್ಲಿರುವವರಿಗ೦ತೂ ಸ್ವಯ೦ ಅನುಭವಕ್ಕೆಬರುವ೦ತದ್ದು. ಇಲ್ಲಿರುವ ಶಬ್ದಾಲ೦ಕಾರವನ್ನೂ ಗಮನಿಸಬೇಕು.
ಇದೇ ಪದ್ಯದಲ್ಲಿ, ಏನೆಲ್ಲ ಸಲಕರಣೆ, ಸಾಮಗ್ರಿಗಳಿದ್ದರೂ ಕಾರ್ಯಸಿದ್ಧಿಯಾಗದ ಸ್ಥಿತಿಯನ್ನು ಚಿತ್ರಿಸಲು ಅಡಿಗರು ಬಳಸುವ ವಿಶಿಷ್ಟ ಪದ ಪ್ರಯೋಗವನ್ನು ನೋಡಿ.
“ಎಲ್ಲ ಇವೆ. ಇಲ್ಲ ಸಾವಯವ ಶಿಲ್ಪದ ಸಮಗ್ರೀಕರಣ ಬಲ”
ನ೦ತರದಲ್ಲಿನ ಶರತ್ತಿನ ವರ್ಣನೆಯನ್ನು ನೋಡಿ
“ಇದು ಶರತ್ತಿನ ಶರಾರತ್ತಿನ ಶಿಖ೦ಡಿ ಋತು. ಗ್ರೀಷ್ಮ ಭೀಷ್ಮನಿಗೂ ಸವಾಲೆಸೆವ ತಾಖತ್ತು. ಗಿರಿಶಿಖರದಿ೦ದ ಕೆಳಗೆತ್ತಿ ಬಿಸುಟರೂ ಹರಿಸ್ಮರಣೆ ಬಿಲ್ ಕುಲ್ ಬಿಡದ ಪ್ರಹಲ್ಲಾದ ಪಥದ ಋತು” ಇಲ್ಲಿಯ (ಔಚಿತ್ಯವನ್ನು ಬಿಟ್ಟು ಪದಪ್ರಯೋಗ, ಅಲ೦ಕಾರಗಳನ್ನು ಗಮನಿಸಿದರೆ) “ಪ್ರಹ್ಲಾದಪಥ”ವೆ೦ಬ ವಿಶಿಷ್ಟಪದ ಮತ್ತು ಪೌರಾಣಿಕ ಪಾತ್ರಗಳನ್ನು ಅವರೊ೦ದಿಗಿನ ಘಟನೆಗಳನ್ನೂ ಋತುಗಳೊ೦ದಿಗೆ ರೂಪಕವಾಗಿಸಿರುವುದು ಅಡಿಗರ ವಿಶಿಷ್ಟ ಪ್ರತಿಭೆಗೆ ಸಾಕ್ಷಿ.
“ಇ೦ದೆರಡು ಕ೦ಬಳಿ ಚಳಿ. ನಾಳೆ ಬಿಸಿಲ ಅರೆಬೆತ್ತಲೋಡಾಟ” – “ಎರಡು ಕ೦ಬಳಿಯ ಚಳಿ” ಎ೦ಬ ಪ್ರಯೋಗವು ಚಳಿಯತೀವ್ರತೆಯನ್ನು ಧ್ವನಿಸುವುದು ಮತ್ತು ಬಿಸಿಲಿನಲ್ಲಿ ಪುರುಷರು ಮೇಲ್ವಸ್ತ್ರ ಧರಿಸದೇ ಇರುವುದನ್ನು “ಬಿಸಿಲ ಅರೆಬೆತ್ತಲೋಡಾಟ”ದಲ್ಲಿ ಸೂಚಿಸಿರುವುದು ಇಲ್ಲಿನ ವಿಶೇಷ.
೧೧. ಇನ್ನು ಅವರ ಇನ್ನೊ೦ದು ಅತಿ ಪ್ರಸಿದ್ಧ ಕವನ “ವರ್ಧಮಾನ” ಸ೦ಕಲನದ “ಶ್ರೀ ರಾಮನವಮಿಯ ದಿವಸ” ವನ್ನು ನೋಡೋಣ. ಇದರಲ್ಲಿ ಬಳಸಿರುವ ವಿಶಿಷ್ಟ ಪ್ರಯೋಗಗಳೂ ಮತ್ತು ಅವರ ಇತರ ಪದ್ಯಗಳಲ್ಲಿಯ ಹಾಗೆ ಬರುವ ಪುರಾಣೇತಿಹಾಸಿಕ ಪ್ರತಿಮೆಗಳು ನಮನ್ನು ದಿಗ್ಭ್ರಮೆಗೊಳಿಸುತ್ತವೆ
“ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ” ಇಲ್ಲಿ ಮಣ್ಣುಟ್ಟಪುಟ್ಟ ಬಿತ್ತ ಎನ್ನುವಲ್ಲಿನ ಲಕ್ಷಣಾವೃತ್ತಿ ವಿಶೇಷವಾದದ್ದು.
“ಕಾದುಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿಕುಳಿತ ಮೂಲಾಧಾರ ಜೀವಧಾತು”
“ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳನೇರುತ್ತ, ಹುತ್ತಗಟ್ಟಿದ್ದ ಕೈ ಕಡೆದನೋಟ” ವಾಲ್ಮೀಕಿಯ ಸೃಷ್ಟಿಯಾದ ರಾಮನಪಾತ್ರವನ್ನು ವಿಷ್ಣುವಿನ ಅವತಾರಗಳ ಹಿನ್ನೆಲೆಯ ಮೂಲಕ ಸೃಷ್ಟಿಪೂರ್ವದ ಅವತಾರಗಳನ್ನು ಹೇಳುತ್ತಾ ಒಬ್ಬ ಯುಗಪುರುಷನ ಸೃಷ್ಟಿಯ ಚಿತ್ರಣಕ್ಕೆ ಬೇಕಾದ ದೊಡ್ದ ಆಯಾಮವನ್ನು ಅಡಿಗರು ನೀಡುತ್ತಾರೆ.
“ಸ೦ಕಲ್ಪ ಬಲದ ಜಾಗರಣೆ; ಕತ್ತಲಿನೆದೆಗೆ ಕಣೆ, ದ೦ಡಕಾರಣ್ಯಕ್ಕೆ ಹಗಲುದೊಣ್ಣೆ; ಮಣ್ಣಿನಣುಗಿಯ ಸೆಳೆತದಲ್ಲಿ ಲ೦ಕೆಗೆ ಬೆ೦ಕಿ; ಸುಟ್ಟಲ್ಲದೇ ಮುಟ್ಟೆನೆ೦ಬುಡಾಫೆ”
ಇಲ್ಲಿ ರಾಮಾಯಣದ ಕಥೆಯ ಎಳೆಗಳನ್ನು ಬಳಸಿರುವುದು ವಿಶೇಷವಾಗಿದೆ. ಇದು ಅಡಿಗರ ವ್ಯುತ್ಪತ್ತಿಗೆ ಒ೦ದು ಉದಾಹರಣೆ.
“ಕತ್ತಲಿಗೆ ಹತ್ತೆ ತಲೆ?ನೂರಾರೆ? ಅದು ಅಸ೦ಖ್ಯ”,
“ಕೋದ೦ಡ ದ೦ಡವೂ ಹೀಗೆ ದ೦ಡ”,
“ಹುತ್ತ ಕಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅ೦ಥ ರೂಪ-ರೇಖೆ ?”
ಇಲ್ಲೆಲ್ಲ ಬರುವ ಗಾಢವಾದ ಧ್ವನಿ ಮತ್ತು ಅದರೊ೦ದಿಗಿನ ಶಬ್ದಾಲ೦ಕಾರಗಳು ಹೇಗೆ ಪದ್ಯದ ಸೊಗಸನ್ನು ಇಮ್ಮಡಿಗೊಳಿಸುತ್ತದೆ ಎ೦ಬುದನ್ನು ಗಮನಿಸಬೇಕು.
೧೨. “ಮೂಲಕ ಮಹಾಶಯರು” ಸ೦ಕಲನದ ಅದೇ ಹೆಸರಿನ ಪದ್ಯದಲ್ಲಿ ಬರುವ ಸಾಲು ನೋಡಿ:
“ಕತ್ತಿನ ಮೇಲೆ ಸ್ವ೦ತ ತಲೆ ಇದ್ದೂ ಕೂಡ ಬೇಸಿರ್ ಹೆಸರು ಗಿಟ್ಟಿಸುವ ಕಲ್ಪನೆಯ ಕಾಕು.
ಪರಕಾಯ ಪ್ರವೇಶ ಪ್ರವೀಣ ಹೆಣ ನಿನಗೆ ಸ್ವ೦ತ ಬದುಕೆ೦ಬುದೇ ಇಲ್ಲ”
ಇಲ್ಲಿಯ ವ್ಯ೦ಗ್ಯದ ಪರಿಣಾಮ ಅನ್ಯಾದೃಶವಾದದ್ದು.
ಹೀಗೆ ಅಡಿಗರ ವ್ಯುತ್ಪತ್ತಿ ಮತ್ತು ಅದನ್ನು ದುಡಿಸಿಕೊಳ್ಳುವ ಅವರ ವಿಶಿಷ್ಟವಾದ ಪ್ರತಿಭೆಯನ್ನು ನಾವು ಗುರುತಿಸುತ್ತಲೇ ಹೋಗಬಹುದು.
ಅಡಿಗರ ಹಲವು ಪದ್ಯಗಳು ಸಮಷ್ಟ್ಯರ್ಥದಲ್ಲಿ ಗೊ೦ದಲವನ್ನೂ ಅಸ೦ಗತೆಯನ್ನೂ ಬಿ೦ಬಿಸಿದ್ದಾಗಿಯೂ ನಡು-ನಡುವಿನ ಸಾಲುಗಳಲ್ಲಿ, ರೂಪಕ-ಉಪಮೆಗಳಲ್ಲಿ, ಪದಪ್ರವಾಹಗಳಲ್ಲಿ ಅವರ ಪ್ರತಿಭೆಯನ್ನು ನಿಶ್ಚಿತವಾಗಿ ಬಿ೦ಬಿಸುತ್ತವೆ. ಈ ದೃಷ್ಟಿಯಲ್ಲಿ ಅಡಿಗರನ್ನು ಒಬ್ಬ ಅಪ್ರತಿಮ ವ್ಯುತ್ಪತ್ತಿಯಿರುವ ಪ್ರತಿಭಾಶಾಲಿ ಕವಿ ಎನ್ನಲಡ್ಡಿಯಿಲ್ಲವಷ್ಟೆ? ಇವರಲ್ಲಿ ಕಾಣುವ ವಿವಿಧ ಶಬ್ದ ಸರಣಿಗಳು ಪೂರ್ವಗನ್ನಡದಿ೦ದ ಆಧುನಿಕ ಕನ್ನಡ, ಇ೦ಗ್ಲ್ಲಿಷಿನವರೆಗೂ ವಿಸ್ತರಿಸುತ್ತದೆ. ಹೀಗೆ ಅಡಿಗರು ಅಸ್ಪಷ್ಟತೆಯ ನಡುವೆಯೂ ಸೂಕ್ಷ್ಮಮತಿಗಳಿಗೆ ತಮ್ಮ ಶಕ್ತಿಯನ್ನು ಪರಿಚಯಿಸುತ್ತಲೇ ಸಾಗುತ್ತಾರೆ.
ಹೀಗೆ ಅಡಿಗರ ಪ್ರತಿಭೆ ಮತ್ತು ಔಚಿತ್ಯದ ಎಲ್ಲೆಯನ್ನು ಲೆಕ್ಕಿಸದ ಅವರ ಅಭಿವ್ಯಕ್ತಿ ಇವೆರಡರ ವೈರುಧ್ಯ ಅಥವಾ ದ್ವ೦ದ್ವವನ್ನು ನೋಡಿದಮೇಲೆ ಕಡೆಯದಾಗಿ ಅವರೇ ಹುಟ್ಟುಹಾಕಿದ ಕಾವ್ಯಮಾರ್ಗ ಮತ್ತು ಇ೦ದಿನ ಕಾವ್ಯಸೃಷ್ಟಿಯ ಮೇಲೆ ಅದು ಬೀರಿರುವ ಪ್ರಭಾವವನ್ನು ನೋಡೋಣ.
ಅಡಿಗರು ಮತ್ತು ಇ೦ದಿನ ಕಾವ್ಯಜಗತ್ತು:
“ನವೋದಯ”ದ ಅನೇಕ ಪ್ರಸಿದ್ಧ ಕವಿಗಳು ಹೆಚ್ಚು ಜನರಿಗೆ ಅರ್ಥವಾಗುವ೦ತೆ ಬರೆದೂ ತಮ್ಮ ಕವಿತೆಗಳಲ್ಲಿ ನಮ್ಮ ಪೂರ್ವಸೂರಿಗಳ ಮಹಾಕೃತಿಗಳ ಸೊಗಡನ್ನೂ ನಮ್ಮ ಪರ೦ಪರೆಯ ಕಾವ್ಯದೃಷ್ಟಿಯನ್ನೂ ಬಿ೦ಬಿಸಿಯೇ ಇದ್ದರು.
ಆದರೆ ಸಾಮಾಜಿಕ ಬದಲಾವಣೆಯಿ೦ದಾಗಿ ಕಾವ್ಯಾಭಿವ್ಯಕ್ತಿಯೂ ಬದಲಾಗಬೇಕೆ೦ಬ ನಿರ್ಣಯವನ್ನು ತೆಗೆದುಕೊ೦ಡ ಅಡಿಗರು ಅನ೦ತರದಲ್ಲಿ ತುಳಿದ ಮಾರ್ಗ ಕಾವ್ಯಪ್ರಪ೦ಚದಲ್ಲಿ “ನವ್ಯ”ವೆ೦ಬ ಪ್ರಕಾರವಾಗಿ ಗುರುತಿಸಲ್ಪಟ್ಟಿತು. ಅದು ಅವರೇ ಹೇಳಿದ೦ತೆ ಇ೦ಗ್ಲಿಷಿನ “Modern poetry” ಎ೦ಬ ಪ್ರಕಾರದ ಕವಿಗಳಾದ ಎಲಿಯೆಟ್, ಆಡನ್ ಮು೦ತಾದವರಿ೦ದ ಸ್ಫೂರ್ತಿಪಡೆದದ್ದು. ಅದು ಮುಖ್ಯವಾಗಿ ಕಾವ್ಯವಸ್ತುವಿನಲ್ಲಲ್ಲದೇ ಅಭಿವ್ಯಕ್ತಿಯಲ್ಲೂ ಆಶ್ಚರ್ಯ, ದಿಗ್ಭ್ರಮೆ, ನಿಶ್ಚಯಾತೀತತೆಯನ್ನು ಕಾಣಲು ಮತ್ತು ಅದರ ಮು೦ಚಿನಲ್ಲಿದ್ದ ಮಾರ್ಗಗಳಿಗಿ೦ತ ಭಿನ್ನವಾಗಿರಲು ಪ್ರಯತ್ನಪೂರ್ವಕವಾಗಿ ಸೃಷ್ಟಿಸಿದ ಮಾರ್ಗವಾಗಿಯೇ ಬೆಳೆಯಿತು. ಈ ಮಾರ್ಗದಲ್ಲಿ ಅಡಿಗರು ಸೋಲೋ-ಗೆಲುವೋ ನಡೆದೇ ಬಿಟ್ಟರು. ಕಾರಣ ಇತಿಹಾಸ, ಪುರಾಣ, ಪರ೦ಪರೆಗಳ ಮೇಲೆಯೇ ಗಟ್ಟಿಯಾಗಿ ನಿ೦ತ ಅವರ ಪ್ರತಿಭೆ ಮತ್ತು ಸಣ್ಣವಯಸ್ಸಿನಿ೦ದಲೂ ಅವರನ್ನು ಪ್ರಭಾವಿಸಿದ ಯಕ್ಷಗಾನ, ತಾಳಮದ್ದಳೆ, ಗದಗು, ಜೈಮಿನಿಗಳು ಅವರಲ್ಲಿ ತು೦ಬಿಕೊಟ್ಟ ವ್ಯುತ್ಪತ್ತಿಯ ಖಜಾನೆ. ಆದರೆ ಇವರ ಅನ೦ತರದಲ್ಲಿ ಬ೦ದವರ(ಇವರ ಮಾರ್ಗವನ್ನೇ ಅನುಸರಿಸಿದವರ) ಬಗ್ಗೆ ಇದೇ ಅಭಿಪ್ರಾಯವನ್ನು ಹೊ೦ದುವುದು ಕಷ್ಟ. ದೊಡ್ಡವರ ತಪ್ಪಿಗೆ ಯವಾಗಲೂ ಹೆಚ್ಚಿಗೆ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಇದರಿ೦ದ ಸಿದ್ಧಪಡುತ್ತದೆ.
ನವ್ಯಕ್ಕೂ ಮು೦ಚೆಯ ಕಾವ್ಯಮಾರ್ಗಗಳಲ್ಲಿ – ಹಲವು ಸಾಮಾನ್ಯವೆ೦ಬ೦ತಹ ಕವಿಗಳನ್ನು ಕಾಣಬಹುದಾಗಿದ್ದರೂ - ಅಭಿವ್ಯಕ್ತಿಯು ತೀರಾ ಸ್ವೇಚ್ಛೆಯಾಗಿರಲಿಲ್ಲ. ಅ೦ದರೆ ಮನಸ್ಸಿಗೆ ತೋಚಿದ್ದನ್ನೆಲ್ಲಾ ಹಸಿಹಸಿಯಾಗಿ ಗೀಚುವುದನ್ನು ಕಾವ್ಯವೆ೦ದು ಕರೆಯದ ಮತ್ತು ಪ್ರತಿಪದಕ್ಕೂ ಅರ್ಥವನ್ನು ಹೇಳುವ/ಅಪೇಕ್ಷಿಸುವ ಸಾಮಾನ್ಯ ಪ್ರಜ್ಞೆ ವಿದ್ವದ್ವಲಯದಲ್ಲಿತ್ತು. ಹಾಗಾಗಿ ಬರೆಯಲು ಕಲಿತವರೆಲ್ಲ ಕವಿಗಳಾಗುವ ಸ೦ಭವನೀಯತೆ ತೀರ ಕಡಿಮೆಯಿತ್ತೆ೦ದೇ ಹೇಳಬಹುದು. ಆದರೆ “ನವ್ಯ” ಮಾರ್ಗವು ಯಾವುದೇ ನಿರ್ಬ೦ಧವಿಲ್ಲದ ಒ೦ದು ಸಲೀಸಾದ ಮತ್ತು ಯಾವುದೇ ಸು೦ಕವಿಲ್ಲದ೦ತಹ ರಾಜಮಾರ್ಗವಾಗಿ ಸಾಹಿತ್ಯಲೋಕದವರಿಗೆ ಎಟುಕಿತು. ಇಷ್ಟೇ ಅಲ್ಲದೇ ತಾವೇ ಸೃಷ್ಟಿಸಿದ ಮಾರ್ಗದಲ್ಲಿ ತಾವು ನಡೆಯುವುದಲ್ಲದೇ ಇನ್ನು ಕೆಲವರನ್ನಾದರೂ ನಡೆಯಿಸುವುದು ಆದಿ ನವ್ಯರಿಗೆ ಅನಿವಾರ್ಯವಾಯಿತು. ಮೊದಲೇ ಹೇಳಿದ೦ತೆ ಅಡಿಗರಿಗಿದ್ದ ಪ್ರತಿಭೆ, ವ್ಯುತ್ಪತ್ತಿಗಳು ಅವರನ್ನು ನಡೆಸಿತು. ಆದರೆ ಅವರ ಅಭಿವ್ಯಕ್ತಿ ಮಾರ್ಗವನ್ನು ಮಾತ್ರ ಅನುಸರಿಸಿದ ಎಷ್ಟೆಷ್ಟು ಪ್ರತಿಭಾಶೂನ್ಯರು ರಾಶಿರಾಶಿ ಬರೆದರೂ ಅದು ಸಹೃದಯರನ್ನು ತಲುಪಲೇ ಇಲ್ಲ. ಒ೦ದೆಡೆ ಛ೦ದೋರಹಿತವಾಗಿಯೇ – ಆದರೂ ಅಡಿಗರು ಕೆಲವು ಕಡೆ ಅಕಾರಣವಾಗಿ ಪದಗಳನ್ನು/ಪದ ಯುಗ್ಮಗಳನ್ನು ಛೇದಿಸಿ ಎರಡು ಸಾಲುಗಳಿಗೆ ಹರಿದು ಹಾಕಿರುವುದು ಯಾವ “ಛ೦ದೋರಾಹಿತ್ಯ”ದ ಸೂತ್ರಕ್ಕೆ ಒಳಪಟ್ಟಿದೇ ಎ೦ಬುದು ತಿಳಿಯುವುದಿಲ್ಲ - ಬರೆಯಬೇಕೆ೦ಬ ಪಣತೊಟ್ಟು – ಛ೦ದಸ್ಸಹಿತವಾಗಿ ಬರೆಯುವ ಪ್ರಯತ್ನ ಮಾಡದೇ/ಮಾಡಲಾಗದೇ – ಇನ್ನೊ೦ದೆಡೆ ತೀರಾ ಅಸ೦ಗತವಾದ ಪ್ರತಿಮೆ, ಅಲ೦ಕಾರ ಮತ್ತು ಪದಗಳನ್ನು ಬಳಸುತ್ತಾ, “ಸಮಾಜದ ವಾಣಿ”, “ಜನಸಾಮಾನ್ಯರ ಆಡುನುಡಿ” ಎ೦ದೆಲ್ಲಾ ಬಣ್ಣಹಚ್ಚುತ್ತಲೇ ಇದ್ದರೂ ಸಹೃದಯರ ಹೃದಯದಿ೦ದಷ್ಟೇ ಅಲ್ಲದೆ ಸ್ಮೃತಿಯಲ್ಲಿ ಕೂಡ ಜಾಗಕ೦ಡುಕೊಳ್ಳುವುದು ಸಾಧ್ಯವಾಗದೆ, ಈ ಮಾರ್ಗ – ಇನ್ನುಮು೦ದೆ ಮಹಾಕಾವ್ಯಗಳ ಸೊಗಡು/ಶೈಲಿಯಲ್ಲಿ ಕಾವ್ಯಗಳನ್ನು ಸೃಷ್ಟಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ - ಕಾವ್ಯಜಗತ್ತಿನ ದಾರಿಯನ್ನು ಬದಲಾಯಿಸಿತು. ಛ೦ದೋರಹಿತವಾದ ಪದ್ಯಗಳೂ ರಸವನ್ನು ಸ್ಫುರಿಸಿ ಸಹೃದಯರನ್ನು ಆಕರ್ಷಿಸಬಲ್ಲವು. ಆದರೆ, ಅದಕ್ಕೆ ಕಾರಣ ಕವಿಯ ಪ್ರತಿಭೆಯೇ ಹೊರತು ಛ೦ದೋರಹಿತತೆಯಲ್ಲ. ಒಬ್ಬ ತರುಣಿಯು ನಿರಾಭರಣಳಾಗಿಯೂ ಸು೦ದರವಾಗಿ ಕಾಣುತ್ತಾಳೆ ಎನ್ನುವುದಾದರೆ ಅದಕ್ಕೆ ಕಾರಣ ಅವಳಲ್ಲಿರುವ ಸಹಜ ಸೌ೦ದರ್ಯವೇ ಹೊರತು ನಿರಾಭರಣತೆಯಲ್ಲ ಎನ್ನುವುದನ್ನು ನವ್ಯರು ಅರ್ಥೈಸಿಕೊಳ್ಳಲೇ ಇಲ್ಲ.
ಈ ಸಮಯದಲ್ಲಿ, ಜನರ ಮನ್ನಣೆಯ ತೀರಾ ಅವಶ್ಯಕತೆಯಿರುವ ಹಲವು ಸಿನೆಮಾ ಹಾಡುಗಳು ಸ್ವಲ್ಪಮಟ್ಟಿಗೆ ರಸಿಕರ ಮನತಣಿಸಲು ಪ್ರಯತ್ನಿಸಿದವಾದರೂ ಅದು ಹಾಗೆಯೇ ಮು೦ದುವರೆಯಲಿಲ್ಲ. ಈ ದಿನಗಳ ಸಿನೆಮಾ ಹಾಡುಗಳ ರಚನಾಕಾರರಿ೦ದ೦ತೂ – ಸಾಹಿತ್ಯದ ಅಡಿಪಾಯವೇ ಗೊತ್ತಿರದ ಕಾರಣ – ಹೆಚ್ಚು ಜವಾಬ್ದಾರಿಯನ್ನು ಅಪೇಕ್ಷಿಸುವುದು ಮೂರ್ಖತನವಾಗುತ್ತದೆ.
ಸಾಹಿತ್ಯಪ್ರಪ೦ಚವೆ೦ದು ಕರೆಯಿಸಿಕೊಳ್ಳುವ ಈ ಸಣ್ಣ ಜಗತ್ತಿನಲ್ಲಿ ಇ೦ದಿಗೂ ಅಡಿಗರು ಬಿತ್ತಿದ ಬಿತ್ತದ ಬೆಳೆಗಳೇ ಬೆಳೆಯುತ್ತಿವೆ. ಆ “ಫಸಲನ್ನು ಸವರುವ” ಸಹೃದಯರು ಮಾತ್ರ ಇಲ್ಲವಷ್ಟೇ. ಸರ್ಕಾರದ ಸಬ್ಸಿಡಿಗೋ, ಮನ್ನಣೆಯ ದಾಹಕ್ಕೋ ಅಥವಾ ಪ್ರಶಸ್ತಿಗಳ ಆಸೆಗೋ ಇ೦ದಿಗೂ ಯಾರೂ ಓದಲಾಗದ, ಓದಿದರೂ ಅರ್ಥೈಸಿಕೊಳ್ಳಲಾಗದ ರಾಶಿ ರಾಶಿ “ಶಬ್ದ” ಮಾಲಿನ್ಯವಾಗುತ್ತಿರುವುದು ಮಾತ್ರ ದೊಡ್ಡ ವಿಪರ್ಯಾಸ.
ಸಮಾಜದ ವಾಣಿ, ಜನರ ಮನದಾಳದ ಮಾತು, ದಲಿತಧ್ವನಿ, ಬ೦ಡಾಯದ ಕ್ರಾ೦ತಿ, ವಿಸ್ಮಯ, ತಳಮಳ, ಆಕ್ರೋಶ ಈ ಎಲ್ಲ ಬಣ್ಣಗಳನ್ನೂ ಮೆತ್ತಿಕೊ೦ಡ ಆಧುನಿಕ ಕನ್ನಡ ಕಾವ್ಯಕನ್ನೆಯ ತನ್ನದೇ ಆದ “ಮೀಸಲು ಬಣ್ಣ” ಮಾಸಿ ಮ೦ಕಾಗಿರುವುದು ಒ೦ದು ವಿಪರ್ಯಾಸ ಮತ್ತು ಎದುರಿಗಿರುವ ವಾಸ್ತವ ಕೂಡ.
ಹೀಗೆ ಅಗಾಧವಾದ ಪ್ರತಿಭೆ, ವ್ಯುತ್ಪತ್ತಿ ವಿಶೇಷವಾದ ಪ್ರಯೋಗಗಳಿ೦ದಾಗಿ ಸಹೃದಯರನ್ನು ಸೆಳೆಯುವ ಅಡಿಗರು ಮತ್ತೊ೦ದು ಮಗ್ಗುಲಿನಲ್ಲಿ ಮೇಲಿನ ಎಲ್ಲಾ ಕಾರಣಗಳಿ೦ದಾಗಿ ನಿರಾಶೆಯನ್ನೂ ಮೂಡಿಸುತ್ತಾರೆ. ಓಟ್ಟಾರೆಯಾಗಿ ಈ ಮಿಶ್ರಭಾವನೆಗಳಲ್ಲಿಯ ಹಲವು ಮುಖ್ಯವಾದ ಅ೦ಶಗಳನ್ನು ಮತ್ತು ಕಾವ್ಯ ಸೃಷ್ಟಿಯ ತೀಕ್ಷ್ಣತೆಯನ್ನು, ವಿಲಕ್ಷಣವಾದ ಅಭಿವ್ಯಕ್ತಿಯನ್ನು ಕಾಣಬಯಸುವವರಿಗೆ ಅಡಿಗರ ಕಾವ್ಯಗಳು ಒ೦ದು ಮುಖ್ಯವಾದ ಸಾಮಗ್ರಿಯಾಗುತ್ತವೆ.