ಯಾದವರಾವ್ ಜೋಶಿ
ಯಾದವರಾವ್ ಜೋಶಿಯವರು ರಾಷ್ಟ್ರಿಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದರು. ಇವರ ಅಪೂರ್ವ ಪರಿಚಯವನ್ನು ರಾಮಸ್ವಾಮಿಯವರು ಮಾಡಿಕೊಟ್ಟಿದ್ದಾರೆ. ಸಾಹಿತಿಗಳು, ಕಲಾವಿದರು ಮತ್ತು ವಿದ್ವಾಂಸರ ಪರಿಚಯ ಸಾಮಾನ್ಯ ಜಗತ್ತಿಗೆ ಬೇಗನೆ ಆಗುತ್ತದೆ. ರಾಜಕೀಯ, ಕ್ರೀಡೆ, ಸಿನೆಮಾ ಮುಂತಾದ ಕ್ಷೇತ್ರಗಳಿಗೆ ಸೇರಿದವರ ಪರಿಚಯವಂತೂ ಅನುಕ್ಷಣ ಆಗುತ್ತಿರುತ್ತದೆ. ಆದರೆ ಪ್ರಾಮಾಣಿಕರಾದ ಸಮಾಜಸೇವಾಕರ್ತರ, ಅಂತರ್ಮುಖರಾದ ಜ್ಞಾನ-ವಿಜ್ಞಾನಸಂಪನ್ನರ ಪರಿಚಯ ಸುಲಭದಲ್ಲಿ ಆಗುವುದಿಲ್ಲ. ಜೋಶಿಯವರು ಈ ವರ್ಗಕ್ಕೆ ಸೇರಿದವರು. ಆದುದರಿಂದಲೇ ಇಂಥವರ ಪರಿಚಯದ ಲೇಖನಗಳು ನಮ್ಮ ಹೆಚ್ಚಿನ ಗಮನವನ್ನು ಅಪೇಕ್ಷಿಸುತ್ತವೆ. ನನ್ನ ಮಟ್ಟಿಗಂತೂ ಜೋಶಿಯವರ ಪರಿಚಯ ಆದದ್ದೇ ರಾಮಸ್ವಾಮಿಯವರ ಈ ಬರೆಹದ ಮೂಲಕ. ಇದೊಂದರಿಂದಲೇ ಅವರ ಅಧಿಕೃತ ಪರಿಚಯ ನನಗಾಯಿತೆಂದು ಭಾವಿಸುವಷ್ಟರ ಮಟ್ಟಿಗೆ ಈ ಬರೆಹ ಪರಿಪೂರ್ಣವಾಗಿದೆ.
‘ಭಾರತರತ್ನ’ ಪುರಸ್ಕೃತ ಭೀಮಸೇನ ಜೋಶಿಯವರಂಥ ಗಾಯನಸಮ್ರಾಟರಿಗೆ ಹೆಗಲೆಣೆಯಾಗಬಲ್ಲ ಕಲಾವಿದರಾಗುವ ಸತ್ತ್ವ ಯಾದವರಾವ್ ಜೋಶಿಯವರಲ್ಲಿ ಇತ್ತೆಂದು ಹೇಳುತ್ತ ರಾಮಸ್ವಾಮಿ ತಮ್ಮ ಲೇಖನವನ್ನು ಆರಂಭಿಸಿದ್ದಾರೆ. ಭೀಮಸೇನ ಜೋಶಿಯವರು ಯಾದವರಾವ್ ಜೋಶಿಯವರನ್ನು ತಮ್ಮ ಗುರುಸಮಾನರೆಂದು ಗೌರವಿಸುತ್ತಿದ್ದರಂತೆ. ಅವರ ಎದುರು ಕುಳಿತು ಮಾತನಾಡಲೂ ಒಪ್ಪದೆ ವಿನಯದಿಂದ ನಿಂತೇ ಇರುತ್ತಿದ್ದರಂತೆ. ಇಂಥ ಕಲಾವಿದರಾಗಿದ್ದ ಯಾದವರಾವ್ ಅವರು ರಾ.ಸ್ವ. ಸಂಘದ ಸ್ಥಾಪಕರಾದ ಡಾಕ್ಟರ್‌ಜೀ ಅವರ ಪ್ರಭಾವಕ್ಕೆ ಸಿಲುಕಿ ಸಂಗೀತಸಂನ್ಯಾಸವನ್ನು ಕೈಗೊಂಡು ಸಮಾಜಸೇವೆಯ ಸಂಸಾರಕ್ಕೆ ಸಪ್ತಪದಿ ತುಳಿದರೆಂಬುದು ವಿಸ್ಮಯದ ಸಂಗತಿ. ಆದರೆ ಅವರು ಅನುಸಂಧಾನ ಮಾಡಿದ ಸಂಗೀತ ವ್ಯರ್ಥವಾಗಲಿಲ್ಲ. ಅಲ್ಲಿಯ ಶ್ರುತಿ-ಲಯಗಳ ಸಾಮರಸ್ಯವನ್ನು ಸಮಾಜಸೇವೆಯ ಎಲ್ಲ ಹಂತಗಳಲ್ಲಿ ಸಾಧಿಸಲು ಪ್ರಾಮಾಣಿಕವಾಗಿ ದುಡಿದರು. ನಲವತ್ತು-ಐವತ್ತು ವಾದ್ಯಗಳು ಒಟ್ಟಿಗೆ ನುಡಿಯುವ ಸಂಘದ ಘೋಷ್ ಮೇಳದಲ್ಲಿ ಯಾವ ಒಂದು ಪರಿಕರ ಅಪಶ್ರುತಿ ನುಡಿದರೂ ಜೋಶಿಯವರ ತತ್ಕ್ಷಣ ಗುರುತಿಸಿ ತಿದ್ದುತ್ತಿದ್ದ ಸಂಗತಿಯನ್ನು ರಾಮಸ್ವಾಮಿ ಇಲ್ಲಿ ಒಕ್ಕಣಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದ ಜೋಶಿಯವರು ತಮ್ಮ ಹೆಚ್ಚಿನ ಸೇವಾಕಾರ್ಯವನ್ನು ನಡಸಿದ್ದು ಕನ್ನಡನಾಡಿನಲ್ಲಿ. ಈ ನೆಲದಿಂದಲೇ ತುರ್ತುಪರಿಸ್ಥಿತಿಯ ವಿರುದ್ಧ ಸೆಣಸಿದವರು ಅವರು. ಬೆಂಗಳೂರಿನ ಸೆರೆಮನೆಯಲ್ಲಿ ವಾಸಮಾಡಿದ್ದವರು. ಅಂದಿನ ದುರ್ಭರ ಸನ್ನಿವೇಶಗಳನ್ನು ರಾಮಸ್ವಾಮಿಯವರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ವಿಶೇಷತಃ ಜೋಶಿಯವರು ತಮ್ಮ ತಂದೆಗೆ ಬರೆದ ಪತ್ರದ ಪೂರ್ಣಪಾಠವನ್ನು ನೀಡುವ ಮೂಲಕ ಅವರ ವ್ಯಕ್ತಿತ್ವದ ಗಟ್ಟಿತನವನ್ನು ಅನುಪಮವಾಗಿ ಕಾಣಿಸಿದ್ದಾರೆ (ಪು. ೨೨೬-೨೭).
ಜೋಶಿಯವರ ವಿನೋದಪ್ರಜ್ಞೆ ಅಸಾಧಾರಣವಾಗಿತ್ತು. ಮದುವೆಯಾಗಬೇಕೆಂಬ ಒತ್ತಾಯವನ್ನು ಹಲವರು ಹಿರಿಯರು ಅವರ ಮೇಲೆ ಹೇರಿದಾಗ ಜೋಶಿಯವರು ವಿನೋದದಿಂದ ತಮಗೆ ಹೀಗೆ ಒತ್ತಡ ಹಾಕಿದವರೆಲ್ಲ ದಿವಂಗತಿಸಿದ ಘಟನೆಗಳನ್ನು ತೋರಿಕೆಯ ಗಾಂಭೀರ್ಯದಿಂದ ತಿಳಿಸುವ ಮೂಲಕ ಹಾಗೆ ಒತ್ತಾಯಿಸಿದವರೇ ಅಂಜುವಂತೆ ಮಾಡುತ್ತಿದ್ದರಂತೆ! ಈ ಸನ್ನಿವೇಶವನ್ನು ರಾಮಸ್ವಾಮಿಯವರು ತುಂಬ ಸರಸವಾಗಿ ಚಿತ್ರಿಸಿದ್ದಾರೆ.
ಜೋಶಿಯವರ ಸ್ನೇಹಗುಣವನ್ನು ರಾಮಸ್ವಾಮಿ ವಿಶದವಾಗಿ ಪ್ರಸ್ತಾವಿಸಿದ್ದಾರೆ. ಅದು ಬಾಬಾ ಆಮ್ಟೆ ಅವರಂಥ ಪ್ರಸಿದ್ಧರಿಂದ ಮೊದಲ್ಗೊಂಡು ಎಳೆಯ ಮಕ್ಕಳವರೆಗೆ ತಡೆಯಿಲ್ಲದ ಹೊನಲಾಗಿ ಹರಿಯುತ್ತಿತ್ತು. ಗ್ರಾಮಾಭಿವೃದ್ಧಿ, ಅಸ್ಪೃಶ್ಯತಾನಿವಾರಣೆ, ಮತಾಂತರನಿವಾರಣೆ, ಶಿಕ್ಷಣಜಾಗರಣ ಮುಂತಾದ ಹತ್ತಾರು ಪ್ರಕಲ್ಪಗಳಲ್ಲಿ ಅವರು ಸತತವಾಗಿ ತೊಡಗಿಸಿಕೊಳ್ಳುತ್ತಿದ್ದರು. ತಮ್ಮ ಒಂದು ಸಂದರ್ಶನದಲ್ಲಿ ಅಸ್ಪೃಶ್ಯತೆಯನ್ನು ಕುರಿತು ಹೀಗೆ ಹೇಳಿದ್ದರು: “ನಮ್ಮಲ್ಲಿ ಸಾಮಾಜಿಕ ಸಾಮರಸ್ಯ ಇದ್ದಲ್ಲಿ ಮಾತ್ರ ನಮ್ಮ ಸಮಾಜ ಬಲಿಷ್ಠವಾಗಿರುವುದು. ಸಾಮಾಜಿಕ ಅಸಮಾನತೆಯಷ್ಟು ದೊಡ್ಡ ಅಸಹನೀಯ ಸಂಗತಿ ಬೇರೆಯಿಲ್ಲ. ಗಿಡ, ಮರ, ಕಲ್ಲುಗಳಲ್ಲಿಯೂ ದೇವರನ್ನು ಗುರುತಿಸಿದ ನಾವು ನಮ್ಮ ಬಾಂಧವರಲ್ಲಿ ಇರುವ ಆತ್ಮವನ್ನು ಏಕೆ ಗುರುತಿಸುತ್ತಿಲ್ಲ?”[1] ಇಂಥ ಕಳಕಳಿಯ ನಡುವೆ ಅವರೆಂದೂ ಹತಾಶೆಗೆ ಗುರುಯಾದದ್ದಿಲ್ಲ. ನಮ್ಮ ಸಮಾಜ ಬುದ್ಧನಿಂದ ಮೊದಲ್ಗೊಂಡು ವಿವೇಕಾನಂದರವರೆಗೆ ಎಷ್ಟೋ ಮಂದಿ ಅಂತಃಸುಧಾರಕರನ್ನು ಸೃಷ್ಟಿಸಿ ಭಾರತೀಯರ ಓರೆ-ಕೋರೆಗಳನ್ನು ತಿದ್ದುತ್ತ ಬಂದ ಸಂಗತಿ ಅವರಿಗೆ ಬಲವಾದ ಪ್ರೇರಣೆ ನೀಡುತ್ತಿತ್ತು.
ಇದೇ ತೆರನಾದುದು ಹಿಂದಿನ ಕಾಲ ಚೆನ್ನಾಗಿತ್ತು, ಇಂದು ಕಾಲ ಕೆಟ್ಟಿದೆ ಎಂಬ ಸಿನಿಕತನವನ್ನು ಕುರಿತ ಅವರ ಪ್ರತಿರೋಧ. ಜೋಶಿಯವರು ಎಷ್ಟೋ ಐತಿಹಾಸಿಕ ಸಂದರ್ಭಗಳ ಉಲ್ಲೇಖಗಳ ಮೂಲಕ ಈ ಬಗೆಯ ನಿರಾಶಾವಾದದ ನಿರಾಕರಣೆ ಮಾಡುತ್ತಿದ್ದರಂತೆ. ಸ್ವಂತದ ಸಂಚಯವನ್ನು ಸಂಪೂರ್ಣವಾಗಿ ತ್ಯಜಿಸಿದ್ದ ಜೋಶಿಯವರು ತಮ್ಮ ಪಿತ್ರಾರ್ಜಿತದ ಸೊತ್ತನ್ನು ಸಂಸ್ಕೃತಭಾಷೆಯ ಪ್ರಸಾರಕ್ಕಾಗಿ ದಾನ ಮಾಡಿದ್ದರಂತೆ.
ಜೋಶಿಯವರ ಕೆಲವೊಂದು ಸೂತ್ರರೂಪದ ಮಾತುಗಳು ಅವರ ಮಾತೃಭಾಷೆಯಲ್ಲಿ ಆಗಾಗ ಸೂಕ್ತಿಗಳಾಗಿ ಹೊಮ್ಮುತ್ತಿದ್ದವಂತೆ. ಅವನ್ನೂ ರಾಮಸ್ವಾಮಿಯವರು ಉದ್ಧರಿಸಿದ್ದಾರೆ. ಒಂದೆರಡು ಹೀಗಿವೆ: “ಚಮಡೀ ಘಟ್ತೀ ಹೈ, ಬಡ್ತೀ ಭೀ ಹೈ; ಲೇಕಿನ್ ಹಡ್ಡೀ ಮಜಬೂತ್ ರಖೋ!” (ಚರ್ಮವೂ ಮಾಂಸವೂ ಕ್ಷೀಣಿಸಬಹುದು, ತುಂಬಿಕೊಳ್ಳಲೂಬಹುದು. ಆದರೆ ಅಸ್ಥಿಪಂಜರವನ್ನು ಯಾವಾಗಲೂ ಗಟ್ಟಿಯಾಗಿ ಉಳಿಸಿಕೊಳ್ಳಿರಿ!). “ಮಾರೇ ಕಹೀ ಲಾಗೇ ವಹೀ!” (ಏಟು ಎಲ್ಲಿಗೇ ಬೀಳಲಿ, ಅದು ತಗಲುವ ಸ್ಥಾನ ಮಾತ್ರ ಅಲ್ಲಿಯೇ!)[2]
ಜೋಶಿಯವರು ತೀರಿಕೊಂಡಿದ್ದು ಯಾದವೇಂದ್ರ ಶ್ರೀಕೃಷ್ಣನ ಜನ್ಮದಿನದಂದು. ಅಂದು ಅವರ ಅಂತ್ಯಯಾತ್ರೆಯಲ್ಲಿ ಊರಿಗೆ ಊರೇ ಭಾಗವಹಿಸಿತಂತೆ. ಅವರನ್ನು ತಿಳಿಯದವರೂ ಸಹ ಆ ಪ್ರಮಾಣದ ಜನಸಾಗರವನ್ನು ಕಂಡು ಅಳಿದವರು ಯಾರೋ ಅಸಾಧಾರಣ ವ್ಯಕ್ತಿಯೇ ಆಗಿರಬೇಕೆಂದು ಭಾವಿಸಿ ಶ್ರದ್ಧಾಂಜಲಿ ಸಲ್ಲಿಸಿದರಂತೆ. ಅಜ್ಞಾತರಾಗಿ ಹುಟ್ಟಿ ಸಮಾಜದ ಜೊತೆ ಬೆರೆತು ಇಡಿಯ ಸಮಾಜವೇ ತಮ್ಮನ್ನು ಬೀಳ್ಗೊಡುವಂತೆ ಬಾಳಿದ ಮಹನೀಯರು ಯಾದವರಾವ್ ಜೋಶಿ. ಇಂಥ ಪುಣ್ಯಾತ್ಮರ ಸ್ಮೃತಿಯನ್ನು ಶಾಶ್ವತ ಮಾಡಿಕೊಟ್ಟವರು ರಾಮಸ್ವಾಮಿ.
* * *
ಪಿ. ಕೋದಂಡರಾವ್
ಮೂಲತಃ ಅಧ್ಯಾಪನವೃತ್ತಿಯನ್ನು ಕೈಗೊಂಡಿದ್ದ ಕೋದಂಡರಾಯರು ಸ್ವಭಾವದಿಂದ ಪ್ರಾಂಜಲ ಸಮಾಜಸೇವಕರು. ಜೀವಕಾರುಣ್ಯ, ಲೋಕಸಾಮರಸ್ಯ ಮತ್ತು ನಿಃಸ್ಪೃಹ ಸೇವೆಗಳು ಅವರ ಬದುಕೇ ಆಗಿದ್ದುವು. ಇವರ ಪರಿಚಯವೂ ನಮ್ಮ ಜನತೆಗೆ ಹೆಚ್ಚಾಗಿಲ್ಲ. ಡಿ.ವಿ.ಜಿ., ಮಾಸ್ತಿ, ನವರತ್ನ ರಾಮರಾಯರಂಥ ಹಿರಿಯರ ತಲೆಮಾರಿನವರಾದ ಕೋದಂಡರಾಯರ ಹೃದಯಂಗಮವಾದ ಪರಿಚಯವನ್ನು ರಾಮಸ್ವಾಮಿ ಮಾಡಿಕೊಟ್ಟಿದ್ದಾರೆ.
ಕರ್ತವ್ಯನಿರತನಾಗಿದ್ದ ಪೊಲೀಸಿನವನೊಬ್ಬ ಘರ್ಷಣೆಯೊಂದರಲ್ಲಿ ಗತಿಸಿದ. ಅದನ್ನು ದಿನಪತ್ರಿಕೆಗಳಿಂದ ತಿಳಿದ ರಾಯರು ಕೆಲವೇ ದಿನಗಳಲ್ಲಿ ಅಳಿದ ಆ ಆರಕ್ಷಕನ ಪತ್ನಿಗೆ ತಮ್ಮ ಸಹಾನುಭೂತಿಯ ಸೂಚಕವಾಗಿ ನೆರವಿನ ಹಣವನ್ನು ಕಳಿಸಿದ್ದರು. ಇದನ್ನು ಆಗಮಾಡಿಸುವಲ್ಲಿ ಅವರು ಸಾಕಷ್ಟು ತೊಡಕನ್ನು ಎದುರಿಸಬೇಕಾಯಿತು. ಆದರೆ ಇವಕ್ಕೆಲ್ಲ ಬೇಸರಿಸದೆ, ಹಿಂದೆಗೆಯದೆ ತಮ್ಮ ಅಂತಃಪ್ರೇರಣೆಯಂತೆ ನೆರವಾಗಿದ್ದರು. ಈ ಸಂದರ್ಭದ ಹಿನ್ನೆಲೆಯಲ್ಲಿ ರಾಮಸ್ವಾಮಿಯವರು ರಾಯರ ವ್ಯಕ್ತಿತ್ವವನ್ನು ಹೀಗೆ ಹರಳುಗಟ್ಟಿಸುತ್ತಾರೆ: “ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕೆನಿಸಿದರೆ ಕ್ಷಣಮಾತ್ರವೂ ಕಾಯದೆ, ಬೇರೆಯವರ ಸಲಹೆ-ಸೂಚನೆ-ಪ್ರೇರಣೆ-ಪ್ರೋತ್ಸಾಹಗಳಿಗೆ ಕಾಯದೆ ಮಾಡುವುದು ಅವರ ಜಾಯಮಾನವಾಗಿತ್ತು. ಇಂಥ ಸಂದರ್ಭದಲ್ಲಿ ಅವರು ತೋರುತ್ತಿದ್ದ ಆತುರ ಕೆಲವೊಮ್ಮೆ ಅವರ ಸಮೀಪದ ನಮಗೆಲ್ಲ ಕಿರುಕುಳವೆಂದೇ ಎನಿಸುತ್ತಿತ್ತು.”[3]
ಇಂಥ ಉಪಕಾರಕ್ಕೆ ಮುಂದಾದಾಗಲೆಲ್ಲ ಅವರಿಗೆ ತೊಡಕು-ತೊಂದರೆಗಳು ಎದುರಾಗುತ್ತಿದ್ದುವು; ವಿವಿಧ ವ್ಯವಸ್ಥೆಗಳಿಂದ ಶೀತಲ ಪ್ರತಿಕ್ರಿಯೆ ತೋರಿಕೊಳ್ಳುತ್ತಿತ್ತು; ಹತ್ತಿರದವರೂ ಇರುಸುಮುರುಸಾಗುತ್ತಿದ್ದರು. ಮಾತ್ರವಲ್ಲ, ಅವರ ಸೀಮಿತವಾದ ಸಂಪನ್ಮೂಲಕ್ಕೆ ಇಂಥ ಕೆಲಸಗಳು ಎಟುಕುವಂತೆಯೂ ಇರಲಿಲ್ಲ. ಆದರೂ ರಾಯರು ಸ್ವಲ್ಪ ಕೂಡ ಹಿಂಜರಿಯದೆ ನಿತ್ಯಪುರಂದರದಾಸರಂತೆ ಬಾಳಿ ಉಪಕರಿಸುತ್ತಿದ್ದರು.
ಲೋಕದಲ್ಲಿ ಯಾವ ಜೀವಿಗೆ ನೋವಾದುದು ಅವರ ಗಮನಕ್ಕೆ ಬಂದರೂ ಅವರು ಹಿಂದು-ಮುಂದು ನೋಡದೆ ನೆರವಿಗಾಗಿ ಧಾವಿಸುತ್ತಿದ್ದರು. ಇದನ್ನು ಭಾರವಾದ ಹೇರನ್ನು ಹೊರಲಾರದೆ ಒದ್ದಾಡುತ್ತಿದ್ದ ಎತ್ತೊಂದರ ಹಿನ್ನೆಲೆಯಲ್ಲಿ ರಾಮಸ್ವಾಮಿಯವರು ಮನಕರಗುವಂತೆ ಚಿತ್ರಿಸಿದ್ದಾರೆ. ಮಲ ಹೊರುವಿಕೆಯ ವಿರುದ್ಧ ತೀವ್ರವಾದ ಆಂದೋಳನವನ್ನವರು ಕೈಗೊಂಡಿದ್ದರು. ಬಡವರ ಅಂತ್ಯಕ್ರಿಯೆಗೆ ಕಟ್ಟಿಗೆಯ ಚಿತೆ ದುಬಾರಿಯಾಗುವ ಕಾರಣ ವಿದ್ಯುಚ್ಚಿತಾಗಾರಗಳ ವ್ಯವಸ್ಥೆಗಾಗಿ ಹೋರಾಡಿದ್ದರು. ಇಷ್ಟೆಲ್ಲ ಸಾಮಾಜಿಕ ಕಳಕಳಿಯುಳ್ಳ ರಾಯರು ಮೂಲತಃ ಮಡಿವಂತಿಕೆಯ ಮಾಧ್ವಕುಟುಂಬದಿಂದ ಬಂದವರು! ಆದರೆ ವಿದೇಶಗಳಲ್ಲಿ ಓದಿ, ವಿದೇಶೀಯಳನ್ನೇ ಮದುವೆಯಾಗಿ ತಮ್ಮ ಆಸ್ತಿಕ್ಯವನ್ನು ತೊರೆದವರು ಅವರಾದ ಕಾರಣ ಜಾತಿ-ಮತಗಳ ಯಾವುದೇ ಇಕ್ಕಟ್ಟುಗಳಿಗೆ ಸಿಲುಕಿರಲಿಲ್ಲ.
ಗೋಪಾಲಕೃಷ್ಣ ಗೋಖಲೆ ಮತ್ತು ವಿ. ಎಸ್. ಶ್ರೀನಿವಾಸಶಾಸ್ತ್ರಿಗಳ ಪ್ರಭಾವದಿಂದ ‘ಸರ್ವೆಂಟ್ಸ್ ಆಫ಼್ ಇಂಡಿಯಾ ಸೊಸೈಟಿ’ಗೆ ಸೇರಿ ಅವ್ಯಾಜ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ‘ಅಮ್ಯೆಚೂರ್ ಡ್ರಮ್ಯಾಟಿಕ್ ಅಸೋಸಿಯೇಷನ್’ ಸಂಸ್ಥೆಯ ಆರಂಭಿಕ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಡಿ.ವಿ.ಜಿ. ಅವರೊಡನೆ ಸೇರಿ ಇನ್‌ಫ್ಲುಯೆಂಜಾ಼ ವ್ಯಾಧಿಯಿಂದ ಕಂಗೆಟ್ಟ ಬೆಂಗಳೂರಿನ ನೆರವಿಗೆ ಹಗಲಿರುಳೂ ದುಡಿದಿದ್ದರು. ಪ್ರವಾಹಸಂತ್ರಸ್ತರ ಸಹಾಯಕ್ಕಾಗಿಯೂ ಶ್ರಮಿಸಿದ್ದರು. ಇಷ್ಟೆಲ್ಲ ಸಮಾಜಸೇವೆಗೆ ತೆತ್ತುಕೊಂಡಿದ್ದಾಗಲೂ ಅರ್ಥಶುದ್ಧಿಯನ್ನು ನಿಷ್ಠೆಯಿಂದ ಪಾಲಿಸಿದ್ದರು. ತಮ್ಮ ಬಡತನವೇನೇ ಇರಲಿ, ಸಮಾಜಸೇವೆಗೆ ಮುಡುಪಾದ ಸಾರ್ವಜನಿಕರ ಒಂದೊAದು ಕಾಸೂ ಪೋಲಾಗಬಾರದೆಂದು ಜಿದ್ದಿನಿಂದ ದುಡಿದಿದ್ದರು. ಈ ಎಲ್ಲ ವಿವರಗಳನ್ನೂ ರಾಮಸ್ವಾಮಿಯವರು ಅಂಕಿ-ಅಂಶಗಳೊಡನೆ, ದಿನ-ವಾರ-ವರ್ಷಗಳ ಲೆಕ್ಕದೊಡನೆ ಕೊಟ್ಟಿರುವುದು ಅವರ ಆಕರಸಾಮಗ್ರಿಯ ಅಧಿಕೃತತೆ ಮತ್ತು ರಾಯರಲ್ಲಿ ಅವರಿಗಿದ್ದ ಆದರಗಳಿಗೆ ದ್ಯೋತಕವಾಗಿದೆ.
ಕೋದಂಡರಾಯರ ವಾಗ್ಮಿತೆಯಾಗಲಿ, ಲೇಖನಕೌಶಲವಾಗಲಿ ಉತ್ತಮಸ್ತರಕ್ಕೆ ಸೇರಿದ್ದವೆಂದು ರಾಮಸ್ವಾಮಿ ಒಕ್ಕಣಿಸಿದ್ದಾರೆ. ವಿಶೇಷತಃ ದೇಶ-ವಿದೇಶಗಳಲ್ಲಿ ಅವರು ನೀಡಿದ ಪ್ರಬೋಧಕವಾದ ಉಪನ್ಯಾಸಗಳು, ಪ್ರಾಚ್ಯ-ಪಾಶ್ಚಾತ್ಯ ಸಂಸ್ಕೃತಿಗಳ ಸಂಘರ್ಷ ಮತ್ತು ವಿ. ಎಸ್. ಶ್ರೀನಿವಾಸಶಾಸ್ತ್ರಿಗಳ ಜೀವನವನ್ನು ಕುರಿತು ಬರೆದ ಗ್ರಂಥಗಳು ಉಲ್ಲೇಖನೀಯ.
ರಾಜಾಜಿ ಅವರಂಥ ಸೂಕ್ಷ್ಮದರ್ಶಿಗಳು ಆಯೋಗವೊಂದರ ಪ್ರಶ್ನೆಗೆ ಉತ್ತರಿಸುತ್ತ ಈ ವಿಷಯದಲ್ಲಿ ಕೋದಂಡರಾಯರು ಯಾವುದಾದರೂ ಹೇಳಿಕೆ ಕೊಟ್ಟಿದ್ದಲ್ಲಿ ಅವರ ಹೇಳಿಕೆಯೇ ತಮ್ಮದೆಂದು ಸಾರಿದ್ದರಂತೆ. ಈ ಮಟ್ಟದ ಅಧಿಕೃತತೆಯನ್ನು ರಾಯರು ಗಳಿಸಿದ್ದರು. ಮುಖ್ಯವಾಗಿ ಲಿಬರಲ್ ಎಂಬ ಒಂದು ಪಂಥದ ಸತ್ತ್ವಸಾಕಾರವಾಗಿಯೇ ರಾಯರಿದ್ದರು. ಬಾಧ್ಯತೆ ಇಲ್ಲದ ಜನಾಂದೋಳನವನ್ನು ಅವರೆಂದೂ ಒಪ್ಪಿದವರಲ್ಲ. ಇದಕ್ಕೆ ರಾಮಸ್ವಾಮಿಯವರು ಮಾರ್ಮಿಕವಾದ ನಿದರ್ಶನವನ್ನು ನೀಡಿದ್ದಾರೆ. ಒಮ್ಮೆ ಅವರು ಮನೆಯ ನೀರಿನ ಬಿಲ್ಲನ್ನು ಕಟ್ಟುವುದಕ್ಕೆ ಹೊರಟಿದ್ದರಂತೆ. ಹಾದಿಯಲ್ಲಿ ರಾಮಸ್ವಾಮಿ ಎದುರಾದರು. ಅವರು ರಾಯರ ಕೆಲಸವನ್ನರಿತು ವಾಟರ್ ಮೀಟರ್‌ಗಳು ಸರಿಯಾಗಿಲ್ಲವೆಂದು ಕೋಲಾಹಲ ನಡೆಯುತ್ತಿದೆ; ಅದು ಇತ್ಯರ್ಥವಾಗುವವರೆಗೆ ಬಿಲ್ ಕಟ್ಟಬೇಕಿಲ್ಲ - ಎಂದು ಹೇಳಿದಾಗ “ಏನು ನೀನು ಹೇಳುವ ಮಾತು? ಕಾನೂನನ್ನು ಗೌರವಿಸಬೇಕೆಂಬ ಗೋಖಲೆಯವರ ಬೋಧನೆಯನ್ನು ಜನರಲ್ಲಿ ಪ್ರಚಾರಮಾಡುತ್ತ ನನ್ನ ಆಯುಸ್ಸನ್ನೆಲ್ಲ ಸವೆಸಿದ್ದಾಯಿತು. ಈಗ ನಾನೇ ಈ ಉಪದೇಶಕ್ಕೆ ವಿರುದ್ಧವಾಗಿ ನಡೆಯಬೇಕೆನ್ನುತ್ತೀಯೇನು? ಸರ್ಕಾರ ವಿಧಿಸಿರುವ ತೆರಿಗೆ ಕೊಡುವುದು ಮೊದಲ ಕರ್ತವ್ಯ. ಅದು ನ್ಯಾಯವೆ, ಅಲ್ಲವೆ ಎಂಬುದರ ವಿಚಾರ ಆಮೇಲೆ. ನನ್ನ ಗುರುಗಳಾದ ಶ್ರೀನಿವಾಸಶಾಸ್ತ್ರಿಗಳು ನನಗೆ ಕಲಿಸಿದ ಒಂದು ಪಾಠವಿದು: ಯಾರಿಗಾದರೂ ನಿನ್ನಿಂದ ಹಣ ಸಲ್ಲಬೇಕಾಗಿದ್ದಲ್ಲಿ ಅದನ್ನು ಸಾಧ್ಯವಿದ್ದರೆ ಈ ದಿನವೇ, ಈ ಕ್ಷಣವೇ ಸಲ್ಲಿಸಿಬಿಡು. Tomorrow you may not be alive to pay it”[4] ಎಂದು ಮಾರ್ನುಡಿದಿದ್ದರಂತೆ. ಇದಕ್ಕಿಂತ ಮಿಗಿಲಾದ ಲಿಬರಲ್ ಸತ್ತ್ವ ಮತ್ತೊಂದಿಲ್ಲ.
ಇತರರ ಮತ-ಶ್ರದ್ಧೆಗಳ ವಿಷಯದಲ್ಲಿಯೂ ರಾಯರ ಮನೋಧರ್ಮ ಉದಾರವಾಗಿತ್ತು. ಅವರು ಸ್ವಘೋಷಿತ ನಾಸ್ತಿಕರು. ಆದರೆ ಅವರ ಆಪ್ತಮಿತ್ರರಾಗಿದ್ದ ವಿ. ಗೋಪಾಲಸ್ವಾಮಿ ಅಯ್ಯಂಗಾರ್ಯರು ಶ್ರದ್ಧಾವಂತ ಶ್ರೀವೈಷ್ಣವರು. ಅನುದಿನಾವೂ ವಿಶಿಷ್ಟಾದ್ವೈತ ಮತಗ್ರಂಥಗಳ ಅಧ್ಯಯನದಲ್ಲಿ ತೊಡಗುತ್ತಿದ್ದವರು. ಆದರೆ ಇಂಥ ವ್ಯತ್ಯಾಸಗಳಾವುದು ಇವರಿಬ್ಬರ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. ತಮ್ಮ ಮೇರುಕೃತಿಯೆನಿಸಿದ ಶ್ರೀನಿವಾಸಶಾಸ್ತ್ರಿಗಳ ಜೀವನಚರಿತ್ರೆಯನ್ನು ರಾಯರು ಅಯ್ಯಂಗಾರ್ಯರಿಗೇ ಅರ್ಪಿಸಿದ್ದಾರೆ.
ಸಮಾಜವು ತಮ್ಮ ವಿಷಯದಲ್ಲಿ ತುಂಬ ಉದಾರವಾಗಿ ನಡೆದುಕೊಂಡಿದೆಯೆAಬ ಕೃತಜ್ಞತೆ ರಾಯರದಾಗಿತ್ತು. ಅದೊಂದು ಸಭೆಯಲ್ಲಿ ಅವರು ಹೀಗೆಂದಿದ್ದರಂತೆ: “Fortune favoured us with numerous friends who offered us ... a first-class travel on our third-class tickets.” ಇಂಥ ಎಷ್ಟೋ ಸಾರೋಕ್ತಿಗಳಿಂದ, ಸತ್ತ್ವಪೂರ್ಣ ಸಂದರ್ಭಗಳಿಂದ ಈ ಲೇಖನವನ್ನು ರೂಪಿಸಿದ ರಾಮಸ್ವಾಮಿಯವರು ಉಪಸಂಹಾರವಾಕ್ಯವಾಗಿ ಹೀಗೆ ಹೇಳಿದ್ದಾರೆ: “ಕೋದಂಡರಾಯರೊಡನೆ ಅಸ್ತಂಗತವಾದದ್ದು ನೀತಿಬಲ-ಬೌದ್ಧಿಕ ಪ್ರಖರತೆಗಳ ಸಮ್ಮಿಲನವೆನ್ನಬಹುದಾದ ಒಂದು ಉನ್ನತ ಸಂಪ್ರದಾಯ.”[5]
* * *
ಉಪಸಂಹಾರ
ರಾಮಸ್ವಾಮಿಯವರು ‘ದೀವಟಿಗೆಗಳು’ ಎಂಬ ತಮ್ಮ ಅನನ್ಯ ಕೃತಿಯ ಮೂಲಕ ಒಂದು ಶತಮಾನದ ಅವಧಿಯಲ್ಲಿ ನಮ್ಮ ನಾಡು ಕಂಡ ಭವ್ಯಜೀವಿಗಳ ಉದಾತ್ತಮನೋಹರವಾದ ವ್ಯಕ್ತಿತ್ವಗಳನ್ನು ಅಚ್ಚಳಿಯದಂತೆ ಚಿತ್ರಿಸಿದ್ದಾರೆ. ಇಂಥ ಮಹನೀಯರ ಸಾಲಿಗೆ ತಾವೂ ಸೇರಬಲ್ಲ ಸತ್ತ್ವ-ಸ್ವತ್ವಗಳನ್ನು ಅವರು ಒಳಗೊಂಡ ಕಾರಣ ಇಲ್ಲಿಯ ನಿರೂಪಣೆ ಅವರ ಆತ್ಮವಿಸ್ತರಣವೇ ಆಗಿದೆ. “ನಾಗುಣೀ ಗುಣಿನಂ ವೇತ್ತಿ” (ಗುಣವಂತನಲ್ಲದವನು ಮತ್ತೊಬ್ಬ ಗುಣವಂತನನ್ನು ತಿಳಿಯಲಾರ) ಎಂಬ ಸೂಕ್ತಿಗೆ ಈ ಪುಸ್ತಕಕ್ಕಿಂತ ಒಳ್ಳೆಯ ನಿದರ್ಶನ ಸಿಗಲಾರದು. ಏಕಕಾಲದಲ್ಲಿ ಭಾಷೆ, ಭಾವ ಮತ್ತು ಭೂಮವಾದ ಬಾಳುಗಳ ಸಾಮರಸ್ಯವನ್ನು ಕಾಣಬೇಕೆಂದರೆ ಯಾರಿಗೇ ಆಗಲಿ ತತ್ಕ್ಷಣ ಒದಗಿಬರಬಹುದಾದ ಗ್ರಂಥ “ದೀವಟಿಗೆಗಳು.” ಇದಕ್ಕೆ ವಸ್ತುವಾದ ಮಹನೀಯರಿಗೂ ಅಭಿವ್ಯಕ್ತಿಯಾದ ರಾಮಸ್ವಾಮಿಯವರಿಗೂ ನಮ್ಮ ನಾಡು-ನುಡಿಗಳು ಸರ್ವದಾ ಕೃತಜ್ಞವಾಗಿರಬೇಕು.
[1] ‘ದೀವಟಿಗೆಗಳು’, ಪು. ೨೩೫
[2] ‘ದೀವಟಿಗೆಗಳು’, ಪು. ೨೪೦
[3] ‘ದೀವಟಿಗೆಗಳು’, ಪು. ೨೪೨
[4] ‘ದೀವಟಿಗೆಗಳು’, ಪು. ೨೫೪
[5] ‘ದೀವಟಿಗೆಗಳು’, ಪು. ೨೫೯
ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಗೌರವಗ್ರಂಥ "ದೀಪಸಾಕ್ಷಿ"ಯಲ್ಲಿ (ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು, ೨೦೨೨) ಪ್ರಕಟವಾದ ಲೇಖನ.
Concluded.