ನಿರಂತರ ಎಚ್ಚರಿಕೆ
ಈ ಕಾರಣಕ್ಕೇ ಗುಂಡಪ್ಪನವರು ಸುಮಾರು ಐವತ್ತು ವರ್ಷ ನಿರಂತರವಾಗಿ ನಮ್ಮ ಸಂಸ್ಥಾನಗಳಿಗೆ ಎಚ್ಚರಿಕೆ ಕೊಟ್ಟರು, ಬುದ್ಧಿ ಹೇಳಿದರು, ಬೆರಳು ನೋವು ಮಾಡಿಕೊಂಡರು, ಗಂಟಲುಹರಿದುಕೊಂಡರು. ಬೆರಳೆಣಿಕೆಯಷ್ಟು ಸಂಸ್ಥಾನಗಳನ್ನು ಬಿಟ್ಟು ಬೇರಾರೂ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅಂಥ ಸಂಸ್ಥಾನಗಳು “ನಮ್ಮ ರಾಜತ್ವ ಬ್ರಿಟಿಷ್ ಅಧೀನದಲ್ಲಿರುವುದರಲ್ಲಿಯೇ ಸುರಕ್ಷಿತವಾಗಿದೆ. ಈ ವ್ಯವಸ್ಥೆ ಆಚಂದ್ರಾರ್ಕವಾಗಿ ಹೀಗೇ ಸಾಗುತ್ತದೆ” ಎಂಬ ಭ್ರಮೆಯಲ್ಲಿ ಮೈಮರೆತಿದ್ದರು. ಮಾತ್ರವಲ್ಲ, ಈ ಭ್ರಮೆಯನ್ನು ಪೋಷಿಸುವುದರಲ್ಲಿಯೇ ಬ್ರಿಟಿಷ್ ಸರಕಾರದ ಕ್ಷೇಮ, ಉಳಿವು ಸಹ ಇತ್ತು. ಹೀಗಾಗಿ ನಮ್ಮ ರಾಜರು ಅನೇಕ ಸಂದರ್ಭಗಳಲ್ಲಿ ಸ್ವಲ್ಪ ಅಪಸ್ವರದ ಸೊಲ್ಲೆತ್ತಿದಾಗಲೆಲ್ಲ ಅವರನ್ನು ಇಂಗ್ಲೆಂಡಿಗೆ ಕರೆಸಿಕೊಂಡು “Sir, CIE, GCIE, KCIE, Diwan Bahadur, Right Honourable,” ಇತ್ಯಾದಿ ಅರ್ಥಹೀನ ಒಣ ಬಿರುದುಗಳನ್ನು ಕೊಟ್ಟು ಅವರ ಅಹಂಕಾರಶಮನ ಮಾಡುತ್ತಿದ್ದರು. ಇಂಥ ಠಕ್ಕುಗಳ ಒಳ ಮರ್ಮವನ್ನು, ಅದರ ನಿಜಸ್ವರೂಪವನ್ನು ಕೂಡ ಡಿ.ವಿ.ಜಿ. ಅವರು ಅನೇಕ ಕಡೆ ತೋರಿಸಿದ್ದಾರೆ. ಒಂದು ಲೇಖನದಲ್ಲಿ ಅವರು ಈ ಅಂಶವನ್ನೇ ಬೇರೆ ರೀತಿ ಹೇಳುತ್ತಾರೆ:
“ಮೂರು ದಶಕಗಳ ಕೆಳಗೆ ನಮ್ಮ ದೇಶೀಯ ಸಂಸ್ಥಾನಗಳ ಆಡಳಿತವರ್ಗದಲ್ಲಿ ‘ನಮ್ಮವರು,’ ‘ಹೊರಗಿನವರು’ ಎಂಬ ಸ್ಪರ್ಧೆ ಕೆಲವು ಬಾರಿ ಏಳುತ್ತಿತ್ತು. ಈ ಸ್ಪರ್ಧೆಯ ಮೂಲದಲ್ಲಿದ್ದದ್ದು ರಾಜ್ಯನಿರ್ವಹಣೆಯಲ್ಲಿ ಯಾರು ಹೆಚ್ಚು ಸಮರ್ಥರು, ದಕ್ಷರು ಎಂಬ ಅಂಶ. ಈ ಪೈಪೋಟಿಗೆ ಔನ್ನತ್ಯದ ಹೆಗ್ಗಳಿಕೆಯಿತ್ತು. ಆಗ ಬ್ರಿಟಿಷರು ಇಲ್ಲಿ ಪರಿಚಯಿಸಿದ್ದ ಆಡಳಿತದ ಮಾದರಿಯು ಇಂಥವರಿಗೆ ಹೊಸತಾಗಿತ್ತು – ಎಂದರೆ, ಅವರ ಮಾರ್ಗದರ್ಶನಕ್ಕೆ ಪೂರ್ವಪರಂಪರೆ, ಪೂರ್ವಸೂರಿಗಳಿರಲಿಲ್ಲ. ಹೀಗಾಗಿ ಇವರು ತಮ್ಮ ಸ್ವಂತಚಿಂತನೆ, ಪರಿಣತಿ, ಅನುಭವಗಳ ಬೆಳಕಿನಲ್ಲಿ ತಮ್ಮ ಮಾರ್ಗವನ್ನು ತಾವೇ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯಿತ್ತು. ಆ ಸಂದರ್ಭದಲ್ಲಿ ಹುಟ್ಟಿದವರೇ ಉತ್ಕೃಷ್ಟ ಮಟ್ಟದ ಆಡಳಿತಗಾರರು - ರಾಜ್ಯನೀತಿಜ್ಞರು (statesmen). ಆದರೆ ಈ ಕಾಲದ ದಿವಾನನು ವೈಭವೀಕರಿಸಿದ ಗುಮಾಸ್ತ, ತಗಾದೆ ತೆಗೆಯುವ ಅಲ್ಪಪರಿಶ್ರಮಿ ಅಥವಾ ಬ್ರಿಟಿಷ್ ಮಾದರಿಯಲ್ಲಿ ಬಂಡೆಗೊಂಡ ಭಾರತೀಯ ಅಧಿಕಾರಿ.”
ಕಾಂಗ್ರೆಸ್ ಹಾಗೂ ದೇಶೀಯ ಸಂಸ್ಥಾನಗಳು
ಹೀಗೆ, ಬ್ರಿಟಿಷರ ಕುತಂತ್ರ ಒಂದು ಕಡೆಯಾದರೆ ನಮ್ಮ ದೇಶೀಯ ಸಂಸ್ಥಾನಗಳ ಕುರಿತು ಕಾಂಗ್ರೆಸ್ ಪಕ್ಷದ ಧೋರಣೆ ಮತ್ತೂ ಭಯಾನಕವಾಗಿತ್ತು. ಈ ವಿಷಯವನ್ನು ನೋಡುವ ಮುನ್ನ ಒಂದು ಮುಖ್ಯ ಭೂಮಿಕೆಯನ್ನು ಪರಿಭಾವಿಸಿದರೆ ಹೆಚ್ಚು ಪ್ರಯೋಜನವಾದೀತು.
ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಧಿಕಾರವಿರಲ್ಲಿಲ್ಲ. ಹೀಗಾಗಿ ಅದರ ನಿಜಸ್ವರೂಪಕ್ಕೆ ಕಾರ್ಯರೂಪವಾದ ಆಯಾಮ ಇನ್ನೂ ಸಿಕ್ಕಿರಲಿಲ್ಲ. ಆದರೆ ಡಿ.ವಿ.ಜಿಯವರು ಈ ಸುಪ್ತಸಾಧ್ಯತೆಯನ್ನೂ ತಮ್ಮ ದೂರದರ್ಶಿತ್ವದಿಂದ, ತೀಕ್ಷ್ಣ ಮತಿಯಿಂದ ಕಂಡುಕೊಂಡಿದ್ದರು.
೧೯೨೮ರಲ್ಲಿ ನೆಹರು ವರದಿ ಹೊರಬಂದಾಗ ಅದರಲ್ಲಿ ದೇಶೀಯ ಸಂಸ್ಥಾನಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಿದ್ದ ನಿಲುವು ಸ್ಪಷ್ಟವಾಗಿತ್ತು. ಕಾಂಗ್ರೆಸ್ ಪ್ರಕಾರ ಇಂಡಿಯಾ ದೇಶವೆಂದರೆ ಕೇವಲ ಬ್ರಿಟಿಷ್ ಇಂಡಿಯಾ. ಅದರಲ್ಲಿ ದೇಶೀಯ ಸಂಸ್ಥಾನಗಳಿಗೆ ಯಾವ ಸ್ಥಾನವೂ ಇರಲಿಲ್ಲ, ಅವೆಲ್ಲ ಸ್ವತಂತ್ರ ದೇಶಗಳು. ತಮ್ಮ ತಮ್ಮ ವ್ಯವಹಾರಗಳನ್ನು ನೇರವಾಗಿ ಇಂಗ್ಲೆಂಡ್ ನ ಸಾರ್ವಭೌಮ ಸರಕಾರದ ಜೊತೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವಕ್ಕಿತ್ತು. ಅಂದರೆ ಪೌರತ್ವ, ನಿವಾಸ (domicile), ಪಾಸ್ಪೋರ್ಟ್, ಇಂಗ್ಲೆಂಡನ್ನೂ ಒಳಗೊಂಡ ಅವುಗಳ ವಿದೇಶನೀತಿ, ತೀರ್ಥಯಾತ್ರೆಗಳ ನಿಯಮಗಳು - ಈ ಎಲ್ಲ ಮಹತ್ತರ ವಿಷಯಗಳಲ್ಲಿ ದೇಶೀಯ ಸಂಸ್ಥಾನಗಳು ಸಂಪೂರ್ಣ ಸ್ವತಂತ್ರ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿತು. ಹಸಿಗಾಯದ ಮೇಲೆ ಮೆಣಸಿನ ಪುಡಿ ಉಜ್ಜಿದಂತೆ ಆ ನೆಹರು ವರದಿಯು ಭಾರತದ ಭೌಗೋಳಿಕ ಮರುವಿಂಗಡಣೆಯು ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ಆಗಬೇಕೆಂದು ಮೊತ್ತಮೊದಲ ಬಾರಿಗೆ ಮಂಡಿಸಿತು. ನೆನಪಿರಲಿ, ಈ ವರದಿ ಬಂದದ್ದು ೧೯೨೮ರಲ್ಲಿ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ತ್ವದ ಅಂಶವಿದೆ; ಅದು ಕಾಂಗ್ರೆಸ್ ಪಕ್ಷದ ನಿರ್ಲಜ್ಜತೆ. ಗಾಂಧಿ “ಯುಗ”ದ ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ದೇಶೀಯ ಸಂಸ್ಥಾನಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟದ ದಾರಿಮುಳ್ಳು ಎಂದು ಭಾವಿಸಿತ್ತು. ಅದೇ ರೀತಿ, ಸಂಸ್ಥಾನಗಳು ಬ್ರಿಟಿಷ್ ವಿರುದ್ಧದ ಕಾಂಗ್ರೆಸ್ ಚಳುವಳಿಗಳನ್ನು ತಮ್ಮ ಎಲ್ಲೆಯೊಳಗೆ ಬಿಡುತ್ತಿರಲಿಲ್ಲ. ಆದರೂ ಲೆಕ್ಕವಿಲ್ಲದಷ್ಟು ಬಾರಿ ಗಾಂಧಿಯನ್ನೂ ಸೇರಿದಂತೆ ಕಾಂಗ್ರೆಸ್ ನಾಯಕರು ನಮ್ಮ ರಾಜಮಹಾರಾಜರಿಂದ ಹೇರಳವಾದ ಹಣವನ್ನು ಸುಲಿಯುತ್ತಿದ್ದರು. ಮಾತ್ರವಲ್ಲ, ನಮ್ಮ ಸಂಸ್ಥಾನಗಳು ತಮ್ಮ ಅಶಕ್ತಿ ಅಥವಾ ಇತರ ನೈಜ ಕಾರಣಕ್ಕೆ ಹಣ ಕೊಡಲು ನಿರಾಕರಿಸಿದಾಗ ಕಾಂಗ್ರೆಸ್ ನಾಯಕರು ಅಂತಹ ಸಂಸ್ಥಾನಗಳನ್ನು ಅತ್ಯಂತ ಹೀನವಾಗಿ ನಿಂದಿಸತ್ತಲೂ ಇದ್ದರು. ಈ ಪರಂಪರೆಗೆ ಮೇಲ್ಪಂಕ್ತಿ ಹಾಕಿಕೊಟ್ಟದ್ದು ಅದೇ “ಮಹಾತ್ಮಾ” ಗಾಂಧಿಯವರು. ಗಾಂಧಿಯವರ ಆಪ್ತ ಕಾರ್ಯದರ್ಶಿ ಪ್ಯಾರೇಲಾಲ್ ಅವರೇ ಇದನ್ನು ದಾಖಲಿಸಿದ್ದಾರೆ – ೧೯೩೦ರ ದಶಕದಲ್ಲಿ ಉತ್ತರಪ್ರದೇಶದ ಒಂದು ಸಂಸ್ಥಾನದ ಗಡಿಯೊಳಗೆ ಗಾಂಧಿ ಅದರ ರಾಜನನ್ನು ಬಾಯಿಗೆ ಬಂದಂತೆ ಸಾರ್ವಜನಿಕ ಭಾಷಣದಲ್ಲಿ ಬೈದಿದ್ದರು. ಕಾರಣ: ಆತ ಕಾಂಗ್ರೆಸ್ ಗೆ ದುಡ್ಡು ಕೊಡಲು ನಿರಾಕರಿಸಿದ್ದರು. ಆದರೆ ಅದೇ ಬಾಯಲ್ಲಿ “ನೀವು ಭಾರತಕ್ಕೇ ಸೇರಿಲ್ಲ,” ಎಂದು ಆ ನೆಹರು ವರದಿ ನಿರ್ಲಜ್ಜವಾಗಿ ಘೋಷಿಸಿತು.
ಈ ವರದಿಯನ್ನು ಆದ್ಯಂತ ಓದಿದ ಡಿ.ವಿ.ಜಿ.ಗೆ ರಕ್ತ ಕುದ್ದುಹೋಯಿತು. ತತ್ಕ್ಷಣವೇ ಸುಮಾರು ಹನ್ನೆರಡು ಪುಟಗಳ ಖಂಡನಲೇಖನವನ್ನು ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಅದರ ವಿಶ್ಲೇಷಣಪ್ರಾಖರ್ಯ ಹಾಗೂ ಅದರ ಸ್ಥಾಯಿಭಾವವಾಗಿ ಮಿಡಿಯುತ್ತಿದ್ದ ಗುಂಡಪ್ಪನವರ ಅಖಂಡಭಾರತಪ್ರಜ್ಞಯನ್ನು ಹೊರತುಪಡಿಸಿ ನೋಡಿದರೂ ಈ ಲೇಖನವು ಇಪ್ಪತ್ತನೆಯ ಶತಮಾನದ ಭಾರತೇತಿಹಾಸದ ಆಕಾರಸಾಮಗ್ರಿಯಾಗಿ ಇಂದಿಗೂ ಅಮೂಲ್ಯವಾಗಿದೆ. ಅದರ ಕೊನೆಯಲ್ಲಿ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ದೇಶದ್ರೋಹದ ಆರೋಪ ಮಾಡಿದ್ದಾರೆ: “ಒಂದು ಕಾಲವಿತ್ತು. ಆಗ ಕಾಂಗ್ರೆಸ್ “ರಾಷ್ಟ್ರೀಯ” ಎಂಬ ಪದವನ್ನು ತನ್ನ ಹೆಸರಿನಲ್ಲಿ ದಪ್ಪಕ್ಷರದಲ್ಲಿ ಮುದ್ರಿಸುತ್ತಿತ್ತು. ಆದರೆ ಬ್ರಿಟಿಷ್ ಇಂಡಿಯಾದಲ್ಲಿ ನೆಲೆಸಿರುವ ಈಗಿನ ಕಾಂಗ್ರೆಸ್ ನಾಯಕರು ನಮ್ಮ ದೇಶೀಯ ಸಂಸ್ಥಾನಗಳನ್ನು ಪರದೇಶಿ ರಾಜ್ಯಗಳೆಂದು ಪರಿಗಣಿಸುತ್ತಿದ್ದಾರೆ ... ಇಂತಹ ನಾಯಕರು ಬ್ರಿಟಿಷರ ಅಧಿಕಾರಶಾಹಿ ವರ್ಗವನ್ನು ಯಥಾವತ್ ಅನುಕರಿಸುತ್ತಿದ್ದಾರೆ. ಇವರೆಲ್ಲರು ನಮ್ಮ ದೇಶೀಯ ಸಂಸ್ಥಾನಗಳ ಸಮಸ್ಯೆಯನ್ನು ತಮಗೆ ಸಂಬಂಧವಿಲ್ಲದ ಸ್ಥಳೀಯ ಸಮಸ್ಯೆಯೆಂದು ಗಣಿಸಿದ್ದಾರೆ.”
ಅದೇ ಲೇಖನದಲ್ಲಿ ಗುಂಡಪ್ಪನವರು ನಮ್ಮ ರಾಜರಿಗೂ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ: “ನಮ್ಮ ರಾಜರು, ರಾಜಕುಮಾರರು ಒಳ್ಳೆಯ, ದಕ್ಷ, ವಾತ್ಸಲ್ಯಪೂರಿತ ಆಡಳಿತವನ್ನು ಕೊಡುತ್ತಿರಬಹುದು. ಅದು ಎಷ್ಟೇ ಶ್ಲಾಘನೀಯವಾದರೂ ಈ ಕಾಲದ ಪ್ರಜೆಗಳಿಗೆ ಅದು ಪೂರ್ತಿಯಾಗಿ ಸಮರ್ಪಕವಾಗಿರುವುದಿಲ್ಲ. ಏಕೆಂದರೆ ಈಗ ಎಲ್ಲೆಡೆ ಒಟ್ಟಂದದ ವ್ಯವಸ್ಥೆಯು ಖಿಲ್ಲತ್ತು-ದಾನಗಳ ಆಧಾರದ ಮೇಲೆ ನಿಂತಿಲ್ಲ. ಪ್ರಜೆಗಳು ತಮ್ಮ ಬೇಕು-ಬೇಡಗಳ ಬಗ್ಗೆ, ತಮ್ಮ ಭವಿಷ್ಯದ ಬಗ್ಗೆ ಸ್ವತಂತ್ರರಾಗಿ ಚಿಂತನೆ ಮಾಡುವ ವಾತಾವರಣ ಮೂಡುತ್ತಿದೆ. ವಿವೇಕಿ ಮಾತಾಪಿತೃಗಳು ತಮ್ಮ ಹುಡುಗರನ್ನು ಶಾಶ್ವತ ಶೈಶವಕ್ಕೆ ನೂಕದೆ ಪ್ರೌಢ ಯುವಕರನ್ನಾಗಿ ನೋಡಲು ಉತ್ಸಕಾಗ್ದದಾರೆ. ಈ ಪಾಠವನ್ನು ನಮ್ಮ ರಾಜಮಹಾರಾಜರು ಇಂದಿಗೂ ಕಲಿತಿಲ್ಲ. ಮುಂದೆ ಕಲಿಯುವ ಸೂಚನೆಯನ್ನೂ ನೀಡುತ್ತಿಲ್ಲ.” ದುರ್ದೈವ, ಈ ಪಾಠವನ್ನು ನಮ್ಮ ಸಂಸ್ಥಾನಗಳು ಕೊನೆಗೂ ಕಲಿಯಲಿಲ್ಲ.
To be continued.