ಇ. ಎಸ್. ವೆಂಕಟರಾಮಯ್ಯ
ನ್ಯಾಯಮೂರ್ತಿ ಇ. ಎಸ್. ವೆಂಕಟರಾಮಯ್ಯನವರ ಮುಖಪರಿಚಯ ನನಗೆ ಹಿಂದೆಯೇ ಗೋಖಲೆಸಂಸ್ಥೆಯಲ್ಲಿ ಆಗಿತ್ತು. ಅವರು ಡಿ.ವಿ.ಜಿ.ಯವರ ಶಿಷ್ಯವರ್ಗಕ್ಕೆ ಸೇರಿದವರು. ಡಿ.ವಿ.ಜಿ. ಜನ್ಮಶತಾಬ್ದಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾಷಣವನ್ನೂ ಕೇಳಿದ್ದೆ. ನನಗೆ ಎದ್ದುಕಂಡದ್ದು ಅವರ ಸ್ನಿಗ್ಧತೆ ಮತ್ತು ವಿನಯವಂತಿಕೆ. ಭಾರತದ ಸರ್ವೋಚ್ಚನ್ಯಾಯಾಲಯದ ಪ್ರಧಾನನ್ಯಾಯಮೂರ್ತಿಗಳ ಮಹೋನ್ನತ ಸ್ಥಾನ ಅವರಿಗಿದ್ದರೂ ಹಮ್ಮು-ಬಿಮ್ಮಿನ ಸೋಂಕಿಲ್ಲದ ಆ ವ್ಯಕ್ತಿತ್ವ ನನಗೆ ತುಂಬ ಮೆಚ್ಚಾಗಿತ್ತು. ಅವರನ್ನು ಮೊತ್ತಮೊದಲು ಧಾರಾಳವಾಗಿ ಮಾತನಾಡಿಸಿದ್ದು ಮುಂಬಯಲ್ಲಿ ನಡೆದ ವೇದಸಮ್ಮೇಳನದಿಂದ ಹಿಂದಿರುಗುವಾಗ. ವಿಮಾನದಲ್ಲಿ ನನ್ನ ಪಕ್ಕದಲ್ಲಿಯೇ ಅವರು ಕುಳಿತಿದ್ದರು. ಹೋಗುವಾಗ ರಾಜಗೋಪಾಲ್ ನನ್ನ ಜೊತೆಗಿದ್ದರು; ಈಗ ಇವರು. ಗಗನಸಖಿ ಉಪಾಹಾರವನ್ನು ತಂದಿತ್ತಾಗ ಎಂದಿನಂತೆ ಬೇಡವೆಂದೆ. ಆಗ ಇವರು ನನ್ನನ್ನು ತುಂಬ ಅನುನಯಿಸಿ ತಿನ್ನುವಂತೆ ಮಾಡಿದರು. ಅಷ್ಟು ದೊಡ್ಡ ಮನುಷ್ಯರು ನನ್ನಂಥ ಎಳೆಯನ ವಿಷಯದಲ್ಲಿ ತೋರಿದ ಕಾಳಜಿ ನನ್ನ ಮಟ್ಟಿಗೆ ಊಹಾತೀತ ಎನಿಸಿತ್ತು.
ಅನಂತರ ವೆಂಕಟರಾಮಯ್ಯನವರು ವಿದ್ಯಾಭವನದ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಹೀಗಾಗಿ ಅವರೊಡನೆ ಹೆಚ್ಚಿನ ಬಳಕೆಗೆ ಅವಕಾಶವಾಯಿತು. ದೇಶ-ವಿದೇಶಗಳನ್ನೆಲ್ಲ ಸುತ್ತಿದವರಾದರೂ ಅಯ್ಯನವರಿಗೆ ತಮ್ಮ ಹುಟ್ಟೂರು ಇಂಗಲಗುಪ್ಪೆ ತುಂಬ ಪ್ರಿಯವಾಗಿತ್ತು. ಭವನದ ಬಳಗವನ್ನೆಲ್ಲ ತಮ್ಮ ಊರಿನ ಮನೆಗೆ ಕರೆದೊಯ್ದು ಹಬ್ಬದೂಟ ಹಾಕಿಸಿದ್ದರು. ಹತ್ತಿರದ ಮೇಲುಕೋಟೆ, ತೊಂಡನೂರು ಮೊದಲಾದ ಪುಣ್ಯಕ್ಷೇತ್ರಗಳನ್ನು ಸುತ್ತಿಸಿದ್ದರು. ತೊಂಡನೂರು ಭಗವದ್ರಾಮಾನುಜರ ಪುಣ್ಯಭೂಮಿ. ಅಲ್ಲಿರುವ ನಂಬಿ ನಾರಾಯಣ ಮತ್ತು ಪಾರ್ಥಸಾರಥಿ ದೇವಸ್ಥಾನಗಳು ತುಂಬ ಪ್ರಾಚೀನ. ವಿಶೇಷತಃ ಅಲ್ಲಿಯ ಮೂಲಮೂರ್ತಿಗಳ ಘನಸೌಂದರ್ಯ ಎಂಥವರನ್ನೂ ಭಕ್ತಿಪರವಶರನ್ನಾಗಿಸುತ್ತಿತ್ತು. ಇದನ್ನೆಲ್ಲ ಅವರು ಹುಟ್ಟೂರಿನ ಹೆಮ್ಮೆಯಿಂದ ನಮಗೆ ಪರಿಚಯಿಸಿದ್ದರು.
ವೆಂಕಟರಾಮಯ್ಯನವರಿಗೆ ಸಂಸ್ಕೃಸಾಹಿತ್ಯದಲ್ಲಿಯೂ ಧರ್ಮಶಾಸ್ತ್ರದಲ್ಲಿಯೂ ಒಳ್ಳೆಯ ಪ್ರವೇಶವಿತ್ತು. ಹಲವು ಬಾರಿ ವ್ಯಾಸ, ವಾಲ್ಮೀಕಿ, ಕಾಳಿದಾಸರ ಪದ್ಯಗಳನ್ನು ಮೆಲಕುಹಾಕಿದ್ದರು. ಆಧುನಿಕ ಸಂವಿಧಾನ, ಕಾನೂನು ಮತ್ತು ಪ್ರಾಚೀನರ ಧರ್ಮಶಾಸ್ತ್ರಸಂದರ್ಭಗಳನ್ನು ಕುರಿತು ನಾನು ಕೇಳುವ ಪ್ರಶ್ನೆಗಳಿಗೆಲ್ಲ ತಾಳ್ಮೆಯಿಂದ ಉತ್ತರ ನೀಡುತ್ತಿದ್ದರು. ಅವರ ಜೀವನ-ಭಾವನೆಗಳು ನಮ್ಮ ಸಂಸ್ಕೃತಿಗೆ ಅದೆಷ್ಟರ ಮಟ್ಟಿಗೆ ಅಂಟಿಕೊಂಡಿದ್ದವೆಂಬುದಕ್ಕೆ ಒಂದು ಸಣ್ಣ ಉದಾಹರಣೆ ನೀಡಬಹುದು.
ಲಂಡನ್ನಿನಲ್ಲಿ ಸ್ಥಾಪಿತವಾದ ವಿದ್ಯಾಭವನಕ್ಕೆ ಸ್ವಂತದ ಸ್ಥಳವನ್ನು ಖರೀದಿಸುವ ಅವಕಾಶ ಬಂದಿತ್ತು. ಒಂದು ಹಳೆಯ ಚರ್ಚನ್ನು ಸರ್ಕಾರ ಸಾಂಸ್ಕೃತಿಕ ಕಾರ್ಯಕ್ಕೆ ಮಾರಲು ಸಿದ್ಧವಿತ್ತು. ಭವನದ ಹಿತೈಷಿಗಳು ಇದನ್ನು ಅಲ್ಲಿಯ ಕಾರ್ಯದಶಿಗಳಾಗಿದ್ದ ಮತ್ತೂರು ಕೃಷ್ಣಮೂರ್ತಿಗಳಿಗೆ ತಿಳಿಸಿದರು. ಆ ಹೊತ್ತಿಗೆ ವೆಂಕಟರಾಮಯ್ಯನವರೂ ಅಲ್ಲಿದ್ದರು. ಇಬ್ಬರೂ ಹೋಗಿ ಆ ಚರ್ಚನ್ನು ನೋಡಿದರು. ಅದು ಭವನದ ಕೆಲಸಕ್ಕೆ ಹೇಳಿ ಮಾಡಿಸಿದ ಹಾಗಿತ್ತು. ಆದರೆ ಅದು ತಮಗೆ ದಕ್ಕುವುದೋ ಇಲ್ಲವೋ ಎಂಬ ಸಂಶಯವೂ ಮೂಡಿತು. ಏಕೆಂದರೆ ಈ ಸ್ಥಳಕ್ಕಾಗಿ ಹಲವು ಸಂಸ್ಥೆಗಳ ನಡುವೆ ಪೈಪೋಟಿಯಿತ್ತು. ಜೊತೆಗೆ ಬೆಲೆಯ ವಿಷಯದಲ್ಲಿಯೂ ಕಳವಳವಿದ್ದಿತು.
ಇದನ್ನೆಲ್ಲ ಬಲ್ಲ ವೆಂಕಟರಾಮಯ್ಯನವರು ಮತ್ತೂರರಿಗೆ ಧೈರ್ಯ ಹೇಳಿದರು: “ಮತ್ತೂರ್, ಯೋಚನೆ ಮಾಡಬೇಡಿ. ದೇವರಿದ್ದಾನೆ. ಈಗ ಹೇಗೂ ಇಲ್ಲಿಗೆ ನಾವು ಬಂದಿದ್ದೀವಿ. ಇಲ್ಲಿಯೇ ಒಂದು ಸ್ವಲ್ಪ ಹೊತ್ತು ಉತ್ತರೀಯ ಹಾಸಿಕೊಂಡು ಮಲಗಿಬಿಡೋಣ. ನಮ್ಮ ಕಡೆ ಹೀಗೆ ಮಲಗಿದರೆ ಆ ನೆಲ ನಮ್ಮದಾಗುತ್ತದೆ ಅನ್ನೋ ನಂಬಿಕೆ ಇದೆ” ಎನ್ನುತ್ತ ತಮ್ಮ ಉತ್ತರೀಯವನ್ನು ಹಾಸಿ ಮಲಗೇಬಿಟ್ಟರಂತೆ! ಅವರ ಆ ನಂಬಿಕೆ ದೊಡ್ಡದೋ ಭವನದ ಪುಣ್ಯ ದೊಡ್ಡದೋ ಅಂತೂ ಆ ಸ್ಥಳ ಭವನದ್ದಾಯಿತು.
ಹೀಗೆ ವೆಂಕಟರಾಮಯ್ಯನವರು ಭವನದಲ್ಲಿ ಇರಿಸಿದ ಆಸ್ಥೆ ದೊಡ್ಡದು.
ಕೆಲವು ಸಂದರ್ಭಗಳು
ನಾನು ಭವನಕ್ಕೆ ಬಂದು ಸೇರಿದ ಬಳಿಕ ರಂಗನಾಥ್ ಅವರೊಡನೆ ಎಂದಿನ ಆತ್ಮೀಯತೆ ಮುಂದುವರಿದಿತ್ತಾದರೂ ಈಗ ನಮ್ಮ ನಡುವಿದ್ದ ಸಂಬಂಧದಲ್ಲಿ ಸೇವ್ಯ-ಸೇವಕಭಾವವೂ ಸೇರಿದ ಕಾರಣ ಆಗೀಗ ಸಹಜವಾಗಿಯೇ ಇರುಸುಮುರುಸುಗಳು ತಲೆದೋರುತ್ತಿದ್ದವು. ಮುಖ್ಯವಾಗಿ ಭವನದ ಕೆಲವು ಕಾರ್ಯಕ್ರಮಗಳನ್ನು ಕುರಿತು ನನ್ನ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದೆ. ಇದು ಎಷ್ಟು ತರ್ಕಶುದ್ಧವಾಗಿದ್ದರೂ ರಂಗನಾಥ್ ಒಪ್ಪಿಕೊಳ್ಳಲು ಸ್ವಲ್ಪ ಹಿಂಜರಿಯುತ್ತಿದ್ದರು.
ವ್ಯಾಸನಕೆರೆ ಪ್ರಭಂಜನಾಚಾರ್ಯರು ಸಂಸ್ಕೃತಸಾಹಿತ್ಯದ ಪರಿಚಯಭಾಷಣಗಳ ಮಾಲಿಕೆಯೊಂದನ್ನು ಭವನದಲ್ಲಿ ಆರಂಭಿಸಿದ್ದರು. ಅದರಲ್ಲಿ ಅಪ್ಪಟ ಮತಾಗ್ರಹದಿಂದ, ಸಾಹಿತ್ಯಶಾಸ್ತ್ರದ ಯಾವುದೇ ಮಾನದಂಡಗಳನ್ನು ಬಳಸದೆ ಕಾಳಿದಾಸನಂಥವನನ್ನೂ ಕುಕವಿಯೆಂದು ಆಕ್ಷೇಪಿಸಿದ್ದರು. ಅವರ ಇಂಥ ಹೇಳಿಕೆಗಳನ್ನು ನಾನು ಒಪ್ಪದೆ ಆ ಸಭೆಯಲ್ಲಿಯೂ ಪ್ರಶ್ನಿಸಿದ್ದೆ; ಕಾರ್ಯಕ್ರಮದ ಆಯೋಜಕರಾದ ರಂಗನಾಥ್ ಅವರಲ್ಲಿ ಕೂಡ ಪ್ರಸ್ತಾವಿಸಿದ್ದೆ. ನನ್ನ ಮಾತನ್ನು ಪದ್ಮನಾಭನ್ ಅವರೂ ಪುಷ್ಟಿಗೊಳಿಸಿದ್ದರು. ಆಗ ರಂಗನಾಥ್ ಅವರು ತುಂಬ ಸೌಜನ್ಯದಿಂದ ಪ್ರಭಂಜನಾಚಾರ್ಯರನ್ನು ಎಚ್ಚರಿಸಿದ್ದರು. ಆದರೆ ಇದೇ ರೀತಿಯ ವರ್ತನೆ ಮತ್ತೂ ಆಗ್ರಹದಿಂದ ದರ್ಶನಗಳನ್ನು ಕುರಿತ ಅವರ ಉಪನ್ಯಾಸಮಾಲಿಕೆಯಲ್ಲಿ ಮುಂದುವರಿಯಿತು. ಇಲ್ಲಿ ಕೂಡ ನನ್ನ ಅಸಮ್ಮತಿ ಎದುರಾಯಿತು. ದುರ್ದೈವವೆಂದರೆ ರಂಗನಾಥ್ ಅವರು ಭಾಷಣಕಾರರ ಮಾತಿನ ಓಘಕ್ಕೂ ನಿರೂಪಣೆಯ ನಾಜೂಕಿಗೂ ಬೆಲೆ ಕೊಟ್ಟಂತೆ ಅಲ್ಲಿಯ ವಿಚಾರದಲ್ಲಿರುವ ಆಗ್ರಹಕ್ಕೆ ಗಮನ ನೀಡಲಿಲ್ಲ. ದಿಟವೇ, ಹಲವರು ಶ್ರೋತೃಗಳ ಮತ್ತು ನನ್ನಂಥವರ ಮಾತಿಗೆ ಒಪ್ಪಿ ಮತ್ತೆ ಎಚ್ಚರಿಕೆ ನೀಡಿದರು. ಆದರೂ ಭಾಷಣಕ್ಕೆ ಬರುತ್ತಿದ್ದ ಹೆಚ್ಚಿನ ಮಂದಿ ಶ್ರೋತೃಗಳ ಸಮುದಾಯವನ್ನು ಗಮನಿಸಿ ಆ ಕಾರ್ಯಕ್ರಮಕ್ಕೆ ಉತ್ತೇಜನ ಕೊಟ್ಟರು. ಇದು ಯುಕ್ತವಾಗಲಿಲ್ಲವೆಂದು ನನಗೆ ತೋರಿದರೂ ವಿದ್ಯಾಭವನದ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಮತ್ತು ಆಯಾ ಭಾಷಣಕಾರರ ಅಧಿಕಶ್ರೋತೃಗಳ ಅಪೇಕ್ಷೆ ಈಡೇರಬೇಕೆಂಬ ನಿಲವಿನಿಂದ ಅವರು ನಡೆದರು ಎಂದು ಅರ್ಥವಾಯಿತು.
ಇನ್ನೊಮ್ಮೆ ಎನ್. ಟಿ. ಶ್ರೀನಿವಾಸ ಅಯ್ಯಂಗಾರ್ಯರ ಭಾಗವತಪ್ರವಚನಮಾಲಿಕೆ ಅಳತೆ ಮೀರಿದ ವಿಸ್ತಾರದಿಂದ ಸಾಗುತ್ತಿರುವುದರ ಬಗೆಗೆ ಮಾತು ಬಂದಿತು. ಪುನರುಕ್ತಿ ಮತ್ತು ಜಾಳುತನಗಳು ಮತ್ತೆ ಮತ್ತೆ ಈ ಭಾಷಣಮಾಲಿಕೆಯಲ್ಲಿ ತಲೆದೋರುತ್ತಿದ್ದವು. ಜೊತೆಗೆ ಆಗೀಗ ಅನುದಾರವಾಗಿ ಶಿವನಿಂದೆಯೂ ಇಣಿಕುತ್ತಿತ್ತು. ಈ ಸಂದರ್ಭದಲ್ಲಿ ಕೂಡ ರಂಗನಾಥ್ ಅವರು ತೂಷ್ಣೀಂಭಾವವನ್ನು ವಹಿಸಿದರು.
ಇಲ್ಲೆಲ್ಲ ಬಹುಶಃ ನಿರ್ಣಯಾಧಿಕಾರಕ್ಕೆ ಬೇಕಾದ ತತ್ತ್ವವಿವೇಚನೆಯ ಸಾಮರ್ಥ್ಯ ಕೊರತೆಯಾಯಿತೆಂದು ನನಗೆ ತೋರಿತು. ಜೊತೆಗೆ ಸಂಸ್ಥೆಯ ಅಧ್ಯಕ್ಷರೂ ಅವರ ಕುಟುಂಬದವರೂ ತುಂಬ ಶ್ರದ್ಧೆಯಿಂದ ನಿಯತವಾಗಿ ಶ್ರೀನಿವಾಸ ಅಯ್ಯಂಗಾರ್ಯರ ಭಾಷಣಗಳಿಗೆ ಬರುತ್ತಿದ್ದುದೂ ರಂಗನಾಥ್ ಅವರ ಬಾಯಿ ಕಟ್ಟಿಸಿರಬಹುದು. ಇಂಥ ಸಂದರ್ಭಗಳಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಆಯೋಜಕರಿಗೆ ಎಷ್ಟು ಕಷ್ಟವೆಂದು ಅಂದಿಗಿಂತ ಇಂದು ನನಗೆ ಚೆನ್ನಾಗಿ ಅರ್ಥವಾಗುತ್ತಿದೆ. ಇಂತಾದರೂ ಮತಾಗ್ರಹ, ಪುನರುಕ್ತಿ ಮತ್ತು ನೈರಸ್ಯಗಳ ವಿಷಯದಲ್ಲಿ ನನ್ನ ಅಭಿಪ್ರಾಯ ಹಾಗೆಯೇ ಉಳಿದಿದೆ.
ಅದೊಮ್ಮೆ ಹಿರಿಯ ಐ. ಎ. ಎಸ್. ಅಧಿಕಾರಶ್ರೇಣಿಯಲ್ಲಿದ್ದ ವರದನ್ ಎಂಬುವರ ಪತ್ನಿ ಶ್ರೀಮತಿ ಕೋಮಲಾ ವರದನ್ ತಮ್ಮ ಪ್ರಭಾವ ಬಳಸಿ ಭವನದಲ್ಲಿ ನೃತ್ಯದ ಕಾರ್ಯಕ್ರಮ ನೀಡಿದ್ದರು. ಅರ್ಹತೆಗಿಂತ ಅಧಿಕಾರವೇ ಮುನ್ನಡಸುವ ಯಾವ ಕಲೆಯಾಗಲಿ, ವಿದ್ಯೆಯಾಗಲಿ ಕಳಪೆಯಾಗಿರುವುದು ಜಗತ್ತು ಕಂಡ ಸತ್ಯ. ಇದಕ್ಕೆ ಅಂದಿನ ನೃತ್ಯವೂ ಹೊರತಾಗಿರಲಿಲ್ಲ. ಪಾಪ, ರಂಗನಾಥ್ ಅವರು ಅನಿವಾರ್ಯವಾಗಿ ವಂದನಾರ್ಪಣೆಯ ಒಂದೆರಡು ಒಳ್ಳೆಯ ಮಾತುಗಳನ್ನಾಡಬೇಕಾಯಿತು. ನಾನಂತೂ ಒಂದು ಒಳ್ಳೆಯ ಮಾತನ್ನೂ ಆಡುವುದಿಲ್ಲವೆಂದು ಹಠ ಹಿಡಿದಿದ್ದ ಕಾರಣ ಈ ಕಷ್ಟದ ಕೆಲಸ ಅವರ ಪಾಲಿಗೆ ಬಂದಿತ್ತು. ಕಾರ್ಯಕ್ರಮ ಮುಗಿದು ಎಲ್ಲರೂ ತೆರಳುವಾಗ ಉಳಿದಿದ್ದ ಕೆಲವೇ ಮಂದಿಯ ನಡುವೆ ಕೃಷ್ಣಮೂರ್ತಿಗಳಿಗೆ ರಂಗನಾಥ್ ಹೇಳಿದರು: “I am really becoming a hypocrite by shelling out good words on such unworthy performances. Compliments should be showered generously on the deserving. We should be misers with the rest.” ರಂಗನಾಥ್ ಅವರು ಯಾವುದೇ ಸ್ಥಾನ-ಮಾನದ ಅಪೇಕ್ಷೆಯಿಂದಾಗಲಿ, ಹಣದ ಆವಶ್ಯಕತೆಯಿಂದಾಗಲಿ ಭವನದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅಂಥವರಿಗೂ ಈ ಬಗೆಯ ಮುಜುಗರದ ಸಂದರ್ಭಗಳು ಏರ್ಪಡುತ್ತಿದ್ದವೆಂದರೆ ನಮ್ಮ ವ್ಯವಸ್ಥೆಯ ಅಗಟ-ವಿಗಟ ಅರ್ಥವಾಗಬಹುದು.
ಇಂಥ ಕೆಲವೇ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಅವರ ನಿಶ್ಚಯ, ಧೈರ್ಯ ಮತ್ತು ಗುಣಪೋಷಣೆಗಳು ಮಾದರಿಯಾಗುವಂತಿದ್ದವು. ಇದನ್ನೆಲ್ಲ ಗಮನಿಸಿಯೇ ಪದ್ಮನಾಭನ್ ಅವರು ಒಮ್ಮೆ ನನಗೆ ಹೇಳಿದ್ದುಂಟು: “Dr. Ranganath is dictatorial in policies at times. He jumps to conclusions and imposes them on his subordinates for execution. But it is inevitable. A good organisation certainly needs such a cultured director. If not, nothing worthwhile can be offered to the society.”
ಸಮಾಜದಲ್ಲಿ ವೈಯಕ್ತಿಕ ಸ್ತರದ ‘ಕಲ್ಚರ್ಡ್ ಕನ್ಸರ್ವೇಟಿವ್ಸ್’ ಹೇಗೆ ಮುಖ್ಯವೋ ಹಾಗೆಯೇ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಈ ಬಗೆಯ ‘ಕಲ್ಚರ್ಡ್ ಡಿಕ್ಟೇಟರ್ಸ್’ ಕೂಡ ಇರಬೇಕೆಂದು ನನಗೆ ಹಲವು ಬಾರಿ ತೋರಿದೆ. ಇದಕ್ಕೆ ಮುಖ್ಯವಾಗಿ ಶುದ್ಧಹಸ್ತ, ಬಿಗಿಯಾದ ನಯ, ಮೌಲ್ಯಗಳ ವಿಷಯದಲ್ಲಿ ಮಸಕಾಗದ ಜಾಣ್ಮೆ, ಆತ್ಮಾಭಿಮಾನ, ಹಾಸ್ಯಪ್ರಜ್ಞೆ ಮತ್ತು ನಿರ್ವಾಹಸ್ಥೈರ್ಯಗಳು ಬೇಕು. ಇವೆಲ್ಲ ರಂಗನಾಥ್ ಅವರಲ್ಲಿ ಚೆನ್ನಾಗಿದ್ದವು.