ಎಂ. ಎನ್. ಚಂದ್ರಶೇಖರ್
ಭವನದಲ್ಲಿ ಯಜುರ್ವೇದವನ್ನು ಕಲಿಸಲು ಚಂದ್ರಶೇಖರ್ ಅವರನ್ನು ನಾವು ಕೇಳಿಕೊಂಡಿದ್ದೆವೆಂದು ಈಗಾಗಲೇ ಪ್ರಸ್ತಾವಿಸಿದ್ದಾಗಿದೆ. ಇವರು ವೇದ-ಸಂಸ್ಕೃತಗಳಿಗೆ ಹೆಸರಾದ ಮತ್ತೂರಿನವರು. ಆ ಗ್ರಾಮದ ಪುರೋಹಿತರ ಕುಟುಂಬದವರು. ಇವರ ಮನೆಯವರೆಲ್ಲ ನನಗೆ ಆತ್ಮೀಯರು, ಗೌರವನೀಯರು. ಚಂದ್ರಶೇಖರ್ ಅವರ ಹಿರಿಯ ಅಣ್ಣಂದಿರು ಬ್ರಹ್ಮಶ್ರೀ ಮಾರ್ಕಂಡೇಯ ಅವಧಾನಿಗಳು ಈಚೆಗಷ್ಟೇ ನಮ್ಮನ್ನು ಅಗಲಿದರು. ಇವರೂ ಇವರ ಮತ್ತೊಬ್ಬ ತಮ್ಮಂದಿರೂ ಬಾಳಿನ ಕೊನೆಗಾಲದಲ್ಲಿ ಸಂನ್ಯಸಿಸಿ ಮುಕ್ತರಾದವರು. ಊರಿಗೇ ಪುರೋಹಿತರಾಗಿ ಆ ವೃತ್ತಿಗೆ ಸಾರ್ಥಕ್ಯವನ್ನು ತಂದುಕೊಟ್ಟವರು ಮಾರ್ಕಂಡೇಯ ಅವಧಾನಿಗಳು. ಎಲ್ಲ ತಮ್ಮಂದಿರೂ ಇವರಿಗೆ ತಕ್ಕವರೇ. ಅವರ ಅವಿಭಕ್ತಕುಟುಂಬದ ಆತ್ಮೀಯತೆ-ಅನ್ಯೋನ್ಯತೆಗಳನ್ನು ಕಾಣುವುದೇ ಒಂದು ಸೌಭಾಗ್ಯ.
ನನಗೆ ಚಂದ್ರಶೇಖರ್ ಅವರ ಪರಿಚಯ ಪಿ.ಯು.ಸಿ. ದಿನಗಳಲ್ಲಿಯೇ ಆಗಿತ್ತು. ನಾನು ಎಂ. ಇ. ಎಸ್. ಕಾಲೇಜಿನಲ್ಲಿ ಓದುವಾಗ ನನಗೆ ಸಂಸ್ಕೃತವನ್ನು ಆಸ್ಥೆಯಿಂದ ಕಲಿಸಿದ ಪ್ರೀತಿಯ ಗುರುಗಳು ಬಿ. ಎಸ್. ರಾಮಕೃಷ್ಣ ಅವರು. ಚಂದ್ರಶೇಖರ್ ಇವರ ಸಹಾಧ್ಯಾಯಿ. ಇಬ್ಬರಲ್ಲಿಯೂ ತುಂಬ ಆತ್ಮೀಯತೆಯಿತ್ತು. ಆದರೆ ಸ್ವಭಾವಗಳು ಮಾತ್ರ ವಿಭಿನ್ನ. ಇದು ಕೇವಲ ಹೊರಗಿನ ವರ್ತನೆಗಳಿಗೆ ಸಂಬಂಧಿಸಿದ ವೈಷಮ್ಯ; ಒಳಗೆ ಇಬ್ಬರೂ ಒಂದೇ. ನನ್ನ ವಿದ್ಯಾಗುರುಗಳು ಹೃದಯದಿಂದ ನವನೀತಪಾಕ, ಮಾತು-ರೀತಿಗಳಲ್ಲಿ ನಾರಿಕೇಳಪಾಕ. ಪನಸಪಾಕವೆಂದರೂ ಸರಿಯಾದೀತು. ಚಂದ್ರಶೇಖರ್ ಅವರಾದರೋ ಅಂತರ್ಬಹಿಶ್ಚ ನವನೀತಪಾಕದವರು. ನಾನಿವರನ್ನು ಕಂಡ ದಿನದಿಂದ ನನ್ನ ವಿದ್ಯಾಗುರುಗಳಂತೆಯೇ ಭಾವಿಸಿದ್ದೇನೆ. ಅವರಾದರೋ ತಮ್ಮ ಸಹಜವಾದ ಸಜ್ಜನಿಕೆಯಿಂದ ನನ್ನನ್ನು ಸಮಾನಸ್ಕಂಧನಂತೆಯೇ ನಡಸಿಕೊಂಡು ಬಂದಿದ್ದಾರೆ.
ನಾನು ಸಾಮಾನ್ಯವಾಗಿ ಅವರನ್ನು ವಿನೋದ ಮಾಡುತ್ತಿದ್ದುದುಂಟು: “ನೀವು ಇಷ್ಟು ಮೃದುವಾದರೆ ಹೇಗೆ? ಹೇಳಿ ಕೇಳಿ ನೀವು ಸಂಕೇತಿಗಳು. ನಿಮ್ಮ ಪಂಗಡ ಜೋರು-ಜಬರುದಸ್ತುಗಳಿಗೆ ಪ್ರಖ್ಯಾತ. ಇದನ್ನು ಜಗತ್ತೇ ಒಪ್ಪಿದೆ. ಹೀಗಿರುವಾಗ ನೀವು ನಿಮ್ಮ ಜನಾಂಗದ ಮೂಲಸ್ವಭಾವಕ್ಕೆ ವ್ಯತಿರಿಕ್ತವಾದರೆ ಅಧರ್ಮವಾಗದೇ?” ಇದಕ್ಕೆ ಚಂದ್ರಶೇಖರ್ ಮತ್ತಷ್ಟು ಸಂಕೋಚದಿಂದ ಮುದುಡುತ್ತ ಅಸಮ್ಮತಿಯ ಮೆಲುನಗೆ ಸೂಸುತ್ತಿದ್ದರು. ಅವರ ನಡೆ-ನುಡಿಗಳಲ್ಲಿ ವಿನಯ, ಗುಣಗ್ರಹಣ, ಸಹಾಯಧರ್ಮಗಳು ಮೂರ್ತಿವೆತ್ತಂತೆ ತೋರುತ್ತವೆ.
ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಸಂಸ್ಕೃತವನ್ನು ಕಲಿಸುತ್ತಿದ್ದರು. ವಿರಾಮದ ಹೊತ್ತಿನಲ್ಲಿ ಆಸಕ್ತರಾದ ವಿದ್ಯಾರ್ಥಿಗಳಿಗೆ ಅಲ್ಲಿಯೇ ವೇದಪಾಠ ಮಾಡುತ್ತಿದ್ದರು. ತಮ್ಮ ಊಟ-ತಿಂಡಿಗಳ ಬಿಡುವನ್ನೂ ಇದಕ್ಕೆ ಬಿಟ್ಟುಕೊಡುತ್ತಿದ್ದರು. ಇನ್ನು ಮನೆಯಲ್ಲಂತೂ ಮೂರು ಹೊತ್ತೂ ವೇದ ಮತ್ತು ಸಂಸ್ಕೃತಗಳ ತರಗತಿಗಳು. ಇವೆಲ್ಲ ನಿಶ್ಶುಲ್ಕವಾಗಿ ನಡೆಯುತ್ತಿದ್ದವು. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮೂಲಕ ಸಂಸ್ಕೃತನಾಟಕಗಳನ್ನು ಮಾಡಿಸುತ್ತಿದ್ದರು. ಅದಕ್ಕೆ ಬೇಕಿರುವ ನಿರ್ದೇಶನ ಇವರಿಂದಲೇ ಸಾಗುತ್ತಿತ್ತು. ಹಿಂದೆ ತಮ್ಮ ಸಹಾಧ್ಯಾಯಿನಿಯೇ ಆಗಿದ್ದವರು ವಿಭಾಗಾಧ್ಯಕ್ಷರಾಗಿ ದಬ್ಬಾಳಿಕೆ ಮಾಡುತ್ತಿದ್ದರು; ಇಂಥ ಚಟುವಟಿಕೆಗಳಿಗೆ ಕಾಲೇಜಿನಲ್ಲಿ ಸ್ಥಳ ಸಿಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಚಂದ್ರಶೇಖರ್ ಇದೊಂದನ್ನೂ ಮನಸ್ಸಿಗೆ ತಂದುಕೊಳ್ಳದೆ ನಿರುದ್ವಿಗ್ನತೆಯಿಂದ ತಮ್ಮ ಮನೆಯಲ್ಲಿಯೇ ಇವಕ್ಕೆಲ್ಲ ಎಡೆ ಮಾಡಿಕೊಡುತ್ತಿದ್ದರು. ಇದಕ್ಕೆ ಅವರ ಮನೆಯಾಕೆಯ ಸಹಕಾರ ಕೂಡ ಮಿಗಿಲಾಗಿತ್ತು. ವಿದ್ಯಾರ್ಥಿಗಳಿಗೆ ಊಟ-ತಿಂಡಿ ಕೂಡ ಕೊಟ್ಟು ಪಾಠ ಕಲಿಸುತ್ತಿದ್ದರು, ನಾಟಕ ಮಾಡಿಸುತ್ತಿದ್ದರು. ಅಷ್ಟೇಕೆ, ನಾಟಕಸ್ಪರ್ಧೆಗಳಲ್ಲಿ ತಮ್ಮ ತಂಡಕ್ಕೆ ಬಹುಮಾನ ಬರದಿದ್ದರೆ ತಾವೇ ಆ ಮಕ್ಕಳಿಗೆ ತಮ್ಮ ಖರ್ಚಿನಲ್ಲಿ ಬಹುಮಾನವನ್ನು ತಂದುಕೊಟ್ಟು ಹಿಗ್ಗುತ್ತಿದ್ದರು, ಹಿಗ್ಗಿಸುತ್ತಿದ್ದರು. ಒಟ್ಟಿನಲ್ಲಿ ಅವರು ಗುರುತ್ವಕ್ಕೇ ಆದರ್ಶ.
ಅದೊಮ್ಮೆ ನಾನು ಅವರನ್ನು ಪೆದ್ದುಪೆದ್ದಾಗಿ ಪ್ರಶ್ನಿಸಿದ್ದೆ: “ನಿಮ್ಮ ಸಹಾಧ್ಯಾಯಿಗಳು ಹಲವರು ಡಾಕ್ಟರೇಟ್ ಪಟ್ಟ ಪಡೆದಿದ್ದಾರೆ. ಈ ಒಂದು ಪದವಿ ತನಗಿದೆಯೆಂಬ ಹೆಮ್ಮೆಯಿಂದಲೇ ನಿಮ್ಮ ಸಹಾಧ್ಯಾಯಿನಿ ಈಗ ಮೇಲಧಿಕಾರಿಯಾಗಿ ಮೆರೆಯುತ್ತಿದ್ದಾರೆ. ನಿಮಗೆ ಸಂಶೋಧನೆ ಮಾಡುವುದೇನೂ ಕಷ್ಟದ ಕೆಲಸವಲ್ಲ. ಅದೇಕೆ ಆ ದಿಕ್ಕಿನಲ್ಲಿ ಪ್ರಯತ್ನ ನಡಸಿಲ್ಲ?”
ಅದಕ್ಕವರು ಸ್ವಲ್ಪವೂ ಬೇಸರಿಸದೆ ಉತ್ತರಿಸಿದ್ದರು: “ನನ್ನ ಬಳಿ ಯಾರೇ ಆಗಲಿ ವೇದ-ಸಂಸ್ಕೃತಗಳನ್ನು ಕಲಿಯಬೇಕೆಂದು ಬಂದರೆ ಇಲ್ಲವೆನ್ನಲಾಗುವುದಿಲ್ಲ. ನಾನು ಕಲಿಸುವುದಾದರೂ ದೊಡ್ಡ ಮಟ್ಟದ ವಿದ್ಯೆಗಳನ್ನಲ್ಲ. ಸಾಮಾನ್ಯಸ್ತರದ ಪಾಠಗಳನ್ನು ಮಾಡಬಲ್ಲೆ. ಇದರಲ್ಲಿಯೇ ಸಾಕಷ್ಟು ಸಮಯ ಹೋಗುತ್ತದೆ. ಇನ್ನು ಸ್ವಲ್ಪ ವಿರಾಮ ದೊರೆತರೆ ನಮ್ಮ ಊರಿಗೆ ಹೋಗುವ ಹಂಬಲ. ಮತ್ತೂರೆಂದರೆ ನನಗೆ ಪಂಚಪ್ರಾಣ. ಹೀಗಿರುವಾಗ ಸಂಶೋಧನೆಗಾದರೂ ಆಸ್ಪದವೆಲ್ಲಿ? ಅದೂ ಅಲ್ಲದೆ ನಾನು ಯಾವುದೇ ರೀತಿಯಿಂದ ಸ್ವೋಪಜ್ಞವಾದ ಸಂಶೋಧನೆ ಮಾಡುವಷ್ಟು ಮೇಧಾವಿಯಲ್ಲ.”
ಈ ಮಾತುಗಳನ್ನವರು ತುಂಬ ಸಹಜವಾಗಿ ಆಡಿದ್ದರು. ಇದನ್ನು ಕೇಳಿದ ನಾನು ನನ್ನದು ಅಪರಾಧವಾಯಿತು ಎಂದು ಭಾವಿಸಿ ಕ್ಷಮೆ ಕೋರಿ ಅವರ ಕಾಲಿಗೆರಗಿದ್ದೆ. ಆದರೆ ಪ್ರಾಯಶ್ಚಿತ್ತ-ನಮಸ್ಕಾರಗಳನ್ನು ಸ್ವೀಕರಿಸುವಂಥ ವ್ಯಕ್ತಿ ಅವರಲ್ಲ. ಇದಕ್ಕಾಗಿಯೇ ಅವರಿಗೆ ಹೆಚ್ಚುಹೆಚ್ಚಾಗಿ ನಮಸ್ಕಾರಗಳು ಸಲ್ಲಬೇಕು.
ಅವರನ್ನು ಬಹುಕಾಲದಿಂದ ಬೆನ್ನುನೋವು ಕಾಡುವುದಾದರೂ ಅದರ ಬಗೆಗೆ ಬೇಸರವಿಲ್ಲದೆ ಅಂಥ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಒಮ್ಮೆಯಂತೂ ಹಲವು ತಿಂಗಳು ಹಾಸಿಗೆ ಹಿಡಿಯಬೇಕಾಯಿತು. ಆಗ ಅವರು ಸ್ವಲ್ಪವೂ ಗೊಣಗದೆ ಕಾವ್ಯವಾಚನ-ವೇದಘೋಷಗಳನ್ನು ಕೇಳುತ್ತಿದ್ದರು, ತಾವೇ ಮಂತ್ರಗಳನ್ನು ಆವರ್ತನ ಮಾಡಿಕೊಳ್ಳುತ್ತಿದ್ದರು, ಮಿಕ್ಕಂತೆ ಭಗವದ್ಧ್ಯಾನದಲ್ಲಿ ಹೊತ್ತು ಕಳೆಯುತ್ತಿದ್ದರು. ಅವರ ಇಡಿಯ ಕುಟುಂಬವೇ ವೇದೋಕ್ತ ಕರ್ಮಗಳನ್ನು ಶಾಸ್ತ್ರೀಯವಾಗಿ ಮಾಡಿಸುತ್ತಿತ್ತು. ಕರ್ತೃವಿನ ಶಕ್ತಿ, ಸಾಮರ್ಥ್ಯ, ಆಸ್ಥೆ, ಅನುಕೂಲತೆಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡುತ್ತಿತ್ತು. ಯಾವ ಬಗೆಯ ಕರ್ಮಲೋಪವೂ ಆಗುತ್ತಿರಲಿಲ್ಲ. ಆಯಾ ಕರ್ಮಗಳ ಮಹತ್ತ್ವವನ್ನೂ ಅಲ್ಲಿ ಬಳಕೆಯಾಗುವ ಮಂತ್ರಗಳ ಸ್ವಾರಸ್ಯವನ್ನೂ ಬಿಡಿಸಿ ಹೇಳಿ ಕರ್ತೃವಿಗೆ ಮಾತ್ರವೇ ಅಲ್ಲದೆ ಅದರಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಶ್ರದ್ಧಾಸಕ್ತಿಗಳು ಮೂಡುವಂತೆ ನಡೆದುಕೊಳ್ಳುತ್ತಿದ್ದರು.
ಸ್ವಯಂ ಶ್ರೋತ್ರಿಯಕುಟುಂಬವಾದರೂ ಕುಲವೃತ್ತಿಯಾಗಿ ಪೌರೋಹಿತ್ಯವನ್ನು ಆಶ್ರಯಿಸಿದ್ದರೂ ಅವರ ಇಡಿಯ ಮನೆತನವೇ ಕುಲಭೇದ, ಮತಭೇದ, ಜಾತಿಭೇದ ಹಾಗೂ ವರ್ಣಭೇದಗಳನ್ನು ಮಾಡದೆ ಎಲ್ಲರಿಗೂ ವೇದೋಪಾಸನೆಯ, ಸನಾತನಧರ್ಮದ ಸ್ವಾರಸ್ಯ ತಿಳಿಯುವಂತೆ ನಡೆದುಕೊಳ್ಳುತ್ತಿರುವುದು ಅನ್ಯಾದೃಶ ಮೌಲ್ಯ. ಇಂದಿಗೂ ಚಂದ್ರಶೇಖರ್ ಎಲ್ಲರಿಗೆ ವೇದಪಾಠ ಮಾಡುತ್ತಿದ್ದಾರೆ, ವೈದಿಕಜೀವನವನ್ನು ಆಚರಿಸಿ ತೋರಿಸುತ್ತಿದ್ದಾರೆ. ಇವರ ಸ್ಮರಣೆಯೇ ಪಾವಕ, ದರ್ಶನವೇ ಪುಣ್ಯಪ್ರದ.
ಎನ್. ಎಸ್. ಅನಂತರಂಗಾಚಾರ್ಯ
ಭವನದ ಗೌರವ ರಿಜಿಸ್ಟ್ರಾರರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಅನಂತರಂಗಾಚಾರ್ಯರು. ಇವರ ಪ್ರಸ್ತಾವ ಈ ಮುನ್ನವೇ ಬಂದಿತ್ತಷ್ಟೆ. ಆಗಲೇ ತಿಳಿಸಿದಂತೆ ಆಚಾರ್ಯರು ವೇದಾಂತವಿದ್ವಾಂಸರು. ಶಂಕರ, ರಾಮಾನುಜ ಮತ್ತು ಮಧ್ವರ ಭಾಷ್ಯಗಳನ್ನೆಲ್ಲ ಓದಿಕೊಂಡಿದ್ದವರು; ಪ್ರತಿಯೊಬ್ಬ ಆಚಾರ್ಯರ ಅಭಿಪ್ರಾಯಗಳನ್ನೂ ಪ್ರಾಮಾಣಿಕವಾಗಿ ಹೇಳಬಲ್ಲವರು. ಅಂದಿಗೂ ಇಂದಿಗೂ ನಮ್ಮ ಶಾಸ್ತ್ರಗ್ರಂಥಗಳನ್ನು ಮೂಲದಲ್ಲಿಯೇ ಓದಿಕೊಂಡು ಸಂಪ್ರದಾಯಕ್ಕೆ ಧಕ್ಕೆ ಬರದಂತೆ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳಬಲ್ಲವರ ಸಂಖ್ಯೆ ತುಂಬ ಕಡಮೆ. ಇಂಥ ವಿರಳರಲ್ಲಿ ಇವರು ಅಗ್ರಗಣ್ಯರು.
ಅನಂತರಂಗಾಚಾರ್ಯರು ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳ ಪೈಕಿ ಅವರ ಕೀರ್ತಿಕಳಶಗಳಂತೆ ನಿಂತಿರುವುವು ಭಗವದ್ ರಾಮಾನುಜರ ಸಮಗ್ರಕೃತಿಗಳ ಕನ್ನಡಾನುವಾದಗಳು. ಇದೇ ಸಾಲಿಗೆ ಸೇರುವಂಥದ್ದು ಅವರು ಬರೆದ ‘ವೈದಿಕಸಾಹಿತ್ಯಚರಿತ್ರೆ’. ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ ಕೃತಿಗಳ ಪೈಕಿ ಇದೂ ಒಂದು. ಇಷ್ಟೇ ಅಲ್ಲದೆ ನಿರುಕ್ತವನ್ನು ಕುರಿತು ಆಚಾರ್ಯರು ಬರೆದ ಕಿರುಹೊತ್ತಗೆ ಆ ಬಗೆಯ ರಚನೆಗಳ ಪೈಕಿ ಅನನ್ಯ. ‘ರಂಗರಾಜಸ್ತವ’, ‘ಅತಿಮಾನುಷಸ್ತವ’, ‘ಸುಂದರಬಾಹುಸ್ತವ’, ‘ಪಾದುಕಾಸಹಸ್ರ’ ಮುಂತಾದ ಹತ್ತಾರು ಪ್ರೌಢ ಸ್ತೋತ್ರಕಾವ್ಯಗಳ ಕನ್ನಡಾನುವಾದವನ್ನೂ ಅವರು ಮಾಡಿ ಉಪಕರಿಸಿದ್ದಾರೆ.
ಇಂಥ ಉನ್ನತವರ್ಗದ ವಿದ್ವಾಂಸರಾದರೂ ಆಚಾರ್ಯರು ಪರಮಸುಲಭರು, ವಿನಯಭೂಷಿತರು. ಯಾವುದೇ ಪ್ರಶ್ನೆ ಕೇಳಿದರೂ ತುಂಬ ನಮ್ರತೆಯಿಂದ ಉತ್ತರ ನೀಡುತ್ತಿದ್ದರು. ಇವರು ಖಾದಿವ್ರತಿಗಳು ಕೂಡ. ಅಂದಿನ ಭವನದ ಉದ್ಯೋಗಿಗಳ ಪೈಕಿ ಇವರೇ ಹಿರಿಯರು. ಇಂಥ ಮಹನೀಯರನ್ನು ಮತ್ತೂರು ಕೃಷ್ಣಮೂರ್ತಿ ತುಂಬ ಅನುದಾರವಾಗಿ ನಡಸಿಕೊಂಡದ್ದು ಭವನದ ಸಂಸ್ಕೃತಿಗೆ ಶೋಭೆ ತರುವಂಥದ್ದಲ್ಲ.
ವಿದ್ಯಾಭವನದ ಪ್ರತಿ ತಿಂಗಳ ಕಾರ್ಯಕ್ರಮಗಳ ವಿವರ ಅಚ್ಚಾಗಿ ಬರುತ್ತಿತ್ತು. ಎಷ್ಟೇ ಎಚ್ಚರವಹಿಸಿದರೂ ಆಗೊಮ್ಮೆ-ಈಗೊಮ್ಮೆ ಮುದ್ರಾರಾಕ್ಷಸನ ಹಾವಳಿ ತಲೆದೋರುತ್ತಿತ್ತು. ಅದೊಮ್ಮೆ ಇವರ ಹೆಸರು Anatharangacharya (ಅನಾಥರಂಗಾಚಾರ್ಯ) ಎಂದು ಅಚ್ಚಾಗಿಬಿಟ್ಟಿತ್ತು! ರಂಗನಾಥ್ ತುಂಬ ವಿನಯದಿಂದ ಕ್ಷಮೆ ಯಾಚಿಸಿದರು. ಆಗ ಆಚಾರ್ಯರು ಸಮಾಧಾನದಿಂದ ಹೇಳಿದರು: “ಇರಲಿ, ಚಿಂತೆ ಇಲ್ಲ. ನಾವೆಲ್ಲ ಇಲ್ಲಿ ಅನಾಥರೇ. ಪರಮಾತ್ಮ ಒಬ್ಬನೇ ನಮಗೆ ನಾಥನಾಗಿ ಬರಬೇಕು.” ಆಗ ನಾನು ಸ್ವಲ್ಪ ವಿನೋದ ಮಾಡಿದೆ: “ಹೌದು. ಅಕಾರವಾಚ್ಯಃ ಪರಮಾತ್ಮಾ ಯಸ್ಯ ನಾಥಃ ಸಃ ಅನಾಥಃ” (ಅಕಾರದಿಂದ ಹೆಸರಿಸಲ್ಪಡುವ ಪರಮಾತ್ಮ ಯಾರಿಗೆ ನಾಥನೋ ಅವನು ಅನಾಥ!) ಎಲ್ಲರೂ ನಕ್ಕರು. ಆದರೆ ಕೆಲವು ತಿಂಗಳ ಬಳಿಕ ಮತ್ತೆ ಮುದ್ರಾರಾಕ್ಷಸ ಗಹಗಹಿಸಿ ನಕ್ಕಿದ್ದ. ಈಗ ಅವರ ಹೆಸರು Anartharangacharya (ಅನರ್ಥರಂಗಾಚಾರ್ಯ) ಎಂದಾಗಿತ್ತು! ಯಾರೊಬ್ಬರೂ ನಗುವಂತಿರಲಿಲ್ಲ. ಆದರೆ ಇದರಷ್ಟು ನಗೆ ಉಕ್ಕಿಸುವುದು ಮತ್ತೊಂದಿರಲಿಲ್ಲ!
ಪೂಜ್ಯರಾದ ಎನ್. ರಂಗನಾಥಶರ್ಮರೂ ಅನಂತರಂಗಾಚಾರ್ಯರೂ ಒಂದೇ ಬೀದಿಯ ಎರಡು ತುದಿಗಳಲ್ಲಿ ವಾಸವಾಗಿದ್ದರು. ಸಾಮಾನ್ಯವಾಗಿ ಸಂಜೆಯ ಹೊತ್ತು ಇಬ್ಬರೂ ಕೆಲವರು ಸಮವಯಸ್ಕರೊಡನೆ ಹತ್ತಿರದ ಅರಳಿಕಟ್ಟೆಯ ಮೇಲೆ ಕುಳಿತು ಪಟ್ಟಾಂಗ ಹೊಡೆಯುತ್ತಿದ್ದರು. ಒಮ್ಮೆ ರಂಗನಾಥಶರ್ಮರು ಆ ಸಭೆಗೆ ಗೈರಾಗಿದ್ದರು. ಮರುದಿನ ಆಚಾರ್ಯರು ಇದನ್ನು ಕುರಿತು ಪ್ರಶ್ನಿಸಿದರು. ಆಗ ಶರ್ಮರು ನಾನು ಈ ಮುನ್ನ ಹೇಳಿದ ‘ಷಡ್ದರ್ಶನಸಂಗ್ರಹ’ ಪುಸ್ತಕದ ಲೋಕಾರ್ಪಣೆಗೆ ತಾವು ತೆರಳಿದ್ದ ಸಂಗತಿಯನ್ನು ತಿಳಿಸಿದರು. ದರ್ಶನಶಾಸ್ತ್ರಗಳಲ್ಲಿ ವಿಪುಲಕೃಷಿ ಮಾಡಿದ್ದ ಆಚಾರ್ಯರು ಸಹಜವಾಗಿಯೇ ಕೇಳಿದರು: “ಆ ಗ್ರಂಥದ ವಿಶೇಷ ಏನು?”
ಶರ್ಮರು: “ಎಲ್ಲ ದರ್ಶನಗಳ ಸರಳವಾದ ಪರಿಚಯವಿದೆ. ಪ್ರತಿಯೊಂದರ ಮೌಲ್ಯಮಾಪನವೂ ಆಗಿದೆ. ಮುಖ್ಯವಾಗಿ ಪ್ರವೇಶಿಕೆ ಮತ್ತು ಉಪಸಂಹಾರಗಳಲ್ಲಿ ಲೇಖಕರ ನಿಲವು ಸ್ಪಷ್ಟವಾಗಿದೆ. ಇದರಲ್ಲಿ ಹೊಸತನವಿದೆ.”
ಆಚಾರ್ಯರು: “ಏನು ಆ ಹೊಸತನ?”
ಶರ್ಮರು: “ಹೊಸತನವೆಂದರೆ ಯಾವುದೋ ಅಶಾಸ್ತ್ರೀಯವಾದ ಅಂಶ ಎಂದಲ್ಲ. ಎಲ್ಲ ದರ್ಶನಗಳ ಸಮನ್ವಯವನ್ನು ಹೇಳುವ ಹವಣನ್ನು ನಾನು ಹೊಸತನ ಎಂದೆ.”
ಆಚಾರ್ಯರು: “ಹೌದೋ? ಹಾಗಿದ್ದರೆ ಸಮನ್ವಯ ಹೇಗೆ ಸಾಗಿದೆ?”
ಶರ್ಮರು: “ಅದ್ವೈತವೇದಾಂತದ ದೃಷ್ಟಿಯಿಂದ ಎಲ್ಲ ದರ್ಶನಗಳ ಸಮನ್ವಯ ಸಾಧ್ಯ, ಇದು ಅಧಿಕಾರಿಭೇದವೆಂಬ ಅಂಶದ ಮೇಲೆ ನಿಲ್ಲುತ್ತದೆಂಬುದು ಲೇಖಕರ ನಿಲವು.”
ಆಚಾರ್ಯರು: “ಇದೇ ನೋಡಿ ನಿಮ್ಮ ಅದ್ವೈತಿಗಳಲ್ಲಿ ಇರುವ ಪ್ರತಿಷ್ಠೆ. ಎಂಥ ಸಮನ್ವಯ ಮಾಡಿದರೂ ತಾವು ಮಾತ್ರ ಮೇಲೆ ಇರಬೇಕು, ಮಿಕ್ಕೆಲ್ಲ ದರ್ಶನಗಳು ತಮ್ಮ ಕೈಕೆಳಗಿರಬೇಕು. ಒಟ್ಟಿನಲ್ಲಿ ಮಿಕ್ಕವರ ತಲೆ ಕುಟ್ಟುವುದೇ ನಿಮ್ಮ ಸಮನ್ವಯ.”
ಹೀಗೆ ಸಂಭಾಷಣೆ ಲಘುಧಾಟಿಯಲ್ಲಿಯೇ ಸಾಗಿದ್ದರೂ ಅದರ ಆಳದಲ್ಲಿ ಇಣಿಕಿದ ಅಸಮಾಧಾನದ ಎಳೆಯನ್ನು ಗ್ರಹಿಸಿದ ಶರ್ಮರು ಹೀಗೆ ಪ್ರತಿಪ್ರಶ್ನೆ ಮಾಡಿದರು: “ಹಾಗಿದ್ದಲ್ಲಿ ನೀವೇ ನಿಮಗೆ ಸಮ್ಮತವಾದ ದರ್ಶನದ ನೆಲೆಯಿಂದಲೇ ಸಮನ್ವಯ ಮಾಡಿರಿ, ನೋಡೋಣ.”
ಆಚಾರ್ಯರು ಈ ಕುರಿತು ಸ್ವಲ್ಪ ಹೊತ್ತು ಗಂಭೀರವಾಗಿ ಆಲೋಚಿಸಿದ ಬಳಿಕ ತಲೆ ಕೊಡವಿದರು: “ಇಲ್ಲ; ಬೇರೆಯ ಬಗೆಯಿಂದ ಸಮನ್ವಯವೇ ಸಾಧ್ಯವಿಲ್ಲ.” ಇದು ಅವರ ಪ್ರಾಮಾಣಿಕತೆ ಮತ್ತು ಹೃದಯವೈಶಾಲ್ಯಗಳಿಗೆ ನಿದರ್ಶನವೂ ಹೌದು.
ಶರ್ಮರು ಸಮಾಪ್ತಿಯ ನಗೆ ನಕ್ಕಿದ್ದರು: “ಇದನ್ನೇ ತಿಳಿದು ಅದ್ವೈತದ ನೆಲೆಯಲ್ಲಿ ಸಮನ್ವಯವನ್ನು ಆ ಲೇಖಕರು ಮಾಡಿದ್ದು.”
ಈ ಘಟನೆಯಾದ ಮರುದಿನ ರಂಗನಾಥಶರ್ಮರು ನನಗೆ ಇದನ್ನು ತಿಳಿಸಿ ಮತ್ತೊಮ್ಮೆ ನಕ್ಕು ಹಗುರಾಗಿದ್ದರು.
ಅನಂತರಂಗಾಚಾರ್ಯರ ಕೋಣೆಯೊಳಗೇ ನಮ್ಮ ರಾಜಗೋಪಾಲಶರ್ಮರೂ ಕುಳಿತುಕೊಳ್ಳುತ್ತಿದ್ದರು. ಅವರಿಬ್ಬರೂ ಸಹಜವಾಗಿಯೇ ವೇದ-ವೇದಾಂತಗಳನ್ನು ಕುರಿತು ಮಾತನಾಡಿಕೊಳ್ಳುತ್ತಿದ್ದರು. ನಾನೂ ಬಿಡುವಾದಾಗಲೆಲ್ಲ ಅಲ್ಲಿಗೆ ಹೋಗಿ ಕೂರುತ್ತಿದ್ದೆ. ದರ್ಶನಗಳ ಪ್ರಸ್ತಾವ ಬಂದಾಗಲೆಲ್ಲ ಅನಂತರಂಗಾಚಾರ್ಯರು ಹೀಗೆ ಹೇಳುತ್ತಿದ್ದರು: “ಇದೋ ನೋಡಿ. ನಾವು ರಾಮಾನುಜರನ್ನು ಅನುಸರಿಸಿ ಈ ದಾರಿ ಹಿಡಿದು ಹೋಗುತ್ತಿದ್ದೇವೆ. ನೀವಿಬ್ಬರೂ ಶಂಕರರನ್ನು ಅನುಸರಿಸಿ ಸಾಗಿದ್ದೀರಿ. ದಾರಿ ಒಂದೇ. ಪಯಣಿಗರು ಬೇರೆ ಬೇರೆ. ನಾವು ತಿಳಿದುಕೊಂಡ ಗಮ್ಯವನ್ನು ಸೇರಿದ ಬಳಿಕ ಮತ್ತೂ ಮುಂದಿನ ಹಾದಿ ಇದ್ದಲ್ಲಿ ಅದರಲ್ಲಿ ನೀವೂ ಕ್ರಮಿಸುತ್ತಿದ್ದರೆ ನಾವು ನಿಮ್ಮ ಹಿಂದೆಯೇ ಬರುತ್ತೇವೆ; ನಿಮ್ಮ ಗಮ್ಯವನ್ನೇ ಸೇರುತ್ತೇವೆ.”
ಒಮ್ಮೆ ನಮ್ಮ ಘನಪಾಠಿಗಳ ವೇದಘೋಷದ ಮಾಧುರ್ಯವನ್ನು ಅನುಭವಿಸುತ್ತ ಮೈಮರೆತ ಆಚಾರ್ಯರು ಉದ್ಗರಿಸಿದರು: “ಅಯ್ಯೋ, ಈ ಜನ್ಮಕ್ಕೆ ಪೂರ್ತಿಯಾಗಿ ವೇದಾಭ್ಯಾಸ ಮಾಡಲಾಗಲಿಲ್ಲ. ದರ್ಶನಗಳಲ್ಲಿಯೇ ವಯಸ್ಸು ಮೀರಿತು. ಎಲ್ಲಕ್ಕೂ ಕೇಳಿಕೊಂಡು ಬಂದಿರಬೇಕು.”
ಆಗ ನಾನೆಂದೆ: “ಇದಕ್ಕೆ ಯಾಕೆ ಚಿಂತೆ ಮಾಡುತ್ತೀರಿ? ಮತ್ತೂ ಒಂದು ಜನ್ಮದಲ್ಲಿ ಸಲಕ್ಷಣಘನಾಂತವಾಗಿ ವೇದಾಭ್ಯಾಸ ಮಾಡಿದರೆ ಆಯಿತು.”
ಆಚಾರ್ಯರು ಗಂಭೀರವಾಗಿ ನುಡಿದರು: “ಇಲ್ಲಪ್ಪ. ನಾವೆಲ್ಲ ಪರಮಾತ್ಮನಲ್ಲಿ ಭರನ್ಯಾಸ ಮಾಡಿಕೊಂಡವರು. ಪ್ರಪನ್ನರಿಗೆ ಪುನರ್ಜನ್ಮವಿಲ್ಲ ಎಂದು ನಮ್ಮ ಶಾಸ್ತ್ರದ ನಿಲವು. ಅದಕ್ಕೇ ಹೇಳಿದ್ದು, ನನಗೆ ಪ್ರಾಪ್ತಿ ಇಲ್ಲ ಅಂತ.”
ಇದು ಅವರಿಗೆ ವಿಶಿಷ್ಟಾದ್ವೈತದಲ್ಲಿದ್ದ ಪ್ರಾಂಜಲವಾದ ಶ್ರದ್ಧೆ.
To be continued.