ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ ಅತಿಶಯ. ಕಡೆಯ ವರ್ಷದಲ್ಲಿ ಆಡಳಿತದ ಮಾರ್ಪಾಟಿನ ಕಾರಣ ಅಲ್ಪ-ಸ್ವಲ್ಪದ ಇರುಸುಮುರುಸಾದರೂ ಅದನ್ನೆಲ್ಲ ಮರೆಸುವಂಥದ್ದು ಭವನದ ಬಾಳು.
ನನಗೆ ಕಾಲೇಜಿನ ದಿನಗಳಿಂದಲೇ ಕುಲಪತಿ ಮುನ್ಷಿ ಅವರ ಸಾಹಿತ್ಯದ ಪರಿಚಯ ಇದ್ದಿತು. ಅಷ್ಟೇಕೆ, ಪ್ರೌಢಶಾಲೆಯಲ್ಲಿ ಇದ್ದಾಗಲೇ ಅವರ ‘ಭಗವಾನ್ ಕೌಟಿಲ್ಯ’ ಎಂಬ ಕಾದಂಬರಿಯ ಅನುವಾದವನ್ನು ಓದಿ ಹಿಗ್ಗಿದ್ದೆ. ಮೂಲದ ಸ್ವಾರಸ್ಯ ಸ್ವಲ್ಪವೂ ಮಾಸದ ಹಾಗೆ ಗೋರೂರು ರಾಮಸ್ವಾಮಿ ಅಯ್ಯಂಗಾರರು ಕನ್ನಡಿಸಿದ್ದರು. ಅನಂತರ ಮುನ್ಷಿ ಅವರ ‘ಜೈ ಸೋಮನಾಥ’, ‘ಲೋಮಹರ್ಷಿಣಿ’, ‘ವಿಶ್ವರಥ’, ‘ತಪಸ್ವಿನಿ’, ‘ಭಗವಾನ್ ಪರಶುರಾಮ’ ಮುಂತಾದ ಕಾದಂಬರಿಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಆದರೆ ಅವರ ‘ಕೃಷ್ಣಾವತಾರ’ ನನ್ನ ಮನಸ್ಸನ್ನು ಎಲ್ಲಕ್ಕಿಂತ ಮಿಗಿಲಾಗಿ ಆವರಿಸಿತ್ತು. ಇದಲ್ಲದೆ ‘ದ ಗ್ಲೋರಿ ದಟ್ ವಾಸ್ ಘೂರ್ಜರ’ ಮತ್ತು ‘ದ ಹಿಸ್ಟರಿ ಅಂಡ್ ಕಲ್ಚರ್ ಆಫ್ ದಿ ಇಂಡಿಯನ್ ಪೀಪಲ್’ ಗ್ರಂಥಮಾಲಿಕೆಯ ಮುನ್ನುಡಿಗಳು ಅವರಲ್ಲಿ ಹೆಚ್ಚಿನ ಗೌರವ ತರಿಸಿದ್ದವು. ‘ಭವನ್ಸ್ ಲೈಬ್ರರಿ’ ಎಂಬ ಶೀರ್ಷಿಕೆಯ ಎಷ್ಟೋ ಕಿರುಹೊತ್ತಗೆಗಳು ನನ್ನ ತಿಳಿವನ್ನು ಹೆಚ್ಚಿಸಿ ಕುಲಪತಿಗಳಲ್ಲಿ ಋಣಪ್ರಜ್ಞೆಯನ್ನು ಬೆಳೆಸಿದ್ದವು.
ಇಂಥ ಮಹನೀಯರು ಕಟ್ಟಿ ಬೆಳೆಸಿದ ಸಂಸ್ಥೆಗೆ ನಾನು ಸೇರುವೆನೆಂಬ ಊಹೆ ಕೂಡ ನನಗಿರಲಿಲ್ಲ. ಹೆಚ್ಚೇನು, ಬೆಂಗಳೂರಿನಲ್ಲಿ ಆ ಸಂಸ್ಥೆ ಇರುವ ದಿಕ್ಕೂ ನನಗೆ ತಿಳಿದಿರಲಿಲ್ಲ! ಅದು ಹೇಗೋ ಎಂಜಿನಿಯರಿಂಗ್ ನ ಕೊನೆಯ ದಿನಗಳಲ್ಲಿ ಭವನದ ಬಾಗಿಲಿಗೆ ನಾನು ಬಂದಿದ್ದೆ. ಇಂದಿಗೂ ನನಗೆ ಇಷ್ಟವಾಗುವ ಬೆಂಗಳೂರಿನ ಆ ಭಾಗ ಅದೊಂದು ರೀತಿ ನಾಸ್ಟಾಲ್ಜಿಕ್ ಆಗಿ ಕಾಡುತ್ತದೆ.
ಕಟ್ಟಡಗಳಾಗಿ ವಾಸ್ತುಶಿಲ್ಪದ ಸೊಗಸಾದ ಮಾದರಿಗಳೆನಿಸಿದ ವಿಧಾನಸೌಧ ಮತ್ತು ಉಚ್ಚನ್ಯಾಯಾಲಯಗಳಿಗೆ ನಿಕಟವಾಗಿರುವ ವಿದ್ಯಾಭವನ ಸಹಜವಾಗಿಯೇ ಕಬ್ಬನ್ ಪಾರ್ಕಿನ ಅಂಚಿಗೆ ಬರುತ್ತದೆ; ಆ ಮೂಲಕ ಅಲ್ಲಿಯ ಹಸುರಿನ ಸ್ಪರ್ಶ ಇದಕ್ಕೆ ದಕ್ಕಿದೆ. ಬೆಂಗಳೂರಿನ ತಾರಾಲಯ ಮತ್ತು ಬಸವ ಭವನಗಳ ನೆರೆಯಲ್ಲಿಯೇ ಇರುವ ಭವನ ವಿಸ್ತಾರವಾದ ಆವರಣಗಳ ಕಟ್ಟಡಗಳ ನಡುವೆ ಅಭಿಜಾತವಾಗಿ ತೋರುತ್ತದೆ. ದಿಟವೇ, ಈ ಪರಿಸರದ ಗಾಳಿಯೆಲ್ಲ ರಾಜಕೀಯ, ವಾಣಿಜ್ಯ, ಕಾನೂನು, ಪತ್ರಿಕೋದ್ಯಮಗಳೇ ಮೊದಲಾದ ಕೋಲಾಹಲಗಳಿಂದ ಧೂಳೆದ್ದುಹೋಗಿದೆ. ಆದರೂ ಇಲ್ಲಿಯ ಪ್ರಕೃತಿ ಇಂದಿಗೂ ಚೆಲುವಾಗಿದೆ.
ಎಂದೂ ನಾನು ಕಾಲಿರಿಸದ ರೇಸ್ ಕೋರ್ಸ್, ನನ್ನಂಥವರು ಹೋಗಲು ಸಾಹಸ ಮಾಡದ ತಾಜ್ ವೆಸ್ಟ್ಎಂಡ್, ವಿಂಡ್ಸರ್ ಮ್ಯಾನರ್, ಲಿ ಮೆರಿಡಿಯನ್ ಮುಂತಾದ ತಾರಾ ಹೋಟೆಲ್‌ಗಳು ಮತ್ತು ಕಣ್ಣಿಗೆ ಮಾತ್ರ ಹಬ್ಬವೆನಿಸುವ ಗಾಲ್ಫ್ ಕೋರ್ಸ್ ನನ್ನ ಭವನದ ದಿನಗಳಲ್ಲಿ ದೂರದಿಂದಲೇ ಸಂತಸವನ್ನು ಕೊಡುತ್ತಿದ್ದ ತಾಣಗಳೆಂದರೆ ಯಾರೂ ಹುಬ್ಬೇರಿಸಬೇಕಿಲ್ಲ.
ಇಂಥ ಸ್ಮರಣೀಯವಾದ ದೇಶದಲ್ಲಿ ರಮಣೀಯವಾದ ಕಾಲವನ್ನು ನಾನು ಕಳೆದದ್ದಲ್ಲ, ಕೂಡಿಸಿಕೊಂಡದ್ದು ಭವನದ ಜೀವನದ ಮೂಲಕ. ಅಲ್ಲಿಯ ಕೆಲವೊಂದು ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಪಾಲಿಗೆ ನೆನಪೆಂದರೆ ಮಾನವರ ಮೌಲ್ಯಗಳ ಮರುಕಳಿಕೆಯೇ ತಾನೆ! ಹೀಗಾಗಿ ನೆನಪಿನ ಮಗ್ಗದಲ್ಲಿ ಹಾಸು-ಹೊಕ್ಕಾದ ವ್ಯಕ್ತಿಗಳೆಂಬ ಎಳೆಗಳಿಗೆ ಬಣ್ಣವೀಯುವುದು ಘಟನೆಗಳೇ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ಅಲ್ಪ-ಸ್ವಲ್ಪದ ನೇಯ್ಗೆಯಿಲ್ಲಿ ಸಾಗಿದೆ. ಸಹೃದಯರಿಗೆ ಈ ಅಂಬರ ಚಿದಂಬರವಾಗಲಿ.
ಎಚ್. ಕೆ. ರಂಗನಾಥ್
ಬೌದ್ಧಸಾಹಿತ್ಯದಲ್ಲಿ ‘ಬಹುಶ್ರುತ’ ಮತ್ತು ‘ಬಹುದೃಷ್ಟ’ ಎಂಬ ಎರಡು ಪದಗಳು ಅವಿರಳವಾಗಿ ಬಳಕೆಯಾಗಿವೆ. ಇವುಗಳನ್ನು ಮಿಕ್ಕ ಸಾಹಿತ್ಯದಲ್ಲಿಯೂ ನಾವು ಸಾಕಷ್ಟು ನೋಡುತ್ತೇವೆ. ಈಚಿನ ದಶಕಗಳಲ್ಲಿ ‘ಬಹುಶ್ರುತ’ ಎಂಬ ಶಬ್ದವನ್ನು ನಾವು ಎಗ್ಗಿಲ್ಲದೆ ಬಳಸಿಕೊಂಡ ಕಾರಣ ಇದೊಂದು ಕ್ಲೀಷೆಯಂತೆ ಆಗಿದೆ, ಚರ್ವಿತಚರ್ವಣವಾಗಿದೆ. ನಮ್ಮಲ್ಲಿ ಅಳತೆ ಮೀರಿದ ಬಳಕೆಯಿಂದ ತಮ್ಮ ಮೊನಚನ್ನು ಕಳೆದುಕೊಂಡ ಶಬ್ದಗಳು ಹಲವು. ಹಾಗೆಂದು ಅವನ್ನು ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಬಳಸದೆ ನಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ. ಮಾತ್ರವಲ್ಲ, ಇಂಥ ಸಂದರ್ಭಗಳಲ್ಲಿ ಅನನ್ಯರಾದ ವ್ಯಕ್ತಿಗಳಿಗೆ ಈ ಬಗೆಯ ವಿಶೇಷಣಗಳನ್ನು ಅನ್ವಯಿಸಿದಾಗಲೇ ಅವುಗಳಿಗೆ ಅರ್ಥವಂತಿಕೆ ಒದಗುತ್ತದೆ. ಇದು ಮೃತರೂಪಕಗಳಿಗೆ ಸಂಜೀವನಿಯ ಸೇಚನವನ್ನು ಮಾಡಿದಂತೆ.
ಡಾ|| ಎಚ್. ಕೆ. ರಂಗನಾಥ್ ಅವರನ್ನು ಈ ದೃಷ್ಟಿಯಿಂದಲೇ ನಾನು ಬಹುಶ್ರುತ ಮತ್ತು ಬಹುದೃಷ್ಟ ಎಂದು ಲಕ್ಷಣೀಕರಿಸುತ್ತೇನೆ. ಇವು ಅವರ ಕೆಲವು ವೈಶಿಷ್ಟ್ಯಗಳು ಮಾತ್ರ. ಸುಸಂಸ್ಕೃತನಾದ ಯಾವುದೇ ಒಬ್ಬ ವ್ಯಕ್ತಿ ಮಹಾಪುರುಷಸಂಶ್ರಯದಿಂದ, ಲೋಕಸಾಹಚರ್ಯದಿಂದ ಏನೆಲ್ಲ ಪಡೆಯಬಹುದೋ ಅದೆಲ್ಲ ರಂಗನಾಥ್ ಅವರಲ್ಲಿ ಸೇರಿಕೊಂಡಿತ್ತು. ಸತ್ತ್ವ, ಸ್ನೇಹ, ಸೌಲಭ್ಯ, ತಿಳಿವಳಿಕೆ, ವಿನೋದಶೀಲತೆ ಮೊದಲಾದ ಅವೆಷ್ಟೋ ಅಸೂಯಾಸ್ಪದವಾದ ಗುಣಗಳು ಅವರಿಗೆ ಈ ಮೂಲಕ ಸಿದ್ಧಿಸಿದ್ದವು.
ದಿಟವೇ, ರಂಗನಾಥ್ ಅವರು ಹಲವು ಬಗೆಯಿಂದ ಗಣ್ಯರಾಗಿದ್ದರು. ಹರಟೆ, ಹಾಸ್ಯ, ಲಲಿತಪ್ರಬಂಧಗಳಂಥ ಬರೆವಣಿಗೆಗಳ ಮೂಲಕ ಸರ್ಜನಶೀಲ ಲೇಖಕರಾಗಿ; ರಂಗಭೂಮಿ, ಸಮೂಹಮಾಧ್ಯಮ, ಸಂಪರ್ಕಸಾಧನಗಳನ್ನು ಕುರಿತು ಸಂಶೋಧನೆ ನಡಸಿದ ತಜ್ಞರಾಗಿ; ಯುನೆಸ್ಕೋ, ಆಕಾಶವಾಣಿ, ಬೆಂಗಳೂರು ವಿಶ್ವವಿದ್ಯಾಲಯ, ಭಾರತೀಯ ವಿದ್ಯಾಭವನ ಮುಂತಾದ ಸಂಸ್ಥೆಗಳಲ್ಲಿ ದುಡಿದ ಅಧಿಕಾರಿಯಾಗಿ, ಗೀತ-ನಾಟಕಗಳಲ್ಲಿ ಪ್ರಯೋಗಪರಿಣತಿ ಉಳ್ಳ ಕಲಾವಿದರಾಗಿ ಉಲ್ಲೇಖಾರ್ಹವಾದ ಸಾಧನೆ ಮಾಡಿದ ಅವರ ವ್ಯಕ್ತಿತ್ವದಲ್ಲಿ ನನಗೆ ಎದ್ದುತೋರಿದ್ದು ಇವೆಲ್ಲದರ ಪರಿಪಾಕವೆನಿಸಿದ ಲವಲವಿಕೆಯ ಸುಸಂಸ್ಕೃತಿ, ವಿದಗ್ಧತೆಯ ಸಜ್ಜನಿಕೆ, ನಯವುಳ್ಳ ಅಧಿಕಾರನಿರ್ವಾಹದ ಹದವನ್ನು ಹೊಂದಿದ ಸಹೃದಯತೆ.
ಏಕಕಾಲದಲ್ಲಿ ಅವರಲ್ಲೊಬ್ಬ ಕೀಟಲೆಯ ಆದರೆ ಕಹಿಯಾಗದ ತುಂಟ ಹುಡುಗ ಮತ್ತು ನಯ-ವಿನಯಗಳ ಆತ್ಮೀಯ ಪ್ರೌಢ - ಇಬ್ಬರೂ ಪರಸ್ಪರ ಸೆಡ್ಡುಹೊಡೆದು ನಿಲ್ಲುತ್ತಿದ್ದರು. ಹೀಗಾಗಿಯೇ ಅವರೊಡನೆ ವ್ಯವಹರಿಸುವಾಗ ವಯಸ್ಸಿನ ಅಂತರ ನನಗೆ ಅಡ್ಡ ಬರುತ್ತಿರಲಿಲ್ಲ. ನನಗಿಂತ ಅವರು ನಲವತ್ತು ವರ್ಷಗಳಿಗಿಂತ ಹಿರಿಯರಾಗಿದ್ದರೂ ನಾನೇ ಮುಪ್ಪಿನ ಭಾರವನ್ನು ಹೊತ್ತಂತೆ ತೋರುತ್ತಿದ್ದೆ! ತಾರುಣ್ಯತರಳತೆ ಅವರಿಗೇ ಮೀಸಲಾದಂತಿತ್ತು. ಒಟ್ಟಿನಲ್ಲಿ ಹಿಂದಿನ ತಲೆಮಾರಿನ ಸದಭಿರುಚಿ ಹಾಗೂ ಇಂದಿನ ತಲೆಮಾರಿನ ಲವಲವಿಕೆ ಅವರಲ್ಲಿ ಅವಿರೋಧವಾಗಿ ಕಲೆತಿತ್ತು. ಜೊತೆಗೆ ಹಾಸ್ಯದ ಮೂಲಕ ಎಂಥ ಕಹಿಯನ್ನೂ ಸಿಹಿಯಾಗಿ ಮಾಡಬಲ್ಲ ಕೌಶಲ ಅವರಿಗಿತ್ತು. ಇದು ಕೆಲವೊಮ್ಮೆ ತಿಕ್ತವಿಡಂಬನೆಯ ವಿಮರ್ಶೆಯೂ ಆಗಿ ಮೆರೆಯುತ್ತಿತ್ತು.
ಭವನ ನನ್ನ ಬಾಳಿನಲ್ಲಿ ಬಂದದ್ದು
ನಾನು ಮೊದಲ ಬಾರಿಗೆ ರಂಗನಾಥ್ ಅವರನ್ನು ಕಂಡದ್ದು ೧೯೮೫ರಲ್ಲಿ. ಆಗ ಅವರು ಭಾರತೀಯ ವಿದ್ಯಾಭವನದ ಕಾರ್ಯಕ್ರಮನಿರ್ದೇಶಕರಾಗಿದ್ದರು. ಇದಕ್ಕೂ ಮುನ್ನ ನಾನು ಅವರ ‘ಕರ್ನಾಟಕ ರಂಗಭೂಮಿ’, ‘ಪರದೇಶಿಯಾದಾಗ’, ‘ಬಣ್ಣ-ಬೆಳಕು’, ‘ಕ್ಯಾಪಿಟಲ್ ಪನಿಷ್‌ಮೆಂಟ್’ ಮೊದಲಾದ ಪುಸ್ತಕಗಳನ್ನು ಓದಿ ಆನಂದಿಸಿದ್ದೆ; ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಅವರ ದನಿಯನ್ನೂ ಆಲಿಸಿದ್ದೆ. ಅದು ಯಾವ ಯೋಗಾಯೋಗವೋ ಕಾಣೆ, ನನ್ನ ಎಂಜಿನಿಯರಿಂಗ್ ವ್ಯಾಸಂಗ ಮುಗಿಯುವುದಕ್ಕೂ ರಂಗನಾಥ್ ಅವರು ಭವನದ ಕಾರ್ಯಕ್ರಮಗಳ ಸೂತ್ರಧಾರರಾಗುವುದಕ್ಕೂ ವೇಳೆ ತಾಳೆಯಾಯಿತು. ಈ ಮೂಲಕ ನಾನು ಅಲ್ಲಿಯ ಕಾರ್ಯಕ್ರಮಗಳಿಗೆ ನಿಯತವಾಗಿ ಹೋಗತೊಡಗಿದೆ, ಅವರ ಗಮನಕ್ಕೂ ಬರುವಂತಾದೆ.
‘ಇನ್‌ಸರ್ಟ್’ ಮಾಡಿದ ತಿಳಿಬಣ್ಣದ ಅಂಗಿ. ಮಿಂಚುವ ಕನ್ನಡಕ. ಒಪ್ಪವಾದ ಪಾದರಕ್ಷೆ ಅಥವಾ ಷೂ. ಅಪರೂಪಕ್ಕೊಮ್ಮೆ ಕ್ಲೋಸ್ ಕಾಲರ್ ಕೋಟೂ ಸೇರಿದಂತೆ ಆಗಾಗ ಸೂಟ್ - ಇದು ಎಚ್. ಕೆ. ರಂಗನಾಥ್ ಅವರ ನಿಯತವೇಷ. ಲಹರಿ ಬಂದಾಗ ಜೀನ್ಸ್ ತೊಟ್ಟು ಬರುತ್ತಿದ್ದುದೂ ಉಂಟು. ಕುರ್ತಾ-ಪೈಜಾಮಗಳ ಉಡುಪು ಪ್ರಾಯಶಃ ಭಜನೆಗೆ ಹೊರಟಾಗ ಮಾತ್ರ. ನಾನು ಅವರನ್ನು ಸಾರ್ವಜನಿಕವಾಗಿ ಪಂಚಕಚ್ಚೆ ಮತ್ತು ಉತ್ತರೀಯಗಳಲ್ಲಿ ಕಂಡದ್ದು ಒಂದೇ ಬಾರಿ - ಶಂಕರಮಠದಲ್ಲಿ ಸ್ವಾಮಿಗಳ ದರ್ಶನಕ್ಕೆ ಅವರು ಬಂದಿದ್ದಾಗ. ಮೇಲಕ್ಕೆ ಬಾಚಿದ ತಲೆಗೂದಲು. ಸ್ವಚ್ಛವಾಗಿ ಮಾಡಿದ ಮುಖಕ್ಷೌರ. ಇಂಥ ನೇಪಥ್ಯದ ರಂಗನಾಥ್ ಧ್ವನಿವರ್ಧಕದ ಮುಂದೆ ಹಸನ್ಮುಖರಾಗಿ ನಿಂತು ಅಂದಂದಿನ ಕಾರ್ಯಕ್ರಮದ ಅಭ್ಯಾಗತರಿಗೆ ಸ್ವಾಗತ ಅಥವಾ ವಂದನೆಯನ್ನು ಸಲ್ಲಿಸುವ ಚಿತ್ರಣವೇ ನನ್ನ ನೆನಪಿಗೆ ಬರುವ, ಅನುಭವಕ್ಕೆ ದಕ್ಕಿದ ಮೊದಲ ದೃಶ್ಯ.
ಭವನದ ರಾಜಂ ಸಭಾಂಗಣ ದಿಟಕ್ಕೂ ಐತಿಹಾಸಿಕ ವೇದಿಕೆ. ಏಕೆಂದರೆ ರಂಗನಾಥ್ ಅವರ ಆಸ್ಥೆಯ ಫಲವಾಗಿ ಅಲ್ಲಿ ಕಾಣಿಸದ ಆ ಕಾಲದ ವಿದ್ವಾಂಸರೇ ಇಲ್ಲ, ಕೇಳಿಸದ ಗಾಯಕ-ವಾದಕರೇ ಇಲ್ಲ ಎಂಬಷ್ಟರ ಮಟ್ಟಿಗೆ ಉತ್ಕೃಷ್ಟವಾದ ಕಾರ್ಯಕ್ರಮಗಳು ರೂಪುಗೊಂಡಿದ್ದವು. ಇಂದು ಈ ಸಭಾಂಗಣ ನೆನಪು ಮಾತ್ರ. ಸಂಸ್ಥೆಗಳ ಭೌತಿಕ ಸಂಪತ್ತಿಯನ್ನು ವಿಸ್ತರಿಸುವ ಭರದಲ್ಲಿ ಸಾಂಸ್ಕೃತಿಕ ಮಹತ್ತ್ವದ ಇಂಥ ಭಾವನಾತ್ಮಕ ಸಂಪತ್ತಿಗಳನ್ನು ನಾವು ಕಳೆದುಕೊಳ್ಳುತ್ತಿರುವುದು ಒಂದು ದುರ್ನಿವಾರ ವ್ಯಥೆ.
ರಂಗನಾಥ್ ಅವರ ಮಾತು - ವಿಶೇಷತಃ ಅವರ ದನಿ - ಅನೇಕರ ಗಮನ ಸೆಳೆದಿದೆ. ಅಂದಿನ ಆಕಾಶವಾಣಿಯ ಅತ್ಯುತ್ತಮ ಧ್ವನಿಗಳ ಪೈಕಿ ಅವರದೂ ಒಂದೆಂದು ಖ್ಯಾತಿ. ಸ್ನಿಗ್ಧಗಂಭೀರವೂ ಮಂದ್ರಮಂಜುಳವೂ ಆದ ಅವರ ಕಂಠ ಕನ್ನಡವನ್ನಾಗಲಿ, ಇಂಗ್ಲಿಷನ್ನಾಗಲಿ ಸೊಗಸಾಗಿ ಉಲಿಯುತ್ತಿತ್ತು. ತಮ್ಮದಲ್ಲದ ವಿಷಯಗಳಿಗೆ ಅವರು ಬಾಯಿ ಹಾಕಿಕೊಂಡು ಹೋಗದ ಕಾರಣ, ಅಧ್ಯಯನಕ್ಕಿಂತ ಅನುಭವವನ್ನೇ ಹೆಚ್ಚಾಗಿ ನಚ್ಚಿಕೊಂಡ ಕಾರಣ ಅವರ ಮಾತುಗಳಲ್ಲಿ ಸ್ವಂತಿಕೆ ಇರುತ್ತಿತ್ತು, ಸೀಮಿತತೆಯೂ ಇರುತ್ತಿತ್ತು. ಆದರೆ ಯಾವುದೂ ಅನಾವಶ್ಯಕವಲ್ಲ. ಶುದ್ಧವಾದರೂ ಕಿವಿಗೆ ರಾಚದಷ್ಟು ಮೃದುವಾದ ಭಾಷೆಯಲ್ಲಿ ಸಹಜವಾದ ನುಡಿಗಟ್ಟನ್ನು ಮೆರೆಸುತ್ತಿದ್ದರು. ಇವಕ್ಕೆಲ್ಲ ಪರಿಮಳ ಕಟ್ಟುವಂತೆ ಅನುಚಿತವಾಗದ ಹಾಸ್ಯಪ್ರಜ್ಞೆ ಅವರ ಸೊತ್ತಾಗಿತ್ತು. ಸ್ವಾಗತ ಮತ್ತು ವಂದನಾರ್ಪಣೆಗಳ ನಾಂದೀ-ಭರತವಾಕ್ಯಗಳನ್ನು ಸಲ್ಲಿಸುವಾಗ ಅವರೆಂದೂ ವೇದಿಕೆಯನ್ನೇರಿದ ನೆನಪು ನನಗಿಲ್ಲ. ಕೆಳಗೆ ನಿಂತೇ ನುಡಿಯುತ್ತಿದ್ದರು. ಇದು ಅವರು ಅಂದಿನ ಭಾಷಣಕಾರರಿಗೋ ಕಲಾವಿದರಿಗೋ ಸಲ್ಲಿಸುತ್ತಿದ್ದ ಸೌಮ್ಯಗೌರವ.
To be continued.