ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 7
ಕಾಳಿದಾಸ ಅವರಿಗೆ ಪರಮಾರಾಧ್ಯನಾದ ಕವಿ. ಆತನ ರಘುವಂಶವನ್ನು ಸಾಂಗೋಪಾಂಗವಾಗಿ ಅವರು ಅನೇಕವರ್ಷಗಳ ಕಾಲ ಆಸಕ್ತರಿಗೆ ಪಾಠ ಹೇಳುತ್ತಿದ್ದರು. ಅವರು ಅಭಿಜ್ಞಾನಶಾಕುಂತಲವನ್ನು ಸಹಜವಾಗಿಯೇ ತುಂಬ ಮೆಚ್ಚಿಕೊಂಡಿದ್ದರು. ಇದನ್ನು ಕುರಿತು ಉಕ್ತಲೇಖನಕ್ರಮದಲ್ಲಿ ಒಂದು ಪ್ರಬಂಧವನ್ನು ತೆಲುಗಿನಲ್ಲಿ ಬರೆಸಿದ್ದರು. “ಅದ್ಭುತಶಿಲ್ಪಂಲೋ ಆರ್ಷಸಂದೇಶಂ” ಎಂಬ ಈ ಬರೆಹವನ್ನು ನಾನು ಹಸ್ತಪ್ರತಿಯಲ್ಲಿಯೇ ಓದಿದ್ದೆ. ಇದು ಕಾಳಿದಾಸನ ರೂಪಕದ ಹತ್ತಾರು ಸ್ವಾರಸ್ಯಗಳನ್ನು ಸೊಗಸಾಗಿ ವಿವರಿಸಿ ಅಲ್ಲಿಯ ಪುರುಷಾರ್ಥತತ್ತ್ವವನ್ನು ಹೃದ್ಯವಾಗಿ ನಿರೂಪಿಸಿತ್ತು. ಇದಕ್ಕೆ ಮುದ್ರಣಯೋಗ ಬರಲಿಲ್ಲ. ಈಗ ಎಲ್ಲಿದೆಯೋ ತಿಳಿಯದು. ಇದರ ನಷ್ಟ ಮಾತ್ರ ದೊಡ್ಡದೇ.