ನೋರಿ ನರಸಿಂಹಶಾಸ್ತ್ರಿಗಳ “ಕವಿಸಾರ್ವಭೌಮುಡು”: ಒಂದು ಪರಿಚಯ - 1
ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ ಪೂರ್ವೋಕ್ತರೀತಿಯ ಕುಂದು-ಕೊರತೆಗಳನ್ನು ಕಂಡಾಗ ನನ್ನಂಥವರ ವ್ಯಥೆ ಮತ್ತೂ ಹೆಚ್ಚಾಗುತ್ತದೆ.