Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...
ಭಗವತ್ಸಂಬಂಧ—ಒಂದು ಮಧುರಾಯಾಮ
ಭಗವಂತನು ಮಾನವನ ಸೃಷ್ಟಿಯೋ ಮಾನವನು ಭಗವಂತನ ಸೃಷ್ಟಿಯೋ ಎಂಬ ಚರ್ಚೆ ಚಿರಂತನ. ಆದರೆ, ಇವರಿಬ್ಬರ ನಡುವಣ ಸಂಬಂಧ ಮಾತ್ರ ಇಂಥ ಎಲ್ಲ ಚರ್ಚೆಗಳನ್ನು ಮೀರಿದ ಮಧುರಾನುಭೂತಿ. ಒಂದೊಂದು ಮತದಲ್ಲಿ ಒಂದೊಂದು ಬಗೆಯಾಗಿ ಈ ಸಂಬಂಧವು ಬೆಳೆದಿದೆ. ಆದರೆ ಸನಾತನಧರ್ಮದಲ್ಲಿ ಮಾತ್ರ ಇದು ನಿರುಪಮವಾಗಿ ವಿಸ್ತರಿಸಿಕೊಂಡಿದೆ.
ಮಿಕ್ಕ ಮತಗಳಲ್ಲಿ ಭಗವಂತನೊಡನೆ ಭಕ್ತನ ಸಂಬಂಧವು ಪ್ರಧಾನವಾಗಿ ಭಯ-ಕರುಣಮೂಲದ್ದು, ಆರ್ತ-ಅರ್ಥಾರ್ಥಿಸ್ತರದ್ದು. ಹೀಗಾಗಿಯೇ ಇಲ್ಲಿ ಯಾವುದೇ ಸಂಬಂಧದ ಪ್ರಬುದ್ಧಪರಿಣತರೂಪವಾದ ಸ್ನೇಹ-ಸಲುಗೆಗಳೂ ಮಾಧುರ್ಯ-ಮಾರ್ದವಗಳೂ ವಿರಳವಾಗುತ್ತವೆ. ಆದರೆ ಸನಾತನಧರ್ಮದಲ್ಲಿ ಹಾಗಲ್ಲ. ಅಲ್ಲದೆ, ಮಿಕ್ಕ ಮತಗಳಲ್ಲಿ ಭಕ್ತ-ಭಗವಂತರ ಸಂಬಂಧವು ಆದ್ಯಂತವಾಗಿ ಭೇದರೂಢವೇ ಆದ ಕಾರಣ ಯಾವುದೇ ಬಗೆಯ ವಿಕಾಸೌನ್ನತ್ಯಗಳಿಗೆ ಅಲ್ಲಿ ಎಡೆಯಿಲ್ಲ. ಸನಾತನಧರ್ಮವಾದರೋ ಕೇವಲ ಉಪಾಸಕನ ಅನುಕೂಲತೆಗಾಗಿ ಭೇದ ಮತ್ತು ಭೇದಾಭೇದಗಳ ವಲಯಗಳನ್ನು ಒಪ್ಪಿದ್ದು ಪರಮಾರ್ಥತಃ ಅಭೇದದಲ್ಲಿಯೇ ಪರ್ಯವಸಿಸುವ ಕಾರಣ ಇಂಥ ಸಂಬಂಧವು ಭಯ-ಲೋಭಮೂಲದ ಮರ್ತ್ಯಭಾವಗಳನ್ನು ಮೀರಿ ಅಭಯ-ಆನಂದಗಳ ಅಮರ್ತ್ಯರಸಪಾಕವನ್ನು ಮುಟ್ಟುತ್ತದೆ. ಈ ಬಗೆಯ ಸುಸಂಸ್ಕೃತಿಯ ಕಾರಣ ಸನಾತನಧರ್ಮದ ಅದೆಷ್ಟೋ ಸ್ತರಗಳಲ್ಲಿ ಭಕ್ತ-ಭಗವಂತರ ಸಂಬಂಧವು ಮಿಕ್ಕ ಮತಗಳವರಿಗೆ ಅರ್ಥವಾಗದೆ ಬೆಚ್ಚಿಬೀಳುವಂತೆಯೂ ಆಗಿದೆ; ಇದೆಂಥ ಪಾಖಂಡತನವೆಂಬ ಆಗ್ರಹ-ಜುಗುಪ್ಸೆಗಳಿಗೂ ಕಾರಣವೆನಿಸಿದೆ. ಹೆಚ್ಚೇನು, ಸನಾತನಧರ್ಮೀಯರೆಂದೇ ಲೋಕವು ಗಣಿಸುವ ಅದೆಷ್ಟೋ ಮಂದಿ ಪ್ರಾಚೀನ-ನವೀನರಿಗೆ ಕೂಡ ಇಂಥ ಅನಿಸಿಕೆಯುಂಟಾದಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಇವರೆಲ್ಲ ಪ್ರಾಯಿಕವಾಗಿ ಭೇದವಾದಿಗಳೇ, ರಸವೈರಿಗಳೇ. ಆದರೆ ಸನಾತನಧರ್ಮದ ಹೃದಯವನ್ನು ಬಲ್ಲವರಿಗೆ ಇವೆಲ್ಲ ದಿವ್ಯಲೀಲೆಗಳೇ ಆಗಿವೆ; ಅಂತರಂಗಪರಿಪಾಕದ ಅವಕಾಶಗಳೇ ಆಗಿವೆ. ಸದ್ಯದ ಲೇಖನವು ಇಂಥ ಕೆಲವೊಂದು ಸ್ಮರಣೀಯಸಂಗತಿಗಳನ್ನು ನಮ್ಮವರಿಗೇ ನೆನಪಿಸಿಕೊಡುವ ಪುಟ್ಟ ಪ್ರಕಲ್ಪ.
ಸನಾತನಧರ್ಮವು ಪರಮಾತ್ಮನನ್ನು ಸಗುಣನೆಂದೂ ನಿರ್ಗುಣನೆಂದೂ ಸ್ತ್ರೀಯೆಂದೂ ಪುರುಷನೆಂದೂ ಲಿಂಗಾತೀತನೆಂದೂ ಒಪ್ಪಿರುವುದಲ್ಲದೆ, ಸ್ಥಾವರ-ಜಂಗಮಾತ್ಮಕವಾದ ಸಕಲಜಗತ್ತು ಮತ್ತು ಅದನ್ನು ಮೀರಿದ ಚೈತನ್ಯವೂ ಹೌದೆಂದು ಒಪ್ಪಿದೆ. ಈ ಮಹಾತತ್ತ್ವವೇ ಅದು ಮನಗಾಣಿಸುವ ಭಕ್ತ-ಭಗವಂತರ ಸಂಬಂಧಗಳ ಹಲವು ಮಜಲುಗಳಲ್ಲಿ ಸೊಗಸಾಗಿ ಧ್ವನಿಸುತ್ತದೆ. ಇಷ್ಟು ಮಾತ್ರವಲ್ಲ, ಆರ್ಷಸಂಸ್ಕೃತಿಯು ಸಚ್ಚಿದಾನಂದಘನವೆನಿಸಿದ ಬ್ರಹ್ಮವಸ್ತುವಲ್ಲದೆ ಮತ್ತಾವುದೂ ಪರಮಾರ್ಥವಾಗಿ ಇಲ್ಲದ ಕಾರಣ ದೇಶ-ಕಾಲಗಳೂ ನಾಮ-ರೂಪಗಳೂ ಇದರ ವಿವರ್ತಮಾತ್ರವೆಂದು ಸಾಕ್ಷಾತ್ಕರಿಸಿಕೊಂಡಿದೆ. ಹೀಗಾಗಿ ಅಮೂರ್ತವು ಮೂರ್ತವಾಗುವ, ನಿರ್ಗುಣವು ಸಗುಣವಾಗುವ, ಲಿಂಗಾತೀತವು ಲಿಂಗನಿರ್ದಿಷ್ಟವಾಗುವ, ಅಮೇಯವು ಮೇಯವೆನಿಸುವ, ಅಚಿಂತ್ಯವು ಚಿಂತ್ಯವೆನಿಸುವ ಸ್ತರಗಳನ್ನು ಸಹಜವೆಂದೂ ಇದು ಸಾಧಕನ ಸಂಸ್ಕಾರಕ್ಕಾಗಿ ಸುಗ್ರಾಹ್ಯವೆಂದೂ ಸತ್ಯ-ಸೌಂದರ್ಯಗಳ ಪಥದಿಂದ ಅರಿತಿದೆ. ಈ ಕಾರಣದಿಂದಲೇ ಭಗವಂತನಿಗೆ ಅವತಾರಗಳೂ ಇಷ್ಟಾನಿಷ್ಟಗಳೂ ಕಷ್ಟ-ನಷ್ಟಗಳೂ ಸೋಪಾಧಿಕವಾಗಿ ಅನಿವಾರ್ಯ ಮಾತ್ರವಲ್ಲ, ಆಪ್ಯಾಯನ ಕೂಡ. ಅವತಾರಗಳಿದ್ದಮೇಲೆ ಹುಟ್ಟು-ಸಾವುಗಳೂ ಅವನಿಗೆ ಅನಿವಾರ್ಯ ತಾನೆ? ಇಷ್ಟಾನಿಷ್ಟಗಳಿದ್ದಮೇಲೆ ಧರ್ಮ-ಕರ್ಮಗಳೂ ಸಾಫಲ್ಯ-ವೈಫಲ್ಯಗಳೂ ಅಂಟಿಬರುತ್ತವೆ. ಇವುಗಳನ್ನು ಹಿಂಬಾಲಿಸಿ ಬರುವ ಸುಖ-ದುಃಖಗಳಿಗೂ ಕೊನೆಯಿಲ್ಲ. ಹೆಚ್ಚೇನು, ಭಗವಂತನು ಮಾನವನೇ ಆಗುತ್ತಾನೆ; ಮತ್ತೂ ಮುಂದುವರಿದು ತಿರ್ಯಕ್ಸತ್ತ್ವವೂ ಆಗಿ ಪರಿಣಮಿಸುತ್ತಾನೆ. ಆದರೆ ಇದೆಲ್ಲ ರಸಸ್ತರದ ಆಹಾರ್ಯಸತ್ತೆಯಾದ ಕಾರಣ ಎಲ್ಲವೂ ಒಂದು ಲೀಲೆ; ವೈರುದ್ಧ್ಯ-ವೈಷಮ್ಯಗಳಿಲ್ಲದ ಆನಂದಮಾತ್ರದ ಕಲಾಕುಸುಮಮಾಲೆ. ಈ ಪ್ರಜ್ಞೆ ನಮಗಿಲ್ಲದಿದ್ದಲ್ಲಿ ಇದೆಲ್ಲವೂ ಅಸ್ತವ್ಯಸ್ತ. ಆಗ ನಾವೂ ಮಿಕ್ಕ ಮತಗಳವರಂತಾಗುತ್ತೇವೆ. ಪ್ರಕೃತ ಈ ವಿವೇಕವನ್ನು ಹೃದಯದಲ್ಲಿರಸಿಕೊಂಡು ಕೆಲವು ಸಂಗತಿಗಳನ್ನು ಪರಶೀಲಿಸೋಣ.
ಭಗವಂತನ ಆರಾಧನೆಯು ಸನಾತನಧರ್ಮದಲ್ಲಿ ವೇದಯುಗದಿಂದ ಮೊದಲ್ಗೊಂಡು ಇಂದಿನವರೆಗೆ ಹಬ್ಬಿದೆಯಾದರೂ ಅದೆಲ್ಲ ಯುಕ್ತಾರ್ಥದಲ್ಲಿ ಜಾನಪದವೇ. ಅಂದರೆ, ನಮ್ಮ ಹಳ್ಳಿಯ ಬದುಕಿನಲ್ಲಿ ಯಾವೆಲ್ಲ ರಕ್ತಸಂಬಂಧಗಳನ್ನು ಕಾಣುವೆವೋ ಭಾವಸಂಬಂಧಗಳನ್ನು ಮನಗಾಣುವೆವೋ ಏನೆಲ್ಲ ಚಿತ್ತವೃತ್ತಿಗಳನ್ನು ಹಾಯ್ದುಬರುವೆವೋ ಅವೆಲ್ಲ ಈ ಆರಾಧನಕ್ರಮದಲ್ಲಿ ಪರಿಪರಿಯಾಗಿ ತೋರಿಕೊಳ್ಳುವುದೆಂದು ತಾತ್ಪರ್ಯ. ಈ ಕಾರಣದಿಂದಲೇ ಭಗವಂತನು ನಮಗೆ ತಾಯಿ-ತಂದೆಯರ ಸ್ಥಾನದಲ್ಲಿರುವಂತೆ ಒಡಹುಟ್ಟಿದವರ ಸ್ಥಾನದಲ್ಲಿಯೂ ಇರುತ್ತಾನೆ, ನಮ್ಮ ಬಾಳಸಂಗಾತಿಯ ರೂಪವನ್ನೂ ತಾಳಿ ಮಕ್ಕಳ ಪ್ರತೀಕವಾಗಿಯೂ ಮೈದಾಳುತ್ತಾನೆ. ಮಾತ್ರವಲ್ಲ, ಭಗವಂತನಿಗೆ ಮನೆ-ಮಠ, ಕೆಲಸ-ಬೊಗಸೆ, ಉಡುಗೆ-ತೊಡುಗೆ, ಆಹಾರ-ವಿಹಾರ, ಮೋಜು-ಮಸ್ತಿ ಮುಂತಾದುವೆಲ್ಲ ಸಹಜ, ಅನಿವಾರ್ಯ. ಹೆಚ್ಚೇನು, ರಾಗ-ದ್ವೇಷಗಳೂ ಅಪೇಕ್ಷಣೀಯವಾಗುತ್ತವೆ! ಆದರೆ ಇವನ್ನೆಲ್ಲ ಕಾವ್ಯೋಪಮವಾಗಿ, ಕಲಾತ್ಮಕವಾಗಿ ಅಂದ-ಚಂದಗಳೊಡನೆ, ಪ್ರೀತಿ-ಭಕ್ತಿಗಳೊಡನೆ ನಾವು ಸಲ್ಲಿಸುವ ಕಾರಣ ಭಗವಂತನ ಭಗವತ್ತ್ವವು ಅಪ್ರತಿಹತವಾಗಿ ಉಳಿಯುತ್ತದೆ; ನಮಗೂ ಸಹ ಆನಂದವನ್ನು ಉಳಿಸುತ್ತದೆ.
ಈ ಎಲ್ಲ ಅಂಶಗಳೊಟ್ಟಿಗೆ ಮತ್ತೂ ಒಂದು ಸ್ವಾರಸ್ಯವಿದೆ: ಸನಾತನಧರ್ಮದ ಪ್ರಕಾರ ದೇಶ-ಕಾಲಗಳು ಸಾಪೇಕ್ಷವಾದ ಕಾರಣ ಯಾವುದೇ ದೇಶ-ಕಾಲಗಳು ಎಲ್ಲಿಯೂ ಯಾವಾಗಲೂ ಇರಬಹುದು. ಮಾತ್ರವಲ್ಲ, ಇಂಥ ದೇಶ-ಕಾಲಗಳಿಂದ ನಿಬದ್ಧವಾದ ಘಟನೆಗಳು ಮತ್ತೆ ಮತ್ತೆ ಅಂದವಾಗಿ ಮರುಕಳಿಸಿಕೊಳ್ಳಲೂಬಹುದು. ಇಂಥ ಮರುಕಳಿಕೆಯಲ್ಲಿ ಮಾರ್ಪಾಟುಗಳೂ ಇರಬಹುದು. ಹೇಗೆ ಋತುಚಕ್ರವು ಪ್ರವರ್ತಿಸುತ್ತ ಬಂದಂತೆ ಪ್ರತಿವರ್ಷವೂ ಅವೇ “ಋತುಲಿಂಗ”ಗಳು (ಆಯಾ ಋತುಗಳಲ್ಲಿ ತೋರಿಕೊಳ್ಳುವ ಪ್ರಕೃತಿಯ ಪ್ರತಿಸ್ಪಂದಗಳು) ಬಗೆಬಗೆಯಾಗಿ ನಿಸರ್ಗದಲ್ಲಿ ಅಭಿವ್ಯಕ್ತವಾಗುವುವೋ ಹಾಗೆಯೇ ಭಗವಂತನ ಅವತಾರ-ಲೀಲೆಗಳ ಅಂಶಗಳೂ ಅನುದಿನ ಮರುವುಟ್ಟುವಡೆಯುವುವು. ಮತ್ತೂ ಮಿಗಿಲಾದ ಸ್ವಾರಸ್ಯವೆಂದರೆ ಈ ಎಲ್ಲ “ಪುನರ್ಜಾಯಮಾನ-ಪುರಾಣ”ಲೀಲೆಗಳಲ್ಲಿಯೂ ನಮ್ಮ ಪಾತ್ರ ಕೂಡ ಇರುತ್ತದೆ.
ದೇವಕೀ-ವಸುದೇವರ ಮಗನಾಗಿ ಹುಟ್ಟಿ, ಜನಿಸಿದೊಡನೆಯೇ ಅವರಿಂದ ಬೇರ್ಪಟ್ಟು ಗೋಕುಲದಲ್ಲಿ ಯಶೋದೆಯ ಕಂದನಾಗಿ ಬೆಳೆದ ಕೃಷ್ಣನು ಆಕೆಗೆ ಮಾತ್ರ ಸೀಮಿತವಾಗದೆ, ಹರಿವಂಶ-ಭಾಗವತಾದಿಗಳಲ್ಲಿ ಮಾತ್ರ ಸೆರೆಯಾಗಿ ಹೋಗದೆ ಪ್ರತಿವರ್ಷವೂ ಬರುವ “ಕೃಷ್ಣಜನ್ಮಾಷ್ಟಮಿ”ಯಂದು ಎಲ್ಲರ ಮನೆಯಲ್ಲಿಯೂ ಹುಟ್ಟುತ್ತಾನೆ, ಎಲ್ಲರ ಮನೆಯಲ್ಲಿಯೂ ತೊಟ್ಟಿಲಿನ ಮಗುವಾಗಿ ಬೆಳೆಯುತ್ತಾನೆ. ತಾವೇ ಯಶೋದೆಯಾಗಿ, ನಂದಗೋಪನಾಗಿ ಅವನನ್ನು ಆಡಿಸುವ ಅವಕಾಶ ಪ್ರತಿಯೊಬ್ಬರಿಗೂ ಉಂಟು. ಇದು ಆಳ್ವಾರುಗಳಿಂದ ಮೊದಲ್ಗೊಂಡು ಹರಿದಾಸರೂ ಸೇರಿದಂತೆ ಅಷ್ಟಛಾಪಕವಿಗಳನ್ನೂ ಕೂಡಿಸಿಕೊಂಡು ನಮ್ಮವರೆಗೆ ಬೆಳೆದುಬಂದಿರುವ ರಕ್ತಸಂಬಂಧ ಅಥವಾ ಅನುರಕ್ತಸಂಬಂಧ. ಹೀಗೆ ಆರಾಧಿಸುವಾಗ ಆಯಾ ದೇಶ-ಕಾಲಾನುಸಾರವಾಗಿ ಕೃಷ್ಣನಿಗೆ ಸಲ್ಲಿಸುವ ತಿಂಡಿ-ತಿನಿಸುಗಳ, ಹಣ್ಣು-ಹಂಪಲುಗಳ ಬಗೆಗಳೂ ಬದಲಿಸುತ್ತವೆ; ಆಟ-ಪಾಟಗಳ ಸಾಮಗ್ರಿಯೂ ಮಾರ್ಪಡುತ್ತದೆ. ಆದರೆ ಇದೆಲ್ಲ ಅಯತ್ನವೆಂಬಂತೆ ಸಹಜಸುಂದರವಾಗಿ ಸಾಗಿಹೋಗುತ್ತದೆ, ಅಂಗೀಕೃತವೂ ಆಗುತ್ತದೆ. ಇಲ್ಲವಾದರೆ ವೇದಸಂಸ್ಕೃತಿಯಲ್ಲಿಲ್ಲದ ತೆಂಗು-ತಾಂಬೂಲಗಳಾಗಲಿ, ಮುಘಲರ ಯುಗದಿಂದೀಚೆಗೆ ಬಂದ ಪರಂಗಿ-ಸಪೋಟಗಳಾಗಲಿ ಕೃಷ್ಣನಿಗೆ ನೈವೇದ್ಯವಾಗುತ್ತಿರಲಿಲ್ಲ. ಇದು ಒಬ್ಬ ಕೃಷ್ಣನಿಗೆ ಮಾತ್ರವಲ್ಲ, ಮಿಕ್ಕಲ್ಲ ದೇವತೆಗಳಿಗೂ ಸಲ್ಲುವ ಸಂಗತಿಯೇ ಹೌದು. ಹಾಗಲ್ಲವಾದರೆ ಗಣಪತಿಯು ಮುದ್ಗಲಪುರಾಣ-ಗಣೇಶಪುರಾಣಗಳಲ್ಲಿ ಕಾಣಸಿಗುವ ಹದಿನಾರೋ ಮೂವತ್ತೆರಡೋ ರೂಪಗಳನ್ನು ಮೀರಿ ಕಾರ್ಗಿಲ್ ಗಣಪತಿ, ಕ್ರಿಕೆಟ್ ಗಣಪತಿ, ಸಂಗೀತಗಣಪತಿ, ಸಾಮರಸ್ಯಗಣಪತಿ ಮುಂತಾದ ಸಾವಿರಾರು ಆಕೃತಿಗಳಲ್ಲಿ ಅರ್ಚಿತನಾಗಲು ಸಾಧ್ಯವಿರುತ್ತಿರಲಿಲ್ಲ.
ಭಗವಂತನಿಗೆ ಹುಟ್ಟು, ಹುಟ್ಟಿದ ಹಬ್ಬ, ಅಭಿಷೇಕ-ಅಲಂಕಾರಾದಿಗಳು ಹೇಗೆ ಸಹಜವೋ ಹಾಗೆಯೇ ಮುಂಜಿ-ಮದುವೆಗಳೂ ಸಹಜ. ಅಶ್ವತ್ಥರೂಪಿಯಾದ ನಾರಾಯಣನಿಗೆ—ಆ ವೃಕ್ಷವು ಕ್ಷತ್ರಿಯವರ್ಣಕ್ಕೆ ಪ್ರತೀಕವೆಂದು ಶಾಸ್ತ್ರಗಳು ತಿಳಿಸುವ ಕಾರಣ—ಹನ್ನೊಂದನೆಯ ವಯಸ್ಸಿಗೆ ಉಪನಯನಸಂಸ್ಕಾರವಾಗಿ ಮುಂದೆ ಲಕ್ಷ್ಮೀರೂಪಿಣಿಯಾದ ಬೇವಿನ ಮರದೊಡನೆ ವಿಧಿವತ್ತಾದ ಬ್ರಾಹ್ಮವಿವಾಹವೂ ಘಟಿಸುತ್ತದೆ. ಇದೇ “ಅಶ್ವತ್ಥಪ್ರತಿಷ್ಠೆ”ಯ ಮುಖ್ಯಾಂಗ. ಪ್ರಸ್ತಾವತ್ವೇನ ಇಲ್ಲಿಯೇ ಹೇಳುವುದಾದರೆ, ನೆಲ್ಲಿಯ ಕೊಂಬೆ ಮತ್ತು ತುಳಸಿಯ ಸಸಿಗಳಿಗೆ ಮಾಡುವ ಮದುವೆಯೂ “ತುಲಸೀಧಾತ್ರೀವಿವಾಹ”ವಾಗಿ ಲೋಕಪ್ರಸಿದ್ಧ. ಇಲ್ಲಿಯೂ ಇರುವುದು ಪೂರ್ವೋಕ್ತಭಾವವೇ. ಈ ಬಗೆಯ ಮುಂಜಿ-ಮದುವೆಗಳ ಮತ್ತೂ ವಿಸ್ತೃತಸುಂದರರೂಪವನ್ನು “ಸೀತಾಕಲ್ಯಾಣ”, “ಗಿರಿಜಾಕಲ್ಯಾಣ”, “ವಲ್ಲೀಕಲ್ಯಾಣ”, “ಶ್ರೀನಿವಾಸಕಲ್ಯಾಣ” ಮುಂತಾದ ಮಹೋತ್ಸವಗಳಲ್ಲಿ ಕಾಣಬಹುದು. ಬಲುಮಟ್ಟಿಗೆ ದೇವಾಲಯಾಶ್ರಿತವಾಗಿ ಈ ಉತ್ಸವಗಳು ವ್ಯಾಪಿಸಿಕೊಳ್ಳುವುವಾದರೂ ಮನೆಮಟ್ಟಿಗೆ ಕೂಡ ನಡೆಯುತ್ತವೆ. ಮಕ್ಕಳು ಗೊಂಬೆಗಳ ಮದುವೆಯನ್ನು ಮಾಡುವಂತೆ ಹಿರಿಯರು ನಿರಪವಾದವಾಗಿ ಇಂಥ ಕಲ್ಯಾಣೋತ್ಸವಗಳಲ್ಲಿ ತೊಡಗಿಕೊಳ್ಳುವುದುಂಟು. ಅಶೇಷಭಕ್ತಮಂಡಲಿಯಲ್ಲಿ ಆಯ್ದ ಕೆಲವರು ದೇವನ ತಂದೆ-ತಾಯಂದಿರ ಹಾಗೂ ಬಂಧು-ಬಳಗಗಳ ಪಾತ್ರವಹಿಸಿದರೆ, ಮತ್ತೆ ಕೆಲವು ಮಂದಿ ದೇವಿಯ ಕುಟುಂಬವರ್ಗದ ಸದಸ್ಯರ ಭೂಮಿಕೆಯನ್ನು ತಾಳುತ್ತಾರೆ. ನಿಶ್ಚಿತಾರ್ಥ, ವರಪೂಜೆ, ವೀಕ್ಷಣ, ಕನ್ಯಾದಾನ, ಮಾಂಗಲ್ಯಧಾರಣಗಳಂಥ ಮದುವೆಯ ಎಲ್ಲ ಹಂತಗಳಲ್ಲಿಯೂ ಉಭಯವರ್ಗದ ಬಾಂಧವರು ಸಕ್ರಿಯವಾಗಿ ಭಾಗವಹಿಸಿ ದೇವ-ದೇವಿಯರು ತಮ್ಮದೇ ಸಂತಾನವೆಂಬ ಸದ್ಭಾವದಿಂದ ಭಕ್ತಿ-ಹರ್ಷಗಳನ್ನು ಹೊಂದುವುದುಂಟು. ಇದು ಪ್ರತಿವರ್ಷವೂ ಸಾಗುವ ಮಹೋತ್ಸವವಲ್ಲದೆ ಅದೆಷ್ಟೋ ಕ್ಷೇತ್ರಗಳಲ್ಲಿ ಅನುದಿನವೂ ಸಲ್ಲುವ ಕಲಾಪ. ಮೇಲುಕೋಟೆಯಲ್ಲಿ ಶೆಲ್ವಪಿಳ್ಳೆಗೆ ಕಲ್ಯಾಣೋತ್ಸವವಾದಾಗ ಅಲ್ಲಿಗೆ ತೆರಳಿದ ನನಗೂ ದೇವರ ಮದುವೆಗೆ ಆಶೀರ್ವಾದವನ್ನು ಮಾಡುವ ವಿಪ್ರಪಂಕ್ತಿಯ ಮನ್ನಣೆ ದಕ್ಕಿದ ಕಾರಣ ಒಂದು ರೂಪಾಯಿಯ ದಕ್ಷಿಣೆ-ಸಂಭಾವನೆ ದೊರಕಿತ್ತು. ಇಂದಿಗೂ ಇದು ಭಗವಂತ ನನ್ನ ಬ್ರಾಹ್ಮಣ್ಯಕ್ಕೆ ಸಲ್ಲಿಸಿದ ಗೌರವಸತ್ಕಾರವೆಂಬ ಧನ್ಯತೆಯ ಭಾವ ನನ್ನಲ್ಲಿದೆ. ಇಂಥ ಸ್ವಾರಸ್ಯಗಳು ದೇವರ ಕಲ್ಯಾಣೋತ್ಸವಗಳಲ್ಲಿ ಹತ್ತಾರು. ಊರೊಂದರಲ್ಲಿ ರಾಮನಿಗೋ ಶಿವನಿಗೋ ಶ್ರೀನಿವಾಸನಿಗೋ ವಿವಾಹಮಂಗಳವೆಂದರೆ ಆ ಊರಿನ ಜನರಿಗೆಲ್ಲ ದೇವರ ಬಂಧುವರ್ಗದಲ್ಲಿ ಸದಸ್ಯರಾಗುವ ಅವಕಾಶ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ನಂಟಸ್ತಿಕೆಯ ಹಕ್ಕು-ಬಾಧ್ಯತೆಗಳಿರುತ್ತವೆ. ಇವನ್ನೆಲ್ಲ ಆಟದ ಸ್ತರದಲ್ಲಿ, ಕಲೆಯ ಸ್ತರದಲ್ಲಿ, ಕೈವಲ್ಯದ ಸ್ತರದಲ್ಲಿ ಕಾಣುವ, ಕಾಣಿಸುವ ಅವಕಾಶಗಳಿರುತ್ತವೆ. ಇಷ್ಟನ್ನೆಲ್ಲ ಕಂಡುಕೊಳ್ಳಬಲ್ಲವರೇ ಪುಣ್ಯಾತ್ಮರು. ಇದಿಷ್ಟಕ್ಕೂ ಸಾಧ್ಯತೆಗಳನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಸನಾತನಧರ್ಮದ್ದು.
ಮುಂಜಿ-ಮದುವೆಗಳಿರುವ ಭಗವಂತನಿಗೆ ಮಡದಿಯೊಡನೆ ಮತ್ತಷ್ಟು ಜನ ಮದನಿಕೆಯರೂ ಇಲ್ಲದಿದ್ದರೆ ಹೇಗೆ? ಈ ಕಾರಣದಿಂದಲೇ ಹುಟ್ಟಿಬಂದದ್ದು ದೇವದಾಸಿಪರಂಪರೆ. ಪುರುಷಪ್ರಧಾನವಾದ ಸಮಾಜದ ಪ್ರತಿಫಲನವೇ ಹೀಗೆ ಭಗವಂತನ ಆರಾಧನೆಯಲ್ಲಿಯೂ ಕಂಡಿದೆಯೆಂದು ಸಮಾಜಶಾಸ್ತ್ರಜ್ಞರ ನಿಗಮನ. ಆದರೆ ಭಕ್ತರೆಲ್ಲ ತಮ್ಮ ತಮ್ಮ ಲಿಂಗನಿರಪೇಕ್ಷವಾಗಿ ಭಗವಂತನಿಗೆ ಅರ್ಪಿತರಾದ ಮನದನ್ನೆಯರೆಂಬ ಮಧುರಭಕ್ತಿಯ ಪರಮಾರ್ಥವೇ ಇಲ್ಲಿದೆಯೆಂಬುದು ಪ್ರಪತ್ತಿಶಾಸ್ತ್ರಗಳ ಪ್ರಮಾಣ. ಏನೇ ಆಗಲಿ, ಮಾನವನ ಕಾಯಕಾಮ ಮತ್ತು ಕಲಾಕಾಮಗಳು ಒಟ್ಟಾಗಿ ಈ ವ್ಯವಸ್ಥೆಯನ್ನು ರೂಪಿಸಿ ಬೆಳೆಸಿವೆಯೆಂಬುದು ಯುಕ್ತ. ಇಲ್ಲವಾದರೆ ದೇವದಾಸಿಯರು ಕೇವಲ ಅಂಗಭೋಗದ ಮಟ್ಟಿಗೆ ಸೀಮಿತವಾಗದೆ ರಂಗಭೋಗಕ್ಕೂ ವಿಸ್ತರಿಸಿಕೊಂಡದ್ದು ಹೇಗೆ? ರಸಿಕರಾದ ಮಾನವರು ರಸಸ್ವರೂಪಿಯೇ ಆದ ಪರಮಾತ್ಮನಿಗೆ ತಮ್ಮದಾದ ಕಲೆಯ ಮೂಲಕ ಆತನ ಸೃಷ್ಟಿ-ಸ್ಥಿತಿ-ಲಯವೆಂಬ ವಿಶ್ವಕಲಾಕೌಶಲಕ್ಕೆ ಸಲ್ಲಿಸಿದ ಕಾಣಿಕೆಯೇ ರಂಗಭೋಗವೆಂದರೆ ತಪ್ಪಲ್ಲ.
ದೇವರಿಗೆ ಮೀಸಲುಮದುವೆಯಾಗುವ ಮಹಿಳೆಯರೇ ದೇವದಾಸಿಯರು. ಇವರು ಎಲ್ಲ ವರ್ಣಗಳಿಂದಲೂ ದೇವರಿಗೆ ಸಲ್ಲುತ್ತಿದ್ದರು. ಈ ಬಗೆಗೆ ಶಾಸನಾಧಾರಗಳು ವಿಪುಲವಾಗಿವೆ. ಹೀಗಾಗಿ ದೇವದಾಸಿಕುಲವೆಂಬುದು ಎಲ್ಲ ಕುಲಗಳ ಸಮಾಹಾರ. ಈ ಪದ್ಧತಿಯ ಒಳಿತು-ಕೆಡಕುಗಳು ಸಾಕಷ್ಟಿವೆ, ಮತ್ತವು ಗಂಭೀರವಾಗಿ ಚಿಂತನೀಯ ಕೂಡ. ಆದರೆ ಸದ್ಯಕ್ಕೆ ಅದರ ತತ್ತ್ವಸ್ವಾರಸ್ಯವನ್ನಷ್ಟೇ ಗಮನಿಸೋಣ (ಹೀಗೆಂದ ಮಾತ್ರಕ್ಕೆ ಈ ಪದ್ಧತಿಯ ಲೋಪ-ದೋಷಗಳ ಅರಿವು ಪ್ರಕೃತಲೇಖಕನಿಗೆ ಇಲ್ಲವೆಂದಾಗಲಿ, ಅವುಗಳನ್ನೆಲ್ಲ ಸಮರ್ಥಿಸುವನೆಂದಾಗಲಿ ತಾತ್ಪರ್ಯವಲ್ಲ). ಎಷ್ಟೋ ಬಾರಿ ಸ್ವಯಂಪ್ರೇರಣೆಯಿಂದ ಸಮಾಜದ ಕುಲೋನ್ನತರು, ವಿದ್ಯೋನ್ನತರು ಮತ್ತು ಶೀಲೋನ್ನತರು ದೇವದಾಸಿಯರಾಗುತ್ತಿದ್ದರು. ಕೆಲವೊಂದು ಕ್ಷೇತ್ರಗಳಲ್ಲಿ ಗಂಡಸರಿಗೂ ಈ ಅವಕಾಶವಿದ್ದಿತು. ಇದೆಲ್ಲ ಮಧುರಭಕ್ತಿಯ ಆಯಾಮಗಳು. ಇಂಥ ದೇವದಾಸಿಯರಿಗೆ ವಿಶೇಷವಾದ ಉಂಬಳಿಗಳೂ ಮರ್ಯಾದೆಗಳೂ ದೇವಾಲಯದ ಮೂಲಕ—ದೊರೆಗಳ ಮೂಲಕ ಕೂಡ—ಸಲ್ಲುತ್ತಿತ್ತು. ಸದ್ಯಕ್ಕೆ ಸ್ವಾರಸ್ಯವಿರುವುದು ಇಂಥ ದೇವದಾಸಿಯರ ಸಾವಿನಲ್ಲಿ ದೇವರಿಗೂ ಸೂತಕ ಬರುತ್ತಿತ್ತೆಂಬ ಅಂಶದಲ್ಲಿ! ಯಾವ ಗೃಹಸ್ಥನಿಗೇ ಆದರೂ ಸತಿಯ ಸಾವು ಸೂತಕವನ್ನು ತರುವುದಷ್ಟೆ. ಇದಕ್ಕೆ ಭಗವಂತನಿಗೂ ವಿನಾಯಿತಿಯಿಲ್ಲ. ಗತಿಸಿದ ದೇವದಾಸಿಯರ ಅಂತ್ಯಕ್ರಿಯೆಗೆ ಅಗ್ನಿಯು ದೇವಾಲಯದ ಪಾಕಶಾಲೆಯಿಂದಲೇ ತೆರಳುತ್ತಿತ್ತು. ಗೃಹ್ಯಾಗ್ನಿಯಿಂದಲ್ಲವೇ ಗೃಹಿಣಿಗೆ ಚಿತಾಪ್ರಜ್ವಾಲನ! ಅಲ್ಲದೆ ದೇವಾಲಯದಿಂದ ಸೀರೆ, ಕುಂಕುಮ, ಬಳೆ, ಹೂವು ಮೊದಲಾದ ಮಂಗಳದ್ರವ್ಯಗಳ ಸಮರ್ಪಣೆಯೂ ಆಗುತ್ತಿತ್ತು. ದೇವದಾಸಿಯ ಅಂತ್ಯೇಷ್ಟಿ ಕಳೆಯದೆ ದೇವರಿಗೆ ಸೂತಕ ತೀರದು. ಅಲ್ಲಿಯವರೆಗೆ ಆತನಿಗೆ ಪೂಜೆಯಿಲ್ಲ, ನೈವೇದ್ಯವಿಲ್ಲ, ಭಕ್ತರ ಕೈಂಕರ್ಯವೂ ಇಲ್ಲ. ಹೆಚ್ಚೇನು, ಅಲ್ಲಿಯವರೆಗೆ ದೇವಾಲಯದ್ವಾರವೇ ಮುಚ್ಚಿರುತ್ತದೆ. ಈ ಬಗೆಯ ಭಕ್ತ-ಭಗವಂತರ ಸಂಬಂಧ ದಿಟವಾಗಿ ಸುಮಧುರ. ಪ್ರಸಿದ್ಧರಾದ ನಾಟ್ಯವಿದುಷಿ ಪದ್ಮಾ ಸುಬ್ರಹ್ಮಣ್ಯಂ ಅವರು ಚೆನ್ನೈ ನಗರದ ಕಪಾಲೇಶ್ವರನ ಕಟ್ಟಕಡೆಯ ದೇವದಾಸಿ ಹಾಗೂ ಆಕೆಯ ಗುರುವರ್ಗದಲ್ಲೊಬ್ಬರಾದ ಮೈಲಾಪುರಂ ಗೌರಿ ಅಮ್ಮಾಳ್ ಅವರ ಅಂತ್ಯಕ್ರಿಯೆ ಈ ಬಗೆಯಲ್ಲಿ ಸಾಗಿದುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ನೆನಪು ನನಗಿನ್ನೂ ಹಸುರಾಗಿದೆ.
ಭಗವಂತನಿಗೆ ಕೂಡ ಸಂಸಾರತಾಪತ್ರಯ ಉಂಟಷ್ಟೆ. ಸಂಕ್ರಾಂತಿಯ ಕನೂಹಬ್ಬಕ್ಕಾಗಿ (ಇದು ತಮಿಳುನಾಡಿನಲ್ಲಿ ಪ್ರಚಲಿತವಾಗಿರುವ ಪರ್ವ. ಆ ದಿನ ಹೆಣ್ಣಿನ ತವರಿನವರು ತಮ್ಮ ಮನೆಗೆ ಮಗಳನ್ನು ಕರೆಸಿಕೊಂಡು ಉಡಿತುಂಬಿ ಸಸ್ನೇಹವಾಗಿ ಗಂಡನ ಮನೆಗೆ ಮತ್ತೆ ಕಳುಹಿಸಿಕೊಡುತ್ತಾರೆ) ಶ್ರೀದೇವಿ-ಭೂದೇವಿಯರು ತವರಿಗೆ ತೆರಳಿ ಅಲ್ಲಿಯೇ ಬಂಧುವರ್ಗದೊಡನೆ ಮೈಮರೆತು ಗಂಡನ ಮನೆಗೆ ತೆರಳಲು ತಡಮಾಡುತ್ತಾರೆ. ಆಗ ಮುನಿದ ಚೆಲುವರಾಯನು ಮನೆ ಬಿಟ್ಟು ಹೋಗುತ್ತಾನೆ. ಇದನ್ನರಿತ ದೇವಿಯರ ತವರಿನವರು ಕೆರಳಿದ ಅಳಿಯನ ಹಾದಿಯಲ್ಲಿ ಅಪಶಕುನವಾಗುವಂತೆ ಮೊಲವನ್ನು ಅಡ್ಡ ಹಾಯಿಸಿ ಅವನನ್ನು ಮತ್ತೆ ಮನೆಗೆ ಮರಳಿಸಿ ಸಮಾಧಾನಗೊಳಿಸುತ್ತಾರೆ. ಇದೆಲ್ಲ ಈಗಲೂ ಮೇಲುಕೋಟೆಯಲ್ಲಿ ನಡೆಯುವ “ಅಂಗಮಣಿ ಉತ್ಸವ”ದ ಸ್ವಾರಸ್ಯ. ಹೀಗೆಯೇ ಬೇಟೆಗೆಂದು ತೆರಳಿದ ಸ್ವಾಮಿಯು (ಇಲ್ಲಿ ಶಿವನೂ ಕೇಶವನೂ ಸ್ಕಂದನೂ ಸೇರಿದಂತೆ ಎಲ್ಲ ವಿವಾಹಿತದೇವತೆಗಳಿಗೂ ಅನ್ವಯವುಂಟು) ಬೇಟವನ್ನೂ ಕುದುರಿಸಿಕೊಂಡು ಬಂದಾಗ ಮುನಿದ ಮಡದಿಯರು ಆತನನ್ನು ಮನೆಯೊಳಗೆ ಬಿಡದೆ ಬಾಗಿಲಿನಾಚೆಯೇ ತಡೆದು ವಿಚಾರಣೆ ಮಾಡುವ ಖಂಡಿತಾನಾಯಿಕಾಪ್ರಸಂಗಗಳು ಸಾಕಷ್ಟಿವೆ. ಇವೆಲ್ಲ ಕಾವ್ಯ-ಗೀತ-ನೃತ್ಯಗಳೊಡನೆ ಸಾಗುವ ಉತ್ಸವಗಳೇ ಆಗಿವೆ. ನನ್ನ ಬಾಲ್ಯದಲ್ಲಿ ಇಂಥ ಉತ್ಸವಗಳನ್ನು ಕಂಡು ಹರ್ಷಿಸಿದ್ದೇನೆ. ಈ ಸಂದರ್ಭದಲ್ಲಿ ಗಂಡನನ್ನು ಹೊರಗಟ್ಟಿ ಗರ್ಭಗೃಹದಲ್ಲಿಯೇ ಉಳಿದ ದೇವಿಯರನ್ನು ಹೆದರಿಸಲು ಕೆಲವರು ಭಕ್ತರು ಕಳ್ಳತನದಿಂದ ಒಳಹೊಕ್ಕು ಅಲ್ಲಿಯ ಪೂಜಾಸಾಮಗ್ರಿಗಳನ್ನೂ ಒಡವೆ-ವಸ್ತ್ರಗಳನ್ನೂ ಕದ್ದು ಸ್ವಾಮಿಗೆ ಸಹಾಯ ಮಾಡುವ ಸ್ವಾರಸ್ಯಗಳೂ ಇರುತ್ತವೆ. ಕಳ್ಳರ ದಾಳಿಗೆ ಬೆದರಿದ ಕಾಂತೆಯರಿಗೆ ಧೈರ್ಯ ಹೇಳಲು ಸ್ವಾಮಿಯು ಮುಂದಾಗುವ ಅವಕಾಶ ಬರುತ್ತದೆ. ಅಲ್ಲಿಗೆ ಅಮ್ಮನವರ ಮುನಿಸು ಅಳಿಯುತ್ತದೆ. ಅನಂತರ ಕದ್ದೋಡಿದ ಕಳ್ಳರ ದಸ್ತಗಿರಿ, ವಿಚಾರಣೆ, ಕ್ಷಮಾಪ್ರದಾನ ಮುಂತಾದ ಎಲ್ಲ ನಾಟಕಗಳೂ ಇರುತ್ತವೆ.
ಅದೆಷ್ಟೋ ಬಾರಿ ಭಗವಂತನಿಗೆ ಪ್ರೀತಿಪಾತ್ರರಾದ ಭಕ್ತರ ಗೌರವಕ್ಕಾಗಿ ಕೆಲವೊಂದು ಸೇವೆಗಳನ್ನು ಅನೂಚಾನವಾಗಿ ದೇವಾಲಯಗಳಲ್ಲಿ ಸಲ್ಲಿಸುವುದುಂಟು. ಇಂಥ ಒಂದು ಸಂಗತಿ ಉಡುಪಿಯ ಕೃಷ್ಣನಿಗೆ ಸಲ್ಲಿಸುವ ಅಂಬಲಿಯ ನೈವೇದ್ಯ. ಇದು ಕನಕದಾಸರ ಸೇವಾಪ್ರಭಾವವೆಂದು ಪರಂಪರಾವಿಶ್ವಾಸ. ಹೀಗೆಯೇ ತಿರುಪತಿಯ ದೇವರಿಗೆ ಗಲ್ಲಕ್ಕೆ ಮೆತ್ತುವ ಕರ್ಪೂರದ ಸೇವೆ ಪ್ರಸಿದ್ಧ. ಗೋದಾದೇವಿಯು ಶ್ರೀವಿಲ್ಲಿಪುತ್ತೂರಿನ ವಟಪತ್ರಶಾಯಿಗೆ ಸಿಹಿ ಪೊಂಗಲಿನ ನೈವೇದ್ಯಕ್ಕಾಗಿ ಹರಸಿಕೊಂಡಿದ್ದಳಂತೆ. ಅದನ್ನು ತೀರಿಸದೆಯೇ ಆಕೆಯು ಶ್ರೀರಂಗನಾಥನಲ್ಲಿ ಐಕ್ಯವಾದ ಬಳಿಕ ಸುಮಾರು ಶತಮಾನಗಳ ಅನಂತರ ಹುಟ್ಟಿದ ರಾಮಾನುಜಾಚಾರ್ಯರು ಆಕೆಯ ಹರಕೆಯನ್ನು ತಾವು ತೀರಿಸಲು ಮುಂದಾದರಂತೆ. ಹೀಗೆ ವಟಪತ್ರಶಾಯಿಗೆ ಹಲವು ಶತಮಾನಗಳ ಬಳಿಕ ನೈವೇದ್ಯದ ಹರಕೆ ತೀರಿತು!
ಇನ್ನು ಕೆಲವೊಮ್ಮೆ ಭಗವಂತನಿಗೆ ಬಗೆಬಗೆಯ ತೊಂದರೆಗಳು ಬರುವುದುಂಟು. ಆಗಂತೂ ಆತನ ಪಾಲಿಗೆ ಭಕ್ತರೇ ಗತಿ. ತಿರುಪತಿಯ ದೇವರು ಪದ್ಮಾವತಿಯನ್ನು ಕೈಹಿಡಿಯಲು ಮದುವೆಯ ಖರ್ಚಿಗಾಗಿ ಕುಬೇರನಲ್ಲಿ ಮಾಡಿಕೊಂಡ ಸಾಲವನ್ನು ಇಂದಿಗೂ ಭಕ್ತರು ಹುಂಡಿಗೆ ಹಣ ಹಾಕಿ ತೀರಿಸುತ್ತಲೇ ಇರುವರಲ್ಲ! ಇಷ್ಟಾಗಿಯೂ ಇದು ಕೇವಲ ಬಡ್ಡಿಯ ಹಣ ಮಾತ್ರ. ಅಸಲು ತೀರುವುದು ಕಲಿಯುಗಾಂತದಲ್ಲಿಯೇ ಎಂದು ಕಥೆಯುಂಟು. ಪಾಪ, ಶ್ರೀನಿವಾಸನು ತನ್ನ ಸಾಲದ ಸಮಸ್ಯೆಗಾಗಿ ಅನುದಿನವೂ ಹುಂಡಿಯಲ್ಲಿ ಬಿದ್ದ ಹಣದ ತಪಶೀಲು ಮಾಡುತ್ತಿರಬೇಕು! ಇದಕ್ಕಾಗಿಯೇ ತಿರುಮಲೆಯಲ್ಲಿ “ಕೊಲುವು ಶ್ರೀನಿವಾಸ”ನೆಂಬ ಉತ್ಸವಮೂರ್ತಿಯುಂಟು. ಈ ದೇವರ ಕೆಲಸವೇ ಹುಂಡಿಯನ್ನಿರಿಸಿದ ಪಡಸಾಲೆಯಲ್ಲಿ ಅನುದಿನವೂ ಕುಳಿತು ಹಿಂದಿನ ದಿನದ ಆಯ-ವ್ಯಯಪಟ್ಟಿಯನ್ನೂ ಇಂದಿನ ದಿನದ ಖರ್ಚುಗಳ ಬಾಬತ್ತನ್ನೂ ಪರಿಶೀಲಿಸುವುದು! ಇದೇ ಜಾಡಿನದು ಶ್ರೀನಿವಾಸನಿಗೆ ಮುಡಿ ಕೊಡುವ ಕಟ್ಟಲೆ. ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಗೊಲ್ಲನ ಕೊಡಲಿಯ ಪೆಟ್ಟು ಬಿದ್ದಾಗ ಆತನ ತಲೆಗೆ ಗಾಯವಾಗಿ ಅದು ಮಾಯ್ದ ಬಳಿಕವೂ ಆ ಭಾಗದ ತಲೆಗೂದಲು ಬೆಳೆಯಲಿಲ್ಲವಂತೆ. ಇದನ್ನು ತೂಗಿಸಿಕೊಡಲು ಇಂದಿಗೂ ಭಕ್ತರ ಕೇಶಸಮರ್ಪಣೆ ಸಾಗುತ್ತಲೇ ಇದೆ. ಇದಕ್ಕೆ ಮತ್ತೂ ಒಂದು ಉಪಕಥೆಯುಂಟು. ಆ ಪ್ರಕಾರ ಬೆಳೆಯದ ತಲೆಗೂದಲಿನ ಎಡೆಯಲ್ಲಿ ನೀಲಾದೇವಿಯು ತನ್ನ ಮುಡಿಯನ್ನೇ ಕಿತ್ತು ನಾಟಿದಳಂತೆ; ಅವಳ ತ್ಯಾಗಕ್ಕೆ ಮೆಚ್ಚಿದ ಪರಮಾತ್ಮನು ಪ್ರಹ್ಲಾದ-ನಾರದಾದಿಭಾಗವತರ ಮುಡಿಯನ್ನು ಅವಳ ಕೋರಿಕೆಯಂತೆಯೇ ಆಕೆಗೆ ಅರ್ಪಿಸಿದನಂತೆ. ಆದರೂ ಅವಳ ಮುಡಿ ಪೂರ್ಣವಾಗಲಿಲ್ಲ. ಆಗ ಕಲಿಯುಗಾಂತ್ಯದವರೆಗೆ ತನ್ನ ಉಳಿದೆಲ್ಲ ಭಕ್ತರ ತಲೆಗೂದಲನ್ನೂ ಆಕೆಗೆ ಮೀಸಲುಗಾಣಿಕೆಯಾಗಿ ಒಪ್ಪಿಸುವ ಭಾಷೆಯನ್ನು ದೇವರು ನೀಡಿದನಂತೆ. ಹೀಗೆ ಎಲ್ಲ ಭಕ್ತರೂ ಭಗವಂತನ ಪಾಲಿಗೆ ಮಹೋನ್ನತರಾದ ಭಾಗವತರಾದರು.
ಕೇರಳದ ಭಗವತಿಗೆ ಸಕಲದೇವಾದಿದೇವತೆಗಳ ಮೇಲೆ ಒಡೆತನವಿದ್ದರೂ ಯಾವುದೇ ಹೆಣ್ಣಿಗೆ ಬಂದೊದಗುವ ಮುಟ್ಟು-ಚಟ್ಟುಗಳ ಕಾಟ ತಪ್ಪಿದ್ದಲ್ಲ. ತಿಂಗಳಿಗೆ ಮೂರು ದಿನ ಆಕೆಯ ದರ್ಶನ ಪುರುಷರಿಗೆ ನಿಷಿದ್ಧ. ರಜಸ್ವಲಾರೂಪಿಣಿಯಾದ ಭಗವತಿಗೆ ಆ ದಿನಗಳಲ್ಲಿ ಬಗೆಬಗೆಯ ವಿಶ್ರಾಂತಿ-ಉಪಚಾರಗಳು ಸಾಗುತ್ತವೆ. ಪುರಿಕ್ಷೇತ್ರದ ಸ್ವಾಮಿ ಜಗನ್ನಾಥನಿಗಂತೂ ಲೋಕಪ್ರಸಿದ್ಧವಾದ ರಥಯಾತ್ರೆಯ ಬಳಿಕ ಆ ಕೋಲಾಹಲದ ಕಾರಣ ಬಳಲಿಕೆಯಾಗಿ ಜ್ವರವೇ ಬಂದುಬಿಡುತ್ತದೆ. ಆಗೆಲ್ಲ ಔಷಧಗಳು, ಕಷಾಯಗಳು, ಆಸವಗಳು ಮತ್ತು ವಟಿಗಳು (ಮಾತ್ರೆ) ಪಥ್ಯಾಹಾರಕ್ಕೆ ಜೊತೆಯಾಗಿ ನೈವೇದ್ಯರೂಪದಲ್ಲಿ ಸಲ್ಲುತ್ತವೆ. ಆ ದಿನಗಳಲ್ಲಿ ಭಕ್ತಾದಿಗಳ ದರ್ಶನಕ್ಕೂ ಅವಕಾಶವಿರುವುದಿಲ್ಲ. ಇದೇ ರೀತಿ ಮೇಲುಕೋಟೆಯ ಚೆಲುವರಾಯನಿಗೂ ವೈರಮುಡಿ ಮಹೋತ್ಸವದ ಬಳಿಕ ಶ್ರಾಂತಿಯುಂಟಾಗಿ ಸ್ವಲ್ಪಕಾಲದ ವಿರಾಮ ಅವಶ್ಯವಾಗುತ್ತದೆ. ಹಾಗೆ ಚೇತರಿಸಿಕೊಂಡ ಬಳಿಕ ದೇವರು ಮೈಕಾಯಿಸಿಕೊಳ್ಳಲು ಬಿಸಿಲುಮಾಳಿಗೆಗೆ ಬಿಜಯಂಗೈಯುತ್ತಾನೆ. ಈ ಸಂದರ್ಭದಲ್ಲಿ ಯಾವುದೇ ವ್ಯಾಪಕವಾದ ಪೂಜಾ-ಸ್ತೋತ್ರವೈಭವಗಳಿರುವುದಿಲ್ಲ. ಕೇವಲ ಸವಿರಾಮವಾದ ವಿಲಾಸವಿಹಾರ ಮಾತ್ರ ಸಲ್ಲುತ್ತದೆ. ಇದೇ “ವೆಯಿಲ್ ಮಾಳಿಗೆ ಉತ್ಸವ”ದ ಹೂರಣ. ಮತ್ತೆ ಕೆಲವು ದೇವರಿಗಳಿಗಂತೂ ಹೊಗಳಿಕೆಯ ಸಿಹಿತಿಂಡಿಗಳು ಹೆಚ್ಚಾಗಿ ಬಾಯಿ ಕೆಟ್ಟಂತಾಗುತ್ತದೆ. ಆಗ ಈ ಪರಿಯ ಅರೋಚಕವನ್ನು ನೀಗಲು ಖಾರವಾದ ಬೈಗುಳಿನ ನೈವೇದ್ಯ ಬೇಕಾಗುತ್ತದೆ. ಹೀಗಾಗಿಯೇ ಕೇರಳವೂ ಸೇರಿದಂತೆ ಹಲವು ಪ್ರದೇಶಗಳ ದೇವತೆಗಳಿಗೆ—ವಿಶೇಷತಃ ಗ್ರಾಮದೇವತೆಗಳಿಗೆ—ನಿಯತವಾಗಿ ನಿಂದಾನೈವೇದ್ಯ ಸಲ್ಲುತ್ತದೆ. ಇದೂ ಸಹ ಪೂಜಾವಿಧಾನದಂತೆಯೇ ವ್ಯವಸ್ಥಿತವಾಗಿ ಸಾಗಬೇಕಾದ ಆರಾಧನಾಂಗ. ಏಕೆಂದರೆ ಈ ಪರಿಯ ನಿಂದೆಯೂ ಭಕ್ತರು ಮಾಡುವ ಸೇವೆ. ಈ ಬಗೆಯ ಚಿತ್ರವಿಚಿತ್ರವಾದ ಪೂಜೆಗಳೂ ಸೇವೆಗಳೂ ನೂರಾರು. ಇವುಗಳ ಪರ್ಯಂತದಶೆಯನ್ನು ಭಗವಂತನ ಅಂತ್ಯೇಷ್ಟಿಯಲ್ಲಿ ಕಾಣಬಹುದು.
ಪುರಿಯ ಜಗನ್ನಾಥಸ್ವಾಮಿಯು ದಾರುಮೂರ್ತಿ; ಬೇವಿನ ಮರದಿಂದ ನಿರ್ಮಿತನಾದ ದಿವ್ಯಸ್ವರೂಪಿ. ಎರಡು ಪೂರ್ಣಿಮೆಗಳು ಬರುವ ಅಧಿಕಮಾಸದಲ್ಲಿ ಈ ಮೂರ್ತಿಯ ನವೀಕರಣವಾಗುತ್ತದೆ. ಇದನ್ನೇ “ನವಕಲೇವರೋತ್ಸವ”ವೆಂದು ಹೇಳುತ್ತಾರೆ. ಹೀಗೆ ಹೊಸ ಮೂರ್ತಿಯು ದೇವಾಲಯಕ್ಕೆ ಬಂದೊಡನೆಯೇ ಹಳೆಯ ವಿಗ್ರಹವನ್ನು ವಿಧಿವತ್ತಾಗಿ ಕತ್ತರಿಸಿ, ದಹಿಸಿ, ಅಂತ್ಯಕ್ರಿಯೆ ಮಾಡುತ್ತಾರೆ. ಆಗ ದೇಗುಲದ ಮುಖ್ಯಾರ್ಚಕವರ್ಗದಲ್ಲಿ ಒಂದಾದ ಶಬರಸಮೂಹವು ಸೂತಕವನ್ನು ಆಚರಿಸುತ್ತದೆ. ಏಕೆಂದರೆ “ಸವರ”ರೆಂದು ಸ್ಥಳೀಯವಾಗಿ ಹೆಸರಿಸಲ್ಪಟ್ಟ ಈ ಶಬರ(ವ್ಯಾಧ)ವರ್ಗವು ತನ್ನ ಕುಲದ ಹೆಣ್ಣನ್ನು ಜಗನ್ನಾಥನಿಗೆ ಕೊಟ್ಟ ಕಾರಣ ಬಾಂಧವ್ಯವನ್ನು ಹೊಂದಿರುತ್ತದೆ. ಈ ಕಾರಣದಿಂದಲೇ ಈ ವರ್ಗದ ಅರ್ಚಕರಿಗೆ “ದಯಿತ”ರೆಂದು ವಿಶೇಷವಾದ ಅಭಿಧಾನವುಂಟು. ಯಾರಿಗೇ ಆಗಲಿ, ಅತ್ಯಂತಪ್ರಿಯರಾದವರನ್ನು ತಾನೆ ದಯಿತರೆಂದು ಗುರುತಿಸುವುದು? ಭಗವಂತನಿಗೆ ತಮ್ಮ ಕುಲದ ಹೆಣ್ಣನ್ನು ಕೊಟ್ಟ ಆದಿವಾಸಿಸಮೂಹದ ದೊಡ್ಡ ಪಟ್ಟಿಯೇ ನಮ್ಮ ಪರಂಪರೆಯಲ್ಲಿದೆ (ಇವುಗಳಿಗೆ ಆಧುನಿಕಸಮಾಜಶಾಸ್ತ್ರಜ್ಞರೂ ಮಾನವಶಾಸ್ತ್ರಜ್ಞರೂ ಬೇಕಾದಷ್ಟು ಕಾರಣಗಳನ್ನಿತ್ತಿದ್ದಾರೆ. ಅವುಗಳು ಪ್ರಕೃತಲೇಖಕನಿಗೆ ಅರಿವಿಲ್ಲವೆಂದಲ್ಲ. ಆದರೆ, ಸದ್ಯದ ಸ್ವಾರಸ್ಯದ ಹಿನ್ನೆಲೆಯಲ್ಲಿ ಆ ಬಗೆಯ ಅಧ್ಯಯನಗಳನ್ನಿಲ್ಲಿ ಪ್ರಸ್ತಾವಿಸುತ್ತಿಲ್ಲ. ತತ್ತ್ವತಃ ಹೇಳುವುದಾದರೆ, ಇಂಥ ವಾಸ್ತವಗಳನ್ನಾಧರಿಸಿದ ಚಿಂತನಕ್ರಮ ಅಧಿಭೂತಸ್ತರದ್ದು. ನಾವಿಲ್ಲಿ ಅಧಿದೈವವು ಹೇಗೆ ಅಧ್ಯಾತ್ಮಕ್ಕೆ ಸಹಕಾರಿಯಾಗಿದೆಯೆಂಬುದನ್ನು ನಿರೂಪಿಸುವ ತವಕದಲ್ಲಿರುವ ಕಾರಣ ಇಂಥ ತಾತ್ತ್ವಿಕಪರಿವೇಷ ಸಂದಿದೆ). ಬಿಳಿಗಿರಿರಂಗನು ಸೋಲಿಗರಿಗೆ ಅಳಿಯ, ಅಹೋಬಿಲೇಶ್ವರನು ಚೆಂಚು ಜಾತಿಯ ಆಟವಿಕರ ಅಳಿಯ, ಸುಬ್ರಹ್ಮಣ್ಯನು ತಮಿಳುನಾಡಿನ ಬೇಡರಿಗೆ ಮನೆಯಳಿಯ, ಶ್ರೀನಿವಾಸನು ಆಕಾಶರಾಜನೆಂದು ಹೆಸರಾದ ತಿರುಮಲೆಯ ಪ್ರಾಂತದ ಬುಡಕಟ್ಟಿನ ದೊರೆಗೆ ಮನೆಯಳಿಯ. ಈತನಂತೂ ಬೆಟ್ಟದಲ್ಲಿ ಹೆಂಡತಿಗೆ ದೂರವಾಗಿ ನೆಲೆಯಾದರೂ ಇರುಳಿನಲ್ಲಿ ಬೆಟ್ಟವಿಳಿದು ಮಂಗಾಪುರದಲ್ಲಿ ನೆಲಸಿದ ಮನದನ್ನೆ ಪದ್ಮಾವತಿಯನ್ನು ನೋಡಲು ಬರುತ್ತಲೇ ಇರುತ್ತಾನೆ. ಹಾಗೆ ಬಂದು ಹೋಗುವಾಗ ಮೆಟ್ಟಿಕೊಳ್ಳಲೆಂದೇ ವಿಶೇಷವಾದ ಪಾದರಕ್ಷೆಗಳು ಸಜ್ಜಾಗುತ್ತವೆ. ಕಾಲಕಾಲಕ್ಕೆ ಸವೆದ ಇವನ್ನು ಇಂದಿಗೂ ತಿರುಮಲೆಯ “ಚೆಪ್ಪುಲ ಮಂಟಪ”ದಲ್ಲಿ ಕಾಣಬಹುದು. ಹೀಗೆಯೇ ನಂಜನಗೂಡಿನ ನಂಜುಂಡನು ದಲಿತಕುಲದಿಂದ ಬಂದ ಚಾಮುಂಡಿಗೆ ಮರುಳಾದ ಕಾರಣ ಆತನ ಉತ್ಸವದ ರಥವು ಚಾಮುಂಡಿಬೆಟ್ಟದ ಕಡೆಗೆ ತಿರುಗುತ್ತಿದ್ದಂತೆಯೇ ಸ್ಥಗಿತವಾಗುತ್ತದಂತೆ. ಹೀಗೆ ಭಗವಂತನಿಗೆ ಸಾವಿನೊಡನೆ ಸಾಂಸಾರಿಕಸಮಸ್ಯೆಗಳೂ ಉಂಟು. ಇವನ್ನೆಲ್ಲ ಸನಾತನಧರ್ಮವು ಕಾಣಿಸಿಕೊಡುವ ಬಗೆ ಅನನ್ಯ. ಇವುಗಳಿಂದ ಭಕ್ತರಿಗೆ ಉಂಟಾಗುವ ಧನ್ಯತೆಯೂ ಗಮನಾರ್ಹ.