ನರೇಂದ್ರ ಮಂಡಲದ ಅವಾಂತರಗಳು
ಇದರ ಇನ್ನೊಂದು ಪಾರ್ಶ್ವವನ್ನು ಡಿ.ವಿ.ಜಿ. ಅವರ Chamber of Princes (ನರೇಂದ್ರ ಮಂಡಳ) ಕುರಿತಾದ ಸಮಗ್ರ ಲೇಖನಗಳಲ್ಲಿ ಕಾಣಬಹುದು. ಅದರ ತಾತ್ಪರ್ಯವನ್ನು ಈ ರೀತಿ ನಿರೂಪಿಸಬಹುದು.
೧೯೨೦ರಲ್ಲಿ ಆರಂಭಗೊಂಡ ನರೇಂದ್ರ ಮಂಡಲ್ ಸಂಸ್ಥೆಯು ಪ್ರತಿವರ್ಷ ದೆಹೆಲಿಯಲ್ಲಿ ಸೇರುತಿತ್ತು. ಈ ಹೊತ್ತು ನಮ್ಮ ದೇಶದ ಸಂಸದಭವನದ ಗ್ರಂಥಾಲಯ (Parliament Library) ಇರುವ ಕಟ್ಟಡದಲ್ಲಿ ಅದರ ವಾರ್ಷಿಕ ಕಲಾಪ ನಡೆಯುತ್ತಿತ್ತು.
ಅದರ ಧ್ಯೇಯ ಸರಳವಾಗಿಯೇ ಇತ್ತು: ದೇಶೀಯ ಸಂಸ್ಥಾನಗಳ ಆಗುಹೋಗುಗಳನ್ನು, ಸಮಸ್ಯೆಗಳನ್ನು ಬ್ರಿಟಿಷ್ ಸರಕಾರದೊಂದಿಗೆ ಚರ್ಚಿಸುವುದು.
ಆದರೆ ವ್ಯವಹಾರದ ಸ್ತರದಲ್ಲಿ ಪರಿಸ್ಥಿತಿ ಬೇರೆಯೇ ಆಗಿತ್ತು. ಆ ನರೇಂದ್ರ ಮಂಡಲದ ಸದಸ್ಯರಲ್ಲೇ ಮೇಲುಕೀಳಿನ ಭಾವನೆಗಳು, ಮುಸುಕಿನ ಗುದ್ದಾಟ, ದಿಕ್ಕೆಟ್ಟತನ, ಕ್ಷುದ್ರ ರಾಜಕೀಯ - ಹೀಗೆ ಹತ್ತು ಹಲವು ಅವಘಢಗಳು ತುಂಬಿತುಳುಕುತ್ತಿದ್ದವು. ಯಾವ ಮೂಲ ಕಾರಣಗಳಿಂದ ನಮ್ಮ ರಾಜ್ಯಗಳು, ಪುಟ್ಟಪುಟ್ಟ ಪಾಳೆಯಪಟ್ಟುಗಳು ಹಾಗೂ ದೊಡ್ಡ ಸಾಮ್ರಾಜ್ಯಗಳನ್ನು ಬ್ರಿಟಿಷರು ರಾಗಿಮುದ್ದೆಯಂತೆ ನುಂಗಲು ಸಾಧ್ಯವಾಯಿತೋ ಅವೇ ಕಾರಣಗಳ ೨೦ನೇ ಶತಮಾನದ ಆವೃತ್ತಿಯು ಈ ನರೇಂದ್ರ ಮಂಡಲದಲ್ಲಿ ಮತ್ತೆ ಕಾಣಿಸುತ್ತಿತ್ತು. ದೊಡ್ಡ ದೊಡ್ಡ ಸಂಸ್ಥಾನಗಳಾದ ಬರೋಡ, ಗ್ವಾಲಿಯರ್ ಹಾಗೂ ಹೊಲ್ಕರ್ ನರೇಂದ್ರ ಮಂಡಲದ ಸದಸ್ಯತ್ವವನ್ನು ಪಡೆಯಲು ನಿರಾಕರಿಸಿದ್ದವು – ಅದು ಅವರ ಘನತೆಗೆ ಕಡಿಮೆಯಾಗಿತ್ತಂತೆ.
ಈ ಎಲ್ಲ ಅವಾಂತರಗಳನ್ನು ಕಂಡು, ಅವನ್ನು ಖಂಡಿಸಿ, ಈ ನರೇಂದ್ರರನ್ನೆಲ್ಲ ಎಚ್ಚರಿಸಿ, ಭಗೀರಥಪ್ರಯತ್ನವನ್ನೇ ಮಾಡಿ ಗುಂಡಪ್ಪನವರು ಅವಮಾನಗಳನ್ನು, ತಿರಸ್ಕಾರಗಳನ್ನು ನುಂಗಿಕೊಂಡ ಏಕೈಕ ಕಾರಣ: ಒಟ್ಟು ಮೊತ್ತದಲ್ಲಿ ನಮ್ಮ ದೇಶೀಯ ಸಂಸ್ಥಾನಗಳು ಮಾತ್ರ ಭಾರತವರ್ಷದ ಸಾಂಸ್ಕೃತಿಕ ಅಖಂಡತೆ-ಅನೂಚಾನತೆಗಳನ್ನು ಕಾಪಾಡಲು ಇರುವ ಏಕೈಕ ಸಾಧನವೆಂದು ಅವರು ಮನಗಂಡಿದ್ದರು. ಈ ಮಾತು ಈ ಹೊತ್ತಿಗೂ ನಿಜ. ನಮ್ಮದೇ ರಾಜ್ಯದಲ್ಲಿ ಮೈಸೂರು ದಸರಾ ಹಬ್ಬದ ವೈಭವ ಉಳಿದಿರುವುದಕ್ಕೆ ಒಂದು ಪ್ರಮುಖ ಕಾರಣ – ಒಡೆಯರ ವಂಶದ ಕಾಳಜಿ. ೧೯೯೦ರ ದಶಕದ ಕೊನೆಯಲ್ಲಿ ಈಗಿರುವ ನಮ್ಮ ಘನ ಮುಖ್ಯಮಂತ್ರಿಗಳು ಮೈಸೂರು ಅರಮನೆಯನ್ನು ಬಲವಂತವಾಗಿ ರಾಷ್ಟ್ರೀಕರಣ ಮಾಡುವ ಹುನ್ನಾರ ಮಾಡಿದ್ದರು. ಅದೇನಾದರೂ ಯಶಸ್ವಿಯಾಗಿದ್ದಿದ್ದರೆ ಮೊದಲ ಕೊಡಲಿಯೇಟು ಬೀಳುತ್ತಿದ್ದುದು ಇದೇ ದಸರಾ ಹಬ್ಬಕ್ಕೆ. ಒಡೆಯರ ವಂಶದವರು ಎಷ್ಟೋ ಕಷ್ಟ ಪಟ್ಟು ಅದನ್ನು ಉಳಿಸಿಕೊಂಡರು.
ಸಂವಿಧಾನಕರ್ತೃ ಡಿ.ವಿ.ಜಿ.
ಡಿ.ವಿ.ಜಿ. ಇಂತಹ ಅನೇಕ ದುಷ್ಪರಿಣಾಮಗಳನ್ನು ಗುಂಡಪ್ಪನವರು ಆಗಲೇ ಊಹಿಸಿ, ಈ ನರೇಂದ್ರ ಮಂಡಲಕ್ಕೆ ಒಂದು ಮಾರ್ಗಸೂಚಿ ತೋರಿಸಿದರು ಎನ್ನಬಹುದು. ಇದು ಸ್ವಾತಂತ್ರ್ಯ ಬಂದ ಬಳಿಕ ನಮ್ಮ ದೇಶೀಯ ಸಂಸ್ಥಾನಗಳು ಹಾಗೂ ಭಾರತದ ಹೊಸ ಸರಕಾರದ ನಡುವೆ ಸಾಮರಸ್ಯದ ಸ್ವರೂಪ ಹೇಗಿರಬೇಕು ಎನ್ನುವ ಒಂದು ನಕ್ಷೆಯ ರೂಪ ಪಡೆಯಿತು. ಅದಕ್ಕೆ ಅವರಿತ್ತ ಹೆಸರು, The Constitution of the Council of States (ರಾಜ್ಯಗಳ ಮಂಡಳಿಯ ಸಂವಿಧಾನ). ಇದರರ್ಥ, ಒಂದು ಪುಟ್ಟ ಸಂವಿಧಾನವನ್ನೇ ಗುಂಡಪ್ಪನವರು ಏಕಾಂಗಿಯಾಗಿ ರಚಿಸಿದರು. ಅದರಲ್ಲಿ ನಮ್ಮ ಅಷ್ಟೂ ದೇಶೀಯ ಸಂಸ್ಥಾನಗಳಿಗೆ ಭಾರತದ ನೂತನ ಸಂಸತ್ತಿನಲ್ಲಿ ಎಷ್ಟೆಷ್ಟು ಸ್ಥಾನಗಳಿರಬೇಕು ಎನ್ನುವ ಲೆಕ್ಕವನ್ನೂ ಕೊಡುತ್ತಾರೆ.
ಇದರ ಪ್ರಕಾರ ದೇಶೀಯ ಸಂಸ್ಥಾನಗಳ ಸಂಸದೀಯ ಸ್ಥಾನಗಳ ಒಟ್ಟು ಸಂಖ್ಯೆ ೭೫. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಡಿ.ವಿ.ಜಿ. ಇದನ್ನು ಬರೆದಾಗ ಭಾರತದ ವಿಭಜನೆಯಾಗಿರಲಿಲ್ಲ. ಹೀಗಾಗಿ ಈ ಪಟ್ಟಿಯಲ್ಲಿ ನೇಪಾಳ, ಬಲೂಚಿಸ್ತಾನ, ಅವಿಭಾಜ್ಯ ಪಂಜಾಬ್ ಹಾಗೂ ಬಂಗಾಳ ಕೂಡ ಸೇರಿದ್ದವು.
ಇದರ ಒಟ್ಟು ತಾತ್ಪರ್ಯವೆಂದರೆ, ಒಂದಿಡೀ ಮಂತ್ರಿಮಂಡಲ ಅಥವಾ ಸಂವಿಧಾನಸಭೆಯು (Constitutent assembly) ಮಾಡುವ ಕೆಲಸವನ್ನು ಇಲ್ಲಿ ಡಿ.ವಿ.ಜಿ. ಒಬ್ಬರೇ ಮಾಡಿದ್ದರು.
ಇನ್ನು ಈ ಪ್ರಬಂಧದ ಕೊನೆಯ ಘಟ್ಟಕ್ಕೆ ಬರಬಹುದು.
ಸ್ವಾತಂತ್ರ್ಯೋತ್ತರ ಇಂಡಿಯಾದಲ್ಲಿ ದೇಶೀಯ ಸಂಸ್ಥಾನಗಳು
ಡಿ. ವಿ. ಗುಂಡಪ್ಪನವರ ಉದಾತ್ತ ಚರಿತೆಯಲ್ಲಿ ಬಂದಂತಹ ಅನೇಕ ದುರಂತಗಳಂತೆ ಅವರು ದೇಶೀಯ ಸಂಸ್ಥಾನಗಳ ಸುಧಾರಣೆ, ಏಳಿಗೆಗಳಿಗೆ ದುಡಿದ ಮೂರಕ್ಕೂ ಹೆಚ್ಚಿನ ದಶಕಗಳು ಅಂತ್ಯಗೊಂಡದ್ದು ವೈಫಲ್ಯದಲ್ಲಿ. ಅವರ ದೀರ್ಘಕಾಲದ ಕನಸು, ಆಶಯ, ಧ್ಯೇಯ: ನಮ್ಮ ದೇಶೀಯ ಸಂಸ್ಥಾನಗಳನ್ನು ಸ್ವತಂತ್ರ ಭಾರತದೊಳಗೆ ಸಮಸರಸವಾಗಿ ವಿಲೀನಗೊಳಿಸಿ ಆ ಮೂಲಕ ಅಖಂಡಭಾರತದ ಸಾಂಸ್ಕೃತಿಕ, ನಾಗರಿಕ ಐಕ್ಯವನ್ನು ಪುನಃಸ್ಥಾಪನೆಗೊಳಿಸುವುದು.
ಆ ಕಾಲದ ಇತಿಹಾಸವನ್ನು ಒಟ್ಟಾಗಿ ಅವಲೋಕಿಸಿದಾಗ ಸಿಗುವ ಸ್ಪಷ್ಟ ಚಿತ್ರವಿದು: ಬ್ರಿಟಿಷ್ ಇಂಡಿಯಾದಲ್ಲಿ ಭಾರತ ಹಿಂದೆಂದೂ ಕಾಣದಂತಹ ದೊಡ್ಡ ದೊಡ್ಡ ವಾಣಿಜ್ಯ ನಗರಗಳು, ಕೈಗಾರಿಕಾ ಕೇಂದ್ರಗಳು ಹುಟ್ಟುಕೊಂಡವು – ಮುಂಬೈ, ಕೊಲ್ಕತ್ತಾ, ಮದ್ರಾಸು, ಇತ್ಯಾದಿ. ಇಲ್ಲೆಲ್ಲ ನಮ್ಮ ಹಬ್ಬ ಹರಿದಿನಗಳು ನಡೆಯುತ್ತಿದ್ದದ್ದು ಮೊಹಲ್ಲಾಗಳಲ್ಲಿ, ಬಡಾವಣೆಗಳಲ್ಲಿ, ಗಲ್ಲಿಗಳಲ್ಲಿ, ದೇವಸ್ಥಾನಗಳಲ್ಲಿ. ಈ ಉತ್ಸವಗಳಲ್ಲಿ ಬ್ರಿಟಿಷ್ ಸರಕಾರದವರು ನೇರವಾಗಿ ಪಾಲುಗೊಳ್ಳುತ್ತಿರಲಿಲ್ಲ. ತದ್ವಿರುದ್ಧವಾಗಿ, ಹಲವೆಡೆ ನಮ್ಮ ಹಬ್ಬಗಳಿಗೆ ನಿರ್ಬಂಧವನ್ನು ತರುತ್ತಿದ್ದ ಉದಾಹರಣೆಗಳು ವಿಪುಲವಾಗಿ ಸಿಗುತ್ತವೆ.
ಆದರೆ ನಮ್ಮ ದೇಶೀಯ ಸಂಸ್ಥಾನಗಳಲ್ಲಿ ಹಬ್ಬ-ಉತ್ಸವಗಳನ್ನು ನೇರವಾಗಿ ರಾಜರೇ ನಡೆಸುತ್ತಿದ್ದರು, ಅವುಗಳಲ್ಲಿ ಭಕ್ತಿ-ಶ್ರದ್ಧೆಗಳಿಂದ ಸ್ವತಃ ಭಾಗವಹಿಸುತ್ತಿದ್ದರು.
ಎಲ್ಲವೂ ಸುಗಮವಾಗಿ ಸಾಗಿದ್ದಿದ್ದರೆ ಬ್ರಿಟಿಷ್ ಇಂಡಿಯಾ ಹಾಗೂ ದೇಶೀಯ ಸಂಸ್ಥಾನಗಳ ನಡುವೆ ಇದ್ದ ಈ ಕಂದಕವನ್ನು ೧೯೫೦ರ ಅಂತ್ಯದ ಹೊತ್ತಿಗೆ ಮುಚ್ಚಬಹುದಾಗಿತ್ತು.
ಸರ್ದಾರರ ಸಚಿವಾಲಯ - ಡಿ.ವಿ.ಜಿ. ಕೆಂಗಣ್ಣು - ಸಂಸ್ಥಾನಗಳ ದುರ್ಗತಿ
೧೯೪೭ರಲ್ಲಿ ಭಾರತದ ಸ್ವಾತಂತ್ರ್ಯ ಎಂಬ ಹೆಸರಿನ ವಿಭಜನೆ ಬಂತು. ಆಗ ಹುಟ್ಟಿಕೊಂಡಿದ್ದೇ Ministry of States (ರಾಜ್ಯಗಳ ಸಚಿವಾಲಯ) ಎಂಬ ನೂತನ ಮಂತ್ರಿಮಂಡಲ. ಅದರ ಅಧಿನೇತ ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಆತನ ನಂಬಿಕಸ್ಥ ಅಧಿಕಾರಿ, ವಿ. ಪಿ. ಮೆನನ್. ಆ ಕಾಲದಲ್ಲಿ ಅದನ್ನು Sardar’s Ministry (ಸರ್ದಾರರ ಮಂತ್ರಿಮಂಡಲ) ಎಂದೂ ಕರೆಯುತ್ತಿದ್ದರು. ಈ ಮಂತ್ರಿಮಂಡಲದ ಉದ್ದೇಶ, ನಮ್ಮ ಎಲ್ಲ ದೇಶೀಯ ಸಂಸ್ಥಾನಗಳನ್ನು ಹೊಸದಾಗಿ ರಚಿತವಾದ ಭಾರತೀಯ ಒಕ್ಕೂಟದ (Indian Union) ಒಳಗೆ ವಿಲೀನಗೊಳಿಸುವುದು. ಇದು ಆಗಲೇ ಬೇಕಾಗಿದ್ದ ತುರ್ತಾದ, ಗುರುತರವಾದ ಕಾರ್ಯ. ಆದರೆ ಆ ಕೆಲಸವನ್ನು ನಡೆಸಿದ ರೀತಿ ಮಾತ್ರ ಡಿ.ವಿ.ಜಿ. ಅವರಲ್ಲಿ ಅಸಹ್ಯ, ರೇಜಿಗೆ, ಆಕ್ರೋಶ ಹುಟ್ಟಿಸಿತು.
ಯಾವ ಕಾಂಗ್ರೆಸ್ ಪಕ್ಷವನ್ನು, ಅದರ ನಾಯಕರನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬೆಂಬಲಿಸಿ, ಗೌರವಿಸುತ್ತಿದ್ದರೋ ಈಗ ಅವರ ವಿರುದ್ಧವೇ ತೊಡೆತಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಗುಂಡಪ್ಪನವರು ಕಾಂಗ್ರೆಸ್ ಹಾಗೂ ಅದರ ರಾಜಕೀಯ ಯಾವ ಹೀನ ಅವಸ್ಥೆಗೆ ಬಂದು ತಲುಪಿತ್ತೆಂದು ಸ್ವಂತ ಅನುಭವದಿಂದ ಕಂಡುಕೊಂಡಿದ್ದರು. ಈ ಕುರಿತ ವಿವರಗಳು ಅವರ ಗ್ರಂಥರಾಶಿಯಲ್ಲೇ ಬೆಟ್ಟದ ಗಾತ್ರದಷ್ಟು ಸಿಗುತ್ತವೆ.
೧೯೪೯ರಲ್ಲಿ ಅವರು ಪ್ರಾರಂಭಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಒಂದು ಮುಖ್ಯ ಅಂಗವಾದ ಪಬ್ಲಿಕ್ ಅಫ್ಫೇರ್ಸ್ ಮಾಸಪತ್ರಿಕೆಯ (Public Affairs Journal) ಸಂಚಿಕೆಗಳಲ್ಲಿ ಸರ್ದಾರ್ ಪಟೇಲ್, ವಿ. ಪಿ. ಮೆನನ್ ಹಾಗೂ States Ministry ಯನ್ನು ವರ್ಷಾನುಗಟ್ಟಲೆ ಉಗ್ರವಾಗಿ ತರಾಟೆಗೆ ತೆಗೆದುಕೊಂಡರು. ಅದರ ಸಾರಾಂಶವನ್ನು ಮಾತ್ರ ಇಲ್ಲಿ ಗಮನಿಸಬಹುದು.
ಡಿ.ವಿ.ಜಿ.ಯವರ ಪ್ರಕಾರ ಭಾರತೀಯರೇ ಮಾಡಿಕೊಂಡ ಹೊಸ ಕೇಂದ್ರ ಸರಕಾರವು ನಮ್ಮ ದೇಶೀಯ ಸಂಸ್ಥಾನಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯು ಬ್ರಿಟಿಷರಿಗಿಂತ ದಾರುಣವಾಗಿತ್ತು. ಇದನ್ನು ಅವರು Neo Paramountcy in Delhi – ದೆಹೆಲಿಯಲ್ಲಿ ಕುಳಿತ ನೂತನ ಸರ್ವಾಧಿಕಾರ – ಎಂದು ಖಾರವಾಗಿ ಸಂಬೋಧಿಸಿದರು. ಅದೇ ನಿಟ್ಟಿನಲ್ಲಿ, ದೇಶೀಯ ಸಂಸ್ಥಾನಗಳ ಈ ಹೊಸ ದುರ್ಗತಿಗೆ ಅವರ ಹಳೆಯ ವರ್ತನೆಯೇ ಕಾರಣವೆಂದೂ ಸತ್ಯವನ್ನು ನುಡಿದರು. ಅವರ ಮಾತಿನಲ್ಲೇ ಹೇಳುವುದಾದರೆ:
“೧೯೩೦ರ ಮೊದಲನೆಯ ಗುಂಡುಮೇಜಿನ ಸಭೆಯಿಂದ ಆರಂಭಗೊಂಡು (First Round Table Conference) ನಮ್ಮ ರಾಜಮಹಾರಾಜರು ನಿರಂತರವಾಗಿ ಕಣ್ಣಾಮುಚ್ಚಾಲೆ ಆಟ ಆಡಿಕೊಂಡುಬಂದರು. ಅವರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವರಿಗೆ ಮುಂದೆಯೂ ಅನೇಕ ಅವಕಾಶಗಳು ಬಂದವು. ಅದರ ಜೊತೆ ಭಾರತದ ಸ್ವಾತಂತ್ರ್ಯದ ಸಮಸ್ಯೆಯೂ ಅರ್ಥಪೂರ್ಣವಾಗಿ ಬಗೆಹರಿಯುತ್ತಿತ್ತು. ಆದರೆ ಯಾವ ಅವಕಾಶವನ್ನೂ ಅವರು ಉಪಯೋಗಿಸಲಿಲ್ಲ. ೧೯೩೫ನೇ ವರ್ಷದ ಕಾಯ್ದೆ ಬಂದಾಗ ಹಿಂದೆ ಸಾರಿದರು. ಸ್ಟಾಫರ್ಡ್ ಕ್ರಿಪ್ಪ್ಸ್ ಬಂದಾಗ ಪಕ್ಕಕ್ಕೆ ಸರಿದರು. ಸಚಿವ ಸಂಪುಟ ನಿಯೋಗ (Cabinet Mission) ಬಂದಾಗ ವ್ಯಾಪಾರಕ್ಕೆ ಕೂತು ತಮ್ಮ ಪ್ರತ್ಯೇಕತೆಯ ಹಠವನ್ನೇ ಹಿಡಿದರು. ಭಾರತದುದ್ದಕ್ಕೂ ವ್ಯಾಪಿಸಿದ್ದ ದೇಶಭಕ್ತಿಯ ಪ್ರವಾಹದೊಳಗೆ ತಮ್ಮ ಸಂಸ್ಥಾನಗಳನ್ನು ಮೀಯಲು ಬಿಡಲಿಲ್ಲ.
“ಹಿಂದೂ ರಾಜನೀತಿಯ ಆದರ್ಶಗಳಿಗೆ, ಅದರ ದರ್ಶನಕ್ಕೆ ಅವರು ನಿಜವಾಗಿಯೂ ಬದ್ಧರಾಗಿದ್ದಿದ್ದರೆ ಪರಿಸ್ಥಿತಿಯು ೧೫-೨೦ ವರ್ಷಗಳ ಹಿಂದೆಯೇ ಸುಧಾರಿಸಿರುತ್ತಿತ್ತು. ಹಾಗಿದ್ದ ಪಕ್ಷದಲ್ಲಿ ಈಗ ಅವರು ಬಲವಂತವಾಗಿ ಸ್ವೀಕರಿಸಿರುವ ಮಾರ್ಗವನ್ನು ಆಗ ಅವರೇ ಸ್ವಯಂಪ್ರೇರಿತರಾಗಿ ಅಪ್ಪಿಕೊಳ್ಳುತ್ತಿದ್ದರು.
“ನಮ್ಮ ರಾಜಮಹಾರಾಜರು, ಬ್ರಿಟಿಷರು ಭಾರತದಲ್ಲಿ ಶಾಶ್ವತವಾಗಿರುತ್ತಾರೆಂದು ಅಂತರಂಗದಲ್ಲಿ ಪ್ರಾಮಾಣಿಕವಾಗಿ ನಂಬಿಕೊಂಡಿದ್ದರು. ಆ ನಂಬುಗೆಯೇ ಅವರನ್ನು ವಾಸ್ತವತೆಗೆ ಕುರುಡು ಮಾಡಿತ್ತು. ಹೀಗಾಗಿ, ಎಂದಾದರೊಂದು ದಿನ ತಮ್ಮ ದೇಶದವರೇ ಈ ಪರದೇಶಿಯ ಸಂಕೋಲೆಯನ್ನು ಕಳಚಿ ಸ್ವತಂತ್ರರಾಗುತ್ತಾರೆನ್ನುವ ನಿರೀಕ್ಷೆಯನ್ನೂ ಮಾಡಲು ಅಸಮರ್ಥರಾಗಿದ್ದರು. ಮಾತ್ರವಲ್ಲ, ತಾವು ನೇರವಾಗಿ ಆಳುತ್ತಿದ್ದ ಪ್ರಜೆಗಳೂ ಸಹ ಸ್ವತಂತ್ರವಾಗಿ ಆಲೋಚನೆ ಮಾಡುತ್ತಾರೆ, ತಮ್ಮ ನಾಲಿಗೆಯಲ್ಲೇ ಮಾತನಾಡುತ್ತಾರೆನ್ನುವ ಕಲ್ಪನೆಯೂ ಅವರಿಗೆ ಇರಲಿಲ್ಲ. ಹೀಗಾಗಿ, ಅವರ ಆ ಕಾಲದ ವಿಕೃತಿಯ ಫಲವನ್ನು ಈಗ ಅನುಭವಿಸುತ್ತಿದ್ದಾರೆ. ಇಷ್ಟು ವರ್ಷ ಅಧಿಕಾರ ಎಂದು ಭ್ರಮಿಸಿಕೊಂಡಿದ್ದ ಅವರ ಅಹಂಕಾರವು ತಮ್ಮ ಕಣ್ಮುಂದೆಯೇ ಚೂರಾಗಿದೆ.”
ಸರ್ದಾರ್ ಪಟೇಲ್ ಸಚಿವಾಲಯದ ಖಂಡನೆ
ಮತ್ತೆ ಸರ್ದಾರ್ ಪಟೇಲರ ಹಠಮಾರಿ ಧೋರಣೆಗೆ ಹಿಂದಿರುಗುವುದಾದರೆ, ಡಿ.ವಿ.ಜಿ.ಯವರ ಮಾತುಗಳ ಕೆಲವು ಆಯ್ದ ಭಾಗಗಳನ್ನು ನೋಡಬಹುದು. ಒಂದೊಂದೊಂದು ಮಾತಿಗೂ ಚಿನ್ನದ ತೂಕವಿದೆ.
“೧. ಸರ್ವಾಧಿಕಾರಿ ದೊರೆಯು ನಿಷ್ಕ್ರಮಿಸಿದ ಸ್ಥಾನವನ್ನು ಸ್ವಯಂಚಾಲಿತವಾಗಿ ಪ್ರಜಾಪ್ರಭುತ್ವವಕ್ಕೆ ತುಂಬಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರಜಾಪ್ರಭುತ್ವವು ಇನ್ನೂ ಬಾಲ್ಯಾವಸ್ಥೆಯಲ್ಲೇ ಇದೆ. ಅದು ಬೆಳೆದು ಪಕ್ವವಾಗುವ ತನಕ ನಮ್ಮ ದೇಶೀಯ ಸಂಸ್ಥಾನಗಳನ್ನು ದಕ್ಷವಾಗಿ ಪಾಲಿಸುವ ಶಕ್ತಿ ಯಾವುದು?
“೨. ನಮ್ಮ ರಾಜ್ಯವ್ಯವಸ್ಥೆಯಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳ ಸ್ಥಾನವನ್ನು ನಮ್ಮ ನೂತನ ಪ್ರಜಾಪ್ರಭುತ್ವದ ಮಂತ್ರಿಗಳ ಹಿತಾಸಕ್ತಿಗಳು ಆಕ್ರಮಿಸಿವೆ. ಸರ್ದಾರ್ ಪಟೇಲರು ನಿರಂಕುಶಪ್ರಭುತ್ವದ ವ್ರಣಗಳನ್ನು ಕಿತ್ತು ಹಾಕುವ ಘೋಷಣೆ ಮಾಡಿದರು. ಆದರೆ ಆ ಜಾಗದಲ್ಲಿ ಪ್ರಜಾಪ್ರಭುತ್ವದ ವ್ರಣಗಳು ಸ್ಥಾಪಿತವಾಗಿವೆ. ಆ ಬಗ್ಗೆ ಅವರು ಯೋಚಿಸಿದಹಾಗೆ ತೋರುವುದಿಲ್ಲ.
“೩. ಸರ್ದಾರರ ಸಚಿವಾಲಯವು ದೇಶೀಯ ಸಂಸ್ಥಾನಗಳ ವಿಷಯದಲ್ಲಿ ಈಗ ನಡೆದುಕೊಳ್ಳುತ್ತಿರುವ ರೀತಿಗೆ ಸಂವಿಧಾನ ಸಭೆಯ (Constituent Assembly) ಅಂಗೀಕಾರವಿಲ್ಲ.
“೪. ಸರ್ದಾರರ ಸಚಿವಾಲಯದ ಬಹುಪಾಲು ಪ್ರಸ್ತಾವಗಳಲ್ಲಿ, ಅದರ ಧೋರಣೆಯಲ್ಲಿ ಹಳೆಯ ಬ್ರಿಟಿಷ್ ಸರ್ಕಾರದ ಸರ್ವಾಧಿಕಾರಿ ಸಾರ್ವಭೌಮತ್ವದ ದಟ್ಟ ಛಾಯೆಯಿದೆ. ಈ ಸಚಿವಾಲಯದ ಏಜೆಂಟರ ವರ್ತನೆಯಲ್ಲಿ ಪೊಲೀಸರ ನಿರ್ದಯತೆ ಗೋಚರವಾಗುತ್ತದೆ.
ಹೀಗೆ ಉದ್ಧರಿಸುತ್ತ ಹೋದರೆ ಪಬಲಿಕ್ ಅಫ್ಫೇರ್ಸ್ ಪತ್ರಿಕೆಯ ಸುಮಾರು ಹತ್ತು ವರ್ಷಗಳ ಎಲ್ಲ ಸಂಚಿಕೆಗಳನ್ನೂ ಯಥಾವತ್ ಉದ್ಧರಿಸಬೇಕಾಗುತ್ತದೆ.
ಅಲಂಕೃತ್ಯ ಶಿರಶ್ಛೇಧಃ
ಇದರ ಒಟ್ಟು ಚಿತ್ರಣವನ್ನು ಈ ರೀತಿ ಸಂಗ್ರಹಿಸಬಹುದು: ೧೯೪೭ರ ಮಧ್ಯಭಾಗದ ಹೊತ್ತಿಗೆ ಡಿ.ವಿ.ಜಿ.ಯವರಿಗೆ ಒಂದು ಸಂಗತಿ ಸ್ಪಷ್ಟವಾಗಿಹೋಗಿತ್ತು: ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ನೆಪದಲ್ಲಿ ಹೊಸ ಕಾಂಗ್ರೆಸ್ ಪ್ರಭುತ್ವವು ಅವುಗಳನ್ನು ಬುಡದ ಸಮೇತ ಸರ್ವನಾಶ ಮಾಡುವ ಕೆಲಸಕ್ಕೆ ಕೈಹಾಕಿತ್ತು. ಇದನ್ನು ಡಿ.ವಿ.ಜಿ. “ಅಲಂಕೃತ್ಯ ಶಿರಶ್ಛೇಧಃ” ಎಂಬ ಸಾಮತಿಯ ಮೂಲಕ ಹೇಳುತ್ತಾರೆ: “ಬಲಿಕೊಡುವ ಪ್ರಾಣಿಗೆ ಮೊದಲು ಅಂದವಾಗಿ ಅರಿಶಿನದ ಲೇಪನ ಮಾಡಿ, ಹೂಗಳಿಂದ ಸಿಂಗರಿಸಿ ಪೂಜಿಸಬೇಕು.”
ಈ ಕಾರ್ಯದಲ್ಲಿ ಕಾಂಗ್ರೆಸ್ ಸರಕಾರವು ಭರ್ಜರಿಯಾಗಿ ಯಶಸ್ವಿಯಾಯಿತು ಎನ್ನುವುದು ನಮಗೆಲ್ಲ ತಿಳಿದಿರುವ ಇತಿಹಾಸ. ಈ ಸರ್ವನಾಶವು ಸಮಗ್ರವಾಗಿ ಆದದ್ದು ೧೯೫೬ರಲ್ಲಿ.
ಆ ವರ್ಷದಿಂದ ಈಚೆಗೆ ದೇಶೀಯ ಸಂಸ್ಥಾನವೆಂಬ ವ್ಯವಸ್ಥೆ ಭಾರತದಿಂದ ಅಧಿಕೃತವಾಗಿ ಕಣ್ಮರೆಯಾಯಿತು. ನಮ್ಮ ಜಯಚಾಮರಾಜೇಂದ್ರ ಒಡೆಯರೂ ಸೇರಿದಂತೆ ಎಲ್ಲ ರಾಜರಿಗೆ ಅರ್ಥಹೀನ, ಅಧಿಕಾರರಹಿತ ಹೊಸ ಪಟ್ಟ ಬಂದಿತು: ರಾಜಪ್ರಮುಖ. ಅದೇ ಮುಂದೆ ಗವರ್ನರ್ ಆಗಿ ಪುನರ್ ನಾಮಕರಣಗೊಂಡಿತು. ಒಂಬತ್ತು ವರ್ಷಗಳ ಹಿಂದೆ ಇಡೀ ಸಂಸ್ಥಾನದ ರಾಜರಾಗಿದ್ದವರು ರಾತ್ರೋರಾತ್ರಿ ಕಾಂಗ್ರೆಸ್ ಮಂತ್ರಿಗಳ, ಪುಢಾರಿಗಳ ಅಡಿಯಾಳುಗಳಾಗಿದ್ದರು. ಅವರ ಪೂರ್ವಿಕರು ಕಟ್ಟಿ ಕಾಪಾಡಿದ್ದ ದೇವಸ್ಥಾನಗಳ ಸ್ವತ್ತನ್ನು, ದಾನ-ದತ್ತಿಗಳನ್ನು ಕಾಂಗ್ರೆಸ್ಸಿಗರು ಲೂಟಿಮಾಡಿದರು. ಹೈದರ್ ಅಲಿಯ ಖಡ್ಗಕ್ಕೆ, ಟೀಪು ಸುಲ್ತಾನನ ಮತಾಂಧತೆಗೆ ಅಸಾಧ್ಯವಾಗಿದ್ದ ಕೆಲಸವನ್ನು ಸ್ವತಂತ್ರಭಾರತದ ಚೊಚ್ಚಲ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಯಿತು.
ದೇಶೀಯ ಸಂಸ್ಥಾನಗಳ ಚರಮಗೀತೆಯನ್ನು – ಇಂಗ್ಲಿಷ್ ನ epitaph, ಸಮಾಧಿಲೇಖವನ್ನು ಡಿ.ವಿ.ಜಿ. ಈ ರೀತಿ ಕನ್ನಡದಲ್ಲಿ ಬರೆದಿದ್ದಾರೆ:
“ವಿಶ್ವಾಮಿತ್ರನು ಹೊಸ ಸ್ವರ್ಗವನ್ನು ರಚಿಸುತ್ತೇನೆ, ಹೊಸ ಇಂದ್ರನನ್ನು ನಿರ್ಮಿಸುತ್ತೇನೆ ಎಂದು ಹೊರಟನಂತೆ. ಹಾಗೆ ಹೊರಟವರು ಪ್ರಪಂಚದ ಈಗಿನ ಚರಿತ್ರೆಯಲ್ಲಿ ಇಬ್ಬರು. ಮೊದಲನೆಯವರು ರಷ್ಯಾದ ಕಮ್ಯುನಿಸ್ಟರು. ಎರಡನೆಯವರು ನಮ್ಮ ಕಾಂಗ್ರೆಸ್ ನಾಯಕರು. [...]
“ದೇಶೀಯ ಸಂಸ್ಥಾನಗಳನ್ನೂ ಬ್ರಿಟಿಷರದ್ದಾಗಿದ್ದ ಇಂಡಿಯಾವನ್ನೂ ಒಟ್ಟುಗೂಡಿಸಿದ್ದು ರಾಜಾಧಿರಾಜರುಗಳ ಸ್ವಂತ ಪ್ರಯತ್ನವಲ್ಲ. ಅವರ ಪ್ರಜೆಗಳ ಪ್ರಯತ್ನಬಲವೂ ಅಲ್ಲ. ಅದು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರ ದರ್ಪದ ಹೊಡೆತ. ಮುಖ್ಯವಾಗಿ ವಲ್ಲಭಭಾಯ್ ಪಟೇಲರ ದರ್ಪಧೋರಣೆ. ಅದು ವಾಸ್ತವವಾಗಿ ಉಭಯತ್ರರ ಸಕ್ರಮ ನಿರ್ಣಯದಿಂದ ಆದದ್ದಲ್ಲ. ಅದು ಶಾಸನ ಸಂಸ್ಥೆಗಳ ಮೂಲಕವಾಗಲಿ, ಬೇರೆ ವಿಹಿತವಿಧಾನದ ಪ್ರಜಾಂಗೀಕಾರದ ಮೂಲಕವಾಗಲಿ ನಡೆದದ್ದಲ್ಲ. ಕ್ರಮಾಚಾರಣೆಯ ತಕರಾರಿನ ದಾರಿ ಪಟೇಲರಿಗೆ ಸರಿತೋರಲಿಲ್ಲ. ಅದರ ಅವಶ್ಯಕತೆಯೂ ಕಾಣಲಿಲ್ಲ.
"ಹೆಂಡತಿಯ ತಲೆಗೆ ನೆಗಡಿ ಹಿಡಿದಿತ್ತು. ಗಂಡನ ಕೈಗೆ ಸಿಟ್ಟು ಏರಿತ್ತು. ಎರಡೂ ಒಂದನ್ನೊಂದು ಸಂಧಿಸಿದ ಮೇಲೆ ಸೊರಸೊರ ಪೀಡೆ ಬಿಟ್ಟು ಹೋಯಿತು.”
ಸಮಾಪನ
ಆದರೆ ಈ epitaph ನ ಕಡೆಯ ಭಾಗದಲ್ಲಿ ಕರುಳು ಹಿಂಡುವ ಅಂಶವಿದೆ. ಇದನ್ನು ಡಿ.ವಿ.ಜಿ. ಬರೆದದ್ದು 1958ರಲ್ಲಿ ಎನ್ನುವುದು ಗಮನಾರ್ಹ.
“ಸಂಸ್ಥಾನಗಳು ಇಂಡಿಯಾದಲ್ಲಿ ಎಂದೂ ಇದ್ದವೇ ಅಲ್ಲವೋ? – ಎಂದೆನಿಸುವಂತೆ ಅವು ಈಗ ರೂಪುಗೆಟ್ಟು ನಿರ್ನಾಮವಾಗಿವೆ. ಮೂಗಿನ ಕೊಳೆಯನ್ನು ಬಿಸುಡುವ ಹುರಪಿನಲ್ಲಿ ವಜ್ರದ ಮೂಗುತಿಯನ್ನೂ ಕಳೆದದ್ದಾಗಿದೆ. ಇಷ್ಟು ಸಾಲದೆಂದು, ಹಿಂದಿದ್ದ ಪ್ರಾದೇಶಿಕ ಸೀಮೆಗಳನ್ನು ಭಾಷಾಭಿಮಾನದ ಸೋಗಿನಲ್ಲಿ ಅಸ್ತವ್ಯಸ್ತ ಮಾಡಿದ್ದಾಗಿದೆ. ಹಳೆಯ ಸ್ಥಳಾಭಿಮಾನ ಕದಲಿದೆ, ಹೊಸ ಪ್ರದೇಶಾಭಿಮಾನ ದೂರವಾಗಿದೆ. ರಾಜ್ಯವೆಂಬ ಸಂಸ್ಥೆಯ ಮೂಲ ಒಂದು ಬಗೆಯ ಮಮತಾಬಂಧನ. ಈ ಹೊತ್ತು ಅದಕ್ಕೆ ಎಲ್ಲಿಯೂ ಆಸ್ಪದ ಕಾಣದು. ಅದರಿಂದಾಗುವ ಲಾಭ ಎಲ್ಲರಿಗೂ ಬೇಕು, ಅದರ ಏಕಾಂತ ಚಿಂತೆ ಯಾರಿಗೂ ಇಲ್ಲ.”
ಕೊನೆಯ ಮಾತು ಹೇಳುವುದಾದರೆ: ದೇಶೀಯ ಸಂಸ್ಥಾನಗಳಿಗೆ ಡೆಮಾಕ್ರಸಿ ದಕ್ಕಲಿಲ್ಲ. ಅನಾದಿಕಾಲದಿಂದ ಅಲ್ಲಿ ಸಂರಕ್ಷಿಸಿಕೊಂಡು ಬಂದಿದ್ದ ಸಂಸ್ಕೃತಿಯು ವಿಕೃತಿಯಾಯಿತು.
ಇದು ಡಿ.ವಿ.ಜಿ.ಯವರ ದೇಶೀಯ ಸಂಸ್ಥಾನಗಳ ಕುರಿತಾದ ಕೃಷಿಯ ದುರಂತ ಸಾರಾಂಶ.
Concluded.