ಸಂದರ್ಭೋಚಿತತೆ, ಮನ್ನಣೆ, ಧೈರ್ಯ
ಇಲ್ಲಿ ನಾವು ಗುರುತಿಸಬೇಕಾದ ಸಂಗತಿ, ಡಿ.ವಿ.ಜಿ. ಅವರು ಆರಿಸಿಕೊಂಡ timing – ಸಂದರ್ಭ. ೧೯೧೭ರ ಹೊತ್ತಿಗೆ ಇಂಗ್ಲೆಂಡ್ ಮೊದಲನೇ ಮಹಾಯುದ್ಧದಲ್ಲಿ ತೀವ್ರವಾಗಿ ತೊಡಗಿತ್ತು. ಅದರ ಆಳ್ವಿಕೆಗೆ ಬಂದಿದ್ದ ಸರಿಸುಮಾರು ಎಲ್ಲ ವಸಾಹತುಗಳಿಂದ ಸೈನ್ಯದ ತುಕಡಿಗಳನ್ನು ಯೂರೋಪಿಗೆ ಕರೆಸಿಕೊಂಡಿತ್ತು. ಅದರಲ್ಲಿ ಸಿಂಹಪಾಲಿನ ಸೈನ್ಯ ಬಂದದ್ದು ಭಾರತದ ಸಂಸ್ಥಾನಗಳಿಂದ. ಅಂದರೆ ತಮ್ಮನ್ನು ದಬ್ಬಾಳಿಕೆ ಮಾಡುವವರನ್ನು ದಬ್ಬಾಳಿಕೆಗೊಳಗಾದವರು ತಮ್ಮ ಪ್ರಾಣ ಕೊಟ್ಟು ಕಾಪಾಡಿದರು. ಈ ಒಂದು ಅಂಶವನ್ನೇ ಇಟ್ಟುಕೊಡು ಸುಮಾರು ೧೦೦೦ ಪುಟಗಳಷ್ಟು ಸಂಶೋಧನಾಗ್ರಂಥವನ್ನು ಬರೆಯುವಷ್ಟು ಸಾಮಗ್ರಿ ದೊರಕುತ್ತದೆ. ಇದರ ಜೊತೆಗೆ ೧೯೧೭ರ ಹೊತ್ತಿಗೆ ಯುದ್ಧವು ಇನ್ನೇನು ಸಮಾಪ್ತವಾಗುವ ಹಂತ ತಲುಪಿತ್ತು. ಆಗ ನಮ್ಮ ದೇಶದ ಎಲ್ಲೆಡೆ, ಯುದ್ಧ ಮುಗಿದ ಮೇಲೆ ಬ್ರಿಟಿಷರು ತೊಲಗುತ್ತಾರೆ ಎನ್ನುವ ವಾತಾವರಣವೂ ಇತ್ತು. ಒಂದು ಪಕ್ಷ ಹಾಗೇನಾದರೂ ಆಗಿದ್ದಿದ್ದರೆ ದೇಶೀಯ ಸಂಸ್ಥಾನಗಳ ಭವಿಷ್ಯ, ಅವುಗಳ ಮುಂದಿನ ಸ್ಥಾನ ಇತ್ಯಾದಿ ಅಂಶಗಳೂ ಡಿ.ವಿ.ಜಿ. ಅವರ ಮನಸಿನಲ್ಲಿ ಕೆಲಸ ಮಾಡಿದವು ಎನ್ನುವುದಕ್ಕೆ ಅವರ ಬರವಣಿಗೆಯಲ್ಲಿ ಸಾಕಷ್ಟು ಪುರಾವೆಗಳು ದೊರಕುತ್ತವೆ.
ಗುಂಡಪ್ಪನವರು ಬಿಕನೇರ್ ಮಹಾರಾಜರಿಗೆ ಬರೆದ Memorial ಗಳಿಗೆ ಯಾವ ಸ್ತರದ ಮನ್ನಣೆ ಸಿಕ್ಕಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ನೋಡಬಹುದು. ಆಗಸ್ಟ್ ತಿಂಗಳಲ್ಲಿ ಬರೆದ ಈ Memorial ಗಳ ಎಲ್ಲ ಪ್ರತಿಗಳೂ ಅಕ್ಟೋಬರ್ ತಿಂಗಳ ಹೊತ್ತಿಗೆ ಖಾಲಿಯಾಗಿದ್ದವು. ಅದನ್ನು ಮತ್ತಷ್ಟು ಪರಿಷ್ಕಾರಗೊಳಿಸಿ ಅಕ್ಟೋಬರ್ ತಿಂಗಳಲ್ಲೇ ಇನ್ನೊಂದು ಆವೃತ್ತಿಯನ್ನು ಪ್ರಕಟಿಸಿ ಅದರ ಮುನ್ನುಡಿಯಲ್ಲಿ ಡಿ.ವಿ.ಜಿ. ಹೀಗೆ ಬರೆಯುತ್ತಾರೆ: “ಈ Memorial ಗಳಿಗೆ ರಾಷ್ಟ್ರಾದ್ಯಂತ ಅನೇಕ ನಿಯತಕಾಲಿಕೆಗಳಲ್ಲಿ, ಜರ್ನಲ್ ಗಳಲ್ಲಿ, ಪತ್ರಿಕೆಗಳಲ್ಲಿ ಹಾಗೂ ಗೌರವಾನ್ವಿತ ರಾಷ್ಟ್ರಕರರಿಂದ ಸಿಕ್ಕಿರುವ ಪ್ರೋತ್ಸಾಹ, ಮನ್ನಣೆಗೆ ನಾನು ಋಣಿಯಾಗಿದ್ದೇನೆ.”
ಆದರೆ ೧೯೧೮ರಲ್ಲಿ ಯುದ್ಧ ಮುಗಿದ ಮೇಲೆ ಬ್ರಿಟಿಷರು ಹೋಗಲಿಲ್ಲ. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಫೆಬ್ರುವರಿ ೧೯೧೮ರಲ್ಲಿ ಡಿ.ವಿ.ಜಿ. ನೇರವಾಗಿ ಭಾರತದ Secretary of State ಆಗಿದ್ದ ಮೊಂಟೆಗೂಗೆ (Montagu) ದೇಶೀಯ ಸಂಸ್ಥಾನಗಳ ಕುರಿತು ದೀರ್ಘವಾದ ಪತ್ರ ಬರೆದರು. ಅದರ ಒಂದು ತುಣುಕು:
“ನಮ್ಮ ದೇಶೀಯ ಸಂಸ್ಥಾನಗಳು ಬೇಡುತ್ತಿರುವುದು ತಮ್ಮ ನಿಷ್ಠೆಗೆ ತಕ್ಕ ಬಹುಮಾನವನ್ನಲ್ಲ. ಅಂಥ ಭ್ರಮೆ ಯಾರಿಗೂ ಇರತಕ್ಕದ್ದಲ್ಲ. ಅನಾದಿಕಾಲದಿಂದಲೂ ಭಾರತೀಯರು ಕರ್ತವ್ಯನಿರ್ವಹಣೆಯನ್ನು ಕೇವಲ ವ್ಯಾವಹಾರಿಕ ಚೌಕಟ್ಟಿಗೆ ಸೀಮಿತಗೊಳಿಸಲಿಲ್ಲ. ನಮ್ಮ ರಾಜರು ತಾವು ಈಗಿರುವ ಅಸಹಾಯಕ ಅಧೀನ ಸ್ಥಿತಿಯಿಂದ ಔನ್ನತ್ಯ ಪಡೆದು ಬ್ರಿಟಿಷರ ಸಮಾನಸ್ಕಂಧ ಸಹಭಾಗಿಗಳ ಮಟ್ಟಕ್ಕೇರಬೇಕು.”
ಆ ಕಾಲದಲ್ಲಿ ಉನ್ನತ ಬ್ರಿಟಿಷ್ ಅಧಿಕಾರಿಗೆ ಈ ರೀತಿ ಬರವಣಿಗೆಯಲ್ಲಿ ಕಡ್ಡಿಮುರಿದಂತೆ ತಿವಿಯುವುದಕ್ಕೆ ಎಂಟು ಗುಂಡಿಗೆ ಬೇಕಾಗುತ್ತಿತ್ತು.
ಇಂಥ ಎಲ್ಲ ಬರಹಗಳಲ್ಲಿ ಎದ್ದುಕಾಣುವ ಮತ್ತೊಂದು ಸಂಗತಿ: ಡಿ.ವಿ.ಜಿ. ಅವರ ತೌಲನಿಕ ವಿಶ್ಲೇಷಣೆ. ಇದಕ್ಕೂ ಒಂದು ಸ್ಪಷ್ಟ ಉದಾಹರಣೆ ಕೊಡಬಹುದು. ದೇಶೀಯ ಸಂಸ್ಥಾನಗಳ ಸ್ಥಿತಿಗತಿಗಳ ವಕ್ತಾರರಾಗಿ ಡಿ.ವಿ.ಜಿ. ಈ ಮಹತ್ತರ ಅಂಶವನ್ನು ಮುಂದಿಡುತ್ತಾರೆ – ಆ ಕಾಲಕ್ಕೂ ಈ ಕಾಲಕ್ಕೂ ಇಂಗ್ಲೆಂಡ್ ದೇಶ Constitutional monarchy – ಅಂದರೆ ಸಾಂವಿಧಾನಕ ರಾಜಪ್ರಭುತ್ವ. ಅಂದರೆ ಇಂಗ್ಲೆಂಡ್ ನ ರಾಜ/ರಾಣಿ ಆ ದೇಶದ head of the state (ರಾಷ್ಟ್ರದ ಮುಖ್ಯಸ್ಥ),; ಆದರೆ ಅಲ್ಲಿನ ಪ್ರಧಾನಮಂತ್ರಿ head of government (ಸರಕಾರದ ಮುಖ್ಯಸ್ಥ). ಇದರರ್ಥ, ಇಂಗ್ಲೆಂಡ್ ದೇಶದೊಳಗೆ ರಾಜತ್ವ ಹಾಗೂ ಪ್ರಜಾಪ್ರಭುತ್ವ ಬದಿಬದಿಯಲ್ಲಿರುವ ವ್ಯವಸ್ಥೆಯಿದೆ. ಹಾಗಿದ್ದ ಮೇಲೆ ನಮ್ಮ ದೇಶೀಯ ಸಂಸ್ಥಾನಗಳಿಗೂ ಏಕೆ ಈ ತತ್ತ್ವ ಅನ್ವಯವಾಗಕೂಡದು? ಈ ವ್ಯವಸ್ಥೆ ಇಲ್ಲಿಯೂ ಏಕೆ ಬರಕೂಡದು? ಇದು ಗುಂಡಪ್ಪನವರ ತಾರ್ಕಿಕ ಪ್ರಶ್ನೆ. ಆದರೆ ನಮ್ಮ ರಾಜ ಮಹಾರಾಜರಿಗೆ ಇಲ್ಲಿನ ಬ್ರಿಟಿಷ್ ಅಧಿಕಾರಿಗಳು ಕಾರಕೂನರಿಗಿಂತ ಕೊಂಚ ಹೆಚ್ಚಿನ ಅಂತಸ್ತು ಕೊಟ್ಟಿದ್ದರು. ಇಂಥ ಹಲವು ವೈವರೀತ್ಯಗಳನ್ನು ಡಿ.ವಿ.ಜಿ. ತಮ್ಮ ಅನೇಕ ಬರೆಹಗಳಲ್ಲಿ ಬಿಡಿಸಿ ತೋರಿಸಿದ್ದಾರೆ. ಕೆಲವು ಆಯ್ದ ಭಾಗಗಳನ್ನು ನೋಡಬಹುದು:
“ಪ್ರಜಾಪ್ರಭುತ್ವದ ಉದ್ಗಮದ ಅರ್ಥ ರಾಜಸಿಂಹಾಸನದ ನಾಶವಲ್ಲ. ರಾಜನಾದವನು ಇಡಿಯ ರಾಜ್ಯ/ರಾಷ್ಟ್ರದ ಪ್ರತೀಕನೆಂಬ ಸಂಗತಿಯನ್ನು ಪ್ರಜಾಸಮೂಹದ ಪ್ರಜ್ಞೆಯಲ್ಲಿ ಅಸಾಮಾನ್ಯವಾಗಿ ಮುದ್ರಿಸುತ್ತಾನೆ. ಈ ಪ್ರತೀಕಬಲದಿಂದ ಹೊಮ್ಮುವುದೇ ಪ್ರಜೆಗಳ ರಾಷ್ಟ್ರಭಕ್ತಿ ಹಾಗೂ ರಾಜಶಾಸನದ ಬಗೆಗಿನ ನಂಬಿಕೆ. ರಾಜನ ಈ ವ್ಯಕ್ತಿಪ್ರಭಾವ - ಘನವಾದ ನಡವಳಿಕೆಯೇ ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು ಸ್ಥಾಪಿಸಿ ಆ ಮಟ್ಟಕ್ಕೆ ಪ್ರಜೆಗಳೂ ಏರುವಂತೆ ಮಾಡುವ ಶಕ್ತಿ. ಈ ವರ್ಚಸ್ಸನ್ನು ವಿಧಿಸಲು ರಾಜನಾದವನಿಗೆ ಮಾತ್ರ ಸಾಧ್ಯ.”
“ರಾಜನಿಗಿರಬೇಕಾದ, ರಾಜನು ರೂಢಿಸಿಕೊಳ್ಳಬೇಕಾದ ಘನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಬೇಕಾದ ಅಂಶವೆಂದರೆ – ಈ ಕಾಲದಲ್ಲಿ ನಮ್ಮ ದೇಶೀಯ ಸಂಸ್ಥಾನಗಳ ದೊರೆಗಳು ಸ್ವಯಂಪ್ರೇರಿತರಾಗಿ ತಮಗೆ ತಾವೇ ಸಾಂವಿಧಾನಕ ಪದವಿಯನ್ನು ಆರೋಪಿಸಿಕೊಳ್ಳಬೇಕು. ಅದನ್ನು ಕಾಯೇನ ವಾಚಾ ಮನಸಾ ಸ್ವೀಕರಿಸಬೇಕು. ಅವರ ಈಗಿನ ಆವಶ್ಯಕತೆಯೆಂದರೆ ಕಿರೀಟಧಾರಿ ಪ್ರಜಾಪ್ರಭುತ್ವ. ಕಿರೀಟವು ಯಾವ ರಾಜಕೀಯ ಪಕ್ಷದ ಸ್ವತ್ತೂ ಅಲ್ಲ. ಇಂಥ ವ್ಯವಸ್ಥೆಯು ಅಧ್ಯಕ್ಷೀಯ (Presidential) ಸರಕಾರದ ತದ್ವಿರುದ್ಧ ವ್ಯವಸ್ಥೆ. ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಚುನಾವಣಾ ಭ್ರಷ್ಟಾಚಾರ, ದಿಕ್ಕಿಲ್ಲದ ಚಲನೆ, ಅಸ್ಥಿರ-ಅಭದ್ರ ನೀತಿಗಳು, ಕ್ಷುದ್ರ ಗುಂಪುಗಾರಿಕೆ ಸರ್ವಸಾಮಾನ್ಯ. ಈ ವ್ಯವಸ್ಥೆಯಲ್ಲಿ ಅಧ್ಯಕ್ಷನಿಗಿಂತ ಉನ್ನತ ಸ್ಥಾನದಲ್ಲಿ ಕುಳಿತು ಆತನ ತಲೆಯನ್ನು ಮೊಟಕಿ, ಇಂಥ ಎಲ್ಲ ಅವಘಢಗಳನ್ನು ಹದ್ದುಬಸ್ತಿನಲ್ಲಿಡುವ ಯಾವ ಶಕ್ತಿಯೂ ಇರುವುದಿಲ್ಲ.”
ಸಾಂಸ್ಕೃತಿಕ ಕಾಳಜಿ, ದೂರದರ್ಶಿತ್ವ
ಡಿ.ವಿ.ಜಿ.ಯವರಿಗೆ ದೇಶೀಯ ಸಂಸ್ಥಾನಗಳ ಬಗ್ಗೆ ಇದ್ದ ಕಾಳಜಿಯ ಮತ್ತೊಂದು ಪ್ರಮುಖ ಸ್ರೋತಸ್ಸು ಸಂಸ್ಕೃತಿ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಸಂಸ್ಥಾನಗಳಲ್ಲಿ ಉಳಿದುಕೊಂಡುಬಂದಿದ್ದ ಭಾರತೀಯ ಸಂಸ್ಕೃತಿಯ ಅನೂಚಾನತೆ. ಉತ್ಸವಗಳು, ಸಾಮಾಜಿಕ ನೀತಿನಿಯಮಗಳು, ಅನಾದಿಕಾಲದ ನ್ಯಾಯವ್ಯವಸ್ಥೆ, ಪರಂಪರೆ ಇತ್ಯಾದಿಗಳನ್ನು ಅಲ್ಲಿಯ ರಾಜನ ಒಂದು ಮಾತು ನಡೆಸಿಕೊಂಡು ಬಂದಿತ್ತು, ಅವುಗಳನ್ನು ಕಾಪಾಡಿತ್ತು. ಹೀಗಾಗಿ ಒಟ್ಟು ಸಮಾಜದಲ್ಲಿ ಏನೇ ತಕರಾರು-ತಾಕಲಾಟಗಳಿದ್ದರೂ ರಾಜನ ಮಾತಿನಿಂದ ಅವುಗಳು ಮುಕ್ಕಾಲುಪಾಲು ಬಗೆಹರಿಯುತ್ತಿದ್ದವು. ಹೀಗಾಗಿ ಸಮಾಜದ, ಸಂಸ್ಕೃತಿಯ ಸಾಮರಸ್ಯ ಆ ಮಟ್ಟಿಗೆ ಗಟ್ಟಿಯಾಗೇ ಇರುತ್ತಿತ್ತು. ಈ ರಾಜವಾಣಿಗಿರುವ ಅಧಿಕಾರ ಚುನಾಯಿತ ಪ್ರತಿನಿಧಿಗೆ ಇರುವುದಿಲ್ಲ; ಈಗಲೂ ಇಲ್ಲವೆನ್ನುವುದು ನಮ್ಮ ಅನುಭವವೇದ್ಯ ಸತ್ಯ. ಇಂಥ ವ್ಯವಸ್ಥೆಯನ್ನು, ಈ ಸ್ವತಸ್ಸಿದ್ಧ ಅಧಿಕಾರವನ್ನು ಒಂದರ್ಥದಲ್ಲಿ ಜ್ಞಾನೋದಿತ ರಾಜ್ಯವ್ಯವಸ್ಥೆ (Englightened monarchy) ಎನ್ನಬಹುದು. ಸುಮಾರು ೭೫ ವರ್ಷಗಳ ಹಿಂದೆ ಆರಂಭಗೊಂಡ ರಾಜ್ಯವ್ಯವಸ್ಥೆಗಳನ್ನು ನಿರ್ಮೂಲನ ಮಾಡುವ ಪ್ರಕೆಯೆಯ ಪ್ರತಿಫಲವಾಗಿ ಇಂದು ಜ್ಞಾನವೂ ಕೂಡ ನಮ್ಮ ರಾಜನೀತಿಯಲ್ಲಿ ನಿರ್ನಾಮವಾಗಿದೆ.
ಇಂಥ ದಾರುಣ ಪರಿಸ್ಥಿತಿ ಭವಿಷ್ಯದಲ್ಲಿ ಒದಗುವುದೆಂದು ಡಿ.ವಿ.ಜಿ. ಆಗಲೇ ಮನಗಂಡಿದ್ದರು ಎನ್ನುವ ಸಂಗತಿ ಅವರ ಬರವಣಿಗೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಅವರ ಈ ನಿಟ್ಟಿನ ವಾಙ್ಮಯವನ್ನು ಆಮೂಲಾಗ್ರವಾಗಿ ಪರಿಶೀಲಿಸಿದಾಗ ಹೊಮ್ಮುವ ಇನ್ನೊಂದು ಒಳನೋಟವೆಂದರೆ ಇದು: ಗುಂಡಪ್ಪನವರು ಪ್ರಪಂಚದ ಎರಡೂ ಮಹಾಯುದ್ಧಗಳ ಕಾಲದಲ್ಲಿ ಬಾಳಿದವರು. ಅವುಗಳ ವ್ಯಾಪಕ ಪರಿಣಾಮಗಳನ್ನು ಕಂಡು, ಅದರ ಸೂಕ್ಷ್ಮಗಳನ್ನು ಆಳವಾಗಿ ಚಿಂತಿಸಿದವರು. ಆ ಪರಿಣಾಮಗಳು ಭಾರತದ ಮೇಲೆ ಮಾಡಿದ ಪ್ರಭಾವ, ಅವು ಭವಿಷ್ಯದಲ್ಲಿ ಯಾವ ರೂಪ ಪಡೆಯುತ್ತವೆ, ಹೀಗೆ ನಾನಾ ಕೋನಗಳಿಂದ ಪರಿಶೀಲಿಸಿ, ಲೋಕಸಂಗ್ರಹಬುದ್ಧಿಯಿಂದ ನಮ್ಮ ಜನಕ್ಕೆ ತಿಳಿಹೇಳಿದರು.
ಇದರ ಒಂದು ಗುರುತರವಾದ ಪಾರ್ಶ್ವವನ್ನು ಇಲ್ಲಿ ಗಮನಿಸಬಹುದು.
೧೯೪೭ರಲ್ಲಿ ಬ್ರಿಟಿಷರು ಭಾರತವನ್ನು ತೊರೆದಾಗ ಇಲ್ಲಿದ್ದ ೫೬೨ ಸಂಸ್ಥಾನಗಳಿಗೆ, “ಇಂದಿನಿಂದ ನೀವೆಲ್ಲ ಸ್ವತಂತ್ರ ರಾಜರು, ನಿಮ್ಮಿಚ್ಛೆ ಬಂದಂತೆ ಮಾಡಿ” ಎಂದು ಘೋಷಿಸಿಬಿಟ್ಟರು. ಅಂದರೆ ಬ್ರಿಟಿಷ್ ಇಂಡಿಯಾ - ಪಾಕಿಸ್ತಾನವನ್ನು ಹೊರತುಪಡಿಸಿ – ೫೬೨ ಪ್ರತ್ಯೇಕ ದೇಶಗಳು ನಿರ್ಮಾಣವಾಗುವ ಪರಿಸ್ಥಿತಿ ಉಂಟಾಯಿತು. ಆದರೆ ಇದು ಹೀಗೆಯೇ ಆಗುತ್ತದೆ ಎಂದು ಡಿ.ವಿ.ಜಿ. ಅದಕ್ಕೆ ಮೂವತ್ತು ವರ್ಷ ಮುನ್ನವೇ ಮನಗಂಡಿದ್ದರು. ನಮ್ಮ ಸಂಸ್ಥಾನಗಳ ದೊರೆಗಳಿಗೆ ಇದನ್ನು ಮನದಟ್ಟು ಮಾಡಲು ಅಕ್ಷರಶಃ ಹೋರಾಡಿದರು. ಇದಕ್ಕೂ ಒಂದೆರಡು ಉದಾಹರಣೆಗಳನ್ನು ಕೊಡಬಹುದು.
೧೯೨೮ರಲ್ಲಿ ಬಾಂಬೆ ಕ್ರಾನಿಕಲ್ (Bombay Chronicle) ಪತ್ರಿಕೆಯಲ್ಲಿ ರಾಜರಿಗೆ ಹೀಗೆ ಎಚ್ಚರಿಕೆ ಹೇಳುತ್ತಾರೆ: “ಹಿಂದೂ ರಾಜನ ಅಧಿಕಾರದ ವ್ಯಾಪ್ತಿಗೆ ತಡೆಯೊಡ್ಡುತ್ತಿದ್ದ ಪುರಾತನಕಾಲದ ಸಾಮಾಜಿಕ, ರಾಜಕೀಯ ವಾತಾವರಣವು ಎಂದೋ ಸಂಪೂರ್ಣವಾಗಿ ಕಣ್ಮರೆಯಾದವು. ಆ ವಾತಾವರಣವನ್ನು ಪುನಃಸೃಷ್ಟಿ ಮಾಡಲಸಾಧ್ಯ.”
ಹೀಗಾಗಿ ಡಿ.ವಿ.ಜಿ. ತಮ್ಮ ಕಾಲಕ್ಕೆ ಈ ಕುರಿತು ಕೊಟ್ಟ ಮಂತ್ರ: ದೇಶೀಯ ಸಂಸ್ಥಾನಗಳಿಗೆ ಮುಂದಿದ್ದ ದಾರಿ ತಮ್ಮನ್ನು, ತಮ್ಮ ರಾಜ್ಯವನ್ನು ತ್ವರಿತ ಗತಿಯಿಂದ ಸುಧಾರಿಸಿಕೊಳ್ಳುವುದು. ದುರ್ದೈವ, ಮೈಸೂರು, ತಿರುವಾಂಕೂರು, ಬರೋಡ, ಬಿಕಾನೇರ್, ದುಂಗಾರ್ಪುರ್, ಉದಯಪುರ… ಇಂಥ ಕೆಲವೇ ಸಂಸ್ಥಾನಗಳನ್ನು ಬಿಟ್ಟು ಉಳಿದ ಯಾವ ಸಂಸ್ಥಾನಗಳೂ ಈ ಎಚ್ಚರಿಕೆಯನ್ನು ಪಾಲಿಸಲಿಲ್ಲ.
To be continued.