‘ಜಲಪಾತ’ದಲ್ಲಿ ಸಹ್ಯಾದ್ರಿಶ್ರೇಣಿಯ ಖಂಡಾಲಘಾಟ್‌ನ ಭವ್ಯವಾದ ವರ್ಣನೆಯಿದೆ. ಸೃಷ್ಟಿಶೀಲತೆಯ ಬಹುಸೂಕ್ಷ್ಮ ಆಯಾಮಗಳನ್ನು ಕಲೆ, ಪ್ರಕೃತಿ, ಸಂಸ್ಕೃತಿ, ಮಾನವಜೀವನವೇ ಮುಂತಾದ ಮಾಧ್ಯಮಗಳ ಮೂಲಕ ಚಿತ್ರಿಸುವ ಈ ಕಾದಂಬರಿ ಕಾವ್ಯಾತ್ಮಕತೆಯಿಂದ ವಿಶಿಷ್ಟವಾಗಿದೆ. ಶ್ರೀಪತಿ-ವಸುಂಧರೆಯರ ಬಲವದ್ ಬ್ರಹ್ಮಚರ್ಯೆ ಮುಗಿದು ಮಿಲನ ಸಫಲವಾದ ಬಳಿಕ “ಇನ್ನು ಮೇಲೆ ನಿನ್ನನ್ನು ದಿನಾ ಭೂದೇವಿ ಅಂತೀನಿ” ಎಂದು ಶ್ರೀಪತಿ ಹೇಳುತ್ತಾನೆ (ಪು. ೧೦೩). ಭೂದೇವಿ ಎಂಬುದು ವಸುಂಧರೆಗೆ ಚಿಕ್ಕ ವಯಸ್ಸಿನಿಂದ ರೂಢವಾಗಿದ್ದ ಮುದ್ದಿನ ಹೆಸರು. ಅದು ಶ್ರೀಪತಿಗೆ ನೆನಪಾದ ಸಂದರ್ಭ ಮಾರ್ಮಿಕವಾಗಿದೆ. ಇದರ ತರುಣದಲ್ಲಿಯೇ ಅವರು ‘ವಸುಂಧರೆ’ಯ ಸಂಪತ್ತಿಗಳಲ್ಲೊಂದಾದ ಬೆಟ್ಟವನ್ನು ಕಾಣಲು ಖಂಡಾಲಕ್ಕೆ ತೆರಳುತ್ತಾರೆ. ಅಲ್ಲಿಗೆ ಮತ್ತೆ ಮತ್ತೆ ಹೋಗಿಬರುತ್ತ ಮಳೆಯ ನೀರನ್ನು ಹೀರಿಕೊಂಡು ಸಮೃದ್ಧವಾದ ವನರಾಜಿಯ ಹಿನ್ನೆಲೆಯಲ್ಲಿ ಶ್ರೀಪತಿ ಬಸುರಿಯಾದ ಭೂದೇವಿಯ ಚಿತ್ರವನ್ನು ರಚಿಸುತ್ತಾನೆ. ಪ್ರಕೃತಿಯು ವಸಂತದಲ್ಲಿ ಹೂ-ಹಣ್ಣುಗಳನ್ನು ತಳೆದು ಫಲವತಿಯಾದಂತೆ ಇತ್ತ ಭೂದೇವಿಯೂ ಮಗುವನ್ನು ಹೆರುತ್ತಾಳೆ. ಇದು ಪ್ರಕೃತಿಯ ಮಡಲಿನಲ್ಲಿಯೇ ಸೃಷ್ಟಿ ಸಾಧ್ಯ ಹಾಗೂ ಸಾರ್ಥಕ ಎಂಬ ಧ್ವನಿಯನ್ನು ಹೊಮ್ಮಿಸುತ್ತದೆ. ಅಲ್ಲಿಯ ಒಂದು ವಾಕ್ಯವೃಂದ ಸ್ವಾರಸ್ಯಕರವಾಗಿದೆ:
“ಆಬೋ ಬೆಟ್ಟದ ಮಂಜಿನ ತಲೆಯು ಮುಗಿಲಿನಲ್ಲಿ ಒಂದಾಗಿಹೋಗಿದೆ. ಉದ್ದಕ್ಕೂ ಸಾಗಿರುವ ಪ್ರಪಾತವು ಆ ಪರ್ವತದ ಯೋನಿಯಂತೆ ಕಾಣುತ್ತದೆ. ಪ್ರಕೃತಿಯ ಶಕ್ತಿಪೂರ್ಣ ಸೌಂದರ್ಯವೆಂದರೆ ಇದೇ. ಅಲ್ಲಿ ಹಸುರಿನಿಂದ ಮೆರೆಯುವ ವನರಾಜಿಯು ಪ್ರಕೃತಿಯ ಕೋಮಲತೆಯನ್ನು ಪ್ರಕಟಿಸಿದರೆ, ನಮ್ಮ ಕಲ್ಪನೆಯನ್ನು ನಡುಗಿಸುವ ವಿಸ್ತಾರ ಎತ್ತರಗಳು ಅದರ ಗಾಂಭೀರ್ಯವನ್ನು ದರ್ಶಿಸುತ್ತವೆ.” (ಪು. ೧೦೫)
* * *
‘ನಾಯಿ-ನೆರಳು’ ಕಾದಂಬರಿಯಲ್ಲಿ ಜೋಗಯ್ಯನ ಗುಡ್ಡವು ಸಂನ್ಯಾಸಿಗಳ ಏಕಾಂತಜೀವನದ ಪ್ರತೀಕವಾಗಿ ತೋರುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿಯ ಬೆಟ್ಟಗಳು ಸಾಮಾನ್ಯವಾಗಿ ವಿವಿಕ್ತತೆ, ಸಾಂದ್ರತೆ, ಘನತೆ ಮುಂತಾದ ಅಂಶಗಳನ್ನು ಮನಸ್ಸಿಗೆ ತಂದುಕೊಡುತ್ತವೆ. ಜೋಗಿಹಳ್ಳಿಯ ಗುಡ್ಡವೂ ಈ ತೆರನಾದ ಪರಿಣಾಮವನ್ನು ಬೀರುತ್ತದೆ. ಹೆಸರಿನಲ್ಲಿಯೇ ಸಂನ್ಯಾಸತ್ವವನ್ನು ಧ್ವನಿಸುವ ಊರಿನ ಗುಡ್ಡ ಅಂಟಿಲ್ಲದ ಸಿದ್ಧ-ಸಾಧಕರ ನೆಲೆಯಾಗಿ ಕಂಡು ಜನ್ಮ-ಜನ್ಮಾಂತರಗಳ ಸಾಕ್ಷಿಯಾಗಿ ನಿಲ್ಲುತ್ತದೆ. ಅಲ್ಲದೆ ಅದು ಪೂರ್ವಜನ್ಮದ ನೆನಪಿರುವ ‘ಜಾತಿಸ್ಮರ’ ಕ್ಷೇತ್ರಪಾಲ-ವಿಶ್ವೇಶ್ವರನ ನಿಗೂಢತೆಯ ಚಿಹ್ನೆಯಾಗಿಯೂ ಸಲ್ಲುತ್ತದೆ.
* * *
ಜೋಗನಾಥನ ಬೆಟ್ಟ ‘ತಂತು’ ಕಾದಂಬರಿಯಲ್ಲಿಯೂ ಬರುತ್ತದೆ. ಅಲ್ಲಿ ಅದು ಪ್ರಧಾನವಾಗಿ ಹೇಮಂತ ಹೊನ್ನತ್ತಿಯ ವೈಯಕ್ತಿಕ ಜೀವನ ಹಾಗೂ ಸಂಗೀತಸಾಧನೆಗಳ ಪ್ರತೀಕವಾಗಿ ಕಾಣಿಸಿಕೊಳ್ಳುತ್ತದೆ. ಅವನು ಜೋಗಿಬೆಟ್ಟದ ಮೇಲಣ ದೇವಸ್ಥಾನದಲ್ಲಿ ಕುಳಿತು ಸಿತಾರ್ ಸಾಧನೆಯಲ್ಲಿ ತೊಡಗಿದ್ದಾಗ ಆತನ ಸಂಗೀತಕ್ಕೂ ಬದುಕಿಗೂ ಧಾರ್ಮಿಕ ಸ್ಪರ್ಶವಿರುವುದು ವ್ಯಕ್ತವಾಗುತ್ತದೆ. ಹೀಗಾಗಿಯೇ ಅವನು ಕಾಂತಿಯೊಂದಿಗೆ ಹಾಲುಕೆರೆಯ ಶಾಲೆಗೆ ಹೋದಾಗ ಅವಳನ್ನು ‘ಭಾಭಿ’ ಎಂದು ಸಂಬೋಧಿಸುತ್ತಾನೆ. ಬೆಟ್ಟದಿಂದ ಇಳಿದು, ದೈವಸಾನ್ನಿಧ್ಯದಿಂದ ದೂರವಾದಾಗ ಈ ಆಯಾಮವು ಮರೆಯಾಗಿ ಶೀತಲ್‌ಳ ಮನೆಯಲ್ಲಿ ಅವರಿಬ್ಬರ ಮಿಲನವಾಗುತ್ತದೆ. ಇನ್ನು ಹೊನ್ನತ್ತಿ ಭೌತಿಕವಾಗಿ ಬೆಟ್ಟವನ್ನು ಹತ್ತುತ್ತಿದ್ದರೂ ಸಂಗೀತಗಾರನಾಗಿ ಸಿದ್ಧಿ ಪಡೆದು ನಾದಶಿಖರವನ್ನೇನೂ ಹತ್ತಲಾಗಲಿಲ್ಲವೆಂಬುದು ಒಂದು ವಿಪರ್ಯಾಸ. ಅಲ್ಲದೆ ಪರಶುರಾಮೇಗೌಡ ಶಾಲೆಯ ಮೇಲಣ ತನ್ನ ಸಿಟ್ಟನ್ನು ತೀರಿಸಿಕೊಳ್ಳಲು ಹೊನ್ನತ್ತಿ ಇಲ್ಲದ ಹೊತ್ತಿನಲ್ಲಿ ಆತನ ಸಿತಾರನ್ನು ಪುಡಿಗುಟ್ಟಿಸುವುದೂ ದೇವಸ್ಥಾನದ ಅರ್ಚಕ ವಡೇರಯ್ಯನನ್ನು ಪೋಲೀಸರ ಮೂಲಕ ಹಿಂಸಿಸಿ ಹೆದರಿಸುವುದೂ – ರಾಜಕೀಯ ಕಾರಣಗಳಿಗೆ ಕಲೆ-ಸಂಸ್ಕೃತಿ-ಅಧ್ಯಾತ್ಮಗಳು ತಿನ್ನುವ ಪೆಟ್ಟನ್ನು ಸೂಚಿಸುತ್ತದೆ. ಇವೆಲ್ಲಕ್ಕೂ ಜೋಗನಾಥನ ಬೆಟ್ಟ ಸಾಕ್ಷಿಯಾಗಿ ನಿಲ್ಲುತ್ತದೆ.
ಹೀಗೆ ಶತಮಾನಗಳ ಸಾಕ್ಷಿಯಂತಿದ್ದ ಬೆಟ್ಟವನ್ನು ಅಲ್ಲಿ ಹುದುಗಿದ್ದ ಮ್ಯಾಂಗನೀಸ್ ಅದಿರಿನ ಆಸೆಗೆ ಹೇಳಹೆಸರಿಲ್ಲದಂತೆ ಮಾಡಲಾಗಿದ್ದು ಕಾದಂಬರಿಯ ಕೇಂದ್ರಧ್ವನಿಯಾದ ಮೌಲ್ಯಗಳ ಪತನಕ್ಕೆ ಪೂರಕವಾಗಿದೆ. ಸಾಕ್ಷಿಭಾವವನ್ನು ಮರೆತು ಅಸ್ಮಿತೆಯನ್ನು ಕಳೆದುಕೊಂಡ ವ್ಯವಸ್ಥೆಯೊಂದು ಹೇಗೆ ತನ್ನತನವನ್ನು ಮಾರಿಕೊಳ್ಳಲೂ ಹೇಸುವುದಿಲ್ಲವೆಂಬ ಧ್ವನಿಯನ್ನು ಈ ಪ್ರಕರಣದ ಕೆಲವು ವಾಕ್ಯಗಳಲ್ಲಿ ಗಮನಿಸಬಹುದು:
“ಈ ಇಡೀ ಬೋರೆ ಮತ್ತು ಬೆಟ್ಟಗಳ ಐದಾರು ಮೈಲಿ ಅಗಲ, ಎಂಟು ಮೈಲಿ ಉದ್ದದ ಪ್ರದೇಶವನ್ನು ನೂರಡಿಗಳಷ್ಟು ಆಳದವರೆಗೆ ಶೋಧಿಸಿ ನೆಲದಲ್ಲಿ ಸಿಕ್ಕುವ ಮ್ಯಾಂಗನೀಸ್ ಅದಿರನ್ನು ಲಾರಿಯಲ್ಲಿ ತಿಪಟೂರಿಗೆ ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಅಲ್ಲಿಂದ ಹಡಗಿನಲ್ಲಿ ಪೆಟ್ರೋಲಿನಿಂದ ಶ್ರೀಮಂತವಾದ ಇರಾನ್ ದೇಶಕ್ಕೆ ಕಳಿಸುತ್ತಾರಂತೆ. ಅದಿರು ಸಾಗಿಸುವುದು ದುಬಾರಿಯಾದರೆ ಇಲ್ಲೇ ಹತ್ತಿರದಲ್ಲೇ ಕಬ್ಬಿಣ ತಯಾರಿಸಿ ಅವರಿಗೆ ಕಳಿಸಬಹುದು, ಕಬ್ಬಿಣದ ಕಾರ್ಖಾನೆ ಹಾಕುವ ಬಂಡವಾಳವನ್ನು ಖರೀದಿಯ ಮುಂಗಡವಾಗಿ ಕೊಡಲೂ ಆ ದೇಶವು ಸಿದ್ಧವಿದೆಯಂತೆ.” (ಪು. ೬೯೯)
* * *
‘ತಬ್ಬಲಿಯು ನೀನಾದೆ ಮಗನೆ’ ಆರಂಭವಾಗುವುದೇ ಗೋವಿನ ಹಾಡಿನ ಪ್ರಸ್ತಾವದಿಂದ. ಅಲ್ಲಿ ಬರುವ ಕೆಲವು ಸಾಲುಗಳು ಹೀಗಿವೆ:
ರೂಢಿಯೊಳಗರುಣಾದ್ರಿಗಿರಿಯು
ನಾಡಿನೊಳಗಿಹುದೊಂದು ಬೆಟ್ಟವು
ರೂಢಿಗಂಬರ ತುಡುಕುವಂದದಿ
ನೋಡಲಾಶ್ಚರ್ಯವೆನಿಸಿತು.
ಸೃಷ್ಟಿಯೊಳಗರುಣಾದ್ರಿಗಿರಿಯು
ಬೆಟ್ಟದಾ ಬಳಸೇಳು ಗಿರಿಗಳು
ನೆಟ್ಟನೆ ಹನ್ನೆರಡು ಯೋಜನ
ದಟ್ಟೈಸಿತಾರಣ್ಯದಿ. (ಪು. ೭)
ಇಲ್ಲಿ ಬರುವ ಅರುಣಾದ್ರಿಯು ‘ಧರಣಿಮಂಡಲಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶದಿ’ ಇದೆಯೆಂದು ಗೋವಿನ ಹಾಡಿನ ಒಕ್ಕಣೆ. ಪ್ರಸ್ತುತ ಕಥೆಯ ಘಟನೆಗಳು ಜರುಗುವ ಜಾಗ ಈ ಬೆಟ್ಟದ ಬುಡದಲ್ಲಿರುವ ಕಾಳೇನಹಳ್ಳಿ. ನಮ್ಮ ಊರು, ಬೆಟ್ಟ, ಹಸುಗಳನ್ನು ಕುರಿತೇ ಹಾಡು ಹೇಳುತ್ತಿರುವುದೆಂದು ಅಲ್ಲಿಯ ಜನರ ವಿಶ್ವಾಸ. ಹೀಗೆ ನಮ್ಮ ಜನರ ಸಾಮೂಹಿಕ ಮಾನಸದಲ್ಲಿ ನೆಲೆಗೊಂಡಿರುವ ಜಾನಪದ ಗೀತವನ್ನು ಬಳಸಿಕೊಂಡು ಅಲ್ಲಿಯ ಬೆಟ್ಟವೊಂದು ಭೌಗೋಳಿಕ ಎಲ್ಲೆಯನ್ನು ಮೀರಿ ಅದರೊಂದಿಗೆ ಭಾವಬಾಂಧವ್ಯವನ್ನು ಹೊಂದಿರುವ ಜನರಿರುವ ಕಡೆಯಲ್ಲೆಲ್ಲ ಪ್ರತ್ಯಕ್ಷವಾಗುವ ಪರಿಯನ್ನು ಭೈರಪ್ಪನವರು ಅಸಾಮಾನ್ಯವಾಗಿ ಸೂಚಿಸಿದ್ದಾರೆ. ಇದು ಪರ್ಯಾಯವಾಗಿ ಪ್ರತೀಕಗಳ ಅಸೀಮ ಶಕ್ತಿವಂತಿಕೆಯನ್ನೇ ಧ್ವನಿಸಿದೆ. ಈ ಶಕ್ತಿಯಿಂದಲೇ ಭಾರತೀಯರು ಎಲ್ಲಿದ್ದರೂ ಕಲಶದ ನೀರಿನಲ್ಲಿ ಗಂಗೆಯ ಪಾವಿತ್ರ್ಯವನ್ನು ಆವಾಹಿಸುವುದು ಸಾಧ್ಯವಾಗಿದೆ. ಒಂದು ಸಂಸ್ಕೃತಿ ಸಾವಿರಾರು ವರ್ಷಗಳ ಅಸ್ತಿತ್ವದಿಂದ ರೂಪಿಸಿಕೊಂಡ ಇಂಥ ಅಪ್ರತಿಮ ಪ್ರತೀಕಗಳನ್ನು ಸಾರ್ಥಕವಾಗಿ ದುಡಿಸಿಕೊಳ್ಳುವುದು ಕಲಾವಿದನ ಕಲ್ಪನೆಯ ಕುರುಹಷ್ಟೇ ಆಗದೆ ಆತನ ಸಾಂಸ್ಕೃತಿಕ ಸ್ಥಿರತೆಯ ನಿದರ್ಶನವೂ ಆಗುತ್ತದೆ.
* * *
‘ನೆಲೆ’ ಕಾದಂಬರಿಯಲ್ಲಿ ಸ್ಕಾಟ್‌ಲ್ಯಾಂಡಿನ ಗರ್ವಿನ್ನಿನಲ್ಲಿರುವ ಬಂಡೆಯೊಂದರ ಪ್ರಸ್ತಾವವಿದೆ. ಮೃತ್ಯುವೆಂಬ ಏಕಾಂತಸತ್ಯದ ಅನಂತ ಆಯಾಮಗಳನ್ನು ವಿಶ್ಲೇಷಿಸುವ ಈ ಕೃತಿ ಗರ್ವಿನ್ ಬಂಡೆಯ ಮೂಲಕ ಮರಣಕ್ಕೊಂದು ಪ್ರತೀಕವನ್ನು ಕಟ್ಟಿಕೊಟ್ಟಿದೆ. ಸಾವಿನ ಸುತ್ತಲೇ ಸುತ್ತುತ್ತಿದ್ದ ಕಾಳಪ್ಪನ ಮನಸ್ಸು ಪ್ರಕ್ಷುಬ್ಧವಾಗಿದ್ದಾಗ ಆತನಿಗೆ ಸಮುದ್ರತಟದ ಬಂಡೆ ಮೃತ್ಯುವೇ ಮೂರ್ತಿವೆತ್ತಂತೆ ತೋರುತ್ತದೆ. ಕಲ್ಪನೆಗಳೆಲ್ಲವೂ ಕುಸಿದು ವಾಸ್ತವವೊಂದೇ ವಿಜೃಂಭಿಸುವ ಸಾವಿನ ಸ್ಥಿತಿಯನ್ನು ಮಾತಿನಲ್ಲಿ ಹಿಡಿದಿಡುವುದಾದರೂ ಹೇಗೆ? ಇದನ್ನು ಸಾಧಿಸಲು ಭೈರಪ್ಪನವರು ಎಲ್ಲ ಬಣ್ಣಗಳನ್ನೂ ನುಂಗಿನೊಣೆಯುವ ಕಪ್ಪನ್ನು ಸೂಕ್ತವಾಗಿ ವಿನಿಯೋಗಿಸಿದ್ದಾರೆ:
“ಕಪ್ಪು ಹಿನ್ನೆಲೆ, ಕಪ್ಪು ಮೋಡಗಳನ್ನು ತನ್ನ ಮೈಯಿಂದ ಹೊಮ್ಮಿಸುತ್ತಾ ಹಸಿರು ಅಲೆಗಳ ಕೆಳಗೆ ತಿಳಿಯದ ಆಳದಲ್ಲಿ ಸ್ಥಾಪಿಸಿಕೊಂಡ ಆ ಯಮಗಂಭೀರ ಬಂಡೆಯು ಬದಲಾಯಿಸಲು ಸಾಧ್ಯವಾಗದ ಸ್ವರೂಪ ಕೊಟ್ಟಿತ್ತು ನನ್ನ ಭಾವಕ್ಕೆ. ಸಾವೇ ಜೀವನದ ಅಚಲವಾದ, ಧ್ರುವವಾದ ಸತ್ಯ. ಅದನ್ನು ಮೀರಿಸಿದ ವಾಸ್ತವತೆ ಬೇರೊಂದಿಲ್ಲವೆಂಬ ಘನಭಾವ” (ಪು. ೩೧). “...ಬೇರೆಲ್ಲ ಬಣ್ಣಗಳನ್ನೂ ಶೋಧಿಸಿ ತೆಗೆದು ಕಪ್ಪೊಂದನ್ನೇ ಭಟ್ಟಿಗಟ್ಟಿಸಿದ ಬಣ್ಣ. ನನ್ನೊಳಗಿದ್ದ ಭಾವದ ಯಥಾರ್ಥ ಅಭಿವ್ಯಕ್ತಿಯ ಚಿತ್ರ ಅದೇ. ನಿರ್ಜೀವ, ನಿರ್ದಾಕ್ಷಿಣ್ಯ, ನಿರ್ದಯ ಕ್ರೂರಾತೀತ ವಿಜೃಂಭಣೆ. ಚೂಪು ಅಲಗಿನ ಕತ್ತಿಯನ್ನು ಮೇಲೆತ್ತಿರುವ ಕೊಲೆಗಡುಕನ ಮುಖದಲ್ಲಿ ಕ್ರೌರ್ಯವಿರಬಹುದು; ಆದರೂ ಅದು ಮಾನವೀಯ. ಮನುಷ್ಯನಿಲ್ಲದೆ, ಜೀವವಿಲ್ಲದೆ ಕ್ರೌರ್ಯವುಂಟೆ? ಆದರೆ ಅದು ಕ್ರೌರ್ಯಾತೀತ, ಜೀವವನ್ನೂ ನುಂಗಿಹಾಕುವ ಉಜ್ಜುಗಿಸುವಿಕೆಯಿದ್ದರೂ ನಿನ್ನನ್ನು ಕೊಂದು ನನಗೇನಾಗಬೇಕೆಂಬ ಉಪೇಕ್ಷೆ” (ಪು. ೩೨).
ಹೀಗೆ ಕಾಳಪ್ಪನಿಗೆ ಮರಣದ ಮುನ್ನುಡಿಯಂತೆ ಕಂಡ ಬಂಡೆ ಅವನೊಡನಿದ್ದ ಮೆಕ್‌ಡೊನಾಳ್ಡ್ಗೆ ಜನನೇಂದ್ರಿಯದಂತೆ ತೋರುತ್ತದೆ! ಇದು ಹುಟ್ಟು-ಸಾವುಗಳು ಒಂದೇ ನಾಣ್ಯದ ಎರಡು ಮುಖಗಳೆಂಬ ಧ್ವನಿಯನ್ನು ಮಾರ್ಮಿಕವಾಗಿ ಹೊರಡಿಸುತ್ತದೆ.
* * *
ಭೈರಪ್ಪನವರ ಕಲಾಕಾಂತಿಯ ಅತ್ಯುಜ್ಜ್ವಲ ರೂಪಗಳಲ್ಲಿ ಒಂದಾದ ‘ಮಂದ್ರ’ ಕಾದಂಬರಿಯಲ್ಲಿ ಗೋದಾವರೀನದಿಯು ಉದ್ಗಮಿಸುವ ಶಿಖರವೊಂದರ ಉಲ್ಲೇಖವಿದೆ. ತ್ರ್ಯಂಬಕೇಶ್ವರದಲ್ಲಿಯ ಈ ಶಿಖರ ಮೋಹನ್‌ಲಾಲ್‌ನ ಸಂಗೀತಸಾಧನೆಯ ಸಂಕೇತವಾಗಿ ಕಾಣುತ್ತದೆ. ವ್ಯಕ್ತಿಯಾಗಿ ಆತ ಎಷ್ಟು ಪತಿತನಾಗಿ ತೋರಿದರೂ ಸಂಗೀತದ ಮಟ್ಟಿಗೆ ಸತತವಾಗಿ ಊರ್ಧ್ವಗತಿಯನ್ನು ಹೊಂದಿದವನು ಎಂಬುದು ಈ ಪ್ರತಿಮೆಯ ಮೂಲಕ ಸ್ಪಷ್ಟವಾಗುತ್ತದೆ. ಆ ಬೆಟ್ಟವನ್ನು ಏರುತ್ತ ಕ್ರಮಕ್ರಮವಾಗಿ ಶ್ರುತಿ-ಲಯಗಳ ಸೋಪಾನಗಳನ್ನೂ ಮುಮ್ಮೆಟ್ಟಿ ಗೋದಾವರಿಯೆಂಬ ಹೊಸ ರಾಗವನ್ನೇ ಕಂಡುಕೊಂಡನೆಂದು ತಿಳಿಯುತ್ತದೆ. ನುರಿತ ಕಾದಂಬರೀಕಾರರು ಪಾತ್ರಗಳನ್ನು ಕೇವಲ ಕಪ್ಪಾಗಿಯೋ ಕೇವಲ ಬಿಳುಪಾಗಿಯೋ ಚಿತ್ರಿಸದೆ ಶಬಲತೆಯ ಸೆಲೆಯಾಗಿ ಕಾಣಿಸುತ್ತಾರೆ. ಈ ನಿಟ್ಟಿನಲ್ಲಿ ಅಗ್ರಗಣ್ಯರಾದ ಭೈರಪ್ಪನವರು ಮೋಹನ್‌ಲಾಲ್‌ನ ಒಂದು ಆಯಾಮದ ಋಜುತೆಯನ್ನೂ ಸರಳತೆಯನ್ನೂ ನಿರೂಪಿಸಲು ತ್ರ್ಯಂಬಕೇಶ್ವರದ ಪರ್ವತವನ್ನು ಬಳಸಿಕೊಂಡಿದ್ದಾರೆ; ಒಟ್ಟಂದದಲ್ಲಿ ಕಾದಂಬರಿಯ ಸಂಕೀರ್ಣತೆಯನ್ನು ಮುಗಿಲಿಗೇರಿಸಿದ್ದಾರೆ.
* * *
ಹಿಮಾಲಯದ ಬಗೆಗೆ ಭೈರಪ್ಪನವರಿಗೆ ಹೇಳತೀರದಷ್ಟು ಆದರ, ಆರಾಧನೆ. ಇದನ್ನು ಕುರಿತ ಅವರ ಮಾತುಗಳನ್ನೇ ಕಾಣಬಹುದು:
“ಹಿಮಾಲಯದ ಘನತೆ ಗಾಂಭೀರ್ಯ ಅಧ್ಯಾತ್ಮದ ಅರಿವನ್ನು ಎಚ್ಚರಿಸಿ ರೂಪಕೊಡುವ ಗುಣಗಳು ಬೇರೆ ಯಾವ ಬೆಟ್ಟ ಪರ್ವತಗಳಲ್ಲೂ ನನ್ನ ಅನುಭವಕ್ಕೆ ಬಂದಿಲ್ಲ ... ನನ್ನ ಮನಸ್ಸು ಭಾರತದ ಪುರಾಣ ಕಾವ್ಯ ಅಧ್ಯಾತ್ಮಗಳನ್ನು ಹೀರಿ ಬೆಳೆದಿರುವುದರಿಂದ ಹೀಗನ್ನಿಸಬಹುದು ... [ಇದನ್ನು] ಒಪ್ಪಿಕೊಳ್ಳಲು ನನಗೆ ಯಾವ ಸಂಕೋಚವೂ ಇಲ್ಲ” (ಭಿತ್ತಿ, ಪು. ೫೬೫). “ನನ್ನ ಜೀವನದಲ್ಲಿ ಕಲಮಲವೆದ್ದಾಗ, ಅರ್ಥವೇ ಕಾಣದಂಥ ಬೇಸರ ಕಾಣಿಸಿದಾಗ ಹಿಮಾಲಯಕ್ಕೆ ಹೋಗಿದ್ದೇನೆ. ಅಲ್ಲಿ ನನ್ನ ಪ್ರಜ್ಞೆಯು ಉನ್ನತಮಟ್ಟಕ್ಕೆ ಏರಿದೆ; ಜೀವನದ ಸಮಸ್ಯೆಗಳೆಲ್ಲ ಇಷ್ಟೆ; ನನಗೇನೋ ಮೊಟ್ಟಮೊದಲಿಗೆ ಆಗಿಲ್ಲ, ಎಂಬ ವಿವರಣೆ ಅಲ್ಲಿ ಸಿಕ್ಕಿದೆ.” (ಭಿತ್ತಿ, ಪು. ೫೬೫-೬೬)
ಹಿಮಾಲಯವು ಅವರನ್ನು ಎಷ್ಟು ಕಾಡಿದೆ, ಕಾಡುತ್ತದೆ ಎಂದು ತಿಳಿಯುವುದಕ್ಕೆ ಅವರ ಆತ್ಮಚರಿತ್ರೆಯಲ್ಲಿ ಉಲ್ಲೇಖಗೊಂಡಿರುವ ಏಕಮೇವ ಪದ್ಯ ಹಿಮಾಲಯವನ್ನು ಕುರಿತದ್ದೆಂಬುದಷ್ಟೇ ಸಾಕಾದೀತು. ಅದು ನಮ್ಮ ರಾಷ್ಟ್ರಕವಿ ಕಾಳಿದಾಸನ ‘ಕುಮಾರಸಂಭವ’ ಮಹಾಕಾವ್ಯದ ಮೊದಲ ಪದ್ಯ:
ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ
ಹಿಮಾಲಯೋ ನಾಮ ನಗಾಧಿರಾಜಃ |
ಪೂರ್ವಾಪರೌ ತೋಯನಿಧೀ ವಗಾಹ್ಯ
ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ||
(ಬೆಟ್ಟಗಳ ಒಡೆಯ, ದೇವತಾತ್ಮ ಹಿಮಾಲಯವು ಉತ್ತರದಿಕ್ಕಿನಲ್ಲಿ ನೆಲಸಿದೆ. ಅದು ಪೂರ್ವ ಮತ್ತು ಪಶ್ಚಿಮಸಾಗರಗಳಲ್ಲಿ ಮಿಂದೆದ್ದು ಇಡಿಯ ಭೂಮಿಯನ್ನು ಅಳೆಯುವ ಮಾನದಂಡದಂತೆ ಕಾಣುತ್ತದೆ.)
ಸ್ವಯಂ ಶ್ರೀಕೃಷ್ಣನೇ ಗೀತೆಯ ವಿಭೂತಿಯೋಗದಲ್ಲಿ “ಸ್ಥಾವರಾಣಾಂ ಹಿಮಾಲಯಃ” (೧೦.೨೫) ಎಂದು ಹೇಳಿರುವಾಗ ಅದು ಭೈರಪ್ಪನವರನ್ನು ಕಾಡದೆ ಬಿಟ್ಟೀತೇ? ಈ ವಿಭೂತಿಯನ್ನು ಕುರಿತ ತಮ್ಮ ಪ್ರೀತಿಗೆ ಕಲ್ಪನೆಯ ಪರಿಮಳವನ್ನು ಬೆರೆಸಿ ‘ನಿರಾಕರಣ’, ‘ಪರ್ವ’ ಮತ್ತು ‘ಯಾನ’ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ.
‘ನಿರಾಕರಣ’ದಲ್ಲಿ ನಿಸ್ಸಂಗಾನಂದನಾದ (ಆಗಲು ಬಯಸಿದ?) ನರಹರಿಯ ಆಧ್ಯಾತ್ಮಿಕ ಸಾಧನೆಯ ಸಂಕೇತವಾಗಿ ಹಿಮಾಲಯವು ಬರುತ್ತದೆ. ಕೇದಾರವನ್ನು ಕಾಣಲು ಕೊರೆಯುವ ಚಳಿಯಲ್ಲಿಯೇ ಹಿಮಾಲಯವನ್ನು ಹತ್ತಲು ಉದ್ಯುಕ್ತನಾಗುವ ನರಹರಿ ಮೇಲೇರಿ ಬಾರಾಮಾಸಿ ಮಹಾರಾಜರ ದರ್ಶನ ಪಡೆಯುವ ಹೊತ್ತಿಗೆ ಉಸಿರು ಹಿಡಿಯಲಾರದೆ ಕುಸಿಯುತ್ತಾನೆ. ಇದು ಶುದ್ಧ ಸಿದ್ಧಿಯ ಎದುರು ಅರೆಬರೆಯಾದ ಸಾಧನೆ ಮಟ್ಟಸ ಮಲಗುತ್ತದೆಂಬ ಧ್ವನಿಯನ್ನು ಹೊಂದಿದೆ. ತಪಸ್ಸು ಮಾಡಲು ಜನರು ಹಿಮಾಲಯಕ್ಕೇ ಏಕೆ ಬರುತ್ತಾರೆ ಎಂಬ ತನ್ನ ಪ್ರಶ್ನೆಗೆ “ಹೆಪ್ಪುಗಟ್ಟುಕ್ಕೆ” (ಪು. ೮೨) ಎಂಬ ಉತ್ತರವನ್ನು ಬಾರಾಮಾಸಿ ಮಹಾರಾಜರಿಂದ ಪಡೆದರೂ ಅದನ್ನು ಸಾಧಿಸಲಾಗದೆ ನರಹರಿ “ಮೊದಲು ಇಲ್ಲಿಂದ ಹೊರಟುಬಿಡಬೇಕು ... ಎಂಥದಾದರೂ ಸರಿ, ನೀರು ಎನ್ನುವುದು ದೊರೆತರೆ ಮೈಗೆ ಸ್ನಾನ ಮಾಡಬೇಕು” (ಪು. ೮೯) ಎಂದು ಚಿಂತಿಸಿ ಕೆಳಗಿಳಿಯುತ್ತಾನೆ. ಹೆಪ್ಪುಗಟ್ಟಲು ಹೊರಟವನು ಹರಿಯುವ ನೀರನ್ನು ಹುಡುಕಹೊರಡುತ್ತಾನೆ. ಮುಂಬೈಯಿಯ ‘ಚೆಂಬೂರಿನ ಅಣಿಕ್’ ಗುಡ್ಡದ ಮೇಲೆ ನರಹರಿಗೆ ಸಿದ್ಧಿಸುತ್ತಿದ್ದ ಪ್ರಶಾಂತಿ ನಿಸ್ಸಂಗಾನಂದನಿಗೆ ಹಿಮಾಲಯದಲ್ಲಿ ದೊರಕದೆಹೋಯಿತು! ಆ ಎತ್ತರದಲ್ಲಿ ಅವನು ಮಾಡಿದ್ದೆಲ್ಲ ರಜಾಯಿ ಕವಿಚಿ ಆಲೂಗಡ್ಡೆ ತಿಂದದ್ದು ಮಾತ್ರ ಎಂಬುದನ್ನು ನೆನೆದಾಗ ಆಧಿಭೌತಿಕ ಉನ್ನತಿ ಆಧ್ಯಾತ್ಮಿಕ ಉನ್ನತಿಯನ್ನು ತಂದೇತೀರುವುದು ಎಂಬುದರ ಅಪರಿಪೂರ್ಣತೆ ಅರಿವಾಗುತ್ತದೆ.
‘ಪರ್ವ’ದ ಅನೇಕ ಸನ್ನಿವೇಶಗಳು ಹಿಮಾಲಯದಲ್ಲಿಯೇ ಸಾಗುತ್ತವೆ. ಕಾದಂಬರಿಯ ವಿಶಾಲತೆಗೆ, ಅದರ ಆಶಯದ ಎತ್ತರಕ್ಕೆ ಸರಿ ಹೊಂದುವಂತೆ ಹಿಮಾಲಯದ ಪರಿಸರ ಸಲ್ಲುತ್ತದೆ. ಪ್ರಧಾನವಾಗಿ ಕುಂತಿಯ ಪಾತ್ರದೊಡನೆ ಸಮೀಕೃತವಾದ ಹಿಮಾಲಯ ಆಕೆಯ ಮನಃಸ್ಥೈರ್ಯವನ್ನು, ಅವಳು ತನ್ನ ಜೀವನದಲ್ಲಿ ಅನುಭವಿಸಿದ ನಿಡಿದಾದ ಕಷ್ಟಪರಂಪರೆಗಳನ್ನು ಬಲುಸೊಗಸಾಗಿ ಧ್ವನಿಸುತ್ತದೆ. “ಅಧರ್ಮ ನಾಲಗೆಯಲ್ಲಿ ಗೆಲ್ಲಬಹುದು. ಯುದ್ಧದಲ್ಲಿ ಗೆಲ್ಲಲಾರದು. ಕುಂತಿ ಸೋಲುವುದಿಲ್ಲ” (ಪು. ೬೨) ಎಂಬ ಮಾತುಗಳಲ್ಲಿ ಅವಳ ಗಟ್ಟಿತನ ತೋರುತ್ತದೆ. ದೇವವೈದ್ಯರಿಂದ ಔಷಧ ಪಡೆದು ಪೌರುಷವನ್ನು ಊರ್ಜಿತವಾಗಿಸಿಕೊಳ್ಳಬೇಕೆಂಬ ಪಾಂಡುವಿನ ಬಯಕೆಯಿಂದ ಕಸಿವಿಸಿಗೊಂಡು “ಈತನಿಗೆ ಬಿಡಿಸಿ ಹೇಳಿದರೆ ನೊಂದುಕೊಳ್ಳುತ್ತಾನೆ ... ನನ್ನಲ್ಲಿ ನಾನು ನಿಷ್ಕಾಮಿಯಾಗಿರಬೇಕು. ಈತನ ಆಶೆಯನ್ನು ಚಿವುಟಬಾರದು. ಉತ್ಸಾವನ್ನು ಮುರುಟಿಸಬಾರದು, ನಿಶ್ಚಯಿಸಿದೆ. ನಿಶ್ಚಯ ಸುಲಭ” (ಪು. ೬೧-೬೨) ಎಂದು ಅವಳು ಆಲೋಚಿಸುವಲ್ಲ್ಲಿ ಅಸಹಾಯಕತೆ ವ್ಯಕ್ತವಾಗುತ್ತದೆ. ಇದರಂತೆಯೇ ಕರ್ಣನ ನೆನಪಾಗಿ “ಕುಂತಿ ಸೋಲಬೇಕು ಹೆತ್ತ ಮಗನೆದುರಿಗೆ” (ಪು. ೬೨) ಎಂಬಲ್ಲಿ ಕಳವಳ ಕಂಡುಬರುತ್ತದೆ. ಈ ಎಲ್ಲ ಮಾತುಗಳೂ ಒಂದೇ ಚಿಂತನಧಾರೆಯ ಹನಿಗಳಂತೆ ತೋರುವುದು ಬಗೆಬಗೆಯ ಎತ್ತರದ ಶಿಖರಗಳ ಸಮೂಹವಾಗಿ ಮೂಡಿದ ಹಿಮಾಲಯದ ಸಾದೃಶ್ಯವನ್ನು ಸಫಲಗೊಳಿಸುತ್ತದೆ.
“ಪರ್ವತಗಳೇ ಹಾಗೆ, ಕಾರಣವಿಲ್ಲದೆ ದುಃಖವನ್ನು ಮರುಕಳಿಸುತ್ತವೆ” (ಪು. ೬೨) ಎಂದು ಅವಳಿಗೆ ತೋರಿ ನೆನಪುಗಳ ಸುರುಳಿ ಬಿಚ್ಚಿಕೊಳ್ಳುತ್ತದೆ. “ಹಿಮಾಲಯಕ್ಕೆ ಹೋದ ಮೇಲೆ ತಾನೆ ನನಗೂ ಅವನಿಗೂ ದಾಂಪತ್ಯಭಾವ ಹುಟ್ಟಿದ್ದು” (ಪು. ೫೯) ಎಂದು ತನ್ನ ಗಂಡ ಪಾಂಡುವನ್ನು ಕುರಿತು ಆಲೋಚಿಸುತ್ತ ಅಲ್ಲಿಯೇ ಅವನು ತನ್ನನ್ನು ‘ಪೃಥಾ’ ಎಂದು ನಿಯತವಾಗಿ ಕರೆಯಲು ಮೊದಲುಮಾಡಿದುದನ್ನು ನೆನಪಿಸಿಕೊಳ್ಳುತ್ತಾಳೆ: “ಕುಂತೀ, ಅಪ್ಪನ ದೇಶದ ಹೆಸರಿನಿಂದ ಹೆಂಡತಿಯನ್ನು ಕರೆಯುವುದು ಆರ್ಯರಾಜರ ಪದ್ಧತಿ. ಇನ್ನು ಮೇಲೆ ನಿನ್ನ ಹುಟ್ಟುಹೆಸರಿನಿಂದಲೇ ಕರೀತೀನಿ, ಪೃಥಾ ಅಂತ. ನಿನ್ನ ಮೈಕಟ್ಟು ನೋಡಿದರೆ ನನಗೆ ಹೆಮ್ಮೆಯಾಗುತ್ತೆ.” (ಪು. ೫೯)
‘ವಿಸ್ತಾರವಾದುದು’ ಎಂಬರ್ಥದ ಪೃಥಾಪದದಿಂದಲೇ ಕುಂತಿಯನ್ನು ಕರೆಯಬೇಕೆಂದು ಹಿಮಾಲಯದ ಆಕಾಶಾಯತ ಪ್ರದೇಶದಲ್ಲಿ ಪಾಂಡುವಿಗೆ ತೋರಿದುದು ಸಮುಚಿತವಾಗಿದೆ. ಈ ಮಾತನ್ನವನು ಮರ್ತ್ಯಲೋಕದ ತುದಿಯಲ್ಲಿ ನಿಂತು ಆಡಿದನೆಂಬುದನ್ನು ಗಮನಿಸಿದಾಗ ಇಡಿಯ ಪ್ರಸಂಗದ ಉತ್ಕಟತೆಗೆ ಹಿಮಾಲಯವು ಮೀಟುಗೋಲಾಗಿ ಒದಗಿಬಂದಿರುವುದು ಸ್ಪಷ್ಟವಾಗುತ್ತದೆ.
ಭೀಮನಿಗೂ ಬೆಟ್ಟದ ಹಿನ್ನೆಲೆಯಲ್ಲಿಯೇ ನೆನಪುಗಳು ಮರುಕಳಿಸುವುದು ಅವನ ವಜ್ರವಪುವಿಗೆ ಸಹಜವಾಗಿದೆ. ರಾಕ್ಷಸಸೇನೆಯನ್ನು ಬೇಡಲು ಮತ್ಸ್ಯದೇಶದ ಉತ್ತರಭಾಗದಲ್ಲಿರುವ ಉಪಪ್ಲಾವ್ಯನಗರದ ಮೂಲಕ ಹಿಡಿಂಬನಾಡಿಗೆ ತೆರಳುವಾಗ “ಮತ್ಸ್ಯದೇಶ ಅಂದರೆ ಗುಡ್ಡಗಳು” (ಪು. ೧೦೯) ಎಂದು ಅವನಿಗೆ ತೋರುತ್ತದೆ.
ಒಟ್ಟಿನಲ್ಲಿ ‘ಪರ್ವ’ದ ಉದ್ದಗಲಕ್ಕೂ ಅಲ್ಲಿಯ ಪಾತ್ರಗಳ ಜೊತೆ ಪರ್ವತವೂ ಸಜೀವ ಪಾತ್ರವಾಗಿ ಬೆಳಗುತ್ತದೆ.
‘ಯಾನ’ ಕಾದಂಬರಿಯಲ್ಲಿ ಹಿಮಾಲಯದ ಮತ್ತೊಂದು ಬಗೆಯ ಚಿತ್ರಣವಿದೆ. ಕಾಲಕಾಲಕ್ಕೆ ಜನರ ಜೀವನಪದ್ಧತಿಗಳು ಬದಲಾದಂತೆ ಪ್ರಕೃತಿಯ ಜೊತೆಗಿನ ಅವರ ಒಡನಾಟ, ಅದನ್ನವರು ಕಾಣುವ ಬಗೆ ಹೇಗೆ ಮಾರ್ಪಡುತ್ತದೆಂಬುದನ್ನು ಇಲ್ಲಿ ಸೂಚಿಸಲಾಗಿದೆ. ಹಿಂದೆ ಹಲವು ದಿನಗಳ, ತಿಂಗಳುಗಳ ಕಾಲ ಕಾಲ್ನಡಿಗೆಯಲ್ಲಿಯೇ ಹಿಮಾಲಯವನ್ನು ಏರಿ ಕೊನೆಗೆ ಕೇದಾರನಾಥನ ದರ್ಶನ ಪಡೆಯುತ್ತಿದ್ದ ಜನರ ಸಂಕಲ್ಪಶಕ್ತಿಯನ್ನೂ ಅದರ ಮೂಲಕ ಲಭಿಸುತ್ತಿದ್ದ ಧನ್ಯತೆಯನ್ನೂ ವರ್ಣಿಸಿ ಆ ಬಳಿಕ ಆಧುನಿಕ ಕಾಲದಲ್ಲಿ ಹೆಲಿಕಾಪ್ಟರಿನ ಮೂಲಕ ದೇವಾಲಯದ ಎದುರೇ ಬಂದಿಳಿಯುವ ಭಕ್ತರ ‘ಇನ್ಸ್ಟೆಂಟ್’ ಮನೋಭಾವದ ಪೇಲವತೆಯನ್ನು ಲೇಖಕರು ಸೂಚಿಸುತ್ತಾರೆ. ಅಲ್ಲದೆ ಕೆಲವು ವರ್ಷಗಳ ಹಿಂದೆ ತನ್ನ ಸೋದರಿಯೊಡನೆ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಸುದರ್ಶನ ಬಳಿಕ ಇಂಗಾಳ ಜೊತೆ ಭೋಗ-ವಿಲಾಸಗಳನ್ನು ಅನುಭವಿಸಲು ಅಲ್ಲಿಗೇ ಹೋಗುವ ವಿಪರೀತ ಚಿತ್ರವೂ ಇದೆ.
* * *
ಡಾ|| ಎಸ್. ಎಲ್. ಭೈರಪ್ಪನವರ ಪರ್ವತಪ್ರೀತಿ ಹಲವು ರೀತಿಯಲ್ಲಿ ವ್ಯಕ್ತವಾಗುತ್ತದೆ. ಇದಕ್ಕೊಂದು ಐತಿಹಾಸಿಕ ನಿದರ್ಶನವಿದೆ: ಮಾನಸಸರೋವರಕ್ಕೆ ಯಾತ್ರೆಯನ್ನು ಅಧಿಕೃತವಾಗಿ ಪ್ರಾರಂಭಿಸಿದಾಗ ಅಲ್ಲಿಗೆ ಮೊದಲು ತೆರಳಿದ ಪಯಣಿಗರ ಪೈಕಿ ಭೈರಪ್ಪನವರೂ ಒಬ್ಬರು! ಇದು ಅವರ ವ್ಯಕ್ತಿತ್ವಕ್ಕೊಂದು ಗಟ್ಟಿತನವನ್ನು ತಂದಿತ್ತು ಈ ಗುಣವು ಅವರ ಕಾದಂಬರಿಗಳಲ್ಲಿಯೂ ನಿಚ್ಚಳವಾಗಿ ಗೋಚರಿಸುವಂತೆ ಮಾಡಿದೆ. ಈ ಗಟ್ಟಿತನದ ಬುನಾದಿ ಮಾನವಜೀವನದ ವಾಸ್ತವದ ಬಗೆಗೆ, ಆ ವಾಸ್ತವದ ಜೀವಾಳವಾದ ಭಾವಗಳ ಬಗೆಗೆ ಭೈರಪ್ಪನವರಿಗಿರುವ ಅನ್ಯೂನವಾದ ತಿಳಿವೇ ಎಂಬುದರಲ್ಲಿ ಸಂಶಯವಿಲ್ಲ. ಆ ತಿಳಿವಿಗೆ, ಅದರ ಮೂಲಕ ನಮಗೆ ಸಂದ ಸಂತೋಷಕ್ಕೆ ಪ್ರತಿಯಾಗಿ ನಾವು ಏನನ್ನು ತಾನೆ ಸಲ್ಲಿಸಬಲ್ಲೆವು? “ನಮಸ್ಕುರ್ಮೋ ಯಥಾಬಲಮ್”.
(ಈ ಲೇಖನಕ್ಕೆ ವಿಷಯವನ್ನು ಸೂಚಿಸಿ ಪ್ರತಿಯೊಂದು ಹಂತದಲ್ಲಿಯೂ ಸೂಕ್ತವಾದ ಸಲಹೆಗಳನ್ನಿತ್ತು ಪ್ರಚೋದಿಸಿದ ಶತಾವಧಾನಿ ಡಾ|| ಆರ್. ಗಣೇಶ್ ಅವರಿಗೆ ನಾನು ಅತ್ಯಂತ ಕೃತಜ್ಞ.)
Concluded.