[07.04.2007ರಂದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ನೂರೈವತ್ತನೆಯ ವರ್ಷದ ಉತ್ಸವದ ಅಂಗವಾಗಿ ಖ್ಯಾತ ಇತಿಹಾಸಕಾರರಾದ ಡಾ॥ ಕೆ. ಶ್ರೀಪತಿ ಶಾಸ್ತ್ರಿಯವರ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಿತ್ತು. ಅವರ ಉಪನ್ಯಾಸವನ್ನು ಶ್ರೀ. ಎಸ್. ಆರ್. ರಾಮಸ್ವಾಮಿಯವರು ಲಿಪೀಕರಿಸಿದ ಕೃತಿ ಇದಾಗಿದೆ.]
ನಮ್ಮ ದೇಶ ತುಂಬಾ ಪ್ರಾಚೀನವಾದದ್ದು, ನಿನ್ನೆ ಮೊನ್ನೆ ಹುಟ್ಟಿದ ದೇಶವಲ್ಲ ಇದು. ಸುಮಾರು ನೂರೈವತ್ತು ವರ್ಷದ ಹಿಂದೆ ಜರ್ಮನಿ ದೇಶ ಇರಲಿಲ್ಲ; ಮುನ್ನೂರು ವರ್ಷದ ಹಿಂದೆ ಅಮೆರಿಕ ದೇಶ ಇರಲಿಲ್ಲ; ಎರಡು ಸಾವಿರ ವರ್ಷದ ಹಿಂದೆ ಇಂಗ್ಲೆಂಡ್ ದೇಶ ಕೂಡ ಇರಲಿಲ್ಲ. ನಮ್ಮ ಭಾರತವಾದರೋ, ಎಷ್ಟು ಹಳೆಯದೆಂದು ಲೆಕ್ಕ ಹಾಕುವುದೇ ಸಾಧ್ಯವಿಲ್ಲ. ಪಾಶ್ಚಾತ್ಯರು ಯೇಸುಕ್ರಿಸ್ತನಿಂದಾರಂಭಿಸಿ ಕಾಲಗಣನೆ ಮಾಡುತಾರೆ. ಯೇಸುಕ್ರಿಸ್ತನಿಗಿಂತ ನಾಲ್ಕು ನೂರು ವರ್ಷ ಹಿಂದೆಯೇ ಗೌತಮಬುದ್ಧ ಈ ದೇಶದಲ್ಲಿ ಹುಟ್ಟಿದ್ದ. ಗೌತಮಬುದ್ಧ ಈ ದೇಶದ ಸಮಾಜದಲ್ಲಿ ಬೆಳೆದಿದ್ದ ಕೆಲವು ದೋಷಗಳ ವಿರುದ್ಧ ಬಂಡಾಯ ನಡೆಸಿದ. ಇದರ ತಾತ್ಪರ್ಯ – ಬುದ್ಧನಿಗೂ ಹಿಂದೆ ಈ ದೇಶದಲ್ಲಿ ಸಮಾಜ ಇತ್ತು, ಆ ವೇಳೆಗೇ ಆ ಸಮಾಜದಲ್ಲಿ ಕೆಲವು ದೋಷಗಳು ತಲೆದೋರಿದ್ದವು. ಹೀಗೆ ಹಿಂದುಹಿಂದಕ್ಕೆ ನೋಡುತ್ತ ಹೋದರೆ ನಮಗೆ ಸ್ಪಷ್ಟವಾಗುವ ಸಂಗತಿ – ಇದು ತುಂಬಾ ಪ್ರಾಚೀನವಾದ ದೇಶವೆಂಬುದು.
ಯಾವುದೇ ದೇಶದಲ್ಲಿ ಹತ್ತಾರು ಘಟನೆಗಳು ನಡೆಯುತ್ತಿರುತ್ತವೆ. ಎಂಥೆಂಥ ಪ್ರಸಂಗಗಳೋ ಬರುತ್ತಿರುತ್ತವೆ. ಹಾಗೆ ನಮ್ಮ ದೇಶದ ಮೇಲೆ ಒಬ್ಬರಾದ ನಂತರ ಇನ್ನೊಬ್ಬರು ಅನೇಕ ಪರಕೀಯರಿಂದ ಆಕ್ರಮಣಗಳು ನಡೆದವು. ಮೊದಲು ಬಂದವನು ಅಲೆಕ್ಸಾಂಡರ್. ಅವನಿಗೂ ಹಿಂದೆಯೇ ಇರಾನಿನಿಂದ ದಾಳಿಕೋರನೊಬ್ಬ ಬಂದಿದ್ದ ಎಂದು ಹೇಳುತ್ತಾರೆ. ಅಲೆಕ್ಸಾಂಡರನು ಬಂದಿದ್ದು ಈಗ್ಗೆ ಎರಡು ಸಾವಿರದ ಮುನ್ನೂರು ವರ್ಷಗಳಿಗೂ ಹಿಂದೆ. ಆಮೇಲೆ ಯೂರೋಪ್ ಮೂಲದವರೂ ಹಾಗೂ ಹಲವಾರು ಪ್ರಕಾರಗಳ ಮುಸಲ್ಮಾನ ಅಕ್ರಮಕರೂ ಬಂದರು. ಇತ್ತೀಚೆಗೆ ಇಲ್ಲಿ ಒಂದು ದಾಂಧಲೆ ನಡೆಸಿದವರು ಹಿಪ್ಪೀಗಳು. ಅವರಿಂದಾಗಿಯೂ ಅನೇಕ ಊರುಗಳ ಶಾಂತಿ ಕದಡಿ ಆರ್ಥಿಕ ಅಸ್ತವ್ಯಸ್ತತೆಯುಂಟಾಯಿತು! ಹೀಗೆ ಬಗೆಬಗೆಯ ಆಕ್ರಮಣಗಳು ನಡೆಯುತ್ತ ಬಂದಿವೆ.
ಇಂಥ ಆಕ್ರಮಣಗಳ ಪೈಕಿ ಸುದೀರ್ಘಕಾಲ ಇಲ್ಲಿ ನೆಲೆಯೂರಿ ನಮ್ಮ ದೇಶದ ಮೂಲ ಸ್ವರೂಪವನ್ನೇ ಬದಲಾಯಿಸಿದವರು ಬ್ರಿಟಿಷರು. ಅವರು ಇಲ್ಲಿಗೆ ಬಂದದ್ದು ವ್ಯಾಪಾರಕ್ಕಾಗಿ. ಸಾಮಾನ್ಯವಾಗಿ ವ್ಯಾಪಾರಿಗಳು ಎಡತಾಕುವುದು ಶ್ರೀಮಂತಿಕೆ ಇದ್ದಕಡೆಗೇ ತಾನೆ? ಬಡತನವಿದ್ದಲ್ಲಿಗೆ ಅವರೇಕೆ ಹೋದಾರು? ಬ್ರಿಟಿಷರು ಈ ದೇಶಕ್ಕೆ ಲಗ್ಗೆಯಿಟ್ಟರೆಂಬುದರ ಅರ್ಥ ಇಲ್ಲಿ ಅಪಾರ ಶ್ರೀಮಂತಿಕೆ ಇತ್ತು ಎಂದೇ. ಹಾಗೆ ಬಂದ ಮೇಲೆ ಇಲ್ಲಿಯ ಪರಿಸ್ಥಿತಿ ನೋಡಿ ಅವರಿಗೆ ತಾವೇಕೆ ಇಲ್ಲಿ ರಾಜ್ಯವಾಳಬಾರದು ಅನ್ನಿಸಿತು. ಕೆಳಗೆ ಕುರ್ಚಿಯ ಮೇಲಷ್ಟೆ ಏಕೆ ಕುಳಿತುಕೊಳ್ಳಬೇಕು? ಮೇಲೆ ಸಿಂಹಾಸನದ ಮೇಲೆಯೇ ಕುಳಿತುಕೊಳ್ಳಬಹುದಲ್ಲ? ಹೀಗೆ ರಾಜ್ಯವನ್ನಾಳತೊಡಗಿದ ಮೇಲೆ ಬ್ರಿಟಿಷರು ನಮ್ಮ ದೇಶದ ಸ್ವರೂಪವನ್ನೇ ಬದಲಾಯಿಸಿದರು. ಇದೆಲ್ಲ ನಮ್ಮ ಕಾಲದಲ್ಲೇ ಎಂದರೆ ಈಚಿಗಷ್ಟೆ ನಡೆದ ಘಟನಾವಳಿ.
ಅಸ್ಮಿತೆಯ ಪ್ರಕಟೀಕರಣ
ಭಾರತದೊಳಗಡೆ ಅನೇಕ ಬಗೆಯಾದ ಸಂಘರ್ಷಗಳು ಬ್ರಿಟಿಷರ ಪ್ರಭುತ್ವವಿದ್ದಾಗಲೂ ನಡೆದವು. ಬೇರೆ ದೇಶದಲ್ಲೂ ಯುದ್ಧಗಳೂ, ಸಮರಗಳು ಆದವು. ಸಹಜವಾಗಿಯೇ ಆ ಯುದ್ಧಗಳ ಪರಿಣಾಮಗಳು ಆ ದೇಶಗಳ ಮೇಲೆ ಆಗಿರುತ್ತವೆ. ಆ ಯುದ್ಧಗಳು ಮೈಲಿಗಲ್ಲುಗಳೆಂದೂ ಆ ದೇಶದ ಜನರೂ ಇತಿಹಾಸಕಾರರೂ ಭಾವಿಸುತ್ತಾರೆ. ಉದಾಹರಣೆಗೆ – ನೆಪೋಲಿಯನನನ್ನು ಪರಾಭವಗೊಳಿಸಿದ ಬೆಲ್ಜಿಯಂನ ವಾಟರ್‍ಲೂ ಯುದ್ಧ; ಟ್ರಾಫಲ್ಗರ್ ಯುದ್ಧ (ಸ್ಪೇಯಿನ್) ನಡೆದದ್ದು ಇಂಗ್ಲೆಂಡಿನ ನೌಕಾಬಲ ಶ್ರೇಷ್ಠತೆಯನ್ನು ಸಿದ್ಧಪಡಿಸುವ ಉದ್ದೇಶದಿಂದ. ಭಾರತದಲ್ಲೂ ಹಳದೀಘಾಟಿನ ಯುದ್ಧ ನಡೆಯಿತು. ತಾಳಿಕೋಟೆಯ ಯುದ್ಧ ನಡೆಯಿತು. ಪಾಣಿಪತ್ ಯುದ್ಧ ನಡೆಯಿತು. ಆದರೆ ಇವೆಲ್ಲ ದೇಶದ ಅಸ್ಮಿತೆಯನ್ನು ಜೀವಂತವಾಗಿ ಉಳಿಸಿಕೊಂಡುದರ ಸಂಘರ್ಷಗಳ ನಿದರ್ಶನಗಳಾಗಿವೆ.
1857ಕ್ಕೆ ಮುಂಚೆಯೂ ನಮ್ಮ ದೇಶದಲ್ಲಿ ಚಿಕ್ಕಪುಟ್ಟ ಬಂಡಾಯಗಳೆಷ್ಟೋ ಆಗಿದ್ದವು, ಬ್ರಿಟಿಷರ ವಿರುದ್ಧವೂ ಆಗಿದ್ದವು. ಉದಾಹರಣೆಗೆ ವೆಲ್ಲೋರ್ ಬಂಡಾಯ: ಹಿಂದೂಗಳು ಧಾರ್ಮಿಕ ಲಾಂಛನಗಳನ್ನು ಹಣೆಯಮೇಲೆ ಧರಿಸುವುದನ್ನೂ, ರೂಢಿಯ ರುಮಾಲನ್ನೂ ನಿಷೇಧಿಸಿ ‘ಹ್ಯಾಟ್’ನ್ನು ಕಡ್ಡಾಯಗೊಳಿಸಿದುದರ ವಿರುದ್ಧ ಸೈನಿಕರು ಬಂಡೆದ್ದು 14 ಬ್ರಿಟಿಷ್ ಅಧಿಕಾರಿಗಳನ್ನೂ, ನೂರಕ್ಕೂ ಹೆಚ್ಚು ಬ್ರಿಟಿಷ್ ಸೈನಿಕರನ್ನೂ ಕೊಂದಿದ್ದರು (1806). ದಕ್ಷಿಣ ಭಾರತದಲ್ಲಿ ಹಲವಾರೆಡೆ ಬಂಡಾಯಗಳು ಆಗಿದ್ದವು. ಆದರೆ ಬ್ರಿಟಿಷ್ ಸಾಮ್ರಾಜ್ಯ ಉಚ್ಛ್ರಾಯಸ್ಥಿತಿಯಲ್ಲಿದ್ದಾಗ, ಮತ್ತು ಜಗತ್ತಿನಲ್ಲಿಯೆ ಅತ್ಯಂತ ಶಕ್ತಿಶಾಲಿಯೆನಿಸಿದ್ದ ಹಂತದಲ್ಲಿ ಆ ಸಾಮ್ರಾಜ್ಯದ ಬುಡಬೇರುಗಳನ್ನೇ ಅಲ್ಲಾಡಿಸಿದ ಸಮರವೆಂದರೆ 1857ರಲ್ಲಿ ನಡೆದ ಸಮರ. ಆ ಸಮರವನ್ನು ಆರಂಭಿಸಿದವರು ಸೈನಿಕರು. ಅನಂತರ ಇಡೀ ಜನತೆ ಅದರಲ್ಲಿ ಭಾಗವಹಿಸಿತು. ಇದನ್ನೊಂದು ದಂಗೆಯೆಂದೂ ಬಂಡಾಯವೆಂದೂ ನಿರೂಪಿಸಲು ಬ್ರಿಟಿಷರು ಸತತ ಪ್ರಯತ್ನ ಮಾಡಿದರು. ಅವರಿಗೆ ಈ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸೂ ಸಿಕ್ಕಿತು. ಏಕೆಂದರೆ ಅವರು ಹೇಳಿದ್ದನ್ನು ಶುಕಪಾಠ ಮಾಡುವ ನಮ್ಮವರೂ ಇದ್ದರು. ಆದರೆ ಅದಾದ ನಂತರ ನಮ್ಮ ದೇಶದ ಆಗುಹೋಗುಗಳ ಮೇಲೆ ಅದರ ಪರಿಣಾಮ ಎಷ್ಟು ವ್ಯಾಪಕವಾಗಿತ್ತೆಂದರೆ ಅದು ನಮ್ಮ ದೇಶದ ಅಂತಿಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವುದಕ್ಕೂ ಸಶಸ್ತ್ರಕ್ರಾಂತಿ ಪ್ರಸ್ಥಾನಕ್ಕೂ ಆಖೈರಾಗಿ 1947ರಲ್ಲಿ ಬ್ರಿಟಿಷರು ಈ ದೇಶ ಬಿಟ್ಟು ಹೋಗುವುದಕ್ಕೂ ಕಾರಣವಾಯಿತು. ಈ ಘಟನಾ ಚಕ್ರ ಉಪಕ್ರಮಗೊಂಡದ್ದು 1857ರಲ್ಲಿ.
ದೀರ್ಘ ಅಸಂತೋಷ
ಬ್ರಿಟಿಷರ ಪ್ರಭುತ್ವವಿದ್ದಾಗ ಅವರ ವಿರುದ್ಧ ಹಿಂದಿನಿಂದಲೇ ಎಷ್ಟೋ ಬಂಡಾಯಳು ನಡೆದಿದ್ದವೆಂದು ಆಗಲೇ ಸ್ಮರಿಸಿದೆವು. ಹೀಗೆ ಬ್ರಿಟಿಷರ ಆಳ್ವಿಕೆಯ ಬಗ್ಗೆ ಅಸಂತೋಷ ಹಿಂದಿನಿಂದ, ಹೊಗೆಯಾಡುತ್ತಲೇ ಇತ್ತು. ಮೊದಲನೆಯದಾಗಿ ಪರಕೀಯರ ಆಳ್ವಿಕೆ ನೆಲೆಯೂರಿದಾಗ ನಮ್ಮ ರಾಜ್ಯ ನಷ್ಟವಾಗುವುದಲ್ಲದೆ ನಮ್ಮ ಧರ್ಮ-ಸಂಸ್ಕೃತಿಗಳಿಗೂ ಚ್ಯುತಿ ಬರುತ್ತದೆ. ಹೀಗೆ ನಮ್ಮ ಅಸ್ಮಿತೆ ಅಥವಾ ನಮ್ಮತನ ಅವರ ವಶಕ್ಕೆ ಸಿಕ್ಕಿಹಾಕಿಕೊಂಡು ನಲುಗುತ್ತದೆ. ಇದಕ್ಕೆ ವಿರುದ್ಧವಾಗಿ ಸ್ವಾಭಾವಿಕವಾಗಿಯೆ ಜನರ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು.
ಎರಡನೆಯದಾಗಿ ಇಂಗ್ಲೆಂಡಿನ ಸಂಸತ್ತಿನ ಸದಸ್ಯರ ಒಂದು ಪ್ರಭಾವೀ ಹಾಗೂ ಶೀಮಂತ ಬಣದವರ ಅಭಿಮತ, ಭಾರತವನ್ನು ಪೂರ್ತಿ ಕ್ರೈಸ್ತೀಕರಿಸುವುದೇ ಬ್ರಿಟಿಷ್ ಸಾಮ್ರಾಜ್ಯದ ಗುರಿಯಾಗಿರಬೇಕು – ಎಂದಿತ್ತು. ಈ ಧೋರಣೆಯ ಸಂಸತ್ಸದಸ್ಯರು ತಮ್ಮದೇ ಪಕ್ಷವನ್ನೂ ರಚಿಸಿಕೊಂಡಿದ್ದರು. ಅದರ ಹೆಸರೇ ‘ಇವ್ಯಾಂಜೆಲಿಕಲ್ ಪಾರ್ಟಿ’ ಎಂದು ಇತ್ತು. ಈ ‘ದೈವಸಮರ್ಥಕ’ರೆಂದುಕೊಳ್ಳುವವರ ನಡವಳಿಕೆಗಳು ಸಹಜವಾಗಿಯೆ ಭಾರತೀಯರಲ್ಲಿ ರೋಷ ಉಂಟುಮಾಡುತ್ತಿದ್ದವು. ಇಂಗ್ಲೆಂಡಿನ ಚಾಲ್ಸ್‍ಗ್ರಾಂಟ್, ವಿಲಿಯಂ ವಿಲ್ಬರ್ಫೋರ್ಸ್ – ಇವರೆಲ್ಲ ಭಾರತವಷ್ಟನ್ನೂ ಕ್ರೈಸ್ತೀಕರಿಸುವುದಾಗಿ ಪ್ರತಿಜ್ಞೆ ತೊಟ್ಟಿದ್ದರು. ಆ ‘ಇವ್ಯಾಂಜೆಲಿಕಲ್ ಪಾರ್ಟಿ’ಯ ಕಾರ್ಯ ಕಲಾಪಗಳು ಭಾರತದಲ್ಲಿ ರಭಸದಿಂದ ನಡೆಯತೊಡಗಿದ್ದವು.
ಎಲ್ಲರಿಗಿಂತ ಮೊದಲು ವಿಲಿಯಂ ಕ್ಯಾರೀ ಎಂಬಾತ ಬಂದ. ‘ಬ್ಯಾಪ್ಟಿಸ್ಟ್ ಮಿಶನ್ ಆಫ್ ಸೆರಾಂಪೋರ್’ ಎಂಬುದನ್ನು ಕಲ್ಕತ್ತದ ಬಳಿ ಆರಂಭಿಸಿದ. ಮುದ್ರಣಯಂತ್ರವನ್ನು ಇಲ್ಲಿಗೆ ತಂದವನು ಅವನೇ – ಭಾರತದಲ್ಲಿ ಕ್ರೈಸ್ತಧರ್ಮ ಪ್ರಸಾರ ಮಾಡಬೇಕೆಂದು.
ಹೀಗೆ ಭಾರತೀಯರ ಅಸಂತೋಷಕ್ಕೆ ಹಲವಾರು ಕಾರಣಗಳಿದ್ದವು. ಎಲ್ಲಕ್ಕಿಂತ ಪ್ರಬಲ ಕಾರಣವಂದರೆ ಯಾವುದನ್ನು ಸ್ವಧರ್ಮ, ಸ್ವಸಂಸ್ಕೃತಿ, ಅಸ್ಮಿತ ಎನ್ನುತ್ತಾರೋ ಅದರ ಮೇಲೆ ಪರಕೀಯರಿಂದ ಆಘಾತವಾಗತೊಡಗಿದ್ದುದು. ದೇಶದೆಲ್ಲೆಡೆ ಹೀಗೆ ತೀವ್ರ ಅಸಂತೋಷವಿತ್ತು.
ಸಾವರಕರರ ಶೋಧಬರಹ
ಈ ಹಿನ್ನೆಲೆಯನ್ನೂ ಆಮೇಲಿನ ಘಟನಾವಳಿಯನ್ನೂ ವಸ್ತುನಿಷ್ಠವಾಗಿ ವಿಸ್ತಾರವಾಗಿ ನಿರೂಪಿಸಿದ ಗ್ರಂಥ ವಿನಾಯಕ ದಾಮೋದರ ಸಾವರಕರ್ ಬರೆದದ್ದು. ಅವರು ತಮ್ಮ ಗ್ರಂಥಕ್ಕೆ ಕೊಟ್ಟಿರುವ ಶೀರ್ಷಿಕೆ “The First War of Independence” ಎಂದು. ತಮ್ಮ 24ನೇ ವಯಸ್ಸಿನಲ್ಲಿ ಪರದೇಶದಲ್ಲಿ – ದೂರದ ಇಂಗ್ಲೆಂಡಿನಲ್ಲಿ – ಕುಳಿತು ಶೋಧನೆ ಮಾಡಿ ಬರೆದದ್ದು ಅದು. ಈ ಗ್ರಂಥದಿಂದ ಬ್ರಿಟಿಷರು ಎಷ್ಟು ಗಾಬರಿಗೊಂಡರೆಂದರೆ ಅದರ ಪ್ರಕಟನೆಗೆ ಮುಂಚೆಯೇ ಅದನ್ನು ನಿಷೇಧ ಮಾಡಿದರು. ಬಹುಶಃ ಪ್ರಕಾಶನಕ್ಕೆ ಮುಂಚೆಯೇ ನಿಷೇಧಕ್ಕೆ ಒಳಗಾದ ಗ್ರಂಥವೆಂದರೆ ಜಗತ್ತಿನಲ್ಲಿ ಅದೊಂದೇ. ಸಾವರಕರರ ಗ್ರಂಥ ಆರಂಭವಾಗುವುದೆ, ಸೈನಿಕರಲ್ಲೂ ಜನಸಾಮಾನ್ಯರಲ್ಲೂ ಆಕ್ರೋಶವೆದ್ದಿದ್ದುದಕ್ಕೆ ಕಾರಣ ಅವರ ಸ್ವಧರ್ಮ-ಸ್ವರಾಜ್ಯಗಳಿಗೆ ವಿಘಾತವೊದಗಿದ್ದುದು ಎಂಬ ವಿಶ್ಲೇಷಣೆಯಿಂದ. ಜನರ ಎಲ್ಲ ಅಸಂತೋಷದ ಮೂಲವೆಂದು ಇದನ್ನು ಸಾವರಕರರು ಗುರುತಿಸಿದ್ದಾರೆ.
‘ದಂಗೆ’ಗೆ ಕಾರಣಗಳೆಂದು ವ್ಯಾವಹಾರಿಕ ಸಂಗತಿಗಳನ್ನು ಹಲವರು ನಮೂದಿಸುತ್ತಾರೆ. ಆದರೆ ಇವೆಲ್ಲ ನಿಜವಾದ ಭಾವನಾತ್ಮಕ ಅಸಂತೋಷದ ಕಾರಣಕ್ಕೆ ಪೂರಕವಾದವು, ಅಷ್ಟೆ.
ಯಾವುದೋ ರಾಜನಿಗೆ ಆಂಗ್ಲಸರ್ಕಾರ ಪೆನ್‍ಶನ್ ಕೊಡಲಿಲ್ಲ – ಇಂಥ ಕಾರಣಗಳನ್ನು ಹೇಳುತ್ತಾರೆ. ಆದರೆ ಪೆನ್‍ಶನ್ ಕೊಡಲಿಲ್ಲವೆಂದು ಯಾರಾದರೂ ಸಾಯಲು ಸಿದ್ಧರಾಗುತ್ತಾರೆಯೆ? ಬೇರೆ ಏನು ಬೇಕಾದರೂ ಮಾಡಿಯಾರು, ಆದರೆ ಸಾಯುವುದಕ್ಕೆ ಹೊರಡುವುದಿಲ್ಲ. ಇಂಥ ಉಗ್ರ ನಿರ್ಧಾರಗಳನ್ನು ಕೈಕೊಳ್ಳಬೇಕಾದರೆ ಬಹಳ ಆಳವಾದ ಕಾರಣಗಳೇ ಇರಬೇಕಾಗುತ್ತದೆ.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)