ಪ್ರತಿಮೆ, ಪ್ರಕರಣ ಮತ್ತು ತತ್ತ್ವಗಳು
ಅತಿ ಗಹನವೂ ಕ್ಲಿಷ್ಟವೂ ಆದ ತತ್ತ್ವವನ್ನು ಪ್ರತಿನಿಧಿಸುವ ಈ ಕಥಾವಸ್ತುವನ್ನು ಚಿತ್ರಿಸುವಲ್ಲಿ ಪರಿಣಾಮಕಾರಿ ಮತ್ತು ತೀಕ್ಷ್ಣವಾದ ಕಾವ್ಯಮಯಪ್ರತಿಮೆಗಳು ಮತ್ತು ಸಂದರ್ಭಗಳನ್ನು ಲೇಖಕರು ಸಮುಚಿತವಾಗಿ ಬಳಸಿ ಸಾಕ್ಷಿಯನ್ನು ರಸಸಾಂದ್ರವನ್ನಗಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ನೋಡೋಣ.
- ನಾಗಪ್ಪ ಮತ್ತು ಅವನ ಪೆಟ್ಟಿಗೆಯ ಬೀಗದ ಕೈ.
ನಾಗಪ್ಪ ಸತ್ತು ಶವವಾಗಿರುವಾಗ ಅವನ ಖಜಾನೆಯ ಬೀಗದ ಕೈ ಅವನ ಮುಷ್ಟಿಯಲ್ಲಿ ಬಂಧಿತವಾಗಿರುತ್ತದೆ. ಗಣೇಶ ಮತ್ತು ಸುಕನ್ಯ ಅದನ್ನು ಎಷ್ಟು ಪ್ರಯತ್ನಿಸಿದರೂ ಬಿಡಿಸಲು ಆಗುವುದಿಲ್ಲ. ನಾಗಪ್ಪನಿಗಿರುವ ಧನಸಂಗ್ರಹಣೆಯ ತೀವ್ರವಾದ ಕಾಮವನ್ನು ಬದುಕಿನ ಮಟ್ಟದಿಂದ ಕಾವ್ಯಕ್ಕೇರಿಸುವುದು ಈ ಅತಿಶಯವಾದ ಘಟನೆಯೇ. ಸಾಯುವ ಕೆಲವು ಕ್ಷಣಗಳ ಮುನ್ನ ಹಲವು ಬಾರಿ ನಾಗಪ್ಪ ಬೀಗದಕೈಯನ್ನು ನೋಡಿಕೊಳ್ಳುವುದು ಮತ್ತು ಮುಷ್ಟಿಯಲ್ಲಿ ಭದ್ರವಾಗಿರಿಸಿಕೊಳ್ಳುವ ಈ ಅತಿಶಯತೆಯು ಆಶ್ಚರ್ಯ, ಹಾಸ್ಯ ಮತ್ತು ಗಂಭೀರತೆಯನ್ನು ಒಟ್ಟಿಗೇ ಧ್ವನಿಸುತ್ತದೆ. ಈ ಸನ್ನಿವೇಶದಲ್ಲಿ ಬರುವ ಒಂದೆರಡು ವಿವರಣೆಯನ್ನು ನೋಡೋಣ:
ಅ. ಅವಳು (ಸುಕನ್ಯೆ) ಬಗ್ಗಿ ಅದನ್ನು(ಬೀಗದ ಕೈ) ಹೆಣದ ಮುಷ್ಟಿಯಿಂದ ತೆಗೆದುಕೊಳ್ಳಲು ಹೋದಳು. ಅದುಕೊಡಲಿಲ್ಲ. ಬಿಗಿಯಾಗಿ ಹಿಡಿದುಕೊಂಡಿತ್ತು. - (ಪುಟ ೨೩೨)
ಹೆಣದ ಕೈಯಿಂದ ಪಡೆದುಕೊಳ್ಳಲು ಹೋಗುವುದೇ ಒಂದು ವಿಚಿತ್ರವೆನಿಸಿದರೆ, "ಅದು ಕೊಡಲಿಲ್ಲ" ಎಂದು ಹೆಣಕ್ಕೆ ಕರ್ತೃತ್ವವನ್ನು ಆರೋಪಿಸಿರುವುದು ಔಚಿತ್ಯದ ಅತಿಶಯ. ಇದೊಂದೇ ಸಾಲಿನಲ್ಲಿ, ಅಪ್ಪನ ಕೂಡಿಟ್ಟ ಗಳಿಕೆಯಲ್ಲಿ ಮಗಳಿಗಿರುವ ಆಸೆಯನ್ನು ಚಿತ್ರಿಸಿ ಮತ್ತು ನಾಗಪ್ಪನಿಗಿದ್ದ ಧನಸಂಚಯದ ತೀವ್ರತೆ ಒಬ್ಬವ್ಯಕ್ತಿಯ ಜೀವನವನ್ನೂ ಮೀರಿ ಅವನನ್ನು ಹಿಂಬಾಲಿಸುತ್ತಿದೆ ಎಂದು ಸೂಚಿಸಿರುವುದು ಗಹನವಾಗಿದೆ. ಅತಿಸಂಚಯ ಕಡೆಗೆ ಶವಕ್ಕೆ ಸಮವೆಂದೂ ಅದೆಲ್ಲ ಚಿತೆಗೇ ಸೇರುವುದು ಎಂಬ ವಿಪರ್ಯಾಸದ ಧ್ವನಿಯೊಂದು ಇಲ್ಲಿದೆ. ನೇರವಾದ ಅರ್ಥದಲ್ಲಿ ಇದೊಂದು ಹಾಸ್ಯಪ್ರಸಂಗವೂ ಆಗಿದೆ. ಈ ರೀತಿಯ ಪ್ರಸಂಗವು ರಸ, ತತ್ತ್ವ ಮತ್ತು ಸನ್ನಿವೇಶಗಳ ಮೇಳೈಸುವಿಕೆಯಿಂದ ಕಾವ್ಯದ ಅತಿಘನವಾದ ಭಾಗವಾಗಿ, ಸಹೃದಯರನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಮಂಜಯ್ಯ, ಪರಮೇಶ್ವರಯ್ಯ ಮತ್ತು ಜಾನಕಮ್ಮ ಸತ್ತು ಯಮಲೋಕಕ್ಕೆ ಹೋದರೂ ತಮ್ಮ ತನವನ್ನು ಬಿಡುವುದಿಲ್ಲ ಎಂಬುದನ್ನು ಚಿತ್ರಿಸಿವ ಮೂಲಕ ಆ ಪಾತ್ರ ಗುಣಗಳ ಅತಿಶಯವನ್ನು ತೋರಿಸಿದ್ದರೆ, ನಾಗಪ್ಪ ಪಾತ್ರದಲ್ಲಿ ಈ ಲೋಕದಲ್ಲೇ ಅವನ ಶವದ ಸುತ್ತ ಹೆಣೆದ ಸನ್ನಿವೇಶದಿಂದ ಅಷ್ಟೇ ಪರಿಣಾಮಕಾರಿಯಾದ ಅತಿಶಯವನ್ನು ಸಾಧಿಸಿರುವುದು ಅನನ್ಯ.
ಆ. "ಕೋಣೆಗೆ ಹೋಗಿ ಕೆಳಗೆ ಇಳಿದು ಬೀಗದಕೈ ಹಾಕಿ ತೆಗೆಯಲು ಹೋದರೆ ಬರುತ್ತಿಲ್ಲ. ಅದೆಷ್ಟೋ ಸುತ್ತು ಈಕಡೆ ಮತ್ತೆ ಎಷ್ಟೋ ಸುತ್ತು ಆಕಡೆ ತಿರುಗಿಸಿದರೆ ಬರುತ್ತದೆಂದು ಅಮ್ಮನಿಂದಲೇ ಕೇಳಿದ್ದ ನೆನಪು ಬಂದು ಅತ್ತ ಇತ್ತ ಇತ್ತ ಅತ್ತ ತಿರುಗಿಸಲು ಶುರುಮಾಡಿದ(ಗಣೇಶ) . ಕೊನೆಗೆ ತೆರೆದುಕೊಂಡಿತು".
ಇಲ್ಲಿ ಅಡಕವಾಗಿರುವ ಸೂಕ್ಷ್ಮವೇನೆಂದರೆ, ಸುಕನ್ಯೆ ಮುಂಚೆಯೇ ಯಾವಾಗಲೋ ಆ ಪೆಟ್ಟಿಗೆಯನ್ನು ತೆಗೆದಿದ್ದಾಳೆ ಎಂಬುದು. ಮತ್ತು ಅದು ಅವಳ ಅಪ್ಪನ ಗಮನಕ್ಕೆ ಬರದೆಯೇ ಇರಬೇಕು. ಇನ್ನು ಮುಂದಿನದನ್ನೆಲ್ಲ ಓದುಗರು ಊಹಿಸಬೇಕು. ಮತ್ತು ಕಡೆಗೆ ಅಮ್ಮ ಮಗನಿಗೆ ನಾಗಪ್ಪನ ಗಳಿಕೆ ಮತ್ತೇರಿಸುವುದು, ಕೇವಲ ಅವನು ಸತ್ತಮೇಲೆ ಆದದ್ದಲ್ಲ. ಇದು ಮೊದಲಿಂದಲೇ ಸುಪ್ತವಾಗಿ ಇದ್ದದ್ದು. ಮತ್ತು ನಾಗಪ್ಪನವರು ತಮ್ಮ ಒಬ್ಬಳೇ ಮಗಳಿಗೂ ಮೊಮ್ಮಗನಿಗೂ ತನ್ನ ಗಳಿಕೆಯನ್ನು ವ್ಯಯಿಸದೇ ಇರುವುದು ಅವರಲ್ಲಿ ಒಂದು ಬಗೆಯ ಆಸೆಯನ್ನು ಕೆರಳಿಸಿದ್ದಿರಲೂ ಸಾಕು. ಅದು ವ್ಯಕ್ತವಾಗಲು ಅವರಿಬ್ಬರಿಗೆ ಅವಕಾಶ ದೊರೆತಿದ್ದು ಕಡೆಗಷ್ಟೇ. ಅಪ್ಪ ಜಿಪುಣ; ಗಂಡನ ಮನೆಯಲ್ಲಿ ಹಣಕ್ಕೆ ಅಷ್ಟು ಮಹತ್ತ್ವವನ್ನೇ ನೀಡದ ವಾತಾವರಣ. ಹೀಗಿರುವಾಗ ಸುಕನ್ಯ ಮತ್ತು ಗಣೇಶರ ಸುಪ್ತ ಕಾಮನೆ ರೆಕ್ಕೆದೆರೆಯಲು ನಾಗಪ್ಪನ ಸಾವು ಕಾರಣವಾಯಿತಷ್ಟೆ.
ಇ. "ಮತ್ತೆ ಪೆಟ್ಟಿಗೆ ಬಾಗಿಲು ಮುಚ್ಚಿ ಬೀಗದಕೈಯನ್ನು ತಿರುಗಿಸಿ ಚೀಲವನ್ನು ಎತ್ತಿ, ಭಾರವಾಗಿತ್ತು. ನೋಟುಗಳೂ ಭಾರವಾಗಿರುತ್ತವೆಂಬ ಕಲ್ಪನೆಯೇ ಅವನಿಗಿರಲಿಲ್ಲ" (ಗಣೇಶ).
"ನೋಟುಗಳೂ ಭಾರವಾಗಿರುತ್ತವೆ". ಈ ಎರಡು ಪದಗಳೇ ಸಾಕಲ್ಲ ಗಣೇಶನ ಧನಕಾಮನೆಯ ತೂಕ ಎಷ್ಟೆಂದು ಅಳೆ ಯಲು. ಈ ಸೂಕ್ಷ್ಮ ಸೂಚನೆಗಳೇ ಸಾಕ್ಷಿಯ ತತ್ತ್ವದ ಮೂಟೆಯನ್ನು ರಸದಲ್ಲಿ ಅದ್ದುವುದು.
೨. ನಾಗಪ್ಪನೊಂದಿಗೇ ಚಿತೆಯೇರುವ ಅವನ ಗಳಿಕೆ
ನಾಗಪ್ಪನ ಬೀಗದಕೈ ಪ್ರಕರಣ ಗಣೇಶ, ಸುಕನ್ಯ ಮತ್ತು ನಾಗಪ್ಪರ ಗುಣಗಳನ್ನು ತೋರಿದರೆ, ಅವನ ಹಣವನ್ನು ಹೆಣದೊಂದಿ ಗೇ ಸುಡುವ ನಿರ್ಧಾರ ರಾಮಕೃಷ್ಣನ ಗುಣವನ್ನು ತೋರುತ್ತದೆ. ಅವನ ಈ ನಿರ್ಧಾರ ಮನಸ್ಸಿನಲ್ಲಿ ಮೂಡುವುದೂ ಆ ಬೀಗದಕೈಯಿಂದಲೇ.
"ಮುಷ್ಟಿಯಲ್ಲಿ ಹಿಡಿದಿದ್ದ ಬೀಗದಕೈಯನ್ನು ನೋಡಿ ಒಂದು ಕ್ಷಣ ಸುಮ್ಮನೆನಿಂತ". ಈಗಲೇ ರಾಮಕೃಷ್ಣನಿಗೆ ನಾಗಪ್ಪನ ಧನಸಂಗ್ರಹ ಕೇವಲ ಸಂಗ್ರಹವಲ್ಲ, ಅದು ಅವನ ವ್ಯಕ್ತಿತ್ವವೇ ಎಂದೆನಿಸುವುದು ಮತ್ತು ಅದನ್ನು ವ್ಯಯಿಸುವುದರಲ್ಲಿ ಸ್ವಲ್ಪವೂ ಅವನಿಗೆ ಇಚ್ಛೆಯಿಲ್ಲವೆಂಬುದನ್ನು ಅರಿತದ್ದು. ಹಾಗಾಗಿ, ಯಾರು ಧನಸಂಗ್ರಹವನ್ನು ತನ್ನ ತನವನ್ನಾಗಿಯೇ ಮಾಡಿಕೊಂಡಿದ್ದನೋ, ಅದು ಅವನ ತನುವಿನೊಂದಿಗೇ ಹೋಗಿಬಿಡಬೇಕೆಂದು ಅವನು ಯೋಚಿಸುವುದರಲ್ಲಿ ಆಳವಾಧ ಧರ್ಮಸೂಕ್ಷ್ಮವಿದೆ. ಬಹುಶ: ನಾಗಪ್ಪನು 'ವಿಲ್' ಬರೆದಿಡುತ್ತಿದ್ದರೆ ಅವನು ಹೀಗೆಯೇ ಹೇಳುತ್ತಿದ್ದನೇನೋ? ಏಕೆಂದರೆ ಅವನು ಸಾವಿಗಿಂತಲೂ ಹೆದರಿದ್ದು ಹಣದ ಕರಗುವಿಕೆಗೆ. ಅವನ ರೋಗಕ್ಕೂ ಅವನು ಮದ್ದುಮಾಡಿಕೊಳ್ಳದಿರುವುದು ಇದನ್ನೇ ಹೇಳುತ್ತದೆ. ಹಾಗಾಗಿ ರಾಮಕೃಷ್ಣನ ನಿರ್ಧಾರ ಧರ್ಮಸೂಕ್ಷ್ಮದ್ದು. ಸುಕನ್ಯೆಯು ಅವನ ದುಡುಕು ನಿರ್ಧಾರವನ್ನು ಪ್ರಶ್ನಿಸಿದಾಗ ಅವನ ಉತ್ತರವನ್ನು ನೋಡಿ - "ಆ ಕಾಗದಾನ ಸೌದೆ ಹತ್ತಿಸೋಕಲ್ಲದೆ ಮತ್ತೇನು ಮಾಡಬೇಕಿತ್ತು ನೀನೇ ಹೇಳು”. ಶಾಂತವಾಗಿದ್ದ ಅವನು ನಾಗಪ್ಪನ ಹಣದಲ್ಲಿ ಕಂಡದ್ದು ಕಾಗದವನ್ನು. ಇದು ಮತ್ತೊಂದು ಅತಿಶಯವಾದ ಪ್ರಸಂಗ.
ಆದರೆ, ಅವನಿಗೆ ಈ ನಿರ್ಧಾರದಲ್ಲಿ ಸ್ವಲ್ಪ ಅಹಂಕಾರ ಮತ್ತು ನಾಗಪ್ಪನ ಕಡೆಗೆ ಕೋಪವು ಇರುವುದನ್ನೂ ಕಾಣಬೇಕು. ಅವನ ಈ ನಿರ್ಧಾರ ಧರ್ಮಸೂಕ್ಷ್ಮದ ನೆಲೆಯಲ್ಲಿ ಸರಿಯಾದರೂ ಹಿಂದೆಮುಂದೆ ನೋಡದೆಯೇ ತೆಗೆದುಕೊಂಡ ನಿರ್ಧಾರವಾದ್ದರಿಂದ ಇದರಲ್ಲಿ ಒಂದು ಎಳೆಯ ಬುದ್ಧಿಹೀನತೆಯನ್ನೂ ಕಾಣಬಹುದು. ನಾಗಪ್ಪನ ಗಳಿಕೆಗೆ ಯಾರೂ ವಾರಸುದಾರರಿಲ್ಲವೆಂಬುದು ಹೌದಾದರೆ ಅವನ ಕೊಡುವಿಕೆಗೂ ಯಾರೂ ಇರಬಾರದು. ನಾಗಪ್ಪನೇನಾದರೂ ಸಾಲವನ್ನೋ ಅಥವಾ ಕೊಡಬೇಕಾದ್ದ ಬಾಕಿಯನ್ನೇನಾದರೂ ಉಳಿಸಿಕೊಂಡಿದ್ದಾನೋ ಎಂದು ಯೋಚಿಸದೇ ತೆಗೆದುಕೊಳ್ಳುವ ಈ ನಿರ್ಧಾರ ನಾಗಪ್ಪನ ಅಭಿಪ್ರಾಯಕ್ಕೆ ಉಚಿತವಾದರೂ ವ್ಯಾವಹಾರಿಕವಲ್ಲ( ಪ್ರಾಯೋಗಿಕವಲ್ಲ). ಕೆಲವೊಮ್ಮೆ ಧರ್ಮಸೂಕ್ಷ್ಮಕ್ಕೊಂದೇ ಅಂಟಿಕೊಂಡರೆ ವ್ಯವಹಾರದಲ್ಲಿ ಸೋಲಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಹಾಗೆಯೇ ಎಷ್ಟು ಧರ್ಮಿಷ್ಠನಾಗಿಯೂ ಪರರ ಸ್ವತ್ತನ್ನು ಬಯಸದಿದ್ದರೂ ಆಗುಣದಲ್ಲಿಯೇ ಅಹಂಕಾರವು ಅಥವಾ ಉಪೇಕ್ಷೆಗಳು ಮನೆಮಾಡಿರುತ್ತವೆಂಬುದನ್ನೂ ನೋಡಬಹುದು.
೩. ಸತ್ಯಪ್ಪನು ತೋಟದ ಮನೆಯನ್ನು ಸುಡುವುದು ಮತ್ತು ಅವನ ಆತ್ಮಹತ್ಯಾಯತ್ನ:
ಮಂಜಯ್ಯನನ್ನು ಭೇಟಿಯಾದ ಮೇಲೆ ಅವನ ಕಾಮದಾಟದ ಕಥೆಗಳನ್ನು ಕೇಳಿ ಊರಿಗೆ ಹಿಂತಿರುಗಿದ ಮೇಲೆ ಸತ್ಯಪ್ಪನಿಗೂ ಕಾಮಪ್ರವೃತ್ತಿ ಕಾಡತೊಡಗಿತ್ತು. ತೋಟವನ್ನು ಕಾಯುವ ಸಲುವಾಗಿ ಒಂದು ಗುಡಿಸಲನ್ನು ಕಟ್ಟಿಕೊಳ್ಳುವುದರಿಂದ ಅದಕ್ಕೊಂದು ಆಲಂಬನ ದೊರೆಯಿತು. ಸತ್ಯಪ್ಪನ ಮನಸ್ಸಿನ ಹೊಯ್ದಾಟ ಅಲ್ಲಿಂದ ಶುರುವಾಗುತ್ತದೆ. ಒಮ್ಮೆ ಕಾಮಪ್ರವೃತ್ತಿ ಎಳೆದರೆ, ಮತ್ತೊಮ್ಮೆ ಮೌಲ್ಯಪ್ರಜ್ಞ್ನೆ ಶಾಂತವಾಗಿಸುವುದು. ಈ ಅಲ್ಲೋಲಕಲ್ಲೋಲದ ಚಿತ್ರಣವು ಭೈರಪ್ಪನವರು ಮಾನವಸ್ವಭಾವವನ್ನು ಎಷ್ಟು ಆಳವಾಗಿ ಗ್ರಹಿಸಿದ್ದಾರೆ ಮತ್ತದನ್ನು ಎಷ್ಟು ಸಮರ್ಥವಾಗಿ ಚಿತ್ರಿಸಬಲ್ಲರೆಂಬುದನ್ನು ತೋರಿಸಿದೆ.
ಕಾಮವು ಅವನ ಕೈಯಲ್ಲಿ ತೋಟದ ಗುಡಿಸಲನ್ನು ಕಟ್ಟಿಸಿದರೆ, ಮೌಲ್ಯಪ್ರಜ್ಞೆಯು ಅದನ್ನು ಸುಡಿಸುತ್ತದೆ. ತನ್ನ ವ್ಯಕ್ತಿತ್ವದ ತುಲನೆಯಲ್ಲಿ ಮುಳುಗಿದ ಸತ್ಯಪ್ಪ, ತನ್ನ ಗುಡಿಸಲನ್ನು ಮಂಜಯ್ಯನ ತೋಟದ ಗುಡಿಸಲಿಗೇ ಹೋಲಿಸಿಕೊಳ್ಳುತ್ತಾನೆ ಮತ್ತು ಗುಡಿಸಲು ಕಟ್ಟಿಸುವ ನಿರ್ಧಾರಕ್ಕೆ ಸುಪ್ತವಾಗಿದ್ದ ಕಾಮದ ಒತ್ತಡವೂ ಕಾರಣವೆಂದು ಬಗೆಯುತ್ತಾನೆ. ಈ ಹೊಯ್ದಾಟದ ಮೊದಲ ಸುತ್ತಿನಲ್ಲಿ ಅವನ ಮೌಲ್ಯಪ್ರಜ್ಞೆಯೇ ಗೆಲ್ಲುತ್ತದೆ. ಸುಟ್ಟಗುಡಿಸಲ ಮುಂದೆ ನಿಂತು ಮಗ, "ಏಕೆ ಬೆಂಕಿಬಿದ್ದರೂ ಸುಮ್ಮನೆ ಎದುರಿಗೆ ಕೂತಿದ್ದೀರಿ" ಎಂದು ಕೇಳುವುದಕ್ಕೆ ಸತ್ಯಪ್ಪನ ಮಾರ್ಮಿಕ ಉತ್ತರ "ಕಟ್ಟಿದಾಗಿನಿಂದಲೂ ಒಂದು ಹಾವು ಸೇರಿಕೊಂಡಿತ್ತು. ಏನುಮಾಡಿದರೂ ಓಡಿಸೋಕೆ ಆಗುತ್ತಿರಲಿಲ್ಲ. ಅದಕ್ಕೆ ಸತ್ತರೆ ಸಾಯಲಿ ಅಂತ ಬೆಂಕಿ ಹತ್ತಿಸಿದೆ. ಸತ್ತಿತೋ ಅಥವ ತಪ್ಪಿಸಿಕೊಂಡು ಹೋಯಿತೋ ಗೊತ್ತಿಲ್ಲ" ಎಂಬ ವಕ್ರೋಕ್ತಿ ಔಚಿತ್ಯದ ಪರಾಕಾಷ್ಠೆಯನ್ನು ತಲುಪಿದೆ.
ಸೋತ ಪ್ರವೃತ್ತಿ ಮತ್ತೆ ಸೇಡು ತೀರಿಸಿಕೊಳ್ಳಲು ಎದ್ದು ಬರುತ್ತದೆ; ಸತ್ಯಪ್ಪನ ಮೌಲ್ರ್ಯಪ್ರಜ್ಞೆಯನ್ನು ಒಂದೇ ಏಟಿಗೆ ಮಲಗಿಸಿಯೇ ಬಿಡುತ್ತದೆ. ಮೌಲ್ಯಗಳನ್ನು ಗೌರವಿಸಿಕೊಂಡು ಬಂದವರು ಮೂಲಪ್ರವೃತ್ತಿಯ ಒತ್ತಡಕ್ಕೆ ಸಿಲುಕಿ ಹೇಗೆ ಒದ್ದಾಡುತ್ತಾರೆ ಮತ್ತು ತಮ್ಮ ಆದರ್ಶದ ಗೋಪುರವು ಕುಸಿದಾಗ ಹೇಗೆ ಪಶ್ಚಾತ್ತಾಪದಲ್ಲಿ ಮುಳುಗುತ್ತಾರೆಂಬುದನ್ನು ತೋರಿಸಿರುವುದೇ ಈ ಪ್ರಕರಣದ ಮತ್ತೊಂದು ವಿಶೇಷ.
ತಾನು ತಪ್ಪುಮಾಡಿಬಿಟ್ಟೆನೆಂದು ಪರಿತಪಿಸುವ ಸತ್ಯಪ್ಪನ ಮನಸ್ಸು ಮಾಡುವ ಆತ್ಮಹತ್ಯಾನಿರ್ಧಾರ ಮತ್ತು ಆ ಸನ್ನಿವೇಶದಿಂದ ಹೊರಬರುವುದು ಸತ್ಯಪ್ಪನಂತಹ ವ್ಯಕ್ತಿತ್ವಗಳಿಗೇ ಅನನ್ಯವಾದ ಮತ್ತೊಂದು ಪ್ರಕರಣ.
ಸತ್ಯಪ್ಪನಂಥ ಗಾಂಧಿವಾದಿಯು ತನ್ನ ಪ್ರವೃತ್ತಿಯ ಪ್ರಚಂಡಪ್ರವಾಹಕ್ಕೆ ಸಿಲುಕಿ ತನ್ನ ಕಣ್ಣಿನಲ್ಲೇ ಸಣ್ಣವನಾದಾಗ ಅವನಲ್ಲಿ ತೋರಿಕೊಳ್ಳುವ ಪರಿತಾಪ, ಗೊಂದಲ, ಮತ್ತು ಜುಗುಪ್ಸೆಗಳ ಗಂಭೀರತೆಯನ್ನು ಅವನಿಗಂಟಿದ ಗುಪ್ತರೋಗ ಹಾಗೂ ಅದರಿಂದಾಗುವ ನಿರಂತರಯಮಯಾತನೆಗಳು ಸಮರ್ಥವಾಗಿ ಬಿಂಬಿಸಿವೆ.
ಒಮ್ಮೆ ತಾನು ನೆಚ್ಚಿಕೊಂಡು ಬಂದ ಹಾದಿಯನ್ನು ಬಿಟ್ಟಾಗ ಮನಸ್ಸು ಅವಿರತವಾಗಿ ಹೇಗೆ ಪರಿತಪಿಸುತ್ತದೆಂಬುದನ್ನು ಅವನ ನೋವು ಮತ್ತೆ ಮತ್ತೆ ಕಾಡುವದರಲ್ಲಿ ಕಾಣಬಹುದಾದರೆ, ಆ ನೋವು ಅವನನ್ನು ಎಷ್ಟು ಕಾಡುತ್ತದೆ ಎಂಬುದನ್ನು ಅವನ ಈ ಮಾತಿನಲ್ಲಿ ನೋಡಬಹುದು. “ ಬಸ್ ಚಲಿಸುವಾಗ ಬೆಳಿಗ್ಗೆ ಆದಂತೆಯೇ ಉರಿ. ಯಾತನೆ. ಹೇಗೆ ಕೂತರೂ ಕಷ್ಟವೆನಿಸುತ್ತಿತ್ತು. ಸಾವನ್ನು ನಿಶ್ಚಯ ಮಾಡಿಕೊಂಡರೂ ಶರೀರಬಾಧೆ ಕಡಿಮೆಯಾಗುವುದೇ ಇಲ್ಲವಲ್ಲ ? ಎಂಬ ಆಶ್ಚರ್ಯದಲ್ಲಿ ಮನಸ್ಸು ಮುಳುಗಿತು. ತನ್ನ ತಪ್ಪಿಗೆ ಶಿಕ್ಷೆಯನ್ನು ನಿಶ್ಚಯಿಸಿದರೂ ಪರಿತಾಪ ನಿಲ್ಲುವುದಿಲ್ಲ".
ಹೀಗೆ ಅವನ ಜಿಜ್ಞಾಸೆ ಜಿಗುಪ್ಸೆಗಳು ಪದರಪದರವಾಗಿ ಸಾಗುವಾಗ ಒಮ್ಮೆ ಮನಸ್ಸು ದಂಡನೆಯ ಕಡೆಗೆ ವಾಲಿದರೆ, ಮತ್ತೊಮ್ಮೆ ಪ್ರಾಯಶ್ಚಿತ್ತದೆಡೆಗೆ ಹೋಗುತ್ತದೆ. ಒಮ್ಮೆ ಆತ್ಮಹತ್ಯೆಯಂತಹ ಶಿಕ್ಷೆಯ ಪ್ರಮಾಣ ಅತಿಯಾಯಿತೇ ಎಂದು ಅನುಮಾನಿಸಿದರೆ ಮತ್ತೊಮ್ಮೆ ಈ ರೀತಿಯ ಅನುಮಾನವೇ ತಪ್ಪು ಎಂದು ಅವನ ಪಾಪಪ್ರಜ್ಞೆಯು ಹೇಳುತ್ತದೆ. ಹೀಗೆ ಪಾಪಪ್ರಜ್ಞೆ, ಮೌಲ್ಯಪ್ರಜ್ಞೆ ಮತ್ತು ಜೀವಪ್ರಜ್ಞೆಗಳು ಒಂದರಮೇಲೊಂದು ಬೀಳುತ್ತಾ ಕಡೆಗೆ ಕುತ್ತಿಗೆಗೆ ಹಾಕಿಕೊಂಡ ಹಗ್ಗವನ್ನು ಕಳಚಿ ಜೀವನವನ್ನು ಆಯ್ಕೆಮಾಡಿಕೊಳ್ಳುವುದು, ಸತ್ಯಪ್ಪನ ವ್ಯಕ್ತಿತ್ವದ ಆಳದಲ್ಲಿರುವ ಜೀವನ್ಮುಖತೆ ಮತ್ತು ಸಡಿಲತೆ ಎರಡನ್ನೂ ತೋರಿಸುತ್ತದೆ.
೪. ಪರಮಮೌಲ್ಯದ ಮೂರ್ತಿಭಂಜನೆ:
ಬೀಭತ್ಸವು ಎರಡು ರೀತಿಯಲ್ಲಿ ಸಾಕ್ಷಿಯಲ್ಲಿ ವ್ಯಕ್ತವಾಗುತ್ತದೆ. ೧. ತಾಯಿ, ಮಗಳಿಬ್ಬರೊಂದಿಗೂ(ಲಕ್ಕೂ-ಲತಾ ಹಾಗೂ ಸಾವಿತ್ರಿ-ಜಾನಕಮ್ಮ) ಏರ್ಪಡುವ ಮಂಜಯ್ಯನ ಸಂಬಂಧಗಳು ಒಂದೆಡೆಯಾದರೆ, ೨. ಕಡೆಗೆ ಮಂಜಯ್ಯನ ಮರ್ಮಾಂಗವನ್ನೇ ಕತ್ತರಿಸುವ ಲಕ್ಕುವಿನ ಸೇಡು ಮತ್ತೊಂದು.
ಮೊದಲನೆಯದರಲ್ಲಿ, ಮೌಲ್ಯದ ಲವಲೇಶವೂ ಸೋಂಕದ ಮಂಜಯ್ಯನ ಕಾಮಾತಿರೇಕವು ತಿಳಿದೂ ತಿಳಿದೂ ತಾಯಿ ಮಗಳಿಬ್ಬರೊಡನೆ ಸಂಬಂಧವನ್ನಿಟ್ಟುಕೊಂಡರೆ, ಆ ತಾಯಿಮಕ್ಕಳು ಇದರಲ್ಲಿ ಭಾಗಿಯಾಗಲು ತಮ್ಮ ಪ್ರವೃತ್ತಿಯ ಚೋದನೆಯೇ ಕಾರಣವಾಗುತ್ತದೆ. ಇದು ತಿಳಿದೂ ಏನೂ ಮಾಡಲಾಗದೆ ಪರಮೇಶ್ವರಯ್ಯನ ಬಾಯಿಕಟ್ಟುವುದು, ಮನೆಯ ಘನತೆಗೆ ಬೀಳುವ ಪೆಟ್ಟು , ಮಕ್ಕಳಿಗೆ ತಾಯಿಯ ಬಗೆಗಿರುವ ಗೌರವದ ಭಂಜನೆ ಮತ್ತು ಅದರಿಂದಾಗುವ ಮಾನಸಿಕ ಆಘಾತಗಳ ಕಲ್ಪನೆಯಿಂದಲೇ.
ಎರಡನೆಯದರಲ್ಲಿ, ಮೊದಲನೆಯ ಬೀಭತ್ಸದಿಂದ ಜರ್ಝರಿತಳಾದ ಲಕ್ಕುವು ಅದಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುವುದೇ ಆಗಿದೆ. ಲಕ್ಕುವಿನಂತ ಸಾಮಾನ್ಯ ಪಾತ್ರಕ್ಕೆ ಆಗುವ ಆಘಾತದ ಪ್ರಮಾಣವನ್ನು ನೋಡಿದರೆ ಅವಳ ಈ ರೀತಿಯ ಪ್ರತೀಕಾರಕ್ಕೆ ಔಚಿತ್ಯವೊದಗುತ್ತದೆ. ಮತ್ತು ಮಂಜಯ್ಯನ ಅತಿಕಾಮವನ್ನೂ ಅವನ ಅನೈತಿಕಸಂಬಂಧಗಳನ್ನೂ ಭಂಜಿಸುವ ಚಿಹ್ನೆಯಾಗಿ ಈ ಪ್ರಕರಣ ಮತ್ತೂ ಹೆಚ್ಚು ಔಚಿತ್ಯದಿಂದ ಕೂಡಿದೆಯಾದ್ದರಿಂದ, ಓದುಗರು ಇದನ್ನು ಅಸಹ್ಯಿಸುವ ಕಾರಣವಿಲ್ಲವಷ್ಟೆ.
ಇಲ್ಲಿ ಲೇಖಕರ ಔಚಿತ್ಯವನ್ನು ಗಮನಿಸಬೇಕು. ನಮ್ಮ ಸಮಾಜದಲ್ಲಿ ತಾಯಿ ಮತ್ತು ಮಗಳಿಬ್ಬರೊಂದಿಗೂ ಸಂಬಂಧವಿರಿಸಿಕೊಳ್ಳುವುದು ಮಹಾಪಾತಕವೆಂದೇ ಭಾವಿಸಲ್ಪಟ್ಟಿದೆ. ಅಂತಹ ವಿಷಯವನ್ನು ಓದುಗರಿಗೆ ತಲುಪಿಸುವಾಗ ಎಚ್ಚರವಿರಬೇಕು. ಅದರಲ್ಲಿಯೂ ಸಾಕ್ಷಿಯಲ್ಲಿ ಇಂತಹ ಎರಡು ಘಟನೆಗಳು ನಡೆಯುವುದರಿಂದ ಪುನರಾವರ್ತನೆಯಿಂದ ವಿಷಯದ ಗಾಂಭೀರ್ಯ ಕಡಿಮೆಯಾಗವುದನ್ನೂ ಕಾದಂಬರಿಯ ಕುತೂಹಲನಿರ್ವಹಣೆಯನ್ನೂ ಒಂದೇ ಎಳೆಯಲ್ಲಿ ಲೇಖಕರು ನಿರ್ವಹಿಸಿದ್ದಾರೆ. ಲಕ್ಕೂ-ಲತಾರ ಜತೆಗಿನ ಮಂಜಯ್ಯನ ಸಂಬಂಧವನ್ನು ಚಿತ್ರಿಸುತ್ತಲೇ ಮಂಜಯ್ಯ ಜಾನಕಮ್ಮನ ಸಂಬಂಧದ ರಹಸ್ಯವನ್ನು ಲಕ್ಕುವಿನ ಮೂಲಕ ಸೂಚ್ಯವಾಗಿ ತಿಳಿಸುವ ಲೇಖಕರು ಸಾಕ್ಷಿಯ ಅಂತ್ಯಕ್ಕೆ ಬೇಕಾದ ನಾಟಕೀಯ ತಿರುವನ್ನೂ ನಮ್ಮ ಮೌಲ್ಯಸಾಗರದ ಆಳವನ್ನು ಕಲಕುವುದನ್ನೂ ಕಥೆಯ ಔಚಿತ್ಯವನ್ನೂ ಒಟ್ಟಿಗೆ ಸಾಧಿಸಿದ್ದಾರೆ.