ರಾವಣ: ಒಂದು ಸಂಕ್ಷಿಪ್ತವಿಶ್ಲೇಷಣೆ

ಸಾಮಾನ್ಯವಾಗಿ “ಕಾವ್ಯನ್ಯಾಯ”ದ (Poetic Justice) ಗೀಳಿರುವ ಕವಿ-ಕಥಕರಿಗೆ ರಾಮಾಯಣ-ಮಹಾಭಾರತಗಳಂಥ ವೈಶ್ವಿಕಮಹಾಕಾವ್ಯಗಳ “ದುಷ್ಟ”ಪಾತ್ರಗಳಿಗೂ “ದುರದೃಷ್ಟವಂತ”ಪಾತ್ರಗಳಿಗೂ ತಮ್ಮ ವಿನೂತನಪ್ರತಿಭಾಬಲದಿಂದ ಯುಕ್ತರೀತಿಯ “ನ್ಯಾಯ”ವನ್ನು ಸಲ್ಲಿಸಬೇಕೆಂದೂ ತನ್ಮೂಲಕ ಅವರಿಗೆ ವ್ಯಾಸ-ವಾಲ್ಮೀಕಿಗಳಿಂದಲೋ ಅವರನ್ನು ಒಪ್ಪಿದ ಸಹೃದಯ-ವಿಮರ್ಶಕಸಮೂಹದಿಂದಲೋ ಆದ “ಅನ್ಯಾಯ”ವನ್ನು ನೇರ್ಪುಗೊಳಿಸಬೇಕೆಂದೂ ಹಪಹಪಿಕೆಯಿರುತ್ತದೆ. ಈ ತುಡಿತವು ಅದೆಷ್ಟೋ ಬಾರಿ ಆ ಮಹಾಕೃತಿಗಳ “ಶಿಷ್ಟ”ಪಾತ್ರಗಳನ್ನೂ “ಅದೃಷ್ಟವಂತ”ಪಾತ್ರಗಳನ್ನೂ ಕೀಳ್ಗರೆದು, ಮೂಲದ ಕಥಾಕ್ರಮವನ್ನೇ ತಿರುಚಿ, ತನ್ನಿಚ್ಛೆಯನ್ನು ಸಾಧಿಸಿಕೊಳ್ಳಬೇಕೆಂಬ ರಸಮಾರಕವಾದ ತೆವಲಿನ ಮಟ್ಟಕ್ಕೆ ಜಾರುವುದೂ ಉಂಟು.

ಭಾಸನವೆನ್ನಲಾದ ಪ್ರತಿಮಾ-ಅಭಿಷೇಕ-ಬಾಲಚರಿತ-ಪಂಚರಾತ್ರ-ಕರ್ಣಭಾರ-ಊರುಭಂಗಗಳಂಥ ರೂಪಕಗಳಲ್ಲಿಯೇ ಇಂಥ ಪ್ರಯತ್ನವನ್ನು ಕಾಣಬಹುದು. ಆದರೆ, ಅಲ್ಲಿ ಯಾವುದೇ ಇತರಪಾತ್ರಗಳ ಮಹತ್ತ್ವಕ್ಕೆ ಧಕ್ಕೆಯಾಗುವಂತೆ ಈ “ಪತಿತೋದ್ಧರಣ”ವು ಸಾಗಿಲ್ಲವೆಂಬುದು ಸಂತೋಷದ ಸಂಗತಿ. ಪಾಶ್ಚಾತ್ಯಸಾಹಿತ್ಯದ ಸಂಪರ್ಕ ನಮಗುಂಟಾದ ಬಳಿಕ ಈ ತೆರನಾದ “ಉದ್ಧಾರಕಪ್ರವೃತ್ತಿ”ಯು ನಮ್ಮ ದೇಶಭಾಷೆಗಳ ಅವೆಷ್ಟೋ ಸತ್ಕವಿಗಳಿಗೂ ಸಮರ್ಥಲೇಖಕರಿಗೂ ಉಂಟಾಗಿರುವುದು ಸರ್ವತ್ರ ದೃಷ್ಟಚರವೇ. ಇಂಥ ಕಲೇತರವರ್ತನೆಯ ಅಧಃಪಾತಪರಾಕಾಷ್ಠೆಯೇ ವಾಮಪಂಥದ ಸಾಹಿತಿಗಳೆನಿಸಿಕೊಂಡವರ “ಸಾಮಾಜಿಕನ್ಯಾಯ”ವಾಗಿ (Social Justice) ಸಾಹಿತ್ಯಶಾಸ್ತ್ರದ ಅಧಿಕರಣಗಳಲ್ಲಿ ಸೇರಿಕೊಂಡು ಅಧಿಕೃತತೆಯನ್ನು ಕೂಡ ಕೊಳ್ಳೆಹೊಡೆಯುತ್ತಿರುವ ಸಂಗತಿ ಶುದ್ಧಸಾಹಿತ್ಯದ ಸಹೃದಯರಿಗೆ ಅಗೋಚರವೇನಲ್ಲ. ಪೂರ್ವೋಕ್ತಸ್ವಘೋಷಿತಸಾಹಿತಿಗಳ “ಸಾಮಾಜಿಕನ್ಯಾಯ-ಕಾವ್ಯನ್ಯಾಯ”ಗಳ ಕೋಲಾಹಲದಲ್ಲಿ ಕಲೆಯಲ್ಲಿ ಎಲ್ಲಕ್ಕಿಂತ ಮೂಲಭೂತವಾದ ರಸನ್ಯಾಯವೇ ಅಸ್ತಂಗತಿಸಿರುವುದು ವಿಷಾದದ ವಾರ್ತೆ. ಹೆಚ್ಚೇನು, ಈ ಮೂಲಕ ನಿರ್ವಿಶೇಷಸಾಮಾನ್ಯವಾದ ನ್ಯಾಯವೇ ಸಂಚಕಾರದಲ್ಲಿ ಸಿಲುಕಿದೆಯೆಂದರೆ ತಪ್ಪಲ್ಲ. ವಸ್ತುತಃ ಅಪ್ಪಟ ಕಲೆಯಲ್ಲಿ ಯಾವುದೇ ರೀತಿಯ ಲೋಕಮಾತ್ರಸತ್ತಾಮಾನಿತವಾದ “ಒಳಿತು-ಕೆಡಕು”ಗಳ ಪ್ರಮೇಯವಿರುವುದಿಲ್ಲ. ರಸದ ಮಟ್ಟವನ್ನು ಮುಟ್ಟಿದೊಡನೆಯೇ ಎಲ್ಲ ಪಾತ್ರ-ಸಂದರ್ಭಗಳೂ ಆಸ್ವಾದ್ಯವಾಗುತ್ತವೆ, ಆಲೋಚ್ಯವೂ ಆಗುತ್ತವೆ. ರಸ-ಧ್ವನಿ-ಔಚಿತ್ಯ-ವಕ್ರತೆಗಳೆಂಬ ಮಾನಗಳಿಂದ ತೇರ್ಗಡೆಯಾದ ಯಾವುದೇ ಕಲಾಪ್ರಕಾರದಲ್ಲಿ — ವಿಶೇಷತಃ ಕಥನಾತ್ಮಕಮಾಧ್ಯಮದಲ್ಲಿ — ದುಷ್ಟಪಾತ್ರ-ಶಿಷ್ಟಪಾತ್ರಗಳೆಂಬ ತಾರತಮ್ಯವಿರದು. ಇಂಥ ವಿಭಾಗಗಳಿಗೆ ಅರ್ಥ-ಔಚಿತ್ಯಗಳು ಬರುವದು ಲೋಕಸತ್ತೆಯಲ್ಲಿ ಮಾತ್ರ. ಈ ಕಾರಣದಿಂದಲೇ ಲೋಕಜೀವನದಲ್ಲಿ ರಾವಣನ ಕಾಮ, ದುರ್ಯೋಧನನ ಲೋಭ, ಇಯಾಗೋವಿನ ವಂಚನೆ, ಲಿಯರನ ಔದ್ಧತ್ಯ ಮುಂತಾದುವೆಲ್ಲ ಆಕ್ಷೇಪಾರ್ಹವಾದರೆ ಕಲೆಯಲ್ಲಿ ಇಂಥ ಆಕ್ಷೇಪದ ಅಂಗೀಕಾರದ ಆಚೆಗೆ ಕೂಡ ಅಂದ-ಆನಂದಗಳು ಇರುತ್ತವೆ. ಪ್ರತ್ಯುತ, ಇವುಗಳು ಸ್ಫುರಿಸುವುದೇ ಇಂಥ ಲೋಕಾತೀತಸ್ತರದಲ್ಲಿ ಪಾತ್ರಗಳ ಸಂಕ್ರಾಂತಿಯನ್ನು ಪರಿಕಿಸುವ ಮೂಲಕ.

ಈ ಕಾರಣದಿಂದಲೇ ಕಲೆಯಲ್ಲಿ ಲೋಕದ ಮನುಷ್ಯರಿದ್ದರೂ ಅವರು ಲೋಕನೀತಿಮಾತ್ರದ “ಒಳಿತು-ಕೆಡಕು”ಗಳ ಭಾರ-ಬಾಧ್ಯತೆಗಳಿಲ್ಲದ ಕೇವಲ ಪಾತ್ರಗಳಾಗಿರುತ್ತಾರೆ. ಆದರೆ ಲೋಕದಲ್ಲಿದು ಸಾಧ್ಯವಿಲ್ಲ. ಇಲ್ಲಿ ಒಳಿತು-ಕೆಡಕುಗಳ, ಶಿಷ್ಟ-ದುಷ್ಟಗಳ ವ್ಯತ್ಯಾಸವು — ಅದೆಷ್ಟೇ ಸಾಪೇಕ್ಷವಾಗಿರಲಿ — ಸ್ಫುಟವಾಗಿರುತ್ತದೆ ಮತ್ತು ವ್ಯವಹಾರಕ್ಕೆ ಅನಿವಾರ್ಯವಾಗುವ ಮಟ್ಟಿಗೆ ನಿರಪೇಕ್ಷವೂ ಆಗಿರುತ್ತದೆ. ಇದು ಭೌತವಿಜ್ಞಾನದ ಉನ್ನತಸ್ತರದಲ್ಲಿ ಸಾಪೇಕ್ಷವಾಗಿ ತೋರಿಕೊಳ್ಳುವ ದೇಶ-ಕಾಲಗಳು ದೈನಂದಿನತಂತ್ರಜ್ಞಾನದ ಮಟ್ಟದಲ್ಲಿ, ಆನ್ವಯಿಕವಿಜ್ಞಾನದ ಸ್ತರದಲ್ಲಿ ನಿರಪೇಕ್ಷವೆಂಬಂತೆ ವ್ಯವಹೃತವಾಗುವುದಕ್ಕೆ ಸಂವಾದಿ. ಈ ವಿವೇಕವನ್ನು ಕಳೆದುಕೊಂಡರೆ ನಮಗೆ ಉಭಯಥಾ ನಷ್ಟವಲ್ಲದೆ ಲಾಭವೇನೂ ಇಲ್ಲ. ಈ ಕಾರಣದಿಂದಲೇ ಧ್ವನಿಧುರಂಧರ ಆನಂದವರ್ಧನನು “ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ | ಕಥಾಶ್ರಯಾ ನ ತೈರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ ||” ಎಂದು ಒಕ್ಕಣಿಸಿದ್ದು. ಈ ದಾರ್ಶನಿಕನೇಪಥ್ಯದಲ್ಲಿ ನಾವೀಗ ರಾವಣಪಾತ್ರದ ಮೌಲ್ಯಮೀಮಾಂಸೆಯನ್ನು ಸ್ವಲ್ಪ ಸಾಗಿಸಬಹುದು. ಇದಕ್ಕಾಗಿ ನಾವಿಲ್ಲಿ ಆಶ್ರಯಿಸಿರುವುದು ಆದಿಕವಿ ವಾಲ್ಮೀಕಿಯನ್ನು ಮಾತ್ರ. ಏಕೆಂದರೆ ಆತನ ಕಾಣ್ಕೆಗಿರುವ ಕಲಾತ್ಮಕತೆ ಮಿಕ್ಕೆಲ್ಲ ರಾಮಾಯಣಕರ್ತರ ದರ್ಶನಗಳಿಗಿಂತ ಮಿಗಿಲಾಗಿ ಸ್ವಚ್ಛ, ಸಮಗ್ರ.

ಮಹರ್ಷಿವಿಶ್ರವಸ್ಸು ಮತ್ತು ಕೈಕಸೀದೇವಿಯರ ಮಗ ರಾವಣ ತನ್ನ ಹುಟ್ಟಿನೊಡನೆಯೇ ಸಿಟ್ಟನ್ನೂ ಕಟ್ಟಿಕೊಂಡು ಬಂದವನು. ಎಲ್ಲ ಸಿಟ್ಟುಗಳ ಮೂಲವೂ ಆಶೆಯಲ್ಲದೆ ಮತ್ತೇನು? ಅರ್ಥಾತ್, ಕ್ರೋಧದ ಮೂಲ ಕಾಮ. ಈ ಕಾಮ-ಕ್ರೋಧಗಳೆರಡೂ ರಜೋಗುಣದ ಪರಮಾಭಿವ್ಯಕ್ತಿಗಳೇ. ಕಾಮವು ಸಫಲವಾದರೆ ಕಾಮಿತವಸ್ತುವಿನಲ್ಲಿ ಮೋಹವನ್ನೂ ಕಾಮಜೀವನದಲ್ಲಿ ಮದವನ್ನೂ ಉಕ್ಕಿಸುತ್ತದೆ. ಇನ್ನಿದು ವಿಫಲವಾದರೆ ಬಲವಿದ್ದಲ್ಲಿ ಕ್ರೋಧವಾಗಿ, ಬಲವಿಲ್ಲದಿದ್ದಲ್ಲಿ ಮಾತ್ಸರ್ಯವಾಗಿ, ಉಭಯತ್ರ ಲೋಭವಾಗಿ ಪರಿಣಮಿಸುತ್ತದೆ. ಇದು ರಜಸ್ಸಿನ ರೂಕ್ಷಮಾರ್ಗ.

ವಿಶ್ರವಸ್ಸಿನ ಹಿರಿಯ ಹೆಂಡತಿಯಲ್ಲಿ ಜನಿಸಿದ ಕುಬೇರನು ದಿಕ್ಪಾಲಕನಾಗಿ, ಪುಷ್ಪಕವಿಮಾನವನ್ನುಳ್ಳವನಾಗಿ, ಲಂಕಾಸಾಮ್ರಾಜ್ಯದ ಒಡೆಯನಾಗಿ ಮೆರೆಯುವುದನ್ನು ಕಂಡು ಕನಲಿದ ರಾವಣನಿಗೆ ಅವನನ್ನು ಮೀರಿಸಬೇಕೆಂಬ ಹುರುಡು ಹೊಮ್ಮಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಲೋಕದ ಬಲುಮಟ್ಟಿನ ಎಲ್ಲ ಮನುಜರ ಕಥೆ, ವ್ಯಥೆ. ಏನಾದರಾಗಲಿ ರಾವಣನ ರಜಸ್ಸು ತುಂಬ ಸಮೃದ್ಧ ಮತ್ತು ಸಮರ್ಥ. ಈ ಕಾರಣದಿಂದಲೇ ಅವನು ಸೃಷ್ಟಿಕರ್ತನನ್ನೂ ಒಲಿಸಿಕೊಂಡು ಸಾವಿನ ಬಗೆಗೆ ವರಗಳನ್ನು ಗಳಿಸಿದ. ಅರ್ಥಾತ್, ತನಗೆ ನರ-ವಾನರರಿಂದಲ್ಲದೆ ಮತ್ತಾರಿಂದಲೂ ಆವುದರಿಂದಲೂ ಸಾವು ಬರದಂಥ ಭರವಸೆ; ಹೇಗೂ ನರ-ವಾನರರಂಥ ದುರ್ಬಲಜೀವಿಗಳನ್ನು ತಾನು ಲೀಲೆಯಿಂದ ನಿರ್ಮೂಲಿಸಬಲ್ಲನೆಂಬ ಆತ್ಮವಿಶ್ವಾಸವಿದ್ದೇ ಇತ್ತಲ್ಲ! ಜೊತೆಗೆ, ದಿಕ್ಪಾಲಕರನ್ನೂ ಸಕಲಲೋಕಗಳನ್ನೂ ಗೆಲ್ಲಬಲ್ಲ ಸಾಧನಸಂಪತ್ತಿಯನ್ನೂ ಗಳಿಸಿಕೊಂಡ. ಇದೆಲ್ಲ ನಿರಂತರವಾಗಿ ತೊಡಗಿಕೊಳ್ಳುವ, ಕೆಲಸವನ್ನು ಕುಮ್ಮರಿಸಿಕೊಳ್ಳುವ, ಸಾಧನೆಗಳನ್ನು ಬೆಂಬತ್ತಿ ಸಾಗುವ ಹಾಗೂ ಪರಿಣಾಮದಲ್ಲಿ ದುಃಖಾಧಿಕ್ಯ ಮತ್ತು ಸುಖಲೇಶದಲ್ಲಿ ನರಳಿ, ನರಳಿಸುವ ರಜಸ್ಸಿನ ನಿರೀಕ್ಷಿತವರ್ತನೆ.

ಅದೇ ರಾವಣನ ಹಿರಿಯ ತಮ್ಮನಾದ ಕುಂಭಕರ್ಣನು ತಮಸ್ಸಿನ ಪ್ರತಿರೂಪವಾದ ಕಾರಣ ಈ ಗುಣದ ಪ್ರಧಾನಲಕ್ಷಣವಾದ ಮೂಢತೆಯಲ್ಲಿ — ಅರ್ಥಾತ್, ಗಾಢನಿದ್ರೆಯಲ್ಲಿ — ತನ್ನ ಜೀವನಪರಮಾರ್ಥವನ್ನು ಕಂಡುಕೊಂಡನು. ಇವರಿಬ್ಬರಿಗೂ ಕಿರಿಯ ತಮ್ಮನಾದ ವಿಭೀಷಣನು ಸತ್ತ್ವದ ಸಾಕಾರ. ಹೀಗಾಗಿಯೇ ಇವನು ಶುಷ್ಕಸಾಧನೆಯ ದರ್ಪಕ್ಕಾಗಲಿ, ಶವಪ್ರಾಯಸೌಖ್ಯದ ಲೋಲುಪತೆಗಾಗಲಿ ಮರುಳಾಗದೆ ರಜಸ್ಸಿನ ಕರ್ಮವು ಕರ್ಮಯೋಗವಾಗುವ, ತಮಸ್ಸಿನ ಆಲಸ್ಯವು ಆನಂದವಾಗುವ ಸ್ಥಿತಿಯನ್ನು ನೆಮ್ಮಿದನು. ಹೀಗಾಗಿ ಇವನಲ್ಲಿ ಯುಕ್ತಾಯುಕ್ತವಿವೇಕ ಮತ್ತು ವಿಭೂತಿಪೂಜೆಗಳ ಪರಿಪಾಕ ಸ್ಥಿರವಾಗಿದ್ದುವು. ಈ ಮೂವರು ಸಹೋದರರ ಗುಣತ್ರಯಲಕ್ಷಣವನ್ನು ಸಂಕ್ಷೇಪಿಸಿಕೊಳ್ಳುವುದಾದರೆ ಅದು ಹೀಗೆ: ಸತ್ತ್ವದ ಲಕ್ಷಣವು ಮಹತ್ತಿನ ಅಂಗೀಕಾರ, ಮನಃಪ್ರಸಾದ ಮತ್ತು ಪಿಂಡಾಂಡ-ಬ್ರಹ್ಮಾಂಡಗಳ ನಡುವೆ ಸಾಮರಸ್ಯಕ್ಕಾಗಿ ನಿಷ್ಕಾಮಯತ್ನ. ರಜಸ್ಸಿನ ಲಕ್ಷಣವು ಸಂಘರ್ಷ, ಸುಖದ್ವೇಷ ಮತ್ತು ವ್ಯಷ್ಟಿ-ಸಮಷ್ಟಿಗಳ ನಡುವೆ ನಿರಂತರಸಂಕ್ಷೋಭೆಗಾಗಿ ಸಾಗ್ರಹಪ್ರಯತ್ನ. ತಮಸ್ಸಿನ ಲಕ್ಷಣವು ನಿರ್ಲಕ್ಷ್ಯ, ಆಲಸ್ಯ ಮತ್ತು ಕರ್ಮಯೋಗ-ಆನಂದಗಳ ಅಭಾವ.

ನಾವು ಮತ್ತೆ ರಾವಣನತ್ತ ತಿರುಗೋಣ. ಅವನು ಯಾವುದೇ ತೆರನಾದ ಧರ್ಮಾಧರ್ಮವಿವೇಚನೆಯಿಲ್ಲದೆ, ಬ್ರಹ್ಮವರಪ್ರಭಾವ ಹಾಗೂ ನಿಜಭುಜಬಲದಿಂದ ದಿಕ್ಪಾಲಕರನ್ನೆಲ್ಲ ಗೆದ್ದು ಕುಬೇರನ ವಿಮಾನವನ್ನೂ ತನ್ನದನ್ನಾಗಿಸಿಕೊಂಡು, ಆತನನ್ನು ಲಂಕೆಯಿಂದ ಹೊರದೂಡಿ, ಅಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ರಜೋಗುಣದ ಒಂದು ಮಹಾಲಕ್ಷ್ಯವೆನ್ನಬಹುದಾದ ಅರ್ಥಸಾಧನೆಯನ್ನು ಮಾಡಿದ. ಆ ಬಳಿಕ ಈ ಎಲ್ಲ ಅರ್ಥವನ್ನೂ ನಿಶ್ಶಂಕೆಯಿಂದ ತನ್ನ ಕಾಮತೃಪ್ತಿಗಾಗಿ ಬಂಡವಾಳವೆಂಬಂತೆ ಹೂಡಿದ. ಆದರೆ, ಸತ್ತ್ವಾಭಿಮುಖವಾಗದ ಕಾಮವೆಂದಿಗೂ ತೃಪ್ತಿಯನ್ನೀಯದು. ರಜಸ್ಸಿನ ಮೂಲಕ ಬರುವ ಅರ್ಥವು ಧರ್ಮದ ಕಡೆಗೆ ತಿರುಗದಿದ್ದಲ್ಲಿ ಹೇಗೆ ಅನರ್ಥವೇ ಆಗುವುದೋ ಹಾಗೆಯೇ ಆನಂದಪರ್ಯಾಯವಾದ ಮೋಕ್ಷದ ಅರಿವಿಲ್ಲದ ಕಾಮವೂ ಧೂಮವಾಗುವುದು. ತನಗೆ ಸಕಲಭೋಗಾಸ್ವಾದಕ್ಕೆ ತಕ್ಕ ಸಾಧನಸಂಪತ್ತಿಯಿದ್ದರೂ ಅದೆಲ್ಲ ತನ್ನ ಪಾಲಿಗೆ ತೃಪ್ತಿಯನ್ನು ಮೃಗಮರೀಚಿಕೆಯನ್ನಾಗಿಸುತ್ತಿದ್ದರೆ ಆವರೆಗೂ ತಾನು ಸರ್ವಸಮರ್ಥನೆಂದು ಬೀಗುತ್ತಿದ್ದ ಜೀವಕ್ಕೆ ಇದಕ್ಕಿಂತ ಮಿಗಿಲಾದ ಪರಾಭವ ಮತ್ತೇನು? ಆದರೆ ಮೂಲತಃ ಮಹದಂಗೀಕಾರಬುದ್ಧಿಯೇ ಇಲ್ಲದ ರಜೋಮಯಜೀವಿ ಇದಾದ ಕಾರಣ ಸುಲಭವಾಗಿ ಅರ್ಥ-ಕಾಮಗಳ ಸೋಲನ್ನು ಒಪ್ಪೀತೆ? ಹಾಗೆಂದಮಾತ್ರಕ್ಕೆ ವಾಸ್ತವದಲ್ಲಿ ತನಗಾಗುತ್ತಿರುವ ಸೋಲನ್ನು ಮರೆಯಲಾದೀತೆ? ಹೀಗಾಗಿ ಇಂಥ ಸ್ಥಿತಿಯಲ್ಲಿ ರಜೋಮಯಜೀವಿಗೆ ವಿವಶತೆ, ವಿಕ್ಷೋಭ ಮತ್ತು ವಿಕ್ಷಿಪ್ತತೆಗಳು ಕಟ್ಟಿಟ್ಟ ಬುತ್ತಿ. ಅದು ಭೌತಿಕವಾಗಿ ತಾನು ತುಂಬ ಸಮರ್ಥವೂ ಪ್ರಬಲವೂ ಆದ ಕಾರಣ ಈ ತೆರನಾದ ವಿವಶತೆಯೇ ಮೊದಲಾದವು ಅದನ್ನು ಹುಚ್ಚುಹಿಡಿದ ಹೆಬ್ಬುಲಿಯ ವರ್ತನೆಯಂತೆ ಮತ್ತಷ್ಟು ಲೋಕಕಂಟಕವಾಗಿಸುವುದರಲ್ಲಿ ಸಂದೇಹವಿಲ್ಲ. ರಾವಣನ ಲೋಕಪೀಡಾಪರಾಯಣತೆಯ ಬೀಜವಿಲ್ಲಿದೆ. ತನ್ನ ಆನಂದವನ್ನು ತಾನೇ ಕಂಡುಕೊಂಡ ಜೀವಿಯು ತನ್ನ ಸುತ್ತಲಿನ ಜಗತ್ತಿಗೆಂದೂ ಕೇಡನ್ನೆಸಗಲಾರದು.

ಸತ್ತ್ವಾಧೀನವಾಗದೆ ನಿಜಸೌಖ್ಯಕ್ಕೆ ಗತ್ಯಂತರವಿಲ್ಲವೆಂದು ಸಾಕ್ಷಾತ್ಕರಿಸಿಕೊಳ್ಳದ ರಜಸ್ಸು ಮತ್ತೆ ಮತ್ತೆ ಭೌತಿಕಬಲದರ್ಪಪ್ರದರ್ಶನದಲ್ಲಿಯೂ ಮಾಂಸಲಲಾಂಪಟ್ಯದಲ್ಲಿಯೂ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತದೆ. ಮಾತ್ರವಲ್ಲ, ತನ್ನ ಅಧಿಕಾರವಲಯದ ವಿಸ್ತರಣೆ ಹಾಗೂ ಭೋಗಸಾಮಗ್ರೀಸಂಚಯಾಧಿಕ್ಯದಲ್ಲಿಯೇ ಕೊರತೆಯನ್ನು ತೊಂಬಿಸಿಕೊಳ್ಳಲು ಹವಣಿಸುತ್ತದೆ. ಅರ್ಥಾತ್, ಅಂತರಂಗದಲ್ಲಿ ಕಂಡುಕೊಳ್ಳಬೇಕಾದ ಪರಿಹಾರಕ್ಕೆ ಬಹಿರಂಗವೊಂದನ್ನೇ ಆಶ್ರಯಿಸುತ್ತದೆ; ಅನನ್ಯಸಾಮರಸ್ಯದಲ್ಲಿ ನೆಮ್ಮದಿಯನ್ನು ಕಾಣುವುದಕ್ಕೆ ಬದಲಾಗಿ ಅಸಂಖ್ಯಸಾಮಗ್ರಿಗಳಲ್ಲಿ ಸುಖವನ್ನು ಸಿದ್ಧಿಸಿಕೊಳ್ಳಲು ಹೆಣಗುತ್ತದೆ.

ರಾವಣನಿಗಾದರೂ ಆದದ್ದು ಇದೇ. ಸಾಧ್ವಿಯಾದ ತನ್ನ ಪತ್ನಿ ಮಂಡೋದರಿಯಲ್ಲಿ ಭೋಗತೃಪ್ತಿಯನ್ನು ಕಾಣಲಾಗದೆ ಇಡಿಯ ಜಗದ ಮೇಲೆಯೇ ಮುಗಿಬಿದ್ದ. ದಿಟವೇ, ಆತನ ಶೌರ್ಯ-ವೀರ್ಯ-ಸ್ಥಾನ-ಮಾನ-ಸಾಧನ-ಸಂಪತ್ತಿಗಳಿಗೆ ತಾವೇ ಮರುಳಾಗಿಯೋ ಅಥವಾ ಬಲಾತ್ಕಾರದಿಂದ ಉರುಳಾಗಿಯೋ ಬಂದ ಹೆಂಗಳೆಯರಿಗೇನೂ ಕೊರತೆಯಿಲ್ಲ. ತನಗೊಲಿದು ಬಂದ ಸುಂದರಿಯರನ್ನಲ್ಲದೆ ತಾನೊಲಿದು ಆಕ್ರಮಿಸಿಕೊಂಡ ಕನ್ಯೆಯರನ್ನೂ ಕಲೆತ ರಾವಣನಿಗೆ ತೃಪ್ತಿಯಂತೂ ಸಿಕ್ಕಲಿಲ್ಲ. ವೈವಿಧ್ಯವೇ ಬದುಕೆಂದು ಅಷ್ಟಕ್ಕೇ ನೆಮ್ಮದಿಯ ಭ್ರಮೆಯನ್ನು ತಾಳುವಂಥ ಅಲ್ಪ-ಸ್ವಲ್ಪದ ರಜಸ್ಸಾಮರ್ಥ್ಯ ಇವನದ್ದಲ್ಲ. ಅಲ್ಲದೆ, ಹೆಣ್ಣು ಗಂಡಿನ ಹಣ-ಹೆಸರು-ಹಿರಿದಾಣಗಳನ್ನು ಹೆಚ್ಚಾಗಿ ಬಯಸುವಳೆಂದೂ ಗಂಡು ಹೆಣ್ಣನ್ನೇ ಬಯಸುವನೆಂದೂ ಲೋಕದ ನಾಣ್ನುಡಿ ಉಂಟು. ಇದನ್ನು ಸತ್ಯವೆಂದು ತತ್ಕಾಲಕ್ಕೆ ಒಪ್ಪಿದಲ್ಲಿ ರಾವಣನತ್ತ ಹಾತೊರೆದು ಬಂದವರಾರಿಗೂ ಅವನು ಬೇಕಿರಲಿಲ್ಲ; ಅವನದ್ದು ಮಾತ್ರ ಬೇಕಿತ್ತು. ಆದರೆ ರಾವಣನಿಗೆ ಹಾಗಲ್ಲ. ಅವನಿಗೆ “ಅವಳು” ಬೇಕು. ಆದರೆ ಆ ಅವಳು ಯಾರೋ! ಏನೇ ಆಗಲಿ, ಸೀತಾಪಹರಣದ ಹೊತ್ತಿಗಂತೂ ರಾವಣನು ಒಂದು ಸತ್ಯವನ್ನು ಕಂಡುಕೊಂಡಿದ್ದ — ಮಿಕ್ಕ ಜಡವಸ್ತುಗಳ ಮಾತು ಏನೇ ಆದರೂ ತಾನೊಲಿದ ಯಾವುದೇ ಜೀವವಾಗಲಿ ತನ್ನನ್ನೂ ಅದು ಒಲಿಯದೆ ತನಗೆ ನೆಮ್ಮದಿ ಸಿಗದು. ಅರ್ಥಾತ್, ಉಭಯಪ್ರೇಮವಿಲ್ಲದೆ ಕಾಮಸಾಫಲ್ಯವಿಲ್ಲ. ಇದು ರಾವಣನ ಮಟ್ಟಿಗೆ ಮಾತ್ರವಲ್ಲ, ಜಗತ್ತಿನ ಮಟ್ಟಿಗೂ ಒಂದು ಹಿರಿದಾದ ಕಾಣ್ಕೆ. ಈ ಮಟ್ಟದ ಅರಿವಾಗುವಷ್ಟು ಸ್ವಂತಿಕೆಯ ಸಾಮರ್ಥ್ಯ ರಾವಣನದ್ದೆಂಬುದನ್ನು ನಾವೆಲ್ಲ ಒಪ್ಪಬೇಕು. ಯಾವುದೇ ಕಾರಣಕ್ಕಾಗಲಿ, ತಪಸ್ಸು ಮಾಡಿದ ಜೀವ ಅದಲ್ಲವೇ? ತಪಸ್ಸು ಹೇಗೆ ತಾನೆ ಹುಸಿ ಹೋದೀತು?

ರಜಸ್ಸಿನ ಪರಮಾವತಾರವಾದ ರಾವಣನಿಗೆ ಸೀತೆ ಮತ್ತು ರಾಮರಿಬ್ಬರೂ ತುಂಬ ದೊಡ್ಡ ಸವಾಲುಗಳಾದರು. ಏಕೆಂದರೆ ರಜಸ್ಸು ನಿರಂತರವಾಗಿ ತನ್ನ ಅರ್ಥಸಾಧನಸಂಪತ್ತಿಯ ಮೇಲೆಯೂ ಕಾಮಸಾಧನಸಂಪತ್ತಿಯ ಮೇಲೆಯೂ ಅಧಿಕಾರವನ್ನು ಸ್ಥಾಪಿಸಲು ಸೆಣಸುತ್ತಿರುತ್ತದೆ. ಅದಕ್ಕೆ ಇಂಥ ಸೆಣಸಾಟವನ್ನು ಬಿಟ್ಟಲ್ಲದೆ ಅರ್ಥ-ಕಾಮಗಳು ಊರ್ಜಿತವಾಗುವುದಿಲ್ಲವೆಂದೂ ಇದು ಧರ್ಮ-ಮೋಕ್ಷಗಳ ಚಿಂತನೆಯಿಲ್ಲದೆ ಅಸಾಧ್ಯವೆಂದೂ ತಿಳಿಯದೆ ಹೋಗುವುದು ದುರ್ದೈವ. ರಾವಣನ ಅರ್ಥಪ್ರಪಂಚದ ಅಧಿಕಾರಕ್ಕೆ ರಾಮನ ಪರಾಕ್ರಮವೊಂದು ಪರೀಕ್ಷೆಯಾಗಿ ಎದುರಾದರೆ, ಕಾಮಪ್ರಪಂಚದ ಅಧಿಕಾರಕ್ಕೆ ಸೀತೆಯ ಪಾತಿವ್ರತ್ಯವೊಂದು ಪರೀಕ್ಷೆಯಾಯಿತು. ರಸತತ್ತ್ವಕ್ಕೂ ಪುರುಷಾರ್ಥಕ್ಕೂ ಇರುವ ಸಂಬಂಧವನ್ನು ಗ್ರಹಿಸಿ ಸಂಗ್ರಹವಾಗಿ ಹೇಳುವುದಾದರೆ, ಧರ್ಮಾರ್ಥಗಳನ್ನು ಪ್ರತಿನಿಧಿಸುವ ವೀರರಸಮೂರ್ತಿಯಾಗಿ ರಾಮನು ರಾವಣನನ್ನೆದುರಿಸಿದರೆ ಕಾಮ-ಮೋಕ್ಷಗಳನ್ನು ಸಂಕೇತಿಸುವ ಶೃಂಗಾರಮೂರ್ತಿಯಾಗಿ ಸೀತೆಯು ಮುಖಾಮುಖಿಯಾದಳು. ಹೀಗೆ ಪುರುಷಾರ್ಥಗಳೇ ಪ್ರತಿಯೋಗಿಗಳಾದ ಬಳಿಕ ರಾವಣನಿಗೆ ಇಹ-ಪರಗಳಲ್ಲಿ ನೆಲೆಯಾವುದು? ಬೆಲೆಯಾವುದು?  ಮೌಲ್ಯಕ್ಕೆ ಮಣಿಯದೆ ಪುರುಷಾರ್ಥಸಿದ್ಧಿಯಿಲ್ಲವೆಂಬುದು ಪರಮಾರ್ಥಸತ್ಯ. ಒಟ್ಟಿನಲ್ಲಿ ಪುರುಷಾರ್ಥಗಳನ್ನು ಮಣ್ಣುಗೂಡಿಸಿಕೊಂಡ ರಾವಣನ ಅಳಿವು ಯಾರಿಗೆ ತಾನೆ ಎಚ್ಚರಿಕೆಯಾಗದು? ಇಂಥ ಮಹಾಪಾತ್ರವನ್ನು ನಮಗೆ ದಯಪಾಲಿಸಿದ ಮಹರ್ಷಿವಾಲ್ಮೀಕಿಗಳಿಗೆ ನಮ್ಮ ಅಂಜಲಿ.

ಮಹಾಭಾರತದಲ್ಲಿ ಬರುವ ದುರ್ಯೋಧನನು ರಜಸ್ಸಂಪತ್ತಿಯಲ್ಲಿ ರಾವಣನಿಗಿಂತ ಅದೆಷ್ಟೋ ಪಟ್ಟು ಕೀಳು. ಒಳಿತಾಗಲಿ ಕೆಡುಕಾಗಲಿ, ರಾವಣನು ಸ್ವಾರ್ಜಿತವಾಗಿಯೇ ಸಮಸ್ತವನ್ನೂ ಸಂಪಾದಿಸಿದವನು. ಆದರೆ ದುರ್ಯೋಧನನು ಹೀಗಲ್ಲ. ಅವನು ಆದ್ಯಂತಪರಾವಲಂಬಿ. ಅರಿಷಡ್ವರ್ಗದ ಭಾಷೆಯಲ್ಲಿ ಹೇಳುವುದಾದರೆ, ಪ್ರಬಲನ ಕಾಮ-ಕ್ರೋಧಗಳ ಪರಿ ರಾವಣನದ್ದಾದರೆ ದುರ್ಬಲನ ಬಗೆ ದುರ್ಯೋಧನನದ್ದು. ಹೀಗಾಗಿಯೇ ಲೋಭ-ಮಾತ್ಸರ್ಯಗಳು ಅವನನ್ನು ಬೆನ್ನಟ್ಟಿ ಬೇಯಿಸಿದುವು. ಆದರೆ — ಈ ಕಾರಣದಿಂದಲೇ — ಇವನ ವ್ಯಕ್ತಿತ್ವ ಮತ್ತೊಂದು ಬಗೆಯಲ್ಲಿ ಸ್ವಾರಸ್ಯಕಾರಿ. ಅದು ಪ್ರತ್ಯೇಕಾಧ್ಯಯನವೇ ಆದೀತು. ನಮ್ಮ ಸಮಕಾಲೀನಸಾಹಿತ್ಯದ ಸಂವಾದವನ್ನು ಹಿಡಿದು ಹೇಳುವುದಾದರೆ, ಮಹಾಕಾದಂಬರೀಕಾರ ಎಸ್.ಎಲ್.ಭೈರಪ್ಪನವರ “ಸಾಕ್ಷಿ”ಯ ಮಂಜಯ್ಯ ರಾವಣನ ರಾಶಿಯವನಾದರೆ ನಾಗಪ್ಪ ದುರ್ಯೋಧನನ ನಕ್ಷತ್ರದವನು.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...