Science, then must limit itself strictly to mathematics and direct experiment; it cannot trust to unverified deduction from "laws". When we run through libraries, persuaded of these principles, what havoc must we make! If we take in our hands any volume of school metaphysics, for instance, let us ask, 'Does it contain any abstract reasoning concerning matter of fact and existence? No. Commit it then to the flames, for it can contain nothing but sophistry and illusion. (ಪುಟ. ೩೩೫-೩೩೬)
ಪಾಶ್ಚಾತ್ಯವಿಜ್ಞಾನಶಾಸ್ತ್ರಗಳಲ್ಲಿ ಇಂಥ ಸಂಗತಿಯು ತುಂಬ ಮುನ್ನವೇ ಮರೆಯಾಗಿ ವಸ್ತುನಿಷ್ಠವೂ ವಿಶುದ್ಧವೂ ಆದ ತರ್ಕಕ್ರಮವು ಜಾರಿಗೆ ಬಂದಿದೆಯಾದರೂ ಅಲ್ಲಿಯ ತತ್ತ್ವಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಸಾಹಿತ್ಯಮೀಮಾಂಸೆ, ಕಲಾಮೀಮಾಂಸೆ, ಮೌಲ್ಯಮೀಮಾಂಸೆ ಮುಂತಾದ ಅನೇಕಮಾನವಿಕವಿದ್ಯಾಶಾಖೆಗಳಲ್ಲಿ ನಿರ್ವಿಶೇಷಾನುಭವನಿಷ್ಠವಲ್ಲದ, ಬರಿದೇ ಜಟಿಲವಾದ ಮಾತಿನ ಮಲ್ಲತನವು ಬಗೆಗೆಡಿಸುವಂತೆ ಬೆಳೆದಿದೆ. ನಮ್ಮಲ್ಲಿಯೂ ದರ್ಶನಶಾಸ್ತ್ರಗಳ ವಿವೇಚನಾವಸರದಲ್ಲಿ ಇಂಥ "ವಾಗ್ವೈಖರೀ ಶಬ್ದಝರೀ....." ವಿಧಾನವು ಸತ್ಯವನ್ನು ಮರೆಯಾಗಿಸಿದ ಸಾಕಷ್ಟು ಉದಾಹರಣೆಗಳಿವೆ. ಮುಖ್ಯವಾಗಿ ಮಧ್ಯಕಾಲೀನಭಾರತದ ವಿದ್ಯಾವಲಯದಲ್ಲಿ ಇದು ವ್ಯಾಪಕವಾಗಿತ್ತು. ದಿಟವೇ, ಅಲ್ಲಿಲ್ಲಿ ಹಲಕೆಲವು ಪ್ರಾಮಾಣಿಕವೂ ಸುಬೋಧವೂ ಆದ ಯತ್ನಗಳಿಲ್ಲವೆಂದಲ್ಲ. ಆದರೆ ಪೂರ್ವಮೀಮಾಂಸೆಯ ಶಬ್ದಶಾರಣ್ಯ, ನವೀನನ್ಯಾಯದ ಪರಿಷ್ಕಾರಪ್ರಿಯತೆ, ತಂತ್ರಾಗಮಾದಿಗಳಲ್ಲಿಯ ಯೋಗಿಪ್ರತ್ಯಕ್ಷದ ಅತೀಂದ್ರಿಯತೆಗಳಂಥ ಹಲಬಗೆಯ ಅಬ್ಬರಗಳಲ್ಲಿ, ವಿಶಿಷ್ಟಾನುಭವ ಮತ್ತು ವಿಲಕ್ಷಣಲಕ್ಷಣೀಕರಣಗಳ ಹೊಯ್ಲಿನಲ್ಲಿ ನಿರ್ವಿಶೇಷಸಾಮಾನ್ಯಾನುಭವ ಅಥವಾ ಸಾರ್ವತ್ರಿಕಾನುಭವಗಳ ಹಾಗೂ ಋಜುವಾದ ತರ್ಕದ ವೈಶದ್ಯ-ವೈಮಲ್ಯಗಳು ಮರೆಯಾಗುವಂತಾಯ್ತು. ಈಚಿನ ದಶಕಗಳಲ್ಲಿ ನಾವು ನಮ್ಮ ಪೂರ್ವಿಕರ ಇಂಥ ಶುಷ್ಕತರ್ಕ/ತರ್ಕಾಭಾಸಗಳ ಜಾಟಿಲ್ಯವನ್ನು ಮರೆತರೂ ಅದನ್ನು ತೊರೆದೇ ಇದ್ದರೂ ಪಾಶ್ಚಾತ್ಯಜಗತ್ತಿನ ಮೂಲಕ ಇಂಥದ್ದೇ - ಕೆಲವೊಂದಂಶಗಳಲ್ಲಿ ಇದಕ್ಕಿಂತ ಎಡವಟ್ಟಾದದ್ದೇ - ವರಸೆಗಳು ಆಮದಾದದ್ದು ನಿಜಕ್ಕೂ ಒಂದು ರಾಷ್ಟ್ರಿಯದುರಂತ. ಈ ಅಸಂಗತಿ ಮತ್ತು ಅನ್ಯಾಯಗಳ ಬಗೆಗೆ ಎಷ್ಟು ಹೇಳಿದರೂ ಸಾಲದು. ಏಕೆಂದರೆ ಇಂದು ಇಂಥ ವಿದೇಶೀಯ ಮಾಲುಗಳು ವಾಸ್ತವವಾದ, ಸಾಮ್ಯವಾದ, ಭೌತವಾದ, ಸಾಮಾಜಿಕನ್ಯಾಯ, ಮಾನವ ಹಕ್ಕುಗಳು, ಬಗೆಬಗೆಯ ಅಲ್ಪಸಂಖ್ಯಾತರ ರಕ್ಷಣೆ, ನಿರಚನಸಿದ್ಧಾಂತ, ಕಥನಶಾಸ್ತ್ರ, ಯಜಮಾನ ಮತ್ತು ಅಧೀನಸಂಸ್ಕೃತಿಗಳ ಅಧ್ಯಯನ, ಉಪಸಂಸ್ಕೃತಿಯ ವಿವೇಚನ ಮುಂತಾದ ಮತ್ತೂ ಇನ್ನೆಷ್ಟೋ ಅಂಶಗಳ ಛದ್ಮದಲ್ಲಿ ಬಂದು ದಿಟವಾದ ವೈಜ್ಞಾನಿಕತೆ, ಸಮಾನಾವಕಾಶ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸೌಂದರ್ಯ, ಸಂತೋಷಗಳೇ ಮೊದಲಾದ ಕೆಲವೊಂದು ಮಹತ್ತ್ವದ ಮೌಲ್ಯಗಳಿಗೇ ಮುಳುವಾಗುತ್ತಿರುವುದು ವಿವೇಕಿಗಳಾದವರಿಗೆಲ್ಲ ಕಳವಳದ ಸಂಗತಿಯಾಗಿದೆ.
ಇಂಥ ಅನರ್ಥಗಳನ್ನು ವಿಶುದ್ಧವಾದ ತತ್ತ್ವಚಿಂತನೆಯಿಂದ ನಿವಾರಿಸಿಕೊಳ್ಳಲು ಸಾಧ್ಯವಿದೆ. ಗಣಿತೀಯವಾಗಲು ಸಾಧ್ಯವಿಲ್ಲದ ವಿದ್ಯಾಸ್ಥಾನಗಳಲ್ಲಿ ಸಾರಳ್ಯ-ವೈಶದ್ಯಗಳಿರುವಂಥ ಶೈಲಿಯನ್ನೂ ಅನುಭವನಿಷ್ಠವಾದ ಋಜುತರ್ಕವನ್ನೂ ಬಳಸಿ ವಿವಿಧಸಂಗತಿಗಳನ್ನು ವೈಜ್ಞಾನಿಕನಿಷ್ಕರ್ಷೆಯಿಂದ ಪರಿಶೀಲಿಸಿ ಅವೆಷ್ಟೋ ವಿಚಾರಗಳ ಬಗೆಗೆ ಸ್ಪಷ್ಟವಾದ ನಿಲವಿಗೆ, ನೆಲೆಗೆ ಬರಬಹುದಿತ್ತು. ಆದರೆ ಇವೆಲ್ಲಕ್ಕೂ ಮೂಲಾಭೂತವಾದ ದರ್ಶನಶಾಸ್ತ್ರಗಳಲ್ಲಿಯೇ, ತತ್ತ್ವವಿದ್ಯೆಯಲ್ಲಿಯೇ ತೊಳಸಾಡಿ ರಾಡಿಯೆಬ್ಬಿಸಿದ ಕಾರಣ ಇದು ಸದ್ಯಕ್ಕೆ "ಅಕಡೆಮಿಕ್"ವಲಯಗಳಲ್ಲಿ ನಿಸ್ತಾರ ಕಾಣದ ಗೊಂದಲ. ಆಚಾರ್ಯ ಎಂ. ಹಿರಿಯಣ್ಣನವರು ತಮ್ಮ "ಮಿಷನ್ ಆಫ಼್ ಫಿಲಾಸಫಿ" ಎಂಬ ಚಿಕ್ಕದಾದರೂ ಅತ್ಯದ್ಭುತವಾದ ಮಹಾಗ್ರಂಥದಲ್ಲಿ ದರ್ಶನಶಾಸ್ತ್ರವು ಅದು ಹೇಗೆ ವಿಜ್ಞಾನ (ಭೌತ, ಜೀವ, ರಾಸಾಯನಿಕ ಮತ್ತು ಮಾನಸಿಕ ಶಾಖೆಗಳು ಸೇರಿದಂತೆ), ನೀತಿಸಂಹಿತೆ (ಸಮಾಜವಿಜ್ಞಾನದ ವಿವಿಧಪ್ರಭೇದಗಳಾದ ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಕಾನೂನು, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತದ ಅಸಂಖ್ಯ ಅವತಾರಗಳು), ಮತಾಚಾರ (ಇಲ್ಲಿ ಕರ್ಮಕಾಂಡ, ಪವಿತ್ರಗ್ರಂಥ, ನಂಬಿಕೆಗಳು, ಎಲ್ಲಬಗೆಯ ರಿಲಿಜನ್-ಡಾಕ್ಟ್ರಿನ್-ಡಾಗ್ಮ ಮುಂತಾದುವು ಅಡಕವಾಗುತ್ತವೆ) ಹಾಗೂ ಸಾಹಿತ್ಯಾದಿ ಲಲಿತಕಲೆಗಳೆಂಬ ವಿವಿಧವಿದ್ಯೆಗಳಿಗಿಂತ ಭಿನ್ನ ಮತ್ತು ಸ್ವಯಂಪೂರ್ಣ ಎಂಬುದನ್ನು ಸೊಗಸಾಗಿ ಸಾಧಿಸುತ್ತಾರೆ. ಈ ಪ್ರಕಾರ ತತ್ತ್ವವಿದ್ಯೆ ಅಥವಾ ದರ್ಶನಶಾಸ್ತ್ರಕ್ಕೆ ತನ್ನದೇ ಆದ ಚೌಕಟ್ಟಿದೆ, ತನ್ನದೇ ಆದ ಗುರುತರಬಾಧ್ಯತೆಯೂ ಇದೆ. ಇದು ಮಾಡುವ ಕೆಲಸವನ್ನು ಮಿಕ್ಕ ವಿದ್ಯೆಗಳಾವುವೂ ಮಾಡಲಾರವು ಹಾಗೂ ಇದು ಕೂಡ ಮಿಕ್ಕವುಗಳ ಕೆಲಸಕ್ಕೆ ಕೈಹಾಕಬೇಕಿಲ್ಲ. ಬಲುಮುನ್ನ, ಮಾನವಜಗತ್ತಿನಲ್ಲಿ ಜ್ಞಾನಶಾಖೆಗಳ ವಿಸ್ತಾರದ ಮುನ್ನ, ಎಲ್ಲ ವಿದ್ಯೆಗಳೂ ಕಲೆ-ವಿಜ್ಞಾನಾದಿಗಳೂ ದರ್ಶನಶಾಸ್ತ್ರಗಳಲ್ಲಿ ಸೇರಿಹೋಗಿದ್ದುವು. ಆದರೆ ಕ್ರಮೇಣ, ಇವೆಲ್ಲ ತಮ್ಮ ತಮ್ಮ ಪ್ರತ್ಯೇಕತೆಯನ್ನು ಸಹೇತುಕವಾಗಿ ಸಾನುಕೂಲವಾಗಿ ಸಾಬೀತುಗೊಳಿಸಿದ ಬಳಿಕ, ದರ್ಶನಶಾಸ್ತ್ರಗಳ ಪರಿಧಿ ಕುಗ್ಗಿತು. ಸಹಜವಾಗಿಯೇ ಇದು ಅನಿವಾರ್ಯವೂ ಹೌದು; ಅದೊಂದು ಬಗೆಯಲ್ಲಿ ಅಪೇಕ್ಷಣೀಯವೂ ಹೌದು. ಹೀಗಾಗಿ ದರ್ಶನಶಾಸ್ತ್ರ ಅಥವಾ ತತ್ತ್ವವಿದ್ಯೆಯು ಕೇವಲ ಮೌಲ್ಯಗಳ ಮೀಮಾಂಸೆಯಾಗಿ ಮಾತ್ರ ಉಳಿಯಬಲ್ಲುದು; ಉಳಿದಿದೆ ಕೂಡ. ಆದರೆ ಇಲ್ಲಿ ಆದು ತನ್ನ ಯಥೋಚಿತಸ್ವಾತಂತ್ರ್ಯ ಮತ್ತು ದುರ್ನಿವಾರ್ಯವಾದ ಅನನ್ಯತೆಗಳನ್ನು ಉಳಿಸಿಕೊಳ್ಳದಂತೆ ಈಚಿನ ದಶಕಗಳಲ್ಲಿ ಕೆಲಮಟ್ಟಿಗೆ ವಿಜ್ಞಾನ-ಮನಶ್ಶಾಸ್ತ್ರಗಳೂ ಬಲುಮಟ್ಟಿಗೆ ಸಮಾಜಶಾಸ್ತ್ರದ ವಿವಿಧಾಯಾಮಗಳೂ ಸದಾ ದಾಳಿ ನಡಸುತ್ತಿವೆ. ಇವೆಲ್ಲ ದರ್ಶನಾಭಾಸವನ್ನೋ ತತ್ತ್ವಾಭಾಸವನ್ನೋ ಗುಡಿಸಿಹಾಕಬಹುದು; ಅದರೆ ದಿಟವಾದ ತತ್ತ್ವವಿದ್ಯೆಗೆ ಇವುಗಳ ಅಬ್ಬರವು ತೀರ ಮಕ್ಕಳಾಟವೇ ಸರಿ. ಮಿಕ್ಕೆಲ್ಲ ವಿದ್ಯಾಸ್ಥಾನಗಳೂ ವಿಶಿಷ್ಟಾನುಭವಗಳ ಶೋಧನೆಗೆ ತೊಡಗಿದರೆ ದರ್ಶನಶಾಸ್ತ್ರವು ಅನುಭವಸಾಮಾನ್ಯ ವನ್ನು ಶೋಧಿಸಲು ಪಟ್ಟುಹಿಡಿದು ತೊಡಗುತ್ತದೆ. ಭಾರತೀಯತತ್ತ್ವವಿದ್ಯೆಯು ಇದರಲ್ಲಿ ಸಫಲವೂ ಆಗಿದೆ. ಆದರೆ ಇವುಗಳ ಅರಿವಿಲ್ಲದೆ ಬರಿಯ 'ಥಿಯರಿ’ಗಳಲ್ಲಿ, ಪ್ರಜ್ಞಾವಾದಗಳಲ್ಲಿ ಮರುಳ್ಗೊಂಡು ಮಿಕ್ಕವರನ್ನೂ ಮರುಳ್ಗೊಳಿಸುವ ಮಾಟ ಸಾಗಿಯೇ ಇದೆ. ಇದಕ್ಕೆ ನಮ್ಮ ಈಚಿನ ದಶಕಗಳ ಕನ್ನಡಸಾಹಿತ್ಯವೂ ಹೊರತಲ್ಲ. ಮುಖ್ಯವಾಗಿ ಇಲ್ಲಿಯ ವಿಮರ್ಶನಪದ್ಧತಿಯು ಇಂಥ ಜಾಡನ್ನು ಹಿಡಿಯಿತು. ನವೋದಯದಲ್ಲಿ ಯಾವುದು ಅನುಭವನಿಷ್ಠೆಗೆ ಹೆಚ್ಚು ಹತ್ತಿರವಾಗಿತ್ತೋ ಅದು ನವ್ಯದ ಹೊತ್ತಿಗೆ "ಥಿಯರಿ"ಗಳಲ್ಲಿ ಮುಳುಗಿ ನವ್ಯೋತ್ತರ ಅಥವಾ ಆಧುನಿಕೋತ್ತರ ಎಂಬ ಕಾಲಘಟ್ಟಕ್ಕೆ ಬರುವಷ್ಟರಲ್ಲಿ ಭ್ರಾಮಕವಾದ ಅನೇಕ ಪ್ರಜ್ಞಾವಾದಗಳಿಗೆ ನೆಲೆಯಾಗಿತ್ತು. ಇದರ ಪರಿಣಾಮವಾಗಿ ಅದೊಂದು ಬಗೆಯ ಮತವಲ್ಲದ ಮತೋನ್ಮಾದ, ಪ್ರವಾದಿಯಿಲ್ಲದ ಪ್ರಾವಾದಿಕ ಆಗ್ರಹ, ದೇವರಲ್ಲದ ದೈವಾವೇಶಗಳು ನಮ್ಮ ಸಾಹಿತ್ಯಲೋಕವನ್ನು ಆಳತೊಡಗಿದುವು. ಆರೋಗ್ಯಪೂರ್ಣವಾದ ಕೆಲವೊಂದು ಋಜುಧ್ವನಿಗಳು ಗಂಟಲೊಳಗೇ ಕುಗ್ಗಿಹೋದದ್ದು, ರಾಜಕೀಯವಾದ ’ಸರಿತನ’ಗಳೇ ಹೆದ್ದಾರಿಗೆ ಬಂದದ್ದು ಇತಿಹಾಸ. ಇಂಥ ಎಲ್ಲ ಗೋಜಲುಗಳನ್ನು ತಮ್ಮಮಟ್ಟಿಗಾದರೂ ಬಿಡಿಸಿಕೊಂಡು ಇತರರ ಪಾಲಿಗೂ ಅವುಗಳ ತೊಡಕು-ತೋಟಿಗಳು ತಿಳಿಯಾಗಿ ತೋರಬೇಕೆಂಬ ಯತ್ನವನ್ನು ಪ್ರಾಯಶಃ ನಿರಾಗ್ರಹವಾಗಿ, ಸಾಧಾರವಾಗಿ, ಸ್ಪಷ್ಟವಾಗಿ ಮಾಡುತ್ತಬಂದ ಕೆಲವೇ ಮಂದಿಯ ಪೈಕಿ ಡಾ. ಅಜಕ್ಕಳ ಗಿರೀಶಭಟ್ಟರು ನಿಜಕ್ಕೂ ಅನನ್ಯರು.
ಈಗಾಗಲೇ ತಮ್ಮ ನಿರ್ಮಮತರ್ಕದ, ನಿಸ್ಸಂದಿಗ್ಧಪ್ರಮಾಣಗಳ ಹಾಗೂ ಘನತೆಯುಳ್ಳ ಅಭಿವ್ಯಕ್ತಿಯ ಮೂಲಕ ಕನ್ನಡನಾಡಿನ ಸಾಹಿತ್ಯ, ವೈಚಾರಿಕ ಮತ್ತು ಸಾಂಸ್ಕೃತಿಕವಲಯಗಳಲ್ಲಿ ಗಂಭೀರವಾಗಿ ಗಣನೆಗೇರಿದ ಗಿರೀಶರು ಬುದ್ಧಿಜೀವಿ ವರ್ಸಸ್ ಬೌದ್ಧಿಕಸ್ವಾತಂತ್ರ್ಯ, ಕನ್ನಡಕ್ಕೇಕೆ ಸಂಕರಬಟ್ಟರ ಕತ್ತರಿ, ಅಸಹಿಷ್ಣುತೆಯ ಹಿಂದಿರುವ ಸೆಕ್ಯುಲರ್ ಸಂಕಥನ, ಅಗೆ ಬಗೆ, ಅಗ್ನಿರಸ ಮುಂತಾದ ಹತ್ತಾರು ಗಂಭೀರಚಿಂತನಕೃತಿಗಳಲ್ಲಿ ನಾಡಿನ ವೈಚಾರಿಕಸ್ವಾಸ್ಥ್ಯದ ಮಾಪಕರಾಗಿ, ಸತ್ತ್ವಸಾಕ್ಷಿಯಾಗಿ ದುಡಿಯುತ್ತ ಬಂದಿದ್ದಾರೆ. ಅಲ್ಲದೆ ಅವರ ಚಿಂತನಬಯಲು ಪ್ರಕಾಶನ ಹಾಗೂ ವಿದ್ವತ್ಪ್ರತ್ರಿಕೆಯ ಮೂಲಕವೂ ಇಂಥ ಕಾಳಜಿಯನ್ನು ಅದೆಷ್ಟೋ ಅಡ್ಡಿ-ಆತಂಕಗಳ ನಡುವೆಯೂ ಕ್ರಿಯಾತ್ಮಕವಾಗಿ ತೋರುತ್ತಲಿದ್ದಾರೆ. ಈ ಬಗೆಯ ಕಾಯಕವು ತುಂಬ ಸಾಹಸ, ನಿರಪೇಕ್ಷೆ ಮತ್ತು ಸತ್ಯಪ್ರಿಯತೆಗಳನ್ನು ಅಪೇಕ್ಷಿಸುತ್ತದೆ. ಅವರ ಈ ತೆರನಾದ ಸಾರಸ್ವತಕಾರ್ಯಗಳ ಪೈಕಿ ನಿಜಕ್ಕೂ ಅಲ್ಪಸಂಖ್ಯಾತರಾದ ಸಾಹಿತ್ಯ ಮತ್ತು ಸಮಾಜಗಳ ಹಿತಚಿಂತಕರಿಂದ, ವಿನಮ್ರರಾದ ಮೌಲ್ಯಮೀಮಾಂಸಕರಿಂದ ಮಿಗಿಲಾದ ಕೃತಜ್ಞತೆಯನ್ನು ಗಳಿಸಬಲ್ಲ ಗ್ರಂಥವೆಂದರೆ ಪ್ರಕೃತದ ರಚನೆಯೆಂಬುದರಲ್ಲಿ ಸಂದೇಹವಿಲ್ಲ.
"ಡಿ. ಆರ್ ರ ಮೂಡು ಪಡು" ಎಂಬ ಈ ಕೃತಿಯು ಹೆಸರಿಗೆ ಕೀರ್ತಿಶೇಷರಾದ ಡಿ. ಆರ್. ನಾಗರಾಜ್ ಅವರ ಸಮಗ್ರಸಾಹಿತ್ಯದ ಹಿಂದೆ ಹರಳುಗಟ್ಟಿರುವ ಚಿಂತನಕ್ರಮವನ್ನು ಕುರಿತಿದ್ದರೂ ವಸ್ತುತಃ ಇಡಿಯ ನವೋದಯೋತ್ತರ ಕನ್ನಡಸಾಹಿತ್ಯದ, ಅಲ್ಲಲ್ಲ; ಜಗತ್ತಿನ ನವ್ಯೋತ್ತರ ಅಥವಾ ಆಧುನಿಕೋತ್ತರವಿಚಾರಮೀಮಾಂಸೆಯನ್ನೇ ನಿಶಿತವಾಗಿ, ಅಡಕವಾಗಿ ಪುನರ್ವಿಮರ್ಶಿಸಿದೆಯೆಂದರೆ ಅತಿಶಯವಲ್ಲ. ದಿಟವಾಗಿ ಇದೊಂದು ಅಸಾಮಾನ್ಯಸಾಹಸವೇ. ಏಕೆಂದರೆ ಗಣಿತೀಯತರ್ಕವಲ್ಲದ - ಹೀಗಾಗಿಯೇ ಭಾಷೀಯವಾಗಿ ಬಲು ಜಟಿಲವೂ ತತ್ತ್ವತಃ ನಿಸ್ಸಾಮಾನ್ಯಾನುಭವದೂರವೂ ಆದ - ಅನೇಕ ಲೇಖಕರ, ವಾದಪ್ರವರ್ತಕರ, ಸಂಶೋಧಕರ ಅಭಿಪ್ರಾಯಗಳನ್ನೆಲ್ಲ ಅನ್ಯೋನ್ಯಸಾಂಕರ್ಯವಿಲ್ಲದೆ, ಅವುಗಳ ಸಂಕೀರ್ಣತೆಗೆ ಧಕ್ಕೆಯಾಗದೆ - ಹಾಗೆಂದು ದುರ್ಬೋಧವೂ ಆಗದೆ - ಸವಿಮರ್ಶವಾಗಿ ಸಂಗ್ರಹಿಸಿಕೊಡುವ ದುಡಿಮೆಯೇ ಒಂದು ಮಹತ್ತಾದ ಪೂರ್ವಪಕ್ಷಪ್ರಕ್ರಿಯೆ. ಈ ಬಗೆಯ ವ್ಯಾಪಕವೂ ತಲಸ್ಪರ್ಶಿಯೂ ಆದ ಅಧ್ಯಯನವನ್ನು ಹಿನ್ನೆಲೆಯಾಗಿರಿಸಿಕೊಂಡು ಡಿ. ಆರ್ ಅವರ ಸಾಹಿತ್ಯಸಮಸ್ತವನ್ನೂ ಇದರ ಬೆಳಕಿನಲ್ಲಿ ನೋಡುತ್ತಾ, ಇದರೊಟ್ಟಿಗೆ ಅವರ ಬಗೆಗೆ ಬಂದಿರುವ ಮತ್ತಿತರ ವಿಮರ್ಶೆಗಳನ್ನೂ ಗಮನಿಸಿ ಪ್ರತಿಕ್ರಿಯಿಸುತ್ತಾ ಕಟ್ಟಕಡೆಗೆ ಈ ಎಲ್ಲ ಪ್ರಕಲ್ಪಗಳೂ ಕನ್ನಡಸಾಹಿತ್ಯ-ಸಂಸ್ಕೃತಿಗಳ ಮೇಲೆ ಪ್ರಭಾವಿಸಿದ ಬಗೆಯನ್ನು ಅವಧಾನಿಸಿ ಒಟ್ಟಂದದ ಮೌಲ್ಯಮಾಪನಕ್ಕೆ ಸಜ್ಜಾಗುವುದು ಹಾಗೂ ಈ ಹವಣಿನಲ್ಲಿ ಯಾವುದೇ ಬಗೆಯ ಆಗ್ರಹಗಳಿಗೆ ತುತ್ತಾಗದಿರುವುದು ಮಿಗಿಲಾದ ಸಾಧನೆ. ಎಲ್ಲಕ್ಕಿಂತ ಹೆಚ್ಚಾಗಿ ಡಿ. ಆರ್. ಅವರ ವಿಚಾರಕ್ರಮದಲ್ಲಿ ಸಹಜವಾಗಿಯೇ ಇರುವ ವಿಕಾಸಕ್ರಮ-ಉಲ್ಲಂಘನ, ಇತಿ-ಮಿತಿ, ಸಾಫಲ್ಯ-ವೈಫಲ್ಯಗಳನ್ನೆಲ್ಲ ನಮೂದಿಸುವಾಗ ಇವರಿಗೆ ಸಂವಾದಿಯಾಗಿಯೋ ವಿವಾದಿಯಾಗಿಯೋ ಪ್ರತಿಕ್ರಿಯಿಸಿದ ಇನ್ನಿತರ ಲೇಖಕರ, ಸಾಹಿತಿಗಳ ಹಾಗೂ ಪ್ರತಿಷ್ಠಿತರ ನೆಲೆ-ಬೆಲೆಗಳನ್ನೂ ಆನುಷಂಗಿಕವಾಗಿ ನಮೂದಿಸುವ ಅಜಕ್ಕಳ ಅವರು ಪ್ರಜ್ಞಾಪೂರ್ವಕವಾಗಿಯೇ ಕನ್ನಡಸಾಹಿತ್ಯದ ಸಮಕಾಲೀನಚರಿತ್ರೆಯ ಮಹತ್ತ್ವದ ಟಿಪ್ಪಣಿಗಳನ್ನೂ ಬರೆದಿದ್ದಾರೆಂದರೆ ಸರಿಯಾದೀತು.
ಈ ಗಂಭೀರಗ್ರಂಥದ ಸಾಮಾನ್ಯಪರಿಚಯಕ್ಕೂ ಈ ನಾಲ್ಕು ಮಾತುಗಳ ನಲ್ನುಡಿಯಲ್ಲಿ ಅವಕಾಶವಿಲ್ಲವಾದರೂ ಇಲ್ಲಿಯ ಮೊದಲ ನಾಲ್ಕು ಅಧ್ಯಾಯಗಳು ಸುಮಾರು ನಾಲ್ಕುನೂರು ವರ್ಷಗಳಿಗೂ ಮಿಕ್ಕ ಆಧುನಿಕಪಾಶ್ಚಾತ್ಯಜಗತ್ತಿನ ವೈಚಾರಿಕೇತಿಹಾಸದ ನಿಬ್ಬೆರಗಾಗಿಸುವ 'ಥಿಯರಿ’ಗಳ ಸವಿಮರ್ಶನಿರೂಪಣೆಯಾಗಿ ಮಾತ್ರವಲ್ಲದೆ ಭಾರತೀಯನವೋತ್ಥಾನದ ಮೇಲೆ ಇವೆಲ್ಲ ಬೀರಿದ ಬಗೆಬಗೆಯ ಪ್ರಭಾವಗಳ ವಿವೇಚನೆಯಾಗಿಯೂ ಗಮನಾರ್ಹ. ಅನಂತರ ನೇರವಾಗಿ ಡಿ. ಆರ್ ಅವರ ಕೃತಿಗಳ ಹಾಗೂ ಚಿಂತನೆಗಳ ಪರಾಮರ್ಶೆಯಿದೆ. ಇಲ್ಲಿ ಮುಖ್ಯವಾಗಿ ಹನ್ನೆರಡು ಮತ್ತು ಹದಿಮೂರನೆಯ ಅಧ್ಯಾಯಗಳು ತುಂಬ ಒಳನೋಟಗಳ ಹಾಗೂ ನಿರ್ಭೀಕನಿಗಮನಗಳ ತವರೆನ್ನಬೇಕು. ಇವು ಒಟ್ಟಾಗಿ ಇಂದಿನ ಭಾರತದ ಅನೇಕಸಮಸ್ಯೆಗಳ ಚಿತ್ರಣವೂ ಆಗಿವೆ; ನಮ್ಮ ತಥಾಕಥಿತವೈಚಾರಿಕರ ಹಾಗೂ ಲೇಖಕರ ಸ್ವಮಾತ್ರವೇದ್ಯವಾದ ಮೌನ-ಮುಖರತೆಗಳ ಕಾಣ್ಮೆಯ ಜಾಣ್ಮೆಗಳ ಭೂತ-ಭವಿಷ್ಯಗಳೂ ಆಗಿವೆ. ಇಲ್ಲಿಯ ಸಾರವತ್ತಾದ ಅನೇಕಸಂಗತಿಗಳ ಸಾರ್ವತ್ರಿಕಸಾಂಗತ್ಯವನ್ನು ಅಭಿಯುಕ್ತರು ಗಮನಿಸದಿರಲಾರರು.
ಇಲ್ಲಿಯ ಅನೇಕಸ್ವಾರಸ್ಯಕರವಾದ ಪರಿಶೀಲನೆಗಳ ಪೈಕಿ ತುಂಬ ಆಸಕ್ತಿಕರವಾದ ಒಂದಂಶವೆಂದರೆ ಡಿ. ಆರ್. ಅವರ ಉತ್ತರಕಾಲೀನರಚನೆಗಳಲ್ಲಿ ಕಾಣಿಸಿಕೊಳ್ಳುವ ಹಲವೊಂದು ಅಂಶಗಳನ್ನು ಕುರಿತು (ವಾಮಪಂಥದ ಗಡಿಗಳನ್ನು ದಾಟಲು ಹವಣಿಸುವ ಪ್ರಕ್ರಿಯೆ) ಅವರ ಮಿಕ್ಕ ಆಲೋಚನೆಗಳಿಗೆ ('ಅವೈದಿಕ’ವೈಚಾರಿಕತೆ ಹಾಗೂ ಸಾಂಸ್ಕೃತಿಕತೆಗಳ ಹುಡುಕಾಟ) ಹೆಚ್ಚಾಗಿ ತೆತ್ತುಕೊಂಡವರೇ ಎರವಾದ ಸಂಗತಿಯೂ ಡಿ. ಆರ್. ಅವರಿಗೇ ಬಾಳಿನುದ್ದಕ್ಕೂ ಇದ್ದ ಅವೈಚಾರಿಕ ಅಭಿನಿವೇಶಗಳ ಅಂಶವೂ ಆಗಿದೆ. ಇದು ಬಲುಮಟ್ಟಿಗೆ ನಮ್ಮ ನಾಡಿನ ಅನೇಕಪ್ರತಿಭಾವಂತರ, ಪ್ರಭಾವಿವ್ಯಕ್ತಿಗಳ ಹಾಗೂ ಮಹತ್ತ್ವಾಕಾಂಕ್ಷಿಗಳ ಪಾಡೂ ಆಗಿದೆ. ಇಂಥ ಅಸಂಖ್ಯಧ್ವನಿಗಳನ್ನು ನಾವು ಈ ಪ್ರೌಢಗ್ರಂಥದಲ್ಲಿ ಆದ್ಯಂತವೂ ಕಾಣಬಹುದು.
ಒಟ್ಟಿನಲ್ಲಿ ಒಂದೆರಡು ದಶಕಗಳ ಕಾಲ ತಮ್ಮ ಸುತ್ತಮುತ್ತಲಿನ ಸಾಹಿತ್ಯ-ಸಾಂಸ್ಕೃತಿಕಲೋಕವನ್ನು ತಬ್ಬಿ ತಲ್ಲಣಗೊಳಿಸಿದ, ಆವರಿಸಿ ಅಲ್ಲಾಡಿಸಿದ ವಿಶಿಷ್ಟಲೇಖಕರೊಬ್ಬರ ಮೂಲಕ ಅವರದೇ ವೈಚಾರಿಕಜಗತ್ತಿನ ಹಾಗೂ ಅದನ್ನು ಹರಳುಗಟ್ಟಿಸುವಲ್ಲಿ ಹೆಣಗಿದ ಜಗತ್ತಿನ ವೈಚಾರಿಕತೆಯ ಸತ್ಯ-ಮಿಥ್ಯಗಳನ್ನು ಪಾರದರ್ಶಕಭಾಷೆಯಲ್ಲಿ ಹಿಡಿದಿಟ್ಟಿರುವ ಡಾ. ಅಜಕ್ಕಳ ಗಿರೀಶರ ಪ್ರಯತ್ನಕ್ಕೆ ಮೆಚ್ಚುಗೆಸಲ್ಲದಿರದು.
ಸಾಂಪ್ರದಾಯಿಕವಾದ ಪಿಹೆಚ್. ಡಿ. ಪ್ರೌಢಪ್ರಬಂಧದ ಶುಷ್ಕಶಿಸ್ತಿನಲ್ಲಿ ಬತ್ತಿಹೋಗದೆ, ಹಾಗೆಂದು ಸ್ವಕಪೋಲಕಲ್ಪಿತವಾದ ಪತ್ರಿಕಾಲೇಖನಮಾಲೆಯ ಹಾಗೆ ವಿಶೃಂಖಲವೂ ಎನಿಸದೆ ನಿಜವಾದ ಅರ್ಥದಲ್ಲಿ ವಿದ್ದ್ವನ್ನಿಷ್ಠವೂ ವಾಚಕಸಹೃದಯಿಯೂ ಆದ ಇಲ್ಲಿಯ ಬರೆವಣಿಗೆ ಒಳ್ಳೆಯ ಮಾದರಿಯಾಗಿಯೂ ಹಲವು ಕಾಲ ನಿಲ್ಲದಿರದು.
(ಪ್ರಕೃತಲೇಖನ ಶ್ರೀ ಅಜಕ್ಕಳ ಗಿರೀಶಭಟ್ಟರ ಶೋಧಕೃತಿ "ಡಿ. ಆರ್ ರ ಮೂಡು ಪಡು"ಗೆ ಮುನ್ನುಡಿಯಾಗಿ ಬರೆದುದು. "ಡಿ. ಆರ್ ರ ಮೂಡು ಪಡು" ಸದ್ಯದಲ್ಲೇ ಲೋಕರ್ಪಿತವಾಗಲಿದ್ದು ಅನೇಕ ಮೌಲಿಕಚಿಂತನೆಗಳಿಂದ ಕೂಡಿದೆ.)